ರಷ್ಯಾ ಮತ್ತು ಉಕ್ರೇನ್ ನಡುವೆ ಸುಮಾರು ನಾಲ್ಕು ವರ್ಷಗಳ ಹಿಂದೆ ಆರಂಭವಾದ ಯುದ್ಧದ ನಡುವೆಯೂ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಸಂಪುಟದ ಹಿರಿಯ ಸಚಿವರು ಮತ್ತು ರಷ್ಯಾದ ದೊಡ್ಡ ವ್ಯಾಪಾರ ನಿಯೋಗದೊಂದಿಗೆ 2025ರ ಡಿಸೆಂಬರ್ 4 & 5ರಂದು 2 ದಿನಗಳ ಕಾಲ ನಮ್ಮ ದೇಶಕ್ಕೆ ಭೇಟಿ ನೀಡಿ ಭಾರತ ಮತ್ತು ರಷ್ಯಾದ ನಡುವೆ ಇಂಧನ ಮತ್ತು ರಕ್ಷಣೆಯನ್ನು ಮೀರಿ ತಮ್ಮ ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಮತ್ತು ಅನೇಕ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಮಾತನಾಡಲಿದ್ದಾರೆ.
ಇದೇ ಸಂಧರ್ಭದಲ್ಲಿ ಯಾವುದೇ ರೀತಿಯ ಭೌದ್ಧಿಕ ಹಿನ್ನಲೆಯಿಲ್ಲದ, ಕೇವಲ ನಮ್ಮ ದೇಶದ ಮಾಜೀ ಪ್ರಧಾನ ಮಂತ್ರಿಗಳ ಮರಿಮಗ/ಮೊಮ್ಮಗ/ಮಗ ಎಂಬ ಏಕೈಕ ಹಿನ್ನಲೆಯಿಂದಾಗಿ ಇನ್ನೂ ದೇಶದ ರಾಜಕಾರಣದಲ್ಲಿ ಸಕ್ರೀಯವಾಗಿರುವ, ಸ್ವಂತ ವರ್ಚಸ್ಸು ಮತ್ತು ಬಲ ಇಲ್ಲದೇ ಇದ್ದರೂ, ಕೇವಲ ಇಂಡಿ ಮೈತ್ರಿಕೂಟದ ಬೆಂಬಲದಿಂದಾಗಿ ಅಚ್ಚರಿಯ ರೂಪದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ 99 ಸ್ಥಾನಗಳನ್ನು ಗಳಿಸಿ ಅಧಿಕೃತವಾಗಿ ದೇಶದ ವಿರೋಧ ಪಕ್ಷದ ನಾಯಕನಾಗಿದ್ದರೂ, ಸಂಸತ್ತಿನ ಒಳಗೆ, ಹೊರಗೆ, ದೇಶ ಮತ್ತು ವಿದೇಶ ಹೀಗೆ ಹೋದ ಬಂದ ಕಡೆಯಲ್ಲೆಲ್ಲಾ ದೇಶ ವಿರೋಧಿ ಹೇಳಿಕೆಗಳನ್ನು ನೀಡುತ್ತಲೇ ನಮ್ಮ ದೇಶ, ದೇಶದ ಆಡಳಿತ ವ್ಯವಸ್ಥೆ ಮತ್ತು ದೇಶದ ಜನರನ್ನು ಅವಹೇಳನ ಮಾಡುವ ರಾಹುಲ್ ಗಾಂಧಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನವದೆಹಲಿಗೆ ಆಗಮಿಸುವ ಮುನ್ನ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ. ದೇಶಕ್ಕೆ ಆಗಮಿಸುವ ವಿದೇಶಿ ನಿಯೋಗಗಳೊಂದಿಗೆ ವಿರೋಧ ಪಕ್ಷದ ನಾಯಕರುಗಳು ಭೇಟಿ ಮಾಡುವ ಸಂಪ್ರದಾಯ ನಮ್ಮ ದೇಶದಲ್ಲಿದ್ದು, ಪ್ರಸ್ತುತ ಸರ್ಕಾರ ಅಂತಹ ರೂಢಿಯನ್ನು ಕೈಬಿಡುವ ಮೂಲಕ ಅಧಿಕೃತ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಅಗೌರವ ಸೂಚಿಸಲಾಗುತ್ತಿದೆ ಎನ್ನುವಂತಹ ಮಾತುಗಳನ್ನಾಡಿದ್ದಾರೆ.
ಅದೇ ರೀತಿಯಲ್ಲಿ ಮಾತನ್ನು ಮುಂದುವರೆಸಿದ ರಾಹುಲ್, ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ವಿರೋಧ ಪಕ್ಷದ ನಾಯಕರುಗಳಿಗೆ ದೇಶಕ್ಕೆ ಬರುವ ವಿದೇಶಿ ಗಣ್ಯರ ಭೇಟಿ ಮಾಡುವ ಅವಕಾಶ ಕಲ್ಪಿಸಿಕೊಡುವ ಸಂಪ್ರದಾಯವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ, ವಿದೇಶಿ ಗಣ್ಯರು ಭೇಟಿ ನೀಡಿದಾಗ ಅಥವಾ ನಾನು ವಿದೇಶ ಪ್ರವಾಸ ಮಾಡುವಾಗ, ಸರ್ಕಾರವು ಅವರಿಗೆ LOP ಅವರನ್ನು ಭೇಟಿ ಮಾಡದಂತೆ ಸಲಹೆ ನೀಡುತ್ತದೆ. ಭಾರತವನ್ನು ಕೇವಲ ಆಡಳಿತ ಪಕ್ಷವಷ್ಟೇ ಅಲ್ಲದೇ ವಿರೋಧ ಪಕ್ಷಗಳೂ ಸಹಾ ಪ್ರತಿನಿಧಿಸುತ್ತದೆ ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ಕಾರಣೀಭೂತರಾಗಿರುವುದಲ್ಲದೇ, ಮತ್ತೊಮ್ಮೆ ದೇಶದ ಜನರಿಗೆ ತಪ್ಪು ಸಂದೇಶವನ್ನು ರವಾನಿಸುವ ಮೂಲಕ ಆಂತರಿಕ ದಂಗೆಯನ್ನುಂಟು ಮಾಡಲು ಪ್ರಚೋದಿಸುತ್ತಿದ್ದಾರೆ.
2004ರಿಂದಲೂ ಸತತವಾಗಿ ಐದು ಬಾರಿ ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗಿದ್ದರೂ, ರಾಜತಾಂತ್ರಿಕ ಶಿಷ್ಟಾಚಾರದ ತಿಳುವಳಿಕೆಯ ಬಗ್ಗೆ ಕೊಂಚವೂ ಅರಿವಿಲ್ಲದ ಅವರ ಬೌದ್ಧಿಕ ದೀವಾಳಿತನ ಇಲ್ಲಿ ಮತ್ತೆ ಎದ್ದು ಕಾಣುತ್ತಿದ್ದು, ರಾಹುಲ್ ಅವರ ಈ ಆಪಾದನೆ ಕೇವಲ ಜನರನ್ನು ದಿಕ್ಕು ತಪ್ಪಿಸುವುದಕ್ಕಷ್ಟೇ ಸೀಮಿತವಾಗಿದೆ. ಸಾಮಾನ್ಯವಾಗಿ ನಮ್ಮ ದೇಶಕ್ಕೆ ಅಧಿಕೃತವಾಗಿ ಆಗಮಿಸುವ ವಿದೇಶಿ ನಾಯಕರುಗಳ ನಿಯೋಗಕ್ಕೆ ನಮ್ಮ ವಿದೇಶಾಂಗ ಸಚಿವಾಲಯವು (MEA) ಸರ್ಕಾರಿ ಅಧಿಕಾರಿಗಳು ಮತ್ತು ಗೊತ್ತುಪಡಿಸಿದ ಸರ್ಕಾರಿ ಸಂಸ್ಥೆಗಳೊಂದಿಗೆ ಸಭೆಗಳನ್ನು ಏರ್ಪಡಿಸುತ್ತದೆ ಮತ್ತು ಸರ್ಕಾರಿ ಚೌಕಟ್ಟಿನ ಹೊರಗಿನ ಯಾವುದೇ ವ್ಯಕ್ತಿ/ಸಂಸ್ಥೆಗಳನ್ನು ಭೇಟಿ ಆಗುವುದು ನಿಯೋಗದ ವಿವೇಚನೆಗೆ ಸಂಬಂಧಿಸಿದ್ದು ಇದರಲ್ಲಿ ಸರ್ಕಾರ ಅಥವಾ ಪ್ರಧಾನಿಗಳ ಹಸ್ತಕ್ಷೇಪ ಇರುವುದಿಲ್ಲ ಎಂಬುದು ಸ್ವತಃ ರಾಹುಲ್ ಗಾಂಧಿಯವರಿಗೆ ತಿಳಿದಿದ್ದರೂ, crying baby gets more attention ಎನ್ನುವಂತೆ ಪುಟಿನ್ ಭೇಟಿ ನೀಡುವ ಸಂಧರ್ಭದಲ್ಲಿ ನಮ್ಮ ಪ್ರಧಾನಿಗಳು ವಿರೋಧ ಪಕ್ಷದ ನಾಯಕರ ಹಕ್ಕನ್ನು ಮೊಟುಕುಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿ ಜನ ಸಾಮನ್ಯರಿಗೂ ಅರ್ಥವಾಗುತ್ತಿದೆ.
ಹಾಗೆ ನೋಡಿದರೆ, ರಾಹುಲ್ ಗಾಂಧಿ ಜೂನ್ 9, 2024 ರಂದು ದೇಶದ ಅಧಿಕೃತ ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ, ಹಲವಾರು ವಿದೇಶಿ ಗಣ್ಯರ ಅಪೇಕ್ಷೆಯ ಮೇರೆಗೆ ಭೇಟಿ ಆಗಿದ್ದು ಅವುಗಳಲ್ಲಿ ಪ್ರಮುಖವಾಗಿ
- ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ – ಜೂನ್ 10, 2024
- ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ – ಆಗಸ್ಟ್ 21, 2024
- ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ – ಮಾರ್ಚ್ 18, 2025
- ಮಾರಿಷಸ್ ಪ್ರಧಾನಿ ನವೀನಚಂದ್ರ ರಾಮ್‌ಗೂಲಮ್ – ಸೆಪ್ಟೆಂಬರ್ 16, 2025
ಇದೇ ಪುಟಿನ್ ಡಿಸೆಂಬರ್ 2014 ರಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭೇಟಿ ಮಾಡಿದ ವಿರೋಧ ಪಕ್ಷದ ನಾಯಕರುಗಳ ನಿಯೋಗದಲ್ಲಿ ರಾಹುಲ್ ಗಾಂಧಿ ಕೂಡ ಭಾಗವಾಗಿದ್ದರು. ಅದೇ ರೀತಿಯಲ್ಲಿ 2024 ರಲ್ಲಿ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದ ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ರಾಹುಲ್ ಗಾಂಧಿ ಅವರ ನಿವಾಸಕ್ಕೆ ಸಹಾ ಭೇಟಿ ನೀಡಿದ್ದು, ದೇಶಕ್ಕೆ ಭೇಟಿ ನೀಡುವ ಗಣ್ಯರ ಕೋರಿಕೆಯ ಮೇರೆಗೆ ವಿದೇಶಾಂಗ ಸಚಿವಾಲಯ ಸಭೆ ಮತ್ತು ಸಮಾರಂಭಗಳನ್ನು ಏರ್ಪಡಿಸುತ್ತದೆಯೇ ಹೊರತು, ಇದರಲ್ಲಿ ಸರ್ಕಾರ ಯಾವುದೇ ಪಾತ್ರವಿರುವುದಿಲ್ಲಾ ಎನ್ನುವುದು ಸಮರ್ಥನಾದ ಒಬ್ಬ ವಿರೋಧ ಪಕ್ಷದ ನಾಯಕನಿಗೆ ತಿಳಿದಿರ ಬೇಕಾಗಿರುತ್ತದೆ.
ಪ್ರಜಾಪ್ರಭುತ್ವದಲ್ಲಿ, ವಿರೋಧ ಪಕ್ಷಗಳ ಪ್ರಾಥಮಿಕ ಪಾತ್ರವೆಂದರೆ ಸರ್ಕಾರದ ಕಾವಲುಗಾರರಂತೆ (watchdog) ಕಾರ್ಯ ನಿರ್ವಹಿಸುವುದಾಗಿದೆ. ಸಂಸತ್ತಿನಲ್ಲಿ ಪ್ರಶ್ನೋತ್ತರ ಅವಧಿ ಮತ್ತು ಚರ್ಚೆಗಳಂತಹ ಕಾರ್ಯ ವಿಧಾನಗಳನ್ನು ಸೂಕ್ತವಾಗಿ ಬಳಸಿಕೊಂಡು ಆಡಳಿತ ಪಕ್ಷದ ನೀತಿಗಳು, ನಿರ್ಧಾರಗಳು ಮತ್ತು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನಿಸುವುದು, ಪ್ರಸ್ತಾವಿತ ಮಸೂದೆ ಅಥವಾ ಕಾನೂನುಗಳನ್ನು ಪರಾಂಬರಿಸಿ ಅದರ ಸಂಭಾವ್ಯ ಲೋಪದೋಷಗಳು ಅಥವಾ ನ್ಯೂನತೆಗಳನ್ನು ಗುರುತಿಸಿ ಅದರ ಸಾಧಕ ಮತ್ತು ಬಾಧಕಗಳನ್ನು ಜನರಿಗೆ ತಿಳಿಸುವುದು, ಅಧಿಕಾರದ ಕೇಂದ್ರೀಕರಣವ ಅಥವಾ ನಿರಂಕುಶಾಡಳಿತವನ್ನು ತಡೆಯುವಂತೆ ಕಾರ್ಯ ನಿರ್ವಹಿಸುವ ಮೂಲಕ ದೇಶದ ಹಿತಾಸಕ್ತಿಗಳನ್ನು ಸದಾಕಾಲವೂ ಕಾಪಾಡುವಂತಹ ಗುರುತವಾದ ಜವಾಬ್ಧಾರಿಯನ್ನು ನಿಭಾಯಿಸ ಬೇಕಾಗುತ್ತದೆ.
ಇನ್ನು ನಮ್ಮ ದೇಶದ ವಿರೋಧ ಪಕ್ಷದ ನಾಯಕರುಗಳು ವಿದೇಶಗಳಿಗೆ ಭೇಟಿ ನೀಡಿದಾಗ, ತಮ್ಮ ಮತ್ತು ಆಡಳಿತ ಪಕ್ಷದ ನಡುವಿನ ಸೈಧ್ಧಾಂತಿಕ ವಿರೋಧಾಭಾಸಗಳನ್ನು ಬದಿಗೊತ್ತಿ, ತಾವು ತಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದು, ತಮ್ಮ ನಡುವಳಿಕೆ, ಹೇಳಿಕೆಗಳೆಲ್ಲವೂ ದೇಶದ ಅಧಿಕೃತವಾದ ಭಾಗವಾಗಿರುತ್ತದೆ ಎಂಬುದರ ಕಾಳಜಿ ಮತ್ತು ಬದ್ಧತೆ ಇರಬೇಕಾಗುತ್ತದೆ.
ದುರಾದೃಷ್ಟವಷಾತ್ ಐದು ಬಾರಿ ಸಂಸದನಾಗಿ, ಕೇಂದ್ರದಲ್ಲಿ ಎರಡು ಬಾರಿ ಅವರದ್ದೇ ಸರ್ಕಾರವಿದ್ದಾಗಲೂ ಯಾವುದೇ ರೀತಿಯ ಆಡಳಿತಾನುಭವ ಪಡೆಯದೇ, ವಯಸ್ಸು 55 ಆಗಿದ್ದರೂ ಇನ್ನೂ ಯುವನಾಯಕ ಮತ್ತು ತಾನು ಹುಟ್ಟಿರುವುದೇ ಈ ದೇಶದ ಪ್ರಧಾನಿ ಆಗುವುದಕ್ಕೆ ಎಂಬ ಹುಂಬತನದ ಮನಸ್ಥಿತಿಯನ್ನು ಹೊಂದಿರುವ ರಾಹುಲ್ ವಿರೋಧ ಪಕ್ಷದ ನಾಯಕ ಎಂದು ಯಾವ ಸಂಧರ್ಭದಲ್ಲಿಯೂ ತನ್ನನ್ನು ತಾನು ಬಿಂಬಿಸಿ ಕೊಳ್ಳದೇ ಇರುವುದೇ ಈ ದೇಶದ ದೌರ್ಭಾಗ್ಯದ ಸಂಗತಿಯಾಗಿದೆ. ಅಧಿಕೃತ ವಿರೋಧ ಪಕ್ಷದ ನಾಯಕನಾಗಿ ಗಣರಾಜ್ಯೋತ್ಸವ ಸಮಾರಂಭಕ್ಕೆ ಹಾಜರಾಗುವುದಿಲ್ಲ. ಉಪರಾಷ್ಟ್ರಪತಿಗಳ ಪ್ರಮಾಣವಚನ ಸಮಾರಂಭಕ್ಕೆ ಹಾಜರಾಗುವುದಿಲ್ಲ. ಸಿಜೆಐಗಳ ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗುವುದಿಲ್ಲ. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಹ ಐತಿಹಾಸಿಕ ರಾಮ ಮಂದಿರದ ಉದ್ಭಾಟನೆ, ಪ್ರಯಾಗದ ಕುಂಭಮೇಳದಂತಹ ಕಾರ್ಯಕ್ರಮಗಳಿಗೆ ಅಧಿಕೃತವಾದ ಆಹ್ವಾನ ಇದ್ದರೂ ಅವುಗಳಿಗೆ ಹೋಗುವುದಿಲ್ಲ.
ಇನ್ನು ಸಂಸತ್ತಿನಲ್ಲಿ ಅಧಿವೇಶನದ ಆರಂಭದ ದಿನಗಳಲ್ಲಿ ಕಾಣದ ವಿದೇಶಿ ವ್ಯಕ್ತಿಗಳ ಕೈಗೊಂಬೆಯಾಗಿ ಪುಂಖಾನುಪುಂಖವಾಗಿ ಇಲ್ಲ ಸಲ್ಲದ ಆರೋಪಗಳ ಕುರಿತಾಗಿ ಗಂಟೆ ಗಟ್ಟಲೆ ಭಾಷಣ ಮಾಡಿ ದೇಶ, ಪ್ರಧಾನಿ ಮತ್ತು ಇಲ್ಲಿನ ಆಡಳಿತ ವ್ಯವಸ್ಥೆ ಎಲ್ಲವೂ ತಪ್ಪು ಎಂದು ಬಿಂಬಿಸಿ ಅದರ ಕುರಿತಾಗಿ ಸರ್ಕಾರ ನೀಡುವ ಉತ್ತರಗಳನ್ನು ಕೇಳುವ ವ್ಯವಧಾನವೂ ಇಲ್ಲದೇ, ಅಧಿವೇಶನ ನಡೆಯುತ್ತಿರುವ ಸಮಯದಲ್ಲೇ ವಿದೇಶಗಳಿಗೆ ಮೋಜು ಮಸ್ತಿಗಳಿಗಾಗಿ ಹಾರುವ ರಾಹುಲ್ ಗಾಂಧಿಯನ್ನು ಯಾವ ಪುರುಶಾರ್ಥಕ್ಕಾಗಿ ವಿದೇಶಿ ಗಣ್ಯರನ್ನು ಭೇಟಿ ನೀಡುವ ಅವಕಾಶ ಕೊರುತ್ತಾರೆ ಎಂಬುದೇ ಚರ್ಚಾಸ್ಪದವಾಗಿದೆ.
140 ಕೋಟಿ ಜನರಿಂದ ಪ್ರಜಾಪ್ರಭುತ್ವದ ಮಾದರಿಯಲ್ಲೇ ಅಧಿಕೃತವಾಗಿ ಆಯ್ಕೆ ಆದ ಸರ್ಕಾರವನ್ನೇ ಸದಾಕಾಲವೂ ಪ್ರಶ್ನಿಸುವ ಇದೇ ರಾಹುಲ್, ಆಕೆಯ ತಾಯಿ ಸೋನಿಯಾ, ತಂಗಿ ಪ್ರಿಯಾಂಕ ಮತ್ತು ಆಕೆಯ ಭಾವ ರಾಬರ್ಟ್ ವಾದ್ರಾ, 2008 ರಲ್ಲಿ ಬೀಜಿಂಗ್‌ನಲ್ಲಿ ಆಗಿನ ಚೀನಾ ಉಪಾಧ್ಯಕ್ಷ ಮತ್ತು ಪ್ರಸ್ತುತ ಅಧ್ಯಕ್ಷರಾಗಿರುವ ಕ್ಸಿ ಜಿನ್‌ಪಿಂಗ್ ಅವರ ಸಮ್ಮುಖದಲ್ಲಿ CPCಯ ಅಂತರರಾಷ್ಟ್ರೀಯ ವಿಭಾಗದ ಸಚಿವ ವಾಂಗ್ ಜಿಯಾರುಯಿ ಅವರೊಂದಿಗೆ ಯಾವ ಕಾರಣಕ್ಕಾಗಿ ಮತ್ತು ಯಾವ ಅಧಿಕಾರ ಇದೆ ಎಂದು ಒಪ್ಪಂದಕ್ಕೆ ಸಹಿ ಹಾಕಿದರು? ಮತ್ತು ಆ ಒಪ್ಪಂದದ ನಿಖರವಾದ, ಪೂರ್ಣ ವಿಷಯಗಳನ್ನು ಇನ್ನೂ ಯಾವ ಕಾರಣಕ್ಕಾಗಿ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ?ಎಂಬುದನ್ನೂ ತಿಳಿಸಬೇಕಾಗುತ್ತದೆ ಅಲ್ಲವೇ?
ನೆಹರು, ಇಂದಿರಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರ ಕಾಲದಲ್ಲಿದ್ದ ವಿರೋಧ ಪಕ್ಷದ ನಾಯಕರುಗಳು ದೇಶ ಭಕ್ತರಾಗಿದ್ದರು ಮತ್ತು ವೈಯಕ್ತಿಕ ರಾಜಕೀಯ ಮಹತ್ವಾಕಾಂಕ್ಷೆಗಳಿಗಿಂತ ಸದಾ ಕಾಲವೂ ತಮ್ಮ ದೇಶದ ಹಿತಾಸಕ್ತಿಗಳನ್ನು ಬೆಂಬಲಿಸುತ್ತಿದ್ದರು. ಹಾಗಾಗಿಯೇ ಅವರ ನಡೆ ಮತ್ತು ನುಡಿಗಳಿಗೆ ಒಂದು ಘನತೆ ಮತ್ತು ಗಾಂಭಿರ್ಯವಿರುತ್ತಿತ್ತು. ಹಾಗಾಗಿ ಆಂತಹವರನ್ನು ಭೇಟಿ ಮಾಡುವುದು ಪ್ರತಿಷ್ಟೆಯ ಸಂಕೇತ ಎಂದು ವಿದೇಶಿ ನಿಯೋಗವು ಭಾವಿಸುತ್ತಿದ್ದ ಕಾರಣ ಅವರುಗಳ ಭೇಟಿಗಾಗಿ ಅವಕಾಶವನ್ನು ಕೋರುತ್ತಿದ್ದವು. ಆದರೆ ಸ್ವಂತ ಬುದ್ದಿ ಇಲ್ಲದೇ ಯಾರದ್ದೋ ಕೈಗೊಂಬೆಯಂತೆ ವರ್ತಿಸುವ ಮತ್ತು ಶತಾಯಗತಾಯ ಪ್ರಧಾನಿಯಾಗಲೇ ಬೇಕೆಂಬ ಅಧಿಕಾರದ ಲಾಲಸೆಯಿಂದ ವಿದೇಶಿ ಹಸ್ತಕ್ಷೇಪಕ್ಕೆ ಬಹಿರಂಗವಾಗಿ ಕರೆ ನೀಡುವುದು, ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯ ಸಂಸ್ಥೆಗಳನ್ನು ದೂಷಿಸುವಂತಹ ಕಾನೂನು ಬಾಹಿರ ಚಟುವಟಿಕೆಗಳನ್ನೇ ಮಾಡುತ್ತಿರುವಂತಹ ಇಂತಹ ವಿರೋಧ ಪಕ್ಷದ ನಾಯಕನನ್ನು ಭೇಟಿ ಮಾಡುವುದು ಸಮಯ ವ್ಯರ್ಥ ಎಂದು ಬಹುಶಃ ರಷ್ಯಾದ ನಿಯೋಗ ಭಾವಿಸಿ ರಾಹುಲ್ ಭೇಟಿಗಾಗಿ ಅವಕಾಶ ಕೋರದೇ ಇರಬಹುದು ಎಂಬುದನ್ನು ರಾಹುಲ್ ಮತ್ತು ಅವರ ಪಕ್ಷದ ವಂದಿಮಾಗಧರು ಅರ್ಥ ಮಾಡಿಕೊಳ್ಳುವುದು ಸೂಕ್ತ ಎನಿಸುತ್ತದೆ.
ಜಾರ್ಜ್ ಸೊರೊಸ್, ಸ್ಯಾಮ್ ಪಿತ್ರೋಡ ಮತ್ತು ಹಿಂಡನ್‌ಬರ್ಗ್ ಕೈಗೊಂಬೆಯಂತೆ ದೇಶ ವಿದೇಶಗಳಲ್ಲಿ ಹೋದ ಬಂದ ಕಡೆಯಲ್ಲೆಲ್ಲಾ ಕೆಂಪು ಬಣ್ಣದ ಖಾಲಿ ಪುಸ್ತಕವನ್ನೇ ಸಂವಿಧಾನದ ಪ್ರತಿ ಎಂದು ಪ್ರದರ್ಶಿಸುತ್ತಾ, ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಅಪಾಯವಿದೆ. ಭಾರತದಲ್ಲಿ ಸರ್ವಾಧಿಕಾರಿ ದೋರಣಿಯಿಂದಾಗಿ ಸಿಖ್ಖರು ಪಗಡಿ ಧರಿಸಲು ಅವಕಾಶವಿಲ್ಲ. ಹಿಂದೂ ಭಯೋತ್ಪಾದನೆಯಿಂದಾಗಿ ಮುಸಲ್ಮಾನರು ಭಯದ ವಾತಾವರಣದಲ್ಲಿ ಜೀವಿಸುತ್ತಿದ್ದಾರೆ ಇದರ ವಿರುದ್ಧ ಬಾಂಗ್ಲಾ ಮತ್ತು ನೇಪಾಳದ ಜೆನ್ ಝೀ ಗಳು ದಂಗೆ ಎದ್ದಂತೆ ಭಾರತಾದ್ಯಂತ ದಂಗೆ ಎಬ್ಬಿಸಿ ಹಿಂಸೆ ಮತ್ತು ಅರಾಜಕತೆ ಎಬ್ಬಿಸಿ ಅದರ ಮೂಲಕ ಹೇಗಾದರೂ ಪ್ರಧಾನಿ ಆಗಬೇಕೆಂಬ ಹಗಲು ಕನಸು ಕಾಣುತ್ತಿರುವಂತಹ ಮತ್ತು ತಾನು ಭಾರತೀಯನೋ? ಇಲ್ಲವೇ ಬ್ರಿಟಿಷ್ ಪ್ರಜೆಯೋ? ಎಂಬುದರ ಕುರಿತಾಗಿ ವಿವಾದಗಳು ಎದ್ದು ಅದರ ಕುರಿತಾಗಿ ನ್ಯಾಯಾಲಯದಲ್ಲಿ ಮೊಕ್ಕದ್ದಮ್ಮೆ ನೆಡೆಯುತ್ತಿದ್ದರೂ ಅದರ ಬಗ್ಗೆ ತುಟಿ ಬಿಚ್ಚದ ರಾಹುಲ್ ಗಾಂಧಿ ಬಹುಶಃ ಭಾರತವಲ್ಲದೇ ಬೇರಾವುದೇ ದೇಶದಲ್ಲಿದ್ದರೂ ಇಷ್ಟು ಹೊತ್ತಿಗೆ ದೇಶ ವಿರೋಧಿ ಆರೋಪದ ಮೇಲೆ ಸೆರೆಮನೆಯಲ್ಲಿ ಕಂಬಿ ಎಣಿಸ ಬೇಕಾಗಿತ್ತು. ಅದೃಷ್ಟವಷಾತ್ ಭಾರತದಲ್ಲಿ ಇನ್ನೂ ಸತ್ಯ ನಿಷ್ಟೆ ಮತ್ತು ದೇಶಭಕ್ತ ಪ್ರಾಮಾಣಿಕ ವ್ಯಕ್ತಿಗಳು ಇದ್ದು ಶಿಶುಪಾಲನಿಗೆ ಶ್ರೀಕೃಷ್ಣನು ನೀಡಿದ್ದ ಅಭಯದಂತೆ ನಿರ್ಧಿಷ್ಟ ಸಂಖ್ಯೆಯ ತಪ್ಪುಗಳಿಗಾಗಿ ಕಾಯುತ್ತಿದ್ದು ಅದಾದ ನಂತರ ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು. ತಪ್ಪು ಮಾಡಿದ ಮೇಲೆ ಶಿಕ್ಷೆಯನ್ನು ಅನುಭವಿಸಲೇ ಬೇಕು ಎಂಬದು ಜಗದ ನಿಯಮವಾಗಿದ್ದು, ರಾಹುಲ್ ಗಾಂಧಿಯ ಈ ಎಲ್ಲಾ ನಡುವಳಿಕೆಗಳು ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯನೇರ ಬಯಸುವರು ವೀರರೂ ಅಲ್ಲ ಧೀರರೂ ಅಲ್ಲ ಎನ್ನುವಂತಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ