ಕಮಲ ತೊರೆದ ಅಣ್ಣಾಮಲೈ ಅವರ ಮುಂದಿನ ಹೆಜ್ಜೆ

ಕಳೆದ ಒಂದು ವಾರದಿಂದಲೂ  ರಾಷ್ಟ್ರ ರಾಜಕಾರಣದಲ್ಲಿ ಬಹಳಷ್ಟು ಸುದ್ದಿ ಆಗಿದ್ದ ವಿಷಯಕ್ಕೆ ಇಂದು ಅಂತಿಮವಾಗಿ ತೆರೆಬಿದ್ದಿದ್ದು, ಕಳೆದ ಐದು ವರ್ಷಗಳಿಂದ ಕೇವಲ ತಮಿಳುನಾಡು ಬಿಜೆಪಿಯಷ್ಟೇ ಅಲ್ಲದೇ ದೇಶದ ಭವಿಷ್ಯದ ನಾಯಕ  ಎಂದೇ ಬಿಂಬಿತವಾಗಿದ್ದ ತಮ್ಮ ಹೋರಾಟದ ಮತ್ತು ಕೆಲಸದ ಶೈಲಿಯಿಂದಾಗಿ ಸಿಂಗಮ್ ಎಂದೇ ಜನಪ್ರಿಯವಾಗಿದ್ದ ಕರ್ನಾಟಕ ಕೇಡರ್ ನ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ 2020 ರಲ್ಲಿ ಬಿಜೆಪಿ ಸೇರಿದ ಒಂದು ವರ್ಷದಲ್ಲೇ  ತಮಿಳುನಾಡುನಾಡಿನ ರಾಜ್ಯಧ್ಯಕ್ಷರಾಗಿದ್ದವರು, ಜೂನ್ 2, 2026ರಂದು ದೆಹಲಿಯಲ್ಲಿ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್  ಅವರನ್ನು ಭೇಟಿ ಮಾಡಿ ಸುಮಾರು ಐದು ಪುಟಗಳಷ್ಟು ಇರುವ ರಾಜೀನಾಮೆ ಪತ್ರವನ್ನು ನೀಡಿ  ಅಧಿಕೃತವಾಗಿ ಬಿಜೆಪಿ ಪಕ್ಷದಿಂದ ಹೊರನಡೆಯುವುದಾಗಿ ಹೇಳಿದಾಗ, ಅಂದೇ  ಸುಮಾರು ಹೊತ್ತು ಗೃಹಮಂತ್ರಿ ಅಮಿತ್ ಶಾ ಅವರನ್ನೂ ಸಹಾ ಭೇಟಿ ಮಾಡಿ ತಮ್ಮ ಮುಂದಿನ  ರಾಜಕೀಯ ಭವಿಷ್ಯದ ಕುರಿತಾಗಿ ಸುಧೀರ್ಘವಾಗಿ ಮಾತನಾಡಿದಾಗ, ಇಷ್ಟು ಆತುರದ ನಿರ್ಧಾರ ಬೇಡ,  ಒಂದೆರಡು ದಿನಗಳ ಕಾಲಾ ಇಲ್ಲೇ ದೆಹಲಿಯಲ್ಲೇ ಇರಿ ನಿಮ್ಮೊಂದಿಗೆ ಮಾತನಾಡುವುದಿದೆ  ಎಂದು ಹೇಳಿದ್ದಕ್ಕೆ ಗೌರವ ನೀಡಿ   ಅಮಿತ್ ಶಾ, ಮೋದಿ ಅವರೊಡನೆ ಮಾತನಾಡಿ ತಮ್ಮ ಮುಂದಿನ ರಾಜಕೀಯ ನಡೆಯನ್ನು ಅವರಿಬ್ಬರಿಗೂ ತಿಳಿಸಿದ್ದಾರೆ.

ಅಂತಿಮವಾಗಿ ತಮ್ಮ ಹುಟ್ಟು ಹಬ್ಬದ (4 ಜೂನ್) ಮಾರನೇಯ ದಿನ 2026ರ ಜೂನ್ 5ರ ಮಧ್ಯಾಹ್ನ ತಮಿಳುನಾಡಿನ ಕೊಯಮತ್ತೂರಿನಿಂದ ಸಾಮಾಜಿಕ ಜಾಲತಾಣ ಇಸ್ನ್ಟಾಗ್ರಾಂ ನಲ್ಲಿ ಲೈವ್ ಬಂದು ತಾವು ಅಧಿಕೃತವಾಗಿ ಬಿಜೆಪಿ ಪಕ್ಷದಿಂದ ಹೊರಬಂದು ತಮ್ಮದೇ ಆದ ಹೊಸಾ ಪಕ್ಷವನ್ನು ಸ್ಥಾಪಿಸಲು ಮುಂದಾಗಿರುವುದನ್ನು ಪ್ರಕಟಿಸಿದಾಗ, ತಮಿಳುನಾಡಿನ ಬಿಜೆಪಿ ಮತ್ತು ಕೇಂದ್ರ ಬಿಜೆಪಿ ಹರ್ಷದ ಕೂಳಿಗೆ (AIADMK ಯೊಂದಿಗೆ ಮೈತಿಯ ಮೂಲಕ ತಕ್ಷಣವೇ ಅಧಿಕಾರಕ್ಕೇರಲು) ಅಸೆ ಪಟ್ಟು ವರ್ಷದ ಕೂಳನ್ನು (2031ರಲ್ಲಿ ಸ್ವಂತ ಬಲದ ಮೇಲೆಯೇ ಅಧಿಕಾರಕ್ಕೆ ಬರುವುದು) ಕಳೆದುಕೊಂಡಂತಾಗಿದೆ ಎಂದರೂ ತಪ್ಪಾಗದು.

ಹಾಗೆ ನೋಡಿದರೆ, ಈ ರಾಜೀನಾಮೆ ಪ್ರಹಸನ ದಿಢೀರ್ ಬೆಳವಣಿಗೆಯಾಗಿರದೇ, ಈ ಹಿಂದೆ ಏಪ್ರಿಲ್ 2025 ರಲ್ಲಿ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಲೇ ಮೊಳಕೆ ಒಡೆದದ್ದು 2026 ವಿಧಾನ ಸಭಾ ಚುನಾವಣೆಯಲ್ಲಿ ತಮಿಳಿಗರ ನೆಚ್ಚಿನ ನಟ ದಳಪತಿ ಸಿ. ಜೋಸೆಫ್ ವಿಜಯ್ ನಿರೀಕ್ಷೆಗೂ ಮೀರಿ ಜಯಗಳಿಸಿದ ನಂತರ ತಮಿಳುನಾಡಿನ ರಾಜಕೀಯ ಸಮೀಕರಣಗಳು ಸಂಪೂರ್ಣವಾಗಿ ಬದಲಾಗಿದ್ದು, ತಮಿಳುನಾಡಿನ ಜನರು ಹಳೆಯ ಸಾಂಪ್ರದಾಯಿಕ ಎರಡೂ ದ್ರಾವಿಡ ಪಕ್ಷಗಳನ್ನು ಸಮಾನ ರೀತಿಯಲ್ಲಿ ತಿರಸ್ಕರಿಸಿರುವುದು ಈಗ ಇತಿಹಾಸ. ಸುಮಾರು ಎರಡು ವರ್ಷಗಳಿಗೂ ಮುನ್ನವೇ ಇಂತಹ ಸಂಧರ್ಭವನ್ನು ಊಹಿಸಿದ್ದ ಅಣ್ಣಾಮಲೈ ತಮಿಳುನಾಡಿನಲ್ಲಿ ಇನ್ನು ಮುಂದೆ ಯಾವುದೇ ಸ್ವತಂತ್ರ ಪಕ್ಷ ಆಡಳಿತಕ್ಕೆ ಬರುವುದಿಲ್ಲ ಮತ್ತು ದ್ರಾವಿಡ ಪಕ್ಷಗಳ ಹೊರತಾಗಿ ಸ್ಥಳೀಯ ನಾಯಕತ್ವದ ಹೊಸಾ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ಬಹಳ ಸ್ಪಷ್ಟವಾಗಿ ತಿಳಿಸಿದ್ದರು.

ಎನ್ ಮಣ್ ಎನ್ ಮಕ್ಕಳ್ ಎಂಬ ಹೆಸರಿನಲ್ಲಿ ತಮಿಳುನಾಡಿನಾದ್ಯಂತ ಪಾದ ಯಾತ್ರೆ ನಡೆಸುವ ಮೂಲಕ ತಮಿಳುನಾಡಿನಲ್ಲಿ ಬಿಜೆಪಿಯ ಪರವಾಗಿ ಭರ್ಜರಿ ಪ್ರಚಾರ ನಡೆಸಿ, ಅದುವರೆವಿಗೂ ಕೇವಲ 3% ಮತದಾರರ ಒಲವಿದ್ದ ಬಿಜೆಪಿ ಪಕ್ಷವನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಎರಡೂ ದ್ರಾವಿಡ ಪಕ್ಷಗಳನ್ನು ಹೊರತು ಪಡಿಸಿ ಸಣ್ಣ ಪುಟ್ಟ ಪಕ್ಷಗಳೊಡನೆ ತಮ್ಮದೇ NDA ಒಕ್ಕೂಟದಡಿಯಲ್ಲಿ ಮೈತ್ರಿ ಮಾಡಿಕೊಂಡು ಸ್ವತ್ವಃ ಬಹಳ ಕಡಿಮೆ ಅಂತರದಲ್ಲಿ ಪರಾಭವಗೊಂಡರೂ, ಬಿಜೆಪಿ ಪಕ್ಷಕ್ಕೆ 11% ಮತಗಳನ್ನು ಕೊಡಿಸುವ ಮೂಲಕ ತಮಿಳುನಾಡಿನಲ್ಲೂ ಮುಂಬರುವ ಕಾಲದಲ್ಲಿ ಬಿಜೆಪಿಗೆ ಭವಿಷ್ಯವಿದೆ ಎಂಬುದನ್ನು ತೋರಿಸಿದ್ದಲ್ಲದೇ, ತಮಿಳುನಾಡಿನಲ್ಲಿ ಆಡಳಿತಕ್ಕೆ ಬರಲು ಇನ್ನೂ ಸ್ವಲ್ಪ ತಾಳ್ಮೆವಹಿಸಿ, ತಮಿಳಿಗರ ನಂಬಿಕೆಯನ್ನು ಗಳಿಸಲು ಪ್ರಯತ್ನಿಸಬೇಕು ಎಂಬುದನ್ನು ತೋರಿಸಿದ್ದರು. ಲೋಕಸಭಾ ಚುನಾವಣಾ ಸಮಯದಲ್ಲಿ ಅಣ್ಣಾಮೈಲೈ ಅವರ ನಿರ್ಧಾರವನ್ನು ಬೆಂಬಲಿಸಿದ್ದ ಬಿಜೆಪಿ, ವಿಧಾನಸಭಾ ಚುನಾವಣಾ ಸಮಯದಲ್ಲಿ ಆತುರಗೆಟ್ಟ ಆಂಜನೇಯನಂತೆ ಅಣ್ಣಾಮಲೈ ಅವರ ಕೊಂಗು ವೆಲ್ಲಲರ್ ಗೌಂಡರ್ ಸಮುದಾಯಕ್ಕೇ ಸೇರಿದ AIADMK ಪಕ್ಷದ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವುದನ್ನು ಅಣ್ಣಾಮಲೈ ಸ್ಪಷ್ಟವಾಗಿ ವಿರೋಧಿಸಿದ್ದರು. ಅಣ್ಣಾಮಲೈ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಆಗಿರುವವರೆಗೂ ತನ್ನ ಅಟ ನಡೆಯುವುದಿಲ್ಲ ಎಂಬುದನ್ನು ಅರಿತ ಎಡಪ್ಪಾಡಿ, ತನ್ನದೇ ಜಾತಿಯ ಮತ್ತೊಬ್ಬ ರಾಜಕೀಯದಲ್ಲಿ ತನಗಿಂತಲೂ ಎತ್ತರಕ್ಕೇರುವುದನ್ನು ಸಹಿಸದೇ, ತಮಿಳುನಾಡಿನ ಪಶ್ಚಿಮ (ಕೊಂಗು ನಾಡು) ಪ್ರದೇಶದಲ್ಲಿ ಪ್ರಧಾನವಾಗಿ ನೆಲೆಗೊಂಡಿರುವ ರಾಜಕೀಯವಾಗಿ ಪ್ರಭಾವಿ ಮತ್ತು ಕೃಷಿಕ ಜಾತಿಯವರಾದ ಅಣ್ಣಾಮೈಲೈ ಅವರನ್ನು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿ ತಮ್ಮ ಮಾತನ್ನು ಶಿರಸಾ ವಹಿಸುವ ನೈನಾರ್ ನಾಗೇಂತ್ರನ್ ಆವರನ್ನು ತಂದಾಗಲೇ ಬಹುಜನರಿಗೆ ಬೇಸರ ತಂದಿತ್ತು.

ರಾಜಕೀಯಕ್ಕೆ ಬಂದ ಕೆಲವೇ ವರ್ಷಗಳಲ್ಲಿ ತಮ್ಮ ಆಕ್ರಮಣಕಾರಿ ಪ್ರಚಾರ ಶೈಲಿ, ರಾಜಕೀಯ ವಿರೋಧಿಗಳ ವಿರುದ್ಧದ ನೇರ ವಾಗ್ದಾಳಿ ಮತ್ತು ರಾಜ್ಯಾದ್ಯಂತ ಅವರು ನಡೆಸಿದ ವ್ಯಾಪಕ ಪಾದಯಾತ್ರೆಗಳು ತಮಿಳುನಾಡಿನಲ್ಲಿ ಬಿಜೆಪಿಯನ್ನು ಒಂದು ಪ್ರಬಲ ಶಕ್ತಿಯಾಗಿ ಗುರುತಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ, ಅವರ ಪಕ್ಷದೊಳಗೇ ಅವರ ಏಳಿಗೆಯನ್ನು ಸಹಿಸಲಾರದೇ ಬಹಿರಂಗವಾಗಿ ಮಾತನಾಡ ತೊಡಗಿದರು, ತಮ್ಮ ಪರಿಶ್ರಮದಿಂದ ಹಿಂದಿನ ಚುನಾವಣೆಯಲ್ಲಿ ನಾಲ್ಕು ಶಾಸರಕರನ್ನು ಆಯ್ಕೆ ಮಾಡಿಕಳುಹಿಸಿದ್ದ ಅಣ್ಣಾಮಲೈ ಅವರಿಗೆ ಈ ಬಾರಿ ಸ್ಪರ್ಧಿಸಲು ಟಿಕೆಟ್ ಸಹಾ ನೀಡದೇ, ಕೆಲ ಕ್ಷೇತ್ರಗಳ ಪ್ರಚಾರ ಸಮಿತಿಗೆ ಅಧ್ಯಕ್ಷರನ್ನಾಗಿ ಮಾದಿದ್ದಕ್ಕೆ ಮನನೊಂದ ಅಣ್ಣಾಮಲೈ ರಾಜೀನಾಮೀ ನೀಡಿ ಕೇವಲ ಸಕ್ರೀಯ ಕಾರ್ಯಕರ್ತನಾಗಿಯೇ ಒಲ್ಲದ ಮನಸ್ಸಿನಿಂದಲೇ ಪಕ್ಷದ ಪರವಾಗಿ ಪ್ರಚಾರ ಮಾಡಿದ ಪರಿಣಾಮ ಈ ಬಾರೀ ಕೇವಲ ಒಂದೇ ಒಂದು ಸ್ಥಾನ ಪಡೆದುಕೊಂಡಾಗಲಾದರೂ ಅವರ ಸಾಮರ್ಥ್ಯದ ಅರಿವು ಬಿಜೆಪಿಗೆ ಆಗಬೇಕಿತ್ತು,

ದುರಾದೃಷ್ಟವಷಾತ್ ತಮಿಳುನಾಡು ಬಿಜೆಪಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ, ಪಕ್ಷದ ಅತ್ಯಂತ ಪ್ರಮುಖ ಮುಖವಾಗಿ ಹೊರಹೊಮ್ಮಿದ್ದಲ್ಲದೇ, ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿ, ದ್ರಾವಿಡ ರಾಜಕಾರಣದ ಕೋಟೆಯಲ್ಲಿ ಕಮಲ ಅರಳಿಸಲು ತೀವ್ರ ಶ್ರಮಿಸಿ, ತಮಿಳುನಾಡಿನಲ್ಲಿ ಬಿಜೆಪಿಯ ನೆಲೆಯನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದ್ದ ತಾಳ್ಮೆಯಸಾಕಾರ ಮೂರ್ತಿಯ ಪರಿಶ್ರಮವಾಗಲೀ, ಉತ್ಸಾಹವನ್ನಾಗಲೀ ಗಮನಿಸದ ಬಿಜೆಪಿ, ನಿರೀಕ್ಷಿಸಿದ್ದ ಸಂಖ್ಯೆಯ ಶಾಸಕರನ್ನು ಗೆಲ್ಲಿಸಿಕೊಡಲಿಲ್ಲ ಎಂಬುದನ್ನೇ ಮನಸ್ಸಿನಲ್ಲಿಟ್ಟುಕೊಂಡ್ಯ್ ಅವರನ್ನು ಮೂಲೆ ಗುಂಪು ಮಾಡುತ್ತಿದ್ದದ್ದನ್ನು ಗಮನಿಸಿದ ಅಣ್ಣಾಮಲೈ ನಿಮ್ಮ ದಾರಿ ನೀವು ನೋಡಿಕೊಳ್ಳಿ ನಮ್ಮ ಪಾಡನ್ನು ನಾನು ನೋಡಿಕೊಳ್ಳುತ್ತೇನೆ ಎಂದು ತಮ್ಮದೇ ಆದ “ಜಾತ್ಯತೀತ” ಮತ್ತು “ತಮಿಳು ಮೊದಲು” ಎಂಬ ದೃಷ್ಟಿಕೋನದೊಂದಿಗೆ ಹೊಸ ಪ್ರಾದೇಶಿಕ ರಾಜಕೀಯ ಪಕ್ಷ ಮತ್ತು ಜನಾಂದೋಲನವನ್ನು ಪ್ರಾರಂಭಿಸಲು ಹೊರಟಿರುವುದು, ತಮಿಳುನಾಡಿನಲ್ಲಿ ಅಧಿಕಾರಕ್ಕೇ ಬರಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದ ಬಿಜೆಪಿಯ ಮಹತ್ವಾಕಾಂಕ್ಷೆಗೆ ಬಿದ್ದ ದೊಡ್ಡ ಪೆಟ್ಟು ಎಂದರೂ ತಪ್ಪಾಗದು.

ಭಾರತದ ಸ್ವಾತ್ರಂತ್ರ ಹೊರಾಟದ ಸಮಯದಲ್ಲಿ ಬಹಳಷ್ಟು ಕೊಡುಗೆ ನೀಡಿದ್ದ ಮತ್ತು ಸ್ವಾತ್ರಂತ್ರಾನಂತರ ಆಡಳಿತಕ್ಕೆ ಬಂದ ನಾಯಕರು ತಮಿಳಿಗರೇ ಆಗಿದ್ದು, ಇನ್ನು ದೆಹಲಿಯ ಮಟ್ಟದ ನ್ಯಾಯಾಂಗ ಮತ್ತು ಕಾರ್ಯಾಂಗದಲ್ಲಿಯೂ ಅವರದ್ದೇ ಪ್ರಾಭಲ್ಯವಿದ್ದರೂ ಅದೇಕೋ ಏನೋ ತಮಿಳುನಾದಿನ ಜನರ ಮನಸ್ಥಿತಿ, ದ್ರಾವಿಡ ನಾಡಿನ ಮನಸ್ಥಿತಿಯಿಂದ ಹೊರಬರಲೇ ಇಲ್ಲಾ. ಬಹುಶಃ ಅಂದಿನ ರಾಜಕೀಯ ನಾಯಕರುಗಳೂ ಸಹಾ ತಮ್ಮ ರಾಜಕೀಯ ಅಸ್ಥಿತ್ವ ಮತ್ತು ಅಸ್ಮಿತೆಗಾಗಿ ಉತ್ತರ ಭಾರತ, ದಕ್ಷಿಣ ಭಾರತ, ತಮ್ಮ ತಮಿಳು ಭಾಷೆಯೇ ಅತ್ಯಂತ ಹಳೆಯ ಮತ್ತು ಶ್ರೇಷ್ಠ ಭಾಷೆ ಎಂಬ ಕಲ್ಪನೆ ಮೂಡಿಸುವ ಮೂಲಕ ಸಿನಿಮಾ ಹಿನ್ನಲೆಯ ದ್ರಾವಿಡ ಪಕ್ಷಗಳನ್ನೇ ಪರ್ಯಾಯವಾಗಿ ಆಡಳಿತಕ್ಕೆ ತರುತ್ತಿದ್ದರು.

ಈ ಬಾರಿ ತಮಿಳುನಾಡಿನಲ್ಲಿ ಮೊತ್ತ ಮೊದಲ ಬಾರಿಗೆ ಸಾಂಪ್ರದಾಯಿಕ ದ್ರಾವಿಡ ಪಕ್ಷದ ಹೊರತಾದ ಪಕ್ಷ ಅಭೂತಪೂರ್ವವಾಗಿ ಆಡಳಿತಕ್ಕೆ ಬಂದರೂ ವಿಜಯ್ ಅಪ್ಪಟ ತಮಿಳಿಗ ಮತ್ತು ಜನಪ್ರಿಯ ಸಿನಿಮಾ ನಟನಾಗಿದ್ದೂ ಇಷ್ಟು ದಿನಗಳ ಅವರ ಆಡಳಿತದ ವೈಖರಿ ಗಮನಿಸಿದಲ್ಲಿ ಅವರಿಗೂ ಇತರೇ ದ್ರಾವಿಡ ಪಕ್ಷಗಳಿಗೂ ಬಾರಿ ವೆತ್ಯಾವೇನೂ ಕಾಣುತ್ತಿಲ್ಲದಿರುವುದನ್ನು ಮನಗಂಡೇ. ಅಣ್ಣಾಮಲೈ ಅವರ ನಿರ್ಧಾರ ಸರಿ‌ ಇದೆ ಎಂದೆನಿಸುತ್ತದೆ. ತಮಿಳಿಗರ ಅಸ್ಮಿತೆ ಮತ್ತು ಅಸ್ಥಿತ್ವದ ಬಗ್ಗೆ ಚಿಂತಿಸುವ ತಮಿಳುನಾಡಿನಲ್ಲಿ ಉತ್ತರ ಭಾರತದದ ರಾಷ್ಟ್ರೀಯ ಪಕ್ಷವಾಗಿ ಭಾಜಪ ಪಶ್ಚಿಮ ಬಂಗಾಳದಂತೆ ಆಷ್ಟು ಬೇಗ ಜಯಗಳಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಕ್ರಿಶ್ಚಿಯನ್ ಮಿಷಿನರಿಗಳಿಂದ ಪ್ರಭಾವಿತರಾಗಿ ರಾಷ್ಟ್ರೀಯ ಮನಸ್ಥಿತಿ ಇಲ್ಲದಿರುವ ಅಲ್ಲಿಯ ಜನರಿಗೆ, ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಬೆಲೆ ಕೊಡುವಂತಂತಹ ಮತ್ತು ರಾಷ್ಟ್ರೀಯತೆಯ ವಿಚಾರಧಾರೆಯ ಯಾವ ಪಕ್ಷವಾದರೂ ಅಲ್ಲಿ ಅಧಿಕಾರಕ್ಕೆ ಅಷ್ಟು ಸುಲಭವಾಗಿ ಬರಲಾಗದು.

ಹೇಳೀ ಕೇಳಿ ಅಣ್ಣಾಮಲೈ ಅವರು ತಮಿಳುನಾಡಿನ ಪಶ್ಚಿಮ (ಕೊಂಗು ನಾಡು) ಪ್ರದೇಶದಲ್ಲಿ ಪ್ರಧಾನವಾಗಿ ನೆಲೆಗೊಂಡಿರುವ ರಾಜಕೀಯವಾಗಿ ಪ್ರಭಾವಿ ಮತ್ತು ಕೃಷಿಕರಾದ ಕೊಂಗು ವೆಲ್ಲಲರ್ ಗೌಂಡರ್ ಸಮುದಾಯಕ್ಕೇ ಸೇರಿದವರಾಗಿದ್ದಾರೆ. ಇನ್ನೂ ಸಣ್ಣ ವಯಸ್ಸಿನ, ಒಳ್ಳೆಯ ವಿದ್ಯೆ ಮತ್ತು ಬುದ್ಧಿ ಇರುವಂಹ ವ್ಯಕ್ತಿ. ರಾಜಕೀಯದಿಂದ ಅಧಿಕಾರ ಇಲ್ಲವೇ ಹಣ ಮಾಡುವ ಉಮ್ಮೇದಿಲ್ಲಾ. ಕೇವಲ ಮತ್ತು ಕೇವಲ ಜನರಿಗೆ ಒಳ್ಳೆಯನ್ನು ಮಾಡುವ ಮನಸ್ಥಿತಿಯುಳ್ಳವರಾಗಿರುವ ಕಾರಣ, ಈಗಾಗಲೇ ಎನ್ ಮಣ್ ಎನ್ ಮಕ್ಕಳ್ ಮೂಲಕ ರಾಜ್ಯಾದ್ಯಂತ ಪಾದ ಯಾತ್ರೆ ಮಾಡಿ ಚಿರಪರಿಚಿತರಾಗಿರುವ ಕಾರಣ ಮುಖ್ಯಮಂತ್ರಿ ವಿಜಯ್ ವಿರುದ್ಧ ಹೋರಾಟ ನಡೆಸಲು ಸೂಕ್ತವಾದ ವ್ಯಕ್ತಿಯಾಗಿರುವ ಕಾರಣ ಮುಂಬರುವ ಚುನಾವಣೆಗಳಲ್ಲಿ ತಮಿಳುನಾಡಿನ ಜನರು ಖಂಡಿತವಾಗಿಯೂ ಅಣ್ಣಾಮಲೈ ಅವರನ್ನು ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ.

ನಿಷ್ಟಾವಂತ ಮತ್ತು ಭ್ರಷ್ಟಾಚಾರಿಯಲ್ಲದ ಅಣ್ಣಾಮಲೈ ಅವರನ್ನು ಕಳೆದುಕೊಳ್ಳಲು ಇಚ್ಚಿಸದ ಅನೇಕ ಬಿಜೆಪಿ ನಾಯಕರು ಮತ್ತು ಅಭಿಮಾನಿಗಳು ಹೇಳುವಂತೆ, ಅಣ್ಣಾಮಲೈ ಅವರ ಈ ರಾಜಕೀಯ ಪ್ರಸಸನವೆಲ್ಲವೂ ಮೋದಿ ಮತ್ತು ಅಮಿತ್ ಶಾ ಆವರದ್ದೇ ಆಟ. ಆವರಿಗೆ ಮೋದಿ ಮತ್ತು ಶಾ ಅವರ ಮೇಲೆ ಪ್ರೀತಿ ಮತ್ತು ವಿಶ್ವಾಸವಿದೆ. ಅದೇ ಕಾರಣಕ್ಕೆ ಪಕ್ಷ ಬಿಟ್ಟು ಹೋಗುವಾಗಲೂ ಪಕ್ಷಕ್ಕಾಗಲೀ ಪಕ್ಷದ ಯಾವುದೇ ನಾಯಕರುಗಳಿಗಾಗಲೀ ಮುಜುಗರವಾಗದಂತೆ ಹೊರ ನಡೆದಿದ್ದಾರೆ. ಇವೆಲ್ಲವನ್ನು ಗಮನಿಸಿದಾಗ ಆಂಧ್ರ ಪ್ರದೇಶದಲ್ಲಿ ಪವನ್ ಕಲ್ಯಾಣ್ ತನ್ನದೇ ಆದ ಪಕ್ಷಕಟ್ಟಿಕೊಂಡು ಅಧಿಕಾರಕ್ಕೆ ಬಂದರೂ ಬಿಜೆಪಿಯವರೊಡನೆ ಸಖ್ಯ ಹೊಂದಿರುವ ಹಾಗೆ ಮುಂದೊಂದು ದಿನ ರಾಷ್ಟ್ರೀಯ ಮನೋಭವನೆಯನ್ನುಳ್ಳ ಅಣ್ಣಾಮಲೈ ಆವರೂ ಸಹಾ ಬಿಜೆಪಿಯವರೊಡನೆ ಕೈ ಜೋಡಿಸುವ ಸಂಧರ್ಭವನ್ನು ಅಲ್ಲಗಳಿಯಲಾಗದು. ಇವೆಲ್ಲವೂ ಸಹಾ ಆದರೆ, ಹೋದರೆ ಎನ್ನುವಂತಹ ವಿಷಯವಾಗಿದ್ದರೂ, ಸಹಾ ತಮಿಳುನಾಡಿನ ಪ್ರಸ್ತುತ ರಾಜಕೀಯವನ್ನು ಗಮನಿಸಿದಲ್ಲಿ ಅಲ್ಲಿ ಅಣ್ಣಾಮಲೈ ಮನಸ್ಥಿತಿಯಂತಹವರು ಅನಿವಾರ್ಯವಾಗಿದ್ದಾರೆ ಎನ್ನುವುದೇ ಸತ್ಯ.

ತಮ್ಮ ರಾಜಕೀಯ ಮುಂದಿನ ನಡೆಯ ಬಗ್ಗೆ ಕಳೆದ ಎರಡು ದಿನಗಳಿಂದಲೂ ಇದ್ದ ಅನಿಶ್ಚಿತತೆಗೆ 2026ರ ಜೂನ್ 5ರ ಮಧ್ಯಾಹ್ನ ಸಾಮಾಜಿಕ ಜಾಲತಾಣದ ಲೈವ್ ಮೂಲಕ ಗ್ಗೆ ಅಣ್ಣಾಮಲೈ ಅವರು ಮುಕ್ತವಾಗಿ ಮಾತನಾಡುತ್ತಾ, ಕಳೆದ 18 ತಿಂಗಳಿನಿಂದಲೂ ಬಹಳ ತಾಳ್ಮೆಯಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ತಮಿಳುನಾಡಿನ ವಿಧಾನಸಭೆ ಚುನಾವಣೆ ಮುಗಿದ ನಂತರ ನೀವು ಬಿಜೆಪಿಗೆ ರಾಜೀನಾಮೆ ಕೊಡಬಹುದು ಎಂದು ಬಿಜೆಪಿ ನಾಯಕರು ಹೇಳಿದ್ದಕ್ಕೆ ಗೌರವದಿಂದ ಕೇಳಿ ಇಂದು ಬಿಜೆಪಿ ಪಕ್ಷದಿಂದ ಹೊರ ಬಂದಿದ್ದೇನೆ. ತಮಿಳುನಾಡಿಗೆ ಹೊಸದೊಂದು ರಾಜಕೀಯ ಪಕ್ಷ ಅನಿವಾರ್ಯವಾಗಿದ್ದು, ಹಾಗಾಗಿ ನಾನು ತಮಿಳುನಾಡಿನಲ್ಲಿ ಹೊಸ ಪಕ್ಷವನ್ನು ಪ್ರಾರಂಭಿಸಲಿದ್ದೇನೆ ಎಂದು ಘೋಷಿಸಿದ್ದಾರೆ. ಯುವಕರು ಹಾಗೂ ಎಲ್ಲರನ್ನೂ ಒಳಗೊಂಡ, ಸಾಮಾನ್ಯರಿಗಾಗಿಯೇ ಬೇಕಾಗಿರುವ ‘ಕಾಮನ್‌ಮನ್’ ಪಾಲಿಟಿಕ್ಸ್‌ ಮಾಡುವಂತಹ ರಾಜಕೀಯ ಪಕ್ಷವನ್ನು ಪ್ರಾರಂಭಿಸಲಿದ್ದೇನೆ. ಪ್ರಸ್ತುತ ರಾಜಕಾರಣದಲ್ಲಿ ಶುದ್ಧ ಹಾಗೂ ದಕ್ಷ ನಾಯಕರ ಅವಶ್ಯಕವಿದ್ದು, ಕೇವಲ ಒಬ್ಬ ಮುಖ್ಯಮಂತ್ರಿ ಅಥವಾ ಒಂದು ಕುಟುಂಬ ಅಥವಾ ಕೆಲವು ರಾಜಕೀಯ ಪಕ್ಷ ಇಲ್ಲವೇ, ಶಾಸಕರುಗಳಿಂದ ತಮಿಳುನಾಡಿನ ಬದಲಾವಣೆ ಸಾಧ್ಯವಿಲ್ಲ. ಇಡೀ ತಮಿಳುನಾಡಿನ ಜನತೆ ಒಗ್ಗೂಡಿದಾಗ ಮಾತ್ರವೇ ಬದಲಾವಣೆ ಮಾಡಲು ಸಾಧ್ಯ ಎಂದು ಪ್ರತಿಪಾದಿಸಿದ್ದಲ್ಲದೇ, ತಮ್ಮ ಪಕ್ಷದಲ್ಲಿ ನಿರಂತರ ನಾಯಕರು ಎನ್ನುವ ಸಂಪ್ರದಾಯಕ್ಕೆ ತಿಲಾಂಜಲಿ ಹಾಡುತ್ತೇವೆ. ಆಯಾಯಾ ಕಾಲಘಟ್ಟದಲ್ಲಿ ಯಾರು ದಕ್ಷ, ಪ್ರಾಮಾಣಿಕ ಮತ್ತು ಸೂಕ್ತ ವ್ಯಕ್ತಿ ಎನಿಸುತ್ತಾರೋ ಅಂತಹವರು ನಾಯಕರಾಗುತ್ತಾರೆ ಎಂದಿದ್ದಾರೆ. ಅದೇ ರೀತಿ ತಮ್ಮ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವವರಿಗೆ ಚುನಾವಣೆಗೂ ಬಹಳ ತಿಂಗಳುಗಳ ಮುನ್ನವೇ ತರಭೇತಿ ನೀಡಿ ಅಲ್ಲಿ ಸೂಕ್ತರೀತಿಯಲ್ಲಿ ಪರಿಣಿತರಾದವರು ಮಾತ್ರವೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಿರುವುದು ನಿಜಕ್ಕೂ ಅದ್ಭುತವಾದ ಕಲ್ಪನೆಯಾಗಿದೆ.

ಅಣ್ಣಾಮಲೈ ಅವರ ಈ ನಡೆಯನ್ನು ಬಹುತೇಕ ತಮಿಳಿಗರು ಮೆಚ್ಚಿಕೊಂದಿದ್ದು. ಓ ನಮ್ಮ ನಾಯಕರೇ, ಬನ್ನಿ ಮತ್ತು ನಮ್ಮನ್ನು ಮುನ್ನಡೆಸಿ, fearless minds has no limits (ನಿರ್ಭೀತ ಮನಸ್ಸುಗಳಿಗೆ ಮಿತಿಯಿಲ್ಲ) ಎಂಬ ಘೋಷಣೆಗಳನ್ನು ಹೊಂದಿರುವ ಪೋಸ್ಟರ್‌ಗಳು ತಮಿಳುನಾಡಿನ ಪ್ರಮುಖ ನಗರದ ಪ್ರಮುಖ ಸ್ಥಳಗಳಲ್ಲಿ ಶಕ್ತಿ ಪ್ರದರ್ಶನ ಎಂಬಂತೆ ಕಾಣಿಸಿಕೊಂಡಿದ್ದು, ಪ್ರಸ್ತುತ ಮುಖ್ಯಮಂತ್ರಿ ವಿಜಯ್ ಹೊರತು ಪಡಿಸಿ ಅತಿ ಹೆಚ್ಚು ಜನಸ್ತೋಮವನ್ನು ಸೆಳೆಯುವ ಏಕೈಕ ನಾಯಕರಾಗಿ ಅಣ್ಣಾಮಲೈ ಗುರುತಿಸಿಕೊಂಡಿದ್ದಾರೆ. ದೆಹಲಿಯ ಬಿಜೆಪಿ ನಾಯಕರು ತಮಿಳುನಾಡಿನ ರಾಜಕೀಯ ಮತ್ತು ಅಣ್ಣಾಮಲೈ ಆವರ ಸಾಮಥ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ಎಡವಿದ್ದು, ಒಂದು ವೇಳೆ ಅಣ್ಣಾಮಲೈ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಲ್ಲಿ ತಮಿಳು ನಾಡಿನ ರಾಜಕೀಯ ಚಿತ್ರಣವೇ ಬದಲಾಗಿರುತ್ತಿದ್ದು ಈ ಪರಿಯಾಗಿ ನಟ ವಿಜಯ್ ಇರುತ್ತಿರಲಿಲ್ಲ ಎಂದು ತಮಿಳುನಾಡಿನ ಬಿಜೆಪಿಯ ಹಿರಿಯ ನಾಯಕರೊಬ್ಬರೇ ವ್ಯಕ್ತಪಡಿಸಿರುವುದು ರೈಲು ಹೋದ ಮೇಲೆ ಟಿಕೆಟ್ ಪಡೆದುಕೊಂಡಂತಾಗಿದೆ ಎಂದರೂ ತಪ್ಪಾಗದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment