ಸಹಾಯ ಮಾಡುವವರ ಪರಿಸ್ಥಿತಿ

ಸಾಮಾನ್ಯವಾಗಿ ಯಾರ ಬಳಿಯಲ್ಲಾದರೂ ಸಹಾಯ ಕೇಳಲು ಹೋದಾಗ ಅವರು ಸಹಾಯ ಮಾಡಲು ಆಗುವುದಿಲ್ಲ ಎಂದು ಹೇಳಿದಾಗ ಬಹುತೇಕರು ಮನಸ್ಸಿನಲ್ಲಿ ನೊಂದು ಕೊಂಡರೆ ಇನ್ನೂ ಕೆಲವರು ಹಿಡಿ ಶಾಪವನ್ನು ಹಾಕುತ್ತಾರೆ. ಇತ್ತೀಚೆಗಂತೂ ಹಣವಿರುವವರು ಹಣ ಇಲ್ಲದೇ ಇರುವವರಿಗೆ ಸಹಾಯ ಮಾಡಲೇ ಬೇಕೆಂಬ ಅಲಿಖಿತ ನಿಯಮವೂ ರೂಢಿಯಲ್ಲಿದೆ. ಅವರಿಗೇನು ಕಡಿಮೆ? ಸ್ವಲ್ಪ ಸಹಾಯ ಮಾಡಿಬಿಟ್ಟರೇ ಗಂಟು ಏನು ಕಳೆದು ಹೋಗುತ್ತದೆಯೇ? ಎಂದು ಬಹಿರಂಗವಾಗಿಯೇ ಆಡಿಕೊಳ್ಳುವವರಿಗೇನೂ ಕಡಿಮೆ ಏನಿಲ್ಲಾ. ಇನ್ನೂ ಕೆಲವರು ದಾನಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿ ನೋಡಿದರಂತೆ ಎನ್ನುವಂತೆ ಕೊಟ್ಟದಾನ ಸರಿ ಇಲ್ಲಾ ಅವರ ಅಂತಸ್ತಿಗೆ ಇನ್ನೂ ಚೆನ್ನಾಗಿರುವುದನ್ನು ಕೊಡಬಹುದಾಗಿತ್ತು ಎಂದು ಕರುಬುತ್ತಾರೆ. ನಿಜ ಹೇಳಬೇಕೆಂದರೆ ಅವರ ಬಳಿ ಹಣ ಇದೆ ಎಂದು ಕೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಾಗಿರುವಾಗ ಅದೆಷ್ಟು ಜನರಿಗೆಂದು ಅವರೂ ಸಹಾ ಕೊಟ್ಟಾರೂ? ಎಂಬುದನ್ನೂ ಸಹಾ ಯೋಚಿಸುವುದಿಲ್ಲ ಇಷ್ಟೆಲ್ಲಾ ಪೀಠಿಕೆ ಏಕಪ್ಪಾ ಅಂದ್ರೇ,

rupesh2ಕಳೆದ ವಾರವಷ್ಟೇ ಮುಗಿದ ಬಿಗ್ ಬಾಸ್ ಕನ್ನಡ ಸೀಸನ್ 9 ವಿಜೇತರಿಗೆ ಒಟ್ಟು. 50 ಲಕ್ಷ ರೂಪಾಯಿ ಹಣ ಸಿಗುತ್ತಿರುವಾಗ ‍ ಹಣ ನಿಮಗೆ ಎಷ್ಟು ಮುಖ್ಯ? ನಿಮ್ಮ ಬಳಿ ಸಹಾಯಕ್ಕೆ ಕೇಳಿಕೊಂಡು ಯಾರಾದರೂ ಬಂದರೆ ಅವರಿಗೆ ನೀವು ಸಹಾಯ ಮಾಡಲು ಮುಂದಾಗುವಿರಾ? ಎಂದು ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿಯವರನ್ನು ಫಿನಾಲೆ ವೇದಿಕೆಯ ಮೇಲೆ ಕೇಳಿದಾಗ, ಈ ಹಿಂದೆಿದೇ ರೂಪೇಶ್‌ ಶೆಟ್ಟಿ ಅವರು ನನಗೆ ಟ್ರೋಫಿ ಮುಖ್ಯ. 50 ಲಕ್ಷ ರೂಪಾಯಿ ಹಣವನ್ನು ಹೇಗೆ ಬೇಕಾದರೂ ದುಡಿಯಬಹುದು, ಆದರೆ ಈ ಟ್ರೋಫಿ ಸಿಗಲ್ಲ. ಒಮ್ಮೆ ವಿಜೇತನದಲ್ಲಿ ಕೊನೆ ತನಕವೂ ಬಿಗ್ ಬಾಸ್ ಕನ್ನಡ 9 ವಿಜೇತ ಎಂಬ ಪಟ್ಟ ನನ್ನೊಂದಿಗೆ ಇರುತ್ತದೆ, ಅದು ಎಂದಿಗೂ ಹೋಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಹಣ ಸಹಾ ಅತ್ಯಂತ ಮುಖ್ಯ ಎಂಬುದನ್ನೂ ಒಪ್ಪುತ್ತೇನೆ ಎನ್ನುತ್ತಾರೆ.

. rupeshಹಾಗೆಯೇ ಮಾತನ್ನು ಮುಂದಿವರೆಸಿದ ಸುದೀಪ್, ಹೇಗೂ ಬಿಗ್ ಬಾಸ್ ಕನ್ನಡ 9 ಟ್ರೋಫಿಗೆದ್ದಾಗಿದೆ ಈಗ ಯಾರೋ ಬಂದು ಕಷ್ಟ ಇದೆ ಆ 50 ಲಕ್ಷ ರೂಪಾಯಿ ಹಣ ಕೊಡಿ ಎಂದು ಕೇಳಿದರೆ ಕೊಡ್ತೀರಾ? ಎಂದು ಪ್ರಶ್ನಿಸಿದಾಗ, ರೂಪೇಶ್ ಶೆಟ್ಟಿ ಅವರು, ಸರ್ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ 50 ಲಕ್ಷ ರೂಪಾಯಿ ನನ್ನ ಜೀವನದಲ್ಲಿ ಅತ್ಯಂತ ಮಹತ್ವ ಪೂರ್ಣವಾಗಿದೆ. ಇದುವರೆವಿಗೂ ನಾನು ಮಾಡಿದ ಸಿನಿಮಾ ಇದಕ್ಕಿಂತಲೂ ಹೆಚ್ಚಿನ ಹೆಣವನ್ನು ಗಳಿಸಿದ್ದರೂ, ವಯಕ್ತಿಕವಾಗಿ ನನಗೆ ಅಷ್ಟು ಹಣ ಸಿಕ್ಕಿರಲಿಲ್ಲ ಹಾಗಾಗಿ ಬೇರೆಯವರ ಕಷ್ಟಕ್ಕೆ ಈ ಹಣವನ್ನು ಸಹಾಯ ರೂಪದಲ್ಲಿ ಮಾಡುವ ಮನಸ್ಸು ನನಗಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿದಾಗ, ಆ ಕ್ಷಣದಲ್ಲಿ ಅವರ ಆ ಮಾತಿನ ಹಿಂದೆ ಇರಬಹುದಾದ ಭಾವನೆ ಮತ್ತು ಕಷ್ಟಗಳನ್ನು ಅರ್ಥಮಾಡಿಕೊಳ್ಳುವ ಬದಲು ಅವರ ಕಾಲನ್ನು ಎಳೆದವರೇ ಹೆಚ್ಚಾಗಿದ್ದಾಗ, ಹಿಂದೆ ಓದಿದ್ದ ಈ ಪ್ರಸಂಗ ನೆನಪಾಗಿ ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

treesಅದೊಂದು ಊರಿನಲ್ಲಿ ನದಿಯ ದಂಡೆಯ ಪಕ್ಕದಲ್ಲಿ ಎರಡು ಮರಗಳು ಇರುತ್ತವೆ. ಹೊರಗಿನಿಂದ ನೋಡಲು ಎರಡೂ ಮರಗಳು ಬಹಳ ದಷ್ಟಪುಷ್ಟವಾಗಿದ್ದು ಹಚ್ಚ ಹಸಿರಾಗಿದ್ದದ್ದನ್ನು ಕಂಡ ಒಂದು ಗುಬ್ಬಚ್ಚಿಯು ಆ ಮರದ ಮೇಲೊಂದು ಗೂಡೊಂದನ್ನು ಕಟ್ಟಿಕೊಳ್ಳಲು ಇಚ್ಚಿಸಿ, ಮೊದಲನೇ ಮರದ ಬಳಿ ಬಂದು, ಅಕ್ಕಾ ಇನ್ನೇನು ಮಳೆಗಾಲ ಆರಂಭವಾಗುತ್ತಿದ್ದು, ನಾನು ಮತ್ತು ನನ್ನ ಮರಿ ನಿನ್ನ ಮರದ ಪೊಟರೆಯಲ್ಲಿ ಗೂಡೊಂದನ್ನು ಕಟ್ಟಿಕೊಂಡು ಸಂಸಾರ ನಡಸಬಹುದೇ ಎಂದು ವಿನಮ್ರವಾಗಿ ಕೇಳಿಕೊಂಡಾಗ, ಆ ಮರ ಇಲ್ಲಾ ಅದು ಸಾಧ್ಯವಿಲ್ಲಾ ಎಂದು ನಿರ್ದಯವಗಿ ಹೇಳುತ್ತದೆ.

sparrowಸರಿ ಬಂದ ದಾರಿಗೆ ಸುಂಕವಿಲ್ಲ ಎಂದು ನಿರಾಶೆಯಿಂದ ಪಕ್ಕದಲ್ಲೇ ಇದ್ದ ಮರದ ಬಳಿ ಅದೇ ರೀತಿಯಾಗಿ ಕೋರಿಕೊಂಡಾಗ ಆ ಮರ ದಾರಾಳವಾಗಿ ಗೂಡನ್ನು ಕಟ್ಟಿಕೊಳ್ಳಿ ಎಂದು ಹೇಳಿದಾಗ ಬಹಳ ಸಂತೋಷದಿಂದ ಆ ಗುಬ್ಬಿಯು ಬೆಚ್ಚನೆಯ ಎಂತಹ ಮಳೆಗೂ ಜಗ್ಗದ ಗೂಡೊಂದನ್ನು ಆ ಮರದ ಪೊಟರೆಯೊಂದರಲ್ಲಿ ಕಟ್ಟಿಕೊಂಡು ತನ್ನ ಮರಿಗಳೊಂದಿಗೆ ಮಹದಾನಂದದಿಂದ ವಾಸಿಸಲು ಆರಂಭಿಸುತ್ತದೆ.

ಇದಾಗಿ ಕೆಲವೇ ದಿನಗಳಲ್ಲಿ ಗುಬ್ಬಿಯು ನೆನದಂತೆ ಎಲ್ಲೆಡೆಯೂ ಮಳೆಗಾಲ ಆರಂಭವಾಗಿ ಕುಂಭದ್ರೋಣ ಮಳೆ ಸುರಿಯಲು ಆರಂಭವಾಗಿ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿದ ಕಾರಣ, ನದಿಯಲ್ಲಿ ಪ್ರವಾಹ ಪ್ರಾರಂಭವಾಗುತ್ತದೆ. ಏಕಾಏಕಿ ನದಿಯಲ್ಲಿ ಈ ರೀತಿಯಾದ ಪ್ರವಾಹ ಉಂಟಾದಾಗ, ನದಿಯ ಪಕ್ಕದಲ್ಲೇ ಇದ್ದ ಮೊದಲ ಮರ ಪ್ರವಾಹದ ರಭಸವನ್ನು ತಡೆಯಲಾರದೇ ಬುಡ ಸಮೇತ ಕೊಚ್ಚಿಕೊಂಡು ಹೋಗಲು ಆರಂಭವಾಗುತ್ತದೆ.

sparrow2ಈ ರೀತಿಯಾಗಿ ತನಗೆ ಅಶ್ರಯ ನೀಡಲು ನಿರಾಕರಿಸಿದ ಮೊದಲ ಮರ ಬೇರು ಸಮೇತ ಕೊಚ್ಚಿಕೊಂಡು ಹೋಗುತ್ತಿದ್ದ ದೃಶ್ಯವನ್ನು ನೋಡುತ್ತಿದ್ದ ಎರಡನೆಯ ಮರದ ಮೇಲೆ ಕುಳಿತಿದ್ದ ಗುಬ್ಬಿಗೆ ಒಂದು ರೀತಿ ಆನಂದವಾಗಿ, ನೋಡಿದೆಯಾ, ನನಗೆ ಸಣ್ಣದೊಂದು ಗೂಡೊಂದನ್ನು ಕಟ್ಟಿಕೊಳ್ಳಲು ನಿರಾಕರಿಸಿದ ನಿನಗೆ ಆ ಭಗವಂತ ತಕ್ಕದಾದ ಶಿಕ್ಷೆಯನ್ನೇ ನೀಡಿದ್ದಾನೆ ಎಂದು ಹೇಳುತ್ತದೆ.

ಹಾಗೆ ಪ್ರವಾಹದ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿರುವ ಸಂದರ್ಭದಲ್ಲೂ ಗುಬ್ಬಿಯ ಮಾತನ್ನು ಕೇಳಿ ಸ್ವಲ್ಪವೂ ಬೇಸರಿಕೊಳ್ಳದ ಮೊದನೇ ಮರ, ತಂಗೀ, ನನಗೆ ನನ್ನ ಸಾಮರ್ಥ್ಯದ ಅರಿವಿತ್ತು. ನದಿಯ ಪಕ್ಕದಲ್ಲೇ ಇದ್ದ ಕಾರಣ ಮತ್ತು ನನಗೂ ವಯಸ್ಸಾಗಿರುವ ಕಾರಣ, ನನ್ನ ಬೇರುಗಳು ಬಹಳ ದುರ್ಬಲವಾಗಿ ನನ್ನ ಬುಡವೇ ಭದ್ರವಾಗಿಲ್ಲ. ಸ್ವಲ್ಪ ಜೋರಾಗಿ ಮಳೆ ಬಂದರೆ ನಾನು ಕೊಚ್ಚಿ ಹೋಗುತ್ತೇನೆ ಎಂಬ ಸಂಗತಿ ನನಗೆ ಆರಿವಿದ್ದ ಕಾರಣ, ವೃಥಾ ನಿನಗೆ ಆಶ್ರಯ ನೀಡಿ ನನ್ನೊಂದಿಗೆ ನೀನು ಮತ್ತು ನಿನ್ನ ಸಂಸಾರವೂ ಕೊಚ್ಚಿಹೋಗುವುದು ನನಗೆ ಇಷ್ಟವಿರಲಿಲ್ಲ. ಹಾಗಾಗಿ ನೀನು ಗೂಡು ಕಟ್ಟಲು ಅನುಮತಿಯನ್ನು ನಿರಾಕರಿಸಿದೆ. ಹಾಗಾಗಿ ಅನ್ಯಥಾ ಭಾವಿಸದೇ ನನ್ನನ್ನು ಕ್ಷಮಿಸು. ನೀನು ನಿನ್ನ ಮರಿಗಳೊಂದಿಗೆ ನೂರ್ಕಾಲ ಆನಂದವಾಗಿ ಜೀವನ ನಡೆಸು ಎಂದು ಹೇಳುವಷ್ತರಲ್ಲೇ ಮತ್ತೆ ನದಿಯ ಪ್ರವಾಹದ ರಭಸ ಹೆಚ್ಚಾಗಿ ಆ ಮರ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗುತ್ತದೆ.

ಮೊದಲನೇ ಮರದ ಮಾತುಗಳನ್ನು ಕೇಳಿದ ಆ ಗುಬ್ಬಿಗೆ, ಛೇ ಆ ಮರದ ಪರಿಸ್ಥಿತಿಯನ್ನು ಅರಿಯದೇ ವಿನಾಕಾರಣ ಅಪಾರ್ಥವನ್ನು ಮಾಡಿಕೊಂಡನಲ್ಲಾ ಎಂದು ಅತೀವವಾಗಿ ಬೇಸರ ಪಟ್ಟುಕೊಳ್ಳುತ್ತದೆ.

ರೂಪೇಶ್ ಶೆಟ್ಟಿ ಮತ್ತು ಮೇಲಿನ ಮರದ ಪ್ರಸಂಗ ಎರಡೂ ಪ್ರಕರಣಗಳಲ್ಲಿಯೂ ಅವರವರ ಪರಿಸ್ಥಿತಿಗೆ ಅನುಗುಣವಾಗಿ ಅವರು ಸಹಾಯ ಮಾಡಬೇಕೋ ಬೇಡವೋ ಎನ್ನುವ ನಿರ್ಧಾರ ತೆಗೆದುಕೊಳ್ಳಲು ಸಮರ್ಥರಾಗಿರುತ್ತಾರೆ. ಹಾಗಾಗಿ ಅವರ ನಿರ್ಧಾರದ ಹಿಂದಿರುವ ಭಾವನೆಗಳನ್ನು ಅರ್ಥಮಾಡಿಕೊಳ್ಳದೇ ವಿನಾಕಾರಣ ಅವರನ್ನು ನಿಂದಿಸುವುದು ಸರಿಯಲ್ಲಾ ಅಲ್ವೇ? ತಾಳಿದವನು ಬಾಳಿಯಾನು ಎಂಬ ಮಾತನ್ನು ಸದಾಕಾಲವೂ ನನೆಪಿನಲ್ಲಿಟ್ಟುಕೊಂಡು ತಾಳ್ಮೆಯಿಂದ ವರ್ತಿಸಿದಲ್ಲಿ ಸಂಬಂಧಗಳನ್ನು ಸುಧೀರ್ಘವಾಗಿ ಉಳಿಸಿಕೊಂಡು ಬೆಳಸಿಕೊಂಡು ಹೋಗಬಹುದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s