ಹುಣಸೂರಿನಿಂದ ಕನ್ನಡ ಚಿತ್ರರಂಗದ ಶಿಖರದವರೆಗೆ
ಹುಣಸೂರು ಕೃಷ್ಣಮೂರ್ತಿ ಅವರು 1914ರ ಫೆಬ್ರವರಿ 9ರಂದು ಅಂದಿನ ಮೈಸೂರು ಸಂಸ್ಥಾನದ ಹುಣಸೂರಿನಲ್ಲಿ ಜನಿಸಿದರು. ತಂದೆ ಎಂ. ರಾಜಾರಾವ್, ತಾಯಿ ಪದ್ಮಾವತಮ್ಮ. ತಂದೆ ಸಾರ್ವಜನಿಕ ಕಾಮಗಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಬಾಲ್ಯದಿಂದಲೇ ಸಾಹಿತ್ಯ, ನಾಟಕ ಮತ್ತು ಅಭಿನಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಕೃಷ್ಣಮೂರ್ತಿ ಅವರು ಮುಂದೆ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆಯಾಗಿ ಬೆಳೆದರು.
ಹುಣಸೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಅವರು, ಮೈಸೂರಿನ ಶಾರದಾ ವಿಲಾಸ ಪ್ರೌಢಶಾಲೆ ಮತ್ತು ಬಸಯ್ಯ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಆದರೆ ಅವರ ಮನಸ್ಸು ಪಠ್ಯಪುಸ್ತಕಗಳಿಗಿಂತ ಹೆಚ್ಚಾಗಿ ರಂಗಭೂಮಿಯತ್ತ ಸೆಳೆಯಲ್ಪಟ್ಟಿತ್ತು. ಕೇವಲ ಹತ್ತು ವರ್ಷದ ವಯಸ್ಸಿನಲ್ಲಿಯೇ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದ್ದರು ಬಾಲ್ಯದಲ್ಲಿಯೇ ಕಲೆಯ ಬಗ್ಗೆ ಬೆಳೆದ ಈ ಆಸಕ್ತಿಯೇ ಅವರನ್ನು ಮುಂದೆ ನಾಟಕಕಾರನಾಗಿ, ಚಿತ್ರಕಥೆಗಾರನಾಗಿ ಮತ್ತು ನಿರ್ದೇಶಕನಾಗಿ ರೂಪಿಸಿತು.
ಬಾಂಬೆ ಟಾಕೀಸ್ನ ಅನುಭವ
ಹತ್ತನೇ ವಯಸ್ಸಿನಲ್ಲಿಯೇ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದ ಇವರು, ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ಮುಂಬೈಗೆ ತೆರಳಿ ಸಿಂಹಳ ಸುಂದರಿ ಎಂಬ ಮೂಕಿ ಚಿತ್ರದಲ್ಲಿ ನಟಿಸಿ, ಹಿಂದಿ ಚಿತ್ರರಂಗದ ಪ್ರಮುಖ ಸಂಸ್ಥೆಯಾಗಿದ್ದ ಬಾಂಬೆ ಟಾಕೀಸ್ನಲ್ಲಿಯೂ ಕೆಲಸ ಮಾಡಿದರು. ಅಲ್ಲಿನ ಚಲನಚಿತ್ರ ನಿರ್ಮಾಣದ ವಿಧಾನ, ತಾಂತ್ರಿಕ ಪ್ರಕ್ರಿಯೆ ಮತ್ತು ಕಥೆ ಹೇಳುವ ಶೈಲಿಯನ್ನು ಹತ್ತಿರದಿಂದ ಗಮನಿಸುವ ಅವಕಾಶ ಅವರಿಗೆ ದೊರೆಯಿತು. ರಂಗಭೂಮಿಯ ಅನುಭವದ ಜೊತೆಗೆ ಚಲನಚಿತ್ರ ನಿರ್ಮಾಣದ ಈ ಅರಿವು ಅವರಲ್ಲಿ ಒಬ್ಬ ಸಮರ್ಥ ಚಿತ್ರಕಥೆಗಾರ ಮತ್ತು ನಿರ್ದೇಶಕನನ್ನು ರೂಪಿಸಿತು.
ಜೀವನೋಪಾಯಕ್ಕಾಗಿ ವಾಚ್ ರಿಪೇರಿ, ಮನಸ್ಸಿನಲ್ಲಿ ರಂಗಭೂಮಿಯ ಒಲವು
ಮುಂಬೈನಿಂದ ಮರಳಿದ ಬಳಿಕ ಆರ್ಥಿಕ ಸಂಕಷ್ಟ ಎದುರಿಸಿದ ಕೃಷ್ಣಮೂರ್ತಿ ಅವರು ಜೀವನ ನಿರ್ವಹಣೆಗಾಗಿ ವಾಚ್ ರಿಪೇರಿ ಕೆಲಸವನ್ನು ಕಲಿತು, ಅಂಗಡಿಯೊಂದನ್ನು ನಡೆಸುತ್ತಿದ್ದರು. ಆದರೆ ಅವರ ಮನಸ್ಸು ಮಾತ್ರ ಸದಾ ಕಲೆ, ಸಾಹಿತ್ಯ ಮತ್ತು ರಂಗಭೂಮಿಯಲ್ಲಿಯೇ ನೆಲೆಸಿತ್ತು. ಬಿಡುವಿನ ಸಮಯವನ್ನು ವ್ಯರ್ಥ ಮಾಡದೆ ಕಥೆ, ಕವನ ಹಾಗೂ ನಾಟಕಗಳನ್ನು ಬರೆಯುವ ಮೂಲಕ ತಮ್ಮ ಸೃಜನಶೀಲತೆಯನ್ನು ಮುಂದುವರಿಸಿದರು.
ಪ್ರತಿಭೆಗೆ ಒದಗಿದ ವೇದಿಕೆ. ರಂಗಭೂಮಿಯೇ ಅವರ ಮೊದಲ ಪಾಠಶಾಲೆ
ಅವರ ಬರವಣಿಗೆಯ ಸಾಮರ್ಥ್ಯವನ್ನು ಗುರುತಿಸಿದ ಕನ್ನಡ ರಂಗಭೂಮಿಯ ದಿಗ್ಗಜರಾದ ಗುಬ್ಬಿ ವೀರಣ್ಣ ಮತ್ತು ಮಹಮ್ಮದ್ ಪೀರ್ ಅವರ ನಾಟಕ ಕಂಪನಿಗಳು ಕೃಷ್ಣಮೂರ್ತಿ ಅವರಿಗೆ ಬರಹಗಾರರಾಗಿ ಕೆಲಸ ಮಾಡುವ ಅವಕಾಶ ನೀಡಿದವು. ಈ ಒಡನಾಟದಿಂದ ರಂಗಭೂಮಿಯ ಹಲವು ಆಯಾಮಗಳನ್ನು ಅರಿತುಕೊಂಡ ಅವರು, ಸ್ವರ್ಗ ಸಾಮ್ರಾಜ್ಯ ಸೇರಿದಂತೆ ಅನೇಕ ನಾಟಕಗಳನ್ನು ರಚಿಸಿ ನಾಟಕಕಾರರಾಗಿ ಗುರುತಿಸಿಕೊಂಡರು. ಬೆಂಗಳೂರಿನ ಭಾರತ್ ನಾಟಕ ಕಂಪನಿಯಲ್ಲಿ ನಾಟಕಕಾರ ಮತ್ತು ಚಿತ್ರಕಥೆಗಾರರಾಗಿ ಕೆಲಸ ಮಾಡಿದರು. ನಂತರ ಮರಾಠಿ ರಂಗಭೂಮಿಯ ಪ್ರಸಿದ್ಧ ನಟ ಬಾಲಗಂಧರ್ವ ಅವರ ನಾಟಕ ತಂಡದಲ್ಲಿಯೂ ಕಾರ್ಯನಿರ್ವಹಿಸಿದರು. ರಂಗಭೂಮಿಯಲ್ಲಿ ಗಳಿಸಿದ ಈ ಅನುಭವವೇ ಮುಂದೆ ಅವರ ಚಲನಚಿತ್ರ ಬದುಕಿಗೆ ಭದ್ರ ಬುನಾದಿಯಾಯಿತು.
1936ರಲ್ಲಿ ಚಂದ್ರಕಲಾ ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಬಿ.ಆರ್. ಪಂತುಲು ಅವರ ಸಂಸಾರ ನೌಕೆ ನಾಟಕದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಈ ಅನುಭವವು ಅವರ ಮುಂದಿನ ಚಲನಚಿತ್ರ ಜೀವನಕ್ಕೆ ಭದ್ರ ಬುನಾದಿಯಾಯಿತು. ರಂಗಭೂಮಿಯಲ್ಲಿ ಗಳಿಸಿದ ಅನುಭವದಿಂದಾಗಿ ಅವರ ಸಂಭಾಷಣೆಗಳಲ್ಲಿ ಸಹಜತೆ, ಪಾತ್ರಗಳ ಮಾತುಗಳಲ್ಲಿ ನಾಟಕೀಯತೆ ಮತ್ತು ಕಥನದಲ್ಲಿ ಭಾವನಾತ್ಮಕ ಆಳ ಕಾಣಿಸುತ್ತಿತ್ತು. ಇದೇ ಅವರ ನಿರ್ದೇಶನದ ಚಿತ್ರಗಳ ಪ್ರಮುಖ ಶಕ್ತಿಯಾಯಿತು.
ಸಂಭಾಷಣೆ ಮತ್ತು ಗೀತರಚನೆಯಿಂದ ಚಿತ್ರರಂಗಕ್ಕೆ ಪ್ರವೇಶ
ಕೃಷ್ಣಮೂರ್ತಿ ಅವರು ಕನ್ನಡ ಚಿತ್ರರಂಗಕ್ಕೆ ಮೊದಲಿಗೆ ನಿರ್ದೇಶಕರಾಗಿ ಪ್ರವೇಶಿಸಲಿಲ್ಲ. ಸಂಭಾಷಣೆ ಮತ್ತು ಚಿತ್ರಕಥೆ ಬರಹಗಾರರಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. 1945ರಲ್ಲಿ ಬಿಡುಗಡೆಯಾದ ಹೇಮರೆಡ್ಡಿ ಮಲ್ಲಮ್ಮ ಮತ್ತು 1947ರ ಕೃಷ್ಣಲೀಲೆ ಚಿತ್ರಗಳಿಗೆ ಸಂಭಾಷಣೆ ಹಾಗೂ ಚಿತ್ರಕಥೆ ರಚಿಸುವ ಮೂಲಕ ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದರು. ನಂತರ ಕನ್ಯಾದಾನ (1954), ದೇವಕನ್ನಿಕಾ (1954), ಸೋದರಿ (1955), ಮುತ್ತೈದೆ ಭಾಗ್ಯ (1956) ಮುಂತಾದ ಚಿತ್ರಗಳಿಗೆ ಗೀತೆಗಳನ್ನೂ ರಚಿಸಿದರು. ಹೀಗಾಗಿ ಅವರು ಕೇವಲ ಕಥೆ ಮತ್ತು ಸಂಭಾಷಣೆಗಳಿಗೆ ಸೀಮಿತವಾಗದೆ, ಚಿತ್ರಗಳ ಸಾಹಿತ್ಯಿಕ ಹಾಗೂ ಸಂಗೀತಾತ್ಮಕ ಭಾಗಗಳಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿಸಿದರು.
ನಿರ್ದೇಶಕರಾಗಿ ಹೊಸ ಅಧ್ಯಾಯ – ಶ್ರೀಕೃಷ್ಣ ಗಾರುಡಿ
1958ರಲ್ಲಿ ಬಿಡುಗಡೆಯಾದ ಶ್ರೀ ಕೃಷ್ಣ ಗಾರುಡಿ ಚಿತ್ರದ ಮೂಲಕ ಕೃಷ್ಣಮೂರ್ತಿ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಡಾ. ರಾಜ್ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಪೌರಾಣಿಕ ಕಥೆಗಳನ್ನು ಮನರಂಜನೆಯೊಂದಿಗೆ ಬೆರೆಸಿ, ಪ್ರೇಕ್ಷಕರಿಗೆ ಆಕರ್ಷಕವಾಗಿ ತಲುಪಿಸುವ ಅವರ ಪ್ರಯತ್ನಕ್ಕೆ ಈ ಚಿತ್ರ ಉತ್ತಮ ಆರಂಭವಾಯಿತು. ಮುಂದೆ ಅವರು ಇದೇ ಪ್ರಕಾರದ ಚಿತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡರು. ಆ ಕಾಲದಲ್ಲಿ ಪೌರಾಣಿಕ ಚಿತ್ರಗಳನ್ನು ನಿರ್ಮಿಸುವುದು ಸುಲಭದ ಕೆಲಸವಾಗಿರಲಿಲ್ಲ. ಭವ್ಯ ಅರಮನೆಗಳು, ದೇವಲೋಕದ ದೃಶ್ಯಗಳು, ಯುದ್ಧದ ಸನ್ನಿವೇಶಗಳು, ವೇಷಭೂಷಣಗಳು, ಆಭರಣಗಳು ಮತ್ತು ವಿಶೇಷ ದೃಶ್ಯಸಂಯೋಜನೆಗಳ ಮೂಲಕ ಪುರಾಣದ ಲೋಕವನ್ನು ತೆರೆಯ ಮೇಲೆ ಕಟ್ಟಿಕೊಡಬೇಕಾಗಿತ್ತು. ಇಂತಹ ಸವಾಲುಗಳನ್ನು ಅವರು ಸಮರ್ಥವಾಗಿ ಎದುರಿಸಿದರು.
ಸತ್ಯ ಹರಿಶ್ಚಂದ್ರ – ಕನ್ನಡ ಚಿತ್ರರಂಗದ ಸುವರ್ಣ ಅಧ್ಯಾಯ
ಹುಣಸೂರು ಕೃಷ್ಣಮೂರ್ತಿ ಅವರ ನಿರ್ದೇಶನದ ಬಗ್ಗೆ ಮಾತನಾಡುವಾಗ ಮೊದಲು ನೆನಪಾಗುವ ಚಿತ್ರ 1965ರ ಸತ್ಯ ಹರಿಶ್ಚಂದ್ರ. ಸತ್ಯಕ್ಕಾಗಿ ತನ್ನ ರಾಜ್ಯ, ಸಂಪತ್ತು, ಪತ್ನಿ ಮತ್ತು ಮಗನನ್ನೂ ತ್ಯಜಿಸುವ ಹರಿಶ್ಚಂದ್ರನ ಕಥೆ ಭಾರತೀಯ ಪೌರಾಣಿಕ ಸಾಹಿತ್ಯದಲ್ಲಿ ಅತ್ಯಂತ ಮಹತ್ವದ್ದು. ಈ ಕಥೆಯನ್ನು ಸಿನಿಮಾ ರೂಪದಲ್ಲಿ ಪ್ರೇಕ್ಷಕರಿಗೆ ತಲುಪಿಸುವುದು ನಿರ್ದೇಶಕರಿಗೆ ದೊಡ್ಡ ಸವಾಲಾಗಿತ್ತು. ಡಾ. ರಾಜ್ಕುಮಾರ್ ಅವರು ಹರಿಶ್ಚಂದ್ರನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದರೆ, ಚಂದ್ರಮತಿಯ ಪಾತ್ರವೂ ಪ್ರೇಕ್ಷಕರ ಮನಸ್ಸನ್ನು ತಟ್ಟುವಂತೆ ರೂಪುಗೊಂಡಿತ್ತು. ಸತ್ಯ, ಧರ್ಮ, ತ್ಯಾಗ, ಕುಟುಂಬದ ಪ್ರೀತಿ ಮತ್ತು ಮಾನವೀಯ ಮೌಲ್ಯಗಳನ್ನು ಈ ಚಿತ್ರ ಪರಿಣಾಮಕಾರಿಯಾಗಿ ಬಿಂಬಿಸಿತು.
ಚಿತ್ರದ ಭಾವನಾತ್ಮಕ ಸನ್ನಿವೇಶಗಳು, ಶಕ್ತಿಯುತ ಸಂಭಾಷಣೆಗಳು ಮತ್ತು ಪಾತ್ರಗಳ ಅಭಿನಯದಿಂದಾಗಿ ಸತ್ಯ ಹರಿಶ್ಚಂದ್ರ ಕನ್ನಡಿಗರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದೆ. ಈ ಚಿತ್ರಕ್ಕೆ 13ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿತು. ಇದೇ ಅವಧಿಯಲ್ಲಿ ಕೃಷ್ಣಮೂರ್ತಿ ಅವರ ಮದುವೆ ಮಾಡಿ ನೋಡು ಚಿತ್ರವೂ ರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಅತ್ಯುತ್ತಮ ಕನ್ನಡ ಚಿತ್ರವೆಂಬ ಗೌರವ ಪಡೆದಿತ್ತು.
ಡಾ. ರಾಜ್ಕುಮಾರ್ ಅವರ ವೃತ್ತಿಜೀವನಕ್ಕೆ ಹೊಸ ಆಯಾಮ
ಹುಣಸೂರು ಕೃಷ್ಣಮೂರ್ತಿ ಮತ್ತು ಡಾ. ರಾಜ್ಕುಮಾರ್ ಅವರ ಕಲಾತ್ಮಕ ಒಡನಾಟ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ವಿಶೇಷವಾಗಿ ಗುರುತಿಸಬೇಕಾದದ್ದು. ರಾಜ್ಕುಮಾರ್ ಅವರು ಕೇವಲ ಸಾಮಾಜಿಕ ಮತ್ತು ಕೌಟುಂಬಿಕ ಚಿತ್ರಗಳ ನಟನಾಗಿ ಉಳಿಯದೆ, ಪೌರಾಣಿಕ ಪಾತ್ರಗಳಲ್ಲಿಯೂ ತಮ್ಮ ಅಭಿನಯದ ಸಾಮರ್ಥ್ಯವನ್ನು ತೋರಿಸಲು ಕೃಷ್ಣಮೂರ್ತಿ ಅವರ ಚಿತ್ರಗಳು ಉತ್ತಮ ವೇದಿಕೆಯಾದವು. ಅವರಿಬ್ಬರ ಸಹಯೋಗದಲ್ಲಿ ಮೂಡಿಬಂದ ಪ್ರಮುಖ ಚಿತ್ರಗಳು, ಶ್ರೀ ಕೃಷ್ಣ ಗಾರುಡಿ (1958), ವೀರ ಸಂಕಲ್ಪ (1964), ಸತ್ಯ ಹರಿಶ್ಚಂದ್ರ (1965), ಶ್ರೀ ಕನ್ಯಕಾ ಪರಮೇಶ್ವರಿ ಕಥೆ (1966),ಭಕ್ತ ಕುಂಬಾರ (1974), ಬಬ್ರುವಾಹನ (1977), ಭಕ್ತ ಸಿರಿಯಾಳ (1980), ಭಕ್ತ ಜ್ಞಾನೇಶ್ವರ (1982), ಶಿವ ಕೊಟ್ಟ ಸೌಭಾಗ್ಯ (1985)
ಈ ಚಿತ್ರಗಳ ಮೂಲಕ ರಾಜ್ಕುಮಾರ್ ಅವರಲ್ಲಿ ಅಡಗಿದ್ದ ಪೌರಾಣಿಕ ಪಾತ್ರಗಳ ಅಭಿನಯ ಸಾಮರ್ಥ್ಯವನ್ನು ಕೃಷ್ಣಮೂರ್ತಿ ಸಮರ್ಥವಾಗಿ ಬಳಸಿಕೊಂಡರು. ವಿಶೇಷವಾಗಿ ಬಬ್ರುವಾಹನ ಚಿತ್ರದಲ್ಲಿ ಅರ್ಜುನ ಮತ್ತು ಬಬ್ರುವಾಹನರ ನಡುವಿನ ಸಂಘರ್ಷ, ತಂದೆ-ಮಗನ ಸಂಬಂಧ, ಯುದ್ಧದ ಸನ್ನಿವೇಶಗಳು ಮತ್ತು ಭಾವನಾತ್ಮಕ ತಿರುವುಗಳು ಪ್ರೇಕ್ಷಕರನ್ನು ಆಕರ್ಷಿಸಿದವು.
ಭಕ್ತ ಕುಂಬಾರ – ಭಕ್ತಿಯ ಶಕ್ತಿಯನ್ನು ಸಾರಿದ ಚಿತ್ರ
1974ರಲ್ಲಿ ತೆರೆಕಂಡ ಭಕ್ತ ಕುಂಬಾರ ಕೃಷ್ಣಮೂರ್ತಿ ಅವರ ಮತ್ತೊಂದು ಮಹತ್ವದ ಚಿತ್ರ. ಭಕ್ತ ಗೋರ ಕುಂಬಾರರ ಜೀವನವನ್ನು ಆಧರಿಸಿದ ಈ ಚಿತ್ರದಲ್ಲಿ ಭಕ್ತಿ, ಶ್ರದ್ಧೆ, ನಂಬಿಕೆ ಮತ್ತು ಕುಟುಂಬದ ನೋವುಗಳನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಲಾಗಿದೆ. ಸಾಮಾನ್ಯ ಕುಂಬಾರನೊಬ್ಬ ತನ್ನ ಕಾಯಕದ ನಡುವೆಯೇ ಭಗವಂತನ ಮೇಲಿನ ಭಕ್ತಿಯನ್ನು ಹೇಗೆ ಬದುಕಿನ ಉಸಿರಾಗಿಸಿಕೊಳ್ಳುತ್ತಾನೆ ಎಂಬುದನ್ನು ಚಿತ್ರವು ಪರಿಣಾಮಕಾರಿಯಾಗಿ ತೋರಿಸಿತು. ಇಂತಹ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಕೃಷ್ಣಮೂರ್ತಿ ಅವರ ವಿಶೇಷತೆ ಇತ್ತು. ದೇವರು, ಧರ್ಮ ಮತ್ತು ಭಕ್ತಿಯ ಕಥೆಗಳನ್ನು ಕೇವಲ ಪವಾಡಗಳ ಮೂಲಕವಲ್ಲದೆ, ಮಾನವೀಯ ಸಂಬಂಧಗಳು ಮತ್ತು ಬದುಕಿನ ಸಂಕಷ್ಟಗಳ ಮೂಲಕ ಪ್ರೇಕ್ಷಕರಿಗೆ ತಲುಪಿಸುತ್ತಿದ್ದರು.
ಸ್ವಾತಂತ್ರ್ಯ ಹೋರಾಟಗಾರನ ಕಥೆಯನ್ನೂ ತೆರೆಗೆ ತಂದ ನಿರ್ದೇಶಕ
ಕೃಷ್ಣಮೂರ್ತಿ ಅವರು ಪೌರಾಣಿಕ ಚಿತ್ರಗಳಿಗೆ ಮಾತ್ರ ಸೀಮಿತರಾಗಿರಲಿಲ್ಲ. ಇತಿಹಾಸ ಮತ್ತು ದೇಶಭಕ್ತಿಯ ವಿಷಯಗಳಲ್ಲಿಯೂ ಆಸಕ್ತಿ ಹೊಂದಿದ್ದರು. 1977ರಲ್ಲಿ ಅವರು ನಿರ್ದೇಶಿಸಿದ ವೀರ ಸಿಂಧೂರ ಲಕ್ಷ್ಮಣ ಚಿತ್ರವು ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣ ಅವರ ಜೀವನವನ್ನು ಆಧರಿಸಿತ್ತು. ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಇಂತಹ ಚಿತ್ರಗಳು ಮಹತ್ವದ ಪಾತ್ರ ವಹಿಸಿದವು. ಪೌರಾಣಿಕ ಕಥೆಗಳಿಂದ ಹಿಡಿದು ನೈಜ ಇತಿಹಾಸದವರೆಗೆ ವಿಭಿನ್ನ ವಿಷಯಗಳನ್ನು ಚಿತ್ರಿಸುವ ಸಾಮರ್ಥ್ಯ ಅವರಲ್ಲಿತ್ತು.
ಹೊಸ ಕಲಾವಿದರಿಗೆ ಅವಕಾಶ ನೀಡಿದ ಪ್ರತಿಭಾನ್ವಿತ ನಿರ್ದೇಶಕ
ಒಬ್ಬ ನಿರ್ದೇಶಕನ ಸಾಧನೆ ಎಂದರೆ ತಾನು ಉತ್ತಮ ಚಿತ್ರಗಳನ್ನು ನೀಡುವುದಷ್ಟೇ ಅಲ್ಲ; ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಅವರನ್ನು ಬೆಳೆಸುವುದೂ ಆಗಿದೆ. ಈ ನಿಟ್ಟಿನಲ್ಲಿಯೂ ಕೃಷ್ಣಮೂರ್ತಿ ಅವರ ಕೊಡುಗೆ ಗಮನಾರ್ಹ. ನಂತರ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ ನಟರಾದ ಎಂ.ಪಿ. ಶಂಕರ್ ಮತ್ತು ರಾಜೇಶ್ ಅವರಿಗೆ ತಮ್ಮ ಚಿತ್ರಗಳ ಮೂಲಕ ಅವಕಾಶ ನೀಡಿದರು. 1962ರ ರತ್ನಮಂಜರಿ ಚಿತ್ರದ ಮೂಲಕ ಎಂ.ಪಿ. ಶಂಕರ್ ಅವರಿಗೆ ಹಾಗೂ 1964ರ ವೀರ ಸಂಕಲ್ಪ ಚಿತ್ರದ ಮೂಲಕ ರಾಜೇಶ್ ಅವರಿಗೆ ಪ್ರಮುಖ ಅವಕಾಶ ದೊರೆಯಿತು. ಮುಂದೆ ಈ ಕಲಾವಿದರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಗಳಿಸಿದರು.
ಕನ್ನಡ ಚಿತ್ರರಂಗಕ್ಕೆ ಹುಣಸೂರು ಕೃಷ್ಣಮೂರ್ತಿ ಕುಟುಂಬದ ಕೊಡುಗೆ

ಕನ್ನಡ ಚಿತ್ರರಂಗಕ್ಕೆ ಹುಣಸೂರಿನಿಂದ ಕೇವಲ ಕೃಷ್ಣಮೂರ್ತಿಗಳಷ್ಟೇ ಅವರ ಅಣ್ಣ ಹುಣಸೂರು ರಾಮಚಂದ್ರ ಭಾಗ್ಯಚಂದ್ರ ಅವರ ಮಗ ಖ್ಯಾತ ನಿರ್ದೇಶಕ ಮತ್ತು ನಿರ್ಮಾಕರಾಗಿರುವ ಹೆಚ್. ಆರ್. ಭಾರ್ಗವ ಮತ್ತು ಅವರ ಸಹೋದರಿಯ ಪುತ್ರ, ಕನ್ನಡದ ಕುಳ್ಳ ಎಂದೇ ಪ್ರಖ್ಯಾತರಾಗಿ ಕನ್ನಡ ಚಿತ್ರರಂಗವನ್ನು ವಿದೇಶಕ್ಕೂ ಹಬ್ಬಿಸಿದ್ದ ಖ್ಯಾತ ನಟ, ನಿರ್ಮಾಪಕ ಮತ್ತು ನಿರ್ದೇಶಶಕರಾಗಿದ್ದ ದ್ವಾರಕೀಶ್ ಮತ್ತು ಅವರ ಮಕ್ಕಳು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ
ಗೀತರಚನಕಾರರಾಗಿಯೂ ಅಚ್ಚಳಿಯದ ಛಾಪು ಮೂಡಿಸಿದ ಹುಣಸೂರು ಕೃಷ್ಣಮೂರ್ತಿ
ಹುಣಸೂರು ಕೃಷ್ಣಮೂರ್ತಿಗಳು ಕೇವಲ ಅದ್ಭುತ ಸಂಭಾಷಣೆಕಾರರು ಮತ್ತು ಯಶಸ್ವಿ ನಿರ್ದೇಶಕರಷ್ಟೇ ಅಲ್ಲ. ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ಗೀತರಚನಕಾರರಲ್ಲಿಯೂ ಒಬ್ಬರು. ಅವರ ಲೇಖನಿಯಿಂದ ಮೂಡಿಬಂದ ನೂರಾರು ಗೀತೆಗಳು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಸರಳವಾದ ಪದಗಳು, ಆಳವಾದ ಜೀವನದರ್ಶನ, ಮಾನವೀಯ ಮೌಲ್ಯಗಳು ಮತ್ತು ಮನಮುಟ್ಟುವ ಭಾವನೆಗಳು ಅವರ ಹಾಡುಗಳ ವಿಶೇಷತೆ.
‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ’, ‘ನಗು ನಗುತಾ ನಲಿ’, ‘ಬೊಂಬೆಯಾಟವಯ್ಯ’ ಮುಂತಾದ ಹಾಡುಗಳು ಅವರ ಸಾಹಿತ್ಯ ಪ್ರತಿಭೆಗೆ ಸಾಕ್ಷಿಯಾಗಿವೆ. ಈ ಹಾಡುಗಳು ಕೇವಲ ಸಿನಿಮಾದಲ್ಲಿ ಬಂದು ಮರೆಯಾಗುವ ಗೀತೆಗಳಾಗದೆ, ತಲೆಮಾರುಗಳಿಂದ ಕನ್ನಡಿಗರ ನಾಲಿಗೆಯಲ್ಲಿ ನಲಿದಾಡುತ್ತಿರುವ ಜನಪ್ರಿಯ ಹಾಡುಗಳಾಗಿವೆ.ಕಾಲ ಬದಲಾದರೂ, ತಲೆಮಾರುಗಳು ಬದಲಾದರೂ, ಅವರ ಹಾಡುಗಳ ಸೊಗಸು ಮತ್ತು ಸಂದೇಶ ಮಾತ್ರ ಇಂದಿಗೂ ಮಾಸಿಲ್ಲ.
ನಿರ್ದೇಶನದಾಚೆಗೂ ವಿಸ್ತರಿಸಿದ ಪ್ರತಿಭೆ
ಕೃಷ್ಣಮೂರ್ತಿ ಅವರ ಚಿತ್ರಗಳ ಪಟ್ಟಿಯನ್ನು ಗಮನಿಸಿದರೆ ಅವರು ಒಂದೇ ವಿಭಾಗಕ್ಕೆ ಸೀಮಿತರಾಗಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ನಿರ್ದೇಶನದ ಜೊತೆಗೆ ನಿರ್ಮಾಪಕ, ನಟ, ಸಂಭಾಷಣೆಗಾರ, ಚಿತ್ರಕಥೆಗಾರ ಮತ್ತು ಗೀತರಚನೆಕಾರರಾಗಿಯೂ ಕಾರ್ಯನಿರ್ವಹಿಸಿದರು. ರತ್ನಮಂಜರಿ (1962), ವೀರ ಸಂಕಲ್ಪ (1964), ಶ್ರೀ ಕನ್ಯಕಾ ಪರಮೇಶ್ವರಿ ಕಥೆ (1966), ಅಡ್ಡದಾರಿ (1968), ಮಂತ್ರಶಕ್ತಿ (1975) ಮುಂತಾದ ಚಿತ್ರಗಳ ನಿರ್ಮಾಣದಲ್ಲಿಯೂ ಪಾಲ್ಗೊಂಡಿದ್ದರು. ಅವರು ಕನ್ನಡದ ಜೊತೆಗೆ ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿಯೂ ಕೆಲಸ ಮಾಡಿದರು. 1961ರಲ್ಲಿ ಮೇರಾ ಸುಹಾಗ್ ಎಂಬ ಹಿಂದಿ ಚಿತ್ರವನ್ನು ನಿರ್ದೇಶಿಸಿದ್ದರು. ಅವರ ವೃತ್ತಿಜೀವನದ ವ್ಯಾಪ್ತಿ ಕನ್ನಡ ಚಿತ್ರರಂಗದ ಗಡಿಗಳನ್ನು ಮೀರಿ ವಿಸ್ತರಿಸಿತ್ತು.
ಪ್ರಶಸ್ತಿ ಮತ್ತು ಗೌರವಗಳು
ಅವರ ಕಲಾಸೇವೆಯನ್ನು ಗುರುತಿಸಿ ಹಲವು ಪ್ರಶಸ್ತಿಗಳು ಸಂದಿವೆ. ಭೂತಯ್ಯನ ಮಗ ಅಯ್ಯು ಮತ್ತು ಎಡೆಯೂರು ಸಿದ್ಧಲಿಂಗೇಶ್ವರ ಚಿತ್ರಗಳಿಗೆ ಸಂಭಾಷಣೆ ಬರಹಗಾರರಾಗಿ ದೊರೆತ ರಾಜ್ಯ ಪ್ರಶಸ್ತಿಗಳು ಅವರ ಸಾಹಿತ್ಯಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ. ನಿರ್ದೇಶನದಷ್ಟೇ ಸಂಭಾಷಣೆ ರಚನೆಯಲ್ಲಿಯೂ ಅವರು ಎಷ್ಟು ಪ್ರಬಲರಾಗಿದ್ದರು ಎಂಬುದನ್ನು ಈ ಗೌರವಗಳು ತೋರಿಸುತ್ತವೆ.
- 1965 – ಅತ್ಯುತ್ತಮ ಕನ್ನಡ ಚಿತ್ರ – ಸತ್ಯ ಹರಿಶ್ಚಂದ್ರ
- 1965 – ಮೂರನೇ ಅತ್ಯುತ್ತಮ ಕನ್ನಡ ಚಿತ್ರ – ಮದುವೆ ಮಡಿ ನೋಡು
- ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
- 1973-74 – ಅತ್ಯುತ್ತಮ ಸಂಭಾಷಣೆ ಬರಹಗಾರ – ಬೂತಯ್ಯನ ಮಗ ಅಯ್ಯು
- 1974-75 – ಮೂರನೇ ಅತ್ಯುತ್ತಮ ಚಿತ್ರ – ಭಕ್ತ ಕುಂಬಾರ
- 1981-82 – ಅತ್ಯುತ್ತಮ ಸಂಭಾಷಣೆ ಬರಹಗಾರ – ಎಡೆಯೂರು ಸಿದ್ದಲಿಂಗೇಶ್ವರ
- 1986-87 – ಲೆ.ಪುಟ್ಟಣ್ಣ ಕಣಗಾಲ್ ಪ್ರಶಸ್ತಿ
ಕೊನೆಯ ಮಾತು
1989ರ ಫೆಬ್ರವರಿ 13ರಂದು, ತಮ್ಮ 75ನೇ ವಯಸ್ಸಿನಲ್ಲಿ ಹುಣಸೂರು ಕೃಷ್ಣಮೂರ್ತಿ ಅವರು ನಿಧನರಾದರು. ಆದರೆ ಅವರು ರಚಿಸಿದ ಕಥೆಗಳು, ನಿರ್ದೇಶಿಸಿದ ಚಿತ್ರಗಳು ಮತ್ತು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕಲಾವಿದರು ಇಂದಿಗೂ ಅವರ ನೆನಪನ್ನು ಜೀವಂತವಾಗಿರಿಸಿದ್ದಾರೆ. ಒಂದು ಕಾಲದಲ್ಲಿ ರಂಗಭೂಮಿಯೇ ಕಲಾವಿದರ ವಿಶ್ವವಿದ್ಯಾಲಯವಾಗಿತ್ತು. ಅಲ್ಲಿಂದ ಕಲಿತು ಬಂದ ಕೃಷ್ಣಮೂರ್ತಿ ಅವರು ತಮ್ಮ ಅನುಭವವನ್ನು ಬೆಳ್ಳಿತೆರೆಯ ಮೇಲೆ ಯಶಸ್ವಿಯಾಗಿ ಅನಾವರಣಗೊಳಿಸಿದರು. ನಾಟಕಕಾರನಾಗಿ ಆರಂಭವಾದ ಅವರ ಪಯಣ, ರಾಷ್ಟ್ರೀಯ ಪ್ರಶಸ್ತಿ ಪಡೆದ ನಿರ್ದೇಶಕನಾಗಿ ಬೆಳೆದದ್ದು ಕನ್ನಡ ಚಿತ್ರರಂಗದ ಇತಿಹಾಸದ ಒಂದು ಸುಂದರ ಅಧ್ಯಾಯ.
ಇಂದು ತಂತ್ರಜ್ಞಾನ ಬೆಳೆದಿದೆ. ಚಿತ್ರ ನಿರ್ಮಾಣದ ವಿಧಾನ ಬದಲಾಗಿದೆ. ಆದರೆ ಉತ್ತಮ ಕಥೆ, ಗಟ್ಟಿಯಾದ ಸಂಭಾಷಣೆ, ಪಾತ್ರಗಳ ಆಳ ಮತ್ತು ಪ್ರೇಕ್ಷಕರ ಮನಸ್ಸನ್ನು ಮುಟ್ಟುವ ನಿರೂಪಣೆ ಎಂಬ ಮೂಲಭೂತ ಅಂಶಗಳು ಎಂದಿಗೂ ಬದಲಾಗುವುದಿಲ್ಲ. ಈ ಅಂಶಗಳಿಗೆ ಮಹತ್ವ ನೀಡಿದ ನಿರ್ದೇಶಕರಲ್ಲಿ ಹುಣಸೂರು ಕೃಷ್ಣಮೂರ್ತಿ ಪ್ರಮುಖರು. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಎಷ್ಟು ಚಿತ್ರಗಳನ್ನು ನಿರ್ದೇಶಿಸಿದ ಎಂಬುದಕ್ಕಿಂತ, ಆ ಚಿತ್ರಗಳು ಮುಂದಿನ ಪೀಳಿಗೆಗಳ ಮನಸ್ಸಿನಲ್ಲಿ ಎಷ್ಟು ಕಾಲ ಉಳಿಯುತ್ತವೆ ಎಂಬುದೇ ಅವರ ನಿಜವಾದ ಸಾಧನೆ. ಆ ದೃಷ್ಟಿಯಿಂದ ಹುಣಸೂರು ಕೃಷ್ಣಮೂರ್ತಿ ಅವರು ಕನ್ನಡ ಚಿತ್ರರಂಗದ ಸ್ಮರಣೀಯ ಶಿಲ್ಪಿಗಳಲ್ಲಿ ಒಬ್ಬರಾಗಿದ್ದಂತಹ ಕಾರಣದಿಂದಲೇ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ