ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ

ನಮ್ಮ ದೇಶದ ಋಷಿಕೇಶ, ಹರಿದ್ವಾರ ಮತ್ತು ವಾರಣಾಸಿ ನಗರಗಳಲ್ಲಿ ಗಂಗಾ ನದಿಯು ಹರಿಯುತ್ತಿದ್ದು ಈ ತೀರ್ಧಕ್ಷೇತ್ರಗಳಿಗೆ  ಪ್ರತಿದಿನವೂ ಲಕ್ಷಾಂತರ ಭಕ್ತಾದಿಗಳು ಆಗಮಿಸಿ ಗಂಗೆಯಲ್ಲಿ ಮಿಂದೆದ್ದು ತಾವು ಮಾಡಿದ ಪಾಪಗಳನ್ನು ಕಳೆದುಕೊಂಡು ಪುಣ್ಯ ಪಡೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಗಂಗಾ ಸ್ನಾನ ಮಾಡಿದ ನಂತರ ಗಂಗಾ ಪೂಜೆ ಮಾಡುವ ಸಂಪ್ರದಾಯ ನಮ್ಮಲ್ಲಿ ಬಹಳ ವರ್ಷಗಳಿಂದ ರೂಢಿಯಲ್ಲಿದ್ದು ಗಂಗಾ ದೇವಿಗೆ ಈ ರೀತಿಯಾಗಿ ಬಾಗಿಣ  ಅರ್ಪಿಸುವುದು ಪವಿತ್ರವೆಂದು ಪರಿಗಣಿಸಲಾಗಿದ್ದು ಭಗೀರಥನ ಪೂರ್ವಜರ ಪಾಪಗಳನ್ನು ತೊಳೆಯಲು ಗಂಗಾ ಮಾತೆಯು ಸ್ವರ್ಗದಿಂದ ಭೂಮಿಗೆ ಇಳಿದಳು ಎಂಬ ನಂಬಿಕೆ ಇರುವ ಕಾರಣ, ಗಂಗಾ ಆರತಿಯ ಮಹತ್ವ ಮತ್ತಷ್ಟು ಹೆಚ್ಚಾಗಿದೆ.   ಪ್ರತೀ ದಿನದ ಸಂಜೆ ಈ ಮೂರು ತೀರ್ಥ ಕ್ಷೇತ್ರಗಳಲ್ಲಿ ಭಕ್ತಾದಿಗಳ ಸಮ್ಮುಖದಲ್ಲಿ ಗಂಗಾ ನದಿಯ ಘಾಟ್‌ಗಳ ಬಳಿ ವೇದ ಮಂತ್ರಗಳು  ದೀಪ, ಜಪ ಘಂಟಾನಾದ ಮತ್ತು ಶಂಖನಾದದೊಂದಿಗೆ ಅಲ್ಲಿನ ಪುರೋಹಿತರು ಸುಮಾರು 45 ನಿಮಿಷಗಳ ಕಾಲ ಮಾಡುವ ವಿಶೇಷವಾದ ಆಧ್ಯಾತ್ಮಿಕ ಪೂಜೆಗಳನ್ನು ನೋಡಿ ಮನಸ್ಸನ್ನು ತುಂಬಿಕೊಳ್ಳಲು ಲಕ್ಷಾಂತರ ಜನರು ಅಲ್ಲಿ  ಸೇರುತ್ತಾರೆ. ಹಾಗೆ ಅರ್ಚಕರಿಂದ ಪೂಜೆಗಳು ನಡೆದ ನಂತರ ಅನೇಕ ಭಕ್ತರು ಮಣ್ಣಿನ ದೀಪಗಳು ಮತ್ತು ಹೂವುಗಳೊಂದಿಗೆ ಗಂಗಾ ಮಾತೆಗೆ ಪೂಜೆ ಮಾಡಿ ನಂತರ ವಿಳ್ಳೇದೆಲೆಯ ಮೇಲೆ ಕರ್ಪೂರದಾರತಿಯನ್ನು ತೇಲಿ ಬಿಡಲಾಗುತ್ತದೆ.

ನಂತರದ ದಿನಗಳಲ್ಲಿ ಈ ರೀತಿಯ ಗಂಗಾ ಆರತಿಯು ವಿಶೇಷ ಹಬ್ಬ ಹರಿದಿನಗಳಲ್ಲಿ ದೇಶಾದ್ಯಂತ ವಿವಿಧ ತೀರ್ಥ ಕ್ಷೇತ್ರಗಳಲ್ಲಿ ಆರಂಭವಾಗಿದ್ದು, ನಮ್ಮ ನಂಜನಗೂಡು ಮತ್ತು ಶ್ರೀರಂಗಪಟ್ಟಣದಲ್ಲೂ ಈ ರೀತಿಯ ಗಂಗಾರತಿ ಸ್ಥಳೀಯ ದೇವಾಲಯಗಳು ಮತ್ತು ಭಕ್ತದಿಗಳು ಹಣದಲ್ಲಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದ  ವಿಷಯವಾಗಿದೆ. ಇತ್ತೀಚೆಗೆ ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭಮೇಳಕ್ಕೆ ಕುಂಭ ಸ್ನಾನಕ್ಕೆ ಹೋಗಿದ್ದ ಬಹುತೇಕರು ಹಾಗೇ ಅಯೋಧ್ಯೆ ಮತ್ತು ವಾರಣಾಸಿಗೂ ಹೋಗಿ ಕಾಶಿಯಲ್ಲಿನ ಗಂಗಾರತಿಯನ್ನು ನೋಡಿ ಸಂಭ್ರಮಿಸಿದ್ದೂ ಸಹ ಗಮನಾರ್ಹವಾಗಿದ್ದು,  ಬಹುಶಃ ಅಲ್ಲಿಂದಲೇ ಪ್ರೇರಣೆ ಪಡೆದೋ ಏನೋ, ಈಗ ಉತ್ತರ ಪ್ರದೇಶದ ಗಂಗಾರತಿ ಮಾದರಿಯಲ್ಲೇ ಬೆಂಗಳೂರಿನ ಸದಾಶಿವ ನಗರ ವೃತದ ಬಳಿ ಇರುವ  ಸ್ಯಾಂಕಿ ಕೆರೆ​ಯಲ್ಲಿಯೂ 2025ರ ಮಾರ್ಚ್  21ರಂದು ಅದ್ದೂರಿಯಾಗಿ  ಕಾವೇರಿ ಆರತಿಯನ್ನು ರಾಜ್ಯ ಸರ್ಕಾರ ಜನರ ತೆರಿಗೆ ಹಣದಲ್ಲಿ ಹಮ್ಮಿಕೊಂಡಿದ್ದು ಅದರ ಪರ ಮತ್ತು ವಿರೋಧಗಳು ಚರ್ಚೆಯು  ಆರಂಭವಾಗಿದ್ದು ಈ ವಿಚಾರವಾಗಿ  ಹೈಕೋರ್ಟಿನ ಮೆಟ್ಟಿಲನ್ನೂ ಎಡತಾಕಿರುವುದು ನಿಜಕ್ಕೂ ವಿಷಾಧನೀಯವಾಗಿದೆ.

ಬೆಂಗಳೂರು ಜಲಮಂಡಳಿಯು 60 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ನಡೆಸುತ್ತಿರುವ ವಜ್ರ ಮಹೋತ್ಸವದ  ಅಂಗವಾಗಿ ನಡೆಸುತ್ತಿರುವ ವಿವಿಧ ಕಾರ್ಯಕ್ರಮಗಳಲ್ಲಿ, ಬೆಂಗಳೂರು ಮಹಾ ನಗರಕ್ಕೆ ನೀರು ಉಣಿಸುತ್ತಿರುವ ಕಾವೇರಿ ನದಿಯು ಕೇವಲ ಒಂದು ನದಿ ಆಗಿರದೇ ಅದು ಕನ್ನಡಿಗರ ಜೀವನಾಡಿಯಾಗಿದ್ದು, ಅದಕ್ಕೆ ನಮನ ಸಲ್ಲಿಸುವ ಉದ್ದೇಶದ ಜೊತೆಗೆ ನೀರಿನ ಉಳಿತಾಯ, ಸಂಸ್ಕರಿಸಿದ ನೀರಿನ ಮರು ಬಳಕೆ, ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ ಮಾಡುವುದರ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ಕಾವೇರಿ ಆರತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಈ ಕಾವೇರಿ ಆರತಿ ಕಾರ್ಯಕ್ರಮಕ್ಕಾಗಿ  ಅದ್ದೂರಿಯ ಸಿದ್ಧತೆಗಳು ನಡೆಸುತ್ತಿದ್ದು ಅದಕ್ಕಾಗಿ  ಉತ್ತರ ಪ್ರದೇಶದಿಂದ ವಿಶೇಷವಾಗಿ ಪುರೋಹಿತರನ್ನು ವಿಶೇಷವಾದ ವಿಮಾನದಲ್ಲಿ ಕರೆಸಲಾಗುತ್ತಿದ್ದು, ಕೊಡಗಿನ ಭಾಗಮಂಡಲದ ಭಗಂಡೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ಕಾವೇರಿ, ಕನ್ನಿಕಾ ಮತ್ತು ಸುಜ್ಯೋತಿ ನದಿಗಳ ಸಂಗಮದಲ್ಲಿಂದ ಪವಿತ್ರ ನೀರನ್ನು ತಂದು ಸ್ಯಾಂಕಿ ಕೆರೆಗೂ ಸಹಾ ಹಾಕುವುದಲ್ಲದೇ ಅಲ್ಲಿಂದ ತಂದ  ನೀರಿನ ಕಳಸಕ್ಕೆ ಪೂಜೆ ಮಾಡಿ ಸಂಜೆ ಸಂಜೆ 6 ಗಂಟೆಯ ಬಳಿಕ ಕಾವೇರಿ ಆರತಿ ಮಾಡಿ ಆ ನೀರನ್ನು ಗಂಗಾರತಿಗೆ ಬರುವ ಜನರಿಗೆ ತೀರ್ಥವನ್ನಾಗಿ ವಿತರಣೆ ಮಾಡಲು ಯೋಜಿಸಲಾಗಿದ್ದು ಇದೇ ವೇಳೆ, ವಿಶ್ವ ಜಲ ಪ್ರತಿಜ್ಞೆ ಸ್ವೀಕಾರ ಅಭಿಯಾನವನ್ನೂ ಉದ್ಘಾಟಿಸಲಾಗುತ್ತದೆ.

ಬೆಂಗಳೂರಿನಲ್ಲಿ ಈ ರೀತಿಯಾದ ವಿನೂತನ ಕಾವೇರಿ ಆರತಿಯ ಕಾರ್ಯಕ್ರಮದ ಮೂಲಕ ಜನರ ಧಾರ್ಮಿಕ ಭಾವನೆಗೆ ಒತ್ತು ನೀಡುವುದಲ್ಲದೇ, ನೀರಿನ ಉಳಿತಾಯ ಹಾಗೂ ಸಮರ್ಪಕ  ಸದ್ಭಳಕೆಯ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವುದೇ ಇದರ ಮೂಲಕ ಉದ್ದೇಶವಾಗಿದೆ ಎಂದು ಹೇಳುತ್ತಿದ್ದರೂ, ಇದರ ಹಿಂದೆ ರಾಜಕೀಯದ ವಾಸನೆ ಅತ್ಯಂತ ದಟ್ಟವಾಗಿ ಎಲ್ಲರ ಮೂಗಿಗೆ ಬಡಿಯುತ್ತಿದೆ. ಶತಾಯ ಗತಾಯ ಈ ಬಾರಿ ಕರ್ನಾಟಕದ ಮುಖ್ಯಮಂತ್ರಿ ಆಗಲೇ ಬೇಕು ಎಂದು ನಿರ್ಧರಿಸಿರುವ ಕರ್ನಾಟಕದ ಉಪಮುಖ್ಯಮಂತ್ರಿಗಳು, ಕರ್ನಾಟಕ ಪ್ರದೇಶ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾಗಿರುವ ಡಿ. ಕೆ. ಶಿವಕುಮಾರ್ ಅವರು ಒಂದು ಕಡೆ ಮುಸಲ್ಮಾನರನ್ನು ತನ್ನ ಬ್ರದರ್ಸ್ ಎಂದು ಪದೇ ಪದೇ  ಆ ಸಮುದಾಯವನ್ನು ಓಲೈಸುತ್ತಿರುವುದರ ವಿರುದ್ಧ ಹಿಂದೂಗಳು ಬೇಸರ ಗೊಂಡಿದ್ದನ್ನು ಸರಿ ಪಡಿಸಿಕೊಂಡು ಹಿಂದೂಗಳನ್ನು ಓಲೈಕೆ ಮಾಡುವ ಸಲುವಾಗಿ, ಈಗಾಗಲೇ ಗ್ಯಾರಂಟಿ ಭರಾಟೆಯಿಂದ ದೀವಾಳಿತನದ ಅಂಚಿಗೆ ಬಂದಿರುವಂತಹ ನಮ್ಮ ರಾಜ್ಯದಲ್ಲಿ ಈಗ ಜನರ ತೆರಿಗೆ ಹಣದಿಂದ ಎರಡು ಕೋಟಿಗೂ ಅಧಿಕ ಮೊತ್ತವನ್ನು ಖರ್ಚು ಮಾಡುತ್ತಿರುವುದು ಎಷ್ಟು ಸರಿ? ಎಂದು ಜನರು ಪ್ರಶ್ನಿಸುತ್ತಿರುವುದಲ್ಲದೇ, ಇದರ ವಿರುದ್ಧ ಹೈಕೋರ್ಟ್ ಮಟ್ಟಿಲನ್ನೂ ಹತ್ತಿರುವುದು ಗಮನಾರ್ಹವಾಗಿದೆ.

ಹಾವೂ ಸಾಯಬಾರದೂ ಕೋಲೂ ಮುರಿಯಬಾರದು ಎಂಬ ಗಾದೆ ಮಾತಿನಂತೆ ಡಿ.ಕೆ. ಶಿವಕುಮಾರ್ ಅವರ ದೂ(ರು)ರಾಲೋಚನೆಯಿಂದ ನಡೆಸಲಾಗುತ್ತಿರುವ ಈ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು  ಆಹ್ವಾನಿಸುವ ಮೂಲಕ ಡಿಕೆಶಿ ಜಾಣ ನಡೆಯನ್ನು ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದ್ದರೆ, ಬಿಜೆಪಿಗರು  ಹಿಂದೂ ಧರ್ಮ ರಾಜಕಾರಣದ ಮೂಲಕ ಮೌಢ್ಯವನ್ನು ಜನರಿಗೆ ಬಿತ್ತುವ ಮೂಲಕ ಅಧಿಕಾರಕ್ಕೆ ಬರಲು ಹುನ್ನಾರ ನಡೆಸುತ್ತಿದ್ದಾರೆ ಎಂದು  ಕಟುವಾಗಿ ಟೀಕಿಸುವ ಸಿದ್ದರಾಮಯ್ಯನವರು, ಈಗ ಗ್ಯಾರಂಟಿಗಳಿಂದ ರಾಜ್ಯ ದೀವಾಳಿಯಾಗುತ್ತಿದೆ ಮತ್ತು ಇತ್ತೀಚಿಗೆ ಅವರು ಮಂಡಿಸಿದ ಬಜೆಟ್ ನಲ್ಲಿ ಓಲೈಕೆ ರಾಜಕಾರಣಕ್ಕಾಗಿ ಅಹಿಂದಕ್ಕೇ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ಹಿಂದೂ ವಿರೋಧಿ ಎಂಬ ಹಣೆಪಟ್ಟಿಯನ್ನು ಕಳೆದುಕೊಳ್ಳುವ  ಮತ್ತು ಜನರನ್ನು ದಿಕ್ಕು ತಪ್ಪಿಸುವ ಸಲುವಾಗಿ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗುತ್ತಿದ್ದಾರೆ ಎನ್ನುವುದು ಜಗಜ್ಜಾಹೀರಾತಾಗಿದೆ.

ಈ ಕಾವೇರಿ ಆರತಿ ಕಾರ್ಯಕ್ರಮವು 2019ರ ಜಲ ಸಂಪನ್ಮೂಲ ಸಂರಕ್ಷಣೆ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ ಎಂದು ವಕೀಲ ಜಿ.ಆರ್. ಮೋಹನ್ ಅವರು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಹೈಕೋರ್ಟ್ ನಲ್ಲಿ ಸಲ್ಲಿಸಿ ಈ ಕಾರ್ಯಕ್ರಮವನ್ನು ರದ್ದು ಮಾಡಲು ಕೋರಿರುವುದಲ್ಲದೇ, ರಾಜ್ಯದಲ್ಲಿರುವ ಎಲ್ಲಾ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದರ ಜೊತೆಗೆ ಕೆರೆ ಆವರಣವನ್ನು ಯಾವುದೇ ರೀತಿಯ ಧಾರ್ಮಿಕ, ಸಾಂಸ್ಕೃತಿಕ ಮತ್ತು ವ್ಯಾವಹಾರಿಕ ಉದ್ದೇಶಗಳಿಗೆ ಬಳಸಲು ಅನುವು ಮಾಡಿಕೊಡಬಾರದೆಂದೂ ಕೋರಿದ್ದಾರೆ.

ಇನ್ನು ಸುಷ್ಮಾ ಅಯ್ಯಂಗಾರ್ ಎನ್ನುವವರು ಇನ್ನೂ ಒಂದು ಹೆಜ್ಜೆ ಮಂದೆ ಹೋಗಿ, ಈ ಬೇಸಿಗೆಯ ಸಮಯದಲ್ಲಿ ರಾಜ್ಯಾದ್ಯಂತ ಬಹುತೇಕ ಕೆರೆಗಳು ಒಣಗಿ ಜನರಿಗೆ ಮತ್ತು ದನಕರುಗಳಿಗೆ ಕುಡಿಯಲೂ ನೀರು ಸಹಾ  ದೊರಕದೇ ಇರುವ ಸಮಯದಲ್ಲಿ, ಕೆರೆಗೆಳ ಹೂಳೆತ್ತುವುದು, ಕೆರೆಗಳ ಅಭಿವೃದ್ಧಿ ಪಡಿಸಿ ಇನ್ನೂ ಹೆಚ್ಚಿನ ಜಲಾನಯನ ಪ್ರದೇಶವನ್ನು ವಿಸ್ತರಿಸುವ ಬದಲು,  ಕಾವೇರಿ ಎಂಬ ಹೆಸರಿದ್ದರೆ ಕನ್ನಡಿಗರು ಭಾವನಾತ್ಮಕವಾಗಿ ಜೋಡಿಸಿಕೊಳ್ಳುತ್ತಾರೆ ಎಂಬ ಕಾರಣದಿಂದ ಸ್ಯಾಂಕಿ ಕೆರೆಗೂ ಕಾವೇರಿಗೂ ಸಂಬಂಧವೇ ಇದರದಿದ್ದರೂ, ಜನರ ಭಾವಾತ್ಮಕದೊಂದಿಗೆ ಚೆಲ್ಲಾಟವಾಡುತ್ತಾ ಕಾವೇರಿ ಆರತಿ ಎಂಬ ಕಾರ್ಯಕ್ರಮ ಮಾಡುತ್ತಿರುವುದು ಜನರ ಕಣ್ಣಿಗೆ ಮಂಕು ಬೂದಿಯನ್ನು  ಎರೆಚುತ್ತಿದ್ದಾರೆ ಎನ್ನುತ್ತಿದ್ದಾರೆ.

2021ರಲ್ಲಿ, ಯಡೆಯೂರಪ್ಪನವರ ಬಿಜೆಪಿ ಸರ್ಕಾರ ತುಂಗಾ ಆರತಿ ಯೋಜನೆಯನ್ನು ಘೋಷಿಸಿದರೆ, ನಂತರ ಮುಖ್ಯಮಂತ್ರಿಗಳಾದ  ಬಸವರಾಜ ಬೊಮ್ಮಾಯಿ ತುಂಗಾ ಆರತಿಗೆ 30 ಕೋಟಿ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ಹಣವನ್ನು ಬಜೆಟ್‌ನಲ್ಲಿ ನಿಯೋಜಿಸಿದರೆ, ಅಕ್ಟೋಬರ್ 2022ರಲ್ಲಿ ಬೊಮ್ಮಾಯಿ ಸರ್ಕಾರ, ಕಾವೇರಿ ನದಿ ಉತ್ಸವವನ್ನು ಆರಂಭಿಸಿ  ಕೊಡಗು ಜಿಲ್ಲೆಯ ಭಾಗಮಂಡಲ, ಕುಶಾಲನಗರ, ಕಣಿವೆ ಕಾವೇರಿ ನದಿ ತಟದಲ್ಲಿ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮಗಳನ್ನು ನದಿ ಪಾತ್ರದಲ್ಲಿ  ನೆರವೇರಿಸುವ ಅದೊಂದು ಧಾರ್ಮಿಕ ಕಾರ್ಯಕ್ರಮ ಎಂದು ಬಿಂಬಿಸಲಾಗಿತ್ತು.  ಅದು ಆ ಪಕ್ಷ ಮತ್ತು ಅದರ ಕಾರ್ಯಕರ್ತರ ಮನಸ್ಥಿತಿಯ ಅನುಗುಣವಾಗಿತ್ತು.

ಆದರೆ ಹಣೆಯಲ್ಲಿ ತಿಲಕ ಧರಿಸುವುದಕ್ಕೆ ಧಿಕ್ಕರಿಸುವ, ತಲೆಯಿಂದ ಕೇಸರಿ ಪೇಟವನ್ನು ಕಿತ್ತೊಗೆಯುವ, ಮಾಂಸವನ್ನು ತಿಂದು ದೇವಾಲಯಗಳಿಗೆ ಹೋಗುವ ಮೂಲಕ  ಹಿಂದೂ ವಿರೋಧಿ ಧೋರಣೆಯನ್ನೇ ತೋರುವ, ಹಿಂದೂ ಆಚರಣೆಗಳನ್ನು  ಮೌಢ್ಯಾಚರಣೆಗಳು ಎನ್ನುವ ಸಮಾಜವಾದಿ, ಕೋಮುವಾದ ವಿರೋಧಿ, ಜಾತ್ಯಾತಿತ  ಮನಸ್ಥಿತಿ ಎಂದೆಲ್ಲಾ ಹೇಳಿಕೊಳ್ಳುವ  ಸಿದ್ಧರಾಮಯ್ಯನವರು ಸದಾಕಾಲವೂ ದಕ್ಷಿಣ ಭಾರತೀಯರ ಮೇಲೆ ಉತ್ತರ ಭಾರತೀಯರ ದಬ್ಬಾಳಿಕೆಯನ್ನು ಸಹಿಸಲಾಗದು ಎಂದು ಹೋದ ಬಂದ ಕಡೆಯಲ್ಲೆಲ್ಲಾ ಅಬ್ಬರಿಸುತ್ತಾ ತೊಡೆ ತಟ್ಟುವ  ಸಿದ್ದರಾಮಯ್ಯನವರು ಈಗ ಹರಿದ್ವಾರ ಮತ್ತು ಋಷಿಕೇಷ ಮತ್ತು ವಾರಣಾಸಿಗಳಲ್ಲಿ ಹಲವು ಶತಮಾನಗಳಿಂದ ಆಚರಣೆಯಲ್ಲಿರುವ ಈ ಗಂಗಾರತಿಯನ್ನು ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಆಚರಣೆ ಮಾಡಲು ಮುಂದಾಗಿರುವುದು ಎಷ್ಟು ಸರಿ?

ಹೀಗೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯ ಮಂತ್ರಿಗಳು ತಮ್ಮ ತಮ್ಮ ರಾಜಕೀಯ ತೆವಲುಗಳಿಗೆ ಮತ್ತು ರಾಜಕೀಯ ಮೇಲಾಟಗಳಿಗೆ, ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎನ್ನುವಂತೆ  ಹಿಂದೂಗಳ ಧಾರ್ಮಿಕ ಭಾವನೆಗಳ ಜೊತೆ ಆಟವಾಡುತ್ತಾ ಜನರ ತೆರಿಗೆ ಹಣವನ್ನು ಕೋಟಿ ಕೋಟಿ ವೆಚ್ಚದಲ್ಲಿ ನೀರು ಪಾಲು ಮಾಡುತ್ತಿರುವುದರ ವಿರುದ್ಧ ಎಲ್ಲರೂ ಒಕ್ಕೊರಲಿನ ಗಟ್ಟಿ ಧನಿಯನ್ನು ಎತ್ತುವುದು ಸದ್ಯಕ್ಕೆ ಅನಿವಾರ್ಯವಾಗಿದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಮಂಜುಶ್ರೀ

Leave a comment