ಬೆಂಗಳೂರು ಎಂದರೆ ಇಂದು ಐಟಿ ನಗರ. ಆದರೆ ಈ ಮಹಾನಗರದ ಹಳೆಯ ಆತ್ಮವನ್ನು ಕಾಣಬೇಕಾದರೆ ಒಮ್ಮೆ ಕಲಾಸಿಪಾಳ್ಯದ ಬೀದಿಗಳಲ್ಲಿ ಹೆಜ್ಜೆ ಹಾಕಬೇಕು. ಗಿಜಿಗುಡುವ ರಸ್ತೆಗಳು, ಹಳೆಯ ಅಂಗಡಿಗಳು, ಸಗಟು ವ್ಯಾಪಾರ, ಖಾಸಗಿ ಬಸ್‌ಗಳ ನೆನಪು, ಹೋಟೆಲ್‌ಗಳ ಪರಿಮಳ ಮತ್ತು ದುಡಿಯುವ ಜನರ ಜೀವನ—ಇವೆಲ್ಲವೂ ಕಲಾಸಿಪಾಳ್ಯವನ್ನು ಬೆಂಗಳೂರಿನ ಇತಿಹಾಸದ ಅವಿಭಾಜ್ಯ ಭಾಗವನ್ನಾಗಿ ಮಾಡಿವೆ. ನಗರದ ಹೃದಯಭಾಗದಲ್ಲಿರುವ ಕಲಾಸಿಪಾಳ್ಯವು ಬೆಂಗಳೂರು ಕೋಟೆ, ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ, ಕೆ.ಆರ್. ಮಾರುಕಟ್ಟೆ ಮತ್ತು ಹಳೆಯ ಪೇಟೆ ಪ್ರದೇಶಗಳಿಗೆ ಅಂಟಿಕೊಂಡಿರುವುದರಿಂದ ಶತಮಾನಗಳಿಂದ ವ್ಯಾಪಾರ ಮತ್ತು ಸಂಚಾರದ ಪ್ರಮುಖ ಕೇಂದ್ರವಾಗಿ ಬೆಳೆದಿದೆ. ಕಲಾಸಿಪಾಳ್ಯ ಪ್ರದೇಶಕ್ಕೆ ಆ ಹೆಸರು ಏಕೆ ಮತ್ತು ಹೇಗೆ ಬಂದಿತು? ಆ ಪ್ರದೇಶ ಅಂದು ಮತ್ತು ಇಂದು ಹೇಗಿದೆ? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಕಲಾಸಿಪಾಳ್ಯ ಎಂಬ ಹೆಸರು ಹೇಗೆ ಬಂತು?
“ಕಲಾಸಿಪಾಳ್ಯ” ಎಂಬ ಹೆಸರಿನ ಬಗ್ಗೆ ಎರಡು ಅಭಿಪ್ರಾಯಗಳು ಪ್ರಚಲಿತದಲ್ಲಿವೆ. ಮೊದಲನೆಯದು, “ಖಲಾಸಿ (Khalasi)” ಎಂಬ ಪರ್ಷಿಯನ್-ಉರ್ದು ಮೂಲದ ಪದದಿಂದ “ಕಲಾಸಿ” ಎಂಬ ರೂಪ ಬಂದಿದೆ. ಖಲಾಸಿ ಎಂದರೆ ಸರಕುಗಳನ್ನು ಹೊರುವ ಕಾರ್ಮಿಕ. ಹಿಂದೆ ಮಾರುಕಟ್ಟೆಗಳಿಗೆ ಬರುವ ಧಾನ್ಯ, ಬೆಲ್ಲ, ಕಬ್ಬಿಣ, ತಾಮ್ರ ಸೇರಿದಂತೆ ವಿವಿಧ ಸರಕುಗಳನ್ನು ಹೊತ್ತು ಗೋದಾಮುಗಳಿಗೆ ಸಾಗಿಸುವ ಸಾವಿರಾರು ಕಾರ್ಮಿಕರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಕಾರಣ ಈ ಹೆಸರು ಬಂದಿದೆ ಎಂದು ಹಲವಾರು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.
ಎರಡನೆಯದು, ಸ್ಥಳೀಯ ಜನಪದ ನಂಬಿಕೆಯ ಪ್ರಕಾರ ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳಿಗೆ “ಕಲಾಯಿ” ಹಾಕುವ ಕಾರ್ಮಿಕರು ಇಲ್ಲಿ ಹೆಚ್ಚಾಗಿ ನೆಲೆಸಿದ್ದರಿಂದ “ಕಲಾಯಿ ಪಾಳ್ಯ” ಕ್ರಮೇಣ “ಕಲಾಸಿಪಾಳ್ಯ” ಆಯಿತು ಎನ್ನಲಾಗುತ್ತದೆ. ಆದರೆ ಈ ಅಭಿಪ್ರಾಯಕ್ಕೆ ಸ್ಪಷ್ಟವಾದ ಐತಿಹಾಸಿಕ ದಾಖಲೆಗಳು ಲಭ್ಯವಿಲ್ಲ.
ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಕಾಲದ ಕಲಾಸಿಪಾಳ್ಯ
18ನೇ ಶತಮಾನದಲ್ಲಿ ಹೈದರ್ ಅಲಿ ಮತ್ತು ನಂತರ ಟಿಪ್ಪು ಸುಲ್ತಾನರ ಆಳ್ವಿಕೆಯಲ್ಲಿ ಬೆಂಗಳೂರು ವ್ಯಾಪಾರ ನಗರವಾಗಿ ಬೆಳೆಯತೊಡಗಿತು. ಕೋಟೆಯ ಸುತ್ತಲಿನ ಪೇಟೆಗಳು ವಿಸ್ತಾರವಾದಂತೆ ಸರಕು ಸಾಗಣೆ ಮತ್ತು ಮಾರುಕಟ್ಟೆಗಳೂ ಬೆಳವಣಿಗೆ ಕಂಡವು. ಆ ಕಾಲದಲ್ಲಿ ಕಲಾಸಿಪಾಳ್ಯದಲ್ಲಿ ಪಾತ್ರೆಗಳಿಗೆ ಕಲಾಯಿ ಹಾಕುವವರು, ತಾಮ್ರ ಮತ್ತು ಹಿತ್ತಾಳೆ ಸಾಮಾನು ಮಾರುವವರು, ಬುಟ್ಟಿ ಮತ್ತು ಚಾಪೆ ಹೆಣೆಯುವ ಮೇದರು, ಕೊರಚರು ಮತ್ತು ಇತರೆ ಕುಶಲಕರ್ಮಿಗಳು ಹೆಚ್ಚಾಗಿ ವಾಸಿಸುತ್ತಿದ್ದರು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ನಂತರ ನಗರದ ವಿಸ್ತರಣೆಯೊಂದಿಗೆ ಈ ಸಮುದಾಯಗಳ ಹಲವರು ಸಂಪಿಗೆಹಳ್ಳಿ ಮತ್ತು ಇತರೆ ಪ್ರದೇಶಗಳಿಗೆ ಸ್ಥಳಾಂತರಗೊಂಡರು.
ಕಲಾಸಿಪಾಳ್ಯ – ಒಂದು ಮಾರುಕಟ್ಟೆಗಿಂತ ಹೆಚ್ಚು
ಕಲಾಸಿಪಾಳ್ಯ ಕೇವಲ ವ್ಯಾಪಾರದ ಸ್ಥಳವಲ್ಲ. ಇದು ಬೆಂಗಳೂರಿನ ಶ್ರಮಜೀವಿಗಳ ನೆನಪು, ಹಳೆಯ ಸಾರಿಗೆ ವ್ಯವಸ್ಥೆಯ ಸಾಕ್ಷಿ, ಅನೇಕ ಸಮುದಾಯಗಳ ಬದುಕಿನ ಕಥೆ ಮತ್ತು ನಗರದ ಆರ್ಥಿಕ ಬೆಳವಣಿಗೆಯ ಜೀವಂತ ಅಧ್ಯಾಯ. ಹಳೆಯ ದೆಹಲಿಯ ಚಾಂದಿನಿ ಚೌಕ್ ತನ್ನ ಐತಿಹಾಸಿಕ ಸೊಬಗನ್ನು ಉಳಿಸಿಕೊಂಡಿರುವಂತೆ, ಕಲಾಸಿಪಾಳ್ಯವೂ ಬೆಂಗಳೂರಿನ ಪರಂಪರೆಯ ಸಂಕೇತವಾಗಿ ಉಳಿಯಬೇಕು ಎಂಬುದು ಅನೇಕರ ಆಶಯ.
18ನೇ ಶತಮಾನದ ಉತ್ತರಾರ್ಧದಲ್ಲಿ ಹೈದರಾಲಿ, ಟಿಪ್ಪು ಇಲ್ಲಿ ನಗರವನ್ನು ವಿಸ್ತರಿಸಿದರೆನ್ನಲಾಗಿದ್ದು, ಕೋಟೆಯ ಪೂರ್ವದ ವಿಸ್ತರಣೆಯೇ ಮಿಲಿಟರಿ ಕ್ಯಾಂಪುಗಳ ಸಂಘಟಕರು, ಬೆಂಗಳೂರು ಕೋಟೆಯ ರಕ್ಷಣೆಗೆ ಇರುವ ಸೈನಿಕರು, ಕುದುರೆ ಸವಾರರಿಗೆ ವಸತಿಯಾಯಿತು. ಇವರೆಲ್ಲರ ಸಹಾಯಕ್ಕೆಂದು ನಿಯಮಿಸಲ್ಪಟ್ಟ ಕೂಲಿಕಾರ್ಮಿಕರಿಗೆ ಎಂದು ಕೋಟೆಯ ಹೊರಭಾಗದಲ್ಲಿ ವಸತಿ ಸೌಕರ್ಯ ಕಲ್ಪಿಸಲಾಯಿತು. ಅಂದು ಇವರಿಗೆ ಕಲಾಸಿಗಳೆಂದು ಕರೆಯಲಾಗುತ್ತಿದ್ದು, ಅವರು ಇರುವ ಪ್ರದೇಶವನ್ನೇ ಕಲಾಸಿಪಾಳ್ಯ ಎಂದು ಕರೆಯಲಾಯಿತು. ಕೋಟೆ ವೆಂಕಟರಮಣ ದೇವಾಲಯ, ಜಲಕಂಠೇಶ್ವರ ದೇವಸ್ಥಾನ, ಬೆಂಗಳೂರು ಕೋಟೆ, ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ, ವಿಕ್ಟೋರಿಯಾ ಆಸ್ಪತ್ರೆ, ಬೆಂಗಳೂರು ವೈದ್ಯಕೀಯ ಕಾಲೇಜುಗಳು ಇರುವುದು ಇಲ್ಲಿಯೇ.
ನಗರದ ಮಧ್ಯಭಾಗದಲ್ಲಿರುವ ಕಲಾಸಿಪಾಳ್ಯ ಸಗಟು ಮಾರುಕಟ್ಟೆಯನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಿ ಆಧುನಿಕ ಸೌಲಭ್ಯಗಳೊಂದಿಗೆ ಹೊಸ ಮಾರುಕಟ್ಟೆ ನಿರ್ಮಿಸುವ ಕುರಿತು ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ. ಆದಾಗ್ಯೂ, ಕಲಾಸಿಪಾಳ್ಯದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಉಳಿಸಬೇಕು ಎಂಬ ಅಭಿಪ್ರಾಯ ಸ್ಥಳೀಯರು ಮತ್ತು ಇತಿಹಾಸಾಸಕ್ತರಲ್ಲಿ ಬಲವಾಗಿ ಕೇಳಿಬರುತ್ತಿದೆ.
ದೊಡ್ಡಣ್ಣ ಹಾಲ್, ಪ್ಯಾರಾಮೌಂಟ್ ಥಿಯೇಟರ್, ಪರಿಮಳಾ ಮತ್ತು ಪ್ರದೀಪ್ ಮಿನಿ ಥಿಯೇಟರ್
ಬೆಂಗಳೂರಿನ ಹಳೆಯ ಚಿತ್ರಮಂದಿರಗಳ ಇತಿಹಾಸದಲ್ಲಿ ಕಲಾಸಿಪಾಳ್ಯದ ಪ್ಯಾರಾಮೌಂಟ್ ಥಿಯೇಟರ್, ನಂತರ ನಿರ್ಮಾಣವಾದ ಪರಿಮಳಾ ಥಿಯೇಟರ್ ಮತ್ತು ಪ್ರದೀಪ್ ಮಿನಿ ಥಿಯೇಟರ್ ವಿಶೇಷ ಸ್ಥಾನವನ್ನು ಪಡೆದಿವೆ. ಇವು ಕೇವಲ ಸಿನಿಮಾ ಪ್ರದರ್ಶನ ಕೇಂದ್ರಗಳಾಗಿರದೆ, ಕನ್ನಡ ಚಿತ್ರರಂಗದ ಆರಂಭಿಕ ಇತಿಹಾಸದೊಂದಿಗೆ ನಿಕಟ ಸಂಬಂಧ ಹೊಂದಿದ್ದವು.
ಪ್ಯಾರಾಮೌಂಟ್ ಥಿಯೇಟರ್‌ನ ಇತಿಹಾಸ
ಇಂದಿನ ಕಲಾಸಿಪಾಳ್ಯದ ಪರಿಮಳಾ–ಪ್ರದೀಪ್ ಚಿತ್ರಮಂದಿರಗಳಿದ್ದ ಸ್ಥಳದಲ್ಲಿ ಮೊದಲು ದೊಡ್ಡಣ್ಣ ಹಾಲ್ (Doddanna Hall) ಎಂಬ ಸಾರ್ವಜನಿಕ ಸಭಾಂಗಣವಿತ್ತು. ನಂತರ ಅದನ್ನು ಪ್ಯಾರಾಮೌಂಟ್ ಥಿಯೇಟರ್ ಆಗಿ ಪರಿವರ್ತಿಸಲಾಯಿತು.
ಈ ಚಿತ್ರಮಂದಿರದ ಮಹತ್ವ:
- 1913ರಲ್ಲಿ ಬಿಡುಗಡೆಯಾದ ಭಾರತದ ಮೊದಲ ಮೌನ ಚಲನಚಿತ್ರ Raja Harishchandra ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಪ್ರಮುಖ ಸ್ಥಳಗಳಲ್ಲಿ ಇದು ಒಂದೆಂದು ಉಲ್ಲೇಖಿಸಲಾಗಿದೆ.
- 1934ರ ಮಾರ್ಚ್ 3ರಂದು ಬಿಡುಗಡೆಯಾದ ಮೊದಲ ಕನ್ನಡ ಟಾಕಿ ಚಿತ್ರ Sati Sulochana ಮೈಸೂರು ಸಂಸ್ಥಾನದ ಪ್ರೇಕ್ಷಕರಿಗೆ ಇದೇ ಪ್ಯಾರಾಮೌಂಟ್ ಥಿಯೇಟರ್‌ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತು.
- ಹಲವು ದಶಕಗಳ ಕಾಲ ಕನ್ನಡ, ಹಿಂದಿ ಹಾಗೂ ಇತರೆ ಭಾಷೆಗಳ ಜನಪ್ರಿಯ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡವು.
ಪ್ಯಾರಾಮೌಂಟ್‌ಗೆ ಅಂತ್ಯ
1970ರ ದಶಕದ ಆರಂಭದಲ್ಲಿ ಪ್ಯಾರಾಮೌಂಟ್ ಕಟ್ಟಡ ಹಳೆಯದಾಗಿದ್ದ ಕಾರಣ ಅದನ್ನು ಕೆಡವಲು ನಿರ್ಧರಿಸಲಾಯಿತು. ಸುಮಾರು 1974ರಲ್ಲಿ ಪ್ಯಾರಾಮೌಂಟ್ ಥಿಯೇಟರ್ ಅನ್ನು ನೆಲಸಮಗೊಳಿಸಲಾಯಿತು.
ಪರಿಮಳಾ ಮತ್ತು ಪ್ರದೀಪ್ ಥಿಯೇಟರ್‌ಗಳ ನಿರ್ಮಾಣ
ಪ್ಯಾರಾಮೌಂಟ್ ಕೆಡವಿದ ಬಳಿಕ ಅದೇ ಜಾಗದಲ್ಲಿ ಹೊಸ ತಲೆಮಾರಿನ ಎರಡು ಚಿತ್ರಮಂದಿರಗಳನ್ನು ನಿರ್ಮಿಸಲಾಯಿತು. 1976ರಲ್ಲಿ ಪರಿಮಳಾ ಥಿಯೇಟರ್ ಉದ್ಘಾಟನೆಯಾಯಿತು. ಅದರೊಂದಿಗೆ ಪ್ರದೀಪ್ ಮಿನಿ ಥಿಯೇಟರ್ ಕೂಡ ಆರಂಭವಾಯಿತು. ಈ ಎರಡೂ ಚಿತ್ರಮಂದಿರಗಳ ನಿರ್ಮಾಣದಲ್ಲಿ ವಿ.ಎನ್. ಗೌಡ (V. N. Gowda) ಪ್ರಮುಖ ಪಾತ್ರವಹಿಸಿದ್ದರು.
ಪರಿಮಳಾ ಥಿಯೇಟರ್‌ನ ವೈಶಿಷ್ಟ್ಯ
ಪರಿಮಳಾ ಥಿಯೇಟರ್ ಹಲವಾರು ದಶಕಗಳ ಕಾಲ ಬೆಂಗಳೂರಿನ ಪ್ರಮುಖ ಏಕಪರದೆ (Single Screen) ಚಿತ್ರಮಂದಿರಗಳಲ್ಲಿ ಒಂದಾಗಿತ್ತು. ಇಲ್ಲಿ ಮುಖ್ಯವಾಗಿ: ಹಿಂದಿ ಚಿತ್ರಗಳು, ಕನ್ನಡ, ತಮಿಳು, ತೆಲುಗು ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದವು. ಈ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಕೆಲವು ಯಶಸ್ವಿ ಚಿತ್ರಗಳು:
- Disco Dancer – ಸುಮಾರು 50 ವಾರಗಳು
- Sanam Teri Kasam – ಸುಮಾರು 25 ವಾರಗಳು
- Deewaar – 100 ದಿನಗಳಿಗೂ ಹೆಚ್ಚು ಯಶಸ್ವಿ ಪ್ರದರ್ಶನ ಕಂಡವು ಎಂದು ಚಿತ್ರಮಂದಿರ ವಲಯದ ಹಿರಿಯರು ನೆನಪಿಸಿಕೊಳ್ಳುತ್ತಾರೆ.
ಪ್ರದೀಪ್ ಮಿನಿ ಥಿಯೇಟರ್
ಪ್ರದೀಪ್ ಚಿತ್ರಮಂದಿರವು ಸಣ್ಣ ಗಾತ್ರದ (Mini Theatre) ಆಗಿದ್ದರೂ, ಕುಟುಂಬ ಸಮೇತರಾಗಿ ಸಿನಿಮಾ ವೀಕ್ಷಿಸಲು ಜನಪ್ರಿಯವಾಗಿತ್ತು. ವಿಶೇಷವಾಗಿ ಮರುಬಿಡುಗಡೆ ಚಿತ್ರಗಳು, ಕಡಿಮೆ ಬಜೆಟ್‌ನ ಕನ್ನಡ ಮತ್ತು ಹಿಂದಿ ಚಿತ್ರಗಳಿಗೆ ಇದು ಪ್ರಮುಖ ಕೇಂದ್ರವಾಗಿತ್ತು. ಮಲ್ಟಿಪ್ಲೆಕ್ಸ್ ಸಂಸ್ಕೃತಿ ಬೆಳೆಯುತ್ತಿದ್ದಂತೆ ಕಲಾಸಿಪಾಳ್ಯದ ಈ ಎರಡು ಚಿತ್ರಮಂದಿರಗಳ ಜನಪ್ರಿಯತೆ ಕ್ರಮೇಣ ಕುಸಿಯತೊಡಗಿತು. ಬಳಿಕ ಪರಿಮಳಾ ಮತ್ತು ಪ್ರದೀಪ್ ಚಿತ್ರಮಂದಿರಗಳೂ ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಿದವು. ಆದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ, ವಿಶೇಷವಾಗಿ ಮೊದಲ ಕನ್ನಡ ಟಾಕಿ “ಸತಿ ಸುಲೋಚನ” ಪ್ರದರ್ಶನಗೊಂಡ ಸ್ಥಳ ಎಂಬ ಹೆಗ್ಗಳಿಕೆಯಿಂದ ಈ ಜಾಗ ಇಂದಿಗೂ ಚಲನಚಿತ್ರಾಸಕ್ತರ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ.
ಎಸ್.ಎಲ್.ಎನ್. ಶಿಕ್ಷಣ ಸಂಸ್ಥೆ, ಕಲಾಸಿಪಾಳ್ಯದ ಶತಮಾನಗಳ ಶಿಕ್ಷಣದ ದೀಪ
ಬೆಂಗಳೂರಿನ ಕಲಾಸಿಪಾಳ್ಯದಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ (ಎಸ್.ಎಲ್.ಎನ್.) ಶಿಕ್ಷಣ ಸಂಸ್ಥೆ ನಗರದ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸಂಸ್ಥೆಯನ್ನು 1906ರಲ್ಲಿ ಬೆಂಗಳೂರಿನ ಖ್ಯಾತ ದಾನಿ, ಸಮಾಜಸೇವಕ ಹಾಗೂ ವ್ಯಾಪಾರಿಯಾದ ಜನೋಪಕಾರಿ ದೊಡ್ಡಣ್ಣ ಶೆಟ್ಟಿ (1840–1921) ಅವರು ಸ್ಥಾಪಿಸಿದರು.
ಶಿಕ್ಷಣವು ಶ್ರೀಮಂತರಿಗಷ್ಟೇ ಸೀಮಿತವಾಗದೆ, ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೂ ಸುಲಭವಾಗಿ ದೊರೆಯಬೇಕು ಎಂಬ ಮಹತ್ತರ ಆಶಯದಿಂದ ಅವರು ಈ ಸಂಸ್ಥೆಯನ್ನು ಆರಂಭಿಸಿದರು. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಬಾಗಿಲು ತೆರೆದ ಮಹತ್ವದ ಕಾರ್ಯವನ್ನು ಎಸ್.ಎಲ್.ಎನ್. ಸಂಸ್ಥೆ ಮಾಡಿತು. ಒಂದು ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಈ ಶಿಕ್ಷಣ ಸಂಸ್ಥೆಯು ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದು, ಸಾವಿರಾರು ವಿದ್ಯಾರ್ಥಿಗಳು ಇಲ್ಲಿಂದ ಶಿಕ್ಷಣ ಪಡೆದು ವೈದ್ಯರು, ಇಂಜಿನಿಯರ್‌ಗಳು, ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದ್ದಾರೆ.
ದೊಡ್ಡಣ್ಣ ಶೆಟ್ಟಿಯವರ ಶಿಕ್ಷಣ ಸೇವೆ ಮತ್ತು ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅವರಿಗೆ “ಜನೋಪಕಾರಿ” ಎಂಬ ಗೌರವ ಬಿರುದನ್ನು ಪ್ರದಾನ ಮಾಡಿದ್ದರು. ಇಂದಿಗೂ ಕಲಾಸಿಪಾಳ್ಯದ ಎಸ್.ಎಲ್.ಎನ್. ಶಿಕ್ಷಣ ಸಂಸ್ಥೆ ಬೆಂಗಳೂರಿನ ಶಿಕ್ಷಣ ಇತಿಹಾಸದ ಹೆಮ್ಮೆಯ ಅಧ್ಯಾಯವಾಗಿದ್ದು, ಸಂಸ್ಥಾಪಕರಾದ ಜನೋಪಕಾರಿ ದೊಡ್ಡಣ್ಣ ಶೆಟ್ಟಿಯವರ ಸೇವಾ ಮನೋಭಾವ ಮತ್ತು ಶಿಕ್ಷಣದ ಮೇಲಿನ ಬದ್ಧತೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ.
ಕಲಾಸಿಪಾಳ್ಯದ ಪಾರ್ವತಿಪುರ ಬೆಂಗಳೂರಿನ ಬಡ್ಡಿ ವ್ಯವಹಾರದ ರಾಜಧಾನಿ
ಬೆಂಗಳೂರು ನಗರವು ಇಂದು ಐಟಿ ರಾಜಧಾನಿಯಾಗಿ ಜಗತ್ತಿನ ಗಮನ ಸೆಳೆದಿದ್ದರೂ, ಕೆಲವು ದಶಕಗಳ ಹಿಂದೆ ನಗರದ ಆರ್ಥಿಕ ಚಟುವಟಿಕೆಗಳಿಗೆ ಜೀವನಾಡಿಯಾಗಿದ್ದ ಪ್ರದೇಶಗಳಲ್ಲಿ ಕಲಾಸಿಪಾಳ್ಯದ ಪಾರ್ವತಿಪುರ ಪ್ರಮುಖವಾಗಿತ್ತು. ಈ ಪ್ರದೇಶವು ಕೇವಲ ವ್ಯಾಪಾರ, ಸಾರಿಗೆ ಮತ್ತು ಮಾರುಕಟ್ಟೆಗಳಿಗೆ ಮಾತ್ರವಲ್ಲ, “ಮೀಟರ್ ಬಡ್ಡಿ” ಅಥವಾ ಅನಧಿಕೃತ ಖಾಸಗಿ ಸಾಲ ವ್ಯವಹಾರಗಳ ಕೇಂದ್ರವಾಗಿಯೂ ದಶಕಗಳ ಕಾಲ ಕುಖ್ಯಾತಿಯಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ರೈತರು, ಹೂವು, ತರಕಾರಿ, ಹಣ್ಣು, ಧಾನ್ಯ, ಕಬ್ಬಿಣ, ಬಟ್ಟೆ ಮತ್ತು ಸಣ್ಣ ವ್ಯಾಪಾರಿಗಳು ಇಲ್ಲಿಗೆ ಆಗಮಿಸುತ್ತಿದ್ದರು. ಇವರಲ್ಲಿ ಬಹುತೇಕರಿಗೆ ಬ್ಯಾಂಕ್ ಸಾಲ ಸಿಗುತ್ತಿರಲಿಲ್ಲ. ದಾಖಲೆಗಳು, ಜಾಮೀನು, ಆದಾಯ ಪ್ರಮಾಣಪತ್ರಗಳು ಇಲ್ಲದ ಕಾರಣ ತುರ್ತು ಹಣದ ಅಗತ್ಯ ಬಂದಾಗ ಅವರು ಖಾಸಗಿ ಸಾಲದಾತರನ್ನೇ ಅವಲಂಬಿಸುತ್ತಿದ್ದರು. ಅಲ್ಲಿಂದಲೇ ಪಾರ್ವತಿಪುರದ ಬಡ್ಡಿ ವ್ಯವಹಾರ ಬೆಳೆಯತೊಡಗಿತು.
ಮೀಟರ್ ಬಡ್ಡಿ ಎಂದರೆ ಏನು?
ಬೆಂಗಳೂರಿನಲ್ಲಿ “ಮೀಟರ್ ಬಡ್ಡಿ” ಎಂಬ ಪದವೇ ಒಂದು ಭಯದ ಸಂಕೇತವಾಗಿತ್ತು. ಸಾಮಾನ್ಯವಾಗಿ ಬೆಳಿಗ್ಗೆ ಸಾಲ ಪಡೆದ ವ್ಯಾಪಾರಿ ಸಂಜೆ ಹಣವನ್ನು ಮರುಪಾವತಿಸಬೇಕಾಗುತ್ತಿತ್ತು. ಸಮಯಕ್ಕೆ ಪಾವತಿಸದಿದ್ದರೆ ಬಡ್ಡಿಯ ಮೇಲೆ ಮತ್ತೊಂದು ಬಡ್ಡಿ ಸೇರಿಸಲಾಗುತ್ತಿತ್ತು. ಅನೇಕ ಸಂದರ್ಭಗಳಲ್ಲಿ ತಿಂಗಳಿಗೆ 10–15% ಅಥವಾ ಅದಕ್ಕಿಂತಲೂ ಹೆಚ್ಚಿನ ಬಡ್ಡಿ ವಿಧಿಸಲಾಗುತ್ತಿತ್ತು. ಕೆಲವು ಪ್ರಕರಣಗಳಲ್ಲಿ ವಾರ ಅಥವಾ ದಿನದ ಆಧಾರದ ಮೇಲೆಯೇ ಬಡ್ಡಿ ಲೆಕ್ಕ ಹಾಕಲಾಗುತ್ತಿತ್ತು.
ಮಹಿಳಾ ಬಡ್ಡಿ ವ್ಯಾಪಾರಿಗಳ ಪ್ರಾಬಲ್ಯ
ಒಂದು ಕಾಲದಲ್ಲಿ ಈ ವ್ಯವಹಾರ ಪುರುಷರ ಕೈಯಲ್ಲಿದ್ದರೂ, ನಂತರ ಅನೇಕ ಪ್ರದೇಶಗಳಲ್ಲಿ ಮಹಿಳೆಯರೂ ಪ್ರಮುಖ ಸಾಲದಾತರಾಗಿದ್ದರು. ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ (CCB) ನಡೆಸಿದ ತನಿಖೆಗಳಲ್ಲಿ ಕಲಾಸಿಪಾಳ್ಯದ ಇಂದ್ರಾಣಿ ಸೇರಿದಂತೆ ಹಲವು ಮಹಿಳಾ ಹಣಕಾಸುದಾರರ ಹೆಸರುಗಳು ಬೆಳಕಿಗೆ ಬಂದಿದ್ದವು. ಅನಧಿಕೃತ ಹಣಕಾಸು ವ್ಯವಹಾರ ನಡೆಸುತ್ತಿದ್ದವರಿಂದ ನೂರಾರು ಖಾಲಿ ಚೆಕ್‌ಗಳು, ಆಸ್ತಿ ದಾಖಲೆಗಳು ಮತ್ತು ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಕಲಾಸಿಪಾಳ್ಯದ ಪಾರ್ವತಿಪುರವು ಕೇವಲ ವ್ಯಾಪಾರಿಗಳಿಗಷ್ಟೇ ಸುಲಭವಾಗಿ ಸಾಲ ಸಿಗುವ ಸ್ಥಳವಾಗಿದಷ್ಟೇ ಅಲ್ಲದೇ, ಕನ್ನಡ ಸಿನಿಮಾ ರಂಗಕ್ಕೂ ಬಹಳ ನಂಟಿತ್ತು. ಅನೇಕ ನಿರ್ಮಾಪಕರು ಮತ್ತು ಡಿಸ್ಟ್ರಿಬ್ಯೂಟರ್ಗಳಿಗೂ ಸಾಲದ ತಾಣವಾಗಿತ್ತು. ಹಾಗೆ ಹಣ ಪಡೆದು ಸಕಾಲದಲ್ಲಿ ಅಸಲು ಮತ್ತು ಬಡ್ಡಿಯನ್ನು ತೀರಿಸಲಾಗದೇ ಅನೇಕ ಕುಟುಂಬಗಳ ಜೀವನವೂ ಹಾಳಾಗಿದ್ದೂ ಸಹಾ ಈಗ ಇತಿಹಾಸವಾಗಿದೆ.
ಕಲಾಸೀಪಾಳ್ಯ ಬಂಬೂ ಬಜಾರ್
ಬೆಂಗಳೂರಿನ ಪ್ರಮುಖ ಸಾರಿಗೆ ಕೇಂದ್ರವಾಗಿ 1920ರಲ್ಲೇ ಆರಂಭವಾದ ಕಲಾಸಿಪಾಳ್ಯ ಬಸ್ ನಿಲ್ದಾಣ
ಕಲಾಸಿಪಾಳ್ಯದ ಇತಿಹಾಸವು ಕೇವಲ ಮಾರುಕಟ್ಟೆಗೆ ಸೀಮಿತವಾಗಿಲ್ಲ. ಹಲವು ದಶಕಗಳಿಂದ ಇದು ಬೆಂಗಳೂರು ನಗರದ ಪ್ರಮುಖ ಸಾರಿಗೆ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣ ಅಭಿವೃದ್ಧಿಯಾಗುವ ಮೊದಲು, ಕಲಾಸಿಪಾಳ್ಯವೇ ಬೆಂಗಳೂರಿನ ಪ್ರಮುಖ ಖಾಸಗಿ ಸಾರಿಗೆ ಕೇಂದ್ರವಾಗಿತ್ತು. ಸ್ಥಳೀಯರ ಪ್ರಕಾರ, ಕಲಾಸಿಪಾಳ್ಯ ಬಸ್ ನಿಲ್ದಾಣವು 1920ರ ದಶಕದಲ್ಲಿ ರೂಪುಗೊಂಡಿತು. ಆರಂಭದಲ್ಲಿ ಇಲ್ಲಿ ಕುದುರೆಗಾಡಿಗಳು, ನಂತರ ಖಾಸಗಿ ಬಸ್‌ಗಳು ಮತ್ತು ಸರಕು ವಾಹನಗಳು ನಿಲ್ಲುತ್ತಿದ್ದವು. ಕಾಲಕ್ರಮೇಣ ಇದು ಬೆಂಗಳೂರಿನ ಅತ್ಯಂತ ಕಾರ್ಯನಿರತ ಸಾರಿಗೆ ಕೇಂದ್ರಗಳಲ್ಲಿ ಒಂದಾಗಿ ಬೆಳೆಯಿತು. ಒಂದು ಕಾಲದಲ್ಲಿ ಉದಯರಂಗ, ಜಯರಂಗ, ಶ್ರೀರಾಮ್ ಸೇರಿದಂತೆ ಹಲವು ಖಾಸಗಿ ಬಸ್ ಸಂಸ್ಥೆಗಳು ಇಲ್ಲಿಂದಲೇ ತಮ್ಮ ಸೇವೆಗಳನ್ನು ಆರಂಭಿಸಿದ್ದವು. ಮೈಸೂರು, ಕೊಳ್ಳೇಗಾಲ, ಶಿವಮೊಗ್ಗ, ಮಂಗಳೂರು, ಬೆಳಗಾವಿ ಸೇರಿದಂತೆ ಕರ್ನಾಟಕದ ಅನೇಕ ಭಾಗಗಳಿಗೆ ಇಲ್ಲಿಂದಲೇ ಪ್ರಯಾಣ ಆರಂಭವಾಗುತ್ತಿತ್ತು. ಹಿರಿಯ ಬೆಂಗಳೂರಿಗರ ಪ್ರಕಾರ, “ಪ್ರಯಾಣ ಎಂದರೆ ಮೊದಲು ಕಲಾಸಿಪಾಳ್ಯ” ಎಂಬ ಮಾತು ಸಾಮಾನ್ಯವಾಗಿತ್ತು
ದಿನಕ್ಕೆ ಲಕ್ಷಾಂತರ ಪ್ರಯಾಣಿಕರ ಓಡಾಟ
ಇತ್ತೀಚಿನ ವರ್ಷಗಳವರೆಗೂ ಕಲಾಸಿಪಾಳ್ಯ ಬಸ್ ನಿಲ್ದಾಣವು ನಗರದೊಳಗಿನ ಹಾಗೂ ಹೊರರಾಜ್ಯದ ಸಾವಿರಾರು ಬಸ್‌ಗಳಿಗೆ ಸೇವೆ ನೀಡುತ್ತಿತ್ತು. ಪ್ರತಿದಿನ ಅಂದಾಜು 8 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಈ ಪ್ರದೇಶದ ಮೂಲಕ ಸಂಚರಿಸುತ್ತಿದ್ದರು ಎನ್ನಲಾಗುತ್ತದೆ. ರಾಜ್ಯ ಸರ್ಕಾರದ ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ (BMTC) ಬಸ್‌ಗಳ ಜೊತೆಗೆ, ಕೇರಳ ಮತ್ತು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಸಂಚರಿಸುವ ನೂರಾರು ಖಾಸಗಿ ಬಸ್‌ಗಳ ಪ್ರಮುಖ ಕೇಂದ್ರವೂ ಇದೇ ಆಗಿತ್ತು.
ಬದಲಾವಣೆಯತ್ತ ಸಾಗಿದ ಬಸ್ ನಿಲ್ದಾಣ
ಪ್ರಯಾಣಿಕರ ಸಂಖ್ಯೆ ಹೆಚ್ಚಿದಂತೆ ಮೂಲಸೌಕರ್ಯ ಮೇಲಿನ ಒತ್ತಡವೂ ಹೆಚ್ಚಾಯಿತು. ಕಸದ ಸಮಸ್ಯೆ, ಮಳೆಗಾಲದಲ್ಲಿ ಕೆಸರು, ಸ್ವಚ್ಛತೆಯ ಕೊರತೆ ಮುಂತಾದ ಕಾರಣಗಳಿಂದ ಈ ಬಸ್ ನಿಲ್ದಾಣವು ಹಲವು ಬಾರಿ ಸುದ್ದಿಯಾಯಿತು. ಇದನ್ನು ಗಮನಿಸಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), 2016ರಲ್ಲಿ ಸುಮಾರು ₹60 ಕೋಟಿ ವೆಚ್ಚದಲ್ಲಿ ಆಧುನಿಕ ಬಸ್ ಟರ್ಮಿನಲ್ ನಿರ್ಮಿಸಿ ಉತ್ತಮವಾದ ಸುಸಜ್ಜಿತವಾದ ಪ್ರಯಾಣಿಕರ ಸೌಲಭ್ಯ, ಸ್ವಚ್ಛತೆ ಮತ್ತು ಸುಧಾರಿತ ಸಾರಿಗೆ ವ್ಯವಸ್ಥೆಯನ್ನು ಒದಗಿಸುತ್ತಿದೆ.
ನಮ್ಮ ಮೆಟ್ರೋ ಆಗಮನ – ಪೇಟೆ ಪ್ರದೇಶಗಳಿಗೆ ಹೊಸ ದ್ವಾರ
ಕಲಾಸಿಪಾಳ್ಯದ ಸಂಪರ್ಕ ವ್ಯವಸ್ಥೆಗೆ ಹೊಸ ಆಯಾಮ ನೀಡಿದ್ದು ನಮ್ಮ ಮೆಟ್ರೋ ಹಸಿರು ಮಾರ್ಗ. 2017ರ ಜೂನ್‌ನಲ್ಲಿ ಕಾರ್ಯಾರಂಭ ಮಾಡಿದ ಕೆ.ಆರ್. ಮಾರುಕಟ್ಟೆ ಮೆಟ್ರೋ ನಿಲ್ದಾಣವು ಕಲಾಸಿಪಾಳ್ಯ ಮತ್ತು ಹಳೆಯ ಪೇಟೆ ಪ್ರದೇಶಗಳಿಗೆ ಪ್ರಮುಖ ಪ್ರವೇಶದ್ವಾರವಾಗಿದೆ. ಇದನ್ನು ಅನೇಕರು “ಪೇಟೆ ಪ್ರದೇಶಗಳ ದ್ವಾರ“ ಎಂದು ಕರೆಯುತ್ತಾರೆ.
ಈ ಮೆಟ್ರೋ ನಿಲ್ದಾಣದಿಂದ ನಡೆದು ಹೋಗಬಹುದಾದ ಅಂತರದಲ್ಲೇ ಇರುವ ಪ್ರಮುಖ ಸ್ಥಳಗಳು
ಬೆಂಗಳೂರು ಕೋಟೆ
ಬೆಂಗಳೂರು ನಗರದ ಇತಿಹಾಸಕ್ಕೆ ಸಾಕ್ಷಿಯಾಗಿರುವ ಬೆಂಗಳೂರು ಕೋಟೆಯನ್ನು ಕ್ರಿ.ಶ. 1537ರಲ್ಲಿ ಕೆಂಪೇಗೌಡರು ಮಣ್ಣಿನಿಂದ ನಿರ್ಮಿಸಿದರು. ನಂತರ 1761–1791ರ ಅವಧಿಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರು ಇದನ್ನು ಗ್ರಾನೈಟ್ ಕಲ್ಲಿನಿಂದ ಪುನರ್‌ನಿರ್ಮಿಸಿ ಬಲಿಷ್ಠ ಕೋಟೆಯನ್ನಾಗಿ ರೂಪಿಸಿದರು. 1791ರ ಆಂಗ್ಲ–ಮೈಸೂರು ಯುದ್ಧದಲ್ಲಿ ಬ್ರಿಟಿಷರು ಕೋಟೆಯನ್ನು ವಶಪಡಿಸಿಕೊಂಡರು. ಇಂದು ಕೋಟೆಯ ದೆಹಲಿ ದ್ವಾರ ಮತ್ತು ಕೆಲವು ಕೋಟೆಗೋಡೆಗಳು ಮಾತ್ರ ಉಳಿದಿದ್ದು, ಅವು ಬೆಂಗಳೂರಿನ ಶ್ರೀಮಂತ ಪರಂಪರೆಯ ಪ್ರತೀಕಗಳಾಗಿವೆ.
ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ
ಬೆಂಗಳೂರು ಕೋಟೆಯ ಸಮೀಪದಲ್ಲಿರುವ ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ (Tipu Sultan’s Summer Palace) ಇಂಡೋ–ಇಸ್ಲಾಮಿಕ್ ವಾಸ್ತುಶಿಲ್ಪದ ಅದ್ಭುತ ಮಾದರಿಯಾಗಿದೆ. ಇದರ ನಿರ್ಮಾಣವನ್ನು ಹೈದರ್ ಅಲಿ ಆರಂಭಿಸಿದ್ದು, 1791ರಲ್ಲಿ ಟಿಪ್ಪು ಸುಲ್ತಾನ ಪೂರ್ಣಗೊಳಿಸಿದರು. ಸಾಗುವಾನಿ ಮರದ ಕೆತ್ತನೆಗಳು, ಕಮಾನುಗಳು, ಬಾಲ್ಕನಿಗಳು ಮತ್ತು ಸುಂದರ ಭಿತ್ತಿಚಿತ್ರಗಳು ಈ ಅರಮನೆಯ ಪ್ರಮುಖ ಆಕರ್ಷಣೆಗಳು. ಬೇಸಿಗೆಯಲ್ಲಿ ಆಡಳಿತ ನಡೆಸಲು ಮತ್ತು ವಿದೇಶಿ ಅತಿಥಿಗಳನ್ನು ಸ್ವಾಗತಿಸಲು ಇದನ್ನು ಬಳಸಲಾಗುತ್ತಿತ್ತು. ಪ್ರಸ್ತುತ ಇದು ಪುರಾತತ್ವ ಇಲಾಖೆಯ ಸಂರಕ್ಷಿತ ಸ್ಮಾರಕವಾಗಿದೆ.
ವಿಕ್ಟೋರಿಯಾ ಆಸ್ಪತ್ರೆ
ವಿಕ್ಟೋರಿಯಾ ಆಸ್ಪತ್ರೆ ಬೆಂಗಳೂರಿನ ಅತಿದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿದೆ. 1900ರಲ್ಲಿ ರಾಣಿ ವಿಕ್ಟೋರಿಯಾ ಅವರ ಸ್ಮರಣಾರ್ಥ ಇದರ ನಿರ್ಮಾಣ ಆರಂಭವಾಗಿ, 1909ರಲ್ಲಿ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಯಿತು. ಬೆಂಗಳೂರು ಮೆಡಿಕಲ್ ಕಾಲೇಜಿನ ಪ್ರಮುಖ ಬೋಧನಾ ಆಸ್ಪತ್ರೆಯಾದ ಇದು ಸಾವಿರಾರು ರೋಗಿಗಳಿಗೆ ವಿಶೇಷ ಚಿಕಿತ್ಸೆಯನ್ನು ಒದಗಿಸುತ್ತಿದೆ. ಇಂಡೋ–ಸಾರಸೆನಿಕ್ ಶೈಲಿಯ ಕಟ್ಟಡ ವಿನ್ಯಾಸ ಮತ್ತು ನೂರಕ್ಕೂ ಹೆಚ್ಚು ವರ್ಷಗಳ ವೈದ್ಯಕೀಯ ಸೇವೆಯ ಇತಿಹಾಸದಿಂದ ಈ ಆಸ್ಪತ್ರೆ ವಿಶಿಷ್ಟ ಸ್ಥಾನ ಪಡೆದಿದೆ.
ವಾಣಿ ವಿಲಾಸ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ
ವಾಣಿ ವಿಲಾಸ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ 1930ರ ದಶಕದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ಸ್ಥಾಪನೆಯಾಯಿತು. ಮೈಸೂರು ಮಹಾರಾಣಿ ವಾಣಿ ವಿಲಾಸ್ ಸನ್ನಿಧಾನ ಅವರ ಹೆಸರನ್ನು ಈ ಆಸ್ಪತ್ರೆಗೆ ಇಡಲಾಗಿದೆ. ಪ್ರಸೂತಿ, ಸ್ತ್ರೀರೋಗ, ನವಜಾತ ಶಿಶು ಮತ್ತು ಮಕ್ಕಳ ಚಿಕಿತ್ಸೆಯಲ್ಲಿ ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಇದೂ ಒಂದಾಗಿದೆ. ಇಂದಿಗೂ ಸಾವಿರಾರು ತಾಯಂದಿರು ಮತ್ತು ಮಕ್ಕಳಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದೆ.
ಮಿಂಟೋ ಕಣ್ಣಿನ ಆಸ್ಪತ್ರೆ
ಮಿಂಟೋ ಕಣ್ಣಿನ ಆಸ್ಪತ್ರೆ ಭಾರತದ ಅತ್ಯಂತ ಹಳೆಯ ನೇತ್ರ ಚಿಕಿತ್ಸಾ ಸಂಸ್ಥೆಗಳಲ್ಲಿ ಒಂದಾಗಿದೆ. 1896ರಲ್ಲಿ ಸ್ಥಾಪನೆಯಾದ ಈ ಆಸ್ಪತ್ರೆಗೆ ಆಗಿನ ಭಾರತದ ವೈಸರಾಯ್ ಲಾರ್ಡ್ ಮಿಂಟೋ ಅವರ ಹೆಸರಿಡಲಾಗಿದೆ. ಕಣ್ಣಿನ ರೋಗಗಳ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ವೈದ್ಯಕೀಯ ಶಿಕ್ಷಣ ಮತ್ತು ನೇತ್ರ ಸಂಶೋಧನೆಯಲ್ಲಿ ಈ ಆಸ್ಪತ್ರೆ ದೇಶವ್ಯಾಪಿ ಖ್ಯಾತಿ ಪಡೆದಿದೆ. ಬೆಂಗಳೂರು ಮೆಡಿಕಲ್ ಕಾಲೇಜಿನ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಆಸ್ಪತ್ರೆ ಲಕ್ಷಾಂತರ ರೋಗಿಗಳಿಗೆ ದೃಷ್ಟಿದಾನ ನೀಡಿರುವ ಹೆಗ್ಗಳಿಕೆಯನ್ನು ಹೊಂದಿದೆ.
ಶ್ರೀ ಕೃಷ್ಣರಾಜೇಂದ್ರ ಸಿಲ್ವರ್ ಜ್ಯೂಬಿಲಿ ಪಾರ್ಕ್
ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 25 ವರ್ಷಗಳ ಯಶಸ್ವಿ ಆಡಳಿತವನ್ನು ಸ್ಮರಿಸುವ ಉದ್ದೇಶದಿಂದ 1927ರಲ್ಲಿ ಈ ಸುಂದರ ಸಾರ್ವಜನಿಕ ಉದ್ಯಾನವನ್ನು ನಿರ್ಮಿಸಲಾಯಿತು. ಈ ಉದ್ಯಾನವನದ ನಿರ್ಮಾಣಕ್ಕೆ ಮೈಸೂರು ಸಂಸ್ಥಾನದ ಪ್ರಸಿದ್ಧ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರ ದೂರದೃಷ್ಟಿ ಮತ್ತು ಯೋಜನೆ ಪ್ರಮುಖ ಕಾರಣವಾಗಿತ್ತು. ಬೆಂಗಳೂರಿನ ಹೃದಯಭಾಗದಲ್ಲಿ ಕಲಾಸಿಪಾಳ್ಯದ ಸಮೀಪದಲ್ಲಿರುವ ಈ ಉದ್ಯಾನವು ಒಂದು ಕಾಲದಲ್ಲಿ ನಗರದ ಪ್ರಮುಖ ಹಸಿರು ತಾಣವಾಗಿದ್ದು, ಸಾರ್ವಜನಿಕರ ವಿಶ್ರಾಂತಿ ಹಾಗೂ ಮನರಂಜನೆಯ ಕೇಂದ್ರವಾಗಿತ್ತು.
ಅಂದಿನ ಕಾಲದಲ್ಲಿ ಉದ್ಯಾನದಲ್ಲಿ ಸುಂದರವಾದ ಹೂವಿನ ತೋಟಗಳು, ವಿಶಾಲವಾದ ಹಸಿರು ಹುಲ್ಲುಗಾವಲುಗಳು, ಅಪರೂಪದ ನೆರಳು ನೀಡುವ ಮರಗಳು, ನಡೆದು ಸಂಚರಿಸಲು ಸುಸಜ್ಜಿತ ಪಾದಚಾರಿ ಮಾರ್ಗಗಳು ಹಾಗೂ ಮಕ್ಕಳ ಆಟದ ಸ್ಥಳಗಳಿದ್ದು, ನಗರವಾಸಿಗಳ ನೆಚ್ಚಿನ ವಿಹಾರ ತಾಣವಾಗಿ ಪ್ರಸಿದ್ಧಿ ಪಡೆದಿತ್ತು. ಕಾಲಕ್ರಮೇಣ ಸಮರ್ಪಕ ನಿರ್ವಹಣೆಯ ಕೊರತೆ, ಅತಿಕ್ರಮಣ, ಸ್ವಚ್ಛತೆಯ ಅಭಾವ ಹಾಗೂ ಮೂಲಸೌಕರ್ಯಗಳ ನಿರ್ಲಕ್ಷ್ಯದಿಂದ ಈ ಐತಿಹಾಸಿಕ ಉದ್ಯಾನ ತನ್ನ ಹಿಂದಿನ ವೈಭವವನ್ನು ಕಳೆದುಕೊಂಡಿದೆ.
ರಾಜಾ ಸೈಕಲ್ ಮಾರ್ಟ್
ಕಲಾಸಿಪಾಳ್ಯದ ಹೆಸರಿನೊಂದಿಗೆ ಹಲವು ದಶಕಗಳಿಂದ ಕೇಳಿಬರುವ ಹೆಸರು ರಾಜಾ ಸೈಕಲ್ ಮಾರ್ಟ್. 1940–50ರ ದಶಕದಲ್ಲಿ ಸ್ಥಾಪನೆಯಾದ ಈ ಅಂಗಡಿ, ಬೆಂಗಳೂರಿನ ಅತ್ಯಂತ ಹಳೆಯ ಸೈಕಲ್ ವ್ಯಾಪಾರ ಸಂಸ್ಥೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಆ ಕಾಲದಲ್ಲಿ ಮೈಸೂರು ಸಂಸ್ಥಾನ ಹಾಗೂ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬರುವ ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳಿಗೆ ಸೈಕಲ್‌ಗಳ ಪ್ರಮುಖ ಮಾರಾಟ ಕೇಂದ್ರವಾಗಿತ್ತು. Hercules, Raleigh, Phillips, Atlas, Avon ಮುಂತಾದ ಪ್ರಸಿದ್ಧ ಬ್ರ್ಯಾಂಡ್‌ಗಳ ಸೈಕಲ್‌ಗಳು ಇಲ್ಲಿ ದೊರೆಯುತ್ತಿದ್ದರು. ಹೊಸ ಸೈಕಲ್ ಮಾರಾಟದ ಜೊತೆಗೆ ಬಾಡಿಗೆ ಹಾಗೂ ರಿಪೇರಿ ಸೇವೆಯೂ ನೀಡಲಾಗುತ್ತಿತ್ತು.ಒಂದು ಕಾಲದಲ್ಲಿ ರಾಜಾ ಸೈಕಲ್ ಮಾರ್ಟ್‌ನಲ್ಲಿ ಸೈಕಲ್ ಖರೀದಿಸುವುದು ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬಗಳ ಹೆಮ್ಮೆಯ ವಿಷಯವಾಗಿತ್ತು.
ಕಲಾಸಿಪಾಳ್ಯದ ಸಾಂಸ್ಕೃತಿಕ ವೈವಿಧ್ಯ
ಕಲಾಸಿಪಾಳ್ಯ ಎಂದರೆ ಕೇವಲ ಬಸ್ ನಿಲ್ದಾಣ ಅಥವಾ ಮಾರುಕಟ್ಟೆಯಲ್ಲ. ಇಲ್ಲಿ ಒಂದೇ ಪ್ರದೇಶದಲ್ಲಿ ಹಿಂದೂ ದೇವಾಲಯಗಳು, ಮಸೀದಿಗಳು, ಜೈನ ಬಸದಿ, ಹಳೆಯ ಚಿತ್ರಮಂದಿರಗಳು, ವ್ಯಾಪಾರ ಮಳಿಗೆಗಳು, ಐತಿಹಾಸಿಕ ಉದ್ಯಾನಗಳು ಒಟ್ಟಾಗಿ ಕಂಡುಬರುವುದರಿಂದ ಇದು ಬೆಂಗಳೂರಿನ ಬಹುಸಂಸ್ಕೃತಿಯ ಪ್ರತೀಕವಾಗಿದೆ.
ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನ
ಬೆಂಗಳೂರಿನ ಹಳೆಯ ನಗರ ಭಾಗದಲ್ಲಿರುವ ಈ ದೇವಾಲಯವು ನಗರದ ಅತ್ಯಂತ ಪುರಾತನ ವೈಷ್ಣವ ದೇವಾಲಯಗಳಲ್ಲಿ ಒಂದಾಗಿದೆ. ಇದು ಅಂದಿನ ಬೆಂಗಳೂರು ಕೋಟೆಯ ಒಳಭಾಗದಲ್ಲಿದ್ದ ಕಾರಣ “ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನ” ಎಂದು ಕರೆಯಲ್ಪಡುತ್ತದೆ. ಸುಮಾರು 17ನೇ ಶತಮಾನದಲ್ಲಿ ಮೈಸೂರು ಒಡೆಯರ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂದು ಇತಿಹಾಸ ಹೇಳುತ್ತದೆ. ಇಲ್ಲಿ ಶ್ರೀ ವೆಂಕಟರಮಣ ಸ್ವಾಮಿಯ ಆರಾಧನೆ ನಡೆಯುತ್ತದೆ. ಎತ್ತರದ ರಾಜಗೋಪುರ, ದ್ರಾವಿಡ ಶೈಲಿಯ ವಾಸ್ತುಶಿಲ್ಪ, ಕಲ್ಲಿನ ಸ್ತಂಭಗಳು ಮತ್ತು ವೈಭವಯುತ ಉತ್ಸವಗಳು ಈ ದೇವಾಲಯದ ಪ್ರಮುಖ ಆಕರ್ಷಣೆಗಳಾಗಿವೆ. ವೈಕುಂಠ ಏಕಾದಶಿ ಹಾಗೂ ಬ್ರಹ್ಮೋತ್ಸವ ಸಂದರ್ಭದಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಜಲಕಂಠೇಶ್ವರಸ್ವಾಮಿ ದೇವಾಲಯ
ಕೋಟೆ ವೆಂಕಟರಮಣ ದೇವಸ್ಥಾನದ ಸಮೀಪದಲ್ಲಿರುವ ಈ ಪುರಾತನ ಶಿವಾಲಯವು ಹಳೆಯ ಬೆಂಗಳೂರಿನ ಶೈವ ಪರಂಪರೆಯ ಮಹತ್ವದ ಕೇಂದ್ರವಾಗಿದೆ. ಶ್ರೀ ಜಲಕಂಠೇಶ್ವರಸ್ವಾಮಿ ಮುಖ್ಯ ದೇವರು. “ಜಲಕಂಠ” ಎಂಬ ಹೆಸರಿನ ಕುರಿತು ಸ್ಥಳೀಯ ನಂಬಿಕೆಯಂತೆ, ಇಲ್ಲಿ ನೀರಿನ ಮೂಲ ಅಥವಾ ತೀರ್ಥದೊಂದಿಗೆ ಸಂಬಂಧಿತ ಪೌರಾಣಿಕ ಹಿನ್ನೆಲೆ ಇದೆ ಎಂದು ಹೇಳಲಾಗುತ್ತದೆ. ದೇವಾಲಯದಲ್ಲಿ ಶಿವಲಿಂಗ, ನಂದಿ, ಪಾರ್ವತಿ ಹಾಗೂ ಇತರ ಉಪದೇವತೆಗಳ ಸನ್ನಿಧಿಗಳಿವೆ. ಮಹಾಶಿವರಾತ್ರಿ, ಕಾರ್ತಿಕ ಮಾಸ ಮತ್ತು ಸೋಮವಾರದ ವಿಶೇಷ ಪೂಜೆಗಳು ಇಲ್ಲಿ ಭಕ್ತಿಭಾವದಿಂದ ನಡೆಯುತ್ತವೆ.
ಕಲಾಸಿಪಾಳ್ಯದ ಜುಮ್ಮಾ ಮಸೀದಿ
ಕಲಾಸಿಪಾಳ್ಯದ ಜುಮ್ಮಾ ಮಸೀದಿ ಈ ಭಾಗದ ಅತ್ಯಂತ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. 19ನೇ ಶತಮಾನದ ಕೊನೆಯಲ್ಲಿ ಅಥವಾ 20ನೇ ಶತಮಾನದ ಆರಂಭದಲ್ಲಿ ನಿರ್ಮಾಣಗೊಂಡಿದೆ ಎಂದು ಸ್ಥಳೀಯ ಇತಿಹಾಸಕಾರರು ಉಲ್ಲೇಖಿಸುತ್ತಾರೆ. ವ್ಯಾಪಾರಿಗಳ ಸಂಖ್ಯೆ ಹೆಚ್ಚಾದಂತೆ ಈ ಮಸೀದಿ ವಿಸ್ತರಣೆಗೊಂಡಿತು. ಕಲಾಸಿಪಾಳ್ಯವು ಸಾರಿಗೆ ಹಾಗೂ ವ್ಯಾಪಾರದ ಕೇಂದ್ರವಾಗಿದ್ದರಿಂದ ವಿವಿಧ ರಾಜ್ಯಗಳಿಂದ ಬಂದ ಮುಸ್ಲಿಂ ವ್ಯಾಪಾರಿಗಳು ಇಲ್ಲಿಯೇ ನೆಲೆಸಿದ್ದರು. ಪ್ರತಿ ಶುಕ್ರವಾರ ಸಾವಿರಾರು ಭಕ್ತರು ಇಲ್ಲಿ ಜುಮ್ಮಾ ನಮಾಜ್ ಸಲ್ಲಿಸುತ್ತಾರೆ. ರಂಜಾನ್ ತಿಂಗಳಲ್ಲಿ ವಿಶೇಷ ಪ್ರಾರ್ಥನೆಗಳು ಮತ್ತು ಇಫ್ತಾರ್ ಕಾರ್ಯಕ್ರಮಗಳು ನಡೆಯುತ್ತವೆ. ಈದ್ ಸಂದರ್ಭದಲ್ಲಿ ಸಾವಿರಾರು ಜನರು ಸೇರುವ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ.
ಟೈರ್ ರಿಸೆಟ್‌ನಲ್ಲಿ ದೇಶದ ಗಮನ ಸೆಳೆದ ಕಲಾಸಿಪಾಳ್ಯ
ಕಲಾಸಿಪಾಳ್ಯದ ಮತ್ತೊಂದು ವಿಶೇಷವೆಂದರೆ ಹಳೆಯ ಟೈರ್‌ಗಳಿಗೆ ಹೊಸ ಜೀವ ನೀಡುವ ‘ಟೈರ್ ರಿಸೆಟ್ಟಿಂಗ್‘. ಎತ್ತಿನ ಗಾಡಿ, ಟ್ರಾಕ್ಟರ್ ಮತ್ತು ನಂತರ ಲಾರಿಗಳ ಟೈರ್‌ಗಳನ್ನು ಮರುಬಳಕೆಗೆ ಸಿದ್ಧಪಡಿಸುವ ಪರಿಣತ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಒಂದು ಕಾಲದಲ್ಲಿ ಕರ್ನಾಟಕ ಮಾತ್ರವಲ್ಲ, ನೆರೆಯ ರಾಜ್ಯಗಳಿಂದಲೂ ಜನರು ಟೈರ್ ರಿಸೆಟ್ ಮಾಡಿಸಲು ಕಲಾಸಿಪಾಳ್ಯಕ್ಕೆ ಬರುತ್ತಿದ್ದರು. ಇಂದು ಈ ವೃತ್ತಿ ಬಹುತೇಕ ಕಣ್ಮರೆಯಾಗಿದ್ದು, ಕೆಲವೇ ಕುಟುಂಬಗಳು ಈ ಪರಂಪರೆಯನ್ನು ಉಳಿಸಿಕೊಂಡಿವೆ.
ರುಚಿಯ ನೆನಪುಗಳು
ಕಲಾಸಿಪಾಳ್ಯದ ಹೆಸರನ್ನು ಕೇಳಿದರೆ ಹಳೆಯ ಬೆಂಗಳೂರಿಗರಿಗೆ ಬಿರಿಯಾನಿ, ಸಮೋಸಾ ಮತ್ತು ‘ತೆಂಗಿನ ರೊಟ್ಟಿ’ (ಇಂದಿನ ದಿಲ್ ಪಸಂದ್) ನೆನಪಾಗುತ್ತದೆ.
ಎಸ್.ಎಲ್.ಎನ್. ಮತ್ತು ನಾಯ್ಡು ಹೋಟೆಲ್
ಕಲಾಸಿಪಾಳ್ಯದ ಹಳೆಯ ಗುರುತುಗಳಲ್ಲಿ ಎಸ್.ಎಲ್.ಎನ್. ಸಂಸ್ಥೆ ಮತ್ತು ನಾಯ್ಡು ಹೋಟೆಲ್ ಪ್ರಮುಖವಾದವು. ದಶಕಗಳ ಕಾಲ ವ್ಯಾಪಾರಿಗಳು, ಪ್ರಯಾಣಿಕರು ಮತ್ತು ಸ್ಥಳೀಯರ ಭೇಟಿಯ ತಾಣಗಳಾಗಿ ಇವು ಹೆಸರುವಾಸಿಯಾಗಿದ್ದವು. ಕಡಿಮೆ ಬೆಲೆಗೆ ರುಚಿಕರ ಊಟ ಸಿಗುತ್ತಿದ್ದ ಈ ಪ್ರದೇಶವು ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಪ್ರಯಾಣಿಕರ ನೆಚ್ಚಿನ ತಾಣವಾಗಿತ್ತು. “ಹತ್ತು ರೂಪಾಯಿಗೆ ಹೊಟ್ಟೆ ತುಂಬಾ ಊಟ” ಎಂಬ ನೆನಪುಗಳು ಇನ್ನೂ ಹಲವರ ಮಾತಿನಲ್ಲಿ ಜೀವಂತವಾಗಿವೆ.
ಕಲಾಸೀಪಾಳ್ಯದ ಕಾಮತ್ ಹೋಟೆಲ್
ಕಲಾಸೀಪಾಳ್ಯದ ಕಾಮತ್ ಹೋಟೆಲ್ ಬೆಂಗಳೂರಿನ ಹಳೆಯ ಉಪಹಾರ ಗೃಹಗಳಲ್ಲಿ ಒಂದಾಗಿ ಪ್ರಸಿದ್ಧವಾಗಿದೆ. ಕೆ.ಆರ್. ಮಾರ್ಕೆಟ್, ಕಲಾಸೀಪಾಳ್ಯ ಹಾಗೂ ಸುತ್ತಮುತ್ತಲಿನ ವ್ಯಾಪಾರಿಗಳಿಗೆ, ಪ್ರಯಾಣಿಕರಿಗೆ ಮತ್ತು ಸ್ಥಳೀಯರಿಗೆ ಹಲವು ದಶಕಗಳಿಂದ ರುಚಿಕರವಾದ ಸಾಂಪ್ರದಾಯಿಕ ದಕ್ಷಿಣ ಭಾರತೀಯ ಉಪಹಾರವನ್ನು ನೀಡುತ್ತಾ ಬಂದಿದೆ. ಬಿಸಿ ಬಿಸಿ ಇಡ್ಲಿ, ಮಸಾಲೆ ದೋಸೆ, ವಡೆ, ಖಾರಾ ಬಾತ್, ಕೇಸರಿ ಬಾತ್, ಫಿಲ್ಟರ್ ಕಾಫಿ ಹಾಗೂ ಊಟದ ರುಚಿಯಿಂದ ಈ ಹೋಟೆಲ್ ಅನೇಕ ಜನರ ಮೆಚ್ಚುಗೆ ಗಳಿಸಿದೆ. ಬೆಳಗ್ಗಿನ ಸಮಯದಲ್ಲಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಂದ ಹೋಟೆಲ್ ಸದಾ ಗಿಜಿಗುಡುತ್ತಿರುತ್ತದೆ.ಕಲಾಸೀಪಾಳ್ಯದ ವ್ಯಾಪಾರ ಚಟುವಟಿಕೆಗಳ ಜೊತೆಗೆ ಬೆಳೆದಿರುವ ಕಾಮತ್ ಹೋಟೆಲ್, ಕೇವಲ ಒಂದು ಉಪಹಾರ ಗೃಹವಲ್ಲ; ಹಳೆಯ ಬೆಂಗಳೂರಿನ ಆಹಾರ ಸಂಸ್ಕೃತಿಯನ್ನು ಇಂದಿಗೂ ಜೀವಂತವಾಗಿಟ್ಟಿರುವ ಹೆಗ್ಗುರುತುಗಳಲ್ಲಿ ಒಂದಾಗಿದೆ. ಅನೇಕ ಹಳೆಯ ಬೆಂಗಳೂರಿಗರ ನೆನಪುಗಳಲ್ಲಿ ಈ ಹೋಟೆಲ್‌ಗೆ ವಿಶೇಷ ಸ್ಥಾನವಿದೆ.
ಹಳೆಯ ಬೆಂಗಳೂರಿನ ಜೀವಂತ ನೆನಪು
ಇಂದು ಮೆಟ್ರೋ ರೈಲು, ಫ್ಲೈಓವರ್‌ಗಳು ಮತ್ತು ಆಧುನಿಕ ವಾಣಿಜ್ಯ ಸಂಕೀರ್ಣಗಳ ನಡುವೆ ಕಲಾಸಿಪಾಳ್ಯ ತನ್ನ ಹಳೆಯ ಗುರುತನ್ನು ಇನ್ನೂ ಉಳಿಸಿಕೊಂಡಿದೆ. ಒಂದು ಕಡೆ ಶತಮಾನಗಳ ಇತಿಹಾಸ ಹೊಂದಿರುವ ದೇವಾಲಯಗಳು, ಮತ್ತೊಂದು ಕಡೆ ಟಿಪ್ಪು ಸುಲ್ತಾನನ ಅರಮನೆ, ಇನ್ನೊಂದು ಕಡೆ ಗಿಜಿಗುಡುವ ಮಾರುಕಟ್ಟೆ, ಬಸ್ ನಿಲ್ದಾಣ ಮತ್ತು ಮೆಟ್ರೋ ಸಂಪರ್ಕ—ಇವೆಲ್ಲವೂ ಒಂದೇ ಪ್ರದೇಶದಲ್ಲಿ ಕಾಣಸಿಗುವುದು ಕಲಾಸಿಪಾಳ್ಯದ ವೈಶಿಷ್ಟ್ಯ. ಅದಕ್ಕಾಗಿಯೇ ಅನೇಕ ಇತಿಹಾಸಾಸಕ್ತರು ಹೇಳುವ “ಬೆಂಗಳೂರಿನ ಭೂತಕಾಲವನ್ನು ಒಂದೇ ದಿನದಲ್ಲಿ ನೋಡಬೇಕಾದರೆ, ಕಲಾಸಿಪಾಳ್ಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ಸುತ್ತು ಹಾಕಿದರೆ ಸಾಕು.” ಎನ್ನುವ ಮಾತು ಎಷ್ಟು ಸತ್ಯ ಮತ್ತು ಅರ್ಥಗರ್ಭಿತವಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ