ಒಂದೇ ಜಿಲ್ಲೆಯಲ್ಲಿ 97 ನದಿಗಳು! ಭಾರತದ ಪ್ರಕೃತಿ ವಿಸ್ಮಯ ‘ವಯನಾಡ್’ ಬಗ್ಗೆ ನಿಮಗೆ ಗೊತ್ತೇ?

ಭಾರತವು ಪ್ರಕೃತಿಯ ಅದ್ಭುತ ವೈವಿಧ್ಯತೆಯಿಂದ ವಿಶ್ವದ ಗಮನ ಸೆಳೆದಿರುವ ದೇಶ. ಹಿಮಾಲಯದ ಹಿಮಶಿಖರಗಳಿಂದ ಹಿಡಿದು ಸಮುದ್ರ ತೀರದ ಮರಳುಭೂಮಿವರೆಗೆ, ದಟ್ಟ ಕಾಡುಗಳಿಂದ ವಿಶಾಲ ನದಿಗಳವರೆಗೆ ಪ್ರತಿಯೊಂದು ಪ್ರದೇಶವೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಈ ವೈವಿಧ್ಯತೆಯ ನಡುವೆ, ಒಂದೇ ಜಿಲ್ಲೆಯ ವ್ಯಾಪ್ತಿಯಲ್ಲಿ ಬರೋಬ್ಬರಿ 97 ಸಣ್ಣ ಮತ್ತು ದೊಡ್ಡ ನದಿಗಳು ಹರಿಯುತ್ತವೆ ಎಂಬ ಸಂಗತಿ ಕೇಳಿದರೆ ಅಚ್ಚರಿಯಾಗುವುದು ಸಹಜ. ಆ ಪ್ರಕೃತಿ ವಿಸ್ಮಯವೇ ನಮ್ಮ ನೆರೆಯ ಕೇರಳ ರಾಜ್ಯ.

ಭಾರತದ ದಕ್ಷಿಣ ತುದಿಯಲ್ಲಿರುವ ಕೇರಳ ಭೌಗೋಳಿಕವಾಗಿ ಸಣ್ಣ ರಾಜ್ಯವಾಗಿದ್ದರೂ, ಪ್ರಕೃತಿ, ಸಂಸ್ಕೃತಿ, ಶಿಕ್ಷಣ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದ ವಿಶ್ವದ ಗಮನ ಸೆಳೆದಿರುವ ಅಪರೂಪದ ನೆಲವಾಗಿದೆ. ಸುಮಾರು 38,863 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ಈ ರಾಜ್ಯವು, ಶೇ. 100ರಷ್ಟು ಸಾಕ್ಷರತೆಯ ಗುರಿಯನ್ನು ಸಾಧಿಸಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕ, ಆರೋಗ್ಯ ಸೇವೆ, ಶಿಕ್ಷಣ ಮತ್ತು ಜೀವನಮಟ್ಟದಲ್ಲಿಯೂ ಕೇರಳ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಕೇರಳದ ಪಶ್ಚಿಮಕ್ಕೆ ಅರಬ್ಬಿ ಸಮುದ್ರದ ಸುಮಾರು 590 ಕಿಲೋಮೀಟರ್ ಉದ್ದದ ಕರಾವಳಿ, ಪೂರ್ವಕ್ಕೆ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಗಳು, ಮಧ್ಯಭಾಗದಲ್ಲಿ ಹಚ್ಚಹಸಿರಿನ ಕಾಡುಗಳು, ಅಸಂಖ್ಯಾತ ನದಿಗಳು, ಕೆರೆಗಳು, ಹಿನ್ನೀರು (Backwaters), ಜಲಪಾತಗಳು, ಚಹಾ ಮತ್ತು ಮಸಾಲೆ ತೋಟಗಳು ಈ ರಾಜ್ಯವನ್ನು ಪ್ರಕೃತಿಯ ಸ್ವರ್ಗವನ್ನಾಗಿಸಿವೆ.

“ಕೇರಳ” ಎಂಬ ಹೆಸರಿನ ಮೂಲವೂ ಕುತೂಹಲಕಾರಿಯಾಗಿದೆ. ಮಲಯಾಳಂ ಭಾಷೆಯಲ್ಲಿ “ಕೇರ” ಎಂದರೆ ತೆಂಗಿನ ಮರ ಮತ್ತು “ಆಳಂ” ಅಥವಾ “ಅಳಂ” ಎಂದರೆ ನೆಲ ಅಥವಾ ಪ್ರದೇಶ ಎಂಬ ಅರ್ಥವಿದೆ. ತೆಂಗಿನ ಮರಗಳಿಂದ ಸಮೃದ್ಧವಾಗಿರುವ ಈ ಭೂಮಿಗೆ “ಕೇರಳ” ಎಂಬ ಹೆಸರು ಬಂದಿದೆ ಎನ್ನುವುದು ಸಾಮಾನ್ಯವಾಗಿ ಒಪ್ಪಿಕೊಳ್ಳಲ್ಪಟ್ಟ ಅಭಿಪ್ರಾಯ. ಇನ್ನೊಂದು ಅಭಿಪ್ರಾಯದ ಪ್ರಕಾರ “ಚೇರ” ರಾಜವಂಶದ ಆಳ್ವಿಕೆಯಿಂದ “ಚೇರಳಂ” ಎಂಬ ಪದವು ಕ್ರಮೇಣ “ಕೇರಳ”ವಾಗಿ ರೂಪಾಂತರಗೊಂಡಿದೆ ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಅಪಾರವಾದ ನೈಸರ್ಗಿಕ ಸೌಂದರ್ಯ, ಶಾಂತ ವಾತಾವರಣ, ಆರೋಗ್ಯಕರ ಜೀವನಶೈಲಿ, ಶ್ರೀಮಂತ ಸಂಸ್ಕೃತಿ ಮತ್ತು ಆತಿಥ್ಯದಿಂದ ಕೇರಳವು ವಿಶ್ವದಾದ್ಯಂತ “God’s Own Country” (ದೇವರ ಸ್ವಂತ ನಾಡು) ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ. ಇದು ಕೇವಲ ಪ್ರವಾಸೋದ್ಯಮದ ಘೋಷವಾಕ್ಯವಲ್ಲ; ಪ್ರಕೃತಿಯ ಸೊಬಗು ಮತ್ತು ಮಾನವೀಯ ಮೌಲ್ಯಗಳ ಅಪೂರ್ವ ಸಂಗಮವನ್ನು ಕಂಡ ಪ್ರತಿಯೊಬ್ಬರೂ ಅನುಭವಿಸುವ ನಿಜವಾದ ಭಾವನೆಯಾಗಿದೆ.

ವಯನಾಡ್ – ನದಿಗಳ ತವರು, ಪ್ರಕೃತಿಯ ಸ್ವರ್ಗ

ಪಶ್ಚಿಮ ಘಟ್ಟಗಳ ಹಚ್ಚಹಸಿರಿನ ಮಡಿಲಲ್ಲಿ ನೆಲೆಸಿರುವ ವಯನಾಡ್, ಕೇರಳದ ಅತ್ಯಂತ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸುಮಾರು 700 ರಿಂದ 2,100 ಮೀಟರ್ ಎತ್ತರದಲ್ಲಿರುವ ಈ ಪ್ರದೇಶ ವರ್ಷಪೂರ್ತಿ ತಂಪಾದ ಹವಾಮಾನ, ದಟ್ಟ ಕಾಡುಗಳು, ಟೀ ಮತ್ತು ಕಾಫಿ ತೋಟಗಳು, ಮಸಾಲೆ ಬೆಳೆಗಳು ಹಾಗೂ ಅದ್ಭುತ ಜಲಪಾತಗಳಿಂದ ಪ್ರಸಿದ್ಧಿ ಪಡೆದಿದೆ.

ದಕ್ಷಿಣ-ಪಶ್ಚಿಮ ಹಾಗೂ ಉತ್ತರ-ಪೂರ್ವ ಮಾನ್ಸೂನ್ ಮಳೆಯ ಪರಿಣಾಮವಾಗಿ ಇಲ್ಲಿ ಪ್ರತಿವರ್ಷ ಸಾವಿರಾರು ಮಿಲಿಮೀಟರ್ ಮಳೆಯಾಗುತ್ತದೆ. ಈ ಅಪಾರ ಮಳೆಯ ನೀರು ಬೆಟ್ಟಗಳ ಇಳಿಜಾರಿನಲ್ಲಿ ಹರಿದು, ನೂರಾರು ಸಣ್ಣ ತೊರೆಗಳು ಮತ್ತು ಹೊಳೆಗಳಾಗಿ ರೂಪುಗೊಂಡು ಮುಂದೆ ನದಿಗಳಾಗುತ್ತವೆ. ಇದೇ ಕಾರಣಕ್ಕೆ ಒಂದೇ ಜಿಲ್ಲೆಯೊಳಗೆ 97 ನದಿಗಳು ಮತ್ತು ಜಲಮಾರ್ಗಗಳು ಹರಿಯುವ ಅಪರೂಪದ ಪ್ರದೇಶ ಎಂಬ ಹೆಗ್ಗಳಿಕೆಯನ್ನು ವಯನಾಡ್ ಪಡೆದಿದೆ.

ವಯನಾಡಿನ ಜಲಜಾಲ – 97 ನದಿಗಳು, ತೊರೆಗಳು ಮತ್ತು ಜಲಮಾರ್ಗಗಳ ನೆಲೆ

ವಯನಾಡ್ ಜಿಲ್ಲೆಯಲ್ಲಿ ಹರಿಯುವ 97 ಜಲಮಾರ್ಗಗಳಲ್ಲಿ ಪ್ರಮುಖವಾಗಿ ಕಂಡುಬರುವ ನದಿಗಳು ಮತ್ತು ಉಪನದಿಗಳಾದ

  • ಕಬಿನಿ (Kabini)
  • ಪನಾಮರಂ (Panamaram River)
  • ಮಾನಂತವಾಡಿ (Mananthavady River)
  • ತಿರುವೆಲ್ಲಿ ಹೊಳೆ
  • ಕರಪ್ಪುಝಾ (Karapuzha River)
  • ನೂಲ್ಪುಝಾ (Noolpuzha River)
  • ಬಾವಲಿ (Bavali River)
  • ಕುರುವಾ ದ್ವೀಪದ ಜಲಮಾರ್ಗಗಳು
  • ಕುಟ್ಟಿಯಾಡಿ ನದಿಯ ಉಗಮ ತೊರೆಗಳು
  • ಚಾಲಿಯಾರ್ ಜಲಾನಯನ ಪ್ರದೇಶದ ಹಲವು ಹೊಳೆಗಳು

ಇವುಗಳ ಜೊತೆಗೆ ಪಶ್ಚಿಮ ಘಟ್ಟದ ದಟ್ಟ ಕಾಡುಗಳಿಂದ ಹುಟ್ಟುವ 80ಕ್ಕೂ ಹೆಚ್ಚು ಸಣ್ಣ ತೊರೆಗಳು, ಋತುಮಾನದ ಹೊಳೆಗಳು ಹಾಗೂ ಜಲಮಾರ್ಗಗಳು ಸೇರಿ ಒಟ್ಟು ಸುಮಾರು 97 ಜಲಪ್ರವಾಹಗಳು ವಯನಾಡ್ ಜಿಲ್ಲೆಯಲ್ಲಿ ಹರಿಯುತ್ತವೆ ಎಂದು ಪರಿಸರ ಅಧ್ಯಯನಗಳು ಉಲ್ಲೇಖಿಸುತ್ತವೆ. ಈ ಜಲವ್ಯವಸ್ಥೆಯೇ ವಯನಾಡ್ ಅನ್ನು ಭಾರತದ ಅತ್ಯಂತ ಸಮೃದ್ಧ ಜಲಸಂಪತ್ತಿನ ಜಿಲ್ಲೆಗಳಲ್ಲಿ ಒಂದಾಗಿ ಗುರುತಿಸಿದೆ.

ಕಬಿನಿ – ಕರ್ನಾಟಕದ ಜೀವನಾಡಿಯಾಗಿ ಹರಿಯುವ ವಯನಾಡ್‌ನ ಕೊಡುಗೆ

ವಯನಾಡ್‌ನ ಅತ್ಯಂತ ಪ್ರಮುಖ ನದಿ ಕಬಿನಿ. ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶದಲ್ಲಿ ಹುಟ್ಟುವ ಕಬಿನಿ ನದಿ, ಮುಂದೆ ಕರ್ನಾಟಕವನ್ನು ಪ್ರವೇಶಿಸಿ, ಮೈಸೂರು ಜಿಲ್ಲೆಯ ಮೂಲಕ ಹರಿದು, ಕೊನೆಗೆ ಕಾವೇರಿ ನದಿಯನ್ನು ಸೇರುತ್ತದೆ.

ಕಬಿನಿಗೆ ಪನಾಮರಂ (Panamaram) ಮತ್ತು ಮಾನಂತವಾಡಿ (Mananthavady) ನದಿಗಳು ಪ್ರಮುಖ ಉಪನದಿಗಳಾಗಿವೆ. ಈ ಮೂರು ನದಿಗಳು ಸೇರಿ ವಯನಾಡ್‌ನ ಪರಿಸರ ವ್ಯವಸ್ಥೆಗೆ ಜೀವ ತುಂಬುತ್ತವೆ.

ಮಳೆಗಾಲದಲ್ಲಿ ಈ ನದಿಗಳು ತುಂಬಿ ಹರಿದು ಅನೇಕ ಸುಂದರ ಜಲಪಾತಗಳನ್ನು ನಿರ್ಮಿಸುತ್ತವೆ. ಸೂಚಿಪಾರಾ (Soochipara Falls), ಮೀನ್ಮುಟ್ಟಿ (Meenmutty Falls), ಕಣ್ತನ್ಪಾರಾ (Kanthanpara Falls) ಮುಂತಾದ ಜಲಪಾತಗಳು ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಜೀವವೈವಿಧ್ಯದ ಸ್ವರ್ಗ

ವಯನಾಡ್‌ನ ನದಿಗಳು ಕೇವಲ ನೀರಿನ ಮೂಲವಲ್ಲ.  ಇಡೀ ಪರಿಸರ ವ್ಯವಸ್ಥೆಯ ಜೀವನಾಡಿ.

ಇಲ್ಲಿನ ದಟ್ಟ ಕಾಡುಗಳಲ್ಲಿ:

  • ಆನೆಗಳು
  • ಹುಲಿಗಳು
  • ಚಿರತೆಗಳು
  • ಭಾರತೀಯ ಕಾಡೆಮ್ಮೆ (Gaur)
  • ಜಿಂಕೆಗಳು
  • ನೂರಾರು ಜಾತಿಯ ಪಕ್ಷಿಗಳು
  • ಅಪರೂಪದ ಉಭಯಚರಗಳು ಹಾಗೂ ಸರೀಸೃಪಗಳು ವಾಸಿಸುತ್ತಿವೆ.

ವಯನಾಡ್ ವನ್ಯಜೀವಿ ಅಭಯಾರಣ್ಯವು ನೀಲಗಿರಿ ಜೈವಿಕ ವಲಯ (Nilgiri Biosphere Reserve)ದ ಪ್ರಮುಖ ಭಾಗವಾಗಿದ್ದು, ಭಾರತದ ಅತ್ಯಂತ ಶ್ರೀಮಂತ ಜೀವವೈವಿಧ್ಯ ಪ್ರದೇಶಗಳಲ್ಲಿ ಒಂದಾಗಿದೆ.

ಕೃಷಿ ಮತ್ತು ಜನಜೀವನಕ್ಕೆ ಆಧಾರ

ಈ ನದಿಗಳಿಂದಾಗಿ ವಯನಾಡ್‌ನಲ್ಲಿ ಅಂತರ್ಜಲ ಮಟ್ಟ ವರ್ಷಪೂರ್ತಿ ಸಮೃದ್ಧವಾಗಿರುತ್ತದೆ. ಇಲ್ಲಿನ ರೈತರು ಅಕ್ಕಿ, ಕಾಫಿ, ಟೀ, ಏಲಕ್ಕಿ, ಕರಿಮೆಣಸು, ಶುಂಠಿ ಹಾಗೂ ಇತರ ಮಸಾಲೆ ಬೆಳೆಗಳನ್ನು ಬೆಳೆಯಲು ಈ ಜಲಸಂಪತ್ತಿಯನ್ನೇ ಅವಲಂಬಿಸಿದ್ದಾರೆ. ಕುಡಿಯುವ ನೀರು, ಕೃಷಿ, ಮೀನುಗಾರಿಕೆ ಮತ್ತು ಗ್ರಾಮೀಣ ಜೀವನ—ಎಲ್ಲವೂ ಈ ನದಿಗಳ ಸುತ್ತಲೇ ಬೆಳೆಯುತ್ತವೆ.

ಪ್ರವಾಸಿಗರ ಸ್ವರ್ಗ

ವಯನಾಡ್‌ಗೆ ಭೇಟಿ ನೀಡುವವರು ಕೇವಲ ಬೆಟ್ಟಗಳನ್ನು ನೋಡುವುದಕ್ಕಲ್ಲ.  ಪ್ರಕೃತಿಯ ನಾದವನ್ನು ಅನುಭವಿಸಲು ಬರುತ್ತಾರೆ. ಇಲ್ಲಿನ ನದಿಗಳ ತೀರದಲ್ಲಿ,

  • ಟ್ರೆಕ್ಕಿಂಗ್
  • ನದಿ ತೀರದ ಕ್ಯಾಂಪಿಂಗ್
  • ಬಿದಿರಿನ ತೇರು ಸವಾರಿ
  • ಪಕ್ಷಿ ವೀಕ್ಷಣೆ
  • ಪ್ರಕೃತಿ ಛಾಯಾಗ್ರಹಣ

ಇತ್ಯಾದಿ ಚಟುವಟಿಕೆಗಳು ಅತ್ಯಂತ ಜನಪ್ರಿಯವಾಗಿವೆ. ಬೆಳಗಿನ ಮಂಜು, ಬೆಟ್ಟಗಳ ನಡುವೆ ಹರಿಯುವ ನದಿಗಳು ಮತ್ತು ಪಕ್ಷಿಗಳ ಕಲರವವು ವಯನಾಡ್‌ಗೆ ವಿಭಿನ್ನ ಸೌಂದರ್ಯವನ್ನು ನೀಡುತ್ತದೆ.

ಪರಿಸರ ಸಂರಕ್ಷಣೆ ಅತ್ಯಗತ್ಯ

ಇತ್ತೀಚಿನ ವರ್ಷಗಳಲ್ಲಿ ವಯನಾಡ್ ಜಿಲ್ಲೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ದೇಶ-ವಿದೇಶಗಳಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಸುಮಾರು 97 ಸಣ್ಣ-ದೊಡ್ಡ ಹಳ್ಳಗಳು, ತೊರೆಗಳು ಮತ್ತು ನದಿಗಳು ಹರಿಯುವ ಈ ಪ್ರದೇಶವು ವರ್ಷಪೂರ್ತಿ ಹಚ್ಚಹಸಿರಿನಿಂದ ಕಂಗೊಳಿಸುವ ಪಶ್ಚಿಮ ಘಟ್ಟಗಳು, ದಟ್ಟ ಕಾಡುಗಳು, ಸಮೃದ್ಧ ಜೀವವೈವಿಧ್ಯ, ಮನಮೋಹಕ ಜಲಪಾತಗಳು ಹಾಗೂ ಪ್ರಶಾಂತ ಪ್ರಕೃತಿಯ ಕಾರಣದಿಂದ ಪ್ರಕೃತಿ ಪ್ರಿಯರು, ಛಾಯಾಗ್ರಾಹಕರು, ಸಾಹಸಪ್ರಿಯರು ಮತ್ತು ಪರಿಸರಾಸಕ್ತರಿಗೆ ಸ್ವರ್ಗವೇ ಸರಿ. ಪ್ರತಿಯೊಂದು ವಾರಾಂತ್ಯದಲ್ಲೂ ಲಕ್ಷಾಂತರ ಪ್ರವಾಸಿಗರು ವಯನಾಡ್‌ಗೆ ಆಗಮಿಸುತ್ತಿರುವುದು ಈ ಪ್ರದೇಶದ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಆದರೆ, ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ವೈಜ್ಞಾನಿಕ ಅಧ್ಯಯನವಿಲ್ಲದೆ ಕೈಗೊಳ್ಳುತ್ತಿರುವ ಕೆಲವು ಅಭಿವೃದ್ಧಿ ಕಾಮಗಾರಿಗಳು, ವಿಶೇಷವಾಗಿ ಬೆಟ್ಟಗಳನ್ನು ಕೊರೆದು ಸುರಂಗ ಮಾರ್ಗ ನಿರ್ಮಾಣ, ಅತಿಯಾದ ರಸ್ತೆ ವಿಸ್ತರಣೆ ಹಾಗೂ ನಿಯಂತ್ರಣವಿಲ್ಲದ ಕಟ್ಟಡ ನಿರ್ಮಾಣಗಳು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂಬ ಆತಂಕವನ್ನು ಪರಿಸರ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ, ಅನಧಿಕೃತವಾಗಿ ಹೋಮ್‌ಸ್ಟೇಗಳು, ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳನ್ನು ನಿರ್ಮಿಸಲು ಅರಣ್ಯ ಪ್ರದೇಶಗಳನ್ನು ಅತಿಕ್ರಮಿಸುತ್ತಿರುವುದು ಸಹ ಪರಿಸರ ಸಮತೋಲನಕ್ಕೆ ಧಕ್ಕೆ ಉಂಟುಮಾಡುತ್ತಿದೆ.

ಈ ಎಲ್ಲ ಬೆಳವಣಿಗೆಗಳ ಜೊತೆಗೆ ಹವಾಮಾನ ಬದಲಾವಣೆಯಿಂದ ಅತಿಯಾದ ಮಳೆ, ಭೂಕುಸಿತ ಮತ್ತು ಪ್ರವಾಹದಂತಹ ಪ್ರಕೃತಿ ವಿಕೋಪಗಳು ಪದೇಪದೇ ಸಂಭವಿಸುತ್ತಿದ್ದು, ಅಪಾರ ಪ್ರಮಾಣದ ಜೀವಹಾನಿ ಹಾಗೂ ಸಾವಿರಾರು ಕೋಟಿ ರೂಪಾಯಿಗಳ ಆಸ್ತಿ-ಪಾಸ್ತಿ ನಷ್ಟ ಉಂಟಾಗುತ್ತಿದೆ. ವಯನಾಡ್‌ನಂತಹ ಸೂಕ್ಷ್ಮ ಪರಿಸರ ವ್ಯವಸ್ಥೆ ಹೊಂದಿರುವ ಪ್ರದೇಶಗಳಲ್ಲಿ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಎರಡರ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

ಕೊನೆಯ ಮಾತು

ಇಂತಹ ಅಪರೂಪದ ನೈಸರ್ಗಿಕ ಸಂಪತ್ತು ಕೇವಲ ಕೇರಳದ ಹೆಮ್ಮೆ ಮಾತ್ರವಲ್ಲ, ಇಡೀ ಭಾರತದ ಅಮೂಲ್ಯ ಪರಂಪರೆಯಾಗಿದೆ. ಆದ್ದರಿಂದ ಈ ಪ್ರದೇಶವನ್ನು ಸಂರಕ್ಷಿಸುವ ಜವಾಬ್ದಾರಿ ಕೇವಲ ಸರ್ಕಾರದಷ್ಟೇ ಅಲ್ಲ. ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ನಮ್ಮ ಇಂದಿನ ನಿರ್ಲಕ್ಷ್ಯ ಮುಂದಿನ ಪೀಳಿಗೆಗೆ ಸರಿಪಡಿಸಲಾಗದ ಹಾನಿಯನ್ನು ಉಂಟುಮಾಡಬಹುದು. ಹೀಗಾಗಿ ಪ್ರಕೃತಿಯನ್ನು ಪ್ರೀತಿಸುವ ನಾವುಗಳೆಲ್ಲರೂ ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಅನುಸರಿಸಿ, ಪರಿಸರ ಸಂರಕ್ಷಣೆಗೆ ಕೈಜೋಡಿಸಿ, ಈ ಅದ್ಭುತ ಪ್ರಕೃತಿ ವೈಭವವನ್ನು ಮುಂದಿನ ತಲೆಮಾರುಗಳಿಗೂ ಉಳಿಸಿ ಹೋಗೋಣ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply