ಕನ್ನಡದ ಶರ್ಲಾಕ್ ಹೋಮ್ಸ್ ಎನ್. ನರಸಿಂಹಯ್ಯ

ಪತ್ತೆದಾರಿ ಎಂದು ಮನಸ್ಸಿನಲ್ಲಿ ಮೂಡುತ್ತಿದ್ದಂತೆಯೇ ಥಟ್ ಎಂದು ಹೊಳೆಯುವುದೇ ಪ್ರಸಿದ್ಧ ಪತ್ತೆದಾರ ಶರ್ಲಾಕ್ ಹೋಮ್ಸ್ ಎಂದರೂ ತಪ್ಪಾಗದು. ಆರ್ಥರ್ ಕಾನನ್ ಡಾಯ್ಲ್ ಎಂಬ ಆಂಗ್ಲ ಲೇಖಕ  ಷರ್ಲಾಕ್ ಹೋಮ್ಸ್ ಒಳಗೊಂಡ ಸುಮಾರು 56 ಸಣ್ಣ ಕಥೆಗಳು ಮತ್ತು ನಾಲ್ಕು ಕಾದಂಬರಿಗಳನ್ನು ಬರೆದಿದ್ದರೆ, ಪತ್ತೇದಾರ ಪುರುಷೋತ್ತಮ ಎಂಬ ಪುಸ್ತಕದಿಂದ ಆರಂಭಿಸಿ ಸುಮಾರು 550ಕ್ಕೂ ಹೆಚ್ಚಿನ ಪತ್ತೇದಾರಿ ಕಥೆ ಕಾದಂಬರಿಗಳನ್ನು ಬರೆದಿರುವ ಜನಪ್ರಿಯ ಲೇಖಕರಾದ ಶ್ರೀ ಎನ್.ನರಸಿಂಹಯ್ಯನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ.

nar3ಸ್ವತಃ ಅಶುಕವಿಗಳಾಗಿದ್ದಂತಹ ಚಿತ್ರದುರ್ಗ ಮೂಲದ ಶ್ರೀ ಸಿ.ನಂಜಪ್ಪನವರು ಮತ್ತು ಚಿಕ್ಕಮಗಳೂರು ಮೂಲದ ಯಲ್ಲಮ್ಮ ದಂಪತಿಗಳ ಪುತ್ರರಾಗಿ 1925ರ ಸೆಪ್ಟೆಂಬರ್ 18ರಂದು ಬೆಂಗಳೂರಿನಲ್ಲಿ  ಎನ್. ನರಸಿಂಹಯ್ಯನವವರ ಜನನವಾಗುತ್ತದೆ. ಅದಾಗಲೇ ಜನಪದ ಕವಿ ಎಂದು ಗುರುತಿಸಿಕೊಂಡಿದ್ದ  ಅವರ ತಂದೆಯವರು ಬ್ರಿಟಿಷರ ಬಗ್ಗೆ ಲಾವಣಿ ಕಟ್ಟಿ ಹಾಡಿದಾಗ ಇವರ ಕಾವ್ಯ ಶಕ್ತಿಗೆ ಮೆಚ್ಚಿದ ಬ್ರಿಟಿಷರು, ದುರ್ಗದ ವಂಶಸ್ಥರೆಂದು ಗೌರವಿಸಿ ಇವರಿಗೆ ಭೂಮಿ ಮಂಜೂರು ಮಾಡಿದ್ದರೂ, ಇಡೀ ಕುಟುಂಬ ಬೆಂಗಳೂರಿನಲ್ಲಿದ್ದು, ನರಸಿಂಹಯ್ಯನವರು 4ನೇ ತರಗತಿಯಲ್ಲಿ ಓದುತ್ತಿರುವಾಗ, 1936ರಲ್ಲಿ ಅವರ ತಂದೆಯವರ  ಅಕಾಲಿಕ ಮೃತ್ಯುವಾಗಿ,  ಅವರ ಆಶ್ರಯದಾತರಾದ ಚಿಕ್ಕಪ್ಪನವರೂ ಸಹಾ ಒಂದೇ ವರ್ಷದಲ್ಲಿ ಮರಣ ಹೊಂದಿದ ಪರಿಣಾಮ, ಅವರ ಓದು ಅರ್ಧಕ್ಕೇ ನಿಂತು ಹೋಗಿ, ಜೀವನೋಪಾಯಕ್ಕಾಗಿ ತಮ್ಮ ತಾಯಿಯ ಜೊತೆ ಅವರ ತವರೂರಾದ ಚಿಕ್ಕಮಗಳೂರಿಗೆ ಹೋಗಿ   1938 ರಲ್ಲಿ, ತಮ್ಮ 13ನೆಯ ವರ್ಷದಲ್ಲಿಯೇ ಸಣ್ಣ ಪುಟ್ಟ ಕೆಲಸವನ್ನು ಮಾಡಲು ಆರಂಭಿಸಿ ಕಡೆಗೆ ಕಾಫೀ ತೋಟದಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ಆ ತೋಟದಲ್ಲಿದ್ದ ಹಿರಿಯರೊಬ್ಬರ ಸಲಹೆಯ ಮೇರೆಗೆ ಕೈಗಾರಿಕಾ ಪಾಠಶಾಲೆಯಲ್ಲಿ 3 ವರ್ಷಗಳ ತರಬೇತಿಗೆ ಸೇರಿಕೊಂಡು ತರಭೇತಿ ಮುಗಿಸಿದ ನಂತರ 1942ರಲ್ಲಿ ಬಸ್ ಕ್ಲೀನರ್ ಆಗಿ ಕೆಲಸಕ್ಕೆ ಸೇರಿಕೊಂಡವರು 1944ರಲ್ಲಿ ಬಸ್ ಕಂಡಕ್ಟರ್ ಆಗಿ ಭಡ್ತಿ ಹೊಂದುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಕೈಗೆ ಸಿಕ್ಕ ಪುಸ್ತಕಗಳನ್ನು ಓದುವ ಉತ್ತಮ ಹವ್ಯಾಸವನ್ನು ಬೆಳಿಸಿಕೊಂಡು, ಹೀಗೆ ಆರ್ಥಿಕವಾಗಿ ಸ್ವಲ್ಪ ಸಢೃಢರಾಗುತ್ತಿದ್ದಂತೆಯೇ  1947ರಲ್ಲಿ ನಾಗರತ್ನಮ್ಮನವರ ಜೊತೆ ಇವರ ಮದುವೆಯಾದ ನಂತರ ಬರುವ ಸಂಬಳದಲ್ಲಿ ಜೀವನ ನಡೆಸುವುದು ಕಷ್ಟ ಎನಿಸಿದಾಗ, 1948ರಲ್ಲಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದು ಬಾಡಿಗೆ ಮನೆ ಮಾಡಿ ಲಾರಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಬಿಡುವಿನ ಸಮಯದಲ್ಲಿ ತಮ್ಮದೇ ಅದ ಗ್ರಂಥಾಲಯವನ್ನೇಕೆ ಪ್ರಾರಂಭಿಸಬಾರದೆಂದು ಆಲೋಚಿಸಿ  ತಿಂಗಳಿಗೆ ಎಂಟಾಣೆ ಸದಸ್ಯತ್ವದ ಸಣ್ಣದಾದ ಗ್ರಂಥಾಲಯವನ್ನು ಆರಂಭಿಸಿ ಅಲ್ಲಿ ಉಳಿದ ಪುಸ್ತಕಗಳಿಗಿಂತಲೂ ಬಾಲಸರಸ್ವತಿ, ವೆಂಕಟಾಚಾರ್ಯ, ಗುರುರಾಜಾಚಾರ್ಯ, ಗುಂಡಾಶಾಸ್ತ್ರಿ ಮುಂತಾದವರುಗಳ ಪತ್ತೇದಾರಿ ಕಾದಂಬರಿಗಳನ್ನೆಲ್ಲಾ ಸಂಗ್ರಹಿಸಿರುತ್ತಾರೆ. ಹೀಗೆ ತಮ್ಮ ಗ್ರಂಥಾಲಯಕ್ಕೆ ಪುಸ್ತಕ ಕೊಳ್ಳಲು ಟಿ. ನಾರಾಯಣ ಅಯ್ಯಂಗಾರ್ ಎಂಬ ಪತ್ತೇದಾರಿ ಕಾದಂಬರಿಗಳನ್ನು ಪ್ರಕಟಿಸುತ್ತಿದ್ದ ಪ್ರಕಾಶಕರ ಬಳಿ ಹೋಗುತ್ತಿದ್ದರಿಂದ ಅವರೊಡನೆ ಉತ್ತಮವಾದ ಸ್ನೇಹವೇರ್ಪಟ್ಟು ಅದೊಮ್ಮೆ ಹಾಗೇ ಸುಮ್ಮನೇ, ನಾನು ಪತ್ತೇದಾರಿ ಕಾದಂಬರಿ ಬರೆದರೆ ಪ್ರಕಟಿಸುತ್ತೀರಾ? ಎಂದು ಹೇಳಿದಾಗ, ಅವರೂ ಸಹಾ. ಅರೇ! ನಿಮಗೆ ಇಲ್ಲಾ ಎನ್ನಲಾಗುತ್ತದೇ, ಪುಸ್ತಕ ಬರೆದು ತನ್ನಿ! ಎಂದು ಹೇಳಿದ್ದೇ ತಡ, ಒಂದು ಸಣ್ಣ ನೋಟ್ ಪುಸ್ತಕ ತೆಗೆದುಕೊಂಡು ತಮ್ಮ ಮುದ್ದಾದ ಚಿತ್ತಿಲ್ಲದ ಬರವಣೆಗೆಯಲ್ಲಿ  ಪತ್ತೇದಾರಿ ಪುರುಷೋತ್ತಮನ ಸಾಹಸ ಎಂದು 1952ರಲ್ಲಿ ಪ್ರಕಟಿಸುತ್ತಿದ್ದಂತೆಯೇ,  ಅಂದಿನ ಕನ್ನಡ ಪತ್ತೆದಾರಿ ಕಾದಂಬರಿಗಳಿಗಿಂತಲೂ ವಿಭಿನ್ನವಾಗಿ ಯಾವುದೇ ಆಂಗ್ಲ ಪತ್ತೆದಾರಿ ಕಾದಂಬರಿಗೆ ಕಡಿಮೆ ಇಲ್ಲದಂತಿದ್ದ  ಆ ಪುಸ್ತಕ ನೋಡ ನೋಡುತ್ತಿದ್ದಂತೆಯೇ ಬಹಳ ಪ್ರಸಿದ್ಧಿಯನ್ನು ಪಡೆದು ಕೊಳ್ಳುತ್ತದೆ.

nar6ತಮ್ಮ ಚೊಚ್ಚಲು ಪತ್ತೆದಾರಿ ಕಾದಂಬರಿಯ ಜನಪ್ರಿಯತೆಯಿಂದ ಸ್ಪೂರ್ತಿಗೊಂಡು ಬರೆದ ಎರಡನೇ ಪುಸ್ತಕ ಭಯಂಕರ ಬೈರಾಗಿಯೂ ಸಹಾ ಅನೇಕ ಸಾವಿರ ಪ್ರತಿಗಳು ಮಾರಾಟವಾಗಿ ದಾಖಲೆಯನ್ನೇ ನಿರ್ಮಿಸಿದರೂ ಅವರಿಗೆ ಅದರಿಂದ ದೊರೆತ ಸಂಭಾವನೆ ಕೇವಲ 25ರಿಂದ 50ರೂಗಳು ಮಾತ್ರ. ಬಿಸಿ ಬಿಸಿ ದೋಸೆಯಂತೆ ಖರ್ಚಾಗುತ್ತಿದ್ದ ಇವರ ಕಾದಂಬರಿಗಳಿಗೆ ಚಿಕ್ಕಪೇಟೆ, ಅರಳೇಪೇಟೆ ಅವೆನ್ಯೂ ರಸ್ತೆಯಯಲ್ಲಿದ್ದ ಪುಸ್ತಕಗಳ ಪ್ರಕಾಶಕರು ದಂಬಾಲು ಬಿದ್ದು ಅದೆಷ್ಟೋ ಬಾರಿ ತಮ್ಮ ಅಂಗಡಿಗಳಲ್ಲೇ ಅವರನ್ನು  ಕೂಡಿಸಿಕೊಂಡು ನೂರು ಪುಟದ ಸ್ಟೂಡೆಂಟ್‌ ನೋಟ್‌ ಬುಕ್‌ನಲ್ಲಿ  ಕಾದಂಬರಿ ಬರೆಸಿಕೊಂಡು ಸಣ್ಣದಾದ ಜೇಬಳತೆಯ ಪುಸ್ತಕಗಳಾಗಿ ಪ್ರಕಟಿಸಿ ಪ್ರಕಾಶಕರು ಉದ್ದಾರವಾದರೇ ಹೊರತು ನರಸಿಂಹಯ್ಯವವರಿಗೆ ಅದರಿಂದ ಯಾವುದೇ ಲಾಭವಾಗಲಿಲ್ಲ ಎನ್ನುವುದು ಬೇಸರದ ಸಂಗತಿ. ತಮ್ಮ 150ನೇ ಕಾದಂಬರಿಗಳವರೆವಿಗೂ ಕೇವಲ 50 ರೂ. ಸಂಭಾವನೆಗಷ್ಟೇ ತೃಪ್ತಿಪಟ್ಟು ಕೊಂಡಿದ್ದ ನರಸಿಂಹಯ್ಯನವರು ನಂತರ ತಮ್ಮ ಸ್ನೇಹಿತರೊಬ್ಬರ ಸಲಹೆಯಂತೆ, ಶೇ 10ರ ಗೌರವಧನ ಕೊಟ್ಟರಷ್ಟೇ ತಾವು ಬರೆದುಕೊಡುವುದಾಗಿ ಬೇಡಿಕೆ ಇಟ್ಟಾಗ, ಆರಂಭದಲ್ಲಿ ಒಪ್ಪದಿದ್ದ ಪ್ರಕಾಶಕರು ನಂತರ ನರಸಿಂಹಯ್ಯನವರು ಕಾದಂಬರಿಗಳನ್ನು ಬರೆಯುವುದನ್ನೇ ನಿಲ್ಲಿಸಿದಾಗ, ವಿಧಿ ಇಲ್ಲದೇ, ಒಂದು ಸಾವಿರ ಪ್ರತಿಗೆ ಶೇ 10ರ ಗೌರವಧನ ಕೊಡುತ್ತೇವೆ ಎಂದು ಒಪ್ಪಿಕೊಂಡು ಲೇಖಕರ ಅರಿವಿಗೇ ತಾರದೇ,  ನಾಲ್ಕೈದು ಸಾವಿರ ಪ್ರತಿ ಮುದ್ರಿಸಿ, ನರಸಿಂಹಯ್ಯನವರು ಚಾಪೆ ಕೆಳಗೆ ತೂರಿದರೆ, ಪ್ರಕಾಶಕರು ರಂಗೋಲಿ ಕೆಳಗೆ ತೂರುವುದರ ಮೂಲಕ ತಮ್ಮ ವ್ಯಾಪಾರಿ ಕುಠಿಲತೆಯನ್ನು ತೋರಿಸಿದರೂ, ನರಸಿಂಹಯ್ಯನವರು ಪ್ರಕಾಶಕರನ್ನು ದೇವರಂತೆ ಕಾಣುತ್ತಿದ್ದರು.

nar21950-60ರ ದಶಕದಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಅನಭಿಷಕ್ತ ದೊರೆ/ದೊರೆಸಾನಿಗಳಂತೆ ಮೆರೆಯುತ್ತಿದ್ದ  ಅನಕೃ, ತರಾಸು, ತ್ರಿವೇಣಿ, ಕಾಕೋಳು ಸರೋಜಾರಾವ್, ಮ. ರಾಮಮೂರ್ತಿ, ಮೈಸುಶೇ, ಮಾಭೀಶೇ, ಎನ್. ಸುಂದರರಾಜ್ ಅವರಂಥ ದಿಗ್ಗಜ ಸಾಹಿತಿಗಳ ನಡುವೆಯೂ ನರಸಿಂಹಯ್ಯನವರ ಸಾಹಿತ್ಯವನ್ನು ಪ್ರಕಟಿಸಲು ಬೆಂಗಳೂರಿನ ಬಳೇಪೇಟೆಯ ಪ್ರಕಾಶಕರ ನಡುವೆ  ಪೈಪೋಟಿ ಪ್ರಾರಂಭವಾಗಿ  ಸದ್ದಿಲ್ಲದೇ ಒಂದಾದ ಮೇಲೆ ಮತ್ತೊಂದರಂತೆ, ಪತ್ತೆದಾರಿ ಕಾದಂಬರಿಗಳನ್ನು ಬರೆಯುತ್ತಲೇ ಹೋದ ಪರಿಣಾಮ ರಾಜ್ಯಾದ್ಯಂತ ಕನ್ನಡಿಗರ ಮನ ಮತ್ತು  ಮನೆಗಳಲ್ಲಿ ನರಸಿಂಹಯ್ಯನವರು ಆವರಿಸಿಕೊಂಡರು. ಹೀಗೆ ಪತ್ತೆದಾರಿ  ಕಾದಂಬರಿಗಳು ಜನಪ್ರಿಯವಾಗುತ್ತಿದ್ದಂತೆಯೇ, ಪತ್ತೇದಾರಿ ಕಾದಂಬರಿಗ ಲೇಖಕರ ಸಂಖ್ಯೆಯೂ ಹೆಚ್ಚಾದರೂ ನನ್ನನ್ನು ಸಾಕಿ ಬೆಳೆಸಿದವರು ಓದುಗರು. ಪ್ರತಿ ನಿತ್ಯವೂ  ನನ್ನ ಓದುಗರಿಂದ ಬರುವ 50-100 ಪತ್ರಗಳೇ ನನಗೆ ಸೂರ್ತಿ ಕೊಡುತ್ತದೆ ಎಂದು ಹೇಳುತ್ತಲೇ ಸರಳ ಸಜ್ಜನಿಕೆಯಿಂದ ತಮ್ಮ ಜನಪ್ರಿಯತೆ ಉಳಿಸಿಕೊಂಡಿದ್ದು ಗಮನಾರ್ಹವಾಗಿತ್ತು.

ಈ ಪ್ರಮಾಣದ ಪತ್ತೆದಾರಿ ಕಾದಂಬರಿಗಳನ್ನು ಬರೆದಿದ್ದರೂ, ತಮ್ಮ  ಕುಳ್ಳನೆಯ, ಕೃಶವಾದ ಶರೀರ ಅದರ ಮೇಲೊಂದು ಪೈಜಾಮಾ, ಅರೆದೋಳಿನ ಅಂಗಿ ಇದರ ಜೊತೆ ಮಾತೂ ಸಹಾ ತೀರಾ ಮೆದು ಮತ್ತು ವಿರಳ. ಅದೂ ಅಲ್ಲದೇ ಬಹಳ ಹಿಂಜರಿಕೆಯ ಸ್ವಭಾವದವರಾಗಿದ್ದರಿಂದ  ಯಾವುದೇ ಸಾಹಿತ್ಯ/ಸಂಸ್ಕೃತಿ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಹಾಗೇ ಯಾವುದೇ ಸಭೆ ಸಮಾರಂಭಗಳಿಗೆ ಅನಿವಾರ್ಯವಾಗಿ ಹೋದರೂ, ತಾವೊಬ್ಬ ದೊಡ್ಡ ಸಾಹಿತಿ ಎಂದು ಹೇಳಿಕೊಳ್ಳದೇ, ಎಲೆ ಮರೆಕಾಯಿಯಂತೆಯೇ ಇರುತ್ತಿದ್ದ ನರಹಿಂಹಯ್ಯನವರು  ಯಾರ ಎದುರಿಗೆ ಬಂದರೂ ಅವರೇ ಮಹಾನ್ ಪತ್ತೆದಾರಿ ಕಾದಂಬರಿಕಾರ ಎಂದು ಗುರುತಿಸುವುದು ಕಷ್ಟವಾಗುತ್ತಿತ್ತು

nar5ಈ ರೀತಿಯ ಮನಸ್ಥಿತಿಯಿಂದಾಗಿ ಅನೇಕ ಬಾರಿ ನರಸಿಂಹಯ್ಯನವರು ಮುಜುಗೊರಕ್ಕೊಳಗಾದ ಕೆಲವೊಂದು ಸನ್ನಿವೇಶಗಳನ್ನು ಹಂಚಿಕೊಳ್ಳಲೇ ಬೇಕು. ಅದೊಮ್ಮೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅದಾವುದೋ ಕೇಸಿನ ಸಂಬಂಧದಲ್ಲಿ ಸಾಕ್ಷಿ ಹೇಳುವ ಸಲುವಾಗಿ  ನರಸಿಂಹಯ್ಯನವರು ಹೋದಾಗ, ಈ ಕೃಶಕಾಯದ ಸಾಧಾರಣ ವ್ಯಕ್ತಿಯನ್ನು ನೋಡಿದ ಅಲ್ಲಿನ ಸಬ್‌ಇನ್ಸ್‌ಪೆಕ್ಟರ್ ಹೇಯ್! ಯಾರಯ್ಯಾ ನೀನು? ಎಂದು ಏಕವಚನದಲ್ಲೇ ಕೇಳಿದಾಗ, ಯಥಾ ಪ್ರಕಾರ ತಮ್ಮ ಮೆಲುಧನಿಯಲ್ಲಿ ಸ್ವಾಮಿ, ನನ್ನ ಹೆಸರು ನರಸಿಂಹಯ್ಯ ಎಂದರು, ಸರಿ  ಸರಿ ಏನ್ ಮಾಡ್ತಾ ಇದ್ಯಾ? ಎಂದು ಕೇಳಿದ ಪ್ರಶ್ನೆಗೆ ಅಷ್ಟೇ ಸಹಜವಾಗಿ ಪತ್ತೆದಾರಿ ಕಾದಂಬರಿ ಬರೀತೀನಿ ಎಂದಾಗ, ನರಸಿಂಹಯ್ಯನವರನ್ನು ನೋಡದ ಅವರ ಅಭಿಮಾನಿಯಾಗಿದ್ದ ಆ ಸಬ್‌ಇನ್ಸ್‌ಪೆಕ್ಟರ್ ಥೂ! ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು. ಅಂತಹ ಮಹಾನ್ ಲೇಖಕರ ಹೆಸರು ಹೇಳ್ತಾ ಇದ್ಯಾ! ಎಂದು ದಬಾಯಿಸಿದಾಗ, ಬೇರೆ ದಾರಿ ಕಾಣದ ನರಸಿಂಹಯ್ಯನವರು ತಮ್ಮ ಅಕ್ಕ ಪಕ್ಕದ ಮನೆಯವರನ್ನು ಠಾಣಿಗೆ ಕರೆಸಿ ವಿಚಾರಿಸಿ ಎಂದು ಕೋರಿದಾಗ, ಹಾಗೆ ಬಂದ ಅವರ ನೆರೆ ಹೊರೆಯವರು ಸಾರ್ ಇವರು ಪತ್ತೆದಾರಿ ಕಾದಂಬರಿ ಬರೆಯುತ್ತಾರಲ್ಲಾ ಅದೇ ನರಸಿಂಹಯ್ಯನವರೇ, ಎಂದಾಗ ತನ್ನ ತಪ್ಪಿನ ಅರಿವಾಗಿ ಆ ಸಬ್‌ಇನ್ಸ್‌ಪೆಕ್ಟರ್  ನರಸಿಂಹಯ್ಯನವರ ಕಾಲಿಗೆ ಬಿದ್ದು, ಕ್ಷಮಿಸೀ ಸಾರ್, ಗೊತ್ತಿಲ್ಲದೇ ನನ್ನಿಂದ ತಪ್ಪಾಯ್ತು ಎಂದು ಬೇಡಿಕೊಂಡಿದ್ದರಂತೆ.

nar4ಅದೇ ರೀತಿಯಲ್ಲಿ  ರಾಜಾಜಿನಗರದ ಶಾಲೆಯೊಂದರ ವಾರ್ಷಿಕೋತ್ಸವಕ್ಕೆ ನರಸಿಂಹಯ್ಯನವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದಾಗ, ಎಂದಿನಂತೆ ಇಲ್ಲಾ  ಎಂದರೂ ಅವರ ಬಲವಂತಕ್ಕೆ  ಒಪ್ಪಿ ನಿಗಧಿತ ದಿನ ಶಾಲೆಗೆ ಹೋದಾಗ, ಅಲ್ಲಿನ ಸಿಬ್ಬಂಧಿಯವರು ನರಸಿಂಹಯ್ಯನವರನ್ನು ವೇದಿಕೆಯ ಬಳಿ ಬಿಡದ ಕಾರಣ, ಸಮ್ಮನೇ ಮುಂದಿನ ಸಾಲಿನಲ್ಲಿದ್ದ ಕುರ್ಚಿಯಲ್ಲೇ ನರಸಿಂಹಯ್ಯನವರು ಕುಳಿತುಕೊಂಡಿದ್ದರಂತೆ. ಈ ವಿಷಯವನ್ನು ಅರಿಯದ ಕಾರ್ಯಕ್ರಮದ ಆಯೋಜಕರು ಅರೇ ಇನ್ನು ಮುಖ್ಯ  ಅತಿಥಿಗಳೇ ಕಾರ್ಯಕ್ರಮಕ್ಕೆ ಬಂದಿಲ್ಲವಲ್ಲಾ ಎಂದು ಚಡಪಡಾಯಿಸುತ್ತಿರುವಾಗ ಅದೆಷ್ಟೋ ಹೊತ್ತಿನ ನಂತರ ಸದ್ದಿಲ್ಲದೇ ಕುಳಿತಿದ್ದ ನರಸಿಂಹಯ್ಯನವರನ್ನೂ ನೋಡಿ, ದಡಬಡಾ ಎಂದು ಓಡೋಡಿ ಬಂದು, ಸಾರ್ ಎಷ್ಟು ಹೊತ್ತಾಯ್ತು ಬಂದು ಅವರನ್ನು ವೇದಿಕೆಯ ಮೇಲೆ ಕರೆದುಕೊಂಡು ಹೋಗಿದ್ದರಂತೆ.

ಇನ್ನು 1982 ರಲ್ಲಿ ಬೆಂಗಳೂರಿನಲ್ಲಿ ಕಂದಾಯ ಇಲಾಖೆಯಿಂದ ಖರೀದಿಸಿದ್ದ ನಿವೇಶನವು 1984 ರಲ್ಲಿ ಬಿ.ಡಿ.ಎ. ಪಾಲಾಗಿ ನರಸಿಂಹಯ್ಯನವರಿಗೆ  ಬದಲಿ ನಿವೇಶನವಾಗಲೀ  ಪರಿಹರವೂ ಸಿಗದೇ ಅನೇಕ ಬಾರಿ ಕಛೇರಿಗೆ ಅಲೆದಾಡಿದರೂ ಅವರಿಗೆ ಸೂಕ್ತ ಸಹಕಾರ ದೊರೆಯದೇ ಇದ್ದಾಗ,  ಈ ವಿಷಯ ಕನ್ನಡ ಪತ್ರಿಕೆಯೊಂದರ ವರದಿಗಾರನಿಗೆ ಗೊತ್ತಾಗಿ ಆತ ತಮ್ಮ ಪತ್ರಿಕೆಯಲ್ಲಿ  ಈ ವಿಷಯವನ್ನು ವರದಿ ಮಾಡಿದಾಗ, ಅಂದಿನ ಬಿಡಿಎ ಕಮೀಶನರ್ ಆಗಿದ್ದಂತಹ ಶ್ರೀ.ಸಿದ್ದಯ್ಯ ನವರು ಈ ಸುದ್ದಿ ತಿಳಿದು, ತಮ್ಮ, ಬಿಡಿಎ ನೌಕರ ಸಂಘ ಬಡಾವಣೆಯಲ್ಲಿ ಉಚಿತವಾಗಿ ಒಂದು ನಿವೇಶನವನ್ನು ಕೊಡಿಸಿದರಂತೆ.

ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ರೀತಿಯಲ್ಲಿ ಅಪಾರವಾದ ಕೊಡುಗೆಯನ್ನು ನೀಡಿದ್ದ ನರಸಿಂಹಯ್ಯನವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ದೊರೆತಿದ್ದು ಅವುಗಳಲ್ಲಿ ಪ್ರಮುಖವಾಗಿ

  • ಅಂದಿನ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ್ ಅರಸ್ ಅವರು ಸರ್ಕಾರದ ವತಿಯಿಂದ ತಿಂಗಳಿಗೆ 500/- ರೂಪಾಯಿ ಮಾಸಾಶನವನ್ನು ಕೊಡಿಸಿದರು
  • 1997ರ ದಾವಣಗೆರೆಯ 61ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎನ್.ನರಸಿಂಹಯ್ಯನವರನ್ನು ಸನ್ಮಾನಿಸಲಾಯಿತು.
  • 1997ರಲ್ಲಿ ಅತ್ತಿಮಬ್ಬೆ ಪ್ರತಿಷ್ಠಾನದಿಂದ ಸನ್ಮಾನಿಸಲಾಯಿತು.
  • 1997 ನೆಯ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು.

nar7ಪತ್ತೆದಾರ ಪುರುಶೋತ್ತಮನ  ಮೂಲಕವೇ  ಎಲ್ಲವನ್ನೂ ಹೇಳಿದರೆ ಓದುಗರಿಗೆ ಸ್ವಾರಸ್ಯವಿರದು ಎಂದರಿತ ನರಸಿಂಹಯ್ಯನವರು, ಪುರುಶೋತ್ತಮನ ನಂತರ ಪತ್ತೇದಾರ ಮಧುಸೂದನ, ಆನಂತರ ಅರಿಂಜಯ ಹೀಗೆ ತಮ್ಮ ಕಲ್ಪನಾ ಲೋಕದ ಪತ್ತೆದಾರರ ಮೂಲಕ ನೂರಾರು ಸಾಹಸಗಳನ್ನು ಓದುಗರ ಕಣ್ಣಿಗೆ ಕಟ್ಟುವಂತೆ ಬರೆದು ಯಶಸ್ವಿಯಾದರು. ಅವರೆಲ್ಲಾ ಕತೆಗಳಲ್ಲಿ ಓದುಗರಿಗೆ ಎಲ್ಲಿಯೂ  ಅಶ್ಲೀಲ  ಎನಿಸುವ ಅಥವಾ ಮುಜುಗರಕ್ಕೆ ಒಳಗಾಗುವಂತಹ ಸನ್ನಿವೇಶಗಳು ಇರದೇ, ಮಧ್ಯೆ ಮಧ್ಯೆ ತಿಳಿ ಹಾಸ್ಯವನ್ನು ಬೆರೆಸುತ್ತಾ ಸರಾಗವಾಗಿ ಓದಿಸಿಕೊಂಡು ಹೋಗುವಂತಹ ಸುಮಾರು 550 ಕೃತಿಗಳನ್ನು ರಚಿಸಿದರು. ಕೇವಲ ಪತ್ತೇದಾರಿ ಕಥೆಗಳಲ್ಲದೇ, ಪೌರಾಣಿಕ, ಸಾಮಾಜಿಕ, ಐತಿಹಾಸಿಕ, ಕಾಲ್ಪನಿಕ ಸಾಹಿತ್ಯ ಕೃಷಿಯಲ್ಲಿಯೂ ಕೈಯ್ಯಾಡಿಸಿ ಯಶಸ್ವಿಯಾಗಿರುವುದು ವಿಶೇಷ. ಹಾಸ್ಯ ಸಾಹಿತಿ ಬೀಚಿಯವರಿಗಿಂತಲೂ ಮುನ್ನವೇ ಬೊಮ್ಮನ ಬುರುಡೆ ಮತ್ತು ಕೇಡಿಗನ ಕಿಡಿಗಳನ್ನು ಬರೆದಿದ್ದರು. 1984-85ರಲ್ಲಿ ದಿನಕ್ಕೊಂದು ಕಥೆಯ ಪುಸ್ತಕವೇ  ಅವರ ಕಡೆಯ  ಸಾಹಿತ್ಯ ರಚನೆಯಾಗಿ ಅಲ್ಲಿಂದ ಮುಂದೆ ವಿಶ್ರಾಂತ ಜೀವನವನ್ನು ನಡೆಸಲು ಮುಂದಾದರು.

1950-80ರ ದಶಕದಲ್ಲಿ ಕನ್ನಡಿಗರಿಗೆ  ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ಬೆಳೆಸಿದ ಅನೇಕ ಮಹನೀಯರಲ್ಲಿ ಒಬ್ಬರಾಗಿದ್ದ ಶ್ರೀ ಎನ್.ನರಸಿಂಹಯ್ಯನವರು ವಯೋಸಜವಾಗಿ 2011ರ ಡಿಸೆಂಬರ್ 25ರಂದು ನಿಧನರಾಗುವ ಮೂಲಕ ಕನ್ನಡ ಸಾಹಿತ್ಯಲೋಕದ ಅನರ್ಘ್ಯ ರತ್ನವೊಂದು ಮರೆಯಾಯಿತು ಎಂದರೂ ತಪ್ಪಾಗದು.   ಓದೆಂಬುದು ಮನರಂಜನೆ ಆಗಿದ್ದ ಕಾಲದಲ್ಲಿ  ಜನ ಸಾಮಾನ್ಯರ ನಡುವೆ ಎನ್. ನರಸಿಂಹಯ್ಯನವರ ಹೆಸರು ಸದಾ ಗೋಚರಿಸುವಂತಿದ್ದ,ನ್ನಡದ ಶರ್ಲಾಕ್ ಹೋಮ್ಸ್  ನರಸಿಂಹಯ್ಯ ಎಂದೇ ಪ್ರಸಿದ್ಧರಾಗಿದ್ದ ಕಾರಣ ಅವರು ಖಂಡಿತವಾಗಿಯೂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment