ಚುನಾವಣೆಯ ಸಮಯದಲ್ಲಿ ಎಲ್ಲಾ ಪಕ್ಷಗಳಿಗೂ ಕಾರ್ಯಕರ್ತರ ಮೇಲೆ ಇದ್ದಕ್ಕಿದ್ದಂತೆಯೇ ಎಲ್ಲಿಲ್ಲದ ಪ್ರೀತಿ ಉಕ್ಕಿ ಹರಿದು, ಕಾರ್ಯಕರ್ತರೇ ನಮ್ಮ ಪಕ್ಷದ ಜೀವಾಳ. ಕಾರ್ಯಕರ್ತರೇ ನಮ್ಮ ಪಕ್ಷದ ಆಸ್ತಿ, ಕಾರ್ಯಕರ್ತರಿಂದಲೇ ನಾವು ಈ ಮಟ್ಟ ತಲುಪಿರುವುದು, ಅವರ ಋಣವನ್ನು ಏಳೇಳು ಜನ್ಮದಲ್ಲಿಯೂ ತೀರಿಸಲಾಗದು ಎಂದು ಓತಪ್ರೋತವಾಗಿ ಹರಿಬಿಡುವುದುದನ್ನು ಕೇಳಿರುತ್ತೀರಿ. ಬಹುತೇಕ ರಾಜಕೀಯ ಪಕ್ಷಗಳ ಕಾರ್ಯಕರ್ತರು ಕೇವಲ ಚುನಾವಣಾ ಸಮಯದಲ್ಲಿ ಮಾತ್ರವೇ ಸಕ್ರೀಯವಾಗಿದ್ದು ಕೆಲ ಪ್ರತಿಫಲಾಪೇಕ್ಷೆಯಿಂದಲೇ ಪಕ್ಷದ ಪರವಾಗಿ ಕೆಲಸ ಮಾಡಿದರೆ, ಬಿಜೆಪಿ ಪಕ್ಷದಲ್ಲಿ ಇದಕ್ಕೆ ತದ್ವಿರುದ್ದವಾಗಿ ಚುನಾವಣೆ ಇರಲೀ ಬಿಡಲೀ, ತಾವು ನಂಬಿರುವ ಧರ್ಮ, ಸಿದ್ಧಾಂತದ ಪರವಾಗಿ ವರ್ಷವಿಡೀ ಕೆಲಸ ಮಾಡುವುದರಿಂದಲೇ, ಬಿಜೆಪಿಯನ್ನು ವಿರೋಧ ಮಾಡುವವರೂ ಸಹಾ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ದೇವದುರ್ಲಭ ಕಾರ್ಯಕರ್ತರು ಎಂದೇ ಒಪ್ಪಿಕೊಳ್ಳುತ್ತಾರೆ.
ಕಳೆದ ನಾಲ್ಕುವರ್ಷಗಳಿಂದಲು ರಾಜ್ಯದಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಪಕ್ಷ ಇದೇ ಮೇ 10ರಂದು ಚುನಾವಣೆ ನಡೆದ ಚುನಾವಣೆಯಲ್ಲಿಯೂ ಮತ್ತೊಮ್ಮೆ ಸರಳ ಬಹುಮತದಿಂದಲೋ ಇಲ್ಲವೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂದೇ ಭಾವಿಸಿದ್ದವರಿಗೆ, ಚುನಾವಣಾ ಸಮೀಕ್ಷೆ ಬಿಜೆಪಿ ಸೋಲುತ್ತದೆ ಎಂದು ವಿಷಯವನ್ನು ಅರಗಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಮತಗಳ ಎಣಿಕೆಯ ಆ ಎರಡು ದಿನಗಳ ಕಾಲ ಖಂಡಿತವಾಗಿಯೂ ಯಾವ ಬಿಜೆಪಿಯ ಸಮರ್ಥಕರೂ ಸರಿಯಾಗಿ ನಿದ್ದೆ ಮಾಡಿರಲಿಲ್ಲ ಎಂದರೂ ತಪ್ಪಾಗದು. ನಿಗಧಿಯಂತೆ ಮೇ 13ರಂದು ಮತಗಳ ಎಣಿಕೆ ನಡೆದು ಕಾಂಗ್ರೇಸ್ ಪಕ್ಷ 135 (+55) ಸ್ಥಾನಗಳೊಂದಿಗೆ ಭಾರೀ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದರೆ, ಬಿಜೆಪಿ ಕಳೆದ ಸಲಕ್ಕಿಂತಲೂ ಸುಮಾರು 38 ಸ್ಥಾನಗಳನ್ನು ಕಳೆದು ಕೊಳ್ಳುವ ಮೂಲಕ 66ಕ್ಕೇ ಸೀಮಿತವಾದಾಗಲಂತೂ ದೇವದುರ್ಲಭ ಕಾರ್ಯಕರ್ತರ ಮನೆಗಳಲ್ಲಿ ಒಂದು ರೀತಿಯ ಸೂತಕದ ಛಾಯೆ.
ಚುನಾವಣೆ ಸಮೀಕ್ಷೆ ಹೊರಬಿದ್ದಾಗಲಿಂದ, ಫಲಿತಾಂಶ ಹೊರ ಬಂದ ಮೇಲೂ ರಾಜ್ಯಾದ್ಯಂತ ಎಲ್ಲಿ ಹೋದರೂ ಅರೇ ಹೀಗೇಕಾಯಿತು? ಮೋದಿ, ಶಾ ಜೊತೆ ಹತ್ತಾರು ಕೇಂದ್ರ ಮಂತ್ರಿಗಳು ರ್ಯಾಲಿಗಳು ಮತ್ತು ರೋಡ್ ಶೋ ನಡೆಸಿದರೂ ಈ ರೀತಿಯ ಕಳಪೆ ಸಾಧನೆ ಮಾಡಲು ಕಾರಣವೇನು? ಎಂಬುದೇ ಚರ್ಚೆ. ಇದರಿಂದ ಬೇಸತ್ತು, ಕಛೇರಿಯ ಕೆಲದ ನಿಮಿತ್ತ ಸೋಮವಾರ ಪಕ್ಕದ ರಾಜ್ಯ ತಮಿಳುನಾಡಿನ ಚನ್ನೆಗೆ ಬಂದರೂ, ಅಲ್ಲಿನ ಸಹೋದ್ಯೋಗಿಗಳೂ, ಏನು ಹೇಗಿದ್ದೀರೀ? ಎಂದು ಪ್ರಶ್ನೆ ಕೇಳುವ ಮುನ್ನವೇ? ಇದೇನು ಹೀಗೆ ಮಾಡಿಬಿಟ್ಟಿರಿ? ನಾವು ಇಲ್ಲಿ ಬಿಜೆಪಿಯನ್ನು ತರಲು ಹರ ಸಾಹಸ ಪಡುತ್ತಿದ್ದರೆ, ನೀವು ಇದ್ದ ಸರ್ಕಾರವನ್ನು ಕಳೆದುಬಿಟ್ಟಿರಲ್ಲಾ? ಎಂದು ಕೇಳಿದಾಗ, ಬಿಜೆಪಿ ಈ ಪರಿಯಾಗಿ ಬೆಳೆಯಲು ಖಂಡಿತವಾಗಿಯೂ ದೇಶಾದ್ಯಂತ ಇರುವ ಇಂತಹ ದೇವದುರ್ಲಭ ಕಾರ್ಯಕರ್ತರ ನಿಸ್ವಾರ್ಧ ಸೇವೆಯೇ ಕಾರಣ ಎಂಬುದರ ಅರಿವಾಗಿದ್ದಂತೂ ಸುಳ್ಳಲ್ಲ.
Success has many fathers But failure none ಎನ್ನುವಂತೆ ಬಿಜೆಪಿಯ ಈ ಪರಿಯ ಸೋಲಿನ ಕುರಿತಾಗಿ ಅನೇಕರು ಅನೇಕ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ, ಕೆಲವರು ಇದು ಆಡಳಿತ ವಿರೋಧಿ ಅಲೆಯ ಫಲಿತಾಂಶ, ರಾಜ್ಯದಲ್ಲಿ ಎಂದೂ ಒಂದೇ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಉದಾಹರಣೆ ಇಲ್ಲಾ. ಕೇಂದ್ರದಲ್ಲಿ ಸಮರ್ಥ ನಾಯಕರು ಇದ್ದಾರಾದರೂ, ರಾಜ್ಯದಲ್ಲಿ ಅಸಮರ್ಥ ನಾಯಕರುಗಳೇ ಇರುವ ಕಾರಣದಿಂದಾಗಿ ಈ ಫಲಿತಾಂಶ. 40% ಕಮಿಷನ್ ಸರ್ಕಾರ, ದುರ್ಬಲ ಮುಖ್ಯಮಂತ್ರಿ ಮತ್ತು ರಾಜ್ಯಧ್ಯಕ್ಷರ ಜೊತೆ ಬಿ.ಎಲ್. ಸಂತೋಷ್ ಅವರ ಹೇರಿಕೆಯ ಜೊತೆಯಲ್ಲಿ ಕೇಂದ್ರದಿಂದ ಗುಜರಾತ್ ಮತ್ತು ಉತ್ತರ ಪ್ರದೇಶದಂತೆ ವಿಪರೀತ ಪ್ರಯೋಗಗಳಿಂದಾಗಿಯೇ ಪಕ್ಷಕ್ಕೆ ಈ ರೀತಿಯ ಸೋಲಾಗಿದೆ ಎಂಬ ಅವಲೋಕನ ನಡೆಯುತ್ತಲೇ ಇದೆ.
ಅವರು ಹೇಳಿದ ಎಲ್ಲಾ ವಿಷಯಗಳೂ ಒಂದಷ್ಟು ಮಟ್ಟಿಗೆ ನಿಜವಾದರೂ, ಬಿಜೆಪಿಯ ಈ ಭಯಂಕರ ಸೋಲಿಗೆ ಪ್ರಮುಖ ಕಾರಣವೇ ಖಾವಿಧಾರಿಗಳಾದ ಮಠಾಧೀಶರುಗಳು ಎನ್ನುವುದು ನನ್ನ ವಯಕ್ತಿವ ವಾದವಾಗಿದೆ. ಅರಿಷಡ್ವರ್ಗಗಳನ್ನು ತ್ಯಜಿಸಿ, ಜನಸಾಮಾನ್ಯರು ಸಮಾಜದಲ್ಲಿ ಧರ್ಮದ ಅನುಗುಣವಾಗಿ ನಡೆದುಕೊಂಡು ಹೋಗುವಂತೆ ಮುನ್ನಡೆಸಬೇಕಾಗಿದ್ದಂತ ಸನ್ಯಾಸಿಗಳೇ, ರಾಜಕಾರಣಿಗಳಿಗಿಂತಲೂ ಅತ್ಯಂತ ಕೆಟ್ಟದಾಗಿ ತಮ್ಮ ತಮ್ಮ ಜಾತಿಗಳ ಹಿಂದೆ ನಿಂತು ಆಡಳಿತದಲ್ಲಿ ಒತ್ತಡ ಹಾಕಿದ್ದ ಪರಿಣಾಮವೇ ಇಂತಹ ಕೆಟ್ಟ ಫಲಿತಾಂಶ ಬರಲು ಕಾರಣವಾಗಿದೆ. ಸಂಘದ ಸ್ವಯಂಸೇವಕರು ಸದಾಕಾಲವೂ ನಾವೆಲ್ಲ ಹಿಂದು, ನಾವೆಲ್ಲಾ ಒಂದು ಎಂಬ ಧ್ಯೇಯದೊಂದಿಗೆ ಒಗ್ಗಟ್ಟಾಗಿ ಮುನ್ನೆಡೆದರೇ, ಅದೇ ಸಂಘದ ಧ್ಯೇಯದಡಿಯಲ್ಲೇ ಕೆಲಸ ಮಾಡುತ್ತಾ, ರಾಜಕೀಯಕ್ಕೆ ಬಂದ ತಕ್ಷಣ ಹಿಂದೂಗಳಲ್ಲೇ ನೂರಾರು ಜಾತಿ, ಉಪಜಾತಿಯನ್ನು ಮುಂದು ಮಾಡಿಕೊಂಡು ಓಲೈಕೆ ಮಾಡಲು ಮುಂದಾಗಿರುವುದು ನಿಜಕ್ಕೂ ಅಸಹ್ಯಕರ ಎನಿಸುತ್ತದೆ. ಶಾಖೆಗಳಲ್ಲಿ ಹೇಳಿಕೊಟ್ಟ ಶ್ಲೋಕವಾದ ಅಶ್ವಂ ನೈವ, ಗಜಂ ನೈವ, ವ್ಯಾಘ್ರಂ ನೈವ ಚ ನೈವ ಚ. ಅಜಾ ಪುತ್ರಂ ಬಲಿಂ ದದ್ಯಾತ್, ದೇವೋ ದುರ್ಬಲ ಘಾತಕಃ ಎಂದರೆ ದೇವರಿಗೆ ಬಲಿಕೊಡುವಾಗ ಬಲಿಷ್ಟ ಪ್ರಾಣಿಗಳಾದ ಕುದುರೆ, ಆನೆ, ಸಿಂಹವನ್ನು ಎಂದಿಗೂ ಕೊಡದೇ, ಸಾಧು ಪ್ರಾಣಿಯಾದ ಮೇಕೆ/ಕುರಿ ಮರಿಯನ್ನು ಬಲಿಕೊಡುವಂತೆ, ಮೆತ್ತಗಿದ್ದವರಿಗೆ ಮತ್ತೊಂದು ಗುದ್ದು ಎನ್ನುವಂತೆ, ಕಾಂಗ್ರೇಸ್ ಮತ್ತು ಜನತಾದಳದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲಾಗದ ಈ ಮಠಾಧೀಶರು ತಮ್ಮೇಲ್ಲಾ ಹೇರಿಕೆ (Blackmail)ಗಳನ್ನು ಬಿಜೆಪಿ ಪಕ್ಷದ ಮೇಲೆ ಹೇರುವುದು ಇಂದು ರೀತಿಯ ಗುಬ್ಬಿಯ ಮೇಲೆ ಬ್ರಹ್ಮಾಸ್ಥ ಎನಿಸುವಂತಿದೆ.
2018ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತಬಾರದೇ ಹೋದಾಗ, ಜನಾದೇಶದ ವಿರುದ್ಧವಾಗಿ ಕಾಂಗ್ರೇಸ್ ಮತ್ತು ಜೆಡಿಎಸ್ ಅಪವಿತ್ರವಾಗಿ ಮೈತ್ರಿ ಮಾಡಿಕೊಂಡು ಒಂದು ವರ್ಷ ಸರ್ಕಾರ ನಡೆಸಿ ಪರಸ್ಪರ ಒಳಜಗಳಗಳ ನಡೆಸುತ್ತಿದ್ದಾಗ, ಬಿಜೆಪಿ ಆಪರೇಷನ್ ಕಮಲದ ಮೂಲಕ ಸಾಂವಿಧಾನಾತ್ಮಕ ಅನೈತಿಕವಾಗಿ ಅಧಿಕಾರಕ್ಕೆ ಬಂದ ಕೂಡಲೇ, ಇದ್ದಕ್ಕಿದ್ದಂತೆಯೇ ಈ ಮಠಾಧೀಶರ ಹಾವಳಿ ಶುರುವಾಗಿ ತಮ್ಮ ಪಂಗಡ, ಉಪಪಂಗಡಗಳಿಗೆ ಇಷ್ಟು ಮಂತ್ರಿ ಪದವಿ, ಅದರಲ್ಲೂ ಇಂತಹ ಖಾತೆ, ಎಂದು ಖ್ಯಾತೆ ತೆಗೆದದ್ದಲ್ಲದೇ, ಕುರಿ ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು ಎನ್ನುವಂತೆ ಖಾವೀಧಾರಿಗಳಾದರೂ ನಮ್ಮ ಪಂಗಡಕ್ಕೆ ಇಷ್ಟು ಮೀಸಲಾತಿ, ನಮಗೆ ಇಷ್ಟು ಮಂತ್ರಿಗಿರಿ, ಅದು ಆಗದೇ ಹೋದಾದಲ್ಲಿ ಪರಿಣಾಮ ನೆಟ್ಟಗೆ ಇರುವುದಿಲ್ಲಾ ಎಂದು ಬೀದಿಗಿಳಿದು ರಂಪಾಟ ಮಾಡುತ್ತಾ, ಸನ್ಯಾಸಿಗಳ ಸ್ಥಾನಮಾನಕ್ಕೆ ಅವಮಾನ ತಂದಿದ್ದಂತೂ ಸುಳ್ಳಲ್ಲ.
ನಿಜ ಹೇಳಬೇಕೆಂದರೆ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಬಿ ಬಿ ಶಿವಪ್ಪ, ಯಡೆಯೂರಪ್ಪ, ಈಶ್ವರಪ್ಪ, ರಾಮಚಂದ್ರಗೌಡ, ಅನಂತಕುಮಾರ್ ಮುಂತಾದವರುಗಳ ಪಾತ್ರ ಅನನ್ಯವಾಗಿದ್ದು ಆರಂಭದಲ್ಲಿ ಅವರೆಂದೂ ಯಾವುದೇ ಒಂದು ಜಾತಿಯ ನಾಯಕರುಗಳಾಗಿರದೇ, ಅವರೆಲ್ಲರೂ ಹಿಂದೂ ನಾಯಕರಂತೆ ಸಿದ್ಧಾಂತಕ್ಕೆ ಕಟಿ ಬದ್ಧರಾಗಿ ದುಡಿದು ಒಂದಷ್ಟು ಸ್ಥಾನಗಳನ್ನು ಗಳಿಸಿ ಅಧಿಕೃತ ವಿರೋಧ ಪಕ್ಷದ ನಾಯಕರು ಎನಿಸಿಕೊಳ್ಳುತ್ತಿದ್ದಂತೆಯೇ ಅವರೆಲ್ಲರೂ ಬಿಜೆಪಿ ನಾಯಕರು ಎನಿಸಿಕೊಳ್ಳುವುದಕ್ಕಿಂತಲು ಅವರ ಹಿಂದೆ ಬಿದ್ದ ಈ ಮಠಮಾನ್ಯಗಳೇ ಅವರನ್ನು ಅವರವರ ಜಾತಿಯ ನಾಯಕರುಗಳಾಗಿ ಬಿಂಬಿಸಿದ್ದೇ ಈ ರಾಜ್ಯದ ರಾಜಕಾರಣದ ಕಳಂಕ ಎನ್ನುವುದೇ ನಿಜಕ್ಕೂ ದುಃಖಕರ. ಇನ್ನು ಹಳೇ ಮೈಸೂರು ಭಾಗದ ಪ್ರಭಾವಿ ಮಠವೂ ಸಹಾ ಉತ್ತರ ಕರ್ನಾಟಕದ ಮಠಗಳಂತೆ ನೇರವಾಗಿ ಬೀದಿಗೆ ಇಳಿಯದೇ ಹೋದರೂ ಪರೋಕ್ಷವಾಗಿ ತಮ್ಮ ಜಾತಿಯ ಪಕ್ಷವನ್ನೇ ಬೆಂಬಲಿಸಿ ಒಕ್ಕಲಿಗರೇ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಾಗ, ಅದಕ್ಕೆ ಪ್ರತ್ಯುತ್ತರ ಎನಿಸುವಂತೆ ಅನಿವಾರ್ಯವಾಗಿ ಉತ್ತರ ಕರ್ನಾಟಕದ ವೀರಶೈವ ಲಿಂಗಾಯಿತರ ಸಮಾಜ ಯಡೆಯೂರಪ್ಪನವರನ್ನು ತಮ್ಮ ಅಧಿನಾಯಕ ಎಂದು ಕಳೆದೆರಡು ಚುನಾವಣೆಯಲ್ಲಿ ಬೆಂಬಲಿಸಿದ ಕಾರಣ, ಹಿಂದೂ ಪಕ್ಷವಾಗಿದ್ದ ಬಿಜೆಪಿ ಕರ್ನಾಟಕದಲ್ಲಿ ಮಾತ್ರಾ ಲಿಂಗಾಯಿತ ಪಕ್ಷವಾಗಿ ಪರಿವರ್ತನ ಆಗಿ ಹೋದದ್ದೇ ದುರಂತವಾಯಿತು.
ಎರಡು ವರ್ಷಕಾಲ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿದ್ದ ಯಡೆಯೂರಪ್ಪನವರನ್ನು ವಯಸ್ಸಿನ ಕಾರಣದಿಂದಾಗಿ ಕೆಳಗಿಳಿಸಿದಾಗ ಮತ್ತೆ ಬೀದಿಗಿಳಿದ ಲಿಂಗಾಯಿತ ಸ್ವಾಮಿಗಳ ಬ್ಲಾಕ್ಮೇಲಿಗೆ ಅಂಜಿಯೇ ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ, ತನ್ನ ಸ್ವಕ್ಷೇತ್ರದ ಹೊರತಾಗಿ ಮತ್ತೊಂದು ಕ್ಷೇತ್ರದಲ್ಲಿ ಗೆಲ್ಲಲಾಗದ, ತನ್ನ ರಾಜಕೀಯ ಅಸ್ಮಿತೆಗಾಗಿ ಸೈದ್ಧಾಂತಿಕ ವಿರೋಧವನ್ನು ಬದಿಗೊತ್ತಿ ಬಿಜೆಪಿಯನ್ನು ಸೇರಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಕೇವಲ ಕೇವಲ ಲಿಂಗಾಯಿತರು ಎಂಬ ಕಾರಣದಿಂದಾಗಿ ಅಧಿಕಾರಕ್ಕೆ ತಂದಿದ್ದೇ ಬಿಜೆಪಿಗೆ ಮುಳುವಾಯಿತು ಎಂದರೂ ತಪ್ಪಾಗದು. ಅದರ ಜೊತೆ ಒಕ್ಕಲಿಗರ ಓಲೈಕೆಗಾಗಿ ಮತ್ತೊಬ್ಬ ಸಾಧು ಪ್ರಾಣಿ ಅರಗ ಜ್ಞಾನೇಂದ್ರ ಅವರಿಗೆ ಗೃಹಖಾತೆ ನೀಡಿದರೆ, ದಕ್ಷಿಣ ಕನ್ನಡದ ಜನರ ಮೂಗಿಗೆ ತುಪ್ಪ ಸವರಲು, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳೀನ್ ಕುಮಾರ್ ಕಟೀಲ್ ಅಂತಹ ದುರ್ಬಲರನ್ನು ಮತ್ತೆ ಮುಂದುವರೆಸಿ, ಇವರೆಲ್ಲರು ಕೊಟ್ಟ ಕುದುರೆ ಏರದವನು ವೀರನೂ ಅಲ್ಲಾ ಶೂರನಂತೂ ಅಲ್ಲವೇ ಅಲ್ಲಾ ಎನ್ನುವಂತೆ ಯಾವ ವಿಷಯದಲ್ಲೂ ದಿಟ್ಟ ನಿರ್ಧಾರ ತೆಗೆದುಕೊಳ್ಳದೇ ಸುಮ್ಮನೇ, ಬಾಯಿ ಮಾತಿಗಾಗಿ ತಪ್ಪು ಯಾರೇ ಮಾಡಿದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂಬ ಹೇಳಿಕೆಗಳೇ ಇಂದಿನ ಸೋಲಿಗೆ ಕಾರಣವಾಗಿದೆ ಎಂದರೂ ತಪ್ಪಾಗದು.
ರಾಜ್ಯದ ಅ ಎರಡು ಪ್ರಮುಖ ಜಾತಿಗಳ ಮಾಠಾಧೀಶರ ಒತ್ತಡಕ್ಕೆ ಮಣಿದು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ಡಾಣಕ್ಕೆ ಕೆಂಪೇಗೌಡರ ಹೆಸರನ್ನು ಇಟ್ಟಿದ್ದಲ್ಲದೇ, 108 ಅಡಿ ಎತ್ತರದ, ಸುಮಾರು 218 ಟನ್ (120 ಟನ್ ಕಬ್ಬಿಣ ಮತ್ತು 98 ಟನ್ ಕಂಚು) ತೂಕದ ಕೆಂಪೇಗೌಡರ ಪುತ್ಧಳಿಯನ್ನು ಸ್ಥಾಪಿಸಿದರೆ, ಮೀಸಲಿನಲ್ಲಿಯೂ ದೇವೇಗೌಡರ ಕಾಲದಲ್ಲಿ ಮುಸಲ್ಮಾನರನ್ನು ಓಲೈಸಲು ಕೊಟ್ಟಿದ್ದ 4% ಮೀಸಲಾತಿಯನ್ನು ತೆಗೆದು ಒಕ್ಕಲಿಗರು ಮತ್ತು ಲಿಂಗಾಯಿತ ಜಾತಿಗೆ ಸಮನಾಗಿ ಹಂಚಿದರೂ ಫಲಿತಾಂಶ ಈ ರೀತಿಯಾಗಿ ಬಂದಿದೆ . ಈಗ ಕಾಂಗ್ರೇಸ್ ಪಕ್ಷದಿಂದ 23 ಒಕ್ಕಲಿಗರು ಮತ್ತು 34 ಲಿಂಗಾಯಿತರು ಶಾಸಕರಾಗಿ ಆಯ್ಕೆಯಾಗಿದ್ದರೂ, ಇದುವರೆವಿಗೂ ತಮ್ಮ ಜಾತಿಯ ನಾಯಕರುಗಳನ್ನೇ ಮುಖ್ಯಮಂತ್ರಿಮಾಡಬೇಕು ಎಂದು ಯಾವುದೇ ಮಠಾಧೀಶರು ಬೀದಿಗೆ ಇಳಿಯದೇ ಇರುವುದು ಸಹಾ ಮಠಾಧೀಶರು ಬಿಜೆಪಿ ಪಕ್ಷದ ವಿರುದ್ಧವಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ.
ದುರಾಸೆಯ ದುರ್ಬಲ ನಾಯಕರುಗಳಿಂದಾಗಿ ಈ ಬಾರಿ ಬಿಜೆಪಿ ಅತ್ಯಂತ ಕೆಟ್ಟ ಆಡಳಿತ ನೀಡಿ ಅದನ್ನು ಮುಚ್ಚಿಹಾಕಿಕೊಳ್ಳುವ ಸಲುವಾಗಿ, 52 ಹೊಸಬರಿಗೆ ಟಿಕೆಟ್ ನೀಡಿದ್ದರೂ ಬಿಜೆಪಿಯ ದೇವದುರ್ಲಭ ಕಾರ್ಯಕರ್ತರು ಪಕ್ಷದ ಪರವಾಗಿ ನಿಂತು ಅವರ ಪೈಕಿ ಸುಮಾರು ಅರ್ಧದಷ್ಟು ಜನರನ್ನು ಆಯ್ಕೆಮಾಡಿ ಕಳುಹಿಸಿದ್ದಲ್ಲದೇ, 2018ರಲ್ಲಿ 36.35% ಮತಗಳನ್ನು ಗಳಿಸಿದ್ದರೆ, ಈ ಬಾರಿಯೂ ಬಹುತೇಕ ಅಷ್ಟೇ 35.7% ಮತಗಳನ್ನು ನೀಡುವ ಮೂಲಕ ತನ್ನ ಪಕ್ಷದ ಮೇಲೆ ತನ್ನ ನಂಬಿಕೆಯನ್ನು ಉಳಿಸಿಕೊಂಡಿದ್ದಾನೆ. ಕಳೆದ ಬಾರಿ Congress 38.14% ಮತ್ತು JDS 18.3% ಗಳಿಸಿದ್ದರೆ, ಈ ಬಾರಿ JDS 13.3% ಗಳಿಸುವ ಮೂಲಕ ಅವರು ಕಳೆದುಕೊಂಡ ಆ 5% ಮತಗಳು ಹೆಚ್ಚುವರಿಯಾಗಿ Congress 43.2% ಪಕ್ಷಕ್ಕೆ ಲಭಿಸಿದ ಕಾರಣ ಸೀಟುಗಳಲ್ಲಿ ಈ ಪರಿಯ ವ್ಯತ್ಯಾಸವಾಗಿದೆ.
ಈ ಬಾರಿ ಸುಮಾರು 41 ಕ್ಷೇತ್ರಗಳಲ್ಲಿ <5000 ಕ್ಕೂ ಕಡಿಮೆ ಮತಗಳ ಅಂತರದಲ್ಲಿ ನಿರ್ಧಾರವಾಗಿದ್ದು. ಅದರಲ್ಲಿ BJP 14 INC 23 & JDS 4 ಸ್ಥಾನಗಳಲ್ಲಿ ಗೆದ್ದಿದ್ದರೆ, BJP 17, INC 13 JDS 8 & IND 3 ಸ್ಥಾನಗಳಲ್ಲಿ ಸೋಲುವ ಮೂಲಕ ಹೆಚ್ಚೂ ಕಡಿಮೆ ಎಲ್ಲಾ ಪಕ್ಷಗಳ ಫಲಿತಾಂಶ ಒಂದೇ ರೀತಿಯಲ್ಲಿ ಆಗಿದೆ ಎನ್ನುವುದು ಗಮನಾರ್ಹವಾಗಿದೆ.
ಸೋತದ್ದು ಆಗಿದೆ. ಇನ್ನೇನು ಒಂದೇ ವರ್ಷಗದಲ್ಲಿ ಲೋಕಸಭಾ ಚುನಾವಣೆಯಲ್ಲಿ ಈಗ ಮಾಡಿದ ತಪ್ಪನ್ನು ತಿದ್ದಿಕೊಳ್ಳದೇ ಹೋದಲ್ಲಿ ಈಗ ಇರುವ 26ರ ಪೈಕಿ 6ನ್ನೂ ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಚುನಾವಣೆಯ ಮುನ್ನಾ ಈ ಪರಿಯಾಗಿ ಬದಲಾವಣೆ ಮಾಡಿದ ಬಿಜೆಪಿಯ ಹೈಕಮಾಂಡ್ ಅಂದು ಯಡೆಯೂರಪ್ಪನವರನ್ನು ಅಧಿಕಾರದಿಂದ ಇಳಿಸಿದಾಗ ಯಾವ ಮಠಾಧೀಶರ ಒತ್ತಾಯಕ್ಕೆ ಮಣಿಯದೇ ಒಬ್ಬ ದಿಟ್ಟ ಮತ್ತು ಸಮರ್ಥ ಹಿಂದೂ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಒಳ್ಳೆಯ ಆಡಳಿತ ನೀಡಿದ್ದರೆ ಇಂದು ಈ ಪರಿಯಾಗಿ ದೈನೇಸಿ ಸ್ಥಿತಿಯಿಂದ ರೋಡ್ ಶೋ ಮಾಡಿದರೂ, ಸೋಲಬೇಕಾಗಿರಲಿಲ್ಲ ಎನ್ನುವುದೇ ದೇವದುರ್ಲಭ ಕಾರ್ಯಕರ್ತನ ಮನಸ್ಸಿನ ಮಾತಾಗಿದೆ.
1999ರ ಚುನಾವಣೆಯಲ್ಲಿಯೂ ಸಹಾ ಬಿಜೆಪಿ ಇದೇ ರೀತಿ ಹೀನಾಯವಾಗಿ ಸೋತಿತ್ತು. ಸ್ವತಃ ಯಡೆಯೂರಪ್ಪನವರೇ ಶಿಖಾರಿ ಪುರದಿಂದ ಮಕಾಡೆ ಮಲಗಿದ್ದಾಗ, ಸಕಲೇಶಪುರದಲ್ಲಿ ಮತ್ತೊಬ್ಬ ಧೀಮಂತ ನಾಯಕ ಬಿಬಿ ಶಿವಪ್ಪನವರು ಶಾಸಕರಾಗಿ ಆಯ್ಕೆಯಾಗಿ ಸಹಜವಾಗಿಯೇ ವಿರೋಧಪಕ್ಷದ ನಾಯಕನಾಗುವ ಎಲ್ಲಾ ಅರ್ಹತೆಯನ್ನು ಹೊಂದಿದರು. ಆದರೆ ತಮ್ಮ ಮುಂದೆ ಮತ್ತೊಬ್ಬ ಪ್ರಭಲ ಲಿಂಗಾಯಿತ ನಾಯಕರು ಪ್ರವರ್ಧಮಾನಕ್ಕೆ ಬರಬಾರುದು ಎಂಬ ಯಡೆಯೂರಪ್ಪನವರ ದುರಾಲೋಚನೆಯಿಂದಾಗಿ ಕೇವಲ ಎರಡನೇ ಬಾರಿ ಗೆದ್ದಿದ್ದ 45ರ ಪ್ರಾಯದ ಜಗದೀಶ್ ಶೆಟ್ಟರ್ ರನ್ನು ವಿರೋಧಪಕ್ಷದ ನಾಯಕರನ್ನಾಗಿ ಮಾಡಿ, ಶಿವಪ್ಪನವರನ್ನು ಪಕ್ಷದಿಂದಲೇ ಹೊರಹಾಕಿದಂತೆ ಈ ಬಾರಿಯೂ ಕೆಲ ನಾಯಕರುಗಳ ಸ್ವಾರ್ಥದಿಂದಾಗಿ ವಿರೋಧ ಪಕ್ಷದ ನಾಯಕನ ಸ್ಥಾನ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ದುರ್ಬಲ ಅಪಾತ್ರರ ಕೈಗೆ ಹೋಗದೇ, ಅಥವಾ ಮತ್ತೇ ಯಾವುದೇ ಮಠಾಧೀಶರ ಓಲೈಕೆಗೆ ಒಳಗಾಗದೇ, ಕಾಂಗ್ರೇಸ್ಸನ್ನು ಸಮರ್ಥವಾಗಿ ಎದುರಿಸುವಂತ ಅರ್ಹ ನಾಯಕರಿಗೆ ಸ್ಥಾನಮಾನ ನೀಡುವುದಲ್ಲದೇ, ಈಗ ಸೋತ ಎಲ್ಲಾ ಅಭ್ಯರ್ಥಿಗಳನ್ನೂ ಒಗ್ಗೂಡಿಸಿ ಅವರಿಗೆ ಸಾಂತ್ವನ ಹೇಳಿ ಮುಂದಿನ ಲೋಕಸಭಾ ಚುನಾವಣೆಗೆ ಇಂದಿನಿಂದಲೇ ಸಜ್ಜುಗೊಳಿಸುವ ಕಾರ್ಯ ಮಾಡಲೇ ಬೇಕಾಗಿದೆ.
ಪ್ರಜಾಪ್ರಭುತ್ವದಲ್ಲಿ ಸೋಲು ಮತ್ತು ಗೆಲುವು ಸಹಜ. ಈಗ ಪಕ್ಷ ಸೋತಿದೆಯೇ ಹೊರತು, ಸತ್ತಿಲ್ಲ. ಅಂತಹ ದಿಗ್ಗಜರುಗಳಾದ ವಾಜಪೇಯಿ, ಇಂದಿರಾಗಾಂಧಿ, ದೇವೇಗೌಡ, ಯಡೆಯೂರಪ್ಪನವರೂ ಸಹಾ ಒಂದಲ್ಲಾ ಒಂದು ಬಾರಿ ಸೋತಿದ್ದಾರೆ. ಆದರೆ ಹಾಗೆ ಸೋತ ನಂತರ, ಸೋಲಿನ ಕಾರಣವನ್ನು ಅರಿತು ಅದನ್ನು ತಿದ್ದಿಕೊಂಡು ಮತ್ತೆ ಫೀನಿಕ್ಸ್ ಪಕ್ಷಿಯಂತೆ ಪುಟಿದು ಚಿಮ್ಮಿ ಮತ್ತೆ ರಾಜಕೀಯದ ಉನ್ನತ ಸ್ಥಾನಮಾನವವನ್ನು ಗಳಿಸಿದ್ದಾರೆ. ಚುನಾವಣೆಯ ಸೋಲು ಮತ್ತು ಗೆಲುವು ಎನ್ನುವುದು ಗಡಿಯಾರದ ಎರಡು ಮುಳ್ಳಿನಂತೆ ಇದ್ದು ಅದು ಕಾಲ ಕಾಲಕ್ಕೆ ಅನುಗುಣವಾಗಿ ನಿಶ್ಚಿತವಾಗಿಯೂ ಮೇಲೆ ಕೆಳಗಾಗುವುದು ಈ ಜಗದ ನಿಯಮ ಅಲ್ವೇ? ಈಗಲೂ ಕಾಲ ಮಿಂಚಿಲ್ಲಿಲ್ಲ. ಯಾವುದೇ ಒಂದು ಜಾತಿಯ ಓಲೈಕೆಗೆ ಮುಂದಾಗದೇ, ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್, ಸಬ್ ಕಾ ವಿಕಾಸ್ ಎನ್ನುವ ತತ್ವದಡಿಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಈ ಸೋಲನ್ನು ಮೆಟ್ಟಿ ನಿಲ್ಲುವಂತಾಗಲೀ ಎನ್ನುವುದೇ ಎಲ್ಲಾ ದೇವದುರ್ಲಭ ಕಾರ್ಯಕರ್ತರ ಆಶಯವಾಗಿದೆ.
ಏನಂತೀರಿ?
ಸೃಷ್ಟಿಕರ್ತ ಉಮಾಸುತ
ನಿಮ್ಮ ವಿಶ್ಲೇಷಣೆ ಸರಿಸುಮಾರು ಕರಾರುವಾಕ್ಕಾಗಿದೆ. ನನ್ನ ಅಭಿಪ್ರಾಯವೂ ಇದೆ. ಕಾಂಗ್ರೆಸ್ ನವರು ಇದು ನಿಜವೇ ಎಂದು ತಮ್ಮನ್ನೇ ಚಿವುಟಿ ನೋಡಿಕೊಂಡು ನಂಬಬಹುದಾದ ಗೆಲುವು ಪಡೆದಿದ್ದಾರೆ. ಕಾಲಾಯ ತಸ್ಮೈ ನಮಃ. ಕಾದು ನೋಡೋಣ.
LikeLiked by 1 person
ಸಿದ್ದು, ಬಂಡೆ ಜಗಳದಲ್ಲಿ ಹೆಚ್ಚು ದಿನಗಳ ಕಾಲ ಈ ಸರ್ಕಾರ ಉಳಿಯೋದಿಲ್ಲ
LikeLike
Nice one Sir ji 🙏
LikeLiked by 1 person
ಧನ್ಯೋಸ್ಮಿ
LikeLike
ಈಗಿನ ರಾಜಕೀಯ ಸ್ಥಿತಿಯನ್ನು ತುಂಬಾ ನೈಜವಾಗಿ ಎಂತಹವರು ಅರ್ಥಮಾಡಿಕೊಳ್ಳುವಂತೆ ವಿವರಿಸಿದ್ದೀರಿ
ತುಂಬಾ ಅರ್ಹಗರ್ಭಿತವಾಗಿದೆ. 🙏💐💐
LikeLiked by 1 person
ಧನ್ಯೋಸ್ಮಿ
LikeLike
Congress strategy, and fighting spirit worked against the slacking bjp, anti incumbancy also major reason, mass won’t listen to logic, you need magic ,
LikeLike
ಅತ್ಯುತ್ತಮ ವಿಮರ್ಶೆ ತುಂಬಾ ಸತ್ಯವಾದ ಲೇಖನ
LikeLike
ಧನ್ಯೋಸ್ಮಿ
LikeLike