ಕನ್ನಂಬಾಡಿ ಅಣೆಕಟ್ಟೆ ಕಟ್ಟಿಸಿದ್ದು ವಿಶ್ವೇಶ್ವರಯ್ಯನವರೇ?

vishಸೆಪ್ಟಂಬರ್ 15, ನಮ್ಮ ನಾಡು ಕಂಡ ಶ್ರೇಷ್ಥ ಇಂಜಿನಿಯರ್ ಆಗಿದ್ದ  ಸರ್. ಎಂ ವಿಶ್ವೇಶ್ವರಯ್ಯನವರ ಜನ್ಮದಿನ. ನಮ್ಮ ದೇಶದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳನ್ನು ಪರಿಗಣಿಸಿ ಅವರ ಜನ್ಮದಿನವನ್ನು ಇಂಜೀನಿಯರ್ಸ್ ಡೇ ಎಂದು ದೇಶಾದ್ಯಂತ ಸಂಭ್ರಮಿಸಲಾಗುತ್ತದೆ. ಇಂದಿಗೂ ಸಹಾ ಮಂಡ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಬಹುತೇಕರ ಮನೆಗಳ ದೇವರು ಮನೆಗಳಲ್ಲಿ ದೇವರ ಚಿತ್ರಗಳ ಜೊತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್. ಎಂ.ವಿ ಅವರ ಭಾವಚಿತ್ರಗಳನ್ನು ಇಟ್ಟು ಪೂಜಿಸಲಾಗುತ್ತದೆ. ಕಾವೇರಿ ಜಲಾನಯನ ಪ್ರದೇಶವಾಗಿದ್ದರೂ ಮಳೆಗಾಲದ ಹೊರತಾಗಿ ಕೃಷಿ ಚಟುವಟಿಕೆಗಳಿಗೆ ನೀರಿಲ್ಲದೇ ತತ್ತರಿಸುತ್ತಿದ್ದಂತಹ ಕಾಲದಲ್ಲಿ  ಕಾವೇರಿ ನದಿಗೆ  ಕನ್ನಂಬಾಡಿಯಲ್ಲಿ ಅಣೆಕಟ್ಟೆಯನ್ನು ಕಟ್ಟಿ ಅಲ್ಲಿ ನೀರನ್ನು ಸಂಗ್ರಹಿಸಿ ವರ್ಷಪೂರ್ತಿಯೂ ನದಿಯ ನೀರನ್ನು ಸದ್ಬಳಕೆ ಮಾಡಿಕೊಟ್ಟಂತಹ ಧೀಮಂತ ವ್ಯಕ್ತಿಯನ್ನು ಕೆಲವು ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ ಕನ್ನಂಬಾಡಿ ಕಟ್ಟೆಯ ನಿರ್ಮಾಣದಲ್ಲಿ ವಿಶ್ವೇಶ್ವರಯ್ಯನವರ ಪಾತ್ರ ನಗಣ್ಯ. ಅವರು ಮೈಸೂರು ಅರಸರಲ್ಲಿ ಕೇವಲ ಸಂಬಳಕ್ಕಿದ್ದ ಇಂಜೀನೀಯರ್ ಎಂದು ಮೂದಲಿಸುವುದನ್ನು ಕಂಡು ಬೇಸರಗೊಂಡು ಕನ್ನಂಬಾಡಿ ಅಣೆಕಟ್ಟೆಯಲ್ಲಿ ವಿಶ್ವೇಶ್ವರಯ್ಯನವರ ಸಂಪೂರ್ಣ ಪಾತ್ರದ ಬಗ್ಗೆ ಸವಿವರವಾದ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ತುಮಕೂರಿನ ಬಳಿಯ ದೇವರಾಯನದುರ್ಗ ಬೆಟ್ಟದ ದಕ್ಷಿಣ ಭಾಗದಲ್ಲಿ ಹುಟ್ಟುವ ಶಿಂಷಾ ನದಿಯು ಕಾವೇರಿ ನದಿಯ ಉಪನದಿಗಳಲ್ಲಿ ಒಂದಾಗಿದ್ದು,  ಸುಮಾರು 8,469 ಚದರ ಕಿಲೋಮೀಟರ್ ಜಲಾನಯನ ಪ್ರದೇಶವನ್ನು ಹೊಂದಿದ್ದು, ಸುಮಾರು ಇನ್ನೂರ ಇಪ್ಪತ್ತೊಂದು ಕಿಲೋಮೀಟರ್ ದೂರವನ್ನು ಕ್ರಮಿಸಿ  ಚಾಮರಾಜನಗರ ಜಿಲ್ಲೆಯ ಗಡಿಯ ಭಾಗದಲ್ಲಿ ಕಾವೇರಿ ನದಿಯೊಂದಿಗೆ ವಿಲೀನವಾಗುತ್ತದೆ. ಇಂತಹ ಶಿಂಶಾನದಿಗೆ ಮದ್ದೂರಿನ ಬಳಿಯ ಶಿವನ ಸಮುದ್ರದ ಬಳಿ ಗಗನ ಚುಕ್ಕಿ ಮತ್ತು ಭರಚುಕ್ಕಿ ಎಂಬ ಹೆಸರಿನ ಜಲಪಾತಗಳಲ್ಲಿ ಧುಮ್ಮಿಕ್ಕುವ ಸ್ಥಳದಲ್ಲಿ 1900 ಆಸುಪಾಸಿನಲ್ಲಿ ಇಡೀ ಏಷ್ಯಾದಲ್ಲೇ ಮೊದಲ ಜಲವಿದ್ಯುತ್ ಯೋಜನೆಯನ್ನು ಆರಂಭಿಸಿ, 1902ರಲ್ಲಿ ಅಲ್ಲಿ ಉತ್ಪಾದಿಸಿದ ವಿದ್ಯುತ್ತನ್ನು   ಕೋಲಾರ ಗೋಲ್ಡ್ ಫೀಲ್ಡ್ಸ್  ಅರ್ಥಾತ್ KGFನಲ್ಲಿದ್ದ ಚಿನ್ನದ ಗಣಿ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ವಿದ್ಯುದೀಕರಣ ಮಾಡಲಾಗುತ್ತದೆ ಇದಾದ ಮೂರು ವರ್ಷಗಳ ನಂತರ ಬೆಂಗಳೂರಿಗೆ ಅಲ್ಲಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತದೆ.

ಈ ರೀತಿಯಾಗಿ ಶಿವನ ಸಮುದ್ರದಲ್ಲಿ ಆರಂಭವಾದ ವಿದ್ಯುತ್ ಯೋಜನೆ ಕೇವಲ ಮಳೆಗಾಲದಲ್ಲಿ ಮಾತ್ರಾ ಚಾಲ್ತಿಯಲ್ಲಿದ್ದು ಉಳಿದ ಸಮಯದಲ್ಲಿ ನೀರಿಲ್ಲದೇ ಭಣ ಭಣ ಗುಟ್ಟುತ್ತಿರುತ್ತದೆ. ಅದೇ ರೀತಿಯಲ್ಲಿ  ಮೈಸೂರು ಮತ್ತು  ಮಂಡ್ಯ ಪ್ರದೇಶವು ಕಾವೇರಿ ಜಲಾನಯನ ಪ್ರದೇಶವಾಗಿದ್ದರೂ ಐತಿಹಾಸಿಕವಾಗಿ ಅದು ಶುಷ್ಕವಾಗಿ ಬೇಸಿಗೆಯ ಕಾಲದಲ್ಲಿ ಕೃಷಿಗೆ ಬಿಡಿ ಕುಡಿಯಲೂ ಸಹಾ ನೀರಿಗೆ ಪರಡಾಡುವಂತಹ ಸಂಧರ್ಭವಿತ್ತು. 1875-76 ರಲ್ಲಿ ಬ್ರಿಟಿಷ್ ಸರ್ಕಾರವಿದ್ದ ಕಾಲದಲ್ಲಿ ಅಲ್ಲಿ ಸಂಭವಿಸಿದ ತೀವ್ರ ಬರಗಾಲದಿಂದಾಗಿ ಮೈಸೂರು ಸಾಮ್ರಾಜ್ಯದ ಜನಸಂಖ್ಯೆಯ ಐದನೇ ಒಂದು ಭಾಗ ನಾಶವಾಗಿದ್ದನ್ನು ಮನಗಂಡ ಮೈಸೂರು ಸಂಸ್ಥಾನ ಇದಕ್ಕೊಂದು ಶಾಶ್ವತವಾದ ಪರಿಹಾರವನ್ನು ಕಂಡು ಹಿಡಿಯಲೇ ಬೇಕೆಂಬ ನಿರ್ಧಾರಕ್ಕೆ ಬಂದಿತ್ತು.

nalwadiಅಂದಿನ ಮೈಸೂರು ಮಹಾರಾಜರು ಮಂಡ್ಯ ಜಿಲ್ಲೆಯಲ್ಲಿ ಜಲಾಶಯವನ್ನು ನಿರ್ಮಿಸಲು 1890ರಲ್ಲಿ ತೀವ್ರ ಆಸಕ್ತಿ ವಹಿಸಿ ಅದಕ್ಕಾಗಿ ಕ್ಯಾಪ್ಟನ್ ಡೇವ್ಸ್  ಎಂಬ ಇಂಜೀನಿಯರ್ ಅವರ ನೇತೃತ್ವದ ಒಂದು ತಂಡವನ್ನು ಕಟ್ಟಿದರು.  ಜಲಾಶಯದ ಆರಂಭಿಕ ಎತ್ತರವು ಸುಮಾರು 70 ಅಡಿ ಮತ್ತು ನಂತರ ಎರಡನೇ ಹಂತದಲ್ಲಿ 115 ಅಡಿಗಳಿಗೆ ವಿಸ್ತರಿಸಬಹುದು ಎಂದು ಅಂದಿನ ಉಪ ಮುಖ್ಯ ಎಂಜಿನಿಯರ್ ಕ್ಯಾಪ್ಟನ್ ಡಾವ್ಸ್ ಸೂಚಿಸಿದ್ದರು. ಸಮೀಕ್ಷೆಯ ನಂತರ, ಯೋಜನೆಯನ್ನು ಅಂತಿಮವಾಗಿ ಏಪ್ರಿಲ್ 25, 1905 ರಲ್ಲಿ ಅನುಮೋದಿಸಲಾಯಿತು. ನಂತರ ಡೇವ್ಸ್ ಮತ್ತು ಅವರ ತಂಡವು  ಜಿಲ್ಲೆಯ ಕಾವೇರಿ ನದಿಯ ಉಪನದಿಗಳಾದ ಹೇಮಾವತಿ ಮತ್ತು ಲಕ್ಷ್ಮಣ ತೀರ್ಥಗಳ ಸಂಗಮದ ಬಳಿಯ ಬೆಳಗೊಳದ ಬಳಿ  ಭೂಮಿಯನ್ನು ಗುರುತಿಸಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ಭೂವಿಜ್ಞಾನಿಗಳನ್ನು ಸಂಪರ್ಕಿಸಿ ಅವರಿಂದಲೂ ಅನುಮೋದನೆ ಪಡೆದುಕೊಳ್ಳಲು ಮೂರ್ನಾಲು ವರ್ಷಗಳಾಗಿ ನಂತರ  ಅಣೆಕಟ್ಟೆಯ ತಳಪಾಯದ ಕಾಮಗಾರಿಯನ್ನು ಆರಂಭಿಸಲಾಯಿತು. ಹಾಗೆ ಅಣೆಕಟ್ಟಿನ ಕೆಲಸ ನಡೆಯುತ್ತಿದ್ದ ಸಂಧರ್ಭದಲ್ಲಿ ಜುಲೈ 30, 1909 ರಂದು, ನದಿಯಲ್ಲಿ ಭಾರಿ ಪ್ರವಾಹ ಬಂದ ಕಾರಣ, ಅನೇಕ ಕಾರ್ಮಿಕರು ನೀರಿನಲ್ಲಿ ಕೊಚ್ಚಿ ಹೊಗುತ್ತಿದ್ದ ಸಂದರ್ಭದಲ್ಲಿ ಅವರಲ್ಲಿ ಕೆಲವರನ್ನಾದರೂ ರಕ್ಷಿಸಲು ಕ್ಯಾಪ್ಟನ್ ಡೇವ್ಸ್ ಮುಂದಾದ ಸಂಧರ್ಭದಲ್ಲಿ  ದುರಾದೃಷ್ಟವಶಾತ್ ಆಯತಪ್ಪಿದ ಡೇವ್ಸ್, ಹರಿಯುವ ನೀರಿನಲ್ಲಿ ಕೊಚ್ಚಿಕೊಂಡು ಹೋದದ್ದು ನಿಜಕ್ಕೂ ದುಖಃದ ಸಂಗತಿಯಾಗಿತ್ತು. ಕ್ಯಾಪ್ಟನ್ ಡೇವ್ಸ್   ಅವರ ಸೇವೆ ಮತ್ತು ಬಲಿದಾನವನ್ನು ಚಿರಂತನವಾಗಿಡಲು ಕನ್ನಂಬಾಡಿ ಸುತ್ತಮುತ್ತಲಿನ ಜನರು ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ 5, 10, 25, 50 ನಯಾಪೈಸೆ, 1 ರೂಪಾಯಿಗಳನ್ನು ಸಂಗ್ರಹಿಸಿ ಅಂದಿನ ಕಾಲಕ್ಕೇ ಸುಮಾರು 600 ರೂಪಾಯಿಗಳನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪುದುವಟ್ಟು ಇಟ್ಟು ಬುದ್ದಿವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವಂತೆ ಮಾಡುವ ಮೂಲಕ ಕನ್ನಡಿಗರು ಮತ್ತೊಮ್ಮೆ ಹೃದಯವಂತರು ಎಂಬುದನ್ನು ಸಾಭೀತು ಮಾಡಿದ್ದರು.

ಹೀಗೆ ಮೈಸೂರು ಸಂಸ್ಥಾನದ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಆರಂಭದಲ್ಲೇ ತೊಡಕಾಗಿದ್ದರಿಂದ ಮಹಾರಾಜರು ಬಹಳವಾಗಿ ನೊಂದಿದ್ದಲ್ಲದೇ, ಈ ಯೋಜನೆಯನ್ನು ಸಂಪೂರ್ಣಗೊಳಿಸುವ ಒಳ್ಳೆಯ ಇಂಜಿನೀಯರ್ ಅವರನ್ನು ಹುಡುಕಲು ಅಂದಿನ ಮೈಸೂರಿನ ದಿವಾನರಾಗಿದ್ದ ಮಾಧವರಾವ್ ಅವರಿಗೆ ಸೂಚಿಸಿದರು. ಅತ್ತ  ಬಾಂಬೆಯಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ ಮೂಲದ ಇಂಜೀನಿಯರ್ ಆಗಿದ್ದ ಶ್ರೀ ವಿಶ್ವೇಶ್ವರಯ್ಯನವರು 1908ರಲ್ಲಿ ತಮ್ಮ  ಕೆಲಸಕ್ಕೆ ರಾಜೀನಾಮೆ ನೀಡಿ ವಿದೇಶ ಪ್ರವಾಸದಲ್ಲಿದ್ದಾಗ, ಹೈದರಾಬಾದಿನ ನಿಜಾಮ ಅಲ್ಲಿಯ ಮೂಸಿ ನದಿ ಪದೇ ಪದೇ ಉಕ್ಕಿ ಹರಿದು ಪ್ರವಾಹಗಳಿಂದಾಗಿ  ಅಲ್ಲಿನ ಜನರ ಪರಿಸ್ಥಿತಿ ದುಸ್ತರವಾಗುವುದನ್ನು ತಪ್ಪಿಸಲು ಸಹಾಯ ಮಾಡಬೇಕೆಂದು ವಿಶ್ವೇಶ್ವರಯ್ಯನವರನ್ನು ಕೋರಿಕೊಂಡಾಗ, ಅದನ್ನು ಮನ್ನಿಸಿ ತಮ್ಮ ವಿದೇಶ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೈದರಾಬಾದಿಗೆ  ಬಂದ ರಾಯರು, 1909ರಲ್ಲಿ ಅಲ್ಲಿನ ವಿಶೇಷ ಸಲಹಾ ಇಂಜಿನಿಯರ್ ಆಗಿ ನೇಮಕಗೊಂಡು ತಮ್ಮ ಪ್ರಸಿದ್ಧ ಸೈಫನ್ ಸಿದ್ಧಾಂತದ ಆಧಾರದ ಮೇಲೆಯೇ ಕ್ರೆಸ್ಟ್ ಗೇಟ್ ಅಳವಡಿಸಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನೀಡಿದ್ದ ಸಂಗತಿ ದೇಶ ವಿದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದಿರುತ್ತದೆ. ಈ ವಿಷಯವನ್ನರಿತ ದಿವಾನ್ ಮಾಧವರಾವ್ ಅವರು ಕನ್ನಡಿಗರೇ ಆದ ರಾಯರ ಪ್ರತಿಭೆ ಮತ್ತು ಪ್ರಸಿದ್ಧಿಗಳನ್ನು ಮಹಾರಾಜ ಕಿವಿಗೂ ಮುಟ್ಟಿಸಿ ಅವರ ಅನುಮತಿಯ ಮೇರೆಗೆ, ವಿಶ್ವೇಶ್ವರಯ್ಯನವರನ್ನು  ಕೂಡಲೇ ಸಂಪರ್ಕಿಸಿ ಮೈಸೂರು ರಾಜ್ಯದ ಚೀಫ್ ಇಂಜಿನಿಯರ್ ಆಗುವಂತೆ ಕೇಳಿಕೊಳ್ಳುತ್ತಾರೆ.

ಮೈಸೂರು ಸಂಸ್ಥಾನದ ಆಹ್ವಾನಕ್ಕೆ ಮನ್ನಣೆ ತೋರಿದ ರಾಯರು, ತಮಗೆ ಯಾವುದೇ ವಿಶೇಷವಿಲ್ಲದ ಸಾಮಾನ್ಯ ಕೆಲಸಗಳಲ್ಲಿ ತೊಡಗುವ ಇಚ್ಛೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದಲ್ಲದೇ, ಮೈಸೂರು ಸಂಸ್ಥಾನಕ್ಕೆ ತಾಂತ್ರಿಕ ವಿದ್ಯಾಭ್ಯಾಸ ಮತ್ತು ಕಾರ್ಖಾನೆಗಳ ಅಬಿವೃದ್ಧಿಗೆ ಭಾರೀ ಯೋಜನೆಗಳನ್ನು ಹಾಕುವುದರಲ್ಲಿ ಆಸಕ್ತಿ ಇದ್ದರೆ ಮಾತ್ರ ತಾವು ಬರುವುದಾಗಿ ಹೇಳಿದಾಗ, ವೈದ್ಯ ಹೇಳಿದ್ದೂ ಹಾಲೂ  ಅನ್ನಾ, ರೋಗಿ ಬಯಸಿದ್ದೂ ಹಾಲು ಅನ್ನ ಎನ್ನುವಂತೆ, ತಮ್ಮ ಮಹತ್ವಾಕಾಂಕ್ಷೆ ಯೋಜನೆಯಾದ ಕನ್ನಂಬಾಡಿ ಕಟ್ಟೆಯ ವಿಷಯವನ್ನು ತಿಳಿಸಿ, ಅಲ್ಲಿ ಆದ  ಅವಘಡವನ್ನೂ ಸಹಾ ತಿಳಿಸಿದ್ದಲ್ಲದೇ ಆದೇ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಕೇಳಿಕೊಂಡಿದ್ದನ್ನು ಒಪ್ಪಿಕೊಂಡ ರಾಯರು ಮೈಸೂರು ಸಂಸ್ಥಾನಕ್ಕೆ ಚೀಫ್ ಇಂಜೀನಿಯರ್ ಆಗಿ ಸೇರಿಕೊಂಡು ಅನೇಕ ಉದ್ಯಮಗಳಿಗೆ ಕಾರಣೀಭೂತರಾಗುವುದಲ್ಲದೇ ಮುಂದೇ 1912 ರಿಂದ 1918ರ ನಡುವೆ 6 ವರ್ಷಗಳ ಕಾಲ ಮೈಸೂರಿನ ದಿವಾನರಾಗಿಯೂ ಸೇವೆ ಸಲ್ಲಿಸಿದ್ದು ಈಗ ಇತಿಹಾಸ.

WhatsApp Image 2024-09-17 at 00.33.07ವಿಶ್ವೇಶ್ವರಯ್ಯನವರು ನವೆಂಬರ್ 1909ರಲ್ಲಿ ಕನ್ನಂಬಾಡಿ ಅಣೆಕಟ್ಟು ಯೋಜನೆಯ ಮುಖ್ಯ ಎಂಜಿನಿಯರ್ ಆಗಿ ನೇಮಕಗೊಂಡ ನಂತರ ಮತ್ತೊಮ್ಮೆ ಇಡೀ ಯೋಜನೆಯನ್ನು ಪುನರ್ ಪರಿಶೀಲಿಸಿ ಜಲಾಶಯದ ಮೊದಲ ಹಂತದಲ್ಲಿ 80 ಅಡಿ ಮತ್ತು ಎರಡನೇ ಹಂತದಲ್ಲಿ 124 ಅಡಿ ಎತ್ತರಕ್ಕೆ ನಿರ್ಮಿಸಲು ಸಲಹೆ ನೀಡಿ, ಅದಕ್ಕೊಂದು ಚಂದದ ನೀಲ ನಕ್ಷೆಯನ್ನು ನಿರ್ಮಿಸಿ ಅದನ್ನು ಮೈಸೂರು ಸಂಸ್ಥಾನಕ್ಕೆ ಪ್ರಸ್ತುತಪಡಿಸಿದರು. ವಿಶ್ವೇಶ್ವರಯ್ಯನವರ ಈ ಪ್ರಸ್ತಾಪಕ್ಕೆ ಅಂದಿನ ಮೈಸೂರಿನ ಹಣಕಾಸು ಸಚಿವರಿಂದ ಆರ್ಥಿಕ ವಿರೋಧವನ್ನು ವ್ಯಕ್ತಪಡಿಸಿ, ಈ ಯೋಜನೆಯು ಯಾವುದೇ ಉದ್ದೇಶವನ್ನು ಪೂರೈಸುವುದಿಲ್ಲ ಮತ್ತು ಸದ್ಯಕ್ಕೆ  ವಿದ್ಯುತ್ತಿಗೆ ನಮಗೆ ಯಾವುದೇ ಬೇಡಿಕೆಯಿಲ್ಲದ ಕಾರಣ ಇದಕ್ಕೆ ಅನುಮೋದನೆ ಕೊಡಲು ಸಾಧ್ಯವಿಲ್ಲಾ ಎಂದು ತಿಳಿಸುತ್ತಾರೆ. ಇದರಿಂದ ತುಸು ಬೇಸರಗೊಂಡ  ವಿಶ್ವೇಶ್ವರಯ್ಯನವರು ಇದರ ಮರುಪರಿಶೀಲನೆಗಾಗಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್  ಅವರನ್ನು ಕೋರಿಕೊಂಡಾಗ, ಅವರ  ಪ್ರಸ್ತಾವನೆಯನ್ನು ಮರು ಪರಿಶೀಲಿಸಿದ ನಂತರ, ಮಹಾರಾಜರು ಅಕ್ಟೋಬರ್ 11, 1911 ರಂದು ತಮ್ಮ ಒಪ್ಪಿಗೆಯನ್ನು ನೀಡಿದ್ದಲ್ಲದೇ, ಅದಕ್ಕಾಗಿ ಅಂದಿನ ಕಾಲದಲ್ಲೇ ಸುಮಾರು 81 ಲಕ್ಷವನ್ನು ಮೀಸಲಿಟ್ಟು ಈ ಯೋಜನೆಯ ಅಂತಿಮ ಅನುಮೋದನೆಗಾಗಿ ಅಂದಿನ  ಮದ್ರಾಸ್ ಪ್ರೆಸಿಡೆನ್ಸಿಗೆ ಕಳುಹಿಸಿಕೊಡುತ್ತಾರೆ. ಈ ಯೋಜನೆಗಾಗಿ ಅಷ್ಟೊಂದು ಹಣವನ್ನು ವ್ಯಯಿಸಲು ಮೈಸೂರು ಸಂಸ್ಥಾನದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಎಂಬ ಕಾರಣ ನೀಡಿ ಈ ಯೋಜನೆಯನ್ನು ವಿರೋಧಿಸುತ್ತದೆ. ಆದರೆ  ವಿಶ್ವೇಶ್ವರಯ್ಯನವರು ಖುದ್ದಾಗಿ ಮದ್ರಾಸ್ ಪ್ರೆಸಿಡೆನ್ಸಿಯವರನ್ನು ಭೇಟಿ ಮಾಡಿ ಈ ಯೋಜನೆಯಿಂದ ಕೇವಲ ಮೈಸೂರು ಮಂಡ್ಯ ಪ್ರದೇಶಗಳಷ್ಟೇ ಅಲ್ಲದೇ, ಕಾವೇರಿ ಜಲಾನಯನದ ಕರ್ನಾಟಕ ಮತ್ತು ತಮಿಳು ನಾಡಿನ ಲಕ್ಷಾಂತರ ರೈತರ ಕೃಷ್ಟಿ ಚಟುವಟಿಕೆಗಳಿಗೆ ಸಹಾಯವಾಗುವುದಲ್ಲದೇ, ವಿನಾಕಾರಣ ಸಮುದ್ರಕ್ಕೆ ಪೋಲಾಗುವ ನೀರನ್ನು ಕುಡಿಯುವ ನೀರು ಮತ್ತು ವಿದ್ಯುತ್ ತಯಾರಿಕೆಗೆ ಬಳಸಿಕೊಳ್ಳಬಹುದು ಎಂಬ ವಿಷಯವನ್ನು ಮನದಟ್ಟು ಮಾಡಿದ ನಂತರವೇ ಮದ್ರಾಸ್  ಪ್ರೆಸಿಡೆನ್ಸಿಯವರು ಅದಕ್ಕೆ ತಮ್ಮ ಒಪ್ಪಿಗೆಯನ್ನು ನೀಡಿದ್ದದ್ದು ಇಲ್ಲಿ ಗಮನಾರ್ಹವಾಗಿದೆ.

ಹೀಗೆ  ಎಲ್ಲರ ಒಪ್ಪಿಗೆಯನ್ನು ಪಡೆದ ನಂತರ ಈ ಯೋಜನೆಗೆ ಅಷ್ಟೊಂದು ಹಣವನ್ನು ಹೊಂದಿಸಲು ಮೈಸೂರು ಅರಸರ ಬಳಿ ಹಣ ಇಲ್ಲದ ಕಾರಣ, ಲಕ್ಷಾಂತರ ಜನರ ಬಾಳನ್ನು ಹಸನು ಮಾಡುವಂತನ ಈ ಮಹತ್ವಾಕಾಂಕ್ಷೆಯ ಯೋಜನೆಗಾಗಿ ಹಣವನ್ನು ಹೊಂಚಲು ಮೈಸೂರಿನ ಮಹಾರಾಜರು ತಮ್ಮ ರಾಣಿಯವರ ಚಿನ್ನಾಭರಣ ಮತ್ತು ಖಜಾನೆಯಲ್ಲಿದ್ದ ಬೆಳ್ಳಿಯ ನಾಣ್ಯಗಳು, ಮುತ್ತು, ವಜ್ರ ವೈಡೂರ್ಯಗಳನ್ನು ಸುಮಾರು ನಾಲ್ಕು ಮೂಟೆಯಲ್ಲಿ ಕೊಂಡೊಯ್ದು ಸ್ಥಳೀಯ ಮಾರುಕಟ್ಟೆಗಿಂತಲೂ ಹೆಚ್ಚಿನ ಹಣ ಸಿಗುತ್ತದೆ ಮತ್ತು ಈ ವಿಷಯ ತಮ್ಮ ಜನರಿಗೆ ಗೊತ್ತಾಗ ಬಾರದೆಂದು  ದೂರದ ಬಾಂಬೆಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಸುಮಾರು 80 ಲಕ್ಷ ರೂಪಾಯಿಗಳನ್ನು ಹೊಂಚಿಸುವ ಮೂಲಕ 1911 ಅಕ್ಟೋಬರ್ 12ರಂದು ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡುತ್ತಾರೆ.

WhatsApp Image 2024-09-17 at 00.34.26ನವೆಂಬರ್ 1911 ರಲ್ಲಿ ವಿಶ್ವೇಶ್ವರಯ್ಯನವರ ಸಾರಥ್ಯದಲ್ಲಿ ಕನ್ನಂಬಾಡಿ ನಿರ್ಮಾಣಕ್ಕೆ ಚಾಲನೆ ದೊರೆಯುತ್ತದೆ. ಈ ಅಣೆಕಟ್ಟೆಗೆ ಬೇಕಾಗುವಷ್ಟು ಸಿಮೆಂಟ್ ಭಾರತದಲ್ಲಿ ಸಿಗದೇ ಇದ್ದ ಕಾರಣ ಮತ್ತು ಅದನ್ನು ವಿದೇಶದಿಂದ ಆಮದು ಮಾಡಿಕೊಳ್ಳುವಾಗ ಹೆಚ್ಚಿನ ಹಣ ಮತ್ತು ಸಮಯ ವ್ಯರ್ಥವಾಗುತ್ತದೆ ಎಂಬ ಕಾರಣದಿಂದ ಸಿಮೆಂಟ್ ಬದಲಿಗೆ ಸುಣ್ಣ, ಮರಳು, ಜೇಡಿಮಣ್ಣು ಮತ್ತು ಇಟ್ಟಿಗೆ/ಕಲ್ಲಿನ ಧೂಳಿನ ಮಿಶ್ರಣವನ್ನು ಸಮಪ್ರಮಾಣದಲ್ಲಿ ಬೆರೆಸಿ ತಯಾರಿಸಲಾಗುವ ಸುರ್ಕಿ(ಚುರ್ಕಿ)ಯನ್ನು ಬಳಸುವುದರಿಂದ ಅದು ಪರಿಣಾಮಕಾರಿಯಾಗಿ ಉಷ್ಣ ನಿರೋಧಕವಾಗುವುದಲ್ಲದೇ, ನೀರಿನ ಸೋರಿಕೆಯನ್ನು ತಡೆಯುತ್ತದೆ ಎಂಬುದು ವಿಶ್ವೇಶ್ವರಯ್ಯನವರ ಕಲ್ಪನೆಯಾಗಿರುತ್ತದೆ. ಅದೇ ರೀತಿ ಈ ಅಣೆಕಟ್ಟೆಗೆ ಬೇಕಾಗುವ ಕಲ್ಲನ್ನು ಆರಂಭದಲ್ಲಿ ಮಾಗಡಿಯಿಂದ ತರಲು ನಿರ್ಧರಿಸಲಾಗಿತ್ತಾದರೂ ಅಲ್ಲಿಂದ ಕಲ್ಲು ತರುವುದು ಯೋಜನೆಗೆ ತುಂಬಾ ದುಬಾರಿಯಾಗುತ್ತದೆ ಎಂಚೆಣಿಸಿದ ರಾಯರು. ಚಾಮುಂಡಿ ತಪ್ಪಲಲ್ಲಿರುವ ಕಲ್ಲನ್ನೇ ಬಳಸೋಣ ಎಂದು ಸಲಹೆ ನೀಡಿದ್ದಲ್ಲದೇ, ಈ ಕಾರ್ಯಕ್ಕೆ ಅವಶ್ಯವಾಗಿದ್ದ ಕಾರ್ಮಿಕರನ್ನು ಶ್ರೀ ಧರ್ಮವಾರಪಲ್ಲಿ ವೆಂಕಟರಾಮಣ್ಣನವರ ನೇತೃತ್ವದಲ್ಲಿ ಕೋಲಾರ ಜಿಲ್ಲೆಯಿಂದ ಸುಮಾರು ನಾಲ್ಕೂವರೆ ಸಾವಿರ ಕಾರ್ಮಿಕರನ್ನು ಎತ್ತಿನ ಗಾಡಿ ಮತ್ತು ಕೋಣದ ಮೂರು ಚಕ್ರದ ಗಾಡಿಗಳ ಮೂಲಕ ಕರೆಸಿಕೊಂಡಿದ್ದಲ್ಲದೇ, ಆ ಕಾರ್ಮಿಕರಿಗೆ ಲಿಂಗಾಬುಧಿ ಕೆರೆಯನ್ನು ಮೂರು ಭಾಗವಾಗಿ ಇಬ್ಭಾಗ ಮಾಡಿ ಒಂದು ಕಡೆ ಕಲ್ಲುಗಳನ್ನು ಸಮಾನಾಂತರವಾಗಿ ಕೆತ್ತನೆ ಮಾಡುವುದು, ಮತ್ತೊಂದು ಕಡೆ ಕತ್ತಾಳಿಯಿಂದ ನಾರನ್ನು ತೆಗೆದು ಹಗ್ಗ ತಯಾರಿಸುವುದು.ಇದೇ ಹಗ್ಗ ಬಳಸಿ ಕಬ್ಬಿಣದ ಮೂರು ಚಕ್ರದ ಗಾಡಿಗಳಿಗೆ ಕೋಣ ಕಟ್ಟಿ ಕಲ್ಲು ಸಾಗಿಸುವುದು. ಹೀಗೆ ಧರ್ಮವಾರಪಲ್ಲಿ ವೆಂಕಟರಾಮಣ್ಣ ಸಾರಥ್ಯದಲ್ಲಿ ಕೆಎರ್ ಎಸ್ ಕಟ್ಟಡಕ್ಕೆ ಬೇಕಾದ ಕಲ್ಲು ಕೆತ್ತನೆ, ಹಗ್ಗ ತಯಾರು, ಸುಣ್ಣದ ಕಲ್ಲಿನ ಸಂಗ್ರಹ ಮಾಡಿಕೊಂಡಿದ್ದರಂತೆ.

WhatsApp Image 2024-09-17 at 00.33.25ಅದೇ ರೀತಿ ಈ ಅಣೆಕಟ್ಟುಗಳ ಅತಿ-ಮೇಲ್ಭಾಗವನ್ನು ತಡೆಯುವ ಸ್ಪಿಲ್‌ವೇಗಳ ಬದಲಿಗೆ, ವಿಶ್ವೇಶ್ವರಯ್ಯನವರು ಜಲಾಶಯದಲ್ಲಿ ನೀರಿನ ಏರಿಕೆ ಮತ್ತು ಕುಸಿತದ ಸಮಯದಲ್ಲಿ ತೆರೆಯುವ ಮತ್ತು ಮುಚ್ಚುವ 48 ಸ್ವಯಂಚಾಲಿತ ಗೇಟ್‌ಗಳನ್ನು ಆರು ಸೆಟ್‌ಗಳಲ್ಲಿ, ಪ್ರತಿಯೊಂದರಲ್ಲಿ ಎಂಟು ಗೇಟ್‌ಗಳನ್ನು ಬಳಸಿದರು. ಪ್ರತಿ ಗೇಟ್ ಒಂದು ಸಿಲ್, ಲಿಂಟೆಲ್ ಮತ್ತು ಅಡ್ಡ ಚಡಿಗಳನ್ನು ಮತ್ತು ಫಲಕಗಳನ್ನು ಒಳಗೊಂಡಿದೆ. ಸಮತೋಲನ ತೂಕ, ಫ್ಲೋಟ್, ಸರಪಳಿಗಳು ಮತ್ತು ಪುಲ್ಲಿಗಳು ಮತ್ತು ಒಳಹರಿವು ಮತ್ತು ಔಟ್ಲೆಟ್ ಪೈಪ್ಗಳು, ಗೇಟ್‌ಗಳನ್ನು ಎರಕಹೊಯ್ದ ಕಬ್ಬಿಣದಿಂದ ಮಾಡಲಾಗಿದ್ದು ಇದನ್ನು ಇದನ್ನು ಭದ್ರಾವತಿಯಲ್ಲಿರುವ ಅವರದ್ದೇ ಕನಸಿನ ಮತ್ತೊಂದು ಕೂಸಾಗಿದ್ದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿಯೇ ತಯಾರಿಸಲಾಗಿದ್ದದದ್ದು ಮತ್ತೊಂದು ವಿಶೇಷ.

WhatsApp Image 2024-09-17 at 00.33.411911 ರಲ್ಲಿ ಪ್ರಾರಂಭವಾದ ಈ ಅಣೆಕಟ್ಟಿನ ಅಡಿಪಾಯದ ಕೆಲಸ 1924ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸುವ ಹಂತಕ್ಕೆ ಬರುತ್ತದೆ, ಇದೇ ಸಮಯದಲ್ಲಿ ಈ ಯೋಜನೆಯಿಂದಾಗಿ ಆ ಅಣೆಕಟ್ಟಿಯ ಸುತ್ತಮುತ್ತಲಿನ ಸುಮಾರು 5,000 ರಿಂದ 10,000 ಜನರು ತಮ್ಮ ಮನೆಗಳನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಬಂದಾಗ, ವಿಶ್ವೇಶ್ವರಯ್ಯನವರ ನೇತೃತ್ವದಲ್ಲೇ ಅಂದಿನ ಮೈಸೂರು ಸಂಸ್ಥಾನ ತಮ್ಮ ಜಮೀನು ಮನೆ ಮಠ ಕಳೆದುಕೊಂಡವರೆಲ್ಲರಿಗೂ ಪಕ್ಕದ ಪ್ರದೇಶಗಳಲ್ಲಿ ಕೃಷಿ ಭೂಮಿಯೊಂದಿಗೆ  ಪುನರ್ವಸತಿ ಕಲ್ಪಿಸಿಕೊಟ್ಟು 1931 ರಲ್ಲಿ ಇಡೀ ಯೋಜನೆ ಪೂರ್ಣಗೊಂಡು  ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಕೃಷಿ ನೀರಾವರಿಯಲ್ಲದೇ, ಮೈಸೂರು, ಮಂಡ್ಯ ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಮುಖ್ಯ ಮೂಲವಾಗಿದ್ದಲ್ಲದೇ,  ಈ ಅಣೆಕಟ್ಟಿನಿಂದ ಬಿಡುಗಡೆಯಾದ ನೀರು ಶಿಂಶಾ ಜಲವಿದ್ಯುತ್ ಯೋಜನೆಗೂ ಬಳಕೆಯಾಗಿ ಅಲ್ಲಿಂದ ನೀರು ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ಅಣೆಕಟ್ಟಿನಲ್ಲಿ ಸಂಗ್ರಹವಾಗುತ್ತದೆ. ಈ ಅಣೆಕಟ್ಟೆಯನ್ನು ಹಿಂದೂಪುರ ಪಾಂಡುರಂಗ ರಾವ್ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಲಾಗುತ್ತದೆ.

WhatsApp Image 2024-09-17 at 00.34.55ಇವೆಲ್ಲದರ ಮಧ್ಯೆ ಮೈಸೂರು ಸಂಸ್ಥಾನಕ್ಕೆ ಮುಖ್ಯ ಇಂಜಿನೀಯರ್ ಆಗಿ ಸೇರಿಕೊಂಡು ನಂತರ ದಿವಾನರಾಗಿದ್ದಾಗ ಅರ್ಹತೆಗಿಂತಲೂ ಜಾತಿಯಾಧಾರಿತ ಮೀಸಲಾತಿ ಕುರಿತಾದ ವಿಷಯದಲ್ಲಿ ಮೈಸೂರು ಮಹಾರಾಜರೊಂದಿಗಿನ ಭಿನ್ನಾಭಿಪ್ರಾಯದಿಂದ ಮೈಸೂರು ಸಂಸ್ಥಾನದಿಂದ ಹೊರಬಂದರೂ, ಇಡೀ ಕನ್ನಂಬಾಡಿ ಅಣೆಕಟ್ಟೆ ಸಂಪೂರ್ಣವಾಗುವವರೆಗೂ ಅದರ ಮೇಲುಸ್ತುವಾರಿಯನ್ನು ವಿಶ್ವೇಶ್ವರಯ್ಯನವರೇ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ವಹಿಸಿಕೊಂಡಿದ್ದನ್ನು ಯಾರೂ ಸಹಾ ಅಲ್ಲಗಳಿಯಲು ಸಾಧ್ಯವಿಲ್ಲವಾಗಿದೆ. ಈ ಯೋಜನೆಗಾಗಿ ಅವರ ಕಾರ್ಯತತ್ಪರೆತೆ ಎಷ್ಟಿತ್ತು ಎಂಬುದಕ್ಕೆ ಈ ಪ್ರಸಂಗವನ್ನು ತಿಳಿಸಲೇ ಬೇಕಾಗಿದೆ.

WhatsApp Image 2024-09-17 at 00.35.06ಮಹಾರಾಜರು ತಮ್ಮ ರಾಣಿಯವರ ಚಿನ್ನಾಭರಣಗಳನ್ನು ಮಾರಿ ಹಣವನ್ನು ತಂದರೂ ಈ ಮಹತ್ವಾಕಾಂಕ್ಷೆಯ ಯೋಜನೆಗೆ  ಅವೆಲ್ಲವೂ ನೀರಿನಂತೆ ಖರ್ಚಾಗಿ ಕೂಲೀ ಕೆಲಸದವರಿಗೆ ಹಣವನ್ನು ನೀಡಲೂ ಸಹಾ ಕಷ್ಟಪಡುವಂತಾಗಿ ಚಿಂತಾಕ್ರಾಂತರಾಗಿದ್ದ ಮಹಾರಾಜರಿಗೆ ವಿಶ್ವೇಶ್ವರಯ್ಯನವರು ನೀಡಿದ ಸಲಹೆ ಕಾರ್ಯಸಾಧುವಾಗುವುದಿಲ್ಲ ಎನ್ನುವುದು ಮಹಾರಾಜರ ಅಭಿಪ್ರಾಯವಾಗಿರುತ್ತದೆ. ಆದಾಗ್ಯೂ ರಾಯರ ಮನವೊಲಿಕೆಯ ಮೇರೆಗೆ ಮಹಾರಾಜರು ಮತ್ತು ರಾಯರು ಇಬ್ಬರೂ  ಅಣೆಕಟ್ಟೆಯ ಸುತ್ತಮುತ್ತಲಿನ ಜನರನ್ನು ಮುಖಃತಹ ಭೇಟಿ ಮಾಡಿ ಕೆಲವೊಂದು ವಿಷಯಗಳ ಕುರಿತಾಗಿ ಚರ್ಚೆ ಮಾಡಲು ಇಚ್ಚಿಸುವ ಸಂದೇಶವನ್ನು ಕಳುಹಿಸಿ ಸಂಜೆಯ ಸಮಯಕ್ಕೆ ಆ ಊರಿಗೆ ಹೋದಾಗ, ಮಹಾರಾಜರನ್ನು ಮತ್ತು ಮುಖ್ಯ ಇಂಜೀನಿಯರನ್ನು ಹತ್ತಿರದಿಂದ ಭೇಟಿ ಮಾಡಿ ಅವರ ಮಾತುಗಳನ್ನು ಕೇಳುವ ಅವಕಾಶಕ್ಕಾಗಿ ಸುಮಾರು 500ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮದ ಹಿರಿಯರು ಮತ್ತು ಕಿರಿಯರು ಸೇರಿದ್ದನ್ನು ಕಂಡು ಹೆಚ್ಚಿನ ಜನರ ನಿರೀಕ್ಷೆಯಲ್ಲಿದ್ದ ಮಹಾರಾಜರಿಗೆ ನಿರಾಸೆಯಾದರೂ, ಒಲ್ಲದ ಮನಸ್ಸಿನಿಂದಲೇ ಜನರಿಗಾಗಿ ತಾವು ನಿರ್ಮಿಸುತ್ತಿರುವ ಅಣೆಕಟ್ಟೆಗೆ ಸಾರ್ವಜನಿಕರಿಂದ ಉಚಿತವಾದ ಶ್ರಮದಾನವನ್ನು ನಿರೀಕ್ಷಿಸುತ್ತಿರುವುದಾಗಿ ಕೇಳಿಕೊಂಡಿದ್ದಕ್ಕೆ ಆ ಕ್ಷಣದಲ್ಲಿ ಅಲ್ಲಿದ್ದ ಜನರ ಸ್ಪಂದನೆ ಪೂರವಾಗಿಲ್ಲದಿದ್ದ ಕಾರಣ ಬೇಜಾರಿನಲ್ಲೇ ಅರಮನೆಗೆ ಹಿಂದಿರುಗುತ್ತಾರೆ.

ಮರುದಿನ ವಿಶ್ವೇಶ್ವರಯ್ಯನವರು ಇದೇ ಕುರಿತಾಗಿ ರಾಜರಿಗೆ ಹೆಚ್ಚಿನ ಮಾಹಿತಿಯನ್ನು ನೀಡಲು ಅರಮನೆಗೆ ಬಂದಾಗ, ಮಹಾರಾಜರು ನಿಮ್ಮ ಮಾತಿನ ಮೇರೆಗೆ ನೆನ್ನೆ ನಾನು ಜನರ ಬಳಿ ಹಾಗೆ ಕೇಳಬಾರದಿತ್ತೇನೋ? ನಮ್ಮ ಕೋರಿಕೆಗೆ ಜನರ ಪ್ರತಿಕ್ರಿಯೆ ಆಶಾದಾಯಕ ಆಗಿರಲಿಲ್ಲಾ ಎಂದು  ತಮ್ಮ ನೋವನ್ನು ತೋಡಿ ಕೊಂಡಾಗ, ನಸು ನಕ್ಕ ವಿಶ್ವೇಶ್ವರಯ್ಯನವರು, ಮಹಾರಾಜರನ್ನು  ಅರಮನೆಯ ಹೊರಗೆ ಕರೆತಂದಾಗ, ಹಾರೆ, ಪಿಕಾಸಿ, ಗುದ್ದಲಿ, ಮಂಕರಿಗಳನ್ನು ಹಿಡಿದ್ದಿದ್ದ, ಹೆಣ್ಣು, ಗಂಡು, ಹಿರಿಯರು ಮತ್ತು ಕಿರಿಯರು ಎಂಬ ಬೇಧ ಭಾವವಿಲ್ಲದೇ ಅಲ್ಲಿ ನೆರದಿದ್ದ ಸಾವಿರಾರು ಜನರನ್ನು ಕಂಡು ಆಶ್ಚರ್ಯರಾಗುತ್ತಾರೆ. ರಾಜಾ ಪ್ರತ್ಯಕ್ಷ ದೇವತ. ಅದರಲ್ಲೂ ಕೊಡುಗೈ ದಾನಿಗಳು ಎಂದೇ ಪ್ರಖ್ಯಾತರಾಗಿದ್ದ ಮೈಸೂರು  ಮಹಾರಾಜರೇ ಸ್ವತಃ ಜನರ ಬಳಿಗೆ ಬಂದು ಕೇಳಿಕೊಂಡಾಗ ಅದಕ್ಕೆ ಖಂಡಿತವಾಗಿಯೂ ಸ್ಪಂದಿಸಲೇ ಬೇಕು ಎಂದು ನಿರ್ಧರಿಸಿದ ಜನರು ರಾತ್ರೋ ರಾತ್ರಿ ಆ ವಿಷಯವನ್ನು ತಮ್ಮ ಸುತ್ತಮುತ್ತಲಿನ ಹಳ್ಳಿಗರಿಗೆಲ್ಲಾ ತಿಳಿಸಿ ಎಲ್ಲರನ್ನೂ ಒಗ್ಗೂಡಿಸಿ ಸಂತೋಷದಿಂದ ಕನ್ನಂಬಾಡಿ ಕಟ್ಟೆಯ ನಿರ್ಮಾಣಕ್ಕೆ ತಮ್ಮ ಶ್ರಮದಾನ ಮಾಡಲು ಅರಮನೆಯ ಮುಂದೆ ಸೇರಿರುತ್ತಾರೆ.

ಹೀಗೆ ಆರಂಭದಲ್ಲೇ ವಿಘ್ನವನ್ನು ಕಂಡಿದ್ದ ಕನ್ನಂಬಾಡಿ ಕಟ್ಟೆ ಯೋಜನೆಗೆ ಕಾರ್ಯಸಾದುವಾಗುವಂತಹ ನೀಲನಕ್ಷೆಯನ್ನು ತಯಾರಿಸಿ, ಅದಕ್ಕೆ ಮದ್ರಾಸ್ ಪ್ರೆಸಿಡೆನ್ಸಿಯಿಂದ ಅನುಮತಿ ಪಡೆದು, ದುಬಾರಿ ಸಿಮೆಂಟ್ ಬಳಸದೇ ತಮ ಕಲ್ಪನೆಯ ಗಾರೆಯನ್ನು ಬಳಸಿ ತಮ್ಮದೇ ಪೇಟೆಂಟ್ ಪಡೆದ ಸೈಫನ್ ಸಿಸ್ಟಂ  ಸ್ವಯಂಚಾಲಿತ ಗೇಟ್‌ಗಳನ್ನೂ  ಸಹಾ ಸ್ಥಳೀಯವಾಗಿ ಭಧ್ರಾವತಿಯ ಕಬ್ಬಿಣ ಮತ್ತು ಉಕ್ಕು ತಯಾರಿಕಾ ಕೇಂದ್ರದಲ್ಲಿ ತಯಾರಿಸಿ ಅಳವಡಿಸಿದ್ದಲ್ಲದೇ, ತಮ್ಮ ಬುದ್ದಿ ಶಕ್ತಿಯಿಂದ  ಅಣೆಕಟ್ಟೆಯ ನಿರ್ಮಾಣಕ್ಕೆ ಬೇಕಾಗಿದ್ದ ಕೆಲಸಗಾರನ್ನೂ ಶ್ರಮದಾನಕ್ಕೆ ಒಪ್ಪಿಸಿದ್ದಲ್ಲದೇ,  ಮೈಸೂರು ಸಂಸ್ಥಾನದ ಅಧಿಕಾರದಿಂದ ದೂರವಾದರೂ, ಅಣೆಕಟ್ಟೆ ಸಂಪೂರ್ಣವಾಗಿ ನಿರ್ಮಾಣವಾಗಿ  ಉದ್ಘಾಟನೆ ಆಗುವವರೆಗೂ ಸಂಬಳವಿಲ್ಲದೇ ಅದರ ಮೇಲುಸ್ತುವಾರಿ ವಹಿಸಿಸಿದ್ದ ಸರ್. ಎಂ. ವಿಶ್ವೇಶ್ವರಯ್ಯನವರ ಕೊಡುಗೆಯನ್ನು ಕೆಲವು ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ ಮತ್ತು ಅವರ ಜಾತಿಯ ಆಧಾರದಿಂದ ಅಲ್ಲಗಳಿಯುವವರಿಗೆ ಆ ತಾಯಿ ಚಾಮುಂಡಿದೇವಿಯೇ ಒಳ್ಳೇ ಬುದ್ದಿ ಕೊಟ್ಟು ಕಾಪಾಡಲೀ ಎಂದು ಕೇಳಿಕೊಳ್ಳೋಣ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

2 thoughts on “ಕನ್ನಂಬಾಡಿ ಅಣೆಕಟ್ಟೆ ಕಟ್ಟಿಸಿದ್ದು ವಿಶ್ವೇಶ್ವರಯ್ಯನವರೇ?

  1. ಲೇಖನ ಅದ್ಭುತವಾಗಿ ಮೂಡಿಬಂದಿದೆ. ಆದರೆ 1900 ರ ಆಸುಪಾಸಿನಲ್ಲೇ 5 ಪೈಸೆ, 10 ಪೈಸೆ …. ಇತ್ಯಾದಿ ಬರೆದಿರುತ್ತೀರಿ. ಆಗ ಇದ್ದದ್ದು 3ಕಾಸು, 6ಕಾಸು, 1 ಆಣೆ ……ಅಲ್ಲವೇ,? ತಮಾಶೆಗೆ ತಿಳಿಸಿದ್ದೇನೆ. ಲೇಖನ ಚನ್ನಾಗಿದೆ.

    Like

    1. ಅಂದು ನಯಾ ಪೈಸೆ ಮತ್ತು ಆಣೆಯ ಕಾಲ. ಹಾಗಾಗಿ ಪೈಸೆಯನ್ನು ನಯಾಪೈಸೆ ಎಂಬುದಾಗಿ ಬದಲಿಸುತ್ತೇನೆ. ಅಷ್ಟೋಂದು ಸೂಕ್ಷ್ಮವಾದ ಅಂಶಗಳನ್ನು ಗುರುತಿಸಿದ್ದಕ್ಕಾಗಿ ಧನ್ಯವಾದಗಳು

      Like

Leave a comment