ಡಾ. ಹೆಚ್. ಎಸ್. ವೆಂಕಟೇಶ ಮೂರ್ತಿ

ಅದು 90ರ ದಶಕ. ನಮ್ಮ ಕಾಲೇಜು ದಿನಗಳು. ಅಗಷ್ಟೇ ವಿಜಯರಾಘವೇಂದ್ರ ದತ್ತಣ್ಣ, ಅವಿನಾಶ್ ಅಭಿನಯದ, ಟಿ. ಎಸ್ ನಾಗಾಭರಣ ಅವರ ಚಿನ್ನಾರಿ ಮುತ್ತಾ ಸಿನಿಮಾ ತೆರೆಗೆ ಬಂದಿತ್ತು. ಸಿ. ಅಶ್ವತ್ ಅವರ ಸಂಗೀತ ಸಂಯೋಜನೆಯಲ್ಲಿ  ಸುಮಾರು 11 ಹಾಡುಗಳಿದ್ದ ಆ ಸಿನಿಮಾದ ಅಷ್ಟೂ ಹಾಡುಗಳು  ಅಂದಿನ ಆಬಾಲವೃದ್ಧರಾದಿಯಾಗಿ ಎಲ್ಲರ ನಾಲಿಗೆಯ ಮೇಲೆ ನಲಿಯಲಾರಂಭಿಸಿದಾಗ, ಇಂತಹ ಸರಳ ಸುಂದರ ಅದ್ಭುತವಾದ ಹಾಡುಗಳನ್ನು ಬರೆದವರು ಯಾರಿರ ಬಹುದು? ಎಂಬ ಕುತೂಹಲದಿಂದ ಗಮನಿಸಿದಾಗ ನನಗೆ ಪರಿಚಯವಾದದ್ದೇ ಶ್ರೀ ಹೆಚ್. ಎಸ್. ವೆಂಕಟೇಶ ಮೂರ್ತಿಗಳುಹೆಚ್.ಎಸ್.ವಿ ಅವರು ಅ ಚಿತ್ರದ ಅಷ್ಟೂ ಹಾಡುಗಳಲ್ಲದೇ, ಆ ಚಿತ್ರಕ್ಕೆ ಸಂಭಾಷಣೆಯನ್ನೂ ಸಹಾ ಬರೆದಿದ್ದರು. ನಂತರದ ದಿನಗಳಲ್ಲಿ  ಆಡು ಮುಟ್ಟದ ಸೊಪ್ಪಿಲ್ಲಾ. ಹೆಚ್.ಎಸ್.ವಿ ಅವರು ಕೈಯಾಡಿಸದ ಸಾಹಿತ್ಯ ಪ್ರಾಕಾರಗಳಿಲ್ಲಾ ಎನ್ನುವಷ್ಟರ ಮಟ್ಟಿಗೆ ಕನ್ನಡ ಸಾಹಿತ್ಯದ ವಿವಿಧ ಮಜಲುಗಳಲ್ಲಿ ತಮ್ಮ ಕೊಡುಗೆಯನ್ನು ನೀಡಿದ್ದ ಹೆಚ್.ಎಸ್.ವಿಯವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಹಿತ್ಯ ಲೋಕದ ಅವರ ಸಾಧನೆಗಳು ನಮ್ಮ  ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ

1944ರ ಜೂನ್ ತಿಂಗಳು 23ರಂದು ದಾವಣಗೆರೆ ಜಿಲ್ಲೆ, ಚೆನ್ನಗಿರಿ ತಾಲ್ಲೂಕಿನ ಹೋದಿಗ್ಗೆರೆ ಗ್ರಾಮದ ಸಾಂಪ್ರದಾಯಿಕ ಕುಟುಂಬದ ಶ್ರೀ ನಾರಾಯಣಭಟ್ಟರು ಮತ್ತು ನಾಗರತ್ನಮ್ಮ ದಂಪತಿಗಳಿಗೆ ಜನಿಸಿದ ಹೆಚ್.ಎಸ್.ವಿ ಅವರು ಬಾಲ್ಯದಿಂದಲೇ ತಮ್ಮ ತುಂಟಾಟ ಮತ್ತು ಬುದ್ಧಿವಂತಿಕೆಗೆ ಹೆಸರುವಾಸಿಯಾಗಿದ್ದರು. ತಾವು ಜನಿಸುವ ಮುನ್ನವೇ ತಂದೆಯನ್ನು ಕಳೆದುಕೊಂಡು ತಾಯಿ ಮತ್ತು ಅಜ್ಜಿಯರ ಪ್ರೀತಿಯಲ್ಲಿಯೇ ಹೆಚ್.ಎಸ್.ವಿ ಅವರು ಬೆಳೆಯಬೇಕಾಯಿತು. ಪತಿಯನ್ನು ಕಳೆದುಕೊಂಡ ನಾಗರತ್ನಮ್ಮ ಅವರು ಜೀವನೋಪಾಯಕ್ಕಾಗಿ ಖಾಸಗಿಯಾಗಿ ಎಲ್.ಎಸ್.ಮುಗಿಸಿ ಅಧ್ಯಾಪಕಿಯಾಗಿ ಉದ್ಯೋಗ ದೊರಕಿಸಿಕೊಂಡು ಈ ಕುಟುಂಬಕ್ಕೆ ದುಡಿಯುವ ಆಸರೆಯಾಗಿದ್ದಲ್ಲದೇ, ಜೀವನದುದ್ದಕ್ಕೂ ವಿದ್ಯಾರ್ಥಿಗಳ ಪ್ರೀತಿ ಪಾತ್ರ ರತ್ನ ಮೇಡಮ್ ಎಂದೇ ಜನಪ್ರಿಯರಾಗಿದ್ದರು. ಇಡೀ ಕುಟುಂಬದಲ್ಲಿ ಗಂಡಿನ ದಿಕ್ಕಿಲ್ಲದೇ ಇದ್ದ ಕಾರಣ, ಬಾಲಕ ಮೂರ್ತಿಯನ್ನು ಅತ್ಯಂತ ಪ್ರೀತಿಯಿಂದ ಕಣ್ಣಿನ ರೆಪ್ಪೆಯಂತೆ ನೋಡಿಕೊಂಡು ಸಾಕುತ್ತಿದ್ದರು. ಅಕಸ್ಮಾತ್ ಶಾಲೆಯಿಂದ ಬರುವುದು ತಡವಾದರೆ, ಇಲ್ಲವೇ ಹುಡುಗರೊಂದಿಗೆ ಹೇಳದೇ ಕೇಳದೇ ಎಲ್ಲೆಲ್ಲೋ ಆಟವಾಡಲು ಹೋಗಿ ಹಿಂದುರಿಗಿ ಬರುವುದು ತಡವಾದರೆ ಮನೆಯವರೆಲ್ಲಾ ನಮ್ಮ ಮೊಮ್ಮಗನನ್ನು ನೋಡಿದ್ರಾ!! ನನ್ನ ಮಗನನ್ನು ನೋಡಿದ್ರಾ! ಎಂದು ಇಡೀ ಊರ ತುಂಬಾ ಹುಡುಕುತ್ತಿದ್ದ ಸಂಧರ್ಭಗಳು ಅದೆಷ್ಟೋ ಇದ್ದವು.

ಮೂರ್ತಿಯವರ ಮುತ್ತಜ್ಜ ಕೆಲ್ಲೋಡು ಪುಟ್ಟಪ್ಪ ಪ್ರಸಿದ್ಧ ಗಮಕಿಗಳಾಗಿದ್ದರಂತೆ. ಶ್ಯಾನುಭೋಗರಾಗಿದ್ದ ಅವರ ಅಜ್ಜ ಭೀಮರಾಯರು ಧರ್ಮಾತ್ಮರಾಗಿದ್ದದ್ದಲ್ಲದೇ, ತಮಗಿದ್ದ ತಿಳುವಳಿಕೆ ಅಧಿಕಾರಗಳನ್ನು ಜನರಿಗೆ ಉಪಕಾರ ಮಾಡುವುದಕ್ಕೇ ಬಳಸುವ ಮೂಲಕ ಜನಾನುರಾಗಿ ಆಗಿದ್ದಲ್ಲದೇ ಒಳ್ಳೆಯ ಮೃದಂಗ ವಾದಕರಾಗಿದ್ದು ನಾಟಕದಲ್ಲಿ ಅವರಿಗೆ ವಿಶೇಷ ಆಸಕ್ತಿ ಇದ್ದಿತಂತೆ. ಈ ಎಲ್ಲಾ ಅಂಶಗಳು ಅವರಿಗೆ ವಂಶಪಾರಂಪರ್ಯವಾಗಿ ಬಂದಿದ್ದದಿಂದಲೋ ಇಲ್ಲವೇ ಅವರ ಊರಿನ ದೇವಾಲಯಗಳಲ್ಲಿ ಪ್ರತೀ ದಿನ ಸಂಜೆ ನಡೆಯುತ್ತಿದ್ದ ಭಜನೆ, ಗಮಕ ವಾಚನ ವಲ್ಲದೇ, ಆಗ್ಗಾಗ್ಗೆ ಅವರ ಊರಿಗೆ ಬರುತ್ತಿದ್ದ ವೃತ್ತಿ ರಂಗಭೂಮಿ ನಾಟಕ ಕಂಪನಿಗಳ ಪೌರಾಣೀಕ ಮತ್ತು ಸಾಮಾಜಿಕ ನಾಟಕಗಳು, ವಿವಿಧ ತಂಡಗಳ ಯಕ್ಷಗಾನ ಪ್ರಸಂಗಗಳು, ಬೊಂಬೆಯಾಟಗಳಷ್ಟೇ ಅಲ್ಲದೇ ಊರಿನ ರಥೋತ್ಸವ, ಸಾಮೂಹಿಕವಾಗಿ ಆಚರಿಸುತ್ತಿದ್ದ ಹಬ್ಬ ಹರಿದಿನಗಳು ಮತ್ತು ಅದರ ಪ್ರಯುಕ್ತ ನಡೆಸಲಾಗುತ್ತಿದ್ದ ಸಾಂಸ್ಕೃತಿಕ ಕಾರ‍್ಯಕ್ರಮಗಳ ಪ್ರಭಾವ ಅವರಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿ ಮುಂದೆ ಅದೇ ವಿಷಯಗಳು ಅವರ ಕಾವ್ಯಗಳಲ್ಲೂ ಆಭಿವ್ಯಕ್ತವಾಗಿದ್ದದ್ದು ಗಮನಿಸಬೇಕಾದ ಅಂಶ.

ಮೂರ್ತಿಗಳಿಗೆ ತಮ್ಮೂರಿನ ಬಗ್ಗೆ ಮತ್ತೊಂದು ವಿಶೇಷವಾದ ಆಕರ್ಷಣೆ ಎಂದರೆ, ಅವರ ಊರಿನ ಅರಣ್ಯದ ಮಧ್ಯದಲ್ಲಿದ್ದ ಶಿವಾಜಿ ಮಹಾರಾಜರ ತಂದೆ ಶಹಜೀ ಭೋಸ್ಲೆ ಅವರ ಸಮಾಧಿ. ಶಹಜೀ ಭೋಸ್ಲೆ ಅವರು ತಮ್ಮ ಜೀವಿತಾವಧಿಯ ವಿವಿಧ ಹಂತಗಳಲ್ಲಿ ಅಹಮದ್‌ನಗರ ಸುಲ್ತಾನರು, ಬಿಜಾಪುರ ಸುಲ್ತಾನರು ಮತ್ತು ಮೊಘಲ್ ಸಾಮ್ರಾಜ್ಯಕ್ಕೆ ಸೇವೆ ಸಲ್ಲಿಸುತ್ತಿರುವಾಗ ಕೆಲಕಾಲ ಬೆಂಗಳೂರಿನ ಜಾಗೀರ್ ಆಗಿದ್ದವರು ಅಂತಿಮವಾಗಿ ಬಿಜಾಪುರದ ಮುಖ್ಯ ಸೇನಾಪತಿಯಾ ಅದರ ವಿಸ್ತರಣೆಯ ಮೇಲ್ವಿಚಾರಣೆ ಮಾಡಿಕೊಂಡಿರುವಾಗಲೇ 1664 ರ ಆರಂಭದಲ್ಲಿ ವೆಂಕಟೇಶ ಮೂರ್ತಿಗಳ ಹೊದಿಗೆರೆ ಗ್ರಾಮದಲ್ಲಿನ ಅರಣ್ಯದಲ್ಲಿ ಬೇಟೆಯಾಡುವಾಗ ಆದ ಅಪಘಾತದಲ್ಲಿ ನಿಧನರಾದಾಗ ಅವರ ಸಮಾದಿಯನ್ನು ಅದೇ ಊರಿನಲ್ಲೇ ಮಾಡಲಾಗಿದೆ. ಅವರ ಊರಿನ ಈಚಲಕಾಡಿನ ಆಚೆಯಲ್ಲಿದ್ದ ಶಿವಾಜಿ ಮಹಾರಾಜರ ತಂದೆ ಶಹಜೀ ಭೋಸ್ಲೆ ಸಮಾದಿಯು ಬಾಲಕರಾಗಿದ್ದ ವೆಂಕಟೇಶ ಮೂರ್ತಿಗಳು ಮತ್ತು ಅವರ ಗೆಳೆಯರಿಗೆ ಒಂದು ರೀತಿಯ ವಿಶೇಷ ಆಕರ್ಷಣೆಯಾಗಿದ್ದ ಹಾರಣ, ಮನೆಯವರಿಗೆ ಹೇಳದೇ ಕೇಳದೇ ಆಗ್ಗಾಗ್ಗೆ ಅಲ್ಲಿಗೆ ಹೋಗುತ್ತಿದ್ದದ್ದಲ್ಲದೇ ತಮ್ಮ ಮನೆಗೆ ಬರುವ ಸಂಬಂಧಿಗಳನ್ನೂ ಅಲ್ಲಿಗೆ ಕರೆದುಕೊಂಡು ಹೋಗಿ ಮನೆಯವರಿಂದ ಬಿಸಿ ಬಿಸಿ ಕಜ್ಜಾಯವನ್ನೂ ತಿಂದಿದ್ದೂ ಉಂಟು.

ಮೂರ್ತಿಗಳು  ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮ್ಮ ತವರೂರು ಹೋದಿಗ್ಗೆರೆಯಲ್ಲಿ ಮುಗಿಸಿದ ನಂತರ ಪ್ರೌಢ ಶಿಕ್ಷಣವನ್ನು ಹೊಳಲ್ಕೆರೆಯಲ್ಲಿ ಉತ್ತಮ ಶ್ರೇಣಿಯೊಂದಿಗೆ ಮುಗಿಸಿದ ನಂತರ ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚನ್ನಾಗಿರದಿದ್ದ ಕಾರಣ, ಓದಿ ಮುಗಿಸಿದ ತಕ್ಷಣವೇ ಕೆಲಸ ಸಿಗುವಂತಹ ಶಿಕ್ಷಣ ಪಡೆಯಬೇಕೆಂದು ಯೋಚಿಸಿ, ಭದ್ರಾವತಿಯಲ್ಲಿ ಡಿಪ್ಲೊಮ ಪಡೆದು ಮಲ್ಲಾಡಿ ಹಳ್ಳಿಯಲ್ಲಿ ಪ್ರೌಢಶಾಲೆಯ ಕ್ರಾಫ್ಟ್ ಟೀಚರಾಗಿ ಉದ್ಯೋಗವನ್ನು ಆರಂಭಿಸಿದರು. ಅವರ ಬಾಲ್ಯವೆಲ್ಲವೂ  ಗ್ರಾಮೀಣ ಪರಿಸರದಲ್ಲಿ ನಡೆದಿದ್ದ ಕಾರಣ, ಅಲ್ಲಿನ ಅನುಭವಗಳು ಅಲ್ಲಿ ನೋಡಿದ ನಾಟಕಗಳು, ಭಜನೆ, ಹರಿಕಥೆ, ಗಮಕಗಳೆಲ್ಲವೂ ಅವರ ಮೇಲೆ ಅಚ್ಚಳಿಯದೇ ಪ್ರಭಾವ ಬೀರಿದ್ದ ಕಾರಣ, ಅವರಲ್ಲಿದ್ದ ಕನ್ನಡಿಗನ ಕನ್ನಡತನ ಜಾಗೃತವಾಗಿ ಹೃದಯದಲ್ಲಿದ್ದ ಕನ್ನಡ ಭಾಷೆಯನ್ನು ಅಧ್ಯಯನ ಮಾಡುವ ಮತ್ತು ತನ್ಮೂಲಕ ತನ್ನ ಮನಸ್ಸಿಲ್ಲಿದ ಭಾವನೆಗಳನ್ನು  ಅಕ್ಷರ ರೂಪದಲ್ಲಿ ವ್ಯಕ್ತಪಡಿಸುವ  ಉತ್ಕಟಾಕಾಂಕ್ಷೆಯಿಂದಾಗಿ ಧಾರವಾಡ ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಬಿ.ಎ. ಪದವಿ ಪಡೆದು, ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿ ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ. ಪದವಿಯನ್ನು ಪಡೆದರು. 1973ರಲ್ಲಿ ಪ್ರೊ. ಜಿ.ಎಸ್.ಶಿವರುದ್ರಪ್ಪನವರ ಶಿಷ್ಯತ್ವದಲ್ಲಿ  ಕನ್ನಡದಲ್ಲಿ ಕಥನ ಕವನಗಳು  ಎಂಬ ವಿಷಯದ ಕುರಿತಾಗಿ  ಮಹಾಪ್ರಬಂಧ ಬರೆದು ಬೆಂಗಳೂರು ವಿಶ್ವವಿದ್ಯಾಲಯದ ಪಿ.ಎಚ್.ಡಿ. ಪದವಿಯನ್ನೂ ಗಳಿಸಿದ ನಂತರ ಡಾ. ಹೆಚ್. ಎಸ್. ವೆಂಕಟೇಶ ಮೂರ್ತಿಗಳಾಗಿ ಸುಮಾರು 30 ವರ್ಷಗಳ ಕಾಲ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ವೃತ್ತಿಯಲ್ಲಿ ಕನ್ನಡ ಅಧ್ಯಾಪಕರಾಗಿದ್ದರೂ, ಪ್ರವೃತ್ತಿಯಲ್ಲಿ ಕವಿ, ಸಾಹಿತಿ, ಪ್ರಬಂಧಕಾರ, ನಾಟಕಕಾರ, ಕಾದಂಬರಿಕಾರ, ಮಕ್ಕಳ ಸಾಹಿತ್ಯ ಕೃತಿಗಳ ರಚನಕಾರ, ಅನುವಾದಕ, ಅಂಕಣಕಾರ, ವಾಗ್ಮಿ, ವಿಮರ್ಶಕರಷ್ಟೇ ಅಲ್ಲದೇ, ಕನ್ನಡ  ಕನ್ನಡ ಸಿನೆಮಾರಂಗ ಮತ್ತು ಕಿರುತೆರೆಯಲ್ಲಿ ಸಂಭಾಷಣಾಕಾರ,  ಗೀತ ರಚನಾಕಾರರಾಗಿ ಪ್ರಸಿದ್ದಿ ಪಡೆದು, ಕವಿಗಳಾಗಿ ಸುಮಾರು 100ಕ್ಕೂ ಅಧಿಕ ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ಪರಿವೃತ್ತ, ಬಾಗಿಲು ಬಡಿವ ಜನಗಳು, ಸೌಗಂಧಿಕ, ಮೂವತ್ತು ಮಳೆಗಾಲ, ಮುಂತಾದವುಗಳು ಅವರ ಪ್ರಮುಖ ಕವನ ಸಂಕಲನಗಳಾದರೆ, ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಅಗ್ನಿವರ್ಣ ಮುಂತಾದ ನಾಟಕಗಳನ್ನು ರಚಿಸಿದ್ದಾರೆ.

ಬಾಳೊಂದು ಭಾವಗೀತೆ ಚಿತ್ರದಲ್ಲಿ ಕಾಮನ ಬಿಲ್ಲಿನ ಮೇಲೆ ಹಾಡಿನ ಮೂಲಕ ಆರಂಭವಾದ  ಅವರ ಕನ್ನಡ ಚಿತ್ರರಂಗದ ನಂಟು  ಈ ಮೊದಲೇ ಹೇಳಿದಂತೆ ಚಿನ್ನಾರಿ ಮುತ್ತದ ಕಥೆ, ಸಂಭಾಷಣೆ ಮತ್ತು  ಹಾಡುಗಳು ಅವರಿಗೆ ಅಪಾರವಾದ ಜನಪ್ರಿಯತೆಯನ್ನು ತಂದುಕೊಟ್ಟ ನಂತರ, ಗೆಳೆಯ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ  ಕೊಟ್ರೇಶಿ ಕನಸು ಚಿತ್ರದ ಎಲ್ಲಾ ಹಾಡುಗಳಲ್ಲದೇ, ಅವರದ್ದೇ ನಿರ್ದೇಶನದ ಅಮೇರಿಕಾ ಅಮೇರಿಕಾ ಚಿತ್ರದ ಬಾನಲ್ಲಿ ತೇಲೋ ಮೋಡ ಎಂಬ ಹಾಡನ್ನು ರೆಚಿಸಿದ್ದರು. ಕ್ರೌರ್ಯದ ಸಂಭಾಷಣೆ ಬರೆದರೆ, ಮತದಾನ, ಒಂದೂರಲ್ಲಿ, ಮೈತ್ರಿ ಚಿತ್ರಗಳಿಗೆ ವಿಶೇಷವಾದ ಹಾಡುಗಳನ್ನು ರಚಿಸಿದ್ದರು. ಅವರ ಜನಪ್ರಿಯ ಭಾವಗೀತೆಗಳಲ್ಲಿ ಒಂದಾದ ತೂಗು ಮಂಚದಲ್ಲಿ ಕೂತು  ಗೀತೆಯನ್ನು ರಿ‌‌ಷಭ್ ಶೆಟ್ಟರು, ಕಿರಿಕ್ ಪಾರ್ಟಿ ಯಲ್ಲಿ ಬಳಸಿಕೊಂಡು ಜನಪ್ರಿಯ ಗೊಳಿಸಿದರೆ.  ರಕ್ಷಿತ್ ಶೆಟ್ಟಿಯವರು ಅಭಿನಯಿಸಿದ್ದ   ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಎರಡನೇ ಭಾಗ ಸೈಡ್ ಬಿ ಯಲ್ಲಿ ಮತ್ತೊಂದು ಭಾವಗೀತೆ ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಎಂಬುದನ್ನು ಬಳಸಿಕೊಂಡಿದ್ದರು. ಅವರ ಹಲವಾರು ಭಾವಗೀತೆಗಳನ್ನು ವಿವಿಧ ಸಂಗೀತ ನಿರ್ದೇಶಕರು ಮತ್ತು ಗಾಯಕ/ಗಾಯಕಿಯರು ಚಂದದ ಸಂಗೀತ ನೀಡಿ ಧ್ವನಿಸುರುಳಿಗಳ ಮೂಲಕ ಕನ್ನಡಿಗರ ಮನ ಸೂರೆಗೊಂಡಿವೆ.

ಕನ್ನಡ ಸಂಗೀತ ಲೋಕದ ದಿಗ್ಗಜರಾಗಿದ್ದಂತಹ ಸಿ. ಅಶ್ವಥ್, ಕನ್ನಡ ಧಾರಾವಾಹಿಗಳ ಮಾಂತ್ರಿಕ ಟಿ.ಎನ್. ಸೀತಾರಾಮ್ ಮತ್ತು ಹೆಚ್.ಎಸ್.ವಿ ಅವರ ನಡುವೆ ಏಕವಚನದಲ್ಲಿ ಮಾತನಾಡಿಸುವಷ್ಟರ ಮಟ್ಟಿಗಿನ ಗೆಳೆತನ ಇದ್ದ ಕಾರಣ, ಸೀತಾರಾಮ್ ಅವರ ಬಹುತೇಕ ಜನಪ್ರಿಯ ಧಾರವಾಹಿಗಳ ಶೀರ್ಷಿಕೆ ಗೀತೆಗಳನ್ನು ಹೆಚ್.ಎಸ್.ವಿ ಅವರು ಬರೆದರೆ ಅದಕ್ಕೆ  ಸಿ. ಅಶ್ವಥ್ ಅವರ ಸಂಗೀತ ಇರುತ್ತಿತ್ತು ಎನ್ನುವುದಕ್ಕೆ ಮುಕ್ತಾ, ಮುಕ್ತ ಮುಕ್ತಾ, ಮಹಾಪರ್ವ ಮುಂತಾದ ಧಾರವಾಹಿಗಳೇ ಸಾಕ್ಷಿ.

ತಮ್ಮ ಬರವಣಿಗೆಗಳೆಲ್ಲದರಲ್ಲಿ ಕನ್ನಡದ ಮೂಲತನವನ್ನು ಕಾಣಿಸಿ ಕೊಡುವ ಎಚ್.ಎಸ್.ವಿ ಅವರು ಮೂಲತಃ ಕನ್ನಡ ಅಧ್ಯಾಪಕರಾಗಿದ್ದ ಕಾರಣ ಇಂದಿನ ಕನ್ನಡ ಶಾಲೆಗಳ ಪರಿಸ್ಥಿತಿಯ ಬಗ್ಗೆ ಮತ್ತು ಮುಂದಿನ ಪೀಳಿಗೆಗಳು ತಮ್ಮ ಇತಿಹಾಸದಿಂದ ವಂಚಿತವಾಗುವ ಪರಿಸ್ಥಿತಿ ಏರ್ಪಾಡುತ್ತಿರುವ ಬಗೆಗೆ ಅತೀವ ಖೇದವನ್ನು ವ್ಯಕ್ತ ಪಡಿಸುತ್ತಿದ್ದರು. ಹಾಗಾಗಿಯೇ  ತಮ್ಮ ಅನಾರೋಗ್ಯದ ನಡುವೆಯೂ ಮಕ್ಕಳ ಕಾರ್ಯಕ್ರಮ ಎಂದರೆ ಕುಟುಂಬದವರ ಮಾತನ್ನೂ ಮೀರಿ ಕಾರ್ಯಕ್ರಮಕ್ಕೆ ಬಂದು ಮಕ್ಕಳ ಜೊತೆ ಮಕ್ಕಳಾಗಿ ಇರುತ್ತಿದ್ದರು ಎನ್ನುವುದಕ್ಕೆ ಕೆಲವು ವರ್ಷಗಳ ಹಿಂದೆ ಅವರು ವಾಸವಿದ್ದ ಹೊಸಕೆರೆಹಳ್ಳಿಯ ಬಳಿಯ ಶಾಲೆಯೊಂದರಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ನಡೆದ ಕಾರ್ಯಕ್ರಮವೊಂದಕ್ಕೆ ಅವರ ಮನೆಗೆ ಹೋಗಿ ಅವರನ್ನು ನನ್ನ ಕಾರಿನಲ್ಲಿ ಕರೆದುಕೊಂಡು  ಅವರ ಕಾರ್ಯಕ್ರಮದ ನಿರೂಪಕನಾಗಿ ಮತ್ತೆ ಅವರನ್ನು ಮನೆಗೆ ಕರೆದುಕೊಂಡು ಹೋಗುವ ಸುವರ್ಣಾವಕಾಶ ಸಿಕ್ಕು ಅವರನ್ನು  ಬಹಳ ಹತ್ತಿರದಿಂದ ಭೇಟಿಯಾಗುವ ಅವಕಾಶ ಸಿಕ್ಕಿದ್ದದ್ದು ನಿಜಕ್ಕೂ ಅದ್ಭುತವೇ ಸರಿ.  ಆಗ ತಾನೇ ಆನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದರೂ, ಮಕ್ಕಳ ಕಾರ್ಯಕ್ರಮಕ್ಕೆ ತಪ್ಪಿಸಿಕೊಳ್ಳ ಬಾರದು ಎಂದು ನಮ್ಮೊಡನೆ ಸುಮಾರು ಎರಡು ಗಂಟೆಗಳ ಕಾಲವಿದ್ದು ತಮ್ಮ ಸುಧೀರ್ಘ ಅನುಭವವನ್ನು ಮಕ್ಕಳೊಂದಿಗೆ ಹಂಚಿಕೊಂಡಿದ್ದು ನಿಜಕ್ಕೂ ಮರೆಯಲಾಗದ ಅನುಭವ.

ಎಚ್.ಎಸ್.ವಿ ಅವರು ತಮ್ಮ  ಪಾಂಡಿತ್ಯಪೂರ್ಣ ಬರವಣಿಗೆಗಳ ಪರಿದಿಯಾಚೆಗೆ, ಜನಸಾಮಾನ್ಯರು ಅದರಲ್ಲೂ ಮಕ್ಕಳಿಗೆ ಹತ್ತಿರವಾಗುವಂತೆ ಚಿನ್ನಾರಿ ಮುತ್ತದಂತಹ ಸೊಗಸಾದ ಹಾಡುಗಳನ್ನು ಬರೆದಿರುವುದಲ್ಲದೇ,  ಅವರ ಭಾವಗೀತೆಗಳಾದ ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತೆವು, ಲೋಕದ ಕಣ್ಣಿಗೆ ರಾಧೆಯು ಕೂಡಾ ಎಲ್ಲರಂತೇ ಒಂದು ಹೆಣ್ಣು ಮುಂತಾದವುಗಳ ಮೂಲಕ ಆತ್ಮೀಯ ಭಾಷೆಯಲ್ಲಿ ಮಹತ್ತರವಾದದ್ದನ್ನು ಸರಳವಾಗಿ ಹೇಳುವ ಕಲೆ ಅವರಿಗೆ ಕರವಾಗಿತ್ತು ಎಂಬುದು ತಿಳಿಯುತ್ತದೆ.

ಕನ್ನಡ ಸಾರಸ್ವತ ಲೋಕದಲ್ಲಿ ಅಪಾರವಾದ ಸೇವೆಯನ್ನು ಸಲ್ಲಿಸಿದ್ದ ಪರಿಣಾಮವಾಗಿ ಕಲಬುರ್ಗಿಯಲ್ಲಿ ನಡೆದ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.  ಇದಲ್ಲದೇ ಸಾಹಿತ್ಯ ಕ್ಷೇತ್ರದಲ್ಲಿನ ಅವರ ಅಪಾರವಾದ ಕೃಷಿಗೆ ಸಹಜವಾಗಿಯೇ ಹತ್ತು ಹಲವಾರು ಪ್ರಶಸ್ತಿಗಳು ಅವರನ್ನರಸಿ ಬಂದಿದ್ದು ಅವರ ಕಥನ ಕವನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ, ಇನಾಮದಾರ್ ಸ್ಮಾರಕ ಪ್ರಶಸ್ತಿ, ಅವರ ಪುಸ್ತಕ ಕುಮಾರವ್ಯಾಸ ಕಥಾಂತರಕ್ಕೆ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ,  ಅವರ ಹಸಿರು ರಿಬನ್ ಚಿತ್ರದ ಹಾಡಿಗೆ ಕನ್ನಡ ವಿಭಾಗದ ಅತ್ಯುತ್ತಮ ಗೀತ ರಚನೆ ಪ್ರಶಸ್ತಿ ಯಲ್ಲದೇ ಇನ್ನೂ ನೂರಾರು ಸಂಘ ಸಂಸ್ಥೆಗಳು ಅವರನ್ನು ಗೌರವಿಸಿ ನೀಡಿದ್ದ ಪ್ರಶಸ್ತಿ ಪುರಸ್ಕಾರಗಳು ಮತ್ತು ಫಲಕಗಳನ್ನು ಅವರ ಮನೆಯ ಕಾಣಬಹುದಾಗಿದೆ.

ಎಚ್.ಎಸ್.ವಿ ಅವರ 70 ನೇ ವರ್ಷದ  ಹುಟ್ಟುಹಬ್ಬಕ್ಕೆ ತಮ್ಮ ತಂದೆಯವರಿಗೆ ಅಮೂಲ್ಯವಾದ ಉಡುಗೊರೆಯನ್ನು ನೀಡಲು ತೀರ್ಮಾನಿಸಿದ್ದ ಅವರ ಕಿರಿಯ ಮಗ ಎಚ್.ವಿ. ಸಂಜಯ ಮತ್ತು ಅವರ ಸೊಸೆ ಸುಮಾ ಗಾಯಕ-ಸಂಯೋಜಕ ದಂಪತಿಗಳಾದ ಸುಪ್ರಿಯಾ ಆಚಾರ್ಯ ಮತ್ತು ರಘುನಂದನ್ ಅವರಿಂದ ಎಚ್.ಎಸ್.ವಿ ಅವರ ಸುಂದರವಾದ ಭಾವಗೀತೆಗಳಿಗೆ ಚಂದನೆಯ ಸಂಗೀತ ಮತ್ತು ಗಾಯನವನ್ನು ಮಾಡಿಸಿ ಚಂದ್ರಸ್ಮಿತ ಎಂಬ ಆಲ್ಬಮ್ ಒಂದನ್ನು ಬನಶಂಕರಿಯ ಪಿಇಎಸ್ ವಿಶ್ವವಿದ್ಯಾಲಯದ ಐಟಿ ಪಾರ್ಕ್ ಸೆಮಿನಾರ್ ಹಾಲ್‌ನಲ್ಲಿ ಬಿಡುಗಡೆಗೊಳಿಸುವ ಮೂಲಕ ತಮ್ಮ ತಂದೆಯವರಿಗೆ ಅಚ್ಚರಿಯ ಅನುರೂಪದ ಉಡುಗೊರೆಯನ್ನು ನೀಡಿದದ್ದು ಗಮನಾರ್ಹವಾಗಿತ್ತು.

ಆಧುನಿಕ ಭಾವಗೀತೆಗಳ ಲೋಕದಲ್ಲಿ ಅದ್ಭುತ ಕವಿ ಎನಿಸಿಕೊಂಡಿದ್ದ ಎಚ್.ಎಸ್.ವಿ ಅವರು ಸುದೀರ್ಘ ಕಾಲದ ಅನಾರೋಗ್ಯದ ನಡುವೆಯೂ ಅಲ್ಲೊಂದು ಇಲ್ಲೊಂದು ಕಾರ್ಯಕ್ರಮಗಳಲ್ಲಿ ಭಾಗವಾಗಿ ಅದಾಗಲೆಲ್ಲಾ ಏನಾದರೂ ಬರೆಯುತ್ತಾ ತಮ್ಮ ಜೀವನದ ಜೋಕಾಲಿಯನ್ನು ತೂಗುತ್ತಿರುವಾಗಲೇ 2025ರ ಮೇ 30ರ ಬೆಳಿಗ್ಗೆ ಸುಮಾರು 7.00 ಗಂಟೆಯ ಆಸುಪಾಸಿನಲ್ಲಿ ತಮ್ಮ 81 ವರ್ಷ ವಯಸ್ಸಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತೆಯಲ್ಲಿ ನಿಧನರಾಗುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದ್ದಾರೆ.

ಕನ್ನಡದ ಖ್ಯಾತ ಕವಿ, ನಾಟಕಕಾರ, ವಿಮರ್ಶಕ ಮತ್ತು ಸಾಹಿತ್ಯ ವಿದ್ವಾಂಸರಾಗಿ ನಮ್ಮ ನಾಡಿನಲ್ಲಿ ಇಂದು ವಿರಳವಾಗುತ್ತಿರುವ ಕನ್ನಡದ ಮೂಲ ಸಾಂಸ್ಕ್ರತಿಕ ಪರಂಪರೆಗಳ ಮೇರು ಪ್ರತಿನಿಧಿಯಾಗಿದ್ದ ತಮ್ಮ ಪ್ರತಿಯೊಂದು ಬರವಣಿಯಲ್ಲೂ ಅತ್ಯಂತ ಆತ್ಮೀಯವಾಗಿ ಅಷ್ಟೇ ಅಧ್ಯಾತ್ಮವಾಗಿ ತೊಡಗಿಸಿಕೊಂಡಿರುತ್ತಿದ್ದ ಎಚ್.ಎಸ್.ವಿ ಇನ್ನು ಬಾರದ ಲೋಕಕ್ಕೆ ತೆರಳಿದ್ದಾರಾದರೂ ಅವರ ಭಾವತುಂಬಿದ ಕವಿತೆಗಳು ಮತ್ತು ಭಾವನಾತ್ಮಕತೆಯಿಂದ ತುಂಬಿರುತ್ತಿದ ಭಾಷಾ ಸರಳತೆಯ ಆದರೆ ಆಳವಾದ ಅರ್ಥವನ್ನೊಳಗೊಂಡಿದ್ದ,  ಗ್ರಾಮೀಣ ಜೀವನದ ಚಿತ್ರಣಗಳಿಂದ ತುಂಬಿರುತ್ತಿದ್ದ ಸಾಹಿತ್ಯದ ಮೂಲಕ ಆಚಂದ್ರಾರ್ಕವಾಗಿ ಕನ್ನಡಿಗರೊಂದಿಗೆ  ಜೀವಂತ ಇರುವುದರಲ್ಲಿ ಯಾವುದೇ ಸಂದೇಹವಿಲ್ಲವಾಗಿರುವ ಕಾರಣ ಅವರು ನಿಸ್ಸಂದೇಹವಾಗಿಯೂ ನಮ್ಮ ಕನ್ನಡದ ಕಲಿಗಳೇ ಸರಿ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment