ವಿಜಯದಶಮಿ

ದಸರಾ ಹಬ್ಬ  ನಮ್ಮ ಕನ್ನಡಿಗರ ನಾಡಹಬ್ಬ. ಆಶ್ವಯುಜ ಮಾಸದ ಪಾಡ್ಯದಿಂದ ಹಿಡಿದು ನವಮಿಯವರೆಗೂ ದೇಶಾದ್ಯಂತ ದುರ್ಗೆಯ ವಿವಿಧ ರೂಪಗಳಾದ ಶೈಲಪುತ್ರಿ,  ಬ್ರಹ್ಮಚಾರಿಣಿ, ಚಂದ್ರಘಂಟಾ, ಖುಷ್ಮಾಂಡ, ಸ್ಕಂದಮಾತ, ಕಾತ್ಯಾಯನಿ, ಕಾಳರಾತ್ರಿ,  ಮಹಾಗೌರಿ  ಮತ್ತು ಸಿದ್ಧಿ ಧಾತ್ರಿ ಹೀಗೆ ನಾನಾ ರೂಪಗಳಿಂದ ಅಲಂಕರಿಸಲ್ಪಟ್ಟು ಲಕ್ಷಾಂತರ ಜನರ ಸಮ್ಮುಖದಲ್ಲಿ ಪೂಜಿಸಲ್ಪಟ್ಟರೆ, ಇನ್ನು ಹತ್ತನೇ ದಿನವಾದ ವಿಜಯದಶಮಿಯ ಆಚರಣೆಯೇ ವಿಭಿನ್ನ ಮತ್ತು ವೈಶಿಷ್ಟ್ಯವಾಗಿದ್ದು ದಶಮಿಯ ಜೊತೆ ವಿಜಯ ಏಕೆ ಸೇರಿಕೊಂಡಿತು? ಎಂಬುದೇ ರೋಚಕವಾಗಿದ್ದು, ವಿಜಯ ದಶಮಿ ಹಬ್ಬದ ಆಚರಣೆ ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಯನ್ನು ತಿಳಿಯೋಣ.

ನವರಾತ್ರಿಯ ಸಂಧರ್ಭದಲ್ಲಿ  ಉತ್ತರ ಭಾರತದಲ್ಲಂತೂ ಈ ಹತ್ತೂ ದಿನಗಳು ಬಹುತೇಕ ಜನರು ಉಪವಾಸ ವ್ರತಾವರಣೆಯಲ್ಲಿದ್ದು ಬಾರೀ ಭಕ್ತಿ ಭಾವನೆಗಳಿಂದ ದುರ್ಗೆಯನ್ನು ಪೂಜಿಸಿ ಹತ್ತನೇ ದಿನ  ಭಾರೀ ಮೆರವಣಿಗೆಯೊಂದಿಗೆ ಕೆರೆ ಕಟ್ಟೆಗಳಲ್ಲಿ ವಿಸರ್ಜಿಸಲ್ಪಡುವ ಹಬ್ಬವಾದರೆ ನಮ್ಮ ದಕ್ಷಿಣ ಭಾರತದಲ್ಲಿ ಅದಕ್ಕೆ ತದ್ವಿರುಧ್ಧವಾಗಿ ಅತ್ಯಂತ ಸರಳ ಮಡಿಯಲ್ಲಿ  ಮನೆಗಳಲ್ಲಿ ಪಟ್ಟದ ಬೊಂಬೆಗಳ ಹೊತೆ ವಿವಿಧ ಗೊಂಬೆಗಳನ್ನು ಇಟ್ಟು ಆದರೆ ಬಾರೀ ವೈಭವದಿಂದ  ಆಚರಿಸುತ್ತಾರೆ.  ಹಿಂದೆ ರಾಜ ರಾಣಿಯನ್ನು ದೇವರೆಂದೇ ಭಾವಿಸುವ ಕಾಲವಾಗಿದ್ದು,  ರಾಜಾ ಪ್ರತ್ಯಕ್ಷ ದೇವತಾ ಎಂಬ ಭಾವನೆಯಿಂದ, ದಸರಾ ಹಬ್ಬದ ಸಮಯದಲ್ಲಿ   ರಾಜಾರಾಣಿಯರ ಸ್ವರೂಪವಾಗಿ ಪಟ್ಟದ ಬೊಂಬೆಗಳನ್ನು ಮನೆ ಮನೆಗಳಲ್ಲಿ ಕೂರಿಸಿ ಪೂಜಿಸುವುದು ನಡೆದುಕೊಂಡು ಬಂದಿರುವ ಸತ್ಸಂಪ್ರದಾಯ.  ಹತ್ತು ದಿನಗಳವರೆಗೆ ಆಚರಿಸಲ್ಪಡುವ ವಿಶೇಷವಾದ ಹಬ್ಬವಾಗಿದ್ದು,  ಇಂತಹ ವಿಜಯ ದಶಮಿ ಆಚರಣೆಯು ದೇವೀ ಮಹಾತ್ಮೆ, ರಾಮಾಯಣ ಮತ್ತು ಮಹಾಭಾರತದ ಕೆಲವು ಪೌರಾಣಿಕ ಪ್ರಸಂಗಗಳೊಂದಿಗೆ  ಬೆಸೆದು ಕೊಂಡಿದೆ.

ದೇವೀ ಮಹಾತ್ಮೆ

ಶುಂಭ ಮತ್ತು ನಿಶುಂಭ ಎಂಬ ಅಸುರ ಸಹೋದರರು, ಬ್ರಹ್ಮದೇವರನ್ನು ಕುರಿತು ಸುದೀರ್ಘ ಕಾಲ ತಪಸ್ಸು ಮಾಡಿ, ತಮಗೆ ಯಾವುದೇ ದೇವರು, ಅಸುರ ಅಥವಾ ಮಾನವರಿಂದ ಸಾವು ಬಾರದಂತೆ ವರವನ್ನು ಪಡೆದರು. ಹೀಗೆ ತಪಸ್ಸಿನ ಮೂಲಕ ವರಗಳನ್ನು ಪಡೆದ ನಂತರ ದೇವತೆಗಳಿಗೆ ವಿಪರೀತ ತೊಂದರೆಗಳನ್ನು ನೀಡತೊಡಗಿದಾಗ, ದೇವಾನು ದೇವತೆಗಳೆಲ್ಲರೂ ಒಂದಾಗಿ ತಾಯಿ ಪಾರ್ವರ್ತಿಯ ಮೊರೆ ಹೋಗಿ,  ಅವರಲ್ಲರೂ ತಮ್ಮ ಒಂದೊಂದು ಆಯುಧಗಳನ್ನು ಆಕೆಗೆ ನೀಡಿದಾಗ, ಆಕೆ ದಶ ಕೈಗಳುಳ್ಳ ದುರ್ಗೆಯ ರೂಪಧರಿಸಿ ಶುಂಭ ಮತ್ತು ನಿಶುಂಭರನ್ನು ವಧಿಸಲು ಮುಂದಾದಾಗ ಅವರು ಆರಂಭದಲ್ಲಿ ತಮ್ಮ ಸೇವಕರಾದ ಚಂಡ, ಮುಂಡ, ರಕ್ತಬೀಜ ಮುಂತಾದ ಅಸುರರನ್ನು ದುರ್ಗೆಯ ವಿರುದ್ಧ ಹೋರಾಡಲು ಕಳುಹಿಸಿದರು. ಚಂಡಿ, ಕಾಳಿ, ಮತ್ತು ಚಾಮುಂಡಿ ರೂಪಗಳಲ್ಲಿ ಆ ಎಲ್ಲಾ ಅಸುರರನ್ನು ಸಂಹರಿಸಿದ ದುರ್ಗೆಯು  ಅಂತಿಮವಾಗಿ  ಶುಂಭ ಮತ್ತು ನಿಶುಂಭರನ್ನು ನಿಗ್ರಹಿಸಿ ಸಮಸ್ತ ಲೋಕವನ್ನು ಕಲ್ಯಾಣ ಮಾಡಿದ ಕುರುಹಾಗಿ ವಿಜಯದಶಮಿಯಂದು ಕಾಳಿ ದುರ್ಗೆಯನ್ನು ಆರಾಧಿಸುವ ಪ್ರತೀತಿ ಬಂದಿತು ಎಂದು ಹೇಳಲಾಗುತ್ತದೆ.

ಮಹಿಷಾಸುರನ ಸಂಹಾರ

ಮತ್ತೊಂದು ದೃಷ್ಟಾಂತದ ಪ್ರಕಾರ ಅಸುರರ ದೊರೆಯಾದ ಮಹಿಷಾಸುರನು ಸಹಾ  ದೀರ್ಘಕಾಲ ತಪಸ್ಸು ಮಾಡಿ, ತನಗೆ ಯಾವುದೇ ಮನುಷ್ಯನಿಂದ, ದೇವರಿಂದ ಅಥವಾ ವಿಶಿಷ್ಟ ಶಕ್ತಿಯಿಂದ ತನ್ನನ್ನು ಸಂಹರಿಸಲು ಸಾಧ್ಯವಾಗಬಾರದು ಎಂಬ ವರವನ್ನು ಬ್ರಹ್ಮನಿಂದ ಪಡೆದು, ಅಹಂಕಾರದಿಂದ ತನ್ನ ಜನರಿಗೆ  ಮತ್ತು ದೇವತೆಗಳಿಗೆ  ಉಪಟಳವನ್ನು ನೀಡುತ್ತಿದ್ದದ್ದನ್ನು ತಡೆಯಲಾದರದೇ, ದೇವಾನು ದೇವತೆಗಳು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರನ ಮೊರೆ ಹೋಗುತ್ತಾರೆ. ಆಗ ತ್ರಿಮೂರ್ತಿಗಳು ತಮ್ಮ ಶಕ್ತಿಯನ್ನು ಸೇರಿಸಿ ದುರ್ಗಾಮಾತೆಯನ್ನು ಸೃಷ್ಟಿಸಿ, ಆವರೆಲ್ಲರ ಶಕ್ತಿಯಿಂದ ಮಹಾಶಕ್ತಿವಂತಳಾದ ದುರ್ಗಾದೇವಿ ಸಿಂಹದ ಮೇಲೆ ಕುಳಿತು ತನ್ನ ಹತ್ತು ಕೈಗಳಲ್ಲಿ ಹತ್ತು ಬಗೆಯ ಆಯುಧಗಳನ್ನು ಹಿಡಿದು ಮಹಿಷಾಸುರನ ಸಂಹಾರಕ್ಕಾಗಿ ಧರೆಗಿಳಿಯುತ್ತಾಳೆ. ಒಂಭತ್ತು ದಿನಗಳ ಘನಘೋರವಾದ ಯುದ್ಧವನ್ನು ನಡೆದ ನಂತರ ದಶಮಿಯ ದಿನದಂದು ದುರ್ಗೆಯು ಮಹಿಷಾಸುರನನ್ನು ಸಂಹಾರ ಮಾಡಿದ್ದರ ಸಾಂಕೇತಿಕವಾಗಿಯೇ ವಿಜಯದಶಮಿಯನ್ನು ಸಂಭ್ರಮದಿಂದ ಆಚರಿಸುವ ಪದ್ದತಿ ರೂಢಿಯಲ್ಲಿ ಬಂದಿತು ಎನ್ನಲಾಗುತ್ತದೆ.

ರಾಮಾಯಣದಲ್ಲಿ ರಾವಣನ ಸಂಹಾರ

ಪ್ರಭು ಶ್ರೀರಾಮನ ಧರ್ಮಪತ್ನಿ ಸೀತಾ ದೇವಿಯನ್ನು ರಾವಣನು ಕಾಡಿನಿಂದ ಕದ್ದೊಯ್ದದ್ದನ್ನು ಜಟಾಯುವಿನಿಂದ ತಿಳಿದು ನಂತರ ಆಂಜನೇಯನು ಖುದ್ದಾಗಿ ಸಮುದ್ರೋಲಂಘನ ಮಾಡಿ ಲಂಕೆಯ ಅಶೋಕವನದಲ್ಲಿ ಸೀತಾಮಾತೆಯು ಬಂಧನದಲ್ಲಿರುವುದನ್ನು ತಿಳಿದ ನಂತರ ಶ್ರೀರಾಮ ಸೀತಾ ಮಾತೆಯನ್ನು ಕರೆತರಲು ಧನುಷ್ಕೋಟಿಯಲ್ಲಿ ತನ್ನ ಕಪಿ ಸೇನೆಗಳ ಸಹಾಯದಿಂದ ರಾಮಸೇತು ನಿರ್ಮಿಸಿ ಲಂಕೆಗೆ ತಲುಪಿ ರಾವಣನನ್ನು ಸಂಹಾರ ಮಾಡುವ ಮೊದಲು ನಾರದರ ಅನುಗ್ರಹದಂತೆ  ಶರವನ್ನರಾತ್ರಿ ವ್ರತವನ್ನು ಪೂರ್ಣಗೊಳಿಸಿದ ನಂತರ ಲಂಕೆಯ ಮೇಲೆ ಆಕ್ರಮಣ ಮಾಡಿ ಆ ಯುದ್ಧದಲ್ಲಿ  ದಶಂಠ ರಾವಣನನ್ನು ವಧಿಸಿದ ದಿನವೂ ಸಹಾ  ವಿಜಯ ದಶಮಿಯಾಗಿತ್ತು. ಹೀಗೆ ದಶಹರದಂದು ದಶಕಂಠನಾಗಿದ್ದ ರಾವಣನನ್ನು ಶ್ರೀರಾಮನು ಸಂಹರಿಸಿದ ಕಾರಣ ಅದು ಮುಂದೆ ಅಪಭ್ರಂಶವಾಗಿ ದಸರಾ ಆಗಿದ್ದು, ರಾವಣನ್ನು ನಿಗ್ರಹಿಸಿದ ವಿಜಯೋತ್ಸವ ನೆನಪಿಗಾಗಿಯೇ   ಅಂದಿನಿಂದ ದಶಮಿಯನ್ನು ವಿಜಯ ದಶಮಿ ಎಂದು ಕರೆಯುವ ಪ್ರತೀತಿ ಬಂದಿತು ಎನ್ನಲಾಗುತ್ತದೆ.

ಮಹಾಭಾರತದಲ್ಲಿ ಪಾಂಡವರಿಗೆ ಮೊದಲ ಜಯ

ಮಹಾಭಾರತದಲ್ಲಿ ಪಾಂಡವರು ಶಕುನಿಯ ಕುಟಿಲತೆಯಿಂದ ಧುರ್ಯೋಧನದ ವಿರುದ್ಧ ಪಗಡೆಯಾಟದಲ್ಲಿ ಸೋತು  12 ವರ್ಷಗಳು ಕಾಲ ವನವಾಸ ಮುಗಿಸಿ 1 ವರ್ಷ ಮತ್ಸ್ಯ ದೇಶದ ರಾಜನಾದ ವಿರಾಟನ ರಾಜಧಾನಿಯಲ್ಲಿ ಅಜ್ಞಾತವಾಸದಲ್ಲಿದ್ದಾಗ, ಕೀಚಕನ ವಧೆಯಾದ ಸುದ್ದಿಯನ್ನು ತಿಳಿದ ದುರ್ಯೋಧನನು ಮಹಾನ್ ಶಕ್ತಿಶಾಲಿ ಕೀಚಕನನ್ನು ಭೀಮನೇ ಕೊಂದಿರಬೇಕೆಂದು ತಿಳಿದು, ವಿರಾಟರಾಜನ ರಾಜ್ಯದ ಮೇಲೆ ಧಾಳಿ ಮಾಡಿ ಅವರ ರಾಜ್ಯದ ಎಲ್ಲಾ ಗೋವುಗಳನ್ನು ಕದ್ದೋಯ್ದು, ಅವಗಳನ್ನು ರಕ್ಷಿಸಿಕೊಳ್ಳಲು  ಪಾಂಡವವಲ್ಲಿ ಯಾರಾದರೂ ಬಂದಾಗ, 13 ವರ್ಷಗಳ ವನವಾಸದ ಅವಧಿ ಮುಗಿಯುವ ಮೊದಲೇ ಅವರನ್ನು ಕಂಡು ಹಿಡಿದು, ಮತ್ತೆ  ಹೆಚ್ಚುವರಿಯಾಗಿ 12 ವರ್ಷಗಳ ವನವಾಸ ಮತ್ತು ಒಂದು ವರ್ಷದ  ಅಜ್ಞಾತವಾಸಕ್ಕೆ ಕಳುಹಿಸಲು ನಿರ್ಧರಿಸಿದ್ದನು. ಆ ಸಮಯದಲ್ಲಿ ವಿರಾಟರಾಜನು ಇಲ್ಲದಿದ್ದಂತಹ ಸಂಧರ್ಭದಲ್ಲಿ  ಆ ರಾಜ್ಯದ ಯುವರಾಜ ಹೆಂಗಳೆಯರೊಂದಿಗೆ ಸದಾ ಕಾಲ ಜಂಬ ಕೊಚ್ಚಿಕೊಳ್ಳುತ್ತಲೇ ಕಾಲ ಕಳೆಯುತ್ತಿದ್ದಂತಹ  ಉತ್ತರಕುಮಾರನು ಯುದ್ಧಕ್ಕೆ ಹೋಗಲು ಹಿಂಜರಿದಾಗ, ಅಲ್ಲೇ ಬೃಹನ್ನಳೇ ವೇಷದಲ್ಲಿದ್ದ ಅರ್ಜುನನು ಉತ್ತರಕುಮಾರನನ್ನೇ ಸಾರಥಿಯಾಗಿಸಿಕೊಂಡು, ಅಜ್ಞಾತವಾಸಕ್ಕೆ ಹೊರಡುವ ಮುನ್ನಾ, ಅಲ್ಲಿನ ಕಾಡಿನ ಮಸಣವೊಂದರಲ್ಲಿದ್ದ ಶಮೀ ವೃಕ್ಷದಲ್ಲಿ ಅಡಗಿಸಿಟ್ಟಿದ್ದ ತನ್ನ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವ ಮುನ್ನಾ  ಶಮೀ ವೃಕ್ಷವನ್ನು ಪೂಜಿಸಿ, ಮಾತೆ ದುರ್ಗಾದೇವಿಯನ್ನು ನಮಿಸಿ, ಯುದ್ಧದಲ್ಲಿ ವಿಜಯ ಸಾಧಿಸಿದ ಧ್ಯೋತಕವಾಗಿ ವಿಜಯದಶಮಿ ಎಂಬ ಹೆಸರು ಬಂದಿತೆಂಬ ಪ್ರತೀತಿ ಇದೆ. ಹಾಗಾಗಿ ಇಂದಿಗೂ ಈ ಶ್ಲೋಕವನ್ನು ಪಠಿಸುತ್ತಾ ವಿಜಯದಶಮಿಯಂದು ಗುರುಹಿರಿಯರಿಗೆ ಶಮೀ ಎಲೆಗಳನ್ನು ನೀಡಿ ಅವರ ಆಶೀರ್ವಾದ ಪಡೆಯುವ ಸಂಪ್ರದಾಯವಿದೆ.

ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ | ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ | ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತಾ ||

ಮಧ್ವಾಚಾರ್ಯರ ಜಯಂತಿ

ಹಿಂದೂ ಧರ್ಮವನ್ನು ಪುನರುತ್ಧಾನ ಮಾಡಿದ  ಆಚಾರ್ಯತ್ರಯರಲ್ಲಿ ಒಬ್ಬರಾದ ದ್ವೈತ ಸಿದ್ಧಾಂತ ಅಥವಾ ತತ್ವ ಸಿದ್ಧಾಂತದ ಪ್ರತಿಪಾದಕರಾದ ಕನ್ನಡಿಗರೇ ಆದ ಶ್ರೀ ಶ್ರೀ ಶ್ರೀ ಮಧ್ವಾಚಾರ್ಯರು, ಉಡುಪಿಯ ಬಳಿಯ ಪಾಜಕ ಎಂಬ ಊರಿನಲ್ಲಿ ಕ್ರಿ.ಶ. 1238ರಲ್ಲಿ ಜನಿಸಿದ ದಿನವೂ ಸಹಾ ವಿಜಯ ದಶಮಿಯಾಗಿದ್ದು. ಹಾಗಾಗಿ, ವಿಜಯ ದಶಮಿಯಂದೇ ಮಧ್ವ ಜಯ೦ತಿಯನ್ನು ಆಚರಿಸುವ ಸಂಪ್ರದಾಯವಿದೆ.

ಸೀಮೋಲಂಘನ

ಹೀಗೆ ದೇವಿಪುರಾಣ, ಮಹಿಶಾಸುರವಧೆ, ರಾಮಾಯಣ ಮತ್ತು ಮಹಾಭಾರತದಲ್ಲಿ  ವಿಜಯದಶಮಿಯಂದು ಹಿಡಿದ ಕೆಲಸಕ್ಕೆ ಜಯವು  ಶತಸಿದ್ಧ ಎಂದು ನಂಬಿ ವಿಜಯ ದಶಮಿಯಂದು ಬಹುತೇಕ ರಾಜರುಗಳು ನೆರೆಹೊರೆ ರಾಜ್ಯಗಳೊಂದಿಗೆ ದಂಡಯಾತ್ರೆಗೆ ಹೊರಡುವ ಸಂಪ್ರದಾಯವನ್ನು ರೂಢಿಸಿಕೊಂಡರು ನಂತರ ಶಾಂತಿ ಪ್ರಿಯರಾದ ಹಲವು ರಾಜ ವಂಶದವರು ಸಾಂಕೇತಿಕವಾಗಿ ತಮ್ಮ ಸೈನ್ಯದೊಂದಿಗೆ ರಾಜ್ಯದ ಗಡಿಯನ್ನು ದಾಟಿದಂತೆ ಮಾಡಿ ಹಿಂದಿರುಗುವ ಪದ್ದತಿಯನ್ನು ರೂಢಿಮಾಡಿಕೊಂಡಿದ್ದನ್ನೇ, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸೀಮೋಲ್ಲಂಘನ ಎಂದು ಕರೆದದ್ದನ್ನೇ ವಿಜಯನಗರದ ಸಾಮಂತರಾಗಿ ನಂತರ ಸ್ವತಂತ್ರ ರಾಜ್ಯಭಾರವನ್ನು ನಿಭಾಯಿಸಿದ  ಮೈಸೂರಿನ ಒಡೆಯರು 1612ರಲ್ಲಿ ಮೈಸೂರಿನಲ್ಲಿ ಹತ್ತು ದಿನಗಳ ಕಾಲ ವೈಭವೋಪೇತವಾಗಿ ದಸರ ಆರಂಭಸಿ ಈಗ ಅದು ವಿಶ್ವವಿಖ್ಯಾತವಾಗಿದೆ.

ಉತ್ತರ ಭಾರತದಲ್ಲಿ ವಿಜಯ ದಶಮಿ ಆಚರಣೆ

ಇನ್ನು ಬಹುತೇಕ ಉತ್ತರ ಭಾರತ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ನವರಾತ್ರಿಯ ಒಂಭತ್ತೂ ದಿನಗಳು ಉಪವಾಸ ಮಾಡಿ ಕೇವಲ ಫಲಾಹಾರ ಸೇವಿಸುತ್ತಾ, ಬಾರೀ ಭಕ್ತಿ ಭಾವನೆಗಳಿಂದ ರಾಮಲೀಲ ಉತ್ಸವಗಳು ಮತ್ತು ಕಾಳಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಅತ್ಯಂತ ವಿಜೃಂಭಣೆಯಿಂದ ಪೂಜೆಯನ್ನು ಮಾಡಿದರೆ, ಇನ್ನು ಗುಜರಾತ್ ಪ್ರದೇಶದಲ್ಲಿ ದಾಂಡಿಯಾ ಎಂಬ ಕೋಲಾಟವೂ ಪ್ರಸಿದ್ದಿಯಾಗಿದ್ದು, ಇನ್ನು ಹತ್ತನೇ ದಿನ ಒಳಿತು ಕೆಡುಕಿನ ಮೇಲೆ ಜಯಸಾಧಿಸಿದ ದಿನವಾಗಿ ವಿಜಯದಶಮಿಯಂದು ನಮ್ಮಲ್ಲಿ ಗಣೇಶನ ವಿಗ್ರಹವನ್ನು ನೀರಿನಲ್ಲಿ ವಿಸರ್ಜಿಸುವಂತೆ ಅಲ್ಲಿ  ದುರ್ಗೆಯ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜಿಸುವ ಪದ್ದತಿ ಇದೆ.

ಮೈಸೂರು ದಸರಾ

ವಿಜಯನಗರದ ತಿರುಮಲರಾಯರನ್ನು ಸೋಲಿಸಿ ಸ್ವತಂತ್ರವಾದ ಮೈಸೂರು ಸಂಸ್ಥಾನವನ್ನು ಕಟ್ಟಿ ಚಾಮುಂಡೇಶ್ವರಿ ದೇವಿಯನ್ನು ನಾಡದೇವಿಯನ್ನಾಗಿಸಿ ದಸರ ಹಬ್ಬವನ್ನು ನಾಡಹಬ್ಬವನ್ನಾಗಿಸಿದ ಶ್ರೀರಾಜ ಒಡೆಯರ್  ನಂತರದ ರಾಜರುಗಳು ವಿಜಯದಶಮಿಯಂದು ಆನೆಯ ಮೇಲೆ ಆಸೀನರಾಗಿ ಅಂಬಾರಿ ಮತ್ತು ತಮ್ಮ ಸೈನ್ಯದೊಂದಿಗೆ ಊರ ಹೊರಗೆ ಈಶಾನ್ಯ ದಿಕ್ಕಿನಲ್ಲಿರುವ ಬನ್ನಿಮಂಟಪಕ್ಕೆ ಮೆರವಣಿಗೆಯಲ್ಲಿ ಹೋಗಿ ಸೀಮೋಲ್ಲಂಘನವನ್ನು ಮಾಡಿದ ನಂತರ, ಅಲ್ಲಿರುವ ಶಮೀ ವೃಕ್ಷ ಹಾಗೂ ಮಂದಾರ ವೃಕ್ಷ ಬಳಿ ನಿಂತು  ಶಮೀ ಪೂಜೆಯನ್ನು ಮಾಡಿ, ಆ ವೃಕ್ಷದ ಬುಡದಲ್ಲಿ ಅಕ್ಕಿ, ಅಡಿಕೆ ಮತ್ತು ಬಂಗಾರದ ನಾಣ್ಯಗಳನ್ನು ಇಡುತ್ತಾರೆ.

ಸ್ವಾತಂತ್ರ್ಯಾನಂತರ ಭಾರತದ ಒಕ್ಕೂಟ ರಾಷ್ಟ್ರಕ್ಕೆ ಮೈಸೂರು ಸಂಸ್ಥಾನ ಸೇರಿ ಪ್ರಜಾಪ್ರಭುತ್ವ ರಾಜ್ಯವಾದ ನಂತರ ಆಯುಧ ಪೂಜೆಯಂದು ಅರಮನೆಯಲ್ಲಿರುವ ಶಸ್ತ್ರಾಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ನಡೆಸಿದರೆ, ಇನ್ನು ಹಳೆ ಮೈಸೂರು ಭಾಗದ ರೈತರುಗಳು ಮತ್ತು ಕುಶಲ ಕರ್ಮಿಗಳು ಆಯುಧ ಶಸ್ತ್ರಗಳ ಪೂಜೆ ಮಾಡತ್ತಾರೆ. ಇನ್ನು ವಿಜಯ ದಶಮಿಯಂದು ಅಂಬಾರಿಯ ಮೇಲೆ ಅಂದಿನ ಮಹಾರಾಜರ ಬದಲಾಗಿ ಅಂಬಾರಿಯ ಮೇಲೆ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಇರಿಸಿ ಮೆರವಣಿಗೆಯಲ್ಲಿ ಬನ್ನಿ ಮಂಟಪಕ್ಕೆ ತೆರಳೀ, ಅಲ್ಲಿರುವ ಶಮೀ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಅದರ ಬುಡದಲ್ಲಿನ ಸ್ವಲ್ಪ ಮಣ್ಣು ಮತ್ತು ಮರದ ಎಲೆಗಳನ್ನು ಮನೆಗೆ ತಂದು, ಶಮಿ ಮತ್ತು ಮಂದಾರದ ಎಲೆಗಳನ್ನು ಬಂಗಾರವೆಂದು ದೇವರಿಗೆ ಅರ್ಪಿಸಿ ಉಳಿದದ್ದನ್ನು ತಮ್ಮ ಬಂದು ಮಿತ್ರರೊಂದಿಗೆ ಹಂಚಿಕೊಳ್ಳುವ ಸಂಪ್ರದಾಯವಿದೆ ಶಮಿ ಗಿಡ ಅಥವಾ ಅದರ ಎಲೆಯನ್ನು  ದಾನ ಮಾಡುವುದು ಚಿನ್ನವನ್ನು ದಾನ ಮಾಡುವುದಕ್ಕೆ ಸಮಾನ ಎಂಬ ನಂಬಿಕೆ ಇರುವುದಲ್ಲದೇ, ಶಮಿ ಪತ್ರೆಯನ್ನು ದಾನ ಮಾಡುವುದರಿಂದ ಶನಿ ದೇವನ ಆಶೀರ್ವಾದ ದೊರೆತು, ವ್ಯಕ್ತಿಯ ಜೀವನದ ಎಲ್ಲಾ ಸಮಸ್ಯೆಗಳು ಪರಿಹಾರವಾಗಿ ಶನಿ ದೋಷದಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸ್ಥಾಪನೆ

ಇನ್ನು ಸ್ವಾಂತ್ರತ್ರ್ಯ ಪೂರ್ವದಲ್ಲಿ ನನ್ನನ್ನು ಹಂದಿ ಎಂದು ಬೇಕಾದರೂ ಕರೆಯಿರಿ ಆದರೆ ಹಂದೂ ಎನ್ನದಿರಿ ಎನ್ನುವ ಮನಸ್ಥಿತಿಯ ಅನೇಕ ಹಿರಿಯ ಹೋರಾಟಗಾರರಿದ್ದರೆ, ನಾಲ್ಕು ಹಿಂದೂಗಳು ಒಗ್ಗೂಡ ಬೇಕೆಂದರೆ ಅವರ ಹೆಗಲ ಮೇಲೆ ಚಟ್ಟವೊಂದರಲ್ಲಿ  ಐದನೇ ಹಿಂದು ಇರಬೇಕು ಎನ್ನುವ ಕಾಲ ಘಟ್ಟದಲ್ಲಿ ಹಿಂದೂಗಳನ್ನು ಒಗ್ಗೂಡಿಸುವ ಸಲುವಾಗಿ 1925ರ ವಿಜಯದಶಮಿಯಂದೇ ಮಹಾರಾಷ್ಟ್ರದ ವಿಧರ್ಭ ಪ್ರದೇಶದ ನಾಗಪುರದ ಮೊಹಿತೇವಾಡ ಎಂಬ ಆಟದ ಮೈದಾನದಲ್ಲಿ ಕೆಲವು ಪುಟ್ಟ ಪುಟ್ಟ ಮಕ್ಕಳೊಂದಿಗೆ ಡಾ. ಕೇಶವ ಬಲಿರಾಂ ಹೆಡಗೇವಾರ್ ಎಲ್ಲರ ಪ್ರೀತಿಯ ಡಾಕ್ಟರ್ ಜೀ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಆರಂಭಿದ್ದರು.  ತಾವು ಕಟ್ಟುವ ಸಂಘಟನೆಗೆ ವಿಜಯ ಸಿಗಲಿ ಎಂದು ವಿಜಯದಶಮಿಯಂದು ಡಾಕ್ಟರ್ ಜೀ ಅವರು ಆರಂಭಿಸಿದ RSS, ಇಂದು ವಿವಿಧ ಹೆಸರಿನ ನೂರಾರು ಸಣ್ಣ ಸಣ್ಣ ಸಂಘಟನೆಗಳಾಗಿ ಸಂಘ ಪರಿವಾರದ ಹೆಸರಿನಲ್ಲಿ ದೇಶ ವಿದೇಶಗಳಲ್ಲಿ ಸಾಮಾಜಿಕ ಪರಿವರ್ತನೆ ತರುವ ಮೂಲಕ  ಹಿಂದೂ ಸಂಘಟನೆ ಮಾಡುತ್ತಿದ್ದು ಈ ವರ್ಷ ಸಂಘಕ್ಕೆ 100ಗಳು ಕಳೆದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ.

ಹೀಗೆ ಶಮೀ ಮರವು ವಿಜಯದ ಸಂಕೇತ ಎನಿಸಿಕೊಂಡಿರುವುದರಿಂದ ವಿಜಯದಶಮಿಯನ್ನು ವಿಜಯ ದಶಮಿ ಅಥವಾ  ವಿಜಯದ ಶಮೀ ಎಂದೂ ಸಹಾ ಪದಗಳನ್ನು ವಿಭಜಿಸಿವ ಮೂಲಕ ಅರ್ಥಪೂರ್ಣವಾಗಿಸಬಹುದಾಗಿದೆ.  ವಿಜಯ ದಶಮಿಯ ಬಗ್ಗೆ ಇಷ್ಟೆಲ್ಲಾ ಮಾಹಿತಿಗಳು ತಿಳಿದ ನಂತರ ಈ ದಸರಾ ಹಬ್ಬದ ಸಮಯದಲ್ಲಿ ಮೈಸೂರಿಗೆ ಹೋಗಿ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆದು  ವಿಜಯದಶಮಿಯಂದು ದಸರಾ ವಸ್ತು ಪ್ರದಶನಲ್ಲಿ ಮಜಾ ಮಾಡಿ ಸಂಜೆ ಜಂಬೂಸವಾರಿಯನ್ನು ನೋಡಿ ಆದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರಿ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನವು ತುಮಕೂರು ವಾರ್ತೆಯವರ 2025ರ ದಸರಾ ವಿಶೇಷಾಂಕದಲ್ಲಿ ಪ್ರಕಟವಾಗಿದೆ

Leave a comment