ಹಿಮವದ್ ಗೋಪಾಲಸ್ವಾಮಿ ಬೆಟ್ಟ

ನಮ್ಮ ಸನಾತನ ಧರ್ಮದಲ್ಲಿ 33ಕೋಟಿ ದೇವರುಗಳು ಇದ್ದು ಅವರವರ ಭಾವಕ್ಕೆ ಆವರ ಭಕುತಿ ಎನ್ನುವಂತೆ ಒಂದೊಂದು ದೇವರನ್ನು ಪೂಜಿಸುವ ಸಂಪ್ರದಾಯವಿದ್ದರೂ ಅಗ್ರ ಪೂಜೆ ವಿಘ್ನವಿನಾಶಕ ವಿನಾಯಕನಿಗೆ ಆದರೆ, ಅದರ ನಂತರದ ಸ್ಥಾನ ಶ್ರೀ ಮಹಾವಿಷ್ಣುವೇ ಮನುಷ್ಯ ಜನ್ಮದಲ್ಲಿ ಅವತಾರ ಎತ್ತಿದ ಶ್ರೀರಾಮ ಮತ್ತು ಶ್ರೀಕೃಷ್ಣರಿಗೆ ಎಂದರೂ ತಪ್ಪಾಗದು. ಅದರಲ್ಲೂ ಶ್ರೀಕೃಷ್ಣ ಎಂದರೆ, ಗಂಡಸರು, ಹೆಂಗಸರು, ಚಿಕ್ಕವರು ದೊಡ್ಡವರು ಎಂಬ ಬೇಧವಿಲ್ಲದೇ ಅಬಾಲವೃದ್ಧರಾದಿಯಾಗಿ ಭಕ್ತಿಯಿಂದ ಒಪ್ಪಿ ಮತ್ತು ಅಪ್ಪಿಕೊಂಡಿರುವ ದೇವರು ಎಂದರೂ ಅತಿಶಯವಲ್ಲ. ನಾವಿಂದುದು ನಮ್ಮ ದೇಗುಲ ಮಾಲಿಕೆಯಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಈ ಮೂರೂ ರಾಜ್ಯಗಳ ಗಡಿಯಲ್ಲಿರುವ ಮತ್ತು ಈ ಮೂರೂ ರಾಜ್ಯಗಳ ಭಕ್ತಾದಿಗಳಿಗೆ ತನ್ನ ಆಭಯ ಹಸ್ತವನ್ನು ಚಾಜಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿರುವ ವೇಣುಗೋಪಾಲನ ದರ್ಶನ ಮಾಡೋಣ ಬನ್ನಿ.

ಕರ್ನಾಟಕದದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದ ತಮಿಳುನಾಡಿನ ಉದಕಮಂಡಲ ಅರ್ಥಾತ್ ಊಟಿಯ ಮಾರ್ಗದಲ್ಲಿಸುಮಾರು 60 ಕಿಮೀ ಪ್ರಯಾಣಿಸುತ್ತಿದ್ದಂತೆಯೇ ಗುಂಡ್ಲುಪೇಟೆ ಎಂಬ ಪಟ್ಟಣ ಸಿಗುತ್ತದೆ ಅಲ್ಲಿಂದ ಸುಮಾರು ಐದಾರು ಕಿಮೀ ದೂರದಲ್ಲಿ ಸಿಗುವ ಹಂಗಳ ಎಂಬ ಗ್ರಾಮದಲ್ಲಿ ಕಾಣಸಿಗುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸ್ವಾಗತ ಎಂಬ ಕಮಾನಿನಲ್ಲಿ ಬಲಗಡೆ ತಿರುಗುತ್ತಿದ್ದಂತೆಯೇ, ವರ್ಷವಿಡೀ ಮಂಜಿನಿಂದ ಆವೃತವಾಗಿರುವ ಸಾಲು ಸಾಲು ಬೆಟ್ಟಗುಡ್ಡಗಳ ಸಾಲು ಸಾಲು ಕಣ್ಣಿಗೆ ಕಾಣಸಿಗುತ್ತದೆ. ಹೇಳಿ ಕೇಳಿ ಬಂಡಿಪುರದ ರಕ್ಷಿತ ಅರಣ್ಯ ಪ್ರದೇಶಕ್ಕೆ ಸೇರಿರುವ ಪ್ರದೇಶವಾಗಿರುವುದರಿಂದ ದಟ್ಟವಾದ ಕಾಡುಗಳಿಂದ ಆವೃತ್ತವಾಗಿ ಸುತ್ತಮುತ್ತಲು ಕಣ್ಣು ಹಾಯಿಸಿದಷ್ಟೂ ನಿತ್ಯಹರಿದ್ವರ್ಣಗಳಿಂದ ಕೂಡಿದ ಪ್ರದೇಶ ನಿಜಕ್ಕೂ ನಯನ ಮನೋಹರವಾಗಿದೆ.

archಹೀಗೆ ಹಂಗಳದಿಂದ ಸುಮಾರು 10 ಕಿಮಿ ದೂದ ಪ್ರಯಾಣಿಸಿದಲ್ಲಿ ಪುರಾಣ ಪ್ರಸಿದ್ದವಾದ ಗೋಪಾಲಸ್ವಾಮಿಯ ಬೆಟ್ಟದ ತುದಿಯಲ್ಲಿ ಸುಂದರವಾದ ಶ್ರೀ ವೇಣುಗೋಪಾಲನ ಸನ್ನಿದಿಯನ್ನು ತಲುಪಬಹುದಾಗಿದೆ. ದೇವಾಲಯ ಕರ್ನಾಟಕದ ಭಾಗಕ್ಕೆ ಸೇರಿದ್ದರೆ, ದೇವಾಲಯದ ಬಲಭಾಗವೆಲ್ಲಾ ತಮಿಳುನಾಡಿನ ಮಧುಮಲೆ ರಕ್ಷಿತ ಅರಣ್ಯಪ್ರದೇಶವಾಗಿದ್ದು, ದೇವಾಲಯದ ಹಿಂದಿನ ಭಾಗ ಕೇರಳ ವೈನಾಡಿಗೆ ಸೇರಿದೆ. ಈ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅತಿ ಎತ್ತರದ ಶಿಖರವಾಗಿರುವುದರಿಂದ ಈ ಪ್ರದೇಶದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವು ಬಹಳ ರಮಣೀಯವಾಗಿ ಕಾಣಿಸುವ ಕಾರಣ, ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನದ ಮತ್ತು ಮದುಮಲೈಗೆ ಸೇರಿರುವ ಕಾಡುಗಳಲ್ಲಿ ಆಹಾರವನ್ನು ಅರಸಿ ಹಿಂಡು ಹಿಂಡಿನಲ್ಲಿ ಬರುವ ಆನೆಗಳು, ಜಿಂಕೆಗಳು, ಮೊಲಗಳು, ಕಾಡು ಹಂದಿ ಮುಂತಾದ ವನ್ಯಮೃಗಗಳು ಕಾಣಸಿಗುವುದರಿಂದ ಮತ್ತು ಹಿಮವದ್ ಎಂಬ ಹೆಸರಿಗೆ ಅನ್ವರ್ಥವಾಗಿರುವಂತೆ ವರ್ಷವಿಡೀ ದಟ್ಟವಾದ ಮಂಜಿನಿಂದ ಆವೃತವಾಗಿ ಅತ್ಯಂತ ತಣ್ಣಗೆ ಇರುವ ಪ್ರದೇಶವಾಗಿರುವ ಕಾರಣ ಪ್ರವಾಸಿಗರು ಇಲ್ಲಿಗೆ ಬರಲು ಮುಗಿಬೀಳುತ್ತಾರೆ.

ದಂತಕಥೆಯ ಪ್ರಕಾರ ಸಪ್ತಋಷಿಗಳಲ್ಲಿ ಒಬ್ಬರಾದ ಅಗಸ್ತ್ಯರು ಭಗವಾನ್ ವಿಷ್ಣುವಿನನ್ನು ಒಲಿಸಿಕೊಳ್ಳುವ ಸಲುವಾಗಿ ಘನಘೋತವಾದ ತಪಸ್ಸು ಮಾಡಿ ಆತನನ್ನು ಒಲಿಸಿಕೊಂಡು ಇದೇ ಸ್ಥಳದಲ್ಲಿ ಶಾಶ್ವತವಾಗಿ ನೆಲೆಸುತ್ತೇನೆ ಎಂದು ಅಭಯಹಸ್ತ ನೀಡಿದ್ದು ಇದೇ ಸ್ಥಳ ಎಂದು ಪುರಾಣಗಳಲ್ಲಿ ಕಾಣಬಹುದಾಗಿದೆ. ಇದು ಆರಾಧನೆ ಮತ್ತು ತಪಸ್ಸಿನ ಸ್ಥಳವಾಗಿರುವುದರಿಂದ ಇದನ್ನು ಸಂಸ್ಕೃತದಲ್ಲಿ ಹಂಸತೀರ್ಥ ಅರ್ಥಾತ್ ಹಂಸಗಳ ಸರೋವರ ಎಂದು ಕರೆಯಲಾಗುತ್ತಿತ್ತು. ಬಹಳ ಶುಭ್ರತೆಗೆ ಮತ್ತು ನೀರು ಬರೆಸಿದ ಹಾಲಿನಲ್ಲಿ ಕೇವಲ ಹಾಲಿನ ಅಂಶವನ್ನು ಮಾತ್ರವೇ ಹೀರಿಕೊಂಡು ನೀರನ್ನು ಹಾಗೆಯೇ ಬಿಡುತ್ತದೆ ಎಂಬ ನಂಬಿಕೆಯುಳ್ಳ ಹಂಸಕ್ಕೆ ಹಿಂದೂ ಧರ್ಮದಲ್ಲಿ ಬಹಳ ಪೌರಾಣಿಕ ಪ್ರಾಮುಖ್ಯತೆಯಿದ್ದು, ಜ್ಞಾನ, ಶಾಂತಿ ಮತ್ತು ಮೋಕ್ಷವನ್ನು ಸಂಕೇತಿಸುತ್ತದೆ ಅಲ್ಲದೇ ಹಂಸಕ್ಷೀರ ನ್ಯಾಯ ಎಂದೂ ಪ್ರಸಿದ್ಧವಾಗಿದೆ.

Temple_atop_the_hillಇಂತಹ ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ಹೊಯ್ಸಳರ ಕಾಲದಲ್ಲಿ ಸುಮಾರು 1315 ರಲ್ಲಿ ರಾಜ ಚೋಳ ಬಲ್ಲಾಳನು ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ಈ ಸುಂದರವಾದ ಸಾಂಪ್ರದಾಯಿಕ ದೇವಾಲಯವನ್ನು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ನಂತರದ ದಿನಗಳಲ್ಲಿ ಮೈಸೂರಿನ ಒಡೆಯರ್ ವಂಶಸ್ಥರು ದೇವಾಲಯದ ಉಸ್ತುವಾರಿಯನ್ನು ತೆಗೆದುಕೊಂಡು ಕಾಲ ಕಾಲಕ್ಕೆ ಜೀರ್ಣೋದ್ಧಾರವನ್ನು ಮಾಡಿಸುತ್ತಾ ಬಂದಿದ್ದು, ಸದ್ಯಕ್ಕೆ ಇದು ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿಯ ಸುಪರ್ದಿಯಲ್ಲಿ ಅತ್ಯಂತ ಸ್ವಚ್ಚವಾಗಿ ನಿರ್ವಹಣೆಯಲ್ಲಿದೆ.

downloadಸುಮಾರು 20-30 ಮೆಟ್ಟಿಲುಗಳನ್ನು ಹತ್ತಿ ದೇವಾಲಯದ ಪ್ರಾಂಗಣಕ್ಕೆ ಪ್ರವೇಶಿಸುತ್ತಿದ್ದಂತೆಯೇ ಸುಂದರವಾದ ದೇವಾಲಯವನ್ನು ಕಾಣಬಹುದಾಗಿದೆ. ಎಲ್ಲಾ ದೇವಾಲಯಗಳಂತೆಯೇ ಇಲ್ಲಿಯೂ ಸಹಾ ಇಲ್ಲಿಯೂ ಸಹಾ. ಮುಖ ಮಂಟಪ (ಒಳ ಮುಖಮಂಟಪ) ಧ್ವಜಸ್ತಂಭ ಮತ್ತು ಬಲಿ ಪೀಠ (ತ್ಯಾಗ ಬಲಿಪೀಠ) ಇದ್ದು . ಮುಖ ಮಂಟಪದ ಮುಂಭಾಗದ ಗೋಡೆಯ ಮೇಲೆ ಭಗವಾನ್ ವಿಷ್ಣುವಿನ ದಶಾವತಾರದ ಶಿಲ್ಪದ ಮಧ್ಯದಲ್ಲಿ ಅತ್ಯಂತ ಸುಂದರವಾಗಿ ಕೃಷ್ಣಾವತಾರವನ್ನು ಚಿತ್ರಿಸಿದ್ದಾರ. ಇನ್ನು ಗರ್ಭಗುಡಿಯಲ್ಲಿ ಮರದ ಕೆಳಗೆ ಸುಮಾರು 6 ಅಡಿ ಎತ್ತರದ ಎಡಗೈ ಹೆಬ್ಬೆರಳು ಮತ್ತು ಬಲಭಾಗದ ಮಧ್ಯೆ ಕೊಳಲನ್ನು ಹಿಡಿದು ನರ್ತನ ಭಂಗಿಯಲ್ಲಿರುವ ಸುಂದರವಾದ ಶ್ರೀಕೃಷ್ಣನ ವಿಗ್ರಹವಿದೆ. ವಿಗ್ರಹದ ಹಿಂದೆ ಸರಳವಾದ ಆದರೆ ಭವ್ಯವಾದ ಪ್ರಭಾವಳಿ ಇದ್ದು ಅದರಲ್ಲಿ ಶ್ರೀಕೃಷ್ಣನ ಸ್ನೇಹಿತರ ಜೊತೆ ಅತನ ಪತ್ನಿಯರಾದ ರುಕ್ಮಿಣಿ ಮತ್ತು ಸತ್ಯಭಾಮ, ಹಸುಗಳು ಮತ್ತು ಗೋಪಾಲಕರಲ್ಲದೇ ಶ್ರೀಕೃಷ್ಣನ ಅವತಾರದ ಹಲವಾರು ಇತರ ಪಾತ್ರಗಳನ್ನು ಕಾಣಬಹುದಾಗಿದೆ.

ಈ ದೇವಾಲಯದ ಪ್ರಮುಖ ಆಕರ್ಷಣೆಯೆ ದೇವಾಲಯದ ಮೇಲಿರುವ ಶಿಖರ ಎಂದರು ತಪ್ಪಾಗದು. ವರ್ಷವಿಡೀ ಮೋಡಗಳಿಂದ  ಆವೃತವಾಗಿರುವ ಈ ಪ್ರದೇಶದಲ್ಲಿ ದೇವಾಲಯದ ಶಿಖರದ ಮೇಲಿರುವ ಕಳಸದಿಂದ ಹಿಮ ಕರಗಿ ನೀರಾಗಿ ಅದು ಗರ್ಭಗುಡಿಯ ಬಾಗಿಲಿನಿಂದ ನಿರಂತರವಾಗಿ ಸುರಿಯುತ್ತಿರುತ್ತದೆ. ಇಡೇ ನೀರನ್ನೇ ದೇವಾಲಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ತೀರ್ಥರೂಪದಲ್ಲಿ ಕೊಡುವುದಲ್ಲದೇ, ಇದೇ ನೀರನ್ನು ಇಲ್ಲಿನ ಅರ್ಚಕರು ಭಕ್ತಾದಿಗಳ ಮೇಲೆ ಸಿಂಪಡಿಸುವುದೇ ಇಲ್ಲಿನ ವಿಶೇಷವಾಗಿದೆ. ಬೆಟ್ಟದ ತಪ್ಪಲಿನಲ್ಲಿರುವ ಹಳ್ಳಿಯಲ್ಲಿ ವಾಸವಾಗಿರುವ ಈ ದೇವಾಲಯದ ಅರ್ಚಕರುಗಳು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ದಿನನಿತ್ಯವೂ ಸ್ವಾಮಿಯ ಕೈಂಕರ್ಯಗಳನ್ನು ನಡೆಸಿಕೊಂಡು ಹೋಗುತ್ತಿರುವುದಲ್ಲದೇ, ಅತ್ಯಂತ ತಾಳ್ಮೆಯಿಂದ ಸ್ಥಳಕ್ಕೆ ಸಂಬಂಧಿಸಿದ ಐತಿಹ್ಯಗಳನ್ನು ವಿವರಿಸುವುದು ಗಮನಾರ್ಹವಾಗಿದೆ. ಇನ್ನು ಈ ದೇವಾಲಯದಲ್ಲಿ ಪ್ರಸಾದ ರೂಪದಲ್ಲಿ ಕೊಡುವ ಪುಳಿಯೋಗರೆಯ ರುಚಿ ಬಹುಶಃ ಬೇರೆಲ್ಲೂ ಸಿಗದು ಎಂದರೂ ತಪ್ಪಾಗದು.

ಶ್ರೀವೇಣುಗೋಪಾಲ ಸ್ವಾಮಿಯ ದಿವ್ಯದರ್ಶನವನ್ನು ಪಡೆದು ದೇವಾಲಯದಿಂದ ಹೊರಬರುತ್ತಿದ್ದಂತಯೇ, ದೇವಾಲಯದ ಸುತ್ತಲೂ ಬೆಟ್ಟಗಳ ಮೇಲಿನ ಬಯಲು ಪ್ರದೇಶಗಳು ಸೊಂಪಾದ ಹುಲ್ಲಿನಿಂದ ಆವೃತವಾಗಿದ್ದು ಅದೃಷ್ಟವಿದ್ದಲ್ಲಿ ಒಮ್ಮೊಮ್ಮೆ ಆನೆಗಳು, ಜಿಂಕೆಗಳು ಮತ್ತು ಮೊಲಗಳು ಕಾಣಸಿಗುತ್ತವೆ. ಅತ್ಯಂತ ಎತ್ತರವಾದ ಪ್ರದೇಶವಾಗಿರುವ ಕಾರಣ, ಹಿಮಾಚ್ಚಾದಿನ ಮೂಡಗಳು ಅಗ್ಗಾಗ್ಗೆ ನಮ್ಮನ್ನು ಸ್ಪರ್ಶಿಸುವ ಮೂಲಕ ಆಹ್ಲಾದಕರ ಅನುಭವವನ್ನು ಕೊಡುತ್ತದೆ. ವರ್ಷವಿಡೀ ಭಕ್ತಾದಿಗಳಿಂದ ತುಂಬಿರುವ ಈ ಪ್ರದೇಶದಲ್ಲಿ ಒಂದು ಕಾಗೆಯೂ ಸಹಾ ಕಾಣದೇ ಹೋದದ್ದನ್ನು ಗಮನಿಸಿ ಆರ್ಚಕರ ಬಳಿ ವಿಚಾರಿಸಿದಾಗ, ದಂತಕಥೆಯ ಪ್ರಕಾರ ಬಹಳ ಹಿಂದೆ ಕಾಗೆಯೊಂದು ಇಲ್ಲಿನ ಕೊಳವೊಂದರಲ್ಲಿ ಸ್ನಾನ ಮಾಡಿದಾಗ ಅದು ಹಂಸವಾಗಿ ಮಾರ್ಪಟ್ಟಿತಂತೆ ಹಾಗಾಗಿ ಅಂದಿನಿಂದ ಈ ಪ್ರದೇಶದಲ್ಲಿ ಕಾಗೆಗಳು ಕಾಣುಸುವುದಿಲ್ಲ ಎಂದು ಹೇಳಿದಾಗ ಹಂಸತೀರ್ಥ ಎಂಬ ಹೆಸರು ಹೇಗೆ ಬಂದಿತು ಎಂಬುದು ಮನದಟ್ಟಾಗುತ್ತದೆ.

ಅತ್ಯಂತ ರಮಣೀಯ ತಾಣವಾಗಿದ್ದ ಈ ಪ್ರದೇಶದಲ್ಲಿ ದೇವಲಯದ ಕೂಗಳತೆಯ ದೂರದಲ್ಲೇ ಸರ್ಕಾರೀ ಪ್ರವಾಸೀ ಮಂದಿರವಿದ್ದು, ಪ್ರವಾಸಿಗಳು ಅರಣ್ಯ ಇಲಾಖೆಯಲ್ಲಿ ಮುಂಗಡವಾಗಿ ಕಾಯ್ದಿರಿಸುವ ವ್ಯವಸ್ಥೆ ಇಲ್ಲಿತ್ತು. ಅತ್ಯಂತ ಸುಂದರವಾಗಿದ್ದ ಈ ಪ್ರದೇಶ ದಿನದಿಂದ ದಿನಕ್ಕೆ ಪ್ರಖ್ಯಾತವಾಗುತ್ತಿದ್ದಂತೆಯೇ ಪ್ರವಾಸಿಗರು ಬರುವ ಸಂಖ್ಯೆಯೂ ಹೆಚ್ಚಾಗಿದ್ದಲ್ಲದೇ, ಇಂತಹ ಸುಂದರ ಪೌರಾಣಿಕ ಹಿನ್ನಲೆಯುಳ್ಳ ಪ್ರದೇಶ ಎಂಬುದನ್ನೂ ಮರೆತು ಹೊತ್ತಲ್ಲದ ಹೊತ್ತಿನಲ್ಲಿ ಇಲ್ಲಿಗೆ ಬಂದ ಪ್ರವಾಸಿಗರು ಅನೈತಿಕ ಚಟುವಟಿಗೆಗಳಲ್ಲಿ ತೊಡಗಿದ್ದಲ್ಲದೇ, ನೀರು ಕುಡಿದ ಪ್ಲಾಸ್ಟಿಕ್ ಬಾಟೆಲ್, ಮದ್ಯದ ಬಾಟಲ್ಲುಗಳನ್ನು ಎಲ್ಲೆಂದರೆಲ್ಲಿ ಹಾಕುವ ಮೂಲಕ ಪರಿಸರವನ್ನು ಹಾಳುಮಾಡುತ್ತಿದ್ದದ್ದನ್ನು ಗಮನಿಸಿದ ಅರಣ್ಯ ಇಲಾಖೆ, ಈ ಬೆಟ್ಟಕ್ಕೆ ಖಾಸಗೀ ವಾಹನಗಳ ಪ್ರವೇಶವನ್ನು ಕೆಲವರ್ಶಗಳ ಹಿಂದೆ ಸಂಪೂರ್ಣವಾಗಿ ನಿಷೇಧಿಸಿರುವುದು ಅಬಿನಂದನಾರ್ಹವಾಗಿದೆ.

ಹಂಗಳದ ಬಳಿ ಇರುವ ಚಕ್ ಪೋಸ್ಟ್ ಬಳಿ ತಮ್ಮ ಖಾಸಗಿ ವಾಹನಗಳನ್ನು ನಿಲ್ಲಿಸಿ ಅಲ್ಲಿಂದ ಬೆಟ್ಟದ ತುದಿಯವರೆಗೆ ಅರಣ್ಯ ಇಲಾಖೆಯೇ ವ್ಯವಸ್ಥೆ ಮಾಡಿರುವ ಮಿನಿ ಬಸ್ಸಿನಲ್ಲಿ ಪ್ರತಿಯೊಬ್ಬ ಪ್ರಯಾಣಿಕರಿಗೆ 60 ರೂಪಾಯಿ ಟಿಕೆಟ್ ಮೂಲಕ ಹೋಗುವ ವ್ಯವಸ್ಥೆ ಇದ್ದು, ಹೂವು, ಹಣ್ಣು,ಕಾಯಿ ಮತ್ತು ಊದುಕಡ್ಡಿಯಂತಹ ದೇವರ ಪೂಜೆಗೆ ಬಳಸುವ ಸಾಮಗ್ರಿಗಳನ್ನು ಮಾತ್ರಾ ತೆಗೆದುಕೊಂಡು ಹೋಗಬಹುದಾಗಿದ್ದು, ಇತರೇ ಆಹಾರ ಪದಾರ್ಥಗಳನ್ನು ನಿಷೇಧಿಸಲಾಗಿದೆ. ಈ ಪ್ರದೇಶ ಪ್ಲಾಸ್ಟಿಕ್ ಮುಕ್ತಪ್ರದೇಶವಾಗಿದೆ. ಪ್ರವಾಸಿಗರಿಗೆ ಬೆಳಿಗ್ಗೆ 8:30 ರಿಂದ ಸಂಜೆ 4ರ ವರೆಗೆ ಮಾತ್ರವೇ ಈ ಪ್ರದೇಶಕ್ಕೆ ಬರಲು ಅವಕಾಶ ಇದ್ದು ರಾತ್ರಿಯ ಹೊತ್ತು ತಂಗುವುದನ್ನು ಖಡ್ಡಾಯವಾಗಿ ನಿಷೇಧಿಸಲಾಗಿದೆ.

ವರ್ಹವಿಡೀ ಅತ್ಯಂತ ತಂಪಾದ ಆಹ್ಲಾದಕರ ಹಿತಾನುಭವ ನೀಡುವ ಪ್ರದೇಶವಾಗಿದ್ದರೂ, ಈ ದೇವಾಲಯಕ್ಕೆ ಭೇಟಿ ನೀಡಲು ಚಳಿಗಾಲ ಮತ್ತು ಮಳೆಗಾಲ ಅತ್ಯಂತ ಉತ್ತಮವಾಗಿದ್ದು, ಇನ್ನು ವಾರಾಂತ್ಯದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವ ಕಾರಣ, ವಾರದ ಉಳಿದ ದಿನಗಳಲ್ಲಿ ಇಲ್ಲಿಗೆ ಬರುವುದು ಸೂಕ್ತ ಎನಿಸುತ್ತದೆ. ಈ ದೇವಾಲಯದಲ್ಲಿ ಅನ್ನದಾನ ವ್ಯವಸ್ಥೆ ಇದ್ದು ಕುಡಿಯಲು ನೀರನ್ನು ಕೊಂಡೊಯ್ಯುವುದು ಉತ್ತಮವಾಗಿದೆ.

ಹಿಮವದ್ ಗೋಪಾಲಸ್ವಾಮಿಯ ಬೆಟ್ಟದ ಬಗ್ಗೆ ಇಷ್ಟೆಲ್ಲಾ ಮಾಹಿತಿ ತಿಳಿದ ಮೇಲೆ ಇನ್ನೇಕೆ ತಡಾ, ಸ್ವಲ್ಪ ಸಮಯ ಮಾಡಿಕೊಂಡು ಕುಟುಂಬ ಸಮೇತ ಇಲ್ಲಿಗೆ ಭೇಟಿ ನೀಡಿ ಸ್ವಾಮಿಯ ದರ್ಶನ ಮಾಡುವುದಲ್ಲದೇ, ಇಲ್ಲಿನ ಸುಂದರವಾದ ರಮಣೀಯ ಪ್ರಕೃತಿ ಸೌಂದರ್ಯವನ್ನು ಆಹ್ಲಾದಿಸಿ ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

One thought on “ಹಿಮವದ್ ಗೋಪಾಲಸ್ವಾಮಿ ಬೆಟ್ಟ

Leave a reply to Anandi Neelakantan Cancel reply