ಮಾಸ್ಟರ್ ಆನಂದ್

anand4ಹಿಂದಿನ ಸಂಚಿಕೆಯಲ್ಲಿ ಕನ್ನಡದ ಹೆಸರಾಂತ ಬಾಲ ನಟ ಮಾಸ್ಟರ್ ಮಂಜುನಾಥ್ ಆವರ ಬಗ್ಗೆ ತಿಳಿದುಕೊಂಡಿದ್ದೆವು. ತಮ್ಮ ವಿದ್ಯಾಭ್ಯಾಸದ ಸಲುವಾಗಿ ಮಂಜುನಾಥ್ ಚಿತ್ರರಂಗದಿಂದ ದೂರ ಹೋಗುತ್ತಿದ್ದಂತೆಯೇ ಕನ್ನಡ ಚಿತ್ರರಂಗದಲ್ಲಿ ಬಾಲ ನಟರ ಕೊರತೆ ತುಂಬುವವರು ಯಾರು? ಎಂದು ಎಲ್ಲರೂ ನೋಡುತ್ತಿರುವಾಗಲೇ ಕನ್ನಡ ಚಿತ್ರರಂಗಕ್ಕೆ ದೊರೆತ ಮತ್ತೊಂದು ಅನರ್ಘ್ಯ ರತ್ನವೇ ಮಾಸ್ಟರ್ ಆನಂದ್ ಎಂದರೂ ತಪ್ಪಾಗದು. ಅಂತಹ ಆನಂದ್ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ

ಮೂಲತಃ ಮೈಸೂರು ಮತ್ತು ಮಂಡ್ಯ ಮೂಲದವರಾದರೂ, ಬೆಂಗಳೂರಿನ PF Officeನಲ್ಲಿ ಕೆಲಸ ಮಾಡುತ್ತಿದ್ದ ವಿ.ಹರಿಹರನ್ ಮತ್ತು ಬಿ.ಎಸ್. ಲತಾ ಎಂಬ ಸಂಪ್ರದಾಯಸ್ಥ ದಂಪತಿಗೆ ಜನವರಿ 4, 1984 ರಂದು ಬೌರಿಂಗ್ ಅಸ್ಪತ್ರೆಯಲ್ಲಿ ಜನಿಸಿದ ಮಗು ನೋಡಲು ಮುದ್ದಾಗಿದ್ದ ಕಾರಣ ಹೆರಿಗೆ ಮಾಡಿಸಿದ ದಾದಿಯೇ ಒಳ್ಳೆ ಗುಲಾಬ್ ಜಾಮೂನ್ ತರಹಾ ಇದೇ ನೋಡಿ ನಿಮ್ಮ ಮಗು ಎಂದಿದ್ದರಂತೆ.  ಆನಂದ್ ಅವರ ತಂದೆಯವರೂ ಸಹಾ ಶಾಲಾ ಕಾಲೇಜು ದಿನಗಳಿಂದಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ರರಾಗಿದ್ದರಿಂದ ತಮ್ಮ ಮಗನಿಗೂ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದ್ದರಿಂದಲೇ ಆನಂದ್ ಅವರು ಅಂದಿನ ಕಾಲದಲ್ಲಿ ದೂರದರ್ಶನದಲ್ಲಿ ಬರುತ್ತಿದ್ದ ಚಿತ್ರಮಂಜರಿಯನ್ನು ಗಮನಿಸಿ ಅಲ್ಲಿ ಬರುತ್ತಿದ್ದ ನಾಯಕರ ಹಾವ ಭಾವಗಳನ್ನು ಅನುಸರಿಸುವ ಮೂಲಕ ಸಣ್ಣ ವಯಸ್ಸಿನಲ್ಲೇ ಅವರಲ್ಲಿದ್ದ ಪ್ರತಿಭೆಯನ್ನು ವ್ಯಕ್ತಪಡಿಸುತ್ತಿದ್ದರಂತೆ.

WhatsApp Image 2024-11-09 at 12.42.29ಆನಂದ್ ಅವರ ತಂದೆ ಕೇಂದ್ರ ಸರ್ಕಾರದ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರೂ, ಹವ್ಯಾಸಿ ಕಲಾವಿದರಾಗಿ ರಂಗಭೂಮಿ ಮತ್ತು ದೂರದರ್ಶನದ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಅದೊಮ್ಮೆ ಆನಂದ್ ಅವರ ತಾಯಿ ದೂರದರ್ಶನದಲ್ಲಿ ಒಂದಷ್ಟು ಮಕ್ಕಳನ್ನು ಕೂರಿಸಿಕೊಂಡು ಕಥೆ ಹೇಳುವಂತಹ  ತುತ್ತಿಗೊಂದು ಕಥೆ ಎಂಬ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವ ಆನಂದ್ ನಂತರ ಸಾಮ್ರಾಟ್ ಅಶೋಕನ ಕುರಿತಾದ  ಅಕ್ಷಯ ನಾಟಕ ಅಪ್ಪನೊಂದಿಗೆ ನಟಿಸುವ ಮೂಲಕ ಕಲಾ ಲೋಕಕ್ಕೆ ಪ್ರವೇಶಿಸುತ್ತಾರೆ.  1988ರಲ್ಲಿ  ಆನಂದ್ ಅವರಿಗೆ ಸುಮಾರು 4 ವರ್ಷ ವಯಸ್ಸಿನಲ್ಲಿರುವಾಗ ಕನಿಷ್ಕಾ ಹೋಟೆಲ್ಲಿನಲ್ಲಿ ತಂದೆಯವರ ಜೊತೆ ಹೋಗಿದ್ದು, ಅವರ ತಂದೆಯವರು ಯಾರನ್ನೋ ಕಾಯುತ್ತಿದ್ದಂತಹ ಸಂಧರ್ಭದಲ್ಲಿ ಪುಟ್ಟ ಬಾಲಕ ಒಂದು ಟೇಬಲ್ ನಿಂದ ಮತ್ತೊಂದು ಟೇಬಲ್ ಹಾರಾಡುತ್ತಿದ್ದದ್ದನ್ನು ಮತ್ತೊಂದು ಟೇಬಲ್ಲಿನಲ್ಲಿ  ಕುಳಿತಿದ್ದ ನಟ ಸಿಹಿಕಹಿ ಚಂದ್ರು ಮತ್ತು ಸಿನಿ ಪತ್ರಕರ್ತ ಶಣೈ  ಅವರು ನೋಡಿ ಮುದ್ದಾಗಿದ್ದ ಆ ಬಾಲಕನನ್ನು  ಕರೆದು ಮಾತಾನಾಡಿದಾಕ್ಷಣ ಆ ಮಗುವಿನಲ್ಲಿದ್ದ ವಯಸ್ಸಿಗೂ ಮೀರಿದ ಪ್ರತಿಭೆಯನ್ನು ಗಮನಿಸಿ ಅದೇ ಹೋಟೆಲ್ಲಿನ  ಕೊಠಡಿಯೊಂದರಲ್ಲಿ ರವಿಚಂದ್ರನ್ ಅವರ ಕಿಂದರ ಜೋಗಿ ಸಿನಿಮಾಕ್ಕಾಗಿ  ರೂಮ್ ಮಾಡಿರುವ ವಿಷಯವನ್ನು ತಿಳಿಸಿ ಅಲ್ಲಿಗೆ ಆನಂದ್ ಅವರನ್ನು ಕರೆದುಕೊಂಡು ಹೋಗಿ  ರವಿಚಂದ್ರನ್ ಮತ್ತು ಹಂಸಲೇಖ ಅವರ ಮುಂದೆ ಆ ಬಾಲಕ ಆನಂದ್ ನ ಪ್ರತಿಭೆಯನ್ನು ತೋರಿಸಿದ ಕೂಡಲೇ ಸಂತೋಷದಿಂದ ಮೈಸೂರಿನಲ್ಲಿ ನಡೆಯುತ್ತಿದ್ದ ಕಿಂದರಜೋಗಿ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಪ್ರಥಮಬಾರಿಗೆ ನಟಿಸಲು ಅವಕಾಶ ನೀಡುವ ಮೂಲಕ ಆನಂದ್ ಚಿತ್ರರಂಗಕ್ಕೆ ಪಾದಾರ್ಪಣ ಮಾಡುತ್ತಾರೆ.

WhatsApp Image 2024-11-09 at 12.45.06ಕುತೂಹಲಕಾರಿಯಾದ ವಿಷವೇನೆಂದರೆ, ಮಾಸ್ಟರ್ ಮಂಜುನಾಥ್ ಅವರಿಗೆ ರವಿಚಂದ್ರನ್ ಅವರ ಕಿಂದರ ಜೋಗಿ ಮತ್ತು ವಿಷ್ಣುವರ್ಧನ್ ಅಭಿನಯದ ಶಿವಶಂಕರ್ ಕಡೆಯ ಎರಡು ಸಿನಿಮಾಗಳಾದರೆ, ಅದೇ ಎರಡು ಸಿನಿಮಾಗಳ ಮೂಲಕವೇ ಮಾಸ್ಟರ್ ಆನಂದ್ ಸಿನಿಮಾಕ್ಕೆ ಪಾದಾರ್ಪಣೆ ಮಾಡುತ್ತಾರೆ. ಆನಂದ್ ಮೂರನೇ ಸಿನಿಮಾವೂ ಸಹಾ ವಿಷ್ಣುವರ್ಧನ್ ಅವರ ಮಹತ್ತರ ಚತ್ರ ಮುತ್ತಿನಹಾರದಲ್ಲಿ ಅವರ ಮಗನಾಗಿ ನಟಿಸಿ ಎಲ್ಲರ ಮೆಚ್ಚಿಗೆಗಳಿಸಿದ ನಂತರ ಫಣಿ ರಾಮಚಂದ್ರರ ಗೌರಿ ಗಣೇಶದಲ್ಲಿ ದೊರೆತ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಆನಂದ್ ಆ ಚಿತ್ರದಲ್ಲಿ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರನ್ನು ಅನುಕರಿಸುತ್ತಾ, ಪಟ ಪಟನೇ ಅರಳು ಹುರಿದಂತೆ ಮಾತನಾಡುತ್ತಾ, ಹಿರಿಯ ನಟರುಗಳಾದ ಅನಂತ್ ನಾಗ್, ಸಿಹಿ ಕಹಿ ಚಂದ್ರು, ರಮೇಶ್ ಭಟ್, ಮುಖ್ಯಮಂತ್ರಿ ಚಂದ್ರು, ವೈಶಾಲಿ ಕಾಸರವಳ್ಳಿ ಮತ್ತು ವಿನಯ ಪ್ರಸಾದ್ ಅವರ ಸರಿಸಾಟಿಯಾಗಿ ನಟಿಸಿ ಸೈ ಎನಿಸಿಕೊಂಡ ನಂತರ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

anand11988 ರಿಂದ 1999ರ ನಡುವೆ ಬಾಲ ಕಲಾವಿದರಾಗಿ ಸುಮಾರು 10 ವರ್ಷಗಳಲ್ಲಿ ಆನಂದ್ ಎರಡು ಬಾರಿ ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿ, ಫಿಲ್ಮ್‌ಫೇರ್ ಮತ್ತು ಅಂತರರಾಷ್ಟ್ರೀಯ ಮನ್ನಣೆಗಳನ್ನು ಗಳಿಸಿದ ಸುಮಾರು 40+ ಸಿನಿಮಾಗಳಲ್ಲಿ ನಟಿಸಿದ ಮಾಸ್ಟರ್ ಆನಂದ್ ಚಿತ್ರ ರಂಗದಂತೆ ಓದಿನಲ್ಲಿ ಅತ್ಯಂತ ಚುರುಕಾಗಿದ್ದರು. ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಆವರ ತಾಯಿಯವರು  ಅಡಿಯೋ ಕ್ಯಾಸೆಟ್ಟುಗಳಲ್ಲಿ  ಪಾಠವನ್ನು ರೆಕಾರ್ಡ್ ಮಾಡಿ ಕಳುಹಿಸುತ್ತಿದ್ದರೆ, ಚಿತ್ರೀಕರಣದ ಬಿಡುವಿನ ಸಮಯದಲ್ಲಿ ಅದನ್ನೆಲ್ಲಾ ಕೇಳಿಕೊಂದು ಶಾಲೆಯ ಪರೀಕ್ಷೆಗಳಲ್ಲಿ 1-3 ರ್ಯಾಂಕ್ ಗಳಿಸುವಷ್ಟರ ಮಟ್ಟಿಗಿನ ಬುದ್ದಿವಂತರಾಗಿದ್ದರು.

WhatsApp Image 2024-11-09 at 12.45.33 9ನೇ ತರಗತಿಯವರೆಗೂ ಬಾಲ ನಟನಾಗಿ ಕನ್ನಡದ ಬಹುತೇಕ ಎಲ್ಲಾ ಕಲಾವಿದರುಗಳೊಂದಿಗೆ ಅಭಿನಯಿಸಿದ ಆನಂದ್ ನಂತರ ಓದಿನ ಕಡೆ ಗಮನ ಹರಿಸಿ 10ನೇ ತರಗತಿಯಲ್ಲಿ ಡಿಸ್ಟಿಂಕ್ಷನ್ ಗಳಿಸಿ ಶೇಷಾದ್ರಿಪುರದ ಕಾಲೇಜಿನಲ್ಲಿ ಪಿಯೂಸಿಗೆ ಸೇರಿದ ಸಂಧರ್ಭದಲ್ಲಿಯೇ 2001ರಲ್ಲಿ  ಹದಿ ಹರೆಯದ ಹುಡುಗರೇ ನಾಯಕರಾಗಿರುವ  ಚಿತ್ರ ಎಂಬ ಸಿನಿಮಾ ಮತ್ತು 2002ರಲ್ಲಿ ಅವರ  ಆಪ್ತ ಗೆಳೆಯರೇ ಸೇರಿಕೊಂಡು ಮಾಡಿದ ಸಿನಿಮಾ ಫ್ರೆಂಡ್ಸ್ ನಲ್ಲಿ ನಟಿಸುವ ಅವಕಾಶ ದೊರೆತದ್ದನ್ನು ಬಳಸಿಕೊಂಡ  ಮಾಸ್ಟರ್ ಆನಂದ್, ಮಿಸ್ಟರ್ ಆನಂದ್ ಆಗಲು ಪ್ರಯತ್ನಿಸಿದರಾದರೂ, ಆನಂದ್ ಎಷ್ಟೇ ದೊಡ್ಡವನಾದರೂ, ಜನರ  ಮನಸ್ಸಿನಲ್ಲಿ ಮಾಸ್ಟರ್ ಆಗಿಯೇ ಉಳಿದು ಹೋದ ಕಾರಣ ನಾಯಕ ಪಾತ್ರಕ್ಕಿಂತಲೂ ಹಾಸ್ಯ ಮತ್ತು ಪೋಷಕ ಪಾತ್ರಕ್ಕೆ ಸೀಮಿತಗೊಂಡಿದ್ದು ನಿಜಕ್ಕೂ ವಿಪರ್ಯಸವೇ ಸರಿ.

WhatsApp Image 2024-11-09 at 12.43.03ಮುಂದೆ ಆನಂದ್ ಕನ್ನಡದಲ್ಲಿ ವರನಟ ರಾಜಕುಮಾರ್ ಅವರನ್ನು ಹೊರತು ಪಡಿಸಿ ಬಹುತೇಕ ಖ್ಯಾತ  ನಟ ನಟಿಯಾರೊಡನೆ ಸುಮಾರು 60 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಟಿಸಿದ್ದರೆ, ತಮಿಳಿನಲ್ಲಿ ಶಿವಾಜಿ ಗಣೇಶನ್, ತೆಲುಗಿನಲ್ಲಿ  ರಾಜೇಂದ್ರ ಪ್ರಸಾದ್ ಮತ್ತು ಮಲಯಾಳಂನಲ್ಲಿ ಜಯರಾಮ್ ಮತ್ತು ಹಿಂದಿಯಲ್ಲಿ ಮರಾಠಿ ನಟಿ ಅಶ್ವಿನಿ ಭರೆ ಝೋಟೇ ಅವರ ಜೊತೆಯಲ್ಲಿ ನಟಿಸಿದರು

WhatsApp Image 2024-11-09 at 12.44.03ಕಡೆಗೆ ನಟನೆಯಲ್ಲಿ ಏಕತಾನತೆ ಕಂಡು ಬರುತ್ತಿದ್ದ ಕಾರಣ ಚಿಕ್ಕ ವಯಸ್ಸಿನಿಂದಲೂ ನಟನೆಯ ಜೊತೆ ವಿವಿಧ ಖ್ಯಾತ ತಂತ್ರಜ್ಞರು ಮತ್ತು ನಿರ್ದೇಶಕರ ಜೊತೆ  ಕ್ಯಾಮೆರಾ, ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನಗಳ ಕುರಿತಾಗಿ ಸೂಕ್ಶ್ಮವಾಗಿ ಗಮನಿಸುತ್ತಿದ್ದ ಆನಂದ್, ತಮ್ಮ ಗೆಳೆಯರನ್ನೆಲ್ಲಾ ಸೇರಿಸಿಕೊಂಡು 2008ರಲ್ಲಿ ಎಸ್‌ಎಸ್‌ಎಲ್‌ಸಿ ನನ್ ಮಕ್ಳು ಎಂಬ  ಹಾಸ್ಯ ಧಾರಾವಾಹಿಯನ್ನು ನಿರ್ದೇಶಿಸಿ ಅದು  ಸ್ಟಾರ್ ಸುವರ್ಣ ಛಾನೆಲ್ಲಿನಲ್ಲಿ ಪ್ರಸಾರವಾಗಿ ಯುವ ಜನರಲ್ಲಿ ಟ್ರೆಂಡ್‌ ಸೆಟರ್ ಆಗಿ ಅತ್ಯಂತ ಜನಪ್ರಿಯವಾದ ನಂತರ ಮತ್ತೆ ಸ್ಟಾರ್ ಸುವರ್ಣದಲ್ಲಿಯೇ ರೋಬೋ ಫ್ಯಾಮಿಲಿ ಎಂಬ ಮತ್ತೊಂದು ಹಾಸ್ಯ ಧಾರಾವಾಹಿ ನಿರ್ದೇಶಿಸಿದ ನಂತರ  ಕಲರ್ಸ್ ಕನ್ನಡಕ್ಕಾಗಿ ಪಡುವಾರಳ್ಳಿ  ಪಡ್ಡೆಗಳು ನಿರ್ದೇಶಿಸಿ ಕೇವಲ ಹಾಸ್ಯ ಧಾರಾವಾಹಿಗಳಿಗೇ ಬ್ರಾಂಡ್ ಅಗುತ್ತಿದ್ದಾರೆ ಎಂದು  ಜನರು ಮಾತನಾಡಿಕೊಳ್ಳುತ್ತಿದ್ದಂತೆಯೇ,  ಜೀ ಕನ್ನಡಕ್ಕಾಗಿ ತಮ್ಮ ಅರುಣ್ ನೊಂದಿಗೆ ನಿಗೂಡ ರಾತ್ರಿ ಎಂಬ ನಿಗೂಢ ಕತೆಯ  ವಿಭಿನ್ನ ಶೈಲಿಯ ಧಾರಾವಾಹಿ  ಅಧ್ಭುತವಾದ ಯಶಸ್ಸನ್ನು ಕಂಡಿತು.

ದೈವದತ್ತವಾಗಿ ಬಹುಮುಖ ಪ್ರತಿಭೆಯ ಖನಿಯಾಗಿದ್ದ ಆನಂದ್ ಕೇವಲ ನಟನೆ ಮತ್ತು ನಿರ್ದೇಶನಕ್ಕೆ ಮಾತ್ರವೇ ತಮ್ಮನ್ನು ತಾವು ಸೀಮಿತಗೊಳಿಸದೇ, ಕಿರುತರೆಯಲ್ಲಿ ಆಗತಾನೇ ಸದ್ದು ಮಾಡುತ್ತಿದ್ದ ಅನೇಕ ರಿಯಾಲಿಟಿ ಶೋಗಳತ್ತ ಮುಖ ಮಾಡಿ ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

  • 2014 ರಲ್ಲಿ ಕಲರ್ಸ್ ಕನ್ನಡದಲ್ಲಿ ಡ್ಯಾನ್ಸಿಂಗ್ ಸ್ಟಾರ್ ಸೀಸನ್-2 ನಲ್ಲಿ  ವಿಜೇತರಾಗಿ ಹೊರಹೊಮ್ಮುವ ಮೂಲಕ ನೃತ್ಯಗಾರರಾಗಿಯೂ ಹೆಸರುವಾಸಿಯಾದರು.
  • 2015 ರಲ್ಲಿ ದೇಶದ ಬಹು ಭಾಷೆಗಳಲ್ಲಿ  ಅತ್ಯಂತ ಜನಪ್ರಿಯ ಕಾರ್ಯಕ್ರಮ ಎಂದೇ ಪ್ರಖ್ಯಾತವಾಗಿರುವ ಬಿಗ್ ಬಾಸ್ ಕನ್ನಡದ ಸೀಸನ್-3ರಲ್ಲಿ ಭಾಗವಹಿಸಿ  ಕೇವಲ ಹಾಸ್ಯ ಮತ್ತು ಆಟವಷ್ಟೇ ಅಲ್ಲದೇ ತನ್ನ ಸನ್ನಡೆತೆಯಿಂದ  ಅಂತಿಮ ಮೂರು ಅಭ್ಯರ್ಥಿಗಳಲ್ಲಿ ಒಬ್ಬರಾಗಿ  2 ನೇ ರನ್ನರಪ್ ಆಗಿ ಹೊರಹೊಮ್ಮಿದರು.
  • ಇದರ ಮಧ್ಯೆ ಸುಮಾರು ಎರಡು ವರ್ಷಗಳ ಕಾಲ FM Radio ರೇಡಿಯೊ ಮಿರ್ಚಿಯ ಸೆಲೆಬ್ರಿಟಿ ಆರ್‌ಜೆ ಆಗಿ Tamashe factory by master anand  ಎಂಬ ವಾರಾಂತ್ಯದ ಕಾರ್ಯಕ್ರಮದ ಮೂಲಕ ಎಲ್ಲರ ಮನ ಮತ್ತು ಮನೆಗಳಲ್ಲಿ ಆವರಿಸಿಕೊಂಡರು.
  • 2016 ರಲ್ಲಿ ಆನಂದ್ ಅವರ ವೃತ್ತಿಜೀವನದಲ್ಲಿ ಬಹಳ ವಿಶೇಷವಾದ ತೀರ್ಮಾನವನ್ನು ತೆಗೆದುಕೊಂಡು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ  ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ನಿರೂಪಣೆ ಮಾಡುವ ಜವಾಬ್ಧಾರಿಯನ್ನು ತೆಗೆದುಕೊಂಡರು.

anand2ಬಾಲ ನಟನಾಗಿ ಸಿನಿಮಾರಂಗವನ್ನು ಪ್ರವೇಶಿಸಿ ಅತ್ಯಂತ ಪ್ರಖ್ಯಾತವಾಗಿದ್ದ ಮಾಸ್ಟರ್ ಆನಂದ್ ಹೊರತಾಗಿ  ಆ ಸಣ್ಣ ಮಕ್ಕಳ ಮನಸ್ಥಿತಿಯನ್ನು ಅರಿತು ಅವರಿಗೆ ಸೂಕ್ತವಾದ ವೇದಿಕೆಯನ್ನು ಒದಗಿಸಿ ಅವರಲ್ಲಿದ್ದ ಪ್ರತಿಭೆಯನ್ನು ಹೊರತರಲು ಮತ್ತಾರಿಂದಲೂ ಸಾಧ್ಯ ಇಲ್ಲವೇನೂ ಎಂದಿನಿಸಿದ್ದಂತೂ ಸುಳ್ಳಲ್ಲಾ. ನಂತರ ಕಾಮಿಡಿ ಕಿಲಾಡಿಗಳಲ್ಲಿಯೂ ನಿರೂಪಣೆಯನ್ನು   ಇಂದಿನ ವರೆಗೂ ಮುಂದುವರೆಸಿಕೊಂಡು ಆ ಕಾರ್ಯಕ್ರಮ  ಯಶಸ್ವಿಯಾಗುವುದರಲ್ಲಿ ಆನಂದ್ ಅವರ ಪಾತ್ರವೂ ಅತ್ಯಂತ  ಗಮನಾರ್ಹವಾಗಿರುವುದು ವಿಶೇಷವಾಗಿದೆ.

ತಮ್ಮ ಮನೋಜ್ಞ ಅಭಿನಯಕ್ಕಾಗಿ ಈ ಕೆಳಕಂಡ ಪ್ರಶಸ್ತಿಗಳನ್ನು ಗಳಿಸಿರುವುದು ಅಭಿನಂದನಾರ್ಹವಾಗಿದೆ.

  • ಕರ್ನಾಟಕ ರಾಜ್ಯ ಪ್ರಶಸ್ತಿ: ಅತ್ಯುತ್ತಮ ಬಾಲ ಕಲಾವಿದ (ಗೌರಿ ಗಣೇಶ – 1991–92)
  • ಕರ್ನಾಟಕ ರಾಜ್ಯ ಪ್ರಶಸ್ತಿ: ಅತ್ಯುತ್ತಮ ಬಾಲ ಕಲಾವಿದ (ತಾಯಿ ಇಲ್ಲದವರು – 1994–95)
  • ಫಿಲ್ಮ್‌ಫೇರ್ ಪ್ರಶಸ್ತಿ : ಅತ್ಯುತ್ತಮ ಬಾಲ ಕಲಾವಿದ (ಮಕ್ಕಳ ಸಾಕ್ಷಿ 1995–96)

anand_familyಇವೆಲ್ಲದರ ನಡುವೆ 2010ರಲ್ಲಿ ಯಶಸ್ವಿನಿ ಎಂಬುವವರನ್ನು ನಂಜನಗೂಡಿನ ನಂಜುಡೇಶ್ವರನ ಸನ್ನಿಧಾನದಲ್ಲಿ ವಿವಾಹವಾದ ಆನಂದ್, ಅವರಿಬ್ಬರ ಸುಂದರ ದಾಂಪತ್ಯದ ಕುರುಹಾಗಿ ಕೃಷ್ಣ ಚೈತನ್ಯ ಮತ್ತು ವಂಶಿಕಾ ಅಂಜನಿ ಕಶ್ಯಪ ಎಂಬ ಮುದ್ದಾದಾ ಕೀರುಗಿಗೊಬ್ಬ ಮಗ ಮತ್ತು ಆರತಿಗೊಬ್ಬಳು ಮಗಳು ಇದ್ದಾಳೆ. ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಹುಟ್ಟುತ್ತದೆ ಎಂಬ ಗಾದೆ ಮಾತಿನಂತೆ ಮಗ ಕೃಷ್ಣ ಚೈತನ್ಯ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮದ ಕೆಲವು ಕಂತುಗಳಲ್ಲಿ ಕಾಣಿಸಿಕೊಂಡರೆ, ಮಗಳು ವಂಶಿಕಾ ಅಂಜನಿ ಕಶ್ಯಪ ತನ್ನ ತಾಯಿ ಯಶಸ್ವಿನಿ ಆನಂದ್ ಜೊತೆಯಲ್ಲಿ ಮೊದಲ ಬಾರಿಗೆ ನಮ್ಮಮ್ಮ ಸೂಪರ್ ಸ್ಟಾರ್ ನಲ್ಲಿ ಕಾಣಿಸಿಕೊಂಡ ನಂತರ ಮಾಸ್ಟರ್ ಆನಂದ್ ಅವರನ್ನೂ ಒಂದು ಹೆಜ್ಜೆ ಮೀರಿಸಿದ್ದಾಳೆ ಎಂದರೂ ತಪ್ಪಿಲ್ಲ. ಹೆಸರಿಗಷ್ಟೇ ನಮ್ಮಮ್ಮ ಸೂಪರ್ ಸ್ಟಾರ್ ಎನಿಸಿಕೊಂಡರೂ, ಆ ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ ಆಗಿ  ವಂಶಿಕ ಹೊರಹೊಮ್ಮಿದ್ದಂತೂ ಸುಳ್ಳಲ್ಲಾ.

WhatsApp Image 2024-11-09 at 12.44.31ನಂತರ ಇನ್ನೂ ಹತ್ತು ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಿಹಿಸಿದ್ದಲ್ಲದೇ, ಮತ್ತೊಬ್ಬ ಹೆಸರಾಂತ ನಿರೂಪಕ ನಿರಂಜನ್ ದೇಶ್ ಪಾಂಡೆಯ ಜೊತೆ ಸಹ ನಿರೂಪಕಿಯಾಗಿಯೂ ಸೈ  ಎನಿಸಿಕೊಂಡಿದ್ದಾಳೆ.   ಇವೆಲ್ಲದರ ಮಧ್ಯೆ ತನ್ನ ಚಿಕ್ಕಪ್ಪ ಅರುಣ್  ಮತ್ತು ಚಿಕ್ಕಮ್ಮನೊಡನೆ ಅನೇಕ ರೀಲ್ಸ್ ಮತ್ತು ಅರುಣ್ ಅವರ ನಿರ್ದೇಶನದ ಹತ್ತು ಹಲವಾರು ಹಾಸ್ಯ ಕಾರ್ಯಕ್ರಮಗಳಲ್ಲಿ  ನಟಿಸುವ ಮೂಲಕ ಎಲ್ಲರ ಮನೆ ಮಾತಾಗಿದ್ದಾಳೆ. ವಯಸ್ಸಿಗೆ ಮೀರಿದ ಪ್ರತಿಭೆ ಮತ್ತು ಚುರುಕುತನವನ್ನು ಹೊಂದಿರುವ ಆಕೆಯನ್ನು ಶಾಲೆಗೆ ಕಳುಹಿಸದೇ, ಅವಳನ್ನು  ಈ ರೀತಿಯಾಗಿ ದುಡ್ಡು ಮಾಡಲು ಆನಂದ್ ದಂಪತಿಗಳು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಬಂದ ನಂತರ ಅದಕ್ಕೆ ಸೂಕ್ತವಾದ  ಸಮಾಜಾಯಿಷಿಯನ್ನು ನೀಡಿದ ಆನಂದ್ ನಂತರದ ದಿನಗಳಲ್ಲಿ ವಂಶಿಕಾ ಸಾರ್ವಜನಿಕವಾಗಿ ಯಾವುದೇ ವಾಹಿನಿಗಳಲ್ಲಿ ಕಾಣಿಸಿಕೊಳ್ಳದೇ ಇರುವುದು ನಿಜಕ್ಕೂ ಬೇಸರ ಸಂಗತಿಯಾಗಿದೆ.

WhatsApp Image 2024-11-09 at 12.40.03ನಾಡು, ನುಡಿ, ನಡೆ ಮತ್ತು ಸಂಸ್ಕಾರದ ಜೊತೆಗೆ ಸನಾತನ ಧರ್ಮದ ಬಗ್ಗೆ ಅತೀವ ಕಾಳಜಿಯನ್ನು ಹೊಂದಿರುವ ಆನಂದ್ ಸಾಧ್ಯವಾದ ಕಡೆಯಲೆಲ್ಲಾ ಅದನ್ನು ಬಹಿರಂಗವಾಗಿಯೇ ಪ್ರದರ್ಶನ ಮಾಡುತ್ತಿರುತ್ತಾರೆ, ಗೌರಿ ಗದ್ದೆ ವಿನಯ್ ಗುರೂಜಿ ಅವಧೂತರನ್ನು ಅಪಾರವಾಗಿ ನಂಬುವ ಆನಂದ್,  ಭಗವದ್ಗೀತೆ ಮತ್ತು ವೇದಾಧ್ಯಯನವನ್ನು ಸಹಾ ಮಾಡಿರುವುದಲ್ಲದೇ ಆದಾಗಲೆಲ್ಲಾ ದೇವಾಲಯಗಳಿಗೆ ಹೋಗಿ ತಮ್ಮ ಕೈಲಾದ ಸೇವೆಯನ್ನು ಮಾಡಿರುವ ಉದಾಹರಣೆಗಳೂ ಇವೆ. ತಮ್ಮ ಮಕ್ಕಳು ಎಲ್ಲರಂತೆ ಡಾಕ್ಟರ್ ಇಂಜೀನಿಯರ್, ಲಾಯರ್ ಚಾರ್ಟಡ್ ಅಕೌಂಟೆಂಟ್ ಆಗ ಬೇಕು ಎಂದೇ ಬಹಸುವ ಇಂದಿನ ಕಾಲದಲ್ಲಿ ಆನಂದ್ ಅವರ ಮಗನನ್ನು ಹರಿಹರ ಪುರದ ಪ್ರಭೋಧಿನಿ ಗುರುಕುಲದಲ್ಲಿ ಶಿಕ್ಷಣ ಕೊಡಿಸುತ್ತಿರುವ ಮೂಲಕ ಎಲ್ಲಾ ಹಿಂದೂಗಳಿಗೆ ಮಾದರಿ ಆಗಿದ್ದಾರೆ ಎಂದರೂ ತಪ್ಪಾಗದು.

WhatsApp Image 2024-11-09 at 12.39.32ಮಾಸ್ಟರ್ ಆನಂದ್ ಅವರ ತಂದೆ ತಾಯಿಯರು, ತಮ್ಮ ಅರುಣ್, ಮಡದಿ ಯಶಸ್ವಿನಿ ಮತ್ತವರ ಮಕ್ಕಳು ಹೀಗೇ  ಕುಟುಂಬವಿಡೀ ಕಲಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ನಮ್ಮ ಕನ್ನಡ ನಾಡಿನ ಕೀರ್ತಿಪತಾಕೆಯನ್ನು ಎಲ್ಲೆಡೆಯಲ್ಲಿಯೂ ಅಮೋಘವಾಗಿ ಪರರಿಸಿರುವ ಕಾರಣ, ನಿಸ್ಸಂದೇಹವಾಗಿ ಅವರು ನಮ್ಮ ಕನ್ನಡದ ಕಲಿಗಳೇ ಸರಿ

ಏನಂತೀರೀ?
ಸೃಷ್ಟಿಕರ್ತ ಉಮಾಸುತ

One thought on “ಮಾಸ್ಟರ್ ಆನಂದ್

  1. ಸರ್,

    ಸ್ಥಳೀಯರಿಗೆ ಕರ್ನಾಟಕದಲ್ಲಿ ಉದ್ಯೋಗವಕಾಶ ದ ಬಗ್ಗೆ blog ಇದೆಯಾ??

    Like

Leave a reply to M Raghavendra Cancel reply