ಅರ್ಧ ದಿನದ ಗಣೇಶೋತ್ಸವ, ಭೋಗೇನಾಗರಕೊಪ್ಪ ದೇಸಾಯಿ ಮನೆತನದ ವಿಶಿಷ್ಟ ಗಣೇಶೋತ್ಸವದ ಹಿಂದಿರುವ ದೇಶಭಕ್ತಿಯ ಕಥೆ

ಮಹಾಭಾರತವನ್ನು ವ್ಯಾಸರು ಹೇಳುತ್ತಾ ಹೋದಂತೆ ಗಣೇಶನು ನಿರಂತರವಾಗಿ ಬರೆಯಲು ಒಪ್ಪಿಕೊಂಡು ಭಾದ್ರಪದ ಶುಕ್ಲ ಚತುರ್ಥಿಯಿಂದ ಆರಂಭಿಸಿದ ಬರವಣಿಗೆ ನಿರಂತರವಾಗಿ ಹತ್ತು ದಿನಗಳ ಮುಂದುವರೆದು ಅದು ಮುಗಿಯುವಷ್ಟರಲ್ಲಿ, ಗಣೇಶನ ದೇಹದ ಉಷ್ಣತೆ ಹೆಚ್ಚಾಗಿದ್ದನ್ನು ಕಂಡ ವ್ಯಾಸರು ಅವನನ್ನು ಸರಸ್ವತಿ ನದಿಯ ಬಳಿಗೆ ಕರೆದುಕೊಂಡು ನದಿಯಲ್ಲಿ ಮುಳುಗಿಸಿ ಸ್ನಾನ ಮಾಡಿಸುತ್ತಿದ್ದಾಗ, ಮೂರನೇ ಬಾರಿ ಮುಳುಗಿಸಿದಾಗ, ವ್ಯಾಸರ ಕೈ ಬಿಡಿಸಿಕೊಂಡ ಗಣೇಶ ತಾನು ಬಂದ ಕಾರ್ಯ ಮುಗಿದೆ ಎಂದು ಜಲಮಾರ್ಗದ ಮೂಲಕ ಕೈಲಾಸ ಸೇರಿಕೊಳ್ಳುತ್ತಾನೆ ಎಂಬ ಕಥೆ ಇರುವ ಕಾರಣ, ಚತುರ್ಥಿಯಂದು ಪ್ರತಿಷ್ಠಾಪನೆ ಮಾಡಿದ ಗಣೇಶನನ್ನು ಹತ್ತು ದಿನಗಳ ಕಾಲ ಪೂಜಿಸಿ, 11ನೇದಿನ ಅನಂತ ಚತುರ್ದಶಿಯಂದು ವಿಸರ್ಜಿಸುವ ಆಚರಣೆ ರೂಢಿಗೆ ಬಂದಿದೆ ಎನ್ನಲಾಗುತ್ತದೆ. ಆದರೆ ದೇಶದ ಎಲ್ಲ ಭಾಗಗಳಲ್ಲೂ ಇದೇ ಪದ್ದತಿ ರೂಢಿಯಲ್ಲಿಲ್ಲದೇ ಕೆಲವೆಡೆ ಒಂದು ದಿನದಿಂದ 3, 5, 7, 10 ಅಥವಾ 11 ದಿನಗಳವರೆಗೆ ಸ್ಥಳೀಯ ಸಂಪ್ರದಾಯಕ್ಕೆ ಅನುಗುಣವಾಗಿ ಗಣೇಶೋತ್ಸವ ಆಚರಿಸಲಾಗುತ್ತದೆ.

ಆದರೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದ ದೇಶಕುಲಕರ್ಣಿ (ದೇಸಾಯಿ) ಮನೆತನದಲ್ಲಿ ಗಣೇಶೋತ್ಸವದ ಪರಂಪರೆ ಇದಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಇಲ್ಲಿ ಗಣಪತಿಯನ್ನು ಬೆಳಿಗ್ಗೆ ಪ್ರತಿಷ್ಠಾಪಿಸಿ, ಅದೇ ದಿನ ಮಧ್ಯಾಹ್ನದೊಳಗೆ ವಿಸರ್ಜಿಸಲಾಗುತ್ತದೆ. ಅಂದರೆ, ಅರ್ಧ ದಿನ ಮಾತ್ರ ಗಣೇಶೋತ್ಸವ ! ಇದು ಕೇವಲ ವಿಭಿನ್ನ ಧಾರ್ಮಿಕ ಆಚರಣೆಯಲ್ಲ. ಮನೆತನದ ಹಿರಿಯರ ಪ್ರಕಾರ, ಇದರ ಹಿಂದೆ ಬ್ರಿಟಿಷರ ಕಾಲದ ಬರಗಾಲ, ಕಂದಾಯ ವಿವಾದ, ವಾಡೆಯ ಮೇಲಿನ ದಾಳಿ, ಸ್ವಾತಂತ್ರ್ಯ ಚಳವಳಿಯ ಪ್ರಭಾವ ಮತ್ತು ದೇಶಭಕ್ತಿಯೊಂದಿಗೆ ಬೆಸೆದುಕೊಂಡಿರುವ ಒಂದು ಐತಿಹಾಸಿಕ ನೆನಪು ಇದೆ.

ಸಾಮಾನ್ಯ ಗಣೇಶೋತ್ಸವಕ್ಕಿಂತ ಭಿನ್ನವಾದ ಪರಂಪರೆ

ಭೋಗೇನಾಗರಕೊಪ್ಪದ ದೇಶಕುಲಕರ್ಣಿ ಅಥವಾ ದೇಸಾಯಿ ಮನೆತನದಲ್ಲಿ ಗಣೇಶ ಚತುರ್ಥಿಯಂದು ಬೆಳಿಗ್ಗೆ ಗಣಪತಿಯ ಪ್ರತಿಷ್ಠಾಪನೆ ನಡೆಯುತ್ತದೆ. ಪೂಜೆ, ವಿಶೇಷ ನೈವೇದ್ಯ, ಮಹಾಮಂಗಳಾರತಿ ಮತ್ತು ತೀರ್ಥ-ಪ್ರಸಾದ ವಿತರಣೆ ಮುಗಿದ ಬಳಿಕ ಮಧ್ಯಾಹ್ನದ ಊಟಕ್ಕೂ ಮುನ್ನವೇ ಗಣಪತಿಯ ವಿಸರ್ಜನೆ ಮಾಡಲಾಗುತ್ತದೆ. ಇಂದು ನೋಡಿದರೆ ಇದು ಅಚ್ಚರಿಯ ಸಂಗತಿ.

ಇಷ್ಟು ಬೇಗ ಏಕೆ ವಿಸರ್ಜನೆ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆದರೆ ಕುಟುಂಬದ ಪರಂಪರೆಯ ಪ್ರಕಾರ, ಈ ಅರ್ಧ ದಿನದ ಗಣೇಶೋತ್ಸವದ ಹಿಂದೆ ಸುಮಾರು ಒಂದು ಶತಮಾನಕ್ಕೂ ಹಿಂದಿನ ಬ್ರಿಟಿಷ್ ವಿರೋಧಿ ಹೋರಾಟದ ನೆನಪು ಅಡಗಿದೆ.

ಬರಗಾಲ, ಕಂದಾಯ ಮತ್ತು ದೇಸಾಯಿಗಳ ನಡುವಿನ ಸಂಘರ್ಷ

ಸ್ಥಳೀಯ ಪರಂಪರೆಯ ಪ್ರಕಾರ, ದೇಶಕುಲಕರ್ಣಿ ಅಥವಾ ದೇಸಾಯಿ ಮನೆತನವು ಐದು ಗ್ರಾಮಗಳ ಆಡಳಿತ ಮತ್ತು ಕಂದಾಯ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿತ್ತು. ಕುಟುಂಬದ ಐತಿಹ್ಯದ ಪ್ರಕಾರ, ಹಿಂದಿನ ಕಾಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿಂದ ಐದು ಹಳ್ಳಿಗಳ ಇನಾಮು ದೊರೆತಿತ್ತು ಮತ್ತು ದೇಸಾಯಿ ಮನೆತನವು ಆ ಪ್ರದೇಶದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಕಲಘಟಗಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಬರಗಾಲ ಎದುರಾಗಿತ್ತು. ಮಳೆ ಕೈ ಕೊಟ್ಟಿದ್ದರಿಂದ ಜನಜೀವನ ಸಂಕಷ್ಟದಲ್ಲಿತ್ತು. ಕೃಷಿ ಕುಂಠಿತವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿಯೂ ಬ್ರಿಟಿಷ್ ಆಡಳಿತದ ಕಂದಾಯ ವ್ಯವಸ್ಥೆ ಜನರ ಮೇಲೆ ಒತ್ತಡ ಹೇರುತ್ತಿತ್ತು ದೇಸಾಯಿ ಆಡಳಿತದಲ್ಲಿದ್ದ ಐದು ಗ್ರಾಮಗಳ ಜನರು ಕಂದಾಯ ಪಾವತಿಸದಿರುವುದು ಬ್ರಿಟಿಷ್ ಅಧಿಕಾರಿಗಳೊಂದಿಗೆ ಸಂಘರ್ಷಕ್ಕೆ ಕಾರಣವಾಯಿತು ಎಂದು ಕುಟುಂಬದ ಪರಂಪರೆ ತಿಳಿಸುತ್ತದೆ.

ಆ ಕಾಲದಲ್ಲಿ ಕಂದಾಯ ವಸೂಲಾತಿ ಬ್ರಿಟಿಷ್ ಆಡಳಿತದ ಪ್ರಮುಖ ಆದಾಯ ಮೂಲವಾಗಿತ್ತು. ಬರಗಾಲದ ಸಂದರ್ಭದಲ್ಲಿ ಕಂದಾಯದ ಹೊರೆ ಗ್ರಾಮೀಣ ಜನರಿಗೆ ದೊಡ್ಡ ಸಮಸ್ಯೆಯಾಗುತ್ತಿತ್ತು. ಭೋಗೇನಾಗರಕೊಪ್ಪದ ದೇಸಾಯಿಗಳು ತಮ್ಮ ವ್ಯಾಪ್ತಿಯ ಜನರ ಪರವಾಗಿ ನಿಂತದ್ದು ಬ್ರಿಟೀಷರ ಕೆಂಗಣ್ಣಿಗೆ ಗುರಿಯಾಗಿ ಅವರಿಗೆ ಸೂಕ್ತ ಸಮಯದಲ್ಲಿ ಶಿಕ್ಷೆಸಲು ಬ್ರಿಟೀಷರು ಕಾಯುತ್ತಿದ್ದರು.

ನಕ್ಷೆಯಲ್ಲೂ ನಡೆದಿತ್ತೇ ಸೇಡು?

 ಕಂದಾಯ ವಿಚಾರದಲ್ಲಿ ಬ್ರಿಟಿಷ್ ಅಧಿಕಾರಿಗಳೊಂದಿಗೆ ದೇಸಾಯಿಗಳ ಸಂಘರ್ಷ ಹೆಚ್ಚಾದ ಸಂದರ್ಭದಲ್ಲಿ, ಗ್ರಾಮಗಳ ಗಡಿ ಮತ್ತು ವಿಸ್ತೀರ್ಣವನ್ನು ನಕ್ಷೆಯಲ್ಲಿ ಬದಲಾಯಿಸುವ ಮೂಲಕ ದೇಸಾಯಿಗಳಿಗೆ ತೊಂದರೆ ಉಂಟುಮಾಡುವ ಪ್ರಯತ್ನ ನಡೆದಿತ್ತೆಂದು ಹೇಳಲಾಗುತ್ತದೆ. ಗ್ರಾಮದ ಮರಾಠಿ ಓಣಿಯ ಹಿತ್ತಲನ್ನು ವಿಭಾಗಿಸಿ ಗಡಿಯನ್ನು ಬದಲಾಯಿಸಿ, ದೇಸಾಯಿ ಆಡಳಿತದಲ್ಲಿದ್ದ ಗ್ರಾಮದ ವ್ಯಾಪ್ತಿಯನ್ನು ಕಡಿಮೆ ಮಾಡಲಾಯಿತು ಎಂಬುದು ಸ್ಥಳೀಯ ಕಥನ.

ಲೋಕಮಾನ್ಯ ತಿಲಕರ ಪ್ರಭಾವ

19ನೇ ಶತಮಾನದ ಕೊನೆಯ ಭಾಗ ಮತ್ತು 20ನೇ ಶತಮಾನದ ಆರಂಭದಲ್ಲಿ ಗಣೇಶೋತ್ಸವಕ್ಕೆ ಹೊಸ ಸಾರ್ವಜನಿಕ ಆಯಾಮ ಸಿಕ್ಕಿತು. ಲೋಕಮಾನ್ಯ ಬಾಲಗಂಗಾಧರ ತಿಲಕರು 1890ರ ದಶಕದಲ್ಲಿ ಗಣೇಶೋತ್ಸವವನ್ನು ಸಾರ್ವಜನಿಕ ಸ್ವರೂಪಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. 1893ರಲ್ಲಿ ಸಾರ್ವಜನಿಕ ಗಣೇಶೋತ್ಸವದ ಸಂಘಟಿತ ರೂಪಕ್ಕೆ ಅವರ ಕೊಡುಗೆ ವಿಶೇಷವಾಗಿ ಗುರುತಿಸಲ್ಪಟ್ಟಿದೆ. ಗಣೇಶೋತ್ಸವದ ವೇದಿಕೆಯನ್ನು ಸಾಮಾಜಿಕ ಮತ್ತು ರಾಷ್ಟ್ರೀಯ ಚಿಂತನೆಗಳಿಗೆ ಬಳಸಿಕೊಳ್ಳುವ ಪ್ರಯತ್ನವೂ ನಡೆಯಿತು.  ಈ ಪರಂಪರೆ ಮಹಾರಾಷ್ಟ್ರದಿಂದ ಉತ್ತರ ಕರ್ನಾಟಕಕ್ಕೂ ಹರಡಿತು. ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ರಾಷ್ಟ್ರೀಯ ಚಳವಳಿಯ ವಾತಾವರಣದೊಂದಿಗೆ ಬೆಸೆದುಕೊಂಡಿತು.  1905ರಲ್ಲಿ ಅಲ್ಲಿ ಸಾರ್ವಜನಿಕ ಗಣೇಶೋತ್ಸವ ಆರಂಭವಾದ ಬಗ್ಗೆ ವರದಿಗಳಿವೆ.

ಹುಬ್ಬಳ್ಳಿಗೆ ಲೋಕಮಾನ್ಯ ತಿಲಕರು ಬಂದ ಸಂದರ್ಭದಲ್ಲಿ ಸಾರ್ವಜನಿಕ ಗಣೇಶೋತ್ಸವದ ಮೂಲಕ ಜನರನ್ನು ಒಗ್ಗೂಡಿಸುವ ವಿಚಾರದಿಂದ ಭೋಗೇನಾಗರಕೊಪ್ಪದ ದೇಸಾಯಿ ಮನೆತನದವರು ಪ್ರೇರಿತರಾದರು. ವಿರುಪಾಕ್ಷ ಅನಂತರಾವ್ ದೇಸಾಯಿ ಅವರು ಬ್ರಿಟಿಷರ ನೀತಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.ಮುಂದೆ ಅವರು ಗೋವಾ ವಿಮೋಚನಾ ಚಳವಳಿಯಲ್ಲಿಯೂ ಭಾಗವಹಿಸಿದ್ದರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಪಡೆದಿದ್ದರು ಎಂಬುದಾಗಿ ಕುಟುಂಬದವರು ಹೇಳುತ್ತಾರೆ. ಇದೇ ರೀತಿ ದೇಸಾಯಿ ದತ್ತಮೂರ್ತಿ ಅವರು ಭೂಗತರಾಗಿ ದೇಶಪ್ರೇಮದ ಲೇಖನಗಳನ್ನು ಪತ್ರಿಕೆಗಳಿಗೆ ಕಳುಹಿಸುತ್ತಿದ್ದರು ಎಂಬ ಕುಟುಂಬದ ನೆನಪೂ ಇದೆ.

ಅಂದರೆ, ಈ ಮನೆತನದ ಕಥೆಯಲ್ಲಿ ಗಣೇಶೋತ್ಸವ ಕೇವಲ ಧಾರ್ಮಿಕ ಆಚರಣೆಯಲ್ಲ; ರಾಷ್ಟ್ರೀಯ ಚಳವಳಿಯ ಚಿಂತನೆಗಳಿಗೂ ಅದು ಒಂದು ವೇದಿಕೆಯಾಗಿ ರೂಪುಗೊಂಡಿತ್ತು ಎಂಬ ನೆನಪು ಇದೆ.

ಐದು ದಿನಗಳ ಉತ್ಸವದಿಂದ ಅರ್ಧ ದಿನದ ಗಣಪತಿಗೆ!

ತಿಲಕರ ವಿಚಾರಗಳಿಂದ ಪ್ರೇರಿತರಾದ ಬಳಿಕ ದೇಸಾಯಿ ವಾಡೆಯಲ್ಲಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಐದು ದಿನಗಳ ಕಾರ್ಯಕ್ರಮ ನಡೆಯುತ್ತಿತ್ತು  ಗಣೇಶ ಚತುರ್ಥಿಯ ಬೆಳಿಗ್ಗೆ ಗಣಪತಿ ಪ್ರತಿಷ್ಠಾಪನೆ. ವಿಶೇಷ ಪೂಜೆ. ಭಕ್ತರಿಗೆ ತೀರ್ಥ-ಪ್ರಸಾದ. ಜನರಿಗೆ ಊಟ. ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು. ಎಲ್ಲವೂ ಸಂಭ್ರಮದಿಂದ ನಡೆಯುತ್ತಿತ್ತು. ಆದರೆ ಒಂದು ಗಣೇಶೋತ್ಸವದ ದಿನ ಮಧ್ಯಾಹ್ನ ನಡೆದ ಘಟನೆ ಈ ಪರಂಪರೆಯನ್ನೇ ಶಾಶ್ವತವಾಗಿ ಬದಲಿಸಿತು.

ಮಧ್ಯಾಹ್ನ ಬಂದ ಬ್ರಿಟಿಷ್ ಸೈನ್ಯ!

ದೇಸಾಯಿ ಮನೆತನವು ಬ್ರಿಟಿಷ್ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ ಎಂಬ ಅನುಮಾನ ಅಥವಾ ಮಾಹಿತಿಯ ಹಿನ್ನೆಲೆಯಲ್ಲಿ ಬ್ರಿಟಿಷ್ ಸೈನ್ಯ ವಾಡೆಯ ಮೇಲೆ ದಾಳಿ ಮಾಡಲು ಬಂದಿತು. ಆ ದಿನ ಗಣೇಶೋತ್ಸವ ನಡೆಯುತ್ತಿತ್ತು. ಬೆಳಿಗ್ಗೆ ಗಣಪತಿಯ ಪ್ರತಿಷ್ಠಾಪನೆ ನಡೆದಿತ್ತು. ಪೂಜೆ ಮುಗಿದಿತ್ತು. ತೀರ್ಥ-ಪ್ರಸಾದ ವಿತರಿಸಲಾಗಿತ್ತು. ಮನೆಯವರು ಮಧ್ಯಾಹ್ನದ ಊಟಕ್ಕೆ ಸಿದ್ಧರಾಗುತ್ತಿದ್ದರು. ಅಷ್ಟರಲ್ಲಿ ಬ್ರಿಟಿಷ್ ಸೈನ್ಯ ವಾಡೆಯತ್ತ ಬರುತ್ತಿರುವ ಸುದ್ದಿ ತಿಳಿಯಿತು.

ಬಾವಿಯಲ್ಲಿ ಗಣಪತಿಯ ವಿಸರ್ಜನೆ, ದೇಸಾಯಿಗಳು ಭೂಗತ!

ಬ್ರಿಟಿಷ್ ಸೈನಿಕರು ವಾಡೆಯೊಳಗೆ ಪ್ರವೇಶಿಸಿದರೆ ಗಣಪತಿಯ ಮೂರ್ತಿಗೂ ಧಕ್ಕೆ ಉಂಟಾಗಬಹುದು ಎಂಬ ಆತಂಕ ಕುಟುಂಬದವರಲ್ಲಿ ಮೂಡಿತು ಎಂದು ಸ್ಥಳೀಯ ಐತಿಹ್ಯ ಹೇಳುತ್ತದೆ. ಆಗ ದೇಸಾಯಿಗಳು ತಕ್ಷಣ ನಿರ್ಧಾರ ಕೈಗೊಂಡರು. ವಾಡೆಯಲ್ಲಿದ್ದ ಹುಡೇದ ಬಾವಿಯಲ್ಲಿ ಗಣಪತಿಯ ವಿಸರ್ಜನೆ ಮಾಡಲಾಯಿತು. ಅದಾದ ಬಳಿಕ ವಾಡೆಯ ಪಶ್ಚಿಮ ದ್ವಾರದ ಮೂಲಕ ದೇಸಾಯಿಗಳು ಅಲ್ಲಿಂದ ಭೂಗತರಾದರು ಎಂಬುದು ಕುಟುಂಬದ ಕಥನ. ಬ್ರಿಟಿಷ್ ಸೈನ್ಯ ವಾಡೆಗೆ ತಲುಪುವಷ್ಟರಲ್ಲಿ ಅಲ್ಲಿ ನಡೆಯಬೇಕಿದ್ದ ಚಟುವಟಿಕೆ ಮುಗಿದಿತ್ತು. ಅಧಿಕಾರಿಗಳಿಗೆ ತಾವು ಬಂದ ಉದ್ದೇಶದ ಬಗ್ಗೆ ಯಾವುದೇ ಸುಳಿವು ಸಿಗದೆ ಹಿಂದಿರುಗಿದರು.

ಆ ಒಂದು ದಿನ ಬದಲಿಸಿದ ಗಣೇಶೋತ್ಸವದ ಪರಂಪರೆ

ಆ ದಿನದ ನಂತರ ದೇಸಾಯಿ ಮನೆತನವು ಗಣೇಶೋತ್ಸವದ ಅವಧಿಯನ್ನು ಬದಲಿಸಿತು. ಬೆಳಿಗ್ಗೆ ಪ್ರತಿಷ್ಠಾಪನೆ – ಪೂಜೆ – ಮಹಾನೈವೇದ್ಯ – ಮಹಾಮಂಗಳಾರತಿ – ತೀರ್ಥಪ್ರಸಾದ – ಮಧ್ಯಾಹ್ನಕ್ಕೂ ಮುನ್ನ ವಿಸರ್ಜನೆ. ಇದೇ ಇಂದಿಗೂ ಮುಂದುವರಿದಿರುವ ಸಂಪ್ರದಾಯ. ಹೀಗಾಗಿ ಇಂದಿನ ಪೀಳಿಗೆಗೆ ಇದು ಕೇವಲ ‘ಅರ್ಧ ದಿನದ ಗಣಪತಿ’ಯಂತೆ ಕಾಣಬಹುದು. ಆದರೆ ಕುಟುಂಬದವರಿಗೆ ಇದು ಒಂದು ಐತಿಹಾಸಿಕ ಘಟನೆಯ ಸ್ಮರಣೆ.

ಮಧುಸೂದನ ದೇಶಕುಲಕರ್ಣಿಯವರ ನೆನಪು

ಮನೆತನದ ಹಿರಿಯರಾದ ಮಧುಸೂದನ ದೇಶಕುಲಕರ್ಣಿ ಅವರ ನೆನಪಿನ ಪ್ರಕಾರ, ಇಂದಿಗೂ ಗಣೇಶ ಚತುರ್ಥಿಯಂದು ಬೆಳಿಗ್ಗೆ ಗಣಪತಿಯ ಪ್ರತಿಷ್ಠಾಪನೆ ನಡೆಯುತ್ತದೆ. ಪೂಜೆ ಮತ್ತು ಮಹಾನೈವೇದ್ಯದ ಬಳಿಕ ಮಹಾಮಂಗಳಾರತಿ ನೆರವೇರುತ್ತದೆ. ತೀರ್ಥ-ಪ್ರಸಾದ ವಿತರಿಸಲಾಗುತ್ತದೆ. ಅದಾದ ಬಳಿಕ ಮಧ್ಯಾಹ್ನದ ಊಟಕ್ಕೂ ಮುನ್ನವೇ ಗಣಪತಿಯ ವಿಸರ್ಜನೆ ಮಾಡಲಾಗುತ್ತದೆ. ಶತಮಾನಗಳ ಹಳೆಯ ನೆನಪನ್ನು ಆಚರಣೆಯ ರೂಪದಲ್ಲಿ ಮುಂದುವರಿಸುವ ಈ ಪರಂಪರೆಯೇ ಭೋಗೇನಾಗರಕೊಪ್ಪದ ಗಣೇಶೋತ್ಸವದ ವಿಶೇಷತೆ.

ಧಾರ್ಮಿಕ ಆಚರಣೆಗಿಂತ ಮಿಗಿಲಾದ ಒಂದು ನೆನಪು

ಗಣೇಶೋತ್ಸವದ ಆಚರಣೆ ಸಾಮಾನ್ಯವಾಗಿ ಭಕ್ತಿ, ಸಂಭ್ರಮ ಮತ್ತು ಸಮುದಾಯದ ಒಗ್ಗಟ್ಟಿನೊಂದಿಗೆ ಸಂಬಂಧಿಸಿದೆ. ಆದರೆ ಭೋಗೇನಾಗರಕೊಪ್ಪದ ದೇಸಾಯಿ ಮನೆತನದ ಗಣಪತಿ ಮತ್ತೊಂದು ಆಯಾಮವನ್ನು ಪರಿಚಯಿಸುತ್ತದೆ. ಒಂದು ಕುಟುಂಬದ ಭಕ್ತಿ, ಒಂದು ಪ್ರದೇಶದ ಇತಿಹಾಸ, ಬ್ರಿಟಿಷ್ ಆಡಳಿತದ ನೆನಪು, ಸ್ವಾತಂತ್ರ್ಯ ಚಳವಳಿಯ ಪ್ರಭಾವ ಮತ್ತು ದೇಶಭಕ್ತಿಯ ಸ್ಮರಣೆ  ಇವೆಲ್ಲವೂ ಒಂದೇ ಗಣಪತಿ ಆಚರಣೆಯಲ್ಲಿ ಬೆರೆತಿವೆ. ಅದಕ್ಕಾಗಿಯೇ ಇಲ್ಲಿ ಗಣಪತಿಯ ವಿಸರ್ಜನೆ ಕೇವಲ ಧಾರ್ಮಿಕ ವಿಧಿಯಲ್ಲ. ಅದು ಒಂದು ಕುಟುಂಬದ ಇತಿಹಾಸದ ಪುನರಾವರ್ತನೆ.

ಇಂದಿನ ಪೀಳಿಗೆಗೆ ಈ ಪರಂಪರೆ ಹೇಳುವ ಸಂದೇಶವೇನು?

ಇಂದು ಗಣೇಶೋತ್ಸವಗಳು ದೊಡ್ಡ ದೊಡ್ಡ ಮಂಟಪಗಳು, ಭವ್ಯ ಮೂರ್ತಿಗಳು, ವಿದ್ಯುತ್ ಅಲಂಕಾರ, ಸಂಗೀತ ಕಾರ್ಯಕ್ರಮಗಳು ಮತ್ತು ಸಾವಿರಾರು ಭಕ್ತರೊಂದಿಗೆ ನಡೆಯುತ್ತಿವೆ. ಅದರ ನಡುವೆ ಭೋಗೇನಾಗರಕೊಪ್ಪದ ಈ ಮನೆತನದ ಗಣಪತಿ ನಮಗೆ ಮತ್ತೊಂದು ಸಂಗತಿಯನ್ನು ನೆನಪಿಸುತ್ತದೆ. ಹಬ್ಬದ ವೈಭವ ಅದರ ಅವಧಿಯಲ್ಲಿಲ್ಲ; ಅದರ ಹಿಂದೆ ಇರುವ ಕಥೆಯಲ್ಲಿದೆ. ಮೂರು ದಿನ ಕೂರಿಸಿದರೂ ಗಣಪತಿಯೇ. ಹತ್ತು ದಿನ ಕೂರಿಸಿದರೂ ಗಣಪತಿಯೇ. ಅರ್ಧ ದಿನ ಕೂರಿಸಿದರೂ ಗಣಪತಿಯೇ. ಆದರೆ ಒಂದು ಕುಟುಂಬವು ತನ್ನ ಇತಿಹಾಸವನ್ನು ಮರೆಯದೆ, ಒಂದು ಘಟನೆಯನ್ನು ಪೀಳಿಗೆಯಿಂದ ಪೀಳಿಗೆಗೆ ಆಚರಣೆಯ ರೂಪದಲ್ಲಿ ಉಳಿಸಿಕೊಂಡಿರುವುದು ಈ ಪರಂಪರೆಯ ನಿಜವಾದ ವೈಶಿಷ್ಟ್ಯ.

ಮಧ್ಯಾಹ್ನಕ್ಕೂ ಮುನ್ನವೇ ವಿಸರ್ಜನೆ! ಹೊರಗಿನವರಿಗೆ ಇದು ವಿಚಿತ್ರವಾಗಿ ಕಾಣಬಹುದು. ಆದರೆ ಈ ಕುಟುಂಬಕ್ಕೆ ಅದು ವಿಚಿತ್ರವಲ್ಲ. ಅದು ಬ್ರಿಟಿಷರ ಕಾಲದ ಒಂದು ಘಟನೆಯ ನೆನಪು. ಅದು ದೇಶಭಕ್ತಿಯ ಸಂಕೇತ. ಅದು ಪೂರ್ವಜರ ಹೋರಾಟಕ್ಕೆ ಸಲ್ಲಿಸುವ ಗೌರವ. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಭಕ್ತಿ ಮತ್ತು ದೇಶಭಕ್ತಿ ಒಂದೇ ಪರಂಪರೆಯಲ್ಲಿ ಬೆರೆತಿರುವ ಅಪರೂಪದ ಗಣೇಶೋತ್ಸವ.

ಇಂತಹ ಸ್ಥಳೀಯ ಇತಿಹಾಸಗಳು ದಾಖಲಾಗದೇ ಹೋದರೆ, ಮುಂದಿನ ಪೀಳಿಗೆಗೆ ಅವು ಕೇವಲ ಒಂದು ಕಾಲದ ಕಥೆಯಾಗಿ ಉಳಿದುಹೋಗಬಹುದು. ಆದ್ದರಿಂದ ಕುಟುಂಬದ ಹಳೆಯ ದಾಖಲೆಗಳು, ಸನದ್‌ಗಳು, ಕಂದಾಯ ನಕಾಶೆಗಳು, ಬ್ರಿಟಿಷ್ ಕಾಲದ ಆಡಳಿತ ದಾಖಲೆಗಳು, ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಗಳು ಮತ್ತು ಹಿರಿಯರ ಮೌಖಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ದಾಖಲಿಸುವುದು ಈ ಪರಂಪರೆಯನ್ನು ಇನ್ನಷ್ಟು ಇತಿಹಾಸಪೂರಿತವಾಗಿ ಉಳಿಸಲು ನೆರವಾಗಬಹುದು.

ಗಣಪತಿ ಬಪ್ಪಾ ಮೋರಯಾ!
ಭೋಗೇನಾಗರಕೊಪ್ಪದ ಇತಿಹಾಸದ ಗಣಪತಿ ಮಹಾರಾಜ್ ಕೀ ಜೈ!

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply