ಮೈಸೂರು ಎಂದ ತಕ್ಷಣ ನಮ್ಮ ಥಟ್ ಅಂತಾ ಹೊಳೆಯೋದೇ, ನಮ್ಮ ರಾಜ್ಯದ ಸಾಂಸ್ಕೃತಿಕ ನಗರಿ, ಮೈಸೂರು ಅರಸರ ಅರಮನೆ, ನಾಡ ಹಬ್ಬ ದಸರ, ಚಾಮುಂಡೀ ಬೆಟ್ಟ, ಕನ್ನಂಬಾಡಿ ಕಟ್ಟೆ. ಇತ್ತೀಚೆಗೆ ಎಕ್ಸ್ ಪ್ರೆಸ್ ರಸ್ತೆ. ಮಾರ್ಕಂಡೇಯ ಪುರಾಣದಲ್ಲಿ ಹೇಳಿರುವ ಮಹಿಷಾಸುರ ಮರ್ದಿನಿಯ ಕಥೆಯಂತೆ, ಈ ನಾಡಿನಲ್ಲಿದ್ದ ಪ್ರಜಾಪೀಡಕ ಮಹಿಷಾಸುರ ಎಂಬ ರಾಕ್ಷಸನನ್ನು ಪಾರ್ವತಿ ದೇವಿ ಚಾಮುಂಡೇಶ್ವರಿ ರೂಪದಲ್ಲಿ ಬಂದು ನಿಗ್ರಹಿಸಿ ಅಲ್ಲಿನ ಜನರಿಗೆ ಮುಕ್ತಿ ಕೊಡಿಸಿದ ಕಾರಣ, ಆ ಊರಿಗೆ ಮೈಸೂರು ಎನ್ನುವ ಹೆಸರು ಬಂದಿದ್ದು, ಆ ರಾಕ್ಷಸನ ನೆನಪಿನಲ್ಲಿಯೇ ಇಂದಿಗೂ ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರನ ಪ್ರತಿಮೆಯನ್ನು ಕಾಣಬಹುದಾಗಿದೆ.
ಜಾ ಪೀಡಕನಾದ ಮಹಿಷಾಸುರ (ಕೋಣಗಳ ರಾಜ) ಎಂಬ ರಾಕ್ಷಸ ಸುದೀರ್ಘ ಕಾಲ ತಪಸ್ಸನ್ನು ಮಾಡಿ ದೇವರನ್ನು ಒಲಿಸಿಕೊಂಡು ತನಗೆ ಯಾವುದೇ ಮನುಷ್ಯರಿಂದ ಸಾವು ಬರದಂತಹ ವರವನ್ನು ಪಡೆದುಕೊಂಡ ನಂತರ ಆತನ ಆರ್ಭಟ ಹೆಚ್ಚಾಗಿ, ಇಂದ್ರನೂ ಸೇರಿದಂತೆ ದೇವಾನು ದೇವತೆಗಳಿಗೂ ಆತನ ಉಪಟಳವನ್ನು ಸಹಿಸಲು ಅಸಾಧ್ಯವಾದಾಗ, ಎಲ್ಲಾ ದೇವತೆಗಳೂ ಒಗ್ಗೂಡಿ ಪಾರ್ವತಿಯ ಸಹಾಯ ಕೇಳಲು ಆಕೆಯು ದುರ್ಗಾ ದೇವಿಯ ಅವತಾರತಾಳಿ, ಸಿಂಹ ವಾಹಿನಿಯಾಗಿ ಕೈಯಲ್ಲಿ ತ್ರಿಶೂಲವನ್ನು ಹಿಡಿದು, ಅದರಿಂದ ಮಹಿಷಾಸುರನನ್ನು ಕೊಂದಿದ್ದಕ್ಕಾಗಿ ಆಕೆಗೆ ಮಹಿಷಾಸುರ ಮರ್ದಿನಿ ಎನ್ನುವ ಹೆಸರು ಬಂದಿದೆ. ಹೀಗೆ ಮಹಿಷಾಸುರನ ಸಂಹಾರ ಮಾಡಿದ್ದು ದಸರಾ ಸಮಯವಾಗಿದ್ದರಿಂದ ದೇಶಾದ್ಯಂತ ಈ ಸಮಯದಲ್ಲಿ ತಾಯಿ ದುರ್ಗಿಯ ಪೂಜೆಯನ್ನು ಬಹಳ ಭಕ್ತಿಯಿಂದ ಮಾಡಿಕೊಂಡು ಬಂದರೆ, ವಿಜಯನಗರದ ಸಾಮಂತರಾಗಿದ್ದ ಮೈಸೂರು ಸಂಸ್ಥಾನ ಸ್ವತ್ರಂತ್ರ ರಾಜ್ಯದ ಮಾನ್ಯತೆ ಪಡೆದು ಹಂಪೆಯಲ್ಲಿ ನಡೆಯುತ್ತಿದ್ದ ಅದ್ದೂರಿಯ ಹತ್ತು ದಿನಗಳ ದಸರಾ ಆಚರಣೆಯನ್ನು ಮೈಸೂರಿನಲ್ಲಿ ನಡೆಸುವ ಸಂಪ್ರದಾಯವನ್ನು ಆರಂಭಿಸಿ ಈಗ ಅದು ವಿಶ್ವ ವಿಖ್ಯಾತವಾಗಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಆದರೆ ಇದ್ದಕ್ಕಿದ್ದಂತೆಯೇ ಕಳೆದ 10 ವರ್ಷಗಳಲ್ಲಿ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ 2013ರಲ್ಲಿ ಸಿದ್ದರಾಮಯ್ಯನವರು ತಮ್ಮ ಅಧಿಕಾರದ ಆಸೆಗಾಗಿ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಎಂದು ಭಾರತೀಯರನ್ನೇ ಮತ್ತೊಮ್ಮೆ ಜಾತಿ ಧರ್ಮದ ವಿಷಯದಲ್ಲಿ ತುಂಡರಿಸಿ ಅಹಿಂದ ಎಂಬ ಹೋರಾಟವನ್ನು ಮುನ್ನೆಲೆಗೆ ತಂದರೋ ಅಂದಿನಿಂದ, ಜಮೀನಿನಲ್ಲಿ ಕಳೆಗಳು ಬೆಳೆಯುವಂತೆ, ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಕೆಲವು ಅಂಡುಪಿರ್ಕೆ ಸ್ವಘೋಷಿತ ಪ್ರಗತಿಪರರು ಮಹಿಷ ಎಂಬುವವನು ಅಸುರನಲ್ಲ ಆತ ಒಬ್ಬ ರಾಜ. ಭಾರತಕ್ಕೆ ಬಂದ ಆರ್ಯರು ಇಲ್ಲಿನ ಮೂಲ ನಿವಾಸಿಗಳನ್ನು ಅಸುರರು ಎಂಬ ಕಥೆ ಕಟ್ಟಿ ಅದಕ್ಕೆ ಪೂರಕ ಎನ್ನುವಂತೆ ಚಾಮುಂಡಿ ಪುರಾಣ ಕಥೆಯನ್ನು ಕಟ್ಟುವ ಮೂಲಕ ಇಲ್ಲಿನ ಮೂಲ ನಿವಾಸಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಹಾಗಾಗಿ ಅದನ್ನು ಖಂಡಿಸುವ ಸಲುವಾಗಿ ಅಂದೆಂದೋ ಮಂಟೇಲಿಂಗಯ್ಯ ಎಂಬುವರು ಆರಂಭಿಸಿದ ಮಹಿಷ ದಸರವನ್ನು ದೊಡ್ಡ ಮಟ್ಟದಲ್ಲಿ ದಸರಾ ಹಬ್ಬದ ಸಮಯದಲ್ಲಿ ಅದಕ್ಕೆ ಸಮಾನಾಂತರವಾಗಿ ಆಚರಿಸಲು ನಮಗೂ ಅವಕಾಶ ಕೊಡಿ ಎಂದು ಇತ್ತೀಚೆಗಷ್ಟೇ ನಿಧನರಾದ ಮಹೇಶ್ ಚಂದ್ರಗುರು ಎಂಬುವರು ಹೋರಾಟಕ್ಕೆ ಇಳಿಯುತ್ತಿದ್ದಂತೆಯೇ ತಲೆಕೆಟ್ಟು ಓತಪ್ರೋತವಾಗಿ ಮಾತನಾಡುವ ಭಗವಾನ್ ಸಹಾ ಸಹಮತ ವ್ಯಕ್ತ ಪಡಿಸುತ್ತಿದ್ದಂತೆಯೇ ಈ ಹೋರಾಟ ಭಾರೀ ವಿವಾದವನ್ನು ಸೃಷ್ಟಿಸಿತು. ಆರಂಭದಲ್ಲಿ ಕೇವಲ ಮೈಸೂರಿಗಷ್ಟೇ ಸೀಮಿತವಾಗಿದ್ದ ಈ ಹೋರಾಟ, ನಂತರ ಹಿಂದೂ ವಿರೋಧಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕುಮ್ಮಕ್ಕಿನಿಂದಾಗಿ, ಉತ್ತರ ಕನ್ನಡ, ಕರಾವಳಿ ಮುಂತಾದ ಪ್ರದೇಶಗಳಲ್ಲಿಯೂ ದಲಿತ ಸಂಘಟನೆಯ ಹೆಸರಿನಲ್ಲಿ ರಾಜ್ಯಾದ್ಯಂತ ವಿವಿಧ ಭಾಗಗಳಲ್ಲಿ ಮಹಿಷ ದಸರಾ ಆಚರಿಸುವ ಹುನ್ನಾರ ದೇಶದ ಭಾವೈಕ್ಯತೆಗೆ ನಿಜಕ್ಕೂ ಆಘಾತಕಾರಿಯಾಗಿದೆ.
ಈಗಾಗಲೇ ಹೇಳಿದಂತೆ ಅಂದು ಆಡಳಿತದಲ್ಲಿದ್ದ ಸಿದ್ದರಾಮಯ್ಯ ಸರ್ಕಾರದ ಪರೋಕ್ಷ ಬೆಂಬಲವಿದ್ದ ಕಾರಣ, 2014 ರಿಂದ 2018ರವರೆಗೆ ಚಾಮುಂಡಿ ಬೆಟ್ಟದಲ್ಲೇ ಸಣ್ಣ ಪ್ರಮಾಣದಲ್ಲಿ ಅಚರಣೆಗೊಂಡಿದ್ದ ಮಹಿಷ ದಸರಾಕ್ಕೆ ನಂತರ ಆಡಳಿತಕ್ಕೆ ಬಂದು ಬಿಜೆಪಿ ಸರ್ಕಾರ ಅವಕಾಶ ನೀಡದ ಕಾರಣ ತಿಕ್ಕಾಟ ಹೆಚ್ಚಾಯಿತು. ಅರೇ ಮಹಿಷ ದಸರಾ ಅನ್ನೋದು ಸಂಪ್ರದಾಯದ ಪ್ರಕಾರ 13 ದಿನ ನಡೆಯೋ ಕಾರ್ಯಕ್ರಮ ಅಲ್ಲ. ಅದು ಕೇವಲ 1 ದಿನದ ಕಾರ್ಯಕ್ರಮ. ಕೆಲವರು ಸ್ಕೂಟರ್ ಮತ್ತು ಬೈಕ್ ರ‍್ಯಾಲಿ ಮೂಲಕ ಚಾಮುಂಡಿ ಬೆಟ್ಟಕ್ಕೆ ಬಂದು ಅಲ್ಲಿರುವ ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಿ ನಂತರ ಬೆಟ್ಟದ ಕೆಳಗೆ ಮಹಿಷಾಸುರನ ಟ್ಯಾಬ್ಲೋದ ಜೊತೆ ಸಮಾಜ ಸುಧಾರಕರ ಟ್ಯಾಬ್ಲೋ ಮತ್ತು ಕುವೆಂಪು, ವಾಲ್ಮೀಕಿ, ಮೈಸೂರು ಒಡೆಯರ್ ಸೇರಿದಂತೆ ಹಲವರ ಭಾವಚಿತ್ರದೊಂದಿಗೆ ಮೆರವಣಿಗೆಯೊಂದಿಗೆ ಕೆಲವು ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನದ ಜೊತೆ ಮೈಸೂರಿನ ಟೌನ್ ಹಾಲ್ ಸರ್ಕಲ್ ವರೆಗೂ ಬಂದು ಅಲ್ಲಿ ಹಲೇ ಮೈಸೂರು ಭಾಗದ ಹಲವು ಸಾಹಿತಿಗಳ ಭಾಷಣ ಮಾಡಿಕೊಂಡು ಹೋಗ್ತಾರೆ. ಅದಕ್ಕೆ ಏಕೆ ಇಷ್ಟೋಂದು ವಿರೋಧಾಭಾಸ? ನಮ್ಮ ಪಾಡಿಗೆ ನಾವು ಅದ್ದೂರಿಯಾಗಿ ದಸರ ಮಾಡಿಕೊಂಡು ಹೋಗೋಣ. ಆರ ಪಾಡಿಗೆ ಅವರು ಮಹಿಷ ದಸರ ಮಾಡಿಕೊಂಡು ಹೋಗಲಿ ಎಂದು ಹೇಳುವವರಿಗೆ ಇಂದು ಮುಂದೆ ಆಗುಬಹುದಾದ ಅನಾಹುತದ ಬಗ್ಗೆ ಅರಿವಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಕಾಂಗ್ರೇಸ್ ಪಕ್ಷ ಹೇಗೆ ತಮ್ಮ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮುಸಲ್ಮಾನರನ್ನು ಓಲೈಸುವ ಸಲುವಾಗಿ ವಕ್ಫ್ ಬೋರ್ಡ್ ಜಾರಿಗೆ ತಂದು ದೇಶದ ಯಾವುದೇ ಮೂಲೆಯಲ್ಲಿರುವ ಜಮೀನುಗಳನ್ನು ಯಾವುದೇ ದಾಖಲೆಗಳು ಇಲ್ಲದೇ, ತನ್ನ ಆಸ್ತಿ ಎಂದು ಕಬಳಿಸಿ ಕೊಳ್ಳಬಹುದೋ ಅದೇ ರೀತಿಯಲ್ಲೇ ಮತ್ತೆ ಅದೇ ಕಾಂಗ್ರೇಸ್ ಹಿಂದೂಗಳನ್ನು ದಲಿತರ ಹೆಸರಲ್ಲಿ ಒಡೆದು ಹಾಕುವ ಸಲುವಾಗಿ ಯಾವುದೇ ಆಧಾರವಿಲ್ಲದಂತಹ ಮಹಿಷ ದಸರಾದಂತಹ ಅಚರಣೆಗಳಿಗೆ ಕುಮ್ಮಕ್ಕು ನೀಡುವ ಮೂಲಕ ಸದ್ದಿಲ್ಲದೇ ನಮ್ಮ ಹಿಂದೂ ದೇವಾಲಯಗಳು ಮತ್ತು ನಮ್ಮ ಧಾರ್ಮಿಕ ಆಚರಣೆಗಳನ್ನು ದಲಿತ ಸಂಘಟನೆಗಳ ಮೂಲಕ ಹತ್ತಿಕ್ಕುವ ಹುನ್ನಾರ ನಡೆಸಿರುವುದು ಸಮಾಜಕ್ಕೆ ಮಾರಕವಾಗಿದೆ.
ಸನಾತನ ಧರ್ಮದಲ್ಲಿದ್ದ ಕೆಲವು ನ್ಯೂನತೆಗಳು ಅಥವಾ ಆಚರಣೆಗಳನ್ನು ಸಹಿಸದ ಬುದ್ದ ಹಿಂದೂ ಧರ್ಮದ ಟಿಸಿಲಿನಂತೆ ಬೌದ್ಧ ಧರ್ಮವನ್ನು ಆರಂಭಿಸಿದ ಸತ್ಯ ಎಲ್ಲರಿಗೂ ತಿಳಿದಿರುವ ವಿಷಯವಾಗಿದ್ದರೇ, ಈ ನವ ಬೌದ್ಧರು ಬೌದ್ಧ ಧರ್ಮ ಹಿಂದೂ ಧರ್ಮಕ್ಕಿಂತಲೂ ಹಳೆಯ ಧರ್ಮ ಎಂದು ಓತಪ್ರೋತವಾಗಿ ವಾದಿಸುವುದಲ್ಲದೇ, ಅವರ ಪ್ರಕಾರ, ಕ್ರಿ.ಪೂ. 3ನೇ ಶತಮಾನದಲ್ಲಿ ಮಹಿಷಮಂಡಲದಿಂದ ವಿಂದ್ಯಾಪರ್ವತ ಶ್ರೇಣಿಯವರೆಗೆ ಮಹಿಷ ಸಾಮ್ರಾಜ್ಯವನ್ನು ಕಟ್ಟಿದವನೇ ಮಹಿಷಾಸುರ. ವೈದಿಕರ ಇತಿಹಾಸಗಳು ದಿನಾಂಕವಿಲ್ಲದ ಇತಿಹಾಸವಾಗಿದ್ದು, ಅದರಲ್ಲಿ ಹೆಚ್ಚು ಕಟ್ಟುಕತೆಗಳಿವೆ. ಚಾಮುಂಡಿ ಬೆಟ್ಟದ ಕತೆಯಲ್ಲೂ ಇದನ್ನು ಕಾಣಬಹುದಾಗಿದ್ದು, ಮಹಿಷನ ಕಥೆ, ಚಾಮುಂಡಿಯ ಕತೆಯಲ್ಲ ಎಂದೇ ಸಮರ್ಥನೆ ಮಾಡುತ್ತಾರೆ. ಮಹಾಬಲನಾದ ಮಹಿಷನನ್ನು ಸೋಲಿಸಲು ವೈದಿಕರ ದೇವರಿಂದ ಆಗಲಿಲ್ಲ, ಮಹಿಷನ ಯುದ್ಧೋನ್ಮಾದ ಕಥೆಗಳು ಪುರಾಣಗಳಲ್ಲಿವೆ ಎಂದು ಹೇಳುವ ಇವರಿಗೆ ಅದು ಯಾವ ಪುರಾಣದಲ್ಲಿದೆ ಎಂದು ಕೇಳಿದಾಗ ಉತ್ತರಿಸಿದೆ ಬಾಯಿ ಬಡಿಯುತ್ತಾರೆ. ಇದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಕೇಳಿದರೆ ಜಾತಿ ನಿಂದನೆಯ ಗುರಾಣಿ ಹಿಡಿದು ಹಿಂದೂಗಳನ್ನು ಹೈರಾಣು ಮಾಡುತ್ತಾರೆ.
ಕೊಡಗು ಮತ್ತು ಮೈಸೂರಿನ ಈ ಹಿಂದಿನ ಸಾಂಸದರಾಗಿದ್ದ ಪ್ರತಾಪ್ ಸಿಂಹ ಅವರ ಪ್ರತಿಹೋರಾಟದ ಫಲವಾಗಿ ಈ ಹಿಂದೆ ಬಿಜೆಪಿ ಸರ್ಕಾರದ ಇದ್ದ ಸಮಯದಲ್ಲಿ ತಣ್ಣಗಾಗಿದ್ದ ಈ ಮಹಿಷ ದಸರಾ ಈಗ ಸಿದ್ದರಾಮಯ್ಯನವರ ಕಾಂಗ್ರೇಸ್ ಸರ್ಕಾರದಲ್ಲಿ ಫೀನಿಕ್ಸ್ ನಂತೆ ಮುನ್ನೆಲೆಗೆ ಬಂದು ಈ ಬಾರಿಯೂ ಮಹಿಷ ದಸರಾ ಆಚರಣೆ ಮಾಡಲು ಮಹಿಷ ದಸರಾ ಆಚರಣಾ ಸಮಿತಿ ಮುಂದಾಗಿದ್ದು, ಇದೇ ಅಕ್ಟೋಬರ್ 13 ರಂದು ಚಾಮುಂಡಿ ಬೆಟ್ಟದ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ನಡೆಸುವ ಮೂಲಕ ಈ ಮಹಿಷ ದಸರಾವನ್ನು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಉದ್ಘಾಟನೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಬೌದ್ದ ಬಿಕ್ಕು ಬೋಧಿದತ್ತ ಭಂತೇಜಿ ಸೇರಿ ಹಲವು ಪ್ರಗತಿಪರ ಸಾಹಿತಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿರುವುದಲ್ಲದೇ, ಆ ಆಹ್ವಾನ ಪತ್ರಿಕೆಯಲ್ಲಿ ಮೈಸೂರು ಹೆಸರನ್ನು ಮಹಿಷೂರು ಮತ್ತು ಚಾಮುಂಡಿ ಬೆಟ್ಟವನ್ನು ಮಹಿಷ ಬೆಟ್ಟ ಎಂದು ಮುದ್ರಿಸುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ.
ಬಿಟ್ಟಿ ಭಾಗ್ಯಗಳ ಮೂಲಕ ಭಾರೀ ಬಹುಮತದ ಮೂಲಕ ಅಧಿಕಾರಕ್ಕೆ ಬಂದ ಈ ಸಿದ್ದರಾಮಯ್ಯನವರ ಸರ್ಕಾರ ಒಂದೂವರೆ ವರ್ಷದಲ್ಲೇ ವಾಲ್ಮೀಕಿ ನಿಗಮದ ಹಗರಣ, ಮೂಡಾ ಹಗರಣ, ಪೋಲೀಸ್ ಇಲಾಖೆಯ ವರ್ಗಾವಣೆಯಲ್ಲಿ ಶಾಸಕರು ಮತ್ತವರ ಮಕ್ಕಳ ಹಗರಣ, ಖರ್ಗೆ ಮತ್ತು ಎಂ. ಬಿ. ಪಾಟೀಲ್ ಸರ್ಕಾರಿ ಭೂಕಬಳಿಕೆ ಹಗರಣ ಹೀಗೆ ಹಗರಣಗಳ ಮೇಲೆ ಹಗರಣ ನಡೆಸುತ್ತಾ 80% ಕಮಿಷನ್ ಸರ್ಕಾರ ಎಂದು ಆಯ್ಕೆ ಮಾಡಿದ ಜನರಿಂದ ಥೂ! ಛೀ! ಎಂದು ಉಗಿಸಿಕೊಳ್ಳುತ್ತಿರುವ ಸಮಯದಲ್ಲಿ ಜನರ ದಿಕ್ಕನ್ನು ತಪ್ಪಿಸುವ ಸಲುವಾಗಿ ಪರೋಕ್ಷವಾಗಿ ಈ ಮಹಿಷ ದಸರಾವನ್ನು ಮುನ್ನಲೆಗೆ ತಂದಿರುವುದನ್ನು ಜನರು ಗಮನಿಸುತ್ತಿದ್ದಾರೆ.
ಜಾತಿ ಮತಗಳನ್ನು ಮೀರಿ ನಾಡ ಹಬ್ಬ ದಸರಾ ಆಚರಣೆಯ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿನ ಹಿರಿಮೆ ಮತ್ತು ಗರಿಮೆಯ ಜೊತೆಗೆ ನಮ್ಮ ನಾಡಿಗೆ ಅಪಾರ ಕೊಡುಗೆಯನ್ನು ನೀಡಿರುವ ಮೈಸೂರಿನ ರಾಜಮನೆತನಕ್ಕೆ ಗೌರವವನ್ನು ಸಮರ್ಪಿಸಲು ಎಲ್ಲರೂ ಮಂದಾಗಿರುವ ಈ ಸಂಧರ್ಭದಲ್ಲಿ, ದಲಿತ ಸಂಘಟನೆಗಳಿಗೆ ಪರೋಕ್ಷ ಬೆಂಬಲವನ್ನು ನೀಡಿ ಮಹಿಷ ದಸರ ಎಂಬ ವಿಕೃತ ಆಚರಣೆಯನ್ನು ಮುನ್ನಲೆಗೆ ತಂದು ಅದಕ್ಕೊಂದು ಜಾತಿ ಬಣ್ಣ ಕಟ್ಟಿ ಆದರ ಮೂಲಕ ಮೂಲ ನಿವಾಸಿಗಳು ಮತ್ತು ಹೊರಗಿನಿಂದ ಬಂದ ಆರ್ಯರು ಎಂದು ಭಾರತೀಯರನ್ನು ಒಡೆಯಲು ಅಂದು ಬ್ರಿಟೀಷರು ಹೆಣೆದ ಕಾಗಕ್ಕಾ ಗುಬ್ಬಕ್ಕಾ ಕಥೆಯನ್ನೇ ಮತ್ತಷ್ಟು ಮುಂದೆವರೆಸಿಕೊಂಡು ಈ ಕಾಂಗ್ರೇಸ್ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದನ್ನು ಆರಂಭದಲ್ಲೇ ಚಿವುಟಿ ಹಾಕದೇ ಹೊದಲ್ಲಿ, ಭಾರತದ ಅಖಂಡತೆಗೆ ಖಂಡಿತವಾಗಿಯೂ ಮಗ್ಗುಲಮುಳ್ಳಾಗುವುದರಲ್ಲಿ ಸಂದೇಹವೇ ಇಲ್ಲವಾಗಿದೆ.
ಚಾಮುಂಡಿ ಬೆಟ್ಟದಲ್ಲಿ ಯಾವುದೇ ಕಾರಣಕ್ಕೂ ಮಹಿಷ ದಸರಾ ಆಚರಣೆಗೆ ಅವಕಾಶ ನೀಡಬಾರದು, ಅವರು ಮಹಿಷ ದಸರಾ ಆಚರಣೆ ಮಾಡಿದರೆ, ನಾವು ಚಾಮುಂಡಿ ಚಲೋ ಮಾಡಬೇಕಾಗುತ್ತದೆ. ಮಹಿಷ ಭಕ್ತರ ಕೈ ಮೇಲಾಗುತ್ತದೋ, ಚಾಮುಂಡಿ ಭಕ್ತರ ಕೈ ಮೇಲಾಗುತ್ತದೋ ನೋಡಿಯೇ ಬಿಡೋಣ ಎಂದು ಮಹಿಷ ದಸರಾ ಆಚರಣಾ ಸಮಿತಿಗೆ ಮಾಜಿ ಸಾಂಸದ ಪ್ರತಾಪ್ ಸಿಂಹ ಅವರು ಸವಾಲು ಹಾಕುವ ಮೂಲಕ ವಿಕೃತ ಮಹಿಷ ದಸರಕ್ಕೆ ತೀವ್ರವಾದ ಪ್ರತಿಭಟನೆ ಮಾಡುತ್ತಿರುವುದು ಸ್ವಾಗತಾರ್ಹವಾಗಿದ್ದು ಇತಿಹಾಸ ಪ್ರಸಿದ್ಧ ನಾಡ ಹಬ್ಬ ದಸರಾ ಸಂಧರ್ಭದಲ್ಲಿ ಈ ರೀತಿಯ ಸಂಘರ್ಷಗಳು ಬೇಕಿತ್ತೇ? ಎಂದು ಸಕಲ ಸನಾತಿಗಳು ಕೇಳುತ್ತಿರುವುದರಲ್ಲೂ ಸತ್ಯ ಇದೆ ಎಂದೆನಿಸುತ್ತಿದೆ.
ಜಾತ್ಯತೀತತೆಯ ಹೆಸರಿನಲ್ಲಿ ಕಣ್ಣಿದ್ದೂ ಕುರುಡರಂತೆ ನಟಿಸುವುದು ಹಿಂದೂಗಳ ಸ್ವಾಭಿಮಾನವನ್ನು ಕತ್ತುಹಿಸುಕಿದಂತೆ. ಪರಿಸ್ಥಿತಿ ಇದೇ ರೀತಿ ಮುಂದುವರೆಯುತ್ತಾ ಹೋದಲ್ಲಿ ಅದು ಸದ್ದಿಲ್ಲದ ಮತಾಂತರಕ್ಕೆ ಕಾರಣವಾಗುತ್ತದೆ. ಮತಾಂತರವೇ ದೇಶಾಂತರದ ಮೊದಲ ಹೆಜ್ಜೆ, ಒಬ್ಬ ಹಿಂದೂ ಮತಾಂತರವಾದಲ್ಲಿ ಒಂದು ಹಿಂದುವಿನ ಸಂಖ್ಯೆ ಕಡಿಮೆಯಾಯಿತು ಎಂದು ಭಾವಿಸದೇ, ಒಬ್ಬ ಹಿಂದೂ ವಿರೋಧಿಯ ಸಂಖ್ಯೆ ಹೆಚ್ಚಾಯಿತು ಎಂದು ಅಂದು ಸ್ವಾಮೀ ವಿವೇಕಾನಂದರು ಹೇಳಿದ ಮಾತು ಇಂದು ಎಷ್ಟು ಪ್ರಸ್ತುತವಾಗುತ್ತಿದೆ. ಈ ರೀತಿಯಾಗಿ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿರುವ ಈ ಧಾರ್ಮಿಕ ಅನ್ಯಾಯವನ್ನು ನೋಡಿಯೂ ನೋಡದಂತೆ ಕೂರುವುದು ಸಹಿಷ್ಟುತೆಯಾಗಿರದೇ ಅದು ಬೇಜವಾಬ್ಧಾರಿ ಭಂಢತನ ಮತ್ತು ಇನ್ನೂ ಕಠಿಣವಾಗಿ ಹೇಳಬೇಕೆಂದರೆ ಷಂಡತನ ಎಂದರೂ ತಪ್ಪಾಗದು. ಆಪತ್ಕಾಲದಲ್ಲಿ ಶಸ್ತ್ರತ್ಯಾಗಮಾಡಬೇಕು ಎಂದು ನಮ್ಮ ಯಾವ ಶಾಸ್ತ್ರದಲ್ಲೂ ಹೇಳಿಲ್ಲ. ಸ್ನೇಹಕ್ಕೆ ಬದ್ಧ, ಸಮರಕ್ಕೆ ಸಿದ್ದ ಎಂಬುದೇ ನಮ್ಮ ಮಂತ್ರವಾಗಿದ್ದು, ಧರ್ಮಸಂಸ್ಥಾಪನೆಗಾಗಿ ಆವಶ್ಯಕತೆ ಇದ್ದಾಗ ಶಸ್ತ್ರದಿಂದಲೇ ಶಾಂತಿ ಸ್ಥಾಪನೆ ಮಾಡಿದ ಪರಶುರಾಮ ದೇವರ ಪೀಳಿಗೆಯವರು ನಾವೆಂದು ಮರೆಯದಿರೋಣ.
ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದಲ್ಲಿ, ಮುಸ್ಲಿಮರ ಆಸ್ತಿಪಾಸ್ತಿಗಳ ಸಂರಕ್ಷಣೆಗಾಗಿ ವಕ್ಫ್ ಬೋರ್ಡ್ ಇರುವಂತೆ ಹಿಂದೂಗಳ ಧಾರ್ಮಿಕ ಸಂಪತ್ತಿನ ರಕ್ಷಣೆಗಾಗಿ ಸನಾತನ ಧರ್ಮ ರಕ್ಷಣಾ ಮಂಡಳಿಯ ಅವಶ್ಯಕತೆಯಿದೆ ಎಂದು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿಗಳಾದ ಪವನ್ ಕಲ್ಯಾಣ್ ಆವರ ಬೇಡಿಕೆ ಸದ್ಯದ ಪರಿಸ್ಥಿತಿಯಲ್ಲಿ ಸೂಕ್ತವಾಗಿದೆ ಎಂದೆನಿಸುತ್ತಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ