ಖರ್ಗೆ ಅವರ ಓಲೈಕೆ ಮತ್ತು ಭಟ್ಟಂಗಿತನದ ಪರಮಾವಧಿ

ಮಲ್ಲಿಕಾರ್ಜುನ ಖರ್ಗೆ ರಾಜ್ಯ ಕಾಂಗ್ರೇಸ್ ಪಕ್ಷದ ಅತ್ಯಂತ ಹಿರಿಯ ನಾಯಕರು, ರಾಜ್ಯ ಕಾಂಗ್ರೇಸ್ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ಕೇಂದ್ರದಲ್ಲೂ ಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ ಪ್ರಸ್ತುತ ಕಾಂಗ್ರೇಸ್ ಪಕ್ಷದ  ರಾಷ್ಟ್ರೀಯ ಆಧ್ಯಕ್ಷರಾಗಿರುವ ವಿಷಯ ಎಲ್ಲರಿಗೂ ತಿಳಿದಿರುವ ವಿಷಯ. ಸಾಮಾನ್ಯವಾಗಿ ವಯಸ್ಸಾದಂತೆ ಮತ್ತು ಒಂದು ಹುದ್ದೆಯಿಂದ ಮತ್ತೊಂದು ಹುದ್ದೆಯನ್ನು ಅಲಂಕರಿಸುತ್ತಿದ್ದಂತೆಯೇ  ಅವರ ಬುದ್ದಿ ಮತ್ತೆ ಮತ್ತು ಜವಾಬ್ಧಾರಿ ಹೆಚ್ಚುತ್ತಾ ಹೋಗುತ್ತದೆ ಮತ್ತು ಅವರು ನಡೆ ಮತ್ತು ನುಡಿಗಳಿಗೆ ಒಂದು ಘನತೆ ಮತ್ತು ಗೌರವಗಳು ಬರುತ್ತದೆ ಎನ್ನುವುದು ಎಲ್ಲರ ಅಭಿಪ್ರಾಯ. ಆದರೆ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಮಗ ಪ್ರಿಯಾಂಕ್ ಖರ್ಗೆ ವಿಷಯದಲ್ಲಿ ಅದು ತದ್ವಿರುದ್ದವಾಗುತ್ತಿರುವುದು ನಿಜಕ್ಕೂ ಶೋಚನೀಯವಾದ ಸಂಗತಿ.

ಗುಲ್ಬರ್ಗಾ ಮೂಲದ ಮಲ್ಲಿಖಾರ್ಜುನ ಖರ್ಗೆಯವರು ಅತ್ಯಂತ ಹಿಂದುಳಿದ  ಹಿನ್ನಲೆಯಿಂದ ಬಂದವರು ಹೈದರಾಬಾದ್ ನ ರಜಾಕರ ಧಾಳಿಯಿಂದಾಗಿ  ಸಂಪೂರ್ಣವಾಗಿ ಅವರ ಕುಟುಂಬ ನಾಶವಾದಾಗ ಆವರಿನ್ನೂ ನಾಲ್ಕೈದು ವರ್ಷದ ಬಾಲಕ. ಸ್ಥಳೀಯ ಕಾರ್ಖಾನೆಯಲ್ಲಿ ಸಾಮಾನ್ಯ ನೌಕರರಾಗಿ ಕೆಲಸ ಮಾಡುತ್ತಿದ್ದ  ಅವರ ತಂದೆಯವರ  ಆಶ್ರಯದಲ್ಲಿ ಬೆಳೆದು ವಿದ್ಯಾವಂತರಾಗಿ ಕಾನೂನು ಪದವಿ ಪಡೆದು ಆರಂಭದಲ್ಲಿ ಕಾರ್ಮಿಕ ನಾಯಕರಾಗಿ ತಮ್ಮ ವೃತ್ತಿ ಜೀವನವನ್ನಾರಂಭಿಸಿ ನಂತರ  ಕಾಂಗ್ರೇಸ್ ಪಕ್ಷದೊಂದಿಗೆ ಗುರುತಿಸಿಕೊಂಡು ಇಂದು ಈ ಪರಿಯಾಗಿ ಬೆಳಿದಿದ್ದಾರೆ.  ಅಂದಿನ ಪ್ರಧಾನಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿ ಮತ್ತವರ ಕುಟುಂಬದವನ್ನು ಯಾವ ಪರಿಯಾಗಿ ಹಚ್ಚಿಕೊಂಡಿದ್ದರು ಎಂದರೆ,  ಮುಂದೆ ಖರ್ಗೆಯವರು ಶ್ರಿಮತಿ ರಾಧಬಾಯಿಯನ್ನು ಮದುವೆಯಾಗಿ ಅವರಿಬ್ಬರ ಸುಂದರ ದಾಂಪತ್ಯದ ಕುರುಹಾಗಿ ಹುಟ್ಟಿದ ಮೂವರು ಮಕ್ಕಳಿಗೆ ಪ್ರಿಯಾಂಕ್, ರಾಹುಲ್ ಮತ್ತು ಪ್ರಿಯದರ್ಶನಿ ಎಂದು ಹೆಸರಿಡುವ ಮೂಲಕ ಇಂದಿರಾಗಾಂಧಿ ಮೊಮ್ಮಕ್ಕಳು ಮತ್ತು ಸ್ವತಃ ಇಂದಿರಾ ಗಾಂಧಿಯವರ ಹೆಸರನ್ನೇ ತಮ್ಮ ಮಕ್ಕಳಲ್ಲಿ ಕಾಣುವಷ್ಟರ ಮಟ್ಟಿಗೆ ಪರಮ ಭಕ್ತರಾಗಿದ್ದರು ಎನ್ನುವುದು ಅವರ ಅಭಿಪ್ರಾಯವಾಗಿದ್ದರೆ, ಇದೆಲ್ಲವೂ ಇಂದಿರಾ ಕುಟುಂಬದ ಗುಲಾಮೀ ಸಂಕೇತ ಎಂದು ಅವರ ವಿರೋಧಿಗಳ ಆರೋಪ. ಇದೇ ಭಟ್ಟಂಗಿ ತನವೇ ಅವರಿಗೆ ಶ್ರೀರಕ್ಷೆಯಾಗಿ ರಾಜಕೀಯದಲ್ಲಿ ಬೆಳೆಯಲು ಸಹಾಯವಾಗಿದ್ದಂತು ಸುಳ್ಳಲ್ಲಾ.

ವಿದ್ಯಾರ್ಥಿಯಾಗಿದ್ದರಿಂದಲೂ, ವಿವಿಧ ವಿದ್ಯಾರ್ಥಿ ಸಂಘಟನೆಗಳಲ್ಲಿ ಗುರುತಿಸಿಕೊಂದಿದ್ದ  ಖರ್ಗೆ, 1969 ರಲ್ಲಿ ಅವರು ಎಂಎಸ್ಕೆ ಮಿಲ್ಸ್ ಎಂಪ್ಲಾಯೀಸ್ ಯೂನಿಯನ್ನಿನ  ಕಾನೂನು ಸಲಹೆಗಾರರಾಗಿದ್ದಲ್ಲದೇ,  ಸಂಯುಕ್ತ ಮಜ್ದೂರ್ ಸಂಘದ ಪ್ರಭಾವಶಾಲಿ ಕಾರ್ಮಿಕ ಸಂಘದ ನಾಯಕರಾಗಿ, ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ನಡೆಸುತ್ತಿದ್ದ  ಹೋರಾಟಗಳಲ್ಲಿ ಮುಂಚೂಣಿ ಪಡೆದು ಅದೇ ವರ್ಷ ಗುಲ್ಬರ್ಗ ನಗರದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದಲ್ಲದೇ, ನೋಡ ನೋಡುತ್ತಿದ್ದಂತೆಯೇ 1972 ರಲ್ಲಿ  ಹಿಂದುಳಿದವರಿಗೆ ಮೀಸಲಾದ ಗುರ್ಮಿಟ್ಕಲ್ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾಯಿತರಾಗಿ  ರಾಜ್ಯ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬಾರದೇ 2008ರಲ್ಲಿ  ಚಿತ್ತಾಪುರದ ವಿಧಾನ ಸಭೆಗೆ ಆಯ್ಕೆಯಗುವ ಮೂಲಕ  ಸತತ ಒಂಬತ್ತನೆಯ ಶಾಸಕರಾಗಿ ದಾಖಲೆಯನ್ನು ನಿರ್ಮಿಸಿ ರಾಜ್ಯದಲ್ಲಿ ಪ್ರತಿಪಕ್ಷ ನಾಯಕರಾಗಿ ನೇಮಕಗೊಂಡರು. ನಂತರ ರಾಜ್ಯ ಕಾಂಗ್ರೇಸ್ಸಿನಲ್ಲಾದ ರಾಜಕೀಯದಿಂದಾಗಿ 2009 ಮತ್ತು 2014ರಲ್ಲಿ ಗುರ್ಬರ್ಗಾ ಲೋಕಸಭೆಯಿಂದ ಸಾಂಸದರಾಗಿ ಆಯ್ಕೆಯಾಗಿ ಸೋಲಿಲ್ಲದ ಸರದಾರ ಎನಿಸಿಕೊಂಡರೂ 2019ರಲ್ಲಿ ಅವರ ಗರಡಿಯಲ್ಲಿ ಬೆಳೆದಿದ್ದ ಮತ್ತು ನಂತರ ವಯಕ್ತಿಕ ಕಾರಣಗಳಿಂದ ಬಿಜೆಪಿಗೆ ಸೇರಿಕೊಂಡ ಉಮೇಶ್ ಜಿ.ಜಾಧವ್ ಅವರ 95,452 ಮತಗಳ ಅಂತರದಿಂದ ಸೋತು ಹೋಗಿದ್ದರೂ,  ಉರ್ದು ಮಿಶ್ರಿತ ಹಿಂದಿಯನ್ನು ಚೆನ್ನಾಗಿ ಮಾತನಾಡಬಲ್ಲರು, ದಲಿತರು (ಸ್ವಇಚ್ಚೆಯಿಂದ ಬೌದ್ಧ ಮತಕ್ಕೆ ಮತಾಂತವಾಗಿದ್ದರೂ ಹಿಂದುಳಿದ ಪಟ್ಟ ಬಿಡಲೊಲ್ಲರು) ಎಲ್ಲದ್ದಕ್ಕಿಂತಲೂ ಮಿಗಿಲಾಗಿ  ಅಂದಿನ ಇಂದಿರಾಗಾಂಧಿ ಮತ್ತು ಇಂದಿನ ಸೋನಿಯಾಗಾಂಧಿ ಕುಟುಂಬದ ಪರಮಾಪ್ತರು ಎಂಬ ಕಾರಣಕ್ಕಾಗಿ ರಾಜ್ಯಸಭಾ ಆಯ್ಕೆಯಾಗಿ ಪ್ರಸ್ತುತ  ಹಾಳೂರಿಗೆ ಉಳಿದವವೇ ಗೌಡ ಎನ್ನುವಂತೆ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕ ವಾದ್ರಾ ಅವರ ಕೈಗೊಂಬೆಯಾಗಿ ರಾಷ್ಟ್ರೀಯ ಕಾಂಗ್ರೇಸ್  ಅಧ್ಯಕ್ಷರಾಗಿದ್ದಾರೆ.

 

ಕೇವಲ ನಕಲೀ ಗಾಂಧಿ ಕುಟುಂಬದ ಪರಮಾಪ್ತ ಎಂಬ ಕಾರಣಕ್ಕಾಗಿಯೇ ಇಷ್ಟೆಲ್ಲಾ ಅಧಿಕಾರವನ್ನು ಪಡೆದಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯ ಸರ್ಕಾರದ ಎಲ್ಲಾ ಖಾತೆಗಳಲ್ಲಿಯೂ ಮೂಗು ತೂರಿಸುವ ಮಂತ್ರೀ ಎಂದೇ ಪ್ರ(ಕು)ಖ್ಯಾತಿಯನ್ನು ಪಡೆದಿರುವ  ಪ್ರಿಯಾಂಕ್ ಖರ್ಗೆ,  ಇಟಾಲಿಯನ್ ಗಾಂಧಿ ಕುಟುಂಬದ ಋಣ ತೀರಿಸುವ ಸಲುವಾಗಿ  ಅಗ್ಗಾಗ್ಗೇ ದೇಶವಿರೋಧಿ ಅದರಲ್ಲೂ ವಿಶೇಷವಾಗಿ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಗಳನ್ನು ಜನಗಳನ್ನು ಜನರ ಮುಂದೆ ತೋರಿಕೊಳ್ಳುವ ಚಾಳಿ ಮುಂದುವರೆಸಿಕೊಂಡು ಹೋಗುತ್ತಲೇ ಇರುತ್ತಾರೆ.  ಇದಕ್ಕೆ ಜ್ವಲಂತ ಉದಾಹರಣೆ ಎನ್ನುವಂತೆ ಮೊನ್ನೆ ಮಹಾ ಕುಂಭ ಮೇಳದ ಸ್ನಾನದ ಕುರಿತಾಗಿ ತಮ್ಮ ಹರಕಲು ಬಾಯಿಯನ್ನು ಖರ್ಗೆ ಚಾಚಿದ್ದಾರೆ.

 

2025ರ ಜನವರಿ 27, ಸೋಮವಾರದಂದು ಮಧ್ಯಪ್ರದೇಶದ ಮೋವ್‌ನಲ್ಲಿ ಜೈ ಬಾಪು ಜೈ ಭೀಮ್ ಜೈ ಸಂವಿಧಾನ ಎಂಬ ರ್ಯಾಲಿಯಲ್ಲಿ ಒಂದು ಧರ್ಮವನ್ನು ಓಲೈಸುವ ಸಲುವಾಗಿ ಮತ್ತು ಮಹಾ ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ  ಕುಟುಂಬ ಸಮೇತ ಕುಂಭಸ್ನಾನಕ್ಕೆ ಪ್ರಯಾಗ್‌ರಾಜ್‌ಗೆ ಆಗಮಿಸಿದ  ಸಂದರ್ಭದಲ್ಲಿ ಅವರೊಂದಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್,  ನಾಗಾ ಸಾಧುಗಳು  ಮತ್ತು ಸಂತರು ಇದ್ದದ್ದನ್ನು ಅಪಹಾಸ್ಯ ಮಾಡುತ್ತಾ, ಗಂಗಾಸ್ನಾನ ಮಾಡಲು ಬಿಜೆಪಿ ನಾಯಕರಲ್ಲಿ ಪೈಪೋಟಿ ಇದ್ದು, ಬಿಜೆಪಿ-ಆರ್‌ಎಸ್‌ಎಸ್‌ನವರು  ದೇಶದ್ರೋಹಿಗಳು, ಇವರು  ಗಂಗಾಸ್ನಾನ ಮಾಡುವುದರಿಂದ ಬಡತನ ದೂರವಾಗುವುದಿಲ್ಲ ಎಂದು ಅಬ್ಬರಿಸಿ ಮಾತಿನ ಭರದಲ್ಲಿ ಆಡಬಾರದ್ದದ್ದನ್ನು ಆಡಿ ಮುಂದೆ ಅದು ಪ್ರಮಾದವಾಗ ಬಹುದು ಎಂದು ಆಲೋಚಿಸಿದ ಖರ್ಗೆ, ತಾವು ಆಡಿದ  ಮಾತನ್ನೇ ಸಮರ್ಥಿಸಿಕೊಳ್ಳುವಂತೆ  ಧರ್ಮದ ಹೆಸರಿನಲ್ಲಿ ಬಿಜೆಪಿಯವರು ಮಾಡುವ ಬಡವರ ಶೋಷಣೆಯನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಮತ್ತು ಕಾಂಗ್ರೇಸ್ ಯಾರ ನಂಬಿಕೆಗೂ ಧಕ್ಕೆ ತರಲು ಬಯಸುವುದಿಲ್ಲ ಎಂದು ತಿಪ್ಪೇ ಸಾರಿಸಿರುವುದು  ಕಾಂಗ್ರೇಸ್ಸಿಗರ ಹಿಂದೂ ವಿರೋಧಿ ಭಾವನೆಯನ್ನು ಸ್ಪಷ್ಟವಾಗಿ ಜಗಜ್ಜಾಹೀರಾತು ಪಡಿಸುತ್ತದೆ.

ಫೆಬ್ರವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಪ್ರಯಾಗರಾಜ್ ತಲುಪಿ ಸ್ನಾನ ಮಾಡಲಿದ್ದಾರೆ ಎಂಬುದನ್ನು ಮನದಲ್ಲಿ ಇಟ್ಟುಕೊಂಡಿರುವ ಖರ್ಗೆ,  ಮೋದಿ-ಅಮಿತ್‌ ಶಾ ಅದೆಷ್ಟೇ ತೀರ್ಥಸ್ನಾನ ಮಾಡಿದ್ರೂ ಅವರು ಹೋಗೋದು ನರಕಕ್ಕೇ ಎಂಬ ಮಾತನ್ನೂ ಹೇಳಿರುವುದು ಖರ್ಗೆಯವರ ಮತ್ತವರ  ಹೇಡಿತನವನ್ನು ತೋರಿಸುತ್ತದೆ. ಕುಂಭಮೇಳವೂ ಭಾರತದಲ್ಲಿ  ಅನಾದಿಕಾಲಗಳಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದಿದ್ದು ಅದು ಇಂದು ಕೇವಲ ಕೋಟ್ಯಂತರ ಹಿಂದೂಗಳ ನಂಬಿಕೆಯ ಪ್ರತೀಕವಾಗಿಯಷ್ಟೇ ಉಳಿದಿರದೇ, ಪ್ರಪಂಚದಾದ್ಯಂತ ಧರ್ಮ, ಜಾತಿ ಎಲ್ಲವನ್ನೂ ಮೀರಿ ಭಕ್ತಿಯ ಭಾವನೆಯಾಗಿದೆ ಎನ್ನುವುದಕ್ಕೆ ಲಕ್ಷಾಂತರ ವಿದೇಶಿಗರೂ ಈ ಮಹಾ ಕುಂಭಮೇಳದಲ್ಲಿ ಭಾಗವಹಿಸಿ ಗಂಗಾ ಯಮುನಾ ಮತ್ತು ಗುಪ್ತಗಾಮಿಸಿ ಸರಸ್ವತಿ ನದಿಯ ಸಂಗಮದಲ್ಲಿ ಮಿಂದೆದ್ದು ಪುನೀತರಾಗುತ್ತಿರುವ ಸಂಧರ್ಭದಲ್ಲಿ  ಇಂತಹ ಪವಿತ್ರ ನಂಬಿಕೆಯನ್ನು ಖರ್ಗೆ ಅವರು  ಕೇವಲ ರಾಜಕೀಯ ನೆಲೆಗಟ್ಟಿನಲ್ಲಿ ಲೇವಡಿ ಮಾಡಿರುವುದು ಸಕಲ ಹಿಂದೂಗಳ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂದರೂ ತಪ್ಪಾಗದು.

ಸನಾತನ ಧರ್ಮದ ವಿರುದ್ಧ ಖರ್ಗೆ ಹೀಗೆ ನಾಲಿಗೆ ಹರಿಬಿಡುತ್ತಿರುವುದು ಇದು ಮೊದಲ ಸಲವಾಗಿರದೇ, ತಮ್ಮ  ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸನಾತನ ಧರ್ಮವನ್ನೇ ಕೊನೆಗಾಣಿಸುತ್ತೇವೆ ಎಂದು ಈ ಹಿಂದೆಯೂ ಹೇಳಿದ್ದರು. ಅದೇ ರೀತಿ ಪ್ರಧಾನಿ ಮಂತ್ರಿಗಳು ಎಂಬ ಗೌರವವಿಲ್ಲದೇ ಅವರನ್ನು ವಿಷಸರ್ಪಕ್ಕೆ ಹೋಲಿಸಿ ಮರ್ಯಾದೆಯನ್ನು ಕಳೆದುಕೊಂಡಿದ್ದರು. ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ, ಪಕ್ಷದ ಅಧ್ಯಕ್ಷರೇ ಈ ರೀತಿ ಅದಕ್ಷರಾದರೇ, ಇನ್ನು ಅವರ ಹಿಂಬಾಲಕರು ಮತ್ತು ಕಾಂಗ್ರೇಸ್ ಅಧಿಕಾರವಿರುವ ರಾಜ್ಯದ ಸರ್ಕಾರಗಳು ಹೇಗೆ ಇರುತ್ತವೆ ಎನ್ನುವುದಕ್ಕೆ ಪುಷ್ಟಿ ನೀಡುವಂತೆ ಪ್ರತಿಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಆಳ್ವಿಕೆಗೆ ಬಂದಾಗ ಒಂದು ಧರ್ಮದ ಓಲೈಕೆ ಮಾಡುವ ಸಲುವಾಗಿ ವಿವಿಧ ದೊಂಬಿ ಗಲಭೆಗಳಲ್ಲಿ ಭಾಗಿಗಳಾಗಿ ಸೆರೆಮನೆಯಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿರುವವವರನ್ನು ಭೇಷರತ್ತಾಗಿ ಬಿಡುಗಡೆ ಮಾಡುವುದು ದರೋಡೆಯಲ್ಲಿ ಭಾಗಿಯಾಗಿರುವ, ತಮ್ಮ ವಯಕ್ತಿಕ ದ್ವೇಷಕ್ಕಾಗಿ ಹಸುವಿನ ಕೆಚ್ಚಲನ್ನೇ ಕತ್ತರಿಸಿ ಸಮಾಜದ ಶಾಂತಿಯನ್ನು ಭಂಗ ಮಾಡುವ, ಕುಕ್ಕರಿನಲ್ಲಿ ಬಾಂಬ್ ಇಡುವವರು ಸಿಕ್ಕಿಕೊಂಡ ತಕ್ಷಣ, ಅವರನ್ನು ಬಿಡುಗಡೆ ಮಾಡುವ ಸಲುವಾಗಿ  ಅವರೆಲ್ಲರಿಗೂ ಮಾನಸಿಕ ಅಸ್ವಸ್ಥತೆಯ ಗುರಾಣಿಯನ್ನು ಸ್ವತಃ ಗೃಹಮಂತ್ರಿಗಳೇ ಹಿಡಿಯುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಇಡೀ ದೇಶವನ್ನು ಸುಮಾರು ಆರು ದಶಕಗಳ ಕಾಲ ಆಳಿದ ಮತ್ತು ತಮ್ಮದು  125 ವರ್ಷಗಳಷ್ಟು ಹಳೆಯ ಪಕ್ಷ ಎಂದು ಕೊಚ್ಚಿಕೊಳ್ಳುವ  ಪಕ್ಷ ಇಂದು ದೇಶದಲ್ಲಿ ಕೇವಲ ಎರಡು ಮೂರು ರಾಜ್ಯಗಳಲ್ಲಷ್ಟೇ ಆಳ್ವಿಕೆ ನಡೆಸುತ್ತಿದ್ದರೆ,  ಉಳಿದ ರಾಜ್ಯಗಳಲ್ಲಿ ಹೇಳ ಹೆಸರಿಲ್ಲದೆ, ಪ್ರಾದೇಶಿಕ ಪಕ್ಷಗಳ ಪರಾವಲಂಭಿಗಳಾಗಿ ಅವರು ಕೊಟ್ಟ ಭಿಕ್ಷೆಯಲ್ಲಿ ರಾಜಕೀಯವನ್ನು ನಡೆಸಬೇಕಾದಂತಹ ಸಂಧರ್ಭ ಇರುವಾಗ ತಮ್ಮ ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ ಮತ್ತು ಕಳೆದ 10+ ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರವಿಲ್ಲದೇ ಹಪಾಹಪಿ ನಡೆಸುತ್ತಿರುವ ಸಂಧರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವ ಹೆಸರಿನಲ್ಲಿ ಪದೇ ಪದೇ ಈ ದೇಶದ ಬಹುಸಂಖ್ಯಾತರ ಧಾರ್ಮಿಕ ನಂಬಿಕೆಗಳ ವಿರುದ್ಧ  ಅವಹೇಳನ ಮಾಡುವುದು ಒಂದು ಕೋಮಿನವರನ್ನೇ ಪ್ರತ್ಯಕ್ಷವಾಗಿಯೋ  ಇಲ್ಲವೇ ಪರೋಖ್ಷವಾಗಿಯೋ  ಓಲೈಕೆ/ರಕ್ಷಣೆ ಮಾಡುವ ಮೂಲಕ ಧರ್ಮ/ಜಾತಿ/ಭಾಷೆಯ ಹೆಸರಿನಲ್ಲಿ ತುಂಡರಿಸಲು ಮುಂದಾಗಿರುವುದು  ದೇಶವಿರೋಧಿ ಕೃತ್ಯವಾಗಿದೆ.

 

ಇನ್ನು ನೀವು ಹೇಳುತ್ತಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎನ್ನುವ ಮಾತುಗಳನ್ನು ಕೇಳುತ್ತಿದ್ದರೆ, ಭೂತದ ಬಾಯಿಯಲ್ಲಿ ಭಗವದ್ಗೀತೆಯೇ ಎಂದರೂ ಅತಿಶಯವಾಗದು. ದೇಶದಲ್ಲಿ ಮೋಹನ್ ದಾಸ್ ಕರಮಚಂದ್ ಗಾಂಧಿಯವರ  ಅಸಲಿ ಕುಟುಂಬ ಇಂದು ಯಾವ ಪರಿಸ್ಥಿತಿಯಲ್ಲಿದ್ದಾರೆ ಮತ್ತು ಕೇವಲ ಅಧಿಕಾರದ ಲಾಲಸೆಯಿಂದ ಇಟಲಿಯ ಸಂಜಾತ ನಕಲಿಯರನ್ನೇ ದೇಶದ ಮುಂದೆ ಗಾಂಧಿ ಕುಟುಂಬ ಎಂದು ಬಿಂಬಿಸಲು ಹೋರಟಿರುವ ನಿಮ್ಮ ಭಟ್ಟಂಗಿತನ ಗುಲಾಮಿ ತನವಾಗಿ ಢಾಳಾಗಿ ಕಾಣಿಸುತ್ತಿದೆ. ಇನ್ನು  ಅಂಬೇಡ್ಕರ್  ಆವರು ಬದುಕಿದ್ದಾಗ  ಅವರನ್ನು ರಾಜಕೀಯವಾಗಿ ಮುಗಿಸುವ ಸಲುವಾಗಿ ಎರಡು ಬಾರಿ ಸೋಲಿಸಿದ್ದೂ  ನಿಮ್ಮ ನೆಹರು. ಇನ್ನು  ಅಂಬೇಡ್ಕರ್ ಅವರು ಸತ್ತಾಗಲೂ ಅವರ  ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗನೀಡದೇ, ಅವರ ಶವವನ್ನು ಮುಂಬೈಗೆ ಸಾಗಿಸಲೂ ತಗಾದೇ  ಎತ್ತಿದ ನಿಮ್ಮ ಕಾಂಗ್ರೇಸ್ ಪಕ್ಷಕ್ಕೆ ಜೈ ಭೀಮ್ ಹೇಳುವ ಅರ್ಹತೆಯೇ ಇಲ್ಲಾ. ಇನ್ನು ಅದೇ  ಅಂಬೇಡ್ಕರ್ ಅವರ ಸಾರಥ್ಯದಲ್ಲಿ ಮಂಡಣೆಯಾದ ಸಂವಿಧಾನವನ್ನು  ದೇಶವನ್ನು ಆಳಿದ ನಿಮ್ಮದೇ ಪಕ್ಷದ ಪ್ರಧಾನಿಗಳಾದ ನೆಹರು, ಇಂದಿರಾ, ರಾಜೀವ್ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿ ಒಂದು ರೀತಿಯಲ್ಲಿ ಸರ್ವಾಧಿಕಾರಿಗಳಂತೆ ವರ್ತಿಸಿದ ನಿಮ್ಮ ಪಕ್ಷ ಇಂದು  ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಸಂವಿಧಾನ ರಕ್ಷಿಸಬೇಕಾಗಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎನಿಸುತ್ತಿದೆ ಅಲ್ವೇ?

ಸದ್ಯದ ಪರಿಸ್ಥಿತಿಯಲ್ಲಿ ಈ ದೇಶದಲ್ಲಿ ಸಣ್ಣ ಮಕ್ಕಳನ್ನೂ ಕೇಳಿದರೂ Congress ಎಂದರೆ Currupt ಎನ್ನುವಂತಹ ಪರಿಸ್ಥಿತಿ ಇದ್ದು,  ಕಾಂಗ್ರೆಸ್ ಆಡಳಿತ ನಡೆಯುವಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರಗಳು ಹಾಗೂ ರಾಷ್ಟ್ರವಿದ್ರೋಹಿ ಭಯೋತ್ಪಾದಕ ಚಟುವಟಿಕೆಗಳು ತಾಂಡವವಾಡುತ್ತವೆ ಎನ್ನುವುದಕ್ಕೆ  ನ(ನಿ)ಮ್ಮ ರಾಜ್ಯದ ಕಾಂಗ್ರೇಸ್ ಸರ್ಕಾರವೇ ಜ್ವಲಂತ ಉದಾಹರಣೆಯಾಗಿದೆ. ನಿಮ್ಮ ಅಧಿಕಾರಕ್ಕಾಗಿ ಬಿಟ್ಟಿ ಭಾಗ್ಯಗಳನ್ನು ನೀಡಿದ ಕಾರಣ ರಾಜ್ಯದ ಬೊಕ್ಕಸ ಖಾಲಿಯಾಗಿ ಜನಾವಶ್ಯಕವಾದ ಹಾಲು, ನೀರು, ವಿದ್ಯುತ್, ಆಹಾರ, ಪಟ್ರೋಲ್ ಎಲ್ಲದರ ಬೆಲೆಯೂ ಗಗನಕ್ಕೇರಿದೆ. ರೈತರ ಸರಣಿ ಆತ್ಮಹತ್ಯೆ ನಿರಂತವಾಗಿದ್ದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು  ಅನುಮಾನಾಸ್ಪದವಾಗಿ ಅಸುನೀಗುತ್ತಿದ್ದಾರೆ. ಹಾಡು ಹಗಲಲ್ಲೇ  ಬ್ಯಾಂಕ್ ಲೂಡಿ ಮತ್ತು  ದರೋಡೆಗಳು ನಡೆಯುತ್ತಿದ್ದರೆ,  ಇನ್ನು ರಾಜ್ಯವನ್ನು ಮುನ್ನಡೆಸಬೇಕಾದಂತಹ  ಮುಖ್ಯಮಂತ್ರಿಗಳೇ ಮುಡಾ ಹಗರಣದಲ್ಲಿ ತನಿಖೆ ಎದುರಿಸುತ್ತಿದ್ದಾರೆ. ಉಪ ಮುಖ್ಯಮಂತ್ರಿಗಳು ಬೇಲ್ ಮೇಲಿದ್ದಾರೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣವೇ  ಸತ್ತು ಬಿದ್ದಿರುವಾಗ ಮತ್ತೊಬ್ಬರ ತಟ್ಟೆಯಲ್ಲಿ ನೊಣ ಬಿದ್ದೆದೆ ಎಂದು ಹೇಳಿದರೆ  ನಂಬುವ ಸ್ಥಿತಿಯಲ್ಲಿ ಇಂದು ಯಾರು ಇಲ್ಲ.

ಅಲ್ಪಸಂಖ್ಯಾತರ ಓಲೈಕೆ ಮತ್ತು ನಿಮ್ಮ ನಕಲಿ ಗಾಂಧಿ ಕುಟುಂಬದ ಗುಲಾಮೀ ಮನಸ್ಥಿತಿಯಿಂದಾಗಿಯೇ ಇಷ್ಟು ವರ್ಷಗಳ ಕಾಲ  ಇಡೀ ದೇಶವನ್ನು ಅಳಿದರೂ ಇಂದಿಗೂ ನಿಮ್ಮ ಗರೀಭೀ ಹಠಾವೋ ಎನ್ನುವುದು ಬಾಯಿ ಮಾತಿಗೆ ಉಳಿದು  ಅದು ಕೃತಿರೂಪಕ್ಕೆ ಬಾರದೇ, ಇಂದಿಗೂ ಬಡವರು, ಶೋಷಿತರು, ರೈತರು ಹಾಗೂ ಕೂಲಿ ಕಾರ್ಮಿಕರ ಬದುಕು ದುಸ್ತರವಾಗಿ, ಈಗ ಅಲ್ಪ ಸ್ವಲ್ಪ ಉದ್ದಾರವಾಗುತ್ತಿರುವಾಗ ಮತ್ತೆ ನಿಮ್ಮ ಗುಲಾಮೀ ತನ ಮತ್ತು ನಿಮ್ಮ ಅಧಿನಾಯಕರ ದೂರದೃಷ್ಟಿಯ ಕೊರೆತೆಯಿಂದಾಗಿ ಮತ್ತೆ 100 ವರ್ಷಗಳ ಹಿಂದಕ್ಕೆ ನಮ್ಮನ್ನೂ ದೂಡದಿರಿ.  ಅಧಿಕಾರ ಎನ್ನುವುದು ಎಂದಿಗೂ ಶಾಶ್ವತವಾಗಿರದೇ, ಅದು ಗಡಿಯಾರದ ಮುಳ್ಳಿನಂತೆ ಕಾಲಕಾಲಕ್ಕೂ ಬದಲಾಗುತ್ತಲೇ ಇರುತ್ತದೆ. ಹಾಗಾಗಿ ಅಧಿಕಾರಕ್ಕೆ ಯಾರೂ ಸಹಾ  ಗೂಟ ಹೊಡಕೊಂಡು ಇರುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡು ನಿಮ್ಮ ವಯಸ್ಸಿಗೆ ತಕ್ಕಂತೆ ರಾಮ, ಕೃಷ್ಣಾ, ಗೋವಿಂದಾ.. ಅರೇ ಅರೇ ತಪ್ಪಾಯ್ತು.  ಆ ದೇವರುಗಳ ಹೆಸರೆಲ್ಲವೂ ನಿಮಗೆ ಕೋಮುವಾದ ಎನಿಸುವ ಕಾರಣ, ನೀವೇ ನಂಬುವ (ಅಧಿಕಾರಕ್ಕಾಗಿ) ಬುದ್ಧನ ಸ್ಮರಣೆ ಮಾಡಿಕೊಂಡು ಈ ಹಾಳು  ಗುಲಾಮೀ ರಾಜಕೀಯದಿಂದ ನಿಮ್ಮ ಇಡೀ ಕುಟುಂಬವೇ ನಿವೃತ್ತಿ ಪಡೆದು, ಮಕ್ಕಳು, ಮೊಮ್ಮಕ್ಕಳು ಮತ್ತು ಮರಿ ಮಕ್ಕಳ ಜೊತೆ ಇನ್ನೂ ಹತ್ತು ತಲೆಮಾರು ಕಳೆದರೂ ಕರಗದ ಆಸ್ತಿಯಿಂದ ಬರುವ ಆದಾಯದಿಂದ ನೆಮ್ಮದಿಗೆ ಜೀವನ ನಡೆಸುವುದೇ ಉತ್ತಮ ಅಲ್ಲವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment