ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ

ಅದೇಕೋ ಏನೋ ಕಾಂಗ್ರೇಸ್ ಪಕ್ಷ ಆಡಳಿತಕ್ಕೆ ಬಂದ ಕೂಡಲೇ ರಾಜ್ಯದಲ್ಲಿ ಪುಂಡರ ಹಾವಳಿ  ಅತಿಯಾಗಿ ಹೋಗುತ್ತದೆ. ಕಾನೂನು ಸುವ್ಯವಸ್ಥೆ  ಅವ್ಯವಸ್ಥೆಯಾಗುತ್ತದೆ, ಎಂದು ಜನ ಮಾತಾನಾಡಿಕೊಳ್ಳುವುದಕ್ಕೆ ಪುಷ್ಠಿ ನೀಡುವಂತೆ, ಧಾರವಾಡದಲ್ಲಿ ಕಳೆದ  ತಿಂಗಳನಲ್ಲಿ ನಡೆದ ಇಬ್ಬರು ಹೆಣ್ಣು ಮಕ್ಕಳ ಕೊಲೆ ಪ್ರಕರಣದ ಬೆನ್ನಲ್ಲೇ ಕಳೆದ ಮೂರ್ನಾಲ್ಕು ದಿನಗಳಿಂದಲೂ ರಾಜ್ಯದಲ್ಲಿ ಆಗುತ್ತಿರುವ ಘಟನೆಗಳಿಂದಾಗಿ ಈ ರಾಜ್ಯದ ಸರ್ಕಾರ ಸರ್ಕಾರದಲ್ಲಿ ಗೃಹಖಾತೆ ಎನ್ನುವುದು ಇದೆಯೇ? ಎನ್ನುವಂತೆ ಮಾಡಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.

ಮೇ 28 ಈ ದೇಶ ಕಂಡ ಅಪ್ರತಿಮ ಸ್ವಾತ್ರಂತ್ರ್ಯ ಹೋರಾಟಗಾರ, ಅಂದಿನ ಕಾಲದ ಸಹಸ್ರಾರು ಸ್ವಾತ್ರಂತ್ಯ್ರ ಹೋರಾಟಗಾರರಿಗೆ ಪ್ರೇರಣಾದಾಯಿಯಾಗಿದ್ದ, 50 ವರ್ಷಗಳ ಕಾಲ ಅಂಡಮಾನ್ ಸೆಲ್ಯುಲಾರ್ ಸೆರೆಮನೆಯಲ್ಲಿ ಕಾಲಾ ಪಾನಿ ಶಿಕ್ಷೆ ಪಡೆದು ಕಡೆಗೆ ಸುದೀರ್ಘ ಪತ್ರವ್ಯವಹಾರಗಳ ಮೂಲಕ ತಮ್ಮ ಸ್ವಸ್ಥಾನಕ್ಕೆ ಬಂದು ಸ್ವಾತ್ರಂತ್ಯ್ರ ಸಿಗುವವರೆಗೂ ರತ್ನಗಿರಿಯಲ್ಲಿ ಒಂದು ರೀತಿಯ ಗೃಹಬಂಧನದಲ್ಲಿದ್ದರೂ, ರಹಸ್ಯವಾಗಿ ಬ್ರಿಟೀಷರನ್ನು ಈ ದೇಶದಿಂದ ಹೊರದಬ್ಬಿ ಭಾರತಕ್ಕೆ ಸ್ವಾತ್ರಂತ್ಯ್ರ ತಂದುಕೊಡಲು ಪ್ರಯತ್ನಿಸಿದ್ದ ವೀರ ಸಾವರ್ಕರ್ ಅವರ ಜಯಂತಿ. ಶ್ರೀ ವಿನಾಯಕ ದಾಮೋದರ ಸಾವರ್ಕರ್ ಜನ್ಮದಿನದಂದೇ ಬೆಂಗಳೂರಿನ ಯಲಹಂಕದ ಮದರ್ ಡೈರಿ ಬಳಿ ಇರುವ ವೀರ್ ಸಾವರ್ಕರ್ ಮೇಲ್ಸೇತುವೆಯ ಫಲಕಕ್ಕೆ ಕೆಲ ಕಿಡಿಗೇಡಿಗಳು ಕಪ್ಪು ಮಸಿ ಬಳಿಸಿದ್ದಾರೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ (NSUI) ಕಾರ್ಯಕರ್ತರಾದ ಪ್ರವೀಣ್, ರಕ್ಷ ರಾಜ್ ಹಾಗೂ ನಿಶ್ಚಿತ್ ಗೌಡ ಎಂಬ ಯುವಕರುಗಳು ಮಂಗಳವಾರ ಮಧ್ಯಾಹ್ನ 1.50 ರ ವೇಳೆಗೆ ಸೇತುವೆ ಮೇಲೆ ಹಾಕಲಾಗಿದ್ದ ಸಾವರ್ಕರ್ ಹೆಸರಿಗೆ ಮಸಿ ಬಳಿದಿದ್ದಾರೆ. ಈ ಘಟನೆ ನಡೆದ ಕೂಡಲೇ ಸ್ಥಳೀಯ ನಾಗರೀಕರು ನೀಡಿದ ದೂರಿನ ಅನ್ವಯ ಪೋಲೀಸರು ಆ ಮೂವರು ಯುವಕರನ್ನು ಬಂಧಿಸಿ ನಡೆಸಿದ ಆರಂಭಿಕ ತನಿಖೆಯಲ್ಲಿ ಸಾವರ್ಕರ್‌ಗೆ ಸಿಗುತ್ತಿರುವ ಗೌರವ ಭಗತ್‌ ಸಿಂಗ್‌ಗೆ ಸಿಗುತ್ತಿಲ್ಲ ಎಂಬ ಬೇಸರದಿಂದ ಈ ಕೃತ್ಯ ಮಾಡಿದ್ದೇವೆ ಎಂದು ತಿಳಿಸಿರುವುದೇ ಅಚ್ಚರಿಗೆ ಕಾರಣವಾಗಿದೆ.

ಘಟನೆಯ ಕುರಿತಾಗಿ ಪೊಲೀಸರು ಹೇಳಿರುವಂತೆ, ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ NSUI ಕಾರ್ಯಕರ್ತರು ಸಾವರ್ಕರ್ ಮೇಲ್ಸೇತುವೆಗೆ ‘ಭಗತ್ ಸಿಂಗ್ ಫ್ಲೈಓವರ್’ ಎಂದು ಮರುನಾಮಕರಣ ಮಾಡಬೇಕೆಂದು ಪ್ರತಿಭಟನೆ ನಡೆಸಿದ್ದಲ್ಲದೇ, ಆದರ ಪ್ರತೀಕವಾಗಿ ಮೇಲ್ಸೇತುವೆಯ ಫಲಕದಲ್ಲಿದ್ದ ಸಾರ್ವರ್ಕರ್ ಹೆಸರಿಗೆ ಕಪ್ಪು ಮಸಿ ಬಳಿಯುವುದರ ಜೊತೆಗೆ ಭಗತ್ ಸಿಂಗ್ ಫ್ಲೈಓವರ್ ಎಂಬ ಬ್ಯಾನರ್ ಹಾಕಿ, ಭಗತ್ ಸಿಂಗ್ ಅವರ ಫೋಟೋಗಳನ್ನು ಹಿಡಿದು ಇಂಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಸಹ ಕೂಗಿದ್ದರ ಪರಿಣಾಮ ಈ ಮೂವರು ಆರೋಪಿಗಳ ವಿರುದ್ಧ ಸಾರ್ವಜನಿಕ ಆಸ್ತಿ ನಷ್ಟ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರೆಸಿದ್ದಲ್ಲದೇ, ಕೂಡಲೇ ಸಾವರ್ಕರ್ ಹೆಸರಿಗೆ ಬಳಿದಿದ್ದ ಮಸಿಯನ್ನು ಅಳಿಸಿದ್ದಲ್ಲದೇ, ಬ್ಯಾನರ್ ಸಹಾ ತೆಗೆದು ಹಾಕಿ ಈ ಹಿಂದಿದ್ದ ಫಲಕವನ್ನು ಮರುಸ್ಥಾಪಿಸಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ಬೆಂಗಳೂರು ಮಹಾನಗರಪಾಲಿಕೆಯ ಅನುಮೋದನೆಯ ಮೇರೆಗೆ ಸಾವರ್ಕರ್ ಅವರ ಹೆಸರನ್ನು ಇಡಲು ಮುಂದಾದಾಗ, ಅಂದಿನ ವಿರೋಧಪಕ್ಷವಾದ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಕೆಲವು ವರ್ಗಗಳ ವಿರೋಧದ ನಡುವೆ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನು ಇಡಲಾಗಿತ್ತು. ನಮ್ಮ ದೇಶದ ಪರಿಸ್ಥಿತಿ ಸ್ವಾತ್ರಂತ್ರ್ಯ ಬಂದು 70+ ವರ್ಷಗಳಾದರೂ ಸದ್ಯದ ಅನೇಕ ಅಪಸವ್ಯಗಳಿಗೆ ಗಾಂಧಿ ಮತ್ತು ನೆಹರು ಅವರೇ ನೇರ ಹೊಣೆ. ಅವರ ದೂರದರ್ಶಿತ್ವತನ ಇಲ್ಲದೇ ಇದ್ದದ್ದು ಮತ್ತು ವಿಪರೀತವಾಗಿ ಅಲ್ಪಸಂಖ್ಯಾತರ ತುಷ್ಟೀಕರಣದಿಂದಾಗಿಯೇ ಎಂದು ಹೇಳುವುದಲ್ಲದೇ ಪದೇ ಪದೇ ನೆಹರು ಅವರ ವಿರುದ್ಧ ಮಾತನಾಡುವುದಕ್ಕೆ ಪ್ರತಿಯಾಗಿ ಇತ್ತೀಚಿನ ಕಾಂಗ್ರೇಸ್ ಪಕ್ಷದವವರು (ಇಂದಿರಾಗಾಂಧಿ ಅವರಿಗೆ ಸಾವರ್ಕರ್ ಬಗ್ಗೆ ಹೆಮ್ಮೆ ಇತ್ತು) ವೀರ ಸಾವರ್ಕರ್ ಎಂದಾಕ್ಷಣ ಹಾವು ಕಡಿದಂತೆ ಆಡುವುದು ಎಲ್ಲರಿಗೂ ತಿಳಿದಿರುವ ವಿಷಯವಷ್ಟೇ. ಕಳೆದ ಬಾರಿ ಅವರ ಜೊತೆ ಮತ್ತೊಂದು ವಿರೋಧ ಪಕ್ಷವಾದ ಜೆಡಿಎಸ್ ಮತ್ತು ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಬಿ ಹರೀಶ್‌ ಕುಮಾರ್‌ (ಬಲ್ಪ್ ಹರೀಶ್) ಮತ್ತು ಕೆಲವು ಸಂಘಟನೆಗಳು ಸಾವರ್ಕರ್ ಕನ್ನಡಿಗರಲ್ಲದ ಕಾರಣ ಕರ್ನಾಟಕದಲ್ಲಿ ಅವರ ಹೆಸರಿಡುವುದರ ಔಚಿತ್ಯವನ್ನು ಪ್ರಶ್ನಿಸುತ್ತಾ, ಆ ಮೇಲ್ಸೇತುವೆಗೆ ವೀರ ಸಾವರ್ಕರ್‌ ಅವರ ಹೆಸರನ್ನು ಇಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸಿದ್ದರು. ನಂತರ ದಿನಗಳಲ್ಲಿ ಎಲ್ಲವು ತಿಳಿಗೊಂಡು ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಯಡೆಯೂರಪ್ಪನವರ ಅಮೃತಹಸ್ತದಿಂದ ಈ ಸೇತುವೆ ಅಧಿಕೃತವಾಗಿ ವೀರ ಸಾವರ್ಕರ್ ಮೇಲ್ಸೇತುವೆ ಎಂದೇ ಉದ್ಭಾಟನೆಯಾಗಿತ್ತು. ಅಂದು ಸಾವರ್ಕರ್ ಕನ್ನಡಿಗರಲ್ಲದ ಕಾರಣ ಅವರ ಹೆಸರು ಇಡಬಾರದು ಎಂದು ವಾದಿಸಿದವರಿಗೆ ಇಂದು ಇದ್ದಕ್ಕಿದ್ದಂತೆಯೇ ಭಗತ್ ಸಿಂಗ್ ಹೇಗೆ ಕನ್ನಡಿಗರಾದರು ಎಂಬುದೇ ಈಗ ಯಕ್ಷ ಪಶ್ನೆಯಾಗಿದೆ.

ಇನ್ನು ಕಳೆದ ತಿಂಗಳ ರಂಜಾನ್ ಹಬ್ಬದ ಸಮಯದಲ್ಲಿ ಮಂಗಳೂರಿನ ಪ್ರಮುಖ ರಸ್ತೆಯೊಂದರ ಸುತ್ತಮುತ್ತಲೂ ಹತ್ತಾರು ದೊಡ್ಡ ದೊಡ್ಡದಾದ ಮಸೀದಿಗಳಿದ್ದರೂ, ಅಲ್ಲಿನ ಕೆಲ ಮುಸಲ್ಮಾನರು ರಸ್ತೆಯ ಮೇಲೇ ಇಫ್ತಾರ್ ಔಟಣಕೂಟವೊಂದನ್ನು ಆಯೋಜಿಸಿ ಸುಮಾರು ಎರಡು ದಿನಗಳ ಕಾಲ ಆ ರಸ್ತೆಯನ್ನು ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟ ಪರಿಣಾಮ ಅದಾಗಲೇ ವಿಚಾರಣಾ ಹಂತದಲ್ಲಿರುವಾಗ, ಕಳೆದ ವಾರ ಮೇ 24, 2024ರಂದು ಮಂಗಳೂರಿನ ಕಂಕನಾಡಿಯ ಮಸೀದಿಯ ಮುಂಭಾಗದ ಸಾರ್ವಜನಿಕ ರಸ್ತೆಯಮೇಲೆಯೇ ಕೆಲವೊಂದು ಯುವಕರುಗಳು ಅನಧಿಕೃತವಾಗಿ ನಮಾಜ್ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಟ್ಟ ವರದಿಯಾಗಿದ್ದು, ಈ ಕುರಿತಾಗಿ ಮಂಗಳೂರು ನಗರ ಪೊಲೀಸರು ಸ್ವಯಂಪ್ರೇರಿತವಾಗಿ ಸಾರ್ವಜನಿಕ ದಾರಿಗೆ ಅಡ್ಡಿಪಡಿಸುವುದು, ಕಾನೂನುಬಾಹಿರ ಸಭೆ ಇತ್ಯಾದಿಗಳಿಗೆ ಸಂಬಂಧಿಸಿದ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ವಿಷಯ ತಡವಾಗಿ ಹೊರಬಂದಿದೆ.

ಸುಮಾರು ಹತ್ತಕ್ಕೂ ಹೆಚ್ಚು ವ್ಯಕ್ತಿಗಳು ರಸ್ತೆಯ ಮಧ್ಯದಲ್ಲಿ ಇದ್ದಕ್ಕಿದ್ದಂತೆಯೇ ಪ್ರಾರ್ಥನೆ ಸಲ್ಲಿಸುತ್ತಿದ್ದರಿಂದ ಅನೇಕ ವಾಹನ ಚಾಲಕರು ಯು-ಟರ್ನ್ ತೆಗೆದುಕೊಳ್ಳಲು ಪರದಾಡುತ್ತಾ, ಆ ರಸ್ತೆ ಇಡೀ ಅಸ್ತವ್ಯಸ್ಥವಾಗಿದ್ದ ಘಟನೆಯ ವಿಡಿಯೋ ವೈರಲ್ ಆಗಿ ಎಲ್ಲಡೆಯಲ್ಲಿಯೂ ಥೂ! ಛೀ! ಎಂದು ಹೇಳಿದ್ದಲ್ಲದೇ ಘಟನೆ ಕುರಿತು ಕ್ರಮ ಕೈಗೊಳ್ಳುವಂತೆ ಸ್ಥಳೀಯ ವಿಎಚ್‌ಪಿ ಕಾರ್ಯಕರ್ತರು ಆಗ್ರಹ ಪಡಿಸಿದ ಪರಿಣಾಮವೋ ಏನೋ ಒಟ್ಟಿನಲ್ಲಿ ಪೋಲೀಸರು ಪ್ರಕರಣ ದಾಖಲಿಸಿಕೊಡಿದ್ದಾರೆ. ಕಳೆದ ಬಾರಿ ಕಾಂಗ್ರೇಸ್ ಪಕ್ಷ ಆಡಳಿತಕ್ಕೆ ಬಂದಾಗ ವಿವಿಧ ಗಂಭೀರ ಪ್ರಕರಣಗಳಲ್ಲಿ ಜೈಲು ಪಾಲಾಗಿದ್ದ ನೂರಾರು ಪಿ.ಎಫ್.ಐ ಮತ್ತು ಎಸ್. ಡಿ.ಪಿ.ಐ ಕಾರ್ಯಕರತರನ್ನು ಇದೇ ಸಿದ್ದರಾಮಯ್ಯನವರ ಸರ್ಕಾರ ಭೇಷರತ್ ಬಿಡುಗಡೆ ಮಾಡಿದ್ದಲ್ಲದೇ, ಡಿ.ಜೆ.ಹಳ್ಳಿ ಮತ್ತು ಕೆ.ಜೆಹಳ್ಳಿಯ ಪ್ರಕರಣದಲ್ಲಿಯೂ ಸಹಾ ಅಂದಿನ ಕಾಂಗ್ರೇಸ್ ಶಾಸಕ ಅಖಂಡ ಶ್ರೀನಿವಾಸ್ ಮತ್ತು ಪೋಲೀಸ್ ಠಾಣೆಯನ್ನು ಧ್ವಂಸ ಮಾಡಿ ಸುಟ್ಟಿ ಹಾಕಿದ್ದರೂ, ಇಂದಿಗೂ ಸಹಾ ಯಾವುದೇ ತರಹ ಶಿಕ್ಷೆ ಆಗದಿರುವುದನ್ನು ಕಂಡ ನಂತರ, ರಸ್ತೆಯ ಮೇಲೆ ಇಫ್ತಾರ್ ಔತಣ ಕೂಡ ನಡೆಸಿದ ಮತ್ತು ನಮಾಜ್ ಮಾಡಿದವರಿಗೂ ಸಹಾ ಯಾವುದೇ ಶಿಕ್ಷೆಯಾಗದು ಎಂದು ಜನಾ ಮಾತನಾಡಿಕೊಳ್ಳುತ್ತಿರುವುದು ಸಮಾಜದ ಸಾಮರಸ್ಯತೆಗೆ ಧಕ್ಕೆ ತರುವಂತಹ ವಿಷಯವಾಗಿದೆ.

ಇನ್ನು ಎರಡು ದಿನಗಳ ಹಿಂದೆ ಬೆಳ್ಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ಕೆಲವು ಮುಸ್ಲಿಂ ಹುಡುಗರು ದ್ವಿಚಕ್ರವಾಹನದಲ್ಲಿ ವೀಲೀ ಮಾಡುತ್ತಾ, ಅವರ ಜೊತೆ ಮತ್ತೆ ಕೆಲವು ಹುಡುಗರು ಕಾರಿನಲ್ಲಿ ವಿಪರೀತ ವೇಗವಾಗಿ ಓಡಿಸುತ್ತಿದ್ದನ್ನು ಕಂಡ ಅಭಿಲಾಷ್ ಹಾಗೂ ನಾಗೇಶ್​ ಎಂಬುವರು ಪ್ರಶ್ನಿಸಿದ್ದಲ್ಲದೇ ವೇಗವಾಗಿ ಕಾರು ಓಡಿಸದಂತೆ ಬುದ್ಧಿವಾದ ಹೇಳುವ ಸಂಧರ್ಭದಲ್ಲಿ ಸ್ವಲ್ಪ ಮಟ್ಟಿನ ಮಾತಿನ ಚಕಮಕಿ ನಡೆದಿತ್ತು. ಈ ರೀತಿಯಾಗಿ ಹುಚ್ಚಾಪಟ್ಟೆ ಓಡಾಡಬೇಡಿ ಎಂಬ ಎಚ್ಚರಿಕೆಯ ಮಾತುಗಳನ್ನು ಸಹಿಸದ ಕೆಲವು ಮುಸ್ಲಿಂ ಯುವಕರ ಗುಂಪೊಂದು ಅಭಿಲಾಷ್​ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದಲ್ಲದೇ, ಅವರ ಮೇಲೆ ಹಲ್ಲೆ ನಡೆಸುತ್ತಿದ್ದದ್ದನ್ನು ತಡೆಯಲು ಬಂದ ಕೆಲ ಹಿಂದೂ ಯುವಕರ ಮೇಲೆಯೂ ಆ ಮುಸ್ಲಿಂ ಯುವಕರ ಗುಂಪು ಹಲ್ಲೆ ಮಾಡಿದೆಯಲ್ಲದೇ, ಕೆಲ ಹಿಂದೂ ಮನೆಗಳಿಗೆ ನುಗ್ಗಿ ಮಹಿಳೆಯರಿಗೂ ಬೆದರಿಕೆ ಹಾಕಿದ್ದರಿಂದ ಸದ್ಯ ಬೆಳ್ಳೂರಿನಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿರುವ ಘಟನೆ ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಅಭಿಲಾಷ್​ ಅವರನ್ನು ಬೆಳ್ಳೂರಿನ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಬೆಳ್ಳೂರಿನ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಶ್ರಮ ವಹಿಸುತ್ತಿದ್ದಾರೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಪುರುಷರಕಟ್ಟೆ ಎಂಬ ಊರಿನ ಮಿನರಲ್ ನೀರನ್ನು ತಯಾರಿಸಿ ಮಾರಾಟ ಮಾಡುವ ನೀರಿನ ಘಟಕದವರು ತಮ್ಮ ಕಾರ್ಖಾನೆಯ ಆವರಣದೊಳಗೆ ಹೊಸಾ ಬೋರ್ವೆಲ್ ಕೊರೆಸುತ್ತಿದ್ದಂತಹ ಸಂಧರ್ಭದಲ್ಲಿ ಈಗಾಗಲೇ ಇರುವ ಬೋರ್‌ವೆಲ್‌ಗಳನ್ನು ಫ್ಲಶ್ ಮಾಡುವ ಬದಲು ಹೊಸದಾಗಿ ಬೋರ್‌ವೆಲ್ ಕೊರೆಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ಮುಸ್ಲಿಂ ಯುವಕರುಗಳು ಕಲ್ಲು ತೂರಾಟ ನಡೆಸಿ ಅನೇಕರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ವರದಿಯಾಗಿದ್ದು, ಈ ಕಲ್ಲು ತೂರಾಟದ ಪ್ರಕರಣದಲ್ಲಿ ಈ ಹಿಂದಿನ ಕಾಶ್ಮೀರದ ಪರಿಸ್ಥಿತಿಯನ್ನು ನೆನಪಿಸುವಂತೆ ಸಣ್ಣ ಸಣ್ಣ ಮಕ್ಕಳು ಸಹಾ ಭಾಗಿಗಳಾಗಿರುವುದು ಆತಂತಕಕಾರಿ ಬೆಳವಣಿಗೆಯಾಗಿದೆ. ಈ ದಾಳಿಗೆ ಪ್ರತಿಯಾಗಿ ನೀರಿನ ಘಟಕದವರು ಸಹಾ ಕೂಡ ಕಲ್ಲು ತೂರಾಟ ನಡೆಸಿದ ಪರಿಣಾಮ ಪರಿಸ್ಥಿತಿ ಗಂಭೀರವಾಗಿದ್ದು ಈ ಕುರಿತು ದೂರು, ಪ್ರತಿದೂರು ಸ್ಥಳೀಯ ಪೋಲೀಸ್ ಠಾಣೆಯಲ್ಲಿ ದಾಖಲಾದ ಪರಿಣಾಮ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಈ ಎಲ್ಲಾ ಪ್ರಸಂಗಗಳನ್ನು ಸೂಕ್ಷ್ಮವಾಗಿ ಗಮಿಸಿದರೆ, ಈ ಎಲ್ಲಾ ಪ್ರಕರಣಗಳಲ್ಲಿಯೂ ಈ ದೇಶದ ಕಾನೂನಿಗೆ ಬೆಲೆ ಕೊಡದ ಅಥವಾ ಕೊಡಲು ಇಚ್ಚಿಸದ ಅಥವಾ ಈ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಆಡಳಿತದಲ್ಲಿ ಇರುವವರೆಗೂ ಈ ದೇಶದ ಯಾವುದೇ ಕಾನೂನುಗಳು ತಮ್ಮನ್ನು ಏನೂ ಸಹಾ ಮಾಡಲಾಗದು ಎಂದು ನಂಬಿರುವಂತಹವರೇ ಈ ಸಮಾಜ ವಿರೋಧಿ ಕುಕೃತ್ಯಗಳಲ್ಲಿ ಭಾಗಿಗಳಾಗಿರುವುದು ಸ್ಪಷ್ಟವಾಗಿದ್ದು, ಇದರಿಂದ ಪ್ರೇರಿತವಾಗಿ ಇಂತಹ ಪ್ರಕರಣಗಳು ರಾಜ್ಯದಲ್ಲಿ ಮತ್ತಷ್ಟು ಹರಡುವ ಮುನ್ನಾ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು (ಅವರ ಬದರ್ಸ್ ಗಳನ್ನು) ಮತ್ತು ಗೃಹಮಂತ್ರಿಗಳು ಹದ್ದು ಬಸ್ತಿನಲ್ಲಿ ಇಡುವುದು ಒಳಿತು ಎನ್ನುವಂತಾಗಿದೆ

ರಾಜ್ಯ ಸರ್ಕಾರದ ಕೈಯ್ಯಲ್ಲಿ ಆಗದೇ ಹೋದಲ್ಲಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾದ ನೂರು ದಿನಗಳೊಳಗೆ ದೇಶದ ಕಾನೂನೂ ಸುವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡುವುತ್ತೇವೆ ಎಂದು ಪ್ರಧಾನ ಮಂತ್ರಿಗಳು ಹೇಳಿರುವಾಗ, ದಯವಿಟ್ಟು ಇಂತಹ ಮತಾಂಧ ಸಮಾಜವಿರೋಧಿಗಳನ್ನು ಸರಿದಾರಿಗೆ ತರಲು ದಯವಿಟ್ಟು ಒಂದು ದೇಶ, ಒಂದು ಕಾನೂನು ಅತಿ ಶೀಘ್ರದಲ್ಲೇ ಜಾರಿಗೆ ತರಲಿ ಎನ್ನುವುದೇ ಸಕಲ ಭಾರತೀಯರ ಆಶಯವಾಗಿದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Hope D.

@wordpress

Jayla H.

@wordpress

“Starting my role as a WordPress administrator has been a joy, thanks to its intuitive interface, media management, security, and plugin integration, making websites a breeze.”

Hope D.

@wordpress

“Starting my role as a WordPress administrator has been a joy, thanks to its intuitive interface, media management, security, and plugin integration, making websites a breeze.”

Leave a comment