ಸ್ಯಾಮ್ ಪಿತ್ರೊಡ ಹೆಸರು ಇತ್ತೀಚಿನ ವರೆಗೂ ಬಹಳ ಜನರಿಗೆ ತಿಳಿದೇ ಇರಲಿಲ್ಲ. ನಿರಂತರವಾಗಿ ವಿದೇಶೀ ವಾರ್ತೆಗಳನ್ನು ಓದುವವರಿಗೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವವರಿಗೆ ಸ್ವಘೋಷಿತ ಭಾರತದ ಭಾವಿ ಪ್ರಧಾನಿ ಮತ್ತು ಚಿರ ಯುವಕ, ರಾಹುಲ್ ಗಾಂಧಿ ಆಗ್ಗಾಗ್ಗೆ ವಿದೇಶಗಳಿಗೆ ಹೋಗಿ ಐಲು ಪೈಲಾಗಿ ಮಾತನಾಡಿ ಭಾರತದ ಮಾನ ಹರಾಜು ಹಾಕುವ ಎಲ್ಲಾ ಕಾರ್ಯಕ್ರಮಗಳ ರೂವಾರಿ ಇದೇ ಸ್ಯಾಮ್ ಪಿತ್ರೋಡ ಎಂಬುದರ ಅರಿವಿರುತ್ತದೆ. ಆದರೆ ಇತ್ತೀಚೆ ಲೋಕಸಭಾ ಚುನಾವಣಾ ಸಮಯದಲ್ಲಿ ಇದೇ ಸ್ಯಾಮ್ ಪಿತ್ರೋಡ ಇದ್ದಕ್ಕಿದ್ದಂತೆಯೇ ಮೈಮೇಲೆ ದೆವ್ವ ಬಂದಂತೆ ಬಾಯಿಗೆ ಬಂದಂತೆ ಮಾತನಾಡಿದಾಗಲೇ ಬಹುಶಃ ಬಹುತೇಕ ಭಾರತೀಯರಿಗೆ ಈ ವ್ಯಕ್ತಿಯ ಪರಿಚಯವಾಯಿತು ಎಂದರೂ ತಪ್ಪಾಗದು.
ಸ್ಯಾಮ್ ಪಿತ್ರೋಡನ ನಿಜವಾದ ಹೆಸರು ಸತ್ಯನಾರಾಯಣ್ ಗಂಗಾರಾಮ್ ಪಿತ್ರೋಡ, ಗುಜರಾತಿ ಮೂಲದ ಪೋಷಕರಿಗೆ ಒರಿಸ್ಸಾದ ತಿತ್ಲಗಢದಲ್ಲಿ 17 ನವೆಂಬರ್ 1942ರಲ್ಲಿ ಜನಿಸಿದ ಪಿತ್ರೋಡ, ಬಾಲ್ಯದಿಂದಲೂ ಓದಿನಲ್ಲಿ ಅತ್ಯಂತ ಚುರುಕಾಗಿದ್ದು ತಮ್ಮ ಇಂಜೀನಿಯರಿಂಗ್ ಪದವಿಯನ್ನು ಪಡೆದ 60ರ ದಶಕದಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಮೇರಿಕಾಕ್ಕೆ ಹೋಗಿ ಅಲ್ಲಿನ ಸಂಸ್ಕೃತಿಗೆ ಮಾರುಹೋಗಿ ಸತ್ಯನಾರಾಯಣ ಎಂದು ಪೋಷಕರು ಇಟ್ಟಿದ್ದ ಚಂದನೆಯ ಹೆಸರನ್ನು ಸ್ಯಾಮ್ ಎಂದು ತುಂಡರಿಸಿಕೊಂಡು ಸ್ಯಾಮ್ ಪಿತ್ರೋಡ ಆಗಿ 1966 ರಲ್ಲಿ ಅವರು ಚಿಕಾಗೋದಲ್ಲಿ GTE ಗಾಗಿ ಕೆಲಸ ಮಾಡಲು ಆರಂಭಿಸಿದರು. 1975 ರಲ್ಲಿ ಎಲೆಕ್ಟ್ರಾನಿಕ್ ಡೈರಿಯನ್ನು ಕಂಡು ಹಿಡಿಯುವ ಮೂಲಕ ಹ್ಯಾಂಡ್-ಹೆಲ್ಡ್ ಕಂಪ್ಯೂಟಿಂಗ್‌ನ ಪ್ರವರ್ತಕ ಎಂದೇ ಪ್ರಖ್ಯಾತರಾದರು.
1981 ರಲ್ಲಿ ಭಾರತಕ್ಕೆ ತಮ್ಮ ಕುಟುಂಬದೊಡನೆ ಪ್ರವಾಸ ರೂಪದಲ್ಲಿ ಬಂದ ಸ್ಯಾಮ್ ಇಲ್ಲಿನ ಪರಿಸ್ಥಿತಿಗೆ ತಮ್ಮ ಕುಟುಂಬ ಒಗ್ಗುವುದು ಕಷ್ಟವಾದ ಕಾರಣ ತಾವು ಭಾರತಕ್ಕೆ ಮರಳುವುದು ಕಷ್ಟ ಎಂಬುದನ್ನು ಅರಿತರಾದರೂ, ಭಾರತದ ದೂರಸಂಪರ್ಕ ವ್ಯವಸ್ಥೆಯನ್ನು ಆಧುನೀಕರಿಸಲು ಸಹಾಯ ಮಾಡಬಹುದು ಎಂಬ ಇಂಗಿತವನ್ನು ವ್ಯಕ್ತಪಡಿಸಿದಾಗ ಹೇಗಾದರೂ ಮಾಡಿ ಅವರನ್ನು ಭಾರತಕ್ಕೆ ಕರೆತರಲು ಅಂದಿನ್ ಪ್ರಧಾನಿ ಇಂದಿರಾ ಗಾಂಧಿಯವರು ಇಚ್ಚಿಸಿ ಅವರಿಗೆ ಮುಕ್ತ ಆಹ್ವಾನವನ್ನೂ ನೀಡಿದ್ದರು. ಅದೇ ಸಮಯದಲ್ಲಿ ಇಂದಿರಾಗಾಂಧಿಯವರ ಅಕಾಲಿಕ ಹತ್ಯೆಯ ನಂತರ ಪೈಲೆಟ್ ಆಗಿದ್ದ ಆಕೆಯ ಮಗ ರಾಜೀವ್ ಗಾಂಧಿ ಪ್ರಧಾನಿಯಾದ ನಂತರ ಭಾರತಕ್ಕೆ ಮರಳಲು ಇಚ್ಚಿಸಿದ ಸ್ಯಾಮ್ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ C-DOT, ಸ್ವಾಯತ್ತ ಟೆಲಿಕಾಂ R&D ಸಂಸ್ಥೆಯನ್ನು ಪ್ರಾರಂಭಿಸಿದ್ದಲ್ಲದೇ, ಭಾರತೀಯ ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ಪಡೆಯುವ ಸಲುವಾಗಿ ತಮ್ಮ US ಪೌರತ್ವವನ್ನು ತ್ಯಜಿಸಿ ಮತ್ತೊಮ್ಮೆ ಭಾರತೀಯ ಪೌರತ್ವವನ್ನು ಪಡೆದು 90ರ ದಶಕದಲ್ಲಿ ಭಾರತೀಯ ದೂರಸಂಪರ್ಕ ವ್ಯವಸ್ಥೆಯಲ್ಲಿ ಬಾರಿ ಪ್ರಮಾಣದ ಬದಲಾವಣೆಯನ್ನು ತರುವ ಮೂಲಕ ಮನೆ ಮನೆಗೂ ಅತ್ಯಂತ ಸರಳವಾಗಿ ದೂರವಾಣಿ ಸಂಪರ್ಕವನ್ನು ಹೊಂದುವುದರ ಹಿಂದೆ ಅವರ ಪರಿಶ್ರಮ ಅಭಿನಂದನಾರ್ಹವಾಗಿತ್ತು. 1990 ರ ದಶಕದಲ್ಲಿ ಪಿಟ್ರೋಡಾ ತನ್ನ ವ್ಯಾಪಾರ ಆಸಕ್ತಿಗಳನ್ನು ಪುನರಾರಂಭಿಸಲು ಮತ್ತೆ ಚಿಕಾಗೋಗೆ ಮರಳಿದ್ದಲ್ಲದೇ, ಮೇ 1995 ರಲ್ಲಿ, ಅವರು ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್‌ನ ವರ್ಲ್ಡ್ ಟೆಲ್ ಉಪಕ್ರಮದ ಮೊದಲ ಅಧ್ಯಕ್ಷರಾದರು.
1993 ರಲ್ಲಿ, ಪಿತ್ರೋಡಾ ಅವರು ಭಾರತದಲ್ಲಿ ಬೆಂಗಳೂರಿನ ಬಳಿ ದರ್ಶನ್ ಶಂಕರ್ ಅವರೊಂದಿಗೆ ಸೇರಿಕೊಂಡು ಸ್ಥಳೀಯ ಆರೋಗ್ಯ ಸಂಪ್ರದಾಯದ ಪುನರುಜ್ಜೀವನಕ್ಕಾಗಿ ಪ್ರತಿಷ್ಠಾನ ಮತ್ತು ಟ್ರಾನ್ಸ್-ಡಿಸಿಪ್ಲಿನರಿ ಹೆಲ್ತ್ ಸೈನ್ಸಸ್ ಮತ್ತು ಟೆಕ್ನಾಲಜಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಮುಂದಾಗುವ ಮೂಲಕ ಭಾರತದ ಸಾಂಪ್ರದಾಯಿಕ ಔಷಧೀಯ ಜ್ಞಾನವಾದ ಆಯುರ್ವೇದವನ್ನು ಉತ್ತೇಜಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಅಕ್ಟೋಬರ್ 2009 ರಲ್ಲಿ, ಪಿತ್ರೋಡ ಅವರನ್ನು ಅಂದಿನ ಪ್ರಧಾನಿಗಳಾಗಿದ್ದ ಮನಮೋಹನ್ ಸಿಂಗ್ ಅವರು ಕ್ಯಾಬಿನೆಟ್ ಮಂತ್ರಿ ದರ್ಜೆಯೊಂದಿಗೆ ಸಾರ್ವಜನಿಕ ಮಾಹಿತಿ ಮೂಲಸೌಕರ್ಯ ಮತ್ತು ನಾವೀನ್ಯತೆಗಳ ಕುರಿತು ಪ್ರಧಾನಿಗಳಿಗೆ ಸಲಹೆಗಾರರಾಗಿ ನೇಮಕ ಮಾಡಿಕೊಂಡರು. 2010 ರಲ್ಲಿ ನ್ಯಾಷನಲ್ ಇನ್ನೋವೇಶನ್ ಕೌನ್ಸಿಲ್ ಅನ್ನು ಸ್ಥಾಪಿಸುವುದರ ಜೊತೆ ಜೊತೆಯಲ್ಲೇ ಪಿತ್ರೋಡಾ ರಾಷ್ಟ್ರೀಯ ಆವಿಷ್ಕಾರ ಮಂಡಳಿಯ ಅಧ್ಯಕ್ಷರಾಗಿಯೂ ನೇಮಕಗೊಂಡರು. ಹೀಗೆ ಭಾರತ ಮತ್ತು ವಿದೇಶಗಳಿಗೆ ಪ್ರತಿ ಎರಡು ತಿಂಗಳಿಗೊಮ್ಮೆ ಅಡುಗೆ ಮನೆ ಮತ್ತು ಬಚ್ಚಲು ಮನೆಯಂತೆ ಓಡಾಡಿಕೊಂಡಿರುವ ಆಭ್ಯಾಸವನ್ನು ರೂಢಿಸಿಕೊಂಡರು.
2014 ರಲ್ಲಿ ಮನಮೋಹನ್ ಸಿಂಗ್ ಅವರ ಕಾಂಗ್ರೇಸ್ ಸರ್ಕಾರ ಪತನವಾಗಿ ಮೋದಿಯವರ ಸರ್ಕಾರ ಬಂದ ನಂತರ ಕಾಂಗ್ರೇಸ್ ಪಕ್ಷ ಸ್ಯಾಮ್ ಪಿತ್ರೋಡಾ ಅವರನ್ನು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಅಧ್ಯಕ್ಷ ಪಟ್ಟವನ್ನು ನೀಡುವ ಮೂಲಕ ಒಂದು ರೀತಿ ರಾಹುಲ್ ಗಾಂಧಿಯವರ ಸಾಗರೋತ್ತರ ಸಾರ್ವಜನಿಕ ಸಂಪರ್ಕ ಅಧಿಕಾರಿಯ ರೂಪದಲ್ಲಿ ಆವರ ಕಾರ್ಯಕ್ರಮಗಳನ್ನು ನಿರೂಪಿಸುವುದರ ಜೊತೆಗೆ ಅವರ ಆಪ್ತ ಸಲಹೆಗಾರನಾಗುವ ಮಟ್ಟಿಗೆ ಬೆಳೆದು ಬಿಟ್ಟಿದ್ದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿತ್ತು.
2024 ರ ಭಾರತೀಯ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ, ವಯಕ್ತಿಕವಾಗಿ ಯೋಚನಾ ಶಕ್ತಿಯನ್ನು ಹೊಂದಿರದ ರಾಹುಲ್ ಗಾಂಧಿ ಇದ್ದಕ್ಕಿದ್ದಂತೆಯೇ, ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಎಲ್ಲರ ಆಸ್ತಿ ತೆರಿಗೆಯ ಎಕ್ಸರೆ ಮಾಡಿಸಿ ಅವರ ಹೆಚ್ಚುವರಿ ಹಣವನ್ನು ಹೆಚ್ಚು ಮಕ್ಕಳಿರುವವರಿಗೆ ಹಂಚುತ್ತೇವೆ ಎಂಬ ಆಘಾತಕಾರಿ ಹೇಳಿಕೆಯ ಹಿಂದೆ ಇದೇ ಸ್ಯಾಮ್ ಅಂಕಲ್ ಅವರ ಪ್ರಭಾವ ಇತ್ತು ಎಂಬುದು ಕೆಲ ದಿನಗಳ ನಂತರ ಅದೇ ಪಿತ್ರೋಡಾ, ಪಿತ್ರಾರ್ಜಿತ ತೆರಿಗೆಗೆ ಸಂಬಂಧಿಸಿದಂತೆ ಟೀಕೆಗಳನ್ನು ಮಾಡಿದ್ದಲ್ಲದೇ, ರಾಹುಲ್ ಹೇಳಿದ್ದ ಸಂಪತ್ತಿನ ಮರುಹಂಚಿಕೆಯ ನೀತಿಯ ಅಗತ್ಯವನ್ನು ಒತ್ತಿಹೇಳುತ್ತಾ, ಅದಕ್ಕೆ ಪುರಾವೆ ಎನ್ನುವಂತೆ ಅಮೇರಿಕಾದಲ್ಲಿನ ಪಿತ್ರಾರ್ಜಿತ ತೆರಿಗೆಯ ಉದಾಹರಣೆಯನ್ನಾಗಿ ತೆಗೆದುಕೊಂಡಿದ್ದರು. ಅಮೇರಿಕಾದ ಪ್ರಜೆಯೊಬ್ಬರ ಬಳಿ 100 ಮಿಲಿಯನ್ USD ಇದ್ದರೆ ಮೌಲ್ಯದ ಸಂಪತ್ತು ಮತ್ತು ಅವನು ಸತ್ತಾಗ ಅವನು ತನ್ನ ಮಕ್ಕಳಿಗೆ ಕೇವಲ 45 ಪ್ರತಿಶತವನ್ನು ಮಾತ್ರ ವರ್ಗಾಯಿಸಿ, ಉಳಿದ 55 ಪ್ರತಿಶತವು ಸರ್ಕಾರದ ಪಾಲಾಗುತ್ತದೆ ಎಂಬುದಾಗಿ ತಿಳಿಸಿದ್ದರು.
ಚುನಾವಣಾ ಸಮಯದಲ್ಲಿ ಈ ರೀತಿಯ ಹೇಳಿಕೆಗಳು ಪಕ್ಷಕ್ಕೆ ಸಾಕಷ್ಟು ಧಕ್ಕೆಯನ್ನು ತರಬಹುದು ಎಂಬು ಭಾವಿಸಿದ, ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ಪಿತ್ರೋಡಾ ಅವರ ಹೇಳಿಕೆಗಳು ವಯಕ್ತಿಕವಾಗಿದ್ದು ಅದಕ್ಕೂ ಕಾಂಗ್ರೆಸ್ ಪಕ್ಷದ ನಿಲುವಿಗೂ ಸಂಬಂಧವಿಲ್ಲಾ ಎಂದು ಹೇಳುವ ಮೂಲಕ ತಿಪ್ಪೇ ಸಾರಿಸಿ ಪರಿಸ್ಥಿತಿ ಎಲ್ಲವೂ ತಿಳಿಯಾಗುತ್ತಿದೆ ಎನ್ನುವಷ್ಟರಲ್ಲೇ, ಅಂಕಲ್ ಪಿತ್ರೋಡಾ ದಿ ಸ್ಟೇಟ್ಸ್‌ಮನ್‌ಗೆ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡಿದ್ದಲ್ಲದೇ, ಭಾರತದಂತಹ ವೈವಿಧ್ಯಮಯ ದೇಶವನ್ನು ನಾವು ಒಟ್ಟಿಗೆ ಹಿಡಿದಿಟ್ಟುಕೊಳ್ಳಬಹುದು, ಭಾರತದ ಪೂರ್ವಭಾಗದಲ್ಲಿರುವವರು ಚೀನಿಯರಂತೆ ಕಂಡರೆ, ಪಶ್ಚಿಮದವರು ಅರಬ್ಬಿಗಳಂತೆ ಮತ್ತು ಉತ್ತರದಲ್ಲಿರುವ ಜನರು ಯೂರೋಪಿನ ಬಿಳಿಯರಂತೆ ಕಂಡರೆ ಇನ್ನು ದಕ್ಷಿಣ ಭಾರತದ ಜನರು ಆಫ್ರಿಕಾದ ಕರಿಯರಂತೆ ಕಾಣುತ್ತಾರೆ ಎನ್ನುವ ಆಘಾತಕಾರಿ ವಿಷಯವನ್ನು ಹೇಳಿದ್ದರು. 2019ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿಯೂ ಸಹಾ 1984ರ ಸಿಖ್ ವಿರೋಧಿ ದಂಗೆಗಳು ಮತ್ತು 2019 ರ ಪುಲ್ವಾಮಾ ದಾಳಿಯ ಕುರಿತು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಹೀಗೆ ಮೇಲಿಂದ ಮೇಲೆ ಇಲ್ಲ ಸಲ್ಲದ ಆಘಾತಕಾರಿ ವಿಷಯಗಳನ್ನು ಹೇಳುತ್ತಿರುವ ಅಂಕಲ್ ಸ್ಯಾಮ್ ಅವರ ಮೇಲೆ ಜನಾಂಗೀಯ ಸಾದೃಶ್ಯದ ಕಾಮೆಂಟ್‌ಗಳನ್ನು ಮಾಡಿದ ನಂತರ, ಭಾರತೀಯರು ಬಿಡಿ ಸ್ವತಃ ಕಾಂಗ್ರೇಸ್ಸಿನಲ್ಲೇ ಭಿನ್ನಾಭಿಪ್ರಾಯಗಳು ಕೇಳಿ ಬಂದಾಗ, ಇದ್ದಕ್ಕಿದ್ದಂತೆಯೇ ಪಿತ್ರೋಡಾ ಅವರು ಮೇ 8, 2024 ರಂದು ತಮ್ಮ ಹುದ್ದೆಗೆ ರಾಜೀನಾಮೆ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವಿಷಯವನ್ನು ಘೋಷಿಸುವ ಮೂಲಕ ಪರಿಸ್ಥಿತಿಯನ್ನು ಸರಿಪಡಿಸುವ ಹಾದಿ ಹಿಡಿದರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮ್ಮ ಹೇಳಿಕೆಗಳ ಮೂಲಕ ದೇಶಾದ್ಯಂತ ವಿವಾದವನ್ನು ಸೃಷ್ಟಿಸಿದ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದ ಸ್ಯಾಮ್ ಪಿತ್ರೊಡಾ ಅವರನ್ನೇ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ, 27.05.2024ರಂದು ಮತ್ತೆ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಮರು ನೇಮಕ ಮಾಡುವ ಮೂಲಕ ಹೋದ್ಯಾ ಪಿಚಾಚಿ ಅಂದ್ರೇ ಬಂದೇ ಗವಾಕ್ಷೀಲೀ ಎನ್ನುವ ಗಾದೆ ಮಾತನ್ನು ನಿಜ ಮಾಡಿದ್ದಾರೆ ಎಂದರೂ ತಪ್ಪಾಗದು. ಹಾಗಾದರೆ ಚುನಾವಣಾ ಸಮಯದಲ್ಲಿ ಅವರಿಂದ ರಾಜೀನಾಮೆ ಪಡೆದದ್ದು ಕೇವಲ ಜನರ ಕಣ್ಣಿಗೆ ಮಣ್ಣೆರೆಚುವ ಸಲುವಾಗಿ ಎಂಬುದು ಸ್ಪಷ್ಟವಾಗಿದೆ. ಚುನಾವಣೆಯ ಸಮಯದಲ್ಲಿ ಜನರನ್ನು ದಿಕ್ಕು ತಪ್ಪಿಸುವ ಸಲುವಾಗಿ ಸಂವಿಧಾನದ ರಕ್ಷಣೆ, ನಿರುದ್ಯೋಗ, ಬಿಟ್ಟಿ ಭಾಗ್ಯಗಳು ಎಂದು ಹೇಳಿ ನಂತರ ಚುನಾವಣೆ ಮುಗಿದ ನಂತರ ಹೇಳೋದೊಂದು ಮಾಡೋದು ಮತ್ತೊಂದು ಎಂಬ ಕಾಂಗ್ರೇಸ್ ಪಕ್ಷವನ್ನು ಇನ್ನೂ ಈ ರಾಜ್ಯ ಮತ್ತು ದೇಶದಲ್ಲಿ ಏಕೆ ಬೆಂಬಲಿಸಬೇಕು? ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಎಲ್ಲೆಡೆಯಲ್ಲೂ ಕಾಣಬಹುದಾಗಿದೆ
ಈ ಚುನಾವಣೆಯಲ್ಲಿ ಅಚಾನಕ್ಕಾಗಿ ಕೇವಲ 99 ಸ್ಥಾನಗಳನ್ನು ಗೆದ್ದಿದ್ದಕ್ಕೇ ಇಡೀ ಚುನಾವಣೆಯನ್ನೇ ಗೆದ್ದು ಬಿಟ್ಟಿದ್ದೇವೆ ಎಂದು ಅಬ್ಬಿರಿದು ಬೊಬ್ಬಿರಿವ ಕಾಂಗ್ರೇಸ್ ಪಕ್ಷದ ಯುವನಾಯಕ ಸ್ವಂತ ಬುದ್ಧಿ ಇಲ್ಲದ ರಾಹುಲ್ ಗಾಂಧಿಗೆ ಮತ್ತೊಮ್ಮೆ ಗಾಂಧಿ ಕುಟುಂಬದ ನಿಷ್ಠ ಮತ್ತು ಜನಾಂಗೀಯ ನಿಂದನೆಯಂತಹ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ಮೂಲಕ ಎಲ್ಲರಿಂದಲೂ ಛೀ.. ಥೂ.. ಎಂದು ಉಗಿಸಿಕೊಂಡಿದ್ದ ಅಂಕಲ್ ಸ್ಯಾಮ್ ನಂತಹವರೇ ಕಾಂಗ್ರೇಸ್ ಪಕ್ಷಕ್ಕೆ ಅನಿವಾರ್ಯ ಆಗ್ತಾರೆ ಅಂದ್ರೇ ಇಂತಹ ಕಾಂಗ್ರೇಸ್ ಕೈಗೆ ಅಧಿಕಾರವನ್ನು ಕೊಟ್ಟಲ್ಲಿ ಇನ್ನೂ ಎಂತೆಂತಹ ದೇಶದ್ರೋಹಿಗಳು ಮತ್ತು ತಲೆ ಹಿಡುಕರು ಈ ದೇಶದ ಉನ್ನತ ಹುದ್ದೆಗೆ ಏರಿ, ದೇಶವನ್ನು ಮತ್ತೆ ಮೇಲೆ ಏಳಲಾಗದಂತಹ ಪರಿಸ್ಥಿತಿಗೆ ಕರೆದೊಯ್ಯಬಹುದು ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ