ಭಾರತ ಮತ್ತು ಪಾಕೀಸ್ಥಾನದ ನಡುವಿನ ವೈರತ್ವ ನೆನ್ನೆಯ ಮೊನ್ನೆಯದಲ್ಲಾ. ಧರ್ಮಾಧಾರಿತವಾಗಿ ನಮ್ಮ ದೇಶವನ್ನು ವಿಭಜಿಸಿದರೂ, ಆಂದಿನ ನಮ್ಮ ಕೆಲ ನಾಯಕರುಗಳು ದೂರದೃಷ್ಟಿಯ ಕೊರತೆಯಿಂದಾಗಿ, ಭಾರತ ಹಿಂದೂಸ್ಥಾನವಾಗದೇ, ಜಾತ್ಯಾತೀತರಾಷ್ಟ್ರವಾಗಿ, ಕಾಶ್ಮೀರದ ಸಮಸ್ಯೆ ವಿಶ್ವಸಂಸ್ಥೆಯವರೆಗೂ ಹೋಗಿ ಇನ್ನೂ ಮಗ್ಗಲ ಮುಳ್ಳಾಗಿಯೇ ಉಳಿದಿರುವ ಸತ್ಯ ಎಲ್ಲರಿಗೂ ತಿಳಿಸಿರುವುದೇ ಆಗಿದೆ. ಅದೇ ರೀತಿ ಅಂದಿನಿಂದಲೂ ಪದೇ ಪದೇ ಭಾರತದ ಮೇಲೆ ಕಾಲು ಕೆರೆದುಕೊಂಡು ಬರುವ ಪಾಕೀಸ್ಥಾನ, ಪ್ರತೀ ಬಾರಿಯೂ ಭಾರದಿಂದ ತಪರಾಕಿ ಹಾಕಿಸಿಕೊಂಡಿರುವ ವಿಷಯವೂ ಎಲ್ಲರಿಗೂ ತಿಳಿದಿದೆ.
2025ರ ಏಪ್ರಿಲ್ 22ರಂದು ಕಾಶ್ಮೀರದ ಪೆಹೆಲ್ಗಾಂ ನಲ್ಲಿ ಪ್ರವಾಸಕ್ಕೆಂದು ಅಂದಿದ್ದ ಅಮಾಯಕರ ಮೇಲೆ ಧರ್ಮವನ್ನು ಕೇಳಿ ಹಿಂದೂ ಎಂದು ಖಚಿತ ಪಡಿಸಿಕೊಂಡು ಅವರ ಕುಟುಂಬದವರ ಮುಂದೆಯೇ ಕೊಂದು ಹಾಕಿದಾಗ, ವಿದೇಶಿ ಪ್ರವಾಸದಲ್ಲಿದ್ದ ಪ್ರಧಾನಿಗಳು ತಮ್ಮ ಪ್ರವಾಸವನ್ನು ಮೊಟುಕು ಗೊಳಿಸಿ ಭಾರತಕ್ಕೆ ಹಿಂದಿರುಗಿ ಈ ಕುಕೃತ್ಯವನ್ನು ಮಾಡಿದವರು ಎಲ್ಲೇ ಇದ್ದರೂ ಹುಡುಕಿ ಹುಡುಕಿ ಮಣ್ಣಿನಲ್ಲಿ ಹೊಸಕಿ ಹಾಕುತ್ತೇವೆ ಎಂದಾಗ, ಅವರ ಈ ಹಿಂದಿನ ಮಿಲಿಟರಿ ಕಾರ್ಯಾಚರಣೆ ಮತ್ತು ವೈಮಾನಿಕ ಧಾಳಿಯ ಬಗ್ಗೆ ಅರಿತಿದ್ದ ಸಕಲ ಭಾರತೀಯರಿಗೆ ಪ್ರಧಾನಿಗಳ ಮೇಲಿನ ನಂಬಿಕೆ ಕಿಂಚಿತ್ತೂ ಕಡಿಮೆ ಆಗಿರಲಿಲ್ಲ.
ಸತ್ತವರ ಮನೆಯಲ್ಲಿ 13ನೇ ದಿನ ವೈಕುಂಠ ಸಮಾರಾಧನೆ ನಡೆಯುವ ಹೊತ್ತಿನಲ್ಲೇ ಭಾರತ ಏಕಾ ಏಕೀ ಪಾಕೀಸ್ಥಾನದಲ್ಲಿ ಉಗ್ರರು ಅಡಗಿ ಕುಳಿತಿದ್ದ 9 ಪ್ರದೇಶಗಳ ಮೇಲೆ ವೈಮಾನಿಕ ಧಾಳಿ ನಡೆಸಿದಾಗ ಇಡೀ 140 ಕೋಟಿ ಭಾರತೀಯರೂ ಸಂಭ್ರಮ ಪಟ್ಟಿದ್ದಲ್ಲದೇ, ತಾವು ಹಾಕಿದ ಮತ ವ್ಯರ್ಥವಾಗಲಿಲ್ಲ ಮತ್ತು ತಾವು ಕೊಟ್ಟ ತೆರಿಗೆ ಹಣ ಅಪವ್ಯಯವಾಗಲಿಲ್ಲ ಎಂದು ಕೊಂಡಾಡಿದರು. ಭಾರತದ ದಾಳಿಗೆ ಪ್ರತೀಕವಾಗಿ ಪಾಕೀಸ್ಥಾನವೂ ಸಹಾ ಗಡಿ ಪ್ರದೇಶದಲ್ಲಿ ಧಾಳಿ ನಡೆಸಲು ಮುಂದಾದಾಗ, ಪ್ರಧಾನಿಗಳೇ ಖುದ್ದಾಗಿ ಕಾರ್ಯಚರಣೆಗೆ ಅಪರೇಷನ್ ಸಿಂದೂರ ಎಂಬ ಹೆಸರನ್ನಿತ್ತು, ಸೈನ್ಯಕ್ಕೆ ಮುಕ್ತವಾಗಿ ನಿರ್ಧಾರ ತೆಗೆದುಕೊಳ್ಳುವ ಅವಕಾಶವನ್ನು ನೀಡಿದ ನಂತರವಂತೂ ನಮ್ಮ ಸೈನಿಕರ ಮನೋಬಲ ಹೆಚ್ಚಾಗಿದ್ದಲ್ಲದೇ, ಪಾಕೀಸ್ಥಾನದ ಆಟೋಟಪಗಳನ್ನು ಸಮರ್ಥವಾಗಿ ಎದುರಿಸಿದ್ದಲ್ಲದೇ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಾಕೀಸ್ಥಾನದ ಬಹುತೇಕ ವಾಯುನೆಲೆಗಳನ್ನು ಧ್ವಂಸ ಮಾಡಿದ್ದಲ್ಲದೇ, ಸತತವಾಗಿ ಭೂ, ವಾಯು ಮತ್ತು ಜಲ ಸೇನೆಯ ಮೂಲಕ ಧಾಳಿ ನಡೆಸಿ ಭಾರತದ ವಿರುದ್ಧ ಕಾಲು ಕೆರೆದುಕೊಂಡು ಕಿತಾಪತಿ ಮಾಡಲು ಬಂದಿದ್ದ ಪಾಕೀಸ್ಥಾನಕ್ಕೆ ತಕ್ಕ ಉತ್ತರವನ್ಣೇ ನೀಡತ್ತಲಿತ್ತು. ಪ್ರತೀ ದಿನವೂ ಇಬ್ಬರು ಮಹಿಳಾ ಸೇನಾಮಣಿಗಳು ಯುದ್ದದ ಮಾಹಿತಿಗಳನ್ನು ನೀಡಿದ್ದಂತೂ ಸಿಂದೂರ ಎಂಬ ಹೆಸರಿಗೆ ಅನ್ವರ್ಥವಾಗುವಂತಿತ್ತು.
ದೀಪಾವಳಿಗಿಂತಲೂ ಮುಂಚೆಯೇ ಭಾರತದಲ್ಲಿ ಬೆಳಕಿನ ಹಬ್ಬ ನಡೆದು ಸಂಭ್ರಮ ಪಡುತ್ತಿದ್ದರೆ, ಪಾಕೀಸ್ಥಾನದಲ್ಲಿ ಸೂತಕದ ಛಾಯೆ ಆವರಿಸಿತ್ತು. ನಾಲ್ಕನೆಯ ದಿನ ಬೆಳಿಗ್ಗೆ ಭಾರತ ತನ್ನ ಬ್ರಹ್ಮಾಸ್ತ್ರ ಬ್ರಹ್ಮೋಸ್ ಮೂಲಕ ಸಾಕಷ್ಟು ಧಾಳಿ ನಡೆಸಿ ಪಾಕೀಸ್ಥಾನವನ್ನು ನುಜ್ಜು ನೂರು ಮಾಡಿ ಇನ್ನೇನು ಕೆಲವೇ ಕೆಲವು ಘಂಟೆಗಳಲ್ಲಿ ವಿಶ್ವದಲ್ಲಿ ಪಾಕೀಸ್ಥಾನ ಎಂಬ ದೇಶ ಇತ್ತು ಎಂಬುದು ಇತಿಹಾಸವಾಗಿ ಹೋಗುತ್ತದೆ ಎಂದೇ ಎಲ್ಲರೂ ಭಾವಿಸಿರುವಾಗ ಇದ್ದಕ್ಕಿದ್ದಂತೆಯೇ ಎಂದಿನಂತೆಯೇ ಪಾಕೀಸ್ಥಾನ ಅಮೇರಿಕಾದ ಕಾಲು ಕಟ್ಟಿ ದಯವಿಟ್ಟು ಈ ಕದನವನ್ನು ನಿಲ್ಲಿಸಲು ಭಾರತಕ್ಕೆ ಹೇಳಿ ಎಂದು ಗೋಗರೆಯುತ್ತಿದ್ದಂತೆಯೇ, ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎನ್ನುತ್ತಿದ್ದ ಟ್ರಂಪ್, ಭಾರತದ ವಿರೋಧದ ನಡುವೆಯೂ IMF ಮೂಲಕ ಪಾಕಿಸ್ಥಾನಕ್ಕೆ ಸಾವಿರಾರು ಕೋಟಿ ಸಾಲವನ್ನು ಕೊಡಿಸುವ ಮೂಲಕ ಮಗುವನ್ನು ಚಿವುಟುವುದೂ ಅವರೇ, ಮೊಗುವಿನ ತೊಟ್ಟಿಲಾಡಿಸುವವರೂ ಅವರೇ ಎನ್ನುವಂತೆ ಚಲ್ಲಾಟವಾಡುತ್ತಿದ್ದವರು ಇದ್ದಕ್ಕಿದ್ದಂತೆಯೇ, ಅಮೇರಿಕಾದ ಅಧ್ಯಕ್ಷ ಟ್ರಂಪ್ ಭಾರತ ಮತ್ತು ಪಾಕೀಸ್ಥಾನದ ನಡುವೆ ತನ್ನ ಮಧ್ಯಸ್ತಿಕೆಯಲ್ಲಿ ಕದನ ವಿರಾಮ ಘೋಷಿಸಲಾಗಿದೆ ಎಂದು ಹೇಳಿದಾಗ, ಮೊದಲ ಬಾರಿಗೆ ಭಾರತದಲ್ಲಿ ಯುದ್ದ ಗೆದ್ದಿದ್ದರೂ ಸೋತಂತೆ ಬೇಸರ, ಅದೇ ಪಾಕೀಸ್ಥಾನದಲ್ಲಿ ಯುದ್ದ ಗೆದ್ದಂತೆ ರಣೋತ್ಸಾಹ.
ಇಡೀ ವಿಶ್ವದಲ್ಲಿ ಅತ್ಯಂತ ಸಣ್ಣ ಕದನವಿರಾಮ ಎಂದರೆ ಪಾಕೀಸ್ಥಾನ ಮತ್ತು ಭಾರತದ್ದು ಏಕೆಂದರೆ ಶನಿವಾರ ಸಂಜೆ 5 ಗಂಟೆಗೆ ಎರಡೂ ಕಡೆಯ ಸೇನೆಯ DGMOಗಳು ಕದನ ವಿರಾಮ ಘೋಷಿಸಿದರೆ, ಸಂಜೆ ಕತ್ತಲಾಗುತ್ತಿದ್ದಂತೆಯೇ ಯಥಾ ಪ್ರಕಾರ ತನ್ನ ಮಂಗ ಬುದ್ದಿಯನ್ನು ತೋರಿಸಿದ ಪಾಕೀಸ್ಥಾನ ಭಾರತದ ಗಡಿ ಪ್ರದೇಶದಲ್ಲಿ ಏಕಾಏಕಿ ದ್ರೋಣ್ ಧಾಳಿ ನಡೆಸುವ ಮೂಲಕ ಕದನ ವಿರಾಮವನ್ನು ಉಲ್ಲಂಘಿಸಿದಾಗ, Act of War ಅರ್ಥಾತ್ ಪಾಕೀಸ್ಥಾನದ ಕಡೆಯಿಂದ ಯಾವುದೇ ರೀತಿಯ ಧಾಳಿ ನಡೆಸಿದರೆ, ಈ ಕದನ ವಿರಾಮ ರದ್ದಾಗಿ ಭಾರತ ಹೋರಾಟ ಮಾಡುತ್ತದೆ ಎಂದಿದ್ದ ಸೇನೆ ಕೇವಲ ಪಾಕಿಗಳ ಧಾಳಿಯನ್ನು ತಡೆಯುವುದರಲ್ಲೇ ಸೀಮಿತವಾಗಿ ಪ್ರತಿಧಾಳಿಯನ್ನೇ ನಡೆಸಿದಾಗ, ಈ ನಡೆ ಸಕಲ ಭಾರತೀಯರಿಗೆ ಅಚ್ಚರಿ ಮೂಡಿಸಿದ್ದಂತೂ ಸುಳ್ಳಲ್ಲ.
ಭಾರತ ರಣೋತ್ಸಾಹದಲ್ಲಿದ್ದಾಗ, ನಮಗೆ ಯುದ್ದ ಬೇಡ ಎಂದು ಹೇಳಿದ ಸಿದ್ದರಾಮಯ್ಯ ಮತ್ತು ಭಾರತದ ಮೊದಲ ಧಾಳಿ ನಡೆಸಿದಾಗ ಮಹಾತ್ಮಾಗಾಂಢಿಯವರ ಪೋಟೋ ಹಾಕಿ ದೇಶಕ್ಕೆ ಸದ್ಯಕ್ಕೆ ಬೇಕಿರುವುದು ಶಾಂತಿ ಎಂಬ ಟ್ವೀಟ್ ಹಾಕಿದ್ದ ಕರ್ನಾಟಕದದ ಕಾಂಗ್ರೇಸ್ ಪಕ್ಷವನ್ನು ವಾಚಾಮಗೋಚರವಾಗಿ ಟೀಸಿಸಿದ್ದವರೇ, ಈಗ ಅದೇ ಕೆಲಸವನ್ನು ಪ್ರಧಾನಿಗಳು ಮಾಡಿದಾಕ್ಷಣಾ ಸದ್ದಿಲ್ಲದೇ ಗಪ್ ಚುಪ್. ಸೇನೆಯ ಈ ಅಚ್ಚರಿಯ ನಡೆ ಒಂದು ಕಡೆಯಾದರೆ ಕಾರ್ಯಚರಣೆ ಆರಂಭ ಆದ ನಂತರ ಪ್ರಧಾನಿ ಆದಿಯಾಗಿ ಕೇಂದ್ರದ ಯಾವುದೇ ಸಚಿವರು ಒಂದು ಚೂರು ಮಾತನಾಡದೇ ಇದ್ದದ್ದು ನೇರವಾಗಿ ವಿರೋಧ ಪಕ್ಷಗಳು ಆಡಿಕೊಳ್ಳುವುದಕ್ಕೆ ಸಹಕಾರಿ ಆಯಿತು.
ಇಷ್ಟೆಲ್ಲಾ ಆದರೂ ನನ್ನನ್ನೂ ಸೇರಿದಂತೆ ಅನೇಕರು ಪ್ರಧಾನಿಗಳನ್ನೇ ಸಮರ್ಥನೆ ಮಾಡಿಕೊಳ್ಳುತ್ತಾ ಮೋದಿಯವರು Left indicator ಹಾಕಿ right side ತಿರುಗಿಸಿವಂತೆ ಅವರು ಶತ್ರುಗಳನ್ನು ದಿಕ್ಕು ತಪ್ಪಿಸುವಂತಹ ವ್ಯಕ್ತಿಯಾಗಿದ್ದು ಈ ಕದನ ವಿರಾಮದ ಹಿಂದೆಯೂ ಯಾವುದೋ ಚಾಣಕ್ಷ ನಡೆ ಇರುತ್ತದೆ ಮೇ 12ರ ಮಧ್ಯಾಹ್ನ ಎರಡೂ ರಾಷ್ಟ್ರಗಳ DGMOಗಳ ನಡುವೆ ಮಾತುಕತೆ ಇದ್ದು ಅದರಲ್ಲಿ ಮಹತರವಾದ ವಿಷಯ ಹೊರಬೀಳಲಿದೆ ಎಂದೇ ಭಾವಿಸಿದ್ದಂತೂ ಸುಳ್ಳಲ್ಲ.
ಇಷ್ಟರ ಮಧ್ಯೆ ಭಾನುವಾರ ಇದ್ದಕ್ಕಿದ್ದಂತೆಯೇ, ಮೂರು ಸೇನೆಯ ದಂಡನಾಯಕರು ಮೊದಲ ಬಾರಿಗೆ ಒಟ್ಟಾಗಿ ಪತ್ರಿಕಾಗೋಷ್ಠಿ ನಡೆಸಿ ಇಡೀ ಕಾರ್ಯಾಚರಣೆಯ ಎಲ್ಲಾ ಮಾಹಿತಿಗಳನ್ನು ನೀಡಿದ್ದಲ್ಲದೇ, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದಾಗ, ಮತ್ತೊಂದೆಡೆ, ಅಮೇರಿಕಾದ ಮಧ್ಯಸ್ಥಿಕೆಯ ವಿರುದ್ಧ ಮೋದಿಯವರು ಆಕ್ರೋಶ ವ್ಯಕ್ತ ಪಡಿಸಿರುವುದಲ್ಲದೇ, ಸಿಂದೂ ನದಿಯ ಒಪ್ಪಂದದ ರದ್ದತಿ ಹಾಗೆಯೇ ಮುಂದುವರೆಯುತ್ತದೆ. ಎಲ್ಲಿಯವರೆಗೆ ಭಾರತದ ವಿರುದ್ಧವಿರುವ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸುವುದಿಲ್ಲವೋ ಮತ್ತು ಪಾಕ್ ಅಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಹಿಂದಿರುಗಿಸುವವರೆಗೂ ಭಾರತದ ಆಪರೇಷನ್ ಸಿಂದೂರ್ ಮುಂದುವರೆಯುತ್ತದೆ. ಭಾರತದ ಕದನ ವಿರಾಮ ಷರತ್ತು ಬದ್ಧವಾಗಿದೆ ಎಂಬ ಎಂಬ ಸುದ್ದಿ ಬಿತ್ತವಾದಾಗ ಮತ್ತೆ ಭಾರತೀಯರಲ್ಲಿ ಸಂತಹ ಮೂಡಿತ್ತು.
ಸೋಮವಾರ ಮಧ್ಯಾಹ್ನ ನಡೆಯಬೇಕಿದ್ದ ಸಂಧಾನ ಸಭೆಗೂ ಮುನ್ನ ಪ್ರಧಾನಿಗಳು ಮೂರು ಸೇನೆಯ ದಂಡನಾಯಕರುಗಳ ಸಭೆ ನಡೆಸಿದ ವಿಷಯ ತಿಳಿದ ನಂತರ ಭಾರತೀಯರ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿತ್ತು. ದ್ವಿಪಕ್ಷೀಯ ಮಾತು ಕತೆ ಸ್ವಲ್ಪ ತಡವಾಗಿ ಆರಂಭವಾಗಿ ಸಂಜೆಯ ಹೊತ್ತಿಗೆ ಮುಗಿದು, ಭಾರತ ಪಾಕೀಸ್ಥಾನದ ವಿರುದ್ಧದ ಕದನಕ್ಕೆ ವಿರಾಮ ಸೂಚಿಸಿದ್ದು, Act of War ಮುಂದೆವರೆಯುತ್ತದೆ ಎಂದು ತಿಳಿಸುವ ಹೊತ್ತಿನಲ್ಲೇ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿಗಳು ರಾತ್ರಿ 8ಕ್ಕೆ ಮಾತನಾಡುತ್ತಾರೆ ಎಂದಾಗ, ಓಹೋ ಈ ಭಾಷಣದಲ್ಲಿ ಪ್ರಧಾನಿಯವರು ಬಹಳ ಮಹತ್ತರ ವಿಚಾರವನ್ನು ಜನಗಳ ಮುಂದಿಡುತ್ತಾರೆ ಎಂದೇ ಭಾವಿಸಲಾಗಿತ್ತು.
ಈ ಸಂಧರ್ಭದಲ್ಲಿ ನಿರಂತವಾಗಿ ರಾಜಕೀಯ ವಿಶ್ಲೇಷಣೆಯ ವೀಡಿಯೂಗಳನ್ನು ಲೇಖನಗಳನ್ನು ಮಾಡುತ್ತಿದ್ದ ನನ್ನ ಬಳಿ ಅನೇಕರು ಪ್ರಧಾನಮಂತ್ರಿಗಳು ಇಂದು ಏನನ್ನು ಹೇಳಬಹುದು? ಎಂದು ಕೇಳಿದಾಗಲೂ ಪ್ರಧಾನ ಮಂತ್ರಿಗಳ ಸಮರ್ಥಕನಾಗಿಯೇ, ಷರತ್ತು ಬದ್ಧತೆಯ ಕುರಿತಾಗಿಯೇ ಇರಬಹುದು ಎಂದರೆ, ಇನ್ನೋ ಒಬ್ಬರು ಮಿತ್ರರು ಈ ಬಾರಿ 500ರೂಪಾಯಿ ನೋಟುಗಳನ್ನು ಅಮಾನ್ಯ ಗೊಳಿಸಬಹುದು ಎಂದೆಣಿಸುತ್ತದೆ ಎಂದಾಗ ನಕ್ಕಿದ್ದೂ ಉಂಟು.
ಎಂದಿನಂತೆಯೇ 8 ಗಂಟೆಗೆ ಸರಿಯಾಗಿ ಬಾಯಿಯೋ, ಬೆಹೆನೋ ಔರ್ ಮೇರೆ ಪ್ಯಾರೇ ದೇಶ್ ವಾಸಿಯೋಂ ಎಂದು ಭಾಷಣ ಆರಂಭಿಸಿದ ಪ್ರಧಾನಿಗಳು ಮೊದಲು ಸಿಂಧೂರವನ್ನು ಕಳೆದು ಕೊಂಡವರಿಗೆ ಸಂತಾಪ ಸೂಚಿಸಿ ಸೇನೆಯ ಕಾರ್ಯಾಚರಣೆಯನ್ನು ಶ್ಲಾಘಿಸಿ ಈ ಕೆಳಕಂಡ ವಿಚಾರಗಳನ್ನು ಜನರ ಮುಂದಿಡುವಾಗಲೂ ಜನರ ನಿರೀಕ್ಷೆ ಹೆಚ್ಚಾಗಿಯೇ ಇತ್ತು.
- ಸಿಂದೂರ ಅಳಿಸಿದರೆ ಏನಾಗುತ್ತೆ ಅಂತ ತೋರಿಸಿಕೊಟ್ಟಿದ್ದೇವೆ
- ನೂರಕ್ಕೂ ಹೆಚ್ಚು ಭಯೋತ್ಪಾದಕರ ವಧೆ ಆಗಿದೆ. ಉಗ್ರರ ಕೇಂದ್ರ ಕಛೇರಿಗಳು ಧ್ವಂಸವಾಗಿವೆ
- ನ್ಯೂಕ್ಲಿಯರ್ ಬ್ಲಾಕ್‌ಮೇಲ್ ಸಹಿಸುವುದಿಲ್ಲ
- ಟೆರರ್, ಟಾಕ್ ಒಂದೇ ಬಾರಿ ನಡೆಯಲ್ಲ ಟೆರರ್, ಟ್ರೇಡ್ ಒಂದೇ ಬಾರಿ ನಡೆಯಲ್ಲ
- ರಕ್ತ ನೀರು ಒಟ್ಟಿಗೆ ಹರಿಯುವುದಿಲ್ಲ
- ಇಂದು ಬುದ್ಧ ಪೂರ್ಣಿಮೆ, ಶಾಂತಿಯ ಸಂಕೇತ. ಇಡೀ ವಿಶ್ವ ಶಾಂತಿ ಕಡೆಗೆ ಮುಖ ಮಾಡಬೇಕಾಗಿದೆ.
- ಪಾಕ್ ಮೇಲೆ ದಾಳಿ ಮಾಡಲು ಭಾರತ ಸದಾ ಕಾಲವೂ ಸಜ್ಜಾಗಿಯೇ ಇದೆ ನಮ್ಮ ಮೂರೂ ಸೇನಾ ತುಕಡಿಗಳು ಕಾರ್ಯನಿರತವಾಗಿವೆ. ನಮ್ಮ ಬಿಎಸ್‌ಎಫ್ ಯೋಧರೂ ಕೂಡ ಸಿದ್ಧರಿದ್ದಾರೆ
- ಪಾಕಿಸ್ತಾನದ ಜೊತೆ ಯಾವುದೇ ಚರ್ಚೆ ಇರಲ್ಲ. ಒಂದು ವೇಳೆ ಮಾತು ಅಂದ್ರೆ ಅದು POK ಬಗ್ಗೆ ಮಾತ್ರ
ಹೀಗೆ ಪಾಕೀಸ್ಥಾನಕ್ಕೆ ಎಚ್ಚರಿಕೆ ಕೊಡುತ್ತಾ ಭಾರತೀಯರಲ್ಲಿ ಧೈರ್ಯ ತುಂಬಿದ ಭಾಷಣ ಎಲ್ಲರೂ ಮೆಚ್ಚಿಕೊಂಡಾಡುತ್ತಿರುವಾಗಲೇ, ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಮೋದಿಯವರ ಇಂದಿನ ಭಾಷಣ, ಬೆಟ್ಟ ಅಗೆದು ಇಲಿ ಹಿಡಿದಂತಿತ್ತು. ಎಂದು ಸಾಮಾಜಿಕ ಜಾಲತಾಣದಲ್ಲಿ ನನ್ನ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಂತೆಯೇ, ಪಾಕೀಸ್ಥಾನದ ಮೇಲಿದ್ದ ಎಲ್ಲರ ಕೋಪ ನನ್ನ ಮೇಲೆ ತಿರುಗಿ, ಮನೆಯಲ್ಲಿ ಕುಳಿತು ಟೈಪ್ ಮಾಡುವವರಿಗೆ ಯುದ್ದ ನೀತಿ ಏನು ಗೊತ್ತು ಎಂಬುದರಿಂದ ಹಿಡಿದು, ದೇಶ ದ್ರೋಹಿ ಹೀಗೆ ಹಾಗೆ ಎಂಬ ತರ ತರದ ಬೈಗಳಗಳ ಸುರಿಮಳೆ.
ಹೀಗೆ ನನ್ನ ವಿರುದ್ಧ ಆರೋಪ ಮಾಡಿದ ಬಹುತೇಕರಿಗೆ ಪ್ರಧಾನಿಗಳು ನಮ್ಮ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುವ ಸ್ವಲ್ಪ ಹೊತ್ತಿಗೆ ಮುಂಚೆ ಅಮೇರಿಕದ ಅಧ್ಯಕ್ಷ ಟ್ರಂಪ್ ಮತ್ತೊಮ್ಮೆ ತನ್ನ ಕುಚೇಷ್ಟೆಯನ್ನು ತೋರಿಸಿ ಭಾರತ ಮತ್ತು ಪಾಕಿಸ್ಥಾನ ಅಣ್ವಸ್ತ್ರವನ್ನು ಹೊಂದಿರುವ ರಾಷ್ಟ್ರಗಳಾಗಿದ್ದು, ಯಾವುದೇ ಕ್ಷಣದಲ್ಲಿ ಅಣ್ವಸ್ಸ್ತ್ರ ಬಳಕೆಗೆ ಬಂದು ಲಕ್ಷಾಂತರರ ಜನರ ಸಾವಿಗೆ ಕಾರಣ ಆಗಬಹುದು ಎಂದು ಭಾವಿಸಿ ಎರಡೂ ರಾಷ್ಟ್ರಗಳು ಯುದ್ದ ನಿಲ್ಲಿಸದೇ ಇದ್ದಲ್ಲಿ ಅಮೇರಿಕಾ ಆ ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರ ನಿಲ್ಲಿಸುವುದಾಗಿ ಹೇಳಿದ ತಕ್ಷಣ ಎರಶೂ ರಾಷ್ಟ್ರಗಳು ಯುದ್ದವನ್ನು ನಿಲ್ಲಿಸಿದೆ ಎಂದು ಇಡೀ ಕದನ ವಿರಾಮದ ಸಂಪೂರ್ಣ ಕ್ರೆಡಿಟ್ ಮತ್ತೊಮ್ಮೆ ಅಮೇರಿಕಾ ತೆಗೆದುಕೊಳ್ಳುವಂತೆ ಮಾಡಿದ್ದು ತಿಳಿದೇ ಇರಲಿಲ್ಲ.
ಇದೇ ವಿಚಾರವೇ ನನಗೆ ಬೇಸರ ತರಿಸಿದ್ದು. ಮೋದಿಯವರು ಕೇವಲ ಭಾರತ ದೇಶದ ಪ್ರಧಾನಿಗಳು ಮಾತ್ರವೇ ಆಗಿರದೇ ಜಾಗತಿಕ ಮಟ್ಟದ ನಾಯಕರಾಗಿದ್ದು, ಪ್ರಪಂಚದ ಅನೇಕ ರಾಜಕಾರಣಿಗಳು ಮೋದಿಯವರ ಬಳಿ ತಮ್ಮ ಸಮಸ್ಯೆಗೆ ಪರಿಹಾರವನ್ನು ಪಡೆಯುತ್ತಿರುವಾಗ, ಭಾರತ ಮತ್ತು ಪಾಕೀಸ್ಥಾನದ ದ್ವಿಪಕ್ಷೀಯ ಮಾತುಕತೆಗೆ ಅಮೇರಿಕಾ ಬೇಕಿತ್ತೇ? (ಕಾಂಗ್ರೇಸ್ ವಕ್ತಾರ ಜಯರಾಂ ರಮೇಶ್ ಈ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೇಸ್ ಕಾರ್ಯಕರ್ತರಿಗೆ ಮೋದಿಯವರನ್ನು ಗೇಲಿ ಮಾಡಲು ವಿಷಯ ಸಿಕ್ಕಂತಾಗಿದೆ)
ಇಡೀ ಪ್ರಪಂಚದಲ್ಲಿ ಅತ್ಯಂತ ಹೆಚ್ಚಿನ ಜನಸಂಖ್ಯೆಯ ರಾಷ್ಟ್ರವಾಗಿರುವ ಮತ್ತು ಜಗತ್ತಿನ ಎಲ್ಲಾ ರಾಷ್ಟ್ರಗಳ ಉತ್ಪನ್ನಗಳಿಗೆ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಭಾರತವನ್ನು ನೇರವಾಗಿ ಎದುರು ಹಾಕಿಕೊಳ್ಳುವ ಧೈರ್ಯ ಇಂದು ಯಾವುದಾದರೂ ದೇಶಕ್ಕೆ ಉಂಟೇ? ನೆಚ್ಚಿನ ಪ್ರಧಾನಿಗಳಾಗಿದ್ದ ವಾಜಪೇಯಿಯವರು ಮತ್ತು ಅಬ್ದುಲ್ ಕಲಾಂ ಅವರು ಪೋಖ್ರಾನ್ ನಲ್ಲಿ ಅಣ್ವಸ್ತ ಪರೀಕ್ಷೆ ನಡೆಸಿದ್ದಂತಹ ಸಂಧರ್ಭದಲ್ಲಿ ಎಲ್ಲಾ ರಾಷ್ಟಗಳು ಭಾರತದ ವಿರುದ್ಧ ಹೇರಿದ್ದ ನಿರ್ಭಂಧ ಕೆಲವೇ ತಿಂಗಳುಗಳಲ್ಲಿ ಹಿಂಪಡೆದ ವಿಷಯ ತಿಳಿದಿರುವುವಾಗ, ಪ್ರಧಾನಿಗಳು ತಮ್ಮ ಭಾಷಣದಲ್ಲಿ ನಮ್ಮಿಬ್ಬರ ಮಾತುಕತೆಯಲ್ಲಿ ಮೂರನೇಯವರ ಅಗತ್ಯವಿಲ್ಲ ಎಂದು ಹೇಳದೇ, ಪರೋಕ್ಷವಾಗಿ ಅಮೇರಿಕಾಗೆ ಛಾಟಿ ಬೀಸುವ ಅವಕಾಶ ತಪ್ಪಿಸಿಕೊಂಡರಲ್ಲವೇ? ಈ ಯುದ್ದದಲ್ಲಿ ಅಮೇರಿಕ ದೇಶದ ಶಸ್ತ್ರಾಸ್ತ್ರಗಳನ್ನು ನಮ್ಮ ದೇಸೀ ನಿರ್ಮಿತ ಶಸ್ತ್ರಸ್ತ್ರಗಳು ಹೊಡೆದು ನಾಶ ಮಾಡಿದಾಗಲೇ ಅಮೇರಿಕಾಗೆ ಮುಖ ಭಂಗವಾಗಿರುವಾಗ, ಅನಗತ್ಯವಾಗಿ ಮೂಗು ತೂರಿಸಿದ ಅಮೇರಿಕಾದ ವಿಷಯವನ್ನೇ ಪ್ರಸ್ತಾಪಿಸದೇ ಇದ್ದದ್ದು ಅನೇಕ ಊಹಾ ಪೋಹಗಳಿಗೆ ಎಡೆ ಮಾಡಿಕೊಟ್ಟು ವಿರೋಧ ಪಕ್ಷದವರು ಅಮೇರಿಕಾಗಿ ತಲೆತಗ್ಗಿಸಿದ ದುರ್ಬಲ ಪ್ರಧಾನಿ ಎಂದು ಆಡಿಕೊಳ್ಳಲು ಎಣೆ ಮಾಡಿಕೊಟ್ಟಂತೆ ಆಗಲಿಲ್ಲವೇ?
ಇನ್ನು ಇಡೀ ಕಾರ್ಯಾಚರಣೆಯಲ್ಲಿ ಮೇಲ್ಗೈ ಸಾಧಿಸಿದ್ದ ಭಾರತ, ಯಾವುದೇ ಷರತ್ತನ್ನು ವಿಧಿಸದೇ ಕೇವಲ ಶಾಂತಿಗಾಗಿ ಕದನ ವಿರಾಮಕ್ಕೆ ಒಪ್ಪಿಕೊಳ್ಳುತ್ತದೆ ಎಂದರೆ ನಂಬಲು ಸಾಧ್ಯವೇ? 1971ರಲ್ಲಿ ಇಂದಿರಾಗಾಂಧಿಯವರ ಕಾಲದಲ್ಲಿ ನಮ್ಮ ದೇಶದ ಸೈನ್ಯ ಲಾಹೋರ್ ವರೆಗೂ ನುಗ್ಗಿ ಪಾಕೀಸ್ಥಾನದ 94000 ಸೈನಿಕರನ್ನು ಸೆರೆ ಹಿಡಿದು ಪಾಕಿಸ್ಥಾನವನ್ನು ತುಂಡರಿಸಿ ಬಾಂಗ್ಲಾ ದೇಶಕ್ಕೆ ನಾಂದಿ ಹಾಡಿದಾಗಲೂ ನಮ್ಮ POK ಹಿಂಪಡೆಯದೇ ಹೋದದ್ದನ್ನು ಇಂದಿಗೂ ನಿಷ್ಟಾವಂತ ಭಾರತೀಯರು ಆಡಿಕೊಳ್ಳುವಾಗ, ಇಂದು ಪ್ರಧಾನ ಮಂತ್ರಿ ಮೋದಿಯವರು ಮಾಡಿದ ಕೆಲಸವನ್ನು ನಮ್ಮ ಮುಂದಿನ ಜನಾಂಗ ಆಡಿಕೊಳ್ಳುವಂತಾಗುವುದಿಲ್ಲವೇ?
90ರ ದಶಕದಲ್ಲಿ ಮುಂಬೈನಲ್ಲಿ ಸರಣಿ ಬಾಂಬ್ ಸ್ಪೋಟ ನಡೆಸಿ ನೂರಾರು ಅಮಾಯಕರ ಹತ್ಯೆಗೆ ಕಾರಣನಾದ ದಾವೂದ್ ಇಬ್ರಾಹಿಂ, ಪಾಕೀಸ್ಥಾನದಲ್ಲಿ ಆಡಗಿ ಕುಳಿತು ಐಶಾರಾಮ್ಯ ಜೀವನ ನಡೆಸುತ್ತಿರುವಾಗ, ನಮ್ಮ ದೇಶದಲ್ಲಿ ನಡೆದ ಬಹುತೇಕ ಎಲ್ಲಾ ವಿಧ್ವಂಸಕ ಕೃತ್ಯಗಳಿಗೆ ಕಾರಣೀಭೂತನಾದ ಅಜರ್ ಮಸೂದ್ (ಅವನ ಕುಟುಂಬದ ೧೦ ಜನರನ್ನು ಈ ಕಾರ್ಯಾಚರಣೆಯಲ್ಲಿ ಹೊಡೆದು ಹಾಕಲಾಗಿದೆ) ಮತ್ತು ಕಂದಹಾರ್ ಅಪಹರಣದ ರೂವಾರಿಯಾಗಿರುವ ಅವನ ತಮ್ಮ ಮತ್ತು ಇನ್ನೂ ಅನೇಕ ಉಗ್ರರು ಪಾಕೀಸ್ಥಾನದಲ್ಲೇ ಇರುವಾಗ, ಅವರನ್ನು ಹಸ್ತಾಂತರ ಮಾಡದ ಹೊರತು ನಮ್ಮ ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಲ್ಲಿ ಪ್ರಧಾನಿಗಳ ಕುರಿತಾಗಿ ಭಾರತೀಯರಲ್ಲಿ ಮತ್ತು ವಿಶ್ವದಲ್ಲಿ ನಂಬಿಕೆ/ವಿಶ್ವಾಸ ಹೆಚ್ಚಾಗುತ್ತಿರಲಿಲ್ಲವೇ?
ಇನ್ನು ಪಾಕೀಸ್ಥಾನದ ಪ್ರತಿಯೊಂದು ಉಗ್ರ ಚಟುವಟಿಕೆಗಳಿಗೆ ಭಾರತದ ಸ್ಥಳೀಯರ ಬೆಂಬಲ ಇರುವುದು ತಿಳಿದೇ ಇರುವ ವಿಷಯ. ಪಾಕೀಸ್ಥಾನದ ಉಗ್ರರನ್ನು ಹುಡುಕಿ ಹುಡುಕಿ ಹೊಡೆದು ಹಾಕುತ್ತೇವೆ ಎಂದು ಗುಡುಗಿದ್ದಲ್ಲದೇ ಆ ಕಾರ್ಯವನ್ನು ಮಾಡಿದ್ದ ಪ್ರಧಾನಿಯವರು ಅದೇ ಭಾರತದಲ್ಲಿರುವ ಪಾಕೀಸ್ಥಾನಿ sleeper cellಗಳ ಬಗ್ಗೆ ಭಾಷಣದಲ್ಲಿ ಮಾತನಾಡದೇ ಹೋದದ್ದು ಸಹಾ ವಿಪರ್ಯಾಸ.
ಹೀಗೆ ಕೈಗೆ ಬಂದ ತುತ್ತನ್ನು ಬಾಯಿಗೆ ಹಾಕಿಕೊಳ್ಳದೇ ಹೋದಾಗ ಸಹಜವಾಗಿ 56 ಇಂಚಿನ ಎದೆಯ ಧೈರ್ಯಶಾಲಿ ಮೋದಿಯವರ ಮೇಲಿಟ್ಟ ನಂಬಿಕೆ ಅಲ್ಪ ಮಟ್ಟಿಗೆ ಹುಸಿಯಾದಾಗ ಬೇಸರ ವ್ಯಕ್ತಪಡಿಸುವುದು ಮನುಷ್ಯನ ಸಹಜ ಗುಣ. ಅದೇ ರೀತಿಯಲ್ಲಿಯೇ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆಯೇ ಹೊರತು, ಎಲ್ಲಿಯೂ ಪ್ರಧಾನಿಗಳ ವಿರುದ್ಧ, ದೇಶದ ವಿರುದ್ಧ, ಸೈನ್ಯದ ವಿರುದ್ಧ, ಕಾರ್ಯಾಚರಣೆಯ ವಿರುದ್ಧ ಅಸಂಬದ್ಧ, ಅವಾಚ್ಯ ಅಥವಾ ಅಸಂವೈಧಾನಿಕ ಪದ ಬಳಕೆ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ. ಈ ದೇಶದಲ್ಲಿ ಪ್ರಶ್ನಿಸುವ ಮತ್ತು ತನ್ನ ಅಭಿವ್ಯಕ್ತಿ ಸ್ವಾತ್ರಂತ್ರ್ಯವನ್ನು ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬ ನಾಗರೀಕರಿಗೂ ಇದೆ. ಯಾವುದೇ ವ್ಯಕ್ತಿ ಎಷ್ಟೇ ದೊಡ್ದ ಹುದ್ದೆಯಲ್ಲಿದ್ದರೂ ಎಲ್ಲಾ ಸಮಯದಲ್ಲಿ ಸರಿಯಾದ ಕೆಲಸ ಮಾಡಿಯೇ ತೀರುತ್ತಾರೆ ಎಂದು ಹೇಳಲಾಗದು. ಕೆಲವೊಮ್ಮೆ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಗಳಿಗೆ ಮಣಿದು ಕೆಲವೊಂದು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಾಗಲೂ ಅತನನ್ನು ಸಮರ್ಥನೆ ಮಾಡುವುದು ಸಹಾ ತಪ್ಪು.
ಸಂಸ್ಕೃತದ ಈ ಸುಭಾಷಿತವೊಂದರ ಪ್ರಕಾರ, ಕರ್ತಾ ಕಾರಯಿತಾ ಚೈವ ಪ್ರೇರಕಶ್ಚಾನುಮೋದಕಃ | ಸುಕೃತೇ ದುಷ್ಕೃತೇ ಚೈವ ಚತ್ವಾರಃ ಸಮಭಾಗಿನಃ | ಯಾವುದೇ ಒಂದು ಪುಣ್ಯ ಅಥವಾ ಪಾಪದ ಕೆಲಸದಲ್ಲಿ, ಕರ್ತಾ ಎಂದರೆ ನೇರವಾಗಿ ಭಾಗಿಯಾಗಿರುವವನು, ಕಾರಯಿತಾ, ತಾನು ಯಾರ ಕಣ್ಣಿಗೂ ಬೀಳದಂತೆ ದೂರವಿದ್ದು ಪರೋಕ್ಷವಾಗಿ ಇತರರಿಂದ ಮಾಡಿಸುವವನು, ಪ್ರೇರಕ, ಕರ್ತ್ರುವಿಗೆ ಕೆಲಸ ಮಾಡುವಂತೆ ಪ್ರೇರಣೆ ಮಾಡುವವನು ಮತ್ತು ಅನುಮೋದಕ, ಮಾಡಿದ ಕೆಲಸವನ್ನು ಅನುಮೋದನೆ ಮಾಡುವವನು ಹೀಗೆ ನಾಲ್ಕೂ ಜನರು ಭಾಗಿಯಾಗುತ್ತಾರೆ ಎನ್ನಲಾಗಿದೆ. ಹಾಗಾಗಿ ತಿಳಿದೋ ಇಲ್ಲವೇ ತಿಳಿಯದೇ ಆದ ತಪ್ಪನ್ನು ಸಮರ್ಥನೆ ಮಾಡುವುದು ಸಹಾ ಅಪರಾಧವಾಗಿ ಬಿಡುವ ಕಾರಣ, ಸೂಕ್ತ ಸಮಯದಲ್ಲಿ ಅವರನ್ನು ಎಚ್ಚರಿಸುವುದು ಸಹಾ ಭಾರತೀಯರ ಆದ್ಯ ಕರ್ತವ್ಯವಾಗಿದೆ.
ಇದೊಂದು ರೀತಿಯಲ್ಲಿ ಪರೀಕ್ಷೆಯಲ್ಲಿ 35% ಅಂಕಗಳನ್ನು ಪಡೆಯಲು ಪರಿತಪಿಸುವವನಿಗೆ ಅದಕ್ಕಿಂತಲೂ ಒಂದಂಕ ಹೆಚ್ಚಾಗಿ ಬಂದರೂ ಅದು ಅವನಿಗೆ ಹೆಚ್ಚೇ ಅದರೆ ಅದೇ 100/100 ಅಂಕಗಳಿಸುವವನಿಗೆ 99/100 ಬಂದಾಗ ಆ 1 ಅಂಕದ ನಷ್ಟ ಬಹಳವಾಗಿ ಕಾಡುತ್ತದೆ. ಹಿಂದಿನ ಸರ್ಕಾರ ನಡೆಸಿದ ಪ್ರಧಾನಿಗಳು 35% ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳು ಎಂದು ಭಾವಿಸಿ ಅವರು ಮಾಡಿದ್ದೆಲ್ಲವೂ ತಪ್ಪು ಎಂದು ಭಾವಿಸುವುದಾದರೆ, ಪ್ರಸ್ತುತ ಪ್ರಧಾನಿಗಳು 100/100 ಅಂಕಗಳನ್ನು ಗಳಿಸುವ ಸಾಮರ್ಥ್ಯದ ವಿದ್ಯಾರ್ಧಿ ಯಾಗಿ ಒಂದು ಸಣ್ಣ ತಪ್ಪು ಅಥವ ಒತ್ತಡದಿಂದ 1 ಅಂಕವನ್ನು ಕಳೆದುಕೊಂಡಾಗಲೂ 99 is never a century ( ಸಚಿನ್ ತೆಂಡುಲ್ಕರ್ ಅವರಿಗೆ ಒಳ್ಳೆಯ ಅನುಭವವಿದೆ) ಎನ್ನುವಂತೆ ಜನರಿಗೆ ಬೇಸರವಾಗುವುದು ಸಹಜ ಅಲ್ಲವೇ?
ಭಾಷಣದ ಅಂತ್ಯದಲ್ಲಿ ಪ್ರಧಾನಿಗಳು ಆಪರೇಷನ್ ಸಿಂದೂರ್ ಸಂಪೂರ್ಣವಾಗಿ ನಿಂತಿಲ್ಲ. ACT of war ಪ್ರಕಾರ ಪಾಕ್ ಮೇಲೆ ದಾಳಿ ನಡೆಸಲು ನಮ್ಮ ಮೂರೂ ಸೇನೆಗಳು ಸದಾ ಸಿದ್ಧರಿದ್ದಾರೆ ಆಗ ಪಾಕಿಸ್ತಾನದ ಜೊತೆ ಯಾವುದೇ ಚರ್ಚೆ ಇರಲ್ಲ. ಒಂದು ವೇಳೆ ಮಾತು ಅಂದ್ರೆ ಅದು POK ಬಗ್ಗೆ ಮಾತ್ರ ಎಂದು ಹೇಳಿ ಭಾಷಣ ಮುಗಿಸಿದ್ದಾರೆ. ಅರೇ ಸ್ವಾಮೀ, ಕಬ್ಬಿಣ ಕಾದಿರುವಾಗಲೇ ಬಗ್ಗಿಸಬೇಕಲ್ಲವೇ? ಹನುಮಂತನಿಂದ ಸುಟ್ಟು ಹೋದ ಲಂಕೆಯಂತೆ ಈಗಾಗಲೇ ಅರ್ಧಂಬರ್ಧ ಹಾಳಾಗಿ ಹೋಗಿರುವ ಪಾಕೀಸ್ಥಾನ ಭಾರತದ ವಿರುದ್ಧ ಮಂಡಿಯೂರಿ ಕದನ ನಿಲ್ಲಿಸುವಂತೆ ಗೋಗರೆಯುತ್ತಿದ್ದಾಗ ಷರತ್ತು ಬದ್ಧವಾಗಿ ನಮಗೆ ಬೇಕಾದದ್ದನ್ನು ತೆಗೆದುಕೊಳ್ಳದೇ, ಮತ್ತೆ ನಂಬಿಕೆಗೆ ಅರ್ಹವಲ್ಲದ ಪಾಪೀಸ್ಥಾನಕ್ಕೆ ಜೀವದಾನ ನೀಡಿದ್ದು ಮುಂದೆ ದೊಡ್ಡ ವಿಪತ್ತಿಗೆ ಆಹ್ವಾನ ನೀಡಿದಂತಾಗುವುದಿಲ್ಲವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ
ಆರೋಗ್ಯಕರ ಚರ್ಚೆಗೆ ಸದಾ ಸಿದ್ದ. ವಿತಂಡಕ್ಕೆ ನಿಷಿದ್ಧ.
ಚರ್ಚೆಗೂ ಮೊದಲು ನನ್ನ ಲೇಖನದ ಉದ್ದೇಶ ಮತ್ತು ಇದೇ ವಿಷಯದ ಕುರಿತಾಗಿ ನನ್ನ ಈ ವೀಡೀಯೋಗಳನ್ನು ನೋಡಿ ಲೇಖನವನ್ನು ಓದಿ ಪ್ರತಿಕ್ರಿಯಿಸಿದರೆ ಬಹಳ ಸಂತೋಷವಾಗುತ್ತದೆ.