ಜೀವನದಲ್ಲಿ ಕೆಲವೊಂದು ಸಂಬಂಧಗಳನ್ನು ವರ್ಣಿಸಲು ಸಾಧ್ಯವಿರದೇ, ಅದನ್ನು ಕೇವಲ ಅನುಭವಿಸಿಯೇ ತೀರಬೇಕು ಅಂತಹ ಸಂಬಂಧಗಳಲ್ಲಿ ತಾಯಿ ಮಗನ ಸಂಬಂಧವೂ ಹೌದು. ಹತ್ತು ತಿಂಗಳುಗಳ ಕಾಲ ಹೊತ್ತು ಹೆತ್ತು, ಸಾಕಿ ಸಲಹಿ, ವಿದ್ಯೆ ಬುದ್ಧಿಯ ಜೊತೆಗೆ ಒಳ್ಳೆಯ ಸಂಸ್ಕಾರವಂತನಾಗಿ ಮಾಡುವುದು ನಿಜಕ್ಕೂ ಅಧ್ಭುತವೇ ಸರಿ. ಹಾಗಾಗಿಯೇ ಆಂಗ್ಲಭಾಷೆಯಲ್ಲಿ mother is a fact father is assumption or mother is a truth father is a belief ಎಂಬ ನಾಣ್ಣುಡಿ ಇದೆ. ಅಂದರೆ, ಈ ಜಗತ್ತಿನಲ್ಲಿ ತಾಯಿ ಮಕ್ಕಳ ಕರುಳು ಸಂಬಂಧ ಎನ್ನುವುದು ಸತ್ಯ. ಅದೇ ತಂದೆಯ ವಿಷಯದಲ್ಲಿ ಅದು ಕೇವಲ ನಂಬಿಕೆ ಎನಿಸಿಕೊಳ್ಳುತ್ತದೆ. ತಾಯಿ ತೋರಿಸುವವರೇ ತಂದೆೆ ಎನಿಸಿಕೊಳ್ಳುತ್ತಾರೆ. (ಇತ್ತೀಚಿನ ದಿನಗಳಲ್ಲಿ ಆಧುನಿಕತೆ ಬೆಳೆದಂತೆಲ್ಲಾ ತಂತ್ರಜ್ಞಾನದಿಂದ DNA ಪರೀಕ್ಷೆಯ ಮೂಲಕ ನಿಜವಾದ ತಂದೆಯನ್ನೂ ಸಹಾ ಕಂಡುಕೊಳ್ಳಬಹುದಾಗಿದೆ). ಪುರಾಣದಲ್ಲಿ ಶ್ರವಣ ಕುಮಾರ ಮತ್ತು ಪ್ರಭು ಶ್ರೀರಾಮ ಮಾತಾ ಪಿತೃವಾಕ್ಯ ಪರಿಪಾಲನೆಗೆ ಹೆಸರಾಗಿದ್ದದ್ದು ನಮ್ಮ ಮುಂದಿದ್ದಿದ್ದರೆ, ಇನ್ನು ಇತ್ತೀಚಿನ ಕಾಲ ಮಾನದಲ್ಲಿ ಕನ್ನಡದ ಮೇರು ನಟಿ ಲೀಲಾವತಿ ಮತ್ತು ಅವರ ಮಗ ವಿನೋದ್ ರಾಜ್ ಅವರ ಅಮ್ಮಾ ಮಗನ ಸಂಬಂಧ ನಿಜಕ್ಕೂ ಅದ್ಭುತ, ಅನನ್ಯ ಮತ್ತು ಅನುಕರಣಿಯವೇ ಸರಿ. ಸುಮಾರು 600 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಕನ್ನಡಿಗರ ಮನೆಮಾತಾಗಿದ್ದ ಶ್ರೀಮತಿ ಲೀಲಾವತಿಅವರ ವ್ಯಕ್ತಿ, ವಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.
1949ರಲ್ಲಿ ಶಂಕರ್ ಸಿಂಗ್ ಅವರ ನಾಗಕನ್ನಿಕ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಲೀಲಾವತಿಯವರು ನಂತರ ನೋಡ ನೋಡುತ್ತಿದ್ದಂತೆಯೇ ನಾಯಕಿಯಾಗಿ ಭಡ್ತಿ ಪಡೆದು ನೂರಾರು ಚಿತ್ರಗಳಲ್ಲಿ ನಟಿಸಿ, ವಯಸ್ಸಿನ ಅನುಗುಣವಾಗಿ ತಾಯಿ, ಅತ್ತೆ, ಅಜ್ಜಿ ಮುಂತಾದ ಪೋಷಕ ಪಾತ್ರಗಳಲ್ಲಿಯೂ ನಟಿಸುವ ಮೂಲಕ ಸೈ ಎನಿಸಿಕೊಂಡಿದ್ದು ನಿಜಕ್ಕೂ ಅದ್ಭುತವೇ ಸರಿ. ಕನ್ನಡದಲ್ಲಿ ಸುಮಾರು 400 ಚಿತ್ರಗಳಲ್ಲದೇ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಸುಮಾರು 200 ಚಿತ್ರಗಳು ಸೇರಿದಂತೆ ಒಟ್ಟು 600 ಚಿತ್ರಗಳಲ್ಲಿ ನಟಿಸುವ ಮೂಲಕ ಒಂದು ಕಾಲದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದದ್ದು ಈಗ ಇತಿಹಾಸ. ಕನ್ನಡ ಮೇರು ನಟ ಡಾ. ರಾಜಕುಮಾರ್ ಅವರೊಂದಿಗೆ ಸುಮಾರು 46 ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ನಟಿ ಲೀಲಾವತಿ ಅವರದ್ದಾಗಿದೆ.
1937ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಅತ್ಯಂತ ಬಡತನದ ಕುಟುಂಬವೊಂದರಲ್ಲಿ ಜನಿಸಿದ್ದ ಲೀಲಾ ಕಿರಣ್ ಬಾಲ್ಯದಲ್ಲಿ ಸೇಂಟ್ ಜೋಸೆಫ್ ಎಲಿಮೆಂಟರಿ ಶಾಲೆಯಲ್ಲಿ ಓದುತ್ತಿರುವಾಗಲೇ ತಮ್ಮ ತಂದೆ ಮತ್ತು ತಾಯಿಯರನ್ನು ಕಳೆದು ಕೊಂಡು ಅನಾಥರಾಗಿದ್ದಲ್ಲದೇ, ಅವರು ಎರಡನೇ ತರಗತಿಯಲ್ಲಿ ಓದುತ್ತಿರುವಾಗಲೇ, ಕೊತ ಕೊತನೆ ಎಣ್ಣೆ ಕುದಿಯುತ್ತಿದ್ದ ಬಾಣಲೆಯಲ್ಲಿ ಅಚಾನಕ್ಕಾಗಿ ಕಾಲು ಹಾಕಿ ಕಾಲು ಸುಟ್ಟ ಕಾರಣ ಹಲವು ತಿಂಗಳು ಶಾಲೆಗೆ ಹೋಗಲಾಗದೇ, ಕಲಿಯುವ ಹಪಾ ಹಪಿ ಇದ್ದರೂ, ತಂದೆ ತಾಯಿಯರನ್ನು ಕಳೆದುಕೊಂಡು ತಬ್ಬಲಿಯಾದ ಕಾರಣ, ಅವರ ಶಿಕ್ಷಣ ಅಲ್ಲಿಗೇ ಕೊನೆಯಾಗಿದ್ದಲ್ಲದೇ, ಜೀವನೋಪಾಯಕ್ಕಾಗಿ, ಕ್ರಿಶ್ಚಿಯನ್ ದಂಪತಿಗಳ ಮನೆಯಲ್ಲಿ ಸಾಕು ಮಗುವಾಗಿ ಬೆಳೆದಿದ್ದಲ್ಲದೇ, ಆ ಮನೆಯಲ್ಲೇ ಕಸಗುಡಿಸುವ, ಮುಸುರೆ ತಿಕ್ಕವ ಕೆಲಸವಲ್ಲದೇ, ಆ ಮನೆಯ ಯುಜಮಾನಿಯ ತಲೆಯ ಹೇನು ಹೆಕ್ಕುವ ಕೆಲಸವನ್ನೂ ಮಾಡ ಬೇಕಾದಂತಹ ಅನಿವಾರ್ಯ ಅವರಿಗಿತ್ತು.
ಹೀಗೆ ಅವರಿವರ ಮನೆಯ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಲೇ, ತಮ್ಮ ಮನೆಯ ಮುಂದೆಯೇ ಇದ್ದ ಸಿನಿಮಾ ಟೆಂಟಿನಲ್ಲಿ ಪ್ರತಿದಿನವೂ ಸಿನಿಮಾ ನೋಡುವ ಅಭ್ಯಾಸವನ್ನು ರೂಡಿಸಿಕೊಂಡ ಲೀಲಾ ಕಿರಣ್ ಅವರಿಗೆ ಹದಿನೈದು ವರ್ಷ ವಯಸ್ಸಾಗಿದ್ದಾಗಲೂ, ಪ್ರತೀ ದಿನವೂ ಆ ಬೆಳ್ಳಿ ಪರದೆಯ ಹಿಂದೆ ಕಲಾವಿದರುಗಳು ನಟಿಸುತ್ತಿದ್ದಾರೆ ಎಂದೇ ನಂಬಿದ್ದರಂತೆ. ಅದೊಮ್ಮೆ ಅವರ ಅತ್ಮೀಯರೊಬ್ಬರು ನಾಟಕ ಮತ್ತು ಸಿನಿಮಾ ಎರಡವರ ನಡುವಿನ ವೆತ್ಯಾಸವನ್ನು ತಿಳಿಸಿದ್ದಲ್ಲದೇ, ಸಿನಿಮ ಚಿತ್ರೀಕರಣವನ್ನು ಒಮ್ಮೆ ಮಾಡಿ ನಂತರ ಅದನ್ನು ರೀಲ್ ಮುಖಾಂತರ ಎಲ್ಲೆಡೆಯಲ್ಲಿಯೂ ಪ್ರದರ್ಶಿಸುತ್ತಾರೆ ಎಂದು ತಿಳಿಸಿದರಲ್ಲದೇ, ಸಿನಿಮಾದಲ್ಲಿ ನಟಿಸುವವರಿಗೆ ಹೇರಳವಾದ ಹಣ ದೊರೆಯುತ್ತದೆ ಎಂಬುದನ್ನು ತಿಳಿದ ನಂತರ ಹದಿಹರೆಯ ಸಹಜ ಸುಂದರಿಯಾಗಿದ್ದ ಲೀಲಾ ಕಿರಣ್ ಅವರಿಗೂ ನಟಿಸುವ ಆಸೆಯಾಗಿ, ತಮ್ಮ 16ನೇ ವಯಸ್ಸಿನಲ್ಲಿ ಕನ್ನಡ ಚಿತ್ರಗಳು ತಯಾರಾಗುತ್ತಿದ್ದ ಮೈಸೂರಿಗೆ ಬರುತ್ತಾರೆ.
ಮೈಸೂರಿನ ಸ್ಟುಡಿಯೋಗಳಲ್ಲಿ ಅಂದಿನ ಕಾಲದಲ್ಲಿ ವರ್ಷಕ್ಕೆ ಒಂದೋ ಇಲ್ಲವೇ ಎರಡು ಚಿತ್ರಗಳು ತಯಾರಾಗುತ್ತಿದ್ದಂತಹ ಸಂಧರ್ಭದಲ್ಲಿ ನಟಿಯಾಗ ಬೇಕೆಂದು ತಮ್ಮ ಹುಟ್ಟೂರು ಬಿಟ್ಟು ಮೈಸೂರಿಗೆ ಬಂದಿದ್ದ ಲೀಲಾವತಿ, ನಟನೆಯನ್ನು ಕಲಿಯುವ ಮನಸ್ಸಿನಿಂದ ಚಂಚಲಾ ಕುಮಾರಿ ಎಂಬ ನಾಟಕದಲ್ಲಿ ನಟಿಸುವ ಅವಕಾಶ ದೊರಕಿದ ಕೂಡಲೇ ಎರಡೂ ಕೈಗಳಿಂದ ಆ ಅವಕಾಶವನ್ನು ಬಾಚಿಕೊಂಡಿದ್ದಲ್ಲದೇ, ಮುದ್ದು ಮುದ್ದಾಗಿ ಅತ್ಯಂತ ಸ್ಪಷ್ಟವಾಗಿ ಮಾತನಡುತ್ತಿದ್ದದ್ದನ್ನು ಗಮನಿಸಿದ ಅಂದಿನ ಶಂಕರ್ ಫಿಲಂಸ್ ನ ಶ್ರೀ ಶಂಕರ್ ಸಿಂಗ್ ಅವರು ತಮ್ಮ ನಾಗ ಕನ್ನಿಕಾ ಸಿನಿಮಾದ ಸಣ್ಣ ಪಾತ್ರವೊಂದರಲ್ಲಿ ನಟಿಸಲು ಅವಕಾಶ ನೀಡಿದಾಗ, ಲೀಲಾ ಕಿರಣ್ ಎಂಬ ಹೆಸರಿನ ಬದಲಾಗಿ ಆಕರ್ಶಣೀಯವಾದಂತಹ ಲೀಲಾವತಿ ಎಂದು ಹೆಸರು ಬದಲಿಸುತ್ತಿದ್ದಂತೆಯೇ ಅವರ ಅದೃಷ್ಟವೂ ಬದಲಾಯಿತು ಎನ್ನುವುದು ಸುಳ್ಳಲ್ಲ.
ಆದಾದ ಬಳಿಕ ಲೀಲಾವತಿಯವರಿಗೆ ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಪ್ರಹ್ಲಾದನ ತಾಯಿ ಖಯಾದುವಾಗಿ ನಟಿಸುವ ಅವಕಾಶ ದೊರಕಿ, ಅದರಲ್ಲಿ ಎಲ್ಲರ ಮನಸ್ಸೆಳೆಯುತ್ತಿದ್ದಂತೆಯೇ, ಮಾಂಗಲ್ಯ ಯೋಗ, ಧರ್ಮ ವಿಜಯ, ರಣದೀರ ಕಂಠೀರವ ಮುಂತಾದ ಒಂದರ ಹಿಂದೆ ಒಂದು ಸಿನಿಮಾಗಳಲ್ಲಿ ಅವಕಾಶ ದೊರಕುತ್ತಿದ್ದಂತೆಯೇ, ಅಂದಿನ ಕಾಲದಲ್ಲಿ ದಕ್ಷಿಣ ಭಾರತದ ಎಲ್ಲಾ ಸಿನಿಮಾಗಳ ತವರೂರಾಗಿದ್ದ ಮದ್ರಾಸಿಗೆ ತಮ್ಮ ವಾಸವನ್ನು ಬದಲಿಸಿ ರಾಣಿ ಹೊನ್ನಮ್ಮ ಸಿನಿಮಾ ಅತ್ಯಂತ ಯಶಸ್ವಿಯಾಗುತ್ತಿದ್ದಂತೆಯೇ ಕನ್ನಡವಲ್ಲದೇ, ತಮಿಳು, ತೆಲುಗು ಮತ್ತು ಮಲೆಯಾಳಂ ಸಿನಿಮಾದಲ್ಲಿಯೂ ನಟಿಸುವ ಅವಕಾಶವನ್ನು ಪಡೆದು ಬಲು ಬೇಗನೆ ಬಹು ಭಾಷಾ ತಾರೆಯಾಗಿ ಪ್ರಸಿದ್ದಿ ಪಡೆದರು.
ಒಬ್ಬ ಕಲಾವಿದೆಯಾಗಿ ಅಷ್ಟೆಲ್ಲಾ ಸಾಧನೆಗಳನ್ನು ಮಾಡಿದ ನಂತರ ಉಳಿದ ನಟ ನಟಿಯರಂತೆ ಐಶಾರಮ್ಯದ ಜೀವನ ನಡೆಸುವ ಅವಕಾಶವನ್ನು ಹೊಂದಿದ್ದರು ಸಹಾ, ಲೀಲಾವತಿಯವರ ಮನಸ್ಸಿನಲ್ಲಿ ಮಣ್ಣಿನ ಮೇಲೆ ಆಸೆ ಇದ್ದ ಕಾರಣ, ತಾವು ಕಷ್ಟ ಪಟ್ಟು ಗಳಿದ ಹಣದಲ್ಲಿ ಮದ್ರಾಸಿನಲ್ಲಿ ಜಮೀನನ್ನು ಖರೀದಿಸಿ ಬಿಡುವಿದ್ದಾಗಲೆಲ್ಲಾ ತಮ್ಮ ಜಮೀನಿನಲ್ಲಿ ಕೃಷಿಕರಾಗಿ ಕೆಲಸ ಮಾಡುತ್ತಾ ಮಾಡಿಸುತ್ತಾ ಮತ್ತೊಂದು ದೊಡ್ಡದಾದ ಲೋಕವನ್ನೇ ಸೃಷ್ಟಿಸಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ. 80ರ ದಶಕದಲ್ಲಿ ಕನ್ನಡ ಚಿತ್ರರಂಗ ಮತ್ತೆ ಬೆಂಗಳೂರಿನ ಕಡೆ ಮುಖ ಮಾಡಿದಾಗ, ತಮ್ಮ ಜಮೀನ ಮೇಲಿನ ಮೋಹದಿಂದಾಗಿ ಆರಂಭದಲ್ಲಿ ಬೆಂಗಳೂರಿಗೆ ಬರಲು ಇಚ್ಚಿಸದ ಲೀಲಾವತಿಯವರು ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯ ಪೋಲೀಸ್ ಕಮಿಷಿನರ್ ಕಛೇರಿಯ ಪಕ್ಕ ಮತ್ತು ಇಂಡಿಯನ್ ಕಾಫೀ ಬೋರ್ಡ್ ನ ಎದುರಿಗಿದ್ದ ಶ್ಯಾಮ ಪ್ರಕಾಶ್ ಹೋಟೆಲ್ ನಲ್ಲಿ ಖಾಯಂ ಕೊಠಡಿಯನ್ನು ಪಡೆದುಕೊಂಡು ಬೆಂಗಳೂರಿಗೆ ಬಂದಾಗಲೆಲ್ಲಾ ಆ ಹೋಟೆಲ್ಲಿನಲ್ಲೇ ಇರುತ್ತಿದ್ದರು. 90ರ ದಶಕದಲ್ಲಿ ಆ ಹೋಟೆಲ್ಲನ್ನು ಕೆಡವಿ ಆ ಜಾಗದಲ್ಲಿ ದೊಡ್ಡದಾದ ಸಾಘ್ಟ್ ವೇರ್ ಕಂಪನಿಯನ್ನು ಕಟ್ಟಲು ಮುಂದಾದಾಗ, ತಮ್ಮ ನೆಚ್ಚಿನ ಮತ್ತು ಅದೃಷ್ಟದ ಕೊಠಡಿಯನ್ನು ಬಿಡಲು ಒಪ್ಪದ ಲೀಲಾವತಿಯವರ ಮನಸ್ಸನ್ನು ಬದಲಿಸಲು ಆ ಹೋಟೆಲ್ಲಿನ ಮಾಲಿಕರು ಪಟ್ಟ ಪಾಡು ಬಹುತೇಕರಿಗೆ ತಿಳಿದಿಲ್ಲ.
ನಂತರದ ದಿನಗಳಲ್ಲಿ ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ಆರಂಭವಾಗುತ್ತಿದ್ದದ್ದನ್ನು ಗಮನಿಸಿ ಮದ್ರಾಸಿನ ತಮ್ಮ ಜಮೀನನ್ನು ಮಾರಿ ಆ ಹಣದಲ್ಲಿ ಬೆಂಗಳೂರಿನ ಹೆಸರುಘಟ್ಟದ ಸೋಲದೇವನ ಹಳ್ಳಿಯ ಬಳಿ ಜಮೀನನ್ನು ತೆಗೆದುಕೊಂಡು ಮತ್ತೆ ತಮ್ಮ ನೆಚ್ಚಿನ ಕೃಷಿ ಕಾಯಕವನ್ನು ಮುಂದುವರೆಸಿದ್ದಲ್ಲದೇ, ಅದಾಗಲೇ ವಯಸ್ಸಿಗೆ ಬಂದಿದ್ದ ಮಗ ವಿನೋದ್ ಅವರನ್ನು ಕನ್ನಡ ಚಿತ್ರರಂಗದಲ್ಲಿ ತರಲು ಮುಂದಾದರು. ಕನ್ನಡದ ಕುಳ್ಳ ಎಂದೇ ಪ್ರಖ್ಯಾತರಾಗಿರುವ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್, ಡ್ಯಾನ್ಸ್ ರಾಜಾ ಡ್ಯಾನ್ಸ್ ಸಿನಿಮಾದ ಮೂಲಕ ಕೇವಲ ವಿನೋದ್ ಆಗಿದ್ದ ಲೀಲಾವತಿ ಅವರ ಮಗನನ್ನು ವಿನೋದ್ ರಾಜ್ ಎಂಬ ಹೆಸರಿಸಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುದರು. ಆದುವರೆವಿಗೂ ಕೈ ಕಾಲು ಆಡಿಸುವುದೇ ನೃತ್ಯ ಎಂದು ಭಾವಿಸಿದ್ದ ಕನ್ನಡ ಚಿತ್ರರಂಗದ ನಟನಟಿಯರಿಗೆ ಮತ್ತು ಕನ್ನಡಿಗರಿಗೆ ವಿನೋದ್ ರಾಜ್ ನ ಬ್ರೇಕ್ ಡ್ಯಾನ್ಸ್ ಅದ್ಭುತ ಎನಿಸಿದ ಕಾರಣ ರಾತ್ರೋ ರಾತ್ರೀ ವಿನೋದ್ ರಾಜ್ ಜಗತ್ ಪ್ರಸಿದ್ದಿಯನ್ನು ಪಡೆದರೂ ನಂತರದ ದಿನಗಳಲ್ಲಿ ಕೆಲವು ಪಟ್ತ ಭದ್ರ ಹಿತಾಸಕ್ತಿಗಳ ಕೈವಾಡದಿಂದಾಗಿ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶ ಪಡೆಯದೇ ಹೋದರೂ ಅದನ್ನು ಮನಸ್ಸಿಗೆ ಹಾಕಿಕೊಳ್ಳದೇ ತಾಯಿ ಮಗ ತಮ್ಮ ನೆಚ್ಚಿನ ತೋಟದಲ್ಲಿ ಹಣ್ಣು ತರಕಾರಿಗಳನ್ನು ಬೆಳೆದು ಮಾರುಕಟ್ಟೆಯಲ್ಲಿ ಮಾರುವ ಮೂಲಕ ಎಂದಿನಂತೆ ಜೀವನ ನಡೆಸಲು ಮುಂದಾದರು.
ಆವಕಾಶ ಸಿಕ್ಕಾಗ ನಟನೆ, ಕೆಲಸ ಇಲ್ಲದಿದ್ದಾಗ ತಾವಾಯಿತು, ತಮ್ಮ ಮಗನಾಯಿತು ಮತ್ತವರ ತೋಟವಾಯಿತು ಎಂಬುದಾಗಿ ಇದ್ದರೂ, ವಿವಾದಗಳು ಲೀಲಾವತಿಯನ್ನರಸಿ ಬಂದಿದ್ದಂತೂ ಸುಳ್ಳಲ್ಲಾ. ಮಗ ವಿನೋದ್ ಅವರ ಜೊತೆ ರಾಜ್ ಅಂಕಿತನಾವನ್ನು ಸೇರಿಸಿ ಚಿತ್ರರಂಗಕ್ಕೆ ಪರಿಚಯಿಸಿದ ಕೂಡಲೇ ವಿನೋದ್ ರಾಜ್ ರಾಜಕುಮಾರ್ ಅವರ ಮಗನಂತೇ, ರಾಜಕುಮಾರ್ ಅವರು ಲೀಲಾವತಿಯವರನ್ನು ಗುಟ್ಟಾಗಿ ಮದುವೆ ಆಗಿದ್ದಾರಂತೆ ಎಂಬ ಸುದ್ದಿ ಹರಡುತ್ತಿದ್ದಾಗ, ಲೀಲಾವತಿಯವರಾಗಲೀ ವಿನೋದ್ ರಾಜ್ ಅವರಾಗಲೀ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ಹೋದಾಗ, ಮೌನಂ ಸಮ್ಮತಿ ಲಕ್ಷಣಂ ಎನ್ನುವಂತಾಗಿದ್ದು ಸುಳ್ಳಲ್ಲ. ನಂತರ ಕನ್ನಡ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಯವರು ಈಟೀವಿ ಅವರಿಗೆ ನಡೆಸಿಕೊಡುತ್ತಿದ್ದ ಎಂದೂ ಮರೆಯಲಾಗದ ಹಾಡು ಕಾರ್ಯಕ್ರಮದಲ್ಲಿ ಲೀಲಾವತಿಯವರನ್ನು ಅತಿಥಿಯಾಗಿ ಕರೆಸಿ ಅವರ ಮತ್ತು ರಾಜ್ ಅವರ ನಡುವಿನ ಸಂಬಂಧದ ಕುರಿತಾಗಿ ಮಾತನಾಡಿಸಿದಲ್ಲದೇ, ರಾಜ್ ಲೀಲಾ ವಿನೋದ ಎಂಬ ಪುಸ್ತಕವನ್ನೂ ಸಹಾ ಬರೆಯುವ ಮೂಲಕ ವಿನೋದ್ ರಾಜ್ ಅವರು ರಾಜ ಕುಮಾರ್ ಅವರ ಮಗ ಎಂದು ಅಧಿಕೃತ ಗೊಳಿಸಿದರು.
ಇದೇ ಕುರಿತಾಗಿ ರಾಜ್ ಕುಟುಂದ ಆಪ್ತರಾಗಿದ್ದ ಪತ್ರಕರ್ತರೊಬ್ಬಬ್ಬರು ರಾಜ ಕುಮಾರ್ ಅವರ ಕುರಿತಾಗಿ ಬರೆದ ಪುಸ್ತಕದ ಅಧ್ಯಾಯವೊಂದರಲ್ಲಿ. 90ರ ದಶಕದಲ್ಲಿ ತಮ್ಮ ಮತ್ತು ಲೀಲಾವತಿಯವರ ನಡುವೆ ಅನ್ಯೋನ್ಯ ಸಂಬಂಧವಿದ್ದದ್ದನ್ನು ಒಪ್ಪಿಕೊಂಡಿದ್ದರಾದರೂ, 1968ರಲ್ಲಿ ವಿನೋದ್ ರಾಜ್ ಹುಟ್ಟುವ ಮೇಳೆಗೆ ತಮ್ಮಿಬ್ಬರ ನಡುವಿನ ಸಂಬಂಧ ಬಿಟ್ಟಿತ್ತು. ಲೀಲಾವತಿಯವರು ಆರಂಭದಲ್ಲಿ ಶ್ರೀ ಮಹಾಲಿಂಗ ಭಾವವತರು ನಡೆಸುತ್ತಿದ್ದ ಶ್ರೀ ಸತ್ಯ ಸಾಮ್ರಾಜ್ಯ ನಾಟಕದ ಕಂಪನಿಯಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದದ್ದಲ್ಲದೇ ನಂತರ ಅವರನ್ನೇ ಮದುವೆಯಾಗಿದ್ದು ವಿನೋದ್ ರಾಜ್ ಮಹಾಲಿಂಗ ಭಾಗವತರ್ ಅವರ ಮಗ ಎಂಬುದಾಗಿ ತಿಳಿದು ಬಂದ್ದಿತ್ತು ಎಂಬುದನ್ನು ತಿಳಿಸಿದ್ದರು ಎಂದು ಬರೆದಿದ್ದಾರೆ. ತನ್ನ ಮಗನ ಭವಿಷ್ಯಕ್ಕಾಗಿ ಇಂತಹ ವಿಷಯವನ್ನು ಮುಚ್ಚಿಟ್ಟು ತಮ್ಮ ಮಗ ಎಂದು ಹೇಳಿಕೊಂಡಲ್ಲಿ ಅದರಿಂದ ತಮಗೆ ಯಾವುದೇ ಆಕ್ಷೇಪಣೆ ಇಲ್ಲಾ! ಎಂಬುದಾಗಿಯೂ ತಿಳಿಸಿದ್ದರು ಎಂದಿರುವುದು ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎನ್ನುವಂತಾಗಿತ್ತು ಎನ್ನುವೂ ಸತ್ಯ
ಈ ಕುರಿತಂತೆಯೇ ಮೌನ ಮುರಿಯದ ಲೀಲಾವತಿ ಮತ್ತು ಅವರ ಮಗ, ಕಾಕತಾಳೀಯ ಎನ್ನುವಂತೆ ರಾಜಕುಮಾರ್ ಅವರು ನಿಧನರಾದ ದಿನವೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಅಮ್ಮಾ ಮಗ ಇಬ್ಬರು ಮುಡಿ ಕೊಟ್ಟು ಹಿಂದಿರುಗುವಾಗ ರಾಜ್ ಅವರ ಮರಣದ ಸುದ್ದಿ ಕೇಳಿ ಅವರ ಅಂತ್ಯ ಸಂಸ್ಕಾರಕ್ಕೆ ನೇರವಾಗಿ ಬಂದಾಗ ಖಾಸಗೀ ವಾಹಿನಿಯ ನೇರ ಸಂದರ್ಶನದಲ್ಲಿ ವಿನೋದ್ ರಾಜ್ ಅವರು ನೆನ್ನೆ ನಾವಿಬ್ಬರೂ ಅಲ್ಲಿ ತಿರುಪತಿ ತಿಮ್ಮಪ್ಪನಿಗೆ ಕೂದಲು ಸೇವೆ ಮಾಡಿದರೆ, ಇಲ್ಲಿ ದೊಡ್ಡವರು ನಿಧನರಾಗಿದ್ದಾರೆ, ಇದೇ ಅಲ್ಲವೇ ವಿಧಿ! ಎನ್ನುವ ಮಾರ್ಮಿಕ ನುಡಿಗಳನ್ನಾಡುವ ಮೂಲಕ ಪರೋಕ್ಷವಾಗಿ ತಾವು ರಾಜ್ ಕುಮಾರ್ ಅವರ ಮಗ ಎಂದು ಹೇಳಿದ್ದಲ್ಲದೇ, ಅದೇ ಅರ್ಥ ಬರುವ ಹಾಡೊಂದನ್ನು ದುಃಖಭರಿತವಾಗಿ ಹಾಡಿದ್ದದ್ದು ಎಲ್ಲರ ಮನಸ್ಸಿನಲ್ಲೂ ಇಂದಿಗೂ ಹಚ್ಚ ಹಸಿರಾಗಿಯೇ ಇದೆ.
ಹೌದು ನಿಜ ತಮ್ಮ ಮಗನಿಗೋಸ್ಕರ ಲೀಲಾವತಿ ಕಂಡ ಕನಸುಗಳು ಮತ್ತು ಅದನ್ನು ಸಾಕಾರಗೊಳಿಸಲು ಆಕೆ ಮಾಡಿದ ಸಾಹಸಗಳು ಇವೆಲ್ಲವೇ ಒಂದು ಮೂರ್ನಾಲ್ಕು ಸಿನಿಮಾಗಳಿಗೆ ಸರಕಾಗುತ್ತದೆ. ಹಾಗಾಗಿ ಲೀಲಾವತಿಯವರ ಖಾಸಗಿ ಬದುಕಿನ ನೋವು ಮತ್ತು ಸಂತಸಗಳು ಆಕೆಗೆ ಮತ್ತು ಅವರ ಮಗನಿಗಷ್ಟೇ ಮೀಸಲೇ ಹೊರತು ಮತ್ತಾರಿಗೂ ಅದರ ಕುರಿತಾಗಿ ಮಾತಾಡುವ ಹಕ್ಕಿಲ್ಲ. ಅದೇ ರೀತಿ ಜೀವನವಿಡೀ ಆಕೆ ಅನುಭವಿಸಿದ ನೋವುಗಳು ಮತ್ತು ಒಳಗುದಿಗಳಿಗಳಲ್ಲಿ ಮಿಂದು ಬಂದವರಿಗಷ್ಟೇ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಕೊನೆ ದಿನದವರೆಗೂ ತನ್ನ ಬದುಕಿನ ಅನೇಕ ರಹಸ್ಯಗಳನ್ನು ತನ್ನ ಒಡಲೊಳಗೇ ಇಟ್ಟು ಕೊಂಡು ಮಿಂಚಿ ಮರೆಯಾಗಿ ಹೋದದ್ದು ವಿಪರ್ಯಾಸ. ಹೀಗೆ ಬಾಲ್ಯದಿಂದಲೇ ಕಷ್ಟದಿಂದಾಗಿ ಓದನ್ನು ಮುಂದುವರೆಸದ ಲೀಲಾವತಿಯವರ ಬದುಕೇ ಒಂದು ನಿಜಕ್ಕೂ ಒಂದು ಸಾಹಸ ಗಾಥೆ. ಹುಟ್ಟು ಬಡತನ, ಹಸಿವು ಮೇಲಿಂದ ಮೇಲೆ ಆಗುತ್ತಿದ್ದ ಅವಮಾನಗಳು, ಜೊತೆಗೆ ಗಂಡು ದಿಕ್ಕಿಲ್ಲದ ಸಂಸಾರ, ಪ್ರತಿಭೆ ಇದ್ದ ಮಗನನ್ನು ಬೆಳೆಯಲು ಬಿಡದ ಚಿತ್ರರಂಗ ಇವೆಲ್ಲವನ್ನೂ ಮೆಟ್ಟಿ ನಿಂತು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಇವರ ಬದುಕೇ ಒಂದು ವಿಶ್ವವಿದ್ಯಾಲಯ ಎಂದರೂ ತಪ್ಪಾಗದು.
ವಯೋಸಹಜದಿಂದಾಗಿ ಕಳೆದ ಹತ್ತು ಹದಿನೈದು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದ ಅಮ್ಮಾ ಮಗ ತಮ್ಮ ಸೋಲದೇವನ ಹಳ್ಳಿಯ ತೋಟದಲ್ಲಿರುವ ಆಳು ಕಾಳುಗಳಿಗೆ ಅಡಿಗೆ ಮಾಡಿ ಹಾಕುತ್ತಾ, ಇರುವೆ, ನವಿಲು, ಬೀದಿ ನಾಯಿಗಳಿಗೆ ದಿನವೂ ಊಟ ಹಾಕುತ್ತಿದ್ದಂತಹ ಸಂಧರ್ಭದಲ್ಲಿ ಅಲ್ಲಿನ ನಿವಾಸಿಗಳಿಗೆ ಆ ಊರಿನ ಅಕ್ಕ ಪಕ್ಕದಲ್ಲಿ ಉತ್ತಮವಾದ ಆಸ್ಪತ್ರೆ ಇಲ್ಲದಿದ್ದ ಕಾರಣ ತಮ್ಮ ಕಯ್ಯಾರೆ ಆಸ್ಪತ್ರೆಯನ್ನು ಕಟ್ಟಿಸುವ ಮೂಲಕ ಸಮಾಜ ಸೇವೆಗೂ ಮುಂದಾಗಿದ್ದಲ್ಲದೇ, ಅವರು ವಿಧಿವಶರಾಗುವ ಕೆಲವೇ ಕೆಲವು ದಿನಗಳ ಮುನ್ನಾ ತಮ್ಮದೇ ಜಮೀನಿನಲ್ಲಿ ಪಶು ವೈದ್ಯಾಲಯವನ್ನೂ ಸಹಾ ಆರಂಭ ಮಾಡಿದ್ದದ್ದು ನಿಜಕ್ಕೂ ಅಭಿನಂದನಾರ್ಹವೇ ಸರಿ. ಇಷ್ಟೆಲ್ಲಾ ಸಮಾಜ ಮುಖಿಗಳಾಗಿ ಸೇವೆ ಸಲ್ಲಿಸುತ್ತಿದ್ದರೂ ಅದನ್ನು ಸಹಿಸದ ಕೆಲವರು ಅವರ ತೋಟವನ್ನು ನಾಶ ಪಡಿಸಿದ್ದದ್ದು ಮತ್ತು ಅವರ ಬೆಳೆಗೆ ಬೆಂಕಿ ಹಚ್ಚುವ ಮೂಲಕ ಕಾಟ ಕೊಟ್ಟಿದ್ದದ್ದು ನಿಜಕ್ಕೂ ಅಸಹ್ಯಕರವಾದ ಸಂಗತಿ.
ನಾಗರ ಹಾವು ಚಿತ್ರದ ಸಮಯದಲ್ಲೇ ಚಾಮಯ್ಯ ಮೇಷ್ಟ್ರು ಅಶ್ವಥ್ ಅವರ ಮಡದಿಯಾಗಿ ನಟಿಸುವ ಮೂಲಕ ಪೋಷಕ ಪಾತ್ರಗಳಿಗೆ ವರ್ಗಾವಣೆಗೊಂಡ ಲೀಲಾವತಿಯವರು ನಂತರ ಅಜ್ಜಿ, ಅತ್ತೆಯ ಪಾತ್ರಗಳಲ್ಲಿ ಮಿಂಚತೊಡಗಿದರು. ಅನಂತ್ ನಾಗ್ ಅವರ ಗೋಲ್ ಮಾಲ್ ರಾಧಾಕೃಷ್ಣ ಚಿತ್ರದ ಘಟವಾಣಿ ಅಜ್ಜಿಯ ಪಾತ್ರವಂತೂ ಎಲ್ಲರ ಮೆಚ್ಚುಗೆ ಪಾತ್ರವಾಯಿತಾದರೂ ಕನ್ನಡಿಗರಿಗೆ ಲೀಲಾವತಿ ಎಂದ ತಕ್ಷಣ ಥಟ್ ಎಂದು ನೆನಪಾಗುವುದೇ ಕುಲವಧು ಚಿತ್ರದ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬ ಹಾಡು ಎನ್ನುವುದು ಗಮನಾರ್ಹವಾಗಿದ್ದು ಇನ್ನು ಮುಂದೆ ಪ್ರತೀ ಯುಗಾದಿಯಂದು ವರಕವಿ ದ.ರಾ.ಬೇಂದ್ರೆಯವರ ಆ ಹಾಡಿಗೆ ಅಂದವಾಗಿ ಅಭಿನಯಿಸಿದ್ದ ಲೀಲಾವತಿಯವರು ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಅಸಾಧ್ಯ ಎಂದರೂ ತಪ್ಪಾಗದು.
ಕಲಾವಿದರುಗಳಿಗೆ ಅಭಿನಯಿಸಲು ವಯಸ್ಸು ಅಡ್ಡಿಯಾಗುವುದಿಲ್ಲ ಎನ್ನುವಂತೆ, ಕೆಲ ವರ್ಷಗಳ ಹಿಂದೆ ಖಾಸಗೀ ವಾಹಿನಿಯವರು ಸುಮ್ಮನೇ ತಮಾಷಿಗಾಗಿ ಈಗಲೂ ನಿಮಗೆ ಅಭಿನಯಿಸುವ ಆಸೆ ಇದೆಯೇ? ಎಂದು ಕೇಳಿದಾಕ್ಷಣ, ನಟಿಸೋದಕ್ಕೆ ಆಗೊಲ್ಲ ಅನ್ನೋಕೆ ನಾನೇನು ಹಣ್ಣಣ್ಣು ಮುದುಕಿಯೇ? ನನಗಿನ್ನೂ ಕೇವಲ 86 ವರ್ಷ ವಯಸ್ಸಷ್ಟೇ. ಈಗಲೂ ನಿಮಗೆ ಯಾವ ರೀತಿಯ ಪಾತ್ರ ಬೇಕು ಕೇಳಿ ಮಾಡ್ತೀನಿ ಎಂದು ಹೇಳಿದ್ದರು. ಸರಿ ನಿಮ್ಮ ಅಭಿನಯಕ್ಕಾಗಿ ನಾವು ಕುತೂಹಲದಿಂದ ಕಾಯುತ್ತಿರುತ್ತೇವೆ. ನೀವು ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆ ಎಂದು ಆ ಪತ್ರಕರ್ತರು ಹೇಳಿದ ಕೂಡಲೇ, “ಹಾಗಂತ ನಾನು ಎಮ್ಮೆ ಆಗುವವರೆಗೂ ಬಿಡಬೇಡಿ” ಎಂದು ಅಷ್ಟೇ ಹಾಸ್ಯವಾಗಿ ಉತ್ತರಿಸಿದ್ದ ವಿಡಿಯೋ ವೈರಲ್ ಆಗಿತ್ತು. ಹುಟ್ಟು ಉಚಿತ ಸಾವು ಖಚಿತ ಎನ್ನುವಂತೆ, ಅಂತಿಮ ದಿನಗಳಲ್ಲಿ ಆನಾರೋಗ್ಯದಿಂದ ಬಳಲಿ, ತಮ್ಮ 86ನೇ ವಯಸ್ಸಿನಲ್ಲಿ 08.12.2023ರ ಸಂಜೆ ಸುಮಾರು 5:30 ಕ್ಕೆ ನೆಲಮಂಗಲದ ಖಾಸಗೀ ಆಸ್ಪತ್ರೆಯನ್ನು ನಿಧನರಾಗುವ ಮೂಲಕ ಕನ್ನಡ ಚಿತ್ರರಂಗದ ಹಿರಿಯ ಪ್ರತಿಭಾವಂತ ಕಲಾವಿದೆಯನ್ನು ಕಳೆದುಕೊಂಡು ಬಡವಾಯಿತು ಎಂದರೂ ತಪ್ಪಾಗದು.
ಕಲಾವಿದರುಗಳಿಗೆ ಎಂದೂ ಸಾವಿಲ್ಲ. ಸಾವು ಎನ್ನುವುದು ಅವರ ಶರೀರಕ್ಕಷ್ಟೇ ಹೊರತು ಅವರ ಶಾರೀರದ ಮೂಲಕ ಅವರು ನಟಿಸಿದ್ದ ಚಿತ್ರಗಳ ಮೂಲಕ ಆಚಂದ್ರಾರ್ಕವಾಗಿ ಕನ್ನಡಿಗರ ಹೃದಯದಲ್ಲಿ ಸದಾಕಾಲವೂ ಇದ್ದೇ ಇರ್ತಾರೇ ಎನ್ನುವ ಹಾಗೇ ಲೀಲಾವತಿಯವರೂ ನಮ್ಮ ಮನಸ್ಸಿನಲ್ಲಿ ಹಚ್ಚಹಸಿರಾಗಿಯೇ ಇರ್ತಾರೇ ಅಲ್ವೇ? ಹಾಗಾಗಿಯೇ ಶ್ರೀಮತಿ ಲೀಲಾವತಿಯವರು ಖಂಡಿತವಾಗಿಯೂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ಸೃಷ್ಟಿಕರ್ತ, ಉಮಾಸುತ
ಮನೋಜ್ಞ ಲೇಖನ
LikeLiked by 1 person
ಧನ್ಯೋಸ್ಮಿ
LikeLike