ನಮ್ಮ ಸನಾತನ ಧರ್ಮದ ಸಂಸ್ಕೃತ ಭಾಷೆ ಪ್ರಪಂಚದ ಎಲ್ಲಾ ಭಾಷೆಗಳಿಗೆ ಮೂಲ ಎನ್ನುವ ವಿಷಯ ನಿರ್ವಿವಾದವೇ ಆಗಿದ್ದರೂ, ಇತ್ತೀಚಿನ ದಿನಗಳಲ್ಲಿ ಅಂತಹ ಶ್ರೀಮಂತ ಭಾಷೆಯನ್ನು ಮೃತಭಾಷೆ ಎಂಬ ಹಣೆಬರಹ ಕಟ್ಟಿ ಮೂಲೆ ಗುಂಪು ಮಾಡಿರುವುದು ಬೇಸರದ ಸಂಗತಿಯೇ ಸರಿ. ಶಿರಸಿಯ ಬಳಿಯ ಒಬ್ಬ ಸಂಪ್ರದಾಯಸ್ಥ ಸಾಧಾರಣ ಕುಟುಂಬದ ಹುಡುಗನೊಬ್ಬ ಅದೇ ಸಂಸ್ಕೃತ ಭಾಷೆಯನ್ನೇ ಅಭ್ಯಾಸ ಮಾಡಿಕೊಂಡು 80ರ ದಶಕದಲ್ಲಿ ತನ್ನ ಬದುಕನ್ನು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದು, ವೃತ್ತಿ ಜೀವನದಲ್ಲಿ ಬಂದ ಎಲ್ಲಾ ರೀತಿಯ ಅಡೆ ತಡೆಗಳನ್ನೆಲ್ಲವನ್ನೂ ಮೆಟ್ಟಿನಿಂತು 4 ದಶಕಗಳಿಂದಲೂ ಜನಾನುರಾಗಿಯಾಗಿ ಹತ್ತಾರು ಸಂಘ ಸಂಸ್ಥೆಗಳಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆಯುವ ಮಟ್ಟಿಗೆ ಬೆಳೆದು ನಿಂತಿರುವುದು ನಿಜಕ್ಕೂ ಸಾಹಸವೇ ಸರಿ. ಈ ಶಿಕ್ಷಕರ ದಿನಾಚರಣೆಯಂದು ಬೆಂಗಳೂರಿನ ಪ್ರಸಿದ್ಧ ವಿದ್ಯಾಸಂಸ್ಶೆಗಳಾದ ಎಂ.ಇ.ಎಸ್, ಗಾಂಧೀನಗರ, ಶೇಷಾದ್ರಿಪುರ ಮತ್ತು ಅಂತಿಮವಾಗಿ ಬಿಇಎಲ್ ವಿದ್ಯಾಸಂಸ್ಥೆಯಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಶ್ರೀ ಶ್ರೀಪಾದ ಹೆಗಡೆ ಎಲ್ಲರ ಪ್ರೀತಿಯ SMH ಆವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಮಾಡಿಕೊಳ್ಳೋಣ ಬನ್ನಿ.

ಉತ್ತರ ಕನ್ನಡ ಶಿರಸಿ ತಾಲ್ಲೂಕಿನ ನೇಗಾರ್ ಎಂಬ ಕುಗ್ರಾಮದ ಸಂಪ್ರದಾಯಸ್ಥ ಕುಟುಂಬದವರಾದ ಶ್ರೀ ಮಹಾಬಲೇಶ್ವರ ಹೆಗಡೆ ಮತ್ತು ಶ್ರೀಮತಿ ಹೇಮಾವತಿ ಹೆಗಡೆ ದಂಪತಿಗಳಿಗೆ 04-02-1957ರಲ್ಲಿ ಗಂಡು ಮಗು ಜನನವಾದಾಗ, ಅದು ತಮ್ಮ ಕುಲದೇವರ ವರಪ್ರಸಾದವೇ ಸರಿ ಎಂದು ಭಾವಿಸಿ ಶ್ರೀಪಾದ ಹೆಗಡೆ ಎಂದು ಹೆಸರಿಸುತ್ತಾರೆ. ಮನೆಯೇ ಮೊದಲ ಪಾಠಶಾಲೆ ತಂದೆ ತಾಯಿಯರೇ ಮೊದಲ ಗುರು ಎನ್ನುವಂತೆ, ಹೇಳೀ ಕೇಳೀ ಸಂಪ್ರದಾಯಸ್ಥ ಕುಟುಂಬವಾದ್ದರಿಂದ, ನೀರಿನಲ್ಲಿರುವ ಮೀನು ಸಹಜವಾಗಿಯೇ ಈಜನ್ನು ಕಲಿಯುವಂತೆ, ಸಂಸ್ಕಾರ ಮತ್ತು ಸಂಪ್ರದಾಯಗಳು ಮನೆಯಿಂದಲೇ ರೂಢಿಯಾಗಿದ್ದಲ್ಲದೇ, ಸಂಸ್ಕೃತದ ಬಾಲಪಾಠ, ಸಣ್ಣ ಪುಟ್ಟ ಸಂಸ್ಕೃತ ಶ್ಲೋಕಗಳ ಜೊತೆಯಲ್ಲಿಯೇ ವೇದಾಧ್ಯಯನವೆಲ್ಲವೂ ಮನೆಯಲ್ಲೇ ಸಹಜವಾಗಿಯೇ ಆವರಿಗೆ ಆಗುತ್ತದೆ.

ಬಾಲಕ ಶ್ರೀಪಾದ, ಸಣ್ಣ ವಯಸ್ಸಿನಲ್ಲಿಯೇ ಹುಣ್ಣಿಮೆಯ ಚಂದ್ರನಂತೆ ನೋಡಲು ಸುಂದರವಾಗಿದ್ದಲ್ಲದೇ, ನಕ್ಕರೆ ಕೆನ್ನೆಗಳ ಮೇಲೆ ಬೀಳುತ್ತಿದ್ದ ಗುಳಿಗೆ ಮಾರು ಹೋಗದವರೇ ಇಲ್ಲಾ ಎಂದರೂ ಸುಳ್ಳಲ್ಲ. ಆಟ ಪಾಟಗಳ ಜೊತೆ ತುಂಟತನದಲ್ಲೂ ಮುಂದಾಗಿದ್ದ ಶ್ರೀಪಾದನಿಗೆ ಬಾಲ್ಯದಿಂದಲೂ ನಾಟಕ ಮತ್ತು ಯಕ್ಷಗಾನದಲ್ಲಿ ಸೆಳೆತ. ಸಮಯ ಸಿಕ್ಕಾಗಲೆಲ್ಲಾ ಯಕ್ಷಗಾನಗಳನ್ನು ನೋಡುತ್ತಾ, ಆ ಪ್ರಸಂಗಗಳಲ್ಲಿ ಬರುವ ಪಾತ್ರಗಳನ್ನು ಅನುಕರಿಸುತ್ತಾ, ಅವನಿಗೇ ಅರಿವಿಲ್ಲದಂತೆಯೇ ಅವನೊಳಗಿದ್ದ ಕಲಾವಿದ ಎಲ್ಲರನ್ನೂ ಮನರಂಜಿಸುತ್ತಿದ್ದ. ಸ್ವಲ್ಪ ದೊಡ್ಡವನಾಗುತ್ತಿದ್ದಂತೆಯೇ, ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬರೂರಿನ ಶಾಲೆಯಲ್ಲಿ ಮುಗಿಸಿದ ನಂತರ ಪ್ರೌಢ ಶಿಕ್ಷಣಕ್ಕೆ ನಾಡು ಕಂಡ ಶ್ರೇಷ್ಠ ಚುಟುಕು ಕವಿ ಮತ್ತು ಅಂದಿನ ಸಾಂಸದರೂ ಆಗಿದ್ದ ಶ್ರೀ ದಿನಕರ ದೇಸಾಯಿಗಳ ಕುಳವೆ ಬರೂರಿನ ಜನತಾ ವಿದ್ಯಾಲಯದಲ್ಲಿ ಎಸ್.ಎಸ್.ಎಲ್.ಸಿ. ಯನ್ನು ಉನ್ನತ ದರ್ಜೆಯಲ್ಲಿ ಮುಗಿಸಿದಾಗ, ಈಗಿನಂತೆ ಮುಂದೇನು ಓದಬೇಕು? ಎಂಬುದನ್ನು ತಿಳಿಸಿಕೊಡಲು ಯಾರೂ ಇಲ್ಲದೇ ಇದ್ದ ಕಾರಣ ಮತ್ತು ಡಾಕ್ಟರ್ ಮತ್ತು ಇಂಜಿನೀಯರ್ ಆಗಬೇಕೆಂಬ ಆಸೆ ಇದ್ದರೂ, ಅದಕ್ಕೆ ತಕ್ಕಷ್ಟು ಆರ್ಥಿಕವಾಗಿ ಸಧೃಢರಾಗಿಲ್ಲದ ಕಾರಣ, ಶಿರಸಿಯ ಪ್ರತಿಷ್ಟಿತ ಎಂ.ಇ.ಎಸ್ ಕಾಲೇಜಿಯಲ್ಲಿಯೇ ಪಿಯೂಸಿ ಮುಗಿಸಿದ ನಂತರ ಅಲ್ಲಿಯೇ 1978ರಲ್ಲಿ ಪದವಿಯನ್ನು ಪಡೆದು ಮುಂದೇನೂ? ಎಂಬ ಪ್ರಶ್ನೆ ಎದುರಾದಾಗ, ಹಿರಿಯರ ಸಲಹೆಯಂತೆ ದೂರದ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಎಂ.ಎ. ಪದವಿಯನ್ನು 1980ರಲ್ಲೇ ಮುಗಿಸಿ, ಹೈಸ್ಕೂಲ್ ಶಿಕ್ಷಕರಾಗಲು ಬಿಎಡ್ ಅತ್ಯಾವಶ್ಯಕ ಎನಿಸಿದ್ದ ಕಾರಣ ಬಿಎಡ್ ಪದವಿಯನ್ನೂ ಪಡೆದು ಉದ್ಯೋಗವನ್ನು ಅರಸಿ ರಾಜಧಾನಿ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಾರೆ.

ಬಾಲ್ಯದಿಂದಲೂ ಸ್ವಲ್ಪ ಮಟ್ಟಿಗಿನ ಸಂಗೀತ, ನಾಟಕ, ಯಕ್ಷಗಾನ ಎಲ್ಲವೂ ರಕ್ತಗತವಾಗಿಯೇ ಬಂದಿದ್ದ ಕಾರಣ, ಶಾಲಾ ಕಾಲೇಜು ದಿನಗಳಲ್ಲಿ ಪಠ್ಯಕ್ಕಿಂತಲೂ ಪಠ್ಯೇತರ ಚಟುವಟಿಕೆಗಳಲ್ಲೇ ಹೆಚ್ಚಿನ ಆಸಕ್ತಿ ಇರುತ್ತಿದ್ದ ಕಾರಣ, ಶಾಲಾ ಕಾಲೇಜಿನ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಶ್ರೀಪಾದರದ್ದೇ ಮೇಲುಗೈ. ಅದು ನಾಟಕ, ಏಕಪಾತ್ರಭಿನಯ, ಪ್ರಬಂಧ ಸ್ಪರ್ಧೆ, ಆಶುಭಾಷಣ ಇಲ್ಲವೇ ಚರ್ಚಾಸ್ಪರ್ಧೆಯಲ್ಲಿ ಶ್ರೀಪಾದರು ಭಾಗವಹಿಸಿದ್ದಾರೆ ಎಂದರೆ ಅವರಿಗೊಂದು ಪ್ರಶಸ್ತಿ ನಿಶ್ಚಿತ ಎನ್ನುವಷ್ಟರ ಮಟ್ಟಿಗೆ ಜನಪ್ರಿಯರಾಗಿರುತ್ತಾರೆ. ಇದರ ಜೊತೆಯಲ್ಲಿಯೇ ದಿನನಿತ್ಯವೂ ಪತ್ರಿಕೆಗಳನ್ನು ಓದಿ ಮತ್ತು ಸಮಯ ಸಿಕ್ಕಾಗಲೆಲ್ಲಾ ಅಲ್ಲಿ ಇಲ್ಲೇ ಅಲೆದಾಡುತ್ತಾ ಸಮಯವನ್ನು ವ್ಯರ್ಥಮಾಡದೇ, ಅದಷ್ಟೂ ಗ್ರಂಥಾಲಯದಲ್ಲೇ ಕಳೆಯುತ್ತಿದ್ದ ಕಾರಣ ಸಾಮಾಜಿಕ ವಿಷಯಗಳಲ್ಲಿಯೂ ಪರಿಣಿತಿ ಪಡೆದು ರಸಪ್ರಶ್ನೆ ಸ್ಪರ್ಥೆಗಳಲ್ಲಿಯೂ ಸೈ ಎನಿಸಿಕೊಂಡಿದ್ದ ಶ್ರೀಪಾದ ಹೆಗಡೆಯವರ ರೂಪು, ಲಾವಣ್ಯ ಮತ್ತು ಅಂಗಸೌಷ್ಯವ ಎಲ್ಲವೂ ಅಂದಿನ ಕಾಲದ ಯಾವುದೇ ನಾಯಕ ನಟನಿಗಿಂತಲೂ ಕಡಿಮೆ ಇದ್ದಿಲ್ಲವಾಗಿದ್ದ ಕಾರಣ, ಸ್ವಲ್ಪ ಪ್ರಯತ್ನ ಪಟ್ಟಿದ್ದರೆ, ಖಂಡಿತವಾಗಿಯೂ ಕನ್ನಡ ಚಿತ್ರರಂಗಕ್ಕೆ ಉತ್ತರ ಕನ್ನಡದ ಪ್ರತಿಭೆಗಳಾದ ಅನಂತ್ ನಾಗ್, ಶಂಕರ್ ನಾಗ್, ರಮೇಶ್ ಭಟ್, ನೀರ್ನಳ್ಳಿ ರಾಮಕೃಷ್ಣರಂತೆ ಮತ್ತೊಬ್ಬ ಸುರದ್ರೂಪಿ, ಪ್ರತಿಭಾವಂತ ಚಾಕ್ಲೇಟ್ ಹೀರೋ ಆಗಬಹುದಿತ್ತು.

ಮುಖಕ್ಕೆ ಬಣ್ಣ ಬಳಿದುಕೊಂಡು ಜನರನ್ನು ರಂಜಿಸುವುದಕ್ಕಿಂತಲೂ ಕೈಯ್ಯಲ್ಲಿ ಸೀಮೇಸುಣ್ಣ ಹಿಡಿದು ಕಪ್ಪು ಹಲಗೆಯ ಮೇಲೆ ರಂಗನ್ನು ಮೂಡಿಸಿ ಸಹಸ್ರಾರು ಪ್ರತಿಭಾವಂತರನ್ನು ರೂಪಿಸಬೇಕೆಂದು ಅವರ ಹಣೆಯಲ್ಲಿ ಆ ಬ್ರಹ್ಮ ಬರೆದಿದ್ದ ಕಾರಣ, ಬೆಂಗಳೂರಿಗೆ ಬಂದು ಸಂಸ್ಕೃತ ಅಧ್ಯಾಪಕರಾಗಿ ಕೆಲಸ ಮಾಡಲು ಮುಂದಾಗುತ್ತಾರೆ. ಆರಂಭದಲ್ಲಿ ಮಲ್ಲೇಶ್ವರದ ಪ್ರತಿಷ್ಠಿತ ಎಂ.ಇ.ಎಸ್. ಶಿಕ್ಷಣ ಸಂಸ್ಥೆಯ ಭಾರತೀಯ ಜನತಾ ಸಂಸ್ಕೃತ ವಿದ್ಯಾಪೀಠದಲ್ಲಿ ಮುಖ್ಯೋಪಾಧ್ಯಾಯರಾಗಿ 1980ರಲ್ಲಿ ಕೆಲಸಕ್ಕೆ ಸೇರಿಕೊಳ್ಳುವುದರ ಜೊತೆ ಜೊತೆಯಲ್ಲಿಯೇ ಮುಂದಿನ ಐದು ವರ್ಷಗಳ ಕಾಲ, ಗಾಂಧೀನಗರ ಪೌಢಶಾಲೆ ಮತ್ತು ಶೇಷಾದ್ರಿಪುರ ಸಂಜೆ ಕಾಲೇಜಿನಲ್ಲಿ ಅರೆಕಾಲಿಕ ಸಂಸ್ಕೃತ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಾ, ಎಲ್ಲಿಯೂ ಶಾಶ್ವತವಾದ ಕೆಲಸವಿಲ್ಲದೇ ಪರಿತಪಿಸುತ್ತಿದ್ದಾಗಲೇ, ಅದಾಗ ತಾನೇ ಆರಂಭವಾಗಿದ್ದ ಬಿಇಎಲ್ ಶಿಕ್ಷಣ ಸಂಸ್ಥೆಯ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರ ಹುದ್ದೆ ಖಾಲಿ ಇದೇ ಎಂದು ತಿಳಿದು 1982 ರಲ್ಲಿ ಬಿ.ಇ.ಎಲ್ ಶಿಕ್ಷಣ ಸಂಸ್ಥೆಗೆ ಕಾಲಿಟ್ಟ ನಂತರ ಮುಂದಿನ 35 ವರ್ಷಗಳ ಕಾಲ ಹಿಂದಿರುಗಿ ನೋಡದೇ 2017ರ ವರೆಗೂ ಬಿ.ಇ.ಎಲ್ ಪೌಢಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜಿನಲ್ಲಿಯೂ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಹೆಗ್ಗಳಿಗೆ ಶ್ರೀಪಾದ ಹೆಗಡೆಯವರದ್ದಾಗಿದೆ.
ಬಿ.ಇ.ಎಲ್. ಶಿಕ್ಷಣ ಸಂಸ್ಥೆಯನ್ನು ಸೇರಿಕೊಂಡರೂ ಅಲ್ಲಿ ಎಲ್ಲವೂ ಸುಗಮವಾಗಿ ನಡೆಯಿತೆಂದು ಭಾವಿಸಿದ್ದರೆ ಅದು ಖಂಡಿತಾ ಸುಳ್ಳು. ಅದು 1982-83 ರ ಗೋಕಾಕ್ ಚಳುವಳಿಯ ಸಂಧರ್ಭ, ಕರ್ನಾಟಕಾದ್ಯಂತ ಕನ್ನಡಕ್ಕೇ ಪ್ರಥಮ ಪ್ರಾಶಸ್ತ್ಯ ನೀಡಬೇಕೆಂಬ ಒಕ್ಕೊರಿಲಿನ ಮನವಿ ಅಂದಿನ ಸಾಹಿತಿಗಳು, ಬುದ್ದಿಜೀವಿಗಳು ಮತ್ತು ಚಲನಚಿತ್ರರಂಗದ ನಟ ನಟಿಯರಿಂದ ಬಂದ ಕಾರಣ, ಅದಕ್ಕೆ ಸ್ಪಂದಿಸಿದ ಅಂದಿನ ಸರ್ಕಾರ ಆ ವರ್ಷ ಹೈಸ್ಕೂಲಿನಲ್ಲಿ ಸಂಸ್ಕೃತ ಪ್ರಥಮ ಭಾಷೆಯನ್ನು ನಿಷೀಧಿಸಿ ಅನೇಕ ಸಂಸ್ಕೃತ ವಿದ್ಯಾರ್ಥಿಗಳ ಆಸೆಗೆ ತಣ್ಣೀರೆರಚಿತ್ತು. (ಆ ನತದೃಷ್ಟರಲ್ಲಿ ನಾನೂ ಒಬ್ಬ) ಸಂಸ್ಕೃತವನ್ನು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಿಂತಲೂ ಆಂಗ್ಲ ಮಾಧ್ಯಮದವರೇ ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದ ಕಾರಣ ಸಹಜವಾಗಿ ಸಂಸ್ಕೃತವನ್ನು ಅಂಗ್ಲ ಭಾಷೆಯಲ್ಲಿಯೇ ಹೆಚ್ಚಾಗಿ ಪಾಠ ಮಾಡುತಿದ್ದ ಕಾರಣ, ಕನ್ನಡ ಮಾಧ್ಯಮದವರಿಗೆ ಸಹಾಯವಾಗಲೆಂದು ತಮ್ಮ ಕೈಯ್ಯಾರೆ ಪುಸ್ತಕಗಳನ್ನು ತಂದುಕೊಡುತ್ತಿದ್ದದ್ದನ್ನು ಅವರಿಂದ ಉಪಕೃತರಾದ ವಿದ್ಯಾರ್ಥಿಗಳು ಎಂದಿಗೂ ಮರೆಯುವುದಿಲ್ಲ. ಅದೇ ರೀತಿಯಲ್ಲಿ 1983ರಲ್ಲಿ 8ನೇ ತರಗತಿಯಲ್ಲಿ ಸಂಸ್ಕೃತ ಓದಲು ಸಾಧ್ಯವಾಗದ ವಿದ್ಯಾರ್ಥಿಗಳು 1986ರಲ್ಲಿ ಪಿಯೂಸಿಯಲ್ಲಿ ಸಂಸ್ಕೃತವನ್ನು ಆಯ್ಕೆ ಮಾಡಿಕೊಂಡಾಗ, ಆವರಿಗೆ ಅನುಕೂಲವಾಗಲೆಂದು ಸಂಸ್ಕೃತದ ಅ ಅ ಆ ಇ ಈ ನಿಂದ ಮೊದಲಿನಿಂದ ಪಾಠ ಮಾಡಿದ್ದದ್ದು ವಯಕ್ತಿಕವಾಗಿ ನನ್ನ ಮನದಲ್ಲಿ ಹಚ್ಚ ಹಸಿರಾಗಿದೆ.
1982ರಲ್ಲಿ ಅರೆಕಾಲಿಕ ಶಿಕ್ಷಕರಾಗಿ ಬಿಇಎಲ್ ಶಿಕ್ಷಣ ಸಂಸ್ಥೆಯನ್ನು ಸೇರಿಕೊಂಡಿದ್ದ ಶ್ರೀಪಾದ ಹೆಗಡೆಯವರಿಗೆ ಕೆಲವು ತಾಂತ್ರಿಕ ಕಾರಣಗಳಿಂದ (ಆ ಸಮಯದಲ್ಲಿ ಬಿಇಎಲ್ ಶಾಲೆ ಸರ್ಕಾರದ ಅನುದಾನಿತವಾಗಿರಲಿಲ್ಲ) ಸುಮಾರು ವರ್ಷಗಳ ಕಾಲ ಖಾಯಂ ಶಿಕ್ಷರಾಗದೇ ಅನೇಕ ವರ್ಷಗಳ ಕಾಲ ಆಂತರಿಕ ಹೋರಾಟಗಳ ನಂತರ ಅವರ ಕೆಲಸ ಶಾಶ್ವತವಾಗುವುದಕ್ಕೆ ಸಹಕರಿಸಿದ ಅಂದಿನ ಮುಖ್ಯೋಪಾಧ್ಯಾಯರುಗಳ ಬಿ.ಜೆ.ಆರ್. ಎನ್.ಪಿ.ಆರ್ ಮತ್ತು ಗೋಪಣ್ಣನವರ ನೆರವವು ಮತ್ತು ಮತ್ತು ಬೆಂಗಳೂರಿಗೆ ಬಂದಾಗ ಅವರಿಗೆ ಕೆಲಸವನ್ನಿತ್ತು ಎಲ್ಲಾ ರೀತಿಯಿಂದಲೂ ಸಹಕರಿಸಿದ ಎಂ.ಇ.ಎಸ್ ಶಿಕ್ಷಣ ಸಂಸ್ಥೆಯ ಎಂಪಿಎಲ್ ಶಾಸ್ತ್ರಿ ಮತ್ತು ಶೇಷಾದ್ರಿ ಐಯ್ಯಂಗಾರ್ ಅವರನ್ನು ಸದಾಕಾಲವೂ ಸ್ಮರಿಸುವುದನ್ನು ಎಂದಿಗೂ ಮರೆಯುವುದಿಲ್ಲ.

ಕೆಲಸ ಖಾಯಂ ಆಗದೆ ವಯಕ್ತಿವಾಗಿ ಎಷ್ಟೇ ನೋವನ್ನು ಅನುಭವಿಸುತ್ತಿದ್ದರೂ, ಅದನ್ನೆಂದೂ ವಿದ್ಯಾರ್ಥಿಗಳ ಮುಂದೆ ತೋರಿಸಿಕೊಳ್ಳದೇ, ಅತ್ಯಂತ ಪ್ರಾಮಾಣಿಕವಾಗಿ ಪಾಠ ಪ್ರವಚನಗಳನ್ನು ಮಾಡುತ್ತಿದ್ದದ್ದಲ್ಲದೇ, ತಮ್ಮೊಳಗಿದ್ದ ಕಲಾವಂತಿಕೆಯನ್ನು ತಮ್ಮ ವಿದ್ಯಾರ್ಥಿಗಳಿಗೆ ಧಾರೆ ಎರೆದು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ವತಃ ನಾಟಕಗಳನ್ನು ಬರೆದು, ನಿರ್ದೇಶಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡ ಹೆಗ್ಗಳಿಕೆ ಶ್ರೀಪಾದ ಹೆಗಡೆಯವರದ್ದು.

ಈ ಮಧ್ಯೆ ತಮ್ಮ ರೂಪಕ್ಕೆ ಅನುರೂಪದ ಪವಿತ್ರಾರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಆವರ ಸುಖ ದಾಂಪತ್ಯದ ಕುರುಹಾಗಿ ಆರತಿಗೊಬ್ಬಳು ಮಗಳು ಭುವನಾ ಮತ್ತು ಕೀರ್ತಿಗೊಬ್ಬ ಮಗ ಸುಹಾಸ್ ಹೆಗಡೆ ಇದ್ದು, ಮಗಳು ಮೆರಿಟ್ ಸೀಟ್ ನಲ್ಲಿ ಡಾಕ್ಟರ್ ಮುಗಿಸಿ ಸದ್ಯ ಅಮೇರಿಕಾದಲ್ಲಿ ಡಾ.ಸುನಿಲ್ ರಂಗರಾಜನ್ ಜೊತೆ ಮಗಳು ಅತಿರಾ ಮತ್ತು ಮಗ ವೇದನೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದರೆ, ಮಗ ಸುಹಾಸ್ ಹೆಗಡೆ (eligible bachelor) ಇಂಜೀನಿಯರಿಂಗ್ ಮುಗಿಸಿ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್ಫೇರ್ ಕಂಪನಿಯಲ್ಲಿ ಕೈತುಂಬಾ ಸಂಬಳ ಪಡೆಯುತ್ತಾ, ಎಲ್ಲರ ಪರಿಶ್ರಮದ ಫಲವಾಗಿ ಮಲ್ಲೇಶ್ವರಂನಲ್ಲಿ ಅಂದದ ಮನೆಯಲ್ಲಿ ಚಂದದಿಂದ ತುಂಬು ಜೀವನ ನಡೆಸುತ್ತಿದ್ದಾರೆ.

ಒಳ್ಳೆಯವರಿಗೆ ಒಳ್ಳೆಯವರೇ ಸಿಗುವಂತೆ ಭಗವಂತ ನೋಡಿಕೊಳ್ಳುತ್ತಾನೆ ಎನ್ನುವಂತೆ, ಮದುವೆಯಾಗಿ ಸಂಸಾರ ಅರಂಭಿಸಲು ಮನೆಯನ್ನು ಹುಡುಕುತ್ತಿದ್ದಾಗ, ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ನಡೆದಾಡುವ ವಿಶ್ವಕೋಶ ಎಂದೇ ಕರೆಯಲ್ಪಡುವ ಬಿಡುವಿಲ್ಲದ ಬರಹಗಾರರು ಮತ್ತು ಗಾಂಧಿನಗರ ಪ್ರೌಢಶಾಲೆಯ ಪ್ರಾಂಶುಪಾಲರಾಗಿದ್ದ ಶ್ರೀ ಸಂಪಟೂರು ವಿಶ್ವನಾಥ್ ಅವರ ಮನೆ ಸಿಕ್ಕನಂತರ ಮನೆಯ ಮಾಲಿಕರು ಮತ್ತು ಬಾಡಿಗೆದಾರರು ಎಂಬ ಬೇಧವಿಲಲ್ದೇ, ಸುಖಃ ದುಃಖಗಳಲ್ಲಿ ಸಮನಾಗಿ ಭಾಗಿಗಳಾಗುವ ಒಂದೇ ಮನೆಯವರಂತೆ ಆಗಿಯೇ ಹೋಗುತ್ತಾರೆ.

ಇನ್ನು ಸಂಜೆಯ ಹೊತ್ತಿನಲ್ಲಿ ಶ್ರೀಪಾದ ಹೆಗಡೆಯವರನ್ನು ಮಲ್ಲೇಶ್ವರದ 15ನೇ ಅಡ್ಡರಸ್ತೆಯಲ್ಲಿನ ಪ್ರಖ್ಯಾತವಾದ ವೀಣಾ ಸ್ಟೋರ್ಸ್ ನಲ್ಲಿ ನೋಡುತ್ತಿದ್ದ ಕಾರಣ, ಬಹಳಷ್ಟು ಜನರು ಹೆಗಡೆಯವರೇ ವೀಣಾ ಸ್ಟೋರ್ಸ್ ಮಾಲಿಕರು ಎಂದು ತಿಳಿದಿದ್ದಾರಾದರೂ, ವೀಣಾ ಸ್ಟೋರ್ಸ್ ಮಾಲಿಕರಾದ ಶ್ರೀ ಸೂರ್ಯನಾರಾಯಣ ಮತ್ತು ಅವರ ಮಗ ಪ್ರದೀಪ್ ಅವರೂ ಸಹಾ ಶಿರಸಿ ಕಡೆಯವರಾದ್ದರಿಂದ ಮತ್ತು ವೀಣಾ ಸ್ಟೋರ್ಸ್ ಹಿಂದೆಯೇ ಹೆಗಡೆಯವರ ಬಾಡಿಗೆ ಮನೆ ಇದ್ದ ಕಾರಣ, ಸಂಜೆಯ ಹೊತ್ತು ಬಿಡುವಾಗಿದ್ದಾಗ ಅವರ ಜೊತೆ ನಿಸ್ವಾರ್ಥವಾಗಿ ಸಹಾಯ ಮಾಡುತ್ತಿದ್ದರಷ್ಟೇ.
ವಯಸ್ಸು 60+ ಆಗಿದ್ದರೂ ಭಗವಂತ ಮತ್ತು ತಂದೆ ತಾಯಿರ ಆಶೀರ್ವಾದದಿಂದ ಇನ್ನೂ40+ ನಂತೆ ಕಾಣುವ ಶ್ರೀಪಾದ ಹೆಗಡೆಯವರು ಬಿಡುವು ಸಿಕ್ಕಾಗಲೆಲ್ಲಾ ವಿವಿಧ ಸಂಘಟನೆಗಳ ಜೊತೆ ಸೇರಿಕೊಂಡು ಕೈಲಾದ ಮಟ್ಟಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದಲ್ಲದೇ ಪದವಿಪೂರ್ವ ಶಿಕ್ಷಣದ ಸಂಸ್ಕೃತ ಪಠ್ಯಪುಸ್ತಕದ ರಚನೆಯ ತಂಡದಲ್ಲಿಯೂ ಕಾರ್ಯನಿರ್ವಹಿದ್ದಾರೆ. 2012-13ರಲ್ಲಿ ಇಡೀ ರಾಜ್ಯದಲ್ಲಿ ಪಿಯುಸಿಯಲ್ಲಿ ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಓದುತ್ತಿದ್ದವರ ಸಂಖ್ಯೆ ಕೇವಲ 9,000ದ ಆಸುಪಾಸಿನಲ್ಲಿದ್ದರೆ, ಇವರು ಸಿದ್ಧ ಪಡಿಸಿದ ಸಂಸ್ಕೃತ ಪಠ್ಯಪುಸ್ತಕ ಜಾರಿಗೆ ತಂದ ನಂತರ ಸಂಸ್ಕ್ಟತ ಓದುವವರ ಸಂಖ್ಯೆ ಹೆಚ್ಚಾಗಿ ಪ್ರಸ್ತುತ ವರ್ಷ 21,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಕೃತ ಅಭ್ಯಾಸ ಮಾಡುತ್ತಿರುವುದರಿಂದ ಸರ್ಕಾರವೂ ಸಂತೋಷದಿಂದ ಆ ಪುಸ್ತಕಗಳ ಪರಿಕ್ಷರಣೆಗೆ ಮುಂದಾಗದೇ ಇರುವುದು ಗಮನಾರ್ಹವಾಗಿದೆ.

ಶ್ರೀಯುತರ ಸಮಾಜಮುಖೀ ಸೇವೆಗಳನ್ನು ಗುರುತಿಸಿರುವ ಅನೇಕ ಸಂಘಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದು ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ವಿನಾಯಕ ಸಾಂಸ್ಕೃತಿಕ ಸಂಘ, ಬಿಇಎಲ್, ರಾಜಾಜಿನಗರ ಸಂಸ್ಕೃತ ಸಂಸ್ಕೃತಿ ಪ್ರತಿಷ್ಠಾನವಲ್ಲದೇ, ಸಹಕಾರ ನಗರದ ಕಾವೇರಿ ಫೌಂಡೇಶನ್ ಸಾಂಸ್ಕೃತಿಕ ಸಂಘ, ಆನಂದ ನಗರದ ಬಂಜಾರ ವಿದ್ಯಾ ಸಂಸ್ಥೆಗಳಿಂದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದರೆ, ಕಲ್ಕುಂಟೆ ವಿದ್ಯಾಸಂಸ್ಥೆ ಮತ್ತು ಉದಯಭಾನು ಕಲಾಸಂಘದಿಂದಲೂ ಸನ್ಮಾನಕ್ಕೆ ಪಾತ್ರರಾಗಿರುವುದು ಅವರ ಹೆಗ್ಗಳಿಕೆಯಾಗಿದೆ.

ಈ ಹಿಂದೆ ಅಮೇರಿಕಾಗೆ ಹೋಗಿ ಬಂದಾಗ ನೇಗಾರ್ ದಿಂದ ನಾಸಾ ಎಂಬ ಅನುಭವವ ಕಥನದ ಚಂದದ ಪುಸ್ತಕವನ್ನು ಬರೆದಿದ್ದ ಹೆಗಡೆಯವರು ಇತ್ತೀಚೆಗಷ್ಟೇ ಮತ್ತೆ ಅಮೇರಿಕಾಗೆ ಹೋಗಿ ಮಗಳು ಅಳಿಯ ಮತ್ತು ಮೊಮ್ಮಕ್ಕಳೊಂದಿಗೆ ಅಮೇರಿಕಾದ ಸುಂದರವಾದ ತಾಣಗಳಿಗೆ ಹೋಗಿ ಅಲ್ಲಿನ ಸುಂದರವಾದ ಫೋಟೋಗಳನ್ನು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಎಲ್ಲರಿಗೂ ಪರೋಕ್ಷವಾಗಿ ಅಮೇರಿಕಾದ ದರ್ಶನ ಮಾಡಿಸಿರುವ ಶ್ರೀಯುತರು ಈಗ ಮತ್ತೊಂದು ಪ್ರವಾಸ ಕಥನವನ್ನು ಬರೆಯಲು ಸಿದ್ಧವಾಗುತ್ತಿದ್ದಾರೆ.
ಈ ಶಿಕ್ಷಕರ ದಿನದಂದು ನಮ್ಮ ನೆಚ್ಚಿನ ಗುರುಗಳು, ಗುರುಗಳು ಎನ್ನುವುದಕ್ಕಿಂತಲೂ ಒಬ್ಬ ಆತ್ಮೀಯ ಸ್ನೇಹಿತರು ಅದಕ್ಕಿಂದಲೂ ಹೆಚ್ಚಾಗಿ ಒಳ್ಳೆಯ ಹಿತೈಷಿಗಳಾದ ಶ್ರೀ ಶ್ರೀಪಾದ ಹೆಗಡೆಯವರಿಗೆ ಭಗವಂತ ಇನ್ನೂ ಆಯುರಾರೋಗ್ಯದ ಜೊತೆ ಸಕಲೈಶ್ವರ್ಯಗಳನ್ನು ನೀಡುವ ಮೂಲಕ ಮತ್ತಷ್ಟು ಸಮಾಜಮುಖಿಗಳಾಗಿ ಮಗದಷ್ಟು ಜನರಿಗೆ ಪ್ರೇರಣಾದಾಯಿಗಳಾಗಿರಲಿ ಎಂದು ಶಿಷ್ಯಂದಿರಾಗಿ ಕೇಳಿಕೊಳ್ಳುವಷ್ಟೇ ನಮ್ಮ ನಿಮ್ಮೆಲ್ಲರ ಆಶಯವಾಗಿದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ
ವಾವ್, ಅದ್ಭುತ ಸಾಧನೆ ಮೆರೆದ ಎಸ್.ಎಮ್.ಹೆಚ್ ಸರ್ ಅವರಿಗೆ ಅನಂತ ಸಾಷ್ಟಾಂಗ ಪ್ರಣಾಮಗಳು. ಅವರ ಶಿಷ್ಯಕೋಟಿಯಲ್ಲಿ ನಾನೂ ಒಬ್ಬ ಎನ್ನುವುದು ಹೆಮ್ಮೆಯ ವಿಷಯ. ಅವರ ಹಾಸ್ಯ ಪ್ರಜ್ಞೆ ಅತ್ಯುತ್ತಮವಾಗಿತ್ತು ಮತ್ತು ಅವರ ತರಗತಿಯಲ್ಲಿ ಯಾವಾಗಲೂ ಪೂರ್ಣ ಹಾಜರಾತಿ ಇರುತ್ತಿತ್ತು. ಅವರು ಸಿಟ್ಟು ಮಾಡಿದ್ದು, ವಿದ್ಯಾರ್ಥಿಗಳನ್ನು ದಂಡಿಸಿದ್ದು ನಾನು ನೋಡಿಯೇ ಇಲ್ಲ ಮತ್ತು ಕೇಳಿಯೂ ಇಲ್ಲ.
LikeLike
I was a student of SMH when he as a very young and always with a smile on his face joined Gandhinagar High School at Kumara Park. Then at BEL College. I got to know through this blog a lot of information. Our Biology teacher at Gandhinagar High school was such a lovely person who has no dearth with PUN….still those funny way of viewing aspects and use of those words linger in my mind. SMH is a very simple and very charming person, still I remember his slim frame, with a dimple in his cheeks, and a Lovely smile. Happy to know a lot more about him. Wishing SMH happiness and health in his life.
LikeLike