ಮಕ್ಕಳ ಸುರಕ್ಷತೆಯಲ್ಲಿ ಪರಿಚಿತ/ ಅಪರಿಚಿತ ವ್ಯಕ್ತಿಗಳ ಮೇಲೂ ಎಚ್ಚರ ಅಗತ್ಯ
ಕೃಷ್ಣನನ್ನು ಕೊಲ್ಲಲು ಪೂತನಿಯನ್ನು ಕಳುಹಿಸಿದ್ದ ಕಂಸ
ಶ್ರೀಕೃಷ್ಣನ ಬಾಲ ಲೀಲೆಗಳಲ್ಲಿ ಪೂತನಿ ವಧೆ ಅತ್ಯಂತ ಮಹತ್ವದ ಹಾಗೂ ಕುತೂಹಲಕಾರಿ ಪ್ರಸಂಗಗಳಲ್ಲಿ ಒಂದಾಗಿದೆ. ಮಥುರೆಯ ರಾಜ ಕಂಸನಿಗೆ ತನ್ನ ಸಹೋದರಿ ದೇವಕಿಯ ಎಂಟನೇ ಮಗನಿಂದಲೇ ತನ್ನ ಮರಣ ಸಂಭವಿಸಲಿದೆ ಎಂಬ ಆಕಾಶವಾಣಿಯ ನುಡಿಯ ಅನುಗುಣವಾಗಿ ಆತ ತನ್ನ ತಂಗಿ ಮತ್ತು ಭಾವನಾದ ದೇವಕಿ ಮತ್ತು ವಸುದೇವರನ್ನು ಬಂಧನದಲ್ಲಿಟ್ಟು ಅವರಿಬ್ಬರಿಗೂ ಹುಟ್ಟುತ್ತಿದ್ದ ಮಗುವನ್ನು ನಿರ್ಧಾಕ್ಷಿಣ್ಯವಾಗಿ ಹತ್ಯೆ ಮಾಡುತ್ತಿದ್ದನು.
ಆದರೆ ಅವರ 8ನೇ ಮಗುವಾಗಿ ಜನಿಸಿದ ಶ್ರೀಕೃಷ್ಣನನ್ನು ವಸುದೇವನು ರಾತ್ರೋ ರಾತ್ರಿ ಗೋಕುಲದಲ್ಲಿದ್ದ ಯಶೋಧೆಯ ಮನೆಯಲ್ಲಿಟ್ಟು ಬಂದ ವಿಷಯ ತಿಳಿದ ಕಂಸನಿಗೆ ಆತಂಕ ಹೆಚ್ಚಾಗಿ ಕೃಷ್ಣನನ್ನು ಕೊಲ್ಲಲು ವಿವಿಧ ರಾಕ್ಷಸರನ್ನು ಕಳುಹಿಸಿದ ಭಾಗವಾಗಿ ಪೂತನಿ ಎಂಬ ಭಯಾನಕ ರಾಕ್ಷಸಿಯನ್ನು ಗೋಕುಲಕ್ಕೆ ಕಳುಹಿಸಿದನು.
ಆಕೆ ಅತ್ಯಂತ ಸುಂದರವಾದ ಸ್ತ್ರೀಯ ರೂಪವನ್ನು ತಾಳಿ ಗೋಕುಲದಲ್ಲಿದ್ದ ಯಶೋಧೆಯ ಮನೆಗೆ ಬಂದು ಬಹಳ ಸುಂದರವಾಗಿದ್ದ ಬಾಲ ಕೃಷ್ಣನನ್ನು ಆಟವಾಡಿಸುವ ರೂಪದಲ್ಲಿ ಎತ್ತಿಕೊಂಡು ಮುದ್ದಾಡಿಸುತ್ತಿದ್ದದ್ದನ್ನು ಕಂಡ ಯಶೋಧೆಯೂ ತನ್ನ ಪಾಡಿಗೆ ತಾನು ಕೆಲಸದಲ್ಲಿ ನಿರತಳಾದ ಸಮಯವನ್ನೇ ನೋಡಿಕೊಂಡು, ಪೂತನಿಯು ವಿಷ ಲೇಪಿಸಿದ ತನ್ನ ಸ್ತನದಿಂದ ಹಾಲುಣಿಸಲು ಮುಂದಾದಾಗ, ಬಾಲ ಕೃಷ್ಣನು ಅವಳ ಹಾಲನ್ನು ಕುಡಿಯುವ ನೆಪದಲ್ಲಿ ಅವಳ ಜೀವ ಶಕ್ತಿಯನ್ನೇ ಹೀರಿಕೊಳ್ಳಲು ಮುಂದಾದಾಗ, ನೋವನ್ನು ತಾಳಲಾರದ ಪೂತನಿ ತನ್ನ ನಿಜವಾದ ರಾಕ್ಷಸಿ ರೂಪವನ್ನು ತಾಳಿದ್ದನ್ನು ಕಂಡು ಇಡೀ ಗೋಕುಲವೇ ಬೆಚ್ಚಿಬಿದ್ದಿತ್ತು. ಪೂತನಿ ಎಷ್ಟೇ ದೈತ್ಯಾಕಾರದ ರೂಪವನ್ನು ತಾಳಿದರೂ, ಬಾಲಕೃಷ್ಣನು ಅದಕ್ಕೆ ಜಗ್ಗದೆ ಆಕೆಯನ್ನು ವಧಿಸಿದ ಕಥೆ ಎಲ್ಲರಿಗೂ ತಿಳಿದಿದೆ.
ಪೂತನಿಯ ಜಾಗದಲ್ಲಿ ಕಾಮಾಂಧರು
ಪ್ರಸ್ತುತವಾಗಿ ಆ ಪೂತನಿಯ ಜಾಗದಲ್ಲಿ ಕಾಮಾಂಧರು ಹುಟ್ಟಿಕೊಂಡಿದ್ದು, ತಮ್ಮ ಕಾಮದ ತೃಷೆಯನ್ನು ತೀರಿಸಿಕೊಳ್ಳಲು ಪುಟ್ಟ ಪುಟ್ಟ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಆತಂಕಕಾರಿ ಬೆಳವಣಿಗೆ ದೇಶಾದ್ಯಂತ ಸುದ್ದಿ ಮಾಡುತ್ತಿರುವುದು ನಿಜಕ್ಕೂ ಆಘಾತಕಾರಿಯಾದ ವೆಳವಣಿಗೆಯಾಗಿದ್ದು, ಮೂರು ತಿಂಗಳ ಕಂದಮ್ಮನ ಮೇಲೆಯೇ ಪರಿಚಿತ ವ್ಯಕ್ತಿಯಿಂದಾದ ದೌರ್ಜನ್ಯದಿಂದಾಗಿ ಪುಟ್ಟ ಪುಟ್ಟ ಮಕ್ಕಳ ಸುರಕ್ಷತೆಯಲ್ಲಿ ಬಹಳ ಎಚ್ಚರವಹಿಸಬೇಕಾದ ಅಗತ್ಯ ಕಂಡುಬಂದಿದೆ.
ಮೂರು ತಿಂಗಳ ಹಸುಗೂಸಿನ ಮೇಲೆ ಪರಿಚಿತ ವ್ಯಕ್ತಿಯೊಬ್ಬನಿಂದ ಲೈಂಗಿಕ ದೌರ್ಜನ್ಯ
ಮೂರು ತಿಂಗಳ ಹಸುಗೂಸಿನ ಮೇಲೆ ಪಕ್ಕದ ಮನೆಯ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಅತ್ಯಂತ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ ಎಂದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೋಷಕರಿಗೆ ಪರಿಚಿತ ವ್ಯಕ್ತಿಯಾಗಿದ್ದರಿಂದ ಅನುಮಾನ ಬಂದಿರಲಿಲ್ಲ
ಘಟನೆ ನಡೆದ ಸಂದರ್ಭದಲ್ಲಿ ಮಗುವಿನ ತಾಯಿ ಮನೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ತಂದೆ ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದು., ಮನೆಯ ಬಾಗಿಲು ತೆರೆದಿದ್ದು, ಪೋಷಕರಿಗೆ ಪರಿಚಿತನಾಗಿದ್ದ ಈ ಹಿಂದೆ ಕೂಡ ಮಗುವನ್ನು ನೋಡಲು ಅಥವಾ ಆಟವಾಡಿಸಲು ಮನೆಗೆ ಬರುತ್ತಿದ್ದ ರೆಹೊರೆಯ ವ್ಯಕ್ತಿಯಾಗಿದ್ದ ಆರೋಪಿಯು, “ಮಗುವನ್ನು ಆಟ ಆಡಿಸುತ್ತೇನೆ” ಎಂದು ಹೇಳಿ ಮಗುವನ್ನು ಎತ್ತಿಕೊಂಡು ಮನೆಯಿಂದ ಹೊರಗೆ ಕರೆದೊಯ್ದಿದ್ದಾನೆ
ಹೀಗಾಗಿ, ಪರಿಚಿತ ವ್ಯಕ್ತಿಯೊಬ್ಬ ಮಗುವನ್ನು ಆಟವಾಡಿಸಲು ಎತ್ತಿಕೊಂಡು ಹೋಗುತ್ತಿದ್ದಾನೆ ಎಂಬ ಕಾರಣಕ್ಕೆ ಪೋಷಕರಿಗೆ ಯಾವುದೇ ಅನುಮಾನ ಬಂದಿರಲಿಲ್ಲ. ಆತ ಮಗುವನ್ನು ತನ್ನ ಮನೆಗೆ ಕರೆದೊಯ್ದು ದೌರ್ಜನ್ಯ ಎಸಗಿ, ಬಳಿಕ ಅಳುತ್ತಿದ್ದ ಮಗುವನ್ನು ಮತ್ತೆ ಹಾಸಿಗೆಯ ಮೇಲೆ ಮಲಗಿಸಿ ಅಲ್ಲಿಂದ ತೆರಳಿದ ಸ್ವಲ್ಪ ಸಮಯದ ನಂತರ ಮಗು ನಿರಂತರವಾಗಿ ಅಳುತ್ತಿರುವುದನ್ನು ಗಮನಿಸಿದ ತಾಯಿ ಮಗುವಿನ ಬಳಿ ತೆರಳಿದಾಗ ಪರಿಸ್ಥಿತಿ ನೋಡಿ ಆತಂಕಗೊಂಡಿದ್ದಾರೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಮಗುವಿನ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಇಂತಹ ಘಟನೆಗಳು ನಮಗೆ ಅತ್ಯಂತ ಕಠಿಣವಾದ, ಆದರೆ ಅಗತ್ಯವಾದ ಒಂದು ವಿಷಯವನ್ನು ನೆನಪಿಸುತ್ತದೆ. ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳಲ್ಲಿ ಆರೋಪಿಗಳು ಸದಾ ಅಪರಿಚಿತರೇ ಆಗಿರಬೇಕೆಂದಿಲ್ಲ. ಕೆಲವೊಮ್ಮೆ ಮಗುವಿಗೂ, ಪೋಷಕರಿಗೂ ಪರಿಚಿತರಾಗಿರುವ ವ್ಯಕ್ತಿಗಳಿಂದಲೇ ಅಪಾಯ ಎದುರಾಗಬಹುದು. ಆದ್ದರಿಂದ ಮಕ್ಕಳ ಸುರಕ್ಷತೆಯಲ್ಲಿ “ಈ ವ್ಯಕ್ತಿ ನಮಗೆ ಪರಿಚಿತರು”, “ನೆರೆಮನೆಯವರು”, “ಸಂಬಂಧಿಕರು”, “ಕುಟುಂಬದ ಸ್ನೇಹಿತರು” ಎಂಬ ಕಾರಣಕ್ಕೆ ಮಾತ್ರ ಸಂಪೂರ್ಣ ನಂಬಿಕೆ ಇಡುವುದು ಸೂಕ್ತವಲ್ಲ.
ವಿಶೇಷವಾಗಿ ಮೂರು ತಿಂಗಳು, ಆರು ತಿಂಗಳು ಅಥವಾ ಒಂದು ವರ್ಷದಂತಹ ಅತಿ ಚಿಕ್ಕ ಮಕ್ಕಳಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವೇ ಇಲ್ಲ. ಅವರು ಏನಾಗುತ್ತಿದೆ ಎಂಬುದನ್ನು ಹೇಳಲೂ ಸಾಧ್ಯವಿಲ್ಲ. ಹೀಗಾಗಿ ಅವರ ಸುರಕ್ಷತೆಯ ಸಂಪೂರ್ಣ ಹೊಣೆಗಾರಿಕೆ ದೊಡ್ಡವರ ಮೇಲಿದೆ.
ಹುಡುಗಿಯರಷ್ಟೇ ಅಲ್ಲ, ಎಲ್ಲ ಮಕ್ಕಳ ಸುರಕ್ಷತೆಯೂ ಮುಖ್ಯ
ಮಕ್ಕಳ ಸುರಕ್ಷತೆ ಕುರಿತು ಮಾತನಾಡುವಾಗ ವಿಶೇಷವಾಗಿ ಹೆಣ್ಣುಮಕ್ಕಳ ಬಗ್ಗೆ ಹೆಚ್ಚಿನ ಎಚ್ಚರಿಕೆ ಅಗತ್ಯ ಎಂಬುದು ಸತ್ಯವಾದರೂ, ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುವ ಅಪಾಯ ಹುಡುಗಿಯರಿಗೆ ಮಾತ್ರ ಸೀಮಿತವಲ್ಲ. ಹುಡುಗರು ಸೇರಿದಂತೆ ಪ್ರತಿಯೊಂದು ಮಗುವಿಗೂ ಸುರಕ್ಷಿತ ವಾತಾವರಣದ ಅಗತ್ಯವಿದೆ. ಆದ್ದರಿಂದ ಚಿಕ್ಕ ಮಗುವನ್ನು ಯಾರಿಗಾದರೂ ಒಬ್ಬಂಟಿಯಾಗಿ ಒಪ್ಪಿಸುವ ಮೊದಲು ಪೋಷಕರು ಒಂದಿಷ್ಟು ಯೋಚಿಸುವುದು ಅತ್ಯಗತ್ಯ.
ಮಕ್ಕಳ ಸುರಕ್ಷತೆಗಾಗಿ ಪೋಷಕರು ಏನು ಮಾಡಬಹುದು?
- ಮಗುವನ್ನು ಪರಿಚಯವಿರುವ ವ್ಯಕ್ತಿಯೊಂದಿಗೂ ದೀರ್ಘಕಾಲ ಒಬ್ಬಂಟಿಯಾಗಿ ಬಿಡಬೇಡಿ.
- “ಆಟ ಆಡಿಸುತ್ತೇನೆ” ಎಂದು ಯಾರಾದರೂ ಮಗುವನ್ನು ಬೇರೆ ಕೋಣೆಗೆ ಅಥವಾ ಮನೆಯಿಂದ ಹೊರಗೆ ಕರೆದೊಯ್ಯಲು ಮುಂದಾದರೆ ಗಮನವಿರಲಿ.
- ಮಗು ತುಂಬಾ ಚಿಕ್ಕದಾಗಿದ್ದರೆ ಅದರ ಮೇಲೆ ಸದಾ ದೃಷ್ಟಿ ಇರಿಸುವುದು ಅತ್ಯಂತ ಸುರಕ್ಷಿತ ಕ್ರಮ.
- ಮಗುವನ್ನು ನೋಡಿಕೊಳ್ಳುವ ವ್ಯಕ್ತಿಗಳ ಬಗ್ಗೆ ಕುಟುಂಬದ ಎಲ್ಲರೂ ಸ್ಪಷ್ಟವಾಗಿ ತಿಳಿದುಕೊಂಡಿರಲಿ.
- ಮಕ್ಕಳಿಗೆ ವಯಸ್ಸಿಗೆ ಅನುಗುಣವಾಗಿ ‘ಗುಡ್ ಟಚ್–ಬ್ಯಾಡ್ ಟಚ್’, ವೈಯಕ್ತಿಕ ಗಡಿ ಮತ್ತು ಸುರಕ್ಷತೆ ಕುರಿತು ಕಲಿಸಬೇಕು.
- ಮಗುವಿನ ವರ್ತನೆಯಲ್ಲಿ ಏಕಾಏಕಿ ಬದಲಾವಣೆ ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು.
- ಮಗು ಏನಾದರೂ ಅಸಹಜ ಅನುಭವದ ಬಗ್ಗೆ ಹೇಳಿದರೆ ಅದನ್ನು ತಕ್ಷಣ ನಂಬಿ, ಶಾಂತವಾಗಿ ಆಲಿಸಿ ಮತ್ತು ಸೂಕ್ತ ನೆರವು ಪಡೆಯಬೇಕು.
- ಮಗುವಿನ ಮೇಲೆ ಯಾವುದೇ ರೀತಿಯ ದೌರ್ಜನ್ಯದ ಅನುಮಾನ ಬಂದರೂ ತಕ್ಷಣ ವೈದ್ಯಕೀಯ ಮತ್ತು ಕಾನೂನು ನೆರವು ಪಡೆಯುವುದು ಅಗತ್ಯ.
ನಂಬಿಕೆ ಇರಲಿ… ಆದರೆ ಮಕ್ಕಳ ಸುರಕ್ಷತೆಯಲ್ಲಿ ಎಚ್ಚರವೂ ಇರಲಿ
ಇಲ್ಲಿ ಮುಖ್ಯವಾದ ಸಂದೇಶ “ಯಾರನ್ನೂ ನಂಬಬೇಡಿ” ಎಂಬುದಲ್ಲ. ಬದಲಿಗೆ, “ನಂಬಿಕೆ ಇರಲಿ, ಆದರೆ ಮಕ್ಕಳ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ಇರಬಾರದು.” ಪರಿಚಯ, ಸಂಬಂಧ ಅಥವಾ ನೆರೆಹೊರೆಯ ಆತ್ಮೀಯತೆಗಿಂತ ಮಗುವಿನ ಸುರಕ್ಷತೆ ಯಾವಾಗಲೂ ಮೊದಲ ಆದ್ಯತೆ ಆಗಿರಬೇಕು. ಮಕ್ಕಳು ನಮ್ಮ ಜೀವನದ ಅತ್ಯಮೂಲ್ಯ ಹೊಣೆಗಾರಿಕೆ. ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳುವಷ್ಟು ದೊಡ್ಡವರಾಗುವವರೆಗೆ, ಅವರ ಪರವಾಗಿ ನಾವು ಎಚ್ಚರಿಕೆಯಿಂದಿರಬೇಕು. ಒಬ್ಬ ವ್ಯಕ್ತಿ ಎಷ್ಟೇ ಪರಿಚಿತರಾಗಿರಲಿ, ಮಗುವನ್ನು ಅವರೊಂದಿಗೆ ಒಬ್ಬಂಟಿಯಾಗಿ ಕಳುಹಿಸುವ ಮೊದಲು ಒಮ್ಮೆ ಯೋಚಿಸುವುದು ತಪ್ಪಲ್ಲ. ಒಂದು ಕ್ಷಣದ ಎಚ್ಚರಿಕೆ, ಒಂದು ಮಗುವಿನ ಇಡೀ ಬದುಕನ್ನು ರಕ್ಷಿಸಬಹುದು. ಮಕ್ಕಳನ್ನು ಭಯಪಡಿಸುವುದಲ್ಲ. ಅವರನ್ನು ಸುರಕ್ಷಿತವಾಗಿಡುವುದು ನಮ್ಮ ಜವಾಬ್ದಾರಿಯೇ ಆಗಿರುತ್ತದೆ
ಚಿಕ್ಕ ಮಕ್ಕಳೆಂಬುದನ್ನೂ ಲೆಕ್ಕಿಸದೆ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರ ವಿರುದ್ಧ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಆರೋಪ ಸಾಬೀತಾಗಿ ನ್ಯಾಯಾಲಯದಲ್ಲಿ ತಪ್ಪಿತಸ್ಥರೆಂದು ಘೋಷಿಸಲ್ಪಟ್ಟವರಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು (ಆ ಕೂಡಲೇ ಗುಂಡಿಕ್ಕಿ ಕೊಲ್ಲಬೇಕು ಅಥವಾ ಗಲ್ಲಿಗೇರಿಸಬೇಕು), ಇಂತಹ ಕೃತ್ಯಗಳಿಗೆ ಮುಂದಾಗುವ ಇತರರಿಗೆ ಇದು ಕಠಿಣ ಎಚ್ಚರಿಕೆಯಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಇಂತಹ ಅಮಾನವೀಯ ಕೃತ್ಯಗಳಿಗೆ ಯಾವುದೇ ರೀತಿಯ ಸಹಾನುಭೂತಿ ತೋರಿಸದೆ, ಕಾನೂನುಬದ್ಧವಾಗಿ ಶೀಘ್ರ ಹಾಗೂ ಕಠಿಣ ಶಿಕ್ಷೆ ದೊರೆಯಬೇಕು ಎಂಬ ಆಗ್ರಹವೂ ಕೇಳಿಬರುತ್ತಿರುವುದು ಸಮಾಜದ ಉತ್ತಮ ಬೆಳವಣಿಗೆಯಾಗಿದೆ ಅಲ್ಲೇ?