ಬೆಂಗಳೂರಿನ ಅತ್ಯಂತ ಜನನಿಬಿಡ, ಗಿಜಿಗುಡುವ ಮತ್ತು ಸದಾ ಚಟುವಟಿಕೆಯಿಂದಿರುವ ಪ್ರದೇಶಗಳ ಪಟ್ಟಿಯಲ್ಲಿ ಶಿವಾಜಿನಗರಕ್ಕೆ ವಿಶೇಷ ಸ್ಥಾನವಿದೆ. ಬೆಳಗಿನ ಜಾವ ರಸೆಲ್ ಮಾರ್ಕೆಟ್‌ನಲ್ಲಿ ಹೂವು, ತರಕಾರಿ, ಹಣ್ಣು, ಮೀನು ಮತ್ತು ಮಾಂಸದ ವ್ಯಾಪಾರ ಶುರುವಾಗುತ್ತದೆ. ಸ್ವಲ್ಪ ದೂರದಲ್ಲಿ ಮಸೀದಿಯಿಂದ ನಮಾಜಿನ ಕರೆ ಕೇಳಿಸುತ್ತದೆ. ಮತ್ತೊಂದು ಕಡೆ ದೇವಾಲಯದ ಗಂಟೆ ಮೊಳಗುತ್ತದೆ. ಸೇಂಟ್ ಮೇರೀಸ್ ಬೆಸಿಲಿಕಾದ ಗೋಪುರ ಕಾಣಿಸುತ್ತದೆ. ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಅಂಗಡಿಗಳು ಬಾಗಿಲು ತೆರೆಯುತ್ತವೆ. ಸೆಪಿಂಗ್ಸ್ ರಸ್ತೆಯಲ್ಲಿ ದರ್ಜಿಗಳು ಮತ್ತು ಬಟ್ಟೆ ವ್ಯಾಪಾರಿಗಳು ತಮ್ಮ ಕೆಲಸ ಆರಂಭಿಸುತ್ತಾರೆ. ಸಂಜೆಯಾಗುತ್ತಿದ್ದಂತೆ ಕಬಾಬ್, ಬಿರಿಯಾನಿ, ಸಮೋಸಾ, ಫಾಲೂದಾ ಮತ್ತು ಚಹಾದ ಪರಿಮಳ ಗಾಳಿಯಲ್ಲಿ ಬೆರೆತುಹೋಗುತ್ತದೆ. ಇದೇ ಶಿವಾಜಿನಗರ.
ಇದು ಕೇವಲ ಒಂದು ಬಡಾವಣೆ ಅಲ್ಲ. ಇದು ಬೆಂಗಳೂರಿನ ಕ್ಯಾಂಟೋನ್ಮೆಂಟ್ ಇತಿಹಾಸ, ಮಾರುಕಟ್ಟೆ ಸಂಸ್ಕೃತಿ, ಧಾರ್ಮಿಕ ವೈವಿಧ್ಯ, ವಲಸೆ ಸಮುದಾಯಗಳು, ಆಹಾರ ಪರಂಪರೆ, ಸಾರ್ವಜನಿಕ ಸಾರಿಗೆ ಮತ್ತು ರಾಜಕೀಯ ಒಂದೇ ಕಡೆ ಸೇರುವ ಜೀವಂತ ನಗರಪ್ರದೇಶ ಇವೆಲ್ಲವೂ ಬೆರೆತಿರುವ ಒಂದು ಕುತೂಹಲಕಾರಿ ಇತಿಹಾಸವಿದ್ದು, ಅದರ ಸಂಪೂರ್ಣ ಇತಿಹಾಸವನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಶಿವಾಜಿನಗರಕ್ಕೆ ಆ ಹೆಸರು ಹೇಗೆ ಬಂತು?
ಇಂದಿನ ಶಿವಾಜಿನಗರವನ್ನು ಬ್ರಿಟಿಷ್ ಕಾಲದಲ್ಲಿ Blackpally, Tasker Town ಮತ್ತು Dandu ಎಂಬ ಹೆಸರುಗಳಿಂದಲೂ ಕರೆಯಲಾಗುತ್ತಿತ್ತು. 1956ರಲ್ಲಿ ಬೆಂಗಳೂರು ಸಿಟಿ ಕಾರ್ಪೊರೇಷನ್‌ನ ಕೌನ್ಸಿಲರ್ ಹಾಗೂ ವಿರೋಧ ಪಕ್ಷದ ನಾಯಕರಾಗಿದ್ದ ಎನ್.ಆರ್. ಮೂರ್ತಿ ಅವರು ಈ ಪ್ರದೇಶಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ನೀಡಿದರು ಎಂಬ ದಾಖಲೆ ಇದೆ.
ಮತ್ತೊಂದು ಜನಪ್ರಿಯ ಐತಿಹ್ಯದ ಪ್ರಕಾರ, ಶಿವಾಜಿ ಮಹಾರಾಜರಿಗೆ ಬೆಂಗಳೂರಿನೊಂದಿಗೆ ಐತಿಹಾಸಿಕ ಸಂಬಂಧವಿದೆ. ಅವರ ತಂದೆ ಶಹಾಜಿ ಭೋಸಲೆ ಅವರು ಬೆಂಗಳೂರಿನ ಆಡಳಿತದೊಂದಿಗೆ ಸಂಬಂಧ ಹೊಂದಿದ್ದರು. ಶಿವಾಜಿ ಮಹಾರಾಜರು ತಮ್ಮ ಬಾಲ್ಯದ ಕೆಲವು ವರ್ಷಗಳನ್ನು ಬೆಂಗಳೂರಿನಲ್ಲಿ ಕಳೆದ ಹಿನ್ನೆಲೆಯಲ್ಲಿ, ಮತ್ತು ಈ ಪ್ರದೇಶದಲ್ಲಿ ಮರಾಠಿ ಮಾತನಾಡುವ ಬಹಳ ಮಂದಿ ದರ್ಜಿಯವರು ಇಂದಿಗೂ ಇರುವ ಕಾರಣ ಈ ಪ್ರದೇಶಕ್ಕೆ ಶಿವಾಜಿ ಮಹಾರಾಜರ ಹೆಸರು ಬಂದಿದೆ ಎನ್ನುವ ನಂಬಿಕೆಯೂ ಇದೆ.
ಶಿವಾಜಿನಗರದ ಹಳೆಯ ಹೆಸರು — Blackpally!
ಶಿವಾಜಿನಗರದ ಇತಿಹಾಸದಲ್ಲಿ Blackpally ಎಂಬ ಹೆಸರು ಬಹಳ ಕುತೂಹಲಕಾರಿ. ಒಂದು ವಿವರಣೆಯ ಪ್ರಕಾರ, ಈ ಪ್ರದೇಶವನ್ನು ಕನ್ನಡದಲ್ಲಿ ಬಿಳಿ ಅಕ್ಕಿ ಪಳ್ಳಿ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಬೆಳೆಯುತ್ತಿದ್ದ ಅಕ್ಕಿಯು ಬಿಳಿ ಬಣ್ಣದ್ದಾಗಿದ್ದರಿಂದ Bili Akki Palli ಎಂಬ ಹೆಸರು ನಂತರ Blackpally ಆಗಿರಬಹುದು ಎಂಬ ಅಭಿಪ್ರಾಯವಿದೆ. ಆದರೆ ಪ್ರಸಿದ್ಧ ಇತಿಹಾಸಕಾರ ಎಸ್.ಕೆ. ಅರುಣಿ ಅವರು “Blackpally” ಎಂಬುದು ಬೆಂಗಳೂರಿನ ಕ್ಯಾಂಟೋನ್ಮೆಂಟ್ ವಿನ್ಯಾಸ ರೂಪಿಸಿದ ಬ್ರಿಟಿಷ್ ಇಂಜಿನಿಯರ್ John Blakiston ಅವರ ಹೆಸರಿನಿಂದ ಬಂದಿರಬಹುದೆಂಬ ಮತ್ತೊಂದು ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಅಂದರೆ, Blackpally ಹೆಸರಿನ ಮೂಲದ ಬಗ್ಗೆ ಒಂದೇ ಒಪ್ಪಿಗೆಯ ವಿವರಣೆ ಇಲ್ಲ. ಇದೇ ಇತಿಹಾಸದ ಸೊಗಸು!
1800ರ ದಶಕದಲ್ಲಿ ಬದಲಾದ ಬೆಂಗಳೂರು
ಇಂದಿನ ಶಿವಾಜಿನಗರವು ಕೆಂಪೇಗೌಡರು ರೂಪಿಸಿದ ಮೂಲ ಪೇಟೆಯ ಪ್ರಮುಖ ಭಾಗವಾಗಿರಲಿಲ್ಲ. ಇಂದಿನಂತೆ ಜನಜಂಗುಳಿಯಿಂದ ಕೂಡಿದ ಪ್ರದೇಶವಾಗಿದ್ದ ಶಿವಾಜಿನಗರವು ಬ್ರಿಟಿಷರು ಬೆಂಗಳೂರಿನ ಕ್ಯಾಂಟೋನ್ಮೆಂಟ್ ಅಭಿವೃದ್ಧಿಪಡಿಸುವ ಮೊದಲು ವಿರಳ ಜನಸಂಖ್ಯೆಯ ಪ್ರದೇಶವಾಗಿತ್ತು. ಇಲ್ಲಿ ಕೃಷಿ ಚಟುವಟಿಕೆಗಳಿದ್ದಿರಬಹುದು ಎಂಬ ಸ್ಥಳೀಯ ಇತಿಹಾಸದ ಉಲ್ಲೇಖಗಳಿವೆ 1799ರಲ್ಲಿ ಟಿಪ್ಪು ಸುಲ್ತಾನರ ಸೋಲಿನ ನಂತರ ಬ್ರಿಟಿಷರು ಬೆಂಗಳೂರಿನಲ್ಲಿ ತಮ್ಮ ಸೇನಾ ನೆಲೆಯನ್ನು ಬಲಪಡಿಸಿದರು. ಮುಂದಿನ ದಶಕಗಳಲ್ಲಿ Bangalore Cantonment ಪ್ರತ್ಯೇಕ ನಗರವೊಂದರಂತೆ ಬೆಳೆಯಿತು. 1806ರಲ್ಲಿ ಬ್ರಿಟಿಷ್ ಸೇನೆಯ ಒಂದು ಪ್ರಮುಖ ಭಾಗ ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ನಂತರ ಕ್ಯಾಂಟೋನ್ಮೆಂಟ್ ಪ್ರದೇಶ ವೇಗವಾಗಿ ಬೆಳೆಯಿತು . 19ನೇ ಶತಮಾನದ ಅಂತ್ಯದ ವೇಳೆಗೆ ಇಲ್ಲಿ ಬ್ರಿಟಿಷ್ ಅಧಿಕಾರಿಗಳು, ಸೈನಿಕರು, ವ್ಯಾಪಾರಿಗಳು ಮತ್ತು ವಿವಿಧ ಸಮುದಾಯಗಳ ವಸತಿ ಹೆಚ್ಚಾಯಿತು. ಇದರ ಪರಿಣಾಮವಾಗಿ ಶಿವಾಜಿನಗರದ ಸುತ್ತಮುತ್ತಲಿನ ಪ್ರದೇಶವೂ ವಸತಿ ಮತ್ತು ವ್ಯಾಪಾರದ ಕೇಂದ್ರವಾಗಿ ಬೆಳೆಯತೊಡಗಿತು.
ರಸೆಲ್ ಮಾರ್ಕೆಟ್ — ಶಿವಾಜಿನಗರದ ಹೃದಯ
ಶಿವಾಜಿನಗರದ ಹೆಸರನ್ನು ಹೇಳಿ ರಸೆಲ್ ಮಾರ್ಕೆಟ್ ಅನ್ನು ಹೇಳದಿದ್ದರೆ ಕಥೆಯೇ ಅಪೂರ್ಣ. ರಸೆಲ್ ಮಾರ್ಕೆಟ್‌ನ ಇತಿಹಾಸ 1927ಕ್ಕೆ ಸಂಬಂಧಿಸಿದೆ. ಆಗಿನ ಕ್ಯಾಂಟೋನ್ಮೆಂಟ್ ಪ್ರದೇಶದ ವೇಗವಾಗಿ ಬೆಳೆಯುತ್ತಿದ್ದ ಜನಸಂಖ್ಯೆಗೆ ದೊಡ್ಡ ಮಾರುಕಟ್ಟೆಯ ಅಗತ್ಯವಿತ್ತು. T.B. Russell ಅವರ ನೇತೃತ್ವದಲ್ಲಿ ಹೊಸ ಮಾರುಕಟ್ಟೆ ಕಟ್ಟುವ ಯೋಜನೆ ಮುಂದುವರಿಯಿತು ಮತ್ತು 1927ರಲ್ಲಿ ಕಟ್ಟಡ ಪೂರ್ಣಗೊಂಡಿತು. Hajee Sir Ismail Sait ಅವರನ್ನು ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ಇದಕ್ಕೆ T.B. Russell ಅವರ ಹೆಸರಿಡಲಾಯಿತು. ಆದರೆ ಇದರ ನಿರ್ಮಾಣದ ಇತಿಹಾಸದಲ್ಲಿ ಇನ್ನೊಂದು ಕುತೂಹಲಕಾರಿ ಅಂಶವಿದೆ. 1915ರಲ್ಲಿಯೇ ಕ್ಯಾಂಟೋನ್ಮೆಂಟ್ ಪ್ರದೇಶದ ಅಗತ್ಯಕ್ಕಾಗಿ ಮಾರುಕಟ್ಟೆ ನಿರ್ಮಿಸಲು ಜಾಗ ಪಡೆಯುವ ಪ್ರಸ್ತಾಪವಾಗಿತ್ತು
ಗಡಿಯಾರ ಗೋಪುರದ ಮಾರುಕಟ್ಟೆ!
ರಸೆಲ್ ಮಾರ್ಕೆಟ್‌ನ ವಾಸ್ತುಶಿಲ್ಪವೂ ಅದರ ಇತಿಹಾಸದಷ್ಟೇ ಆಕರ್ಷಕ. ಇಂಡೋ-ಸಾರಸೆನಿಕ್ ಶೈಲಿಯ ಕಟ್ಟಡದ ಮಧ್ಯಭಾಗದಲ್ಲಿರುವ ಗಡಿಯಾರ ಗೋಪುರ ಮಾರುಕಟ್ಟೆಯ ಗುರುತಾಗಿತ್ತು. ಮಾರುಕಟ್ಟೆಯ ಆರಂಭಿಕ ದಿನಗಳಲ್ಲಿ ಇದು ಬೆಂಗಳೂರಿನ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ನಂತರ City Market/K.R. Market ಬೆಳೆಯುವವರೆಗೆ ಸಗಟು ವ್ಯಾಪಾರದ ಪ್ರಮುಖ ತಾಣವಾಗಿತ್ತು ಇಲ್ಲಿ ತರಕಾರಿ, ಮಟನ್, ಬೀಫ್ ಮತ್ತು ಮೀನು ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುವ ಉದ್ದೇಶವಿತ್ತು. ಇಂದಿಗೂ ರಸೆಲ್ ಮಾರ್ಕೆಟ್‌ನಲ್ಲಿ: ಹಣ್ಣು, ತರಕಾರಿ, ಹೂವು, ಮೀನು, ಮಾಂಸ, ಮಸಾಲೆ, ಬೇಕರಿ ಪದಾರ್ಥಗಳು, ದಿನಸಿ ಎಲ್ಲವೂ ದೊರೆಯುತ್ತವೆ. ಹೀಗಾಗಿ ರಸೆಲ್ ಮಾರ್ಕೆಟ್ ಎಂದರೆ ಕೇವಲ ಮಾರುಕಟ್ಟೆಯಲ್ಲ— ಅದು ಹಳೆಯ ಕ್ಯಾಂಟೋನ್ಮೆಂಟ್ ಬೆಂಗಳೂರಿನ ಆರ್ಥಿಕ ಇತಿಹಾಸದ ಜೀವಂತ ಸ್ಮಾರಕ.
ಕಮರ್ಷಿಯಲ್ ಸ್ಟ್ರೀಟ್ — ಶಾಪಿಂಗ್‌ನ ಮತ್ತೊಂದು ಸಾಮ್ರಾಜ್ಯ
ರಸೆಲ್ ಮಾರ್ಕೆಟ್‌ನಿಂದ ಸ್ವಲ್ಪ ದೂರದಲ್ಲೇ Commercial Street. ಬ್ರಿಟಿಷ್ ಕಾಲದಿಂದಲೇ ಇದು ವ್ಯಾಪಾರಕ್ಕೆ ಪ್ರಸಿದ್ಧವಾಗಿತ್ತು. ಮರಾಠಿ ಮಾತನಾಡುವ ಹಳೆಯ ದರ್ಜಿಗಳು, ಬಟ್ಟೆ ಅಂಗಡಿಗಳು ಮತ್ತು ವಿವಿಧ ವಸ್ತುಗಳ ವ್ಯಾಪಾರ ಇಲ್ಲಿ ಬೆಳೆದವು. ಹಳೆಯ ನೆನಪುಗಳಲ್ಲಿ ಬ್ರಿಟಿಷ್ ಕ್ಯಾಂಟೋನ್ಮೆಂಟ್‌ನ ಗ್ರಾಹಕರಿಗೆ ಉಡುಪು ಹೊಲಿಯುತ್ತಿದ್ದ ದರ್ಜಿಗಳ ಉಲ್ಲೇಖವೂ ಬರುತ್ತದೆ. ಇಂದು ಬಟ್ಟೆ, ಶೂ, ಬ್ಯಾಗ್, ಆಭರಣ, ರೆಡಿಮೇಡ್ ಉಡುಪು, ಮದುವೆ ಬಟ್ಟೆ, ಗಿಫ್ಟ್ ವಸ್ತುಗಳು, ಸಣ್ಣ ವ್ಯಾಪಾರ ಮಳಿಗೆಗಳು ಇವುಗಳಿಂದ Commercial Street ಸದಾ ಗಿಜಿಗುಡುತ್ತದೆ. ಇಲ್ಲಿರುವ ಅಂಗಡಿಗಳಿಗಿಂತಲೂ ರಸ್ತೆಯ ಬದಿಯ ವ್ಯಾಪಾರವೇ ಅತ್ಯಂತ ಜೋರಾಗಿದ್ದು, ಫ್ಯಾಶನ್ ಪ್ರಿಯ ಬೆಂಗಳೂರಿನ ಹೆಂಗಳೆಯರ ನೆಚ್ಚಿನ ತಾಣವಾಗಿದ್ದು, ಶಾಪಿಂಗ್ ಮುಗಿದ ನಂತರ ರಸ್ತೆ ಬದಿಯಲ್ಲೇ ಸಿಗುವ, ಗೋಲ್ ಗುಪ್ಪಾ, ಬೇಲ್ ಮತ್ತು ಮಸಾಲೆ ಪೂರಿಗಳಲ್ಲದೇ, ಹುರಿದ ಬಟಾಣಿ, ಕಡಲೇಕಾಯಿ ಬೀಜ, ಮೆಣಸಿನ ಪುಡಿ ಹಚ್ಚಿದ ಮಾವಿನಕಾಯಿ, ಪಾಪ್ಕಾರ್ನ್ ಗಳಿಗೂ ಪ್ರಸಿದ್ಧಿಯಾಗಿದೆ.
ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್
ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಅತ್ಯಾಧುನಿಕ ಚಿನ್ನದ ಆಭರಣಗಳ ಮಳಿಗೆಗಳಿಗೆ ಪ್ರಖ್ಯಾತವಾಗಿದ್ದು ಬಹಳ ದೀರ್ಘಕಾಲದಿಂದಲೂ ಪರಂಪರೆಯನ್ನು ಹೊಂದಿರುವ ಚಿನ್ನದ ಅಂಗಡಿಗಳಿಗೆ ಪ್ರಸಿದ್ಧವಾಗಿದೆ. ಅದರಲ್ಲೂ 1869ರಲ್ಲಿ ಕೋಥಾ ಕೃಷ್ಣಯ್ಯ ಚೆಟ್ಟಿ ಅವರು ಬ್ರಿಟಿಷರಿಗೆ, ಸೈಕಲ್ ಮೂಲಕ ಬಣ್ಣದ ಮಣಿಗಳನ್ನು ಮಾರಾಟ ಮಾಡುವ ಮೂಲಕ ಸಣ್ಣ ಮಟ್ಟದಲ್ಲಿ ಆರಂಭಿಸಿದ, ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ನಂತರ ಬ್ರಿಟಿಷ್ ಶೈಲಿಯ ಪದಾತಿದಳದ (infantry) ಪರಿಕರಗಳು, ಕತ್ತಿಗಳು ಹಾಗೂ ರಾಜಮನೆತನದವರು ಮತ್ತು ಮಿಲಿಟರಿ ಸಿಬ್ಬಂದಿಗಾಗಿ ಉತ್ತಮ ಗುಣಮಟ್ಟದ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳನ್ನು ತಯಾರಿಸುವ ಮಟ್ಟಕ್ಕೆ ವಿಸ್ತರಣೆಗೊಂಡಿದ್ದಲ್ಲದೇ ಇಂದಿಗೂ ಎಲ್ಲರಿಗೂ ಮೆಚ್ಚುವಂತಹ ಆಭರಣಗಳನ್ನು ತಯಾರಿಸಿಕೊಡುವ ನೆಚ್ಚಿನ ತಾಣವಾಗಿದೆ.
ಈಸ್ಟರ್ನ್ ಸ್ಟೋರ್ಸ್ (Eastern Stores)
ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಈಸ್ಟರ್ನ್ ಸ್ಟೋರ್ಸ್ ಚಳಿಗಾಲದ ಉಡುಪುಗಳು, ಥರ್ಮಲ್ ಉಡುಪುಗಳು ಮತ್ತು ಪುರುಷರ ಸಾಂಪ್ರದಾಯಿಕ ಉಡುಪುಗಳ ಮಾರಾಟಕ್ಕೆ 1950ರಿಂದಲೂ ಪ್ರಸಿದ್ಧವಾಗಿದೆ. ಈ ಮಳಿಗೆಯಲ್ಲಿ, ಶೀತ ಅಥವಾ ಅತ್ಯಂತ ಕಡಿಮೆ ತಾಪಮಾನವಿರುವ ಪ್ರದೇಶಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಸೂಕ್ತವಾದ ತಾಣವಾಗಿದ್ದು, ಇಲ್ಲಿ ಉಣ್ಣೆಯ ಬಟ್ಟೆಗಳು, ಸ್ನೋ ಜಾಕೆಟ್‌ಗಳು, ಥರ್ಮಲ್ ಉಡುಪುಗಳು ಮತ್ತು ಓವರ್‌ಕೋಟ್‌ಗಳಲ್ಲದೇ ಪ್ರಯಾಣಕ್ಕೆ ಸಿದ್ಧವಾದ ಲಗೇಜ್ ಮತ್ತು ಸೂಟ್‌ಕೇಸ್‌ಗಳು ಇಲ್ಲಿ ಲಭ್ಯವಿರುವ ಕಾರಣ, ವಿದೇಶಕ್ಕೆ ಪ್ರಯಾಣಿಸುವವರು ಹೆಚ್ಚಾಗಿ ಇಲ್ಲಿ ಭೇಟಿ ನೀಡುತ್ತಾರೆ.
ಸೆಪಿಂಗ್ಸ್ ರಸ್ತೆ — ದರ್ಜಿಗಳಿಂದ ಫ್ಯಾಷನ್‌ವರೆಗೆ
Seppings Road ಶಿವಾಜಿನಗರದ ಹಳೆಯ ವ್ಯಾಪಾರ ಸಂಸ್ಕೃತಿಯ ಮತ್ತೊಂದು ಮುಖ. ಇಲ್ಲಿ ಹಲವು ಹಳೆಯ ಜವಳಿ ಮತ್ತು ದರ್ಜಿಗಳ ಅಂಗಡಿಗಳಿದ್ದವು. ಗ್ರಾಹಕರ ಅಳತೆಗೆ ತಕ್ಕಂತೆ ಬಟ್ಟೆ ಹೊಲಿಯುವ ಪರಂಪರೆ ಈ ಪ್ರದೇಶದ ವಿಶೇಷತೆ. ಧನಲಕ್ಷ್ಮಿ ಸ್ಟೋರ್ಸ್ ಬಾಲು, ವರಲಕ್ಷ್ಮಿ ಮತ್ತು ಶ್ರೀ ಗಣೇಶ್ ಮುಂತಾದ ಹಳೆಯ ಅಂಗಡಿಗಳ ಉಲ್ಲೇಖವಿದೆ. ಅದೇ ಪ್ರದೇಶದಲ್ಲಿ ಮದುವೆ ಮತ್ತು ಅಲಂಕಾರಿಕ ಉಡುಪುಗಳಿಗಾಗಿ Evening Bazaar, Femina Bridal Collection ಮತ್ತು Pakeeza ಮುಂತಾದ ಅಂಗಡಿಗಳನ್ನು ಹುಡುಕುವ ಸಂಪ್ರದಾಯವೂ ಇದೆ.
Broadway Road — ಸ್ಪೇರ್‌ಪಾರ್ಟ್ಸ್‌ನಿಂದ ಹಳೆಯ ವ್ಯಾಪಾರವರೆಗೆ
ಶಿವಾಜಿನಗರದ ಮತ್ತೊಂದು ವಿಶಿಷ್ಟ ರಸ್ತೆ Broadway Road. ಇದು ಹಳೆಯ ಕ್ಯಾಂಟೋನ್ಮೆಂಟ್ ವ್ಯಾಪಾರ ವಲಯದ ಭಾಗ. ಇಂದು ಇಲ್ಲಿ ಸ್ಕ್ರ್ಯಾಪ್, ಸ್ಪೇರ್ ಪಾರ್ಟ್ಸ್ ಮತ್ತು ವಿವಿಧ ಸಣ್ಣ ವ್ಯಾಪಾರಗಳನ್ನು ಕಾಣಬಹುದು. ಹಳೆಯ ಛಾಯಾಚಿತ್ರಗಳಲ್ಲಿ Broadway Road ಮತ್ತು ರಸೆಲ್ ಮಾರ್ಕೆಟ್ ಸುತ್ತಲಿನ ಪ್ರದೇಶವು ಇಂದಿನ ಜನಜಂಗುಳಿಗೆ ಹೋಲಿಸಿದರೆ ಬಹಳ ಖಾಲಿ ಕಾಣುತ್ತದೆ. ಇಂದಿಗೂ ಇಲ್ಲಿ ವಿವಿಧ ಸೈನ್ಯ ಮತ್ತು ಎನ್.ಸಿ.ಸಿ ಉಡುಪಿಗೆ ಸಂಬಂಧಿಸಿದ ಬೆಲ್ಟ್, ಟೋಪಿ, ಶೂ, ಸಾಕ್ಸ್ ಮುಂತಾದ ವಸ್ತುಗಳು ಇಲ್ಲಿ ಲಭ್ಯವಿದೆ.
Infantry Road — ಸೈನಿಕರ ನೆನಪು ಹೊತ್ತ ರಸ್ತೆ
Infantry Road ಹೆಸರೇ ಅದರ ಹಿನ್ನೆಲೆಯನ್ನು ಹೇಳುತ್ತದೆ. ಬ್ರಿಟಿಷ್ ಕ್ಯಾಂಟೋನ್ಮೆಂಟ್‌ನಲ್ಲಿ Infantry, Artillery ಮತ್ತು Cavalry ಎಂಬ ಸೇನಾ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರದೇಶಗಳು ಮತ್ತು ರಸ್ತೆಗಳು ರೂಪುಗೊಂಡಿದ್ದವು. ಇಂದು ಕೂಡ Infantry Road ಕ್ಯಾಂಟೋನ್ಮೆಂಟ್ ಇತಿಹಾಸದ ಒಂದು ನೆನಪಾಗಿ ಉಳಿದಿದೆ. ಇದರ ಜೊತೆಗೆ, ಸೆಂಟ್ರಲ್ ಸ್ಟ್ರೀಟ್, ಆಸ್ಪತ್ರೆ ರಸ್ತೆ, ಲೇಡಿ ಕರ್ಜನ್ ರಸ್ತೆ, ಯೂನಿಯನ್ ಸ್ಟ್ರೀಟ್, ಶಿವಾಜಿ ರಸ್ತೆ, ಮೇನ್ ಗಾರ್ಡ್ ಕ್ರಾಸ್ ರಸ್ತೆ,ಮೀನಾಕ್ಷಿ ಕೋವಿಲ್ ಸ್ಟ್ರೀಟ್, ಒಪಿಎಚ್ (OPH) ರಸ್ತೆ, ಪ್ಲೇನ್ ಸ್ಟ್ರೀಟ್, ಸೆಪ್ಪಿಂಗ್ಸ್ ರಸ್ತೆ, ಇಬ್ರಾಹಿಂ ಸಾಹೇಬ್ ಸ್ಟ್ರೀಟ್, ಜ್ಯುವೆಲ್ಲರ್ಸ್ ಸ್ಟ್ರೀಟ್ ಇವೆಲ್ಲವೂ ಶಿವಾಜಿನಗರದ ವ್ಯಾಪಾರ–ಸಾಮಾಜಿಕ ಜೀವನದ ಭಾಗವಾಗಿವೆ.
OPH Road — Old Poor House Road
ಶಿವಾಜಿನಗರ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ OPH Road ಎಂಬ ಹೆಸರಿಗೂ ವಸಾಹತು ಕಾಲದ ಕಥೆಯಿದೆ. ಸ್ಥಳೀಯ ಇತಿಹಾಸದ ಉಲ್ಲೇಖಗಳ ಪ್ರಕಾರ, ಯುದ್ಧಕಾಲದಲ್ಲಿ ಬ್ರಿಟಿಷ್ ಅನಾಥ ಮಕ್ಕಳಿಗಾಗಿ asylum/ಸಂಸ್ಥೆ ಇದ್ದ ಹಿನ್ನೆಲೆಯಿಂದ Old Poor House Road ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.
ಶಿವಾಜಿನಗರದ ಧಾರ್ಮಿಕ ವೈವಿಧ್ಯ
ಶಿವಾಜಿನಗರದ ನಿಜವಾದ ವೈಶಿಷ್ಟ್ಯವನ್ನು ಅರಿಯಬೇಕಾದರೆ ಅದರ ಧಾರ್ಮಿಕ ಭೂಗೋಳವನ್ನು ನೋಡಬೇಕು. ಇಲ್ಲಿ ದೇವಾಲಯವೂ ಇದೆ. ಮಸೀದಿಯೂ ಇದೆ. ಚರ್ಚೂ ಇದೆ. ದರ್ಗಾವೂ ಇದೆ. ಅದರಲ್ಲೂ ರಸೆಲ್ ಮಾರ್ಕೆಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ಚರ್ಚಿನ ಗಂಟೆ, ದೇವಾಲಯದ ಮಂತ್ರೋಚ್ಚಾರಣೆ ಮತ್ತು ಮಸೀದಿಯ ಪ್ರಾರ್ಥನಾ ಕರೆ ಒಂದೇ ನಗರ ಧ್ವನಿಯ ಭಾಗಗಳಾಗಿವೆ ಎಂದು ಹಳೆಯ ವರದಿಗಳೂ ದಾಖಲಿಸಿವೆ.
ಸೇಂಟ್ ಮೇರೀಸ್ ಬೆಸಿಲಿಕಾ — ಶಿವಾಜಿನಗರದ ಶಾಶ್ವತ ಗುರುತು
ಶಿವಾಜಿನಗರದ ಇತಿಹಾಸದಲ್ಲಿ St. Mary’s Basilicaಗೆ ಅತ್ಯಂತ ಪ್ರಮುಖ ಸ್ಥಾನ. ಇದರ ಇತಿಹಾಸ 17ನೇ ಶತಮಾನದವರೆಗೆ ಹೋಗುತ್ತದೆ. ತಮಿಳು ಕ್ರೈಸ್ತ ವಲಸಿಗರೊಂದಿಗೆ ಸಂಬಂಧ ಹೊಂದಿದ್ದ ಒಂದು ಸಣ್ಣ ಪ್ರಾರ್ಥನಾ ಸ್ಥಳದಿಂದ ಇದರ ಪರಂಪರೆ ಆರಂಭವಾಯಿತು ಎಂದು ವಿವರಿಸಲಾಗಿದೆ. Jean-Antoine Dubois ಅವರು 1803ರಲ್ಲಿ Bili Akki Palli/Blackpally ಪ್ರದೇಶದಲ್ಲಿ ಹುಲ್ಲಿನ ಮೇಲ್ಛಾವಣಿಯ ಚಾಪೆಲ್ ನಿರ್ಮಿಸಿ ಪ್ರಾರ್ಥನೆ ನಡೆಸಿದರು. 1811ರಲ್ಲಿ ಮತ್ತೊಂದು ಚಾಪೆಲ್ ಮತ್ತು ಪಾದ್ರಿಗಳ ವಸತಿ ನಿರ್ಮಿಸಲಾಯಿತು.
ನಂತರ ಚರ್ಚ್ ಹಲವು ಹಂತಗಳಲ್ಲಿ ಅಭಿವೃದ್ಧಿಯಾಯಿತು. 1832ರ ಗಲಭೆಗಳ ಸಂದರ್ಭದಲ್ಲಿ ಹಾನಿಗೊಳಗಾದ ನಂತರ 1856–1882ರ ನಡುವೆ ಹೊಸ ಕಟ್ಟಡ ನಿರ್ಮಿಸಲಾಯಿತು. 1882ರ ಸೆಪ್ಟೆಂಬರ್ 8ರಂದು ಹೊಸ Gothic-style ಚರ್ಚ್ consecrate ಮಾಡಲಾಯಿತು. ಅದರ ನಿರ್ಮಾಣಕ್ಕೆ pulpit ಮತ್ತು statues ಸೇರಿದಂತೆ ಒಟ್ಟು ₹29,659 ವೆಚ್ಚವಾಗಿತ್ತು ಎಂದು ದಾಖಲಾಗಿದೆ. 1973ರಲ್ಲಿ Pope Paul VI ಅವರ ಆದೇಶದ ಮೂಲಕ ಇದಕ್ಕೆ Minor Basilica ಸ್ಥಾನಮಾನ ದೊರೆಯಿತು. ಭಾರತದಲ್ಲಿ ಈ ಗೌರವ ಪಡೆದ ಆರನೇ ಚರ್ಚ್ ಎಂಬ ಉಲ್ಲೇಖವೂ ಇದೆ. ಸೆಪ್ಟೆಂಬರ್ 8ರ ಇಲ್ಲಿನ ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಶಿವಾಜಿನಗರದ ರಸ್ತೆಗಳೇ ಕ್ರೈಸ್ತ ಭಕ್ತರಿಂದ ತುಂಬುವ ಕಾರಣ, ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧಗಳನ್ನು ಹೇರಲಾಗುತ್ತದೆ.
ಹಳೆಯ ದೇವಾಲಯಗಳೂ ಶಿವಾಜಿನಗರದ ಭಾಗವೇ
ಶಿವಾಜಿನಗರದ ಇತಿಹಾಸವನ್ನು ಕೇವಲ ಮಸೀದಿ ಮತ್ತು ಚರ್ಚುಗಳ ಮೂಲಕ ನೋಡುವುದು ಅಪೂರ್ಣ. ಹಳೆಯ ವೇಣುಗೋಪಾಲಸ್ವಾಮಿ ದೇವಾಲಯ ಸ್ಥಳೀಯ ಇತಿಹಾಸದಲ್ಲಿ ಉಲ್ಲೇಖವಾಗುವ ಪ್ರಮುಖ ದೇವಾಲಯ. ಧರ್ಮರಾಜ ಕೋಯಿಲ್ ಸ್ಟ್ರೀಟ್ ಮತ್ತು ಮೀನಾಕ್ಷಿ ಕೋಯಿಲ್ ಸ್ಟ್ರೀಟ್ ಮುಂತಾದ ಹೆಸರುಗಳೇ ಈ ಪ್ರದೇಶದ ಹಿಂದೂ ಧಾರ್ಮಿಕ–ಸಾಂಸ್ಕೃತಿಕ ಬೇರುಗಳನ್ನು ಸೂಚಿಸುತ್ತವೆ. ಮುತ್ಯಾಲಮ್ಮ, ಅಂಗಾಳ ಪರಮೇಶ್ವರಿ ಅಮ್ಮನ್, ನಾಗಮ್ಮ ಮತ್ತು ಓಂ ಶಕ್ತಿ ಮುಂತಾದ ದೇವತಾ ಆರಾಧನೆಗಳೂ ಈ ವಲಯದ ಜನಪದ ಧಾರ್ಮಿಕ ಸಂಸ್ಕೃತಿಯ ಭಾಗವಾಗಿ ಉಲ್ಲೇಖವಾಗಿವೆ. ಇಲ್ಲಿನ ವಾರ್ಷಿಕೋತ್ಸವದ ಸಮಯದಲ್ಲಿ ದೇವಿಯ ಪಲ್ಲಕ್ಕಿಯ ಜೊತೆ ನಡೆಯುವ ರಥೋತ್ಸವದಲ್ಲಿ, ಡೊಳ್ಳು, ವಿವಿಧ ಬಗೆಯ ಜನಪದ ನೃತ್ಯಗಳ ಮೆರವಣಿಗೆಗಳೊಂದಿಗೆ ನಡೆಯುವ ಸ್ಥಳೀಯ ಆಚರಣೆಗಳನ್ನು ನೋಡಲು ಕೇವೆಲ ಬೆಂಗಳೂರಿಗರಷ್ಟೇ ಅಲ್ಲದೇ, ರಾಜ್ಯದ ಅನೇಕ ಭಾಗಗಳಿಂದ ಬರುವುದು ವಿಶೇಷವಾಗಿದೆ
ಮಸೀದಿಗಳು ಮತ್ತು ದರ್ಗಾಗಳು
ಶಿವಾಜಿನಗರದ ಮುಸ್ಲಿಂ ಪರಂಪರೆ ಬಹಳ ಗಾಢವಾಗಿದೆ. ಜುಮ್ಮಾ ಮಸೀದಿ ಹಾಗೂ ಹಲವು ಜಾಮಿಯಾ ಮಸೀದಿಗಳು ಈ ಪ್ರದೇಶದ ಧಾರ್ಮಿಕ ಜೀವನದ ಪ್ರಮುಖ ಭಾಗ. ರಸೆಲ್ ಮಾರ್ಕೆಟ್ ಸುತ್ತಮುತ್ತ ಹಜರತ್ ಪೀರ್ ಸೈಯದ್ ಜಮಾಲ್ ಶಾ ಖಾದರಿ ದರ್ಗಾ ಕೂಡ ಧಾರ್ಮಿಕ ಭೂದೃಶ್ಯದ ಒಂದು ಭಾಗವಾಗಿದೆ ಎಂದು ಹಳೆಯ ವರದಿ ದಾಖಲಿಸಿದೆ. ಇದರ ಜೊತೆಗೆ ಮಸೀದಿ ರಸ್ತೆ ಸಂಪರ್ಕ, ಜುಮ್ಮಾ ಮಸೀದಿ ಬೀದಿ, ಲುಬ್ಬೆ ಮಸೀದಿ ಬೀದಿ, ಇಬ್ರಾಹಿಂ ಸಾಹಿಬ್ ಸ್ಟ್ರೀಟ್ ಮುಂತಾದ ಹೆಸರುಗಳು ಈ ಪ್ರದೇಶದ ಮುಸ್ಲಿಂ ವ್ಯಾಪಾರ ಮತ್ತು ಧಾರ್ಮಿಕ ಇತಿಹಾಸದ ನೆನಪುಗಳನ್ನು ಹೊತ್ತಿವೆ.
ಮುಸ್ಲಿಂ ಪ್ರದೇಶ ಎನ್ನುವುದಕ್ಕಿಂತ ಹೆಚ್ಚಿನದು!
ಶಿವಾಜಿನಗರದ ನಿವಾಸಿಗಳಲ್ಲಿ ಸುಮಾರು ಅರ್ಧದಷ್ಟು ಜನರು ಮುಸ್ಲಿಮರು ಎಂದು ಕೆಲವು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಶಿವಾಜಿನಗರವನ್ನು ಕೇವಲ ಮುಸ್ಲಿಂ ಪ್ರದೇಶ ಎಂದು ಕರೆಯುವುದು ಅದರ ಸಾಮಾಜಿಕ ಇತಿಹಾಸವನ್ನು ಬಹಳ ಸಣ್ಣದಾಗಿ ನೋಡುವಂತಾಗುತ್ತದೆ. ಇಲ್ಲಿ ಕನ್ನಡಿಗರು, ತಮಿಳರು, ಮುಸ್ಲಿಮರು, ಕ್ರೈಸ್ತರು, ಮರಾಠಿ ಭಾಷಿಕರು, ವ್ಯಾಪಾರ ಸಮುದಾಯಗಳು ಮತ್ತು ಹಲವು ವಲಸೆ ಸಮುದಾಯಗಳು ದಶಕಗಳಿಂದ ಜೊತೆಯಾಗಿ ಬದುಕುತ್ತಿವೆ. ಇದೇ ಅದರ ಮಿಶ್ರಣಾತ್ಮಕ ನಗರ ಸಂಸ್ಕೃತಿ (Syncretic urban culture)
ರಂಜಾನ್ ಬಂದರೆ ಶಿವಾಜಿನಗರದ ಬಣ್ಣವೇ ಬದಲಾಗುತ್ತದೆ!
ರಂಜಾನ್ ಸಮಯದಲ್ಲಿ ಶಿವಾಜಿನಗರದ ರಾತ್ರಿ ಜೀವನಕ್ಕೆ ಹೊಸ ರೂಪ ಬರುತ್ತದೆ. ರಸೆಲ್ ಮಾರ್ಕೆಟ್ ವೃತ್ತದ ಸುತ್ತಮುತ್ತ ಕಬಾಬ್, ಮಟನ್ ಸಮೋಸಾ, ಹಲೀಂ, ಫಿರ್ನಿ, ಫಾಲೂದಾ, ಸಮೋಸಾ, ಗ್ರಿಲ್ ಮಾಂಸ, ಖರ್ಜೂರ, ತಾಜಾ ಹಣ್ಣು ವಿವಿಧ ಪಾನೀಯಗಳು ಮಾರಾಟವಾಗುತ್ತವೆ. ಉಪವಾಸ ಮುಗಿಸುವ ಸಮಯದಲ್ಲಿ ಜನರು ಇಫ್ತಾರ್‌ಗಾಗಿ ಆಹಾರ ಖರೀದಿಸಲು ಸೇರುತ್ತಾರೆ. ಈ ಸಮಯದಲ್ಲಿ ಬೆಂಗಳೂರಿನ ವಿವಿಧ ಭಾಗಗಳಿಂದ ಜನರು ಶಿವಾಜಿನಗರಕ್ಕೆ ಬರುತ್ತಾರೆ. ರಂಜಾನ್ ಸಂದರ್ಭದಲ್ಲಿ Russell Street ಸೇರಿದಂತೆ ಶಿವಾಜಿನಗರದ ಹಲವು ರಸ್ತೆಗಳು ಸಾರ್ವಜನಿಕ ಇಫ್ತಾರ್ ಮತ್ತು ಆಹಾರ ಸಂಸ್ಕೃತಿಯ ಪ್ರಮುಖ ತಾಣಗಳಾಗುತ್ತವೆ.
ಶಿವಾಜಿನಗರದ ಬೆಳಗಿನ ಜಾವ — ಮತ್ತೊಂದು ಲೋಕ!
ಆದರೆ ಶಿವಾಜಿನಗರವನ್ನು ಅರ್ಥಮಾಡಿಕೊಳ್ಳಲು ರಾತ್ರಿ ರಂಜಾನ್ ಮಾರುಕಟ್ಟೆಯನ್ನಷ್ಟೇ ನೋಡಬೇಕಿಲ್ಲ. ಬೆಳಗ್ಗೆ 6ರಿಂದ 9ರವರೆಗಿನ ಶಿವಾಜಿನಗರವೇ ಬೇರೆ. ತಾಜಾ ತರಕಾರಿ, ಹೂವು, ಮೀನು, ಮಾಂಸ, ಹಣ್ಣುಗಳ ವ್ಯಾಪಾರ ಆರಂಭವಾಗುತ್ತದೆ. ಬಿ.ಎನ್. ಸಾಂಬಯ್ಯ ಶೆಟ್ಟಿ ಟಿಫಿನ್ ರೂಂ ಸಣ್ಣ ಹೋಟೆಲ್, ಅಲ್ಲದೇ ಕಾಮತ್ ಹೋಟೆಲ್ಲಿನಲ್ಲಿ ಮಸಾಲೆ ದೋಸೆ, ವಡಾ ಕರಿ, ಈರುಳ್ಳಿ ರೈತಾ ಮತ್ತು ಪಲಾವ್ ಸವಿಯುವ ಸಂಪ್ರದಾಯವಿದೆ . ಇದು ದಿನನಿತ್ಯದ ಗ್ರಾಹಕರಿಂದ ತುಂಬಿರುವ ಹಳೆಯ ಶೈಲಿಯ ಉಪಾಹಾರ ಕೇಂದ್ರದ ನೆನಪನ್ನು ಕೊಡುತ್ತದೆ.
ಚಹಾ ಇಲ್ಲದೆ ಶಿವಾಜಿನಗರದ ಕಥೆ ಅಪೂರ್ಣ!
New Bilal Tea Centre ಹಾಗೂ ರಸೆಲ್ ಮಾರ್ಕೆಟ್ ಸುತ್ತಮುತ್ತಲಿನ ಸಣ್ಣ ಚಹಾ ಅಂಗಡಿಗಳಲ್ಲಿ ಕಟಿಂಗ್ ಚಾಯ್ ಮತ್ತು ರಸ್ಕ್ ಸವಿಯುವುದು ಈ ಪ್ರದೇಶದ ಸಾಮಾನ್ಯ ನಗರ ಅನುಭವಗಳಲ್ಲಿ ಒಂದು. ಚಹಾ ಅಂಗಡಿ ಇಲ್ಲಿ ಕೇವಲ ಚಹಾ ಕುಡಿಯುವ ಸ್ಥಳವಲ್ಲ. ಅದು: ಸುದ್ದಿ + ರಾಜಕೀಯ + ವ್ಯಾಪಾರ + ಸ್ನೇಹ + ಸ್ಥಳೀಯ ಗಾಸಿಪ್ ಎಲ್ಲವೂ ಸೇರುವ ಸಣ್ಣ ಪಬ್ಲಿಕ್ ಫೋರಂ!
ಸಿಹಿ ಮತ್ತು ಕುರುಕುಲು ತಿಂಡಿಗಳ ತಾಣ
ಆನಂದ್ ಸ್ವೀಟ್ಸ್, ಸಂತಾನಂ ಸ್ವೀಟ್ಸ್ & ಸವರಿ, ರೋಶನ್ ಸ್ವೀಟ್ಸ್ ಮುಂತಾದ ಸಿಹಿ ತಿಂಡಿ ಅಂಗಡಿಗಳು ಬಹಳ ವರ್ಷಗಳಿಂದಲೂ ಅಲ್ಲಿ ವಿವಿಧ ಸಿಹಿ ತಿಂಡಿಗಳನ್ನು ಮಾರಾಟ ಮಾಡುತ್ತಿದ್ದರೆ, ಇನ್ನು ಅಲ್ಲಿಯ ಮುತ್ಯಾಲಮ್ಮ ದೇವಾಲಯದ ರಸ್ತೆಯಲ್ಲಿ ತಾಜಾ ತಾಜವಾಗಿ ತಯಾರಿಸಿ ಮಾರುವ ದಕ್ಷಿಣ ಭಾರತೀಯ ಕುರುಕುಲು ತಿಂಡಿಗಳಾದ ಕೋಡುಬಳೆ, ಚಕ್ಕುಲಿ, ನಿಪ್ಪಟ್ಟು, ಅತಿರಸ, ಖಾರಸೇವೆ (ಮಿಕ್ಸ್ಚರ್) ಶೆಟ್ಟರ ಅಂಗಡಿಗಳಲ್ಲಿಯೂ ಸಹಾ ಅಬಾಲವೃದ್ಧರಾದಿಯಾಗಿ ಸಂಜೆ ಜನ ಗಿಜಿ ಗಿಜಿ ಗುಟ್ಟುತ್ತಿರುತ್ತಾರೆ. ಈ ಅಂಗಡಿಗಳ ಪ್ರಮುಖ ಆಕರ್ಷಣೆಯೇ ಕೊಸರು ಕೊಡುವುದು ಅರ್ಥಾತ್ ಈ ತಿಂಡಿಗಳನ್ನು ತೆಗೆದುಕೊಳ್ಳುವ ಮೊದಲು ನೀಡುವ ಸ್ಯಾಂಪಲ್ ಕೊಡುವ ಪದ್ದತಿ ಎಂದರೂ ತಪ್ಪಾಗದು. ಇಂತಹ ಹಳೆಯ ಅಂಗಡಿಗಳಷ್ಟೇ ಅಲ್ಲದೇ ಈ ಪ್ರದೇಶದ ಆಹಾರ ಪರಂಪರೆಯ ಭಾಗವಾಗಿ, ಗುಜರಾತಿ ಸಂಸ್ಕೃತಿಯಲ್ಲಿ ಫರ್ಸಾನ್ ಎಂದು ಕರೆಯುವ ತಿಂಡಿ ಪರಂಪರೆಯೊಂದಿಗೆ ಹೋಲಿಕೆ ಮಾಡಬಹುದಾದ ರೀತಿಯಲ್ಲಿ ವಿವಿಧ ಕರಿದ–ಸವಿಯುವ ತಿಂಡಿಗಳು ಇಲ್ಲಿ ಜನಪ್ರಿಯವಾಗಿದೆ.
ವೀರ ಪಿಳ್ಳೈ ಸ್ಟ್ರೀಟ್ — ಸಣ್ಣ ಅಂಗಡಿಗಳ ದೊಡ್ಡ ಲೋಕ
ವೀರ ಪಿಳ್ಳೈ ಸ್ಟ್ರೀಟ್ ಸುತ್ತಮುತ್ತಲಿನ ಸಣ್ಣ ಆಹಾರ ಮಳಿಗೆಗಳ ಬಗ್ಗೆ ಸ್ಥಳೀಯರ ನೆನಪುಗಳಲ್ಲಿ ನವೀನ್ ಬಟರ್ ದೋಸೆ ಕ್ಯಾಂಪ್ ಮತ್ತು ಶ್ರೀ ಇಡ್ಲಿ ಕಾರ್ನರ್, ಹೆಸರುಗಳು ಬರುತ್ತವೆ. ಅದರ ನಂತರ ಪ್ರಿಯಾ ಮಿಲ್ಕ್ ಕೋವಾ ಡೈರಿ ಯ ಹಾಲು–ಖೋವಾ ಮುಂತಾದ ಸಿಹಿ ಪದಾರ್ಥ, ಶ್ರೀರಾಜ್ ಲಸ್ಸಿ ಬಾರ್ ವಿವಿದ ಹಣ್ಣಿನ ಜ್ಯೂಸ್ ಮತ್ತು ಲಸ್ಸಿಗಳೊಂದಿಗೆ ಊಟ ಮುಗಿಸುವುದು ಒಂದು ಸ್ಥಳೀಯ ಆಹಾರ ಅನುಭವವಾಗಿ ಉಲ್ಲೇಖಿಸಲಾಗಿದೆ. ಇಂತಹ ಅಂಗಡಿಗಳೇ ಶಿವಾಜಿನಗರದ ಆಹಾರ ಸಂಸ್ಕೃತಿಯನ್ನು ಕೇವಲ ಪ್ರಸಿದ್ಧ ಹೋಟೆಲ್‌ಗಳ ಕಥೆಯಾಗದಂತೆ ಮಾಡುತ್ತವೆ.
ರಾಮುಲು ದೇವಸ್ಥಾನ ಮತ್ತು ಕುಳಿ ಪನಿಯಾರಂ
ರಾಮುಲು ಸನ್ನಿಧಿ ಬೀದಿಯ ರಾಮುಲು ದೇವಸ್ಥಾನವೂ ಸ್ಥಳೀಯ ಗುರುತು. ದೇವಾಲಯದ ಎದುರಿನ ಮನೆಯಂತಿರುವ ಸ್ಥಳದಲ್ಲಿ ಬೆಳಗ್ಗೆ ಮತ್ತು ಸಂಜೆ ಸುಮಾರು 8:30ರ ವೇಳೆಗೆ ತಮಿಳು ಶೈಲಿಯ ಕುಳಿ ಪನಿಯಾರಂ (ಪಡ್ಡು/ಗುಂತ ಪಂಗುಲು) ಮಾರುವ ಸ್ಥಳೀಯ ವ್ಯಾಪಾರ ಶಿವಾಜಿನಗರದ ಮತ್ತೊಂದು ವಿಶೇಷತೆಯನ್ನು ತೋರಿಸುತ್ತದೆ. ಕನ್ನಡ ಪ್ರದೇಶದಲ್ಲಿ ತಮಿಳು ಆಹಾರ, ಮುಸ್ಲಿಂ ವ್ಯಾಪಾರ, ಮರಾಠಿ ನೆನಪು ಮತ್ತು ಕ್ರೈಸ್ತ ಪರಂಪರೆ ಎಲ್ಲವೂ ಒಂದೇ ಬೀದಿಯಲ್ಲಿ!
ಆಭರಣದ ಬೀದಿಗಳು ಹಳೆಯ ಆಚಾರಿಗಳ ಪರಂಪರೆ
Silver Palace ಸುತ್ತಮುತ್ತಲಿನ ಸಣ್ಣ ಗಲ್ಲಿಗಳಲ್ಲಿ ಚಿನ್ನ–ಬೆಳ್ಳಿ ಆಭರಣಗಳನ್ನು ದುರಸ್ತಿ ಮಾಡುವ ಸಾಂಪ್ರದಾಯಿಕ ಆಚಾರಿ ಅಂಗಡಿಗಳ ಪರಂಪರೆ ಕಂಡುಬರುತ್ತದೆ. ಹಳೆಯ ಆಭರಣವನ್ನು ಕರಗಿಸಿ ಹೊಸ ವಿನ್ಯಾಸ ಮಾಡುವುದು, ಮುರಿದ ಆಭರಣ ದುರಸ್ತಿ ಮಾಡುವುದು, ಗ್ರಾಹಕರಿಗೆ ತಕ್ಕಂತೆ ಹೊಸ ವಿನ್ಯಾಸ ರೂಪಿಸುವುದು ಇಂತಹ ಕೌಶಲ್ಯಗಳು ದೊಡ್ಡ ಬ್ರ್ಯಾಂಡ್ ಶೋರೂಮ್‌ಗಳಿಗಿಂತ ವಿಭಿನ್ನ.
ಇಬ್ರಾಹಿಂ ಸಾಹೇಬ್ ಬೀದಿ ಮತ್ತು ಜ್ಯುವೆಲ್ಲರ್ಸ್ ಬೀದಿ ಸುತ್ತಮುತ್ತಲೂ ಆಭರಣ ವ್ಯಾಪಾರ ಬಹಳ ಹಳೆಯದು. LMR ಜ್ಯುವೆಲರ್ಸ್ ಪಕ್ಕದಲ್ಲಿರುವ ರಾಜು ಎಂಬುವವರು ಇನ್ನೂ ಹಳೆಯ ಆಚಾರಿ ಪದ್ದತಿಯಲ್ಲಿಯೇ ಕಿವಿ ಮೂಗು ಚುಚ್ಚುವವರು ಇನ್ನೂ ಇದ್ದು ಹಳೆಯ ಪದ್ದತಿಯನ್ನು ನೆನಪಿಸುವಂತಿದೆ.
ಲುಬ್ಬೆ ಮಸೀದಿ ಬೀದಿ, ಕಾಗದದ ಲೋಕ! ಸಾಂಪ್ರದಾಯಿಕ ಮೂಳೆ & ಮೂಲವ್ಯಾಧಿ ಸರಿಪಡಿಸುವವರು
ಶಿವಾಜಿನಗರದ ವ್ಯಾಪಾರ ವೈವಿಧ್ಯವನ್ನು ತೋರಿಸುವ ಮತ್ತೊಂದು ಉದಾಹರಣೆಯೆಂದರೆ ಲುಬ್ಬೆ ಮಸೀದಿ ರಸ್ತೆಯಲ್ಲಿರುವ ಬೀದಿಮರುಧರ್ ಪೇಪರ್ಸ್, ಪದಮ್, ವರ್ಷ ಮತ್ತು ಫೈನ್, ಪೇಪರ್ ವರ್ಲ್ಡ್ ಮುಂತಾದ ಪೇಪರ್ ಏಜೆನ್ಸಿಗಳು ಕಾಗದದ ಸಗಟು ವ್ಯಾಪಾರ ಇಲ್ಲಿ ಕಾಣಸಿಗುತ್ತವೆ.
ಲುಬ್ಬೆ ಮಸೀದಿ ಬೀದಿ ಸುತ್ತಮುತ್ತಲೂ ಮುರಿದ ಮೂಳೆಯನ್ನು ಸಾಂಪ್ರದಾಯಿಕ ಮಸಾಜ್ ವಿಧಾನಗಳಿಂದ ಸರಿಪಡಿಸುವವರಲ್ಲದೇ, ಮೂಲವ್ಯಾಧಿ ಸಮಸ್ಯೆಯನ್ನು ಪರಿಹರಿಸುವ ನಾಟಿ ವೈದರುಗಳನ್ನು ಇಂದಿಗೂ ಅಲ್ಲಲ್ಲಿ ಕಾಣಬಹುದಾಗಿದ್ದು, ಆದರೆ ಇಂತಹ ಚಿಕಿತ್ಸೆಯನ್ನು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಾಗಲಾರದ ಕಾರಣ, ಮೂಳೆ ಮುರಿತ ಮತ್ತು ಮೂಲವ್ಯಾಧಿಗೆ ಆಧುನಿಕ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆ ಅಗತ್ಯವಾಗಿದೆ.
Jumma Masjid Street, ಜುಟ್ಟಿ, ಚಿಕನ್‌ಕಾರಿ ಮತ್ತು ಅತ್ತರ್
ಜುಮ್ಮಾ ಮಸೀದಿ ರಸ್ತೆ ಸುತ್ತಮುತ್ತ ಸೀಕ್ವಿನ್ ಜುಟ್ಟಿ, ಭಾರತೀಯ ಪಾದರಕ್ಷೆಗಳು, ಚಿಕನ್‌ಕಾರಿ ವಸ್ತುಗಳು, ಅತ್ತರ್, ಧಾರ್ಮಿಕ ಮತ್ತು ಹಬ್ಬದ ಸಾಮಗ್ರಿಗಳು ಮುಂತಾದವುಗಳ ವ್ಯಾಪಾರವಿದೆ. ರಂಜಾನ್ ಮತ್ತು ಈದ್ ಸಮಯದಲ್ಲಿ ಈ ಪ್ರದೇಶದ ವ್ಯಾಪಾರ ಚಟುವಟಿಕೆ ಇನ್ನಷ್ಟು ಹೆಚ್ಚುತ್ತದೆ.
J. Siddiqi Corner ಅಡುಗೆ ಮನೆಯ ಅಂಗಡಿ, ಬಿದಿರಿನ ಬುಟ್ಟಿಯಿಂದ ಆಧುನಿಕ ವ್ಯಾಪಾರವರೆಗೆ
ರಸೆಲ್ ಮಾರ್ಕೆಟ್ ಪಕ್ಕದ M.F. Noronha Streetನಲ್ಲಿ ಇರುವ J. Siddiqi Cornerನಂತಹ ಅಂಗಡಿಗಳು ಶಿವಾಜಿನಗರದ ದಿನನಿತ್ಯದ ಬದುಕಿನ ಮತ್ತೊಂದು ಭಾಗ. ಫ್ಲಾಸ್ಕ್, ತಾಮ್ರದ ಜಗ್, ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳು, ಅಡುಗೆ ಸಾಮಗ್ರಿಗಳು ಮುಂತಾದವುಗಳಿಗಾಗಿ ಇಂತಹ ಅಂಗಡಿಗಳನ್ನು ಜನರು ಬಳಸುತ್ತಾರೆ. ಇಲ್ಲಿನ ಸುತ್ತಮುತ್ತ ಬಿದಿರಿನ ಬುಟ್ಟಿ ಮಾರಾಟಗಾರರು ಮತ್ತು Meenakshi Koil Street ಭಾಗದಲ್ಲಿ ಬಿದಿರಿನ ಉತ್ಪನ್ನಗಳ ವ್ಯಾಪಾರವೂ ಸ್ಥಳೀಯ ನೆನಪುಗಳಲ್ಲಿ ಉಲ್ಲೇಖವಾಗಿದೆ. ಬಿದಿರಿನ ಬುಟ್ಟಿ, ದೀಪ, ಪರದೆ, ಗೃಹೋಪಯೋಗಿ ವಸ್ತುಗಳು ಇವೆಲ್ಲವೂ ನಗರದ ಹಳೆಯ ಕೈಗಾರಿಕಾ–ಕರಕುಶಲ ಸಂಸ್ಕೃತಿಯ ನೆನಪು.
ಶಿವಾಜಿನಗರ ಬಸ್ ನಿಲ್ದಾಣ — ಹಳೆಯ ದಿನಗಳಲ್ಲಿ ಹೇಗಿತ್ತು?
ಇಂದಿನ Shivajinagar BMTC Bus Station ನಗರದ ಪ್ರಮುಖ ಸಾರಿಗೆ ಕೇಂದ್ರ. ಆದರೆ ಹಿಂದೆ ಇದೇ ಪ್ರದೇಶದ ಪ್ರಮುಖ ಬಸ್ ನಿಲುಗಡೆ Russell Market stop ಎಂದು ಕರೆಯಲ್ಪಡುತ್ತಿತ್ತು. 1950ರ ದಶಕದ ಬಸ್ ಮಾರ್ಗದ ನೆನಪುಗಳಲ್ಲಿ, ಬ್ರಿಗೇಡ್ ರಸ್ತೆ, ಕಬ್ಬನ್ ರಸ್ತೆ, ಇನ್ಫ್ಯಾಂಟ್ರಿ ರಸ್ತೆ, ಆಸ್ಪತ್ರೆ ರಸ್ತೆ ದಾಟಿ ಬಸ್ ಕೊನೆಯದಾಗಿ ರಸೆಲ್ ಮಾರ್ಕೆಟ್ ನಿಲ್ದಾಣ ತಲುಪುತ್ತಿತ್ತು. ನಂತರ ಇದೇ ಸ್ಥಳದಲ್ಲಿ ದೊಡ್ಡ ಬಸ್ ಡಿಪೋ ಬೆಳೆದು ನಂತರ ಶಿವಾಜಿನಗರ ಬಸ್ ಡಿಪೋ ಎಂದು ಕರೆಯಲಾಯಿತು.
ಹೊಸ ಶಿವಾಜಿನಗರ ಬಸ್ ನಿಲ್ದಾಣ
2001ರ ಜನವರಿ 26ರ ಗಣರಾಜ್ಯೋತ್ಸವಕ್ಕೂ ಸ್ವಲ್ಪ ಮೊದಲು ಸುಮಾರು 1.8 ಎಕರೆ ಜಾಗದಲ್ಲಿ ಸುಮಾರು 8.5 ಕೋಟಿ ರೂಪಾಯಿ ವೆಚ್ಚದಲ್ಲಿ ನೆಲಮಹಡಿಯಲ್ಲಿ ಬಸ್ ನಿಲುಗಡೆ ತಾಣಗಳು ಮತ್ತು ಮೇಲಿನ ಮಹಡಿಯಲ್ಲಿ ಕಾರು ಹಾಗೂ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸೌಲಭ್ಯಗಳನ್ನು ಹೊಂದಿರುವ ಎರಡು ಅಂತಸ್ತಿನ ಕಟ್ಟಡವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಹಳೆಯ ವ್ಯವಸ್ಥೆಯನ್ನು ಬದಲಿಸಿ ಆಧುನಿಕ ಬಸ್ ನಿಲ್ದಾಣ ನಿರ್ಮಿಸಲಾಯಿತು. ಇಂದು ಇದು ಉತ್ತರ–ಪೂರ್ವ ಬೆಂಗಳೂರಿನ ಹಲವು ಭಾಗಗಳನ್ನು ಸಂಪರ್ಕಿಸುವ ಪ್ರಮುಖ BMTC ಸಾರಿಗೆ ಕೇಂದ್ರ. ಇದರ ಸುತ್ತಮುತ್ತಲೇ ರಸೆಲ್ ಮಾರ್ಕೆಟ್ + ಕಮರ್ಷಿಯಲ್ ಸ್ಟ್ರೀಟ್ + ಬೌರಿಂಗ್ ಆಸ್ಪತ್ರೆ + ಇನ್ಫ್ಯಾಂಟ್ರಿ ರಸ್ತೆ + ಸೆಂಟ್ರಲ್ ಸ್ಟ್ರೀಟ್ ಎಂಬ ಪ್ರಮುಖ ನಗರ ಕೇಂದ್ರಗಳು ಇರುವುದರಿಂದ ದಿನವಿಡೀ ಜನಸಂಚಾರ ಹೆಚ್ಚಿರುತ್ತದೆ.
ಹಳೆಯ ಕಾಂಗ್ರೆಸ್ ಕಚೇರಿ, ರಾಜಕೀಯ ನೆನಪು
ಪ್ರಸ್ತುತವಾಗಿ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೇಸ್ ಕಛೇರಿ ಆರಂಭಕ್ಕೂ ಮುನ್ನಾ ಇದೇ ಶಿವಾಜಿನಗರ ಬಸ್ ನಿಲ್ದಾಣದ ಹಿಂದಿನ ಪ್ಲೇನ್ ಸ್ಟ್ರೀಟ್ ನಲ್ಲಿರುವ ಹಳೆಯ ಕಾಂಗ್ರೇಸ್ ಕಛೇರಿಯಲ್ಲಿ ನಿರ್ವಹಿಸುತ್ತಿತ್ತು. ಈಗ ಆ ಕಛೇರಿಯನ್ನು ಇಂದಿರಾ ಗಾಂಧಿ ಭವನ ಎಂದು ಮರುನಾಮಕರಣ ಮಾಡಿದ್ದು ರಮಾಡ ಹೋಟೆಲ್ಲಿನ ಹಿಂಭಾಗದಲ್ಲಿರುವ ಈ ಕಛೇರಿಯಲ್ಲಿಯೂ ಕರ್ನಾಟಕ ಪ್ರದೇಶ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರನ್ನು ಕಾಣಬಹುದಾಗಿದೆ.
ಶಿವಾಜಿನಗರದ ಸಿನಿಮಾ ಮತ್ತು ಮನರಂಜನೆ
ಶಿವಾಜಿನಗರ–ಕ್ಯಾಂಟೋನ್ಮೆಂಟ್ ವಲಯದಲ್ಲಿ ಸಿನಿಮಾ ಮಂದಿರಗಳಿಗೂ ಹಳೆಯ ಇತಿಹಾಸವಿದೆ.ಸಂಗೀತ ಥಿಯೇಟರ್ ಚಿತ್ರಮಂದಿರ Central Street ಭಾಗದ ಹಳೆಯ ಮನರಂಜನಾ ಸಂಸ್ಕೃತಿಯ ನೆನಪು. ಒಂದು ಕಾಲದಲ್ಲಿ ಸಿನಿಮಾ ನೋಡುವುದು, ನಂತರ Commercial Streetನಲ್ಲಿ ತಿಂಡಿ, ಬಳಿಕ ಚಹಾ ಅಥವಾ ಸಿಹಿ—ಇದು ಕ್ಯಾಂಟೋನ್ಮೆಂಟ್ ಭಾಗದ ಮಧ್ಯಮ ವರ್ಗದ ನಗರ ಜೀವನದ ಒಂದು ಸಾಮಾನ್ಯ ಅನುಭವವಾಗಿತ್ತು.
BRV ಥಿಯೇಟರ್

ಬೆಂಗಳೂರಿನ ಕಬ್ಬನ್ ರಸ್ತೆಯಲ್ಲಿರುವ ಬಿಆರ್‌ವಿ (BRV) ಥಿಯೇಟರ್, 1912ರಲ್ಲಿ ಮಧ್ಯಕಾಲೀನ ‘ಟ್ಯೂಡರ್’ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ 100ಕ್ಕೂ ಹೆಚ್ಚಿನ ವರ್ಷಗಳ ಹಳೆಯದಾದ ಐತಿಹಾಸಿಕ ಕಟ್ಟಡವಾಗಿದೆ. ಬೆಂಗಳೂರು ರೈಫಲ್ ವಾಲೆಂಟೀರ್ಸ್ (BRV) 1884ರಲ್ಲಿ ರಚನೆಯಾದ ಈ ಪಡೆಯು, ಆರಂಭದಲ್ಲಿ ಈ ಸ್ಥಳವನ್ನು ಶಸ್ತ್ರಾಗಾರ, ಕ್ಯಾಂಟೀನ್ ಮತ್ತು ಮನರಂಜನಾ ತಾಣವಾಗಿ ಬಳಸುತ್ತಿತ್ತು. ಮೂಲ ಕಟ್ಟಡವನ್ನು ಕೆಡವಿ, 1912ರಲ್ಲಿ ‘ಮದ್ರಾಸ್ ಸ್ಯಾಪರ್ಸ್’ (Madras Sappers) ತಂಡವು ತಮ್ಮ ವಿಶಿಷ್ಟ ಗ್ರಾನೈಟ್ ಕಲ್ಲಿನ ಕೆಲಸದ ಶೈಲಿಯನ್ನು ಬಳಸಿ ಹೊಸ ಕಟ್ಟಡವನ್ನು ನಿರ್ಮಿಸಿತು. 1959ರಲ್ಲಿ ಇದು ರಕ್ಷಣಾ ಸೇವೆಗಳ ಸಿನೆಮಾ ಜಾಲಕ್ಕೆ ಸೇರ್ಪಡೆಗೊಂಡಿತು. ಜೇಮ್ಸ್ ಬಾಂಡ್‌ನಂತಹ ಕ್ಲಾಸಿಕ್ ಹಾಲಿವುಡ್ ಮತ್ತು ಇಂಗ್ಲಿಷ್ ಚಲನಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಇದು ಜನಪ್ರಿಯವಾಯಿತು. ನಂತರ ಥಿಯೇಟರ್ ಆಗಿ ಇದರ ಕಾರ್ಯಾಚರಣೆ ಸ್ಥಗಿತಗೊಂಡಿತು. ಪ್ರಸ್ತುತ ಈ ಕಟ್ಟಡವು ಈಗ ಗೋಲ್ಡನ್ ಪಾಮ್ ಆರ್ಮಿ ಕ್ಯಾಂಟೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಗೆ ರಕ್ಷಣಾ ಸಿಬ್ಬಂದಿಗೆ ಮಾತ್ರ ಪ್ರವೇಶವಿರುತ್ತದೆ.
ಶಿವಾಜಿನಗರದ ಭಾವೈಕ್ಯತೆ, ನಿಜವಾದ ವಿಶೇಷತೆ
ಶಿವಾಜಿನಗರದ ಬಗ್ಗೆ ಬರೆಯುವಾಗ ಅತ್ಯಂತ ಮುಖ್ಯವಾದ ಅಂಶ ಇದು. ಇಲ್ಲಿನ ಧಾರ್ಮಿಕ ವೈವಿಧ್ಯವನ್ನು ಕೇವಲ ಎಲ್ಲರೂ ಸಹಬಾಳ್ವೆ ನಡೆಸುತ್ತಾರೆ ಎಂಬ ಒಂದು ಸುಂದರ ವಾಕ್ಯಕ್ಕೆ ಸೀಮಿತಗೊಳಿಸುವುದೂ ಸರಿಯಲ್ಲ. ಇತಿಹಾಸದಲ್ಲಿ ಇಲ್ಲಿ ಸಾಮಾಜಿಕ ಮತ್ತು ಕೋಮು ಉದ್ವಿಗ್ನತೆಗಳೂ ನಡೆದಿವೆ. ಆದರೆ ಅದರ ಜೊತೆಗೆ ದೈನಂದಿನ ಜೀವನದಲ್ಲಿ ಪರಸ್ಪರ ಅವಲಂಬನೆ ಬಹಳ ಗಾಢವಾಗಿದೆ. ರಸೆಲ್ ಮಾರ್ಕೆಟ್‌ನ ಹೂವುಗಳು ದೇವಾಲಯಕ್ಕೂ, ದರ್ಗಾಕ್ಕೂ, ಮದುವೆಗಳಿಗೂ ಹೋಗುತ್ತವೆ. ಗ್ರಾಹಕ ಹಿಂದೂನಾ, ಕ್ರೈಸ್ತನಾ, ಮುಸ್ಲಿಮನಾ ಎನ್ನುವುದಕ್ಕಿಂತ ವ್ಯಾಪಾರವೇ ಮುಖ್ಯ. ಇದೇ ಶಿವಾಜಿನಗರದ ಸಾಮಾಜಿಕ ವಾಸ್ತವದ ಒಂದು ಸುಂದರ ಮುಖ.
ಶಿವಾಜಿನಗರದ ನಿಜವಾದ ವಿಶೇಷತೆ ಹಳೆಯ ಬೆಂಗಳೂರು ಇನ್ನೂ ಜೀವಂತವಾಗಿರುವ ಸ್ಥಳ
- ಶಿವಾಜಿ ಮಹಾರಾಜರ ಹೆಸರನ್ನು ಹೊತ್ತಿದೆ — ಆದರೆ ಇದು ಕೇವಲ ಮರಾಠರ ಪ್ರದೇಶವಲ್ಲ.
- ಮುಸ್ಲಿಂ ಜನಸಂಖ್ಯೆ ಹೆಚ್ಚಿನದು — ಆದರೆ ಇದು ಕೇವಲ ಮುಸ್ಲಿಂ ಪ್ರದೇಶವಲ್ಲ.
- ಸೇಂಟ್ ಮೇರೀಸ್ ಬೆಸಿಲಿಕಾ ಇದೆ — ಆದರೆ ಇದು ಕೇವಲ ಕ್ರೈಸ್ತರ ಪ್ರದೇಶವಲ್ಲ.
- ದೇವಾಲಯಗಳಿವೆ — ಆದರೆ ಇದು ಕೇವಲ ಹಿಂದೂಗಳ ಪ್ರದೇಶವಲ್ಲ.
- ರಸೆಲ್ ಮಾರ್ಕೆಟ್ ಇದೆ — ಆದರೆ ಅದು ಕೇವಲ ಮಾರುಕಟ್ಟೆಯಲ್ಲ.
- ಬಸ್ ನಿಲ್ದಾಣವಿದೆ — ಆದರೆ ಅದು ಕೇವಲ ಸಾರಿಗೆ ಕೇಂದ್ರವಲ್ಲ.
ಇವೆಲ್ಲವೂ ಸೇರಿ ಶಿವಾಜಿನಗರವನ್ನು ಬಹುಸಂಸ್ಕೃತಿಯ ಬೆಂಗಳೂರಿನ ಜೀವಂತ ಮಾದರಿಯನ್ನಾಗಿ ಮಾಡಿವೆ.
ಒಂದು ಕಡೆ ರಸೆಲ್ ಮಾರ್ಕೆಟ್‌ನಲ್ಲಿ ಹೂವಿನ ವ್ಯಾಪಾರಿ ದೇವಾಲಯಕ್ಕೂ, ದರ್ಗಾಕ್ಕೂ ಹೂಮಾಲೆ ಕಳುಹಿಸುತ್ತಾನೆ. ಮತ್ತೊಂದು ಕಡೆ St. Mary’s ಹಬ್ಬದ ಸಮಯದಲ್ಲಿ ಸಾವಿರಾರು ಜನರು ರಸ್ತೆಗೆ ಬರುತ್ತಾರೆ. ರಂಜಾನ್ ಸಮಯದಲ್ಲಿ ಅದೇ ರಸ್ತೆಗಳು ಇಫ್ತಾರ್ ಮಾರುಕಟ್ಟೆಯಾಗುತ್ತವೆ. ಧಾರ್ಮಿಕ ಗುರುತುಗಳು ತಮ್ಮದೇ ಆದ ಸ್ಥಾನದಲ್ಲಿದ್ದರೂ ದೈನಂದಿನ ಜೀವನ, ವ್ಯಾಪಾರ, ಆಹಾರ ಮತ್ತು ಉದ್ಯೋಗ ಜನರನ್ನು ಪರಸ್ಪರ ಜೋಡಿಸುತ್ತವೆ. ಅದಕ್ಕಾಗಿಯೇ—ಶಿವಾಜಿನಗರ ಒಂದು ಪ್ರದೇಶದ ಹೆಸರು ಮಾತ್ರವಲ್ಲ. ಇದೇ ಹಳೆಯ ಬೆಂಗಳೂರಿನ ಹಲವು ಮುಖಗಳನ್ನು ಒಂದೇ ಕನ್ನಡಿಯಲ್ಲಿ ತೋರಿಸುವ ನಗರ ಇತಿಹಾಸದ ಜೀವಂತ ಅಧ್ಯಾಯ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ