
ಅದು 1980ರ ದಶಕ. ಆಗ ನಾನು ಇನ್ನೂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ. ಚಿಕ್ಕ ಮಕ್ಕಳನ್ನು ಸಿನಿಮಾ ಮಂದಿರಕ್ಕೆ ಕರೆದುಕೊಂಡು ಹೋಗುವುದು ಅಷ್ಟಾಗಿ ರೂಢಿಯಲ್ಲದ ಕಾಲ. ಆದರೆ ನಮ್ಮ ತಂದೆ ಕೆಲಸ ಮಾಡುತ್ತಿದ್ದ ಬಿಇಎಲ್ ಸಂಸ್ಥೆಯ ಬಿಇಎಲ್ ಲಲಿತ ಕಲಾ ಸಂಘದ ಆಶ್ರಯದಲ್ಲಿ ವರ್ಷಕ್ಕೆ 24 ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿತ್ತು. ತಿಂಗಳಿಗೆ ಎರಡು ಸಿನಿಮಾಗಳಂತೆ ಬಿಇಎಲ್ ಕಲಾಕ್ಷೇತ್ರದಲ್ಲಿ (ಇಂದಿನ ಕುವೆಂಪು ಕಲಾಕ್ಷೇತ್ರ) ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕೆಲವೊಮ್ಮೆ ಇಂಗ್ಲಿಷ್ ಚಿತ್ರಗಳ ಪ್ರದರ್ಶನ ನಡೆಯುತ್ತಿತ್ತು.
ಆ ಪ್ರದರ್ಶನಗಳ ಮೂಲಕವೇ ನಮಗೆ ದಕ್ಷಿಣ ಭಾರತದ ಶ್ರೇಷ್ಠ ಚಿತ್ರಗಳ ಪರಿಚಯವಾಯಿತು. ಕಮಲ್ ಹಾಸನ್, ರಜನಿಕಾಂತ್, ಶಿವಾಜಿ ಗಣೇಶನ್, ಎನ್.ಟಿ.ಆರ್., ಅಕ್ಕಿನೇನಿ ನಾಗೇಶ್ವರರಾವ್, ಶ್ರೀದೇವಿ, ಜಯಪ್ರದಾ ಮೊದಲಾದ ನಟರೊಂದಿಗೆ ಸಂಗೀತ ಮಾಂತ್ರಿಕ ಇಳಯರಾಜ ಹಾಗೂ ನಿರ್ದೇಶಕರಾದ ಕೆ. ಬಾಲಚಂದರ್, ಭಾಗ್ಯರಾಜ್ ಮತ್ತು ಭಾರತಿರಾಜ ಅವರಂತಹ ದಿಗ್ಗಜರ ಪರಿಚಯವೂ ಆಗಿತ್ತು.
ಅಂತಹ ಮಹಾನ್ ನಿರ್ದೇಶಕ, ನಟ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಭಾರತಿರಾಜ ಅವರು 2026ರ ಜೂನ್ 10ರಂದು ಚೆನ್ನೈನಲ್ಲಿ ನಿಧನರಾದರು ಎಂಬ ಸುದ್ದಿ ದಕ್ಷಿಣ ಭಾರತೀಯ ಚಿತ್ರರಂಗಕ್ಕಷ್ಟೇ ಅಲ್ಲ, ಭಾರತೀಯ ಸಿನಿರಂಗಕ್ಕೂ ಒಂದು ಯುಗದ ಅಂತ್ಯದ ಸಂಕೇತವಾಗಿದೆ.
ಸ್ಟುಡಿಯೋದಿಂದ ಹಳ್ಳಿಯತ್ತ
1970ರ ದಶಕದಲ್ಲಿ ದಕ್ಷಿಣ ಭಾರತದ ಬಹುತೇಕ ಚಿತ್ರಗಳು ಅದ್ದೂರಿ ಸೆಟ್‌ಗಳಲ್ಲಿ, ಸ್ಟುಡಿಯೋಗಳ ಒಳಗೆಯೇ ಚಿತ್ರೀಕರಣಗೊಳ್ಳುತ್ತಿದ್ದವು. ಆದರೆ ಆ ಸಂಪ್ರದಾಯಕ್ಕೆ ಹೊಸ ದಿಕ್ಕು ತೋರಿಸಿದವರು ಭಾರತಿರಾಜ. ಹಳ್ಳಿಯ ಮಣ್ಣಿನ ವಾಸನೆ, ಗ್ರಾಮೀಣ ಬದುಕಿನ ನೈಜ ಚಿತ್ರಣ, ಸಾಮಾಜಿಕ ಸಮಸ್ಯೆಗಳು ಮತ್ತು ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಕ್ಯಾಮೆರಾದ ಮೂಲಕ ತೆರೆಗೆ ತಂದ ಮೊದಲ ಸಾಲಿನ ನಿರ್ದೇಶಕರಲ್ಲಿ ಅವರು ಪ್ರಮುಖರು.
1941ರ ಜುಲೈ 17ರಂದು ತಮಿಳುನಾಡಿನ ತೇಣಿ ಜಿಲ್ಲೆಯ ಪಣ್ಣೈಪುರಂ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಭಾರತಿರಾಜ, ಬಾಲ್ಯದಿಂದಲೇ ನಾಟಕಗಳತ್ತ ಆಕರ್ಷಿತರಾಗಿದ್ದರು. ನಟನಾಗುವ ಕನಸು ಹೊತ್ತಿದ್ದ ಅವರು ಜೀವನೋಪಾಯಕ್ಕಾಗಿ ಕೆಲಕಾಲ ಆರೋಗ್ಯ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡಿದರು.
ಇಳಯರಾಜ ಎಂಬ ಜೀವದ ಗೆಳೆಯ
ಹಳ್ಳಿಗಳಲ್ಲಿ ನಾಟಕಗಳನ್ನು ಮಾಡುತ್ತಾ ಸುತ್ತುತ್ತಿದ್ದ ಸಮಯದಲ್ಲೇ ಅವರಿಗೆ ಪರಿಚಯವಾದವರು ಮತ್ತೊಬ್ಬ ಅದ್ಭುತ ಪ್ರತಿಭೆ ಇಳಯರಾಜ. ಸಿನಿಮಾ ಲೋಕದಲ್ಲಿ ಸಾಧನೆ ಮಾಡುವ ಕನಸನ್ನು ಹೊತ್ತು ಇಬ್ಬರೂ ಮದ್ರಾಸ್ (ಇಂದಿನ ಚೆನ್ನೈ) ನಗರಕ್ಕೆ ಬಂದರು. ಆರಂಭದ ದಿನಗಳಲ್ಲಿ ಹಸಿವು, ಕಷ್ಟ, ನಿರಾಸೆ ಎಲ್ಲವನ್ನೂ ಒಟ್ಟಿಗೆ ಅನುಭವಿಸಿದರು. ಮುಂದೆ ಒಬ್ಬರು ಭಾರತೀಯ ಸಂಗೀತದ ದಿಕ್ಕನ್ನೇ ಬದಲಿಸಿದರೆ, ಮತ್ತೊಬ್ಬರು ದಕ್ಷಿಣ ಭಾರತದ ಚಿತ್ರರಂಗದ ಕಥೆ ಹೇಳುವ ಶೈಲಿಯನ್ನೇ ಬದಲಿಸಿದರು. ಆದರೆ ಅವರ ಸ್ನೇಹ ಮಾತ್ರ ಕೊನೆಯವರೆಗೂ ಅಚಲವಾಗಿಯೇ ಉಳಿಯಿತು.
ಕನ್ನಡದೊಂದಿಗೆ ಅವಿನಾಭಾವ ನಂಟು
ಭಾರತಿರಾಜ ಮತ್ತು ಇಳಯರಾಜ ಅವರ ಆರಂಭಿಕ ಸಿನಿ ಪಯಣದಲ್ಲಿ ಕನ್ನಡಿಗರ ಪಾತ್ರ ಮಹತ್ವದ್ದಾಗಿದೆ.
ಇಳಯರಾಜ ಅವರು ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರ ಬಳಿ ಸಂಗೀತದ ಪಾಠ ಕಲಿತರೆ, ಭಾರತಿರಾಜ ಅವರು ಕನ್ನಡದ ಶ್ರೇಷ್ಠ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು.
ಪುಟ್ಟಣ್ಣ ಅವರ ಕಥೆ ಹೇಳುವ ಶೈಲಿ, ಪಾತ್ರಗಳ ಮನೋವೈಜ್ಞಾನಿಕ ಚಿತ್ರಣ ಮತ್ತು ಸಾಮಾಜಿಕ ವಾಸ್ತವಿಕತೆಯ ಪ್ರಭಾವವನ್ನು ಭಾರತಿರಾಜ ತಮ್ಮದೇ ಆದ ರೀತಿಯಲ್ಲಿ ತಮಿಳು ಚಿತ್ರರಂಗಕ್ಕೆ ಪರಿಚಯಿಸಿದರು.
16 ವಯತಿನಿಲೇ – ಒಂದು ಕ್ರಾಂತಿ
1977ರಲ್ಲಿ ಕಮಲ್ ಹಾಸನ್, ಶ್ರೀದೇವಿ ಮತ್ತು ರಜನಿಕಾಂತ್ ತಾರಾಗಣದ ಶಾಲಾ ಶಿಕ್ಷಕಿಯಾಗುವ ಕನಸು ಕಾಣುವ ಮಹತ್ವಾಕಾಂಕ್ಷೆಯ ಮತ್ತು ಸುಂದರ 16 ವರ್ಷದ ಹಳ್ಳಿ ಹುಡುಗಿ ಮಾಯಿಲ್ (ಶ್ರೀದೇವಿ)ಳ ಜೀವನದಲ್ಲಿ ಬರುವ ಮೂರು ವ್ಯಕ್ತಿಗಳಾದ ಚಪ್ಪಾನಿ (ಕಮಲ್ ಹಾಸನ್) ಮಾನಸಿಕವಾಗಿ ಮತ್ತು ದೈಹಿಕವಾಗಿ ನಿಷ್ಕಪಟ ಮತ್ತು ಮಾಯಿಲ್‌ಳನ್ನು ಆಳವಾಗಿ ಪ್ರೀತಿಸುವ ವ್ಯಕ್ತಿ, ಮತ್ತೊಬ್ಬ ಹೋದ ಬಂದಕಡೆಯಲ್ಲೆಲ್ಲಾ ಅಕೆಯನ್ನು ಹಿಂಬಾಲಿಸುತ್ತಾ ಅಕೆಯನ್ನು ತನ್ನ ದುರಹಂಕಾರ ನೋಟದಲ್ಲಿ ತಿಂದು ಹಾಕುವ ವಿಲನ್ ಪರತ್ತೈ (ರಜನಿಕಾಂತ್): ಆದರೆ, ಹಳ್ಳಿಗರ ಆರೋಗ್ಯವನ್ನು ಪರೀಕ್ಷಿಸುವ ನೆಪದಲ್ಲಿ ಪಟ್ಟಣದಿಂದ ಬರುವ ವೈದ್ಯ, ಅಂತಿಮವಾಗಿ ಆಕೆಯನ್ನು ಮೋಸದಿಂದ ತನ್ನ ಬಲೆಗೆ ಬೀಳಿಸಿಕೊಂಡು ತನ್ನ ವಾಂಛೆಗಳನ್ನು ಈಡೇರಿಸಿಕೊಂಡು ನಂತರ ಮತ್ತೊಬ್ಬ ಮಹಿಳೆ ಹಿಂದೆ ಬಿದ್ದು ಮಾಯಿಲ್ ಳನ್ನು ನಡು ನೀರಿನಲ್ಲಿ ಬಿಡುವ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಗುತ್ತಿದ್ದಂತೆಯೇ ಒಂದರ ಹಿಂದೆ ಒಂದು ಎನ್ನುವಂತೆ ಕಲ್ಲುಕ್ಕುಲ್ ಈರಮ್, ಕಿಝಕ್ಕೆ ಪೋಗುಮ್ ರೈಲ್, ಸಿಗಪ್ಪು ರೋಜಕ್ಕಲ್, ನಿಝಲ್ಗಲ್, ಅಲೈಗಳ್ ಓಯ್ವದಿಲ್ಲೈ, ಟಿಕ್ ಟಿಕ್ ಟಿಕ್, ಮೊದಲ್ ಮರಿಯಾದೈ ಮುಂತಾದ ಸಿನಿಮಾಗಳ ಮೂಲಕ ತಮಿಳಿಗರ ಮನ ಮತ್ತು ಮನೆಗಳನ್ನು ತಲುಪಿದ ನಂತರ ತಿರುಗಿ ನೋಡುವ ಪ್ರಮೇಯವೇ ಬಾರದೇ, ಅತ್ಯುತ್ತಮ ಚಿತ್ರ ಅತ್ಯುತ್ತಮ ಚಿತ್ರಕಥೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳಲ್ಲದೇ, ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು.
ಸುಮಾರು ಐದು ದಶಕಗಳ ಸುದೀರ್ಘ ವೃತ್ತಿ ಜೀವನದಲ್ಲಿ ರಜನಿಕಾಂತ್, ಕಮಲ್ ಹಾಸನ್, ಶಿವಾಜಿ ಗಣೇಶನ್ ಅವರಂತಹ ಸೂಪರ್ ಸ್ಟಾರ್‌ಗಳಿಗೆ ಸೂಪರ್ ಹಿಟ್ ಚಿತ್ರಗಳನ್ನು ಮಾಡುವ ಮೂಲಕ ಈ ಎಲ್ಲಾ ನಟರುಗಳಿಗೆ ಸ್ಟಾರ್ ಗಿರಿಯನ್ನು ತಂದುಕೊಟ್ಟವರೇ ಭಾರತಿರಾಜ. ಕೇವಲ ಖ್ಯಾತನಾಮರಷ್ಟೇ ಅಲ್ಲದೇ, ತಮಿಳು ಚಿತ್ರರಂಗಕ್ಕೆ ಹಲವಾರು ಹೊಸ ಮುಖಗಳನ್ನು ಪರಿಚಯಿಸುವಲ್ಲಿ ಭಾರತೀರಾಜ ಹೆಸರುವಾಸಿಯಾಗಿದ್ದು ತಮ್ಮ ಚಿತ್ರಗಳ ಮೂಲಕ ಪರಿಚಯಿಸಿದ ಪ್ರಮುಖರಲ್ಲಿ ಕಾರ್ತಿಕ್, ಸತ್ಯರಾಜ್, ರಾಧಾ, ರೇವತಿ, ರಾಧಿಕಾ ವಿಜಯಶಾಂತಿ ಮುಂತಾದ ನಾಯಕ ನಾಯಕಿಯರಾದರೆ, ಇನ್ನು ಪೋಷಕ ಪಾತ್ರದಲ್ಲಿ ನಟರುಗಳಾದ ಜನಗರಾಜ್, ವಡಿವುಕ್ಕರಸಿ, ಚಂದ್ರಶೇಖರ್, ಪಾಂಡಿಯನ್ ಮತ್ತು ನೆಪೋಲಿಯನ್ ಮುಂತಾದವರನ್ನು ತಮಿಳು ಚಿತ್ರರಂಗಕ್ಕೆ ಭಾರತೀರಾಜ ಪರಿಚಯಿಸಿದ್ದರು. 2023ರಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಮೂಡಿ ಬಂದ ಮಾಡರ್ನ್ ಲವ್ ಚೆನ್ನೈ ಅವರ ಕಡೆಯದಾಗಿ ನಿರ್ದೇಶಿಸಿದ ಚಿತ್ರವಾಗಿತ್ತು. ನಂತರ ದಿನಗಳಲ್ಲಿ ನಿರ್ದೇಶನ ಮಾಡುವುದನ್ನು ನಿಲ್ಲಿಸಿ ಇತರೇ ನಿರ್ದೇಶಕರ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಆಯುಧ ಎಳುತ್ತು, ಪಾಂಡಿಯನಾಡು, ಈಶ್ವರನ್, ತಿರುಚಿತ್ರಂಬಲಂ ಹಾಗೂ ಇತ್ತೀಚಿನ ಸೂಪರ್ ಹಿಟ್ ಸಿನಿಮಾ ಮಹಾರಾಜ ಚಿತ್ರಗಳ ಮೂಲಕ ನಟನಾಗಿಯೂ ಪ್ರೇಕ್ಷಕರ ಮನ ಗೆದ್ದಿದ್ದರು. 2025ರಲ್ಲಿ ಬಿಡುಗಡೆಯಾಗಿದ್ದ ಮೋಹನ್ ಲಾಲ್ ಹಾಗೂ ಶೋಭನಾ ನಟನೆಯ ತುಡರುಂ ಚಿತ್ರ ಅವರು ನಟರಾಗಿ ನಟಿಸಿ ಕಡೆಯ ಚಿತ್ರವಾಗಿತ್ತು. 
ತಮಿಳು ಚಲನ ಚಿತ್ರರಂಗದ ಪ್ರಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕರುಗಳಾದ ಕೆ. ಭಾಗ್ಯರಾಜ್ , ಮಣಿವಣ್ಣನ್ , ಮನೋಬಲ , ತ್ಯಾಗರಾಜನ್ ಮತ್ತು ಪೊನ್ವಣ್ಣನ್ ಮುಂತಾದವರುಗಳು ಭಾರತೀರಾಜಾ ಅವರ ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಪಳಗಿ ನಂತರ ತಮಿಳು ಚಿತ್ರರಂತದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು ಎನ್ನುವುದು ಗಮನಾರ್ಹ. ಚಲನಚಿತ್ರ ನಿರ್ಮಾಣದ ಕುರಿತು ಭಾರತಿ ರಾಜಾ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸಿನಿಮಾ (BRIIC) ಎಂಬ ಶಾಲೆಯನ್ನು ಪ್ರಾರಂಭಿಸಿ ಅದರ ಮೂಲಕ ಅನೇಕ ಯುವ ಚಲನಚಿತ್ರ ನಿರ್ಮಾಪಕರಿಗೆ ಸ್ಫೂರ್ತಿ ನೀಡಿದ್ದರು. 2008 ರಲ್ಲಿ ಭಾರತಿರಾಜ ಕಲೈಂಜರ್ ಟಿವಿಯಲ್ಲಿ ಪ್ರಸಾರವಾದ ತೆಕ್ಕತಿ ಪೊನ್ನು ಸರಣಿಯ ಮೂಲಕ ದೂರದರ್ಶನಕ್ಕೆ ಪಾದಾರ್ಪಣೆ ಮಾಡಿ ಖ್ಯಾತಿಯನ್ನು ಪಡೆದದ್ದಲ್ಲದೇ, ಅದೇ ಚಾನೆಲ್‌ಗಾಗಿ ಅಪ್ಪನುಮ್ ಆತಾಲುಮ್ ಮತ್ತು ಮುತಾಲ್ ಮರಿಯಾತೈ ಎಂಬ ಎರಡು ಇತರ ಸರಣಿಗಳನ್ನು ನಿರ್ದೇಶಿಸುವ ಮೂಲಕ ತಮಿಳುನಾಡಿನ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದರು. 
1974ರಲ್ಲಿ ಚಂದ್ರಲೀಲಾ ಅವರನ್ನು ಮದುವೆಯಾಗಿ ಅವರ ಸುಂದರ ದಾಂಪತ್ಯದ ಕುರುಹಾಗಿ ಮಗ ಮನೋಜ್ ಭಾರತಿರಾಜ ಮತ್ತು ಮಗಳು ಜನನಿಯ ತಂದೆಯಾಗಿದ್ದ ಭಾರತೀರಾಜ ಈಗಾಗಲೇ ಹೇಳಿರುವಂತೆ ಆವರ ಕುಚಿಕು ಗೆಳೆಯ ಇಳೆಯರಾಜ ಆವರಿಬ್ಬರ ವೈಯಕ್ತಿಕ ಜೀವನದಲ್ಲಿ ವಿಧಿ ಒಂದೇ ರೀತಿಯ ಕ್ರೂರ ಆಟವಾಡಿತ್ತು. ಕೆಲವು ವರ್ಷಗಳ ಹಿಂದೆ ಇಳೆಯರಾಜ ಅವರ ಪ್ರೀತಿಯ ಮಗಳು, ಗಾಯಕಿ ಭವತಾರಿಣಿ ವಿಧಿವಶರಾದಾಗ, ತಮ್ಮ ಮಗಳ ಸಾವಿನಿಂದಾಗಿ ಸಂಪೂರ್ಣವಾಗಿ ಕುಂದಿದ್ದ ಇಳಯರಾಜ ಅವರ ಬೆಂಬಲವಾಗಿ ನಿಂತ ಭಾರತೀರಾಜ ಸಾಂತ್ವನವನ್ನು ಹೇಳಿದ್ದರು. ತಮ್ಮ ಗೆಳೆಯ ಇಳಯರಾಜ ಅವರ ಮಗಳ ಸಾವಿನ ನೋವು ಮರೆಯುವ ಮುನ್ನವೇ ಭಾರತೀರಾಜ ಅವರ ಮುದ್ದಿನ ಮಗ ಮನೋಜ್ ಭಾರತಿರಾಜ ಅವರೂ ಸಹಾ 2025ರಲ್ಲಿ ಅಕಾಲಿಕವಾಗಿ ಅಗಲಿದಾಗ, ಇಳಯರಾಜ ಅವರು ಭಾರತಿರಾಜ ಅವರ ಮನೆಗೆ ಧಾವಿಸಿ ತಮ್ಮ ಗೆಳೆಯನಿಗೆ ಧೈರ್ಯ ತುಂಬಿದ್ದರು. ಮಗನ ಸಾವಿನಿಂದ ತೀವ್ರವಾಗಿ ಮನನೊಂದಿದ್ದ ಭಾರತಿರಾಜ, ಪುತ್ರ ಶೋಕಂ ನಿರಂತರಂ ಎನ್ನುವಂತೆ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದ ಪರಿಣಾಮ ಅವರ ಆರೋಗ್ಯ ತೀವ್ರವಾಗಿ ಹದ ಗೆಟ್ಟಿದ್ದರೂ, ಎಲ್ಲರೊಂದಿಗೂ ಚೆನ್ನಾಗಿಯೇ ಇದ್ದೇವೆ ಎಂದು ತೋರಿಸಿಕೊಳ್ಳುತ್ತಿದ್ದರು.
2025ರಲ್ಲಿ ತಮ್ಮ ಪುತ್ರ ನಟ ಮನೋಜ್ ಅವರ ನಿಧನಾನಂತರ ಕಳೆದ ಕೆಲ ತಿಂಗಳುಗಳಿಂದ ಅವರ ಆರೋಗ್ಯ ಪದೇ ಪದೇ ಹದಗೆಟ್ಟು ಆಗ್ಗಿಂದ್ದಾಗೆ ಮನೆ ಮತ್ತು ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. 2025ರ ಡಿಸೆಂಬರ್‌ನಿಂದ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು 2026ರ ಆರಂಭದಲ್ಲಿ ಚೆನ್ನೈನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ದೃಢಪಡಿಸಿದ್ದರೂ, ಅವರ ಆರೋಗ್ಯ ಕ್ಷೀಣಿಸುತ್ತಲೇ ಹೋಗಿ ಅಂತಿಮವಾಗಿ ತಮ್ಮ ವಯೋ ಸಹಜ ಅನಾರೋಗ್ಯದಿಂದಾಗಿ 2026ರ ಜೂನ್ 10ರ ಮುಂಜಾನೆ ಚೆನ್ನೈನ ತಮ್ಮ ನಿವಾಸದಲ್ಲಿ 84 ವರ್ಷ ವಯಸ್ಸಿನಲ್ಲಿ ಭಾರತೀರಾಜ ಅವರು ಅಸುನೀಗುವ ಮೂಲಕ ಭಾರತಿರಾಜ ಅವರು ಪತ್ನಿ ಚಂದ್ರಲೀಲಾ ಹಾಗೂ ಮಗಳು ಜನನಿಯನ್ನು ಅಗಲಿದ್ದಾರೆ. ಈ ಮೂಲಕ ತಮಿಳು ಚಿತ್ರರಂಗದ ಧ್ರುವತಾರೆಯೊಂದು ಮರೆಯಾಗಿದೆ. ಭಾರತಿರಾಜ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ರಾಜಕಾರಣಿಗಳು ಕಂಬನಿ ಮಿಡಿದಿದ್ದಾರೆ. ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ಮುಖ್ಯಮಂತ್ರಿ ನಟ ಸಿ ವಿಜಯ್ ಜೋಸೆಫ್ ಬೇಸರ ವ್ಯಕ್ತಪಡಿಸಿದ್ದರೆ, ದಕ್ಷಿಣ ಭಾರತದ ಖ್ಯಾತ ನಟಿ ಮತ್ತು ರಾಜಕಾರಣಿ ಆಗಿರುವ ಖುಷ್ಬೂ ಸುಂದರ್ ಅವರು ಭಾವುಕರಾಗಿ ಟ್ವೀಟ್ ಮೂಲಕ ನನ್ನ ನೆಚ್ಚಿನ ನಿರ್ದೇಶಕ ಇನ್ನಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ. ಅವರ ಸಿನೆಮಾಗಳೇ ನಮಗೆ ಫಿಲ್ಮ್ ಮೇಕಿಂಗ್ ಇನ್ಸ್ಟಿಟ್ಯೂಷನ್ ಇದ್ದಂತೆ. ನನ್ನನ್ನು ಎರಡು ಜುಟ್ಟು ಹಾಕಿ ಸಿನಿಮಾ ಮಾಡ್ತೀನಿ ಅಂತ ಪದೇ ಪದೇ ಹೇಳ್ತಿದ್ರು, ಆ ಕನಸು ನನಸಾಗಿಯೇ ಉಳಿಯಿತು ಎಂಬ ಬೇಸರ ವ್ಯಕ್ತಪಡಿಸಿದ್ದಾರೆ. ಬಾಲ್ಯದಿಂದಲೂ ಚೆಡ್ಡಿ ದೋಸ್ತುಗಳಾಗಿದ್ದು, ನಂತರ ಹಳ್ಳಿ ನಾಟಕ ನಂತರ ತಮಿಳು ಚಿತ್ರ ರಂಗದಲ್ಲೂ ಅತ್ಯಂತ ಉತ್ತಮ ಸ್ನೇಹಿತರಾಗಿದ್ದಂತಹ ಭಾರತಿರಾಜ ಅವರ ಅಗಲಿಕೆಯಿಂದಾಗಿ ಇಳಯರಾಜ ಅವರು ತಮ್ಮ ಜೀವನದ ಅತ್ಯಂತ ಆಪ್ತ ಸ್ನೇಹಿತನನ್ನು ಕಳೆದುಕೊಂಡು ತೀವ್ರ ದುಃಖದಲ್ಲಿ ಮುಳುಗಿದ್ದಾರೆ.
ತುಂಬಲಾರದ ನಷ್ಟ

ಐದು ದಶಕಗಳ ಕಾಲ ತಮಿಳು ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಕಥಾಹಂದರ ಹಾಗೂ ಗ್ರಾಮೀಣ ಸೊಗಡಿನ ಚಿತ್ರಗಳ ಮೂಲಕ ಸಿನಿಮಾ ರಂಗಕ್ಕೆ ವಿಭಿನ್ನ ರೂಪವನ್ನು ನೀಡಿದ್ದಂತಹ ಕಥೆಗಾರ, ನಿರ್ದೇಶಕ, ನಟ ಮತ್ತು ನಿರ್ಮಾಪಕರಾಗಿ ಪ್ರಖ್ಯಾತರಾಗಿ ತಮ್ಮ ಚಿತ್ರಗಳ ಮೂಲಕ ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ದ ಆ ಮಹಾನ್ ಚೇತನ ಭಾರತಿರಾಜ ಕೇವಲ ಒಬ್ಬ ನಿರ್ದೇಶಕರಲ್ಲ. ಅವರು ಒಂದು ಶಾಲೆ. ಒಂದು ಸಂಸ್ಕೃತಿ. ಒಂದು ಸಿನಿ ಚಳವಳಿ.
ಹಳ್ಳಿಯ ಮಣ್ಣಿನ ಸುವಾಸನೆಯನ್ನು ಬೆಳ್ಳಿತೆರೆಗೆ ತಂದ ಅವರು, ತಮಿಳು ಚಿತ್ರರಂಗದ ಕಥೆ ಹೇಳುವ ಭಾಷೆಯನ್ನು ಶಾಶ್ವತವಾಗಿ ಬದಲಿಸಿದರು. ಅವರ ಸಿನಿಮಾಗಳು ಕೇವಲ ಮನರಂಜನೆ ನೀಡಲಿಲ್ಲ. ಅವು ಸಮಾಜವನ್ನು ಅರ್ಥಮಾಡಿಕೊಳ್ಳುವ ದೃಷ್ಟಿಕೋನವನ್ನೂ ನೀಡಿದವು.
ಕಲಾವಿದರಿಗೆ ಸಾವಿಲ್ಲ ಎನ್ನುವ ಮಾತಿದೆ. ಆ ಅರ್ಥದಲ್ಲಿ ಭಾರತಿರಾಜ ಇನ್ನೂ ಬದುಕಿದ್ದಾರೆ—ತಮ್ಮ ಸಿನಿಮಾಗಳಲ್ಲಿ, ಪಾತ್ರಗಳಲ್ಲಿ, ಹಾಡುಗಳಲ್ಲಿ ಮತ್ತು ಕೋಟ್ಯಂತರ ಸಿನಿಪ್ರೇಮಿಗಳ ಹೃದಯಗಳಲ್ಲಿ. ಹಳ್ಳಿಯ ಬದುಕನ್ನು ವಿಶ್ವದ ಮುಂದೆ ತೆರೆದಿಟ್ಟ ಆ ಮಹಾನ್ ಚೇತನಕ್ಕೆ ಭಾವಪೂರ್ಣ ನಮನಗಳು. 🙏🏻
ಭಾರತಿರಾಜ ನಮ್ಮೆಲ್ಲರನ್ನೂ ಅಗಲಿರಬಹುದು. ಅವರ ಚಿತ್ರಗಳು ಮುಗಿಯಬಹುದು. ಆದರೆ ಅವರ ಚಿತ್ರಗಳು ಕಟ್ಟಿಟ್ಟು ಕೊಟ್ಟ ಅನುಭವಗಳು ಎಂದಿಗೂ ಮುಗಿಯುವುದಿಲ್ಲ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ