ಹೃದಯವಂತ ಶಾಸಕ ಗುರುರಾಜ್ ಗಂಟಿಹೊಳೆ

WhatsApp Image 2023-07-14 at 08.34.30 (1)ಕನ್ನಡದ ಸುಪ್ರಸಿದ್ದ ಗಾಳೀಮಾತು ಚಲನ ಚಿತ್ರದಲ್ಲಿ ಚಿ. ಉದಯ್ ಶಂಕರ್ ಅವರು ರಚಿಸಿರುವ ಎಸ್. ಜಾನಕಿಯವರ ಕಂಠಸಿರಿಯಲ್ಲಿರುವ ನಗಿಸಲು ನೀನು ನಗುವೆನು ನಾನು, ನಾನೊಂದು ಬೊಂಬೆಯೂ ನೀ ಸೂತ್ರಧಾರಿ. ನಿನ್ನಾ ಎದಿರು ನಾ ಪಾತ್ರಧಾರಿ ಹಾಡನ್ನು ತನ್ನನ್ನು ನೋಡಲು ಬಂದಿದ್ದ ಜೈ ಜಗದೀಶ್ ಮತ್ತು ಸಂಪತ್ ಅವರ ಮುಂದೆ ಜ್ಯೂಲಿ ಲಕ್ಷ್ಮಿ ಅವರು ಆಮೋಘವಾಗಿ ಅಭಿನಯಿಸಿದ್ದಾರೆ. ಬಹುಶಃ ಅಂದಿನ ಹಾಡು ಕಳೆದ ಗುರುವಾರ ಸಂಜೆ ಬೆಂಗಳೂರಿನ ಕೇಶವಶಿಲ್ಪದಲ್ಲಿ ಬೈಂದೂರಿನಿಂದ ಇತ್ತೀಚೆಗಷ್ಟೇ ಮೊದಲ ಬಾರಿಗೆ ಆಯ್ಕೆ ಆಗಿರುವ ಶ್ರೀ ಗುರುರಾಜ್ ಗಂಟಿಹೊಳೆ ಅವರ ಮಾತುಗಳನ್ನು ಕೇಳುತ್ತಿದ್ದಾಗ, ಆ ಹಾಡು ಚಿತ್ರದಲ್ಲಿ ಲಕ್ಷ್ಮೀ ಅವರಿಗಿಂತಲೂ ಸದ್ಯಕ್ಕೆ ಶ್ರೀ ಗುರುರಾಜರಿಗೇ ಹೆಚ್ಚು ಸೂಕ್ತ ಎನಿಸುವಂತಿತ್ತು ಎಂದರೂ ಅತಿಶಯವಲ್ಲಾ.

GG3ಇತ್ತೀಚಿನ ಕಾಲದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸ ಬೇಕಾದರೇ ಹತ್ತಾರು ಜನರ ಶಿಫಾರಸ್ಸಿನ ಜೊತೆಗೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿರುವಾಗ, ತಾನಾಯಿತು ತನ್ನ ಕೆಲಸವಾಯಿತು ಎಂದು ಯಲ್ಲಾಪುರದ ಕಾಡಿನ ಮಧ್ಯೆಯಲ್ಲಿರುವ ವಿಶ್ವ ದರ್ಶನ ಸೆಂಟ್ರಲ್ ಶಾಲೆಯ ಆಡಳಿತಾಧಿಕಾರಿಯಾಗಿದ್ದ, ಸರಳ ಸಜ್ಜನ ಆದರೆ ಅಷ್ಟೇ ಜನಾನುರಾಗಿದ್ದ ಗುರುರಾಜರ ನಾಯಕತ್ವವನ್ನು ಗುರುತಿಸಿ ಭಾರತೀಯ ಜನತಾಪಕ್ಷ 2023ರ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕರ ಬದಲಿಗೆ ಇವರನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದಾಗ, ಅವರ ಪರಿಚಯವಿರದ ಹೆಚ್ಚಿನವರು ಈ ಬಡವರ ಮನೆಯ ಹುಡುಗ ಅಂದೆತಾ ಮಾಡ್ತಾನ್ ಕಣೀ ಎಂದು ಹುಬ್ಬೇರಿದವರೇ ಹೆಚ್ಚು.

10 ಜೂನ್ 1981 ರಂದು ಗಂಟಿಹೊಳೆಯ ಬಿಜೂರಿನಲ್ಲಿ ಮಹಾಬಲ ಶೆಟ್ಟಿ ಮತ್ತು ಪ್ರೇಮಾ ಶೆಟ್ಟಿ ದಂಪತಿಗಳಿಗೆ ಮಗನಾಗಿ ಜನಿಸಿದರು ಗುರುರಾಜರು. ಇನ್ನು ಊರಿನ ಹೆಸರೇ ಹೇಳುವಂತೆ ಗಂಟಿ ಎಂದರೆ ಆಕಳು ಮತ್ತು ಮನೆಯ ಹತ್ತಿರವೇ ಹರಿಯುವ ಹೊಳೆ. ಸುತ್ತಲೂ ದಟ್ಟವಾದ ನಿತ್ಯಹರಿದ್ವರ್ಣ ಕಾಡುಗಳು. ಇಡೀ ಊರಿನ ಜನಸಂಖ್ಯೆಯ ಸುಮಾರು ಮೂರು ಪಟ್ಟು ದೇಸೀ ಆಕಳುಗಳು ಅಲ್ಲಿದೆ. ಹಾಗಾಗಿ ಪ್ರತೀ ನಿತ್ಯ, ಹಸುಗಳನ್ನು ನೋಡಿಕೊಳ್ಳುವುದು, ಹಸುವಿನ ಹಾಲು ಕರೆದು, ಮಳೆ, ಛಳಿ, ಗಾಳಿ ಯಾವುದನ್ನೂ ಲೆಕ್ಕಿಸದೇ, ಬೆಳ್ಳಂಬೆಳಿಗ್ಗೆಯೇ ಹತ್ತಿರದ ಪಟ್ಟಣದ ಹೋಟೆಲ್ಲಿಗೆ ಹಾಲನ್ನು ಹಾಕಿ ಶಾಲೆಗೆ ಹೋಗಿ ಸಂಜೆ ವಾಪಸ್ಸಾಗುವಾಗ ಹೋಟೆಲ್ಲಿನವರು ಕೊಟ್ಟ ಹಣದಲ್ಲಿ ಹಸುಗಳಿಗೆ ಹಿಂಡಿ ಬೂಸ ತೆಗೆದುಕೊಂಡು ಬರುವ ನಿತ್ಯಕಾಯಕ. ಚಿಕ್ಕಂದಿನಿಂದಲೂ ಆಟ ಪಾಠಗಳಲ್ಲಿ ಚುರುಕಾಗಿದ್ದ ಗುರಾಜರು, ತಮ್ಮ ಪದವಿ ಮುಗಿಸಿದ ನಂತರ 2008 ರಲ್ಲಿ ಅವರು ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದವರು.

ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಸ್ವಯಂಸೇವಕನಾಗಿದ್ದ ಗುರುರಾಜರು ತಮ್ಮ ಓದು ಮುಗಿಸಿದ ನಂತರ ಯೌವನದಲ್ಲಿ ಸುಮಾರು 6 ವರ್ಷಗಳ ಕಾಲ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ಕೊಡಗಿನಲ್ಲಿ ಪ್ರಚಾರಕರಾಗಿ ಕೆಲಸ ಮಾಡಿದ ನಂತರ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣದಲ್ಲೂ ಸಂಘದ ಕೆಲಸ ಮಾಡಿದ ಅನುಭವವಿತ್ತು. ಹೇಳೀ ಕೇಳೀ ಸಂಘದ ಪ್ರಚಾರಕರೆಂದರೆ ಒಂದು ಬಿಳಿ ಪಂಜೆ, ಬಿಳೀ ಅಂಗಿ ಹೆಗಲ ಮೇಲೊಂದು ಸಾಹಿತಿಗಳು ಉಪಯೋಗಿಸುವಂತಹ  ಚೀಲ ನೇತು ಹಾಕಿಕೊಂಡು ನಮ್ಮ ನಿರ್ಧಿಷ್ಟ ವ್ಯಾಪ್ತಿಯ ಪ್ರದೇಶದಲ್ಲಿ ಸಂಘ ಕಾರ್ಯಚಟುವಟಿಕೆಗಳನ್ನು ಹೆಚ್ಚಿಸುವುದರ ಜೊತೆಗೆ ಕಾರ್ಯಕರತರನ್ನು ಬೆಳಸುವ ಗುರುತರವಾದ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಹಾಗೆ ಹೋಗುವ ಮಾರ್ಗದಲ್ಲಿ ಪರಿಚಯವಿದ್ದವರ ಮನೆಯಲ್ಲೇ ವಾಸ, ಸಿಕ್ಕರೆ ಅಲ್ಲೇ ಊಟ ತಿಂಡಿ ಇಲ್ಲದಿದ್ದರೇ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿಯೇ ಹೊರತು ಹೊಟೆಲ್ಲಿಗೆ ಹೋಗಿ ತಿನ್ನುವ ಹಾಗಿಲ್ಲ. ಅದೆಷ್ಟೋ ಬಾರಿ ಸರಿಯಾಗಿ ವಾಹನ ಸಿಗದೇ ಹೋದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ನಡೆದುಕೊಂಡೇ ಹೋಗುವಂತಹ ಸಂದರ್ಭ. ಹೀಗೆ ಎಂತಹ ಸಂದರ್ಭ ಬಂದರೂ ಆವೆಲ್ಲವನ್ನೂ ಮೆಟ್ಟಿ ನಿಂತು ಹಿಡಿದ ಕಾರ್ಯವನ್ನು ಸಾಧಿಸುವ ಅಭ್ಯಾಸ ಸಂಘದ ಪ್ರಚಾರಕರಾಗಿ ಗಳಿಸಿದ್ದದ್ದು ಈಗ ಉಪಯೋಗಕ್ಕೆ ಬಂದಿತ್ತು.

ಸಂಘದ ಪ್ರಚಾರಕರಿಂದ ವಿಮುಕ್ತಿಕೊಂಡ ನಂತರ 2013 ರಿಂದ 2015 ರ ಅವಧಿಯಲ್ಲಿ ಬಿಜೆಪಿಯ ಉಡುಪಿಯ ಉಪಾಧ್ಯಕ್ಷರಾಗಿ ಪಕ್ಷದ ಸಂಘಟನೆಯನ್ನು ಮಾಡಿದ್ದ ಅನುಭವವೂ ಇತ್ತು. ನಂತರದ ದಿನಗಳಲ್ಲಿ ಸಂಸಾರದ ನೊಗವನ್ನು ಸಾಗಿಸುವ ಸಲುವಾಗಿ ಯಲ್ಲಾಪುರದ ಕಾಡಿನ ಮಧ್ಯೆಯಲ್ಲಿರುವ ವಿಶ್ವದರ್ಶನ ಸೆಂಟ್ರಲ್ ಶಾಲೆಯ ಆಡಳಿತಾಧಿಕಾರಿಯಾಗಿ, ಅದರ ಜೊತೆಯಲ್ಲೇ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವಿವಿಧ ಜವಾಬ್ಧಾರಿಗಳನ್ನು ನಿಭಾಯಿಸಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಕರೋನ ಸಮಯದಲ್ಲಿಯೂ ಆನ್ ಲೈನ್ ಮುಖಾಂತರವೇ ರಾಜ್ಯಾದ್ಯಂತ ಸಾವಿರಾರು ಕಾರ್ಯಕರ್ತರನ್ನು ಜೋಡಿಸಿಕೊಂಡು ಎಲೆ ಮರೆಕಾಯಿಯಂತೆ ನೂರಾರು ಕಾರ್ಯಕ್ರಮಗಳನ್ನು ಮಾಡುತ್ತಾ ಪಾದರಸದಂತೆ ಸದಾಕಾಲವೂ ಒಂದಲ್ಲಾ ಒಂದು ಚಟುವಟಿಕೆಗಳನ್ನು ಮಾಡುತ್ತಿದವರನ್ನು ಗುರುತಿಸಿ ಪಕ್ಷ ಟಿಕೆಟ್ ಕೊಡಲು ಮುಂದಾದಾಗ, ಆರಂಭದಲ್ಲಿ ಇದು ನನ್ನಿಂದ ಸಾಧ್ಯವೇ ಎಂದು ಹಿಂದೇಟು ಹಾಕಿ ನಂತರ ಹಿತೈಷಿಗಳ ಒತ್ತಾಯಕ್ಕೆ ಮಣಿದು ಒಪ್ಪಿಕೊಂಡಾಗ ಚುನಾವಣೆಗೆ ಉಳಿದಿದ್ದೇ ಕೇವಲ 20 ದಿನಗಳು.

gg4ವ್ಯಕ್ತಿ ಒಳ್ಳೆಯವನಾಗಿದ್ದರೆ ಅಂತಹವರಿಗೆ ಸಹಾಯ ಹಸ್ತ ಚಾಚಲು ನೂರಾರು ಜನರು ಬರುತ್ತಾರೆ ಎಂಬುವುದಕ್ಕೆ ಗುರುರಾಜರೇ ಜ್ವಲಂತ ಉದಾರಣೆ. ಅರೇ ನಮ್ಮ ಗುರುವಣ್ಣನಿಗೆ ಟಿಕೆಟ್ ಸಿಕ್ಕಿದೆಯಂತೆ ಎಂಬ ಮಾತು ಬಾಯಿಯಿಂದ ಬಾಯಿಗೆ ಹರಡುತ್ತಿದ್ದಂತೆಯೇ ಸಂಘದಲ್ಲಿ ಅವರಿಂದ ಪ್ರೇರಣೆ ಪಡೆದು ಉದರ ನಿಮಿತ್ತ ರಾಜ್ಯದ ನಾನಾ ಕಡೆಯಲ್ಲಿ ಹೋಗಿದ್ದರೆಲ್ಲರೂ, ತಮ್ಮ ತಮ್ಮ ಕೆಲಸಗಳಿಗೆ ರಜೇ ಹಾಕಿ, ಸ್ವಂತ ಖರ್ಚಿನಲ್ಲಿ ಊರಿಗೆ ಬಂದು ಗುರುರಾಜರ ಪರವಾಗಿ ಪ್ರಚಾರ ಮಾಡಿದ್ದಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿಯೂ ಬಡವರ ಮನೆಯ ಹುಡುಗ, ಬರಿಗಾಲ ಸಂತ ಎಂಬೆಲ್ಲಾ ಉಪಮಾನ ಉಪಮೇಯಗಳನ್ನು (ವಾಸ್ತವಾಗಿ ಅದು ಸತ್ಯವೂ ಹೌದು) ಬಳಸಿಕೊಂಡು ಮಾಡಿದ ಪ್ರಚಾರ ಫಲಕಾರಿಯಾಗಿ, 2023 ರ ಬೈಂದೂರು ಕ್ಷೇತ್ರದಲ್ಲಿ ಅದಾಗಲೇ ಆಗರ್ಭ ಶ್ರೀಮಂತರಾಗಿದ್ದು, ಎರಡು ಬಾರಿ ಶಾಸಕರಾಗಿದ್ದ ತಮ್ಮ ಪ್ರತಿಸ್ಪರ್ಧಿ ಕಾಂಗ್ರೇಸ್ಸಿನ ಅಭ್ಯರ್ಥಿ ಕೆ ಗೋಪಾಲ ಪೂಜಾರಿ ಎದಿರು, 16,153 ಮತಗಳಿಂದ ವಿಜಯಿಶಾಲಿಯಾದಾಗ, ಕೇವಲ ಬೈಂದೂರು ಕ್ಷೇತ್ರದ ಜನತೆಯಷ್ಟೇ ಅಲ್ಲದೇ ನಾಡಿನಾದ್ಯಂತ ಅನೇಕ ಸಂಘದ ಮನೆಗಳು ತಮ್ಮ ಮನೆಯ ಮಗನೇ ಗೆದ್ದನೇನೋ ಎನ್ನುವಷ್ಟು ಸಂಭ್ರಮ ಪಟ್ಟಿದ್ದರೂ ಎಂದರು ಸುಳ್ಳಾಗದು.

gg7-removebg-previewಗುರುರಾಜರು ಬೈಂದೂರು ವಿಧಾನಸಭಾ ಶಾಸಕರಾದ ಬಳಿಕ ನಡೆದ ಪಕ್ಷದ ಕಾರ್ಯಕರ್ತರ ಮೊದಲ ಸಭೆಯಲ್ಲಿ ಮಾತನಾಡುವಾಗ ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ನನಗೆ ಅವಕಾಶ ಎಂದರೆ ಪ್ರತಿಯೊಬ್ಬ ಕಾರ್ಯಕರ್ತನಿಗೂ ಅವಕಾಶ. ಹೀಗಾಗಿ ಬಿಜೆಪಿ ಸಾಮಾನ್ಯ ಕಾರ್ಯಕರ್ತರ ಪಕ್ಷವಾಗಿದೆ. ಇದು ಕೇವಲ ನನ್ನ ವಯಕ್ತಿಕ ಗೆಲುವಾಗಿರದೇ, ಬಿಜೆಪಿ ಪಕ್ಷ ಮತ್ತು ನಿಸ್ವಾರ್ಥವಾಗಿ ಹಗಲು ಇರುಳು ದುಡಿದ ಕಾರ್ಯಕರ್ತರ ಗೆಲುವು ಎಂದು ತಿಳಿಸಿದ್ದಲ್ಲದೇ, ಮಾತು ಮುಂದುವರೆಸಿ ನನಗೆ ಈಗ ಅವಕಾಶ ನೀಡಲಾಗಿದೆ. ಮುಂದಿನ ಬಾರಿ ಬೇರೆಯವರಿಗೆ ಅವಕಾಶ ಸಿಗಬಹುದು. ಹಾಗಾಗಿ ನನ್ನ ಅವಧಿಯಲ್ಲಿ ಬೈಂದೂರಿನ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತೇನೆ ಎಂದು ಹೇಳಿದ್ದದ್ದು ಶ್ಲಾಘನೀಯವಾಗಿತ್ತು.

WhatsApp Image 2023-07-14 at 08.34.32ಈಗ ಶಾಸಕರಾಗಿ ಆಯ್ಕೆಯಾಗಿ ಸುಮಾರು 2 ತಿಂಗಳುಗಳ ನಂತರ ವಿಧಾನಸಭೆಯ ಅಧಿವೇಶನದಲ್ಲಿ ಭಾವವಹಿಸುತ್ತಿದ್ದದ್ದರ ಸಂದರ್ಭದಲ್ಲಿ ಮೊನ್ನೆ ಗುರುವಾರ, ಜೂನ್ 13 2023 ರಂದು ಬೆಂಗಳೂರಿನ ಚಾಮರಾಜಪೇಟೆಯ ಕೇಶವಶಿಲ್ಪದಲ್ಲಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಯಕರ್ತರೊಂದಿಗೆ ನಡೆದ ಅನೌಪಚಾರಿಕ ಸ್ನೇಹ ಕೂಟದಲ್ಲೂ ಸಹಾ ಇದೇ ಮಾತನ್ನು ಮುಂದುವರೆಸಿ, ನಾನೊಬ್ಬ ಸಂಘದ ಶಿಸ್ತಿನ ಕಾರ್ಯಕರ್ತ. ಸಂಘ ಮತ್ತು ಸಂಘ ಪರಿವಾರ ನನಗೆ ವಹಿಸುವ ಜವಾಬ್ಧಾರಿಗಳನ್ನು ದಕ್ಷ ಮತ್ತು ಪ್ರಾಮಾಣಿಕವಾಗಿ ಮಾಡುವುದಷ್ಟೇ ನನ್ನ ಕೆಲಸ. ಹಾಗಾಗಿ ನಾನೊಬ್ಬ ಕೇವಲ ಪಾತ್ರಧಾರಿಯಾಗಿದ್ದು ಸೂತ್ರಧಾರಿ ಎಲ್ಲವು ಸಂಘವೇ. ನಾನು ಈ ರಾಜಕೀಯ ಕ್ಷೇತ್ರಕ್ಕೆ ಅನಿರೀಕ್ಷಿತವಾಗಿ ಬಂದಿದ್ದೇನೆಯೇ ಹೊರತು, ಸ್ವ ಇಚ್ಚೆಯಂದಲ್ಲ. ಹಾಗಾಗಿ ಇಲ್ಲೇ ಜೀವನವಿಡೀ ಝಾಂಡಾ ಹೂಡುವ ಜಾಯಮಾನವೂ ನನ್ನದಲ್ಲಾ. ನನ್ನ ಕೆಲಸದ ಅವಧಿ ಮುಗಿದ ನಂತರ, ಸಂಘ ಸೂ‍ಚಿಸಿದ ಮತ್ತೊಂದು ಕಾರ್ಯಕ್ಕೆ ಚರೈವೇತಿ ಚರೈವೇತಿ ಎಂದು ಹೋಗುವುದಂತು ಖಚಿತ ಮತ್ತು ನಿಶ್ಚಿತ ಎಂದಾಗ, ಅರೇ 80-90 ವರ್ಷವಾಗಿ ನಡೆಯಲೂ ಬಿಡಿ, ಮಾತನಾಡಲೂ ಏದುಸಿರು ಬಿಡುವವರೆಲ್ಲಾ ಇನ್ನೂ ಶಾಸಕ, ಸಾಂಸದರಾಗಿ, ತಮ್ಮ ಮಕ್ಕಳು ಮೊಮ್ಮಕ್ಕಳನ್ನೂ ರಾಜಕೀಯಕ್ಕೆ ತರಲು ಹವಣಿಸುತ್ತಿರುವ ಇಂದಿನ ಕಾಲದಲ್ಲೂ ಅಧಿಕಾರಕ್ಕೆ ಆಸೆ ಪಡದ ಈ ರೀತಿಯವರೂ ಇರುತ್ತಾರಾ? ಎಂದು ಅನಿಸಿದ್ದಂತೂ ಸುಳ್ಳಲ್ಲ

gg6ಆಭಾಸಾಪದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ರಘುನಂದನ ಭಟ್, ಖಜಾಂಚಿಗಳಾದ ಶ್ರೀ ರಾಮಕೃಷ್ಣ ಶ್ರೌತಿ, ಸಹಖಜಾಂಚಿ ಶ್ರೀ ವಿಜಯಕುಮಾರ್, ಮಹಾನಗರ ಅಧ್ಯಕ್ಷ ಶ್ರೀ ಎಂ.ಎಸ್.ನರಸಿಂಹ ಮೂರ್ತಿಯವರು ಮತ್ತು ಕೆಲವು ಜವಾಬ್ದಾರಿಯುತ ಕಾರ್ಯಕರ್ತರು ಉಪಸ್ಥಿತರಿದ್ದ ಆ ಅನೌಪಚಾರಿಕ ಕಾರ್ಯಕ್ರಮದಲ್ಲಿ ಅವರನ್ನು ಪರಿಚಯ ಮಾಡಿ ಕೊಡುವಾಗ ಅವರನ್ನು ಜನರು ಬರಿಗಾಲ ಸಂತ, ರೈಲು ಬಸ್ಸಿನಲ್ಲಿ ಜನಸಾಮಾನ್ಯರಂತೆ ಓಡಾಡುವರು ಎಂಬೆಲ್ಲಾ ರೀತಿಯಲ್ಲಿ ಜನರು ಗುರುತಿಸುತ್ತಿರುವುದು ಸಂತೋಷದ ಜೊತೆ ಎಚ್ಚರಿಕೆಯ ಗಂಟೆಯೂ ಹೌದು ಎಂದು ಹೇಳಿದ್ದರ ಕುರಿತು ಗುರುರಾಜರು, ಜನರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಸ್ವತಃ ಜಾಗೃತರಾಗಿರಲು ಮತ್ತು ಅರಿವು ಮೂಡಿಸುವ ಸಲುವಾಗಿ ನಾನು ಬರಿಗಾಲಿನಲ್ಲಿ ಕಳೆದ 20 ವರ್ಷಗಳಿಂದಲೂ ನಡೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ಈಗ ಜನಪ್ರತಿನಿಧಿ ಆದ ಮೇಲಂತೂ ಈ ಅಭ್ಯಾಸವು ಸಮಾಜದಲ್ಲಿನ ಜನರ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡಲು ತನ್ನ ಕರ್ತವ್ಯಗಳನ್ನು ಪದೇ ಪದೆ ನೆನಪಿಸುತ್ತದೆ. ಹಾಗಾಗಿ ನಾನು ಸದಾ ಎಲ್ಲೆಂದರಲ್ಲಿ ಬರಿಗಾಲಿನಲ್ಲಿ ನಡೆದಾಡುವ ನನ್ನ ಅಭ್ಯಾಸಕ್ಕೆ ವಿಶೇಷ ಅಭಿಮಾನ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದಿದ್ದು ಎಲ್ಲರ ಮೆಚ್ಚುಗೆ ಪಡೆಯಿತು.

ಕಲವು ವರ್ಷಗಳ ಹಿಂದೆ
ರಸ್ತೆಯಲ್ಲಿ ಮರವೊಂದು ಬಿದ್ದಿದ್ದರೆ, ಆ ದಾರಿಯನ್ನು ಬಿಟ್ಟು ಪಕ್ಕದ ದಾರಿಯಲ್ಲಿ ಹೋಗುವವನು ಬುದ್ದಿವಂತ.
ಅದೇ ಮರವನ್ನು ರಸ್ತೆಯಿಂದ ಆಚೆಗೆ ಸರಿಸಿ ರಸ್ತೆಯನ್ನು ಸುಗಮ ಗೊಳಿಸುವವನು ಹೃದಯವಂತ.
ಬುದ್ದಿವಂತ ಅಥವಾ ಹೃದಯವಂತ ಆಗುವುದು ನಮ್ಮ ಕೈಯಲ್ಲಿಯೇ ಇದೆ ಅಲ್ಲವೇ?
ಏನಂತೀರೀ?
GG1ಎಂಬ ಉಲ್ಲೇಖವನ್ನು ಬರೆದಿದ್ದೆ. ಕಾಕತಾಳೀಯವೆಂದರೆ, ಕುಂದಾಪುರದಿಂದ ಹಾಲಾಡಿ ರಸ್ತೆ ಬದಿಯಲ್ಲಿ ಅಕೇಶಿಯಾ ಸಾಲು ಮರಗಳಿದ್ದು, ರಸ್ತೆ ಬದಿಗೆ ವಾಲಿಕೊಂಡಿದ್ದ ಮರಗಳನ್ನು ಸ್ಥಳೀಯ ಅರಣ್ಯ ಇಲಾಖೆ ತೆರವು ಸಹಾ ಮಾಡಿತ್ತು. ಆದರೆ ಕಳೆದ ಒಂದೆರಡು ವಾರಗಳಿಂದ ಬಿಟ್ಟೂ ಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಮರದ ಬುಡದ ಮಣ್ಣು ಸಡಿಲಗೊಂಡು ರಸ್ತೆಯ ಮೇಲೆ ಉರುಳಿ, ಸಂಚಾರಕ್ಕೆ ತೊಡಕು ಉಂಟಾಗಿತ್ತು. ಕೆಲ ದಿನಗಳ ಹಿಂದೆ ಶಾಸಕರು ಸಹಾ ಆದೇ ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಪರಿಸ್ಥಿತಿಯನ್ನು ಕಂಡ ಕೂಡಲೇ ಅವರು ಬೇರೆ ರಸ್ತೆಯಲ್ಲಿ ಹೋಗ ಬಹುದಿತ್ತು. ಆದರೆ ಅವರ ಹೃದಯದಲ್ಲಿ ಸದಾಕಾಲವೂ ಜಾಗೃತವಾಗಿರುವ ಸ್ವಯಂಸೇವಕನ ಮನಸ್ಥಿತಿ, ಕೂಡಲೇ ಶಾಸಕ ಎಂಬುದೆಲ್ಲವನ್ನೂ ಮರೆತು ಪಂಚೆಯನ್ನು ಎತ್ತಿ ಕಟ್ಟಿ ತಮ್ಮ ಸಹಚರರು ಮತ್ತು ಅಲ್ಲಿದ್ದ ಸ್ಥಳೀಯರ ಸಹಾಯದಿಂದ ರಸ್ತೆಗೆ ಬಿದ್ದಿದ್ದ ಮರವನ್ನು ರಸ್ತೆಯಿಂದ ಆಚೆಗೆ ಸರಿಸುತ್ತಿದ್ದಂತೆಯೇ, ಬಿದ್ದ ಮರದ ಬದಿಯ ಮತ್ತೊಂದು ಮರ ಧರೆಗೆ ಉರುಳುವ ಶಬ್ಧ ಕೇಳುತ್ತಿದ್ದಂತೆಯೇ, ಗುರುರಾಜರು ಮತ್ತು ಮರ ತೆರವು ಮಾಡುತ್ತಿದ್ದ ಸಂಗಡಿಗರ ಸಮಯ ಪ್ರಜ್ಞೆಯಿಂದ ಎಲ್ಲರನ್ನೂ ದೂರ ಸರಿಸಿ, ಹೆಚ್ಚಿನ ದುರಂತವಾಗುವುದು ತಪ್ಪಿಸುವ ಮೂಲಕ ತಾವೊಬ್ಬ ಹೃದಯವಂತ ಶಾಸಕ ಎಂಬುದನ್ನು ಅಕ್ಷರಶಃ ಸಾಭೀತು ಪಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

WhatsApp Image 2023-07-14 at 08.34.40ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ, ತಾವು ಜನಪ್ರತಿನಿಧಿಗಳು ಜನರು ತಮ್ಮನ್ನು ಗಮನಿಸುತ್ತಿದ್ದಾರೆ ಎಂಬುದನ್ನೂ ಮರೆತು ಅತ್ಯಂತ ಕೆಟ್ಟ ರೀತಿಯಲ್ಲಿ ಒಬ್ಬರ ಮೇಲೊಬ್ಬರು ಕೆಸರಾಟ ನಡೆಸುತ್ತಿರುವುದು ನೋಡಿ ನೀವೂ ಸಹಾ ಅವರಂತೆಯೇ ಆಗುತ್ತೀರಾ? ಎಂದು ಕೇಳಿದಾಗ, ಸಣ್ಣದಾಗಿ ನಕ್ಕು, ನಂತರ ಅಷ್ಟೇ ಗಂಭೀರವಾಗಿ, ಹೌದು ಅಷ್ಟು ಹಿರಿಯರು ಮತ್ತು ಅನುಭವಸ್ಥರೇ ಆ ರೀತಿಯಾಗಿ ವರ್ತಿಸುವುದು ನಿಜಕ್ಕೂ ಬೇಸರ ತರಿಸುತ್ತದೆ. ಅವರನ್ನೇ ನೋಡುತ್ತಾ, ಅವರಿಗೆ ತಕ್ಕ ಉತ್ತರ ನೀಡಲು ನಾವೂ ಸಹಾ ಅವರಂತೆಯೇ ತೊಡೆ ತೋಳು ತಟ್ಟುತ್ತಲೇ ಮಾತನಾಡಬೇಕೇನೋ ಎಂದೆನಿಸಿದರೂ, ಸಂಘ ಕಲಿಸಿದ ಶಿಸ್ತು ಮತ್ತು ಸಂಸ್ಕಾರಗಳು ನೆನಪಾಗಿ, ಕೆಸರ ಮಧ್ಯೆಯಲ್ಲಿದ್ದರೂ ಕೆಸರನ್ನು ಅಂಟಿಸಿಕೊಳ್ಳದೇ ಅರಳುವ ಕಮಲದಂತೆ ಉತ್ತರಿಸುವುದನ್ನು ರೂಢಿಸಿಕೊಳ್ಳುತ್ತಿದ್ದೇನೆ ಎಂದಾಗ ಅಲ್ಲಿದ್ದವರಿಗೆಲ್ಲಾ ತುಸು ನಮ್ಮದಿ ತಂದಿದ್ದಂತೂ ಸತ್ಯ.

WhatsApp Image 2023-07-14 at 08.34.23ಅಧಿವೇಶನದ ಮಧ್ಯೆಯೂ ಸಮಯ ಮಾಡಿಕೊಂಡು, ಯಾವುದೇ ಹಮ್ಮು ಬಿಮ್ಮು ಇಲ್ಲದೇ, ಅತ್ಯಂತ ಸರಳವಾಗಿ ಮತ್ತು ಅಷ್ಟೇ ಮುಕ್ತವಾಗಿ ನಮ್ಮೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡ ನಂತರ ಎಲ್ಲರೊಟ್ಟಿಗೆ ರಾಮಕೃಷ್ಣ ಆಶ್ರಮದ ಎದುರಿನ ಎಸ್.ಎಲ್.ವಿ ಹೋಟೆಲ್ಲಿಗೆ ಹೋಗಿ ಒಟ್ಟಿಗೆ ಕುಳಿತು ಊಟ ಮುಗಿಸಿ ಮತ್ತೊಮ್ಮೆ ಯಲ್ಲಾಪುರದವರನ್ನೆಲ್ಲಾ ಒಟ್ಟಿಗೆ ಕಲೆ ಹಾಕಿ ತಂಬುಳಿ ಊಟ ಮಾಡೋಣ ಎಂದು ಹೇಳುವ ಮೂಲಕ ನಮ್ಮ ಅನೌಪಚಾರಿಕ ಕಾರ್ಯಕ್ರಮ ಮುಕ್ತಾಯವಾದಾಗ ಗಂಟೆ 11ರ ಸಮೀಪವಾಗಿತ್ತು.

WhatsApp Image 2023-07-14 at 08.34.27ರಾಜಕಾರಣ ಎಂದರೆ ಹೊಲಸು, ಯುವಕರಂತೂ ರಾಜಕಾರಣಕ್ಕೆ ಬರಲೇ ಬಾರದು ಎಂದೆಲ್ಲಾ ಹೇಳುತ್ತಿರುವ ಸಂದರ್ಭದಲ್ಲಿ ಕೇವಲ 42 ವರ್ಷದ ಸಾಮಾನ್ಯ ಕುಟುಂಬದ ಯುವಕ ಗುರುರಾಜ ಗಂಟಿಹೊಳೆಯವರು ಶಾಸಕರಾಗಿರುವುದೇ ನಮ್ಮ ಪ್ರಜಾಪ್ರಭುತ್ವದ ಸೊಗಸು ಎಂದರೂ ತಪ್ಪಾಗದು. ಜನರಿಂದ ಜನರಿಗಾಗಿ ಮತ್ತು ಜನರಿಗೋಸ್ಕರವೇ ಕೊಟ್ಟ ಅಧಿಕಾರವನ್ನು ಅತ್ಯಂತ ಪ್ರಾಮಾಣಿಕವಾಗಿ ಬಳಸಿಕೊಂಡು ಉತ್ತಮವಾದ ಜನೋಪಕಾರಿ ಕೆಲಸಗಳನ್ನು ಮಾಡುವ ಮೂಲಕ ಇಂದಿನ ಯುವ ಜನತೆಗೆ ಮಾದರಿ ಮತ್ತು ಪ್ರೇರಣಾದಾಯಕರಾಗ ಬಲ್ಲಂತಹವರಾಗಲಿ ಎಂದು ಆಶಿಸೋಣ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

3 thoughts on “ಹೃದಯವಂತ ಶಾಸಕ ಗುರುರಾಜ್ ಗಂಟಿಹೊಳೆ

  1. ಕೆಸರಿನ ಕಮಲ. ಪ್ರತಿನಿತ್ಯ ಕಾಣುತ್ತಿರುವ ಅಧಿವೇಶನದ ಹೊಲಸು ವಿದ್ಯಮಾನಗಳಲ್ಲಿ ಇಂತಹವರೂ ಇದ್ದಾರೆಯೇ? ನಮ್ಮನ್ನು ನೋಡುತ್ತಿರುವ ಹೊಸ ಶಾಸಕರು ಏನಂದುಕೊಂಡಾರು ಎಂದು ಕೆಲ ಹಿರಿಯ ಶಾಸಕರು ಎಚ್ಚರಿಸಲು ಬಹುಷಃ ಇಂತಹ ಸಂತ ಶಾಸಕರು ಕಾರಣ ಇರಬಹುದೇ ?

    Liked by 1 person

  2. ಒಳ್ಳೆಯ ಲೇಖನ. ಸಜ್ಜನ ಶಾಸಕರ ಬದುಕಿನ ಸರಳತೆಯ
    ವಿಚಾರಗಳು ಮನ ಮುಟ್ಟಿತು.
    ಬರಿಗಾಲ ಸ್ವಾಮಿಗಳಾಗಿ ಅವರದು ಸರಳ ಜೀವನ.
    ಇಂತಹ ನಾಯಕರನ್ನು ವಿಧಾನ ಸೌಧ ಇತ್ತೀಚಿನ ವರ್ಷಗಳಲ್ಲಿ ಕಂಡಿಲ್ಲ.
    ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಅಭಿನಂದಿಸಿ ನಾವು ಕೃತಾರ್ಥರಾದೆವು.
    ಗುರುರಾಜ್ ಜೀ ಅವರ ಮಾತು , ನಡೆ , ನುಡಿ ಆಪ್ತತೆಯಿಂದ ಕೂಡಿರುವುದನ್ನು ಹತ್ತಿರದಿಂದ ಕಂಡೆ. ಇವರ ಸೇವಾ ಮನೋಭಾವ ಇತರರಿಗೆ ಮಾದರಿ ಅದರೆ ಚೆನ್ನ .
    ಅಭಾಸಾಪ ಜೊತೆಗೆ ಅವರಿಗಿರುವ ನಂಟು ತಾಯಿ ಮಗುವಿನ ಸಂಬಂಧ ದಂತೆ.

    ಈ ಲೇಖನ ಸುದ್ದಿ ಮಾತ್ರ ಅಲ್ಲ ಶಾಸಕರ ನಿರಾಡಂಬರ ಜೀವನ ಶೈಲಿಯನ್ನೂ ಪರಿಚಯಿಸಿದೆ.
    Write up ಸೊಗಸಾಗಿದೆ. ಉದಾಹರಣೆಗಳ ಪ್ರಸ್ತುತಿ ಆನಂದದಾಯಕ.
    ಉಮಾಸುತ ಅವರಿಗೆ ಅಭಿನಂದನೆಗಳು.

    ಎಂ. ಎಸ್. ನರಸಿಂಹ ಮೂರ್ತಿ
    ಹಿರಿಯ ಹಾಸ್ಯ ಸಾಹಿತಿಗಳು

    Like

Leave a comment