ಅನ್ನ ಭಾಗ್ಯ

ab3ನಮ್ಮ ದೇಶದಲ್ಲಿರುವ ಯಾವ ಪ್ರಜೆಯೂ ಸಹಾ ಹಸಿವಿನಿಂದ ಬಳಲಬಾರದು. ಎಲ್ಲರಿಗೂ ಆಹಾರ ಸುಲಭ ಬೆಲೆಯಲ್ಲಿ ಸಿಗಬೇಕು ಎಂಬ ಆಶಯದಿಂದ ಆಹಾರ ಭದ್ರತೆ ಕಾಯ್ದೆಯ ಅಡಿಯಲ್ಲಿ ಪ್ರತಿ ರಾಜ್ಯಕ್ಕೆ ಎಷ್ಟು ಲಕ್ಷ ಟನ್‌ ಆಹಾರ ಧಾನ್ಯಗಳನ್ನು ನೀಡಬೇಕು ಎಂಬುದನ್ನು ನಿಗದಿಪಡಿಸಲಾಗಿದೆ. ಎಲ್ಲಾ ರಾಜ್ಯಕ್ಕೆ ವಿತರಣೆ ಮಾಡಲು ಅಗತ್ಯವಿರುವಷ್ಟು ಆಹಾರ ಧಾನ್ಯವನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರುಗಳಿಂದ ನೇರವಾಗಿ ಖರೀಧಿಸಿ ತನ್ನ ಗೋದಾಮುಗಳಲ್ಲಿ ಸಂಗ್ರಹಿಸಿ ಅದು ಎಲ್ಲಾ ಕಾಲಕ್ಕೂ ಲಭ್ಯವಿರುವಂತೆ ನೋಡಿಕೊಳ್ಳುವ ಹೊಣೆಯು ಸಹಾ ಕೇಂದ್ರ ಸರ್ಕಾರದ್ದಾಗಿದ್ದು, ಅ ರೀತಿಯಾಗಿ ಸಂಗ್ರಹಿಸಿದ ಆಹಾರ ಧಾನ್ಯಗಳನ್ನು ದೇಶದ ಎಲ್ಲಾ ರಾಜ್ಯಗಳಿಗೂ ಉಚಿತವೋ ಎನಿಸುವಷ್ಟರ ಮಟ್ಟಿಗಿನ ಅತ್ಯಂತ ಕಡಿಮೆ ದರದಲ್ಲಿ ಸಮರ್ಪಕವಾಗಿ ಹಂಚುತ್ತದೆ. ಹೀಗೆ ಕೇಂದ್ರದಿಂದ ಪಡೆದ ಆಹಾರ ಧಾನ್ಯಗಳನ್ನು ರಾಜ್ಯಸರ್ಕಾರಗಳು ಪಡಿತರದ ವ್ಯವಸ್ಥೆಯ ಮಾರುಕಟ್ಟೆಗಿಂತಲೂ ಕಡಿಮೆ ಬೆಲೆಯಲ್ಲಿ ಜನರಿಗೆ ಕೈಗೆಟುಗುವಷ್ಟು ದರದಲ್ಲಿ ವಿತರಿಸುತ್ತದೆ.

ab2ಇತ್ತೀಚಿನ ದಿನಗಳಲ್ಲಿ ದೇಶದ ಹಲವಾರು ರಾಜ್ಯ ಸರ್ಕಾರಗಳು ಜನರನ್ನು ಓಲೈಸಿಕೊಳ್ಳುವ ಸಲುವಾಗಿ ಈ ಪಡಿತರ ಧಾನ್ಯಗಳನ್ನು ಉಚಿತವಾಗಿ ಕೊಡುವಂತಹ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದುವರೆವಿಗೂ ನಮ್ಮ ರಾಜ್ಯದಲ್ಲಿ ಕೇಂದ್ರ ಸರ್ಕಾರವು ಪ್ರತೀ ಪಡಿತರದಾರರಿಗೆ ತಿಂಗಳಿಗೆ 5 ಕೆಜಿಯಂತೆ ಕೊಡುತ್ತಿದ್ದ ಅಕ್ಕಿನ್ನು ಕೊಡುತ್ತಿದ್ದರೆ, ಕಾಂಗ್ರೇಸ್ ಪಕ್ಷವು, ತನ್ನ ಪ್ರಣಾಳಿಕೆಯಲ್ಲಿ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ತಲಾ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ ಎಂಬ ವಾಗ್ದಾನವನ್ನು ನಂಬಿ ಜನರು ಅವರಿಗೆ ಮತವನ್ನು ನೀಡೀ ಬಾರೀ ಬಹುಮತದೊಂದಿಗೆ ಆಯ್ಕೆ ಮಾಡಿದ್ದು ಈಗ ಇತಿಹಾಸ.

ಚುನಾವಣಾ ಪ್ರಚಾರದ ಸಮಯದಲ್ಲಿ ಸಿದ್ದರಾಮಯ್ಯನವರು, ಪ್ರತಿಯೊಬ್ಬರಿಗೂ ಅತ್ತು ಕೇಜಿ, ಅತ್ತು ಕೇಜಿ ಅಕ್ಕಿ ಬೇಕಾ ಬೇಡ್ವಾ? ನಮ್ಮ ಮೇಲೆ ನಂಬಿಕೆ ಇದೇ ತಾನೇ? ಹಾಗಾದ್ರೇ ನಮಗೆ ಓಟು ಹಾಕಿ ಗೆಲ್ಲಿಸಿದ ಕೂಡಲೇ ತಲಾ ಅತ್ತು ಕೇಜಿ ಅಕ್ಕಿ ಕೊಡ್ತೀವಿ ಎಂದು ಹೇಳಿದವರು, ಈಗ ಸದ್ದಿಲ್ಲದೇ , ಕೇಂದ್ರ ಸರ್ಕಾರವರು ಅಕ್ಕಿ ಕೊಡಲು ಹಿಂದೇಟು ಹಾಕುತ್ತಿರುವ ಕಾರಣ ನಾವು ಕೊಡಲು ಸಾಧ್ಯವಿಲ್ಲಾ ಎಂಬ ಸಬೂಬು ಹೇಳುತ್ತಾ, ಬಡವರ ಹೊಟ್ಟೆಯನ್ನು ಒಡೆಯುತ್ತಿರುವ ಈ ಕೇಂದ್ರದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯ ಬೇಕು ಎಂದು ಅಪಪ್ರಚಾರ ಮಾಡಲು ಆರಂಭಿಸಿರುವುದು ನಿಜಕ್ಕೂ ಹಾಸ್ಯಾಸ್ಪದವೇ ಸರಿ.

ab6ನಿಜ ಹೇಳಬೇಕೆಂದರೆ, ಭಾರತೀಯ ಆಹಾರ ನಿಗಮ (FCI) ಆಹಾರ ಭದ್ರತೆ ಕಾಯ್ದೆಯಲ್ಲಿ ನಿಗಧಿತ ಪಡಿಸಿದಂತೆ ಕೇಂದ್ರಾಡಳಿತ ಪ್ರದೇಶಗಳೂ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಿಗೆ ವಿತರಿಸಲು ಸುಮಾರು 550 ಲಕ್ಷ ಟನ್‌ಗಳಷ್ಟು ಆಹಾರ ಧಾನ್ಯಗಳ ಅವಶ್ಯಕತೆ ಇದೆ. ಇದರಲ್ಲಿ ಕೇವಲ ಅಕ್ಕಿಯಲ್ಲದೇ, ಗೋಧಿ ಮತ್ತು ಬೇಳೆಕಾಳುಗಳೂ ಸೇರಿದ್ದೂ, ಸದ್ಯಕ್ಕೆ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾದ ಭಾರತೀಯ ಆಹಾರ ನಿಗಮದ ವಿವಿಧ ಗೋದಾಮುಗಳಲ್ಲಿ ಈಗ 731 ಲಕ್ಷ ಟನ್‌ಗಳಿಗೂ ಹೆಚ್ಚು ಆಹಾರ ಧಾನ್ಯದ ಸಂಗ್ರಹವಿದೆ. ಈ ರೀತಿಯಾಗಿ ಇರುವ 7 ಲಕ್ಷ ಟನ್ ದಾಸ್ತಾನಿಗೆ ಬಫರ್ ಸ್ಟಾಕ್ ಎನ್ನಲಾಗುತ್ತದೆ. ದೇಶದಲ್ಲಿ ಎಲ್ಲಿಯಾದರೂ ನೈಸರ್ಗಿಕ ವಿಪತ್ತು ಸಂಭವಿಸಿದಾಗ ಇಲ್ಲವೇ, ಅತೀವೃಷ್ಟಿ ಅನವೃಷ್ಟಿಯಿಂದ ಆಹಾರ ಧಾನ್ಯಗಳ ಉತ್ಪಾದನೆಯು ಹೆಚ್ಚು ಕಡಿಮೆಯಾಗಿ ಕೊರತೆಯಾದ ಸಂದರ್ಭದಲ್ಲಿ ಕೆಲವರು ಪರಿಸ್ಥಿತಿಯ ದುರ್ಲಾಭ ಪಡೆದು ಮಾರುಕಟ್ಟೆಯಲ್ಲಿ ಆ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸುವ ಸಂಧರ್ಭ ಎದುರಾದಾಗ, ಬೆಲೆಯ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಬಫರ್ ಸ್ಟಾಕ್ ನಿಂದ ಆಹಾರ ಧಾನ್ಯಗಳನ್ನು ಬಿಡುಗಡೆ ಗೊಳಿಸಲಾಗುತ್ತದೆ.

ಈ ಹಿಂದೆ ಹೀಗೆ ಸಂಗ್ರಹಿತವಾಗಿರುತ್ತಿದ್ದ ಕೇಂದ್ರದ ಉಗ್ರಾಣದ 7 ಲಕ್ಷ ಟನ್ ಆಹಾರಧಾನ್ಯಗಳು ಬಳಕೆಯಾಗದೇ ಕೊಳೆತು ಹೋಗುವುದೋ ಇಲ್ಲವೇ ಹೆಗ್ಗಣಗಳ ಪಾಲಾಗುತ್ತಿದ್ದನ್ನು ಗಮನಿಸಿದ ಸದ್ಯದ ಕೇಂದ್ರ ಸರ್ಕಾರ ಅಗತ್ಯಕ್ಕಿಂತಲೂ ಹೆಚ್ಚಿಗೆ ಸಂಗ್ರಹವಾದ ಆಹಾರ ಧಾನ್ಯಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಪಾರದರ್ಶಕವಾಗಿ ಇ-ಆಕ್ಷನ್ ಮೂಲಕ ಮಾರುವಂತಹ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಈ ಮೂಲಕ ಮಾರುಕಟ್ಟೆಯಲ್ಲಿನ ದರ ಏರಿಕೆಯನ್ನು ಹತೋಟಿಗೆ ತರುವ ಪ್ರಯತ್ನವಾಗಿದೆ.

ರಾಜ್ಯದ ಪ್ರಸಕ್ತ ಆಡಳಿತ ಪಕ್ಷ ತಾನು ಅಧಿಕಾರಕ್ಕೆ ಬರುವ ಸಲುವಾಗಿ ಘೋಷಿಸಿದ ಉಚಿತ ಯೋಜನೆಗಳನ್ನು ಜಾರಿಗೆ ತರುವ ಸಲುವಾಗಿ ಆರಂಭದಲ್ಲಿ ಹೆಚ್ಚಿವರಿ 5 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುವಂತೆ ಕೇಂದ್ರ ಸರ್ಕಾರವನ್ನು ಕೋರಿದಾಗ, ಕೇಂದ್ರ ಸರ್ಕಾರ ತನ್ನ ಉಗ್ರಾಣದಲ್ಲಿರುವ ಹೆಚ್ಚುವರಿ ಆಹಾರವನ್ನು ಈ ರೀತಿಯಾಗಿ ಉಚಿತವಾಗಿ ಕೊಡಲಾಗುವುದಿಲ್ಲ. ಅದರ ಬದಲಾಗಿ ಇಂತಹ ನಿಗಧಿತ ದಿನದಂದು ನಡೆಯುವ ಇ-ಆಕ್ಷನ್ ಪ್ರಕ್ರಿಯೆಲ್ಲಿ ಭಾಗವಹಿಸಿ ಅಗತ್ಯವಿರುವಷ್ಟು ಅಕ್ಕಿಯನ್ನು ಖರೀರಿಧಿಸಿ ಅದಕ್ಕೆ ನಿಗಧಿ ಪಡಿಸಿದ ಸಂಪೂರ್ಣ ಹಣವನ್ನು ಕೊಟ್ಟು ತೆಗೆದುಕೊಂಡು ಹೋಗಬಹುದು ಎಂಬ ಸೂಚನೆಯನ್ನು ನೀಡಿತು. ಹೀಗೆ ಹೆಚ್ಚುವರಿ ಆಹಾರ ಧಾನ್ಯಗಳನ್ನು ರಾಜ್ಯ ಸರ್ಕಾರಗಳಿಗೆ ಮುಕ್ತ ಮಾರುಕಟ್ಟೆ ಬೆಲೆಯಲ್ಲಿ ಮಾರಾಟ ಮಾಡುವ, ಖಾಸಗಿ ಕಂಪನಿಗಳಿಗೂ ಮಾರಾಟ ಮಾಡುವ ಅಧಿಕಾರವೂ ಕೇಂದ್ರ ಸರ್ಕಾರಕ್ಕೆ ಇದ್ದು ಈ ವ್ಯವಸ್ಥೆಯನ್ನು ‘ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ– ಒಎಂಎಸ್‌ಎಸ್‌’ ಎಂದು ಕರೆಯಲಾಗುತ್ತದೆ.

ಹೀಗೆ ಕೇಂದ್ರ ಸರ್ಕಾರ ತನಗೆ ಉಚಿತವಾಗಿ ಹೆಚ್ಚುವರಿ ಅಕ್ಕಿಯನ್ನು ನೀಡುವುದಿಲ್ಲ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಇ-ಆಕ್ಷನ್ ನಲ್ಲಿ ಪಾಲ್ಗೊಂಡು ಅಕ್ಕಿ ಖರೀದಿಸಬಹುದು. ಆದರೆ ಇ-ಆಕ್ಷನ್ ನಲ್ಲಿ ಅಕ್ಕಿ ಖರೀಧಿಸಿ, ನಿರ್ದಿಷ್ಟವಾದ ದಿನಾಂಕದೊಳಗೆ ಸಂಪೂರ್ಣ ಹಣವನ್ನು ಪಾವತಿಸಸಿದ ನಂತರವೇ ಅಕ್ಕಿ ಸರಬರಾಜಾಗುತ್ತೆ. ಅದರ ಸಾಗಣಿಕೆಯ ವ್ಯಚ್ಚವನ್ನೂ ರಾಜ್ಯಸರ್ಕಾರವೇ ಭರಿಸಬೇಕಾಗಿದ್ದು, ಇಲ್ಲಿ ಉದ್ರಿ ಸಾಲದ ಪ್ರಶ್ನೆಯೇ ಇಲ್ಲ್ವವಾಗಿ ಸಂಪೂರ್ಣ ಕ್ಯಾಶ್ ಅಂಡ್ ಕ್ಯಾರಿ ವ್ಯವಸ್ಥೆ ಇದೆ ಎಂಬುದನ್ನು ಅರಿತ ರಾಜ್ಯದ ಕಾಂಗ್ರೇಸ್ ಸರ್ಕಾರ ಕೇಂದ್ರ ಸರ್ಕಾರದ ಉಗ್ರಾಣದಲ್ಲಿರುವ 7 ಲಕ್ಷ ಟನ್ ಆಹಾರಧಾನ್ಯ ಕೊಳೆಯುತ್ತಿದ್ದರೂ ನಮಗೆ ಕೊಡುತ್ತಿಲ್ಲಾ. ದ್ವೇಷದ ರಾಜಕಾರಣದಿಂದಾಗಿ ಬಡವರವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಕೇಂದ್ರದ ಮೋದಿ ಸರ್ಕಾರ ಎಂಬ ಅಪಪ್ರಚಾರದಲ್ಲಿ ತೊಡಗಿರುವುದು ನಿಜಕ್ಕೂ ಖಂಡನೀಯವಾಗಿದೆ.

ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಕರ್ನಾಟಕಕ್ಕೆ ವಾರ್ಷಿಕ 25.56 ಲಕ್ಷ ಟನ್‌ಗಳಷ್ಟು ಆಹಾರ ಧಾನ್ಯವನ್ನು ನಿಗದಿ ಮಾಡಲಾಗಿದೆ. ಅಷ್ಟು ಪ್ರಮಾಣದ ಆಹಾರ ಧಾನ್ಯವನ್ನು ಕೇಂದ್ರ ಸರ್ಕಾರವು ಒದಗಿಸಲು ಸಿದ್ಧವಿದೆ. ಆದರೆ, ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಅನ್ನಭಾಗ್ಯ ಯೋಜನೆಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 13,819.5 ಟನ್‌ಗಳಷ್ಟು ಅಕ್ಕಿ ಬೇಕಾಗಿದ್ದು, ಒಂದು ವರ್ಷಕ್ಕೆ ಹೆಚ್ಚುವರಿಯಾಗಿ 1.66 ಲಕ್ಷ ಟನ್‌ಗಳಷ್ಟು ಅಕ್ಕಿ ಬೇಕಾಗುತ್ತದೆ. ಆದರೆ ಈ ರೀತಿ ಏಕಾಏಕಾಕಿ ಒಂದೇ ರಾಜ್ಯಕ್ಕೆ ಅಷ್ಟೋಂದು ಅಕ್ಕಿಯನ್ನು ಕೊಡಲು ಸಾಧ್ಯವಿಲ್ಲದ ಕಾರಣ, ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಕೇಂದ್ರದ ಉಗ್ರಾಣದಲ್ಲಿರುವ ಹೆಚ್ಚಿವರಿ ಅಕ್ಕಿಯಿಂದ ರಾಜ್ಯಗಳಿಗೆ ಅವಶ್ಯಕವಿರುವಷ್ಟು ಅಕ್ಕಿಯನ್ನು ಖರೀಧಿಸಲು ಕೇಂದ್ರ ಸರ್ಕಾರದಿಂದ ಅಧಿಸೂಚನೆಯನ್ನು ಹೊರಡಿಸಿದ್ದು, ಇದು ಎಲ್ಲಾ ರಾಜ್ಯ ಸರ್ಕಾರಗಳಿಗೂ ಅನ್ವಯಿಸುವಾಗ, ರಾಜ್ಯದ ಕಾಂಗ್ರೇಸ್ ಸರ್ಕಾರ ಹೇಳುತ್ತಿರುವ ದ್ವೇಷ ರಾಜಕಾರಣ ಎನ್ನುವುದು ಎಷ್ಟು ಸುಳ್ಳು ಎಂಬುದು ಸ್ಪಷ್ಟವಾಗುತ್ತಿದೆ.

ಇನ್ನು ರಾಜಕೀಯವನ್ನೆಲ್ಲವನ್ನೂ ಬದಿಗಿಟ್ಟು ನೋಡಿದರೆ, ಒಂದು ಕೇಜಿ ಅಕ್ಕಿಯಿಂದ ಅನ್ನ ಮಾಡಿದಲ್ಲಿ ಸರಿ ಸುಮಾರು 8-10 ಜನರು ಹೊಟ್ಟೆ ತುಂಬಾ ಊಟ ಮಾಡಬಹುದಾಗಿದೆ. ಇದೇ ಲೆಖ್ಖದಲ್ಲಿ ನೋಡಿದರೆ, ಸುಮಾರು 6 ಜನರು ಇರುವ ಮನೆಗೆ ತಿಂಗಳಿಗೆ 30-35 ಕೆಜೆ ಅಕ್ಕಿ ಸಾಕಾಗುತ್ತದೆ. ಸದ್ಯದ ರಾಜ್ಯಸರ್ಕಾರದ ಆಶ್ವಾಸನೆಯಂತೆ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ 10 ಕೆಜಿಯಂತೆ 6 ಸದಸ್ಯರ ಕುಟುಂಬಕ್ಕೆ 60 ಕೆಜಿ ಅಕ್ಕಿ ದೊರೆತರೆ ಪ್ರತೀ ತಿಂಗಳೂ ಉಳಿಯುವ 20-25 ಕೆಜಿ ಅಕ್ಕಿಯನ್ನು ಏನು ಮಾಡುತ್ತಾರೆ? ಎಂಬುದನ್ನೂ ಸಹಾ ರಾಜ್ಯಸರ್ಕಾರ ಯೋಚಿಸಬೇಕಾಗುತ್ತದೆ.

ab7ಸದ್ಯಕ್ಕೆ ಕೊಡುತ್ತಿರುವ 5 ಕೆಜಿ ಅಕ್ಕಿಯೇ ತಿನ್ನಲು ಯೋಗ್ಯವಲ್ಲದ್ದಾಗಿದೆ ಎಂದು ಸುಮಾರು ಜನರು ಆಕ್ಷೇಪಿಸಿ ಅದನ್ನು ದೋಸೆ, ಇಡ್ಲಿ ಮಾಡಲು ಬಳಸಿಕೊಂಡು ಹೆಚ್ಚಿನ ಅಕ್ಕಿಯನ್ನು ಕೆಜಿಗೆ 15-20 ರೂಪಾಯಿಗಳಿಗೆ ಮಾರುತ್ತಿರುವುದು ಈಗ ಗುಟ್ಟಾಗಿ ಏನೂ ಉಳಿದಿಲ್ಲ.  ಇನ್ನೂ ಅನೇಕರು ಈ ತಿನ್ನಲಾಗದ ಮುಗ್ಗಲು ಅಕ್ಕಿಯನ್ನು ಕೊಳ್ಳದೇ ಇರುವಾಗ ಸ್ಥಳೀಯ ಪಡಿತರ ಅಂಗಡಿಗಳ ಮಾಲಿಕರು ಲೆಖ್ಖದಲ್ಲಿ ಎಲ್ಲರಿಗೂ ಹಂಚಿದ್ದೇವೆ ಎಂದು ಸುಳ್ಳು ಲೆಖ್ಖ ತೋರಿಸಿ ಅವೆಲ್ಲವನ್ನೂ ಹೊಟೇಲ್ ಮಾಲಿಕರಿಗೆ ಮಾರಾಟ ಮಾರುತ್ತಿರುವ ಸಂಗತಿಯೂ ಸಹಾ ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ

ab5ಈ ವಿಷಯವೆಲ್ಲವನ್ನೂ ಅರಿತಿರುವ ಸರ್ಕಾರ, ಮತ್ತೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ಕೊಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ಎಂದು ಜನರು ಪ್ರಶ್ನಿಸುವಂತಾಗಿದೆ. 200 ಯೂನಿಟ್ ಉಚಿತ ವಿದ್ಯುತ್ ಎಂದು ಘೋಷಣೆ ಮಾಡಿ ನಂತರ ಅದನ್ನು ಕೊಡಲು ಸಾಧ್ಯವಿಲ್ಲ ಎಂದು ತಿಳಿದ ಸರ್ಕಾರ, ಉಚಿತ ವಿದ್ಯುತ್ ಪೋಲಾಗದಂತೆ ಹಂಚಿಕೆಯ ಕ್ರಮ ಎಂದು ವಾರ್ಷಿಕ ಉಪಯೋಗದ ಸರಾಸರಿಯ ಆಧಾರದ ಮೇಲೆ ಉಚಿತ ಭಾಗ್ಯಜ್ಯೋತಿ ಯೋಜನೆಯನ್ನು ತರಲು ಮುಂದಾಗಿರುವಾಗ, ಅದೇ ರೀತಿಯಲ್ಲಿ ತುಲನಾತ್ಮಕವಾಗಿ ಯೋಚಿಸಿ ರಚನಾತ್ಮಕವಾಗಿ ಕುಟುಂಬಕ್ಕೆ ಎಷ್ಟು ಅಗತ್ಯವಿದೆಯೋ ಅಷ್ತು ಮಾತ್ರ ಅಕ್ಕಿಯನ್ನು ಅನ್ನಭಾಗ್ಯದ ಮೂಲಕ ಕೊಡುವಂತಾದರೆ, ಅಕ್ಕಿಯು ಪೋಲಾಗದಂತೆ ತಡೆಗಟ್ಟ ಬಹುದಲ್ಲದೇ, ರಾಜ್ಯ ಸರ್ಕಾರಕ್ಕೂ ಖರ್ಚು ಕಡಿಮೆಯಾಗುತ್ತದೆ.

ಇನ್ನು ರಾಜ್ಯದ ಎಲ್ಲಾ ಜನರೂ ಸಹಾ ಪ್ರತಿ ದಿನವೂ ಅಕ್ಕಿಯನ್ನು ತಿನ್ನುವುದಿಲ್ಲ. ಹಳೇ ಮೈಸೂರಿನ ಭಾಗದಲ್ಲಿ ಅಕ್ಕಿಗಿಂತಲೂ ರಾಗಿಯ ಬಳಕೆ ಹೆಚ್ಚಾಗಿದ್ದರೆ, ಉತ್ತರದ ಕರ್ನಾಟಕದ ಭಾಗದಲ್ಲಿ ಜೋಳ ಮತ್ತು ಗೋಧಿಯ ಬಳಕೆ ಇದೆ. ಇನ್ನು ದಕ್ಷಿಣ ಕನ್ನಡದಲ್ಲಿ ಕುಚಲಕ್ಕಿಯ ಬಳಕೆಯಿದೆ. ಹಾಗಾಗಿ ಎಲ್ಲಾ ಕಡೆಯಲ್ಲಿಯೂ ಏಕ ಪ್ರಕಾರವಾಗಿ ಒಂದೇ ಅಕ್ಕಿಯನ್ನು ಹಂಚದೇ ಆಯಾಯಾ ಪ್ರಾಂತ್ಯಗಳ ಬಳಕೆಯ ಅನುಗುಣವಾಗಿ ಅಕ್ಕಿ, ರಾಗಿ, ಜೋಳ, ಗೋಧಿ, ಕುಚಲಕ್ಕಿಯನ್ನು ಕೊಡುವುದು ಸೂಕ್ತವಾಗಿದೆ.

ab8ಜಟ್ಟಿ ಕೆಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ, ಕೇಂದ್ರ ಸರ್ಕಾರ ಕೊಡದೇ ಹೋದರೂ, ತಮ್ಮ ಅನ್ನಭಾಗ್ಯವನ್ನು ಜಾರಿಗೆ ತರುವ ಸಲುವಾಗಿ ಹೆಚ್ಚುವರಿ ಅಕ್ಕಿಯನ್ನು ಛತ್ತೀಸ್‌ಗಢ, ತಮಿಳುನಾಡು ಮತ್ತು ತೆಲಂಗಾಣದಂತಹ ರಾಜ್ಯಗಳೊಂದಿಗೆ ಸಂಪರ್ಕ ಸಾಧಿಸಿ ಅವರಿಂದ ಮಾರುಕಟ್ಟೆ ಬೆಲೆಯಲ್ಲಿ ಖರೀಧಿಸಿ ಕೊಡುವುದಾಗಿ ಸಿದ್ದರಾಮಯ್ಯವರು ಹುಂಬತನದಿಂದ ಮೆರೆಯುತ್ತಿದ್ದಾರೆ.

ಆದರೆ FCI ನಲ್ಲಿ ಇರುವ ದವಸ ಧ್ಯಾನ್ಯಗಳು ಕೇವಲ ಕರ್ನಾಟಕಕ್ಕೆ ಮಾತ್ರವೇ ಸೀಮಿತವಾಗಿರದೇ ದೇಶದ ಎಲ್ಲಾ ರಾಜ್ಯಗಳಿಗೂ ಅದರಲ್ಲಿ ಪಾಲಿದೆ ಎನ್ನುವುದನ್ನು ಸಿದ್ದರಾಮಯ್ಯನವರು ಅರಿಯಬೇಕಾಗಿದೆ. ಈ ಬಾರಿಯ ಮುಂಗಾರು ಸಹಾ ತಡವಾಗಿ ಆರಂಭವಾಗುತ್ತಿದ್ದು, ಈಗ ಇರುವ Buffer stock ನ್ನು ನಿಭಾಯಿಸದೇ, ಸಿದ್ದರಾಮಯ್ಯನವರ ತಾಳಕ್ಕೆ ಕುಣಿದು, ಹೆಚ್ಚಿವರಿ ಅಕ್ಕಿಯನ್ನು ಕೊಟ್ಟು ಕೇಂದ್ರದ ಬಳಿ ಹೆಚ್ಚಿನ ದಾಸ್ತಾನು ಇಲ್ಲವೆಂದು ತಿಳಿದರೆ ಮುಕ್ತ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು, ಆಮದು ರಾಷ್ಟ್ರಗಳು ಪರಿಸ್ಥಿತಿಯ ದುರ್ಲಾಭ ಪಡೆದಾಗ, ಇದೇ ಸಿದ್ದರಾಮಯ್ಯ ಮತ್ತು ಕಾಂಗ್ರೇಸ್ ಪಕ್ಷ ಅಗತ್ಯವಿರುವ ದಾಸ್ತಾನನ್ನು ನಿಭಾಯಿಸಲೂ ಅಸಮರ್ಪಕ ಸರ್ಕಾರ ಎಂದು ಕೇಂದ್ರವನ್ನೇ ದೂರುವುದು ಸತ್ಯದ ಸಂಗತಿಯಾಗಿದೆ.

ಈಗಾಗಲೇ ತಿಳಿಸಿದಂತೆ ಒಂದು ಕುಟುಂಬಕ್ಕೆ ಮಾಸಿಕ ಎಷ್ಟು ಅಕ್ಕಿಯ ಅಗತ್ಯವಿದೆ ಎಂಬುದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸದೆ, ಕೇವಲ ಓಟಿಗಾಗಿ ಜನಪ್ರಿಯ ಘೋಷಣೆಗಳನ್ನು ಮಾಡುವವರಿಗೆ ಇದರ ಸಾಧಕ ಭಾಧಕಗಳು ತಿಳಿದಿರಬೇಕಿತ್ತು ಅಲ್ಲವೇ? ನಮ್ಮ ರಾಜ್ಯದಲ್ಲಿ ಈ ಬಾರಿ ಮಳೆಯಾಗಿಲ್ಲ ಹಾಗಾಗಿ ನಿಗಧಿಯಂತೆ ಕಾವೇರಿ ನೀರನ್ನು ತಮಿಳು ನಾಡಿಗೆ ಬಿಡಲಾಗದು ಎಂಬುದನ್ನು ತಿಳಿಸಿರುವ ಇದೇ ರಾಜ್ಯ ಸರ್ಕಾರಕ್ಕೇ ಅದೇ ನಿಯಮ ಕೇಂದ್ರಕ್ಕೂ ಅನ್ವಯವಾಗುತ್ತದೆ ಎಂಬುದರ ಅರಿವಿರ ಬೇಕಲ್ಬೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

4 thoughts on “ಅನ್ನ ಭಾಗ್ಯ

  1. ಬರೀ ಅತ್ತು ಕೆ ಜಿ ಅಲ್ಲ, ಡೀಜಲ್ಲೂ, ಡಿಸ್ಟಿಕ್ಕು ಮುಂತಾದವೂ ಇವೆ. 😂😂😂

    Liked by 1 person

Leave a reply to Prashanth+kumar Cancel reply