ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ಧಿಯ ಅಂಗವಾಗಿ ದೇಶಾದ್ಯಂತ ಸಾವಿರಾರು ಪಥಸಂಚಲನ ಮತ್ತು ರಾಜ್ಯಾದ್ಯಂತ 450ಕ್ಕೂ ಹೆಚ್ಚಿನ ಪಥಸಂಚಲನಗಳು ಅತ್ಯಂತ ಶಾಂತವಾಗಿ ಮತ್ತು ಯಶಸ್ವಿಯಾಗಿ ನಡೆದರೂ, ವಯಕ್ತಿಕ ಕಾರಣಗಳಿಂದಾಗಿ ಸಂಘದ ಕಾರ್ಯಚಟುವಟಿಗಳಿಗೆ ನಿಯಂತ್ರಣ ಹೇರಲು ಶಾಸನದ ಮೂಲಕ ಮುಂದಾಗಿದ್ದ ಐಟಿ ಬಿಟಿ ಮಂತ್ರಿಯಾಗಿದ್ದರೂ ಅಪ್ಪನ ಹೆಸರಿನ ಬಲದಿಂದಾಗಿ ಎಲ್ಲರ ಖಾತೆಗಳಲ್ಲೂ ಮೂಗು ತೂರಿಸುವ ಪ್ರಿಯಾಂಕಾ ಖರ್ಗೆ ಇಂದಾಗಿ, ಕೇವಲ ರಾಜ್ಯವಷ್ಟೇ ಅಲ್ಲದೇ ಇಡೀ ದೇಶ ವಿದೇಶಗಳಲ್ಲಿಯೂ ತೀವ್ರವಾದ ಸಂಚಲನ ಮೂಡಿಸಿದ್ದ ಚಿತ್ತಾಪುರದ ಆರ್.ಎಸ್.ಎಸ್. ಪಥಸಂಚಲನ, ನ್ಯಾಯಾಲಯದ ಷರತ್ತು ಬದ್ಧ ಅನುಮತಿಯಂತೆ ಕೊನೆಗೂ 15.11.205ರ ಭಾನುವಾರ ಸಂಜೆ ಚಿತ್ತಾಪುರದ ಸಾರ್ವಜನಿಕ ರಸ್ತೆಗಳಲ್ಲಿ ಆರ್.ಎಸ್.ಎಸ್ ಸ್ವಯಂಸೇವಕರು, ದಂಡಸಹಿತ ಗಣವೇಶಧಾರಿಗಳಾಗಿ ಶಿಸ್ತಿನ ಸಿಪಾಯಿಗಳಂತೆ ಘೋಷ್ ವಾದನಕ್ಕೆ ಹೆಜ್ಜೆ ಹಾಕುತ್ತಾ, ಭಗವಾಧ್ವಜದೊಂದಿಗೆ ಯಶಸ್ವಿಯಾಗಿ ಪಥಸಂಚಲನ ನಡೆಸುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಅವರು ದಲಿತ ಸಂಘರ್ಷ ಸಮಿತಿಗಳನ್ನು ಎಷ್ಟೇ ಎತ್ತಿಕಟ್ಟಲು ಪ್ರಯತ್ನಿಸಿದರೂ ಅವೆಲ್ಲವನ್ನೂ ಮೀರಿ ಅವರಿಗೆ ಎಚ್ಚರಿಕೆಯ ಘಂಟೆಯಾಗಿದೆ ಎಂದರೂ ತಪ್ಪಾಗದು.
ಪದೇ ಪದೇ ಸಂಘ, ಸಂಘ ಪರಿವಾರ ಮತ್ತು ಸಂಘದ ಸ್ವಯಂ ಸೇವಕರನ್ನು ದ್ವೇಷಿಸುತ್ತಲೇ ಎಗರಿ ಬೀಳುತ್ತಿದ್ದ ಮರಿ ಖರ್ಗೆ, ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ತಕ್ಷಣವೇ ಸಂಘವನ್ನು ನಿಷೇಧಿಸುತ್ತೇವೆ ಎಂದು ಅಬ್ಬರಿಸುತ್ತಿದ್ದವರು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷ ತುಂಬಿದ್ದರ ಸಂಭ್ರಮಾಚರಣೆಯಲ್ಲಿ ಗಣವೇಶಧಾರಿ ಸ್ವಯಂಸೇವಕರ ಪಥಸಂಚಲನದ ಮೂಲಕ ಇಡೀ ದೇಶಾದ್ಯಂತ ಬಹಳಷ್ಟು ಕಡೆಯಲ್ಲಿ ನಡೆಯುತ್ತಿದ್ದದ್ದು ಸಹಜವಾಗಿ ಅವರಿಗೆ ತಡೆದುಕೊಳ್ಳಲಾಗದೇ, ಇದ್ದಕ್ಕಿದ್ದಂತೆಯೇ, 2025ರ ಅಕ್ಟೋಬರ್ 4 ರಂದು ಮುಖ್ಯಮಂತ್ರಿಗಳಿಗೆ ಏಕಾಏಕಿ ಪತ್ರ ಬರೆದು, ಆರೆಸ್ಸೆಸ್ ಪೊಲೀಸರ ಅನುಮತಿಯಿಲ್ಲದೆ ಸರ್ಕಾರೀ ಜಾಗಗಳಲ್ಲಿ ಶಾಖೆ, ಬೈಠಕ್ ಗಳನ್ನು ನಡೆಸುವ ಮೂಲಕ ಭಾರತೀಯ ಏಕೀಕರಣದ ವಿರುದ್ಧ ಘೋಷಣೆಗಳೊಂದಿಗೆ ಮತ್ತು ಸಂವಿಧಾನದ ವಿರುದ್ಧ ಮಕ್ಕಳು ಮತ್ತು ಯುವಕರ ಮನಸ್ಸಿನಲ್ಲಿ ಭಾವನೆಗಳನ್ನು ತುಂಬುತ್ತಿದೆ. ಅಷ್ಟೇ ಅಲ್ಲದೇ, ಪಥಸಂಚಲನದಲ್ಲಿ ನೂರಾರು ಮುಗ್ಧ ಮಕ್ಕಳ ಕೈಯ್ಯಲ್ಲಿ ಲಾಠಿ ಹಿಡಿಸುವ ಮೂಲಕ ಇತರೇ ಜನರಿಗೆ ಭಯವನ್ನುಂಟು ಮಾಡುತ್ತಿರುವ ಪರಿಣಾಮ ಇದರ ಕುರಿತಾಗಿ ಈ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಲ್ಲದೇ, ಸಾರ್ವಜನಿಕ ಸ್ಥಳಗಳು, ಉದ್ಯಾನವನಗಳು, ಸರ್ಕಾರಿ ಶಾಲಾ ಆಟದ ಮೈದಾನಗಳು ಮತ್ತು ಮುಜರಾಯಿ ದೇವಾಲಯದ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಪತ್ರ ಬರೆದಿದ್ದರು.
ಶತಾಯ ಗತಾಯ ಮುಖ್ಯಮಂತ್ರಿ ಕುರ್ಚಿ ಉಳಿಸಿ ಕೊಳ್ಳುವುದಕ್ಕೆ ಹಪಾಹಪಿಸುತ್ತಿರುವ ಸಿದ್ದ ರಾಮಯ್ಯನವರೂ ಸಹಾ ಮಲ್ಲಿಕಾರ್ಜುನ ಖರ್ಗೆ ಅವರನ್ನು ಓಲೈಸಿಕೊಳ್ಳುವ ಸಲುವಾಗಿ ಮರಿ ಖರ್ಗೆ ಹಾಕಿದ ತಾಳಕ್ಕೆ ತಕ್ಕಂತೆ ಕುಣಿಯಲೇ ಬೇಕಾದ ಅನಿವಾರ್ಯತೆಯಿಂದಾಗಿ, ಆ ಪತ್ರದ ಮೇಲೆ ಈ ಕುರಿತಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದು ಎಂಬ ಷರ ಬರೆದದ್ದೇ ತಡಾ, ತುರ್ತು ಮಂತ್ರಿಮಂಡಲ ಸಭೆ ಕರೆದು ಈ ಕುರಿತಾಗಿ ವಿಧೇಯಕವನ್ನೂ ಮಂಡಿಸಿ ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಇಲ್ಲದೇ ಕಾರ್ಯ ಚಟುವಟಿಕೆ ನಡೆಸುವವರಿಗೆ ಜೈಲು ಮತ್ತು ದಂಡ ವಿಧಿಸುವ ವಿದೇಯಕ್ಕೆ ಮಂತ್ರಿಮಂಡಲದ ಒಪ್ಪಿಗೆಯನ್ನೂ ಪಡೆದಿದ್ದಲ್ಲದೇ, ಸರ್ಕಾರಿ ನೌಕರಿಯಲ್ಲಿ ಇರುವವರು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂಬ ಮತ್ತೊಂದು ಪತ್ರವನ್ನೂ ಬರೆದು ಗಣವೇಶಧಾರಿಗಳಾಗಿ ಪಥಸಂಚಲನದಲ್ಲಿ ಭಾಗವಹಿಸಿದ್ದ ಒಂಬಿಬ್ಬರು ಸರ್ಕಾರಿ ನೌಕರರನ್ನೂ ಅಮಾನತ್ತು ಮಾಡಿದ್ದೂ ಆಯಿತು. ಈ ರೀತಿಯಾಗಿ ಪ್ರಜೆಗಳ ಹಕ್ಕನ್ನು ಕಸಿದುಕೊಳ್ಳುವಂತಹ ಸಂವಿಧಾನ ವಿರೋಧಿ ಆಜ್ಞೆಯ ವಿರುದ್ದ ಧಾರವಾಡದ ಹೈಕೋರ್ಟ್ ಪೀಠದಲ್ಲಿ ಸಲ್ಲಿಸಿದ್ದ ದೂರನ್ನು ಆಲಿಸಿದ ನ್ಯಾಯಮೂರ್ತಿಗಳಾದ ಶ್ರೀ ನಾಗಪ್ರಸನ್ನ ಅವರ ಏಕ ಸದಸ್ಯ ಪೀಠ, ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕನ್ನು ಸರ್ಕಾರದ ಒಂದು ಆದೇಶದ ಮೂಲಕ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಸರ್ಕಾರದ ಆದೇಶದ ವಿರುದ್ಧ ಮಧ್ಯಂತರ ತಡೆ ನೀಡಿತ್ತು.
ಅದೇ ರೀತಿಯಲ್ಲಿ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಅಲ್ಲಿನ ಸ್ಥಳೀಯ ಆಡಳಿತ ಸಂಸ್ಥೆಗೆ ಹಣವನ್ನು ಕೊಟ್ಟು ಅವಕಾಶವನ್ನು ಪಡೆದಿದ್ದರೂ, ಕಡೆ ಗಳಿಗೆಯಲ್ಲಿ ಮರಿಖರ್ಗೆಯ ಪರೋಕ್ಷ ಆಜ್ಞೆಯಂತೆ ಪಧಸಂಚಲನಕ್ಕೆ ಅನುಮತಿ ನಿರಾಕರಿಸಿತ್ತು. ಇಷ್ಟರ ಮಧ್ಯೆ ಸಂಘದ ಪಥಸಂಚಲನ ನಡೆಸುವ ದಿನದಂದೇ ತಮಗೂ ಪಥಸಂಚಲನ ನದೆಸಲು ಅನುಮತಿ ನೀಡಬೇಕೆಂದು ಬೀಮ್ ಆರ್ಮಿ ಸಹಾ ಅರ್ಜಿ ಸಲ್ಲಿಸಿದರೆ ಇದ್ದಕ್ಕೆ ಪೂರಕ ಎನ್ನುವಂತೆ ಮರಿಖರ್ಗೆಯ ಪರೋಕ್ಷ ಬೆಂಬಲದಿಂದ ಸುಮಾರು ಹತ್ತಕ್ಕೂ ಹೆಚ್ಚಿನ ಸಂಘಟನೆಗಳೂ ಅರ್ಜಿ ಸಲ್ಲಿಸಿ ಪರಿಸ್ಥಿತಿ ಕಗ್ಗಂಟಾಗಿತ್ತು. ಇದನ್ನು ಪ್ರಶ್ನಿಸಿ ಆರ್‌ಎಸ್‌ಎಸ್ ಮುಖಂಡರು ಹೈಕೋರ್ಟ್ ಮೊರೆ ಹೋಗಿ, ಹೈಕೋರ್ಟ್ ಆದೇಶದಂತೆ ಎರಡು ಬಾರಿ ನಡೆಸಿದ್ದ ಸಂಧಾನ ಸಭೆ ಕೂಡ ವಿಫಲ ಆಗಿತ್ತು. ಪಥಸಂಚಲನ ಅವಕಾಶಕ್ಕಾಗಿ ಒಟ್ಟು 11 ಅರ್ಜಿಗಳು ಬಂದಿದ್ದು, ಅವೆಲ್ಲವನ್ನೂ ಪರಿಶೀಲಿಸಿ ಪ್ರತ್ಯೇಕ ದಿನಾಂಕಗಳಲ್ಲಿ ಅವಕಾಶ ನೀಡಲು ಕಾಲಾವಕಾಶ ಬೇಕು ಎಂದು ಸರ್ಕಾರ ನ್ಯಾಯಾಲಕ್ಕೆ ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್ ನಂತರ ನವೆಂಬರ್ 16ರಂದು ಮಧ್ಯಾಹ್ನದಿಂದ ಸೂರ್ಯಾಸ್ತದವರೆಗೆ ಪಥಸಂಚಲನಕ್ಕೆ ಈ ಕೆಳಕಂಡ ಷರತ್ತು ಬದ್ಧವಾಗಿ ಅಸ್ತು ನೀಡಿತ್ತು.
- ನ.16ರಂದು ಮಧ್ಯಾಹ್ನ 3.30ರಿಂದ ಸಂಜೆ 6.30ರವರೆಗೆ ಅನುಮತಿ
- ಕೇವಲ 300 ಗಣವೇಷಧಾರಿಗಳು ಮತ್ತು 50 ಮಂದಿ ಘೋಷ್ ವಾದಕರು ಸೇರಿ ಒಟ್ಟು 350 ಮಂದಿಗೆ ಮಾತ್ರ ಅವಕಾಶ
ಪಥಸಂಚಲನದಲ್ಲಿ 800 ಸ್ವಯಂಸೇಕರಿಗೆ ಭಾಗಿಯಾಗಲು ಅವಕಾಶ ಕೇಳಿದ್ದೆವು. ಆದರೆ ಕೋರ್ಟ್ ಕೇವಲ 350 ಮಂದಿಗೆ ಅವಕಾಶ ನೀಡಿದೆಯಾದರೂ, ಎಷ್ಟು ಮಂದಿಗೆ ಅವಕಾಶ ಸಿಕ್ಕಿದೆ ಎನ್ನುವುದು ಮುಖ್ಯವಲ್ಲ ನಮಗೆ ಪಥಸಂಚಲನಕ್ಕೆ ಅವಕಾಶ ನೀಡಿರೋದೇ ಬಹಳ ಸಂತಸ ನೀಡಿದೆ ಎಂದು ನ್ಯಾಯಾಲಯದಲ್ಲಿ ಆರ್‌ಎಸ್‌ಎಸ್ ಪರ ವಾದವನ್ನು ಮಂಡಿಸಿದ್ದ ವಕೀಲ ಅರುಣ್ ಶ್ಯಾಮ್ ಹೇಳಿದ ನಂತರ all eys on Chittapur ಎನ್ನುವಂತೆ ಎಲ್ಲರ ಚಿತ್ತ ಹರಿದಿತ್ತು ಚಿತ್ತಾಪುರದತ್ತ.
ಕಲಬುರಗಿ ಹೈಕೋರ್ಟ್ ತೀರ್ಪಿನಿಂದ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ ಎಂದು ಸಂಘದ ಕಾರ್ಯಕರ್ತರಲ್ಲಿ ಹರ್ಷ ಹೊನಲು ಹರಿದಿದ್ದಲ್ಲದೇ ನವೆಂಬರ್ 16ಕ್ಕೆ ಎರಡು ದಿನಗಳ ಮುಂಚೆಯೇ ಇಡೀ ನಗರವನ್ನು ಕೇಸರಿ ಮಯವಾಗಿಸಿ ಪಥಸಂಚಲನ ಹೇಗೆ ನಡೆಯಬಹುದು ಎಂಬುದಕ್ಕೆ ಷರಾ ಬರೆದಿದ್ದರು. ನವೆಂಬರ್ 16ರ ಮಧ್ಯಾಹ್ನ ಮಧ್ಯಾಹ್ನ 3:45ಕ್ಕೆ ಸರಿಯಾಗಿ ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಿಂದ ಹೈಕೋರ್ಟ್ ಆದೇಶದಂತೆಯೇ ಖಾಕಿ ಪ್ಯಾಂಟ್ ಬಿಳಿ ಶರ್ಟ್ ತಲೆಯಮೇಲೊಂದು ಕರೀ ಟೋಪಿ ಮತ್ತು ಕಾಲಿಗೆ ಕರಿ ಬೂಟನ್ನು ಹಾಕಿ ಕೈಯ್ಯಲ್ಲಿ ದಂಡವನ್ನು ಹಿಡಿದ್ದ 300 ಗಣವೇಷಧಾರಿಗಳು ಮತ್ತು ಪಣವ, ಆನಕ, ಶಂಖ, ವಂಶಿ, ತ್ರಿಭುಜ, ಝಲ್ಲರಿಯನ್ನು ಹಿಡಿದ 50 ಸ್ವಯಂಸೇವಕರ ಘೋಷ್ ಟೋಳಿಯ ಲಯಬದ್ಧ ನಾದಕ್ಕೆ ಹೆಗಲು ಹೆಗಲು ಹೆಜ್ಜೆ ಹೆಜ್ಜೆ ಜೋಡಿಗೂಡಿ ನಡೆಯುವ ಯುಗದ ಹಣೆಯ ಬರಹ ತಿದ್ದಿ ಹಗೆಯಕುಲವ ತೊಡೆಯುವಾ ಅಜಯ ಗೀತೆ ಅಭಯ ಗೀತೆ ವಿಜಯ ಗೀತೆ ಹಾಡುವಾ ಎನ್ನುವ ಗೀತೆಯಂತೆ ಆರಂಭವಾದ ಪಥಸಂಚಲನ ಅಂಬೇಡ್ಕರ್ ಸರ್ಕಲ್, ಬಸವ ಆಸ್ಪತ್ರೆ, ಎಚ್.ಡಿ.ಎಫ್.ಸಿ ಬ್ಯಾಂಕ್ ರಸ್ತೆ, ಬಸವೇಶ್ವರ ಸರ್ಕಲ್ ಮೂಲಕ ಸಾಗಿ ಬಜಾಜ್ ಕಲ್ಯಾಣ ಮಂಟಪದಲ್ಲಿ 4:22ಕ್ಕೆ ಸುಮಾರು 47 ನಿಮಿಷ ಕಾಲ 1.25 ಕಿ.ಮೀ ದೂರದ ಪಥಸಂಚಲನ ನಡೆಸಿ ಎಂದೆನಂತೆ ಶಾಂತಿ ಸುವ್ಯವಸ್ಥೆಯಿಂದ ಅತ್ಯಂತ ಶಿಸ್ತುಬದ್ದ ಮುಕ್ತಾಯವಾಯಿತು.
ಪಥಸಂಚಲನದಲ್ಲಿ ಚಿತ್ತಾಪುರದ ಮತ್ತು ಸುತ್ತಮುತ್ತಲಿನ ಗ್ರಾಮಕ್ಕಷ್ಟೇ ಸೇರಿರುವ ಸಂಘದ ಗಣವೇಶದಲ್ಲಿ ಕೇವಲ 350 ಸ್ವಯಂಸೇವಕರಿದ್ದರೂ, ಸಂಘದ ಕೋರಿಕೆ ಇಲ್ಲದಿದ್ದರೂ ಮುಂಜಾಗರೂಕತಾ ಕ್ರಮವಾಗಿ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರ ನೇತೃತವಲ್ಲಿ ಕೆ.ಎಸ್.ಆರ್.ಪಿ. ಡಿಎಆರ್ ತುಕಡಿ ಸೇರಿದಂತೆ ಸುಮಾರು 650 ಪೋಲಿಸರು, 250ಕ್ಕೂ ಜನ ಹೋಮ್ ಗಾರ್ಡ್ ನಿಯೋಜನೆಯೂ ಸೇರಿದಂತೆ ಒಟ್ಟು 1200 ಜನರ ಪೋಲೀಸರು ನಿಯೋಜಿಸಲ್ಪಟ್ಟ ಕಾರಣ, ಒಟ್ಟು ಪಥಸಂಚಲನದಲ್ಲಿ ಭಾಗವಹಿಸಿದ ಸಂಖ್ಯೆ 350+1200=1550 ಎನ್ನುವುದೇ ವಿಶೇಷವಾಗಿತ್ತು. ಪುರಸಭೆಯಿಂದ 12 ಹಾಗೂ ಪೋಲಿಸ್ ಇಲಾಖೆಯಿಂದ 44 ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದಲ್ಲದೇ, 5 ಡ್ರೋಣ್ ಕ್ಯಾಮೆರಾ ಮೂಲಕ ಖಾಕಿ ಪಡೆ ಹದ್ದಿನ ಕಣ್ಣಿಟ್ಟಿತ್ತು. ಈಗಾಗಲೇ ತಿಳಿಸಿದಂತೆ ಚಿತ್ತಾಪುರ ಹೊರತುಪಡಿಸಿ ಬೇರೆ ಕಡೆಯಿಂದ ಆಗಮಿಸಿದ ಕಾರ್ಯಕರ್ತರಿಗೆ ಪಥಸಂಚಲನದಲ್ಲಿ ಭಾಗಿಯಾಗಲು ಪೊಲೀಸರು ಅವಕಾಶ ನೀಡಿರಲಿಲ್ಲ
ಘೋಷ್ ತಾಳಕ್ಕೆ ತಕ್ಕಂತೆ ಎಡ ಬಲ ಎಡ ಬಲ ಎಂದು ರಾಜ ಗಾಂಭೀರ್ಯದಲ್ಲಿ ನಡೆಯುತ್ತಿದ್ದ ಪಥಸಂಚಲನದಲ್ಲಿ ಕೇವಲ 350 ಸ್ವಯಂಸೇವಕರು ಮಾತ್ರಾ ಇರಬೇಕೆಂಬ ನಿರ್ಭಂಧ ಇದ್ದರೆ, ಆದರೆ ಆ ಪಥಸಂಚಲನ ವೀಕ್ಷಿಸಲು ಸಂಖ್ಯೆಯ ನಿರ್ಭಂದ ಇರದಿದ್ದ ಕಾರಣ ಪಥ ಸಂಚಲನ ನಡೆಯುತ್ತಿದ್ದ ರಸ್ತೆಯ ಇಕ್ಕೆಲಗಳಲ್ಲಿಯೂ ಸುಮಾರು 35,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಸಂಘದ ಸ್ವಯಂಸೇವಕರು, ಸಂಘದ ಹಿತೈಶಿಗಳು, ಮಾತಾ ಭಗಿನಿಯರು, ಮಕ್ಕಳಲ್ಲದೇ ಸಾರ್ವಜನಿಕರು ಸಹಾ ಸಹಸ್ರಾರು ಕೆಜಿಗಳಷ್ಟು ಪುಷ್ಪವನ್ನು ತಂದು ಅದನ್ನು ಭಗವಾದ್ವಜಕ್ಕೂ ಮತ್ತು ಗಣವೇಶಧಾರಿಗಳ ಮೇಲೆ ಪುಷ್ಪಾರ್ಚನೆ ಮಾಡುವ ಮೂಲಕ ಭವ್ಯ ಸ್ವಾಗತ ನೀಡಿದ ದೃಶ್ಯ ನಿಜಕ್ಕು ಅಭೂತಪೂರ್ವವಾಗಿತ್ತು. ಅದರ ಜೊತೆ ಬೋಲೋ.. ಭಾರತ್ ಮಾತಾ ಕೀ ಜೈ., ಜೋರ್ ಸೇ ಬೋಲೋ ಪ್ಯಾರ್ ಸೇ ಬೋಲೋ ಹಿಂದೂಸ್ಥಾನ್ ಹಮಾರಾ ಹೈ, ಸಂಘಟನ್ ಮೇ ಶಕ್ತೀ ಹೈ., ವೀರ ಶಿವಾಜಿ ಅಂಬಾಭವಾನಿಯಂತಹ ಘೋಷಣೆಗಳು ಮುಗಿಲು ಮುಟ್ಟುವಂತಿದ್ದವು.
ಈ ರೀತಿಯಾದ ಅಭೂತಪೂರ್ವ ಯಶಸ್ವಿಯೊಂದಿಗೆ ಪಥಸಂಚಲವನ್ನು ಮಾಡುವ ಮೂಲಕ ಯಾರನ್ನೋ ಮೆಚ್ಚಿಸುವ ಸಲುವಾಗಿಯೋ ಇಲ್ಲವೇ ಯಾವುದೋ ಪದವಿಯ ಆಸೆಗಾಗಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಮೂಗು ದಾರ ಹಾಕಲು ಮುಂದಾಗಿದ್ದ ಅಲ್ಪವಿದ್ಯಾ ಮಹಾಗರ್ವಿ ಪ್ರಿಯಾಂಕ್ ಖರ್ಗೆಗೆ ಅವರದ್ದೇ ಕೋಟೆಯಲ್ಲಿ ಸಂಘ ಶಕ್ತಿ ಕಲಿಯುಗೇ ಎನ್ನುವಂತೆ ಶಕ್ತಿಪ್ರದರ್ಶನ ಮಾಡಿ ತೋರಿಸಿದಯಲ್ಲದೇ, ಇವೆಲ್ಲವೂ ಸಂವಿಧಾನ ಬದ್ಧವಾಗಿ ನಿರಂತರ ಕಾನೂನು ಹೋರಾಟಗಳ ಮೂಲಕವೇ ಯಸ್ಸನ್ನು ಗೊಳಿಸಿ ಸಂಘ ಮತ್ತು ಸಂಘದ ಸ್ವಯಂಸೇವಕರೇ ನಿಜವಾದ ಸಂವಿಧಾನದ ರಕ್ಷಕರು ಎಂಬುದನ್ನು ಸಾರ್ವಜನಿಕವಾಗಿ ತೋರಿಸಿದೆ.
ಚಿತ್ತಾಪುರದಲ್ಲಿ ಶಾಂತಿಯುತವಾಗಿ ಸಂಘದ ಪಥಸಂಚಲನದ ಯಶಸ್ಸಿ ಆಗುತ್ತಿದ್ದಂತೆಯೇ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಅದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ ಖರ್ಗೆ, ನಮ್ಮಿಂದಾಗಿ ಆರೆಸ್ಸೆಸ್ ಕಾನೂನು ಪ್ರಕಾರ ಅನುಮತಿ ಪಡೆದು ರೂಟ್ ಮಾರ್ಚ್ ನಡೆಸುವಂತಾಯ್ತು. ನೂರು ವರ್ಷದಲ್ಲಿ ಅವರು ಸಂವಿಧಾನ ಪಾಲಿಸಿರಲಿಲ್ಲ. ಈಗ ಕಾನೂನು ಪಾಲನೆ ಮಾಡ್ತಾ ಇದ್ದಾರೆ. ನಾವೇ ಪರ್ಮಿಶನ್ ಕೊಟ್ಟಿದ್ದು. ನಾವೇನು ಆರೆಸ್ಸೆಸ್ ಪಥಸಂಚಲನಕ್ಕೆ ವಿರೋಧ ಮಾಡಿರಲಿಲ್ಲ. ಸಂವಿಧಾನ ಪಾಲನೆ ಮಾಡಲಷ್ಟೇ ಹೇಳಿದ್ದೆವು ಎಂದು ತಿಪ್ಪೇ ಸಾರಿಸುವ ಮೂಲಕ ಯಥಾ ಪ್ರಕಾರ ಜನರನ್ನು ಬೇಸ್ತು ಗೊಳಿಸಲು ಮುಂದಾದರೂ, ಬುದ್ದಿವಂತ ಮತ್ತು ಪ್ರಜ್ಞಾವಂತ ಕನ್ನಡಿಗರಿಗೆ ಅಧಿಕಾರ ಶಾಶ್ವತ ಎಂಬ ಅಮಲಿನಲ್ಲಿರುವ ಮರಿ ಖರ್ಗೆಯ ಕುಟಿಲತೆಯನ್ನು ನಂಬುವ ಸ್ಥಿತಿಯಲ್ಲಿ ಇಲ್ಲಾ ಎನ್ನುವುದೇ ವಾಸ್ತವತೆಯಾಗಿದೆ.
ಸಂಘ ಪಠಸಂಚಲನ ನಡೆಸುವ ದಿನವೇ ನಾವು ಸಹಾ ಜಾಥ ನಡೆಸ್ತೇವೆ ಅಂತ ಹಠಕ್ಕೆ ಬಿದ್ದಿದ್ದ ಮರಿಖರ್ಗೆ ಕೃಪಾಪೋಷಿತ ಜೈ ಭೀಮ್ ಮತ್ತಿತರೇ ದಲಿತ ಸಂಘಟನೆಗಳು ಹೈಕೋರ್ಟ್ ಸೂಚನೆ ಮೇರೆಗೆ ಪ್ರಸ್ತುತ ಸುಮ್ಮನಾಗಿದ್ದರೂ, ನವೆಂಬರ್ 26ರ ಸಂವಿಧಾನ ಸಮರ್ಪಣಾ ದಿನದಂದು ಜಾಥಾ ಮಾಡಲು ನಿರ್ಧರಿಸಿದ್ದು, ಮರಿ ಖರ್ಗೆ ಸಂಘದ ವಿರುದ್ಧ ನನ್ನ ಹೋರಾಟ ಇಲ್ಲಿಗೇ ಮುಗಿಯದೇ ನೊಂದಣೆ ಆಗದ ಸಂಘ ಗುರುದಕ್ಷಿಣೆ ಹೆಸರಿನಲ್ಲಿ ಹಣವನ್ನು ಅದು ಹೇಗೆ ಸಂಗ್ರಹಿಸುತ್ತಿದೆ? ಚಿತ್ತಾಪುರದಲ್ಲಿ 3 ಲಕ್ಷ ಜನರು ಬರುತ್ತೇವೆ ಎಂದಿದ್ದರು ಈಗ ಕೇವಲ 300 ಜನರು ಬಂದಿದ್ದಾರೆ. ವಿಜಯೇಂದ್ರ ಮತ್ತು ಅಶೋಕ್ ಚಿತ್ತಾಪುರಕ್ಕೆ ಬರಲೇ ಇಲ್ಲಾ! ಎಂಬ ಉದ್ಧಟತನದ ಮಾತುಗಳನ್ನು ಆಡುವ ಮೂಲಕ ಮತ್ತೆ ಮತ್ತೆ ಸಂಘದ ವಿರುದ್ಧ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುವ ಮೂಲಕ ಚಿತ್ತಾಪುರ ಇನ್ನೂ ಬೂಧಿ ಮುಚ್ಚಿದ ಕೆಂಡದಂತಿದ್ದು ಅದು ಯಾವಾಗ ಬೇಕಾದರೂ ಮತ್ತೆ ಮತ್ತೆ ಹೊತ್ತಿ ಉರಿಯಲು ಸ್ವತಃ ಸಚಿವ ಮರಿ ಖರ್ಗೆಯೇ ಕಾರಣೀಭೂತರಾಗುತ್ತಿರುವುದು ವಿಷಾಧನೀಯವಾಗಿದೆ. ಚಿತ್ತಾಪುರದಲ್ಲಿ 3 ಲಕ್ಷ ಜನರನ್ನು ಸೇರಿಸುವುದು ಸಂಘಕ್ಕೆ ಯಾವುದೇ ಸಮಸ್ಯೆಯೇನು ಇರುತ್ತಿರಲಿಲ್ಲ. ಆದರೆ ಸಂವಿಧಾನದ ಅಡಿಯ ನ್ಯಾಯಾಂಗದ ಆದೇಶದ ಪ್ರಕಾರ ಕೇವಲ 350 ಸ್ಥಳೀಯ ಸ್ವಯಂಸೇವಕರ ಪಥಸಂಚಲನ ಮಾಡಿ ಸಂವಿಧಾನವನ್ನು ಎತ್ತಿ ಹಿಡಿದರೆ, ಇನ್ನು ಸಂವಿಧಾನದ ರಕ್ಷಕರು ಎಂದು ಖಾಲಿ ಕೆಂಪು ಪುಸ್ತಕ ಹಿಡಿದು ಬೊಬ್ಬಿಡಿವ ರಾಗ ಮತ್ತು ಮರಿ ಖರ್ಗೆ ಅಧಿಕಾರ ಇದೆ ಎಂದು ಪ್ರಜೆಗಳ ಅಭಿವ್ಯಕ್ತಿ ಸ್ವಾತ್ರಂತ್ರ್ಯವನ್ನು ಮೊಟುಕುಗೊಳಿಸುವಂತಹ ಮತ್ತು ದ್ವೇಷಪೂರ್ಣ ಆಕ್ರೋಶ ಭರಿತ ಮಾತುಗಳಿಂದ ಒಂದು ವರ್ಗದವರನ್ನು ಮತ್ತೊಂದು ವರ್ಗದ ಮೇಲೆ ಎತ್ತಿ ಕಟ್ಟುವ ಮೂಲಕ ಸಂವಿಧಾನ ವಿರೋಧಿಕೃತ್ಯದಲ್ಲಿ ಭಾಗಿಗಳಾಗಿರುವುದು ಖಂಡನಾರ್ಯ ಮತ್ತು ಶಿಕ್ಷಾರ್ಹವಾಗಿದೆ.
ಈಗಾಗಲೇ ತಿಳಿಸಿದಂತೆ ಕಾಂಗ್ರೇಸ್ ಕಾರ್ಯಕರ್ತರು ಮತ್ತು ಕಾಂಗ್ರೇಸ್ ಶಾಸಕರೇ ಭಾಗಸಿ ರಾಜ್ಯಾದ್ಯಂತ ಸುಮಾರು 450ಕ್ಕೂ ಹೆಚ್ಚಿನ ಪಥಸಂಚಲಕನ ಅತ್ಯಂತ ಯಶಸ್ವಿಯಾಗಿದ್ದಾಗ, ತನ್ನ ವಯಕ್ತಿಕ ತೆವಲಿಗಾಗಿ ಏನೋ ಮಾಡಲೂ ಹೋಗಿ ಏನೋ ಮಾಡಿ, ಬೆಣೆ ಕೀಳಲು ಹೋಗಿ ಬಾಲ ಸಿಕ್ಕಿಸಿಕೊಂಡ ಮಂಗನಂತಹ ಪರಿಸ್ಥಿತಿ ಸರ್ಕಾರ ಅದರಲ್ಲೂ ಮರಿ ಖರ್ಗೆಗೆ ಆಗಿದೆ.
ಹಾಂ!! ಮುಚ್ಚಿಟ್ಟ/ಬಚ್ಚಿಟ್ಟ ವಿಷಯಗಳಿಗೇ ಕುತೂಹಲ ಹೆಚ್ಚು ಎನ್ನುವಂತೆ ಸಂಘದ ಚಟುವಟಿಗೆಗಳ ಮೇಲೆ ನಿರ್ಭಂಧ ಹೇರಲು ಮರಿ ಖರ್ಗೆ ಮುಂದಾದ ನಂತರ ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ಸಂಘಕ್ಕೆ ಸೇರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಆಗಿ ರಾಹುಲ್ ಗಾಂಧಿ ಇದ್ದಂತೆ ಪರೋಕ್ಷವಾಗಿ ಸಂಘದ ಪ್ರಚಾರಕ್ಕೆ ಮಂದಾಗಿರುವ ಪ್ರಿಯಾಂಕ್ ಖರ್ಗೆ ಗೆ ಸಂಘದ ಸ್ವಯಂಸೇವಕರು ಅಭಿನಂದನೆಗಳನ್ನು ಸಲ್ಲಿಸಲೇ ಬೇಕಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ