ಅಧಿಕಾರಕ್ಕೆ ಅಹಿಂದ, ಹಣಕ್ಕಾಗಿ ಹಿಂದೂ ಹುಂಡಿ!!

ಈ ದೇಶಕ್ಕೆ ಸ್ವಾತ್ರಂತ್ರ್ಯ ಬಂದು 75+ ವರ್ಷಗಳಲ್ಲಿ 60 ಕ್ಕೂ ಹೆಚ್ಚಿನ ವರ್ಷಗಳ ಕಾಲ ಇಡೀ ರಾಜ್ಯ ಮತ್ತು ಕೇಂದ್ರದಲ್ಲಿ ಇದೇ ಕಾಂಗ್ರೇಸ್ಸಿನ ಒಂದು ಕುಟುಂಬವರು ಮತ್ತು ಅವರ ಛೇಲಾಗಳೇ ಅಧಿಕಾರವನ್ನು ಅನುಭವಿಸಿದರೂ ಸಹಾ, ದೇಶವನ್ನು ಉದ್ಧಾರ ಮಾಡದೇ ಹೋದ ಪರಿಣಾಮ ಕಳೆದ 10 ವರ್ಷಗಳಿಂದಲೂ  ಕೇಂದ್ರದಲ್ಲಿ ಅಧಿಕಾರವನ್ನು ಕಳೆದುಕೊಂದರೆ, ಕರ್ನಾಟಕ,  ತಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಮಾತ್ರಾ  ಅಧಿಕಾರದಲ್ಲಿದ್ದು,  ಅಧಿಕಾರಕ್ಕಾಗಿ ನಾಯಕರುಗಳ ಕಚ್ಚಾಟ ಮತ್ತು ಕೊಟ್ಟ ಉಚಿತ ಗ್ಯಾರೆಂಟಿ ಯೋಜನೆಗಳಿಗೆ ಹಣವನ್ನು ಹೊಂದಿಸಲಾಗದೇ, ಮೂರೂ ರಾಜ್ಯ ಸರ್ಕಾರಗಳು ಯಾವಾಗ ಬೇಕಾದರೂ ಅಧಿಕಾರ ಕಳೆದುಕೊಳ್ಳುವಂತಹ ದುಸ್ತಿತಿಯಲ್ಲಿದೆ.

ಹಿಂದೂಸ್ಥಾನದಲ್ಲಿ ಹಿಂದೂಗಳೇ  ಬಹುಸಂಖ್ಯಾತರಾದರೂ,  ಅಂದಿನಿಂದ ಇಂದಿನವರೆಗೂ,  ಕಾಂಗ್ರೇಸ್ ನಾಯಕರುಗಳಿಗೆ ಹಿಂದೂಗಳನ್ನು ಕಂಡರೆ ಅದೇನೋ ತಾತ್ಸಾರ. ಪಠ್ಯಪುಸ್ತಕಗಳಲ್ಲಿಯೂ ಸಹಾ ಹಿಂದೂ ವಿರೋಧಿ ಮನಸ್ಥಿತಿಯನ್ನೇ ಬಿತ್ತುವ ಮೂಲಕ ಹಿಂದೂಗಳೆಂದರೆ ಹೇಡಿಗಳು, ಕೈಲಾಗದವರು, ಮುಸಲ್ಮಾನ್ ದೊರೆಗಳು ಮತ್ತು ಬ್ರಿಟೀಷರು ಭಾರತಕ್ಕೆ ಬಂದ್ದದ್ದರಿಂದಲೇ ನಮ್ಮ ದೇಶ ಉದ್ದಾರವಾಗಿದೆ ಎಂಬ ಹಸೀ ಸುಳ್ಳನ್ನೇ ಸ್ವಾತ್ರಂತ್ರ್ಯ ಬಂದಾಗಲಿಂದಲೂ ನಮ್ಮ ಮಕ್ಕಳಿಗೆ ಕಲಿಸಿಕೊಟ್ಟಿರುವುದು ಸಹಾ ವಿಪರ್ಯಾಸ.

ಮೊನ್ನೆ ತಾನೆ  ಇಡೀ ಜಗತ್ತಿನಲ್ಲಿ ನಭೂತೋ ನಭವಿಷ್ಯತಿ ಎನ್ನುವಂತೆ 45 ದಿನಗಳ ಕಾಲ ಸುಮಾರು 65+ ಕೋಟಿ ಜನರು ಪ್ರಯಾಗ್ ರಾಜ್ ನ  ತ್ರಿವೇಣಿ ಸಂಗಮದಲ್ಲಿ ನಡೆದ ಮಹಾ ಕುಂಭ ಮೇಳದಲ್ಲಿ, ಜಾತಿ ಧರ್ಮ, ಅಧಿಕಾರ ಅಂತಸ್ತುಗಳನ್ನು ಲೆಖ್ಖಿಸದೇ, ದೇಶ ವಿದೇಶಗಳಿಂದ ಬಂದು ಮಿಂದು ಪರಮ ಪಾವನರಾದರೆ, ಚುನಾವಣಾ ಸಮಯದಲ್ಲಿ ಮಾತ್ರಾ ಶರ್ಟಿನ ಮೇಲೆ ಜನಿವಾರ ಧರಿಸಿ ತಾನೊಬ್ಬ ಶಿವಭಕ್ತ ಕೌಲ್ ಬ್ರಾಹ್ಮಣ ಎನ್ನುವ ಮತ್ತು ಕೊರಳಲ್ಲಿ ಶಿಲುಬೆ ಧರಿಸಿದರೂ ಹಣೆಗೆ ಚಂದನ ಮತ್ತು ಕುಂಕುಮ ಧರಿಸಿ ಕೊಂಡು ತಾನೊಬ್ಬೊಳು ಕಾಳೀ ಭಕ್ತೆ ಎನ್ನುವ ಕೇರಳದ ಮುಸ್ಲಿಂ ಬಾಹುಳ್ಯವುಳ್ಳ ವೈಯಾನಾಡಿನ ಸಂಸದೆ ಪ್ರಿಯಾಕಾ ವಾಡ್ರಾ ಗಾಂಧಿ ಅಪ್ಪೀ ತಪ್ಪಿಯೂ ಪ್ರಯಾಗ್ ರಾಜ್ ಕಡೆ ಸುಳಿಯುವುದಿರಲೀ, ಆ ಬಗ್ಗೆ ಮಾತನಾಡಲೇ ಇಲ್ಲ ಎನ್ನುವುದು ಕಾಂಗ್ರೇಸ್ಸಿಗರ ಹಿಂದೂ ಧರ್ಮದ ಬಗ್ಗೆಯ ಅಭಿಮಾನವನ್ನು ಜಗ್ಗಜ್ಜಾಹೀರಾತು ಮಾಡಿದೆ. ಕೆಲವೇ ತಿಂಗಳುಗಳ ಹಿಂದೆಯಷ್ಟೇ ನಿಧನರಾದ ಇದೇ ನಕಲಿ ಗಾಂಧಿಗಳ ಕೈಗೊಂಬೆ ಪ್ರಧಾನ ಮಂತ್ರಿಗಳಾಗಿದ್ದ  ಮನಮೋಹನ್ ಸಿಂಗ್  ಅವರಿಂದಲೂ ಈ ದೇಶದ ಎಲ್ಲಾ ಸಂಪತ್ತುಗಳ ಮೇಲೆ ಮುಸಲ್ಮಾನರಿಗೇ ಮೊದಲ ಹಕ್ಕು ಎಂದು ಇದೇ ಕಾಂಗಿಗಳು ಹೇಳಿಸಿದ್ದನ್ನೂ ಈ ದೇಶ ಕೇಳಿಯಾಗಿದೆ.

ಇನ್ನು ರಜಾಕರ ಅಟ್ಟಹಾಸದಿಂದ ತನ್ನ ಕುಟುಂಬವೇ ನಾಶವಾದರೂ, ಅಚ್ಚರಿಯ ರೂಪದಲ್ಲಿ ಉಳಿದು, ನಕಲೀ ಗಾಂಧಿಗಳ ಪರಮ ಭಕ್ತ (ಮಕ್ಕಳ ಹೆಸರು ಪ್ರಿಯಾಂಕ್, ರಾಹುಲ್ ಮತ್ತು ಪ್ರಿಯದರ್ಶಿನಿ) ಬೌದ್ಧಧರ್ಮಕ್ಕೆ ಮತಾಂತರವಾಗಿರುವ ಮಲ್ಲಿಕಾರ್ಜುನ ಖರ್ಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಇಟಲೀ ಮಾತೆಯನ್ನು ಸಂತೃಪ್ತಿ ಪಡಿಸುವ ಸಲುವಾಗಿ ಕುಂಭಮೇಳ ಮಾಡುವುದರಿಮ್ದ  ಬಡತನ ಹೋಗುತ್ತದೆಯೇ? ತ್ರಿವೇಣಿ ಸಂಗಮದಲ್ಲಿ ಮುಳುಗುವುದರಿಂದ ಪಾಪ ನಿವಾರಣೆ ಆಗುತ್ತದೆಯೇ?  ಇಂದು ಈ ಇಳೀ ವಯಸ್ಸಿನಲ್ಲಿಯೂ ನಾಲಿಗೆ ಹರಿಬಿಟ್ಟಿದ್ದನ್ನು ಇಡೀ ದೇಶವೇ ನೋಡಿದೆ.

ಜನರ ತೆರಿಗೆ ಹಣ 7ಸಾವಿರ ಕೋಟಿ ಹಣವನ್ನು ಈ ರೀತಿ ಪೋಲು ಮಾಡಿದ್ದು ಅಕ್ಷಮ್ಯ ಅಪರಾಧ. ಅದು ಮಹಾ ಕುಂಭವಲ್ಲಾ! ಅದೊಂದು ಮೃತ್ಯು ಕುಂಭ! ಎಂದು ಹಿಯ್ಯಾಳಿಸಿದ ಇದೇ ಕಾಂಗ್ರೇಸ್ ನೇತೃತ್ವದ  ಇಂಡಿ ಒಕ್ಕೂಟದ ಗುಲಾಮರಿಗೆ, ಈಗ ಕರ್ನಾಟಕದ ಒಂದು ವಾರ್ಷಿಕ ಬಜೆಟ್ ಗಿಂತಲು ಒಂದೂವರೆ ಪಟ್ಟು ಸುಮಾರು  5ಲಕ್ಷ ಕೋಟಿಗೂ ಅಧಿಕ ಹಣ ಕೇವಲ 45 ದಿನಗಳಲ್ಲಿ ಉತ್ತರ ಪ್ರದೇಶದ ಸರ್ಕಾರದ ಖಜಾನೆಯಲಿ ಬಿದ್ದಿದ್ದೇ ತಡಾ!  ನವಿಲು ನೋಡಿ ಕೆಂಭೂತ ಕುಣಿದಂತೆ ಇದ್ದಕ್ಕಿದ್ದಂತೆಯೇ ಹಿಂದೂಗಳ ನೆನಪಾಗಿಬಿಟ್ಟಿದೆ.

ಹಣೆಯಲ್ಲಿ ಕುಂಕುಮ ಇಡುವುದು ಭಯೋತ್ಚಾದಕತೆ, ತಲೆಯ ಮೇಲೆ ಕೇಸರೀ ಪೇಟ ಧರಿಸುವುದು ಕೋಮುವಾದಿ, ತಮ್ಮನ್ನು ಅಧಿಕಾರಕ್ಕೆ ತರಲು  ಅಹಿಂದ ಮತಗಳು ಹೇಗೂ ಇದ್ದೇ ಇದೆ. ಇನ್ನು ಬಿಟ್ಟಿ ಭಾಗ್ಯಗಳ ಆಸೆಗೆ ಕೆಲವು ಹಿಂದೂಗಳು ತಮಗೆ ಮತಹಾಕಿಯೇ ತೀರುತ್ತಾರೆ ಎಂಬ  ಹುಂಬ ತನದಲ್ಲಿ ಮೆರೆವ ಸಿದ್ದರಾಮಯ್ಯರಿಗೂ ಈಗ ಇದ್ದಕ್ಕಿದ್ದಂತೆಯೇ, ಹಿಂದೂ ದೇವಾಲಯಗಳ ಹುಂಡಿಯ ಮೇಲೆ ಕಣ್ಣು ಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೇಸ್ ಪಕ್ಷದ ಅಧಿಕೃತ ಹೇಳಿಕೆಯಲ್ಲಿ, ದೇವಾಲಯಗಳ ಆದಾಯ ಹೆಚ್ಚಳಕ್ಕೆ ಸರ್ಕಾರದ ಸಂಕಲ್ಪ ಎಂದ ಶೀರ್ಷಿಕೆಯೊಂದಿಗೆ, ದೇವಾಲಯಗಳ ಆದಾಯದ ಹೆಚ್ಚಳಕ್ಕೆ  ರಾಜ್ಯ ಕಾಂಗ್ರೆಸ್ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ದೇಗುಲಗಳ ಸರ್ಕಾರಿ ಅಧಿಕಾರಿಗಳು, ನೌಕರರಿಗೆ ಇನ್ನು‌ ಮುಂದೆ ಸರ್ಕಾರವೇ ವೇತನ ನೀಡಲಿದೆ. ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನದ ನೌಕರರಿಗೆ ಸಂಚಿತ ನಿಧಿಯಿಂದಲೇ ವೇತನ ಪಾವತಿಸುವುದರಿಂದ ದೇವಸ್ಥಾನಗಳಿಗೆ ವಾರ್ಷಿಕ ಸುಮಾರು ₹12.16 ಕೋಟಿ ಉಳಿತಾಯವಾಗಲಿದೆ ಎಂಬ ಹೇಳಿಕೆ ನೀಡಿರುವುದು ಶ್ರದ್ದೇಯ ಹಿಂದೂಗಳ ಭಾವನೆಯನ್ನು ಕೆರಳಿಸಿದೆ.

ಒಂದು ಲೆಖ್ಖಾಚಾರದ ಪ್ರಕಾರ ಕರ್ನಾಟಕದಲ್ಲಿ ಸುಮಾರು 1,80,000 ದೇವಾಲಯಗಳಿದ್ದು,  ಅವುಗಳಲ್ಲಿ  ಕೇವಲ 35,500 ದೇವಾಲಯಗಳು  ಮಾತ್ರಾ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುತ್ತವೆ.  ಇದರಲ್ಲಿ ಒಂದು ಸಾವಿರ ದೇವಾಲಯಗಳು ಬೆಂಗಳೂರಿನ ಸುತ್ತಲ ಮುತ್ತಲೇ ಇದ್ದರೂ, ಕೆಲವು ಬೆರಳೆಣಿಕೆಯ ದೇವಾಲಯಗಳನ್ನು ಬಿಟ್ಟರೆ, ಉಳಿದ ದೇವಾಲಯಗಳ ಸ್ಥಿತಿ ಬಹಳ ಶೋಚನೀಯವಾಗಿದ್ದು,   ಅದರ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಕಿಂಚಿತ್ತೂ ಸಹಾಯವಾಗದೇ, ಆಯಾಯಾ ಊರಿನವರು ತಮ್ಮ ಕೈಲಾದ ಮಟ್ಟಿಗಿನ ಹಣವನ್ನು ಸಂಗ್ರಹಿಸಿ ಅಲ್ಲಿನ ಸ್ಥಳೀಯ ರಾಜಕೀಯ ಆಕಾಂಕ್ಷಿಗಳನ್ನು ಪುಸಲಾಯಿಸಿ ದೇವಾಲಯಗಳ ಉದ್ಧಾರ ಮಾಡುವಂತಹ ದೈನೇಸಿ ಪರಿಸ್ಥಿತಿ ಇದೆ.

ಈ ದೇವಾಲಯಗಳ  ವಾರ್ಷಿಕ ಆದಾಯದ ಆಧಾರದ ಮೇಲೆ  ಗ್ರೇಡ್ ಎ, ಬಿ ಮತ್ತು ಸಿ ಎಂದು ವಿಂಗಡಿಸಿ ವಾರ್ಷಿಕವಾಗಿ 25 ಲಕ್ಷ ರೂ.ಗಿಂತ ಹೆಚ್ಚು ಆದಾಯ ಗಳಿಸುವ 205  ಎ ಗ್ರೇಡ್ ದೇವಾಲಯಗಳು, ವಾರ್ಷಿಕವಾಗಿ 5 ರಿಂದ 10 ಲಕ್ಷ ರೂ.ಗಳವರೆಗೆ ಆದಾಯ ಗಳಿಸುವ 139  ಗ್ರೇಡ್ ಬಿ  ದೇವಾಲಯಳು ಮತ್ತು ವಾರ್ಷಿಕವಾಗಿ 5 ಲಕ್ಷ ರೂ.ಗಿಂತ ಕಡಿಮೆ ಆದಾಯ ಗಳಿಸುವ 34,219 ಗ್ರೇಡ್ ಸಿ ದೇವಾಲಯಗಳಿವೆ.  ಕೇವಲ ಗ್ರೇಡ್ ಎ ದೇವಾಲಯಗಳಿಂದಲೇ ಸರಾಸರಿ ವಾರ್ಷಿಕವಾಗಿ 1 ಸಾವಿರ ಕೋಟಿಕೂ ಅಧಿಕ ಆದಾಯ ಬರುತ್ತಿದ್ದರೆ, ಇನ್ನು ಬಿ ಅಡಿಯಲ್ಲಿ ಬರುವ ದೇವಾಲಯಗಳಿಂದ ಬರುವ ಆದಾಯವೂ ಸೇರಿದಂತೆ ಸರ್ಕಾರದ  ಧಾರ್ಮಿಕ ದತ್ತಿ ಇಲಾಖೆ (ಮುಜರಾಯಿ ಇಲಾಖೆ) ಕೋಟಿ ಕೋಟಿ ಆದಾಯ ಬರುತ್ತದಾದರೂ, ಹಾಗೆ ಸಂಗ್ರಹಿಸಿದ ಹಣದ ಕೇವಲ 10% ಮತ್ತು 5% ಹಣವು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆಯ ಆಯುಕ್ತರು ನಿರ್ವಹಿಸುವ ಸಾಮಾನ್ಯ ನಿಧಿಗೆ ಹೋಗುತ್ತಿದ್ದು ಉಳಿದೆಲ್ಲವೂ ಸರ್ಕಾರದ ಖಜಾನೆಗೆ ಹೋಗಿ  ಈ ರಾಜಕೀಯ ನಾಯಕರು ಅನ್ಯಧರ್ಮೀಯರನ್ನು ಓಲೈಸಿಕೊಳ್ಳುವ ತೆವಲಿಗೆ ಖರ್ಚಾಗುತ್ತಿದೆ.

ಇಷ್ಟೆಲ್ಲಾ ಹಣವು ಶ್ರಧ್ಧೇಯ ಹಿಂದೂಗಳ ಧಾರ್ಮಿಕ ನಂಬಿಕೆಯಿಂದಾಗಿ ದೇವಾಯದಲ್ಲಿನ ವಿವಿಧ ಸೇವೆಗಳು ಮತ್ತು ಹುಂಡಿಗೆ ಹಾಕುವ ಹಣದಿಂದ ಬರುತ್ತಿದ್ದರೂ, ಬಹುತೇಕ ದೇವಾಲಯಗಳಲ್ಲಿ ಭಕ್ತಾದಿಗಳಿಗೆಂದು ಇರುವ ಮೂಲ ಸೌಕರ್ಯಳನ್ನು ಆ ದೇವರೇ ಕಾಪಡಬೇಕಿದೆ. ಕೆಲವು ದೇವಾಲಯಗಳಲ್ಲಿ ಶೌಚಾಲಯ, ವಾಹನ ವ್ಯವಸ್ಥೆ, ಪಾರ್ಕಿಂಗ್‌ ಸಮಸ್ಯೆ, ದಾಸೋಹದ ಬಗ್ಗೆ ಹೇಳುವುದಕ್ಕೇ ಅಸಹ್ಯವಾಗುತ್ತದೆ.

ಧಾರ್ಮಿಕ ದತ್ತಿಯ ದೇವಾಲಯಗಳಲ್ಲಿ ಈ ರೀತಿಯ ಪರಿಸ್ಥಿತಿ ಇರುವಾಗ  ಈ ಕಾಂಗ್ರೇಸ್ ಸರ್ಕಾರ ಆದಾವ ರೀತಿಯಲ್ಲಿ  ದೇವಾಲಯಗಳ ಆದಾಯವನ್ನು ಹೆಚ್ಚಿಸುವ ಸಂಕಲ್ಪವನ್ನು ತೆಗೆದುಕೊಂಡಿದೆ ಎಂಬುದೇ ಅಚ್ಚರಿಯ ಸಂಗತಿಯಾಗಿದೆ.  ಈ ಸರ್ಕಾರ  ಹಿಂದೂಗಳ ಶ್ರದ್ಧಾ ಕೇಂದ್ರ ಎಂಬುದನ್ನು ತನ್ನ  ಆದಾಯ ಮೂಲ ಎಂದು ಪರಿಗಣಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ತನ್ನ  ಗ್ಯಾರಂಟಿಗಳಿಗೆ ಹಣ ಹೊಂಚಲು ವಿದ್ಯುತ್, ಹಾಲು, ರಿಜಿಸ್ಟ್ರೇಷನ್, ಪೆಟ್ರೋಲಿಯಂ ಉತ್ಪನ್ನಗಳು, ಮೆಟ್ರೋ ಹೀಗೆ ಕಂಡ ಕಂಡಡೆಯಲ್ಲೆಲ್ಲಾ ಬೆಲೆಯನ್ನು ಹೆಚ್ಚಿಸಿರುವಾಗ, ಈಗ ದೇವಾಲಯದ ಆದಾಯ ಹೆಚ್ಚಿಸಲು ದೇವಾಲಯಗಳ ಜಮೀನುನ್ನು ಮಾರುವ ಮೂಲಕವೋ, ದೇವರ ಒಡವೆಗಳನ್ನು ಮಾರಿಯೋ, ಸಾವಿರಾರು ವರ್ಷಗಳ ಐತಿಹಾಸಿಕ ದೇವಾಯಗಳ ವಾಸ್ತು ಶಿಲ್ಪಕ್ಕೆ ಧಕ್ಕೆ ಬರಬಹುದು ಎಂಬುದನ್ನೂ ಲೆಖ್ಖಿಸದೇ ದೇವಾಲಯದ ಸುತ್ತಲೂ ಅಂಗಡಿ ಮಳಿಗೆಗಳನ್ನು ಕಟ್ಟಿ, ತಮ್ಮ ಪಟಾಲಂಗಳಿಗೆ ಬಾಡಿಗೆ ಕೊಟ್ಟೋ.  ಇಲ್ಲವೇ, ದೇವಾಲಯಗಳ ಪ್ರವೇಶಕ್ಕೂ ದುಬಾರೀ ಬೆಲೆ ಕಟ್ಟಿ ಧಾರ್ಮಿಕ ಸೇವೆಗಳ ಬೆಲೆಯನ್ನು ಮೂರ್ನಾಲ್ಕು ಪಟ್ಟು ಹೆಚ್ಚಿಸಿದರೂ ಅಚ್ಚರಿ ಪಡಬೇಕಿಲ್ಲ.

ಕರ್ನಾಟಕ ಸರ್ಕಾರಕ್ಕೆ ದೇವಾಲಯಗಳ  ಮೇಲೆ ಪ್ರೀತಿ ಏಕೆ? ಎಂಬುದರ ಜಾಡನ್ನು ಅರೆಸಿ ಹೊರಟಾಗ ತಿಳಿದು ಬಂದ ವಿಷಯವೆಂದರೆ, ಕರ್ನಾಟಕದಂತೆಯೇ ಉಚಿತ ಗ್ಯಾರೆಂಟಿ ಯೋಜನೆಗಳ ಮೂಲಕವೇ  ಹಿಮಾಚಲ ಪ್ರದೇಶದಲ್ಲೂ ಅಲ್ಪ ಬಹುತದೊಂದಿಗೆ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರ  ಗ್ಯಾರಂಟಿಗಳಿಗೆ  ಹಣ ಹೊಂದಿಸಲು ಹೆಣಗಾಡುತ್ತಿದ್ದು, ಆಗ್ಗಾಗೆ ಅಗುವ ಪ್ರವಾಹ, ಭೂಕುಸಿತ ಸೇರಿದಂತೆ ಪ್ರಾಕೃತಿಕ ವಿಕೋಪವನ್ನು ತಡೆಯಲು ಹಿಮಾಚಲ ಕಾಂಗ್ರೆಸ್ ಸರ್ಕಾರ ಬಳಿ ಹಣವೇ ಇಲ್ಲದೇ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದ ಬಹುತೇಕ ಎಲ್ಲಾ ಮಾರ್ಗಗಳು ಅಂತ್ಯಗೊಂಡಿದ್ದು, ಈಗ ಕಡೆ ಮಾರ್ಗವಾಗಿ ಅಲ್ಲಿನ ಹಿಂದೂ ದೇವಸ್ಥಾನದ ಹುಂಡಿಗೆ ಕೈ ಹಾಕಿದ್ದು,  ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ದೇವಸ್ಥಾನಗಳು ದೇಣಿಗೆ ನೀಡುವಂತೆ ಅಲ್ಲಿನ ಕಾಂಗ್ರೆಸ್ ಸರ್ಕಾರ ಪತ್ರ ಬರೆದಿದೆ.  ಈ ಪತ್ರ ಇದೀಗ  ಸರ್ಕಾರದ ಆಡಳಿತದಲ್ಲಿರುವ ದೇವಸ್ಥಾನಗಳಲ್ಲಿ ಕೋಲಾಹಲ ಸೃಷ್ಟಿಸಿದೆ.

ಇನ್ನು ಇದ್ದಕ್ಕಿದ್ದಂತೆಯೇ ಹಿಂದೂ ದೇವಾಲಯಗಳ ಬಗ್ಗೆ ಅಕ್ಕರೆಯನ್ನು ತೋರಿಸುತ್ತಿರುವ ಇದೇ ಕಾಂಗ್ರೇಸ್ ಸರ್ಕಾರದ ಇಬ್ಬಂಧಿ ತನ ಹೇಗಿದೆ ಎಂದರೆ, ಬೆಂಗಳೂರಿನ ಉಪ್ಪಾರಪೇಟೆಯಿಂದ ಕೇವಲ ಕೂಗಳತೆಯ ದೂರದಲ್ಲಿರುವ ರಾಷ್ಟ್ರ ರಕ್ಷಣ ಪಡೆಯ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಜೀರ್ಣೋದ್ಧಾರವಾದ, ಧರ್ಮಾಂಬುಧಿ ನಾಗರಕಟ್ಟೆಯಲ್ಲಿ ಶಿವರಾತ್ರಿಯ ಮುನ್ನಾದಿನದಂದು ಶಿವಪೂಜೆ ಮಾಡುತ್ತಿರುವಾಗ ಪೋಲೀಸ್ ಅಧಿಕಾರಿಗಳನ್ನು ಕಳುಹಿಸಿ,  ದೇವಸ್ಥಾನದ ಆಡಳಿತ ಮಂಡಳಿಗೆ ಆ ಮಧ್ಯರಾತ್ರಿಯಲ್ಲಿ ದೇವಾಲಯದಲ್ಲಿ ಪೂಜೆ ಮಾಡಲು ಅನುಮತಿ ಇದೆಯೇ? ಎಂದು ಬೆದರಿಸುವಂತಹ ಪರಿಸ್ಥಿತಿ ಇರುವಾಗ  ಇಂತಹ ಸರ್ಕಾರದಿಂದ ಹಿಂದೂ ದೇವಾಲಯಗಳ ಉದ್ಧಾರವಾಗುತ್ತದೆ ಎಂದು ನಂಬಲು ಸಾಧ್ಯವೇ ಎಂದು ಹಿಂದೂಗಳು ಕೇಳುತ್ತಿದ್ದು, ಆದಷ್ಟು ಬೇಗನೇ ಈ ದೇವಾಲಯಗಳನ್ನು ಸರ್ಕಾರದ ವಶದಿಂದ ಕೈ ಬಿಡಬೇಕೆಂದು ಆಗ್ರಹಿಸುತ್ತಿರುವುದರಲ್ಲೂ  ಸತ್ಯವಿದೆ  ಎಂದನಿಸುತ್ತಿದೆ ಅಲ್ಲವೇ?

ಅಯೋಧ್ಯೆಯಲ್ಲಿ ರಾಮ ಮಂದಿರದ ನಿಧಿ ಸಂಗ್ರಹಣ ಅಭಿಯಾನದ ಸಂಧರ್ಭದಲ್ಲಿ, ರಾಮ ಮಂದಿರ ಅಲ್ಲೇ ಏಕೆ ಕಟ್ಟಬೇಕು?  ಅಲ್ಲಿ ಕಟ್ಟುವ ದೇವಾಲಯಕ್ಕೆ ನಾನು ಹಣ ಕೊಡುವುದಿಲ್ಲ ಎಂದಿದ್ದ ಸಿದ್ದರಾಮಯ್ಯನವರು ಈಗ ನನ್ನ ಹೆಸರಿನಲ್ಲೇ ರಾಮ ಇದೆ ಎನ್ನುತ್ತಿದ್ದರೆ, ಇನ್ನು ಉಪ ಮುಖ್ಯಮಂತ್ರಿಯಿಂದ ಮುಖ್ಯಮಂತ್ರಿಯಾಗಿ ಭಡ್ತಿ ಪಡೆಯಲು ಹಾತೋರೆಯುತ್ತಿರುವ, ಕೆಲವು ವರ್ಷಗಳ ಹಿಂದೆ ಕನಕಪುರದ ಬಳಿಯ ಗುಡ್ಡವೊಂದನ್ನು ಏಸು ಬೆಟ್ಟವನ್ನಾಗಿ ಮಾಡಲು ಸಾರಥ್ಯವಹಿಸಿದ್ದ, ಮುಸಲ್ಮಾನರು ನನ್ನ ಬ್ರದರ್ಸ್ ಎಂದಿದ್ದ  ಡಿ. ಕೆ. ಶಿವಕುಮಾರ್ ಸಹಾ  ಈಗ  ಈಶಾ ಫೌಂಡೇಶನ್ ಅವರ ಕೊಯಮತ್ತೂರಿನಲ್ಲಿ  ಅದ್ದೂಯಾಗಿ ನಡೆಯುವ ಶಿವರಾತ್ರಿ ಜಾಗರಣೆಯಲ್ಲಿ ಪಾಲ್ಗೊಂಡು ನನ್ನ ಹೆಸರಿನಲ್ಲೇ ಶಿವ ಇದೆ. ನಾನೂ ಸಹಾ ಶಿವ ಭಕ್ತ. ನಾನು ಹುಟ್ಟಿದ್ದೇ ಹಿಂದು ವಾಗಿ ಸಾಯುವುದೂ ಹಿಂದೂವಾಗಿಯೇ ಎಂದು ಹೇಳುವ ಮೂಲಕ ಮತ್ತು ತಮ್ಮ ಪಕ್ಷದ ಆದೇಶ ವಿರುದ್ಧವಾಗಿ ಕುಟುಂಬದೊಡನೆ ಕುಂಭಮೇಳದಲ್ಲಿ ಭಾಗವಹಿಸಿ ಹಿಂದೂಗಳ ಭಾವೆನೆಗಳೊಂದಿಗೆ ಚಲ್ಲಾಟವಾಡುತ್ತಿರುವುದು ಅಂಗೈಯ್ಯಲ್ಲಿರುವ ಗೆರೆಯಷ್ಟು ಸ್ಪಷ್ಟವಾಗಿದೆ.

ಇವೆಲ್ಲವನ್ನೂ ಸೂಕ್ಷವಾಗಿ ಗಮನಿಸುತ್ತಿರುವ ಹಿಂದೂಗಳು ಸಹಾ ಹಿಂದೂ ದೇವಸ್ಥಾನಗಳನ್ನು ಆದಾಯದ ಮೂಲವೆಂದು‌ ಭಾವಿಸುವ‌ ಈ ಕಾಂಗ್ರೇಸ್ ಸರ್ಕಾರದ ವಿರುದ್ಧವಾಗಿ  ಸರ್ಕಾರದ ಅಧೀನದಲ್ಲಿರುವ ದೇವಾಲಯಗಳಲ್ಲಿ ಯಾವುದೇ ಸೇವೆ ಮಾಡಿಸುವುದಾಗಲೀ ಇಲ್ಲವೇ ಹುಂಡಿಗೆ ಹಣವನ್ನು ಹಾಕದಿರುವ ಮಹಾ ಸಂಕಲ್ಪವನ್ನು ತೊಟ್ಟಿರುವುದು ತಪ್ಪಿಲ್ಲ  ಎನಿಸುತ್ತಿದೆ. ಮಾತೆತ್ತಿದರೆ, ಪುರೋಹಿತಶಾಹಿ, ಬ್ರಾಹ್ಮಣ್ಯತ್ವ ಎಂದು ಬ್ರಾಹ್ಮಣರ ವಿರುದ್ಧ ಹರಿ ಹಾಯುವ ಕಾಂಗ್ರೇಸ್ ನಾಯಕರಿಗೆ ಈಗ ಅದೇ ಬ್ರಾಹ್ಮಣರು ಪೂಜೆಮಾಡುವ ದೇವಾಲಯದ ಹುಂಡಿಯ ಹಣ ಬೇಕು.  ಚುನಾವಣೆಯ ಸಮಯದಲ್ಲಿ ಅಹಿಂದ ಮತಗಳ ಹಿಂದೆ ಓಡುವ ಈ ಕಾಂಗ್ರೇಸ್ಸಿಗರಿಗೆ ಈಗ ಹಿಂದೂ ದೇವಾಲಯಗಳ ಹುಂಡಿಯ ಆದಾಯದ ಬದಲಾಗಿ, ಸರ್ಕಾರಕ್ಕೆ ಒಂದು ರೂಪಾಯಿ ಆದಾಯವಿರದ, ಅಹಿಂದ ಪ್ರಾರ್ಥನಾ ಮಂದಿರಗಳ  ಆದಾಯಕ್ಕೆ ಕೈ ಹಾಕಿ ಸರ್ಕಾರ ನಡೆಸಿ ತೋರಿಸಲಿ ಮತ್ತು ಮತ್ತೊಮ್ಮೆ ಅಧಿಕಾರಕ್ಕೆ ಬಂದು ತೋರಿಸದೇ, ಈ ರೀತಿಯಾಗಿ ಬಿಟ್ಟಿ ಭಾಗ್ಯಗಳನ್ನು ಕೊಡುವುದಕ್ಕಾಗಿ ಹಿಂದೂಗಳ ಭಾವನೆಗೆ ಧಕ್ಕೆಯಾಗುವಂತೆ ಹುಂಡಿಗೆ ಕೈ ಹಾಕಿ ಹಿಂದೂಗಳನ್ನೂ ಹಿಂದೂ ದೇವಾಲಯಗಳ ಉದ್ಧಾರ ಮಾಡುತ್ತಿದೇವೆ ಎಂಬ ನಾಟಕ ಆಡಬೇಡಿ ಎನ್ನುತಿರುವುದರಲ್ಲೂ ತಪ್ಪಿಲ್ಲಾ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಮಂಜುಶ್ರೀ

Leave a comment