
ಕರ್ನಾಟಕ ಎಂದ ಕೂಡಲೇ ಥಟ್ ಎಲ್ಲರ ಮನಸ್ಸಿನಲ್ಲಿ ಮೂಡುವುದೇ, ಲಲಿತಕಲೆ ಮತ್ತು ಶಿಲ್ಪಕಲೆಗಳ ತವರೂರು. ಇನ್ನು ಸಂಗೀತ ಎಂದು ನೆನಸಿಕೊಂಡಾಗಲೂ ಮೂಡುವುದೇ ಕರ್ನಾಟಕ ಸಂಗೀತ. ಇಂತಹ ಕರ್ನಾಟಕ ಸಂಗೀತ ಯಾವಾಗ ಯಾರು ಆರಂಭಿಸಿದರು ಎಂಬ ದಾಖಲೆ ಇಲ್ಲದಿದ್ದರೂ, ಈ ಕರ್ನಾಟಕ ಸಂಗೀತವನ್ನು ಸರಳೀಕರಿಸಿ,ಅದಕ್ಕೆ ಸ್ವರಾವಳಿಗಳು, ಅಲಂಕಾರಗಳು ಗೀತೆ, ಎಂದು ಕರೆಯಲ್ಪಡುವ ಶ್ರೇಣೀಕೃತ ವ್ಯಾಯಾಮಗಳನ್ನು ಆಯೋಜಿಸುವ ಮೂಲಕ, ಆಬಾಲವೃದ್ಧರಾದಿಯಾಗಿ ಎಲ್ಲರೂ ಸಹಾ ಸುಲಭವಾಗಿ ಕಲಿಯ ಬಹುದಾದಂತಹ ಪಠ್ಯಕ್ರಮವನ್ನು ಔಪಚಾರಿಕಗೊಳಿಸಿದರು. ಇದರ ಮುಂದುವರೆದ ಭಾಗವಾಗಿ ಅವರು ಮಾಯಾಮಾಳವಗೌಳ ಎಂಬ ರಾಗದಿಂದಲೇ ಸಂಗೀತಾಭ್ಯಾಸವನ್ನು ಮಾಡುವಂತಹ ಪದ್ದತಿಯನ್ನು ರೂಢಿಗೆ ತಂದ್ದದ್ದನ್ನು ಇಂದಿಗೂ ಸಹಾ ಬಳಸಿಕೊಳ್ಳುತ್ತಿರುವುದರಿಂದ ಶ್ರೀ ಪುರಂದರ ದಾಸರನ್ನು ಕರ್ನಾಟಕ ಸಂಗೀತದ ಪಿತಾಮಹ ಅಷ್ಟೇ ಅಲ್ಲದೇ ನಾದ ಬ್ರಹ್ಮ ಎಂದೂ ಸಹಾ ಕರೆಯಲಾಗುತ್ತದೆ. ಅಂತಹ ದಾಸ ಶ್ರೇಷ್ಠರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರುಪರಿಚಯ ಇದೋ ನಿಮಗಾಗಿ
ದಾಸರು ಎಂದರೆ ದೇವರ ಸೇವಕ ಎಂದರ್ಥಬರುತ್ತದೆ. ಸಹಜವಾಗಿ ದೇವರ ಸೇವಕರಾದ ಮೇಲೆ ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯ ಮುಂತಾದ ಅರಿಷಡ್ವರ್ಗಗಳನ್ನು ಮೀರಿದವರಾಗಿರುತ್ತಾರೆ. ಅಚ್ಚರಿ ಎಂದರೆ ಪುರಂದರ ದಾಸರಾಗುವ ಮುನ್ನಾ ಅವರ ಜೀವನ ಶೈಲಿ ಇದಕ್ಕೆ ತದ್ವಿರುದ್ಧವಾಗಿದ್ದು ಅವರು ಶ್ರೀನಿವಾಸ ನಾಯಕರಿಂದ ಪುರಂದರದಾಸರಾದ ಕಥೆಯೇ ಅತ್ಯಂತ ರೋಚಕವಾಗಿದೆ.
1494 ರಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಕ್ಷೇಮಪುರದ (ಅವರ ಜನ್ಮಸ್ಥಳದ ಬಗ್ಗೆ ಅನೇಕ ಜಿಜ್ಞಾಸೆಗಳಿವೆ) ಶ್ರೀಮತಿ ರುಕ್ಮಿಣಿ ಮತ್ತು ಚಿನ್ನಾ ಬೆಳ್ಳಿ ವ್ಯಾಪಾರದ ಜೊತೆಗೆ ಲೇವಾದೇವಿ ವ್ಯಾಪಾರ ಮಾಡುತ್ತಿದ್ದ ಶ್ರೀವರದಪ್ಪನಾಯಕ ಎಂಬ ದಂಪತಿಗಳಿಗೆ ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಹರಕೆ ಹೊತ್ತಿದ ಮೇಲೆ ಗಂಡು ಮಗುವಿನ ಜನನವಾದಾಗ, ಅದು ತಿರುಪತಿ ಶ್ರೀನಿವಾಸನ ಪ್ರಸಾದ ಎಂಬ ನಂಬಿಕೆಯಿಂದ ಆ ಮಗುವಿಗೆ ಶ್ರೀನಿವಾಸ ನಾಯಕ ಎಂದು ಹೆಸರಿಡುತ್ತಾರೆ. ಹೇಳೀ ಕೇಳಿ ಅತ್ಯಂತ ಶ್ರೀಮಂತ ವ್ಯಾಪಾರಿ ಕುಟುಂಬವಾದ್ದರಿಂದ ಶ್ರೀನಿವಾಸ ನಾಯಕರಿಗೆ ಹಣ ಕಾಸಿನ ಕೊಂಚವೂ ತೊಂದರೆ ಇಲ್ಲದೇ, ಅತ್ಯಂತ ಐಶಾರಾಮಿ ಜೀವನ ನಡೆಸುತ್ತಿದ್ದದ್ದಲ್ಲದೇ, ಓದಿನಲ್ಲಿಯೂ ಸಹಾ ಚುರುಕಾಗಿದ್ದು, ವಯೋ ಸಜವಾಗಿ ಅವಶ್ಕಕತೆಗೆ ತಕ್ಕಂತೆ ವಿದ್ಯಾಭ್ಯಾಸ ನಡೆಯುತ್ತದೆ. ವರದಪ್ಪನಾಯಕರದ್ದು ಅತ್ಯಂತ ಸಂಪ್ರದಾಯಸ್ಥರ ಕುಟುಂಬವಾಗಿದ್ದು ದೇವರು ದಿಂಡರಲ್ಲಿ ಬಹಳಷ್ಟು ನಂಬಿಕೆ ಹೊಂದಿರುವ ಆಧ್ಯಾತ್ಮಿಕ ಕುಟುಂಬವಾಗಿದ್ದರೆ, ಮಗ ಶ್ರೀನಿವಾಸನಿಗೆ ಅದರಲ್ಲಿ ಕೊಂಚವೂ ಅಸಕ್ತಿ ಇರಲಿಲ್ಲ. ತಮ್ಮ ತಂದೆಯವರ ಮರಣಾನಂತರ ಕುಟುಂಬದ ಜವಾಬ್ಧಾರಿಯನ್ನು ಹೊತ್ತ ಶ್ರೀನಿವಾಸ ನಾಯಕರು, ತಂದೆಯ ದಾನ ಧರ್ಮಕಾರ್ಯಗಳಿಗೆ ಸಂಪೂರ್ಣವಾದ ತಿಲಾಂಜಲಿಯನ್ನು ಇಟ್ಟು ತಮ್ಮ ಚಿನ್ನಾ ಬೆಳ್ಳಿ ಒಡವೆಯ ಅಂಗಡಿಯಲ್ಲಿ ಕುಳಿತು ಯಾವುದೇ ರೀತಿಯ ಮುಲಾಚಿಲ್ಲದೇ ಲೇವಾದೇವಿ ವ್ಯಾಪಾರ ಮಾಡುತ್ತಾ ಪೈಸೆ ಪೈಸೆಗೂ ಸೇರಿಸಿಡುವಷ್ಟು ಜಿಪುಣಾಗ್ರೇಸರಾದಾದರು. ಹೀಗೆ ಪೈಸೆ ಪೈಸೇ ಕೂಡಿಸಿಟ್ಟ ಕಾರಣ ಜನರು ಅವರನ್ನು ನವಕೋಟಿ ನಾರಾಯಣ ಎಂದೂ ಸಹಾ ಕರೆಯುತ್ತಿದ್ದರು. ಆದರೆ ಅವರ ಶ್ರೀಮತಿಯಾದ ಸರಸ್ವತಿಯವರ ದಾನಶೀಲೆಯಾಗಿದ್ದು ಅಕೆಯ ಮನಸ್ಥಿತಿ ಗಂಡನಿಗೆ ತದ್ವಿರುದ್ಧವಾಗಿದ್ದದ್ದು ವಿಪರ್ಯಾಸವೇ ಸರಿ.
ಪ್ರತಿದಿನವೂ ತನ್ನ ಗಂಡನಿಗೆ ಒಳ್ಳೆಯ ಬುದ್ಧಿಯನ್ನು ಕೊಡು ಭಗವಂತಾ ಎಂದು ಪ್ರಾರ್ಥಿಸುತ್ತಿದ್ದದ್ದನ್ನು ಮನ್ನಿಸಿದ ಶ್ರೀಕೃಷ್ಣ ಪರಮಾತ್ಮ ಅದೊಂದು ದಿನ ಶ್ರೀನಿವಾಸ ನಾಯಕನ ಅಂಗಡಿಗೆ ಬಡ ಬ್ರಾಹ್ಮಣರ ವೇಷದಲ್ಲಿ ಬಂದು ತನ್ನ ಮಗನ ಉಪನಯನಕ್ಕೆ ಸಹಾಯ ಮಾಡಬೇಕೆಂದು ಕೋರಿದಾಗ, ಹೇಳೀ ಕೇಳೀ ಜಿಪುಣಾಗ್ರೇಸನಾಗಿದ್ದ ಶ್ರೀನಿವಾಸ ನಾಯಕ ಇವತ್ತು ಬಾ, ನಾಳೇ ಬಾ ಎಂದು ಸುಮಾರು ಐದಾರು ತಿಂಗಳುಗಳ ಕಾಲ ಅಲೆದಾಡಿಸಿದ ನಂತರವೂ ಏನನ್ನೂ ಕೊಡುವುದಿಲ್ಲ. ಇದರಿಂದ ಬೇಸತ್ತ ಆ ಬಡ ಬ್ರಾಹ್ಮಣ ಅದೊಂದು ದಿನ ಶ್ರೀನಿವಾಸ ನಾಯಕರ ಮನೆಗೆ ಹೋಗಿ ಅವರ ಮಡದಿಯನ್ನು ಕಂಡು ತನ್ನ ಮಗನ ಉಪನಯನಕ್ಕೆ ಸಹಾಯವನ್ನು ಕೋರಿದಾಗ, ಪರಮ ಪ್ರತಿವ್ರತೆ ಮತ್ತು ಸಾಧ್ವಿಯಾಗಿದ್ದ ಆಕೆ, ತನ್ನ ಬಳಿ ಆತನಿಗೆ ಕೊಡಲು ಹಣವಿಲ್ಲದ ಕಾರಣ ಹಿಂದೂ ಮುಂದೂ ನೋಡದೆ, ತನ್ನ ತವರು ಮನೆಯವರು ಮದುವೆಯ ಸಮಯದಲ್ಲಿ ಆಕೆಗೆ ನೀಡಿದ್ದ ಮತ್ತು ಆಕೆ ತನ್ನ ಕಿವಿಗಳಲ್ಲಿ ಧರಿಸಿದ್ದ ವಜ್ರದ ಓಲೆಗಳು ಮತ್ತು ಮೂಗಿನ ನತ್ತನ್ನು ದಾನವಾಗಿ ಕೊಡುತ್ತಾಳೆ.
ಹೀಗೆ ಮೂಗಿನ ನತ್ತು ಮತ್ತು ಓಲೆಗಳನ್ನು ದಾನವಾಗಿ ಪಡೆದ ಆ ಬ್ರಾಹ್ಮಣ ಅದನ್ನು ನೇರವಾಗಿ ಶ್ರೀನಿವಾಸ ನಾಯಕರ ಅಂಗಡಿಗೆ ತಂದು ಅದನ್ನು ಗಿರವಿ ಇಟ್ಟುಕೊಂಡು ತನಗೆ ಹಣ ನೀಡಬೇಕೆಂದು ಒತ್ತಾಯಿಸುತ್ತಾನೆ. ಆ ಮೂಗಿನ ನತ್ತು ಮತ್ತು ಕಿವಿಗಳ ಓಲೆಯನ್ನು ನೋಡಿದ ಕೂಡಲೇ ಅದು ತನ್ನ ಪತ್ನಿಯದ್ದೇ ಎಂದು ಗುರುತಿಸಿದ ಶ್ರೀನಿವಾಸ ನಾಯಕ, ಕೂಡಲೇ ಆ ಒಡವೆಗಳನ್ನು ಭದ್ರವಾದ ಕಪಾಟಿನಲ್ಲಿರಿಸಿ ಆ ಬ್ರಾಹ್ಮಣನನ್ನು ಅಲ್ಲಿಯೇ ಕುಳಿತುಕೊಳ್ಳಲು ತಿಳಿಸಿ ಧಾವಂತದಿಂದ ತನ್ನ ಮನೆಗೆ ಬಂದು ಹೆಂಡತಿಯನ್ನು ನೋಡಿದಾಗ, ಆಕೆ ಬರೀ ಕಿವಿ ಮತ್ತು ಮೂಗಿನಲ್ಲಿದ್ದದ್ದನ್ನು ಕಂಡು, ಆ ಮೂಗಿನ ನತ್ತು ಮತ್ತು ಓಲೆಗಳನ್ನು ಆ ಬ್ರಾಹ್ಮಣನೇ ಕಳ್ಳತನ ಮಾಡಿರಬೇಕೆಂದು ನಿರ್ಧರಿಸಿ, ಅರೇ! ಇದೇನಿದು ನಿನ್ನ ಮೂಗಿನ ನತ್ತು ಮತ್ತು ಓಲೆಗಳು ಎಲ್ಲಿ? ಎಂದು ತನ್ನ ಮಡದಿಯನ್ನು ಕೇಳಿದಾಗ, ಆ ಕೂಡಲೇ ಏನನ್ನೂ ಹೇಳಲಾಗದೆ ಭಯದಿಂದ ತಾನು, ಸ್ನಾನ ಮಾಡುವಾಗ ಅದನ್ನು ಬಿಚ್ಚಿ ಬಚ್ಚಲು ಮನೆಯಲ್ಲಿಸಿದ್ದೇನೆ ಎಂದು ಸುಳ್ಳು ಹೇಳುತ್ತಾಳೆ.
ಆದಾಗಲೇ ನಿಜವನ್ನು ಅರಿತಿದ್ದ ಶ್ರೀನಿವಾಸ ನಾಯಕರು ಸರಿ ಹಾಗಾದರೇ ಅದನ್ನು ಈ ಕೂಡಲೇ ತಂದು ತೋರಿಸು ಎಂದು ತಾಕೀತು ಮಾಡಿದಾಗ, ಗಂಡನ ಜಿಪುಣತನ ಮತ್ತು ಕೋಪವನ್ನು ಅರಿತಿದ್ದ ಆಕೆ ವಿಧಿ ಇಲ್ಲದೇ ಬಚ್ಚಲು ಮನೆಗೆ ಹೋಗಿ ಬಾಗಿಲನ್ನು ಭದ್ರ ಪಡಿಸಿ ವಿಷಸೇವನೆ ಮಾಡಿ ಪ್ರಾಣವನ್ನು ಕಳೆದುಕೊಳ್ಳಲು ಮುಂದಾಗುತ್ತಾಳೆ. ಇನ್ನೇನು ಆಕೆ ವಿಷದ ಬಟ್ಟಲನ್ನು ತನ್ನ ಬಾಯಿಯ ಬಳಿ ಇರಿಸಿಕೊಂಡು ವಿಷಪ್ರಾಶನ ಮಾಡಬೇಕು ಎನ್ನುವಷ್ಟರಲ್ಲಿ ಠಣ್! ಎಂಬ ಸದ್ದಾದ್ದನ್ನು ಕೇಳಿ ಆಶ್ಚರ್ಯ ಚಕಿತಳಾಗಿ ಬಟ್ಟಲನ್ನು ನೋಡಿದಾಗ ವಿಷದ ಬದಲು ಅಲ್ಲಿ ತನ್ನ ಓಲೆಗಳು ಮತ್ತು ಮೂಗಿನ ಬಟ್ಟು ಇದ್ದದ್ದನ್ನು ಕಂಡು ಕೆಲ ಕಾಲ ದಂಗಾದರೂ, ಬದುಕಿದೆಯೇ ಬಡಜೀವ ಎಂದೆಣಿಸಿ ಕೂಡಲೇ ಅದನ್ನು ತಂದು ನಾಯಕರ ಕೈಗಿಡುತ್ತಾಳೆ.

ತಾನು ಅಂಗಡಿಯ ಕಪಾಟಿನಲ್ಲಿ ಭದ್ರವಾಗಿಟ್ಟಿದ್ದ ಒಡವೆಗಳೇ ತನ್ನ ಕೈಗಳಲ್ಲಿ ಇರುವುದನ್ನು ಕಂಡು ಆಶ್ಚರ್ಯ ಚಕಿತರಾಗಿ ಆ ಒಡವೆಗಳನ್ನು ಮತ್ತೆ ತನ್ನ ಸೊಂಟಕ್ಕೆ ಸಿಕ್ಕಿಸಿಕೊಂಡು ಮತ್ತೆ ತನ್ನ ಅಂಗಡಿಗೆ ಬಂದು ಆ ಭಧ್ರವಾದ ಕಪಾಟನ್ನು ತೆಗೆದು ನೋಡಿದರೆ, ಆತನೇ ಅಲ್ಲಿಟ್ಟಿದ್ದ ಒಡವೆಗಳು ಮಾಯವಾಗಿದ್ದನ್ನು ಕಂಡು ಒಂದು ರೀತಿಯ ಭಯ, ಆಶ್ಚರ್ಯ ಮತ್ತು ಮುಜುಗರಕ್ಕೊಳಗಿ, ಈ ರೀತಿಯ ಪವಾಡಗಳು ದೇವರಲ್ಲದೇ ಮನುಷ್ಯರಿಂದ ಸಾಧ್ಯವಿಲ್ಲ ಎಂದು ತಿಳಿದು ಹೊರಗೆ ನೋಡಿದಾಗ ಆ ಬ್ರಾಹ್ಮಣನೂ ಕಾಣೆಯಾಗಿದ್ದದ್ದನ್ನು ಕಂಡು ತನ್ನನ್ನು ಪರೀಕ್ಷಿಸಲು ಸ್ವತಃ ನಾರಾಯಣನೇ ಬ್ರಾಹ್ಮಣ ವೇಷದಲ್ಲಿ ಬಂದಿದ್ದನೆಂದು ಅರಿತು, ತನ್ನ ಬಗ್ಗೆ ತಾನೇ ನಾಚಿಕೆ ಪಟ್ಟುಕೊಂಡ ಶ್ರೀನಿವಾಸರು,ಈ ಜೀವನವೇ ನಶ್ವರ. ಭಗವಂತನ ಲೀಲೆಗಳನ್ನು ಅರಿಯದೆ, ಇಷ್ಟು ದಿನಗಳ ಕಾಲ ತಾನು ಸುಖಾ ಸುಮ್ಮನೆ ಹಣದ ಹಿಂದೆ ಸಮಯವನ್ನು ವ್ಯರ್ಥಮಾಡಿದೆ ಎಂದು ತಿಳಿದು ಆ ಕೂಡಲೇ ತನ್ನ ಶ್ರೀಮಂತಿಕೆಯನ್ನು ತೊರೆದು ಹರಿದಾಸನಾಗುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹಾಗೆ ತನಗೆ ದೇವರು ದಾರಿ ತೋರಿಸಿದ್ದರ ಬಗ್ಗೆ ಕೃತಜ್ಞತೆಗಾಗಿ ಮತ್ತು ತಮ್ಮ ಹೆಂಡತಿಯ ಜ್ಞಾಪಕಾರ್ಥವಾಗಿ, ಪಂತುರಾವಳಿ ರಾಗದ, ಆದಿತಾಳದ ಆದದ್ದೆಲ್ಲ ಒಳಿತೆ ಆಯಿತು ನಮ್ಮ ಶ್ರೀಧರ ಸೇವೆ ಮಾಡಲು ಸಾಧನ ಸಂಪತ್ತಾಯಿತು ಎಂಬ ಕೀರ್ತನೆಯನ್ನು ಆ ಕೂಡಲೇ ರಚಿಸಿ, ತಮ್ಮ ಸಕಲ ಆಸ್ತಿ ಪಾಸ್ತಿಗಳನ್ನೂ ದಾನ ಮಾಡಿ ಐಹಿಕ ಇಚ್ಚೆಗಳನ್ನೆಲ್ಲವನ್ನೂ ತ್ಯಜಿಸಿ ತಮ್ಮ ಮುಂದಿನ ಜೀವನವನ್ನೆಲ್ಲವನ್ನೂ ಭಗವಂತನ ಸೇವೆಗಾಗಿ ಮುಡುಪಾಗಿಡುವ ಸಲುವಾಗಿ ತಮ್ಮನ್ನು ತಾವು ಪುರಂದರನ ದಾಸ ಎಂದು ಕರೆದುಕೊಂಡು ಪುರಂದರದಾಸ ಎನಿಸಿಕೊಳ್ಳುತ್ತಾರೆ

ಆಂದಿನಿಂದ ಕೈಯ್ಯಲ್ಲೊಂದು ತಂಬೂರಿ ಮತ್ತು ತಾಳಗಳನ್ನು ಹಿಡಿಕೊಂಡು ಭಗವಂತನ ಧ್ಯಾನ ಮಾಡುತ್ತಾ ಊರೂರು ಅಲೆಯುತ್ತಾ ಮಧುಕರಿ ವೃತ್ತಿಯಲ್ಲಿ (ಭಿಕ್ಷಾಟನೆ) ತೊಡಗಿಸಿಕೊಳ್ಳುತ್ತಾ, ಕೆಲ ಕಾಲ ಪಂಡರಾಪುರದಲ್ಲಿ ಪಂಡರಿನಾಥನ ಸೇವೆ ಸಲ್ಲಿಸುತ್ತಾ ನಂತರ ಸುಮಾರು ವರ್ಷಗಳ ಕಾಲ ಹಂಪೆಯಲ್ಲಿ ತಮ್ಮ ಜೀವನವನ್ನು ಕಳೆಯುತ್ತಲೇ ಭಗವಂತನ ಧ್ಯಾನವನ್ನು ಮಾಡುವಾಗ ಅವರಿಗೆ ಅರಿವಿಲ್ಲದಂತೆಯೇ ಅವರ ಬಾಯಿಯಿಂದ ಸಾವಿರಾರು ಕೃತಿಗಳು ಹೊರಡುತ್ತವೆ. ಈ ರೀತಿಯಾಗಿ ತಾವೇ ರಚಿಸಿದ ಕೃತಿಗಳಿಗೆ ಶಾಸ್ತ್ರೀಯವಾಗಿ ರಾಗವನ್ನು ಹಾಕಿ ಸುಶ್ರಾವ್ಯವಾಗಿ ಹಾಡುತ್ತಿದ್ದನ್ನು ಗಮನಿಸಿದ ಅವರ ಶಿಷ್ಯಂದಿರು ಸಾಕಷ್ಟು ಹಾಡುಗಳನ್ನು ಬರೆದುಕೊಂಡ ಕಾರಣ ಇಂದಿಗೂ ಕೆಲವು ನೂರು ಸಂಖ್ಯೆಗಳ ಪುರಂದರ ದಾಸರ ಕೀರ್ತನೆಗಳು ಇನ್ನೂ ಸಹಾ ನಮಗೆ ಲಭ್ಯವಿದೆ.
ತಮ್ಮ ಜೀವನದ ಅನುಭವಗಳನ್ನೆಲ್ಲಾ ಒರೆಗೆ ಹಚ್ಚಿ ಸಮಾಜದಲ್ಲಿ ಪ್ರಚಲಿತದಲ್ಲಿರುವ ಹಲವಾರು ಆಡಂಬರಗಳು ಮತ್ತು ದುರ್ಗುಣಗಳನ್ನು ವಿಡಂಬಣಾತ್ಮಕವಾಗಿ ಬರೆದು ಸಾಮಾಜವನ್ನು ಎಚ್ಚರಿಸುವಂತಹ ವಿಷಯವನ್ನು ಕೃತಿಗಳ ರೂಪದಲ್ಲಿ ಬರೆದು ಅದಕ್ಕೊಂದು ಚಂದನೆಯ ರಾಗ ಹಚ್ಚಿ ಕರ್ನಾಟಕ ಸಂಗೀತದ ಶ್ರೀಮಂತ ಪರಂಪರೆಗೆ ಕೊಡುಗೆ ನೀಡುವ ಮೂಲಕ, ಕರ್ನಾಟಕದ ಧಾರ್ಮಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದರೂ ತಪ್ಪಾಗದು. ತಮ್ಮ ಸಂಗೀತದ ರೂಪದಲ್ಲಿ ನೀತಿಬೋಧಕ ಬೋಧನೆಗಳನ್ನು ಸಾಮಾನ್ಯ ಜನರ ಹೃದಯಕ್ಕೂ ಸಹಾ ಅರ್ಥವಾಗುವಂತೆ ಮಾಡಿದ ಹೆಗ್ಗಳಿಕೆ ಪುರಂದರದಾಸರದ್ದಾಗಿದೆ. ಒಂದು ಲೆಖ್ಖಾಚಾರದ ಪ್ರಕಾರ, ಪುರಂದರ ದಾಸರು ಸುಮಾರು 475,000 ಕನ್ನಡ ಮತ್ತು ಸಂಸ್ಕೃತ ಹಾಡುಗಳನ್ನು ಬರೆದಿದ್ದರೂ, ಪ್ರಸ್ತುತ ಕೇವಲ 1000 ಹಾಡುಗಳು ಮಾತ್ರ ನಮ್ಮ ಬಳಿ ಲಭ್ಯವಿದೆ. ಪುರಂದರ ದಾಸರು ಮಧ್ವ ಸಂಪ್ರದಾಯವನ್ನು ಪಾಲಿಸುತ್ತಿದ್ದ ಕಾರಣ ಅವರ ಹೆಚ್ಚಿನ ಹಾಡುಗಳಲ್ಲಿ ನಾರಾಯಣ ಅದರಲ್ಲೂ ವಿಶೇಷವಾಗಿ ಶ್ರೀಕೃಷ್ಣನ ಕುರಿತಾಗಿಯೇ ಇರುವುದು ವಿಶೇಷವಾಗಿದೆ.

ಪುರಂದರ ದಾಸರು ರಚಿಸಿದ ರಚನೆಗಳು ದೇವರನಾಮಗಳೆಂದು ಹೆಸರಾಗಿ ಅವುಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಆರಂಭ ಗೀತೆಯಾದ ಕೆರೆಯ ನೀರನು ಕೆರೆಗೆ ಚಲ್ಲಿ.. ದಿಂದ ಆರಂಭವಾಗಿ ತಂಬೂರಿ ಮೀಟಿದವ ಭವಾಬ್ಧಿ ದಾಟಿದವ, ವೆಂಕಟಾಚಲ ನಿಲಯ, ಕೃಷ್ಣಾ ನೀ ಬೇಗನೇ ಬಾರೋ, ಜಗದೋದ್ಧಾರನ ಆಡಿಸಿದಳು ಯಶೋಧೆ ಹೀಗೆ ಅಸಂಖ್ಯಾತ ಹಾಡುಗಳು ಇಂದಿಗೂ ಲಭ್ಯವಿದ್ದು ಆಡು ಮುಟ್ಟದ ಸೊಪ್ಪಿಲ್ಲ, ಪುರಂದರದಾಸರು ಬರೆಯದ ದೇವರನಾಮಗಳು ಇಲ್ಲ ಎಂದು ಪ್ರಖ್ಯಾತರಾಗಿ ದಾಸ ದಾಸರಲ್ಲಿ ಶ್ರೇಷ್ಠ ದಾಸರೆಂದರೆ ಪುರಂದರ ದಾಸರು ಎಂದು ಜಗತ್ಪ್ರಸಿದ್ಧರಾಗಿರುವುದು ಅವರ ಹೆಗ್ಗಳಿಕೆಯಾಗಿದೆ. ಇನ್ನೂ ಹಲವರು ಅವರನ್ನು ಸಂತ ನಾರದನ ಅಭಿವ್ಯಕ್ತಿ ಎಂದೂ ಸಹಾ ಪರಿಗಣಿಸುತ್ತಾರೆ.

ಪುರಂದರ ದಾಸರು ಭಕ್ತಿ ಚಳುವಳಿಯಲ್ಲಿ ಗಾಯಕರಾಗಿ, ಸಂಗೀತ ಪರಿಣತರಾಗಿ ಮತ್ತು ದಾಸ ಸಾಹಿತ್ಯದ ಪ್ರವರ್ತಕರಾಗಿ ಹೆಸರುವಾಸಿಯಾಗಿದ್ದರೆ, ಅದನ್ನೇ ಅವರ ಸಮಕಾಲೀನರಾದ ಕನಕದಾಸರು ಸಹಾ ಅನುಸರಿಸಿ, ಕನ್ನಡದಲ್ಲಿ ಅತ್ಯುತ್ತಮ ದಾಸ ಸಾಹಿತ್ಯಕ್ಕೆ ಕೊಡುಗೆಯನ್ನು ನೀಡಿದ್ದಾರೆ ಎಂದರೂ ತಪ್ಪಾಗದು. ಸುಮಾರು 84 ರಾಗಗಳನ್ನು ಪುರಂದರ ದಾಸರು ಗುರುತಿಸಿ, ಪ್ರತೀ ರಾಗದಲ್ಲಿಯೂ ಚಂದನೆಯ ಸಾಹಿತ್ಯ ಮತ್ತು ಅದಕ್ಕೊಪ್ಪುವ ಸೊಗಸಾದ ಸಂಗೀತ ನೀಡುವ ಕೃತಿಗಳನ್ನು ರಚಿಸಿದ್ದಾರೆ, ಮುಂದೆ ಆಂಧ್ರಪ್ರದೇಶದ ತೆಲುಗು ಭಾಷೆಯ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜರ ಮೇಲೆಯೂ ಪುರಂದರ ದಾಸರು ದೊಡ್ಡ ರೀತಿಯಲ್ಲಿ ಪ್ರಭಾವ ಬೀರಿದ್ದ ಪರಿಣಾಮ, ತ್ಯಾಗರಾಜರು ತಮ್ಮ ಪ್ರಹ್ಲಾದ ಭಕ್ತಿ ವಿಜಯಂನಲ್ಲಿ ಪುರಂದರದಾಸರಿಗೆ ಗೌರವವನ್ನು ಸಲ್ಲಿಸಿದ್ದಾರೆ. ಸುಮಾರು 80 ವರ್ಷಗಳ ಕಾಲ ಬದುಕಿದ್ದ ಪುರಂದರ ದಾಸರು, ತಮ್ಮ ಸಂಗೀತ ಮತ್ತು ಸಾಹಿತ್ಯ ಮತ್ತು ಕರ್ನಾಟಕ ಸಂಗೀತಕ್ಕೊಂದು ಮೂಲ ಪಠ್ಯಕ್ರಮವನ್ನು ರಚಿಸುವ ಮೂಲಕ ಇಂದಿಗೂ ಸಕಲ ಆಸ್ತಿಕರು ಮತ್ತು ಸಂಗೀತಗಾರರಲ್ಲಿ ಸರ್ವವ್ಯಾಪಿಯಾಗಿದ್ದಾರೆ ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ