ಈ ಹಿಂದೆ ಬೆಂಗಳೂರು ಎಂದ ತಕ್ಷಣ ಜನರ ಮನಸ್ಸಿನಲ್ಲಿ ಥಟ್ ಅಂತಾ ಮೂಡುತ್ತಿದ್ದದ್ದೇ ಉದ್ಯಾನ ನಗರಿ. ಬೆಂಗಳೂರಿನಲ್ಲಿ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ನಂತಹ ಪ್ರಸಿದ್ದ ಉದ್ಯಾನವನವಲ್ಲದೇ, ನೂರಾರು ಉದ್ಯಾನವನಗಳು ಇದ್ದ ಕಾರಣ, ನಗರ ಎಷ್ಟೇ ಬೆಳೆದರೂ ಹಚ್ಚ ಹಸುರಾಗಿಯೇ ಇದ್ದು ವರ್ಷದ 365 ದಿನಗಳು ಅತ್ಯಂತ ಪ್ರಶಾಂತ ವಾತಾವರಣ ಇರುವ ಕಾರಣ ಪ್ರಪಂಚದಾದ್ಯಂತ ಇರುವ ಜನರೆಲ್ಲರೂ ಬೆಂಗಳೂರಿಗೆ ಬಂದು ವಾಸಿಸಲು ಇಚ್ಚಿಸುವ ಕಾರಣ ಇಂದು ಬೆಂಗಳೂರು ಜಗತ್ತಿನ ಮೊದಲ 10 ನಗರಗಳಲ್ಲಿ ಒಂದಾಗಿದ್ದು, ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂಬ ಹೆಸರಿಗೂ ಪಾತ್ರವಾಗಿದೆಯಲ್ಲದೇ, ಅತ್ಯಂತ ಹೆಚ್ಚಿನ ಉಪಹಾರಗೃಹಗಳು ಇರುವ ನಗರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಬೆಂಗಳೂರಿನ ಉಪಹಾರಗೃಹ ಎಂಬ ತಕ್ಷಣವೇ ನೆನಪಾಗುವುದೇ ಎಲ್ಲರ ನೆಚ್ಚಿನ ಎಂಟಿಆರ್ ಹೋಟೆಲ್ ಆಗಿದ್ದು ಆ ಉಪಹಾರಗೃಹದ ಕುರಿತಾದ ಹೆಚ್ಚಿನ ಮಾಹಿತಿಯನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಉಡುಪಿಯ ಅಷ್ಟ ಮಠದ ಭೋಜನ ಶಾಲೆಯಲ್ಲಿ ಪಾಕ ತಜ್ಞರಾಗಿದ್ದವರು ಅಥವಾ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದ ಮತ್ತು ದೇವರ ಪ್ರಸಾದವನ್ನು ತಯಾರಿಸುತ್ತಿದ್ದ ಶಿವಳ್ಳಿ ಬ್ರಾಹ್ಮಣರು ಮತ್ತು ಮಾಧ್ವ ಸಂಪ್ರದಾಯದ ಬ್ರಾಹ್ಮಣರು ಕಾಲ ಕ್ರಮೇಣವಾಗಿ ಉದರ ನಿಮಿತ್ತವಾಗಿ ಬೇರೆ ಬೇರೆ ಉದ್ಯೋಗಗಳನ್ನು ಅರಸಿಕೊಳ್ಳಲು ನಿರ್ಧರಿಸಿದಾಗ ಅವರಿಗೆ ಥಟ್ ಅಂತಾ ಹೊಳೆದದ್ದೇ ತಮ್ಮ ಪಾರಂಪರಿಕೆ ಪಾಕ ಶೈಲಿ. ಹಾಗಾಗಿ ಅದನ್ನೇ ಮುಂದಿಟ್ಟುಕೊಂಡು ದೇಶ ವಿದೇಶಗಳಲ್ಲಿ ನಾನಾ ಹೆಸರಿನಲ್ಲಿ ಉಡುಪಿ ಹೋಟೆಲ್ ಗಳನ್ನು ಆರಂಭಿಸಿ ದೇವಾಲಯದ ಪಾಕಶಾಲೆಯ ಸಾತ್ವಿಕ ರುಚಿ ಮತ್ತು ಅಭ್ಯಾಸಗಳ ಜೊತೆ ಉಡುಪಿಯ ತಿಂಡಿಗಳನ್ನು ಮತ್ತು ಆಹಾರ ಪದ್ದತಿಯನ್ನು ಎಲ್ಲರಿಗೂ ಪರಿಚಯಿಸಿ ಹೋಟೆಲ್ ಎಂದರೆ ಉಡುಪಿ ಹೋಟೆಲ್ ಎಂಬ ಅನ್ವರ್ಥನಾಮ ಬರುವಂತೆ ಮಾಡಿದ್ದಲ್ಲದೇ ಲಕ್ಷಾಂತರ ಜನರಿಗೆ ಉದ್ಯೋಗದಾತರಾಗಿರುವುದು ನಿಜಕ್ಕೂ ಅದ್ಭುತ ಮತ್ತು ಅನನ್ಯವೇ ಸರಿ. ಅಂದಿಗೂ ಇಂದಿಗೂ ಮತ್ತು ಮಂದೆಯೂ ಸಹಾ, ಹೋಟೆಲ್ಲುಗಳ ನಾಮಫಲಕಗಳ ಮೇಲೆ ಉಡುಪಿ ಎಂಬ ಹೆಸರಿದ್ದರೆ ಸಾಕು ಸಕ್ಕರೆಗೆ ಇರುವೆಗಳು ಮುತ್ತುವಂತೆ ಜನರು ಹೋಟೆಲ್ಲಿಗೆ ಪ್ರವೇಶಿಸುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿಯೇ ಇಂದು ಉಡುಪಿಯಲ್ಲದವರು ಸಹಾ ಉಡುಪಿ ಹೋಟೆಲ್ ಎಂಬ ತಮ್ಮ ಬ್ರಾಂಡ್ ಬಳಸಿಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.
ಇದೇ ರೀತಿ ಉಡುಪಿಯ ಬಳಿಯ ಪಾರಂಪಲ್ಲಿ ಎಂಬ ಊರಿನವರಾದ ಶ್ರೀ ಯಜ್ಞನಾರಾಯಣ ಮೈಯ್ಯ ಮತ್ತು ಅವರ ಸಹೋದರರು ಬೆಂಗಳೂರಿನ ಲಾಲ್ ಬಾಗ್ ಇರುವ ಮಾವಳ್ಳಿ ಎಂಬ ಪ್ರದೇಶದಲ್ಲಿ 1924ರಲ್ಲಿ ಅದೇ ಊರಿನ ಹೆಸರನ್ನೇ ಬಳಸಿಕೊಂಡು ಮಾವಳ್ಳಿ ಟಿಫನ್ ರೂಮ್ ಎಂಬ ಹೆಸರಿನಲ್ಲಿ ಸಣ್ಣ ಪ್ರಮಾಣದ ಉಪಹಾರಗೃಹವನ್ನು ಆರಂಭಿಸಿ, ಪಾರಂಪರಾಗತ ದಕ್ಷಿಣ ಕನ್ನಡ ತಿನಿಸುಗಳನ್ನು ಉಣಬಡಿಸಲು ಆರಂಭಿಸಿದರು. ಹೋಟೆಲ್ಲಿನ ಶುಚಿ ಮತ್ತು ರುಚಿಯ ಜೊತೆಗೆ ಅವರ ಆದರ ಆತಿಥ್ಯಗಳಿಂದಾಗಿಯೇ ಕೆಲವೇ ಕಲವು ವರ್ಷಗಳಲ್ಲಿ ಆ ಹೋಟೆಲ್ ಜನಪ್ರಿಯವಾಗಿ ಎಲ್ಲರ ಬಾಯಿಯಲ್ಲಿಯೂ ಎಂಟಿಆರ್ ವಿಶ್ವ ವಿಖ್ಯಾತವಾಯಿತು.
ಜನರು ಕೊಡುವ ಬೆಲೆಗೆ ಸ್ವಲ್ಪವೂ ಕುಂದಾಗದಂತೆ ಆಹಾರದ ಗುಣಮಟ್ಟಕ್ಕೆ ಒತ್ತು ಕೊಟ್ಟು ಅಪ್ಪಟ್ಟ ದೇಸೀ ಬೆಣ್ಣೆ ಮತ್ತು ತುಪ್ಪ ಬಳೆಸುವ ಮೂಲಕ ಯಾವುದೇ ರೀತಿಯ ಕಲಬೆರಕೆ ಇಲ್ಲದ ಪರಿಶುದ್ಧವಾದ ಶುದ್ಧವಾದ ಸಾಮಾನುಗಳನ್ನು ಬಳೆಸಿ ತಯಾರಿಸುತ್ತಿದ್ದ ಆಹಾರ ಬಲು ಬೇಗನೆ ಪ್ರಸಿದ್ಧಿಯನ್ನು ಪಡೆದುಕೊಂಡಿತು. ಲಾಲ್ ಬಾಗಿನಲ್ಲಿ ಬೆಳಗಿನ ವಾಕಿಂಗ್ ಮುಗಿಸಿ ಕೊಂಡು ಎಂಟಿಆರ್ ನಲ್ಲಿ ಬಿಸಿ ಬಿಸಿ ಫಿಲ್ಟರ್ ಕಾಫೀ ಮತ್ತು ದೋಸೆ ತಿನ್ನದೇ ಹೋದಲ್ಲಿ ದಿನವೇ ಆರಂಭವಾಗದು ಎನ್ನುವಂತ ಪರಿಸ್ಥಿತಿ ಅಲ್ಲಿನ ಸುತ್ತಮುತ್ತಲಿನವರಿಎ ಆದ ಕಾರಣ ಅಂದಿನಿಂದ ಇಂದಿನವರೆಗೂ ಅಲ್ಲಿ ತಿಂಡಿಗಳನ್ನು ತಿನ್ನಲು ಜನ ಸದಾಕಾಲವೂ ಸಾಲು ಸಾಲು ನಿಲ್ಲುವುದು ಆ ಉಪಹಾರಗೃಹದ ಜನಪ್ರಿಯತೆ ಹಿಡಿದ ಕೈಗನ್ನಡಿಯಾಗಿದೆ.
ಅಲ್ಲಿಯ ಜನದಟ್ಟಣೆ ಆಂದಿಗೂ ಮತ್ತು ಇಂದಿಗೂ ಎಷ್ಟು ಇರುತ್ತದೆ ಎಂದರೆ ಒಬ್ಬರು ತಿಂಡಿ ತಿನ್ನುತ್ತಿದ್ದರೆ ಅವರ ಪಕ್ಕದಲ್ಲಿಯೋ ಇಲ್ಲವೇ ಹಿಂದೆಯೂ ಆ ಜಾಗ ಹಿಡಿಯಲು ಮತ್ತೊಬ್ಬರು ನಿಂತು ಕೊಂಡಿರುತ್ತಾರೆ. ಕೆಲವೊಮ್ಮೆ ಗಂಟೆ ಗಟ್ಟಲೆ ಕಾಯಬೇಕಾದಂತಹ ಪರಿಸ್ಥಿತಿ ಇದೆ. ಇನ್ನು ಮಧ್ಯಾಹ್ನದ ಊಟಕ್ಕೆ ಟೋಕನ್ ತೆಗೆದುಕೊಂಡು ಸುಮಾರು ಅರ್ಧ ಮುಕ್ಕಾಲು ಗಂಟೆ ಕಾದು ಶುಭ ಸಮಾರಂಭಗಳಲ್ಲಿ ಸಾಲು ಸಾಲಾಗಿ ಕೂರಿಸಿ ಬಡಿಸುವಂತಹ ರುಚಿಕರವಾದ ಊಟವನ್ನು ಸವಿಯಲು ಕಾತುರರಾಗಿರುತ್ತಾರೆ ಎನ್ನುವುದು ಗಮನಾರ್ಹ. ಉಪಹಾರ ಗೃಹವನ್ನು ಆರಂಭಸಿದಾಗ ಪರಿಶುದ್ಧತೆಗಾಗಿ ಬೆಳ್ಳಿ ತಟ್ಟೆ, ಲೋಟ ಮತ್ತು ಚಮಚಗಳನ್ನು ಬಳಸುತ್ತಿದ್ದವರು ಈಗ ಸ್ಟೀಲ್ ಪಾತ್ರೆಗಳಿಗೆ ಬದಲಾದರೂ, ಇಂದಿಗೂ ಸಹಾ ಮಧ್ಯಾಹ್ನದ ಊಟದ ಸಮಯದಲ್ಲಿ ಬೆಳ್ಳಿ ಲೋಟಗಳನ್ನೇ ಉಳಿಸಿಕೊಂಡಿರುವುದು ಅವರ ಹೆಗ್ಗಳಿಕೆ. ಕೆಲವರು ಹೇಳುವ ಪ್ರಕಾರ ಈ ಹಿಂದೆ ಎಂಟಿಆರ್ ದೋಸೆಗಳು ಬೆಳ್ಳಂಬೆಳಿಗ್ಗೆಯೇ ವಿಮಾನದಲ್ಲಿ ಬೆಂಗಳೂರಿನಿಂದ ಬಾಂಬೆಗೆ ವಿಮಾನದಲ್ಲಿ ವಿಶೇಷ ಕಂಟೇನರ್ಗಳಲ್ಲಿ ಪಾರ್ಸಲ್ ಆಗುತ್ತಿದ್ದಂತೆ.
ಎಂಟಿಆರ್ ಅವರು ಕೇವಲ ಉಪಹಾರಗೃಹಗಳಿಗಷ್ಟೇ ಸೀಮಿತವಾಗದೇ ಆಹಾರ ಮಾರುಕಟ್ಟೆಯಲ್ಲಿ ಅನೇಕ ಆವಿಷ್ಕಾರಗಳಿಗೆ ಕಾರಣೀಭೂತರಾಗಿದ್ದಾರೆ 1970 ರ ದಶಕದಲ್ಲಿ ಭಾರತ ಪಾಕೀಸ್ಥಾನದ ಯುದ್ಧದ ಸಮಯದಲ್ಲಿ ದೇಶಾದ್ಯಂತ ಅಕ್ಕಿಯ ಸಮಸ್ಯೆಯಾದಾಗ, ಅನೇಕ ಹೋಟೆಲ್ಲುಗಳಲ್ಲಿ ಇಡ್ಲಿ ಮಾಡಲು ಅಕ್ಕಿಯೇ ಪ್ರಧಾನವಾಗಿದ್ದ ಕಾರಣ ಅಕ್ಕಿಯೇ ಸಿಗದೇ ಅನೇಕ ಹೋಟೆಲ್ಲುಗಳನ್ನು ಮುಚ್ಚ ಬೇಕದಂತಹ ಪರಿಸ್ಥಿತಿ ಎದುರಾದಾಗ, ಎಂಟಿಆರ್ ಹೋಟೆಲ್ಲಿನವರು ಅಕ್ಕಿನ ಬದಲು ರವೆಯನ್ನು ಬಳಸಿ ಅದ್ಘುತವಾದ ರವೇ ಇಡ್ಲಿಯನ್ನು ಆವಿಷ್ಕರಿಸಿ ವಿಶ್ವವಿಖ್ಯಾತರಾದರು. ಇಂದಿಗೂ ಸಹಾ ಎಲ್ಲಾ ಹೋಟೆಲ್ಲುಗಳಲ್ಲಿ ರವೇ ಇಡ್ಲಿ ಅತ್ಯಂತ ಮಹತ್ತರ ಪಾತ್ರವನ್ನು ವಹಿಸಿದೆ. MTR ಏಳು ಗಂಟೆಗಳಲ್ಲಿ 21,000 ಗ್ರಾಹಕರಿಗೆ ಸೇವೆ ಒದಗಿಸಿದ ವಿಶ್ವದ ಮೊದಲ ಫಾಸ್ಟ್-ಫುಡ್ ರೆಸ್ಟೋರೆಂಟ್ ಎಂಬ ಖ್ಯಾತಿಯನ್ನೂ ಹೊಂದಿದೆ.
1975 ರಲ್ಲಿ ನಮ್ಮ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಲ್ಪಟ್ಟು ಅದೇ ಸಮಯದಲ್ಲಿ ಆಹಾರ ನಿಯಂತ್ರಣ ಕಾಯಿದೆಯೂ ಸಹಾ ಮಾರ್ಪಾಟಾಗಿ, ಸರ್ಕಾರವೇ ಆಹಾರ ಪದಾರ್ಥಗಳ ಬೆಲೆಯನ್ನು ನಿರ್ಧರಿಸಿ, ಆಹಾರಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಬೇಕೆಂದು ಆದೇಶಿಸಿತು. ಈ ಕ್ರಮದಿಂದಾಗಿ MTR ತನ್ನ ರೆಸ್ಟೋರೆಂಟ್ ವ್ಯವಹಾರದಲ್ಲಿ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಕಷ್ಟಕರವಾಗಿ, ಹೋಟೆಲ್ ಉದ್ಯಮವನ್ನು ನಡೆಸುವುದು ಕಷ್ಟಕರ ಎನಿಸಿದಾಗ ಅನಿವಾರ್ಯವಾಗಿ ತಮ್ಮ ಹೋಟೆಲ್ಲನ್ನು ಮುಚ್ಚುವ ನಿರ್ಧಾರಕ್ಕೆ ಬಂದರು. ಹೀಗೆ ಹೋಟೆಲ್ ಮುಚ್ಚಲ್ಪಟ್ಟಾಗ, ಅವರಲ್ಲಿ ಕೆಲಸಮಾಡುತ್ತಿದ್ದ ಅನೇಕರು ಉದ್ಯೋಗವನ್ನು ಕಳೆದುಕೊಳ್ಳುವಂತಾದಾಗ, ಅವರೆಲ್ಲರಿಗೂ ಕೆಲಸ ಕೊಡುವ ಸಲುವಾಗಿಯೇ, ಎಂಟಿಆರ್ ಹೋಟೆಲ್ಲಿನ ಮಾಲಿಕರು ಹುಳಿಪುಡಿ, ಸಾರಿನಪುಡಿ ಚಟ್ನಿಪುಡಿ, ಪಲ್ಯದ ಪುಡಿಯಂತಹ ಸಿದ್ಧ ಪಡಿಸಿದ ಮಲಾಲೆ ಪುಡಿಗಳನ್ನು ತಯಾರಿಸಿ ಮಾರಾಟಮಾಡಲು ಆರಂಭಿಸಿ ಅದರಲ್ಲಿಯೂ ಸಹಾ ಬಲುಬೇಗನೆ ವಿಶ್ವವಿಖ್ಯಾತವಾದರು. ನಂತರ ಮುಂದೆ 1981 ರಲ್ಲಿ ದೇಶದ ಪರಿಸ್ಥಿತಿ ಸುಧಾರಿಸಿದಾಗ ಮತ್ತೆ ಅದೇ ಸ್ಥಳದಲ್ಲಿ ಹೋಟೆಲ್ಲನ್ನು ಆರಂಭಿಸಿದರೂ, MTR ಮಸಾಲೆಗಳು ಅದಾಗಲೇ ಪ್ರಸಿದ್ದಿಪಡೆದಿದ್ದ ಕಾರಣ, ಅದನ್ನೂ ಸಹಾ ಮುಂದಿವರೆಸಿಕೊಂಡು ಹೋಗಿ ಜನರ ಅನುಕೂಲಕ್ಕಾಗಿ ತ್ವರಿತ ಆಹಾರದ ವ್ಯವಹಾರದಲ್ಲಿ ಕೇವಲ ಭಾರತವಲ್ಲದೇ ಪ್ರಪಂಚಾದ್ಯಂತ ಅಗ್ರಗಣ್ಯರಾಗಿದ್ದು ಸಮಸ್ತ ಕನ್ನಡಿಗರು ಹೆಮ್ಮೆ ಪಡುವಂತಹ ವಿಷಯವಾಗಿದೆ.
ಹೀಗೆ ಸಿದ್ದಪಡಿಸಿದ ಆಹಾರಗಳಲ್ಲಿ ಯಶಸ್ಸನ್ನು ಪಡೆದ ಸಮಯದಲ್ಲೇ ಕುಟುಂಬದ ವ್ಯವಹಾರವನ್ನು ಕೈಗೆ ತೆಗೆದುಕೊಂಡ ಸದಾನಂದ ಮೈಯ್ಯ ಅವರು ತಮ್ಮ ಇಂಜೀನಿಯರಿಂಗ್ ವಿದ್ಯಾಭ್ಯಾಸದ ಅನುಭವವನ್ನು ಬಳಸಿಕೊಂಡು ಮುಂದೆ ಪಾಕಶಾಸ್ತ್ರದಲ್ಲಿ ಮತ್ತು ಅದನ್ನು ತಯಾರಿಸುವ ಯಂತ್ರೋಪಕರಣ ಮತ್ತು ಪ್ಯಾಕಿಂಗ್ ಗಳಲ್ಲಿ ಅನೇಕ ರೀತಿಯ ಈ ಆವಿಷ್ಕಾರಗಳಿಗೆ ಮುಂದಾಗಿ ಬಹಳಷ್ಟು ದಿನಗಳು ಇಟ್ಟರೂ ಆಹಾರಗಳು ಹಾಳಾಗದಂತಹ ದಿಢೀರ್ ಎಂದು ಸಿದ್ಧ ಪಡಿಸಬಹುದಾದಂತಹ ಸಿದ್ಧಪಡಿಸಿದ ತಿಂಡಿ ಪದಾರ್ಥಗಳು, ಬಗೆ ಬಗೆಯ ಸಾರಿನ ಪುಡಿ, ಹುಳಿ ಪುಡಿ ಚೆಟ್ನಿ ಪುಡಿಗಳಂತಹ ಮಸಾಲಾ ಪುಡಿಗಳನ್ನು ತಯಾರಿಸುವ ಮೂಲಕ ಎಂಟಿಆರ್ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದರು. ಅದೇ ರೀತಿಯಲ್ಲಿ ಗಡಿ ಕಾಯುವ ಯೋಧರಿಗೆ ಅತ್ಯಂತ ಪೌಷ್ಹಿಕವಾದ ಮತ್ತು ಎತ್ತರ ಪ್ರದೇಶಗಳಿಗೆ ಕೊಂಡೊಯ್ಯಲು ಸುಲಭವಾದ ಮತ್ತು ಅಂತಹ ಹವಾಗುಣಕ್ಕೆ ಹಾಳಗದಂತಹ ಸಿದ್ಧ ಆಹಾರಗಳನ್ನು ಸಹಾ ಭಾರತದ ಸೇನೆಯಿಂದ ಒಂದು ನಯಾ ಪೈಸೆಯನ್ನೂ ಸಹಾ ಪಡೆದುಕೊಳ್ಳದೇ ತಯಾರಿಸಿಕೊಟ್ಟು ದೇಶಾಭಿಮಾನವನ್ನು ಮೆರೆಸಿ ಎಲ್ಲರ ಮೆಚ್ಚುಗೆಗೆ ಎಂಟಿಆರ್ ಬಳಗ ಪಾತ್ರವಾಗಿದೆ.
ಸಾಮಾನ್ಯವಾಗಿ ಐಸ್ ಕ್ರೀಮ್ ಅನ್ನು ದೊಡ್ಡ ಫ್ರೀಜರ್ಗಳಲ್ಲಿ ಸಂಗ್ರಹಿಸಿ ಇಟ್ಟು ಅವುಗಳನ್ನು ಸ್ಕೂಪ್ ಗಳ ಲೆಕ್ಕದಲ್ಲಿ ಬಹಳ ದುಬಾರಿಯಾಗಿ ಮಾರಾಟ ಮಾಡುತ್ತಿದ್ದರಿಂದ ಜನಸಾಮಾನ್ಯರಿಗೆ ಅಂತಹ ಐಸ್ ಕ್ರೀಂಗಳನ್ನು ತಿನ್ನಲು ಆಸಾಧ್ಯವಾಗುತ್ತಿದ್ದದ್ದನ್ನು ಗಮನಿಸಿದ ಸದಾನಂದ ಮೈಯ್ಯಾ ಆವರು ಅತ್ಯಂತ ಮೃದುವಾದ ಯಾವುದೇ ಸ್ಕೂಪಿಂಗ್ ಅಗತ್ಯವಿಲ್ಲದೆ ತಿನ್ನಬಲ್ಲಂತಹ ಕೋನುಗಳಲ್ಲಿ ವಿತರಿಸುವಂತಹ ಯಂತ್ರವನ್ನು ಆವಿಷ್ಕರಿಸಿ ಅದನ್ನು ನಗರಾದ್ಯಂತ ಬಹುತೇಕ ಅಂಗಡಿಗಳ ಮುಂದೆ ಕೇವಲ 10/- ರೂಪಾಯಿಗಳಿಗೆ ಲಭ್ಯವಾಗುವಂತ ಸಾಘ್ಟೀ ಐಸ್ ಕ್ರೀಂ ಮಾರಾಟಮಾಡುವ ಮೂಲಕ ಜನಸಾಮಾನ್ಯರೂ ಸಹಾ, ಕೇವಲ 3-6% ಹಾಲಿನ ಕೊಬ್ಬಿನಿಂದ ತಯಾರಿಸಲಾದ ರುಚಿಕರ ಐಸ್ ಕ್ರೀಂ ಸವಿಯುವಂತಹ ಅವಕಾಶವನ್ನು ಮಾಡಿಕೊಟ್ಟ ಹೆಗ್ಗಳಿಕೆಯೂ ಸಹಾ ಎಂಟಿಆರ್ ಕಂಪನಿಗೇ ಸಲ್ಲುತ್ತದೆ.
2007 ರಲ್ಲಿ ನಾರ್ವೇಜಿಯನ್ ಕಂಪನಿಯಾದ ಓರ್ಕ್ಲಾಕ್ಕೆ ಎಂಟಿಆರ್ ಸಿದ್ಧ ಪಡಿಸಿದ ಆಹಾರದ ಉದ್ಯಮವನ್ನು ಮಾರಾಟ ಮಾಡಿ ಕೆಲವು ವರ್ಷಗಳ ಕಾಲ ಕೇವಲ ಎಂಟಿಆರ್ ಉಪಹಾರಗೃಹಗಳನ್ನು ನಡೆಸಿಕೊಂಡು ಹೋಗಿ ಮುಂದೆ ಕರಾರು ಮುಕ್ತಾಯವಾದಾಗ ಮತ್ತೇ ಮಯ್ಯಾಸ್ ಎಂಬ ಹೆಸರಿನಲ್ಲಿ ಅನೇಕ ರೆಸ್ಟೋರೆಂಟ್ ಮತ್ತು ಸಿದ್ಧ ಪಡಿಸಿದ ಆಹಾರಗಳನ್ನು ತಯಾರಿಸುತ್ತಾ ಇಂದಿಗೂ ಜನ ಮನ್ನಣೆಗಳಿಸಿದೆ. ಸುಮಾರು 99 ವರ್ಷಗಳ ಹಿಂದೆ ಬೆಂಗಳೂರಿನ ಲಾಲ್‌ಬಾಗ್ ರಸ್ತೆಯ ಮಾವಳ್ಳಿಯಲ್ಲಿ ಸಣ್ಣದಾಗಿ ಆರಂಭವಾದ ಮಾವಳ್ಳಿ ಟಿಫನ್ ರೂಂ ಇಂದು ಬೆಂಗಳೂರಿನಲ್ಲೇ ಹತ್ತಕ್ಕೂ ಹೆಚ್ಚಿನ ಶಾಖೆಗಳನ್ನು ಹೊಂದಿರುವುದರ ಜೊತೆಗೆ ಉಡುಪಿ, ಮೈಸೂರು, ಸಿಂಗಾಪುರ್, ಕೌಲಾಲಂಪುರ್, ಲಂಡನ್ ಮತ್ತು ದುಬೈನಲ್ಲಿಯೂ ಸಹಾ ಶಾಖೆಗಳನ್ನು ಹೊಂದಿದೆ. ಯಜ್ಞನಾರಾಯಣ ಮೈಯ್ಯಾ ಅವರಿಂದ ಆರಂಭವಾಗಿ ಪ್ರಸ್ತುತ ಮೂರನೇ ತಲೆಮಾರಿನ ಅವರ ಮೊಮ್ಮಕ್ಕಳಾದ ಹೇಮಮಾಲಿನಿ ಮೈಯ್ಯಾ, ವಿಕ್ರಮ್ ಮೈಯ್ಯಾ ಮತ್ತು ಅರವಿಂದ್ ಮೈಯ್ಯಾ ಅವರು ವ್ಯವಹಾರವನ್ನು ನಡೆಸಿಕೊಂಡು ಹೋಗುತ್ತಿದ್ದರೆ ಸದಾನಂದ ಮಯ್ಯಾ ಅವರು ಸಿದ್ಧ ಪಡಿಸಿದ ಆಹಾರದ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ನೋಡಿಕೊಳ್ಳುತ್ತಿದ್ದಾರೆ.
ಎಂಟಿಆರ್ ಬಗ್ಗೆ ಇಷ್ಟೆಲ್ಲಾ ಮಾಹಿತಿಯನ್ನು ತಿಳಿದ ಮೇಲೆ ಇನೇಕ ತಡಾ ಸ್ವಲ್ಪ ಸಮಯವನ್ನು ಮಾಡಿಕೊಂಡು ನಿಮ್ಮ ಮನೆಯ ಹತ್ತಿರದಲ್ಲೇ ಇರುವ ಎಂಟಿಆರ್ ಇಲ್ಲವೇ ಮೈಯ್ಯಾ ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಿ ಅಲ್ಲಿಯ ಶುಚಿ ರುಚಿಯಾದ ಆಹಾರವನ್ನು ಸವಿಯುವುದಲ್ಲದೇ ಪರ ಊರುಗಳಿಗೆ ಹೋಗುವಾಗ ಅವರ ರೆಡಿ ಟು ಈಟ್ ಪದಾರ್ಥಗಳನ್ನು ತೆಗೆದುಕೊಂಡು ಹೋಗಿ ಅದನ್ನು ಸಹಾ ಅನುಭವಿಸುವುದಲ್ಲದೇ, ಅವರ ಮಸಾಲೆ ಪದಾರ್ಥಗಳನ್ನು ಬಳಸಿ ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರಿ?
ಸೃಷ್ಟಿಕರ್ತ ಉಮಾಸುತ