ಇಡೀ ಪ್ರಪಂಚವೇ ಹೆಣ್ಣನ್ನು ಭೋಗ ವಸ್ತು ಎಂದು ನೋಡುತ್ತಿರುವಾಗ ಭಾರತದ ಸನಾತನ ಧರ್ಮದ ಮನುಸ್ಮೃತಿಯಲ್ಲಿ ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ, ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಫಲಾಃ ಕ್ರಿಯಾಃ ಎಂದು ಹೇಳಲಾಗಿದೆ. ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೈವತ್ವವು ಅರಳುತ್ತದೆ ಮತ್ತು ಎಲ್ಲಿ ಸ್ತ್ರೀಯರು ಅವಮಾನಿತರಾಗುತ್ತಾರೆಯೋ, ಅಲ್ಲಿ ಎಲ್ಲಾ ಕ್ರಿಯೆಗಳು ಎಷ್ಟು ಉದಾತ್ತವಾಗಿದ್ದರೂ ಅದು ಫಲರಹಿತವಾಗಿರುತ್ತವೆ ಎಂದು ಹೇಳುವ ಮೂಲಕ ಹೆಣ್ಣುಮಕ್ಕಳನ್ನು ತಾಯಿ ಮತ್ತು ಸಹೋದರಿಯ ರೂಪದಲ್ಲಿ ಅತ್ಯಂತ ಗೌರವದಿಂದ ಕಾಣಲಾಗುತ್ತದೆ.
ಇನ್ನು ಒಕ್ಕೂಟ ಭಾರತದ ಅವಿಭಾಜ್ಯ ಅಂಗವಾಗಿರುವ ಕನ್ನಡ ನಾಡು ಎಂದರೆ ಅದಕ್ಕೆ ಅದರದ್ದೇ ಆದ ಗೌರವ ಮತ್ತು ಘನತೆ ಇದ್ದು, ಭಾರತದ ಇತರೇ ರಾಜ್ಯಗಳಿಗೆ ಹೋಲಿಸಿದದಲ್ಲಿ ಹೆಣ್ಣು ಮಕ್ಕಳಿಗೆ ಅತಿಹೆಚ್ಚು ಗೌರವ ನೀಡುವ ರಾಜ್ಯ ಎಂದೇ ಪ್ರಖ್ಯಾತವಾಗಗಿರುವುದಲ್ಲದೇ, ಹೆಣ್ಣುಮಕ್ಕಳ ಅಭಿವೃದ್ಧಿ ವಿಚಾರದಲ್ಲಿ ಶತ ಶತಮಾನಗಳಿಂದ ಉಳಿದ ರಾಜ್ಯಗಳಿಗೆ ಮಾದರಿಯಾಗಿದೆ.
ಮಹಿಳಾ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ 1917 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆವರ ತಾಯಿ ಕೆಂಪ ನಂಜಮ್ಮಣಿ ವಾಣಿ ವಿಲಾಸ ಸನ್ನಿಧಾನ ಅವರು ಮೈಸೂರಿನಲ್ಲಿ ಮಹಾರಾಣಿಯ ಮಹಿಳಾ ವಿಜ್ಞಾನ ಕಾಲೇಜನ್ನು ಸ್ಥಾಪಿಸಿದ್ದರು, ಇಡೀ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಪ್ರಪ್ರಥಮ ಬಾರಿಗೆ ಮತದಾನದ ಹಕ್ಕನ್ನು ನೀಡಿದ್ದು ಸಹಾ ನಮ್ಮ ಕರ್ನಾಟಕವೇ. ಮಹಿಳಾ ಸಬಲೀಕರಣದ ಬಗ್ಗೆ ಇಷ್ಟೆಲ್ಲಾ ಖ್ಯಾತಿ ಹೊಂದಿದ್ದ ಕರ್ನಾಟಕದಲ್ಲಿ ಒಬ್ಬ ರಾಜಕಾರಣಿ ನೂರಾರು ಹೆಣ್ಣುಮಕ್ಕಳೊಂದಿಗೆ ನಡೆಸಿರುವ ಘನ ಘೋರ ತಪ್ಪು ಮತ್ತು ಅಧಿಕಾರದ ತೆವಲಿನಿಂದ ಯಾರನ್ನೋ ಹಳಿಯಲು ಹೋದ ಕೆಲ ಲಜ್ಜೆಗೆಟ್ಟ ಪಟ್ಟಭಧ್ರ ಹಿತಾಸಕ್ತಿಗಳು ಹಾದಿ ಬೀದಿಯಲ್ಲಿ ಪೆನ್ ಡ್ರೈವ್ ಹಂಚುತ್ತಾ ಹೆಣ್ಣುಮಕ್ಕಳ ಮಾನ ಮಾರ್ಯಾದಿಯನ್ನು ಬೀದಿಯಲ್ಲಿ ಹರಾಜು ಹಾಕುವ ಮೂಲಕ ಕರ್ನಾಟಕದ ಘನತೆ ಮತ್ತು ಗೌರವನ್ನು ಹಾಳು ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಖಾವಿ, ಖಾದಿ ಮತ್ತು ಖಾಕಿ ಈ ಮೂವರು ಸಹಾ ಸಮಾಜದಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದು ಸಮಾಜದ ಸ್ವಾಸ್ಥ್ಯತೆಯನ್ನು ಕಾಪಾಡುವುದರಲ್ಲಿ ಈ ಮೂವರ ಪಾತ್ರ ಅತ್ಯಂತ ಪ್ರಮುಖವಾಗಿರುವ ಕಾರಣ ಎಲ್ಲರೂ ಸಹಾ ಅವರನ್ನು ಗೌರವಿಸುತ್ತಾರೆ ಮತ್ತು ಅವರುಗಳು ಹೇಳಿದ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ದುರಾದೃಷ್ಟವಷಾತ್, ಇತ್ತೀಚಿನ ದಿನಗಳಲ್ಲಿ ಅದೇ ಖಾವಿ, ಖಾದಿ ಮತ್ತು ಖಾಕಿಗಳು ಇದನ್ನೇ ಸಮಾಜದ ದೌರ್ಬಲ್ಯ ಎಂದು ತಿಳಿದು ಅದೇ ಸಮಾಜದ ಮೇಲೆ ದೌರ್ಜನ್ಯವನ್ನು ಎಸೆಗಲು ಮುಂದಾಗುವ ಮೂಲಕ ಸಮಾಜದಲ್ಲಿ ಅತ್ಯಂತ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದಾರೆ.
೨೦೨೨ರಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮಿಗಳು, ಮಠದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವನ್ನು ನಿರಂತರವಾಗಿ ಎಸಗುತ್ತಿದ್ದಾರೆ ಎಂದು ಮೈಸೂರಿನ ಒಡನಾಡಿ ಸಂಸ್ಥೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಸ್ವಾಮಿಗಳ ವಿರುದ್ಧ ಪೋಕ್ಸೋ ಪ್ರಕರಣದ ಅಡಿಯಲ್ಲಿ ದೂರನ್ನು ದಾಖಲಿಸಿಕೊಂಡು ಅವರನ್ನು ಬಂಧಿಸಿ ಸರೆಮನೆಗೆ ಕಳುಹಿಸಿ ಪ್ರಕರಣದ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆದಾಗಲೇ ಕರ್ನಾಟಕದ ಮಾನ ಹರಾಜಾಗಿತ್ತು.
ಅದೇ ರೀತಿ ಬೊಮ್ಮಾಯಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರು ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದರ ಕುರಿತಾದ ಸಿಡಿ ಹೊರಬಂದು, ನೈತಿಕ ಆಧಾರ ಮತ್ತು ಪಕ್ಷಕ್ಕಾಗುವ ಮುಜುಗೊರವನ್ನು ತಪ್ಪಿಸುವ ಸಲುವಾಗಿ ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿ ತನಿಖೆ ಎದುರಿಸುವಂತಾಗಿ, ಆರಂಭದಲ್ಲಿ ದೇಶಾದ್ಯಂತ ಸಂಚಲನ ಮೂಡಿಸಿದ್ದರೂ, ನಂತರ ಒಮ್ಮತದ ಲೈಂಗಿಕ ಪ್ರಕ್ರಿಯೆಗಳು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂಬ ಉಚ್ಚನ್ಯಾಯಾಲಯದ ಈ ಹಿಂದಿನ ಆದೇಶದಂತೆ ಆ ಪ್ರಕರಣ ಹಳ್ಳ ಹಿಡಿದು ಜನರು ಅದೇ ರಮೇಶ್ ಜಾರಕಿಹೊಳೆಯವರನ್ನು ಮತ್ತೊಮ್ಮೆ ವಿಧಾನ ಸಭೆಗೆ ಆಯ್ಕೆಮಾಡಿ ಕಳುಹಿಸಿದ್ದೂ ಸಹಾ ಅಚ್ಚರಿಯನ್ನು ಮೂಡಿಸಿತ್ತು.
2023ರ ವಿಧಾನ ಸಭಾ ಚುನಾವಣೆಯಲ್ಲಿ ಹೀನಾಮಾನವಾಗಿ ಸೋತು, ಕೇವಲ 19 ಶಾಸಕರನ್ನು ಹೊಂದಿರುವ ಜಾತ್ಯಾತೀತ ಜನತಾದಳ ಕರ್ನಾಟಕ ರಾಜಕೀಯದಲ್ಲಿ ತನ್ನ ಅಸ್ಮಿತೆ ಮತ್ತು ಪ್ರಸ್ತುತತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಗೆದ್ದೆತ್ತಿನ ಬಾಲ ಹಿಡಿ ಎಂಬಂತೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು 2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿರುವಾಗ, ಚುನಾವಾಣೆಗೆ ಕೇವಲ 2-3 ದಿನಗಳು ಇವೇ ಎನ್ನುವಾಗ ಹಾಲಿ ಸಂಸದ ಮತ್ತು ಪ್ರಸ್ತುತ ಪ್ರತಿಷ್ಠಿತ ಹಾಸನದ ಅಭ್ಯರ್ಥಿ ಆಗಿದ್ದ ಪ್ರಜ್ವಲ್ ರೇವಣ್ಣ ಅವರನ್ನು ಒಳಗೊಂಡಿರುವ ಲೈಂಗಿಕ ಹಗರಣದ ಲಕ್ಷಾಂತರ ಪೆನ್ ಡ್ರೈವ್ ಗಳು ಕೇವಲ ಹಾಸನ ಮತ್ತು ಹೊಳೇನರಸೀಪುರವಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಪಂಚಾದ್ಯಂತ ವೈರಲ್ ಆಗುವ ಮೂಲಕ ಕೇವಲ ಮಾಜೀ ಪ್ರಧಾನಿ ಶ್ರೀ ದೇವೇಗೌಡರ ಕುಟುಂಬಕಷ್ಟೇ ಅಲ್ಲದೇ ಇಡೀ ಕರ್ನಾಟಕವೇ ತಲೆತಗ್ಗಿಸುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿರುವುದು ಅಸಹ್ಯವನ್ನು ಹುಟ್ಟಿಸುತ್ತಿದೆ
ಎಂದಿನಂತೆ ಪರಿಸ್ಥಿತಿಯ ದುರ್ಲಾಭವನ್ನು ಪಡೆಯಲು ಹವಣಿಸುತ್ತಿರುವ ಕಾಂಗ್ರೇಸ್ ಪಕ್ಷ ಮತ್ತು ಅದರ ನಾಯಕರುಗಳು ಬೀದಿ ಬೀದಿಯಲ್ಲಿ ಪೆನ್ ಡ್ರೈವ್ ಗಳನ್ನು ಹಂಚುವ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಮಾಜೀ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕುಟುಂಬಕ್ಕೆ ಮುಜುಗರವನ್ನುಂಟು ಮಾಡುತ್ತಿರುವುದಲ್ಲದೇ, ಚುನಾವಣಾ ಸಂಧರ್ಭದಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಚುನಾವಣಾ ರ್ಯಾಲಿಗಳಿಗೆ ಬರುತ್ತಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವವರ ವಿರುದ್ಧವೂ ಹರಿಹಾಯುತ್ತಿರುವುದು ಹಾಸ್ಯಾಸ್ಪದವಾಗಿದೆ.
ಹಾಗೆ ನೋಡಿದರೆ, ಈ ರೀತಿಯ ಲೈಂಗಿಕ ಹಗರಣಗಳು ಕೇವಲ ಒಂದು ಪಕ್ಷಕ್ಕಷ್ಟೇ ಮೀಸಲಾಗಿರದೇ, ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ಇದಕ್ಕಿಂತಲೂ ಕೆಟ್ಟದಾಗಿ ಲಜ್ಜೆಗೆಟ್ಟ ಕಚ್ಚೆಹರುಕರುಗಳು ಇದ್ದು (ಕಾಂಗ್ರೇಸ್ ಪಕ್ಷದ ಮೇಟಿ) ಅವರ ಪ್ರಕರಣಗಳು ಈ ರೀತಿಯಾಗಿ ಇನ್ನೂ ಬಹಿರಂಗವಾಗಿರದ ಕಾರಣ, ಗಾಜಿನ ಮನೆಯಲ್ಲಿ ನಿಂತು ಕಲ್ಲನ್ನು ಹೊಡೆಯುವ ದುಸ್ಸಾಹಸ ಮಾಡುತ್ತಿರುವುದು ಅಚ್ಚರಿಯನ್ನು ಮೂಡಿಸುವಂತಿದೆ. ಮಾರ್ಚ್ 1, 2011 ರಂದು ಕಾಂಗ್ರೇಸ್ ಪಕ್ಷದ ಅಧಿನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾದ ನಂತರ ನಾಪತ್ತೆಯಾದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತೆ ಸುಕನ್ಯಾ ಸಿಂಗ್ (ಸುಕನ್ಯಾ ದೇವಿ) ಅವರ ಇರುವಿಕೆಯ ಕುರಿತು ಉಚ್ಚನ್ಯಾಯಾಲಯ ರಾಹುಲ್ ಗಾಂಧಿ ಕಾಂಗ್ರೇಸ್ ಪಕ್ಷದ ಮಾಜಿ ಶಾಸಕ ಕಿಶೋರ್ ಸಮ್ರಿತೆ ಮತ್ತು ರಾಹುಲ್ ಗಾಂಧಿಯ ವಿದೇಶಿ ಸ್ನೇಹಿತರಿಗೆ ನೋಟೀಸ್ ಕಳುಹಿಸಿದ ನಂತರ ಅಧಿಕಾರದಲ್ಲಿದ್ದ ಕಾಂಗ್ರೇಸ್ ಅದನ್ನು ಸದ್ದಿಲ್ಲದೇ ಮುಚ್ಚಿ ಹಾಕಿದ್ದ ಪ್ರಕರಣವನ್ನೂ ಇಲ್ಲಿ ನೆನಪಿಸಿಕೊಳ್ಳ ಬೇಕಿದೆ. ಸುಕನ್ಯಾದೇವಿಯವರ ಕುಟುಂಬ ಮತ್ತು ಸ್ಥಳೀಯರ ಪ್ರಕಾರ ಮಾದಕವಸ್ತು ಮತ್ತು ಕುಡಿದ ನಶೆಯಲ್ಲಿದ್ದ ರಾಹುಲ್ ಗಾಂಧಿ ಮತ್ತವರ ಸ್ನೇಹಿತರಉ ಸುಕನ್ಯಾದೇವಿಯ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ನಾಪತ್ತೆ (ಕೊಲೆಯನ್ನು ಸಹಾ ಮಾಡಿರಬಹುದು) ಮಾಡಿದ್ದಾರೆ ಎಂಬ ಆರೋಪ ಮಾಡಿದ್ದದ್ದನ್ನು ಜನರು ಈಗ ಎತ್ತಿ ತೋರಿಸಿ ರಾಹುಲ್ ಗಾಂಧಿಯ ಅತ್ಯಾಚಾರವನ್ನು ಮುಚ್ಚಿಹಾಕಿದ್ದ ಪಕ್ಷಕ್ಕೆ ಈಗ ಈ ಪ್ರಕರಣದ ಕುರಿತಾಗಿ ಮಾತಾಡಲು ನೈತಿಕತೆ ಇಲ್ಲಾ ಎನ್ನುತ್ತಿದ್ದಾರೆ.
ಚುನಾವಣಾ ಸಂಧರ್ಭದಲ್ಲಿಯೇ ಈ ರೀತಿಯಾಗಿ ಪ್ರಕರಣ ಬಹಿರಂಗವಾದ ಕೂಡಲೇ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿ ಹೋದ ನಂತರ, ಹೊಳೇ ನರಸೀಪುರದ ರೇವಣ್ಣನವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹೆಂಗಳು ತನ್ನ ಮೇಲೆ ಮತ್ತು ತನ್ನ ಮಗಳ ಮೇಲೇ ಶ್ರೀಮತಿ ಭವಾನಿ ರೇವಣ್ಣನವರು ಮನೆಯಲ್ಲಿ ಇಲ್ಲದಿದ್ದ ಸಂಧರ್ಭದಲ್ಲಿ ಮಾಜಿ ಮಂತ್ರಿಗಳಾದ ರೇವಣ್ಣ ಮತ್ತು ಆವರ ಮಗ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯವನ್ನು ನಾಲ್ಕೈದು ವರ್ಷಗಳ ಹಿಂದೆಯೇ ನಡೆಸಿದ್ದರು. ಆಗ ಆವರ ಬೆದರಿಕೆಯ ಭಯದಿಂದ ಸುಮ್ಮನಾಗಿದ್ದು, ಈ ಪೆನ್ ಡ್ರೈವ್ ನಲ್ಲಿ ತಮ್ಮ ವಿಡೀಯೋ ಸಹಾ ಇರುವ ಕಾರಣ, ಮರ್ಯಾದೆಗೆ ಅಂಜಿ ಹೊಳೇನರಸೀಪುರದ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಕರ್ನಾಟಕ ರಾಜ್ಯ ಸರ್ಕಾರ ಎಚ್ಚೆತ್ತು ಕೊಂಡು ಈ ಕುರಿತಂತೆೆ ಎಸ್. ಐ.ಟಿ. ತನಿಖೆಗೆ ಆದೇಶ ನೀಡಿದ್ದಲ್ಲದೇ, ಹೋದ ಬಂದ ಕಡೆ ಪ್ರತಿಭಟನೆ ನಡೆಸುತ್ತಿರುವುದನ್ನು ಕಂಡು ಪರಿಸ್ಥಿತಿ ತಮ್ಮ ಕೈ ಮೀರಿ ಹೋಗದಂತೆ ತಡೆಯುವ ಸಲುವಾಗಿ ಜಾತ್ಯಾತೀತ ಜನತಾದಳದಿಂದ ಪ್ರಜ್ವಲ್ ರೇವಣ್ಣನವರನ್ನು ಆರು ವರ್ಷಗಳ ಕಾಲ ಉಚ್ಚಾಟನೆ ಮಾಡುವ ಆದೇಶವನ್ನು ಶ್ರೀ ದೇವೇಗೌಡರು ಹೊರಡಿಸಿದ್ದಾರೆ.
ಈ ಪ್ರಕರಣದ ಕುರಿತಂತೆ ತಮ್ಮ ಹಿರಿಯ ಸಹೋದರ ಎಚ್‌ಡಿ ರೇವಣ್ಣ ಅವರ ಕುಟುಂಬದಿಂದ ಅಂತರವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುವ, ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು, ಉಪ್ಪು ತಿಂದವರು ನೀರು ಕುಡಿಯಲೇ ಬೇಕು, ತಪ್ಪು ಮಾಡಿದವರು ಯಾರೇ ಆಗಲಿ ಶಿಕ್ಷೆಯನ್ನು ಅನುಭವವಿಸಲೇ ಬೇಕು ಎಂದು ಹೇಳಿದ್ದಲ್ಲದೇ, ತಾವೂ ಮತ್ತು ರೇವಣ್ಣನವರ ಕುಟುಂಬ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಕೇವಲ ಕೇವಲ ರಾಜಕೀಯ ವೇದಿಕೆಗಳಲ್ಲಿ ಮಾತ್ರಾ ಒಟ್ಟಿಗೆ ಭಾಗವಹಿಸುವ ಕಾರಣ, ಈ ಪ್ರಕರಣದಲ್ಲಿ ಅನಾವಶ್ಯಕವಾಗಿ ತನ್ನನ್ನು ಮತ್ತು ತನ್ನ ತಂದೆಯವರನ್ನು ಅನುಮಾನಿಸಿ ಅವಮಾನಿಸದಂತೆ ಎಲ್ಲರನ್ನೂ ಕೋರಿದ್ದಾರೆ.
ಇದೇ ಕುರಿತಂತೆ ಪ್ರಕರಣದ ಮೊದಲ ಆರೋಪಿ ಸ್ಥಾನದಲ್ಲಿರುವ ರೇವಣ್ಣನವರನ್ನು ವಿಚಾರಿಸಿದಾಗ, ಇದು ನಾಲ್ಕೈದು ವರ್ಷಗಳ ಹಿಂದಿನ ವಿಷಯವಾಗಿದ್ದು, ದೇವೇಗೌಡರ ಕುಟುಂಬದ ಮರ್ಯಾದೆಯನ್ನು ಹಾಳು ಮಾಡುವ ಸಲುವಾಗಿ ಮಾಡುತ್ತಿರುವ ರಾಜಕಿಯ ಷಡ್ಯಂತ್ರವಾಗಿದ್ದು, ತನಿಖೆಯ ನಂತರ ಸತ್ಯವೆಲ್ಲವೂ ಹೊರಬಂದು ತಾವು ನಿರಪರಾಧಿಗಳೆಂದು ಸಾಭೀತಾಗುತ್ತೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಮ್ಮ ಮಗನ ಈ ಲೈಂಗಿಕ ದೌರ್ಜನ್ಯದ ಬಗ್ಗೆ ಅವರಿಗೆ ಬಹಳ ಹಿಂದಿನಿಂದಲೂ ಅರಿವಿತ್ತು ಎಂಬುದು ಸಾಭೀತಾಗಿದೆ. ಹಾಗಾಗಿಯೇ ಶ್ರೀ ಪ್ರಜ್ವಲ್ ಅವರು ಮಾಧ್ಯಮ ಪ್ರಕಟಣೆಗಳನ್ನು ಪ್ರಸಾರ ಮಾಡದಂತೆ ಅಥವಾ ವಿಷಯಗಳನ್ನು ಪ್ರಕಟಿಸದಂತೆ ಒಂದು ವರ್ಷದ ಹಿಂದೆಯೇ ನ್ಯಾಯಾಲಯದಿಂದ ತಡೆಯಾಜ್ಞೆ ಆದೇಶವನ್ನು ಪಡೆದಿದ್ದರೂ, ಅನಧಿಕೃತವಾಗಿ ಈಗ ವಿಷಯ ಬಹಿರಂಗವಾಗಿ ಪ್ರಜ್ವಲ್ ಜೊತೆಗೆ ದೇವೇಗೌಡರ ಕುಟುಂಬದ ಮಾನ ಹರಾಜಾಗಿದೆ.
ಪೆನ್ ಡ್ರೈವ್ ನಲ್ಲ್ರಿರುವ ವಿಡೀಯೋ ನೋಡಿರುವವರು ಮತ್ತು ಮಾಧ್ಯಮದಲ್ಲಿ ಬಿತ್ತರವಾಗಿರುವ ಪ್ರಕಾರ, ಆರೋಪಿ ಪ್ರಜ್ವಲ್ ರೇವಣ್ಣ, ತಾನು ಮಾಜಿ ಪ್ರಧಾನಿಗಳ ಮೊಮ್ಮಗ, ಮಾಜೀ ಮುಖ್ಯಮಂತ್ರಿಗಳ ಅಣ್ಣನ ಮಗ, ಮಾಜೀ ಮಂತ್ರಿಗಳ ಮಗ ಮತ್ತು ಸ್ವತಃ ತಾನೇ ಸಾಂಸದ ಎಂಬ ಅಧಿಕಾರದ ಹುಂಬಿನಿಂದ ನೂರಾರು ಅಮಾಯಕ ಹೆಣ್ಣು ಮಕ್ಕಳನ್ನು ಹಣದ ಆಮೀಷದಿಂದಲೋ ಇಲ್ಲವೇ ಬಲವಂತವಾಗಿಯೋ ತನ್ನ ಬಳಿ ಕರೆಸಿಕೊಂಡು 16ವರ್ಷದ ವಯಸ್ಸಿನಿಂದ ಹಿಡಿದು 60 ವರ್ಷರದ ಹೆಣ್ಣುಮಕ್ಕಳು ಎಂಬ ಬೇಧವಿಲ್ಲದೇ ಲೈಂಗಿಕ ದೌರ್ಜನ ನಡೆಸಿದ್ದು, ಎಲ್ಲದ್ದಕ್ಕಿಂತಲೂ ಕುತೂಹಲವೆಂದರೆ ಅವುಗಳೆಲ್ಲವನ್ನೂ ವೀಡಿಯೋ ಚಿತ್ರೀಕರಣ ಮಾಡಿಟ್ಟು ಕೊಂಡಿದ್ದು ಈಗ ಆವರ ಮನೆಯ ಮಾಜೀ ಕಾರ್ ಡ್ರೈವರ್ ಮೂಲಕ ಬಹಿರಂಗವಾಗಿ ಆತನ ವಯಕ್ತಿಕ ಮತ್ತು ರಾಜಕೀಯ ಜೀವನಕ್ಕೆ ಮಗ್ಗಲ ಮುಳ್ಳಾಗಿ ಮುಳುವಾಗಿದೆ.
ಕಳೆದ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ರೇವಣ್ಣನವರ ವಿರುದ್ಧವಾಗಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಜಿ. ದೇವರಾಜೇಗೌಡ ಅವರು 2023 ರ ಡಿಸೆಂಬರ್‌ನಲ್ಲಿ ಜೆಡಿಎಸ್‌ನೊಂದಿಗೆ ಬಿಜೆಪಿಯ ಸಂಭಾವ್ಯ ಮೈತ್ರಿಯನ್ನು ವಿರೋಧಿಸಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರಿಗೆ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಈ ವಿಡಿಯೋ ತುಣುಕುಗಳ ಬಗ್ಗೆ ತಿಳಿಸಿದ್ದಲ್ಲದೇ, ಪ್ರಜ್ವಲ್ ರೇವಣ್ಣ ಅವರ ಬಳಿ 2,976 ಅಶ್ಲೀಲ ವಿಡಿಯೋ ತುಣುಕುಗಳ ಪೆನ್ ಡ್ರೈವ್ ಇದ್ದು ಅದರ ಮೂಲಕ ಅನೇಕ ಮಹಿಳೆಯರನ್ನು ಆತ ಬ್ಲಾಕ್ ಮೇಲ್ ಮಾಡುತ್ತಿರುವ ವಿಷಯವನ್ನು ತಿಳಿಸಿ, ಇದೇ ಪ್ರಜ್ವಲ್ ನನ್ನು ಲೋಕಸಭಾ ಅಭ್ಯರ್ಥಿಯನ್ನಾಗಿಸಿದರೆ, ವಿರೋಧಿಗಳು ಇದೇ ವೀಡಿಯೊಗಳನ್ನು ಅಸ್ತ್ರವಾಗಿಸಿ ಮೈತ್ರಿ ಪಕ್ಷವನ್ನು ಹಣಿಯುವ ಸಾಧ್ಯತೆ ಇದೆ ಎಂಬುದಾಗಿ ಎಚ್ಚರಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಪಕ್ಷ ಕ್ಷೇತ್ರಗಳ ವಿಂಗಡನೆಯ ಮಾತು ಕತೆಯ ಸಂಧರ್ಭದಲ್ಲಿ ಹಾಸನದಲ್ಲಿ ಪ್ರಜ್ವಲ್ ಅವರ ಕುರಿತಾಗಿ ಅನೇಕ ಗಂಭೀರ ಆರೋಪಗಳು ಇರುವ ಕಾರಣ ಅವರನ್ನು ಬದಲಿಸಬೇಕೆಂದು ಕೋರಿದ್ದನ್ನು ಸಹಾ ಸ್ವತಃ ಕುಮಾರಸ್ವಾಮಿಯವರೇ ಸುವರ್ಣಾ ಟಿವಿಯ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳ ಬಹುದಾಗಿದೆ.
ನೊಂದ ಕೆಲವು ಸಂತ್ರಸ್ತೆಯರು ಮತ್ತು ಕಾಂಗ್ರೇಸ್ ಬೆಂಬಲಿತ ಕೆಲವು ಸಂಘಟನೆಗಳು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದರ ಆನ್ವಯ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ತನಿಖೆಗೆ ವಿಶೇಷ ತಂಡ ರಚನೆ ಮಾಡಿ ಎಂದು ಮೂರು ದಿನಗಳ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದರ ಪರಿಣಾಮ ಸರ್ಕಾರವು ಈ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿ ಆದೇಶ ಹೊರಡಿಸಿದೆಯಲ್ಲದೇ, ಈ ವಿಡಿಯೊಗಳಿದ್ದ ಪೆನ್‌ಡ್ರೈವ್‌ಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕನಾಗಿ ಸಿಗುವಂತೆ ಮಾಡಿರುವ ಕಾಣದ ಕೈಗಳ ಕುರಿತಾಗಿಯೂ ತನಿಖೆ ಮಾಡಬೇಕೆಂದು ತಿಳಿಸಿದ್ದಾರೆ. ಮಹಿಳೆಯ ಘನತೆಗೆ ಧಕ್ಕೆ ಆರೋಪ ಸೇರಿ ಹಲವು ಐಪಿಸಿ ಸೆಕ್ಷೆನ್ ಅಡಿಯಲ್ಲದೇ, ಐಪಿಸಿ ಸೆಕ್ಷೆನ್ 354 A, 354 D ಮತ್ತು 509 ಅಡಿಯಲ್ಲಿ ಈಗ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ಆರಂಭಿಸಲಾಗಿದೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಈ ಲೈಂಗಿಕ ಹಗರಣವನ್ನು ಖಂಡಿಸಿ ರಾಜ್ಯದ ವಿವಿದೆಡೆಯಲ್ಲಿ ಕಾಂಗ್ರೆಸ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದರೆ, ಸ್ವಘೋಷಿತ ಕನ್ನಡ ಪರ ಹೋರಾಟಗಾರ ಎಂದು ಕೊಳ್ಳುವ ಸದ್ಯಕ್ಕೆ ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಹರೀಶ್ ಬೈರಪ್ಪ ಅಲಿಯಾಸ್ ಬಲ್ಬ್ ಹರೀಶ ಎಂಬ ಮಹಾನುಭಾವ ಈ ಪ್ರಕರಣದ ಹೆಚ್ಚಿನ ವಿಡೀಯೋ ಬೇಕಿದ್ದಲ್ಲಿ ನನ್ನನ್ನು ಸಂಪರ್ಕಿಸಿ ಎಂದು ಫೇಸ್ ಬುಕ್ಕಿನಲ್ಲಿ ಬರೆದುಕೊಳ್ಳುವ ಮೂಲಕ ತಾನೊಬ್ಬ ದೊಡ್ಡ ಪಿಂಪ್ ಎಂದು ಸಾಭಿತು ಪಡಿಸಿಸುವುದು ನಿಜಕ್ಕೂ ಖಂಡನಾರ್ಹವಾಗಿದೆ. ಇದೇ ಹರೀಶ್ ಅಥವಾ ಕಾಂಗ್ರೇಸ್ ಪಕ್ಷದ ನಾಯಕರುಗಳ ಮನೆಯ ಹೆಣ್ಣುಮಕ್ಕಳ ಅಶ್ಲೀಲ ವೀಡೀಯೋವನ್ನು (ಹಾಗಾಗದಿರಲಿ ಎಂದೇ ಪ್ರಾರ್ಥಿಸೋಣ) ಸಾರ್ವಜನಿಕವಾಗಿ ಪ್ರದರ್ಶನ ಮಾಡುತ್ತಿದ್ದರೆ? ಎಂದು ಅತ್ಮಾವಲೋಕನ ಮಾಡಿಕೊಂಡರೆ ಒಳಿತು.
ಸಂಸ್ಕೃತದ ಈ ಸುಭಾಷಿತವೊಂದರ ಪ್ರಕಾರ, ಕರ್ತಾ ಕಾರಯಿತಾ ಚೈವ ಪ್ರೇರಕಶ್ಚಾನುಮೋದಕಃ | ಸುಕೃತೇ ದುಷ್ಕೃತೇ ಚೈವ ಚತ್ವಾರಃ ಸಮಭಾಗಿನಃ | ಯಾವುದೇ ಒಂದು ಪುಣ್ಯ ಅಥವಾ ಪಾಪದ ಕೆಲಸದಲ್ಲಿ, ಕರ್ತಾ ಎಂದರೆ ನೇರವಾಗಿ ಭಾಗಿಯಾಗಿರುವವನು, ಕಾರಯಿತಾ, ತಾನು ಯಾರ ಕಣ್ಣಿಗೂ ಬೀಳದಂತೆ ದೂರವಿದ್ದು ಪರೋಕ್ಷವಾಗಿ ಇತರರಿಂದ ಮಾಡಿಸುವವನು, ಪ್ರೇರಕ, ಕರ್ತ್ರುವಿಗೆ ಕೆಲಸ ಮಾಡುವಂತೆ ಪ್ರೇರಣೆ ಮಾಡುವವನು ಮತ್ತು ಅನುಮೋದಕ, ಮಾಡಿದ ಕೆಲಸವನ್ನು ಅನುಮೋದನೆ ಮಾಡುವವನು ಹೀಗೆ ನಾಲ್ಕೂ ಜನರು ಭಾಗಿಯಾಗುತ್ತಾರೆ ಎನ್ನಲಾಗಿದೆ.
ಹಾಗಾಗಿ ಮೇಲಿನ ಆ ಸುಭಾಷಿತದ ಪ್ರಕಾರ ಈ ಪ್ರಕರಣದ ಪಾಪದ ಫಲದಲ್ಲಿ ಇಂತಹ ಅನ್ಯಾಯದ ಕೆಲಸವನ್ನು ಮಾಡಿದ ಪ್ರಜ್ವಲ್ ರೇವಣ್ಣನ ಜೊತೆ, ಆತನ ಕುಟಂಬವಷ್ಟೇ ಅಲ್ಲದೇ, ಆ ಪೆನ್ ಡ್ರೈವ್ ವೀಡೀಯೋಗಳನ್ನು ಬಹಿರಂಗ ಪಡಿಸಿ, ಸಂಸ್ತ್ರಸ್ಥ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಅವಮಾನಕ್ಕೆ ಈಡು ಮಾಡಿದವರು ಮತ್ತು ಈ ಕುರಿತಾಗಿ ಮಾಡ್ದೋರ್ ಪಾಪಾ ಆಡ್ದೋರ್ ಬಾಯಲ್ಲಿ ಎನ್ನುವಂ ತೆ ಬಹಿರಂಗ ಪ್ರತಿಭಟನೆಯಲ್ಲಿ ತೊಡಗಿರುವವರು ಹೀಗೆ ನಾಲ್ಕೂ ಜನಗಳು ಸಹಾ ಸಮ ಭಾಗಿಗಳಾಗುತ್ತಾರೆ ಎಂದರೂ ತಪ್ಪಾಗದು.
ಸಂತೋಷದ ವಿಷಯವೇನೆಂದರೆ ಈ ಪ್ರಕರಣದಲ್ಲಿ ಆರೋಪಿಯ ಪರವಾಗಿ ಆತನ ತಂದೆಯ ಹೊರತಾಗಿ ಇತರೇ ಯಾರೂ ಸಹಾ ಸಮರ್ಥನೆ ಮಾಡಿಕೊಳ್ಳದೇ. ಆರೋಪಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎನ್ನುತ್ತಿರುವುದು ಅಭಿನಂದನಾರ್ಹವಾದರೆ, ಇದೇ ರೀತಿ ಕಳೆದ ವಾರ ಹುಬ್ಬಳ್ಳಿಯ ನೇಹ ಹಿರೇಮಠ್ ಅವರ ಹತ್ಯೆಯ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಕಾಂಗ್ರೇಸ್ಸಿನ ಯಾವುದೇ ಕಾರ್ಯಕರ್ತರೂ ಈ ಪರಿಯಾಗಿ ಪ್ರತಿಭಟನೆ ಏಕೆ ಮಾಡಲಿಲ್ಲಾ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಅಪರಾಧಕ್ಕೆ ಜಾತಿ, ಮತ, ಆಸ್ತಿ, ಅಂತಸ್ತು, ಅಧಿಕಾರ ಮತ್ತು ಧರ್ಮದ ಹಂಗಿಲ್ಲ ಮತ್ತು ಇರಲೂ ಬಾರದು. ನ್ಯಾಯ ಎಂದರೆ ಎಲ್ಲರಿಗೂ ಒಂದೇ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ