2023ರ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಸರ್ಕಾರ ಎಂಬ ಆರೋಪ ಮತ್ತು ಐದು ಬಿಟ್ಟಿ ಭಾಗ್ಯಗಳ ಮೂಲಕ 136 ಶಾಸಕರೊಂದಿಗೆ ಬಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರ್ಕಾರದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದರೇ, ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿಗಳಾಗಿ 30ಕ್ಕೂ ಹೆಚ್ಚಿನ ಸಚಿವ ಸಂಪುಟವಿದ್ದರೂ, ಸರ್ಕಾರದ ಎಲ್ಲಾ ವಿಚಾರಗಳಲ್ಲೂ ಎಲ್ಲಾ ಮಂತ್ರಿಗಳ ಖಾತೆಯಲ್ಲೂ ಮೂಗು ತೂರಿಸುತ್ತಾ, Super CM ರೂಪದಲ್ಲಿ ಕಾಣಿಸಿಕೊಂಡಿದ್ದೇ ಕಾಂಗ್ರೇಸ್ ಅಧ್ಯಕ್ಷರ ಮಗ ಪ್ರಿಯಾಂಕ್ ಖರ್ಗೆ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಅಷ್ಟೆಲ್ಲಾ ಮೀಸಲಾತಿ ಸೌಲಭ್ಯವಿದ್ದರೂ PUC ಪಾಸಾಗುವಷ್ಟು ಬುದ್ದಿ ಇಲ್ಲದ, ಅಪ್ಪನ ಹೆಸರು ಮತ್ತು ದಲಿತಪಟ್ಟವಿಲ್ಲದೇ ಸಾಮಾನ್ಯ ಜಿಲ್ಲಾ ಪಂಚಾಯಿತಿಯನ್ನೂ ಗೆಲ್ಲಲಾಗದ ಮರಿಖರ್ಗೆ, ತಾನೊಬ್ಬ ಸತ್ಯಹರಿಶ್ಚಂದ್ರನ ವಂಶದವನು, ಇಡೀ ರಾಜ್ಯ ರಾಜಕಾರಣದಲ್ಲಿ ತನ್ನನ್ನು ಹೊರತು ಪಡಿಸಿ ಬೇರವ ಪ್ರಭೂತಿಯೂ ಇಲ್ಲವೆನ್ನುತ್ತಾ, ನಾವು ಅಧಿಕಾರಕ್ಕೆ ಬಂದ ಆರೇ ತಿಂಗಳುಗಳಲ್ಲಿ ಹಿಂದಿನ ಸರ್ಕಾರದಲ್ಲಿ ಆದ ಎಲ್ಲಾ ಭ್ರಷ್ಟಾಚಾರಗಳನ್ನೂ ಬಯಲಿಗೆಳೆದು ರಾಜ್ಯದ ಬಿಜೆಪಿಯ ನಾಯಕರುಗಳನ್ನೆಲ್ಲಾ ಜೈಲಿಗೆ ಅಟ್ಟುತ್ತೇವೆ ಎಂದು ಹಾರಾಡುತ್ತಿದ್ದಾಗ, ಈ ಹಿಂದೆ ಸಚಿವನಾಗಿದ್ದಾಗ ಕಡಿದು ಕಟ್ಟೇ ಹಾಕಿದ್ದನ್ನು ಕಂಡಿದ್ದ ರಾಜ್ಯದ ಜನತೆ, ಇವನೊಬ್ಬ ಬುಟ್ಟಿಯಲ್ಲಿ ಹಾವಿಲ್ಲದ್ದರೂ, ಪುಂಗಿ ಊದುವ ಹಾವಾಡಿಗ ಎಂದು ಸುಮ್ಮನಾಗಿದ್ದರು. ನಂತರದ ದಿನಗಳಲ್ಲಿ ಇವನ ಆಟಾಟೋಪಗಳು ಮಿತಿಮೀರಿ, ವಿಧಾನ ಸೌಧದಲ್ಲಿ ಪಾಕೀಸ್ಥಾನ್ ಜಿಂದಾಬಾದ್ ಎಂದು ಕೂಗೇ ಇಲ್ಲಾ ಎಂದು ವಾದಿಸಿ ನಂತರ ಅದು ಸುಳ್ಳೆಂದು ತಿಳಿದ ನಂತರ ಅಂಡು ಸುಟ್ಟ ಬೆಕ್ಕಿನಂತೆ ಕೆಲ ದಿನಗಳ ಕಾಲ ಓಡಾಡುತ್ತಿದ್ದ ಮರಿಖರ್ಗೆಗೆ, ಈಗ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ, ಯಾರಿಗೂ ಕಾಣುವುದಿಲ್ಲಾ ಎನ್ನುವಂತೆ ದಲಿತರ ಕೋಟಾದಲ್ಲಿ ತನ್ನ ಅಪ್ಪನ ಪದವಿ ಮತ್ತು ತನ್ನ ಅಧಿಕಾರ ಬಳಸಿಕೊಂಡು ಕರ್ನಾಟಕ ಸರ್ಕಾರದಿಂದ ಐದು ಎಕರೆ ಜಮೀನನ್ನು ಖರೀಧಿ ಮಾಡಿರುವ ಪ್ರಕರಣ, ಸೊಸೆಗೆ ಬುದ್ದಿ ಹೇಳಿ ಅತ್ತೇನೇ ಓಡಿ ಹೋದ್ಲಂತೇ! ಎನ್ನುವ ಗಾದೆಯನ್ನು ನೆನಪಿಸುವಂತಿದೆ.
ಸಿದ್ದು ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಅಭಿವೃದ್ಧಿ ಎಲ್ಲವೂ ಶೂನ್ಯವಾಗಿ ಕೇವಲ ಬಿಟ್ಟಿ ಭಾಗ್ಯಗಳಿಗೇ ರಾಜ್ಯದ ಬೊಕ್ಕಸವೆಲ್ಲವೂ ಖಾಲಿಯಾಗುತ್ತಿರುವ ಸಂಧರ್ಭದಲ್ಲಿ, ಮುಖ್ಯ ಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಕಾಂಗ್ರೇಸ್ ಶಾಸಕರು ಮತ್ತವರ ಮಕ್ಕಳಷ್ಟೇ ಅಲ್ಲದೇ ಕಾಂಗ್ರೇಸ್ ಕಾರ್ಯಕರ್ತರಾದಿಯಾಗಿ ರಾಜ್ಯವನ್ನು ಲೂಟಿ ಮಾಡುತ್ತಿರುವುದು, ವಾಲ್ಮೀಕಿ ಹಗರಣ, ಮೂಡಾ ಹಗರಣ, ವಿವಿಧ ರಾಜಕೀಯ ನಾಯಕರುಗಳ ಅಶ್ಲೀಲ ಸಿಡಿಗಳ ಮೂಲಕ ಬ್ಲಾಕ್ ಮೇಲಿಂಗ್, ಪೋಲೀಸ್ ಇಲಾಖೆ ಮತ್ತು ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂಧೆಗಳು ಬಹಿರಂಗವಾಗಿ ಕಾಂಗ್ರೇಸ್ ಪಕ್ಷದ ಮಾನ ಮೂರಬಟ್ಟೆಯಾಗಿರುವ ಹೊತ್ತಿನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕೆಐಎಡಿಬಿಯ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ನಿಯಮ ಉಲ್ಲಂಘಿಸಿ ಸಿ.ಎ (ನಾಗರಿಕ ಸೌಲಭ್ಯ) ನಿವೇಶನ ಹಂಚಿರುವ ಆರೋಪ ಬಂದಿರುವುದು, ಕಾಂಗ್ರೇಸ್ ಸರ್ಕಾರದ ಅಧಿಕಾರ ದುರ್ಬಳಕೆಗೆ ಜ್ವಲಂತ ಉದಾಹರಣೆಯಾಗಿದೆ.
ಮಲ್ಲಿಕಾರ್ಜುನ ಖರ್ಗೆ, ಅವರ ಮಡದಿ, ಮಕ್ಕಳಾದ ಪ್ರಿಯಾಂಕ್, ರಾಹುಲ್ (ಮಕ್ಕಳ ಹೆಸರಿಡುವಾಗಲೂ ಇಂದಿರಾಗಾಂಧಿ ಕುಟುಂಬಕ್ಕೆ ಬಕೆಟ್ ಹಿಡಿದಿರುವ ಸ್ಪಷ್ಟ ನಿದರ್ಶನ ಇದಾಗಿದೆ) ಅಳಿಯ ರಾಧಾಕೃಷ್ಣ ಮತ್ತಿಬ್ಬರು ಇರುವ ಸಿದ್ದಾರ್ಥ ವಿಹಾರ ಟ್ರಸ್ಟಿಗೆ, ಎಲ್ಲಾ ರೀತಿಯ ನಿಯಮಗಳನ್ನೂ ಮೀರಿ ಬೆಂಗಳೂರಿನ ಏರೋಸ್ಪೇಸ್ ಪಾರ್ಕ್‌ನಲ್ಲಿ 5 ಎಕರೆ ನಾಗರಿಕ ಸೌಕರ್ಯಗಳ ನಿವೇಶನವನ್ನು ಮಂಜೂರು ಮಾಡಿರುವ ಬಗ್ಗೆ ಬಿಜೆಪಿಯ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಮೊದಲು ಬಯಲಿಗೆ ಎಳೆದರೆ ನಂತರ ವಿಧಾನಪರಿಷತ್ ಪ್ರತಿಪಕ್ಷದ ನಾಯಕರಾಗಿರುವ ಚಲವಾದಿ ನಾರಾಯಣಸ್ವಾಮಿಯವರು ಈ ಕುರಿತಾಗಿ ಹೆಚ್ಚಿನ ತನಿಖೆ ನಡೆಸಲು ಅನುಮತಿ ನೀಡುವಂತೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ಕೆಐಎಡಿಬಿ ಸಿ.ಎ ನಿವೇಶನಕ್ಕಾಗಿ ಒಟ್ಟು 193 ಸಂಸ್ಥೆಗಳು ಅರ್ಜಿ ಹಾಕಿದ್ದು, ಮಾರ್ಚ್ 4ರಂದು ಅರ್ಜಿಗಳ ಪರಿಶೀಲನೆ ನಡೆಸಿ ಈ ಪೈಕಿ 43 ಸಂಸ್ಥೆಗಳನ್ನು ಆಯ್ಕೆ ಮಾಡಿದ ನಂತರ ಮಾರ್ಚ್ 5ರಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಉಳಿದ ಎಲ್ಲಾ 43 ಸಂಸ್ಥೆಗಳನ್ನೂ ಬದಿಗೊತ್ತಿ ದಲಿತರ ಕೋಟಾದಡಿಯಲ್ಲಿ ಕೇವಲ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಎಕರೆಗೆ ಐದು ಲಕ್ಷಗಳಂತೆ 25 ಲಕ್ಷಗಳಿಗೆ ಐದು ಎಕರೆ ಭೂಮಿಯನ್ನು ಕೊಡಲು ನಿರ್ಣಯ ಕೈಗೊಂಡು ಮಾರ್ಚ್ 6ರಂದು ಹಂಚಿಕೆ ಪತ್ರಗಳನ್ನು ನೀಡಲಾಗಿದೆ. ಅರ್ಜಿ ಸಲ್ಲಿಸಲು ಕೇವಲ 14 ದಿನಗಳ ಕಾಲಾವಕಾಶ ನೀಡಿ ನಾಮಕಾವಾಸ್ಥೆಗೆ ತರಾತುರಿಯಲ್ಲಿ ಎಲ್ಲಾ ಪ್ರಕ್ರಿಯೆಗಳನ್ನೂ ಮುಗಿಸಿ ಪೂರ್ವಾಗ್ರಹ ಪೀಡಿತರಾಗಿ ಖರ್ಗೆ ಅವರ ಕುಟುಂಬಕ್ಕೆ ಜಮೀನು ಮಂಜೂರು ಮಾಡಿರುವುದರ ಹಿಂದೆ ಸ್ವತಃ ಮಂತ್ರಿಯಾಗಿದ್ದೂ ಊರಿಗೆಲ್ಲಾ ಬುದ್ದಿ ಹೇಳುವ ಮರಿಖರ್ಗೆಯ ಸ್ವಜನಪಕ್ಷಪಾತ ಮತ್ತು ಅಕ್ರಮ ಮೇಲು ನೋಟಕ್ಕೆ ಎದ್ದು ಕಾಣುತ್ತಿದೆ. ಈ ರಾಜ್ಯದಲ್ಲಿ ದಲಿತರು ಎಂದರೆ ರಾಜ್ಯಾದ್ಯಂತ ಕೋಟ್ಯಾಂತರ ಅಕ್ರಮ ಆಸ್ತಿಗಳನ್ನು ಹೊಂದಿರುವ ಖರ್ಗೆ ಕುಟುಂಬ ಮಾತ್ರವೇ? ಎಂದು ರಾಜ್ಯದ ಜನರು ಆಡಿಕೊಳ್ಳುವಂತಾಗಿದೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೋರಿ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಈಗಾಗಲೇ ಮುಡಾ ಬದಲೀ ನಿವೇಶನದ ಹಂಚಿಕೆ ಸಂಬಂಧಪಟ್ಟಂತೆ ರಾಜ್ಯಪಾಲರು ಖಾಸಗೀ ವ್ಯಕ್ತಿಗಳು ನೀಡಿದ್ದ ದೂರಿನ ಅನ್ವಯ ಸಿದ್ಧರಾಮಯ್ಯನವರ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿರುವುದರ ಕುರಿತಾಗಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಹೆಚ್ಚಾಗಿದ್ದು, ಅದೇ ವಿಷಯಕ್ಕೆ ಕುರಿತಂತೆ ಖುದ್ದು ಸರ್ಕಾರವೇ ಬೀದಿಗಿಳಿದು ಹೋರಾಟ ಮಾಡುವ ಮೂಲಕ ಕರ್ನಾಟಕದ ರಾಜ್ಯದ ಮಾನವನ್ನು ದೇಶ ವಿದೇಶಗಳಲ್ಲಿ ಹರಾಜು ಹಾಕಿರುವಾಗಾ, ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ರಾಹುಲ್ ಖರ್ಗೆ ಅಧ್ಯಕ್ಷತೆಯ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ರಾಜ್ಯ ಸರ್ಕಾರ ತರಾತುರಿಯಲ್ಲಿ ಕೆಐಎಡಿಬಿ ಸಿ.ಎ ನಿವೇಶನ ಹಂಚಿರುವ ಸಂಬಂಧ ಸ್ಪಷ್ಟನೆ ಕೋರಿರುವುದು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪವನ್ನು ಸುರಿಯುವಂತಿದೆ.
ಇದೇ ವಿಷಯವಾಗಿ ರಾಜ್ಯದ ಅಧಿಕೃತ ವಿರೋಧ ಪಕ್ಷ ಬಿಜೆಪಿಯು, ಒಂದು ಕಾಲದ ಖರ್ಗೆಯವರ ಪರಮಾಪ್ತ ಮತ್ತು ದಲಿತ ನಾಯಕರಾಗಿರುವ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿಯವರ ನೇತೃತ್ವದಲ್ಲಿ ಹೋರಾಟ ನಡೆಸುತ್ತಿರುವುದರಿಂದ ಕುಪಿತಕೊಂಡಿರುವ ಪ್ರಸ್ತುತ ಕಾಂಗ್ರೇಸ್ ಸರ್ಕಾರ, ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಖರ್ಗೆ ಕುಟುಂಬದ ಅಕ್ರಮಗಳ ವಿಷಯದ ದಿಕ್ಕು ತಪ್ಪಿಸಲು ಕರ್ನಾಟಕದಲ್ಲಿ ಕೋವಿಡ್ ಸಂಧರ್ಭದಲ್ಲಿ ಆಗಿದೆ ಎನ್ನಲಾದ ಹಗರಣದ ನ್ಯಾಯಮೂರ್ತಿಗಳಾದ ಡಿ. ಕುನ್ಹಾ ಆಯೋಗಕ್ಕೆ ಒತ್ತಡ ಹೇರಿ ಮಧ್ಯಂತರ ವರದಿಯನ್ನು ಪಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಇನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಮರಿ ಖರ್ಗೆ ಇದು ಕೇವಲ ಟ್ರೈಲರ್ ಅಷ್ಟೇ ಕಣ್ರೀ. ನಾವು ಬಿಜೆಪಿಯ ಅವಧಿಯಲ್ಲಿ ಆಗಿರುವ ಎಲ್ಲಾ 21 ಹಗರಣಗಳ ಬಗ್ಗೆಯೂ ತನಿಖೆ ನಡೆಸ್ತೀವಿ. ಬಿಜೆಪಿ ಅವರಿಗೆ ಮುಂದಿನ ದಿನಗಳಲ್ಲಿ ಇದೆ ಮಾರಿ ಹಬ್ಬ ಎಂದು ಎಚ್ಚರಿಕೆಯನ್ನು ನೀಡಿರುವುದು ದ್ವೇಷದ ರಾಜಕಾರಣವನ್ನು ಸೂಚಿಸುತ್ತಿದೆ. ಅಧಿಕಾರಕ್ಕೆ ಬಂದು 16 ತಿಂಗಳುಗಳಾದರೂ ಯಾವುದೇ ಅಭಿವೃದ್ಧಿ ಮಾಡದೇ, ಹಿಂದಿನ ಸರ್ಕಾರದ ಭ್ರಷ್ಟಾಚಾರಗಳನ್ನು ಬಯಲಿಗೆಳೆಯದೇ, ಈಗ ಏಕಾ ಏಕಿ ಮೈಮೇಲೆ ದೆವ್ವ ಬಂದಿರುವಂತೆ ಆಡುತ್ತಿರುವ ಮರಿಖರ್ಗೆಗೇ ಮುಂದೈತೆ ಮಾರಿ ಹಬ್ಬ ಎಂದು ಸ್ವಪಕ್ಷೀಯರೇ ಮಾತನಾಡಿಕೊಳ್ಳುತ್ತಿದ್ದಾರೆ
ಇನ್ನು ಹೋದ ಬಂದ ಕಡೆಯಲ್ಲೆಲ್ಲಾ ತಾನೊಬ್ಬ ಸತ್ಯಸಂಧ. ತನ್ನ 40 ವರ್ಷಗಳ ರಾಜಕಾರಣ ಸಂಪೂರ್ಣವಾಗಿ ಪಾರದರ್ಶಿಕವಾಗಿದೆ ಎಂದು ಹೇಳುತ್ತಲೇ, ಗಳಿಗೆ ಸಿದ್ದ ಒಳಗೊಳಗೇ ಮೆದ್ದ ಎನ್ನುವಂತೆ, ಕೇವಲ ಸರ್ಕಾರಿ ಲೆಖ್ಖದಲ್ಲಿ ಕಾಗದ ಮೇಲಿನ ಜಮೀನಿನ ಬದಲಾಗಿ ತಮ್ಮ ಪತ್ನಿಯ ಹೆಸರಿನಲ್ಲಿ 14 ಬದಲಿ ನೀವೇಶನ ಪಡೆದು ತೂಗುಗತ್ತಿಯ ಮೇಲೆ ನಡೆಯುತ್ತಿರುವ ಸಿದ್ದರಾಮಯ್ಯನವರಿಗೆ, ಅನೇಕ ವರ್ಷಗಳ ನಂತರ 2024ರ ಆಗಸ್ಟ್ 27ರಂದು ನಡೆಸಿದ KPSC ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯಲ್ಲಿ ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ತೀರಾ ಅಸಮರ್ಪಕವಾಗಿದ್ದವೆಂಬ ವಿಚಾರ ತೀವ್ರವಾದ ಮುಜುಗೊರಕ್ಕೀಡು ಮಾಡಿದೆ. ತಾನೊಬ್ಬ ಕನ್ನಡದ ಪ್ರಖಾಂಡ ಪಂಡಿತ ಎಂದು ತೋರಿಸಿಕೊಳ್ಳುತ್ತಾ, ವಿಧಾನ ಸಭೆಯಲ್ಲೇ ಕನ್ನಡದ ಸಂಧಿ ಸಮಾಸಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಸಿದ್ದರಾಮಯ್ಯನವರಿಗೆ ಇದು ನೇರವಾಗಿ ಸಂಬಂಧ ಪಟ್ಟಿಲ್ಲವಾದರೂ, ನೀಟ್ ಸಮಯದಲ್ಲಿ ಅಲ್ಲೆಲ್ಲೋ ಪ್ರಶ್ನಪತ್ರಿಕೆ ಲೀಕ್ ಆಗಿದ್ದಕ್ಕೆ ಮೋದಿಯವರೇ ಹೊಣೆ ಎಂದು ಮೋದಿಯವರ ರಾಜಿನಾಮೆ ಕೇಳಿದ್ದ ಇದೇ ಸಿದ್ದರಾಮಯ್ಯ ಈಗ ತಮ್ಮ ಅಧಿಕಾರಾವಧಿಯಲ್ಲೇ ಅಸಮರ್ಪಕ ಪ್ರಶ್ನೆಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟ ಆಡುತ್ತಿರುವುದಕ್ಕೆ ರಾಜೀನಾಮೆ ನೀಡುತ್ತಾರೆಯೇ? ಎಂದು ಜನರು ಕೇಳುತ್ತಿರುವುದರಲ್ಲಿ ತಪ್ಪಿಲ್ಲ ಎನಿಸುತ್ತದೆ.
ಇಂಗ್ಲೀಷ್ ಪ್ರಶ್ನಪತ್ರಿಕೆಗಳನ್ನು Google Translator ಮೂಲಕ ಅನುವಾದ ಮಾಡಿಸಿ ಮುಜುಗೊರಕ್ಕೀಡಾಗಿರುವ ಸಿದ್ದು, ಈಗ ತನ್ನ ತಪ್ಪನ್ನು ಮುಚ್ಚಿಕೊಳ್ಳುವ ಸಲುವಾಗಿ ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಸೇವೆಯನ್ನು ಅಮಾನತು ಮಾಡಲಾಗಿದ್ದು, KPSC ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳುಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದೇನೆ. ಈ ಬಾರೀ ಪರೀಕ್ಷೆಗಳನ್ನು ಸಮರ್ಪಕವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಮತ್ತು ನೇಮಕಾತಿ ಪ್ರಕ್ರಿಯೆಗಳ ಸಮಗ್ರತೆ ಮತ್ತು ನಂಬಿಕಾರ್ಹತೆಯನ್ನು ಎತ್ತಿಹಿಡಿದು, ಪರೀಕ್ಷಾರ್ಥಿಗಳ ಹಿತರಕ್ಷಿಸಲು ಬದ್ಧರಾಗಿದ್ದೇವೆ ಎಂದು ಸಿದ್ದರಾಮಯ್ಯ ಹೇಳುವ ಮೂಲಕ ಪರೋಕ್ಷವಾಗಿ ತಮ್ಮ ಸರ್ಕಾರ ಎಲ್ಲಾ ವಿಚಾರಗಳಲ್ಲಿಯೂ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಂಡಂತಿದ್ದು, ಅವರ ಸರ್ಕಾರ ಮುಳುಗುವ ದೋಣಿಯಂತಾಗಿದ್ದು ಯಾವಾಗ ಬೇಕಿದ್ದರೂ ಮುಳುಗಿ ಹೋಗುವ ಸಂಭವವಿದೆ ಎನಿಸುತ್ತಿದೆ.
ಪ್ರಸ್ತುತ ಕಾಂಗ್ರೇಸ್ ಸರ್ಕಾರ, ಮಂತ್ರಿಗಳು ಮತ್ತು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರುಗಳು ಆಡುತ್ತಿರುವ ದುರಹಂಕಾರದ ಮಾತುಗಳನ್ನು ಗಮನಿಸಿದಾಗ, ಅದ್ಯಾವುದೋ ಹಳ್ಳಿಯ ಅದ್ಯೋರೋ ಪುಣ್ಯಾತ್ಮ, ತಾನು ಹೊಸ ಒಳ ಉಡುಪು ಹಾಕಿಕೊಂಡಿದ್ದೇನೆ ನೋಡಿ ನೋಡಿ ಎಂದು ಊರ ತುಂಬಾ ತನ್ನ ಪಂಚೆ ಎತ್ತಿ ಎತ್ತೀ ತೋರಿಸಿ ಮೆರೆದಾಡುತ್ತಾ, ಮನೆಗೆ ಬಂದು ನೋಡಿದಾಗ, ತನ್ನ ಹೊಸ ಒಳ ಉಡುಪು ಹಾಸಿಗೆ ಮೇಲೇ ಇದ್ದದ್ದನ್ನು ಗಮನಿಸಿ ಅವಮಾನ ತಡೆಯಲಾರದೇ, ಊರನ್ನೇ ಬಿಟ್ಟು ಹೋದ ಪ್ರಸಂಗ ನೆನಪಾಗುತ್ತಿರುವುದು ನನಗೊಬ್ಬನಿಗಾ? ಅಥವಾ ನಿಮಗೂ ಹಾಗೆನ್ನಿಸುತ್ತಿದೆಯಾ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ