ನಾವು ಚಿಕ್ಕವರಿದ್ದಾಗ ಸಮಾಜ ಶಾಸ್ತ್ರದಲ್ಲಿ ಭಾರತವನ್ನು ಕಂಡುಹಿಡಿದವರು ಯಾರು? ಎಂಬ ಪ್ರಶ್ನೆಗೆ 1492 ರಲ್ಲಿ ಪೋರ್ಚುಗೀಸ್ ಮೂಲದ ನಾವಿಕನಾದ ವಾಸ್ಕೋ ಡಿ ಗಾಮಾ ಪೋರ್ಚುಗಲ್‌ನ ಲಿಸ್ಬನ್‌ನಿಂದ ನೌಕಾಯಾನ ಮಾಡುತ್ತಾ ಅಟ್ಲಾಂಟಿಕ್ ಸಾಗರದ ಮೂಲಕ ಕೇಪ್ ಆಫ್ ಗುಡ್ ಹೋಪ್ ಅನ್ನು ಬಳಸಿಕೊಂಡು ಆಫ್ರಿಕಾದ ಪೂರ್ವ ಕರಾವಳಿಯ ಮಲಿಂಡಿಯಲ್ಲಿ ಕೆಲಕಾಲ ಲಂಗರು ಹಾಕಿ ಅಂತಿಮವಾಗಿ ಕೇರಳದ ಮಲಬಾರ್ ಕರಾವಳಿಯ ಕ್ಯಾಲಿಕಟ್‌ಗೆ ಬರುವ ಮೂಲಕ ಭಾರತವನ್ನು ಕಂಡು ಹಿಡಿದರು ಎಂದೇ ಹೇಳಿಕೊಡಲಾಗುತ್ತಿತ್ತು. ಹಾಗಾದರೆ ಅದಕ್ಕೂ ಮುಂಚೆ ಭಾರತದ ಅಸ್ತಿತ್ವವೇ ಇರಲಿಲ್ಲವೇ?
ಅದೇ ರೀತಿ ಉನ್ನತ ತರಗತಿಗಳಿಗೆ ಹೋಗುತ್ತಿದ್ದಂತೆಲ್ಲಾ. ಬಾಬರನ ಮಗ, ಹುಮಾಯೂನ್, ಹುಮಾಯೂನನ ಮಗ ಅಕ್ಬರ್, ಅಕ್ಬರನ ಮಗ ಜಹಾಂಗೀರ್, ಜಹಾಂಗೀರನ ಮಗ ಷಹಜಹಾನ್, ಷಹಜಹಾನನ ಮಗ ಔರಂಗಜೇಬ ಇವರೆಲ್ಲರೂ ಭಾರತ ದೇಶವನ್ನು ಆಳುತ್ತಿದ್ದಾಗ ಭಾರತ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಈ ದೊರೆಗಳು ಲಲಿತ ಕಲೆ. ಸಾಹಿತ್ಯ, ಸಂಗೀತಗಳಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಲ್ಲದೇ ಈ ಮೊಘಲರ ಕಾಲದಲ್ಲಿಯೇ ಜಗತ್ರ್ಪಸಿದ್ಧವಾದ ತಾಜ್ ಮಹಲ್, ಕುತುಬ್ ಮಿನಾರ್ ಗಳಲ್ಲೇ ನೂರಾರು ವಿಶ್ವವಿಖ್ಯಾತ ಕಟ್ಟಡಗಳು ಭಾರತದಲ್ಲಿ ತಲೆ ಎತ್ತುವ ಮೂಲಕ ಭಾರತ ಸಾಂಸ್ಕೃತಿಕವಾಗಿ ಬೆಳೆಯಿತು ಎನ್ನುವುದನ್ನೇ ಕಲಿಸಿಕೊಡಲಾಗುತ್ತಿತ್ತು. ಹಾಗಾದರೆ ಕಲೆ ಸಾಹಿತ್ಯ, ಸಂಸ್ಕೃತಿ, ವಾಸ್ತು ಶಿಲ್ಪ, ವಿಜ್ಞಾನ, ಗಣಿತ ಮುಂತಾದವುಗಳಿಗೆ ಭಾರತ ಸಹಸ್ರಾರು ವರ್ಷಗಳ ಮುಂಚೆಯೇ ವಿಶ್ವ ಗುರುವಾಗಿರಲಿಲ್ಲವೇ?
ಇದರ ಜೊತೆಯಲ್ಲೇ ದ್ರಾವಿಡರು ಈ ದೇಶದ ಮೂಲವಾಸಿಗಳಾಗಿದ್ದು, ಮಧ್ಯ ಏಷ್ಯಾದಿಂದ ಭಾರತಕ್ಕೆ ಬಂದ ಆರ್ಯರು ಈ ದ್ರಾವಿಡರ ಮೇಲೆ ದಬ್ಬಾಳಿಕೆ ನಡೆಸಿದರು ಎಂಬ ಸಾಕ್ಷಾಧಾರವಿಲ್ಲದ ಹಸೀ ಸುಳ್ಳನ್ನೇ ಕಲಿಸಿಕೊಡುವ ಮೂಲಕ ನಮ್ಮವರಿಗೆ ನಮ್ಮವರ ಮೇಲೇ ದ್ವೇಷಬರುವಂತೆ ನೋಡಿಕೊಳ್ಳಲು ಸಫಲರಾದರು. ಇನ್ನು ಇದೇ ಮೊಘಲರ ಬಳಿ ಸಾಮಂತನಾಗಿದ್ದ ಶಹಾಜಿಯವರ ಮಗ ಶಿವಾಜಿ ತನ್ನ ತಂದೆಯವರ ದಾಸ್ಯದಿಂದ ಸಿಡಿದೆದ್ದು ಗುಡ್ಡಗಾಡಿನ ಮಾವಳೀ ಹುಡುಗರ ಸೈನ್ಯವನ್ನು ಕಟ್ಟಿಕೊಂಡು ಮೊಘಲರ ಸದ್ದನ್ನು ಹುಟ್ಟಡಗಿಸಿ ಹಿಂದವೀ ಸಾಮ್ರಾಜ್ಯವನ್ನು ಕಟ್ಟಿದ ಶಿವಾಜಿ ಮಹಾರಾಜರನ್ನು ಗುಡ್ಡಗಾಡಿನಲ್ಲಿ ಗೆರಿಲ್ಲಾ ಮಾದರಿಯ ಧಾಳಿಕೋರ ಎಂದರೆ, ಮಹಾರಾಣಾ ಪ್ರತಾಪ್ ಹಲವು ಬಾರಿ ಸೋತು ಸುಣ್ಣವಾಗಿ ಹೊದ ರಾಜ ಎಂದೇ ಪರಿಚಯಿಸಿದ್ದವರಿಗೆ ರಾಣಾ ಪ್ರತಾಪ ತಾನು ಸೋಲಿಸಿದ್ದ ಮೊಘಲರ ರಾಜನಿಗೆ ಪ್ರಾಣ ಬಿಕ್ಷೇ ನೀಡಿ ಕಳುಹಿದ್ದದ್ದನ್ನು ತಿಳಿಸದಿರುವ ಜಾಣ ಮರವು ಏಕೇ?
ಇನ್ನು ಮೋಹನ್ ದಾಸ್ ಕರಮ್ ಚಂದ್ ಗಾಂಧಿ ಮತ್ತು ಜವಹರ್ ಲಾಲ್ ನೆಹರು ಅವರ ನೇತೃತ್ವದಲ್ಲಿ ನಡೆಸಿದ ಉಪವಾಸಗಳಿಂದ ಕೂಡಿದ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟಗಳಿಂದಾಗಿಯೇ ಆಗಸ್ಟ್ 15, 1947ರಲ್ಲಿ ಬ್ರಿಟಿಷರಿಂದ ಸ್ವಾತ್ರಂತ್ಯ್ರ ದೊರಕಿತು ಎಂಬುದಷ್ಟೇ ಗಿಣಿಪಾಠವನ್ನು ಹೇಳಿಕೊಟ್ಟರೇ ವಿನಃ ಅದೇ ಸ್ವಾತ್ರಂತ್ಯ ಹೋರಾಟದಲ್ಲಿ ತಮ್ಮ ಪ್ರಾಣವನ್ನೇ ದೇಶಕ್ಕಾಗಿ ತ್ಯಾಗ ಮಾಡಿದ, ವೀರ ಸಾವರ್ಕರ್, ಚಂದ್ರಶೇಖರ್ ಆಜಾದ್, ಲಾಲ್ ,ಬಾಲ್, ಪಾಲ್ ತ್ರಿವಳಿಗಳು, ಭಗತ್ ಸಿಂಗ್ ರಾಜಗುರು, ಸುಖ್ ದೇವ್, ಬಟುಕೇಶ್ವರ ದತ್ತ, ಸುಭಾಷ್ ಚಂದ್ರ ಬೋಸ್ ಅಂತಹ ಕ್ರಾಂತಿಕಾರಿಗಳ ಹೋರಾಟವನ್ನು ನಮ್ಮ ಮಕ್ಕಳಿಗೆ ತಿಳಿಸಿ ಕೊಡಲಿಲ್ಲವೇಕೇ? 1847ರ ಪ್ರಥಮ ಸಂಗ್ರಾಮದ ಕಿಚ್ಚನ್ನು ಹತ್ತಿಸಿದ ಮಂಗಲ್ ಪಾಂಡೆಯನ್ನು ಖಳನಾಯಕನಂತೆ ಸಿಪಾಯಿ ದಂಗೆ ಮಾಡಿದವ ಎಂದೇ ಕಲಿಸಿಕೊಡುವುದೇಕೇ?
ನನ್ನನ್ನು ಹಂದಿ ಎಂದು ಬೇಕಾದರೂ ಕರೆಯಿರಿ. ಅದರೆ ಹಿಂದೂ ಎಂದು ಮಾತ್ರ ಕರೆಯದಿರಿ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಂತಹ ಮತ್ತು ಎಡಪಂಥೀಯ ಮನೋಭಾವನೆಯನ್ನೇ ಹೊಂದಿದ್ದಂತಹ ವ್ಯಕ್ತಿ ಈ ದೇಶದ ಪ್ರಧಾನಿಯಾಗಿ ಸತತವಾಗಿ ೨೦-೨೫ ವರ್ಷ ಅಲ್ಪಸಂಖ್ಯಾತ ವರ್ಗಕ್ಕೇ ಸೇರಿದವರೇ ಸ್ವತಂತ್ರ್ಯ ಭಾರತದ ಶಿಕ್ಷಣ ಮಂತ್ರಿಯಾದ ನಂತರ ಸರ್ಕಾರದ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಸಿದ್ದೇಲ್ಲವೂ ಹಿಂದೂ ವಿರೋಧಿ ಭಾವನೆಯೇ. ದೇಶಕ್ಕೆ ಸ್ವಾತಂತ್ಯ್ರ ಬಂದರೂ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಮಾಧ್ಯಮಗಳು ಕಮ್ಯೂನಿಷ್ಟರ ಕಪಿಮುಷ್ಟಿಯಲ್ಲಿದ್ದ ಕಾರಣ ನಮ್ಮ ನಿರಂತರವಾಗಿ ನಮ್ಮ ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ದೇಶದ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿದ ವೀರ ಯೋಧರ ಬದಲಾಗಿ ದೇಶವನ್ನು ಕೊಳ್ಳೆ ಹೊಡೆದವರನ್ನೇ ಗ್ರೇಟ್ ಎಂದು ಹೇಳಿಕೊಳ್ಡುವ ಮೂಲಕ ನಮ್ಮ ದೇಶದ ಬಗ್ಗೆ ಕೀಳರಿಮೆಯನ್ನೇ ಬೆಳಸುತ್ತಾ ಹೋದದ್ದು ಸುಳ್ಳಲ್ಲ.
ಕರ್ನಾಟಕದಲ್ಲಿ ಆರಂಭದಿಂದಲೂ ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯ, ಶೂದ್ರ ಸಾಹಿತ್ಯ ಎಂದು ಸಾರಸ್ವತ ಲೋಕದಲ್ಲಿಯೂ ಜಾತಿಯತೆಯಿಂದ ತುಂಬಿ ತುಳುಕುವಂತೆ ಮಾಡಿದರೆ, ಕಳೆದ ಬಾರಿಯ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿ ಬರಗೂರು ರಾಮಚಂದ್ರಪ್ಪನವರು
ಆಯ್ಕೆಯಾದ ಮೇಲಂತೂ ಏಕ ಪಕ್ಷೀಯವಾಗಿ ತಮ್ಮ ಎಡ ಪಂತೀಯ ಸಿದ್ಧಾಂತದ ಮನಸ್ಥಿಯಿಂದಾಗಿ, ಭಾರತದ ನೈಜ ಇತಿಹಾಸವನ್ನು ತಿರುಚಿದ್ದಲ್ಲದೇ, ಪಠ್ಯ ಪುಸ್ತಕದ ಸಾಹಿತಿಗಳಲ್ಲೂ ಜಾತಿ, ಧರ್ಮ, ಕ್ಷೇತ್ರಿಯ ವಿಭಜನೆಯ ಮೂಲಕ ಅತ್ಯಂತ ಕೆಟ್ಟ ರೀತಿಯ ಪುಸ್ತಕವನ್ನು ಹೊರತಂದದ್ದನ್ನು ಗಮನಿಸಿದ್ದ ಪ್ರಸ್ತುತ ಸರ್ಕಾರ, ಅವೆಲ್ಲವನ್ನು ಸರಿಪಡಿಸುವ ಸಲುವಾಗಿ ಮೂಲತಃ ಗಣಿತ ಮತ್ತು ವಿಜ್ಣಾನಗಳನ್ನು ಬೋಧಿಸುವ, ಪ್ರವೃತ್ತಿಯಲ್ಲಿ 40+ ಪುಸ್ತಕಗಳು, ರಾಜ್ಯದ ಬಹುತೇಕ ಎಲ್ಲಾ ದಿನಪತ್ರಿಕೆಗಳಲ್ಲೂ ಅಂಕಣಕಾರಾಗಿ ಮಿಂಚುತ್ತಿರುವ, ಸಾಮಾಜಿಕ ಜಾಲತಾಣದ ಮೂಲಕ ನಾಡಿನ ಬಹುತೇಕರ ಮನ ಮತ್ತು ಮನೆಗಳಲ್ಲಿಯೂ ಚಿರಪರಿಚಿತರಾಗಿರುವ ರೋಹಿತ್ ಚಕ್ರತೀರ್ಥ ಅವರನ್ನು ಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರನ್ನಾಗಿ ಸರ್ಕಾರ ಘೋಷಿಸುತ್ತಿದ್ದಂತೆಯೇ ಸರ್ಕಾರದ ಕೃಟಾಕಟಾಕ್ಷದಿಂದಾಗಿ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು ಸ್ವತಃ ತಮಗೆ ತಾವೇ ಬುದ್ಧಿ ಜೀವಿಗಳು ಎಂದು ಕರೆದುಕೊಳ್ಳುವ ಮಂದಿ ಆರ್ತನಾದ ಕೇಳದಾಗಿದೆ.
ಇವೆಲ್ಲದರ ನಡುವೆಯೂ ನಿಗಧಿತ ಸಮಯಕ್ಕೆ ಸರಿಯಾಗಿ ರೋಹಿತ್ ಚಕ್ರತೀರ್ಥ ಅವರ ಸಾರಥ್ಯದ ಪುಸ್ತಕ ಪರಿಷ್ಕರರಣ ಸಮಿತಿ 1 ರಿಂದ 10ನೇ ತರಗತಿಯ ವರಗೆ ಕನ್ನಡ ಮತ್ತು ಸಮಾಜ ಶಾಸ್ತ್ರದ ಪುಸ್ತಕಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿ, ಹಿಂದಿನ ಸಮಿಯ ತಪ್ಪುಗಳನ್ನೆಲ್ಲಾ ಸರಿ ಪಡಿಸುವ ಜೊತೆ ಜೊತೆಯಲ್ಲೇ ಚಿಕ್ಕ ಮಕ್ಕಳಿಗೆ ವಯಸ್ಕರ ಶಿಕ್ಷಣದಂತಿದ್ದ ಕೆಲವು ಪದ್ಯ ಮತ್ತು ಗದ್ಯಗಳನ್ನು ತೆಗೆದು ಹಾಕಿ ಅವುಗಳ ಜೊತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ. ಹೆಡಗೇವಾರ್ ಅವರ ಭಾಷಣದ ಪಾಠದ ಜೊತೆಗೆ ಚಕ್ರವರ್ತಿ ಸೂಲೆಬೆಲೆಯವರ ಸುಖ್ ದೇವ್ ಮತ್ತು ರಾಜಗುರು ಅವರ ಕುರಿತಾದ ಕೆಲವು ಪಠ್ಯಗಳನ್ನು ಸೇರಿಸಿದ ಕೂಡಲೇ ಪಠ್ಯಪುಸ್ತಕದಲ್ಲಿ ಕೇಸರೀಕರಣ, ಬ್ರಾಹ್ಮಣ್ಯತೆ ಎಂದು ಬೊಬ್ಬಿರಿಯಲಾರಂಭಿಸಿರುವುದು ನಿಜಕ್ಕೂ ಹಾಸ್ಯಾಸ್ಪದ ಎನಿಸುತ್ತದೆ.
ನಿಜ ಹೇಳಬೇಕೆಂದರೆ, ಕೂಸು ಹುಟ್ಟುವ ಮೊದಲೇ ಕುಲವಿ ಹೊಲಿಸಿದರಂತೆ, ಹೀಗೆ ಅಪಸ್ವರವನ್ನು ಎತ್ತಿದ ಬಹುತೇಕರು ಪುಸ್ತಕ ಬಿಡುಗಡೆಗೂ ಮುನ್ನವೇ ಪುಸ್ತಕದಲ್ಲಿರುವ ವಿಷಯಗಳ ಬಗ್ಗೆ ಅರಿಯದೆಯೇ ಕೇವಲ ಅಂತೆ ಕಂತೆಯ ಮಾತುಗಳನ್ನೇ ನಂಬಿ, ಪುಸ್ತಕದ ಬಗ್ಗೆ ಅವಸವ್ಯವನ್ನು ಎತ್ತಿದ್ದಲ್ಲದೇ, ಮಕ್ಕಳಿಗೆ ಕಲಿಸುವ ಪಠ್ಯಪುಸ್ತಕಗಳು ತಮ್ಮ ಮೂಗಿನ ನೇರಕ್ಕೆ ಇರುವಂತೆ ಅನುಕೂಲ ಸಿಂಧುತನವನ್ನು ತೋರುತ್ತಾ ಗದ್ದಲ ಎಬ್ಬಿಸಿ, ಶತ್ರುಗಳ ಶತ್ರುವೇ ಮಿತ್ರ ಎನ್ನುವಂತೆ ತೆರೆಯ ಮರೆಯಿಂದಲೇ ಬರ್ಗೂರು ರಾಮಚಂದ್ರಪ್ಪ ಅ ರೀತಿಯ ಚಾರ್ವಾಕರಿಗೆ ಬೆಂಬಲ ನೀಡುತ್ತಿರುವುದು ಈಗ ಜನರಿಗೆ ಅರಿಯದ ವಿಷಯವೇನಲ್ಲ. ಅವರ ಜೊತೆ ಅವರದ್ದೇ ಪಟಾಲಂ ಪುರುಶೋತ್ತಮ ಬಿಳಿಮಲೆ ಮತ್ತು ದೇವನೂರು ಮಹದೇವ ಮುಂತಾದವರು ಸೇರಿಕೊಳ್ಳುವ ಮೂಲಕ ಉರಿಯುವ ಬೆಂಕಿಗೆ ಮತ್ತಷ್ಟು ಸೀಮೆ ಎಣ್ಣೆ ಸುರಿದಂತಾಗಿದೆ.
ಯಾವುದೇ ಟಿವಿ ಛಾನೆಲ್ಲುಗಳನ್ನು ಹಾಕಲೀ, ದಿನಪತ್ರಿಕೆ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳನ್ನು ತೆರೆದರೂ, ಎಲ್ಲಾ ಕಡೆಯಲ್ಲೂ ಪುಸ್ತಕ ಪರಿಷ್ಕರಣೆಯ ಪರ ಮತ್ತು ವಿರೋಧಿ ಹೋರಾಟಗಳು ಆರಂಭವಾಗಿ ಎರಡೂ ಬಣಗಳ ವಾಗ್ಸಮರ ತಾರಕ್ಕಕ್ಕೇರಿದೆ. ತಮ್ಮ ದೇಶದ ಇತಿಹಾಸವನ್ನು ಅರಿಯದವರು/ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಸತ್ಯಗೊತ್ತಿದ್ದರೂ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬುದರ ಅರಿವಿದ್ದರೂ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವಂತೆ ವಿದ್ಯಾರ್ಥಿಗಳ ಬಗ್ಗೆ ಯಾರೂ ಸಹಾ ಗಮನಿಸದೇ ಪಠ್ಯಪುಸ್ತಕಗಳಲ್ಲಿಯೂ ತಮ್ಮ ಜಾತಿ, ಧರ್ಮ ಮತ್ತು ರಾಜಕೀಯಗಳನ್ನು ಬೆರೆಸಲು ಮುಂದಾಗಿರುವುದು ನಿಜಕ್ಕೂ ಹೇಯಕರವೇ ಸರಿ.
ಇನ್ನು ರಾಜ್ಯಾದ್ಯಂತ ನಾಯಿಕೊಡೆಗಳಂತೆ ಗಲ್ಲಿಗಲ್ಲಿಗೆ ರಾಜ್ಯಾಧ್ಯಕ್ಷರುಗಳನ್ನು ಹೊಂದಿರುವ, ಹೆಸರಿಗಷ್ಟೇ ಕನ್ನಡ ಸಂಘಗಳಾಗಿ ಬಹಿರಂಗವಾಗಿಯೇ ಕನ್ನಡ ಹೆಸರಿನಲ್ಲಿ ಸರ್ಕಾರೀ ಅನುಧಾನವನ್ನು ಹೊಡೆಯುತ್ತಾ ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿರುವ ಕನ್ನಡ ಸಂಘಗಳೂ ಈ ಪ್ರತಿಭಟನೆ ಮಾಡಲು ಮುಂದಾಗಿರುವುದು ಯಾವ ಪುರುಷಾರ್ಥಕ್ಕೆ? ಎನ್ನುವುದೇ ಅರ್ಥವಾಗುತ್ತಿಲ್ಲ. ಇವರ ಜೊತೆ ಮುಸ್ಲಿಂ ಸಂಘಟನೆಗಳೂ ಕೈ ಜೋಡಿಸಿರುವುದು ನಿಜಕ್ಕೂ ಅಪಾಯಕಾರಿ ಬೆಳವಣಿಗೆಯಾಗಿದೆ.
ಹಿಂದೂಗಳಲ್ಲಿ ಪರಸ್ಪರ ಒಗ್ಗಟ್ಟಿಲ್ಲದ್ದನ್ನೇ ಬಳಸಿಕೊಂಡು ನಮ್ಮ ನಮ್ಮಲ್ಲೇ ಯಾದವೀ ಕಲಹ ತಂದು ದೇಶವನ್ನು ಲೂಟಿ ಮಾಡಿದ ಇತಿಹಾಸ ನಮ್ಮ ಕಣ್ಣ ಮುಂದಿದ್ದರೂ, ಆದರಿಂದ ಆದ ಪ್ರಮಾದಗಳನ್ನು ಹೇಗೆ ಬಗೆಹರಿಸಬೇಕೆಂಬುದರ ಬಗ್ಗೆ ಯೋಚಿಸದೇ, ಪರಸ್ಪರ ಕೆಸರೆರಚಾಟದ ಮೂಲದ ದೇಶೀಯವಾಗಿ ಮತ್ತು ಅಂತರಾಷ್ಟ್ರೀಯವಾಗಿ ಕರ್ನಾಟಕದ ಮಾನವನ್ನು ಹರಾಜು ಹಾಕಲು ಮುಂದಾಗಿರುವ ಪಟ್ಟಭಧ್ರ ಹಿತಾಸಕ್ತಿಗಳ ನಡೆ ಆತಂಕಕಾರಿಯಾಗಿದೆ.
ನಾವುಗಳು ಶಾಲೆಯಲ್ಲಿ ಕುವೆಂಪು, ಮಾಸ್ತಿ, ಬೇಂದ್ರೇ, ಬಸವಣ್ಣ, ಶಿಶುನಾಳ ಷರೀಫ್ ಇವರುಗಳು ಪದ್ಯ ಮತ್ತು ಗದ್ಯವನ್ನು ಓದಿ ಬೆಳೆದವಾದರೂ, ಆ ಲೇಖಕರು ಯಾವ ಜಾತಿ ಎಂಬುದೇ ನಮಗೆ ಅರಿವಿರಲಿಲ್ಲ ಎನ್ನುವುದನ್ನು ಬಿಡಿ ಮತ್ತು ಅದನ್ನು ನಮಗೆ ರಸವತ್ತಾಗಿ ಹೇಳಿಕೊಟ್ಟು ನಮ್ಮನ್ನು ತಿದ್ದಿ ತೀಡಿ ವಿದ್ಯಾವಂತರನ್ನಾಗಿ ಮಾಡಿದ ನಮ್ಮ ಗುರುಗಳಾದ ವಿಮಲಾ , ವೃತ್ತಾಬಾಯಿ, ಸರಸ್ವತಿ, ಗಾಯತ್ರಿ, ಜಯಮ್ಮ, ರಂಗನಾಧ್, ಗೋಪಣ್ಣ, ಅನಂತನಾರಾಯಣ್, ಜಿನರಾಜ್, ನಾಗವೇಣಿ, ಶರ್ಘನಿಜಾ, ಇವೆರೆಲ್ಲರೂ ಯಾವ ಜಾತಿಯವರು ? ಎಂಬುದನ್ನು ತಿಳಿದುಕೊಳ್ಳುವ ಪ್ರಮೇಯವೇ ನಮಗೆ ಇರಲಿಲ್ಲ.
ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚಿತವಾದ ಮೂಲ ಸಂವಿಧಾನದಲ್ಲಿ ಇಲ್ಲದೇ ಇದ್ದ ಜಾತ್ಯಾತೀತೆ ಎಂಬ ಪದವನ್ನು ತಮ್ಮ ರಾಜಕೀಯದ ತೆವಲಿಗಾಗಿ ಬಲವಂತವಾಗಿ ತುರುಕಿದ ರಾಜಕಾರಣಿಗಳು ಭಾರತ ಹೆಸರಿಗಷ್ಟೇ ಜಾತ್ಯಾತೀತ ಎನಿಸಿಕೊಂಡಿದ್ದು ಮಕ್ಕಳು ಹುಟ್ವುವಾಗ, ಶಾಲೆಗೆ ಸೇರಿಸುವಾಗ, ಕೆಲಸಕ್ಕೆ ಸೇರುವಾಗ, ಕಡೆಗೆ ಪಂಕ್ತಿಯಲ್ಲಿ ಊಟಮಾಡುವಾಗ, ಅಂತಿಮವಾಗಿ ಸತ್ತ ನಂತರ ಸ್ಮಶಾನದಲ್ಲಿ ಹೂಳುವಾಗಲೂ ಧರ್ಮ, ಜಾತಿ ಆಧಾರಿತವಾಗಿ ಹೋಗಿರುವುದು ವಿಪರ್ಯಾಸವಾಗಿದೆ.
ಪಠ್ಯದಲ್ಲಿರುವ ವಿಷಯಗಳು ಆಯಾ ಹಂತದ ಮಕ್ಕಳ ವಿಕಸನಕ್ಕೆ ಪ್ರೋತ್ಸಾಹಕ ಮತ್ತು ಉಪಯುಕ್ತವಾಗಿರ ಬೇಕೇ ಹೊರತು, ಅದನ್ನು ಬರೆದವರ/ಕಲಿಸಿದವರ ಕುಲ ಗೋತ್ರ ಅವರ ಸಿದ್ಧಾಂತದ ಪರ ವಿರೋಧದಿಂದ ಈ ರೀತಿಯಾಗಿ ವಿವಾದ ಮಾಡುತ್ತಲೇ ಹೋದಲ್ಲಿ ಮಕ್ಕಳ ಮೇಲೆ ಖಂಡಿತವಾಗಿಯೂ ದುಷ್ಪರಿಣಾಮ ಬೀರುವುದರಲ್ಲಿ ಸಂದೇಹವೇ ಇಲ್ಲ.
ಮಕ್ಕಳ ಪಠ್ಯ ಪುಸ್ತಕದ ವಿಚಾರದಲ್ಲಿ ಗೊಂದಲ ಎಬ್ಬಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಂದಾಗಿರುವುವವರು, ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎಂದು ಚಿಕ್ಕ ಮಕ್ಕಳ ಪಠ್ಯಪುಸ್ತಕಗಳೊಂದಿಗೆ ಚಲ್ಲಾಟವಾಡುವ ಬದಲು ಮುಂಬರುವ ಚುನಾವಣೆಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಇದರ ಕುರಿತಂತೆ ಜನಾಂಧೋಲನ ನಡೆಸಿ ಜನತೆ ಯಾರ ಪರ ಇದ್ದಾರೆ ಎಂದು ತಿಳಿಯಬಹುದಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ