ಬಹುಶಃ ಈ ರೀತಿಯ ಪ್ರಶ್ನೆ ಬಹುತೇಕರ ಮನಸ್ಸಿನಲ್ಲಿದ್ದರೆ, ಅದಕ್ಕೆ ಉತ್ತರ, ಭಾರತದಲ್ಲಿ ಬಂಧನದಲ್ಲಿರುವ ಯಾವುದೇ ವ್ಯಕ್ತಿಯನ್ನು ಪೊಲೀಸರು ಹೊಡೆಯುವುದು, ಹೊಡೆಯುವುದು ಅಥವಾ ಚಿತ್ರಹಿಂಸೆ ನೀಡುವುದು ಕಾನೂನುಬಾಹಿರ. ಇಂತಹ ಕ್ರಮಗಳು ಸಾಂವಿಧಾನಿಕ ಹಕ್ಕುಗಳು (ಆರ್ಟಿಕಲ್ 21) ಮತ್ತು ಕಾನೂನಿನ ಗಂಭೀರ ಉಲ್ಲಂಘನೆಯಾಗಿದೆ. ಅಕಸ್ಮಾತ್ ಆತನನ್ನು ಬಂಧಿಸುವ ವೇಳೆಯಲ್ಲಿ ಪೋಲೀಸರ ಮೆಲೆ ಹಲ್ಲೆ ಮಾಡಿದರೆ ಅಥವಾ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಮಾತ್ರ ಪೊಲೀಸರು ಆತನ ಮೇಲೆ ಸಮಂಜಸವಾದ ಬಲಪ್ರಯೋಗ ಮಾಡಬಹುದು, ಆದರೆ ಅನಗತ್ಯ ಕ್ರೌರ್ಯವು ಶಿಕ್ಷಾರ್ಹವಾಗಿದೆ.
ದುರಾದೃಷ್ಟವಶಾತ್ ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ ಎನ್ನುವಂತೆ, ನಮ್ಮ ದೇಶದಲ್ಲಿ ರಕ್ಷಕರೇ ಭಕ್ಷಕರಾಗಿರುವುದು ಮಾತ್ರಾ ಬೇಸರದ ಸಂಗತಿಯಾಗಿದ್ದು, ಇದಕ್ಕೆ ಪೂರಕ ಎನ್ನುವಂತೆ ಬೆಂಗಳೂರಿನ ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬದಿಯಿರುವ ಹೈವೇ ನೆಸ್ಟ್ ಎಂಬ ಚಹಾ ಅಂಗಡಿಯ ಯುವಕನ ಮೇಲೆ ಬೆಳಗಿನ ಜಾವ ಅಲ್ಲಿನ ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತವರ ತಂಡ ಅಮಾನವೀಯವಾಗಿ ಮಾಡಿರುವ ಹಲ್ಲೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಬೆಂಗಳೂರು ಮತ್ತು ಹೈದರಾಬಾದಿನ ಆ ಹೆದ್ದಾರಿಯಲ್ಲಿ ಹಗಲು ರಾತ್ರಿ ಎನ್ನದೇ ನಿರಂತವಾಗಿ ವಾಹನಗಳು ಓಡಾಡುತ್ತಿರುತ್ತದೆ. ಇಂತಹ ಜನನಿಬಿಡ ಸ್ಥಳಗಳಲ್ಲಿ ವಾಹನ ಚಾಲಕರು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಕಾಫೀ, ಟೀ, ತಿಂಡಿ ಊಟಗಳ ವ್ಯವಸ್ಥೆಯನ್ನು ನೀಡುವ ಹೋಟೆಲ್ಲುಗಳು ನಾಯಿಕೊಡೆಯಂತೆ ಹೆದ್ದಾರಿಯ ಇಕ್ಕೆಲಗಳಲ್ಲಿಯೂ ಬಹುತೇಕ 24/7 ತೆರೆದುಕೊಂಡು ತಮ್ಮ ತಮ್ಮ ವ್ಯಾಪಾರ ವಹಿವಾಟುಗಳನ್ನು ಮಾಡಿಕೊಂಡು ತಮ್ಮ ಪ್ರಯಾಣಿಕರ ಹೊಟ್ಟೆಯನ್ನು ತುಂಬಿಸುವ ಮೂಲಕ ತಮ್ಮ ಹೊಟ್ಟೆಯನ್ನೂ ತುಂಬಿಸಿಕೊಳ್ಳುತ್ತಿರುತ್ತಾರೆ. ಇದಕ್ಕನುಗುಣವಾಗಿಯೇ ಎಂದಿನಂತೆ ಆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹೈವೇ ನೆಸ್ಟ್ ಎಂಬ ಪುಟ್ಟ ಚಹಾ ಅಂಗಡಿಯ ಯುವಕನೊಬ್ಬ ಮುಂಜಾನೆ 4 ಗಂಟೆಗೆ ಚಹಾ ಅಂಗಡಿಯನ್ನು ತೆರೆದು ತನ್ನ ದೈನಂದಿನ ವ್ಯಾಪಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ, ಆ ಸ್ಥಳಕ್ಕೆ ಬಂದ ದೇವನಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಕೇಶ್ ಮತ್ತು ಅವರ ತಂಡ, ಇಷ್ಟು ಬೇಗ ಅಂಗಡಿಯನ್ನು ಏಕೆ ತೆರೆಯುತ್ತಿದ್ದೀಯಾ? ಎಂದು ಆಕ್ಷೇಪ ವ್ಯಕ್ತಪಡಿಸಿದಾಗ, ಹಾಗೇನಿಲ್ಲಾ ಸರ್ ಪ್ರತಿದಿನವೂ ಇದೇ ಸಮಯಕ್ಕೆ ನಮ್ಮ ವ್ಯಾಪಾರ ಆರಂಭವಾಗುತ್ತದೆ ಎಂದು ಆ ಹುಡುಗ ಉತ್ತರಿಸಿದ್ದಾನೆ. ಅದೇಕೋ ಕಾಣೇ, ಆ ಹುಡುಗನ ಎದುರುತ್ತರ ರಾಕೇಶ್ ಅವರ ಅಹಂಗೆ ತಾಕಿತೋ ಏನೋ? ನನಗೇ ಎದುರುತ್ತರ ನೀಡುತ್ತೀಯಾ.. ಎಂದು ತಮಗೆ ಗೊತ್ತಿರುವ ಎಲ್ಲಾ ರೀತಿಯ ಅವಾಚ್ಯಶಬ್ಧಗಳನ್ನು ಆಡುತ್ತಾ. ಏಕಾಎಕಿ ಆ ಯುವಕನನ್ನು ಅಂಗಡಿಯಿಂದ ಹೊರಗೆಳೆದು ಲಾಠಿಯಿಂದ ಮನಬಂದಂತೆ ಹಲ್ಲೆ ನಡೆಸಿರುವ ವೀಡಿಯೂ ಈಗ ಎಲ್ಲೆಡೆಯಲ್ಲಿಯೂ ವೈರಲ್ ಆಗಿದೆ.
ಸರ್ ನನ್ನನ್ನು ಹೊಡೆಯಬೇಡಿ. ಇನ್ನು ಮುಂದೆ ಇಷ್ಟು ಬೇಗ ಅಂಗಡಿಯನ್ನು ತೆರೆಯುವುದಿಲ್ಲ ಎಂದು ಪದೇ ಪದೇ ಬೇಡಿಕೊಂಡರೂ, ಕೋಣನ ಮುಂದೆ ಕಿನ್ನರಿ ಬಾರಿಸಿದ ಎನ್ನುವಂತೆ ಆ ಯುವಕನ ಆರ್ತನಾದಕ್ಕೆ ಇನ್ಸ್‌ಪೆಕ್ಟರ್ ರಾಕೇಶ್ ಅವರ ಮನಃ ಕೊಂಚವೂ ಕರಗದೇ, ಆ ಹುಡುಗನ ಮೇಲೆ ಕಿಂಚಿತ್ತೂ ದಯೆ ತೋರದೆ ಮೇಲಿಂದ ಮೇಲೆ ಆತನ ಮೇಲೆ ಬಾಸುಂಡೆ ಬರುವಂತೆ ಹೊಡೆಯುವ ಮೂಲಕ ತಮ್ಮ ಅಟ್ಟಹಾಸ ಮೆರೆದಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ. ಅಮಾಯಕರ ಮೇಲೆ ಅನಾಗರೀಕವಾಗಿ ಈ ರೀತಿಯಾಗಿ ನಡೆದ ಹಲ್ಲೆಯನ್ನು ಕಂಡು ಬೆಚ್ಚಿಬಿದ್ದ ಅಲ್ಲಿದ್ದ ಗ್ರಾಹಕರೂ ಸಹಾ ಆ ಪೊಲೀಸರ ಈ ವರ್ತನೆಯನ್ನು ಅಮಾನವೀಯ ಎಂದಿರುವುದಲ್ಲದೇ, ಹೆದ್ದಾರಿಯಲ್ಲಿ ಸಂಚರಿಸುವ ಚಾಲಕರು ಮತ್ತು ಪ್ರಯಾಣಿಕರಿಗಾಗಿ ಮುಂಜಾನೆ ಚಹಾ ಮಾರುವುದು ಅಷ್ಟೊಂದು ಅಪರಾಧವೇ? ಇಂತಹ ಕ್ಷುಲ್ಲಕ ಕಾರಣಕ್ಕಾಗಿ ಆ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆ ಬಡ ಯುವಕನ ಮೇಲೆ ಇಷ್ಟು ಕ್ರೂರವಾಗಿ ಹಲ್ಲೆ ಮಾಡುವ ಅವಶ್ಯಕತೆ ಇತ್ತೇ? ಅಕಸ್ಮಾತ್ ಆತ ಕಾನೂನು ನಿಯಮ ಮೀರಿದ್ದರೆ, ಕಾನೂನಾತ್ಮಕವಾಗಿಯೇ ಕ್ರಮ ತೆಗೆದುಕೊಳ್ಳುವ ಬದಲು ಈ ರೀತಿ ಹಲ್ಲೆ ಮಾಡುವ ಅಧಿಕಾರ ಪೋಲಿಸರಿಗೆ ಇದೆಯೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಈ ಘಟನೆಯು ಸಂಪೂರ್ಣ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಪೋಲೀಸರೇ ಈ ರೀತಿಯಾದ ದೌರ್ಜನ್ಯ ತೋರಿಸಿರುವುದು ಆದರಲ್ಲೂ ವೈರಲ್ ಆದ ವಿಡಿಯೋದಲ್ಲಿ ಇನ್ಸ್‌ಪೆಕ್ಟರ್ ರಾಕೇಶ್ ಅವರ ಅಧಿಕಾರದ ದರ್ಪ ಎದ್ದು ಕಾಣುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಮೊದಲೇ ಸಾರ್ವಜನಿಕರಿಗೆ ಪೋಲೀಸ್ ಇಲಾಖೆಯ ಮೇಲಿನ ನಂಬಿಕೆ ಅಷ್ಟಕಷ್ಟೇ ಇದ್ದು, ಈ ಘಟನೆಯ ನಂತರ ಪೊಲೀಸ್ ಇಲಾಖೆಯ ಮೇಲೆ ಅಲ್ಪ ಸ್ವಲ್ಪ ಇದ್ದ ವಿಶ್ವಾಸಕ್ಕೂ ಧಕ್ಕೆ ಉಂಟಾಗಿದೆ. ಅಧಿಕಾರದ ಮದದಲ್ಲಿ ಸಾಮಾನ್ಯ ಜನರ ಮೇಲೆ ಈ ರೀತಿಯಾಗಿ ದೌರ್ಜನ್ಯ ಎಸರಿರುವ ಆ ಇನ್ಸ್ಪೆಕ್ಟರ್ ವಿರುದ್ಧ ಈ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯಿಸುತ್ತಿದ್ದರೂ, ಈ ಘಟನೆಯ ಕುರಿತಾಗಿ ಪೊಲೀಸ್ ಇಲಾಖೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಾರದೇ ಇರುವುದು ಅಚ್ಚರಿಯನ್ನು ಮೂಡಿಸಿದೆ. ಎಂದಿನಂತೆಯೇ ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲೇ ಈ ಘಟನೆ ನಡೆದಿದ್ದರೂ, ಈ ಕುರಿತಂತೆ ನನಗೆ ಹೆಚ್ಚಿನ ಮಾಹಿತಿ ಏನೂ ಇಲ್ಲಾವಾಗಿದ್ದು, ತಮ್ಮ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ ಎಂದು ನಮ್ಮ ಗೃಹಸಚಿವರು ತಿಪ್ಪೇ ಸಾರಿಸಿರುವುದು ಅತ್ಯಂತ ಹೇಯಕರವಾಗಿದೆ.
ಹೌದು ನಿಜ. ನಮ್ಮ ದೇಶ ಮತ್ತು ರಾಜ್ಯಗಳಲ್ಲಿ ಅಂಗಡಿಗಳ ಸ್ಥಾಪನಾ ಕಾಯ್ದೆಗಳನ್ನು ಕಾರ್ಮಿಕ ಕಾನೂನುಗಳು ನಿಯಂತ್ರಿಸುತ್ತವೆ. ಈ ರೀತಿಯ ಆತಿಥ್ಯ ಉದ್ಯಮವು ಸಾಮಾನ್ಯವಾಗಿ 24/7 ಕಾರ್ಯನಿರ್ವಹಿಸುತ್ತದೆಯಾದರೂ, ಉದ್ಯೋಗಿಗಳ ಕೆಲಸದ ಸಮಯ ಮತ್ತು ವಾಣಿಜ್ಯ ಸಂಸ್ಥೆಗಳ ಕಾರ್ಯಾಚರಣೆಯ ಸಮಯವನ್ನು ನಿಯಂತ್ರಿಸಲಾಗುತ್ತದೆ. ಹಾಗಾಗಿ ಸಣ್ಣ ಹೋಟೆಲ್‌ಗಳಿಗೆ ಕೆಲಸದ ಸಮಯ ಮತ್ತು ಕಾರ್ಯಾಚರಣೆಯ ಸಮಯದ ಮೇಲೆ ನಿರ್ದಿಷ್ಟ ನಿರ್ಬಂಧಗಳಿರುತ್ತವೆ. ಈ ಮೊದಲೇ ತಿಳಿಸಿದಂತೆ ಈ ರೀತಿಯಾದ ಕಾನೂನುಗಳ ಉಲ್ಲಂಘನೆ ಆಗಿದ್ದಲ್ಲಿ ಇದರ ಕುರಿತಂತೆ ಸೂಕ್ತ ಇಲಾಖೆಯ ನೋಟೀಸ್ ನೀಡಿ ಕ್ರಮ ಕೈಗೊಳ್ಳುವುದು ರೂಢಿಯಲ್ಲಿದ್ದು, ಆ ರೀತಿಯ ಕ್ರಮಗಳನ್ನು ಅಂಗಡಿಯವರು ಉಲ್ಲಂಘಿಸಿ ಅಹಿತಕರ ಘಟನೆಗಳು ಸಂಭವಿಸಿದ ಪರಿಸ್ಥಿತಿಯಲ್ಲಿ ಮಾತ್ರವೇ ಪೋಲೀಸರು ಆ ಪ್ರಸಂಗದಲ್ಲಿ ಕಾರ್ಯಚರಣೆ ಮಾಡ ಬಹುದಾಗಿದೆ.
ಆದರೆ ಇಂದು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಬಹುತೇಕ ಸಣ್ಣ ಪುಟ್ಟ ಅಂಗಡಿಗಳ ಮಾಲಿಕರು ಈ ರೀತಿಯಾಗಿ ಕಾನೂನಾತ್ಮಕವಾದ ಯಾವುದೇ ರೀತಿಯ ಅನುಮತಿಯನ್ನು ಪಡೆಯದೇ, ಹಾಗೆಯೇ ಕಾನೂನು ಬಾಹೀರವಾಗಿ ನಡೆಸುತ್ತಿರುವುದೇ ಸ್ಥಳೀಯ ಪೋಲಿಸರುಗಳಿಗೆ ವರದಾನವಾಗಿದ್ದೂ. ಇದನ್ನೇ ಮುಂದಿಟ್ಟುಕೊಂಡು ಆಗ್ಗಾಗ್ಗೆಯೋ ಇಲ್ಲವೇ ನಿಯಮಿತವಾಗಿ ಹಫ್ತಾ ವಸೂಲು ಮಾಡುವ ದಂದೆಯು ನಡೆಯುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಹಫ್ತಾ ವಸೂಲು ಮಡುವ ಪೋಲೀಸರ ಈ ರೀತಿಯ ಕಾನೂನು ಬಾಹೀರ ಚಟುವಟಿಕೆಗಳ ವಿರುದ್ಧ ಅಕ್ರೋಶ ಅಥವಾ ಪ್ರತಿಭಟನೆ ನಡೆಸಿದಲ್ಲಿ, ನಿಮಗೇನು ಗೊತ್ತು ನಮ್ಮ ಕಷ್ಟ. ಇಂತಹ ಜಾಗಕ್ಕೆ ಟ್ರಾನ್ಸಫರ್ ಆಗಿ ಬರಲು ನಾವು ಎಷ್ಟು ಕೊಡಬೇಕು ಗೊತ್ತಾ?,, ಈಗ ನಾವು ತೆಗೆದುಕೊಳ್ಳುವ ಹಣದಲ್ಲಿ ನಮ್ಮ ಮೇಲಾಧಿಕಾಧಿಕಾರಿಗಳಿಗೆ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಪಾಲೂ ಇರುತ್ತದೆ ಎಂದು ಹೇಳುತ್ತಾರೆ. ಇವೆಲ್ಲವಕ್ಕೂ ಯಾವುದೇ ರೀತಿಯ ಸಾಕ್ಷಾಧಾರಗಳಿಲ್ಲದೇ ಹೋಗಿರುವುದರಿಂದ ಈ ರೀತಿಯ ಕಾಳ ದಂಧೆ ನಿರಂತರವಾಗಿ ನಡೆಯುತ್ತಲೇ ಇದ್ದು, ಈ ಘಟನೆಯ ಕುರಿತಾಗಿ ಪೋಲೀಸ್ ಹಿರಿಯ ಅಧಿಕಾರಿಗಳು ಸರಿಯಾದ ತನಿಖೆ ನಡೆಸಿದರೆ, ಅಂತಹದ್ದೇ ಹಫ್ತಾ ರೀತಿಯಿಂದಲೇ ಆರಂಭವಾದ ಸಣ್ಣದಾದ ಚಕಮಕಿ ಈ ರೀತಿಯಾಗಿ ತಾರಕಕ್ಕೆ ಹೋಗಿರುವುದು ಕಂಡು ಬರುತ್ತದೆ.
ನಮ್ಮ ದೇಶದಲ್ಲಿ ಬಹುತೇಕ ರಾಜಕಾರಣಿಗಳು ಮತ್ತು ಬಹುತೇಕ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭ್ರಷ್ಟಾಚಾರಿಗಳಾಗಿರುವ ಪರಿಣಾಮ, ಇಂತಹ ಘಟನೆಗಳು ನಡೆದಾಗ, ಸಾರ್ವಜನಿಕರ ಆಕ್ರೋಶವನ್ನು ಆ ಕ್ಷಣದಲ್ಲಿ ತಣ್ಣಗಾಗಿಸಲು ಆ ಅಧಿಕಾರಿಗಳನ್ನು ಅಮಾನತುಗೊಳಿಸಿ, ಕಾಟಾಚಾರಕ್ಕೆ ಇಲಾಖಾವಾರು ತನಿಖೆ ನಡೆಸಿ ಸಾಕ್ಷಾಧಾರಗಳ ಕೊರೆತೆಯಿಂದಾಗಿ ಆರೋಪಿಯನ್ನು ಖುಲಾಸೆ ಗೊಳಿಸಿ, ಕೆಲವೇ ಕೆಲವು ದಿನಗಳಲ್ಲಿ ಮತ್ತೆ ಅದೇ ಅಧಿಕಾರಿ ಮತ್ತೊಂದು ಪ್ರದೇಶದಲ್ಲಿ ಮತ್ತದೆ ರೀತಿಯ ಹಫ್ತಾ ದಂಧೆಗೆ ಇಳಿಯುವುದು ಬೇಸರದ ಸಂಗತಿಯಾಗಿದೆ.
ಈ ಘಟನೆಯ ಕುರಿತಾಗಿ ನಾಡಿನ ಖ್ಯಾತ ಉದ್ಯಮಿ ಮತ್ತು ಇನ್ಫೋಸಿಸ್ ಕಂಪನಿಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ CFO ಟಿ.ವಿ. ಮೋಹನ್‌ದಾಸ್ ಪೈ ಅವರೂ ಸಹಾ ಬಹಳ ನೊಂದು, ಪೊಲೀಸರು ಈ ರೀತಿ ಸಾರ್ವಜನಿಕರ ಮೇಲೆ ಹಲ್ಲೆ ಮಾಡುವುದು ನಿಲ್ಲಬೇಕು. ನಾಗರಿಕರನ್ನು ಇಷ್ಟ ಬಂದಂತೆ ಥಳಿಸಲು ಹೇಗೆ ಸಾಧ್ಯ? ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರಶ್ನಿಸಿರುವುದಲ್ಲದೇ, ನಾವು ಯಾರ ಅಧೀನದಲ್ಲಿರುವ ಗುಲಾಮರಲ್ಲ, ಬದಲಿಗೆ ಸ್ವತಂತ್ರ ದೇಶದ ಸ್ವತಂತ್ರ ನಾಗರಿಕರು ಎಂದು ಯುವಕನನ್ನು ದೇವಹಳ್ಳಿಯ ಪೊಲೀಸ್ ಅಧಿಕಾರಿ ರಾಕೇಶ್ ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಡಿಜಿ ಹಾಗೂ ಐಜಿಪಿ ಸಲೀಂ ಅವರನ್ನು ಟ್ಯಾಗ್ ಮಾಡಿ, ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಪೊಲೀಸರೇ ಈ ರೀತಿ ಸಾರ್ವಜನಿಕರನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಇದು ಅತ್ಯಂತ ತಪ್ಪು ಮತ್ತು ಖಂಡನೀಯ ಎಂದು ಅಸಮಾಧಾನ ಹೊಕಿದ್ದು, ಬಹುಶಃ ಈ ಘಟನೆಯ ವಿರುದ್ಧ ಖ್ಯಾತ ವ್ಯಕ್ತಿಯೊಬ್ಬರು ನಾಡಿನ ಮುಖ್ಯಮಂತ್ರಿಗಳು ಮತ್ತು ಪೋಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಪ್ರಕರಣದ ವೀಡಿಯೋ ಕಳುಹಿಸಿ ಅವರುಗಳ ಗಮನಕ್ಕೆ ನೇರವಾಗಿ ತಂದಿವುದರಿಂದ, ಅಧಿಕಾರದ ದರ್ಪನ್ನು ತೋರಿಸಿರುವ ಆ ಅಧಿಕಾರಿ ಮತ್ತು ತಂಡದ ವಿರುದ್ಧ ಈ ಕೂಡಲೇ ಸಾರ್ವಜನಿಕರಿಗೂ ವಿಷಯ ತಲುವಂತೆ ಕಠಿಣ ಕ್ರಮ ಕೈಗೊಂಡಲ್ಲಿ ಮುಂದೆ ಮತ್ತಾವ ಅಧಿಕಾರಿಗಳು ಈ ರೀತಿಯ ದುರ್ವತೆ ತೋರುವ ದುಸ್ಸಾಹಸ ಮಾಡಲಾರರು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ