ಹೇಳೀ ಕೇಳಿ ಈಗ ದೇಶಾದ್ಯಂತ ಸಾರ್ವತ್ರಿಕ ಚುನಾವಣೆಯ ಸಂಧರ್ಭ. ಈಗಾಗಲೇ, ಐದು ಹಂತಗಳ ಚುನಾವಣೆ ನಡೆದು, ಇನ್ನು ಮೇ 25 ಮತ್ತು ಜೂನ್ 1 ರಂದು ಕಡೆಯ ಹಂತದ ಚುನಾವಣೆಗಷ್ಟೇ ಬಾಕಿ ಇದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತದ ಚುನಾವಣೆಗೆಳು ನಡೆದ ನಂತರ, ಹೋದ ಬಂದ ಕಡೆಯಲ್ಲೆಲ್ಲಾ ಚುನಾವಣಾ ಫಲಿತಾಂಶದ ಬಗ್ಗೆಯೇ ಚರ್ಚೆ. ಎಲ್ಲರಿಗೂ ಅವರವರ ಪಕ್ಷವೇ ಹೆಚ್ಚು ಸ್ಥಾನ ಗಳಿಸ ಬೇಕು ಎಂಬ ನಿರೀಕ್ಷೆ ಇಟ್ಟು ಕೊಳ್ಳುವುದು ತಪ್ಪಲ್ಲಾ. ಆದರೆ ಅವರ ನಿರೀಕ್ಷೆಯಂತೆಯೇ ಉಳಿದದವರೂ ಇರಬೇಕು ಎಂದು ಬಯಸುವುದು ಸರಿಯಲ್ಲ. ಇನ್ನು ವಸ್ತುನಿಷ್ಟವಾಗಿ ವಾಸ್ತವತೆಯಿಂದ ರಾಜಕೀಯ ವಿಶ್ಲೇಷಣೆ ಮಾಡುತ್ತಿದ್ದಂತೆಯೇ, ಏ ಇಲ್ಲಾ ಅದು ಹಾಗಲ್ಲಾ. ಈ ಬಾರಿ ಬಿಜೆಪಿ ನಾಲ್ಕುನೂರು ಬಿಡಿ ಸರಳ ಬಹುಮತ ಪಡೆದು ಮೂರನೇ ಬಾರಿಗೆ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಕಾಂಗ್ರೇಸ್ ನೇತೃತ್ವದಲ್ಲಿ ಸರ್ಕಾರ ಆಡಳಿತಕ್ಕೆ ಬಂದು ರಾಹುಲ್ ಗಾಂಧಿ ಖಂಡಿತವಾಗಿಯೂ ಪ್ರಧಾನಿಗಳಾಗುತ್ತಾರೆ. ಚುನಾವಣಾ ಫಲಿತಾಂಶ ಬಂದ ಕೂಡಲೇ ಮೋದಿ ದೇಶ ಬಿಟ್ಟು ಓಡಿ ಹೋಗುತ್ತಾರೆ ಎಂಬ ವಿತಂಡ ವಾದ ಮಾಡುವುದರಲ್ಲೇ ಸಮಯ ಕಳೀತಾರೆ.
ಇದಕ್ಕೆ ಪೂರಕ ಎನ್ನುವಂತೆ ಆರಂಭದ 2-3 ಹಂತಗಳ ಚುನಾವಣೆಯಲ್ಲಿ ಉತ್ತಮ ಸಂಖ್ಯೆಯಲ್ಲಿ ಮತದಾನ ಆದ ನಂತರ 4 & 5ನೇ ಹಂತದಲ್ಲಿ ದೇಶದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜನರು ಮತದಾನ ಮಾಡಲು ಬಾರದಿದ್ದದ್ದನ್ನು ಗಮನಿಸಿ ಮೋದಿಯವರ ವಿರೋಧಿ ಪಾಳ್ಯದಲ್ಲಿ ಒಂದು ರೀತಿಯ ರಣೋತ್ಸಾಹ. ಜನರು ಮೋದಿಯವರ ಸರ್ಕಾರದ ವಿರುದ್ಧ ಬೇಸತ್ತು ಮನೆಯಿಂದಲೇ ಹೊರಗೆ ಬಾರದಿರುವ ಕಾರಣ ಈ ಬಾರಿ INDI ಒಕ್ಕೂಟ ನಿಶ್ಚಯವಾಗಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ವಾದ.
ಆದರೆ ಇವರ ವಾದಕ್ಕೆ ತದ್ವಿರುದ್ಧವಾಗಿ ಕಾಂಗ್ರೇಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ಕಳೆದ ಬಾರಿ ಉತ್ತರ ಪ್ರದೇಶದ ಅಮೇಥಿಯಲ್ಲಿ ಸೋಲುವುದನ್ನು ಮನಗಂಡು ಮುಸ್ಲಿಂ ಬಾಹುಳ್ಯವಿರುವ ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿ ಗೆದ್ದ ನಂತರ, ಈ ಬಾರಿ ವಯನಾಡಿನಲ್ಲಿ ಕಮ್ಯೂನಿಷ್ಟ್ ವಿರುದ್ಧ ಸೋಲುವ ಭಯದಿಂದ ಉತ್ತರ ಪ್ರದೇಶದಲ್ಲಿ ಅವರ ತಾಯಿಯವರು ಸ್ಪರ್ಧಿಸುತ್ತಿದ್ದ ರಾಯ್ ಬರೇಲಿಯಲ್ಲಿ ತನ್ನ ಅದೃಷ್ಟ ಪರೀಕ್ಷಿಸಲು ಮುಂದಾಗಿರುವುವುದು ಅಚ್ಚರಿಯನ್ನು ಮೂಡಿಸಿದ್ದು ಈ ಕುರಿತಾಗಿ ಅವರ ವಿರೋಧಿಗಳು ದೇಶಾದ್ಯಂತ ಕುಚೋದ್ಯ ಮಾಡುತ್ತಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೇಸ್ ಸಾಂಸದರು ಬಿಡಿ ಶಾಸಕರೂ ಸಹಾ ಇಲ್ಲದೇ ಇರುವ ಸಂಧರ್ಭದಲ್ಲಿಯೂ ಸಹಾ ಕಾಂಗ್ರೇಸ್ ಚಿರಯೌವ್ವನಿಗ, ಯುವ ನಾಯಕ, ತಮ್ಮ INDI ಒಕ್ಕೂಟದ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ರೊಂದಿಗೆ ಜಂಟಿಯಾಗಿ ನಡೆಸುತ್ತಿರುವ ಚುನಾವಣಾ ರ್ಯಾಲಿಯ ಮಥ್ಯದಲ್ಲಿ ನಡೆಸಿರುವ ಸಂಭಾಷಣೆಯಲ್ಲಿ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ INDI ಒಕ್ಕೂಟವೇ 79 ಸ್ಥಾನಗಳನ್ನು ಗಳಿಸುತ್ತಿದ್ದು, ವಾರಣಾಸಿಯಲ್ಲಿಯೂ ಸಹಾ ಮೋದಿಯವರ ಸೋಲು ಖಚಿತ ಎಂಬ ರೀತಿಯಾಗಿ ಅಸಂಬದ್ಧವಾಗಿ ಮಾತನಾಡಿರುವ ವೀಡೀಯೋ ಸದ್ಯಕ್ಕೆ ದೇಶಾದ್ಯಂತ ವೈರಲ್ ಆಗಿದ್ದು, ಅಯ್ಯಾ ಅಣ್ಣಂದಿರಾ! ಮೋದಿಯವರನ್ನು ಸೋಲಿಸುವುದು ಬಿಡಿ ಮೊದಲು ನೀವಿಬ್ಬರೂ ಗೆಲ್ಲುತ್ತೀರಾ ಎಂಬುದನ್ನು ನೋಡಿಕೊಳ್ಳಿ ಎಂದು ಜನರು ಅಪಹಾಸ್ಯ ಮಾಡುತ್ತಿದ್ದಾರೆ.
ಇಷ್ತರ ಮಧ್ಯೆ ಸಟ್ಟಾ ಬಜಾರ್ ಅರ್ಥಾತ್ ಬೆಟ್ಟಿಂಗ್ ಮಾಡುವವರೂ ಸಹಾ ಬಿಜೆಪಿ ಈಬಾರಿ 400 ಬಿಡಿ ಕಳೆದ ಬಾರಿಗಿಂತಲೂ ಕಡಿಮೆ ಸ್ಥಾನ ಗಳಿಸುತ್ತದೆ ಎಂದು ಹೇಳಿದ್ದಾರೆ ಎಂದು ಎಲ್ಲಾ ಮಾಧ್ಯಮಗಳಲ್ಲಿಯೂ ಬಿತ್ತರವಾಗುತ್ತಿದ್ದಂತೆಯೇ ಮತ್ತೆ ಮೋದಿಯವರ ವಿರೋಧಿ ಪಾಳ್ಯದ ವಿತಂಡ ವಾದ ತಾರಕಕ್ಕೇರಿದಾಗ, ಸಾಮಾಜಿಕ ಜಾಲತಾಣದಲ್ಲಿ ಓದಿದ ಈ ಕತ್ತೆಯ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಗಿದೆ.
ಆದೊಮ್ಮೆ ಕಾಡಿನಲ್ಲಿ ಕತ್ತೆ ಮತ್ತು ಹುಲಿಯ ನಡುವೆ ಲೋಕಭಿರಾಮವಾಗಿ ಹರಟೆ ನಡೆಯುತ್ತಿದ್ದಂತಹ ಸಂಧರ್ಭದಲ್ಲಿಯೇ ಕತ್ತೆಯು, ಹೇ ಅಲ್ಲಿ ನೋಡು ಆ ನೀಲಿ ಬಣ್ಣದ ಹುಲ್ಲು ಎಷ್ಟು ಚನ್ನಾಗಿದೆ ಅಲ್ವಾ! ಎಂದು ಪ್ರಶ್ನಿಸಿದಾಗ, ಅತ್ತ ಕಡೆ ತಿರುಗಿ ನೋಡಿದ ಹುಲಿ, ಆ ಹುಲ್ಲು ಹಸಿರು ಬಣ್ಣದ್ದಾಗಿದೆ ಎಂದು ಹೇಳಿತು. ಅದಕ್ಕೊಪ್ಪದ ಕತ್ತೆ ಇಲ್ಲಾ ಆ ಹುಲ್ಲು ನೀಲಿ ಬಣ್ಣದ್ದು ಎಂದು ವಾದವನ್ನು ಮಾಡಿದ್ದಲ್ಲದೇ, ಅವರಿಬ್ಬರ ನಡುವಿನ ಚರ್ಚೆಯು ತಾರಕಕ್ಕೇರಿದಾಗ, ಈ ಸಮಸ್ಯೆಯ ಪರಿಹಾರವನ್ನು ಕಾಡಿನ ರಾಜ ಸಿಂಹದ ಬಳಿಯೇ ಇತ್ಯರ್ಥ ಮಾಡಿಕೊಳ್ಳುವುದು ಉತ್ತಮ ಎಂದು ನಿರ್ಧರಿಸಿ ಇಬ್ಬರೂ ಕಾಡಿನ ರಾಜನಾದ ಸಿಂಹದ ಗುಹೆಗೆ ಹೋದವು,
ಯಥಾ ಪ್ರಕಾರ ತನ್ನ ಸಿಂಹಾಸನದ ಮೇಲೆ ರಾಜಗಾಂಭೀರ್ಯದಿಂದ ಕುಳಿತಿದ್ದ ಸಿಂಹವನ್ನು ಕಂಡ ಕೂಡಲೇ, ಕತ್ತೆಯು ತನ್ನ ಗಾರ್ದಭ ಗಾಯನವನ್ನು ಆರಂಭಿಸಿದ್ದನ್ನು ಕೇಳಲು ಅಸಹನೀಯ ಎನಿಸಿದರೂ, ರಾಜನ ಸ್ಥಾನದಲ್ಲಿದ್ದ ಸಿಂಹವು, ತಾಳ್ಮೆಗೆಡದೆ, ಸಾಕು ಸಾಕು ನಿಮ್ಮ ಗಾಯನ, ಈಗ ನೀವು ಬಂದ ವಿಷಯವನ್ನು ತಿಳಿಸಿ ಎಂದು ಹೇಳಿತು. ಮಹಾರಾಜ ಹುಲ್ಲಿನ ಬಣ್ಣ ನೀಲಿಯಲ್ಲವೇ? ಎಂದು ಕತ್ತೆಯು ಕೇಳುತ್ತಿದಂತೆಯೇ, ಕೊಂಚವು ವಿಚಲಿತವಾದ ಸಿಂಹ, ಹೌದು ನಿಜ. ಹುಲ್ಲು ನೀಲಿ ಬಣ್ಣದ್ದಾಗಿರುತ್ತದೆ ಎಂದು ಹೇಳಿದ ತಕ್ಷಣ ಮತ್ತೆ ಹರ್ಷಗೊಂಡ ಕತ್ತೆ, ನೋಡಿ ರಾಜಾ, ಈ ಮಾತನ್ನು ಹುಲಿ ಮಾತ್ರಾ ಒಪ್ಪದೇ, ವಿನಾಕಾರನ ನನ್ನೊಂದಿಗೆ ವಾದ ಮಾಡುತ್ತಿರುವ ಕಾರಣ, ದಯವಿಟ್ಟು ನೀವು ಹುಲಿಗೆ ಕಠಿಣವಾಗಿ ಶಿಕ್ಷಿಸ ಬೇಕು ಎಂದು ಕೋರಿಕೊಂಡಿತು,
ಕತ್ತೆಯ ಮಾತಿಗೆ ಸಮ್ಮತಿಸಿದ ಸಿಂಹವು, ಇನ್ನು 5 ವರ್ಷಗಳ ಕಾಲ ಹುಲಿಯು ಮೌನದಿಂದ ಇರಬೇಕು ಎನ್ನುವುದೇ ಶಿಕ್ಷೆ ಅದನ್ನು ಮೀರಿದಲ್ಲಿ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಆಜ್ಞೆ ಮಾಡಿದ ಕೂಡಲೇ ತನ್ನ ವಾದಕ್ಕೇ ಗೆಲುವಾಯಿತೆಂದು ಕತ್ತೆ ಮತ್ತೆ ಜೋರಾಗಿ ತನ್ನ ಗಾಯನವನ್ನು ಆರಂಭಿಸಿದ್ದಲ್ಲದೇ, ಹುಲ್ಲಿನ ಬಣ್ಣ ನೀಲಿ, ಹುಲ್ಲಿನ ಬಣ್ಣ ನೀಲಿ ಎಂದು ಜೋರಾಗಿ ಕೂಗುತ್ತಾ ಕಾಡಿನ ಹಾದಿ ಹಿಡಿಯಿತು,
ಕಾಡಿನ ರಾಜ ಈ ರೀತಿಯಾಗಿ ನೀಡಿದ ಶಿಕ್ಷೆಯಿಂದ ವಿಚಲಿತನಾದ ಹುಲಿಯು, ರಾಜ ಕೊಟ್ಟ ಶಿಕ್ಷೆಯನ್ನು ಒಪ್ಪಿಕೊಳ್ಳುವ ಮೊದಲು ಅಲ್ಲಾ ರಾಜ, ಹುಲ್ಲಿನ ಬಣ್ಣ ಹಸಿರು ಎಂಬುದು ಇಡೀ ಲೋಕಕ್ಕೇ ಗೊತ್ತಿದ್ದರೂ, ಕತ್ತೆ ಹೇಳುವ ಹಾಗೆ ಹುಲ್ಲಿನ ಬಣ್ಣ ನೀಲಿ ಎಂದು ನೀವೇಕೇ ಒಪ್ಪಿಕೊಂಡಿರಿ? ಮತ್ತು ನೀವೇಕೆ ನನಗೆ ಶಿಕ್ಷೆ ಕೊಟ್ಟಿರಿ? ಎಂದು ಹೇಳಬಹುದೇ? ಎಂದು ವಿನಮ್ರದಿಂದ ಕೇಳಿಕೊಂಡಿತು.
ಹೌದು ನಿಜ. ಹುಲ್ಲಿನ ಬಣ್ಣ ಹಸಿರು ಎಂದು ನಾನು ಒಪ್ಪಿಕೊಳ್ಳುತ್ತೇನೆ ಎಂದು ಸಿಂಹ ಹೇಳಿದಾಗ, ಮತ್ತೆ ಅಚ್ಚರಿಗೊಂಡ ಹುಲಿಯು, ಸ್ವಾಮೀ ನಿಮಗೆ ಸತ್ಯ ಗೊತ್ತಿದ್ದರೂ ನೀವೇಕೆ ನನಗೆ ಶಿಕ್ಷೆ ವಿಧಿಸಿದಿರಿ? ಎಂದು ಕೇಳಿದಾಗ, ನಾನು ನಿನಗೆ ಕೊಟ್ಟ ಶಿಕ್ಷೆ, ಹುಲ್ಲು ನೀಲಿ ಅಥವಾ ಹಸಿರು ಬಣ್ನ ಎಂಬ ವಾದಕ್ಕಲ್ಲಾ. ಗೊತ್ತಿದ್ದೂ ಗೊತ್ತಿದ್ದೂ ನಿನ್ನಂತಹ ಶಕ್ತಿಶಾಲಿಯಾದವನು ಕತ್ತೆಯೊಂದಿಗೆ ಆನಾವಶ್ಯಕವಾಗಿ ಜಗಳವಾಡುವುದರ ಮೂಲಕ ಸಮಯವನ್ನು ವ್ಯರ್ಥ ಮಾಡುತ್ತಿರುವುದಲ್ಲದೇ, ಇಂತಹ ಕ್ಷುಲ್ಲಕ ಮತ್ತು ವಿತಂಡ ಸಮಸ್ಯೆಯನ್ನು ಬಗೆ ಹರಿಸಲು ನನ್ನ ಬಳಿಗೆ ಬಂದು ನನ್ನ ಸಮಯವನ್ನೂ ವ್ಯರ್ಥ ಮಾಡಿದ್ದಕ್ಕಾಗಿ ಈ ಶಿಕ್ಷೆ ವಿಧಿಸುತ್ತಿದ್ದೇನೆ. ಸತ್ಯ ಅಥವಾ ವಾಸ್ತವದ ಬಗ್ಗೆ ಕಾಳಜಿ ವಹಿಸದ ಮೂರ್ಖ ಮತ್ತು ಮತಾಂಧರೊಂದಿಗೆ ವಾದ ಮಾಡುವುದು ಕೇವಲ ಸಮಯ ವ್ಯರ್ಥವಷ್ಟೇ, ವಾಸ್ತವವನ್ನು ಒಪ್ಪದೇ, ಅವರರದ್ದೇ ಅದ ನಂಬಿಕೆಗಳು ಮತ್ತು ಭ್ರಮೆಗಳಲ್ಲೇ ತೇಲುವ ಅಂತಹ ಕೂಪಮಂಡೂಕಗಳೊಂದಿಗೆ ನಾವು ಎಷ್ಟೇ ದಾಖಲೆಗಳು ಮತ್ತು ಪುರಾವೆಗಳೊಂದಿಗೆ ಪ್ರಸ್ತುತಪಡಿಸಿದರೂ, ಅರ್ಥಮಾಡಿಕೊಳ್ಳಲು ಸಾಮರ್ಥ್ಯವಿಲ್ಲದ ಇಲ್ಲವೇ ಅರ್ಥ ಮಾಡಿಕೊಳ್ಳಲು ಬಯಸದ ಅಂತಹರೊಂದಿಗೆ ವಿನಾ ಕಾರಣ ವಾದ ಮಾಡುವ ಬದಲು ಸುಮ್ಮನಾಗುವುದು ವಯಕ್ತಿಯವಾಗಿ ಮತ್ತು ಸಮಾಜಕ್ಕೆ ಒಳಿತು. ಅಂತಹ ಕೂಗು ಮಾರಿಗಳಿಗೆ ಆರಂಭದಲ್ಲಿ ಗೆಲುವು ದಕ್ಕಿದರೂ ಅಂತಿಮವಾಗಿ ವಾಸ್ತವೇ ಸತ್ಯ ಎಂಬುದು ಅವರಿಗೆ ಅರಿವಾಗುವಷ್ಟರಲ್ಲಿ ಅವರೆಲ್ಲರೂ ನೇಪಥ್ಯಕ್ಕೆ ಸರಿದಿರುತ್ತಾರೆ. ಹಾಗಾಗಿ ಅಂತಹವರೊಂದಿಗೆ ವಿವೇಕದಿಂದ ವಿವೇಚನೆ ಬಳಸಿಕೊಂಡು ದೂರವಿರುವುದೇ ಉತ್ತಮ ಎಂದು ಹೇಳಿತು.
ದೇಶದಲ್ಲಿ ಸದ್ಯದ ಕಾಂಗ್ರೇಸ್ ಮತ್ತು ಇಂಡಿ ಒಕ್ಕೂಟದ ಇತರೇ ಪಕ್ಷಗಳ ಪರಿಸ್ಥಿತಿಯೂ ಇದಕ್ಕಿಂತಲೂ ಭಿನ್ನವಾಗಿದೆ ಎಂದೆಣಿಸುವುದಿಲ್ಲ. ಕರ್ನಾಟಕ ಬಿಟ್ಟರೆ, ಸಣ್ಣ ಸಣ್ಣ ರಾಜ್ಯಗಳಾದ ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಮಾತ್ರವೇ ಅಧಿಕಾರವನ್ನು ಹೊಂದಿದ್ದು ಪ್ರಸ್ತುತ 543 ಕ್ಷೇತ್ರಗಳಿರುವ ಲೋಕಸಭೆಗೆ ಕಾಂಗ್ರೇ ಪಕ್ಷ ಒಟ್ಟು ಕಾಂಗ್ರೆಸ್ 328 ಸ್ಥಾನಗಳಲ್ಲಿ ಮಾತ್ರವೇ ಸ್ಪರ್ಧಿಸುತ್ತಿದ್ದು ಸುಮಾರು 200 ಕ್ಕೂ ಹೆಚ್ಚು ಸ್ಥಾನಗಳನ್ನು ತನ್ನ ಇತರೇ INDI ಒಕ್ಕೂಟ ಪಕ್ಷಗಳಿಗೆ ಬಿಟ್ಟು ಕೊಟ್ಟಿದ್ದು, ದಕ್ಷಿಣದ ಕೆಲವು ಕ್ಷೇತ್ರಗಳ ಹೊರತಾಗಿ ಭಾರತಾದ್ಯಂತ ೫೦+ ದಾಟುವುದೂ ಹಗಲು ಕನಸು ಎನಿಸಿಕೊಂಡಿರುವಾಗ ನರೇಂದ್ರ ಮೋದಿಯವರನ್ನು ಸೋಲಿಸುತ್ತೇವೆ. ಅವರನ್ನು ದೇಶ ಬಿಟ್ಟು ಓಡಿಸುತ್ತೇವೆ ಎಂದು ಅಬ್ಬಿರಿದು ಬೊಬ್ಬಿರಿಯುವುದನ್ನು ನೋಡಿದಾಗ, ಭ್ರಮಾಲೋಕದಲ್ಲಿ ತೇಲಾಡುತ್ತಿರುವವರಿಗೆ ವಸ್ತು ನಿಷ್ಠ ವಿಷಯವನ್ನು ತಿಳಿಸುವುದು ಅಪಾಯಕಾರಿ ಎಂದು ಕಾಲ ಬಂದಾಗ ಆರ್ಥಾತ್, ಚುನಾವಣ ಫಲಿತಾಂಶ ಬಂದಾಗ ಎಲ್ಲರವೂ ಅವರಿಗೇ ಅರ್ಥವಾಗುತ್ತದೆ.
ದುರಾದೃಷ್ಟವಷಾತ್ ಇಂದಿನ ಸಮಾಜದಲ್ಲಿ ಬಹುತೇಕರು ಅಹಂಕಾರ, ದ್ವೇಷ ಮತ್ತು ಅಸಮಾಧಾನದಿಂದ ಕುರುಡಾಗಿದ್ದಾರೆ ಮತ್ತು ಅವರ ನಂಬಿಕೆಗಳು ಮತ್ತು ವಾದವನ್ನೇ ಎಲ್ಲರೂ ಅನುಸರಿಸಬೇಕೆಂದು ಬಯಸುತ್ತಾರೆ. ಹಾಗಾಗಿ ಅಜ್ಞಾನವು ಕಿರುಚಿದಾಗ, ಬುದ್ಧಿವಂತಿಕೆಯು ಮೌನವಾಗಿರುತ್ತದೆ. ನಮ್ಮ ಶಾಂತಿ ಮತ್ತು ಶಾಂತತೆಯು ಹೆಚ್ಚು ಮೌಲ್ಯಯುತವಾಗುತ್ತದೆ. ಹಾಗಾಗಿ ಅಂತಹ ಕತ್ತೆಗಳೊಂದಿಗೆ ವಾದ ಮಾಡ ಬೇಕಾದ ಸಂಧರ್ಭ ಎದುರಾದಾಗ ತಲೆ ಗಟ್ಟಿಗಿದೆ ಎಂದು ಬಂಡೆಗೆ ತಲೆ ಚಚ್ಚಿಕೊಂಡು ಗಾಯ ಮಾಡಿಕೊಳ್ಳದೇ, ವಿವೇಚನೆಯಿಂದ ಮೌನಕ್ಕೇ ಜಾರುವುದೇ ಲೇಸು ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ