ಅಲಿ ಆಸ್ಕರ್ ರಸ್ತೆ

ಬೆಂಗಳೂರಿನ ಇನ್‌ಫೆಂಟ್ರಿ ರಸ್ತೆ ಮತ್ತು ಕನ್ನಿಂಗ್‌ಹ್ಯಾಮ್ ರಸ್ತೆಯ ನಡುವಿನ ಒಂದು ಸಣ್ಣ ರಸ್ತೆಯನ್ನು ಅಲಿ ಆಸ್ಕರ್ ರಸ್ತೆ ಎಂದು ಕರೆಯಲ್ಪಡುತ್ತದೆ. ಯಾರು ಈ ಅಲಿ ಅಸ್ಕರ್?  ಅವರಿಗೂ ಬೆಂಗಳೂರಿಗೂ ಏನು ಸಂಬಂಧ, ಬೆಂಗಳೂರಿಗೆ ಅವರ ಕೊಡುಗೆಗಳೇನು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.   ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ali_asgarದೂರದ ಇರಾನಿನ ಶ್ರೀಮಂತ ವ್ಯಾಪಾರೀ ಕುಟಂಬದಲ್ಲಿ 1808 ರಲ್ಲಿ ಜನಿಸಿದ ಅಗಾ ಅಲಿ ಆಸ್ಕರ್ ತಮ್ಮ 16ನೇ ವಯಸ್ಸಿನಲ್ಲಿಯೇ ಹಾಜಿ ಮೊಹಮ್ಮದ್ ಹಾಶಿಮ್ ಮತ್ತು ಮಶಾದಿ ಖಾಸಿಮ್ ಎಂಬ ಇಬ್ಬರು ಹಿರಿಯ ಸಹೋದರರೊಂದಿಗೆ ಪರ್ಷಿಯನ್ ಕುದುರೆ ವ್ಯಾಪಾರ ಮಾಡುವ ಉದ್ದೇಶದಿಂದ ತಮ್ಮ ತಾಯ್ನಾಡಾದ ಶಿರಾಜ್‌ ನಿಂದ ಸಮುದ್ರ ಮಾರ್ಗವಾಗಿ ಮಂಗಳೂರು ತಲುಪಿ ಅಲ್ಲಿಂದ ಕೊಡಗಿಗೆ ಬಂದಾಗ, ಕೊಡಗಿನ ಚಿಕವೀರ ರಾಜೇಂದ್ರ ಕಡೆಯ ಸೈನಿಕರು ಇವರನ್ನು ಬ್ರಿಟೀಷರ ಗೂಢಾಚಾರಿಗಳು ಎಂದು ಭಾವಿಸಿ ಹಿಡಿದಿಟ್ಟುಕೊಂಡು ನಂತರ ಅವರಿಂದ ಹೇಗೋ ಬಿಡಿಸಿಕೊಂಡು ಮೈಸೂರು ಮೂಲಕ ಹಾದು, ಅವರು ಅಂತಿಮವಾಗಿ 1824 ರಲ್ಲಿ ಬೆಂಗಳೂರಿಗೆ ಬರುತ್ತಾರೆ.

ಇವರು ಬರುವ ಸಮಯದಲ್ಲೇ ಬೆಂಗಳೂರಿನಲ್ಲಿಯೂ ಬ್ರಿಟೀಷ್ ಕಂಟೋನ್ಮೆಟ್ ಆರಂಭವಾಗಿ ಸಾವಿರಾರು ಬ್ರಿಟೀಷ್ ಅಧಿಕಾರಿಗಳು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಬೆಂಗಳೂರಿನಲ್ಲಿ ಪಬ್ಬು ಬಾರುಗಳ ವ್ಯವಸ್ಥೆ ಮಾಡಿಕೊಂಡು ಐಶಾರಾಮಿ ಜೀವನವನ್ನು ನಡೆಸುತ್ತಿರುವುದನ್ನು ಕಂಡ ಅಸ್ಕರ್ ಅಲಿ, ಚಾಕಚಕ್ಯತೆಯಿಂದ ಅಂತಹ ಅಧಿಕಾರಿಗಳ ಗೆಳೆತನವನ್ನು ಸಂಪಾದಿಸಿ ಬ್ರಿಟಿಷ್ ಸೈನ್ಯದೊಂದಿಗೆ ಕುದುರೆ ವ್ಯಾಪಾರವನ್ನು ಅರಂಭಿಸಿದ್ದಲ್ಲದೇ, ಬ್ರಿಟೀಷ್ ಅಧಿಕಾರಿಗಳೊಂದಿಗೆ ಒಟ್ಟಿಗೆ ಕ್ಲಬ್ಬುಗಳಲ್ಲಿ ರಾತ್ರಿಯನ್ನು ಕಳೆಯುವಷ್ಟರ ಮಟ್ಟಿಗೆ ಗೆಳೆತನ ಬೆಳೆಸಿಕೊಂಡಿರುತ್ತಾನೆ. 1834 ರಿಂದ 1861ರ ವರೆಗೆ ಮೈಸೂರು ಪ್ರಾಂತ್ಯಗಳ ಕಮಿಷನರ್ ಆಗಿದ್ದ ಸರ್ ಮಾರ್ಕ್ ಕಬ್ಬನ್ ಅವರಿಗೆ ಕುದುರೆಗಳನ್ನು ಸಾಕುವ ಶೋಕಿ ಇದ್ದ ಕಾರಣ, ಅವರೊಂದಿಗೂ ಸಹಾ ವಯಕ್ತಿಕ ಗೆಳೆತನ ಬೆಳೆಸಿದ ಅಲಿ ಅಸ್ಗರ್ ಕಬ್ಬನ್ ಅವರಿಗೆ ಸರಿ ಸುಮಾರು 50 ಕುದುರೆಗಳನ್ನು ಮಾರಿರುತ್ತಾನೆ. ಇದರ ಮಧ್ಯೆಯೇ ರಾಜ್ಯಭಾರವನ್ನು ಕಳೆದುಕೊಂಡಿದ್ದ ಅಂದಿನ ಮೈಸೂರು ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರೊಂದಿಗೂ ಉತ್ತಮ ಸ್ನೇಹಮಯ ಸಂಬಂಧವನ್ನು ಹೊಂದಿರುತ್ತಾನೆ.

balbruoueeಕುದುರೆ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿದ್ದರೂ, ಅಸ್ಕರ್ ಅವರ ಸಹೋದರರಿಬ್ಬರೂ ತಮ್ಮ ತಾಯ್ನಾಡು ಶಿರಾಜ್‌ಗೆ ಹಿಂದಿರುಗಿದರೂ, ಬೆಂಗಳೂಗಿನ ವಾತಾವರಣಕ್ಕೆ ಮನಸೋತಿದ್ದ ಅಸ್ಕರ್ ಮಾತ್ರಾ ಬೆಂಗಳೂರಿನಲ್ಲೇ ಶಾಶ್ವತವಾಗಿ ನೆಲೆಸುವ ಮನಸ್ಸು ಮಾಡಿದ್ದಲ್ಲದೇ, ನಿಧಾನವಾಗಿ ಕುದುರೆ ವ್ಯಾಪಾರದಿಂದ ರಿಯಲ್ ಎಸ್ಟೇಟ್ ಮತ್ತು ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಾಣ ಮಾಡುವ ಕೆಲಸವನ್ನು ಆರಂಭಿಸಿ, ಅಂದಿನ ಕಂಟೋನ್ಮೆಂಟ್‌ ಸುತ್ತಮುತ್ತಲೂ 100ಕ್ಕೂ ಹೆಚ್ಚಿನ ಐಶಾರಾಮಿ ಬಂಗಲೆಗಳನ್ನು ನಿರ್ಮಿಸಿದರೆ, ಹೈಗ್ರೌಂಡ್ಸ್ ಅಕ್ಕ ಪಕ್ಕದಲ್ಲಿ ಇಂದಿನ ರಾಜ್ಯಪಾಲರ ನಿವಾಸ, ರಾಜ್ಯ ಅತಿಥಿ ಗೃಹವಾಗಿರುವ ಬಾಲಾಬ್ರೂಯಿ ಮತ್ತು ಲೀಲಾ ನಿವಾಸ್ ಆಫ್ ಕನ್ನಿಂಗ್ಹ್ಯಾಮ್ ಕ್ರೆಸೆಂಟ್ ಸೇರಿದಂತೆ ಒಟ್ಟು ಐದು ಸುಂದರವಾದ ಬಂಗಲೆಗಳನ್ನು ನಿರ್ಮಿಸಿ ಅವುಗಳಿಗೆ ಬೆಹೆಷ್ಟ್, ಅಲಿಯಾಬಾದ್, ಹುಸೇನಾಬಾದ್, ಅಜಿಮಾಬಾದ್ ಮತ್ತು ಅಸ್ಕರಾಬಾದ್ ಎಂದು ತನ್ನ ಊರಿನಲ್ಲಿ ತಮ್ಮ ತಂದೆ ಹಾಜಿ ಅಬ್ದುಲ್ಲಾ ಅವರು ವಾಸಿಸುತ್ತಿದ್ದ ಬಂಗಲೆಗಳಿಗೆ ಇಟ್ಟಿದ್ದ ಹೆಸರನ್ನೇ ಇಟ್ಟಿದ್ದಲ್ಲದೇ, ಬೆಂಗಳೂರಿನಲ್ಲಿ ಕುದುರೆ ರೇಸಿಂಗ್ ಆರಂಭಿಸಿದ ನಂತರ ಸಣ್ಣ ಮಟ್ಟದಲ್ಲಿ ರೇಸ್ ಕೋರ್ಸ್ ಆರಂಭಕ್ಕೂ ಕಾರಣೀಭೂತರಾದರು.

ಇನ್ನು ವಯಕ್ತಿವಾಗಿ ಚನ್ನಪಟ್ಟಣದ ಅಬ್ದುಲ್ ರೆಹಮಾನ್ ಅವರ ಸಹೋದರಿ ಖಾದು ಬೇಬೆ ಅವರನ್ನು ವಿವಾಹವಾಗಿ, ಅವರಿಬ್ಬರ ಸುಂದರ ದಾಂಪತ್ಯದ ಕುರುಹಾಗಿ ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳನ್ನು ಪಡೆದ ನಂತರ ಅಕಾಲಿಕವಾಗಿ ನಿಧನರಾದ ಒಂದು ವರ್ಷದ ನಂತರ ಅಲಿ ಆಸ್ಕರ್ ಮುಂಬೈ ಮೂಲದ ತಮ್ಮ ವ್ಯಾಪಾರೀ ಗೆಳೆಯ ಹಾಜಿ ಅಲಿ ರೆಜಾ ಶೂಸ್ತರಿಯ ಮಗಳು ಬೆಬೆ ಶಹರ್ ಬಾನು ಅವರನ್ನು ಬಾಂಬೆಯಲ್ಲೇ ಮದುವೆಯಾಗಿ ಬೆಂಗಳೂರಿಎ ಕರೆದು ತಂದ ನಂತರ ರಿಚ್‌ಮಂಡ್‌ ಟೌನ್‌ ಸುತ್ತ ಮುತ್ತಲಿನ ವಿಶಾಲವಾದ ಪ್ರದೇಶವನ್ನು ಖರೀಧಿಸಿ ಇಂದಿನ ಫಾತಿಮಾ ಬೇಕರಿ ಎದುರಿಗೆ ಸ್ವಂತಕ್ಕಾಗಿ ದೊಡ್ಡದಾದ ಎರಡು ಅಂತಸ್ತಿನ ಬಂಗಲೆಯನ್ನು ನಿರ್ಮಿಸಿಕೊಂಡು ವಾಸಿಸಲಾರಂಭಿಸಿದ ನಂತರ ಆ ಪ್ರದೇಶ ಅರಬ್ ಲೈನ್ಸ್ ಎಂದೇ ಪ್ರಸಿದ್ಧವಾಗಿದ್ದಲ್ಲದೇ, ಇಂದಿನ ಜಾನ್ಸನ್ ಮಾರುಕಟ್ಟೆ ಇರುವ ಸ್ಥಳವು ಅಲಿ ಅಸ್ಕರ್ ಅವರ ಕುದುರೆಗಳ ಲಾಯವಾಗಿತ್ತು. ಕಾಲಾನಂತರ ಅಲಿ ಅಸ್ಕರ್ ಅವರ ಮಕ್ಕಳಾದ ಮೊಹಮ್ಮದ್ ಬಾಖರ್ ಮತ್ತು ಅಬ್ದುಲ್ ಹುಸೇನ್, ಇಬ್ಬರೂ ಬೆಳೆದು ವಯಸ್ಕಾರಾದ ನಂತರ ತಮ್ಮ ತಂದೆಯೊಂದಿಗೆ ವ್ಯಾಪಾರ ವಹಿವಾಟುಗಳನ್ನು ಸಮರ್ಥವಾಗಿ ನಿರ್ವಹಿಸತೊಡಗಿದರು.

1824ರಲ್ಲಿ ಅದ್ದೂರಿಯಿಂದ ದಸರಾ ನಡೆಯುತ್ತಿದ್ದ ಸಂದರ್ಭದಲ್ಲಿಯೇ ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಾಗಿ ಇಲ್ಲ. ಅನಾವಶ್ಯಕ ಖರ್ಚುಗಳನ್ನು ಮಾಡುತ್ತಿದ್ದಾರೆ ಮತ್ತು ಆಡಳಿತ ಅರಾಜಕತೆಯಿಂದ ಕೂಡಿದೆ ಎಂಬ ಕುಂಟು ನೆಪವೊಡ್ಡಿ ಮುಮ್ಮಡಿ ಕೃಷ್ಣರಾಜರು ಆಳುತ್ತಿದ್ದ ಮೈಸೂರು ಸಂಸ್ಥಾನವನ್ನು ಬ್ರಿಟೀಷರು ವಶಪಡಿಸಿಕೊಂಡಾಗ, ತಾಳ್ಮೆವಂತರಾದ ನಮ್ಮ ರಾಜರು ಅದಕ್ಕೆ ಸ್ವಲ್ಪವೂ ಪ್ರತಿರೋಧ ತೋರದೇ, ಶಾಂತಿಯಂದ ಬಗೆಹರಿಸಿಕೊಳ್ಳುವ ಸಲುವಾಗಿ ಬ್ರಿಟಿಷರಿಗೆ ಪತ್ರದ ಮೇಲೆ ಪತ್ರ ಬರೆಯುತ್ತಾರೆ. ಇಂತಹ ಪತ್ರ ವ್ಯವಹಾರ ಸುಮಾರು 50 ವರ್ಷಗಳ ಕಾಲ ಮುಂದುವರಿಯುತ್ತದೆಯೇ ಹೊರತು ರಾಜ್ಯದ ಆಡಳಿತ ಒಡೆಯರ್ ಅವರ ಸುಪರ್ದಿಗೆ ಒಪ್ಪಿಸಲು ಬ್ರಿಟಿಷರು ಒಪ್ಪಲೇ ಇಲ್ಲ.

ನಮ್ಮ ರಾಜರಿಗೆ ಪರಮಾಪ್ತರಾಗಿದ್ದ ಅಲಿ ಅಸ್ಗರ್ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ದಿನಸಿಗಳನ್ನು ಸರಬರಾಜು ಮಾಡುತ್ತಿದ್ದಲ್ಲದೇ, ಅವರಿಗೆ ಅಗ್ಗಾಗ್ಗೆ ಸಾಲ ಕೊಡುತ್ತಿದ್ದ ಕೊಯಂಬತ್ತೂರು ಮೂಲದ ಬಹುದೊಡ್ಡ ಕಿರಾಣಿ ವ್ಯಾಪಾರಿಗಳಾದ ಶ್ರೀ ಲಕ್ಷ್ಮೀನರಸೂ ಚೆಟ್ಟಿಯವರು ರಾಜ್ಯವನ್ನು ಕಸಿದುಕೊಂಡು ಅಧಿಕಾರವಿಲ್ಲದಿದ್ದರೂ ನಮ್ಮ ಮಹಾರಾಜರುಗಳು ಹಗಲಿರುಳೂ ಮಾಡುತ್ತಿದ್ದ ಜನಸೇವೆ, ಅವರಿಗಿದ್ದ ಪ್ರಜಾ ಪ್ರೀತಿ, ಎಲ್ಲವನ್ನೂ ಗಮನಿಸಿ, ಅವರಿಬ್ಬರೂ ಬ್ರಿಟೀಷ್ ಅಧಿಕಾರಿಗಳೊಂದಿಗೆ ಇದ್ದ ತಮ್ಮ ಪ್ರಭಾವವನ್ನು ಬಳಸಿ ನೀವು ಮೈಸೂರು ಪ್ರಭುಗಳಿಗೆ ರಾಜ್ಯಾಧಿಕಾರ ಹಿಂದಿರುಗಿಸದಿದ್ದಲ್ಲಿ ನಾವುಗಳು ನಿಮ್ಮೊಂದಿಗೆ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ನಿಲ್ಲಿಸಬೇಕಾದೀತು ಎಂಬ ಎಚ್ಚರಿಕೆಯ ಬೆದರಿಗೆ ಅಂಜಿ ಬ್ರಿಟೀಷರು ಬ್ರಿಟಿಷರು ಪ್ರಭುಗಳ ಪತ್ರಗಳಿಗೆ ಮಾನ್ಯತೆ ಕೊಟ್ಟು ಮಾರುತ್ತರ ಬರೆಯಲಾರಂಭಿಸಿದ್ದಲ್ಲದೇ, ಕೆಲವೇ ವರ್ಷಗಳಲ್ಲಿ ಅಧಿಕಾರವನ್ನು ಮತ್ತೆ ಮೈಸೂರ ಅರಸರ ಸುಪರ್ಧಿಗೆ ಒಪ್ಪಿಸಿದರು. ಹೀಗೆ ಮೈಸೂರು ಸಂಸ್ಥಾನದ ಆಪ್ತರಾಗಿದ್ದ ಶ್ರೀ ಚೆಟ್ಟಿಯವರು ಮತ್ತು ಅಸ್ಗರ್ ಅಲಿಯವರ ಸಹಾಯದಿಂದ ಮೈಸೂರಿಗೆ ಬ್ರಿಟಿಷರಿಂದ ಮರಳಿ ಅಧಿಕಾರ ಕೊಡಿಸಲು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿ ಮೈಸೂರು ಸಂಸ್ಥಾನದ ಜನರ ಪಾಲಿಗೆ ಪ್ರಾತಃಸ್ಮರಣೀಯರಾದರು.

masjid-e-asgariಅದೊಮ್ಮೆ ಅಲಿ ಅಸ್ಕರ್ ಅವರ ಪ್ರಾಣ ಸ್ನೇಹಿತರಾಗಿದ್ದ ಕರಮ್ ಖಾನ್ ಅವರು ಮದ್ರಾಸ್‌ನಲ್ಲಿ ನಿಧನರಾದಾಗ, ಅವರನ್ನು ಶಿಯಾ ಸಂಪ್ರದಾಯದ ಪ್ರಕಾರ ಸಮಾಧಿ ಮಾಡಲು ಸೂಕ್ತವಾದ ಸ್ಥಳ ಇಲ್ಲದೇ ಇದ್ದ ಕಾರಣ, ಇಂದಿನ ಹೊಸೂರು ರಸ್ತೆಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಜಮೀನನ್ನು ಖರೀಧಿಸಿ ಶಿಯಾ ಪರ್ಷಿಯನ್ ಸ್ಮಶಾನವನ್ನು ಸ್ಥಾಪಿಸಿ ಅಲ್ಲೇ ತಮ್ಮ ಸ್ನೇಹಿತನ ಸಮಾಧಿ ಮಾಡಿದ್ದರು. ನಂತರ ದಿನಗಳಲ್ಲಿ ತಮ್ಮ ಸಮುದಾಯದವರಿಗೆ ಪ್ರಾರ್ಥನೆ ಮಾಡಲು ಮಸೀದಿಯ ಅವಶ್ಯಕತೆ ಇದೆ ಎಂಬುದನ್ನು ಗಮನಿಸಿ ಇಂದಿನ 1891 ರಲ್ಲಿ ಜಾನ್ಸನ್ ಮಾರ್ಕೆಟ್‌ನ ಬಳಿಯಲ್ಲಿ ಮಸೀದಿಯೊಂದನ್ನು ನಿರ್ಮಿಸಿಸಲು ಅಂದಿನ ಕಾಲಕ್ಕೇ ದೊಡ್ಡ ಮೊತ್ತವಾದ 800 ರೂಪಾಯಿಗಳನ್ನು ಕೊಡುಗೆಯಾಗಿ ಕೊಟ್ಟರೂ ಅಂತಿಮವಾಗಿ ಅವರ ಮರಣಾನಂತರ 1909ರಲ್ಲಿ ಪೂರ್ಣಗೊಂಡ ಆ ಮಸೀದಿಗೆ ಅವರ ನೆನೆಪಿನಲ್ಲೇ ಅದಕ್ಕೆ ಮಸೀದಿ-ಎ-ಅಸ್ಕರಿ ಎಂದು ಹೆಸರಿಸುವ ಮೂಲಕ ಅಲಿ ಅಸ್ಕರ್ ಅವರ ಹೆಸರನ್ನು ಅಜರಾಮರವಾಗಿರಿಸಿದರು. ಇಂದಿಗೂ ಅದು ಬೆಂಗಳೂರಿನ ಏಕೈಕ ದೀರ್ಘಕಾಲದ ಶಿಯಾ ಮಸೀದಿಯಾಗಿ ಉಳಿದಿರುವುದು ಗಮನಾರ್ಹವಾಗಿದೆ.

foud_mirza1891 ರಲ್ಲಿ ವಯೋ ಸಹಜವಾಗಿ ಅವರು ಮರಣ ಹೊಂದಿದ ನಂತರ ಅವರದ್ದೇ ಆದ ಹೊಸೂರಿನ ರಸ್ತೆಯಲ್ಲಿದ್ದ ಸ್ಮಶಾನದಲ್ಲಿ ಅವರನ್ನು ಸಮಾಧಿ ಮಾಡಲಾಯಿತು. ಮೈಸೂರು ಮಹಾರಾಜರ ಕುಟುಂಬದೊಡನೆ ಅವರಿಗಿದ್ದ ನಂಟಿನಿಂದಾಗಿ ನಾಲ್ವಡಿ ಕೃಷ್ಣರಾಜರ ಸಹಪಾಠಿಯಾಗಿದ್ದ ಅವರ ಮೊಮ್ಮಗ ಮಿರ್ಜಾ ಇಸ್ಮಾಯಿಲ್ 1926 ರಿಂದ 1940ರ ವರೆಗೆ ಸರ್. ಎಂ. ವಿಶ್ವೇಶ್ವರಯ್ಯನವರ ನಂತರದ ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದರು. ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗನಾದ ಖ್ಯಾತ ಪಶುವೈದ್ಯರಾದ ಡಾ. ಹಸ್ನೇನ್ ಮಿರ್ಜಾ ಅವರೂ ಸಹಾ ತಮ್ಮ ಮುತ್ತಾನನಂತೆಯೇ ಕುದುರೆಯ ಬಗ್ಗೆ ಅಪಾರವಾದ ಪ್ರೀತಿ ಹೊಂದಿದ್ದು ಅವರೂ ಸಹಾ ಉತ್ತಮ ಕುದುರೆ ಸವಾರರಾಗಿದ್ದಲ್ಲದೇ, ಬೆಂಗಳೂರಿನ ಜಕ್ಕೂರಿನ ಬಳಿ ತಮ್ಮದೇ ಆದ ಕುದುರೆ ಲಾಯವನ್ನೂ ಹೊಂದಿದ್ದಾರೆ. ಇನ್ನು ಅವರ ಮಕ್ಕಳಾದ ಫೌದ್ ಮಿರ್ಜಾ  ಮತ್ತು ಅಲಿ ಆಸ್ಕರ್‌  ಮಿರ್ಜಾ ಅವರಿಗೂ ಬಾಲ್ಯದಿಂದಲೂ ಕುದುರೆ ಸವಾರಿಯನ್ನು ಕಲಿಸಿದ ಕಾರಣ,ಹಿರಿಯ ಮಗ ಫೌದ್ ಮಿರ್ಜಾ ಇಂದು ಭಾರತದ ಪರ ಓಲಂಪಿಕ್ಸಿನಲ್ಲಿ ಕುದುರೆ ಸವಾರಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಮೂಲಕ ಆಗಾ ಅಲಿ ಅಸ್ಕರ್ ಅವರ ಆರನೇ ತಲೆಮಾರನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯವಾಗಿದೆ.

sadut_Parkಬೆಂಗಳೂರಿನಲ್ಲಿ ಅಲಿ ಅಸ್ಕರ್ ಅವರ ನೆನಪು ಇನ್ನೂ ಸಹಾ ಅಚ್ಚಳಿಯದೇ ಉಳಿದಿದ್ದು, ರಿಚ್ಮಂಡ್ ರಸ್ತೆಯ ಬಳಿಯ ಅರಬ್ ಲೈನ್ಸ್ ನಲ್ಲಿ ಅವರ ತಂದೆಯವರ ಹೆಸರಿನಲ್ಲಿ ಅಗಾ ಅಬ್ದುಲ್ಲಾ ರಸ್ತೆ ಇದ್ದರೆ, ಅವರ ಗೆಳೆಯ ಕರಮ್ ಖಾನ್ ಅವರ ಮೊಮ್ಮಗಳು ಸಾದುತ್-ಉನ್-ನಿಸಾ ಅವರ ನೆನಪಿನಾರ್ಥವಾಗಿ ಸಾದುತ್ ಡಿಸ್ಪೆನ್ಸರಿಯ ಪಳಿಯುಳಿಗೆ ಹಾಗೆಯೇ ಇದೇ. ಸಾದುತ್ ಪ್ರಥಮ ದರ್ಜೆ ಕುದುರೆ ಸವಾರಳು ಎಂಬ ಖ್ಯಾತಿಯನ್ನು ಹೊಂದಿದ್ದಲ್ಲದೇ, ಆಯುಧಗಳೊಂದಿಗೆ ಕ್ರ್ಯಾಕ್ ಶಾಟ್ ಮಾಡುವಂತಹ ದಿಟ್ಟೆಯಾಗಿದ್ದಳು. ಜಾನ್ಸನ್ ಮಾರ್ಕೆಟ್ ಮಾಂಸದ ಅಂಗಡಿಗಳ ಮೂಲೆಯಲ್ಲಿ ಅವರ ಹೆಸರಿನಲ್ಲೇ ಇಂದಿಗೂ ಸಾದುತ್ ಗಾರ್ಡನ್ಸ್ ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟಿದೆ. ಅಸ್ಕರ್ ಅಲಿಯ ಅಣ್ಣ ಆಗಾ ಅಬ್ಬಾಸ್ ಅಲಿಯ ಹೆಸರನ್ನು ಹಲಸೂರಿನ ರಸ್ತೆಯೊಂದಕ್ಕೆ ನಾಮಕರಣ ಮಾಡಲಾಗಿದೆ.

WhatsApp Image 2023-07-26 at 05.59.35ಇಂದಿನ ಜನಾಂಗ ಭಾರತದಿಂದ ವಿದೇಶಗಳಿಗೆ ವಲಸೆ ಹೋಗಿ ನೆಲೆಯನ್ನು ಕಂಡುಕೊಳ್ಳುತ್ತಿದ್ದರೆ, ಅಂದು ಅಗಾ ಅಲಿ ಆಸ್ಕರ್ ಹೊಸ ವ್ಯಾಪಾರೀ ಅವಕಾಶಗಳನ್ನು ಹುಡುಕಿಕೊಂಡು ಭಾರತಕ್ಕೆ ಅದರಲ್ಲೂ ಬೆಂಗಳೂರಿಗೆ ಬಂದು ಯಶಸ್ವೀ ವ್ಯಾಪಾರಿಗಳಾಗಿದ್ದಲ್ಲದೇ, ಅಂದಿನ ಮೈಸೂರು ಸಂಸ್ಥಾನಕ್ಕೆ ಮತ್ತು ಬೆಂಗಳೂರಿಗೆ ಅಪಾರವಾದ ಕೊಡುಗೆಗಳನ್ನು ಕೊಟ್ಟಿದ್ದಲ್ಲದೇ ಅವರ ಆರನೇ ತಲೆಮಾರಿನವರೂ ಸಹಾ ಇಂದಿಗೂ ಬೆಂಗಳೂರಿನಲ್ಲೇ ಉಳಿಯುವ ಮೂಲಕ ತಮ್ಮ ಮತ್ತು ತಮ್ಮ ಕುಟುಂಬದ ಹೆಸರನ್ನು ಆಚಂದ್ರಾರ್ಕವಾಗಿ ಉಳಿಯುವಂತೆ ಮಾಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಇನ್‌ಫೆಂಟ್ರಿ ರಸ್ತೆಯಿಂದ ಕನ್ನಿಂಗ್‌ಹ್ಯಾಮ್ ರಸ್ತೆಗೆ ಹೋಗುವ ಮಾರ್ಗಕ್ಕೆ ಅಗಾ ಅಲಿ ಅಸ್ಕರ್ ಅವರಂತಹ ಪ್ರಾರ್ಥಸ್ಮರಣೀಯರ ಹೆಸರನ್ನು ಇಡುವ ಮೂಲಕ ಭಾರತ ಮತ್ತು ಪರ್ಷಿಯಾ ದೇಶದ ನಡುವೆ ಸುಮಧುರ ಬಾಂಧ್ಯವ್ಯವನ್ನು ವೃಧ್ಧಿಗೊಳಿಸಿದೇ ಎಂದರೂ ತಪ್ಪಾಗದು ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

One thought on “ಅಲಿ ಆಸ್ಕರ್ ರಸ್ತೆ

Leave a comment