ಕೊಡಗು, ಕರ್ನಾಟಕ ರಾಜ್ಯದಲ್ಲಿರುವ ಅತ್ಯಂತ ಸುಂದರವಾದ ಪ್ರದೇಶವಾಗಿದೆ . ಇಲ್ಲಿನ ಕಡಿದಾದ ಬೆಟ್ಟಗಳು, ಲೆಕ್ಕವಿಲ್ಲದಷ್ಟು ತೊರೆಗಳು, ಸಮೃದ್ಧ ಸಸ್ಯ ಮತ್ತು ಪ್ರಾಣಿಗಳು, ಸೊಂಪಾದ ಕಾಡುಗಳು ಜೊತೆಯಲ್ಲಿಯೇ ವಿಶಾಲವಾದ ಮತ್ತು ರಮಣೀಯವಾದ ಕಾಫಿ ತೋಟಗಳಿಗೆ ಹೆಸರುವಾಸಿಯಾಗಿರುವ ಕಾರಣ ಕೊಡಗನ್ನು ಭಾರತದ ಸ್ವಿಜರ್ಲ್ಯಾಂಡ್ ಎಂದೂ ಕರೆಯಲಾಗುತ್ತದೆ. ಇನ್ನು ಕರ್ನಾಟಕದ ಗಡಿಗೆ ಹೊಂದಿಕೊಂಡುರುವಂತೆಯೇ ಇರುವ ತಮಿಳುನಾಡಿನ ವಿಶ್ವವಿಖ್ಯಾತ ಗಿರಿಧಾಮವಾದ ಊಟಿ ತನ್ನ ಸುಂದರವಾದ ಚಹಾ ಎಸ್ಟೇಟ್‌ಗಳಿಗೆ ಜನಪ್ರಿಯವಾಗಿರುವ ಹಾಗೆಯೇ, ಕೊಡಗಿನಲ್ಲಿ ವಿಶಾಲವಾದ ಕಾಫೀ ಎಸ್ಟೇಟ್ ಗಳು ಇಉವ ಕಾರಣ ಇದೂ ಸಹಾ ಊಟಿಯಂತೆ ಕೆಲವು ಅದ್ಭುತ ಹವಾಮಾನ ಮತ್ತು ಅಂತ್ಯವಿಲ್ಲದ ನೈಸರ್ಗಿಕ ಸೌಂದರ್ಯವನ್ನು ಹೊಂದಿರುವ ಕಾರಣ ಕೊಡಗು ತನ್ನ ಕಣ್ಸೆಳೆಯುವ ನೋಟಗಳಿಂದಾಗಿ ಕರ್ನಾಟಕದ ಊಟಿ ಎಂದೂ ಹೆಸರುವಾಸಿಯಾಗಿದೆ. ಇಲ್ಲಿನ ನಿತ್ಯಹರಿದ್ವರ್ಣ ಕಾಡು ಮೇಡುಗಳಿಂದಾಗಿ, ವರ್ಷವಿಡೀ ಅತ್ಯಂತ ಆಹ್ಲಾದಕರ ಹವಾಮಾನವನ್ನು ಹೊಂದಿದ್ದು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇಲ್ಲಿನ ಕಾಫಿ, ಮೆಣಸು, ಏಲಕ್ಕಿ ಮತ್ತಿತರ ಮಸಾಲೆ ಪದಾರ್ಥಗಳ ರುಚಿ ಮತ್ತು ಪರಿಮಳ ದೇಶ ವಿದೇಶದಲ್ಲಿ ಪ್ರಖ್ಯಾತವಾಗಿದೆ. ಅದೇ ರೀತಿ ಕೊಡಗಿನಲ್ಲಿ ಅತ್ಯಂತ ಶುದ್ಧವಾದ, ಅಷ್ಟೇ ರುಚಿಕರವಾದ ಜೇನುತುಪ್ಪ ಮತ್ತು ಪರಿಮಳಯುಕ್ತ ಶ್ರೀಗಂಧದ ಉತ್ಪಾದನೆಗೂ ಹೆಸರುವಾಸಿಯಾಗಿದೆ.
ಇಂತಹ ಕೊಡಗಿನಲ್ಲಿ ಅತ್ಯಂತ ವಿಶಿಷ್ಟ್ಯವಾಗಿ ವಾಸಿರುವ ಜನಾಂಗದವರನ್ನು ಕೊಡವರು ಎಂದು ಕರೆಯಲಾಗುತ್ತದೆ. ಅನಾದಿ ಕಾಲದಿಂದಲೂ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಇಳಿಜಾರಿನಲ್ಲಿ ವಾಸಿಸುತ್ತಿರುವ ಇಲ್ಲಿನವರು ಬಹುತೇಕ ಯೋಧರ ಸಮುದಾಯದ ಮೂಲದವರಾಗಿದ್ದು, ಕೂಡವರು ಅತ್ಯಂತ ಧೈರ್ಯಶಾಲಿಗಳಾಗಿದ್ದು, ಕೆಚ್ಚದೆಯ ಹೋರಾಟದ ಮನೋಭಾವ ಹೊಂದಿರುವ ಕಾರಣ ಭಾರತದ ಸೈನ್ಯಕ್ಕೆ ಅಂದು ಮತ್ತು ಇಂದಿಗೂ ಇಲ್ಲಿನವರ ಕಾಣಿಕೆ ಅತ್ಯಮೂಲ್ಯವಾಗಿದೆ. ಹಾಗಾಗಿಯೇ ಭಾರತೀಯ ಸೇನೆಯಲ್ಲಿ ಕೂರ್ಗ್ ರೆಜಿಮೆಂಟ್ ಅತ್ಯಂತ ಹೆಸರುವಾಸಿಯಾದ ರೆಜಿಮೆಂಟ್ ಆಗಿದೆ. ಭಾರತೀಯ ಸೇನೆಯ ಮೊದಲ ಭಾರತೀಯ ಕಮಾಂಡರ್-ಇನ್-ಚೀಫ್ ಫೀಲ್ಡ್ ಮಾರ್ಷಲ್, ಕೊಡಂಡೇರ ಮಾದಪ್ಪ ಕಾರಿಯಪ್ಪ ಕೊಡಗಿನವರೇ. ಅದೇ ರೀತಿ ಎರಡನೆಯ ಮಹಾಯುದ್ಧದ ಸಮಯದಲ್ಲಿ ಪದಾತಿ ದಳಕ್ಕೆ ಕಮಾಂಡ್ ಮಾಡಿದ ಏಕೈಕ ಭಾರತೀಯ ಸೈನ್ಯಾಧಿಕಾರಿ ಮತ್ತು ಅತ್ಯಂತ ವಿಶಿಷ್ಟವಾದ ಯುದ್ಧ ಅಧಿಕಾರಿ ಎಂದು ಹೆಸರಾಗಿದ್ದ, ಭಾರತೀಯ ಸೇನೆಯ 3 ನೇ ಮುಖ್ಯಸ್ಥರಾಗಿಗಳಾಗಿದ್ದ ಜನರಲ್ ಕೊಡಂಡೇರ ಸುಬಯ್ಯ ತಿಮ್ಮಯ್ಯ ಅವರು ಸಹಾ ಕೊಡವರೇ.
ಪುರಾಣದ ಪ್ರಕಾರ ಚಕ್ರವರ್ತಿ ಮತ್ಸ್ಯದೇಶನ ಮಗನಾದ ಚಂದ್ರವರ್ಮನು ಭಾರತದ ವಿವಿಧ ಪವಿತ್ರ ಸ್ಥಳಗಳಿಗೆ ತನ್ನ ಸೈನ್ಯದೊಂದಿಗೆ ತೀರ್ಥಯಾತ್ರೆ ಮಾಡುತ್ತಿದ್ದಾಗ, ಅವನು ಮಡಿಕೇರಿ ತಲುಪಿದಾಗ, ಇಲ್ಲಿನ ಪ್ರಕೃತಿ ಸೌಂದರ್ಯ ಮತ್ತು ಹವಾಗುಣಕ್ಕೆ ಮನಸೋತು ಅಲ್ಲಿಯೇ ನೆಲೆಸಲು ನಿರ್ಧರಿಸಿ ಅವನೇ ಕೊಡಗಿನ ಮೊದಲ ಆಡಳಿತಗಾರ ಎನ್ನಲಾಗುತ್ತದೆ. ಇನ್ನೂ ಕೆಲವು ಆಧಾರದ ಪ್ರಕಾರ ದಾರ್ಜಿಲಿಂಗ್ ಕಡೆಯ ಕೆಲವರು ದಕ್ಷಿಣ ಪ್ರಾಂತ್ಯದತ್ತ ವಲಸೆ ಬಂದು ದಾರ್ಜಿಲಿಂಗ್ ನಂತೆಯೇ ತಂಪಾದ ಹವಾಮಾನವಿರುವ ಕೊಡಗಿಲ್ಲೇ ನೆಲಸಿದರು ಎನ್ನುತ್ತಾರೆ. ದಾರ್ಜಿಲಿಂಗ್ ಟೀ ಎಸ್ಟೇಟುಗಳಿಗೆ ಪ್ರಖ್ಯಾತವಾಗಿದ್ದರೆ, ಕೊಡಗು ಕಾಫೀ ಎಸ್ಟೇಟುಗಳಿಗೆ ಪ್ರಸಿದ್ದವಾಗಿದ್ದು ಅಲ್ಲಿನ ಮತ್ತು ಇಲ್ಲಿನ ಕೊಡವರ ಉಡುಗೆ ತೊಡುಗೆ ಮತ್ತು ಅಚಾರ ವಿಚಾರಗಳಲ್ಲಿ ಬಹಳಷ್ಟು ಸಾಮ್ಯವಿರುವುದು ಗಮನಾರ್ಹವಾಗಿದೆ. 1834ರ ವರೆಗೂ ಕೊಡಗು ಕರ್ನಾಟಕದ ಭಾಗವಾಗಿರದೇ ಪ್ರತ್ಯೇಕ ರಾಜ್ಯವಾಗಿ ಇದ್ದು. ಕೊಡಗು ಸಾಮ್ರಾಜ್ಯದ ಕಡೆಯ ರಾಜ ಚಿಕ್ಕ ವೀರರಾಜೇಂದ್ರನನ್ನು ಬ್ರಿಟೀಷರು ಮೋಸದಿಂದ ಸೋಲಿಸಿದ ನಂತರ ಕೊಡಗು ಈಸ್ಟ್ ಇಂಡಿಯಾ ಕಂಪನಿಯ ಮದ್ರಾಸ್ ಭಾಗವಾಗಿ ಸೇರಿಕೊಂಡಿತು.
ಇಂತಹ ಕೊಡವರು ಹಿಂದೂ ಧರ್ಮದ ಹಬ್ಬ ಹರಿದಿನಗಳ ಹೊರತಾಗಿ ಕೊಡವರ ಸಂಪ್ರದಾಯವಾಗಿ ವರ್ಷಾದ್ಯಂತ ಮೂರು ಪ್ರಮುಖ ಹಬ್ಬಗಳನ್ನು ವಿಶೇಶವಾಗಿ ಆಚರಿಸುತ್ತಾರೆ. ಕೈಲ್ ಪೋಳ್ದ್, ಕಾವೇರಿ ಮಕರ ಸಂಕ್ರಮಣ ಮತ್ತು ಹುತ್ತರಿ ಹಬ್ಬ. ಕೈಲ್ ಪೋಳ್ದ್ ಎನ್ನುವುದು ಬಹುತೇಕ ನಮ್ಮ ಆಯುಧ ಪೂಜೆಯ ಹಬ್ಬವನ್ನು ಹೋಲುತ್ತದೆ. ಕೊಡವ ಭಾಷೆಯಲ್ಲಿ ಕೈಲ್ ಎಂದರೆ ಆಯುಧ, ಪೋಳ್ದ್ ಎಂದರೆ ಹಬ್ಬ ಎಂದು ಅರ್ಥವಿದ್ದು ಈ ಹಬ್ಬದಲ್ಲಿ ಕೊಡವರಿಗೆ ತಮ್ಮ ಆಯುಧ ಪೂಜೆಯೆಂದೇ ಪರಿಗಣಿಸಲಾಗುತ್ತದೆ. ಕೊಡವ ಪಂಚಾಗದ ಪ್ರಕಾರ ಕೊಡವ ತಿಂಗಳ ಚಿನ್ಯಾರ್‌ನ 18ನೇ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದರೆ ಪ್ರತಿವರ್ಷ ಸೆ.3 ರಂದು ಕೊಡಗಿನಾದ್ಯಂತ ಕೈಲ್ ಪೋಳ್ದ್ ಆಚರಣೆಯ ಸಂಭ್ರಮ ಮನೆ ಮಾಡಿರುತ್ತದೆ. ಜಿಲ್ಲೆಯ ಗಾಳಿಬೀಡು, ನಾಲ್ಕುನಾಡು ವ್ಯಾಪ್ತಿಯಲ್ಲಿ ಬೇರೆ ಬೇರೆ ದಿನದಂದು ಹಬ್ಬ ಆಚರಿಸುವ ಸಂಪ್ರದಾಯವಿದೆ.
ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಮುಂಗಾರಿನ ಮಳೆಯ ನಂತರ ತಮ್ಮ ಗದ್ದೆಗಳಲ್ಲಿ ಕೊಡವರು ಉಳುಮೆ, ಬಿತ್ತನೆ ಮತ್ತು ಭತ್ತದ ಕಸಿ ಮಾಡುವಂತಹ ಕಠಿಣ ಶ್ರಮದಲ್ಲಿ ತೊಡಗಿಸಿಕೊಂಡು ಬತ್ತದ ಪೈರು ಚಿಗುರೊಡೆದು ಬೆಳೆಯುವಂತಹ ಈ ಬಿಡುವಿನ ಸಮಯದಲ್ಲಿ ಆಚರಿಸುವಲ್ಪಡುವ ಎರಡು ಹಬ್ಬಗಳಲ್ಲಿ ಮೊದಲೇ ಹಬ್ಬವೇ ಕೈಲ್ ಪೋಳ್ದ್ ಹಬ್ಬ ಆಗಿದ್ದು ನಂತರ ಭತ್ತದ ಇಳುವರಿ ಬಂದು ಕಟಾವು ಎಲ್ಲವೂ ಮುಗಿದ ನಂತರ ಸಂಭ್ರಮದಲ್ಲಿ ಡಿಸೆಂಬರ್ 04 ರಂದು ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ. ಹಾಗಾಗಿ ಈ ಹಬ್ಬಗಳನ್ನು ಕೊಡವರ ಆಯುಧ ಪೂಜೆ ಮತ್ತು ಸುಗ್ಗಿಯ ಹಬ್ಬ ಎನ್ನಬಹುದಾಗಿದೆ.
ಕೊಡಗಿನ ಸಾಂಪ್ರದಾಯಿಕ ಕೈಲ್ ಪೋಳ್ದ್ ಹಬ್ಬದಂದು ಮುಂಜಾನೆ ಮನೆಯ ಹಿರಿಯ ಯಜಮಾನರು ತಮ್ಮ ತೋಟದಿಂದ ಕುತ್ತರ್ಚಿ ಎಂಬ ಮರದ ಸಣ್ಣ ಪುಟ್ಟ ಕೊಂಬೆಯನ್ನು ತಂದು ನೇರಳೆ ಮರದ ರೆಂಬೆಯೊಂದಿಗೆ ಅಲಂಕರಿಸಿ ಹಾಲು ಮರಕ್ಕೆ ಸಿಕ್ಕಿಸುವ ಪದ್ಧತಿ ಇದೆ. ನಂತರ ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸಲಾದ ನೇಗಿಲು, ನೊಗ ಹಾಗೂ ನೇಗಿಲಿಗೆ ನೊಗ ಕೊಟ್ಟ ದನವನ್ನು ಸ್ವಚ್ಛಗೊಳಿಸಿ, ಸಿಂಗರಿಸಲಾಗುತ್ತದೆ. ನಂತರ ಕೃಷಿಗೆ ಬಳಕೆಯ ಸಾಮಗ್ರಿಗಳನ್ನು ತೊಳೆದು ನೆಲ್ಲಿಕ್ಕಿಯಲ್ಲಿಟ್ಟು (ದೇವರಮನೆ) ಪೂಜಿಸಲಾಗುತ್ತದೆ. ಇದು ಕೊಡಗಿನವರಿಗೆ ಕೃಷಿಯೊಂದಿಗೆ ಇರುವ ಸಂಬಂಧವನ್ನು ಸೂಚಿಸುತ್ತದೆ.
ಮುಂಗಾರಿನ ಸಮಯದಲ್ಲಿ ಕೃಷಿ ಚಟುವಟಿಕೆ ಆರಂಭವಾಗುತ್ತಿದ್ದಂತೆಯೇ ಕೊಡವರು ತಮ್ಮನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಬಳಸುವ ಕೋವಿಗಳನ್ನು ನೆಲ್ಲಕ್ಕಿಯಲ್ಲಿ ಅಡಗಿಸಿಡುತ್ತಾರೆ. ಈ ಕೈಲ್ ಪೋಳ್ದ್ ಹಬ್ಬದ ಸಮಯದಲ್ಲಿ, ದೇವರಮನೆಯಲ್ಲಿ ತಮ್ಮ ನೆಚ್ಚಿನ ಆಯುಧ ಬಂದೂಕುಗಳನ್ನು ಇಟ್ಟು ಆ ಕೋವಿಗಳನ್ನು ವಿಶೇಷವಾಗಿ ಕಾಡಿನಿಂದ ಅಯ್ದು ತಂದ ಗೌರಿ ಹೂವಿನಿಂದ ಅಲಂಕರಿಸಲಾಗುತ್ತದೆ. ಈ ಗೌರೀ ಹೂವುಗಳು ಸಹಾ ಆಗಸ್ಟ್ 15 ರಿಂದ ಸೆಪ್ಟಂಬರ್ 15 ರ ಒಳಗೆ ಮಾತ್ರ ಅರಳುವುದು ವಿಶೇಷವಾಗಿದೆ. ದೇವರ ಮನೆಯಲ್ಲಿ ಕುಟುಂಬದ ಆಬಾಲಾ ವೃದ್ಧರಾದಿಯಾಗಿ ಎಲ್ಲರೂ ಸೇರಿ ಬಹಳ ಭಕ್ತಿ ಭಾವಗಳಿಂದ ಪೂಜೆ ಸಲ್ಲಿಸುತ್ತಾರೆ.
ಈ ಹಿಂದೆ ಪೂಜೆಯ ನಂತರ ಕಾಡು ಹಂದಿಗಳ ಬೇಟೆಗಾಗಿ ಕಾಡುಗಳಿಗೆ ತೆರಳುವ ಸಂಪ್ರದಾಯವಿತ್ತು. ಆದರೆ ಈಗ ಆ ರೀತಿಯ ಬೇಟೆಗೆ ನಿಷೇಧವಿರುವ ಕಾರಣ, ಕೆಲವು ತಮ್ಮ ಮನೆಯ ಅಂಗಳ ಅಥವಾ ಮೈದಾನದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಪದ್ಧತಿಯನ್ನು ರೂಢಿ ಮಾಡಿಕೊಂಡಿದ್ದಾರೆ.
ಈ ಹಿಂದೆ ಪೂಜೆ ಮಾಡಿದ ಕೋವಿಗಳೊಂದಿಗೆ ಗಂಡಸರೆಲ್ಲರೂ ಕಾಡಿಗೆ ಹೋಗಿ ಕಾಡು ಹಂದಿಯನ್ನು ಬೇಟೆಯಾಡಿ ಕೊಂಡು ಹಾಗೆ ಕೊಂದು ತಂದ ಹಂದಿಯಿಂದ ಪಂದಿಕರಿ (ಹಂದಿಮಾಂಸ) ಕಡಂಬುಟ್ಟ್ (ಕಡಂಬಿಟ್ಟು) ಮುಂತಾದ ವಿಶೇಷ ಆಹಾರವನ್ನು ತಯಾರಿಸಿ ಮನಃಪೂರ್ತಿ ತಿಂದು ಸಂಭ್ರಮ ಪಡುತ್ತಿದ್ದರು. ಇಂದು ಬೇಟೆಯಾಡುವುದು ನಿಶೇಧವಿರುವುವ ಕಾರಣ ಊರಿನಲ್ಲಿ ಸಾಕಿದ ಹಂದಿಯ ಮಾಂಸದಲ್ಲೇ ತಮ್ಮ ನೆಚ್ಚಿನ ಖಾದ್ಯವನ್ನು ತಯಾರಿಸಿ ಸೇವಿಸಿ ಸಂಭ್ರಮ ಪಡುತ್ತಾರೆ.
ಕೊಡವರಿಗೆ ಕೃಷಿ, ಬೇಟೆ ಮತ್ತು ಸೇನೆಯ ನಂತರ ಅತ್ಯಂತ ಪ್ರೀತಿ ಪಾತ್ರವಾದದ್ದು ಎಂದರೆ ಹಾಕಿ ಆಟ. ಭಾರತದ ಹಾಕಿ ತಂಡಕ್ಕೆ ಅಂದು ಇಂದೂ ಸಹಾ ಕೊಡಗಿನವರ ಕೊಡುಗೆ ಹೇರಳವಾಗಿದೆ. ಭಾರತದ ತಂಡ ಓಲಂಪಿಕ್ಸ್ ಹಾಕಿಯಲ್ಲಿ ಚಿನ್ನದ ಪದಕವನ್ನು ಪಡೆದ ತಂಡದ ಭಾಗವಾಗಿದ್ದ ನಂತರ ಭಾರತ ತಂಡದ ನಾಯಕ ಮತ್ತು ಕೋಚ್ ಕೂಡಾ ಆಗಿದ್ದ ಶ್ರೀ ಮೊಲ್ಲೆರ ಪೂವಯ್ಯ ಗಣೇಶ್ (ಎಂ. ಪಿ. ಗಣೇಶ್) ಅವರು ಸಹಾ ಕೊಡವರೇ. ಅದಲ್ಲದೇ ಅರ್ಜುನ್ ಹಾಲಪ್ಪ, ನಿಕಿನ್ ತಿಮ್ಮಯ್ಯ, ಸುನೀಲ್, ರಘುನಾಥ್ ಮುಂತಾದವರು ಪ್ರಮುಖರು. ಹಾಗಾಗಿ ಈ ಕೈಲ್ ಪೋಳ್ಡ್ ಸಮಯದಲ್ಲಿ ಕೊಡಗಿನ ಬಹುತೇಕ ಕಡೆ ಕ್ರೀಡಾಕೂಟಗಳನ್ನು ಏರ್ಪಡಿಸುತ್ತಾರೆ. ಮನೆಯಲ್ಲಿ ಪೂಜೆ ಮುಗಿದು ಊಟವಾದ ಬಳಿಕ ಸಂಜೆ ಎಲ್ಲರೂ ಒಟ್ಟಾಗಿ ತಮ್ಮ ತಮ್ಮ ಪ್ರದೇಶಗಳಲ್ಲಿ ಆಯೋಜಿಸಲ್ಪಟ್ಟ ಇಂತಹ ಕ್ರೀಡಾಕೂಟಗಳಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತಾರೆ.
ಪ್ರಕೃತಿಯೊಡನೆ ತಾದ್ಯಾತ್ಮ ಮತ್ತು ವೀರತೆಯ ಪ್ರತೀಕವಾಗಿರುವ ಆಯುಧಗಳ ಜೊತೆಗೆ ಜೀವನಾವಶ್ಯಕವಾಗಿರುವ ಕೃಷಿ ಸಂಬಂಧಿತ ಸಲಕರಣೆಗಳಿಗೆ ಸಲ್ಲಿರುವ ಈ ಪೂಜೆಗೆ ಭಾರತೀಯ ಸಂಸ್ಕ್ರತಿಯಲ್ಲಿ ಮಹತ್ವದ ಸ್ಥಾನವಿದೆ. ಇಂದು ಪೂಜಿಸ್ಪಡುವ ಎಲ್ಲಾ ರೀತಿಯ ಎಲ್ಲಾ ಆಯುಧಗಳಿಗೆ ದೈವ ಶಕ್ತಿ ತುಂಬಲಿ, ಕೆಟ್ಟದ್ದು ತೊಲಗಲಿ, ಪ್ರಕೃತಿ ತಣಿಯಲಿ ತನ್ಮೂಲಕ ನಾಡಿನಲ್ಲಿ ಶಾಂತಿ ಸೌಹಾರ್ಧತೆ ಅರಳಲಿ ಎಂದು ಆಶಿಸುತ್ತಾ, ಕೆಚ್ಚೆದೆಯ ವೀರ ಕೊಡವರಿಗೆ ಕೈಲ್ ಪೋಳ್ದ್ ಹಬ್ಬದ ಶುಭಾಶಯಗಳನ್ನು ತಿಳಿಸೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ