ಬಿಇಎಲ್ ವಿದ್ಯಾಸಂಸ್ಥೆಯ ಶ್ರೀ ಬಿ.ಕೆ. ಗೋಪಣ್ಣನವರು

bkg8ಸಾಧಾರಣವಾಗಿ ಬಹುತೇಕ ಶಾಲಾ ಕಾಲೇಜುಗಳ ಕನ್ನಡದ ಮೇಷ್ಟ್ರು ಎಂದರೆ ಸರಳ ಸಜ್ಜನ ಮುಂದೆ ಬಂದರೆ ಹಾಯ ಬೇಡಿ, ಹಿಂದೆ ಬಂದರೆ ಒದೆಯಬೇಡಿ ಎನ್ನುವಂತಹ ಪಾಪದ ವ್ಯಕ್ತಿಯಾಗಿರುವುದನ್ನು ನೋಡುತ್ತೇವೆ. ಆದರೆ ಇಲ್ಲೊಬ್ಬರು ಕನ್ನಡ ಮೇಷ್ಟ್ರು ನಡೆ-ನುಡಿ, ಆಚಾರ-ವಿಚಾರ, ಉಡುಗೆ-ತೊಡುಗೆ ಎಲ್ಲರದ್ದರಲ್ಲೂ ಅತ್ಯಂತ ಸರಳ ಸಜ್ಜನರೇ. ಅವರೆಂದೂ ಯಾರ ಮೇಲೂ ಕೈ ಮಾಡಿದವರಲ್ಲಾ. ಅವರೆಂದೂ ಜೋರಾಗಿ ಬೈಯ್ಯುವುದು ಬಿಡಿ ಮಾತನಾಡಿದವರೂ ಅಲ್ಲಾ. ಆದರೂ ಸಹಾ ಅದು ಹೇಗೋ ಕಾಣೇ ಅವರ ವೃತ್ತಿ ಜೀವನದ ಪೂರ್ತಿ ಅವರದ್ದೇ ಆದ ಒಂದು ರೀತಿಯ ಗತ್ತು ಮತ್ತು ಗೈರತ್ತನ್ನು ಕಾಪಾಡಿಕೊಂಡು ಒಂದು ರೀತಿಯ ಖಡಕ್ ಎನ್ನುವಂತಹ ಮನುಷ್ಯನ ರೀತಿಯಲ್ಲಿ ವಿದ್ಯಾರ್ಥಿಗಳು ಅವರನ್ನು ಕಂಡರೆ ಸಾಕು ಭಯ ಪಡುವ ರೀತಿಯಲ್ಲಿ ಅತ್ಯಂತ ಶಿಸ್ತಿನ ಸಿಪಾಯಿಯಂತೆ ಇರುವವರೇ ನಮ್ಮ ಮೆಚ್ಚಿನ ಗುರುಗಳಾದ ಶ್ರೀ ಗೋಪ್ಪಣ್ಣನವರು.

bkg4ಸುಮಾರು 5.7″ ಅಥವಾ 5.8″ ಎತ್ತರದವಿರುವ ಗೋಪಣ್ಣನವರು ಎತ್ತರಕ್ಕೆ ತಕ್ಕಂತೆ ಶರೀರ, ಸದಾಕಾಲವು ಹಸನ್ಮುಖಿ, ದಿನವೂ ನುಣುಪಾಗಿ ಶೇವ್ ಮಾಡಿ, ಸಣ್ಣದಾಗಿ ಟ್ರಿಮ್ ಮಾದಿದ ಮೀಸೆ, ಸದಾ ಕಾಲವೂ ಒಳ್ಳೆಯ ಪ್ಯಾಂಟ್ ಅದಕ್ಕೊಪ್ಪುವಂತೆ ಪ್ಯಾಂಟ್ ಮೇಲೆಯೇ ಶರ್ಟ್ (ಇನ್ ಶರ್ಟ್ ಮಾಡಿದ್ದನ್ನು ಎಂದೂ ನೋಡಿಯೇ ಇಲ್ಲ) ಅದರ ಜೊತೆಗೆ ಅವರ ಭೂಷಣ ಎನ್ನುವಂತೆ ಬಲ ಹೆಗಲ ಮೇಲೊಂದು ಪಾಟೀ ಚೀಲ. ಕಾಲಿಗೆ ಬಾಟಾ ಜುಬ್ಲೀ ಚಪ್ಪಲಿ ಇವಿಷ್ಟೂ ನಮ್ಮ ಗೋಪಣ್ಣನವರ ಸರಳ ವೇಷ ಭೂಷಣ.

bkg11ಇಂತಹ ಸರಳ ಸಜ್ಜನ ಗೋಪಣ್ಣನವರು ಚಿನ್ನದ ಬೀಡು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕ್ಕಿನ ಬಂಟಹಳ್ಳಿಯ ಸಂಪ್ರದಾಯಸ್ಥರಾದ ಶ್ರೀ ಬಿ.ಎಸ್. ಕೃಷ್ಣಮೂರ್ತಿಗಳು ಮತ್ತು ಶ್ರೀಮತಿ ಸುಬ್ಬಲಕ್ಷ್ಮಮ್ಮ ದಂಪತಿಗಳಿಗೆ 15.01.1949 ಜನಿಸುತ್ತಾರೆ. ಸಾಧಾರಣವಾಗಿ ಪುಟ್ಟ ಮುದ್ದು ಕೃಷ್ಣನನ್ನು ಪ್ರೀತಿಯಿಂದ ಗೋಪಣ್ಣ ಎಂದು ಕರೆಯುವುದು ವಾಡಿಕೆ ಹಾಗೆಯೇ ಅವರ ಪೋಷಕರೂ ಸಹಾ ಅವರಿಗೂ ಮುದ್ದಿನಿಂದ ಗೋಪಣ್ಣ ಎಂದೇ ಹೆಸರಿಟ್ಟಿದ್ದರು. ಬಾಲ್ಯದಿಂದಲೂ ಓದು ಬರಹಗಳಲ್ಲಿ ಅತ್ಯಂತ ಚುರುಕಾಗಿದ್ದ ಗೋಪಣ್ಣನವರ ಮನೆಯ ಮಾತೃಭಾಷೆ ಕನ್ನಡವಾದರೂ, ಅವರ ಊರಿನ ಸುತ್ತಮುತ್ತಲೂ ತೆಲುಗು ಭಾಷೆಯ ಪ್ರಾಭಲ್ಯವೇ ಹೆಚ್ಚಾಗಿದ್ದ ಕಾರಣ, ಚಿಕ್ಕವಯಸ್ಸಿನಿಂದಲೇ ಅವರು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಪ್ರಾವೀಣ್ಯತೆ ಗಳಿಸಿದ್ದರು.

bkg3ಬಾಲ್ಯದಿಂದಲೂ ಆಟ ಪಾಠಗಳಲ್ಲಿ ಚುರುಕಾಗಿದ್ದ ಗೋಪಣ್ಣನವರು ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಮಾಸ್ತಿಯಲ್ಲಿ ಪ್ರೌಢ ಶಿಕ್ಷಣವನ್ನು ಮುಸಿದ ನಂತರ ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಪದವಿಯನ್ನು ಮುಗಿಸಿದ ನಂತರ ಆರ್.ವಿ. ಶಿಕ್ಷಕರ ಕಾಲೇಜಿನಲ್ಲಿ ಬಿಎಡ್ ಮುಗಿಸಿದ ಮೇಲೆ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಮತ್ತು ಇತಿಹಾಸ ಹೀಗೆ ಎರಡು ವಿಷಯಗಳಲ್ಲಿ ಎಂ.ಎ. ಪದವಿಯನ್ನು ಗಳಿಸಿಕೊಳ್ಳುತ್ತಾರೆ.

1971ರಲ್ಲಿ ಶ್ರೀ ಮಹದೇವ್ ಪೌಢ ಶಾಲೆಯಲ್ಲಿ ಉಪಾಧ್ಯಾಯರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಗೋಪಣ್ಣನವರು, ಕೆಲವೇ ತಿಂಗಳುಗಳಲ್ಲಿ ಶ್ರೀ ಸಂಗಮೇಶ್ ವಿದ್ಯಾಕೇಂದ್ರ ಪೌಢ ಶಾಲೆಯಲ್ಲಿ ಉಪಾಧ್ಯಾಯರಾಗಿ ಸೇರಿಕೊಂಡು 1979ರ ವರೆಗೆ ಅಲ್ಲಿ ಸೇವೆಸಲ್ಲಿಸಿದ ನಂತರ ಬೆಂಗಳೂರಿನ ಪ್ರಖ್ಯಾತ ಬಿ.ಇ.ಎಲ್ ಪ್ರೌಢಶಾಲೆಯಲ್ಲಿ ಕನ್ನಡದ ಉಪಾಧ್ಯಾಯರಾಗಿ ಕೆಲಸಕ್ಕೆ ಸೇರಿಕೊಂಡ ನಂತರ ಅವರ ಜೀವನದ ಎರಡನೇ ಮಜಲು ಆರಂಭವಾಗುತ್ತದೆ. ಆ ಶಾಲೆಯಲ್ಲಿ ಎಲ್ಲಾ ಶಿಕ್ಷಕರನ್ನೂ ಅವರವರ ಇನಿಷಿಯಲ್ಸ್ ನಿಂದ ಕರೆಯುವ ವಾಡಿಕೆ ಇದ್ದ ಕಾರಣ ಗೋಪಣ್ಣನವರು BKG ಸರ್ ಎಂದೇ ವಿದ್ಯಾರ್ಥಿಗಳಲ್ಲಿ ಪ್ರೀತಿ ಪಾತ್ರರಾಗುತ್ತಾರೆ.

bkg6ಸಾಧಾರಣವಾಗಿ ಕನ್ನಡದ ಮೇಷ್ಟ್ರು ಎಂದರೆ ಅವರು ಕೇವಲ ಪಠ್ಯ ಪುಸ್ತಕವಲ್ಲದೇ ಅನೇಕ ಪುಸ್ತಕಗಳನ್ನು ಓದುವ ಗೀಳನ್ನು ಹಚ್ಚಿಸಿಕೊಂಡಿರುತ್ತಾರೆ ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಈ ಸತ್ ಸಂಪ್ರದಾಯಕ್ಕೆ ಗೋಪಣ್ಣನವರೂ ಹೊರತಾಗಿರಲಿಲ್ಲ. ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಗುರುಗಳಾದ ಶ್ರೀ ಸಾ.ಶಿ ಮರುಳಯ್ಯನವರಿಂದ ಪ್ರಭಾವಿತರಾಗಿ ಕನ್ನಡದ ಹಳೆ ಕಾವ್ಯಗಳಿಂದ ಹಿಡಿದು ನವ್ಯ ಕಾವ್ಯಗಳನ್ನೆಲ್ಲಾ ಓದಿ ಕೊಂಡಿದ್ದ ಗೋಪಣ್ಣನವರಿಗೆ ತಾವು ವಾಸಿಸುತ್ತಿದ್ದ ಬೆಂಗಳೂರಿನ ಹನುಮಂತ ನಗರದ ಬಳಿ ಕನ್ನಡದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರಾಗಿದ್ದ ಉದಯಭಾನು ಕಲಾಸಂಘದ ಪರಿಚಯವಾಯಿತು. 1965ರಲ್ಲಿ ಜನೋಪಕಾರಿ ಸಮಾಜಸೇವಾ ಮನೋಭಾವದಿಂದಾಗಿ ಸಾರ್ವಜನಿಕ ಗಣೇಶೋತ್ಸವ ಮತ್ತು ಅದರ ಜೊತೆಗೆ ಹೊಂದಿಕೊಂಡ ಉಚಿತ ವಾಚನಾಲಯದೊಂದಿಗೆ ಕೇವಲ 10 ಅಡಿ ಉದ್ದಗಲದ ಚಿಕ್ಕ ಅಂಗಡಿ ಮಳಿಗೆಯಲ್ಲಿ ಪ್ರಾರಂಭವಾದ ಸಂಘವು, ಕಳೆದ ಆರು ದಶಕಗಳಲ್ಲಿ ವಿವಿಧ ಆಯಾಮಗಳಲ್ಲಿ ಕ್ರಿಯಾಶೀಲವಾಗಿದೆ. ಸಾಹಿತ್ಯ, ಸಂಸ್ಕೃತಿ, ಸಮಾಜಸೇವೆ, ನಗರಕಲ್ಯಾಣ, ಉಚಿತ ಶಿಕ್ಷಣ, ನಾಗರಿಕ ಆರೋಗ್ಯ ಪಾಲನೆ, ಮಹಿಳಾ-ಯುವಜನ ಕಲ್ಯಾಣ, ಕಂಪ್ಯೂಟರ್ ತರಬೇತಿ, ಸಮಾಜದ ಒಳಿತಿಗೆ ಪೂರಕವಾಗುವಂತಹ ಉಪಯುಕ್ತ ಸಾಹಿತ್ಯಿಕ ಪ್ರಕಟಣೆಗಳು ಹೀಗೆ ಈ ಎಲ್ಲ ಚಟುವಟಿಕೆಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಉದಯಭಾನು ಕಲಾಸಂಘದ ಸಕ್ರೀಯ ಸದಸ್ಯರಲ್ಲಿ ಒಬ್ಬರಾಗಿ ನಿಸ್ವಾರ್ಥವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು. ಶಿಕ್ಷಕರಾಗಿದ್ದ ಕಾರಣ, ಆದರಲ್ಲೂ ವಿಶೇಷವಾಗಿ ಸಂಘ ನಡೆಸುತ್ತಿದ್ದ ಉಚಿತ ಶಿಕ್ಷಣದಲ್ಲಿ ತಮ್ಮ ಅಳಿಲು ಸೇವೆಯನ್ನು ಅಂದಿನಿಂದ ಇಂದಿನವರೆಗೂ ಸಲ್ಲಿಸುತ್ತಲೇ ಬಂದಿರುವುದು ಅನನ್ಯ ಮತ್ತು ಅಭಿನಂದನಾರ್ಹವಾಗಿದೆ.

ಸಾಮಾನ್ಯವಾಗಿ ಗೌರವರನ್ನು ಕೇಳಿ ಪಡೆದು ಕೊಳ್ಳುವುದಕ್ಕಿಂತ ಗೌರವವನ್ನು ಗಳಿಸಿ ಪಡೆಯಬೇಕು. ಈ ವಿಷಯದಲ್ಲಿ ನಮ್ಮ ಗೋಪಣ್ಣನವರದ್ದು ಎತ್ತಿದ ಕೈ. ಅವರೆಂದೂ ತಮ್ಮ ವಿದ್ಯಾರ್ಥಿಗಳನ್ನೂ ಒಳಗೊಂಡು ಯಾರನ್ನೇ ಆಗಲೀ ಏಕ ವಚನದಲ್ಲಿ ಸಂಭೋದಿಸಿರುವುದನ್ನು ಕಂಡೇ ಇಲ್ಲಾ. ತಮಗಿಂತ ಅದೆಷ್ಟೋ ವರ್ಷ ಚಿಕ್ಕವಯಸ್ಸಿನ ತಮ್ಮ ವಿದ್ಯಾರ್ಥಿಗಳನ್ನೂ ಏನು ಸ್ವಾಮಿ ಎಂದೇ ಮಾತನಾಡಿಸುವುದನ್ನು ಅವರು ಅಭ್ಯಾಸ ಮಾಡಿಕೊಂಡಿದ್ದರಿಂದ ಸಹಜವಾಗಿ ಎಲ್ಲರೂ ಅವರೊಂದಿಗೆ ಅದೇ ರೀತಿಯಾಗಿಯೇ ಗೌರವದಿಂದ ನಡೆದುಕೊಳ್ಳುತ್ತಿದ್ದರು. ಅಪರೂಪಕ್ಕೊಮ್ಮೆ ಅವರು ಏನು ಸ್ವಾಮೀ… ಎಂದು ದೀರ್ಘವಾಗಿ ಮಾತನಾಡಿಸಿದರೆಂದರೆ, ಅ ವಿದ್ಯಾರ್ಥಿ ಏನೋ ತಪ್ಪು ಮಾಡಿ ಸಿಕ್ಕಿ ಬಿದ್ದಿದ್ದಾನೆ ಎನ್ನುವುದು ತಕ್ಷಣವೇ ಅರ್ಥವಾಗುತ್ತಿತ್ತು.

ಇಷ್ಟೆಲ್ಲಾ ಹೇಳಿದ ನಂತರ ಗೋಪಣ್ಣನವರು ಬಹಳ ಮೃದು ಸ್ವಭಾವದ ಪಾಪದ ವ್ಯಕ್ತಿಯಾಗಿರಬಹುದು ಎಂಬ ನಿರ್ಧಾರಕ್ಕೆ ಬಂದಲ್ಲಿ ಅದು ಖಂಡಿತವಾಗಿಯೂ ಸುಳ್ಳಾಗಿ ಹೋಗುತ್ತದೆ. ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ ಎಂಬಂತೆ ನಮ್ಮ ಗೋಪ್ಪಣ್ಣನವರ ಮನಸ್ಸು ಹೂವಿಗಿಂತಲೂ ಮೃದುವಾಗಿದ್ದರೂ ಬಹಳಷ್ಟು ಬಾರಿ ವಜ್ರಕ್ಕಿಂತಲೂ ಕಠಿಣವಾಗಿರುತ್ತಿತ್ತು. ಅವರು ಶಾಲೆಯ ಕಾರಿಡಾರಿನಲ್ಲಿ ಯಾರೊಂದಿಗೋ ಮಾತನಾಡಿಸುತ್ತಲೋ ಇಲ್ಲವೇ ತಾವೇ ಪುಸ್ತಕ ಹಿಡಿದುಕೊಂಡು ಒಂದು ತರಗತಿಯಿಂದ ಮತ್ತೊಂದು ತರಗತಿಗೆ ಹೋಗುತ್ತಿರುವಾಗಲೇ ಅವರ ಹದ್ದಿನ ಕಣ್ಗಳನ್ನು ಸದಾಕಾಲವೂ ಅತ್ತಿಂದಿತ್ತ ಆಡಿಸುತ್ತಲೇ ಅಲ್ಲಿ ವಿದ್ಯಾರ್ಥಿಗಳು ಮಾಡುತ್ತಿದ್ದ ಸಣ್ಣ ಪುಟ್ಟ ಚೇಷ್ಟೆಗಳೂ ಅವರ ಗಮನಕ್ಕೆ ಬಂದ ಕೂಡಲೇ, ಏನು ಸ್ವಾಮೀ… ಎಂದು ದೀರ್ಘವಾಗಿ ಹೇಳಿದರೆಂದರೆ ಅವನಿಗೆ ಮುಂದೈತೆ ಮಾರಿ ಹಬ್ಬ ಎಂಬರ್ಥ.

ಬಹುಶಃ ಈ ಕಾರಣದಿಂದಾಗಿಯೇ ಏನೋ ಬಿಇಎಲ್ ಪ್ರೌಢಶಾಲೆಯ ವಿದ್ಯಾರ್ಥಿ ವಲಯದಲ್ಲಿ ಗೋಪಣ್ಣನವರಿಗೆ ಪೋಲೀಸ್ ಎಂದೇ ಹೆಸರಿತ್ತು (ಇದು ಗೋಪಣ್ಣನವರಿಗೆ ಗೊತ್ತಿತ್ತೋ ಇಲ್ಲವೋ ಎಂಬ ಅರಿವಿಲ್ಲ). ಅದೇ ರೀತಿ ಗೋಪ್ಸ್ ಎಂಬ ಅಡ್ಡ ಹೆಸರೂ ಚಾಲ್ತಿಯಲ್ಲಿತ್ತು. ಸಾಮಾನ್ಯವಾಗಿ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು ಅಥವಾ ದೈಹಿಕ ಶಿಕ್ಷರುಗಳಿಗೆ ವಿದ್ಯಾರ್ಥಿಗಳು ಹೆದರುವುದು ಸಹಜವಾದರೆ, ಬಿಎಎಲ್ ಪೌಢಶಾಲೆಯಲ್ಲಿ ಮಾತ್ರಾ ಈ ಕನ್ನಡದ ಮೇಷ್ಟ್ರಿಗೆ ವಿದ್ಯಾರ್ಥಿಗಳು ಹೆದರುತ್ತಿದ್ದರು. ಹೆದರುತ್ತಿದ್ದರು ಎನ್ನುವುದಕ್ಕಿಂತ ಗೌರವ ಕೊಡುತ್ತಿದ್ದರು ಎನ್ನುವುದು ಸೂಕ್ತವೆನಿಸುತ್ತದೆ. ಎಷ್ಟೇ ಗಲಾಟೆಯಾಗುತ್ತಿದ್ದರೂ ಅಲ್ಲಿ ಗೋಪಣ್ಣನವರ ಆಗಮನವಾಯಿತೆಂದರೆ, ತಕ್ಶಣವೇ ಅಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ಮೌನ ಅವರಿಸುವಂತಾಗುತ್ತಿತ್ತು. ಅಚ್ಚರಿ ಎಂದರೆ ಈ ಪರಿಯ ಶಿಸ್ತನ್ನು ಅವರು ಕೇವಲ ತಮ್ಮ ವ್ಯಕ್ತಿತ್ವದಿಂದ ಕಾಪಾಡಿಕೊಂಡು ಬಂದಿದ್ದರೇ ವಿನಃ ಅವರೆಂದೂ ವಿದ್ಯಾರ್ಥಿಗಳಿಗೆ ಜೋರಾಗಿ ಬೈದವರಲ್ಲಾ, ಎಂದೂ ಯಾರ ಮೇಲೂ ಕೈ ಮಾಡಿದವರಲ್ಲ.

ಇನ್ನು ಗೋಪಣ್ಣನವರ ಕನ್ನಡ ಪಾಠವನ್ನು ಕೇಳುವುದೇ ಒಂದು ರಸಾನುಭವ. ತರಗತಿಗೆ ಪಾಠ ಮಾಡಲು ಬರುವ ಮುನ್ನ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡು ಬರುತ್ತಿದ್ದ ಕಾರಣವೋ ಅಥವಾ ವರ್ಷಾನುಗಟ್ಟಲೇ ಅದೇ ಪಾಠವನ್ನು ಮಾಡುತ್ತಿದ ಅನುಭವದ ಕಾರಣದಿಂದಲೋ ಪಾಠ ಮಾಡುತ್ತಿರುವಾಗ ಅವರೆಂದೂ ತಡವರಿಸುತ್ತಿರಲಿಲ್ಲ, ಪದಗಳಿಗೆ ಪರದಾಡುತ್ತಿರಲಿಲ್ಲ. ನಿರಂತರವಾಗಿ ನಿರರ್ಗಳವಾಗಿ ಪಾಠವನ್ನು ಮಾಡುತ್ತಿದ್ದನ್ನು ಹೇಳುವುದಕ್ಕಿಂತಲೂ ಅನುಭವಿಸಿದವರೇ ಧನ್ಯರು.  ಅದರಲ್ಲೂ ಅವರ ಹಳೇಗನ್ನಡದ ಪಾಠ. ಛಂದಸ್ಸು, ಸಮಾಸ, ವಿಶೇಷವಾಗಿ ಯಮಾತರಾಜ ಬಾನಸಲಗಂ ಎಂಬ ಸೂತ್ರದಡಿ ಅಕ್ಷರ ಸಮುಚ್ಛಯದಿಂದ ಕನ್ನಡ ವ್ಯಾಕರಣದಲ್ಲಿ ಗಣ ಪ್ರಸ್ತಾರ ಹಾಕಿ ವಿಂಗಡಿಸಲು ಹೇಳಿಕೊಡುತ್ತಿದ್ದದ್ದು ಎಂತಹ ಪರಮ ದಡ್ಡ ವಿದ್ಯಾರ್ಥಿಗೂ ಸುಲಿದ ಬಾಳೇ ಹಣ್ಣಿನಂತಿರುತ್ತಿತ್ತು.

bkg9ಇನ್ನು ಕನ್ನಡ ಪ್ರಾಧ್ಯಾಪಕರಾಗಿದ್ದ ಕಾರಣ, ಶಾಲೆಯ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಗೋಪಣ್ಣನವರದ್ದೇ ಮುಂದಾಳತ್ವ. ವಿದ್ಯಾರ್ಥಿಗಳಿಗೆ ನಾಟಕ, ಏಕಪಾತ್ರಾಭಿನಯ, ಪ್ರಬಂಧ, ಆಶು ಬಾಷಣ, ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಕಲಿಕೆಯ ಜೊತೆಯಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆ ಸಹಕಾರಿಯಾಗುವಂತಹ ಉತ್ತಮ ವಾತಾವರಣವನ್ನು ಕಲ್ಪಿಸಿಕೊಡುತ್ತಿದ್ದದ್ದಲ್ಲದೇ, ಇಲ್ಲಿ ವಿಜೇತರಾದ ವಿದ್ಯಾರ್ಧಿಗಳನ್ನು ಅಂತರ್ ಶಾಲಾ/ಕಾಲೇಜು ಸ್ಪರ್ಥೆಗಳಿಗೆ ಸ್ವತಃ ಗೋಪಣ್ಣನವರೇ ಕರೆದುಕೊಂಡು ಹೋಗುತ್ತಿದ್ದದ್ದು ವಿಶೇಷ. ಎಷ್ಟೋ ಬಾರಿ ಅನೇಕರಿಗೆ ಚರ್ಚಾ ಸ್ಪರ್ಧೆ/ಭಾಷಣಗಳನ್ನೂ ಬೆರೆದುಕೊಟ್ಟಿರುವ ಉದಾಹಣೆಗಳೆಷ್ಟೋ.. ತಮ್ಮ ವಯಕ್ತಿಕ ಸಂಪರ್ಕದಿಂದಾಗಿ ಇದೇ ಮಕ್ಕಳನ್ನು ಅಗೆಲ್ಲಾ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ನಂದನವನ ಮತ್ತು ಬಾಲಗೋಪಾಲ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಿ ಮಕ್ಕಳಲ್ಲಿದ್ದ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದರು. ಈ ಎಲ್ಲಾ ಕಾರ್ಯಗಳಲ್ಲೂ ವಯಕ್ತಿಕವಾಗಿ ನಾನು ಸಹಾ ಅವರಿಂದ ಉಪಕೃತನಾದವನು ಎಂಬುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ..

bkg5ಎಂಭತ್ತರ ದಶಕದಲ್ಲಿ ಬಿಇಎಲ್ ಪದವಿಪೂರ್ವ ಕಾಲೇಜು ಆರಂಭವಾದಾಗ, ತಮ್ಮ ಅನುಭವ ಮತ್ತು ಅರ್ಹತೆಯ ಆಧಾರವಾಗಿ ಗೋಪಣ್ಣನವರು ಪೌಢಶಾಲೆಯ ಕನ್ನಡ ಅಧ್ಯಾಪಕರಿಂದ  1986ರಲ್ಲಿ ಪದವಿ ಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಭಢ್ತಿ ಹೊಂದಿ ನಂತರ ದಿನಗಳಲ್ಲಿ ಅಧಿಕಾರಯುತವಾಗಿ ಅದೇ ಕಾಲೇಜಿನ  1997 ಉಪಪ್ರಾಂಶುಪಾಲರಾಗಿ, 1998ರಲ್ಲಿ  ಪ್ರಾಂಶುಪಾಲರಾಗಿ ಅತ್ಯಂತ ಜನಮನ್ನಣೆಯನ್ನುಗಳಿಸಿ 2007ರಲ್ಲಿ ವಯೋಸಹಜವಾಗಿ ನಿವೃತ್ತರಾದರು. ಕೇವಲ ಬಿಇಎಲ್ ಶಾಲಾ/ಕಾಲೇಜು ಅಲ್ಲದೇ, ಬಿಇಎಲ್ ಕಾರ್ಖಾನೆಯಲ್ಲಿ ಉದ್ಯೋಗದಲ್ಲಿದ್ದ ಕನ್ನಡೇತರರಿಗೂ ಸಹಾ ಕನ್ನಡ ತರಭೇತಿ ನೀಡಿರುವುದು ಅತ್ಯಂತ ಶ್ಲಾಘನೀಯವಾಗಿದೆ.

ಬಿಇಎಲ್ ಶಾಲಾ/ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಹೆಸರುವಾಸಿಯಾಗಿದ್ದ ಕಾರಣ ಅವರ ಅನುಭವವನ್ನು ಅಂದಿನ ಹೆಸರಾಂತ ಪ್ರಕಾಶಕರಾಗಿದ್ದ ಸುಭಾಷ್ ಪಬ್ಲಿಕೇಷನ್, ಗೋಪಣ್ಣನವರಿಂದ ಸಣ್ಣ ಸಣ್ಣ ಮಕ್ಕಳು ಸುಲಭವಾಗಿ ಕನ್ನಡ ಕಲಿಯುವಂತಾಗಲು ಅನೇಕ ವರ್ಕ್ ಪುಸ್ತಕಗಳನ್ನು ಬರೆಸಿ ಪ್ರಕಾಶನ ಮಾಡುವ ಮೂಲಕ ಗೋಪಣ್ಣನವರ ಕೀರ್ತಿ ನಾಡಿನಾದ್ಯಂತ ಪಸರಿಸಲು ಸಹಕಾರಿಯಾದರು. ಬಹುಶಃ ಇದೇ ಕಾರಣದಿಂದಾಗಿಯೇ ಏನೋ? ಅವರು ಬಿಇಎಲ್ ಶಿಕ್ಷಣ ಸಂಸ್ಥೆಯಿಂದ ನಿವೃತ್ತರಾದ ನಂತರವೂ, ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಇರುವ ಪ್ರತಿಷ್ಟಿತ ಕಡಾಂಬಿ ಶಿಕ್ಷಣ ಸಂಸ್ಥೆ ಅವರ ಸೇವೆಯನ್ನು ಬಳಸಿಕೊಳ್ಳಲು ಮುಂದಾಯಿತು. ಎಂದಿನಂತೆ ಅಲ್ಲಿಯೂ ಸಹಾ ತಮ್ಮ ಅನುಭವದ ಮೂಸೆಯನ್ನು ಧಾರೆ ಎರೆದು ಆ ಶಿಕ್ಷಣ ಸಂಸ್ಥೆಯಲ್ಲೂ ಆಡಳಿತಾತ್ಮಕವಾಗಿ ಅನೇಕ ಬದಲಾವಣೆಗಳನ್ನು ತರುವ ಮೂಲಕ ಮೊದಲೇ ಪ್ರಸಿದ್ಧಿ ಪಡೆದಿದ್ದ ಸಂಸ್ಥೆಗೆ ಮತ್ತಷ್ಟು ಸುಪ್ರಸಿದ್ಧತೆ ಪಡೆಯುವಂತೆ ಮಾಡಿದರು ಎಂದರೂ ಅತಿಶಯವಲ್ಲ.

bkg12ವಯಕ್ತಿಕ ಜೀವನದಲ್ಲಿ ಮನಕ್ಕೊಪ್ಪಿದ ಮಡದಿ ಹೆ.ಚ್. ಎಸ್ ಶೈಲಜಾ, ಆರತಿಗೊಬ್ಬಳು ಮಗಳು ರೋಹಿಣಿ, ಕೀರ್ತಿಗೊಬ್ಬ ಮಗ ಸುಮುಖ ಇದ್ದು, ಮಕ್ಕಳಿಬ್ಬರೂ ಇಂಜೀನಿಯರಿಂಗ್ ಮುಗಿಸಿ, ಮಗಳು ವಿದೇಶದಲ್ಲಿ  ಖ್ಯಾತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಾ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದರೆ,  ಮಗ ಸಹಾ ಬೆಂಗಳೂರಿನ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಾ, ಅಪ್ಪಾ ಅಪ್ಪಾ, ಮಡದಿ ಮತ್ತು ಮಗನೊಂದಿಗೆ ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದಾರೆ  ಕನ್ನಡ ಪ್ರಾಧ್ಯಾಪಕರಾಗಿ ಸಾವಿರಾರು ಮಕ್ಕಳಿಗೆ ಶಿಸ್ತಿನಿಂದ ಪಾಠ ಹೇಳಿಕೊಡುತ್ತಿದ್ದ ಶ್ರೀ ಗೋಪಣ್ಣನವರು ಈಗ ತಮ್ಮ ಮೊಮ್ಮಕ್ಕಳಿಗೆ ಕನ್ನಡ ವರ್ಣಮಾಲೆಗಳನ್ನು ಹೇಳಿಕೊಡುತ್ತಾ ಸಮಾಜಮುಖಿಗಳಾಗಿ ತಮ್ಮ ವಿಶ್ರಾಂತ ಜೀವನವನ್ನು ಅನುಭವಿಸುತ್ತಿದ್ದಾರೆ.

bkg7ಇಷ್ಟೆಲ್ಲಾ ಸಾಧನೆ ಮಾಡಿರುವ ಗೋಪಣ್ಣನವರಿಗೆ ಹತ್ತು ಹಲವಾರು ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದು, ಅವುಗಳಲ್ಲಿ ಪ್ರಮುಖವಾದವು ಹೀಗಿವೆ.

  • 1994ರಲ್ಲಿ ಲಯನ್ಸ್ ಕ್ಲಬ್ ಆಫ್ ವಿದ್ಯಾಭಾರತಿ ಉತ್ತಮ ಶಿಕ್ಷಕ ಪ್ರಶಸ್ತಿ
  • 1997ರಲ್ಲಿ ಬಿಇಎಲ್ ಕನ್ನಡ ಸಾಹಿತ್ಯ ಕೂಟದ ರಾಜ್ಯೋತ್ಸವ ಪ್ರಶಸ್ತಿ
  • 2003ರಲ್ಲಿ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಇಂಜಿನೀಯರಿಂಗ್ ಪ್ರತಿಷ್ಠಾನದ ವಿಶ್ವೇಶ್ವರಯ್ಯ ಪ್ರಶಸ್ತಿ
  • 2005ರಲ್ಲಿ ವಶಿಷ್ಟ ಕನ್ನಡ ಪತ್ರಿಕೆಯ ವಿಶ್ವಮಾನ್ಯ ವಿವೇಕರತ್ನ ಪ್ರಶಸ್ತಿ
  • 2007ರಲ್ಲಿ ಉದಯಭಾನು ಕಲಾಸಂಘದ ವತಿಯಿಂದ ಉದಯಭಾನು ವಿದ್ಯಾರತ್ನ ಪ್ರಶಸ್ತಿ

ಗೋಪಣ್ಣನವರು ತಾವೇ ಬರೆದಿದ್ದಂತಹ ಅನೇಕ ಲೇಖನಗಳನ್ನು ಒಗ್ಗೂಡಿಸಿ ಸಮಗ್ರವಾದ ದಾರಿ ದೀಪ ಎಂಬ ಪುಸ್ತಕವನ್ನು ಮತ್ತು ತಮ್ಮ ಮಾನಸಗಂಗೋತ್ರಿ ಮತ್ತು ಯುರೋಪ್ ಪ್ರವಾಸದ ಅನುಭವವನ್ನು ಆಪ್ಘ್ಸ್ ನಿಂದ ಗಂಗೋತ್ರಿಯವರಗೆ ಎಂಬ ಪ್ರವಾಸದ ಕಥನಪುಸ್ತಕಗಳನ್ನು ಹೊರ ತಂದಿದ್ದಾರೆ.

ಪರೀಕ್ಷೆಗಳಲ್ಲಿ ಒಂದು ಪುಟಕ್ಕೆ ಮೀರದಂತೆ ಬರೆಯಿರಿ, ಎಂದಾಗ ಹೆಚ್ಚು ಅಂಕಗಳು ಪಡೆಯುವ ಉತ್ಸಾಹದಿಂದ ಒಂದೂವರೆ ಇಲ್ಲವೇ ಎರಡು ಪುಟಗಳಷ್ಟು ಬರೆಯುವವರನ್ನು ಕಂಡಾಗಲೆಲ್ಲಾ, ಯಥಾ ಪ್ರಕಾರ ಗೋಪಣ್ಣನವರು, ಏನು ಸ್ವಾಮೀ… ಒಂದು ಪುಟಕ್ಕೆ ಮೀರದಂತೆ ಬರೆಯಿರಿ ಎಂದರೆ ಇಡೀ ಉತ್ತರ ಪತ್ರಿಕೆಯನ್ನೇ ತಿಂದು ಹಾಕಿದ್ದಿರೀ? ಹೇಳಿದಷ್ಟು ಬರೆದಲ್ಲಿ ಮಾತ್ರವೇ ಉತ್ತಮ ಅಂಕ ಪಡೆಯೋದು, ಅದಕ್ಕಿಂತಲೂ ಹೆಚ್ಚಿಗೆ ಬರೆದಲ್ಲಿ, ಅದರಲ್ಲೂ ಕನ್ನಡದಲ್ಲಿ ಬರೆಯುವ ಉತ್ಸಾಹದಲ್ಲಿ ಹೆಚ್ಚಿನ ಕಾಗುಣಿತ ತಪ್ಪುಗಳಾಗುವ ಸಂಭವ ಹೆಚ್ಚಾಗಿ, ಅಂಕಗಳನ್ನು ಕಳೆದುಕೊಳ್ಳುವ ಸಂಭಾವ ಹೆಚ್ಚು ಎಂದು ಹೇಳುತ್ತಿದ್ದದ್ದು ನೆನಪಾಗಿ ಅವರ ಕುರಿತಂತೆ ಬರೆಯಲು ಇನ್ನೂ ಅನೇಕ ವಿಷಯಗಳಿದ್ದರೂ ಇಷ್ಟಕ್ಕೇ ಸೀಮಿತಗೊಳಿಸುತ್ತಿದ್ದೇನೆ.

ಶಿಕ್ಷಕರ ದಿನಾಚರಣೆಯಂದು ನಾವೆಲ್ಲೂ ಸೇರಿ ನಮ್ಮ ನೆಚ್ಚಿನ ಕನ್ನಡ ಪ್ರಾಧ್ಯಾಪಕರಾಗಿದ್ದ ಶ್ರೀ ಗೋಪಣ್ಣನವರಿಗೆ ಹೃದಯಪೂರ್ವಕ ಸಾಷ್ಟಾಂಗ ನಮಸ್ಕಾರಗಳನ್ನು ಮಾಡುಡುವುದಲ್ಲದೇ, ಆ ತಾಯಿ ಕನ್ನಡಾಂಬೆ ಅವರಿಗೆ ಆಯಸ್ಸು, ಅರೋಗ್ಯ ಮತ್ತು ಐಶ್ವರ್ಯಗಳನ್ನು ನೀಡಿ ಇನ್ನೂ ಅನೇಕ ವರ್ಷಗಳ ಕಾಲ ಆ ಕನ್ನಡ ತಾಯಿಯ ಸೇವೆಯನ್ನು ಮಾಡುವಂತಾಗಲಿ ಎಂದು ಪ್ರಾರ್ಥಿಸೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

One thought on “ಬಿಇಎಲ್ ವಿದ್ಯಾಸಂಸ್ಥೆಯ ಶ್ರೀ ಬಿ.ಕೆ. ಗೋಪಣ್ಣನವರು

  1. ಗೋಪಣ್ಣ ನವರಿಗೆ ಆರೋಗ್ಯ, ನೆಮ್ಮದಿ ಶಾಂತಿ ‌‌ಸದಾ ಇರಲಿ ಎಂದು ದೇವರನ್ನು ಕೋರುತ್ತೇನೆ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s