ತಿರುವಳ್ಳುವರ್

ನಮ್ಮ ಸನಾತನದ ಧರ್ಮದಲ್ಲಿ ತಂದೆ ತಾಯಿಯರ ನಂತರ ಆಚಾರ್ಯ ಅರ್ಥಾತ್ ಗುರುಗಳಿಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇವೆ. ಗುರುಗಳು ಎಂದರೆ ಅವರು ಕೇವಲ ಶಿಕ್ಷಣವನ್ನು ನೀಡುವ ಗುರುಗಳೇ ಆಗಿರದೇ ಒಂದು ಅಕ್ಷರವಂ ಕಲಿಸಿದಾತನುಂ ಗುರು ಎನ್ನುತ್ತೇವೆ.  ಹಾಗಾಗಿಯೇ ಅನೇಕ ಗುರುಗಳು  ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡು ಭಕ್ತರಿಗೂ ಮತ್ತು ಭಗವಂತರಿಗೂ ಮಧ್ಯೆ ಸೇತುವೆಯಂತೆ ತಮ್ಮ ಅನುಭವದ ಸಾರ ಸಮಾಜದ ಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಿದರೆ, ಇನ್ನೂ ಕೆಲವರುಗಳು ಅದನ್ನೇ  ದ್ವಿಪದಿ, ತ್ರಿಪದಿ ಮತ್ತು ಚೌಪದಿಯ ಪದ್ಯಗಳ ರೂಪದಲ್ಲಿ ಜನರಿಗೆ ತಿಳಿಸಲು ಪ್ರಯತ್ನ ಮಾಡಿದ್ದಾರೆ. ಕನ್ನಡದಲ್ಲಿ ಸರ್ವಜ್ಞ ಕವಿಯು  ತ್ರಿಪದಿಗಳ ಮೂಲಕ ಜನರಿಗೆ ತಿಳಿ ಹೇಳಿದರೆ, ಅದೇ ರೀತಿಯಾಗಿ ತಮಿಳು ಭಾಷೆಯಲ್ಲಿ  ತಿರುವಳ್ಳುವರ್ ಕವಿಯು ತಿರುಕ್ಕುರಳ್ ಎಂಬ ಪದ್ಯಗಳ ಮೂಲಕ, ತಮಿಳು ನಾಡಿನ ಓದು ಬರಹ ತಿಳಿಯದ ಅನಕ್ಷರಸ್ಥರಿಗೂ  ಸಹಾ ತಿಳಿಯುವಂತೆ ಬರೆದಿದ್ದು, ತಮಿಳುನಾಡಿನ ಸಾಮಾನ್ಯ ಜನರಿಗೂ ಸಹಾ ಹತ್ತಾರು  ತಿರುಕ್ಕುರುಳ್ ಗಳು ಕಂಠಪಾಠವಾಗುವಷ್ಟು  ಪ್ರಸಿದ್ದಿಯಾಗಿದ್ದು  ಅಂತಹ ಮಹಾನ್ ಸಾಧಕರ ಬಗ್ಗೆ ತಿಳಿಯೋಣ ಬನ್ನಿ.

ತಮಿಳುನಾಡಿನ ಮಹಾನ್ ಕವಿ ತಿರುವಳ್ಳುವರ್ ಅವರ ಹುಟ್ಟಿನ ಬಗ್ಗೆ ಅನೇಕ ಜಿಜ್ಞಾಸೆಗಳು ಇದ್ದು ಕೆಲವರು ಅವರು ಮಧುರೆ ಜಿಲ್ಲೆಯ ಕಾವೇರಿ ತೀರದ ಪೂ೦ಪುಹಾರ್ ಹಳ್ಳಿಯಲ್ಲಿ ಹುಟ್ಟಿದರೆ೦ದರೆ, ಇನ್ನೂ  ಕೆಲವರು ಪ್ರಸ್ತುತ  ಚೆನ್ನೈನಲ್ಲಿರುವ ಮೈಲಾಪುರ್ ಪ್ರದೇಶಕ್ಕೆ ಸೇರಿದವರು ಎನ್ನುತ್ತಾರೆ. ತಿರುವಳ್ಳುವರ್ ಅವರು ಹತ್ತು ಹಲವಾರು  ಹೆಸರುಗಳಿಂದ ಪ್ರಸಿದ್ಧಿಯಾಗಿದ್ದು ಅವುಗಳಲ್ಲಿ ಪ್ರಮುಖವಾದವು ಎಂದರೆ, ವಳ್ಳುವರ್,  ದೈವ ಪುಲವರ್ (ಆಧ್ಯಾತ್ಮಿಕ ಕವಿ), ಪೊಯಮೊಜಿ ಪುಲವರ್, ಸೆನ್ನ ಪೊತರ್, ಜ್ಞಾನ ವೆಟ್ಟಿಯಾನ್,ಅಯ್ಯನ್ ಇನ್ನು ಮುಂತಾದವುಗಳಾಗಿದ್ದು ಒಟ್ಟಿನಲ್ಲಿ ಇವರು ತಮಿಳಿನ ಮಹಾನ್ ಪಂಡಿತರೊಬ್ಬರೇ ಆಗಿದ್ದರೂ ಅವರಿಗೆ ನಾಮ ಮಾತ್ರ ಹಲವಾರಿದೆ.

ತಿರುವಳ್ಳುವರ್ ಅವರ  ಹುಟ್ಟು ಮತ್ತು ಬದುಕಿನ ಬಗ್ಗೆಯೂ ಅನೇಕ ಜಿಜ್ಞಾಸೆಗಳಿವೆ. ಒಂದು ನಂಬಿಕೆಯ ಪ್ರಕಾರ ಅವರ ತಂದೆಯ ಹೆಸರು ಭಗವಾನ್ ಮತ್ತು  ತಾಯಿಯ ಹೆಸರು ಆದಿ   ಎಂಬುದಾಗಿದ್ದು ತಿರುವಳ್ಳುವರ್ ಹುಟ್ಟು ಮತ್ತು ಬದುಕಿದ್ದ ಕಾಲದ ಬಗ್ಗೆ ಸ್ಪಷ್ಟವಾದ ಸಾಕ್ಷಿ ಮತ್ತು ಮಾಹಿತಿ ಇಲ್ಲದ ಕಾರಣ ತಿರುವಳ್ಳುವರ್ ಕೃತಿಗಳ ಬರವಣಿಗೆ ಶೈಲಿಯನ್ನು ನೋಡಿ  ಅವರು ಬದುಕಿದ್ದ ಸಮಯದಲ್ಲಿ ನಂದ ವಂಶದವರು ರಾಜ್ಯವಾಳುತ್ತಿದ್ದರು ಎಂದು ನಂಬಲಾಗಿದೆ.  ಈ ತಿರುವಳ್ಳುವರ್ ಎಂಬ ಹೆಸರನ್ನು ಹತ್ತನೇ ಶತಮಾನದ ತಿರುವಳ್ಳುವರ್ ಮಾಲಯ್ ಎಂಬ ಕೃತಿಯಲ್ಲಿ ಕಾಣಬಹುದಾಗಿದ್ದು, ಸಂಸ್ಕೃತದ ಶ್ರೀ ಎಂಬ ಗೌರವ ಸೂಚನಿಯ ಪದಕ್ಕೆ ತಮಿಳಿನಲ್ಲಿ ತಿರು ಎಂಬ ಪದವನ್ನು ಬಳಸುತ್ತಾರೆ. ಹಾಗಾಗಿ ತಿರುವಳ್ಳುವರ್ ಪದವು ಸಂಸ್ಕೃತದ ಶ್ರೀವಲ್ಲಭನ್’ ಎನ್ನುವ ಪದಕ್ಕೆ ಹೋಲಿಕೆಯಾಗುತ್ತಿದ್ದು ಚೆನೈನಲ್ಲಿರುವ ಮಯಿಲಾಪುರವನ್ನು ಆಳುತ್ತಿದ್ದ ಪಲ್ಲವ ರಾಜನ ಹೆಸರು ಶ್ರೀವಲ್ಲಭನ್ ಎಂಬುದಾಗಿತ್ತು ಎಂದು ನಂಬಲಾಗಿದೆ. ಇತ್ತೀಚೆಗೆ ಕನ್ಯಾಕುಮಾರಿಯ ಇತಿಹಾಸ ಮತ್ತು ಸಾಂಸ್ಕೃತಿಕ ಸಂಶೋಧನ ಕೇಂದ್ರದವರ ಶೋಧನೆಯ ಪ್ರಕಾರ ವಳ್ಳುವರ್ ಎಂಬುವವನು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ವಳ್ಳುವನಾಡು ಎಂಬ ರಾಜ್ಯದ ರಾಜನೆಂದು ಹೇಳಿದ್ದಾರೆ.

ಮತ್ತೊಂದು ನಂಬಿಕೆಯ ಪ್ರಕಾರ ತಿರುವಳ್ಳುವರ್ ಅವರು  ಕ್ರಿ.ಶ. ಮೂರನೇ ಶತಮಾನದವರಾಗಿದ್ದು, ಅವರು ಬಹುಶಃ ತಮಿಳುನಾಡಿನ ಇಂದಿನ ಚೆನೈ ಪ್ರಾಂತ್ಯದ ಮಯಿಲಾಪುರ ಅಥವಾ ಕನ್ಯಾಕುಮಾರಿ ಜಿಲ್ಲೆಯ ತಿರುನಯನಾರ್ ಅಲ್ಲಿರುವ ಕುರುಚಿ ಎಂಬ ಊರಿನಲ್ಲಿ ಹುಟ್ಟಿರಬಹುದು ಎಂದು ನಂಬಲಾಗಿದೆ. ಇವರ ನಂಬಿಕೆಯ ಪ್ರಕಾರ ತಿರುವಳ್ಳುವರ್ ವೈಷ್ಣವ ಧರ್ಮದ ಅನುಯಾಯಿಯಾಗಿದ್ದು ವೃತ್ತಿಯಲ್ಲಿ ನೇಕಾರರಾಗಿ ಪ್ರವೃತ್ತಿಯಲ್ಲಿ ಕವಿಗಳಾಗಿದ್ದರು. ಅವರು ವಾಸುಕಿ ಅಮ್ಮೈಯಾರ್ ಎಂಬುವರನ್ನು ವರಿಸಿದ್ಧರು ಎನ್ನಲಾಗುತ್ತದೆ. ವಾಸುಕಿಯವರ ಪತಿ ಭಕ್ತಿಯ ಬಗ್ಗೆ ಅನೇಕ ದಂತ ಕಥೆಗಳಿದ್ದು, ಅವುಗಳಲ್ಲಿ ಒಂದು ಹೀಗೆದೆ.  ಅದೊಮ್ಮೆ ವಾಸುಕಿರವರು ಗೃಹಬಳಕೆಗಾಗಿ ತಮ್ಮ ಮನೆಯ ಹಿತ್ತಲಲ್ಲಿದ್ದ ಬಾವಿಯಲ್ಲಿ ನೀರು ಸೇದುತ್ತಿರುವಾಗ ಗಂಡ ಕರೆದರು ಎಂಬ ಕಾರಣಕ್ಕೆ ಸೇದುತ್ತಿದ್ದ ಹಗ್ಗವನ್ನು ಹಾಗೆಯೇ ಬಿಟ್ಟು ತನ್ನ ಪತಿಯ ಯೋಗಕ್ಷೇಮ ವಿಚಾರಿಸಲು  ಬಂದಿದ್ದರಂತೆ. ಈ ಪರಿಯಾಗಿ ಪತಿಯ ಆಜ್ಞಾಪಾಲಕಿಯಾಗಿದ್ದರು ಎನ್ನಲಾಗುತ್ತದೆ. ಅದೇ ರೀತಿ  ತಿರುವಳ್ಳುವರ್ ಅವರು  ಪ್ರತಿದಿನವೂ ಬಾಳೆ ಎಲೆಯ ಮೇಲೆ ಊಟವನ್ನು ಮಾಡಲು ಕುಳಿತುಕೊಳ್ಳುವಾಗ ಆವರು  ಒಂದು ಕೈಯಲ್ಲಿ ಕುಡಿಯಲು ನೀರಿನ ಚೊಂಬು ಮತ್ತು ಮತ್ತೊಂದು ಕೈಯ್ಯಲ್ಲಿ ಹಂಚೀ ಕಡ್ಡಿಯೊಂದನ್ನು ಇಟ್ಟುಕೊಳ್ಳುತ್ತಿದ್ದರಂತೆ. ಅಕಸ್ಮಾತ್  ವಾಸುಕಿಯವರು ಅನ್ನ ಬಡಿಸುವಾಗ ಬಾಳೆಎಲೆಯಿಂದ  ಹೊರೆಗೆ ಬೀಳುವ ಅನ್ನದ ಅಗುಳನ್ನು ಎಂಜಲು ಮುಸುರೆಯಿಲ್ಲದೇ ಕಡ್ಡಿಯ ಸಹಾಯದಿಂದ ತೆಗೆಯಬಹುದು ಎಂಬುದು ತಿರುವಳ್ಳುವರ್ ಅವರ  ಆಶಯವಾಗಿತ್ತಂತೆ. ಆದರೆ ವಾಸುಕಿಯವರು ಪತಿಯ ಮೇಲಿನ ಭಕ್ತಿ ಮತ್ತು ಪ್ರೀತಿಯಿಂದಾಗಿ ಅತ್ಯಂತ ಚೊಕ್ಕವಾಗಿ ಆಹಾರ ಬಡಿಸುತ್ತಿದ್ದ ಕಾರಣ,  ಆ ರೀತಿಯಾಗಿ  ಎಲೆಯಿಂದ ಹೊರೆಗೆ ಬಿದ್ದ ಅನ್ನದ ಅಗುಳನ್ನು ತೆಗೆಯುವ ಪ್ರಮೇಯವೇ  ತಿರುವಳ್ಳುವರ್ ಅವರಿಗೆ ಒಂದು ದಿನವೂ ಬಾರಲಿಲ್ಲ ಎನ್ನುವುದು ಗಮನಾರ್ಹ. ನೇಕಾರವೃತ್ತಿಯ ಜೊತೆಗೆ ತಿರುವಳ್ಳುವರ್ ತಮ್ಮ ಜೀವನದ ಕೆಲವು ಸಮಯವನ್ನು ಮಧುರೈನ ಪಾಂಡ್ಯ ವಂಶದ ರಾಜನ ಆಸ್ಥಾನದಲ್ಲಿ ಕವಿಯಾಗಿದ್ದರು  ಎನ್ನಲಾಗುತ್ತದೆ.

ತಿರುಕ್ಕುರಲ್ ಗ್ರ೦ಥವನ್ನು  3 ಮುಖ್ಯ ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲನೆಯದು ಅರಮ್ ವಿಭಾಗದಲ್ಲಿ 38 ಅಧ್ಯಾಯಗಳಿದ್ದರೆ , ಎರಡನೆಯದು ಪೊರಲ್ ವಿಭಾಗದಲ್ಲಿ 70 ಅಧ್ಯಾಯಗಳಿದ್ದು, ಕೊನೆಯ ವಿಭಾಗವಾದ ಕಾಮಮ್ ನಲ್ಲಿ ವಿಭಾಗದಲ್ಲಿ 25 ಅಧ್ಯಾಯಗಳಿವೆ. ಪ್ರತೀ ಅಧ್ಯಾಯದಲ್ಲೂ 10 ದ್ವಿಪದಿಗಳನ್ನು (ಕುರಳ್‌) ಒಳಗೊಂಡಿದ್ದು,  ಒಟ್ಟು 133 ಅಧ್ಯಾಯಗಳನ್ನು ಒಳಗೊಂಡ 1333 ಸಣ್ಣ ಸಣ್ಣ  ದ್ವಿಪದಿಗಳು ತಿರುಕ್ಕುರಳ್ ಕೃತಿಯಲ್ಲಿದೆ.  ಮೊದಲನೆಯ ಅರಮ್ ಭಾಗದಲ್ಲಿ ಆತ್ಮಸಾಕ್ಷಿ, ಗೌರವ ಮತ್ತು ಉತ್ತಮ ನಡುವಳಿಕೆಗಳ ಜೊತೆ ಮನುಷ್ಯನ ಸದ್ಗುಣಗಳ ಬಗ್ಗೆ ಸವಿವರವಾಗಿ ವಿವರಿಸಿದ್ದಾರೆ.  ಎರಡನೆಯ ಪೊರಲ್ ಭಾಗವು ಅತ್ಯಂತ ದೊಡ್ಡ ಭಾಗವಾಗಿದ್ದು, ಇದರಲ್ಲಿ ಲೌಕಿಕ ವ್ಯವಹಾರಗಳಲ್ಲಿ ಅನುಸರಿಸಬೇಕಾದ ಮಾರ್ಗ ಮತ್ತು ಸೂಚನೆಗಳನ್ನು ನೀಡಿರುವುದಲ್ಲದೇ,  ರಾಜ್ಯವನ್ನಾಳುವ ರಾಜ ಮತ್ತು ಮ೦ತ್ರಿಗಳು ರಾಜ್ಯವನ್ನು ಹೇಗೆ  ನಿರ್ವಹಿಸಬೇಕು ಎಂಬುದರ ವಿವರಣೆ ಇದೆ. ಇದರ ಜೊತೆಯಲ್ಲೇ ಸ೦ವಿಧಾನ, ಕಾನೂನು ಪರಿಪಾಲನೆ, ಆಹಾರ ವಿತರಣೆ, ಜನ ಸಾಮಾನ್ಯರ ಯೋಗಕ್ಷೇಮಗಳ ಕುರಿತಾಗಿಯೂ ಸವಿವರವಾಗಿದೆ. ಅದೇ ರೀತಿ ಮೂರನೇ ಕಾಮಮ್ ವಿಭಾಗದಲ್ಲಿ ಹೆಣ್ಣು ಮತ್ತು ಗಂಡಿನ ನಡುವೆ ಇರಬೇಕಾದ ಪರಸ್ಪರ  ಪ್ರೀತಿ ಮತ್ತು ನಂಬಿಕೆಗಳ  ಬಗ್ಗೆ ತಿಳಿಸಿರುವುದಲ್ಲದೇ, ಗಂಡಸು ನಿಸ್ವಾರ್ಥ ಪ್ರೀತಿಯಿ೦ದ ಹೆಣ್ಣನ್ನು ಒಲಿಸಿಕೊ೦ಡು ತನ್ನ ಆತ್ಮ ಗೌರವವನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಎ೦ಬುದರ  ಕುರಿತಾಗಿಯೂ ವಿವರಿಸಲಾಗಿದೆ.  ಈ ಅಧ್ಯಾಯದ ಮುಂದುವರೆದ ಭಾಗದಲ್ಲಿ ಮದುವೆಗೆ ಮುನ್ನ ಗಂಡು, ಹೆಣ್ಣು ಪ್ರೀತಿಸುವುದು, ಅರ್ಥಾತ್ ಗಾ೦ಧರ್ವ ವಿವಾಹ ಮತ್ತು ಮದುವೆಯ ನ೦ತರ ಗಂಡ ಹೆಂಡತಿ ಹೇಗೆ ಪ್ರೀತಿ ಮಾಡಬಹುದು ಎಂಬುದರ ಬಗ್ಗೆಯೂ ವಿವರಿಸಲಾಗಿದೆ.

ತಿರುವಳ್ಳುವರ್ ಅವರು ಬರೆದಿರುವ ಈ ತಿರುಕ್ಕುರಳ್ ಕೃತಿಯು ತಮಿಳು ಭಾಷೆಯ ಅತ್ಯಂತ ಪೂಜ್ಯ ಮತ್ತು ಪ್ರಾಚೀನ ಕೃತಿಗಳಲ್ಲಿ ಒಂದಾಗಿದ್ದು, ಜೀವನದಲ್ಲಿ ನೀತಿ ಮತ್ತು ಸುಧಾರಣೆ ಹೊಂದಲು ಒಂದು ಸೂಕ್ತವಾದ ಮಾರ್ಗದರ್ಶಿಯಾಗಿರುವ ಕಾರಣ, ಇದು ತಮಿಳು ನಾಡಿನ ಜನಸಾಮಾನ್ಯರಲ್ಲಿ ಹಾಸು ಹೊಕ್ಕಾಗಿದೆ. ಇಂತಹ ಅದ್ಭುತವಾದ ತಿರುಕ್ಕುರಳ್ ಕೃತಿಯು ಭಾರತದ ಇತರೇ ಭಾಷೆಗಳಲ್ಲದೇ ಅನೇಕ ವಿದೇಶೀ ಭಾಷೆಗಳಿಗೂ  ಅನುವಾದಗೊಂಡಿದೆ. 1730ರಲ್ಲಿ ಕಾನ್ಸ್ಟಂಟೈನ್ ಜೋಸೆಫ್ ಬೆಸ್ಚೀರವರು ಈ ತಿರುಕ್ಕುರಳ್ ಕೃತಿಯನ್ನು ಲ್ಯಾಟಿನ್ ಭಾಷೆಗೆ ಅನುವಾದಮಾಡುವ ಮೂಲಕ ದಕ್ಷಿಣ ಭಾರತದ ಈ ತತ್ವಜ್ಞಾನಿಯನ್ನು ಯೂರೋಪಿಯನ್ನರಿಗೂ ಪರಿಚಯಿಸಿದ್ದದ್ದು  ಅತ್ಯಂತ ಅಭಿನಂದನಾರ್ಹವಾಗಿದೆ.

ತಿರುವಳ್ಳುವರ್ ಅವರು ಈ ತಿರುಕ್ಕುರಳ್  ಅಲ್ಲದೇ  ಜ್ಞಾನ ವೆಟ್ಟಿಯಾನ್ ಮತ್ತು ಪಂಚರತ್ನಮ್ ಎಂಬ   ಇನ್ನೆರಡು ಕೃತಿಗಳನ್ನು ರಚಿಸಿದ್ದು ಅದರಲ್ಲಿ ಔಷಧಿಗಳಿಗೆ ಸಂಬಂಧ ಪಟ್ಟ ಕೃತಿಗಳಾಗಿದ್ದು,  ವಿಜ್ಞಾನ, ಸಾಹಿತ್ಯ, ಆರ್ಯುವೇದ ಮತ್ತು ಔಷಧಕ್ಕೆ  ಈ ಗ್ರಂಥದ ಕೊಡುಗೆ ಅಪಾರವಾಗಿದೆ.

ತಮಿಳರ ಮನೆ ಮತ್ತು ಮನಗಳಲ್ಲಿ ಹಾಸು ಹೊಕ್ಕಾಗಿರುವ ತಿರುವಳ್ಳುವರ್ ಅವರ  ಜ್ಞಾಪಕಾರ್ಥವಾಗಿ  ಚೆನೈನಲ್ಲಿ 1976ರಲ್ಲಿ ವಳ್ಳುವರ್ ಕೋಟ್ಟಮ್ ಎಂಬ ಸ್ಮಾರಕವನ್ನು ನಿರ್ಮಿಸಲಾಗಿದೆ.  ದ್ರಾವಿಡ  ಶೈಲಿಯ ಕೆತ್ತನೆಯನ್ನು ಒಳಗೊಂಡಿದೆ ಈ ಸ್ಮಾರಕದ ಪಕ್ಕದಲ್ಲೇ  ಸುಮಾರು 4000 ಸಾವಿರ ಆಸನಗಳ ವ್ಯವಸ್ಥೆಗಳುಳ್ಳ ಸಭಾಂಗಣವೊಂದಿದ್ದು ಅದು  ಏಷ್ಯಾದಲ್ಲೇ ಅತಿ ದೊಡ್ದ ಸಭಾಂಗಣವಾಗಿದೆ ಎನ್ನುವುದು ವಿಶೇಷವಾಗಿದೆ.

1962ರಲ್ಲಿ ಸ್ವಾಮಿ ವಿವೇಕಾನಂದರ ಜನ್ಮಶನಮಾನೋತ್ಸವದ ಸಂದರ್ಭದಲ್ಲಿ ತಮಿಳುನಾಡಿನ ಕನ್ಯಾಕುಮಾರಿ ಕಡಲತಡಿಯಲ್ಲಿ ವಿವೇಕಾನಂದರು ತಪಸ್ಸು ಮಾಡಿ ಜ್ಞಾನೋದಯ ಪಡೆದ ವಾದ ಸ್ಥಳದಲ್ಲಿ  ವಿವೇಕಾನಂದ ಸ್ಮಾರಕ ಕೇಂದ್ರವನ್ನು ನಿರ್ಮಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಶ್ರೀ ಏಕನಾಥ್ ರಾನಡೆಯವರು ಮುಂದಾದಾಗ. ಅದಕ್ಕೆ ಬಾರಿ ಪ್ರತಿಭಟನೆಯಾಗಿ ನಂತರದ ದಿನಗಳಲ್ಲಿ 323 ಸಾಂಸದರ ಅನುಮೋದನಾ ಪತ್ರದಿಂದ 1970ರಲ್ಲಿ ವಿವೇಕಾನಂದ ಸ್ಮಾರಕ ಉದ್ಘಾಟನೆ ಗೊಂಡಾಗ ಸ್ಥಳೀಯರು ಆ ಪ್ರದೇಶದಲ್ಲಿ ತಿರುವಳ್ಳುವರ್ ಅವರ ಪ್ರತಿಮೆಯನ್ನೂ ಸಹಾ ನಿರ್ಮಾಣ ಮಾಡ ಬೇಕೆಂದು ಆಗ್ರಹಿಸಿದ್ದ ಪರಿಣಾಮ, ಜನವರಿ 1, 2000 ರಂದು ಅದೇ ವಿವೇಕಾನಂದ ಸ್ಮಾರಕದ ಮತ್ತೊಂದು ಬದಿಯಲ್ಲಿ ಸುಮಾರು 133 ಅಡಿ ಎತ್ತರದ (40.6 ಮೀಟರ್) ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ. ಈ ಪ್ರತಿಮೆಯು 95 ಅಡಿ (29 ಮೀಟರ್) ಎತ್ತರವನ್ನು ಹೊಂದಿದ್ದು, ತಿರುಕ್ಕುರಳ್ ನಲ್ಲಿರುವ 38 ಅಧ್ಯಾಯಗಳನ್ನು ಪ್ರತಿನಿಧಿಸುವ ಒಂದು 38 ಅಡಿ ಎತ್ತರದ (11.5 ಮೀಟರ್) ಪೀಠದ ಮೇಲೆ ನಿಂತಿದೆ. ಪೀಠದ ಮೇಲೆ ನಿಂತಿರುವ ಈ ಪ್ರತಿಮೆ ಸಂಪತ್ತು ಮತ್ತು ಪ್ರೀತಿಯನ್ನು ಗಳಿಸಿ, ಘನ ಗುಣಗಳನ್ನು ಅಡಿಪಾಯವನ್ನಾಗಿ ಮಾಡಿಕೊಂಡು ಜೀವನವನ್ನು ಅನುಭವಿಸುವ, ವ್ಯಕ್ತಿಗಳನ್ನು ಪ್ರತಿನಿಧಿಸುತ್ತದೆ. ಈ ಪ್ರತಿಮೆಯು ಮನುಷ್ಯನ ದೇಹದಲ್ಲಿ ಆಸ್ತಿ ಹೇಗೆ ಒಳಗೊಂಡಿರುತ್ತದೊ ಹಾಗೆಯೇ ಮಾನವ ಸಂತೋಷವನ್ನು ಪ್ರತಿನಿಧಿಸುತ್ತದೆ. ಪ್ರತಿಮೆ ಮತ್ತು ಪೀಠದ ಸಂಯೋಜಿತ ಎತ್ತರ ತಿರುಕ್ಕುರಳ್ 133 ಅಧ್ಯಾಯಗಳು ಸೂಚಿಸುವ 133 ಅಡಿ ಆಗಿದೆ. ಇದು 7000 ಟನ್ ಒಟ್ಟು ತೂಕವನ್ನು ಹೊಂದಿದೆ. ಸೊಂಟದ ಸುತ್ತ ಸ್ವಲ್ಪ ಬಾಗಿದ ಈ ಪ್ರತಿಮೆಯನ್ನು ನೋಡಿದರೆ, ನರ್ತಿಸುವ ನಟರಾಜನಂತಹ ಪುರಾತನ ಭಾರತೀಯ ದೇವತೆಗಳ ಭಂಗಿಯನ್ನು ನೆನಪಿಗೆ ತರುತ್ತದೆ. ಅದೇ ರೀತಿಯಾಗಿ ಲಂಡನ್ನಿನ ಓರಿಯಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್ ಸ್ಕೂಲ್ ಹೊರಗೆಯೂ ಸಹಾ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಜೀವನದಿ ಕಾವೇರಿಯ ನೀರು ಹಂಚಿಕೆಯ ವಿಷಯದಲ್ಲಿ ಪದೇ ಪದೇ ವ್ಯಾಜ್ಯಗಳು ನಡೆಯುತ್ತಲೇ ಇದ್ದು ಈ ಎರಡೂ ರಾಜ್ಯಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ಸಾಂಕೇತಿಕ ಪ್ರಯತ್ನವಾಗಿ ಕನ್ನಡದ ಕವಿ ಸರ್ವಜ್ಞನ ಪ್ರತಿಮೆ  ತಮಿಳುನಾಡಿನಲ್ಲೂ ಮತ್ತು ತಮಿಳರ ತಿರುವಳ್ಳುವರ್ ಅವರ ಪ್ರತಿಮೆಯನ್ನು ಕರ್ನಾಟಕದಲ್ಲಿ ನಿರ್ಮಿಸಲು  ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು  ತೀರ್ಮಾನಿಸಿ ಪ್ರತಿಮೆಗಳನ್ನು ನಿರ್ಮಾಣ ಮಾಡಿದರೂ ಅದರ ಅನಾವರಣ ಕುರಿತಾಗಿ ಭಾರೀ ಪ್ರತಿಭಟನೆಗಳು ನಡೆದು ಅಂತಿಮವಾಗಿ  ಆಗಸ್ಟ್ 2009 ರಲ್ಲಿ ಎರಡೂ ಪ್ರತಿಮೆಗಳನ್ನೂ ಅನಾವರಣಗೊಳಿಸಲಾಯಿತು.

ಬೆಂಗಳೂರಿನ  ಹಲಸೂರು ಸರೋವರದ ದಡದಲ್ಲಿರುವ ಚಿಕ್ಕ ಉದ್ಯಾನದಲ್ಲಿ ಅಂದಿನ ತಮಿಳುನಾಡು ಮುಖ್ಯಮಂತ್ರಿಗಳಾಗಿದ್ದ ಶ್ರೀ ಎಂ. ಕರುಣಾನಿಧಿ ಮತ್ತು ಕರ್ನಾಟಕದ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ.ಎಸ್. ಯಡಿಯೂರಪ್ಪನವರ ಸಮ್ಮುಖದಲ್ಲಿ 9 ಆಗಸ್ಟ್ 2009 ರಂದು ತಿರುವಳ್ಳುವರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಅದರ ನಿರ್ವಹಣೆಯನ್ನು ಬೆಂಗಳೂರು ತಮಿಳು ಸಂಗಮ್ ವಹಿಸಲಾಗಿದೆ.

ಅದೇ ರೀತಿಯಲ್ಲಿ ಇದೇ ಇಬ್ಬರು ಮುಖ್ಯಮಂತ್ರಿಗಳ ಸಾರಥ್ಯದಲ್ಲೇ ಚೆನ್ನೈನ ಅಯನಾವರಂ ಉದ್ಯಾನವನದಲ್ಲಿ ಸರ್ವಜ್ಞ ಪ್ರತಿಮೆಯನ್ನು ಅನಾವರಣಗೊಳಿಸಿ ಅದರ ನಿರ್ವಹಣೆಯನ್ನು ಭಾರತೀಯ ಜೀವ ವಿಮಾ ನಿಗಮವು ವಹಿಸಿಕೊಳ್ಳುವ ಮೂಲಕ ಎರಡೂ ರಾಜ್ಯಗಳ ನಡುವೆ ಭಾವೈಕ್ಯತೆಯನ್ನು ತರಲು ಮುಂದಾಗಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ.  ಒಳ್ಳೆಯ ವಿಷಯಗಳು ಯಾವುದೇ ಭಾಷೆಯಲ್ಲಿ ಯಾರೇ ಬರೆದಿದ್ದರೂ ಅದನ್ನು ಓದಿ ಅರ್ಥೈಸಿಕೊಂಡು ಅದರ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮವಾದ ಮಾರ್ಗವಾಗಿದೆ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಇದೇ ಲೇಖನ ವಿಶ್ವ ಸಂವಾದ ಕೇಂದ್ರದಲ್ಲೂ ಪ್ರಕಟವಾಗಿದೆ

ಮಹಾನ್ ಸಾಹಿತಿ ತಿರುವಳ್ಳುವರ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s