ಕರ್ನಾಟಕವನ್ನು ಆಳುತ್ತಿರುವವರು ಕೇರಳಿಗರೇ?

2023ರ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಆಡಳಿತ ಬಿಜೆಪಿಯ ವಿರುದ್ಧ 40% ಕಮಿಷನ್ ಸರ್ಕಾರ ಎಂಬ  ಆರೋಪ ಮತ್ತು ಬಿಟ್ಟಿ ಭಾಗ್ಯಗಳಿಂದಾಗಿ ಒಟ್ಟು  136 (135 +1) ಸ್ಥಾನಗಳನ್ನು ಗಳಿಸಿದ ಮೇಲೂ ಮುಖ್ಯಮಂತ್ರಿ ಗದ್ದುಗೆ ಸಿದ್ದರಾಮಯ್ಯನವರಿಗೋ  ಇಲ್ಲವೇ ಡಿ.ಕೆ. ಶಿವಕುಮಾರ್ ಅವರಿಗೋ ಎಂಬ ಜಟಾಪಟಿ ನಡೆದು ಅಳೆದೂ ತೂಗಿ ನಾಲ್ಕುಗೋಡೆಗಳ ಮಧ್ಯದಲ್ಲಿ ಕಾಂಗ್ರೇಸ್ ನಾಯಕರ ಮಧ್ಯದ ಕೆಲವೊಂದು ಒಪ್ಪಂದದ ಮೂಲಕ ಸಿದ್ದರಾಮಯ್ಯನವರು ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಗಳಾದ ಕಾರಣ,  ಸಹಜವಾಗಿ ಕರ್ನಾಟಕ ರಾಜ್ಯದ ರಾಜ್ಯಭಾರ ಕರ್ನಾಟಕದ ಕನ್ನಡಿಗರದ್ದೇ ಆಗಿರುತ್ತದೆ ಎಂದು ಭಾವಿಸುವವರಿಗೆ ಸಿದ್ದು ಸರ್ಕಾರದ ಈ ಕೆಲವೊಂದು ನಡೆಗಳು ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತಿದೆ.

ಅನಗತ್ಯವಾಗಿ ಕೊಟ್ಟ ಬಿಟ್ಟಿ ಭಾಗ್ಯಗಳಿಗೆ ಹಣ ಹೊಂದಿಸಲಾಗದೇ, ಜನರ ಆಕ್ರೋಶವನ್ನು ಮತ್ತೊಂದೆಡೆಗೆ ಸೆಳೆಯುವ ಸಲುವಾಗಿ ಸದಾಕಾಲವೂ ಕೇಂದ್ರ ಸರ್ಕಾರದ ವಿರುದ್ಧ  ಹರಿಹಾಯುವ ಸಿದ್ದು ಸರ್ಕಾರ, ನಮ್ಮ ತೆರಿಗೆ ನಮ್ಮ ಹಕ್ಕು ಎಂದು ದೆಹಲಿಯವರೆಗೂ ಗದ್ದಲ ಎಬ್ಬಿಸಿದ್ದ ಸಿದ್ದರಾಮಯ್ಯನವರು,  ಅಂದು ರಾಹುಲ್ ಇಂದು ಪ್ರಿಯಾಂಕಾ ಪ್ರತಿನಿಧಿಸುವ ಕೇರಳದ ವಯನಾಡ್ ಕ್ಷೇತ್ರಕ್ಕೆ ಬರುವ ಮಾನಂದವಾಡಿಯಲ್ಲಿ (ಕೇರಳ ಮತ್ತು ಕರ್ನಾಟಕದ ಗಡಿ ಪ್ರದೇಶ) ಕಾಡಾನೆ ದಾಳಿಗೆ ಅಜೀಶ್ ಮತ್ತು ಪಕತ್ ಪೌಲ್ ತುತ್ತಾದಾಗ, ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ತಮ್ಮದೇ INDI ಒಕ್ಕೂಟದ ಭಾಗವಾದ ಕೇರಳದ ಪಿಣರಾಯಿ ಸರ್ಕಾರದ ಮೂಲಕ ಪರಿಹಾರದ ಹಣ ಕೊಡಿಸದೇ ನ್ಯಾಯ್ ಯಾತ್ರೆ ಎಂದು ದೇಶ ಸುತ್ತುತ್ತಿದ್ದ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸುವ ಸಲುವಾಗಿ ಮೃತಪಟ್ಟ ವ್ಯಕ್ತಿಗಳಿಗೆ  ಸದ್ದಿಲ್ಲದೇ ಕನ್ನಡಿಗರ ತೆರಿಗೆ ಹಣದಿಂದ 15ಲಕ್ಷ ಪರಿಹಾರ  ಕೊಟ್ಟಾಗಲೇ ಎಲ್ಲಾ ಕನ್ನಡಿಗರ ಹುಬ್ಬೇರಿಸುವಂತೆ ಮಾಡಿತ್ತಲ್ಲದೇ ಸದ್ದಿಲ್ಲದೇ, ಕರ್ನಾಟಕದ ಆಡಳಿತದಲ್ಲಿ ಕೇರಳಿಗರ ಹಸ್ತಕ್ಷೇಪ ಆರಂಭವಾಗಿತ್ತು.

ರಾಜ್ಯದ ಉಪಮುಖ್ಯಮಂತ್ರಿಗಳು ಮತ್ತು ಬೆಂಗಳೂರು ನಗರದ ಉಸ್ತುವಾರಿಯಾದ ಡಿಕೆಶಿ, ಪ್ರಸ್ತುತವಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮತ್ತಷ್ಟು ಗ್ರಾಮಗಳನ್ನು ಸೇರಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನಾಗಿಸಿದ ನಂತರ  ಆರಂಭ ಶೂರತ್ವ ತೋರಿಸುತ್ತಿರುವ ಪಾಲಿಕೆ ಅಧಿಕಾರಿಗಳು ಬೆಂಗಳೂರಿನ ಯಲಹಂಕ ಬಳಿಯ ಕೋಗಿಲು ಬಳಿಯ ಫಕೀರ್​ ಕಾಲೋನಿ ಮತ್ತು ವಸೀಮ್​ ಲೇಔಟ್​ನಲ್ಲಿ ಕೇರಳ ಮೂಲದ ಮುಸ್ಲಿಂ ಫಕೀರ್ ಕುಟುಂಬಗಳು ಅನಧಿಕೃತವಾಗಿ ಮನೆಗಳನ್ನು ಕಟ್ಟಿಕೊಂಡಿದ್ದರು.  ಅದರ ಪಕ್ಕದಲ್ಲೇ ತ್ಯಾಜ್ಯ ನಿರ್ವಹಣಾ ಘಟಕವಿದ್ದುದರ  ಹಿನ್ನೆಲೆಯಲ್ಲಿ ಅದು ವಾಸಿಸಲು ಯೋಗ್ಯವಾದ ಸ್ಥಳವಲ್ಲ ಎಂದು ನಿರ್ಧರಿದ್ದ ಪಾಲಿಕೆ ಅಲ್ಲಿನ ನಿವಾಸಿಗಳಿಗೆ ನೋಟಿಸ್​ ನೀಡಲಾಗಿದ್ದರೂ, ಅವರು ಜಾಗ ಖಾಲಿ ಮಾಡದ ಹೋದಾಗ, ವಿಧಿ ಇಲ್ಲದೇ ಡಿಸೆಂಬರ್ ಕಡೆಯ ವಾರ  ಕಾನೂನಾತ್ಮಕವಾಗಿಯೇ ನೆಲಸಮ ಮಾಡುತ್ತಿದ್ದಂತೆಯೇ, ಇನ್ನು ನಾಲ್ಕೈದು ತಿಂಗಳುಗಳಲ್ಲಿ  ಕೇರಳದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇರಳ ಕಮ್ಯೂನಿಸ್ಶ್  ಪಕ್ಷದ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಕರ್ನಾಟದ ಸರ್ಕಾರದ ವಿರುದ್ಧ ಕಿಡಿಕಾರುತ್ತಾ, ಕರ್ನಾಟಕವೂ ಉತ್ತರ ಭಾರತದ ಬುಲ್ಡೋಜರ್​ ನೀತಿಯನ್ನು ಅನುಸರಿಸುತ್ತಿದೆಯಲ್ಲದೇ, ಸರ್ಕಾರಿ ಜಮೀನು ಒತ್ತುವರಿ ತೆರವು ಸಂಬಂಧ ನೂರಾರು ಮನೆಗಳ ನೆಲಸಮ ಮಾಡಿ ಕೇರಳ ಮೂಲದ ಕುಟುಂಬಗಳನ್ನು ಕರ್ನಾಟಕ ಸರ್ಕಾರ  ಬೀದಿಗೆ ತಂದಿದೆ ಎಂದು ಕಟುವಾಗಿ ಟೀಕಿಸಿದ್ದರು.

ದೇಶಾದ್ಯಂತ ಕಮ್ಯೂನಿಸ್ಟ್ ಪಕ್ಷ ಇಂಡಿ ಒಕ್ಕೂಟದ ಭಾಗವಾಗಿದ್ದರೂ, ಕೇರಳದಲ್ಲಿ ಮಾತ್ರಾ ಪರಸ್ಪರ ಕಿತ್ತಾಡುವ ಕಮ್ಯೂನಿಸ್ಟ್ ಮತ್ತು ಕಾಂಗ್ರೇಸ್ ಪಕ್ಷದ ನಾಯಕರು ಪಿಣರಾಯಿ ವಿಜಯನ್ ಅವರ ಕರ್ನಾಟಕದಲ್ಲಿ ಬುಲ್ಡೋಜರ್ ರಾಜ್ ನಡೆಯುತ್ತಿದೆ ಎಂಬ ಟ್ವೀಟ್ ನೋಡುತ್ತಿದ್ದಂತೆಯೇ ಕೆಂಡಾಮಂಡಲವಾದ ನಮ್ಮ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಪಿಣರಾಯಿ ವಿಜಯನ್  ಅವರಂತಹ ಹಿರಿಯ ನಾಯಕರು ಸತ್ಯಾಸತ್ಯತೆ ಅರಿಯದೇ ಮಾತನಾಡಿರುವುದು ದುರಾದೃಷ್ಟಕರ. ಬೆಂಗಳೂರಿನ ವಿಚಾರ ಏನು ಎಂದು ಅವರು ತಿಳಿಯಬೇಕು. ಈ ಜಾಗ ಘನತ್ಯಾಜ್ಯ ವಿಲೇವಾರಿ ಮಾಡುವ ಕ್ವಾರಿ ಪಿಟ್ ಆಗಿದೆ. ಘನತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ 9 ವರ್ಷಗಳ ಹಿಂದೆಯೇ ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರು ಬಗ್ಗೆ ಚೆನ್ನಾಗಿ ಗೊತ್ತಿದೆ. ಲ್ಯಾಂಡ್ ಮಾಫಿಯಾದವರು ಸ್ಲಂಗಳನ್ನು ನಿರ್ಮಿಸಲು ನಾವು ಬಿಡುವುದಿಲ್ಲ. ನಾವು ನಮ್ಮ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳುತ್ತೇವೆ ಎಂಬ ತಿರುಗೇಟು ನೀಡಿದಾಗ,  ಸಿಎಂ ಮತ್ತು ಡಿಸಿಎಂ ಅವರ  ಈ ಪರಿಯ ಧೈರ್ಯಕ್ಕೆ ಭಲೇ ಭಲೇ ಎಂದು ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು ಇನ್ನೂ ತಣ್ಣಗಾಗುವುದರೊಳಗೇ,

ಕೇರಳದಲ್ಲಿ ಸಾಂಸದನಾದರೂ, ಅಲ್ಲಿನ ರಾಜಕಾರಣದಲ್ಲಿ ಕೊಂಚವೂ ಬೆಲೆ ಇಲ್ಲದಿದ್ದರೂ ಕೇವಲ ಮತ್ತು ಕೇವಲ ರಾಹುಲ್ ಗಾಂಧಿಯ ಪರಮಾಪ್ತ ಮತ್ತು AICC ಪ್ರಧಾನ ಕಾರ್ಯದರ್ಶಿ ಎಂಬ ಕಾರಣಕ್ಕಾಗಿ ಕೆ. ಸಿ. ವೇಣುಗೋಪಾಲ್ ನಮ್ಮ ರಾಜ್ಯದ ಪ್ರತಿಯೊಂದು ನಡೆಯಲ್ಲೂ ಮೂಗು ತೂರಿಸಿಕೊಂಡು ಬರುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದ್ದು, ಕೇರಳದ ಸಿಎಂ ಪಿಣರಾಯಿ  ಕರ್ನಾಟಕದಲ್ಲಿ ಕೇರಳ ಮುಸಲ್ಮಾನರ ಪರವಾಗಿ ನಿಂತು ಅದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ವರವಾಗಬಹುದು ಎಂದು ತಿಳಿದ ಕೂಡಲೇ, ಕೆ.ಸಿ. ವೇಣುಗೋಪಾಲ್ ಕರ್ನಾಟಕದ ಸಿಎಂ ಮತ್ತು ಡಿಸಿಎಂ ಆವರಿಗೆ ಕರೆ ಮಾಡಿ ವಸತಿ ಹೀನರಿಗೆ ಈ ಕೂಡಲೇ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡಲು ಆಜ್ಞಾಪಿಸಿದರು.

ಮುಖ್ಯಮಂತ್ರಿ ಖುರ್ಚಿಯನ್ನು ಉಳಿಸಿಕೊಳ್ಳಲು ಮತ್ತು ಪಡೆದುಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯಲು ಸಿದ್ಧರಿರುವ ಸಿಎಮ್ ಮತ್ತು ಡಿಸಿಎಮ್ ಅವರಿಬ್ಬರೂ ಕೇರಳಿಗ ಕೆ.ಸಿ. ವೇಣುಗೋಪಾಲ್ ಅವರ ಹೇಳಿಕೆಗೆ ತಾಮುಂದು ನಾಮುಂದು ಎಂದು ಎದ್ದು ಬಿದ್ದು ಕ್ರಮ ತೆಗೆದುಕೊಳ್ಳುತ್ತಾ,ವಾಸ ಮಾಡಲು ಅದು ಯೋಗ್ಯವಾದ ಜಾಗದಲ್ಲಿ ಅನಧಿಕೃತವಾಗಿ ವಲಸಿಗರು ವಾಸ್ತವ್ಯ ಹೂಡಿದ್ದ ಕಾರಣಕ್ಕಾಗಿ ಆ ಜಾಗ ಖಾಲಿ ಮಾಡಿಸಿದ್ದಾರೆ. ಆದರೆ ಮಾನವೀಯತೆ ದೃಷ್ಟಿಯಿಂದ ನಮ್ಮ ಸರ್ಕಾರ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುತ್ತಿದೆ ಎಂದು ಸಿಎಂ ಅವರು ಹೇಳಿದರೆ, ವೇಣುಗೋಪಾಲ್ ಅವರು ನಮ್ಮ ಪಕ್ಷದ ನಾಯಕರು ಅವರ ಮಾತು ಕೇಳಿದರೆ ಯಾವ ತಪ್ಪಿದೆ? ಹಾಗಾಗಿ ಕೇರಳದ ಮುಸ್ಲಿಂ ವಲಸಿಗರಿಗೆ ಬೇರೆ ಕಡೆ  ವ್ಯವಸ್ಥೆ  ಮಾಡಿಕೊಡುತ್ತಿದ್ದೇವೆ ಎಂದು ಡಿಸಿಎಂ ಹೇಳುತ್ತಾರೆ ಎಂದರೆ,  ಪ್ರಜಾಪ್ರಭುತ್ವದ ಅಡಿಯಲ್ಲಿ ಮತದಾನದ ಮೂಲಕವೇ 136 ಶಾಸಕರನ್ನು ಆಯ್ಕೆ ಮಾಡಿದ ಕನ್ನಡಿಗರಿಗೆ ಅವಮಾನ ಮಾಡಿರುವುದು ಸ್ಪಷ್ಟವಾಗಿದೆ.

ಈ ಸರ್ಕಾರ ಆಡಳಿತಕ್ಕೆ ಬಂದ ನಂತರ ಹಲವಾರು ಕಡೆ ಇದೇ ರೀತಿಯಲ್ಲೇ ಹಲವಾರು ಕನ್ನಡಿಗರನ್ನು ವಲಸೆ ಎಬ್ಬಿಸಿದ ಸಂಧರ್ಭದಲ್ಲಿ  ಎಂದೂ ಪರ್ಯಾಯ ವ್ಯವಸ್ಥೆಯನ್ನು ಮಾಡದ ಈ ಸರ್ಕಾರ, ಕೇರಳದ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ  ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ ಎಂದು ಅಕ್ರಮ ವಲಸಿಗ ಕೇರಳಿಗರಿಗೆ ಪರ್ಯಾಯ ವ್ಯವಸ್ಥೆ ಕಲ್ಪನೆ ಮಾಡಿಕೊಡಲು ಮುಂದಾಗಿರುವುದು ಎಷ್ಟು ಸರಿ?

ಕೇರಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಯಾವುದೇ ರೀತಿಯ ಅನಾಹುತ ಆಗದಂತೆ ಮತ್ತು ದೆಹಲಿ ವರಿಷ್ಠರು ಮತ್ತು ಮಲೆಯಾಳೀ ಕೆ.ಸಿ. ವೇಣುಗೋಪಾಲ್ ಕೆಂಗಣ್ಣಿಗೂ ಗುರಿಯಾಗದಂತೆ ಸಮಸ್ಯೆ ಬಗೆಹರಿಸುವ ಸಲುವಾಗಿ ಮುಖ್ಯಮಂತ್ರಿಗಳು ಮಾನವೀಯ ನೆಲೆಯಲ್ಲಿ ಕೇರಳ ಮುಸ್ಲಿಂ ಅಕ್ರಮ ವಾಸಿಗಳಿಗೆ ಶಾಶ್ವತವಾಗಿ ಬೈಯಪ್ಪನಹಳ್ಳಿಯಲ್ಲಿ ಬೈಯಪ್ಪನಹಳ್ಳಿಯಲ್ಲಿ ಮುಖ್ಯ ಮಂತ್ರಿಗಳ 1 ಲಕ್ಷ ಮನೆ ಯೋಜನೆಯಡಿ ನಿರ್ಮಾಣ ಮಾಡಿರುವ ಹೊಸಾ ಮನೆಯಲ್ಲಿ ಪುನರ್ವಸತಿ ನೀಡುವುದಷ್ಟೇ ಅಲ್ಲದೇ, ಪಾಲಿಕೆಯಿಂದ 5 ಲಕ್ಷ ರೂ. ಪರಿಹಾರವನ್ನೂ ತುರಾತುರಿಯಲ್ಲಿ ಜನವರಿ 1 ರ ಒಳಗೆ ನೀಡಲು ಮುಖ್ಯಮಂತ್ರಿಗಳು ಮುಂದಾಗಿರುವುದು ರಾಜಕೀಯ ಒತ್ತಡದ ವಾಸನೆ ಸರಿಯಾಗಿ ಬಡಿಯುತ್ತಿದೆ. ಸಿದ್ದರಾಮಯ್ಯನವರ ಈ ಕುಕೃತ್ಯ ಈಗ ಕೇವಲ ಕರ್ನಾಟಕ ಮತ್ತು ಭಾರತಕ್ಷಷ್ಟೇ ಸೀಮಿತವಾಗಿರದೇ, ಕರ್ನಾಟಕದಲ್ಲಿ ಮುಸ್ಲಲ್ಮಾನರ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ನೆರೆಯ ಪಾಪೀಸ್ಥಾನದಲ್ಲೂ ಆಕ್ರೋಶ ಎದ್ದಿದೆ ಎಂದರೆ ಸುಮ್ಮನಿರಲಾದೇ ಬೆಣೆ ತೆಗೆಯಲು ಹೋಗಿ ಬಾಲ ಸಿಕ್ಕಿಸಿಕೊಂಡ ಮಂಗನಂತಾಗಿದೆ ಸದ್ಯದ ಕಾಂಗ್ರೇಸ್ ಪರಿಸ್ಥಿತಿಯಾಗಿದ್ದು, ಅದರ ವಿರುದ್ಧದ ಆಕ್ರೋಶವನ್ನು ಈಗ ಅಧಿಕಾರಿಗಳ ಮೇಲೆ ತೀರಿಸಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ.

ಇವರು ಎಷ್ಟೇ ಆಟಾಟೋಪಗಳನ್ನು ನಡೆಸಿ ಪರ್ಯಾಯ ವಸತಿಯನ್ನು ಕಲ್ಪಿಸಿದರೂ ಇದರ ಪೂರ್ಣ ಶ್ರೇಯ ಕೇರಳದ ಕಮ್ಯುನಿಸ್ಟ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸಿಪಿಐಎಂ ಪಕ್ಷಕ್ಕೆ ಸಲ್ಲುವ ಮೂಲಕ ಮತ್ತೊಮ್ಮೆ ಕನ್ನಡಿಗರ ತೆರೆಗೆ ಹಣ ಕೇರಳ ಪಾಲಾಗುತ್ತಿದೆ. ಪ್ರಸ್ತುತವಾಗಿ ಹೋದ ಬಂದ ಕಡೆಯಲ್ಲೆಲ್ಲಾ ವೋಟ್ ಚೋರಿ ಎಂದು ಬೊಬ್ಬಿರಿಯುತ್ತಿರುವ ರಾಹುಲ್ ಗಾಂಧಿ, ಪ್ರಿಯಾಂಕ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರ್ನಾಟಕ ಕಾಂಗ್ರೇಸ್ಸಿನ ಈ ಅವಸರದ ನಿರ್ಧಾರ ಮುಂಬರುವ ಕೇರಳ ವಿಧಾನಸಭಾ ಚುನಾವಣೆ ಮತ್ತು ಬೆಂಗಳೂರು ಪಾಲಿಕೆಯ ಚುನಾವಣೆಗೆ ಕಾಂಗ್ರೇಸ್ ಪಕ್ಷದ ಓಟ್ ಚೋರಿಯಲ್ಲದೇ ಮತ್ತೇನು? ಎಂದು ಉತ್ತರಿಸುವರೇ ಎಂದು ಕನ್ನಡಿಗರು ಕೇಳುತ್ತಿರುವುದು ಸರಿಯಾಗಿದೆ. ಕಾಂಗ್ರೇಸ್ಸಿಗರ ಈ ನೀತಿಯಿಂದಾಗಿ ಕರ್ನಾಟಕ ಅಕ್ರಮ ವಲಸಿಗರ ಸಕ್ರಮದ ಆಶ್ರಯ ತಾಣವಾದರೂ ಅಚ್ಚರಿ ಏನಿಲ್ಲಾ ಅಲ್ವೇ?

ಈ ಸರ್ಕಾರಕ್ಕೆ ಕೇರಳದ ಪರವಾದ ಪ್ರೀತಿ ಇದೇ ಮೊದಲಲ್ಲಾ ಮತ್ತು ಕಡೆಯೂ ಅಲ್ಲಾ. ಕರ್ನಾಟಕದಲ್ಲೇ ಅತಿವೃಷ್ಟಿ  ಅನಾವೃಷ್ಟಿಯಿಂದ ನರಳುತ್ತಿರುವಾಗಲೂ  ಇಲ್ಲಿನ ಜನರ ಸಂಕಷ್ಟಕ್ಕೆ ಸ್ಪಂದಿಸದೇ ಕೇಂದ್ರದಿಂದ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲಾ ಎಂದು ಬೊಬ್ಬಿರಿಯುತ್ತಿದ್ದ ಈ ಸರ್ಕಾರ, ಕೇಂದ್ರ  ಸರ್ಕಾರದ ವಿರುದ್ದ ತಮ್ಮ ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ ಕೇಂದ್ರ ನೀಡಿದ್ದ ಜಲಪ್ರಳಯದ ಎಚ್ಚರಿಕೆಯನ್ನೂ ಪರಿಗಣಿಸದೇ ಹೊಣಗೇಡಿ ತನ ತೋರಿದ್ದಕ್ಕಾಗಿ ಜಲಪ್ರಳಯವಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಪರವಾಗಿ ವಯನಾಡ್ ಲೋಕಸಭಾ ಚುನಾವಣೆಯಲ್ಲಿ ಅಲ್ಲಿನ ಜನರನ್ನು ಓಲೈಸಿಕೊಳ್ಳುವ ಸಲುವಾಗಿ  10 ಕೋಟಿ ಹಣದ ಜೊತೆ ಸಿದ್ದರಾಮಯ್ಯ ಮತ್ತು ಡಿಕೆಶಿ  ಅವರ ಪೋಟೋ ಇದ್ದ ಆಹಾರದ ಕಿಟ್ ವಿತರಿಸಿದ್ದು ಮತ್ತು ಕರ್ನಾಟಕ ಸರ್ಕಾರದ ವತಿಯಿಂದ ವಯನಾಡಿನಲ್ಲಿ ನೂರಾರು ಮನೆ ಕಟ್ಟಿಕೊಡುವ ಅಶ್ವಾಸನೆ ನೀಡಿದ್ದರ ಹಿಂದೆ ಮಾನವೀಯತೆಗಿಂತಲೂ ಕಾಂಗ್ರೇಸ್ ರಾಜಕಾರಣ ಹೊಗೆಯಾಡುತ್ತಿದ್ದದ್ದು ಸ್ಪಷ್ಟವಾಗಿತ್ತು.

ಇನ್ನು ಕರ್ನಾಟಕ ಮತ್ತು ಕೇರಳದ ನಡುವೆ ಇರುವ ಬಂಡೀಪುರ ಅಭಯಾರಣ್ಯದಲ್ಲಿ ಮಾನವ–ಪ್ರಾಣಿ ಸಂಘರ್ಷ ಬಹಳವಾಗಿದ್ದು, ರಾತ್ರಿಯ ವೇಳೆಯಲ್ಲಿ ಅಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವುದರಿಂದ ವನ್ಯ ಜೀವಿಗಳು ಸಾವನ್ನಪ್ಪುತ್ತಿದ್ದದ್ದನ್ನು  ತಪ್ಪಿಸುವ  ಸಲುವಾಗಿ ಆ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ  ರಾತ್ರಿ ಸಂಚಾರವನ್ನು ಕರ್ನಾಟಕ ಸರ್ಕಾರ ಬಹಳ ದಿನಗಳಿಂದಲೂ ನಿಷೇಧಿಸಿದಾಗ, ಆ ಭಾಗದಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಕೇರಳ ಸರ್ಕಾರ ಹಲವು ವರ್ಷಗಳಿಂದಲೂ ಒತ್ತಡ ಹೇರುತ್ತಲೇ ಇತ್ತು. ಕರ್ನಾಟಕ ಕಾಂಗ್ರೇಸ್ಸಿಗರ ಆರ್ಥಿಕ ಕೃಪೆಯಿಂದ ರಾಹುಲ್ ರಾಜೀನಾಮೆ ನೀಡಿದ ವಯನಾಡ್ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಿಯಾಂಕ ಆಯ್ಕೆಯಾಗಿ ಸಂಸದೆಯಾಗಿ ಆಯ್ಕೆಯಾಗುತ್ತಿದ್ದಂತೆಯೇ, ಬಂಡೀಪುರದಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ಕೊಡುವುದೇ ತನ್ನ ಮೊದಲ ಆದ್ಯತೆಯಾಗಿ ತೆಗೆದುಕೊಂಡು ಕರ್ನಾಟಕದಲ್ಲಿ ನಮ್ಮದೇ ಸರ್ಕಾರವಿದ್ದು, ಅವರು ಅಲ್ಲಿ ರಾತ್ರಿ ಸಂಚಾರ ನಿರ್ಬಂಧಿಸಿರುವುದರಿಂದ ಆಗುತ್ತಿರುವ ಸಮಸ್ಯೆ ತನಗೆ ಗೊತ್ತಿದ್ದು, ಆ ವಿಷಯವನ್ನು ನನಗೆ ಬಿಟ್ಟು ಬಿಡಿ. ಅಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸುವುದು ನನ್ನ ಜವಾಬ್ದಾರಿ ಎಂದು ಹೇಳುವ ಮೂಲಕ ಕರ್ನಾಟಕದ ವನ್ಯಜೀವಿಗಳನ್ನು ಮತ್ತು ಕನ್ನಡಿಗರ ಆಶಯಗಳನ್ನು ಕಾಂಗ್ರೇಸ್ಸಿಗರು ಬಹಳ ಲಘುವಾಗಿ ತೆಗೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆಯಲ್ಲವೇ?

ರಾಹುಲ್, ಪ್ರಿಯಾಂಕ ಎಂಬ ಹಿಂದಿವಾಲಾಗಳಿಗೆ ಹೆದರಿಕೊಂಡು, ಕೆ.ಸಿ.ವೇಣುಗೋಪಾಲ್ ಎಂಬ ಅಡ್ಜಸ್ಟ್ಮೆಂಟ್ ಕೇರಳಿಗನನ್ನು ಮುಖ್ಯಮಂತ್ರಿ ಮಾಡಲು ಕರ್ನಾಟಕಕ್ಕೂ ಮತ್ತು ಕನ್ನಡಿಗರಿಗೆ ಇಷ್ಟೆಲ್ಲಾ ಅಪಮಾನಗಳನ್ನು ಮಾಡಲು ಮುಂದಾಗಿರುವ ಈ ಸರ್ಕಾರ ಇನ್ನೂ ಅಧಿಕಾರದಲ್ಲಿ ಮುಂದುವರೆಯಲು ಯಾವ ನೈತಿಕ ಹಕ್ಕಿದೆ? ಎಂದು ಕರ್ನಾಟಕದ ವಿರೋಧ ಪಕ್ಷಗಳು ಮತ್ತು ಸಮಸ್ತ ಕನ್ನಡಿಗರು ಈ ಕಾಂಗ್ರೇಸ್ ಸರ್ಕಾರವನ್ನು ಪ್ರಶ್ನಿಸುತ್ತಿರುವುದು ತಪ್ಪಿಲ್ಲಾ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ವಿಶೇಷ ನಿವೇದನೆನಮ್ಮ ಭಾರತ  ದೇಶವು ಹಲವು ರಾಜ್ಯಗಳ ಒಕ್ಕೂಟವಾಗಿದ್ದು, ಏಕತೆಯಲ್ಲೂ ವಿವಿಧತೆಯನ್ನು ಹೊಂದಿರುವ ರಾಷ್ಟವಾಗಿದೆ. ನಮ್ಮ ಸಂವಿಧಾನದ ಪ್ರಕಾರ ನಮ್ಮ ದೇಶದಲ್ಲಿ ಎಲ್ಲಾ ಭಾಷಿಕರಿಗೂ ಸಮಾನ ಅವಕಾಶವಿದ್ದು, ಕೆಲವು ಪಟ್ಟಭದ್ರ ಹಿತಾಸಕ್ತಿ ಹೊಂದಿರುವಂತಹ ವ್ಯಕ್ತಿಗಳ ವಯಕ್ತಿಕ ತೆವಲುಗಳಿಗಾಗಿ ಕನ್ನಡಿಗರ ಹಿತಾಸಕ್ತಿಯನ್ನು ತುಳಿಯಬಾರದು ಎನ್ನುವುದಷ್ಟೇ ಈ ಲೇಖನದ ಉದ್ದೇಶವಾಗಿದೆ.

Leave a comment