ಪ್ರಬೋಧಿನಿ ಏಕಾದಶಿ

ಏಕಾದಶಿ ಎಂದರೆ 11ನೇಯ ದಿನವಾಗಿದ್ದು, ನಮ್ಮ ಹಿಂದೂ ಪಂಚಾಂಗದಲ್ಲಿ ಪ್ರತಿ 15 ದಿನಕ್ಕೊಮ್ಮೆ (ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷ) ಹನ್ನೊಂದನೆಯ ದಿನಕ್ಕೆ ಏಕಾದಶಿ ಬರುತ್ತದೆ. ಈ ದಿನದಂದು ಬಹುತೇಕ ಆಸ್ತಿಕರು ನಿರಾಹಾರಿಗಳಾಗಿ ಅತ್ಯಂತ ಕಟ್ಟು ನಿಟ್ಟು ಉಪವಾಸವನ್ನು ಮಾಡುತ್ತಾ ಭಗವಂತನ ಧ್ಯಾನದಲ್ಲಿ ನಿರತರಾಗಿರುವುದು ಅನೂಚಾನಾಗಿ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ. ಹೀಗೆ ಚೈತ್ರ ಮಾಸದ ಕಾಮದಾ ಏಕಾದಶಿ, ಆಷಾಢ ಮಾಸದ ಏಕಾದಶಿ, ಕಾರ್ತೀಕ ಮಾಸದ ಪ್ರಬೋಧಿನಿ ಏಕಾದಶಿ, ಪುಷ್ಯ ಮಾಸದ ವೈಕುಂಠ ಏಕಾದಶಿ, ಫಾಲ್ಗುಣದ ಪಾಪ ವಿಮೋಚನೀ ಏಕಾದಶಿಯವರೆಗೂ ಹೀಗೆ ವರ್ಷವಿಡೀ ಬರುವ ಏಕಾದಶಿಗಳಿಗೆ ಅದರದ್ದೇ ಆದ ಮಹತ್ವವಿದೆ.

ಇನ್ನು ವೈಜ್ಞಾನಿಕವಾಗಿಯೂ ಏಕಾದಶಿಯ ಉಪವಾಸ ಅತ್ಯಂತ ಮಹತ್ವದ್ದಾಗಿದೆ. ಲಂಘನಂ ಪರಮೌಷಧಂ ಎಂದರೆ ಉಪವಾಸ ಮಾಡುವುದೂ ಒಂದು ರೀತಿಯ ಔಷಧ ಎಂದೇ ಆಯುರ್ವೇದದಲ್ಲಿ ತಿಳಿಸಲಾಗಿರುವ ಕಾರಣ ಏಕಾದಶಿಯಂದು ಉಪವಾಸ ಮಾಡುವುದೂ ಧಾರ್ಮಿಕವಾಗಿ ಅತ್ಯಂತ ಮಹತ್ವವಾಗಿದೆ. ಉಪವಾಸದ ಮುಖಾಂತರ ನಮ್ಮ ದೇಹದ ಪಚನ ಕ್ರಿಯೆ ಶುದ್ಧಿಗೊಂಡಲ್ಲಿ, ಇಡೀ ದಿನ ದೇವರ ಧ್ಯಾನದಲ್ಲಿ ಆಸಕ್ತರಾಗಿರುವ ಕಾರಣ, ಅದು ಆತ್ಮವನ್ನು ಶುದ್ಧೀಕರಿಸಿಮೋಕ್ಷವನ್ನು ಸಾಧಿಸಲು ಸಹಾಯಕವಾಗುತ್ತದೆ. ಇಡೀ ದಿನ ನಿಟ್ಟುಪವಾಸ ಮಾಡಲು ಆಶಕ್ತರಾದವರು ಮತ್ತು ವಯೋವೃದ್ಧರು, ಸಾತ್ವಿಕವಾದ ಲಘು ಫಲಹಾರವಾದ ವಿವಿಧ ಬಗೆಯ ಹಣ್ಣುಗಳು, ಹಾಲು ಮತ್ತು ಮುಸುರೆಯಲ್ಲದ ಪದಾರ್ಥಗಳನ್ನು ಸ್ವೀಕರಿಸುವ ಪದ್ದತಿಯೂ ರೂಢಿಯಲ್ಲಿದೆ. ಒಂದು ವರ್ಷದಲ್ಲಿ ಬರುವ 24 ಏಕಾದಶಿಗಳನ್ನೂ ವಿಷ್ಣುವಿನ ಒಂದೊಂದು ಅವತಾರವೆಂದೇ ಭಾವಿಸಿದ್ದು ಅಂದು ಉಪವಾಸದಿಂದಿದ್ದು, ಮಾನಸಿಕವಾಗಿ ದೃಢಚಿತ್ತದಿಂದ ಹರಿ ನಾಮ ಜಪ ಮಾಡಿದಲ್ಲಿ ಪುಣ್ಯ ಲಭಿಸುತ್ತದೆ ಎಂದೇ ಬಹುತೇಕ ಆಸ್ತಿಕರ ನಂಬಿಕೆಯಾಗಿದೆ. ಹೀಗೆ ನಿರಾಹಾರಿಗಳಾಗಿ ಭಗವಂತನ ಸ್ಮರಣೆ ಮಾಡುವುದರಿಂದ ಸಾತ್ವಿಕ ಗುಣ ಹೆಚ್ಚಾಗಿ ದೇಹ ಮತ್ತು ಮನಸ್ಸು ಸ್ವಸ್ಥವಾಗಿ ಇರುತ್ತದೆ ಎನ್ನುವುದು ವೈಜ್ಞಾನಿಕವಾಗಿಯೂ ಸಾಭೀತಾಗಿದೆ.

prabhodani_Ekadashiಏಕಾದಶಿ ವ್ರತದ ಅಂಗವಾಗಿ, ಏಕಾದಶಿಯ ಹಿಂದಿನ ದಿನ ದಶಮಿಯಂದು ಕೇವಲ ಮಧ್ಯಾಹ್ನ ಒಂದು ಹೊತ್ತು ಮಾತ್ರವೇ ಊಟ ಮಾಡಿ, ಸಕಲ ಭೋಗಗಳನ್ನು ತ್ಯಜಿಸಿ, ಏಕಾದಶಿಯಂದು ಇಡೀ ದಿನ ಉಪವಾಸವಿದ್ದು, ಮಾರನೆಯ ದಿನ ದ್ವಾದಶಿಯಂದು ನಿತ್ಯಕರ್ಮ ಮುಗಿಸಿ ಭೋಜನ ಮಾಡುವುದು ರೂಢಿಯಲ್ಲಿದೆ. ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥದಲ್ಲಿ ಭಗವಂತನ ಸಮೀಪದಲ್ಲಿರುವುದು ಎಂಬ ಅರ್ಥ ಬರುತ್ತದೆ. ಹೀಗೆ ಶುಚಿರ್ಭೂತನಾಗಿ ಎಡಬಿಡದೆ ಭಗವಂತನ ಸ್ಮರಣೆ ಮಾಡುತ್ತಿರುವುದು ಎಂದರ್ಥವಾಗಿದೆ. ಹೀಗೆ ಮಾಡುವುದರಿಂದ ಏಕ ಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ.

vamanaಉಳಿದೆಲ್ಲಾ ಏಕಾದಶಿಗಿಂತಲೂ ಕಾರ್ತೀಕ ಮಾಸದ ಶುಕ್ಲ ಪಕ್ಷದಂದು ಬರುವ ಪ್ರಬೋಧಿನಿ ಏಕಾದಶಿಯು ಅತ್ಯಂತ ವಿಶೇಷವಾಗಿದೆ. ಪೌರಾಣಿಕ ಹಿನ್ನಲೆಯ ಪ್ರಕಾರ ಭಗವಾನ್ ವಿಷ್ಣುವು ಯುದ್ಧದಲ್ಲಿ ಅಸುರನನ್ನು ಸೋಲಿಸಿದ ನಂತರ ಆಯಾಸ ಪರಿಹಾರಾರ್ಥವಾಗಿ ಆಷಾಢ ಶುದ್ಧ ಶಯನಿ ಏಕಾದಶಿಯಂದು ಮಲಗಿದವನು, ಈ ಚಾತುರ್ಮಾಸ್ಯದ ನಾಲ್ಕು ತಿಂಗಳ ಕಾಲದ ನಿರಂತರ ವಿಶ್ರಾಂತಿ ಪಡೆದ ನಂತರ ಈ ಕಾರ್ತೀಕ ಶುದ್ಧ ಪ್ರಬೋಧಿನಿ ಏಕಾದಶಿಯಂದು ಎಚ್ಚರಗೊಂಡು ವೈಕುಂಠಕ್ಕೆ ಹಿಂದಿರುಗುತ್ತಾನೆ ಎಂಬ ಪ್ರತೀತಿ ಇದ್ದರೆ, ಮತ್ತೊಂದು ದೃಷ್ಟಾಂತದ ಪ್ರಕಾರ, ಭಗವಾನ್ ವಿಷ್ಣುವು ವಾಮನಾವತಾರದಲ್ಲಿ ಮೂರನೇ ಹೆಜ್ಜೆಯನ್ನು ಬಲಿ ಚಕ್ರವರ್ತಿಯ ತಲೆಯ ಮೇಲೆ ಇಟ್ಟು ಆತನನ್ನು ಪಾತಾಳ ಲೋಕಕ್ಕೆ ತಳ್ಳುವ ಮುನ್ನ ಕೊಟ್ಟ ವರದಂತೆ, ನಾಲ್ಕು ತಿಂಗಳ ಕಾಲ ರಾಜ ಬಲಿಯ ಬಾಗಿಲನ್ನು ಕಾವಲು ಮಾಡಿದ ನಂತರ ಇದೇ ಪ್ರಬೋಧಿನಿ ಏಕಾದಶಿಯಂದು ವೈಕುಂಠಕ್ಕೆ ಹಿಂದಿರುಗುತ್ತಾನೆ. ಈ ರೀತಿಯಾಗಿ ಭಗವಾನ್ ವಿಷ್ಣುವು ಬಲಿ ಚಕ್ರವರ್ತಿಯ ಕಾವಲುಗಾರನಾಗಿದ್ದ ಸಮಯದಲ್ಲಿ ಮಹಾ ವಿಷ್ಣುವಿನ ಅನುಪಸ್ಥಿತಿಯಲ್ಲಿ ಬ್ರಹ್ಮ ಮತ್ತು ಶಿವ ಅವರಿಬ್ಬರೂ ವಿಷ್ಣುವಿನ ಕರ್ತವ್ಯವನ್ನು ನಿಭಾಯಿಸುತ್ತಾರೆ ಎಂದು ನಂಬಲಾಗಿದೆ.

tulasi_habba2ಈ ರೀತಿಯಾಗಿ ಭಗವಂತನು ನಿದ್ದೆಯಿಂದ ಜಾಗೃತನಾಗುವ ಪ್ರಬೋಧಿನಿ ಏಕಾದಶಿಯನ್ನು ದೇವ ಉತ್ತಾನ ಏಕಾದಶಿ, ವಿಷ್ಣು ಪ್ರಬೋಧಿನಿ (ವಿಷ್ಣುವಿನ ಜಾಗೃತಿ), ಹರಿ ಪ್ರಬೋಧಿನಿ, ದೇವ ಪ್ರಬೋಧಿನಿ ಏಕಾದಶಿ, ಉತ್ಥಾನ ಏಕಾದಶಿ ಮತ್ತು ದೇವತಾನ್ ಮುಂತಾದ ವಿವಿಧ ಹೆಸರುಗಳಿಂದಲೂ ಕರೆಯಲಾಗುತ್ತದೆ. ಚಾತುರ್ಮಾಸ್ಯದ ಅಂತ್ಯವಾಗಿ ಹಿಂದೂ ವಿವಾಹದ ಋತುವಿನ ಆರಂಭದ ಸೂಚಕವಾಗಿ ಈ ದಿನದಂದು ವಿಷ್ಣು ಮತ್ತು ಲಕ್ಷ್ಮಿ ಅಥವಾ ತುಳಸಿಯ ಜೊತೆಗೆ ಸಾಂಕೇತಿಕವಾಗಿ ವಿವಾಹವನ್ನು ಆಚರಿಸಲಾಗುತ್ತದೆ.

Tulasi_habbaಈ ಪ್ರಬೋಧಿನಿ ಏಕಾದಶಿಯಂದು ಬೆಳ್ಳಂಬೆಳಿಗ್ಗೆ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ, ಇಡೀ ದಿನ ಉಪವಾಸವಿದ್ದು ಸಾಲಿಗ್ರಾಮದ ರೂಪದಲ್ಲಿರುವ ಮಹಾವಿಷ್ಣುವಿನೊಂದಿಗೆ ಲಕ್ಷ್ಮೀಯ ರೂಪದ ತುಳಸಿ ಗಿಡವನ್ನು ಇಟ್ಟು ವಿವಾಹವನ್ನು ನಡೆಸಲಾಗುತ್ತದೆ. ಸಂಜೆ ಮನೆಯ ಮುಂದಿನ ತುಳಸೀ ಗಿಡ ಮುಂದೆ ಅಂದವಾಗಿ ಸುದ್ದೇ ಮತ್ತು ಕೆಮ್ಮಣ್ಣಿನ ರಂಗೋಲಿಯನ್ನು . ಲಕ್ಷ್ಮಿ ಪೂಜೆ ಮತ್ತು ವಿಷ್ಣು ಪೂಜೆಯನ್ನು ಮಾಡಿ ನೈವೇದ್ಯದ ರೂಪದಲ್ಲಿ ಕಬ್ಬು, ಅಕ್ಕಿ ಮತ್ತು ಒಣ ಕೆಂಪು ಮೆಣಸಿನಕಾಯಿಗಳ ನೈವೇದ್ಯವನ್ನು ಮಾಡಿ ಅದರೊಂದಿಗೆ ಯಥಾ ಶಕ್ತಿಯ ದಕ್ಷಿಣೆಯೊಂದಿಗೆ ಸಮೀಪದ ದೇವಾಲಯಗಳ ಅರ್ಚಕರುಗಳಿಗೇ ಇಲ್ಲವೇ ಮನೆಯ ಪುರೋಹಿತರಿಗೆ ದಾನದ ರೂಪದಲ್ಲಿ ನೀಡುತ್ತಾರೆ.

warkari1ನೇಪಾಳದಲ್ಲಿ ಈ ಪ್ರಬೋಧಿನಿ ಏಕಾದಶಿಯನ್ನು ತುಲೋ ಏಕಾದಶಿ ಅರ್ಥಾತ್ ಅತ್ಯಂತ ದೊಡ್ಡ ಏಕಾದಶಿ ಎಂದು ಕರೆಯಲಾಗುತ್ತದೆ. ಇನ್ನು ಮಹಾರಾಷ್ಟ್ರದಲ್ಲಿ ಈ ಪ್ರಬೋಧಿನಿ ಏಕಾದಶಿಯಂದು ಪಂಡರಾಪುರದಲ್ಲಿರುವ ವಿಠ್ಠಲನ ದರ್ಶನಕ್ಕೆ ಯಾತ್ರಾರ್ಥಿಗಳು ವಾರ್ಕರಿ (ಕಾಲ್ನಡಿಗೆ)ಯನ್ನು ಆರಂಭಿಸಿ ಕಾರ್ತೀಕ ಪೌರ್ಣಮಿಯವರೆಗೂ ಐದು ದಿನಗಳ ಕಾಲ ಅತ್ಯಂತ ಅದ್ದೂರಿಯಿಂದ ಜಾತ್ರಾ ಮಹೋತ್ಸವ ನಡೆದು, ಸಾಂಪ್ರದಾಯಿಕವಾಗಿ ಸರ್ಕಾರದ ಪರವಾಗಿ ಈ ಪ್ರಬೋಧಿನಿ ಏಕಾದಶಿಯಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಅಥವಾ ಹಿರಿಯ ಸಚಿವರು ಪೂಜಾ ವಿಧಿವಿಧಾನಗಳನ್ನು ನಡೆಸಿಕೊಂಡು ಬರುವ ಸಂಪ್ರದಾಯವಿದ್ದು ಇದನ್ನು ಸರ್ಕಾರಿ ಮಹಾಪೂಜೆ ಎಂದು ಕರೆಯಲಾಗುತ್ತದೆ.

girnar_parikramaಇನ್ನು ಗುಜರಾತ್‌ನಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಯಾತ್ರಾರ್ತಿಗಳು ಎರಡು ದಿನಗಳ ಅವಧಿಯಲ್ಲಿ ಸಕಲ ದೇವಾನು ದೇವತಿಗಳು ನೆಲೆಸಿರುತ್ತಾರೆ ಎಂದು ನಂಬಲಾಗಿರುವ ಗಿರ್ನಾರ್ ಪರ್ವತದ ಸುಮಾರು 32- ಕಿಮೀ ವಿಸ್ತೀರ್ಣದ ಪ್ರದಕ್ಷಿಣೆಯ ರೂಪದಲ್ಲಿ ಪರಿಕ್ರಮವನ್ನು ಮಾಡುವ ಮೂಲಕ ಆ ಎಲ್ಲಾ ದೇವತೆಗಳಿಗೆ ಕೃತಜ್ಣತೆಗಳನ್ನು ಸಲ್ಲಿಸುವ ಮೂಲಕ ಕೃತಾರ್ಥರಾಗುತ್ತಾರೆ.

pushkar_melaಇನ್ನು ಪ್ರಪ್ರಂಚಲ್ಲಿರುವ ಕೆಲವೇ ಕೆಲವು ಬ್ರಹ್ಮ ದೇವರ ದೇವಾಲಯಗಳಲ್ಲಿ ಬಹು ಪ್ರಮುಖವಾದ ರಾಜಸ್ಥಾನದ ಪುಷ್ಕರ್‌ನಲ್ಲಿ ಪುಷ್ಕರ ಮೇಳವೂ ಸಹಾ ಇದೇ ಪ್ರಬೋಧಿನಿ ಏಕಾದಶಿಯಂದು ಪ್ರಾರಂಭವಾಗಿ ಕಾರ್ತೀಕ ಪೂರ್ಣಿಮೆಯ ವರೆಗೂ ಮುಂದುವರಿಯುತ್ತದೆ. ಈ ಜಾತ್ರಾ ಸಮಯದಲ್ಲಿ ಅಲ್ಲಿ ಸೇರುವ ಲಕ್ಷಾಂತರ ಭಕ್ತಾದಿಗಳು ವಿಶಾಲವಾದ ಪುಷ್ಕರ್ ಸರೋವರದಲ್ಲಿ ಮಿಂದು ಬ್ರಹ್ಮದೇವರ ದರ್ಶನ ಪಡೆದು ಕೃತಾರ್ಥರಾದರೆ, ವಿವಿದೆಡೆಯಿಂದ ಅಲ್ಲಿಗೆ ಬರುವ ಸಾಧು ಸಂತರುಗಳು ಏಕಾದಶಿಯಿಂದ ಹುಣ್ಣಿಮೆಯ ದಿನದವರೆಗೆ ಗುಹೆಗಳಲ್ಲಿ ವಾಸಿಸುವ ಸಂಪ್ರದಾಯವನ್ನು ರೂಢಿಸಿಕೊಂಡಿದ್ದಾರೆ. ಇದೇ ಸಂಧರ್ಭದಲ್ಲಿ ಇಲ್ಲಿ ನಡೆಯುವ ಒಂಟೆಗಳ ಮೇಳದಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಒಂಟೆಗಳು ಇಲ್ಲಿ ಸೇರುವ ಕಾರಣ ಇದು ಏಷ್ಯಾದ ಅತಿದೊಡ್ಡ ಒಂಟೆಗಳ ಮೇಳ ಎಂದು ಪ್ರಖ್ಯಾತಿಯನ್ನು ಪಡೆದುಕೊಂಡಿದೆ.

sugarcaneಇನ್ನು ಉತ್ತರ ಭಾರತದ ಅನೇಕ ಕಡೆಗಳಲ್ಲಿ ಇದೇ ಪ್ರಬೋಧಿನಿ ಏಕಾದಶಿಯಂದೇ ತಮ್ಮ ತಮ್ಮ ಗದ್ದೆಗಳಲ್ಲಿ ಬೆಳೆದಿರುವ ಕಬ್ಬುಗಳನ್ನು ಕಟಾವು ಮಾಡುವ ಮುನ್ನಾ, ರೈತಾಪಿ ವರ್ಗದವರು, ಗದ್ದೆಯಲ್ಲಿ ವಿಧ್ಯುಕ್ತವಾಗಿ ಪೂಜೆ ಸಲ್ಲಿಸಿ ಸಾಂಕೇತಿಕವಾಗಿ ಅದು ಕಬ್ಬಿನ ಜಲ್ಲೆಯನ್ನು ಕಡಿದು ಅದನ್ನು ದೇವರ ಮುಂದೆ ಇಟ್ಟು ಪೂಜಿಸಿ ನಂತರ ಊರಿನ ಪುರೋಹಿತರಿಗೆ, ಅಕ್ಕಸಾಲಿಗರಿಗೆ, ಬಡಗಿಗಳಿಗೆ, ಅಗಸರಿಗೆ ಮತ್ತು ಗದ್ದೆಗಳಿಗೆ ನೀರನ್ನು ಹಾಯಿಸುವವರಿಗೆ ದಾನ ನೀಡಿದ ನಂತರ ಮತ್ತೆ ಐದು ಕಬ್ಬನ್ನು ಮನೆಗೆ ತೆಗೆದುಕೊಂಡು ಹೋಗಿ, ವಿಷ್ಣು ಮತ್ತು ಲಕ್ಷ್ಮಿಯ ಪ್ರತಿಮೆಯೊಂದಿಗೆ ಹಸುಗೂಸಿನ ರೂಪದ ರಂಗೋಲಿಯನ್ನು ಎಳೆದು ಬೆಣ್ಣೆಯನ್ನು ನೈವೇದ್ಯ ಮಾಡಿ ಅದರ ಸುತ್ತಲೂ ತಮ್ಮ ಗದ್ದೆಯಿಂದ ತಂದ ಕಬ್ಬಗಳನ್ನು ಅಲಂಕಾರಿಕ ರೂಪದಲ್ಲಿ ಇಡಲಾಗುತ್ತದೆ.

varkari2ಒಂದೇ ಹಬ್ಬವನ್ನು ಅಯಾಯಾ ಪ್ರಾಂತ್ಯಗಳ ಸಂಪ್ರದಾಯಗಳ ಅನುಗುಣವಾಗಿ ಈ ರೀತಿಯಾಗಿ ವಿವಿಧ ರೀತಿಯಲ್ಲಿ ಆಚರಿಸುವ ಮೂಲಕ ವಿವಿಧತೆಯಲ್ಲೂ ಏಕತೆಯನ್ನು ಎತ್ತಿ ಹಿಡಿಯುವ ಮೂಲಕ ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂಬುದನ್ನು ತೋರಿಸುವುದು ನಿಜಕ್ಕೂ ಅನನ್ಯ ಮತ್ತು ಅದ್ಭುತವೇ ಸರಿ.

ಏನಂತೀರೀ?
ಸೃಷ್ಟಿಕರ್ತ ಉಮಾಸುತ

One thought on “ಪ್ರಬೋಧಿನಿ ಏಕಾದಶಿ

Leave a comment