ಕಡಿಮೆ ಬಜೆಟ್‌ನಿಂದ ಕೋಟಿ ಕೋಟಿ ಹೂಡಿಕೆಯವರೆಗೆ: ಕನ್ನಡ ಸಿನಿಮಾ ಎಲ್ಲಿಗೆ ಬಂತು? ಅಂದಿನ ನಟ–ನಿರ್ದೇಶಕರಿಂದ ಇಂದಿನ ಪ್ಯಾನ್ ಇಂಡಿಯಾ ಮನಸ್ಥಿತಿಯವರೆಗೆ, ಮತ್ತೆ ಕನ್ನಡ ಚಿತ್ರರಂಗದ ಸುವರ್ಣಯುಗ ಸಾಧ್ಯವೇ?
ಒಂದು ಕಾಲದಲ್ಲಿ ಕನ್ನಡ ಸಿನಿಮಾ ಎಂದರೆ ಕಥೆ, ಪಾತ್ರ, ಸಂಗೀತ, ಸಾಹಿತ್ಯ ಮತ್ತು ಅಭಿನಯದ ಸಂಗಮವಾಗಿತ್ತು. 1960ರಿಂದ 2000ರ ಆರಂಭದವರೆಗೆ ಸೀಮಿತ ಬಜೆಟ್‌ನಲ್ಲಿ ನಿರ್ಮಾಣವಾದ ಅನೇಕ ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದು ಯಶಸ್ವಿಯಾಗುತ್ತಿದ್ದವು. ಇಂದಿನಂತೆ ದೇಶ-ವಿದೇಶಗಳ ದುಬಾರಿ ಲೊಕೇಷನ್‌ಗಳು, ನೂರಾರು ಕೋಟಿ ರೂಪಾಯಿ ಬಜೆಟ್, ಭಾರೀ VFX, ಬೃಹತ್ ಪ್ರಚಾರ ಅಭಿಯಾನಗಳು ಇರಲಿಲ್ಲ. ಆದರೂ ಆ ಸಿನಿಮಾಗಳಿಗೆ ದೀರ್ಘಕಾಲದ ಪ್ರೇಕ್ಷಕ ಬೆಂಬಲ ಸಿಗುತ್ತಿತ್ತು.
ಆದರೆ ಇಂದು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಚಿತ್ರವೂ ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಿಂದ ಮಾಯವಾಗುವ ಪರಿಸ್ಥಿತಿ ಎದುರಾಗುತ್ತಿದೆ. 2025ರಲ್ಲಿ 255 ಕನ್ನಡ ಚಿತ್ರಗಳು ಬಿಡುಗಡೆಯಾಗಿದ್ದರೂ, ಉದ್ಯಮದ ವಿಶ್ಲೇಷಣೆಯ ಪ್ರಕಾರ ಹತ್ತು ಚಿತ್ರಗಳಿಗಿಂತಲೂ ಕಡಿಮೆ ಚಿತ್ರಗಳು ನಿರ್ಮಾಪಕರ ಹೂಡಿಕೆಯನ್ನು ಸಂಪೂರ್ಣವಾಗಿ ರಕ್ಷಿಸಿವೆ. 2026ರ ಮೊದಲಾರ್ಧದಲ್ಲಿಯೂ 110ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಬಿಡುಗಡೆಯಾಗಿದ್ದು, ಹೆಚ್ಚಿನ ಚಿತ್ರಗಳು ವೆಚ್ಚ ವಾಪಸ್ ಪಡೆಯಲು ಹೋರಾಡಿವೆ. ಹಾಗಾದರೆ ಸಮಸ್ಯೆ ಬಜೆಟ್‌ನಲ್ಲೇ? ಕಥೆಯಲ್ಲೇ? ನಟರಲ್ಲೇ? ಅಥವಾ ಬದಲಾಗಿರುವ ಸಿನಿಮಾ ವ್ಯವಹಾರದ ಮಾದರಿಯಲ್ಲೇ?
ಅಂದಿನ ನಟರಿಗೂ ಇಂದಿನ ನಟರಿಗೂ ಇರುವ ವ್ಯತ್ಯಾಸವೇನು?
![]()
ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಅನಂತ್ ನಾಗ್, ಶಂಕರ್ ನಾಗ್, ರವಿಚಂದ್ರನ್, ಶಿವರಾಜ್‌ಕುಮಾರ್ ಸೇರಿದಂತೆ ಹಲವು ತಲೆಮಾರುಗಳ ನಟರು ವಿಭಿನ್ನ ಪಾತ್ರಗಳನ್ನು ಸ್ವೀಕರಿಸುತ್ತಿದ್ದರು. ಉದಾಹರಣೆಗೆ ಅನಂತ್ ನಾಗ್ ಅವರ ವೃತ್ತಿಜೀವನದಲ್ಲಿ ಕಲಾತ್ಮಕ ಚಿತ್ರಗಳಿಂದ ಹಿಡಿದು ಜನಪ್ರಿಯ ಮನರಂಜನಾ ಚಿತ್ರಗಳವರೆಗೆ ವೈವಿಧ್ಯಮಯ ಪಾತ್ರಗಳಿವೆ. ಅಂದಿನ ನಟನಿಗೆ ನಾನು ಯಾವ ರೀತಿಯ ಪಾತ್ರ ಮಾಡಬೇಕು? ಎಂಬ ಪ್ರಶ್ನೆಯ ಜೊತೆಗೆ ಈ ಪಾತ್ರವನ್ನು ನಾನು ಹೇಗೆ ಜೀವಿಸಬೇಕು? ಎಂಬ ಪ್ರಶ್ನೆಯೂ ಮುಖ್ಯವಾಗಿತ್ತು.
ಇಂದು ಕೂಡ ಅತ್ಯುತ್ತಮ ನಟರು ಇದ್ದಾರೆ. ವ್ಯತ್ಯಾಸವನ್ನು ಎಲ್ಲ ನಟರಿಗೂ ಅನ್ವಯಿಸುವಂತೆ ಹೇಳಲು ಸಾಧ್ಯವಿಲ್ಲ. ಆದರೆ ಸ್ಟಾರ್ ವ್ಯವಸ್ಥೆ ಬಲಗೊಂಡಂತೆ ಕೆಲವು ಸಿನಿಮಾಗಳಲ್ಲಿ ನಟನ ಇಮೇಜ್ ಕಥೆಗಿಂತ ದೊಡ್ಡದಾಗುವ ಪ್ರವೃತ್ತಿ ಕಾಣಿಸುತ್ತದೆ. ಒಂದು ಕಾಲದಲ್ಲಿ ಕಥೆ ಹೀರೋ ಆಗಿತ್ತು… ಇಂದು ಹೀರೋನೇ ಕಥೆಯಾಗಿದ್ದಾನೆ! ಇದರ ಪರಿಣಾಮವಾಗಿ ಕಥೆ ಪಾತ್ರಕ್ಕೆ ತಕ್ಕಂತೆ ನಟನನ್ನು ಹುಡುಕುವುದಕ್ಕಿಂತ, ನಟನ ಮಾರುಕಟ್ಟೆಗೆ ತಕ್ಕಂತೆ ಕಥೆಯನ್ನು ರೂಪಿಸುವ ಪರಿಸ್ಥಿತಿ ಎದುರಾಗಬಹುದು.
ಅಂದಿನ ನಿರ್ದೇಶಕರ ವಿಶೇಷತೆ ಏನು?
ಕನ್ನಡ ಚಿತ್ರರಂಗದ 1970ರ ದಶಕವನ್ನು ಭಾರತೀಯ ಸಿನಿಮಾದ ಪ್ರಮುಖ ಕಲಾತ್ಮಕ ಚಳವಳಿಗಳ ಕಾಲವೆಂದು ಗುರುತಿಸಲಾಗುತ್ತದೆ. ಸಂಸ್ಕಾರ, ವಂಶವೃಕ್ಷ, ಕಾಡು, ಚೋಮನ ದುಡಿ, ಘಟಶ್ರಾದ್ಧ, ತಬ್ಬಲಿಯು ನೀನಾದೆ ಮಗನೆ ಮುಂತಾದ ಚಿತ್ರಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವು. ಪುಟ್ಟಣ್ಣ ಕಣಗಾಲ್ ಅವರ ವಿಶೇಷತೆ ಎಂದರೆ ಅವರು ಜನಪ್ರಿಯ ಸಿನಿಮಾದ ಅಂಶಗಳನ್ನು ಉಳಿಸಿಕೊಂಡೇ ಗಂಭೀರವಾದ ಸಾಮಾಜಿಕ ಮತ್ತು ಮಾನಸಿಕ ವಿಷಯಗಳನ್ನು ಹೇಳುತ್ತಿದ್ದರು. ಅವರ ಅನೇಕ ಚಿತ್ರಗಳು ಜನಪ್ರಿಯ ಸಾಹಿತ್ಯದಿಂದ ಕಥೆಗಳನ್ನು ಪಡೆದುಕೊಂಡಿದ್ದವು.
ಇದರರ್ಥ ಅಂದಿನ ನಿರ್ದೇಶಕರು ತಪ್ಪೇ ಮಾಡುತ್ತಿರಲಿಲ್ಲ ಎಂದಲ್ಲ. ಅವರ ಕಾಲಕ್ಕೂ ಅದರದೇ ಮಿತಿಗಳಿದ್ದವು. ಆದರೆ ಕಥೆಯನ್ನು ಹುಡುಕುವ, ಸಾಹಿತ್ಯವನ್ನು ಓದುವ, ಸಮಾಜವನ್ನು ಗಮನಿಸುವ ಮತ್ತು ಪಾತ್ರಗಳನ್ನು ರೂಪಿಸುವ ಪ್ರಕ್ರಿಯೆ ಚಿತ್ರ ನಿರ್ಮಾಣದ ಕೇಂದ್ರದಲ್ಲಿತ್ತು. ಇಂದು ತಂತ್ರಜ್ಞಾನ ಹೆಚ್ಚಾಗಿದೆ. ಆದರೆ ತಂತ್ರಜ್ಞಾನವು ಕಥೆಯ ಪರ್ಯಾಯವಾಗಲು ಸಾಧ್ಯವಿಲ್ಲ.
ಸಂಗೀತದಲ್ಲಿಯೂ ಆಗಿನ ಶಕ್ತಿ ಬೇರೆ
ಕನ್ನಡ ಸಿನಿಮಾದ ಸಂಗೀತವು ಒಂದು ಕಾಲದಲ್ಲಿ ಸಿನಿಮಾದ ಯಶಸ್ಸಿನ ಪ್ರಮುಖ ಚಾಲಕಶಕ್ತಿಯಾಗಿತ್ತು. ರಾಜನ್–ನಾಗೇಂದ್ರ, ಜಿ.ಕೆ. ವೆಂಕಟೇಶ್, ವಿಜಯಭಾಸ್ಕರ್, ಉಪೇಂದ್ರಕುಮಾರ್ ಮೊದಲಾದ ಸಂಗೀತ ನಿರ್ದೇಶಕರ ನಂತರ ಹಂಸಲೇಖ ಅವರ ಪ್ರವೇಶವು ಕನ್ನಡ ಚಿತ್ರಗೀತೆಗಳಿಗೆ ಹೊಸ ತಿರುವು ನೀಡಿತು. ಜನಪದ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತದ ಅಂಶಗಳನ್ನು ಜನಪ್ರಿಯ ಕನ್ನಡ ಸಿನೆಮಾ ಸಂಗೀತದೊಂದಿಗೆ ಬೆರೆಸಿದ ಅವರ ಶೈಲಿ 1980–90ರ ದಶಕದ ಯುವ ಪ್ರೇಕ್ಷಕರೊಂದಿಗೆ ಬಲವಾದ ಸಂಪರ್ಕ ಸಾಧಿಸಿತು.
ಇಂದಿನ ಸಂಗೀತ ನಿರ್ದೇಶಕರಲ್ಲಿ ಪ್ರತಿಭೆಯ ಕೊರತೆಯಿದೆ ಎಂದು ಹೇಳಲಾಗುವುದಿಲ್ಲ. ಆದರೆ ಹಾಡು ಸಿನಿಮಾದ ಭಾಗವೇ ಅಥವಾ ಪ್ರಚಾರದ ಒಂದು ಉತ್ಪನ್ನವೇ? ಎಂಬ ಪ್ರಶ್ನೆ ಮುಖ್ಯವಾಗಿದೆ. ಒಂದು ಕಾಲದಲ್ಲಿ ಸಿನಿಮಾ ಬಿಡುಗಡೆಯಾಗುವುದಕ್ಕೂ ಮುನ್ನವೇ ಅದರ ಹಾಡುಗಳು ಜನರ ಮನೆ-ಮನಗಳಲ್ಲಿ ಬದುಕುತ್ತಿದ್ದವು. ಇಂದು ಹಾಡುಗಳು ವೇಗವಾಗಿ ಬಿಡುಗಡೆಯಾಗಿ ಅಷ್ಟೇ ವೇಗವಾಗಿ ಮರೆಯಾಗುವ ಪರಿಸ್ಥಿತಿಯೂ ಇದೆ.
ಓದು ಮತ್ತು ಅಧ್ಯಯನದಿಂದ ಸಿನಿಮಾ. ಅನುಕರಣೆ ಮತ್ತು ಆತುರದಿಂದ ಅವನತಿ?
ಅಂದಿನ ಕನ್ನಡ ಚಿತ್ರರಂಗದ ತಂತ್ರಜ್ಞರಿಗೆ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಇತ್ತು. ಉತ್ತಮ ಕಾದಂಬರಿ, ಕಥೆಗಳನ್ನು ಓದಿ, ದೇಶ–ವಿದೇಶ ಸುತ್ತಿ, ಬದುಕಿನ ಅನುಭವಗಳನ್ನು ಕಲೆಹಾಕಿ ಅವುಗಳನ್ನು ಸಿನಿಮಾದ ಕಥೆಗಳಾಗಿ ರೂಪಿಸುತ್ತಿದ್ದರು. ಪುಟ್ಟಣ್ಣ ಕಣಗಾಲ್ ಅವರ ಅನೇಕ ಚಿತ್ರಗಳು ಕಾದಂಬರಿ ಆಧಾರಿತವಾಗಿದ್ದು, ವಿಭಿನ್ನ ಕ್ಷೇತ್ರಗಳ ಪರಿಣಿತರನ್ನು ಬಳಸಿಕೊಂಡದ್ದೇ ಅವರ ಚಿತ್ರಗಳ ಗಟ್ಟಿತನಕ್ಕೆ ಕಾರಣವಾಗಿತ್ತು.
ಆದರೆ ನಂತರ ಓದು–ಅಧ್ಯಯನಕ್ಕಿಂತ ಬೇರೆ ಭಾಷೆಯ ಕೆಲವು ಸಿನಿಮಾಗಳನ್ನು ನೋಡಿ, ಅವುಗಳ ಅಂಶಗಳನ್ನು ಕಲಸುಮೇಲೋಗರ ಮಾಡಿ ಸಿನಿಮಾ ಮಾಡುವ ಪ್ರವೃತ್ತಿ ಹೆಚ್ಚಾಯಿತು. ಒಂದೆರಡು ಚಿತ್ರಗಳು ಅನಿರೀಕ್ಷಿತವಾಗಿ ಯಶಸ್ವಿಯಾದ ತಕ್ಷಣ, ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಸಂಗೀತ, ಸಾಹಿತ್ಯ, ನಟನೆ—ಎಲ್ಲವನ್ನೂ ಒಬ್ಬರೇ ನಿರ್ವಹಿಸುವ ಪ್ರಯತ್ನವೂ ಹೆಚ್ಚಾಯಿತು.
ಎಲ್ಲರೂ ರವಿಚಂದ್ರನ್ ಹಂಸಲೇಖ ಆಗಲು ಸಾಧ್ಯವಿಲ್ಲಾ!
ರವಿಚಂದ್ರನ್ ಮತ್ತು ಹಂಸಲೇಖ ಅವರಲ್ಲಿ ಮಾತ್ರ ಇಂತಹ ಬಹುಮುಖ ಪ್ರತಿಭೆ ಗಮನಾರ್ಹ ಯಶಸ್ಸು ಕಂಡಿತು. ಆದರೆ ರವಿಚಂದ್ರನ್–ಹಂಸಲೇಖರ ಯಶಸ್ಸಿನ ಸೂತ್ರವನ್ನು ಅರ್ಥಮಾಡಿಕೊಳ್ಳದೆ, ಅವರನ್ನೇ ಅನುಕರಿಸಲು ಹೊರಟ ಅನೇಕರು ನಿರೀಕ್ಷಿತ ಫಲ ಪಡೆಯಲಿಲ್ಲ. ಸಿನಿಮಾ ಎಂದರೆ ಒಬ್ಬರ ಆಟವಲ್ಲ. ಅದು ಹಲವು ಪ್ರತಿಭೆಗಳು ಒಟ್ಟಾಗಿ ಕಟ್ಟುವ ಸಮೂಹಕಲೆ. ಓದು, ಅನುಭವ, ಅಧ್ಯಯನ ಮತ್ತು ತಂಡದ ಪರಿಣತಿಗೆ ಬದಲಾಗಿ ಆತುರದ ಅನುಕರಣೆ ಬಂದಾಗ ಅದರ ಪರಿಣಾಮ ಚಿತ್ರರಂಗದ ಮೇಲೂ ಬೀಳುವುದು ಸಹಜ.
ರಿಯಲ್ ಎಸ್ಟೇಟ್ ಮಂದಿಯಿಂದ ಕುಂಠಿತವಾಯಿತೇ ಕನ್ನಡ ಚಿತ್ರರಂಗ?
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ನಿರ್ಮಾಪಕರು ಚಿತ್ರರಂಗದ ಇತಿಮಿತಿಗಳನ್ನು ಅರಿತು, ಸೀಮಿತ ಬಜೆಟ್‌ನಲ್ಲಿ ಉತ್ತಮ ತಂತ್ರಜ್ಞರು, ಕಲಾವಿದರು ಮತ್ತು ಗಟ್ಟಿಯಾದ ಕಥೆಯನ್ನು ಬಳಸಿಕೊಂಡು ಗುಣಮಟ್ಟದ ಸಿನಿಮಾಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದರು. ಸಿನಿಮಾ ಅವರಿಗೆ ಕೇವಲ ಹಣ ಮಾಡುವ ಉದ್ಯಮವಾಗಿರಲಿಲ್ಲ. ಅದು ಒಂದು ಕಲಾ ಪ್ರಪಂಚವೂ ಆಗಿತ್ತು.
ರಿಯಲ್ ಎಸ್ಟೇಟ್ ಹಣದ ಪ್ರವಾಹ
ಆದರೆ 2000ರ ನಂತರ ಬೆಂಗಳೂರಿನ ಸುತ್ತಮುತ್ತ ರಿಯಲ್ ಎಸ್ಟೇಟ್ ದರಗಳು ಭಾರೀ ಏರಿಕೆ ಕಂಡವು. ಜಮೀನು ಮಾರಾಟದಿಂದ ಒಂದೇ ರಾತ್ರಿಯಲ್ಲಿ ಕೋಟ್ಯಂತರ ರೂಪಾಯಿ ಸಂಪಾದಿಸಿದ ಹೊಸ ಶ್ರೀಮಂತರ ದೊಡ್ಡ ವರ್ಗವೇ ಹುಟ್ಟಿಕೊಂಡಿತು. ಇದೇ ಸಂದರ್ಭದಲ್ಲಿ ಸಿನಿಮಾ ಕ್ಷೇತ್ರದ ಕೆಲವರು ಈ ಹೊಸ ಹಣದ ಮೂಲವನ್ನು ಚಿತ್ರರಂಗದತ್ತ ತಿರುಗಿಸಲು ಮುಂದಾದರು. ಕೋಟಿ ರೂಪಾಯಿ ಹಾಕಿ, ಐದು ಪಟ್ಟು ಹಣ ಮಾಡಬಹುದು ಎಂಬ ಕನಸುಗಳನ್ನು ತೋರಿಸಿ, ಸಿನಿಮಾ ನಿರ್ಮಾಣದ ಜೊತೆಗೆ ಹೆಸರು, ಪ್ರಚಾರ, ನಟ-ನಟಿಯರ ಒಡನಾಟ ಮತ್ತು ಸಾಮಾಜಿಕ ಪ್ರತಿಷ್ಠೆಯ ಹಲವು ಆಮಿಷಗಳನ್ನು ಮುಂದಿಟ್ಟ ಸಂದರ್ಭಗಳೂ ಇದ್ದವು. ಇದರ ಪರಿಣಾಮವಾಗಿ ಸಿನಿಮಾ ನಿರ್ಮಾಣದ ಮೂಲ ಉದ್ದೇಶವೇ ಕೆಲವರಲ್ಲಿ ಬದಲಾಗತೊಡಗಿತು. ಕಥೆ, ನಿರ್ದೇಶನ, ತಂತ್ರಜ್ಞಾನ ಮತ್ತು ಪ್ರೇಕ್ಷಕರ ಅಭಿರುಚಿಗಿಂತ ಹೆಸರು ಮಾಡುವುದು, ಪ್ರಚಾರ ಪಡೆಯುವುದು, ಸ್ಟಾರ್‌ಗಳೊಂದಿಗೆ ಫೋಟೋ ತೆಗೆಸಿಕೊಳ್ಳುವುದು ಮತ್ತು ತಕ್ಷಣದ ಪ್ರತಿಷ್ಠೆ ಗಳಿಸುವುದು ಮುಖ್ಯವಾಗತೊಡಗಿತು.
ಇನ್ನೂ ಕೆಲವರಿಗೆ ಚಿತ್ರರಂಗದಲ್ಲಿ ದೊರೆಯುವ ಪರಿಚಯ ಹಾಗೂ ಪ್ರಚಾರವು ಮುಂದೆ ರಾಜಕೀಯ ಅಥವಾ ಸಾಮಾಜಿಕ ಬದುಕಿನಲ್ಲೂ ಸಹಾಯ ಮಾಡಬಹುದು ಎಂಬ ಲೆಕ್ಕಾಚಾರವೂ ಇದ್ದಿರಬಹುದು. ಈ ಹಣದ ಪ್ರವಾಹದ ನಡುವೆ ಸಿನಿಮಾ ನಿರ್ಮಾಣದ ಅನುಭವವಿಲ್ಲದ ಕೆಲವರು ನಿರ್ಮಾಪಕರಾದರು. ಸಣ್ಣಪುಟ್ಟ ತಂತ್ರಜ್ಞರಿಗೆ ನಿರ್ದೇಶನದ ಅವಕಾಶಗಳು ಸಿಕ್ಕವು. ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕೆಲವರು ಏಕಾಏಕಿ ನಾಯಕ-ನಾಯಕಿಯರಾದರು. ಪರಿಣಾಮವಾಗಿ ಕಂತೆಗೆ ತಕ್ಕ ಬಂತೆ ಎಂಬ ರೀತಿಯಲ್ಲಿ, ಹಣವಿದ್ದರೆ ಸಿನಿಮಾ ಮಾಡಬಹುದು ಎಂಬ ಭಾವನೆ ಬಲವಾಯಿತು. ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ ಎಂಬಂತೆ ಸಿನಿಮಾಗಳನ್ನು ಸಾಲುಸಾಲಾಗಿ ನಿರ್ಮಿಸಿದರೂ, ಅವುಗಳಲ್ಲಿ ಕೆಲವು ಪ್ರೇಕ್ಷಕರನ್ನು ತಲುಪುವ ಮೊದಲೇ ಮೂರೇ ದಿನಕ್ಕೆ ಚಿತ್ರಮಂದಿರಗಳಿಂದ ಹೊರಬಿದ್ದವು. ಇಂತಹ ಸಿನಿಮಾಗಳ ಸರಣಿ ನಿರ್ಮಾಪಕರ ಹಣವನ್ನಷ್ಟೇ ಅಲ್ಲ, ಚಿತ್ರರಂಗದ ಮೇಲಿನ ಪ್ರೇಕ್ಷಕರ ವಿಶ್ವಾಸವನ್ನೂ ಹಾನಿಗೊಳಿಸಿತು 2008ರಲ್ಲಿ ಕನ್ನಡ ಸಿನಿಮಾಗಳ ಬಿಡುಗಡೆ ಸಂಖ್ಯೆ 110ಕ್ಕೆ ಏರಿದ್ದನ್ನೂ ವರದಿಗಳು ದಾಖಲಿಸಿದ್ದವು.
ಗಾಯದ ಮೇಲೆ ಬರೆ—ಚಿತ್ರಮಂದಿರಗಳ ಕುಸಿತ
ಇದರ ಜೊತೆಗೆ ರಿಯಲ್ ಎಸ್ಟೇಟ್ ಬೂಮ್ ಚಿತ್ರಮಂದಿರಗಳ ಮೇಲೂ ದೊಡ್ಡ ಪರಿಣಾಮ ಬೀರಿತು. ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿದ್ದ ಅನೇಕ ಹಳೆಯ ಚಿತ್ರಮಂದಿರಗಳು ಶಾಪಿಂಗ್ ಕಾಂಪ್ಲೆಕ್ಸ್, ಮಾಲ್ ಮತ್ತು ವಾಣಿಜ್ಯ ಕಟ್ಟಡಗಳಿಗೆ ಜಾಗ ಮಾಡಿಕೊಟ್ಟವು. 2004ರ ವರದಿಯೊಂದರ ಪ್ರಕಾರ, ಬೆಂಗಳೂರಿನ 115 ಚಿತ್ರಮಂದಿರಗಳಲ್ಲಿ ಸುಮಾರು 30 ಚಿತ್ರಮಂದಿರಗಳು ಮುಚ್ಚುವ ಹಂತದಲ್ಲಿದ್ದವು ಆ ಜಾಗಗಳಲ್ಲಿ ವಾಣಿಜ್ಯ ಸಂಕೀರ್ಣಗಳು ಮತ್ತು ಮಾಲ್‌ಗಳು ಬರಲಿದ್ದವು. 2009ರ ವರದಿಯ ಪ್ರಕಾರ, ಕರ್ನಾಟಕದಲ್ಲಿ ಒಂದು ದಶಕದ ಹಿಂದೆ ಸುಮಾರು 1,400 ಚಿತ್ರಮಂದಿರಗಳಿದ್ದರೆ, ರಿಯಲ್ ಎಸ್ಟೇಟ್ ಬೂಮ್‌ನ ಅವಧಿಯಲ್ಲಿ ಆ ಸಂಖ್ಯೆ ಸುಮಾರು 1,000ಕ್ಕೆ ಇಳಿದಿತ್ತು. ಬೆಂಗಳೂರಿನ ಮೆಜೆಸ್ಟಿಕ್, ಮಿನರ್ವ, ಅಲಂಕಾರ್, ಕಲ್ಪನಾ, ಗೀತಾ, ಕಿನೋ, ಲಕ್ಷ್ಮಿ, ಶ್ರೀ, ಎಂಪೈರ್ ಮುಂತಾದ ಚಿತ್ರಮಂದಿರಗಳು ನೆಲಸಮವಾಗಿ ವಾಣಿಜ್ಯ ಬಳಕೆಗೆ ಬದಲಾಗಿದ್ದವು.
ಹಾಗಾದರೆ ತಪ್ಪು ಯಾರದ್ದು?
ರಿಯಲ್ ಎಸ್ಟೇಟ್ ಉದ್ಯಮಿಗಳು ಚಿತ್ರರಂಗಕ್ಕೆ ಬಂದದ್ದೇ ತಪ್ಪು ಎಂದು ಹೇಳಲಾಗದು. ಬೇರೆ ಕ್ಷೇತ್ರಗಳಿಂದ ಬಂದ ಅನೇಕರು ಪ್ರಾಮಾಣಿಕವಾಗಿ ಸಿನಿಮಾ ಕಲಿತು ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದಾರೆ. ಹಾಗೆಯೇ ಕೇಬಲ್ ಟಿವಿ, ಪೈರಸಿ, ಮಲ್ಟಿಪ್ಲೆಕ್ಸ್ ಸಂಸ್ಕೃತಿ, ಬದಲಾಗುತ್ತಿರುವ ಪ್ರೇಕ್ಷಕರ ಅಭಿರುಚಿ, OTT ಸೇರಿದಂತೆ ಹಲವು ಕಾರಣಗಳೂ ಚಿತ್ರಮಂದಿರಗಳ ಮೇಲೆ ಪರಿಣಾಮ ಬೀರಿವೆ. ಸಿನಿಮಾ ಮಾಡಲು ಹಣ ಬೇಕು. ಆದರೆ ಹಣವಿದ್ದ ಮಾತ್ರಕ್ಕೆ ಸಿನಿಮಾ ಮಾಡಲು ಸಾಧ್ಯವಿಲ್ಲ. ಕಥೆಯ ಅರಿವು, ಕಲೆಯ ಮೇಲಿನ ಗೌರವ, ಪ್ರೇಕ್ಷಕರ ನಾಡಿಮಿಡಿತ ಮತ್ತು ವೃತ್ತಿಪರ ಬದ್ಧತೆ—ಇವೇ ಒಂದು ಚಿತ್ರವನ್ನು ಉಳಿಸುವ ನಿಜವಾದ ಬಂಡವಾಳ.
ಹಾಗಾದರೆ ಪ್ಯಾನ್ ಇಂಡಿಯಾ ಮನಸ್ಥಿತಿಯೇ ಕಾರಣವೇ?
ಪ್ಯಾನ್ ಇಂಡಿಯಾ ಸಿನಿಮಾ ಸ್ವತಃ ಸಮಸ್ಯೆಯಲ್ಲ. ಕನ್ನಡದ ಕೆಲವು ಚಿತ್ರಗಳು ದೇಶದಾದ್ಯಂತ ಪ್ರೇಕ್ಷಕರನ್ನು ತಲುಪಲು ಈ ಮಾದರಿ ನೆರವಾಗಿದೆ. ಸಮಸ್ಯೆ ಆಗುವುದು ಪ್ರತಿಯೊಂದು ಚಿತ್ರವೂ ಪ್ಯಾನ್ ಇಂಡಿಯಾ ಆಗಲೇಬೇಕು ಎಂಬ ಮನಸ್ಥಿತಿ ಬಂದಾಗ. ಒಂದು ಕಥೆಗೆ ಕರ್ನಾಟಕದ ನೆಲ, ಕನ್ನಡ ಭಾಷೆ ಮತ್ತು ಸ್ಥಳೀಯ ಸಂಸ್ಕೃತಿಯೇ ಅದರ ಶಕ್ತಿ ಆಗಿದ್ದರೆ, ಅದನ್ನು ಕೃತಕವಾಗಿ ಎಲ್ಲ ಮಾರುಕಟ್ಟೆಗಳಿಗೆ ಹೊಂದಿಸಲು ಪ್ರಯತ್ನಿಸುವ ಅಗತ್ಯವಿಲ್ಲ.
ಪ್ಯಾನ್ ಇಂಡಿಯಾ ಎಂದರೆ ಕೇವಲ ಐದು ಭಾಷೆಗಳಲ್ಲಿ ಬಿಡುಗಡೆ ಮಾಡುವುದಲ್ಲ. ಒಂದು ಭಾಷೆಯಲ್ಲಿ ಹುಟ್ಟಿದ ಕಥೆ ಬೇರೆ ಭಾಷೆಯ ಪ್ರೇಕ್ಷಕರಿಗೂ ಭಾವನಾತ್ಮಕವಾಗಿ ಅರ್ಥವಾಗುವಷ್ಟು ಸಾರ್ವತ್ರಿಕವಾಗಿರುವುದು. ಹೀಗಾಗಿ ಮೊದಲು ಕನ್ನಡ ಸಿನಿಮಾ, ಯಶಸ್ಸಾದರೆ ಪ್ಯಾನ್ ಇಂಡಿಯಾ ಎನ್ನುವ ಮಾದರಿಯೂ ಕೆಲವು ನಿರ್ಮಾಪಕರಿಗೆ ಆರ್ಥಿಕವಾಗಿ ಹೆಚ್ಚು ನಿಯಂತ್ರಿತ ಮಾರ್ಗವಾಗಬಹುದು.
ಕೆಜಿಎಫ್ ಮತ್ತು ಕಾಂತಾರ ಸಿನಿಮಾಗಳ ಯಶಸ್ಸು ಇದಕ್ಕೆ ಜ್ವಲಂತ ಉದಾಹರಣೆಯಾಗಿದೆ ಎಂದರೂ ತಪ್ಪಾಗದು. ಈ ಎರಡೂ ಸಿನಿಮಾಗಳು ಆರಂಭದಲ್ಲಿ ಕನ್ನಡ ಚಿತ್ರರಂಗಕ್ಕೆ ಸೀಮಿತವಾಗಿಯೇ ನಿರ್ಮಾಣಗೊಂಡಿದ್ದವು. ನಂತರ ಸಿನಿಮಾದ ಕಥೆ, ಚಿತ್ರಕಥೆ, ನಟನೆ, ನಿರೂಪಣೆ ಮತ್ತು ಸಂಗೀತ ಉತ್ತಮವಾಗಿದ್ದ ಕಾರಣ, ಬೇರೆ ಭಾಷೆಯವರೂ ತುಂಬು ಹೃದಯದಿಂದ ಸ್ವಾಗತಿಸಿದ ಕಾರಣ ಅದು ಸಹಜವಾಗಿಯೇ ಪ್ಯಾನ್ ಇಂಡಿಯಾ ಸಿನಿಮಗಳಾಗಿ ಇತಿಹಾಸ ನಿರ್ಮಿಸಿದವು.
ಮತ್ತೊಂದು ಸಮಸ್ಯೆ, ಬಜೆಟ್ ಮತ್ತು ವಾಪಸಾತಿಯ ಅಂತರ
₹10 ಕೋಟಿ ವೆಚ್ಚದ ಸಿನಿಮಾ ತನ್ನ ಹೂಡಿಕೆಯನ್ನು ಮರಳಿ ಪಡೆಯಲು ಬೇಕಾದ ಆದಾಯ ಮತ್ತು ₹100 ಕೋಟಿ ಸಿನಿಮಾ ಎದುರಿಸಬೇಕಾದ ಒತ್ತಡ ಒಂದೇ ಆಗುವುದಿಲ್ಲ. ಬಜೆಟ್ ಹೆಚ್ಚಿದಂತೆ, ಹೆಚ್ಚಿನ ಟಿಕೆಟ್ ಆದಾಯ → ಹೆಚ್ಚಿನ ಪ್ರೇಕ್ಷಕರು → ಹೆಚ್ಚಿನ ಆರಂಭಿಕ ಓಪನಿಂಗ್ → ಹೆಚ್ಚಿನ ಪ್ರಚಾರ → ಹೆಚ್ಚಿನ ಅಪಾಯ ಎಂಬ ಸರಪಳಿ ಆರಂಭವಾಗುತ್ತದೆ. ಇದಕ್ಕೆ OTT ಮತ್ತು ಡಿಜಿಟಲ್ ಮನರಂಜನೆಯ ಬೆಳವಣಿಗೆಯೂ ಸೇರಿದೆ. ಪ್ರೇಕ್ಷಕರಿಗೆ ಈಗ ಚಿತ್ರಮಂದಿರಕ್ಕೆ ಹೋಗುವುದಕ್ಕೆ ಅನೇಕ ಪರ್ಯಾಯಗಳಿವೆ. ಆದ್ದರಿಂದ ಈ ಸಿನಿಮಾವನ್ನು ಚಿತ್ರಮಂದಿರದಲ್ಲೇ ಏಕೆ ನೋಡಬೇಕು? ಎಂಬ ಪ್ರಶ್ನೆಗೆ ಪ್ರತಿಯೊಂದು ಚಿತ್ರವೂ ಉತ್ತರ ನೀಡಬೇಕು.
ಕನ್ನಡ ಚಿತ್ರರಂಗ ಮತ್ತೆ ಪ್ರವರ್ಧಮಾನಕ್ಕೆ ಬರಲು ಏನು ಮಾಡಬೇಕು?
- ಕಥೆಗೆ ಮೊದಲ ಸ್ಥಾನ : ಯಾರು ನಟಿಸುತ್ತಾರೆ?” ಎನ್ನುವುದಕ್ಕಿಂತ “ಏನು ಕಥೆ ಹೇಳುತ್ತಿದ್ದೇವೆ?” ಎನ್ನುವುದು ಮೊದಲ ಪ್ರಶ್ನೆಯಾಗಬೇಕು.
- ಬಜೆಟ್‌ಗೆ ಆರ್ಥಿಕ ಶಿಸ್ತು : ಕಥೆಗೆ ಅಗತ್ಯವಿರುವಷ್ಟೇ ಖರ್ಚು ಮಾಡುವ ಪದ್ಧತಿ ಬರಬೇಕು. ದೊಡ್ಡ ಬಜೆಟ್ ಸಿನಿಮಾ ಬೇಕಾದರೆ ಅದರ ಮಾರುಕಟ್ಟೆಯ ಸಾಮರ್ಥ್ಯವನ್ನು ಮೊದಲು ಲೆಕ್ಕ ಹಾಕಬೇಕು.
- ಹೊಸ ನಿರ್ದೇಶಕರಿಗೆ ಅವಕಾಶ : ಪ್ರತಿ ವರ್ಷ ನೂರಾರು ಸಿನಿಮಾಗಳು ನಿರ್ಮಾಣವಾಗುತ್ತಿದ್ದರೆ, ಹೊಸ ಕಥೆಗಾರರು ಮತ್ತು ನಿರ್ದೇಶಕರಿಗೆ ವ್ಯವಸ್ಥಿತವಾಗಿ ಅವಕಾಶ ನೀಡಬೇಕು.
- ಕನ್ನಡ ಸಾಹಿತ್ಯದತ್ತ ಮರಳಬೇಕು : ಕನ್ನಡಕ್ಕೆ ಅಪಾರವಾದ ಕಾದಂಬರಿ, ಕಥೆ, ನಾಟಕ ಮತ್ತು ಜಾನಪದ ಸಾಹಿತ್ಯದ ಸಂಪತ್ತು ಇದೆ. ಹಿಂದಿನ ಪೀಳಿಗೆಯ ಸಿನಿಮಾ ಅದರಿಂದ ಸಾಕಷ್ಟು ಪಡೆದುಕೊಂಡಿತ್ತು. ಈ ಸಂಪತ್ತನ್ನು ಆಧುನಿಕ ಭಾಷೆಯಲ್ಲಿ ಪುನರ್‌ಸೃಷ್ಟಿಸುವ ಅಗತ್ಯವಿದೆ.
- ಸ್ಥಳೀಯತೆಯನ್ನು ದುರ್ಬಲತೆ ಎಂದು ನೋಡಬಾರದು : ಕನ್ನಡದ ಮಣ್ಣಿನ ಕಥೆ ಕನ್ನಡದಲ್ಲಿಯೇ ಪ್ರಾಮಾಣಿಕವಾಗಿ ಹೇಳಿದಾಗ ಅದು ಇತರರಿಗೂ ಆಸಕ್ತಿದಾಯಕವಾಗಬಹುದು. ಕಾಂತಾರ ರೀತಿಯ ಯಶಸ್ಸುಗಳ ಪ್ರಮುಖ ಪಾಠವೇ ಸ್ಥಳೀಯತೆಯೂ ವಿಶಾಲ ಪ್ರೇಕ್ಷಕರನ್ನು ತಲುಪಬಲ್ಲದು ಎಂಬುದು.
- ಪ್ಯಾನ್ ಇಂಡಿಯಾ ಆಯ್ಕೆ; ಕಡ್ಡಾಯವಲ್ಲ : ಮೊದಲು ಕಥೆಯ ಅಗತ್ಯ, ನಂತರ ಮಾರುಕಟ್ಟೆಯ ಅಗತ್ಯ. ಮಾರುಕಟ್ಟೆ ಕಥೆಯನ್ನು ನಿರ್ದೇಶಿಸುವ ಬದಲು ಕಥೆಯೇ ಮಾರುಕಟ್ಟೆಯನ್ನು ಹುಡುಕುವ ಪರಿಸ್ಥಿತಿ ಬರಬೇಕು.
- ಪ್ರೇಕ್ಷಕರೊಂದಿಗೆ ಮತ್ತೆ ನಂಬಿಕೆಯ ಸಂಬಂಧ : ಒಂದು ಚಿತ್ರ ಚೆನ್ನಾಗಿದ್ದರೆ ಪ್ರೇಕ್ಷಕ ಭಾಷೆಯ ಗಡಿಯನ್ನು ಮೀರಿ ಅದನ್ನು ಸ್ವೀಕರಿಸುತ್ತಾನೆ. 2025ರಲ್ಲಿ ₹5 ಕೋಟಿಗಿಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ Su From So ಮಾತಿನ ಮೂಲಕವೇ ವ್ಯಾಪಕ ಪ್ರೇಕ್ಷಕರನ್ನು ತಲುಪಿ ಸುಮಾರು ₹125 ಕೋಟಿಯ ಮಟ್ಟದ ಗಳಿಕೆ ಮಾಡಿದೆ ಎಂದು Cinema Express ವರದಿ ಮಾಡಿದೆ. ಇದು ದೊಡ್ಡ ಬಜೆಟ್ ಯಶಸ್ಸಿನ ಏಕೈಕ ಮಾರ್ಗವಲ್ಲ ಎಂಬುದನ್ನು ಸೂಚಿಸುವ ಒಂದು ಗಮನಾರ್ಹ ಉದಾಹರಣೆ.
ಕೊನೆಯ ಮಾತು
ಕನ್ನಡ ಚಿತ್ರರಂಗದ ಸಮಸ್ಯೆ ಹಣದ ಕೊರತೆಯಲ್ಲ. ಹಣವನ್ನು ಎಲ್ಲಿ ಮತ್ತು ಏಕೆ ಖರ್ಚು ಮಾಡಬೇಕು ಎಂಬುದರ ಕುರಿತಾದ ಚಿಂತನೆಯಲ್ಲಿದೆ. ಅಂದಿನ ಚಿತ್ರರಂಗದಲ್ಲಿ ತಂತ್ರಜ್ಞಾನ ಕಡಿಮೆಯಿತ್ತು. ಆದರೆ ಕಥೆ ಹುಡುಕುವ ಸಮಯವಿತ್ತು. ಬಜೆಟ್ ಕಡಿಮೆಯಿತ್ತು; ಆದರೆ ವೆಚ್ಚದ ಶಿಸ್ತು ಇತ್ತು. ದೊಡ್ಡ ಸ್ಟಾರ್ ವ್ಯವಸ್ಥೆ ಇತ್ತು. ಆದರೆ ಅನೇಕ ಕಲಾವಿದರು ವಿಭಿನ್ನ ಪಾತ್ರಗಳನ್ನು ಸ್ವೀಕರಿಸುತ್ತಿದ್ದರು. ಸಂಗೀತ ಇತ್ತು. ಆದರೆ ಅದು ಸಿನಿಮಾದ ಆತ್ಮದ ಭಾಗವಾಗಿತ್ತು.
ಇಂದು ನಮ್ಮ ಬಳಿ ಅದಕ್ಕಿಂತ ಅನೇಕ ಪಟ್ಟು ಉತ್ತಮ ತಂತ್ರಜ್ಞಾನ, ಪ್ರತಿಭಾವಂತ ನಟರು, ನಿರ್ದೇಶಕರು, ಸಂಗೀತಗಾರರು, ವಿಶ್ವಮಟ್ಟದ ತಾಂತ್ರಿಕ ಪರಿಣತಿ ಮತ್ತು ದೊಡ್ಡ ಮಾರುಕಟ್ಟೆ ಇದೆ. ಹೀಗಾಗಿ ಕನ್ನಡ ಚಿತ್ರರಂಗ ಹಿಂದಕ್ಕೆ ಹೋಗಬೇಕಾಗಿಲ್ಲ.
ಅದು ಹಿಂದಿನ ಕಾಲದ ಮನೋಭಾವದಲ್ಲಿದ್ದ ಒಳ್ಳೆಯ ಅಂಶಗಳನ್ನು ತೆಗೆದುಕೊಂಡು, ಇಂದಿನ ತಂತ್ರಜ್ಞಾನ ಮತ್ತು ಮಾರುಕಟ್ಟೆಯೊಂದಿಗೆ ಹೊಸ ಮಾದರಿಯನ್ನು ನಿರ್ಮಿಸಬೇಕು. ಪ್ಯಾನ್ ಇಂಡಿಯಾ ಆಗುವುದು ಯಶಸ್ಸಿನ ಪ್ರಮಾಣಪತ್ರವಲ್ಲ. ನೂರು ಕೋಟಿ ಖರ್ಚು ಮಾಡುವುದು ದೊಡ್ಡ ಸಿನಿಮಾ ಎಂಬುದಕ್ಕೆ ಸಾಕ್ಷಿಯಲ್ಲ. ವಿದೇಶದಲ್ಲಿ ಚಿತ್ರೀಕರಣ ಮಾಡುವುದು ಗುಣಮಟ್ಟದ ಖಾತರಿಯಲ್ಲ.
ಕೊನೆಗೆ ಪ್ರೇಕ್ಷಕ ಕೇಳುವುದು ಒಂದೇ ಪ್ರಶ್ನೆ ನಾನು ಕೊಟ್ಟ ಹಣ ಮತ್ತು ಸಮಯಕ್ಕೆ ಈ ಸಿನಿಮಾ ನನಗೆ ಏನು ಕೊಟ್ಟಿತು? ಈ ಪ್ರಶ್ನೆಗೆ ಪ್ರಾಮಾಣಿಕವಾದ ಉತ್ತರ ನೀಡಬಲ್ಲ ಸಿನಿಮಾಗಳು ಹೆಚ್ಚಾದಾಗ ಮಾತ್ರ ಕನ್ನಡ ಚಿತ್ರರಂಗದ ಮುಂದಿನ ಸುವರ್ಣಯುಗಕ್ಕೆ ದಾರಿ ತೆರೆಯುತ್ತದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ