ಕಾಲಜ್ಞಾನಿ ಕೈವಾರ ತಾತಯ್ಯ – ಭಕ್ತಿ, ಜ್ಞಾನ ಮತ್ತು ಭವಿಷ್ಯದೃಷ್ಟಿಯ ಮಹಾನ್ ಸಂತ

ಕರ್ನಾಟಕದ ಆಧ್ಯಾತ್ಮಿಕ ಇತಿಹಾಸದಲ್ಲಿ ಅನೇಕ ಮಹಾನ್ ಸಂತರು, ದಾರ್ಶನಿಕರು ಮತ್ತು ಸಮಾಜ ಸುಧಾರಕರು ಜನಿಸಿರುವುದು ನಮ್ಮ ಹೆಮ್ಮೆ. ಅಂತಹ ಮಹಾನ್ ಸಂತರಲ್ಲಿ ಪ್ರಮುಖರಾಗಿ ಕೈವಾರ ತಾತಯ್ಯನವರೂ ಒಬ್ಬರಾಗಿದ್ದು, ಕಾಲಜ್ಞಾನಿ ಕೈವಾರ ತಾತಯ್ಯ ಎಂದೇ ಜನಮಾನಸದಲ್ಲಿ ಜನಪ್ರಿಯವಾಗಿದ್ದಾರೆ. ಅವರು ಕೇವಲ ಒಬ್ಬ ಭಕ್ತ, ಕವಿಯಷ್ಟೇ ಅಲ್ಲದೇ, ಯೋಗಿ, ದಾರ್ಶನಿಕ, ಸಮಾಜ ಸುಧಾರಕ ಹಾಗೂ ಕಾಲಜ್ಞಾನವನ್ನು ಹೊಂದಿದ್ದ ಮಹಾಪುರುಷರರಾಗಿದ್ದ ಕಾರಣ, ಇಂದಿಗೂ ಕರ್ನಾಟಕದ ಲಕ್ಷಾಂತರ ಭಕ್ತರು ಕೈವಾರ ತಾತಯ್ಯರನ್ನು ದೈವಸ್ವರೂಪರಾಗಿ ಪೂಜಿಸುತ್ತಾರೆ. ಅವರ ಜೀವನ, ಕೃತಿಗಳು ಮತ್ತು ಸಂದೇಶಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶನ ನೀಡುತ್ತಿವೆ


ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಶ್ರೀಕ್ಷೇತ್ರ ಕೈವಾರಕ್ಕೆ ದ್ವಾಪರಯುಗದ ನಂಟಿದ್ದು, ಆಗ ಈ ಪ್ರದೇಶ ಏಕಚಕ್ರನಗರವಾಗಿತ್ತು ಎಂಬ ಪ್ರತೀತಿ ಇದ್ದು ಅದಕ್ಕೆ ಪುರಾವೆಯಾಗಿ ಭೀಮ ಬಕಾಸುರ ಬೆಟ್ಟವು ಈ ಪ್ರದೇಶದಲ್ಲಿದ್ದು, ಪಾಂಡವರು ವನವಾಸದ ಸಮಯದಲ್ಲಿ ಈ ಪ್ರದೇಶಕ್ಕೆ ಬಂದಿದ್ದಾಗ ಸ್ವತಃ ಭೀಮಸೇನನೇ ಶ್ರೀ ಭೀಮಲಿಂಗೇಶ್ವರ ದೇವಸ್ಥಾನವನ್ನು ಸ್ಥಾಪಿಸಿದನೆಂದು ಐತಿಹ್ಯವಿದೆ. ಇಂತಹ ಪವಿತ್ರ ಭೂಮಿಯಲ್ಲಿ ಮಹಾನ್ ಸಂತ ಕಾಲಜ್ಞಾನ-ಭವಿಷ್ಯವಾಣಿ ನುಡಿದ ಶ್ರೀ ಯೋಗಿನಾರೇಯಣ ಯತೀಂದ್ರರು ಜನ್ಮವೆತ್ತಿದರು. ಬಲಿಜ ಜನಾಂಗಕ್ಕೆ ಸೇರಿದ ಬಳೆ ವ್ಯಾಪಾರ ಮಾಡುತ್ತಿದ್ದ ಪರಮ ದೈವಭಕ್ತರಾಗಿದ್ದಂತಹ ಶ್ರೀಮತಿ ಮುದ್ದಮ್ಮ ಮತ್ತು ಶ್ರೀ ಕೊಂಡಪ್ಪ ದಂಪತಿಗಳು ತಮಗೆ ಮಕ್ಕಳನ್ನು ದಯಪಾಲಿಸಬೇಕೆಂದು ತಮ್ಮ ಕುಲದೇವರಾದ ಅಮರನಾರಾಯಣನನ್ನು ಪ್ರಾರ್ಥಿಸಿದಾಗ ಆ ಸ್ವಾಮಿಯ ಕೃಪೆಯಿಂದ ಮುದ್ದಮ್ಮ ಗರ್ಭವತಿಯಾಗುತ್ತಾಳೆ. ಆದರೆ ಆಸ್ತಿಯ ದುರಾಸೆಯಿಂದ ಮುದ್ದಮ್ಮ ಗರ್ಭವತಿ ಇದ್ದಾಗಲೇ ಅಕೆಯ ಸೋದರತ್ತೆ ವಿಷಕೊಟ್ಟು ಗರ್ಭಪಾತ ಮಾಡಲೆತ್ನಿಸಿದಾಗ, ಸರ್ಪ ಆದಿಶೇಷನೇ ಬಂದು ಕಾಪಾಡಿದ ಪರಿಣಾಮ 1726 ರಲ್ಲಿ ಜನಿಸಿದ ಮುದ್ದಾದ ಮಗುವಿಗೆ ನಾರಾಣಪ್ಪ ಎಂದು ಹೆಸರಿಡುತ್ತಾರೆ. ದುರಾದೃಷ್ಟವಷಾತ್ ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡ ಕಾರಣ, ನಾರಾಣಪ್ಪನು ಅಲ್ಲಿನ ಅಮರನಾರಾಯಣ ದೇವಸ್ಥಾನದ ಅರ್ಚಕರ ಆಶ್ರಯಲ್ಲಿ ಬೆಳೆಯುತ್ತಾರೆ. ಓದಿನಲ್ಲಿ ಅಷ್ಟೇನೂ ಆಸಕ್ತಿ ಇಲ್ಲದೇ ಯಾವಾಗಲೂ ಆಧ್ಯಾತ್ಮದಲ್ಲಿ ಚಿಂತನ ಮಂಥನ ನಡೆಸುವುದರಲ್ಲಿ ಮಗ್ನನಾಗಿರುತ್ತಿದ್ದನು. ಸಾಕು ತಂದೆ ತಾಯಿಗಳು ಹೇಳುತ್ತಿದ್ದ ಪುರಾಣಗಳು, ಪುಣ್ಯಪುರುಷರ ಕಥೆಗಳಿಂದ ಸ್ಫೂರ್ತಿಪಡೆದ ನಾರಾಣಪ್ಪನಿಗೆ ಲೌಕಿಕ ಬದುಕಿಗಿಂತಲೂ ಅಲೌಕಿಕ ವಿಷಯಗಳಲ್ಲಿಯೇ ಆಸಕ್ತಿ.

ತಮ್ಮೂರಿನ ಕೂಲಿಮಠದಲ್ಲಿ ಸಂಸ್ಕೃತ, ಕನ್ನಡ, ತೆಲುಗು ಭಾಷೆಗಳನ್ನು ಕಲಿತು ಪ್ರೌಢ ವಯಸ್ಕನಾದಾಗ, ಹಿರಿಯರ ಸಮ್ಮುಖದಲ್ಲಿ ತಮ್ಮ ಸೋದರತ್ತೆಯ ಮಗಳು ಮುನಿಯಮ್ಮ(ಲಕ್ಷ್ಮಮ್ಮ) ರೊಂದಿಗೆ ವಿವಾಹವಾಗಿ ಅವರಿಬ್ಬರ ಸುಂದರ ದಾಂಪತ್ಯದ ಕುರುಹಾಗಿ, ಮುದ್ದಮ, ಪೆದ್ದಕೊಂಡಪ್ಪ, ಚಿಕ್ಕಕೊಂಡಪ್ಪ ಎಂಬ ಮೂವರು ಮಕ್ಕಳಾಗಿ ಸಂಸಾರ ದೊಡ್ಡದಾದರೂ, ನಾರಣಪ್ಪನಿಗೆ ಜೀವನ ನಿರ್ವಹಣೆಗಾಗಿ ಕೆಲಸ ಮಾಡುವುದು ಬಿಟ್ಟು ಮೂರು ಹೊತ್ತೂ ಮೂಗು ಹಿಡಿದು ದೇವರ ಧ್ಯಾನ ಮಾಡುತ್ತಾ ಕುಳಿತಿರುವುದನ್ನು ಕಂಡು ಬೇಸತ್ತ ಆವರ ಪತ್ನಿ, ತಮ್ಮ ಕುಲಕಸುಬಾದ ಬಳೆಯನ್ನು ನಾರಾಣಪ್ಪರ ಕೈಗಿತ್ತು, ಪ್ರತೀ ದಿನ ಇಂತಿಷ್ಟು ವ್ಯಾಪಾರ ಮಾಡಿ ಹಣವನ್ನು ತರಲೇ ಬೇಕೆಂದು ತಾಕೀತು ಮಾಡುತ್ತಾಳೆ. ಲೋಕದ ಸ್ತ್ರೀಯರೆಲ್ಲ ತಾಯಿ ಸಮಾನರೆಂದು ಭಾವಿಸದ್ದ ನಾರಾಣಪ್ಪರು, ಹೆಣ್ಣುಮಕ್ಕಳಿಗೆ, ಸುಮಂಗಲಿಯರಿಗೆಲ್ಲ ಶುದ್ಧಭಾವದಿಂದ ಬಳೆತೊಡಿಸಿ ಅವರು ಕೊಟ್ಟಷ್ಟೇ ಕಾಸನ್ನು ಪಡೆದು ಅಕಸ್ಮಾತ್ ಅವರು ಕೊಡದೇ ತಾತಯ್ಯ ಕಾಸಿಲ್ಲವೆಂದರೆ ಎಲ್ಲ ಅವನಿಚ್ಛೆ ಎನ್ನುತ್ತಿದ್ದ ಕಾರಣ ಅದೇಷ್ಟೋ ಬಾರಿ ಸಂಜೆ ವೇಳೆಗೆ ಒದ್ದ ಬಳೆಯಲ್ಲಾ ಮಾರಿದರೂ ಬರಿಗೈಲಿ ಮನೆಗೆ ಬರುತ್ತಿದ್ದದ್ದನ್ನು ಕಂಡು ಮನೆಯಲ್ಲಿ ಅನೇಕ ಬಾರಿ ಜಗಳವಾಗುತ್ತಿತ್ತು.

ಅದೊಮ್ಮೆ ಎಂದಿನಂತೆ ಬಳೆಮಲಾರವನ್ನು ಹೆಗಲಿಗೇರಿಸಿ ಮೂಗೊಳಿ ವೆಂಕಟಗಿರಿ ಕಣಿವೆಯಲ್ಲಿ ಸಾಗುತ್ತಿರುವಾಗ ಅವರಿಗೆ ಯೋಗಿಗಳೊಬ್ಬರ ಪರಿಚಯವಾಗಿ ಅವರಿಂದ ಓಂ ನಮೋ ನಾರೇಯಣಾಯ ಎಂಬ ಬೀಜಾಕ್ಷರಿ ಮಂತ್ರೋಪದೇಶವಾಗಿ, ಬಾಯಲ್ಲಿ ಬೆಣಚು ಕಲ್ಲು ಇಟ್ಟುಕೊಂಡು ಅದು ಕಲ್ಲು ಸಕ್ಕರೆ ಆಗುವವರೆಗೂ ಈ ಮಂತ್ರವನ್ನು ಜಪಿಸಿದಲ್ಲಿ, ನೀನು ಶ್ರೀಹರಿಯ ಕೃಪಾಕಟಾಕ್ಷದಿಂದ ದೈವಾಂಶಸಂಭೂತನಾಗಿ ಯೋಗಸಿದ್ಧಿ ಹೊಂದುವೆ ಎಂಬ ಆಶೀರ್ವಾದ ಪಡೆದರು. ಗುರುಗಳಿಂದ ಆಶೀರ್ವಚನ ಪಡೆದ ನಂತರ ತಪಸ್ಸಿಗೆ ಪ್ರಶಸ್ತವೆನಿಸಿದ ನರಸಿಂಹ ಗುಹೆಯಲ್ಲಿ ಕುಳಿತು ಬಾಯಲ್ಲಿ ಬೆಣಚುಕಲ್ಲನ್ನು ಇರಿಸಿಕೊಂಡು ಆ ಬೀಜಾಕ್ಷರಿ ಮಂತ್ರವನ್ನು ಜಪಿಸಲು ಪ್ರಾರಂಭಿಸುತ್ತಿದ್ದಂತೆಯೇ, ನೀನು “ಯೋಗಿ ನಾರೇಯಣ” ಎಂಬ ಹೆಸರಿನಿಂದ ಪ್ರಖ್ಯಾತನಾಗುವೇ ಎಂಬ ಅಶರೀರವಾಣಿಯಾಯಿತಂತೆ. ಅದಾವುದಕ್ಕೂ ತಲೆ ಕೆಡಸಿಕೊಳ್ಳದೇ, ತಮ್ಮ ಪಾಡಿಗೆ ತಾವು ಸುಮಾರು ಮೂರು ವರುಷಗಳ ಕಾಲ ಮಾಡಿದ ಕಠಿಣ ತಪದ ಫಲವಾಗಿ ಅವರ ಬಾಯಲ್ಲಿದ್ದ ಬೆಣಚು ಕಲ್ಲು ಸಕ್ಕರೆಯಾಗುವಷ್ಟರಲ್ಲಿ ಅವರಿಗೇ ಅರಿವಿಲ್ಲದಂತೆ ಶ್ರೀ ಅಮರ ನಾರಾಯಣನ ಪರಮ ಭಕ್ತರಾದ್ದಲ್ಲದೇ, ಆಧ್ಯಾತ್ಮಿ ರಹಸ್ಯಗಳನ್ನು ಅನುಭವವೇದ್ಯ ಸತ್ಯಸಂಗತಿಗಳನ್ನು ಅರಿತು, ಮುಂದೆ ಅದೇ ಅನುಭವಗಳ ಸಾರವನ್ನೇ ಲೋಕ ಕಲ್ಯಾಣಕ್ಕಾಗಿ ವೇದಾಂತದ ವಿಷಯಗಳನ್ನು ಬೋಧಿಸುತ್ತಾ, ಜನಮಾನಸದಲ್ಲಿ ಭಕ್ತಿಭಾವ ಬಿತ್ತುವಂಥ ಭಕ್ತಿಗೀತೆಗಳನ್ನು ರಚಿಸುತ್ತಾ, ದೈವೀಕ ಪವಾಡಗಳ ಮೂಲಕ ಸನ್ಮಾರ್ಗ ತೋರುತ್ತ ಮಹಾನ್ ಭವಿಷ್ಯತ್ ಜ್ಞಾನಿಗಳಾಗಿ ಕಾಲಜ್ಞಾನವನ್ನು ರಚಿಸಿ ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರೆಂದೇ ಪ್ರಖ್ಯಾತರಾಗಿ ಸುಮಾರು 110 ವರುಷಗಳಷ್ಟು (1726-1836) ಸುದೀರ್ಘ ಕಾಲ ಜನೋಪಕಾರಿಯಾಗಿ ಜೀವಿಸಿ ಪರಾಕಾಯ ಪ್ರವೇಶ ಮಾಡಿ ಸಜೀವರಾಗಿಯೇ ಕೈವಾರದಲ್ಲೇ ಸಮಾಧಿಯಾದರು.



ಸಾಮಾನ್ಯ ಜನರ ಊಹೆಗೂ ನಿಲುಕದಂತೆ ತಾತಯ್ಯನವರು ತಮ್ಮ ಅರಿವಿಲ್ಲದಂತೆಯೇ ಮಾಡುತ್ತಿದ್ದ ಅನೇಕ ಕಾರ್ಯಗಳು ಪವಾಡ ಎನಿಸಿಕೊಂದಿದ್ದಕ್ಕೆ ಈ ಕೆಲವೊಂದು ಪ್ರಕರಣಗಳೇ ಸಾಕ್ಷಿ,

* ದನಕಾಯುವ ಹುಡುಗರು ತಂದು ಕೊಡುತ್ತಿದ್ದ ಬೆಣಚುಕಲ್ಲಗಳನ್ನೇ ಸಿಹಿಯಾದ ಕಲ್ಲು ಸಕ್ಕರೆಯಾಗಿಸಿ ಅವರಿಗೇ ಹಂಚಿ ಸಂತೋಷಪಡುತ್ತಿದ್ದರು.

* ಆಲೆಮನೆಯಲ್ಲಿ ಕೊತ ಕೊತನೆ ಕುದಿಯುವ ಕೊಪ್ಪರಿಗೆಯಿಂದ ಕೈಹಾಕಿ ಬೆಲ್ಲವ ತೆಗೆದು ಹಸಿದ ಕುರಿಕಾಯುವವರಿಗೆ ನೀಡುತ್ತಿದ್ದರು.

* ಕುರುಡ ಮಲಯ್ಯ ಶ್ರೀ ವೆಂಕಟರಮಣನನ್ನು ಪ್ರಾರ್ಥಿಸಿ ಒಂದು ಕಣ್ಣು ಪಡೆದು, ಇನ್ನೊಂದು ಕಣ್ಣನ್ನು ಯೋಗೀಂದ್ರರಲ್ಲಿ ಬೇಡಿದಾಗ ಕಣ್ಣನ್ನು ಕರುಣಿಸಿದರು.

* ವಡಿಗೇನಹಳ್ಳಿಯಲ್ಲಿದ್ದ ತಮ್ಮ ಶಿಷ್ಯ ಪೂವಯ್ಯರ ಮನೆಗೆ ಹೋಗಿದ್ದಾಗ,ಅನಾವೃಷ್ಟಿಗೆ ತುತ್ತಾಗಿದ್ದ ಆ ಹಳ್ಳಿಗೆ ಮಳೆಬರಿಸಲು ಅಲ್ಲಿನ ಗ್ರಾಮಸ್ಥರು ಕೋರಿಕೊಂಡಾಗ, ಭಕ್ತಿಯಿಂದ ಅಷ್ಟದಿಕ್ಪಾಲಕರನ್ನು ಪ್ರಾರ್ಥಿಸಿ ಧೋ ಎಂದು ಮಳೆ ಸುರಿಸಿದ್ದರಂತೆ.
* ಪ್ರತಿದಿನ ಮುಂಜಾಣೆ ತಮ್ಮ ಆಶ್ರಮದ ಮರದ ಮೇಲೆ ಕುಳಿತಿರುತ್ತಿದ್ದ ಗರುಡ ದರ್ಶನ ಮಾಡಿ ಕೈ ಮುಗಿಯುತ್ತಿದ್ದ ತಮ್ಮ ದಿನಚರಿಯನ್ನು ಆರಂಭಿಸುತ್ತಿದ್ದ ತಾತಯ್ಯನವರನ್ನು ಅವಮಾನಿಸುವ ಉದ್ದೇಶದಿಂದ ಮುಸಲ್ಮಾನರೊಬ್ಬರು ಕೃತಕವಾಗಿ ಮಣ್ಣಿನಿಂದ ತಯಾರಿಸಿದ ಗರುಡ ಪಕ್ಷಿಯನ್ನು ಆ ಮರದ ಮೇಲೆ ಇಟ್ಟಾಗ, ತಾತಯ್ಯನವರು ಆ ಮಣ್ಣಿನ ಕೃತಕ ಪಕ್ಷಿಗೆ ಜೀವ ಬರಿಸಿ ಹಾರುವಂತೆ ಮಾಡಿದ್ದರಂತೆ

* ಅದೊಮ್ಮೆ ತಾತಯ್ಯನವರು ತಮ್ಮ ಶಿಷ್ಯರ ಸಮ್ಮುಖದಲ್ಲಿದ್ದಾಗ, ಇದ್ದಕ್ಕಿದ್ದಂತೆಯೇ ತಮ್ಮ ಕೈಗಳನ್ನು ಉಜ್ಜಿಕೊಂಡಾಗ, ಅವರ ಕೈಗಳಿಂದ ಹೊಗೆಯಾಡುತ್ತಿದ್ದದ್ದನ್ನು ಕಂಡು ಗಾಬರಿಯಾದ ಶಿಷ್ಯರು, ಸ್ವಾಮೀ ಇದೇನಿದು ಎಂದು ಕೇಳಿದಾಗ ತಿರುಪತಿಯಲ್ಲಿ ಶ್ರೀನಿವಾಸನ ಪೀತಾಂಬರಕ್ಕೆ ಬೆಂಕಿ ಹತ್ತಿಕೊಂಡಿತ್ತು ಅದನ್ನು ಆರಿಸಿದೆ ಎಂದರಂತೆ, ಅದೇ ರೀತಿಯಾಗಿ ತಿರುಪತಿಯಲ್ಲೂ ಬೆಂಕಿಯ ಆರಿಸುವುದನ್ನು ನೋಡಿದ್ದ ಅರ್ಚಕರು ಯತೀಂದ್ರರ ಮಹಿಮೆಯನ್ನು ಕೊಂಡಾಡಿ ಪ್ರಚಾರ ಮಾಡಿದರು.

* ಪ್ರತಿದಿನವೂ ಮಠದ ಆವರಣದಲ್ಲಿರುವ ಕೊಳದಲ್ಲಿ ಬಹಳ ಹೊತ್ತು ಮುಳುಗಿ ಮೇಲಕ್ಕೆ ಬರುತ್ತಿದ್ದನ್ನು ಗಮನಿಸಿದ ಪಾದ್ರಿಯೊಬ್ಬರು ಆಷ್ಟು ಹೊತ್ತು ನೀರಿನಲ್ಲಿ ಏನು ಮಾಡುತ್ತೀರೀ? ಎಂದು ಕೇಳಿದಾಗ, ತಿರುಪತಿಯಲ್ಲಿ ವೇಂಕಟರಮಣನ ಪೂಜಾ ಸಮಯದಲ್ಲಿ ಅಲ್ಲಿಗೆ ಹೋಗಿ ಬರುತ್ತಿರುವೆನೆಂದು ತಾತಯ್ಯನವರು ಹೇಳಿದ್ದನ್ನು ಖಚಿತ ಪಡಿಸಿಕೊಳ್ಳುವ ಸಲುವಾಗಿ ತಿರುಪತಿ ಧರ್ಮಾದಿಕಾರಿಗಳಿಗೆ ಪತ್ರ ಬರೆದು ಅದು ಸತ್ಯವೆಂದು ತಿಳಿದು ತಾತಯ್ಯನವರ ಅಪಾರ ಮಹಿಮೆಯನ್ನು ಕೊಂಡಾಡಿದ್ದರಂತೆ.

* ತಿರುಪತಿಯ ಅರ್ಚಕರಿಂದ ಆದ ತಪ್ಪಿನಿಂದಾಗಿ ಶ್ರೀ ಬಾಲಾಜಿಯ ರಥ ಚಲಿಸದಂತಾದಾಗ, ಅವರ ತಪ್ಪನ್ನು ಮನ್ನಿಸಿ ರಥ ಚಲಿಸುಸುವಂತೆ ತಾತಯ್ಯನವರು ಮಾಡಿದರು ಎಂದು ಭಕ್ತಾದಿಗಳ ನಂಬಿಕೆಯಾಗಿದೆ.


ಭವಿಷ್ಯದಲ್ಲಿ ಸಂಭವಿಸಬಹುದಾದ ಅನೇಕ ಸಾಮಾಜಿಕ, ರಾಜಕೀಯ ಮತ್ತು ನೈತಿಕ ಬದಲಾವಣೆಗಳ ಬಗ್ಗೆ ಅವರು ರಚಿಸಿದ ಕಾಲಜ್ಞಾನ ಗ್ರಂಥಗಳು ಮತ್ತು ಭವಿಷ್ಯವಾಣಿಗಳಿಂದಾಗಿ ಆವರು ಕಾಲಜ್ಞಾನಿಗಳಾದರು. ಅವರು ತಮ್ಮ ಗ್ರಂಥದಲ್ಲಿ ಪ್ರಸ್ತಾಪಿಸಿದ ಧರ್ಮ ಮತ್ತು ಅಧರ್ಮಗಳ ನಡುವಿನ ಸಂಘರ್ಷ, ಕುಟುಂಬ ಮೌಲ್ಯಗಳ ಕುಸಿತ, ಪ್ರಕೃತಿ ವಿಕೋಪಗಳ ಹೆಚ್ಚಳ, ತಂತ್ರಜ್ಞಾನದ ವೇಗದ ಬೆಳವಣಿಗೆ, ಮಾನವೀಯ ಮೌಲ್ಯಗಳ ಕುಗ್ಗುವಿಕೆ, ಧರ್ಮದ ಪುನರುತ್ಥಾನ ಇವೆಲ್ಲವೂ ನಂತರದ ದಿನಗಳಲ್ಲಿ ನಿಜವಾದ ಕಾರಣ ಅವರ ಅಪಾರ ಭಕ್ತಾದಿಗಳು ಇಂದಿಗೂ ಅವರನ್ನು ಕಾಲಜ್ಞಾನಿ ಎಂದೇ ಆರಾಧಿಸುತ್ತಾರೆ.

ಕೈವಾರ ತಾತಯ್ಯರು ಕನ್ನಡ ಸಾಹಿತ್ಯಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕೃತಿಗಳಲ್ಲಿ ಭಕ್ತಿ, ತತ್ವಜ್ಞಾನ ಮತ್ತು ಜೀವನದ ಮೌಲ್ಯಗಳು ಪ್ರತಿಬಿಂಬಿಸುತ್ತವೆ. ಅವರ ಪ್ರಮುಖ ಕೃತಿಗಳಲ್ಲಿ, ಭಗವಾನ್ ಶ್ರೀಕೃಷ್ಣನ ಜೀವನ, ಬಾಲಲೀಲೆಗಳು ಮತ್ತು ಧರ್ಮೋಪದೇಶಗಳನ್ನು ಸುಂದರವಾಗಿ ವರ್ಣಿಸುವ ಶ್ರೀ ಕೃಷ್ಣ ಲೀಲಾಮೃತ ಕೃತಿ, ಚಿಂತಾಮಣಿ ಕ್ಷೇತ್ರದ ಮಹಿಮೆ ಮತ್ತು ಆಧ್ಯಾತ್ಮಿಕ ಮಹತ್ವವನ್ನು ವಿವರಿಸುವ ಚಿಂತಾಮಣಿ ಮಹಾತ್ಮೆ ಕೃತಿ, ಈಗಾಗಲೇ ತಿಳಿಸಿದಂತೆ ಭವಿಷ್ಯದ ಘಟನೆಗಳ ಕುರಿತು ಅವರ ದಾರ್ಶನಿಕ ಚಿಂತನೆಗಳು ಮತ್ತು ಭವಿಷ್ಯವಾಣಿಗಳ ಸಂಕಲನ ಕಾಲಜ್ಞಾನ, ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವಂತಹ ಭಕ್ತಿ ಮತ್ತು ನೈತಿಕ ಸಂದೇಶಗಳನ್ನು ಒಳಗೊಂಡ ಅನೇಕ ಕೀರ್ತನೆಗಳನ್ನು ರಚಿಸಿದ್ದು ಆ ಹಾಡುಗಳನ್ನು ಇಂದಿಗೂ ಅನೇಕರು ಹಾಡುತ್ತಿದ್ದಾರೆ.

ಕೈವಾರ ತಾತಯ್ಯನವರ ಕುಲಬಾಂಧವರೇ ಆಗಿದ್ದಂತಹ ಪ್ರಖ್ಯಾತ ಭಾರತೀಯ ಶಿಕ್ಷಣ ತಜ್ಞ, ಲೋಕೋಪಕಾರಿ, ಉದ್ಯಮಿ ಮತ್ತು ಖ್ಯಾತ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಎಂ.ಎಸ್.ರಾಮಯ್ಯನವರು ಕೈವಾರದಲ್ಲಿ ಶ್ರೀ ಯೋಗಿನಾರೇಯಣ ಯತೀಂದ್ರ ಆಶ್ರಮ ಟ್ರಸ್ಟ್ ಸ್ಥಾಪಿಸಿ, ಶ್ರೀ ಕೈವಾರ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿಕಾರ್ಯಗಳನ್ನು ಮಾಡಿದ್ದಾರೆ. ಯತೀಂದ್ರರ ಸಮಾಧಿ ಸ್ಥಾನ ಅರ್ಥಾತ್ ಬೃಂದಾವನ ಈಗ ಎರಡಂಸ್ತಿನ ಸುಂದರವಾದ ಮೇಲೆ ಭವನವಾಗಿದ್ದು ಅದರೊಳಗೆ ಸುಂದರ ಪೀಠದ ಮೇಲೆ ತಾತಯ್ಯನವರ ಲೋಹದ ಪ್ರತಿಮೆ ಪ್ರತಿಷ್ಠಾಪಿಸಿ ಪ್ರತಿನಿತ್ಯವೂ ಪೂಜೆ ಪುನಸ್ಕಾರಗಳು ಮತ್ತು ಸತ್ಸಂಗಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅದರ ಪಕ್ಕದಲ್ಲೇ ಸಾಮೂಹಿಕ ವಿವಾಹಕ್ಕೆ ವಿಶಾಲವಾದ ಕಲ್ಯಾಣ ಮಂದಿದ ಮತ್ತು ಧರ್ಮ ಛತ್ರಗಳು ವಸತಿಗೃಹಗಳನ್ನು ಕಟ್ಟಿಸಿ ಪ್ರತಿನಿತ್ಯವೂ ಬಂದ ಭಕ್ತಾದಿಗಳಿಗೆ ಉಚಿತವಾಗಿ ಅನ್ನದಾಸೋಹ ವ್ಯವಸ್ಥೆಯುಳ್ಳ ಭೋಜನ ಮಂದಿರವನ್ನು ಕಟ್ಟಿಸಿದ್ದಾರೆ. ಇನ್ನು ಅತ್ಯಂತ ಸುಂದರವಾದ ಶಿಲ್ಪಕಲೆಯಿಂದ ಕೂಡಿದ ಅಮರ ನಾರೇಯಣ ಸ್ವಾಮಿ ದೇಗುಲದ ಜೀರ್ಣೋದ್ಧಾರದ ಜೊತೆ ತಾತಯ್ಯನವರ ಜೀವನ ಚರಿತ್ರೆಯ ಚಿತ್ರ ಕಲಾಕೃತಿಗಳನ್ನೊಳಗೊಂಡ ಶ್ರೀ ಸ್ವಾಮಿ ನರಸಿಂಹ ಗುಹೆಯನ್ನು ಸಹಾ ಜೀರ್ಣೋದ್ಧಾರವಲ್ಲದೇ, ಯೋಗಿನಾರೇಯಣ ಪ್ರೌಢಶಾಲೆ, ಅನಾಥಾಲಯಗಳನ್ನು ಕಟ್ಟಿಸುವ ಮೂಲಕ ಶ್ರೀ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳಲ್ಲಿ ಅವರ ನಂತರ ಅವರ ಇಡೀ ಕುಟುಂಬ ತೊಡಗಿಕೊಂಡುರುವುದು ಶ್ಲಾಘನೀಯವಾಗಿದೆ.

ತಾತಯ್ಯನವರ ಮಹಾತ್ಮೆ ಎಲ್ಲರಿಗೂ ತಿಳಿಯಲೆಂದು ಈ ಹಿಂದೆ ವರನಟ ಡಾ. ರಾಜಕುಮಾರ್ ಅಭಿನಯದ ಕೈವಾರ ಮಹಾತ್ಮೆ ಚಿತ್ರ ಮೂಡಿಬಂದಿದ್ದರೆ, ಕೆಲವು ದಶಕಗಳ ಹಿಂದೆ ಪ್ರಸ್ತುತವಾಗಿ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾಗಿರುವ ಡಾ. ಎಂ. ಆರ್. ಜಯರಾಂ ರವರ ಆಶಯದಂತೆ ನಟ ಸಾಯಿ ಕುಮಾರ್ ಮತ್ತು ತಾರಾ ಅಭಿನಯದ ಕೈವಾರ ತಾತಯ್ಯ ಕನ್ನಡ ಚಲನಚಿತ್ರ ನಿರ್ಮಾಣವಾಗಿ ಅಪಾರವಾದ ಜನಮನ್ನಣೆಗೆ ಪಾತ್ರವಾಗಿದ್ದಲ್ಲದೇ, ತಾತಯ್ಯನವರ ಸಂಪೂರ್ಣ ಜೀವನ ಚರಿತ್ರೆ ಮತ್ತು ಸಾಧನೆಗಳು ಇಂದಿನ/ಮುಂದಿನ ಜನಾಂಗಕ್ಕೂ ತಿಳಿಯುವಂತಾಗಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ.

ಸದ್ಗುರು ತಾತಯ್ಯನವರು ರಚಿಸಿರುವ ತಾಳೆಗರಿಗಳನ್ನು ಮಠ ದಲ್ಲಿ ಸಂರಕ್ಷಿಸಿ ಇಡಲಾಗಿದೆ. ತಾಳೆಗರಿಗಳು ಆರಾಧನೆಯಂದು ಮಾತ್ರ ನೋಡಲು ಸಿಗುತ್ತದೆ. ಆರಾಧನಾ ಮಹೋತ್ಸವದ ಪ್ರಯುಕ್ತ ಸದ್ಗುರು ಕೈವಾರ ತಾತಯ್ಯನವರು ರಚಿಸಿರುವ ಕಾಲಜ್ಞಾನ, ಕೀರ್ತನೆ, ಶತಕಗಳ ಮೂಲ ತಾಳೆಗರಿಗಳಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುವುದು.

ಕೈವಾರ ತಾತಯ್ಯರು ಕೇವಲ ಧಾರ್ಮಿಕ ನಾಯಕರಷ್ಟೇ ಅಲ್ಲದೇ, ಸಮಾಜದಲ್ಲಿ ಸಮಾನತೆ, ಸತ್ಯ, ಧರ್ಮ ಮತ್ತು ಮಾನವೀಯ ಮೌಲ್ಯಗಳ ಕುರಿತಾಗಿ ಬೋಧಿಸುತ್ತಾ, ಇಲ್ಲಿ ಎಲ್ಲರೂ ದೇವರ ಮಕ್ಕಳು, ಜಾತಿಗಿಂತ ಗುಣ ಮುಖ್ಯ, ಸತ್ಯವೇ ಶ್ರೇಷ್ಠ ಧರ್ಮ, ಸೇವೆಯೇ ನಿಜವಾದ ಪೂಜೆ, ಶಿಕ್ಷಣ ಮತ್ತು ಜ್ಞಾನದಿಂದ ಸಮಾಜದ ಅಭಿವೃದ್ಧಿ ಎಂದು ಪ್ರತಿಪಾತಿಸುವ ಮೂಲಕ, ಸಮಾಜದ ದುರ್ಬಲ ವರ್ಗಗಳ ಪರವಾಗಿ ನಿಂತು ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದರು.

ಕಾಲಜ್ಞಾನಿ ಕೈವಾರ ತಾತಯ್ಯರು ಕರ್ನಾಟಕದ ಆಧ್ಯಾತ್ಮಿಕ ಪರಂಪರೆಯ ಅಮೂಲ್ಯ ರತ್ನ. ಅವರ ಜೀವನವು ಭಕ್ತಿ, ಜ್ಞಾನ, ವೈರಾಗ್ಯ ಮತ್ತು ಸಮಾಜಸೇವೆಯ ಅಪೂರ್ವ ಸಂಗಮವಾಗಿದೆ. ಅವರು ರಚಿಸಿದ ಸಾಹಿತ್ಯ, ಕಾಲಜ್ಞಾನ ಮತ್ತು ಬೋಧನೆಗಳು ಇಂದಿಗೂ ಜನರ ಬದುಕಿಗೆ ಮಾರ್ಗದರ್ಶನ ನೀಡುತ್ತಿವೆ. ಜ್ಞಾನಕ್ಕೆ ಭಕ್ತಿ ಜೊತೆಯಾದಾಗ ಜೀವನ ಪವಿತ್ರವಾಗುತ್ತದೆ” ಎಂಬ ಸಂದೇಶವನ್ನು ತಮ್ಮ ಜೀವನದ ಮೂಲಕವೇ ಸಾರಿದ ಮಹಾನ್ ಸಂತರ ಕಾಲಜ್ಞಾನಿ ಕೈವಾರ ತಾತಯ್ಯರ ಅವರ ಸಂದೇಶವನ್ನು ಅನುಸರಿಸಿ ಸತ್ಯ, ಧರ್ಮ, ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ನಾವು ನೀವು ಉತ್ತಮ ವ್ಯಕ್ತಿಗಳಾಗಿ ಹಾಗೂ ಉತ್ತಮ ಸಮಾಜವನ್ನು ನಿರ್ಮಿಸುವ ಮೂಲಕ ಕೈವಾರ ತಾತಯ್ಯನವರ ಕನಸನ್ನು ಸಾಕಾರಗೊಳಿಸೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ


ಇದೇ ಲೇಖನದ ಸಾರಾಂಶವು ಜೂನ್ 18, 2026 ರ ತುಮಕೂರು ವಾರ್ತಾದಲ್ಲಿ ಪ್ರಕಟವಾಗಿದೆ.


Leave a comment