ಸಿದ್ದು ನಿಮಗೆ ವಯಸ್ಸಾಯ್ತು.

ambiಕೆಲವರ್ಷಗಳ ಹಿಂದೆ ಕನ್ನಡದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ಅಭಿನಯದಲ್ಲಿ ಅಂಬಿ ನಿಂಗ್ ವಯಸ್ಸಾಯ್ತೋ ಎಂಬ ‍ಸಿನಿಮಾ ನೋಡಿರುವ ನೆನಪು ಬಹುತೇಕ ಕನ್ನಡಿಗೆ ಇನ್ನೂ ಹಚ್ಚ ಹಸಿರಾಗಿರುವಾಗಲೇ, ಇಂದು ವಿಜಯನಗರದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಿದ್ದ ಮಾಜೀ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಹೆಲಿಕಾಪ್ಟರ್‌ನಿಂದ ಇಳಿದು ಎಲ್ಲರನ್ನೂ ಮಾತನಾಡಿಸಿದ ನಂತರ ಕಾರು ಹತ್ತುವಾಗ ದಿಢೀರ್ ಎಂದು ಕುಸಿದು ಬಿದ್ದಾಗಾ ಬಹುತೇಕರಿಗೆ ಅಂಬರೀಶ್ ಅವರ ಆ ಸಿನಿಮಾ ನೆನಪಾಗಿದ್ದಂತು ಸುಳ್ಳಲ್ಲ.

ಸಕಲ ಜೀವ ಇರುವ ಚರಾ ಚರ ವಸ್ತುಗಳು ಪ್ರಾಣಿಗಳೂ ಈ ಭೂಮಿಯ ಮೇಲೆ ಬಂಡ ಕೂಡಲೇ ಸದ್ದಿಲ್ಲದೇ ಯಾವುದೇ ಆಕ್ಷೇಪಣೆ ಇಲ್ಲದೇ ಸಾಗುವು ಒಂದೇ ಒಂದು ಸಂಗತಿ ಎಂದರೆ ಅದು ವಯಸ್ಸು. ಹಾಗಾಗಿ ಆಯಾಯಾ ವಯಸ್ಸಿನಲ್ಲಿ ಏನೇನೂ ಆಗಬೇಕೂ ಅದೇ ರೀತಿಯಲ್ಲಿ ಆದರರೆ ಚಂದ ಎಂದು ಶ್ರೀ ಶಂಕರಭಗವತ್ಚಾದರು ತಮ್ಮ ಭಜ ಗೋವಿಂದಂ ಶ್ಲೋಕದಲ್ಲಿ ಅತ್ಯಂತ ಮನೋಜ್ಞವಾಗಿ ತಿಳಿಸಿದ್ದಾರೆ.

shankaraಬಾಲಸ್ತಾವತ್ಕ್ರೀಡಾಸಕ್ತಃ, ತರುಣಸ್ತಾವತ್ತರುಣೀಸಕ್ತಃ । ವೃದ್ಧಸ್ತಾವಚ್ಚಿಂತಾಸಕ್ತಃ, ಪರಮೇ ಬ್ರಹ್ಮಣಿ ಕೋಽಪಿ ನ ಸಕ್ತಃ ॥

ಬಾಲ್ಯದಲ್ಲಿ ಆಟದಲ್ಲಿ ಆಸಕ್ತಿ ಇರುತ್ತದೆ. ಇನ್ನು ಯೌವನಾವಸ್ಥೆಗೆ ಬಂದಾಗ ಯುವಕರಿಗೆ ತರುಣಿಯರಲ್ಲಿ ಆಸಕ್ತಿ ಹೆಚ್ಚಾಗಿ ಮೂಡುತ್ತದೆ. ಇನ್ನು ವಯಸ್ಸಾದ ಮುದುಕರಿಗೆ ಸಂಸಾರದ ಚಿಂತೆಯಲ್ಲೇ ಮುಳುಗಿ ಹೋಗಿರುವ ಕಾರಣ, ಯಾರಿಗೂ ಆ ಭಗವಂತನನ್ನು ಕುರಿತು ಚಿಂತಿಸಲು ಸಮಯ ಮತ್ತು ಆಸಕ್ತಿ ಇರುವುದಿಲ್ಲ. ಹಾಗಾಗಿಯೇ,

ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೇ| ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನ ಹಿ ನ ಹಿ ರಕ್ಷತಿ ಡುಕೃಂಞಕರಣೇ ಅರ್ಥ || 1||

ಸದಾ ಕಾಲವೂ ಎಲೈ ಮಂದ ಮತಿಯೇ, ಗೋವಿಂದನನ್ನು ಭಜಿಸು, ಅಂತ್ಯ ಕಾಲವು ಸಮೀಪಿಸಿರುವಾಗ ಈ ನಿನ್ನ ವ್ಯಾಕರಣ ಪಾಂಡಿತ್ಯ, ಅಧಿಕಾರ ಅಂತಸ್ತು ಯಾವುದೂ ನಿನ್ನ ರಕ್ಷಣೆಗೆ ಬರುವುದಿಲ್ಲಾ ಎಂದು ಹೇಳಿದ್ದಾರೆ.

siddu7ಬಹುಶಃ ಈ ಭಜ ಗೋವಿಂದಂ ಶ್ಲೋಕವನ್ನು ಅದರ ಅರ್ಥದ ಸಮೇತ ನಮ್ಮ ದೇಶದ ರಾಜಕಾರಣಿಗಳಿಗೆ ಅದರಲ್ಲೂ ವಿಶೇಷವಾಗಿ ಸಾಯುವವರೆಗೂ ಅಧಿಕಾರಕ್ಕೆ ಅಂಟಿಕೊಂಡು ಕುಳಿತು ಕೊಳ್ಳುವ ಕುಟುಂಬ ರಾಜಕಾರಣಿಗೆಳಿಗೆ ವಿವರಿಸಲೇ ಬೇಕಾಗಿದೆ ಎಂದರೂ ತಪ್ಪಾಗದು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಯೌವನದಲ್ಲಿ ಅತ್ಯಂತ ಚುರುಕಾಗಿ ಕೆಲಸಮಾಡುತ್ತಾ, ಒಮ್ಮೆ 50+ ದಾಟಿದ ಕೂಡಲೇ ಬುದ್ಧಿ ಮತ್ತು ಮನಸ್ಸು ಚುರುಕಾಗಿದ್ದರೂ, ದೇಹ ಅದಕ್ಕೆ ಸೂಕ್ತವಾಗಿ ಸ್ಪಂದಿಸದೇ ಹೋಗುವ ಕಾರಣ 58-62ರ ವಯಸ್ಸಿನೊಳಗೆ ಕೆಲಸದಿಂದ ನಿವೃತ್ತಿಯನ್ನು ಪಡೆದು ಮನೆಯಲ್ಲಿ ತಮ್ಮ ಮಕ್ಕಳು ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ, ರಾಮಾ ಕೃಷ್ಣಾ ಗೋವಿಂದಾ ಎಂದು ದೇವರನ್ನು ಧ್ಯಾನಿಸುತ್ತಾ ತಮ್ಮ ವಯಸ್ಸನ್ನು ಕಳೆಯುತ್ತಾರೆ.

deveನಮ್ಮ ದೇಶದಲ್ಲಿ ಎಲ್ಲಾ ಕೆಲಸಗಳಿಗೂ ಒಂದು ನಿರ್ಧಿಷ್ಟವಾದ ನಿವೃತ್ತಿಯ ವಯಸ್ಸಿದ್ದರೆ, ಈ ರಾಜಕಾರಣಿಗಳಿಗೆ ಮಾತ್ರವೇ ಯಾವುದೇ ನಿವೃತ್ತಿ ಇಲ್ಲದೇ ಹೋಗಿರುವುದು ಅತ್ಯಂತ ದುರಾದೃಷ್ಟಕರ ಸಂಗತಿಯಾಗಿದೆ. ಇಳೀ ವಯಸ್ಸಿನಲ್ಲಿ ಸರಿಯಾಗಿ ಮಾತನಾಡಲು, ನಡೆಯಾಗಲು ಬಿಡಿ ತಮ್ಮ ಮೂತ್ರವನ್ನೂ ಹಿಡಿದಿಟ್ಟುಕೊಳ್ಳಲಾಗದೇ ಡೈಪರ್ ಧರಿಸಿಕೊಂಡಾದರೂ, ಅಧಿಕಾರದಲ್ಲಿ ಇರಬೇಕು ಎನ್ನುವವರ ಸಂಖ್ಯೆಯೇ ಹೆಚ್ಚಾಗಿರುವುದು ಅಚ್ಚರಿಯ ಸಂಗತಿಯಾಗಿದೆ ಇದೇ ನನ್ನ ಕಡೇ ಚುನಾವಣೆ ಎಂದು ಕಳೆದ 2013ರಲ್ಲೇ ಹೇಳಿ ಮುಖ್ಯಮಂತ್ರಿಯ ಗಾದಿಯನ್ನೇರಿದ ಸಿದ್ದರಾಮಯ್ಯನವರೂ ಇದಕ್ಕ ಹೊರತಾಗಿರುವುದು ನಿಜಕ್ಕೂ ಬೇಸರೆ ಸಂಗತಿಯಾಗಿದೆ .

siddu5ಆಗಸ್ಟ್ 3 1947ರಲ್ಲಿ ಜನಿಸಿರುವ ಸದ್ಯಕ್ಕೆ 75 ವರ್ಷಗಳಾಗಿರುವ ಸಿದ್ದರಾಮಯ್ಯನವರು ಆರು ಬಾರಿ ಶಾಸಕರಾಗಿ, ವಿಧಾನ ಸಭಾ ವಿರೋಧಪಕ್ಷದ ನಾಯಕರಾಗಿ, ಮುಖ್ಯಮಂತ್ರಿಗಳಾಗಿ ಎಲ್ಲಾ ರೀತಿಯ ಅಧಿಕಾರವನ್ನು ಅನುಭವಿಸಿಯೂ ಈ ಇಳೀವಯಸ್ಸಿನಲ್ಲಿ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಥೆ ಮಾಡುವ ಮೂಲಕ ತಾನೊಬ್ಬ ಅಧಿಕಾರದಾಹಿ ಎಂಬುದನ್ನು ಜಗಜ್ಜಾಹೀರಾತು ಮಾಡಿಕೊಂಡಿರುವುದು ನಿಜಕ್ಕೂ ಅಸಹ್ಯಕರ ಎನಿಸುತ್ತಿದೆ. ಈ ರಾಜ್ಯದ ಮಾಜೀ ಮುಖ್ಯಮಂತ್ರಿಯಾಗಿ ಒಂದು ಸ್ವಂತ ಕ್ಷೇತ್ರವಿಲ್ಲದೇ ಪರದಾಡುತ್ತಾ, ತನ್ನ ರಾಜಕೀಯ ಬುಡವೇ ಗಟ್ಟಿ ಇಲ್ಲದೇ, ರಾಜ್ಯಾದ್ಯಂತ ವಿವಿಧ ಕ್ಷೇತ್ರಗಳೆಲ್ಲಾ ಸುತ್ತಾಡಿ, ಅಂತಿಮವಾಗಿ ಅಳೆದೂ ತೂಗೀ, ಹಳೇ ಗಂಡನ ಪಾದವೇ ಗತಿ ಎಂದು ವರುಣಾ ಕ್ಷೇತ್ರದಲ್ಲಿ ಸ್ವಂತ ಮಗನನ್ನು ಪಕ್ಕಕ್ಕೆ ಸರಿಸಿ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ.

siddu1ತಾನೊಬ್ಬ ಮಾಸ್ ಲೀಡರ್ ಎಂಬ ಭ್ರಮೆಯಲ್ಲಿರುವ ಸಿದ್ದು, ತನ್ನ ಕ್ಷೇತ್ರದ ಹೊರತಾಗಿ ತನ್ನ ಪಕ್ಷದ ವಿವಿಧ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಸಲುವಾಗಿ ಇಂದು ವಿಜಯನಗರದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೆಲಿಕಾಪ್ಟರ್‌ನಿಂದ ಇಳಿದು ಕಾರ್ ಹತ್ತುವಾಗ ಇದ್ದಕ್ಕಿದ್ದಂತೆಯೇ ಕುಸಿದು ಬೀಳುತ್ತಿದ್ದಂತೆಯೇ ಅವರ ಅಕ್ಕ ಪಕ್ಕದದಲ್ಲಿ ಇದ್ದವರು ಆ ಆಜಾನುಬಾಹು ಸಿದ್ದರಾಮಯ್ಯ ಅವರನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ಮೂಲಕ ಅವರಿಗೆ ಯಾವುದೇ ರೀತಿಯ ಅಪಘಾತಗಳು ಅಗದಂತೆ ತಡದರೂ, ಕ್ಷಣಕಾಲ ಅಲ್ಲಿ ಆತಂಕದ ವಾತಾವರಣ ನಿರ್ಮಾಣ ಉಂಟಾಗಿದೆ. ತತ್ ಕ್ಷಣವೇ ಅವರು ಗನ್‌ಮ್ಯಾನ್ ಆವರನ್ನು ಕಾರಿನೊಳಗೆ ಕೂಡಿಸಿ ಗ್ಲೂಕೋಸ್ ಮತ್ತು ಮಜ್ಜಿಗೆಯನ್ನು ಕುಡಿಸಿ ಕೆಲ ಕ್ಷಣ ಅವರಿಗೆ ವಿಶ್ರಾಂತಿ ನೀಡಿದ ತಕ್ಷಣ, ಸುಧಾರಿಸಿಕೊಂಡ ಸಿದ್ದರಾಮಯ್ಯನವರು ಮತ್ತೆ ಚೇತರಿಸಿಕೊಂಡಾಗ ಗೌಜುಗಟ್ಟಿದ್ದ ವಾತಾವರಣ ತಿಳಿಯಾಗಿದೆ.

ಅಲ್ಲಿದ್ದ ಬಿಸಿಲಿನ ತಾಪಕ್ಕೆ ಹೀಗಾಯ್ತಾ? ಇಲ್ಲವೇ ಸತತ ಚುನಾವಣಾ ಪ್ರಚಾರಕ್ಕಾಗಿ ಊರೂರು ಸುತ್ತುತ್ತಿರುವುದರಿಂದ ದೇಹಕ್ಕೆ ಹೆಚ್ಚಿನ ಒತ್ತಡ ಬಿದ್ದು ಹೀಗಾಯ್ತಾ? ಎಂಬ ಅನುಮಾನ ಕೂಡ ಮೂಡಿದ್ದರೂ, ಪರೋಕ್ಷವಾಗಿ ಅವರ ದೇಹ ಅವರ ಮನಸ್ಸಿಗೆ ಅನುಗುಣವಾಗಿ ಸ್ಪಂದಿಸುತ್ತಿಲ್ಲಾ ಎನ್ನುವುದಂತೂ ಸ್ಪಷ್ಟವಾಗಿದೆ. ಸ್ವಲ್ಪ ಹೊತ್ತು ಕಾರಿನಲ್ಲೇ ಸುಧಾರಿಸಿಕೊಂಡ ಸಿದ್ದರಾಮಯ್ಯನವರು ನಂತರ ಜನರತ್ತ ಕೈಬೀಸಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕಾಗಿ ತೆರೆಳಿದ್ದಾರೆ.

siddu6ಈ ಕುರಿತಾಗಿ ಕಾಂಗ್ರೆಸ್ ನಾಯಕರೂ ಸಹಾ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರಿಗೆ ಸ್ಥಳೀಯವಾಗಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿದ್ದು. ಸದ್ಯಕ್ಕೆ ಹೆಚ್ಚಿನ ಆತಂಕ ಪಡುವ ಅಗತ್ಯತೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ. ಜಾತಿಯ ಲೆಖ್ಖಾಚಾರದಲ್ಲಿ ಲಿಂಗಾಯಿತರು, ಒಕ್ಕಲಿಗರ ನಂತರ ಸಿದ್ದರಾಮಯ್ಯನವರ ಕುರುಬ ಜಾತಿಯ ಸಂಖ್ಯೆ ಈ ರಾಜ್ಯದಲ್ಲಿ ಹೆಚ್ಚಾಗಿದ್ದು ತಮ್ಮ ಅಹಿಂದಾ ಹೋರಾಟದ ಮೂಲಕ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವ ಕಾರಣ, ರಾಜ್ಯದ ವಿವಿಧೆಡೆ ಸಿದ್ದರಾಮಯ್ಯ ಪ್ರಚಾರಕ್ಕೆ ಭಾರಿ ಬೇಡಿಕೆ ಇದ್ದು, ಬಹುತೇಕ ಕಾಂಗ್ರೆಸ್ ಅಭ್ಯರ್ಥಿಗಳು ಸಿದ್ದರಾಮಯ್ಯನವರು ಎಲ್ಲಾ ಕ್ಷೇತ್ರಗಳಲ್ಲಿಯೂ ಬಂದು ಪ್ರಚಾರ ಮಾಡಲಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರು ತಮ್ಮ ನೆಚ್ಚಿನ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕಾಗಿ ಈ ಇಳೀ ವಯಸ್ಸಿನಲ್ಲಿಯೂ ಸಹಾ ಊರೂರು ಅಲೆಯಲೇ ಬೇಕಾಗಿದೆ. ಅದೂ ಅಲ್ಲದೇ ಕುರಿ ಹೆಚ್ಚಿದಷ್ಟೂ ಕುರುಬನಿಗೇ ಲಾಭ ಎನ್ನುವಂತೆ ತನ್ನ ನೆಚ್ಚಿನ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡು ಬಂದಾಗ ಮಾತ್ರವೇ ತಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗಬಹುದು ಎಂಬ ದೂರಾಲೋಚನೇ ಸಿದ್ದರಾಮಯ್ಯನವರಿಗೆ ಇದ್ದರೆ, ತಮ್ಮ ಪಕ್ಷದ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಿದ್ದರಾಮಯ್ಯನವರ ಮೇಲೆ ಅನಗತ್ಯವಾಗಿ ಒತ್ತಡ ಹಾಕುತ್ತಿರುವುದಂತೂ ಸ್ಪಷ್ಟವಾಗಿದ್ದು, ಒಂದು ರೀತಿಯಲ್ಲಿ ಕಂಡೋರ ಮನೆಯ ಮಕ್ಕಳನ್ನು ಭಾವಿಗೆ ತಳ್ಳಿ, ಭಾವಿಯ ಆಳವನ್ನು ನೋಡುವಂತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

siddu3ರಾಜ್ಯ ರಾಜಕಾರಣದಲ್ಲಿ ಎಲ್ಲಾ ಅಧಿಕಾರವನ್ನೂ ಸವಿದಿರುವ ಸಿದ್ದರಾಮಯ್ಯನವರ ದೇಹ ಈ ಘಟನೆಯ ಮುಖಾಂತರ ತನಗೆ ವಿಶ್ರಾಂತಿ ಅವಶ್ಯಕತೆ ಇದೆ ಎಂದು ಸ್ಪಷ್ಟವಾಗಿ ತಿಳಿಸುತ್ತಿರುವ ಕಾರಣ, ಹೃದಯವಂತ ವರುಣಾ ಕ್ಷೇತ್ರದ ಸಿದ್ದರಾಮಯ್ಯನವರ ಶ್ರೇಯೋಭಿಲಾಷಿ ಮತದಾರರು, ಸಿದ್ದರಾಮಯ್ಯನವರಿಗೆ ಈ ಬಾರಿಯಿಂದ  ಶಾಶ್ವತವಾಗಿ ರಾಜಕೀಯ ವಿಶ್ರಾಂತಿಯನ್ನು ಕೊಡುವ ಮೂಲಕ ತಮ್ಮ ಮೊಮ್ಮಗನಿಗೆ ಸಂಧಿ, ಸಮಾಸಗಳನ್ನು ಹೇಳಿಕೊಡುವ ಮೂಲಕ ರಾಕೇಶ್ ಧವನ್ ಅವರ ತಾತ ಸಿದ್ದರಾಮಯ್ಯನವರಂತೆಯೇ ಸ್ಪಷ್ಟವಾದ ಕನ್ನಡವನ್ನು ಮಾತನಾಡುವಂತಾಗಲಿ.

ಆಯಸ್ಸು ಇದ್ದಲ್ಲಿ ಮಾತ್ರವೇ ಅಧಿಕಾರ. ಅಧಿಕಾರ ಇಲ್ಲದೆಯೇ ಜನರ ಸೇವೆಯನ್ನು ಮಾಡಲು ನೂರಾರು ಅವಕಾಶಗಳು ಇರುವ ಕಾರಣ, ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಶಾಶ್ವತವಾದ ರಾಜಕೀಯ ನಿವೃತಿಯನ್ನು ಪಡೆಯುವಂತಾಗಲಿ. ತನ್ಮೂಲಕ ರಾಮಾಕೃಷ್ಣಾ ಗೋವಿಂದ ಎಂದು ಭಗವಂತನ ಧ್ಯಾನ ಮಾಡುತ್ತಾ ತಮ್ಮ ಅಪಾರವಾದ ಅನುಭವವನ್ನು ಕಿರಿಯರಿಗೆ ಧಾರೆ ಎರೆಯುವಂತಾಗಲು ಸಿದ್ದರಾಮಯ್ಯನವರಿಗೆ ಆ ಭಗವಂತನು ದೀರ್ಘಾಯುಷ್ಯವನ್ನು ಕೊಡಲಿ ಎಂದು ಕೋರೋಣ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s