ಶ್ರೀ ಯಶವಂತ ಸರದೇಶಪಾಂಡೆ

ಸಮಾಜದಲ್ಲಿ ಎರಡು ರೀತಿಯ ವ್ಯಕ್ತಿಗಳು ಇರ್ತಾರೆ. ಕೆಲವರು ನಿರಂತವಾಗಿ ತಮ್ಮ ಕೆಲಸದಲ್ಲಿ ಸಕ್ರೀಯವಾಗಿದ್ದರೂ ಅವರು ಎಲೆಮರೆಕಾಯಿಯಂತೆ ಇರುತ್ತಾರೆ. ಇನ್ನು ಕೆಲವರು ಏನೂ ಕೆಲಸ ಮಾಡದೇ ಇದ್ದರೂ, ಸುಖಾಸುಮ್ಮನೇ ಕೊಚ್ಚಿಕೊಳ್ಳುತ್ತಿರುತ್ತಾರೆ. ಇಂತಹ ವ್ಯಕ್ತಿಗಳಲ್ಲಿ ಮೊದಲನೇ ಸಾಲಿಗೇ ಸೇರುವ ಕಲಾವಿದರೇ, ಕನ್ನಡ ರಂಗಭೂಮಿಯಲ್ಲಿ ನಟ, ನಿರ್ದೇಶಕ, ನಾಟಕಕಾರ ಸಂಭಾಷಣೆಕಾರ, ನಿರ್ಮಾಪಕ ಹೀಗೆ ಹತ್ತು ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಂತಹ ಶ್ರೀ ಯಶವಂತ ಸರದೇಶಪಾಂಡೆ  ಅವರಿಗೆ ಸೆಪ್ಟಂಬರ್ 29 2025 ಸೋಮವಾರದಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಹೃದಯಾಘಾತ ಆದ  ತಕ್ಷಣವೇ ಅವರನ್ನು ಹತ್ತಿರ್ದದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೆ ಅವರು ತಮ್ಮ 60ನೇ ವಯಸ್ಸಿನಲ್ಲಿ ಕೊನೆಯುಸಿರೆಳೆಯುವ ಮೂಲಕ ಅಕ್ಷರಶಃ ಕನ್ನಡ ರಂಗಭೂಮಿಯನ್ನು ಅನಾಥವನ್ನಾಗಿಸಿದೆ ಎಂದರೂ ತಪ್ಪಾಗದು.

ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದ ಸಂಪ್ರದಾಯಸ್ಥ ದಂಪತಿಗಳಾದ ಶ್ರೀ ಗೋಪಾಲರಾವ್ ಸರದೇಶಪಾಂಡೆ ಮತ್ತು ಕಲ್ಪನಾದೇವಿ ಅವರ ಗರ್ಭದಲ್ಲಿ ಯಶವಂತ ಸರದೇಶಪಾಂಡೆಯವರು 1965ರ ಜೂನ್ 13ರಂದು  ಜನಿಸುತ್ತಾರೆ. ಯಶವಂತರಿಗೆ  ಚಿಕ್ಕಂದಿನಿಂದಲೇ ಓದಿಗಿಂತಲೂ  ನಾಟಕಗಳಲ್ಲಿ ಆಸಕ್ತಿ. ಹಾಗಾಗಿ ತಮ್ಮ ಊರಿಗೆ ಮತ್ತು ಅಕ್ಕ ಪಕ್ಕದ ಊರಿಗೆ  ಬರುವ ವೃತ್ತಿ ನಾಟಕ ಮಂಡಳಿಗಳಿಗೆ ಹೋಗಿ ತಮ್ಮ ಚಾಕಚಕ್ಯತೆಯಿಂದ ಆ ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯಾರನ್ನಾದರೂ ಪರಿಚಯ ಮಾಡಿಕೊಂಡು ನಾಟಕದ ತಾಲೀಮು ಮಾಡುತ್ತಿರುವಾಗ ತದೇಕಚಿತ್ತದಿಂದ ಅದನ್ನೇ ಗಮನಿಸುತ್ತಾ, ಅವರ ಹಾವ ಭಾವಗಳನ್ನು ಅನುಕರಣೆ ಮತ್ತು ಅನುಸರಣೆ ಮಾಡುತ್ತಿರುವುದನ್ನು ಗಮನಿಸಿದ  ಅವರ ತಂದೆ, ಯಶವಂತರ ಎಸ್. ಎಸ್.ಎಲ್. ಸಿ ಮುಗಿಯುತ್ತಿದ್ದಂತೆಯೇ  ಅವರನ್ನು ಹರಿಹರದ ಕಿರ್ಲೋಸ್ಕರ್ ಕಂಪನಿಯಲ್ಲಿ appreciantship  ಸೇರಿಕೊಂಡು  ಎರಡು ವರ್ಷಗಳ ಕಾಲ   Training ಮುಗಿಸಿ, ಹತ್ತಿರದ ಫೌಂಡ್ರಿಯಲ್ಲಿಯೂ ಸಹಾ ಕೆಲಸ ಮಾಡಿ ಅದು ಆವರಿಗೆ ರುಚಿಸದೇ, ತಂದೆಯವರ ದಂಬಾಲು ಬಿದ್ದು   ಹೆಗ್ಗೋಡಿನ ನಿನಾಸಂ ನಾಟಕ ಸಂಸ್ಥೆಗೆ ಸೇರಿಸಲು ಕೇಳಿದಾಗ ಅದಕ್ಕೆ ತಂದೆಯವರೂ  ಒಪ್ಪಿಕೊಂಡಾಗ, . ರೋಗಿ ಬಯಸಿದ್ದು ಹಾಲು ಅನ್ನಾ, ವೈದ್ಯರು ಹೇಳಿದ್ದೂ ಹಾಲು ಅನ್ನಾ ಎನ್ನುವಂತೆ ತಮ್ಮ ಮನದಾಸೆಯನ್ನು ಅರಿತು ಅವರನ್ನು ನಿನಾಸಂಗೆ ಸೇರಿಸಿದ್ದರಿಂದ ಸಂತೋಷಗೊಂಡ ಯಶವಂತ್ ಅಲ್ಲಿ ಡಿಪ್ಲೊಮ ಪಡೆಯುವಷ್ಟರಲ್ಲಿ, ಇತರೇ ರಂಗ ಚಟುವಟಿಗೆಗಳಲ್ಲಿ ತೊಡಗಿಸಿಕೊಂಡಿದ್ದಲ್ಲದೇ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನ್ಯೂಯಾರ್ಕಿನ  ವಿಶ್ವವಿದ್ಯಾಲಯದಿಂದ ನಾಟಕ ರಚನೆ ಮತ್ತು ಚಲನಚಿತ್ರ ಸಂಭಾಷಣೆ ವಿಷಯದಲ್ಲಿ ವಿಶೇಷ ತರಬೇತಿ ಪಡೆಯುವ ಮೂಲಕ ತಮ್ಮ ಪರಿಧಿ (ವ್ಯಾಪ್ತಿಯನ್ನು) ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಿಕೊಳ್ಳುತ್ತಾರೆ.

ಹೀಗೆ ಉನ್ನತಶಿಕ್ಷಣವನ್ನು ಪಡೆದು ಮರಳಿ ಭಾರತಕ್ಕೆ ಹಿಂದಿರುಗಿದ ನಂತರ ತಮ್ಮದೇ ಆದ ನಾಟಕ ತಂಡವೊಂದನ್ನು ಕಟ್ಟಿ  ಆದರ ಮೂಲಕ ಅಂಧಯುಗ, ಇನ್‌ಸ್ಪೆಕ್ಟರ್ ಜನರಲ್, ಮಿಡ್‌ಸಮರ್ ನೈಟ್ಸ್ ಡ್ರೀಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ್ಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ ನಾಟಕಗಳನ್ನು ನಿರ್ದೇಶನ ಮಾಡಿದ್ದಲ್ಲದೇ ಹಲವಾರು ನಾಟಕಗಳಲ್ಲಿ ಸ್ವತಃ ನಟಿಸಿ ಎಲ್ಲರನ್ನೂ ನಗೆ ಗಡಲಿನಲ್ಲಿ ತೇಲಿಸಿದ್ದಾರೆ.  ಇಲ್ಲದೇ,  ಆಕಾಶವಾಣಿ ಮತ್ತು ದೂರದರ್ಶನಕ್ಕೆ ಹಲವಾರು ಕಾರ್ಯಕ್ರಮಗಳನ್ನು ನಿರೂಪಿಸಿರುವ ಯಶವಂತರು  ರಂಗ ವರ್ತುಲ ಮತ್ತು ಬೇಂದ್ರೆ ರಂಗಾವಳಿಯ ಮುಖಾಂತರ ಕವಿ ಬೇಂದ್ರೆಯವರ ಎಲ್ಲಾ ನಾಟಕಗಳನ್ನು ರಂಗಕ್ಕೆ ತಂದಿರುವ ಅಭೂತಪೂರ್ವ ಹೆಗ್ಗಳಿಗೆ ಪಾತ್ರರಾಗಿದ್ದರು. ತಮ್ಮ  ಗುರು ಸಂಸ್ಥೆಯ ಮುಖಾಂತರ ಹಲವಾರು ನಾಟಕಗಳನ್ನು ಆಡಿಸಿದ್ದರೂ, ಅವರಿಗೆ ಭಾರೀ  ಹೆಸರನ್ನು ತಂದು ಕೊಟ್ಟ ನಾಟಕಗಳೆಂದರೆ,  ಆಲ್‌ ದಿ ಬೆಸ್ಟ್, ರಾಶಿ ಚಕ್ರ, ಸಹಿ ರೀ ಸಹಿ, ದಿಲ್ ಮಾಂಗೆ ಮೋರ್‌ ಮುಂತಾದ ನಾಟಕಗಳಲ್ಲಿ  ತಿಳಿ ಹಾಸ್ಯದ ಮೂಲಕ  ಲಕ್ಷಾಂತರ ಪ್ರೇಕ್ಷಕರನ್ನು ನಗಿಸುವುದಕ್ಕೆ ಕಾರಣೀಭೂತರಾಗಿದ್ದಾರೆ.

ಇದಷ್ಟೇ ಅಲ್ಲದೇ ತಮ್ಮ ನಾಟಕಗಳನ್ನು ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ತಡ ರಾತ್ರಿ ಮನೆಗೆ ಹೋಗಿ ಅಯ್ಯೋ ಅಡುಗೆ ಮಾಡಿ ತಿನ್ನಬೇಕೆಲ್ಲಾ ಎಂದು  ಗೋಳಾಡುವುದು ಬೇಡ ಎಂದು ಎಂ.ಟಿ.ಆರ್‌. ಸಹಯೋಗದೊಂದಿಗೆ ತಮ್ಮ ನಾಟಕಗಳು ಮುಗಿದ ನಂತರ ರಂಗಮಂದಿರ ಪಕ್ಕದಲ್ಲಿ ಎಂ.ಟಿ.ಆರ್‌. ಫುಡ್ ಟ್ರಕ್ ಮುಖಾಂತರ ರುಚಿ ಮತ್ತು ಶುಚಿಯಾದ ಸುಗ್ರಾಸ ಭೋಜನವನ್ನು ಬಡಿಸುವ ಸಂಪ್ರದಾಯವನ್ನು ರೂಡಿಗೆ ತಂದು ಅದು ಬಹಳ ಯಶಸ್ವಿಯಾಗಿ ರಾಜ್ಯದೆಲ್ಲೆಡೆ ಪಡೆದ ಪ್ರಶಂಸೆಯಾಗಿದೆ. ರಾಶಿ ಚಕ್ರ ಎಂಬ ಸ್ವತಃ ಅವರೇ ನಟಿಸಿ ನಗಿಸುವ ಸುಮಾರು ಎರಡು ಗಂಟೆಗಳ   ಏಕವ್ಯಕ್ತಿ ಅಭಿನಯ ನಿಜಕ್ಕೂ ಕೇವಲ ನಮ್ಮ ರಾಜ್ಯ, ದೇಶವಲ್ಲದೇ ವಿದೇಶದಲ್ಲಿಯೂ ಸದ್ದು ಮಾಡಿತ್ತು. ಸುಮಾರು 18-20 ಬಾರಿ ತಮ್ಮ  ಚಿಕ್ಕ ತಂಡದೊಂದಿಗೆ (ಮಡದಿ ಮಾಲತಿ ಅಳಿಯ ಮಧು ಉಮರ್ಜಿ ಅಳಿಯ,  ಆಂಧ್ರಪ್ರದೇಶದ ಕಲಾವಿದ ಖಾದರ್ ಭಾಷಾ)  ಆಲ್ ದ ಬೆಸ್ಟ್ ನಾಟಕವಂತೂ ಅಮೇರಿಕಾದಲ್ಲಿ ಮತ್ತೆ ಮತ್ತೆ ಪ್ರದರ್ಶನ ಗೊಂಡಿದೆ.

ಕೇವಲ ನಾಟಕಗಾರನಾಗಿಯಷ್ಟೇ ಜಗತ್ತಿಗೆ ಪರಿಚಿತವಾಗಿದ್ದ ಯಶವಂತ ಸರದೇಶಪಾಂಡೆಯವರಲ್ಲಿದ್ದ ಅಂಕಣಕಾರನನ್ನು ಬಡಿದೆಬ್ಬಿಸಿದ ಕೀರ್ತಿ ಅವರ  ಒಂದು ಕಾಲದ ನೆಚ್ಚಿನ ಗೆಳೆಯ ರವಿ ಬೆಳಗೆರೆ ಮತ್ತು ಸದಾಕಾಲವು ಒಡನಾಡಿಯಾಗಿಯೇ ಇದ್ದ ವಿಶ್ವೇಶ್ವರ ಭಟ್ ಅವರಿಗೆ ಸೇರುತ್ತದೆ.  ಸುಮಾರು ವರ್ಷಗಳ ಕಾಲ ಈ ಮೂವರು ವ್ಯಕ್ತಿಗಳು ಗಳಸಕಂಠಸ್ಯ ರೂಪದಲ್ಲಿದ್ದು  ರವಿ ಬೆಳಗೆರೆಯವರ ಹಾಯ್ ಬೆಂಗಳೂರು ವಾರ ಪತ್ರಿಕೆಯಲ್ಲಿ ಮತ್ತು ವಿಶ್ವೇಶ್ವರ ಭಟ್ ಅವರ ವಿಜಯ ಕರ್ನಾಟಕದಲ್ಲಿ ಕೆಲ ಸಮಯ ಅಂಕಣಕಾರರಾಗಿಯೂ ಜನರ ಮನಸ್ಸನ್ನೂ ಸೂರೆಗೊಂಡಿದ್ದರು ಯಶವಂತ್. ಆದರೆ ಆದ್ಯಾರ ದೃಷ್ಟಿ ತಾಕಿತೋ ಏನೋ ಈ ಮೂವರ ನಡುವೆ ವೈಮನ್ಯವುಂಟಾಗಿ ಪರಸ್ಪರ ವೈರುಧ್ಯದ ಲೇಖನಗಳನ್ನು ಬರೆದುಕೊಳ್ಳುವ ಮೂಲಕ ಸಾರ್ವಜನಿಕವಾಗಿ ನಗಪಾಟಿಲಾಗಿದ್ದನ್ನೂ ಜನ ಮರೆತಿಲ್ಲ.

ಕೇವಲ ನಾಟಕಗಷ್ಟೇ ಅಲ್ಲದೇ. ದೂರದರ್ಶನ ಮತ್ತು ವಿವಿಧ ಖಾಸಗೀ ಛಾನೆಲ್ಲುಗಳಲ್ಲಿ  ಸಮಯ ಮಾಡಿಕೊಂಡು ಆಗ್ಗಾಗ್ಗೆ ಯದ್ವಾ-ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳಲ್ಲಿ  ನಟನಾಗಿಯೂ ಇಲ್ಲವೇ ಕೆಲವು ಧಾರಾವಾಹಿಗಳ ಸಂಭಾಷಣಾಕಾರನಾಗಿ ಕೆಲಸ ನಿರ್ವಹಿಸಿದ್ದಲ್ಲದೇ, ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ, ರಾಮ ಶಾಮ ಭಾಮ ಚಲನಚಿತ್ರಗಳಲ್ಲೂ ಅಭಿನಯಸಿ  ಹೆಚ್ಚು ಜನಪ್ರಿಯವಾಗಿದ್ದರು. ಅದರಲ್ಲೂ ರಮೇಶ್ ಊರ್ವಶಿ, ಡೈಸಿ ಬೋಪಣ್ಣ, ಶೃತಿ ಮತ್ತು ಕಮಲಹಾಸನ್ ಅಭಿನಯಿಸಿ ರಾಜ್ಯಾದಂತ್ಯ ಹೆಚ್ಚು ಪ್ರಸಿದ್ಧವಾದ ರಾಮ ಶಾಮ ಭಾಮ ಚಿತ್ರದಲ್ಲಿ ಮಾತಿಗೊಮ್ಮೆ ಆ ಮುಂದಾ..  ಆ ಮುಂದಾ.. ಆ ಮುಂದಾ.. ಎಂದು ಡಾಕ್ಟರ್ ಪಾತ್ರದಲ್ಲಿ ಕಮಲಹಾಸನ್ ಹೇಳುವ ಸಂಭಾಷಣೆಯಂತೂ ಇಂದಿಗೂ ಪ್ರಸಿದ್ದಿ ಪಡೆದಿದ್ದು ಅದರ ಸಂಪೂರ್ಣ ಶ್ರೇಯ ಯಶವಂತರಿಗೇ ಸಲ್ಲುತ್ತದೆ. ಆ ಚಿತ್ರದಲ್ಲಿ ಉತ್ತರ ಕರ್ನಾಟಕ ಭಾಷೆಯಲ್ಲಿ ಬರುವ  ಅಷ್ಟೂ ಸಂಭಾಷಣೆಗಳನ್ನು ಸ್ವತಃ ಅವರೇ ಬರೆದಿದ್ದಲ್ಲದೇ  ಅದರನ್ನು  ಯಾವ ರೀತಿಯಲ್ಲಿ ಹೇಳಬೇಕು ಎಂಬುದನ್ನು ಕಮಲಹಾಸನ್ ಆವರಿಗೆ ಹೇಳಿಕೊಟ್ಟು ಸಣ್ಣ ಪಾತ್ರದಲ್ಲೂ ನಟಿಸಿದ್ದರು.

ಕಲಾಕ್ಷೇತ್ರದಲ್ಲಿ ಅವರ ಸೇವೆಯನ್ನು ಪರಿಗಣಿಸಿ ಸರ್ಕಾರದ ವತಿಯಿಂದ   ಹುಬ್ಬಳ್ಳಿಯ ರಾಯನಾಳ್ ಕೆರೆ ಎದುರಿಗೆ ಸುಮಾರು 1 ಎಕೆರೆಯಷ್ಟು ಜಮೀನನ್ನು ಪಡೆದ ಯಶವಂತ್ ದೇಶಪಾಂಡೆ ಅಲ್ಲಿ ರಂಗಭೂಮಿಗೆ ಅವಶ್ಯಕವಿರುವ ಗುರು inistitute ಎಂಬ  ಸುಂದರವಾದ  ವಿದ್ಯಾ ಸಂಸ್ಥೆಯನ್ನು ಕಟ್ಟಿ ಅಲ್ಲಿ  ಸುಮಾರು ಐದಾರು ದೊಡ್ಡದಾದ ರಂಗಮಂದಿರಗಳನ್ನು ಸುಮಾರು 4-5 ಕೋಟಿ ಸುರಿದು  ಕಟ್ಟಿ ಅದರಲ್ಲಿ  ಒಂದಕ್ಕೆ ಬೆಂದ್ರೇ ಅವರ ನೆನಪಿನಾರ್ಥ ಬೇಂದ್ರೆ ರಂಗ ಎಂಬ ಕಟ್ಟದಲ್ಲಿ ತಮ್ಮ ಕಛೇರಿ ಮತ್ತು ಗ್ರಂಥಾಲಯವನ್ನು ಕಟ್ಟಿ ಅದರಲ್ಲಿ ಸರಿ ಸುಮಾರು 10,000 ಹೆಚ್ಚಿನ ಪುಸ್ತಕಗಳನ್ನು ಸಂಗ್ರಹಿಸಿ ಇಟ್ಟಿದ್ದರು. ಇನ್ನು  ವಿಜಯ ಸಂಕೇಶ್ವರರ ಸಹಾಯದಿಂದ ಕಟ್ಟಿದ  ರಂಗ ಮಂಟಪಕ್ಕೆ ವಿಜಯರಂಗ  ಎಂಬ ಹೆಸರನ್ನಿಟ್ಟು ಅಲ್ಲಿ ನಾಟಕಕ್ಕೆ ಅವಶ್ಯಕವಿರುವ ಎಲ್ಲಾ ರೀತಿಯ ಸೌಲಭ್ಯ  ಇರುವ ಸುಮಾರು 400 ಜನರು ಕುಳಿತುಕೊಂಡು ನಾಟಕ ವೀಕ್ಷಿಸಬಹುದಾದ ರಂಗಮಂದಿರ ಕಟ್ಟಿದ್ದಾರೆ.

ಅದೇ ರೀತಿ ಹುಬ್ಬಳ್ಳಿಯ ಮೂಲದ ಮತ್ತು ಯಶವಂತರ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಬೆನ್ನು ತಟ್ಟುತ್ತಿದ್ದ  ಮಾಜಿ ಕೇಂದ್ರ ಸಚಿವರಾದ ಗೆಳೆಯ ಶ್ರೀ ಅನಂತಕುಮಾರ್ ಅವರ ನೆನಪಿನಾರ್ಥ  ಅನಂತ ರಂಗ ಎಂಬ ಕಟ್ಟಡವಲ್ಲದೇ,  ತಂದೆ ಶ್ರೀಧರ ಮತ್ತು ಅವರ ತಾಯಿ ಕಲ್ಪನಾ  ಅವರ ನೆನಪಿನಲ್ಲಿ  ಅವರಿಬ್ಬರ ಹೆಸರನ್ನೂ ಸೇರಿಸಿ ಕಲಾವಿದರಿಗೆ ಉಳಿದುಕೊಳ್ಳುವ ಸಲುವಾಗಿ  ಶ್ರೀಕಲ್ಪರಂಗ ಎಂಬ ಸುಂದರವಾದ ಡಾರ್ಮೆಟ್ರಿ ಕಟ್ಟಿ ಅದರ ಪಕ್ಕದಲ್ಲೇ  ಅಡುಗೆ ಶಾಲೆಯನ್ನೂ ಕಟ್ಟಿದ್ದಾರೆ. ಇಷ್ಟೇ  ಅಲ್ಲದೇ ಪ್ರಸ್ತುತ ಕೇಂದ್ರ ಸಚಿವರು ಮತ್ತು ಅವರ ಸ್ನೇಹಿತರಾಗಿದ್ದ ಶ್ರೀ ಪ್ರಹಲ್ಲಾದ್ ಜೋಶಿಯವರ ಸಾಂಸದರ ನಿಧಿಯಿಂದ ರುಚಿರಂಗ ಪ್ರಹ್ಲಾದ ಎಂಬ ಅವರು ಸುಂದರವಾದ ದೇವಾಲಯವನ್ನು ತಮ್ಮ ರಂಗಮಂದಿರಲ್ಲೇ ಕಟ್ಟಿ ಅಲ್ಲಿ ಕಾಲ ಗಣಪತಿ, ಶಕ್ತಿ ಮಾರುತಿ ಮತ್ತು ನಟ ಲಿಂಗೇಶ್ವರನ ಗುಡಿಗಳನ್ನು ಕಟ್ಟಿದ್ದಾರೆ. ಇಷ್ಟು ದೊಡ್ಡ ಸಂಸ್ಥೆಯನ್ನು ನಿರ್ವಹಿಸಲು ಪ್ರತೀ ತಿಂಗಳು ಸುಮಾರು ಲಕ್ಷಗಳು ಖರ್ಚಾಗುವ ಕಾರಣ ಅವರ ಬಳಿ ರೊಕ್ಕವಿಲ್ಲದೇ ಸದ್ಯಕ್ಕೆ ಸೂಕ್ತ ನಿರ್ವಹಣೆ ಇಲ್ಲದೇ ಸೊರಗಿ ಹೋಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ

ಯಶವಂತ ದೇಶಪಾಂಡೆ ಅವರ ಇಷ್ಟೇಲ್ಲಾ ಸಾಧನೆಗಳ  ಬೆನ್ನೆಲುಬಾಗಿ  ಸ್ವತಃ ರಂಗಭೂಮಿ, ಧಾರವಾಹಿ ಮತ್ತು ಚಿತ್ರ ನಟಿಯಾಗಿರುವ ಅವರ ಧರ್ಮ ಪತ್ನಿ ಶ್ರೀಮತಿ ಮಾಲತಿ ಸರದೇಶಪಾಂಡೆಯವರು ನಿಂತಿದ್ದರು.   ಜೀ ಕನ್ನಡ ವಾಹಿನಿಯ ಜೋಡಿ ನಂ 1  ಸೀಸನ್ 2 ನಲ್ಲಿ ಈ ದಂಪತಿಗಳು ಭಾಗವಹಿಸಿದ್ದ ಸಂಧರ್ಭದಲ್ಲಿ ಗ್ರೀಟಿಂಗ್ಸ್ ಕಾರ್ಡ್ ಕೊಡುವಾಗ ಆದ ಅಚಾತುರ್ಯದಿಂದಾಗಿ 1991ರಲ್ಲಿ ಮಾಲತಿ ಸರದೇಶಪಾಂಡೆ ಹಾಗೂ ಯಶವಂತ ಸರದೇಶಪಾಂಡೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ರೋಚಕತೆಯನ್ನು ಹಂಚಿಕೊಂಡಿದ್ದರು.

ಯಶವಂತರ ನಾಟಕದ ಸಂಗೀತದ ಮೇಳದಲ್ಲಿ ಮಾಲತಿ ಅವರು ಮುಖ್ಯ ಗಾಯಕಿ ಆಗಿದ್ದರು. ಅದೊಮ್ಮೆ ಯಶವಂತರ ಹುಟ್ಟು ಹಬ್ಬದಂದು  ನಾಟಕದ ತಂಡದವರೆಲ್ಲಾ ಯಶವಂತರಿಗೆ ಗಿಫ್ಟ್ ಕೊಟ್ಟಾಗ, ಮಾಲತಿ ಅವರು ಕೊಟ್ಟ ಗ್ರೀಟಿಂಗ್ ಕಾರ್ಡ್ ನಲ್ಲಿ ಬರ್ತ್‌ಡೇ ವಿಶಸ್‌ ಮೆಂಟ್‌ ಟು ದೋಸ್‌ ಹೂಮ್ ವಿ ಲವ್ ಎಂದು  ಬರೆದಿದ್ದದನ್ನು ಓದಿದ ಯಶವಂತರಿಗೆ ಆಚ್ಚರಿಯಾಗಿ ಈ ರೀತಿಯ ಗ್ರೀಟಿಂಗ್ಸ್ ಕಾರ್ಡ್ ಕೊಟ್ಟಿದ್ದೇಕೆ? ಎಂದು ವಿಚಾರಿಸಿದಾಗ, ಎಲ್ಲರೂ ಗಿಫ್ಟ್ ಕೊಡುತ್ತಿರುವಾಗ, ತಾನೂ ಸಹಾ ಏನಾದರೂ ಕೊಡಬೇಕು ಎಂದು  ಹತ್ತಿರದ ಎಲ್ಲಾ ಅಂಗಡಿಗಳಲ್ಲಿ  ಸುತ್ತು ಹಾಕಿದಾಗ, ಅಂದು ಭಾನುವಾರ ಆಗಿದ್ದ ಕಾರಣ, ಧಾರವಾಡದ ಬಹುತೇಕ ಅಂಗಡಿಗಳು ಮುಚ್ಚಿದ್ದು, ತೆರೆದಿದ್ದ ಸಣ್ಣ ಅಂಗಡಿಯಲ್ಲಿದ್ದ ಗ್ರೀಟಿಂಗ್‌ಗಳಲ್ಲಿ ರೋಸ್‌ ಇರೋದನ್ನ ಬಿಟ್ಟು, ಬೇರೆ ಗ್ರೀಟಿಂಗ್ ಕಾರ್ಡ್ ತೆಗೆದುಕೊಂಡು ಅದರೊಳಗೆ ಏನು ಬರೆದಿದೆ ಎಂದು ನೋಡದೇ ಕೊಟ್ಟು ಬಿಟ್ಟಿದ್ದರು.

ಅದನ್ನು ಓದಿದ ಯಶವಂತರ ತಮ್ಮ ಸ್ನೇಹಿತನ ಮೂಲಕ ಮಾಲತಿಯವರನ್ನು ತಮ್ಮ ಕೋಣೆಗೆ ಕರೆಸಿಕೊಂಡು, ನೀವು ಯಾರನ್ನಾದರೂ ಪ್ರೀತಿಸುತ್ತಿದ್ದೀರಾ?  ಎಂದು ಕೇಳಿದಾಗ, ನಾಚಿ ನೀರಾದ ಮಾಲತಿಯವರು, ಲವ್ ಗಿವ್ ಎಂತಹದ್ದೂ ಇಲ್ಲಾ. ಮನೆಯಲ್ಲಿ ಅಪ್ಪಾ ಅಮ್ಮಾ ತೋರಿಸಿದ ಹುಡುಗನನ್ನೇ ಮದುವೆ ಆಗೋದು ಎಂದಿದ್ದಕ್ಕೆ ನೇರವಾಗಿ ಅವರ ಮನೆಗೆ ಬಂದು ಅವರ ತಂದೆ ತಾಯಿಯವರ ಬಳಿ ಹೆಣ್ಣು ಕೇಳಿ ಮದುವೆ ಆಗಿದ್ದರಂತೆ. ಇವರಿಬ್ಬರ ಪ್ರೀತಿಯ ಕುರುಹಾಗಿ ಮುದ್ದಾದ ಮಗಳು ಇದ್ದಾಳೆ.

ಸದಾಕಾಲವೂ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಿದ್ದ ಯಶವಂತ ಸರದೇಶಪಾಂಡೆಯವರ ವಿವಿಧ ಭಾಗದ ಗೆಳೆಯರು ವಿವಿಧ ಅಡ್ಡ ಹೆಸರುಗಳಲ್ಲಿ ಕರೆಯುತ್ತಿದ್ದು ಅವುಗಳಲ್ಲಿ  ಶಿವಮೊಗ್ಗ ರಂಗಭೂಮಿ ಪ್ರಿಯರು ಅವರನ್ನು ನಗೆಯ ಸರ್ದಾರ್ ಎಂದರೆ, ಉಡುಪಿ ಮಣಿಪಾಲದ ಜನರು ನಗೆ ನಾಟಕಗಳ ಬಾದ್‌ಶಾ  ಎನ್ನುತ್ತಿದ್ದರು. ಇನ್ನು  ಬಳ್ಳಾರಿ ಕಲಾ ರಸಿಕರು ನಗೆಗಡಲ ನಾವಿಕ ಎಂದರೆ, ಕರ್ನಾಟಕದ  ಪತ್ರಿಕೆಗಳು  ಅವರನ್ನು ರಂಗಭೂಮಿಯ ಸೂಪರ್ ಸ್ಟಾರ್ ಎಂದೇ ಕರೆಯುತ್ತಿದ್ದವು.

ಯಶವಂತ ಸರದೇಶಪಾಂಡೆಯವರ ಕಲಾಸಾಧನೆಯನ್ನು ಗುರುತಿಸಿ ಸರ್ಕಾರ ಮತ್ತು ಅನೇಕ ಸಂಘ ಸಂಸ್ಥೆಗಳು ಗೌರವನ್ನು ನೀಡಿದ್ದು ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

  • 2003 ರಲ್ಲಿ ಆರ್ಯಭಟ ಪ್ರಶಸ್ತಿ
  • 2005 ರಲ್ಲಿ ಮಯೂರ್ ಪ್ರಶಸ್ತಿ
  • 2006 ರಾಮ ಶಾಮ ಭಾಮಾ ಚಿತ್ರದ ಅತ್ಯುತ್ತಮ ಸಂಭಾಷಣೆಗಾಗಿ  ಸನ್‌ಫೀಸ್ಟ್ ಉದಯ ಪ್ರಶಸ್ತಿ
  • 2008 ರಲ್ಲಿ ಅಭಿನಯ ಭಾರತಿ ಪ್ರಶಸ್ತಿ
  • 2008 ರಲ್ಲಿ ರಂಗಧ್ರುವ ಪ್ರಶಸ್ತಿ
  • 2008 ರಲ್ಲಿ ಗ್ಲೋಬಲ್‌ಮ್ಯಾನ್ ಅಂತರರಾಷ್ಟ್ರೀಯ ಪ್ರಶಸ್ತಿ
  •  2010 – ಕರ್ನಾಟಕದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿ

ಕೆಲ ದಿನಗಳ ಹಿಂದಷ್ಟೇ ಹುಬ್ಬಳ್ಳಿಯ ಲಿಂಗರಾಜ ನಗರ ದಸರಾ ಉದ್ಘಾಟನೆ ಮಾಡಿ ಬಂದಿದ್ದ ಮತ್ತು ಸದಾ ಕಾಲವೂ ಜನರೊಂದಿಗೆ ಸಂತೋಷ ಹಂಚಿಕೊಂಡಿದ್ದ ಯಶವಂತ ಸರದೇಶಪಾಂಡೆಯವರು ಸಾಯ ಬಾರದಂತಹ ವಯಸ್ಸಿನಲ್ಲಿ ಈ ರೀತಿಯಾಗಿ  ಆಕಸ್ಮಿಕವಾಗಿ ಅಗಲಿರುವುದು ಅವರ  ಅಭಿಮಾನಿಗಳ ಮನದಲ್ಲಿ ಆಘಾತವನ್ನು ಮೂಡಿಸಿದೆ. ಸರದೇಶಪಾಂಡೆ ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಾಮಾಜಿಕ ಜಾಲತಾಣದ ಮೂಲಕ ಶೋಕ ವ್ಯಕ್ತಪಡಿಸುತ್ತಾ. ನಮ್ಮ ಹುಬ್ಬಳ್ಳಿಯ ಹೆಮ್ಮೆಯ ಕಲಾವಿದ ಯಶವಂತ ಸರದೇಶಪಾಂಡೆ ಅವರ ಅಗಲಿಕೆ ಕನ್ನಡ ರಂಗಭೂಮಿಗೆ ತುಂಬಲಾರದ ನಷ್ಟ  ಎಂದು  ಹೇಳಿರುವುದು ಅಕ್ಷರಶಃ ಸತ್ಯ ಎನಿಸುತ್ತದೆ. ಯಶವಂತರು ನಮ್ಮ ಮುಂದೆ ಇನ್ನು ಭೌತಿಕವಾಗಿ  ಇರಲಾರದಾದರೂ,  ತಮ್ಮ ನಾಟಕಗಳು ಮತ್ತು ಅನುವಾದಗಳ ಮೂಲಕ ಆಚಂದ್ರಾರ್ಕವಾಗಿ ನಮ್ಮ ನಿಮ್ಮೆಲ್ಲರ ಮನದಾಳದಲ್ಲಿ ಇದ್ದೇ ಇರುತ್ತಾರೆ ಅಲ್ವೇ? ಭಗವಂತ ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಎಂದು ನಾವೂ ನೀವೂ ಪ್ರಾರ್ಥಿಸೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment