ಅಂಬುಬಾಚಿ ಮೇಳ, ಕಾಮಾಕ್ಯ ದೇವಿಯ ರಜಸ್ವಲೆಯ ಪವಿತ್ರ ಮತ್ತು ಅದ್ಭುತ ಆಧ್ಯಾತ್ಮಿಕ ಮಹೋತ್ಸವ

ಭಾರತದ ಸನಾತನ ಸಂಸ್ಕೃತಿಯಲ್ಲಿ ಮಹಿಳೆಯನ್ನು ಕೇವಲ ಒಬ್ಬ ವ್ಯಕ್ತಿಯಾಗಿ ನೋಡುವುದಿಲ್ಲ. ಬದಲಾಗಿ ಆಕೆಯನ್ನು ಶಕ್ತಿ, ಸೃಷ್ಟಿ ಮತ್ತು ಪ್ರಕೃತಿಯ ಜೀವನಾಡಿಯಾಗಿ ಆರಾಧಿಸುತ್ತದೆ. ಹಾಗಾಗಿಯೇ ಯತ್ರ ನಾರ್ಯಸ್ತು ಪೂಜ್ಯಂತೆ, ರಮಂತೆ ತತ್ರ ದೇವತಾಃ ಎಂಬ ವೇದೋಕ್ತಿಯ ಸಾರವೇ ಭಾರತೀಯ ಜೀವನದ ಮೂಲತತ್ವ. ಮಹಿಳೆಯ ಸೃಷ್ಟಿಶಕ್ತಿಯನ್ನು ದೈವಿಕ ಮಟ್ಟಕ್ಕೆ ಏರಿಸಿರುವ ಇಂತಹ ಅನೇಕ ಸಂಪ್ರದಾಯಗಳ ಪೈಕಿ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಾಲಯದಲ್ಲಿ ನಡೆಯುವ ಅಂಬುಬಾಚಿ ಮೇಳ ಅತ್ಯಂತ ವಿಶಿಷ್ಟ ಮತ್ತು ಜಗತ್ತಿನ ಗಮನ ಸೆಳೆಯುವ ಆಧ್ಯಾತ್ಮಿಕ ಉತ್ಸವವಾಗಿದೆ.

ಮಹಿಳೆಯರ ಮಾಸಿಕ ಋತುಚಕ್ರ ಅಥವಾ ಮುಟ್ಟು (Periods) ಎನ್ನುವುದು ಪ್ರಕೃತಿಯೇ ನೀಡಿರುವ ಅದ್ಭುತ ವರವಾಗಿದೆ. ಇದು ಕೇವಲ ದೈಹಿಕ ಪ್ರಕ್ರಿಯೆ ಆಗಿರದೆ, ಮಹಿಳೆಯ ತಾಯ್ತನದ ಸಾಮರ್ಥ್ಯ, ಆರೋಗ್ಯ ಮತ್ತು ಸೃಷ್ಟಿಶಕ್ತಿಯ ಸಂಕೇತವಾಗಿದೆ. ಈ ಋತುಚಕ್ರವು ಮಹಿಳೆಯ ಸಂತಾನೋತ್ಪತ್ತಿ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದರ ಸೂಚನೆಯಾಗಿದೆ. ಪ್ರತಿ ತಿಂಗಳು ಮಹಿಳೆಯ ಗರ್ಭಾಶಯವು ಗರ್ಭಧಾರಣೆಗೆ ಸಿದ್ಧವಾಗಿದ್ದು, ಗರ್ಭಧಾರಣೆ ಸಂಭವಿಸದಿದ್ದಾಗ ಗರ್ಭಾಶಯದ ಒಳಪದರವು ರಕ್ತದೊಂದಿಗೆ ಹೊರಬರುವುದನ್ನೇ ಮಾಸಿಕ ಋತುಸ್ರಾವ ಅಥವಾ ಮುಟ್ಟು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಈ ಪ್ರಕ್ರಿಯೆ ಪ್ರತೀ ಆರೋಗ್ಯವಂತ ಮಹಿಳೆಯರಲ್ಲಿ 21 ರಿಂದ 35 ದಿನಗಳ ನಡುವಿನ ಚಕ್ರದಲ್ಲಿ ನಡೆಯುತ್ತದೆ. ಋತುಚಕ್ರವು ಮಹಿಳೆಯು ತಾಯಿಯಾಗಲು ಅಗತ್ಯವಾದ ಜೈವಿಕ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದು, ನಿಯಮಿತ ಋತುಚಕ್ರವು ಮಹಿಳೆಯ ದೈಹಿಕ ಮತ್ತು ಹಾರ್ಮೋನಲ್ ಆರೋಗ್ಯದ ಸೂಚಕವಾಗಿದೆ. ಇದು ಮಹಿಳೆಯರಲ್ಲಿ ಹೊಸ ಜೀವವನ್ನು ಸೃಷ್ಟಿಸುವ ಸಾಮರ್ಥ್ಯ ಇದೆ ಎಂಬುದರ ಪ್ರತೀಕವಾಗಿದೆ.

ಸಾಮಾನ್ಯ ಮಹಿಳೆಯಲ್ಲಿ ಆಗುವ ಈ ರೀತಿಯ ಋತುಚಕ್ರವು ಸನಾತನಧರ್ಮದ 51 ಶಕ್ತಿಪೀಠಗಳಲ್ಲಿ ಒಂದಾದ ಅಸ್ಸಾಂನ ಗೌಹಾತಿಯ ಕಾಮಾಕ್ಯ ದೇವಾಲಯದ ಕಾಮ್ಯಾಕ್ಯ ದೇವಿಯಲ್ಲೂ ಕಾಣಬಹುತಾಗಿರುವುದೇ ಅತ್ಯಂತ ಅಚ್ಚರಿಯ ವಿಷಯವಾಗಿದೆ. ಪುರಾಣಗಳ ಪ್ರಕಾರ, ದಕ್ಷಯಜ್ಞದ ನಂತರ ಶಿವನು ಸತಿಯ ದೇಹವನ್ನು ಹೊತ್ತು ತಾಂಡವ ಮಾಡುತ್ತಿದ್ದಾಗ, ವಿಷ್ಣುವಿನ ಸುದರ್ಶನ ಚಕ್ರವು ಸತಿಯ ದೇಹವನ್ನು ವಿವಿಧ ಭಾಗಗಳಾಗಿ ವಿಭಜಿಸಿದ ಸಂದರ್ಭದಲ್ಲಿ ಸತಿಯ ಯೋನಿ ಭಾಗ ಬಿದ್ದ ಸ್ಥಳವೇ ಕಾಮಾಕ್ಯ ಕ್ಷೇತ್ರ ಎಂದು ನಂಬಲಾಗಿದೆ. ಹಾಗಾಗಿಯೇ ಈ ಶ್ರೀ ಕ್ಷೇತ್ರದಲ್ಲಿ ಯಾವುದೇ ರೀತಿಯ ದೇವಿಯ ಮೂರ್ತಿ ಇಲ್ಲದೇ, ಅದರ ಬದಲಾಗಿ ಭೂಮಿಯೊಳಗಿನ ನೈಸರ್ಗಿಕ ಶಿಲಾಬಿರುಕು ಮತ್ತು ಅದರೊಳಗಿಂದ ನಿರಂತರವಾಗಿ ಹರಿಯುವ ಜಲಧಾರೆಯೇ ದೇವಿಯ ಸಾನ್ನಿಧ್ಯದ ಸಂಕೇತವಾಗಿದೆ. ಇದು ಸೃಷ್ಟಿಯ ಮೂಲತತ್ವವಾದ ಯೋನಿಶಕ್ತಿಯ ಆರಾಧನೆಯ ಕೇಂದ್ರವಾಗಿದೆ.

ಇಲ್ಲಿನ ದೇವಿಯು ಖಾಸಿಗಳು ಮತ್ತು ಗ್ಯಾರೋಗಳಂತಹ ಕೆಲವು ಮಾತೃಪ್ರಧಾನ ಬುಡಕಟ್ಟುಗಳಿಗೆ ಸೇರಿದ್ದು ಎಂದು ಹೇಳಲಾಗುತ್ತದೆ. ಪ್ರಸ್ತುತ ಖಾಸಿ ಧರ್ಮ ಮತ್ತು ಅದರ ಆಚರಣೆಯ ಸಂಪೂರ್ಣವಾಗಿ ನಶಿಸಿಹೋಗಿದ್ದರೂ, ಅವರ ಧಾರ್ಮಿಕ ಸಂಪ್ರದಾಯಗಳೂ ಇನ್ನೂ ಪ್ರಚಲಿತವಾಗಿದೆ. ಖಾಸಿಗಳ ಪ್ರಮುಖ ದೇವತೆಗಳಲ್ಲಿ ಕಾ-ಮೇ-ಖ (ನಿಮ್ಮನ್ನು ಸೃಷ್ಟಿಸಿದವಳು) ಎಂಬುವಳು ಒಬ್ಬಳಾಗಿದ್ದು ಅವಳು ಶಕ್ತಿಶಾಲಿ ತಾಯಿ ದೇವತೆಯಾಗಿದ್ದು, ಅವರು ವಿಶ್ವವನ್ನು ಸೃಷ್ಟಿಸಿದಳು ಎನ್ನುವ ಪ್ರತೀತಿ ಇಲ್ಲಿನ ಜನರಿಗಿದೆ. 10 ನೇ ಶತಮಾನದಲ್ಲಿ ಈ ಕ್ಷೇತ್ರ ಅತೀಂದ್ರಿಯತೆ ಮತ್ತು ಮಾಟಮಂತ್ರದ ಪ್ರಮುಖ ಕೇಂದ್ರವಾಗಿದ್ದು ಇಲ್ಲಿನ ದೇವಿಗೆ ವಿವಿಧ ಪಕ್ಷಿಗಳು ಆಮೆಗಳು, ಮೊಸಳೆಗಳು, ಮೀನು, ಎಮ್ಮೆಗಳು, ಹೋರಿಗಳು, ಮೇಕೆಗಳು, ಮುಂಗುಸಿಗಳು, ಕಾಡುಹಂದಿಗಳು, ಖಡ್ಗಮೃಗಗಳು, ಜಿಂಕೆಗಳು,, ಹಿಮಸಾರಂಗ, ಸಿಂಹಗಳು ಮತ್ತು ಹುಲಿಗಳಂತಹ ಪ್ರಾಣಿಗಳನ್ನು ಬಲಿ ಕೊಡುವ ಸಂಪ್ರದಾಯ ಇತ್ತು ಎಂದು ಹೇಳಲಾಗುತ್ತದೆ

ಪ್ರತಿ ವರ್ಷ ಜೂನ್ ತಿಂಗಳ ಕೊನೆಯ ಭಾಗದಲ್ಲಿ ಬಂಗಾಳಿ ಮಾಸ ಆಷಾಢದಲ್ಲಿ ಬರುವ ಮಳೆಗಾಲದಲ್ಲಿ ಜೂನ್ ಮಧ್ಯದಲ್ಲಿ ಸೂರ್ಯನು ಮಿಥುನ ರಾಶಿಗೆ ಸಾಗುವಾಗ ಮತ್ತು ಬ್ರಹ್ಮಪುತ್ರ ನದಿಯು ಉಕ್ಕಿ ಹರಿಯುವಾಗ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಸ್ಥಾನದಲ್ಲಿ ಆಚರಿಸಲಾಗುವ ಹಬ್ಬ ಅಥವಾ ಜಾತ್ರೆಯನ್ನೇ ಅಂಬುಬಾಚಿ (ಸಂಸ್ಕೃತ ಪದ ಅಂಬುವಾಚಿ, ಸ್ಥಳೀಯ ಅಸ್ಸಾಮಿಗರ ಉಚ್ಚಾರಣೆಯಲ್ಲಿ ಅಂಬುಬಾಚಿ ಅಥವಾ ಅಂಬುಬೋಸಿ ಎಂದಾಗಿದೆ) ಎಂದು ಕರೆಯಲಾಗುತ್ತದೆ. ಅಂಬು ಎಂದರೆ ನೀರು, ಬಾಚಿ ಎಂದರೆ ಹರಿಯುವುದು ಎಂಬ ಅರ್ಥವಿರುವ ಈ ಜಾತ್ರಾ ಮಹೋತ್ಸವ ಭೂಮಾತೆಯ ಫಲವತ್ತತೆಯ ಸಂಕೇತ ಎಂದೇ ನಂಬಲಾಗಿದೆ. ಇಲ್ಲಿ ನಡೆಯುವ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು, ಸಾಧುಗಳು, ತಾಂತ್ರಿಕರು ಮತ್ತು ಆಧ್ಯಾತ್ಮಿಕ ಅನ್ವೇಷಕರು ಕಾತರದಿಂದ ಕಾಯುತ್ತಿರುತ್ತಾರೆ. ಇದು ಕೇವಲ ಒಂದು ಜಾತ್ರೆಯಾಗಿರದೇ, ಸ್ತ್ರೀತ್ವ, ಸೃಷ್ಟಿ ಮತ್ತು ಪ್ರಕೃತಿಯ ಪುನರ್ಜನ್ಮದ ಮಹೋತ್ಸವವಾಗಿದೆ.

ಮಳೆಗಾಲದ ಆರಂಭದಲ್ಲಿ ಭೂಮಿ ಹೊಸ ಜೀವಸಂಕುಲಕ್ಕೆ ಸಜ್ಜಾಗುವ ಸಮಯದಲ್ಲಿ ಈ ಮೇಳ ನಡೆಯುತ್ತದೆ. ಶಾಕ್ತ ಮತ್ತು ತಾಂತ್ರಿಕ ಸಂಪ್ರದಾಯದ ಪ್ರಕಾರ, ಕಾಮಾಕ್ಯ ದೇವಿಯು ಮೂರು ದಿನಗಳ ಕಾಲ ರಜಸ್ವಲೆ ಆಗುತ್ತಾಳೆ ಎಂದು ನಂಬಲಾಗುತ್ತದೆ. ಈ ಅವಧಿಯಲ್ಲಿ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತದೆಯಲ್ಲದೇ, ಇದು ದೇವಿಯು ವಿಶ್ರಾಂತಿಯಲ್ಲಿರುವ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಮೂರು ದಿನಗಳಲ್ಲಿ ದೇವಾಲಯದ ಸಮೀಪವೇ ಹರಿಯುವ ಬ್ರಹ್ಮಪುತ್ರ ನದಿಯ ನೀರಿನ ಬಣ್ಣ ಕೆಂಪು ಬಣ್ಣಕ್ಕೆ ತಿರುಗುವುದು ವಿಸ್ಮಯವಾಗಿದ್ದು, ತರ್ಕಕ್ಕೆ ನಿಲುಕದ ವಿಷಯವಾಗಿದೆ. ಈ ಆಚರಣೆಯ ಹಿಂದೆ ಅತ್ಯಂತ ಮಹತ್ವದ ಸಂದೇಶವೊಂದಿದ್ದು, ನಮ್ಮ ಸಮಾಜದಲ್ಲಿ ಮಹಿಳೆಯರ ಋತುಸ್ರಾವದ ಬಗ್ಗೆ ಅನೇಕ ಕಡೆ ಇನ್ನೂ ಮೂಢನಂಬಿಕೆಗಳು ಮತ್ತು ಮುಜುಗರಗಳಿರುವಾಗ, ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯರು ಮಹಿಳೆಯ ರಜಸ್ವಲೆಯನ್ನು ಸೃಷ್ಟಿಯ ಮೂಲಶಕ್ತಿಯಾಗಿ ಗೌರವಿಸಿದ್ದಾರೆ. ದೇವಿಯೇ ರಜಸ್ವಲೆ ಆಗುತ್ತಾಳೆ ಎಂಬ ನಂಬಿಕೆ, ಮಹಿಳಾ ದೇಹದ ಸಹಜ ಪ್ರಕ್ರಿಯೆಗೆ ನೀಡಿರುವ ಅತ್ಯುನ್ನತ ಗೌರವವಾಗಿದೆ.

ಅಂಬುಬಾಚಿಯ ಮೂರು ದಿನಗಳ ಕಾಲ ಯಾವುದೇ ಪೂಜೆ, ದರ್ಶನ ಅಥವಾ ಧಾರ್ಮಿಕ ಕಾರ್ಯಕ್ರಮ ನಡೆಸದೇ, ದೇವಿಗೆ ಸಂಪೂರ್ಣ ವಿಶ್ರಾಂತಿ ನೀಡುವ ಸಲುವಾಗಿ ಮೂರು ದಿನಗಳ ಕಾಲ ಗರ್ಭಗೃಹದ (ಗರ್ಭಗುಡಿ) ಬಾಗಿಲುಗಳು ಮುಚ್ಚಲ್ಪಟ್ಟಿರುತ್ತವೆ. ದೇವಾಲಯ ಮುಚ್ಚಿದ್ದರೂ ದೇವಾಲಯದ ಹೊರಗೆ ದೇವಿಯ ಕುರಿತಾದ ಸಾಂಪ್ರದಾಯಿಕ ಮತ್ತು ಜನಪದ ಹಾಡುಗಳು ಮತ್ತು ನೃತ್ಯಗಳ ಮೂಲಕ ದೇವಿಯ ಪ್ರಾರ್ಥನೆ ಮಾಡಲು ಬರುವವರನ್ನು ನೋಡಲೆಂದೇ ಲಕ್ಷಾಂತರ ಜನರು ದೇವಾಯದ ಸುತ್ತಮುತ್ತಲೂ ಸೇರಿಕೊಳ್ಳುವುದು ವಿಶೇಷವಾಗಿದೆ. ನಾಲ್ಕನೇ ದಿನ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದ್ದು, ಅಂದು ದೇವಾಲಯದ ಬಾಗಿಲುಗಳು ತೆರೆಯುತ್ತಿದ್ದಂತೆಯೇ ದೇವಿಯ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಮುಗಿಬೀಳುತ್ತಾರೆ. ಅಂದು ದೇವಾಲಯದಲ್ಲಿ ದರ್ಶನ ಪಡೆಯುವ ಭಕ್ತರಿಗೆ ರಕ್ತ ಬಸ್ತ್ರ ಎಂದು ಕರೆಯುವ ಕೆಂಪು ಬಣ್ಣದ ಪವಿತ್ರ ವಸ್ತ್ರದ ತುಂಡುಗಳನ್ನು ಪ್ರಸಾದವಾಗಿ ನೀಡಲಾಗುತ್ತದೆ. ಇದನ್ನು ದೇವಿಯ ಆಶೀರ್ವಾದದ ಸಂಕೇತವೆಂದು ನಂಬಲಾಗಿದ್ದು ಈ ಪ್ರಸಾದವನ್ನು ಮನೆಗಳಲ್ಲಿ ಇಟ್ಟುಕೊಂಡರೆ ಶುಭ, ಸಮೃದ್ಧಿ ಮತ್ತು ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆಯೂ ಇದೆ.

ಅಂಬುಬಾಚಿ ಮೇಳವನ್ನು ಸಾಮಾನ್ಯವಾಗಿ ತಾಂತ್ರಿಕರ ಕುಂಭಮೇಳ ಎಂದು ಕರೆಯಲಾಗುತ್ತದೆ. ಕಾಮಾಕ್ಯವು ಶಕ್ತಿಯ ಆರಾಧನೆಯ ಕೇಂದ್ರವಾಗಿರುವುದರಿಂದ, ಕುಂಭಮೇಳದಲ್ಲಿ ಸೇರುವಂತೆ ಈ ಸಮಯದಲ್ಲೂ ದೇಶದ ವಿವಿಧ ಭಾಗಗಳಿಂದ ಅಘೋರಿಗಳು, ನಾಗಾ ಸಾಧುಗಳು, ಶಾಕ್ತ ಉಪಾಸಕರು, ತಾಂತ್ರಿಕ ಸಾಧಕರು, ಯೋಗಿಗಳು ಮತ್ತು ಸನ್ಯಾಸಿಗಳು ಈ ಕಾಮಾಕ್ಯ ದೇವಿಯ ದರ್ಶನಕ್ಕೆ ಆಗಮಿಸುವುದು ವಿಶೇಷವಾಗಿದ್ದು, ಸಾಮಾನ್ಯವಾಗಿ ಜನಸಾಮಾನ್ಯರ ಕಣ್ಣಿಗೆ ಕಾಣಿಸದ ಅನೇಕ ಮಹಾನ್ ಸಾಧಕರನ್ನು ಈ ಸಮಯದಲ್ಲಿ ಇಲ್ಲಿ ನೋಡಬಹುದಾಗಿದೆ. ಅನೇಕ ಸಾಧಕರು ತಮ್ಮ ತಪಸ್ಸು ಮತ್ತು ಸಾಧನೆಯ ಪರಿಪೂರ್ಣತೆಯನ್ನು ಇಲ್ಲಿಯೇ ಹುಡುಕುತ್ತಾರೆ. ಆದ್ದರಿಂದ ಅಂಬುಬಾಚಿ ಮೇಳವು ಭಕ್ತಿ, ತಂತ್ರ, ಯೋಗ ಮತ್ತು ಆಧ್ಯಾತ್ಮಿಕ ಅನುಭವಗಳ ಮಹಾಸಂಗಮವಾಗಿದೆ. ಅಸಲಿ ಇದ್ದ ಕಡೆ ಸಹಜವಾಗಿ ನಕಲಿಗಳು ಇರುವಂತೆ ಇಲ್ಲಿಯೂ ಸಹಾ ಅಘೋರಿಗಳು, ನಾಗಾಗಳ ವೇಷದ ನಕಲೀ ವ್ಯಕ್ತಿಗಳು ಬರುವ ಭಕ್ತರನ್ನು ಪೂಜೆ ಪುನಸ್ಕಾರ ಹೆಸರಿನಲ್ಲಿ ಮೋಸಗೊಳಿಸುವ ಜಾಲವೂ ಇಲ್ಲಿರುವುದು ಬೇಸರದ ಸಂಗತಿಯಾಗಿದೆ.

ನೀಲಾಚಲ ಬೆಟ್ಟದ ಮೇಲಿರುವ ಕಾಮಾಕ್ಯ ದೇವಾಲಯದಲ್ಲಿ ನಡೆಯುವ ಅಂಬುಬಾಚಿ ಮೇಳವು ಕೇವಲ ಧಾರ್ಮಿಕ ಆಚರಣೆಯಾಗಿರದೇ, ಅದು ಸೃಷ್ಟಿಯ ಶಾಶ್ವತ ಚಕ್ರವನ್ನು ನೆನಪಿಸುವ ಆಧ್ಯಾತ್ಮಿಕ ಉತ್ಸವವಾಗಿದೆ. ಅಂಬುಬಾಚಿ ಮೇಳದ ಅತ್ಯಂತ ದೊಡ್ಡ ಸಂದೇಶವೆಂದರೆ ಸ್ತ್ರೀತ್ವವೇ ಸೃಷ್ಟಿಯ ಮೂಲ. ಮಹಿಳೆಯ ಋತುಚಕ್ರವನ್ನು ಅಶುದ್ಧತೆಯಾಗಿ ನೋಡುವುದಿಲ್ಲ; ಅದನ್ನು ಸೃಷ್ಟಿಯ ದೈವಿಕ ಪ್ರಕ್ರಿಯೆಯಾಗಿ ಗೌರವಿಸಲಾಗುತ್ತದೆ. ಈ ಆಚರಣೆ ಸಮಾಜಕ್ಕೆ ಮಹಿಳೆಯರ ಬಗ್ಗೆ ಹೆಚ್ಚಿನ ಗೌರವ ಮತ್ತು ಅರಿವು ಮೂಡಿಸುವ ಪ್ರಯತ್ನವಾಗಿದೆ. ದೇವಿಯೇ ರಜಸ್ವಲೆ ಆಗುತ್ತಾಳೆ ಎಂಬ ನಂಬಿಕೆ, ಮಹಿಳೆಯರ ದೇಹದ ಸಹಜತೆಯನ್ನು ದೈವತ್ವದ ಮಟ್ಟಕ್ಕೆ ಏರಿಸಿರುವ ಭಾರತದ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಪ್ರತಿಬಿಂಬಿಸುತ್ತದೆ. ಮಹಿಳೆಯ ಸೃಷ್ಟಿಶಕ್ತಿಯನ್ನು ಗೌರವಿಸುವ, ಪ್ರಕೃತಿಯ ಫಲವತ್ತತೆಯನ್ನು ಆಚರಿಸುವ ಮತ್ತು ಆದಿಶಕ್ತಿಯ ಮಹಿಮೆಯನ್ನು ಸಾರುವ ಈ ಮಹೋತ್ಸವ ಭಾರತೀಯ ಸಂಸ್ಕೃತಿಯ ಆಳವಾದ ತತ್ವಜ್ಞಾನವನ್ನು ಜಗತ್ತಿನ ಮುಂದೆ ಅನಾವರಣಗೊಳಿಸುತ್ತದೆ.

ಇಂದಿನ ಆಧುನಿಕ ಯುಗದಲ್ಲಿಯೂ ಸಾವಿರಾರು ವರ್ಷಗಳ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಅಂಬುಬಾಚಿ ಮೇಳವು, ಮಹಿಳೆ, ಪ್ರಕೃತಿ ಮತ್ತು ಶಕ್ತಿಯ ನಡುವಿನ ಅವಿನಾಭಾವ ಸಂಬಂಧವನ್ನು ಪ್ರತಿವರ್ಷ ಮತ್ತೊಮ್ಮೆ ಜಗತ್ತಿಗೆ ನೆನಪಿಸುವ ಮೂಲಕ ಮಹಿಳೆಯರ ಗೌರವದ ಕುರಿತಾಗಿ ಭಾರತೀಯ ಚಿಂತನೆಯ ಪ್ರತಿಬಿಂಬವಾಗಿದೆ. ಸಾಧ್ಯವಾದರೆ ಒಮ್ಮೆ ಅಂಬುಬಾಚಿ ಮೇಳದ ಸಂದರ್ಭದಲ್ಲಿ ಕಾಮಾಕ್ಯ ದೇವಿಯ ದರ್ಶನ ಪಡೆದು, ಆ ದೈವೀ ಅನುಭವವನ್ನು ಮನದಾಳದಲ್ಲಿ ಸಂಗ್ರಹಿಸಿಕೊಳ್ಳಿ. ಸ್ತ್ರೀಶಕ್ತಿ ಮತ್ತು ಸೃಷ್ಟಿಶಕ್ತಿಯ ಮಹತ್ವವನ್ನು ಅರಿಯಲು ಇದು ಒಂದು ಅಪೂರ್ವ ಅವಕಾಶವಾಗಿದ್ದು, ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರಿ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment