ಕಳೆದ ಮೇ ತಿಂಗಳಿನಲ್ಲಿ ನಡೆದ ರಾಜ್ಯ ವಿಧಾನ ಸಭಾ ಚುನಾವಣಾ ಸಮಯದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳು ಯಾವುದೇ ಪಕ್ಷಕ್ಕೆ ಪೂರ್ಣಬಹುಮತ ಬಾರದೇ ಮತ್ತೆ ಸಮ್ಮಿಶ್ರ ಸರ್ಕಾರ ಬರಬಹುದು ಎಂದು ತಿಳಿಸಿದಾಗ, ಅದಾಗಲೇ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರಗಳ ಕಥೆ-ವ್ಯಥೆಯ ಅರಿವಿದ್ದ ಕನ್ನಡಿಗರು ಮತ್ತೊಮ್ಮೆ ರಾಜ್ಯದಲ್ಲಿ ಖಿಚಡಿ ಸರ್ಕಾರ ಬಾರದೇ ಯಾವುದೇ ಪಕ್ಷವಾದರೂ ಆಧಿಕಾರಕ್ಕೆ ಬರಲಿ ಅದರೆ ಅದಕ್ಕೆ ಸಂಪೂರ್ಣ ಬಹುಮತವಿರಲಿ ಆಗ ಸರ್ಕಾರವೂ ಸುಭದ್ರವಾಗಿರುತ್ತದೆ ಎಂದು ಬಯಸಿದ್ದಂತೂ ಸುಳ್ಳಲ್ಲ. ಚುನಾವಣಾ ಪೂರ್ವವೇ ವಿವಿಧ ಬಣಗಳಿಂದ ಮನೆಯೊಂದು ಮೂರು ಬಾಗಿಲು ಎಂಬಂತಾಗಿದ್ದ ಕಾಂಗ್ರೇಸ್ ಅಭಿವೃದ್ಧಿ ಕಾರ್ಯಗಳಿಂದ ಜನರ ಮನಸ್ಸನ್ನು ಗೆಲ್ಲುವುದು ಅಸಾಧ್ಯ ಎಂಬುದನ್ನು ಅರಿತು ವಿವಿಧ ಉಚಿತ ಭಾಗ್ಯಗಳ ಸರಮಾಲೆಯನ್ನು ಜನರ ಮುಂದಿಟ್ಟ ಪರಿಣಾಮವೋ, ಸಮರ್ಥ ನಾಯಕರಿಲ್ಲದೇ ಸೊರಗಿದ್ದ ಮತ್ತು ಆಡಳಿತವಿರೋಧಿ ಅಲೆಯಿಂದಲೋ ಆಡಳಿತ ಬಿಜೆಪಿ ನಿರೀಕ್ಷಿತ ಮಟ್ಟವನ್ನು ತಲುಪದೇ, ಕೇವಲ 66 ಸ್ಥಾನಗಳಿಗಷ್ಟೇ ಸೀಮಿತವಾದರೆ, ಅತಂತ್ರ ಫಲಿತಾಂಶ ಬಂದಲ್ಲಿ ತಾವೇ ಕಿಂಗ್ ಮೇಕರ್ ಆಗುತ್ತೇವೆ ಎಂಬ ಭ್ರಮೆಯಲ್ಲಿ ತೇಲಾಡುತ್ತಿದ್ದ ಜನತಾದಳದವರಂತೂ ಮುಟ್ಟಿ ನೋಡಿಕೊಳ್ಳುವಂತಹ, ಯಾರೂ ಸಹಾ ನೀರೀಕ್ಷಿಸದಂರೆ ಕೇವಲ 19 ಸ್ಥಾನಗಳನ್ನು ಗಳಿಸಿದರೆ, ಅವರ ಸಾಂಪ್ರದಾಯಿಕ ಮತದಾರರಾದ ಒಕ್ಕಲಿಗರು ಮತ್ತು ಮುಸಲ್ಮಾನರು ಸಾರಾಸಗಟಾಗಿ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿದ ಕಾರಣ, ಎಲ್ಲರ ಸಮೀಕ್ಷೆಗಳನ್ನೂ ತಲೆ ಕೆಳಗು ಮಾಡಿದ ಕಾಂಗ್ರೇಸ್ 135 + 1 (ಕಾಂಗ್ರೇಸ್ ಬೆಂಬಲಿತ ದರ್ಶನ್ ಪುಟ್ಟಣ್ಣ)= 136 ಸ್ಥಾನಗಳನ್ನು ಗಳಿಸಿಕೊಂಡಾಗ ಹಲವರಿಗೆ ಕಾಂಗ್ರೇಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದದ್ದು ಕನ್ನಡಿಗರಿಗೆ ಬೇಸರ ಎನಿಸಿದರೂ, ಸಮ್ಮಿಶ್ರ ಸರ್ಕಾರದ ಬದಲು ಒಟ್ಟು 224 ಶಾಸಕರಲ್ಲಿ ಬಹುಮತ ಗಳಿಸಲು 113 ಸಂಖ್ಯೆಯ ಅವಶ್ಯಕತೆ ಇದ್ದಾಗ 23 ಅಧಿಕ ಶಾಸಕರ ಬೆಂಬಲ ಇರುವ ಬಹುಮತದ ಸರ್ಕಾರವಾದರೂ ಬಂದಿತಲ್ಲಾ ಎಂದು ಸಮಾಧಾನ ಪಟ್ಟುಕೊಂಡಿದ್ದಂತೂ ಸುಳ್ಳಲ್ಲಾ.
ಸುಮಾರು ವರ್ಷಗಳಿಂದಲೂ ಕೇಂದ್ರ ಮತ್ತು ರಾಜ್ಯಸರ್ಕಾರದಲ್ಲಿ ಅಧಿಕಾರವಿಲ್ಲದೇ ಬರಗೆಟ್ಟಿದ್ದ ಕಾಂಗ್ರೇಸ್ ಪಕ್ಷಕ್ಕೆ ಅತಿಯಾದರೇ ಅಮೃತವೂ ವಿಷ ಎನ್ನುವ ಗಾದೆ ಮಾತಿನಂತೆ ಈ ರೀತಿಯ ಬಹುಮತ ಇದ್ದರೂ ತಕ್ಷಣವೆ ಸರ್ಕಾರವನ್ನು ರಚಿಸಲು ಆಂತರಿಕ ಬಣದ ರಾಜಕೀಯವೇ ಕಗ್ಗಂಟಾಗಿ, ಸುಮಾರು ವಾರಗಳ ಕಾಲ ಹೈರಾಣಾದ ಹೈಕಮಾಂಡ್ ಕಡೆಗೂ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಗಳಾಗಿಯೂ ಡಿ.ಕೆ. ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಿದಾಗ, ರಾಜ್ಯಾಧ್ಯಕ್ಷರಾಗಿ ಶತಾಯ ಗತಾಯ ಈ ಬಾರಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಲೇ ಬೇಕೆಂದು ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಹತ್ತು ಹಲವಾರು ವಿರೋಧಾಭಾಸಗಳ ನಡುವೆಯೂ ಅವಿತರವಾಗಿ ಹೋರಾಡಿ ಮತ್ತು ಓಡಾಡಿ ಗೆದ್ದಲು ಹುಳುಗಳು ಶ್ರಮವಹಿಸಿ ಹುತ್ತವನ್ನು ಕಟ್ಟುವಂತೆ ಪಕ್ಷವನ್ನು ಬಹುಮತಕ್ಕೆ ತಂದರೆ, ಗೆದ್ದಲು ಹುಳುಗಳು ಕಟ್ಟಿದ ಹುತ್ತದಲ್ಲಿ ಹಾವು ಬಂದು ಸೇರಿಕೊಳ್ಳುವಂತೆ ಸಿದ್ದರಾಮಯ್ಯ ಅದಾವುದೋ ಒತ್ತಡವನ್ನು ಹೇರಿ ಅಧಿಕಾರಕ್ಕೆ ಬಂದರಲ್ಲಾ ಎಂದು ಜನ ಮಾತನಾಡಿಕೊಳ್ಳುವಂತಾಯಿತು.
ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ಚುನಾವಣಾ ಪ್ರಣಾಳಿಕೆಗಳಲ್ಲಿ ತಿಳಿಸಿದ ಭಾಗ್ಯಗಳನ್ನು ತರುವುದಾಗಿ ಘೋಷಿಸಿದ್ದ ಕಾಂಗ್ರೇಸ್ ಪಕ್ಷಕ್ಕೆ ಆರಂಭದಲ್ಲಿ ಅವುಗಳನ್ನು ಯಾವ ರೀತಿಯಲ್ಲಿ ಜಾರಿ ಮಾಡುವುದು ಎಂಬುದರ ಅರಿವೇ ಇರದಿದ್ದದ್ದು ಜಗಜ್ಜಾಹೀರಾತಾಗಿ, ಕಡೆಗೆ ಹಾಗೂ ಹೀಗೂ ಮಾಡಿ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಹೊರತಾಗಿ ಉಳಿದ ಎಲ್ಲಾ ಭಾಗ್ಯಗಳೂ ಕಾಟಾಚಾರಕ್ಕೆ ಜಾರಿಗೆ ತರುವುದರಲ್ಲೇ ಮೊದಲ 3-4 ತಿಂಗಳುಗಳು ಕಳೆದು ಹೋಗುತ್ತಿದ್ದಂತೆಯೇ. ಸ್ವಯಂ ಉಪಮುಖ್ಯಮಂತ್ರಿಗಳೇ ರಾಜ್ಯದ ಸದ್ಯದ ಹಣವೆಲ್ಲಾ ಘೋಷಿತ ಭಾಗ್ಯಗಳಿಗೇ ಸಾಕಾಗದಿರುವ ಕಾರಣ ಈ ಬಾರಿ ಕ್ಷೇತ್ರಗಳ ಅಭಿವೃದ್ದಿಗಿ ಯಾರೂ ಸಹಾ ಸರ್ಕಾರದಿಂದ ಹಣವನ್ನು ನೀರೀಕ್ಷಿಸದಿರಿ ಎಂದು ಬಹಿರಂಗವಾಗಿಯೇ ಹೇಳುವ ಮೂಲಕ ಈ ಸರ್ಕಾರದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಾಗಿದೆ ಎಂಬುದರ ಅರಿವನ್ನು ರಾಜ್ಯದ ಜನರಿಗೆ ಮೂಡಿಸಿದ್ದರು.
ಚುನಾವಣೆಗಾಗಿ ಕೋಟಿ ಕೋಟಿ ಹಣ ಖರ್ಚು ಮಾಡಿ ಶಾಸಕರಾಗಿ ಆಯ್ಕೆಯಾಗಿ ಮತ್ತೆ ಕೋಟಿ ಕೋಟಿ ಹಣವನ್ನು ದೆಹಲಿಯಿಂದ ಬಂದ ಹೈಕಮ್ಯಾಂಡ್ ಪ್ರತಿನಿಧಿಗಳಿಗೆ ಕೊಟ್ಟು ಮಂತ್ರಿಗಿರಿ ಮತ್ತು ಸರ್ಕಾರದ ಆಯಕಟ್ಟಿನ ಪ್ರದೇಶದಲ್ಲಿ ಅಧಿಕಾರ ವಹಿಸಿಕೊಂಡವರಿಗೆ ಅದನ್ನು ಹಿಂಪಡೆಯಲು ಸರ್ಕಾರದಿಂದ ಹಣವೇ ಬಾರದೇ ಹೋದಾಗ ಕಂಡು ಕೊಂಡಿದ್ದೇ ಅಧಿಕಾರಿಗಳ ವರ್ಗಾವಣೆ. ಇಲಾಖೆಯ ಆದಾಯಕ್ಕೆ ತಕ್ಕಂತೆ ಹುದ್ದೆಗಿಷ್ಟು ಎಂಬ ಹಣವನ್ನು ನಿಗಧಿ ಪಡಿಸಿ ವರ್ಗಾವಣೆಯಲ್ಲಿ ಹಣ ಮಾಡಲು ಶುರು ಹಚ್ಚಿಕೊಳ್ಳುತ್ತಿದ್ದಂತೆಯೇ, ಪಂಚರಾಜ್ಯಗಳ ಚುನಾವಣೆಗಳು ಆರಂಭವಾಗಿ ಅಲ್ಲಿನ ಚುನಾವಣಾ ಖರ್ಚಿಗೆಂದು ಕರ್ನಾಟಕದ ಸರ್ಕಾವೇ ATM ಆಗಬೇಕಾದ ಅನಿವಾರ್ಯ ಪರಿಸ್ಥಿತಿ ಬಂದದ್ದು ದುರಾದೃಷ್ಟವೇ ಸರಿ. ಇದಕ್ಕೆ ಪುರಾವೆ ಎಂಬಂತೆ ಆದಾಯ ತೆರಿಗೆ ಇಲಾಖೆ ನಡೆಸಿದ ಕ್ಷಿಪ್ರ ದಾಳಿಯಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮನೆಗಳಲ್ಲಿ ಅನಧಿಕೃತವಾಗಿ ಕೋಟಿ ಕೋಟಿ ಹಣ ದೊರೆತೆ, ಹಿಂದಿನ ಸರ್ಕಾರವನ್ನು 40% ಕಮಿಷನ್ ಸರ್ಕಾರ ಎಂದು ಕರೆದಿದ್ದರು ಇಂದಿನ ಸರ್ಕಾರ 80% ಕಮಿಷನ್ ಸರ್ಕಾರ ಎಂದು ಕರೆಯುವಂತಾಯಿತು. ಇಷ್ಟೇ ಅಲ್ಲದೇ ಮೈಸೂರಿನ ದಸರಾ ಕಾರ್ಯಕ್ರಮದಲ್ಲಿಯೂ ಹಿರಿಯ ಕಲಾವಿದರುಗಳಿಂದಲೂ ಲಂಚವನ್ನು ಕೇಳಿ ಸಿಕ್ಕಿ ಹಾಕಿಕೊಂಡು ಇದು ಖಂಡಿತವಾಗಿಯೂ 80% ಕಮಿಷನ್ ಸರ್ಕಾರ ಎಂಬುದನ್ನು ಅಕ್ಷರಶಃ ಸಾಭಿತು ಪಡಿಸಿದಂತಾಯಿತು.
ಈ ರೀತಿಯ ಲಂಚಾವತಾರ ಎಲ್ಲಾ ಸರ್ಕಾರಗಳಲ್ಲಿಯೂ ಇದ್ದದ್ದೇ ಎಂದು ಕಾಂಗ್ರೇಸ್ ವಕ್ತಾರರು ತಿಪ್ಪೇ ಸಾರಿಸುವಷ್ಟರಲ್ಲೇ ಶುರುವಾಯಿತು ನೋಡಿ ಬಣದ ರಾಜಕೀಯ. ಪಕ್ಷದ ಹಿರಿಯ ಹಿಂದುಳಿದ ನಾಯಕರಾದ ಬಿ ಕೆ ಹರಿಪ್ರಸಾದ್ ತಮಗೆ ಮಂತ್ರಿ ಪದವಿ ಸಿಗಲಿಲ್ಲ ಎಂದು ಬಹಿರಂಗವಾಗಿಯೇ ಹೋದ ಬಂದ ಕಡೆಯಲ್ಲೆಲ್ಲಾ ಮುಖ್ಯಮಂತ್ರಿಗಳನ್ನು ವಾಚಾಮಗೋಚರವಾಗಿ ನಿಂದಿಸಿದ್ದಲ್ಲದೇ, ನನಗೆ ಮುಖ್ಯಮಂತ್ರಿಗಳನ್ನಾಗಿ ಮಾಡಲೂ ಗೊತ್ತು. ಅದೇ ರೀತಿ ಮುಖ್ಯಮಂತ್ರಿಗಳನ್ನು ಇಳಿಸುವುದೂ ಗೊತ್ತು ಎಂದು ಹೇಳುವ ಮೂಲಕ ತಾನೆಷ್ಟು ಪ್ರಭಾವಿ ಎಂದು ಜಗಜ್ಜಾಹೀರಾತು ಮಾಡುತ್ತಿದ್ದಂತೆಯೇ ಎಚ್ಚೆತ್ತ ಸಿದ್ದರಾಮಯ್ಯ ತಮ್ಮ ಹಿಂಬಾಲಕರ ಮೂಲಕ ಮುಂದಿನ 5 ವರ್ಷಗಳ ಕಾಲವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳು. ಸದ್ಯಕ್ಕೆ ಮುಖ್ಯಮಂತ್ರಿಯ ಹುದ್ದೆ ಖಾಲಿ ಇಲ್ಲಾ ಎಂಬುದನ್ನು ಹರಿಬಿಡುವ ಮೂಲಕ ಮುಖ್ಯಮಂತ್ರಿಗಳ ಅಧಿಕಾರಾವಧಿ 30-30 ತಿಂಗಳುಗಳ ಕಾಲ ಸಿದ್ದು ಮತ್ತು ಡಿಕೆಶಿ ನಡುವೆ ದೆಹಲಿಯಲ್ಲಿ ಒಪ್ಪಂದವಾಗಿದೆ ಎಂಬುದಾಗಿ ಹರಿದಾಡುತ್ತಿದ್ದ ಸುದ್ದಿಗೆ ಪುಷ್ಟಿಯನ್ನು ತಂದು ಕೊಟ್ಟಿತು.
ಈಗ ನೋಡಿದರೆ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಮುಖ್ಯಮಂತ್ರಿ ಬದಲಾವಣೆಯ ಮಾತು ಹೋದ ಬಂದ ಕಡೆಯಲೆಲ್ಲಾ ಸಣ್ಣ ಪುಟ್ಟ ಚುಲ್ಟಾರಿ ಪುಲ್ಟಾರಿ ಪುಡಾರಿಗಳು ಹೇಳಿಕೊಂಡು ತಿರುಗಾಡುತ್ತಿದ್ದು, ಲೋಕಸಭೆಯ ನಂತರ ಇಲ್ಲವೇ ಲೋಕ ಸಭೆಗೆ ಮುನ್ನವೇ ಸಿದ್ದು ಸರ್ಕಾರ ಉಳಿಯುವುದಿಲ್ಲ ಎಂದು ಬಿಜೆಪಿಯ ಯತ್ನಾಳ್ ಮತ್ತು ಸತೀಶ್ ಜಾರಕೀ ಹೊಳೆ ಹೇಳುತ್ತಿರುವುದರಲ್ಲಿ ಏನೋ ಸತ್ಯವಿದೆ ಎಂದು ರಾಜ್ಯದ ಜನರು ಅರಿಯುವಂತಾಗಿದೆ.
ಇದಕ್ಕೆ ಪ್ರತಿಯಾಗಿ ಮುಂದಿನ ಐದು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಸಿದ್ದು ಬಣದವರು ಹೇಳುತ್ತಿದ್ದಂತೆಯೇ ಮೊದಲ ಬಾರಿಗೆ ಆಯ್ಕೆಯಾಗಿರುವ ಕೆಲವು ಶಾಸಕರು, ನಮ್ಮ ಬಳಿ 70 ಶಾಸಕರ ಬೆಂಬಲವಿದ್ದು ಎರಡೂವರೆ ವರ್ಷಗಳ ನಂತರ ಡಿಕೆಶಿಯವರೇ ರಾಜ್ಯದ ಮುಂದಿನ ಮುಖ್ಯಮಂತ್ರಿಗಳಾಗುವುದು ಶತ ಸಿದ್ದ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದ ಹೈಕಮ್ಯಾಂಡ್ ಸರ್ಕಾರ ವಿರುದ್ಧ ಅನಗತ್ಯವಾದ ಹೇಳಿಕೆಗಳನ್ನು ನೀಡಿದರೆ ಕಠಿಣ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂಬುದನ್ನು ಹೇಳಿದರೂ ಲೆಖ್ಖಿಸದೇ ಪದೇ ಪದೇ ಸರ್ಕಾರಕ್ಕೆ ಮುಜುಗೊರ ಆಗುವಂತಹ ಹೇಳಿಕೆಗಳನ್ನು ನೀಡುವ ಮೂಲಕ ಈ ಸರ್ಕಾರದಲ್ಲಿ ಮನೆಯೊಂದು ನೂರಾರು ಬಾಗಿಲು ಎಂಬಂತಾಗಿದೆ.
ಇದಕ್ಕೆಲ್ಲಾ ಬ್ರೇಕ್ ಹಾಕಲೆಂದೇ ಮೊನ್ನೆ ಹೊಸಪೇಟೆಯಲ್ಲಿ ಮುಂದಿನ ಐದು ವರ್ಷ ಕಾಂಗ್ರೇಸ್ ಸರ್ಕಾರವೇ ಅಧಿಕಾರದಲ್ಲಿ ಮುಂದುವರೆದು ನಾನೇ ಸಿಎಂ ಎನ್ನುವ ಸಿದ್ದರಾಮಯ್ಯ ಹೇಳಿಕೆ ರಾಜ್ಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಧಾನವಿಲ್ಲ. ನಮ್ಮಲ್ಲಿ ಒಡಕಿಲ್ಲ, ನಾವೆಲ್ಲ ಒಂದೇ ಎಂದು ಎಷ್ಟೇ ಬಾರಿ ಪಕ್ಷದ ಮುಖಂಡರು ಮಾಧ್ಯಮಗಳ ಮುಂದೆ ಹೇಳಿಕೊಂಡರೂ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಣ, ಡಿ. ಕೆ. ಶಿವಕುಮಾರ್ ಬಣ ಎಂಬುದಾಗಿ ಎರಡು ಬಣಗಳಿದ್ದು ಆಗ್ಗಾಗ್ಗೆ ತಮ್ಮ ನಾಯಕರ ಹಿಂದಿನ ಬೆಂಬಲದಿಂದ ಅವರ ಪರವಾಗಿ ಬಹಿರಂಗವಾದ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ.
ಇವೆಲ್ಲದರ ಮಧ್ಯೆ ದಲಿತ ಮುಖ್ಯಮಂತ್ರಿಗಳು ಎಂಬ ಹೊಸಾ ವರಾತೆಯನ್ನು ಹುಟ್ಟು ಹಾಕಿ ಆದರ ಕೋಟಾದಲ್ಲಿ ಮಾಜಿ ಉಪಮುಖ್ಯಮಂತ್ರಿ ಮತ್ತು ಹಾಲೀ ಗೃಹಸಚಿವರಾದ ಡಾ. ಪರಮೇಶ್ವರ್ ಅವರು ತಮ್ಮ ಬೆಂಬಲಿಗ ಕೆ.ಎನ್. ರಾಜಣ್ಣ ಅವರ ಮೂಲಕ ತಾವೂ ಸಹಾ ಮುಖ್ಯಮಂತ್ರಿ ಪದವಿಯ ಮೇಲೆ ತಮ್ಮ ಟವೆಲ್ ಹಾಕಿಯಾಗಿದೆ. ಇನ್ನು ಬೆಳಗಾವಿಯ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳೆ ಸಹಾ ತನ್ನದೇ ಗುಂಪೊಂದನ್ನು ಕಟ್ಟಿಕೊಂಡು ಮೈಸೂರು ಮತ್ತು ವಿದೇಶಿ ಪ್ರವಾಸಕ್ಕೆಂದು ಕರೆದುಕೊಂಡು ಹೋಗುತ್ತಾ ತಾನು ಸಹಾ ಮುಖ್ಯಮಂತ್ರಿ ಪದವಿಯ ರೇಸಿನಲ್ಲಿ ಇದ್ದೇನೆ ಎಂದು ಪರೋಕ್ಷವಾಗಿ ತೋರಿಸುವಂತಿದೆ.
ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯನವರು ಇದ್ದರೆ ಉಳಿದ ಖಾತೆಗಳನ್ನು ನೋಡಿಕೊಳ್ಳಲು 33 ಮಂತ್ರಿಗಳು ಇದ್ದರೂ ರಾಜ್ಯದ ಪ್ರತಿಯೊಂದು ವಿಷಯದಲ್ಲೂ ಮೂಗು ತೂರಿಸಿಕೊಂಡು ತಾನೊಬ್ಬ ಸೂಪರ್ ಸಿ.ಎಂ. ಎಂದು ತೋರಿಸಿಕೊಳ್ಳುತ್ತಾ ಟ್ರೋಲ್ ಮಂತ್ರಿ ಎಂದು ಪ್ರ(ಕು)ಖ್ಯಾತವಾಗಿರುವ ಕಾಂಗ್ರೇಸ್ ಪಕ್ಷದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ಸುಪುತ್ರ ಪ್ರಿಯಾಂಕ್ ಖರ್ಗೆ ಸಹಾ ಅವಕಾಶ ಸಿಕ್ಕರೆ ತಾನು ಸಹಾ ಮುಖ್ಯಮಂತ್ರಿಯಾಗಲು ಸಿದ್ದ ಎಂದು ಹೇಳುವ ಮೂಲಕ ಸಿದ್ದುವಿಗೆ ಸದ್ದಿಲ್ಲದೇ ಗುದ್ದನ್ನು ನೀಡಿರುವುದು ಕುತೂಹಲ ಮೂಡಿಸುತ್ತಿದ್ದು ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎಂಬ ಗಾದೆಗೆ ಪುಷ್ಟಿ ಕೊಡುತ್ತಿದೆ.
ಆರಂಭದಲ್ಲಿ ಕೇವಲ ಶಾಸಕ ಮತ್ತು ಸಚಿವರ ನಡುವಿದ್ದ ಜಗಳ ಈಗ ಸಿಎಂ ಕುರ್ಚಿವರೆಗೂ ಬರುವ ಮೂಲಕ ಸಿದ್ದರಾಮಯ್ಯನವರ ನಾಯಕತ್ವದ ಈ ಸರ್ಕಾರ ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ ಮಾತ್ರವಲ್ಲದೇ ಶಾಸಕರಿಂದ ಹಿಡಿದು ಸಚಿವರವರೆಗೂ ಅತೃಪ್ತಿ ಮೂಡಿಸಿದೆ. ಕೇವಲ ಒಂದು ವರ್ಗದ ತುಷ್ಟೀಕರಣ ಮತ್ತು ಉಚಿತ ಭಾಗ್ಯಗಳಿಂದ ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂಬುದು ಅರಿವಾಗಿ ಕೇವಲ ಐದು ತಿಂಗಳೊಳಗೆ ಸಿಎಂ ಸ್ಥಾನದಿಂದ ಸಿದ್ದರಾಮಯ್ಯರವರನ್ನು ಇಳಿಸಬೇಕು ಎಂಬ ಚರ್ಚೆಗಳು ಕಾಂಗ್ರೆಸ್‌ನ ಪಡಸಾಲೆಯಲ್ಲಿಯೇ ಕೇಳಿ ಬರುತ್ತಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.
136 ಸದಸ್ಯರಿರುವ ಸ್ವಪಕ್ಷೀಯರನ್ನೇ ಒಗ್ಗೂಡಿಸಿಕೊಂಡು ಒಂದು ಸುಭದ್ರವಾದ ಸರ್ಕಾರವನ್ನು ಮುನ್ನಡೆಸಲು ಸಿದ್ದರಾಮಯ್ಯನವರಂತಹ ಹಿರಿಯ ಅನುಭವಿ ರಾಜರಣಿಗಳಿಗೇ ಆಗುತ್ತಿಲ್ಲ ಎಂದ ಮೇಲೆ ಇನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಅಪ್ರಬುದ್ಧ ಎಳಸು ರಾಜಕಾರಣಿ ಪಪ್ಪುವಿನನ್ನೇನಾದರೂ ಪ್ರಧಾನ ಮಂತ್ರಿಯನ್ನಾಗಿ ಮಾಡಿದಲ್ಲಿ ಮಮತ ಬ್ಯಾನರ್ಜಿ, ಲಲ್ಲೂ ಮಗ ತೇಜಸ್ವೀ ಯಾದವ್, ಕೇಜ್ರೀವಾಲ್, ಸ್ಟಾಲಿನ್ ನಂತಹ ಎಡಬಿಡಂಗಿಗಳನ್ನು ಕಟ್ಟಿಕೊಂಡು ಹೇಗೆ ನಿಭಾಯಿಸ ಬಲ್ಲಾ? ಎಂಬುದನ್ನು ಊಹಿಸಲೂ ಕಷ್ಟ ಸಾಧ್ಯವಾಗುತ್ತಿದೆ ಎಂದು ದೇಶದ ಜನರು ಮಾತನಾಡಿಕೊಳ್ಳುತ್ತಿರುವುದು ಮುಂಬರುವ ಪಂಚ ರಾಜ್ಯದ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಫಲಿತಾಂಶ ಹೇಗೆ ಇರಬಹುದು ಎಂಬುದನ್ನು ಎತ್ತಿ ತೋರಿಸುತ್ತಿದೆ ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ
ಭ್ರಷ್ಟಾಚಾರ ಮಿತಿ ಮೀರಿದೆ, 6 ರೇ ತಿಂಗಳಲ್ಲಿ ಮಾಧ್ಯಮ ವರ್ಗ ಜನ ಅರ್ಧ ದಿವಾಲಿಯಾಗಿದ್ದಾರೆ. ಸರ್ಕಾರ ಮುಂದುವರೆದರೆ ಕರ್ನಾಟಕ ಕನಿಷ್ಠ ಪಕ್ಷ 20 ವರ್ಷ ಹಿಂದಕ್ಕೆ ಹೋಗುತ್ತೆ
LikeLiked by 1 person
ಈ ನಿರ್ಲಜ್ಜರಿಗೆ ಶಾಲು ಸುತ್ತಿಕೊಳ್ಳುವ ಗೋಜಿಗೆ ಹೋಗದೆ ಎಲ್ಲರಿಗೂ ತೋರಿಸಿಯೇ ಹೊಡೆದಿದ್ದೀರಿ 😂😂😂 ಧನ್ಯವಾದಗಳು
LikeLiked by 1 person