ಶತಮಾನಂ ಭವತಿ ಶತಾಯುಃ ಪುರುಷಃ ಶತೇಂದ್ರಿಯ ಆಯುಷ್ಯೇವೇನ್ದ್ರಿಯೇಃ ಪ್ರತಿತಿಷ್ಠಿ || ಸಾಮಾನ್ಯವಾಗಿ ನಾವು ನಮ್ಮ ಹಿರಿಯರಿಗೆ ವಂದಿಸಿದಾಗ ಅವರುಗಳಿಂದ ಈ ಆಶೀರ್ವಚನವನ್ನು ಕೇಳಿರುತ್ತೇವೆ. ನಮಗೆ ಆಶೀರ್ವಾದ ಮಾಡುತ್ತಿರುವ ಆ ಹಿರಿಯರು ನಮ್ಮ ಜೀವಿತಾವಧಿಯು 100 ವಸಂತಗಳನ್ನು ಕಾಣುವಂತಾಗಲೀ ಎಂದಷ್ಟೇ ಹೇಳದೇ ಆ ಜೀವಿತಾವಧಿಯಲ್ಲಿ ನಮ್ಮ ಇಂದ್ರೀಯಗಳೆಲ್ಲವೂ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಮೂಲಕ ಸುಖಃವಾದ ಜೀವನವನ್ನು ನಡೆಸುವಂತಾಗಲಿ ಎಂದು ಹಾರೈಸುತ್ತಾರೆ. ತಲ ತಲಾಂತರಗಳಿಂದಲೂ ಈ ರೀತಿಯ ಆಶೀರ್ವಚನ ಮತ್ತು ಸಂದರವಾದ ಆಹಾರ ಪದ್ದತಿಯ ಜೊತೆಗೆ ಆರೋಗ್ಯಕರ ಜೀವನ ಶೈಲಿಗಳಿಂದಲೇ ನಮ್ಮ ಪೂರ್ವಜರ ಸರಾಸರಿ ಆಯಸ್ಸು 100-120 ಇರುತ್ತಿದ್ದದ್ದನ್ನು ನಾವು ಕೇಳಿದ್ದೇವೆ ಮತ್ತು ಇಂದಿಗೂ ಕೆಲವು ಬೆರಳಣೆಕೆಯ ಶತಾಯುಷಿಗಳನ್ನು ನೋಡುತ್ತಿದ್ದೇವೆ.
ಆದರೆ ಇತ್ತೀಚಿನ ದಿನಗಳಲ್ಲಿ ಹಲವರಿಗೆ 30-40 ವರ್ಷದೊಳಗೇ ನಾನಾ ರೀತಿಯ ಖಾಯಿಲೆ, ಖಿನ್ನತೆಗಳಿಗೆ ಒಳಗಾಗಿ ಅಲ್ಪಾಯುಷಿಗಳಾಗಿಯೇ ಹೋಗುತ್ತಿರುವುದು ನಿಜಕ್ಕೂ ಅಚ್ಚರಿಯ ಮತ್ತು ಬೇಸರದ ಸಂಗತಿಯಾಗಿದೆ. ಅಂದು ನಮ್ಮ ಪೂರ್ವಜರಿಗೆ ಯಾವುದೇ ಖಾಯಿಲೆ ಮತ್ತು ಕಸಾಲೆಗಳು ಇಲ್ಲದೇ ಶತಾಯುಷಿಗಳಾಗಿ ಐದಾರು ತಲೆಮಾರುಗಳನ್ನು ನೋಡುತ್ತಿದ್ದರೆ, ಇಂದು ಇಷ್ಟೆಲ್ಲಾ ಆಧುನಿಕ ವೈದ್ಯಕೀಯಯ ಸೌಲಭ್ಯಗಳು ಇದ್ದರೂ ಮೂರನೇ ತಲಮಾರನ್ನೂ ಸಹಾ ನೋಡಲಾಗದಂತಹ ಅಲ್ಪಾಯುಷಿಗಳಾಗುತ್ತಿರುವುದಕ್ಕೆ ಕಾರಣ ಏನು? ಎಂದು ಹುಡುಕಿದಲ್ಲಿ ಥಟ್ ಅಂತಾ ಮನಸ್ಸಿಗೆ ಬರುವುದೇ ಅನಗತ್ಯ ಒತ್ತಡ, ಬದಲಾದ ಜೀವನ ಶೈಲಿ, ಆಹಾರ ಪದ್ದತಿ, ದೇಹವನ್ನು ದಂಡಿಸದೇ ಇರುವುದೇ ಕಾರಣ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಹಿಂದೆ ಅವಿಭಕ್ತ ಕುಟುಂಬಗಳಿದ್ದು, ಮನೆಯಲ್ಲಿ ಎಲ್ಲರೂ ಇದ್ದದ್ದರಲ್ಲೇ ಕಷ್ಟ ಸುಃಖ ಎಲ್ಲವನ್ನೂ ಹಂಚಿಕೊಂಡು ಸಂತೋಷದಿಂದ ಜೀವಿಸುತ್ತಿದ್ದರು. ಅದೇ ರೀತಿ ಹಿಂದೆ ಎಲ್ಲರ ಮನೆಗಳು ಚಿಕ್ಕದಿರುತ್ತಿದ್ದಾದರೂ, ಮನಸ್ಸು ಮಾತ್ರಾ ದೊಡ್ಡದಾಗಿರುತ್ತಿತ್ತು. ಆದರೆ ಇಂದು ಬಹುತೇಕರ ಮನೆಗಳು ದೊಡ್ಡದಾಗಿರುತ್ತವಾದರೂ, ಮನಸ್ಸುಗಳು ಸಂಕುಚಿತವಾಗುತ್ತಿರುವುದು ಆಯಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹಿಂದೆ ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟಕ್ಕೆ ಮಾತ್ರಾ ದುಡಿಯುತ್ತಿದ್ದರು ಮತ್ತು ಆಹಾರವನ್ನು ಸೇವಿಸುತ್ತಿದ್ದರು. ಆದರೆ ಇಂದು ತನಗೂ ಇರಲಿ ತನ್ನ ಮೂರ್ನಾಲ್ಕು ತಲೆಮಾರಿಗೂ ಇರಲಿ ಎಂದು ಸಿಕ್ಕಾ ಪಟ್ಟೆ ದುಡಿಯಲು ಹೋಗಿ ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಮೊತ್ತದ ದೊಡ್ಡ ಜವಾಬ್ಧಾರಿಯ ಹುದ್ದೆಗಳನ್ನು ಅಲಂಕರಿಸಿ ಆ ಕೆಲಸದ ಒತ್ತಡಗಳನ್ನು ತಡೆಯಲಾರದೇ ದುಶ್ಚಟಗಳಿಗೆ ಬಲಿಯಾಗಿಯೋ ಇಲ್ಲವೇ ಖಿನ್ನತೆಗೆ ಒಳಗಾಗುತ್ತಿರುವುದು ಸಹಾ ಅಲ್ಪಾಯುಷ್ಯಕ್ಕೆ ಕಾರಣವಾಗಿದೆ.
ಹಿಂದೆ ಮಕ್ಕಳು ಆರಾಮವಾಗಿ ಐದಾರು ವರ್ಷಗಳ ಕಾಲ ಅಮ್ಮನ ಎದೆಹಾಲನ್ನು ಕುಡಿಯುತ್ತಾ, ಅಜ್ಜಾ ಅಜ್ಜಿಯರ ಆಶ್ರಯದಲ್ಲಿ ವೀರಪುರುಷರ, ಪೌರಾಣಿಕ ಕಥೆಗಳನ್ನು ಕೇಳುತ್ತಾ ಪ್ರಕೃತಿಯ ಮಡಿಲಲ್ಲಿ ಆಟವಾಡುತ್ತಾ ತಮ್ಮ ಬಾಲ್ಯವನ್ನು ಕಳೆಯುತ್ತಾ, ಆರಾಮಾಗಿ 7-8 ನೇ ವಯಸ್ಸಿನಲ್ಲಿ ಗುರುಕುಲ/ಶಾಲೆಗೆ ಸೇರಿ ಶಿಕ್ಷಣ ಪಡೆಯುತ್ತಿದ್ದರು. ಅಂದೆಲ್ಲಾ ಶಿಕ್ಷಣ ಎನ್ನುವುದು ದೈನಂದಿನ ವ್ಯವಹಾರಕ್ಕೆ ಅವಶ್ಯಕವಿದ್ದ ಜ್ಞಾನಾರ್ಜನೆಯ ಸಾಧನವಾಗಿತ್ತೇ ಹೊರತು ಅವರೆಂದೂ ಅಂಕಗಳ ಹಿಂದೆ ಬಿದ್ದಿರಲಿಲ್ಲ. ಇನ್ನು ಮನೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿಯೇ ಹಾಡು ಹಸೆ, ಸಂಗೀತ, ನೃತ್ಯ, ದೇವರ ಪೂಜೆ, ಭಜನೆಗಳು ಎಲ್ಲವೂ ನಡೆಯುತ್ತಿದ್ದರಿಂದ ಆಟ ಪಾಠಗಳ ಜೊತೆಯಲ್ಲಿಯೇ ಸಂಗೀತ ಮತ್ತು ಸಾಹಿತ್ಯಗಳು ಕರಗತವಾಗಿರುತ್ತಿತ್ತು. ಆದರೆ ಇಂದು ಮಕ್ಕಳಿಗೆ 2-3 ವರ್ಷಗಳು ಆಗುತ್ತಿದ್ದಂತೆಯೇ, ಪ್ರೀ ನರ್ಸರಿ, ನಂತರ ನರ್ಸರಿ ಎಂದು ನಾಲ್ಕು ಗೋಡೆಗಳ ನಡುವೆ ಕಟ್ಟಿ ಹಾಕಿ, ಕೂಲಿಯವರಂತೆ ಮಣಗಟ್ಟಲೆ ಪುಸ್ತಕಗಳ ಚೀಲವನ್ನು ಹೊರುತ್ತಾ ಶಾಲೆಗೆ ಹೋಗುವುದಲ್ಲದೇ ತಿಂಗಳು ತಿಂಗಳು ನಡೆಸುವ ಪರೀಕ್ಷೆಗಳಲ್ಲಿ ಅಂಕಗಳು ಗಳಿಸಬೇಕು ಎನ್ನುವ ಭಯದ ವಾತಾವರಣದಿಂದಾಗಿಯೇ ಸಣ್ಣ ವಯಸ್ಸಿನಲ್ಲಿಯೇ ಮಕ್ಕಳು ಒತ್ತಡಕ್ಕೆ ಒಳಗಾಗುವುದಲ್ಲದೇ ಖಿನ್ನತೆಗೂ ಸಹಾ ಒಳಗಾಗುತ್ತಿರುವುದೂ ಅಲ್ಪಾಯುಷ್ಯಕ್ಕೆ ಕಾರಣವಾಗುತ್ತಿದೆ.
ಇನ್ನು ಮಾನವ ದೇಹದಲ್ಲಿನ ಟ್ರಿಲಿಯನ್ಗಟ್ಟಲೆ ಜೀವಕೋಶಗಳಿಗೆ ವಿವಿಧ ಆಹಾರಗಳು ಮತ್ತು ಪೋಷಕಾಂಶಗಳು ಬೇಕಾಗುತ್ತವೆ. ಹಾಗಾಗಿ ಅದರ ಅವಶ್ಯಕತೆಯನ್ನು ಪೂರೈಸುವ ಸಲುವಾಗಿಯೇ ಭಾರತೀಯ ಆಡುಗೆಯಲ್ಲಿ ವಿವಿಧ ಮಸಾಲೆಗಳನ್ನು ಒಳಗೊಂಡಿದ್ದು ಅವುಗಳು ಆಹಾರದಲ್ಲಿ ವೈವಿಧ್ಯತೆಯನ್ನು ಒದಗಿಸುವುದಲ್ಲದೇ, ಅದರಲ್ಲಿರುವ ಪ್ರತಿಯೊಂದು ಮಸಾಲೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು ಅವರುಗಳ ಜೊತೆ ವಿವಿಧ ತರಕಾರಿಗಳನ್ನು ಸೇರಿಸುವುದರ ಮೂಲಕ ಆರೋಗ್ಯಕರ ಜೀವನವನ್ನು ಮಾಡಬಹುದಾಗಿದೆ. ಆದರೆ ಇಂದು ಅಂತಹ ಅಹಾರಕ್ಕೇ ಸಂಚಕಾರ ಬಿದ್ದು ಎಲ್ಲರೂ ಜಂಕ್ ಫುಡ್ ಹಿಂದೆ ಬಿದ್ದಿರುವುದೂ ಸಹಾ ಅಲ್ಪಾಯುಷ್ಯಕ್ಕೆ ಕಾರಣವಾಗಿದೆ.
ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಅಧಿಕ ಅಹಾರವನ್ನು ಬೆಳೆಯುವ ಸಲುವಾಗಿ 1960ರ ದಶಕದಲ್ಲಿ ಭಾರತದಲ್ಲಿ ಆರಂಭಿಸಿದ ಹಸಿರುಕ್ರಾಂತಿಯಿಂದಾಗಿ ಕೃಷಿಕರು ಅಧಿಕ ಇಳುವರಿಯನ್ನು ಪಡೆಯುತ್ತಿದ್ದಾರಾದರೂ, ಆ ಆಹಾರವನ್ನು ಸೇವಿಸುವವರ ಜೀವನಕ್ಕೆ ಮಾರಕವಾಗಿದೆ. ಆಧುಕಿನ ಕೃಷಿ ತಂತ್ರಜ್ಞಾನದ ಹೆಸರಿನಲ್ಲಿ ಪಾರಂಪರಿಕ ಸಾವಯವ ಕೃಷಿಯನ್ನು ಬದಿಗಿಟ್ಟು ಕೃಷಿಯನ್ನೂ ಸಹಾ ಕೈಗಾರಿಕಾ ವ್ಯವಸ್ಥೆಯಾಗಿ ಪರಿವರ್ತಿಸಿ, ಎಗ್ಗಿಲ್ಲದೇ ಕೃತಕ ರಸಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆಯಿಂದಾಗಿ ನೈಸರ್ಗಿಕವಾಗಿ ಫಲವತ್ತಾಗಿದ್ದ ಭೂಮಿಗೆ ಕೃತಕ ರಾಸಾಯನಿಕಗಳನ್ನು ಬಳಸುವ ಮೂಲಕ ಜಮೀನು ವಿಷಕಾರಿಯಾಗಿದ್ದಲ್ಲದೇ ಆ ವಿಷ ಆಹಾರದ ಮೂಲಕ ನೇರವಾಗಿ ಜನರ ದೇಹವನ್ನು ತಲುಪುತ್ತಿರುವ ಕಾರಣ, ಮನುಷ್ಯರ ಸಹಜ ರೋಗನಿರೋಧಕ ಶಕ್ತಿ ಎಲ್ಲವೂ ಮಾಯವಾಗಿ ಸಣ್ಣ ವಯಸ್ಸಿನಲ್ಲೇ ವಿವಿಧ ರೋಗಗಳಿಗೆ ತುತ್ತಾಗಿ ಅಲ್ಪಾಯುಷಿಗಳಾಗುತ್ತಿರುವುದು ನಿಜಕ್ಕೂ ದುರಾದೃಷ್ಟಕರ. ಇನ್ನು ಹೈನುಗಾರಿಕೆಯಲ್ಲಿಯೂ ಸಹಾ ದೇಸೀ ಹಸುಗಳ ಬದಲು ಅಧಿಕ ಹಾಲು ಕೊಡುವ ಜರ್ಸಿ ಹಸುಗಳನ್ನು (ಹಸು ಮತ್ತು ಹಂದಿಯ ಕುಲಾಂತರಿ ತಳಿ) ಸಾಕುವ ಮೂಲಕ ಆ ಹಾಲೂ ಸಹಾ ಸಣ ವಯಸ್ಸಿನ ಕೂಸಿನ ಆರೋಗ್ಯದ ಮೇಲೆ ಭಾರೀ ಪರಿಣಾಮವನ್ನು ಬೀರಲಾರಂಭಿಸಿದೆ. ಇನ್ನು ಸಾಂಪ್ರದಾಯಿಕ ಗಾಣದ ಎಣ್ಣೆಯ ಬದಲಾಗಿ ರೀಫೈಂಡ್ ಎಣ್ಣೆ, ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ಡಾಲ್ಡ ಅಲ್ಲದೇ ಕಚ್ಚಾ ಪೆಟ್ರೋಲನ್ನು ಡೀಸಲ್ ಮತ್ತು ಪಟ್ರೋಲ್ ಗಳಾಗಿ ಪರಿವರ್ತಿಸಿ ಅದರಿಂದ ಹೊರಬರುವ ಎಣ್ಣೆಯ ರೂಪದ ಮಾರಕ ಲಿಕ್ವಿಡ್ ಪ್ಯಾರಾಫೀನ್ ಗಳಿಗೆ ಕೃತಕವಾದ ಬಣ್ಣ ಮತ್ತು ರುಚಿ ಬೆರೆಸಿ ಮಾರುವ ಎಣ್ಣೆಯ ಸೇವನೆಯಿಂದಾಗಿಯೇ ಅಧಿಕ ರಕ್ತದೊತ್ತಡ, ಮಧುಮೇಹಕ್ಕೆ ತುತ್ತಾಗುತ್ತಿರುವುದಲ್ಲದೇ, ಹೆಣ್ಣುಮಕ್ಕಳು 8-10 ವರ್ಷಗಳಿಗೇ ಋತುಮತಿಯಾಗಿ ನಂತರ ಸಣ್ಣ ವಯಸ್ಸಿಗೇ ಮುದುಕಿಯರಂತಾಗುತ್ತಿರುವುದೂ ಸಹಾ ಕಳವಳಕಾರಿಯಾಗಿದೆ ಸಹಾ ಕಳವಳಕಾರಿಯಾಗಿದೆ.
ದೈನಂದಿನ ಬಳಕೆಗಾಗಿ ನಾವು ಬಳಸುತ್ತಿರುವ ಚಪ್ಪಲಿ ಮತ್ತು ಶೂಗಳು ಸಹಾ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದರೆ ಅಚ್ಚರಿಯಾಗಬಹುದು. ನಮ್ಮ ದೇಹದ ತೂಕವನ್ನು ಹೊರುವ ಕಾಲ್ಗಳಲ್ಲಿ ಇಡೀ ದೇಹದ ಎಲ್ಲಾ ಕಡೆಗೂ ಇರುವ ನರಮಂಡಲದ ಸಂಪರ್ಕವಿದ್ದು ನಮ್ಮ ಪ್ರತಿಯೊಂದು ಕಾಲ್ಬೆರಳ ಮೂಲಕ ದೇಹದ ನಾನಾ ಭಾಗಗಳ ನೋವುಗಳನ್ನು ನಿವಾರಿಸಬಹುದಾಗಿದೆ.
ಹಿಂದಿನ ಕಾಲದ ಜನರು ಬರಿಗಾಲಿನಲ್ಲಿ ನಡೆಯುವಾಗ ಅವರ ಪಾದ ಮತ್ತು ಕಾಲ್ಬೆರಳುಗಳ ವಿವಿಧ ಕಡೆಗೆ, ಕಲ್ಲು ಮುಳ್ಳುಗಳು ಒತ್ತುವ ಮೂಲಕ ದೇಹದ ಪ್ರತಿಯೊಂದು ನರನಾಡಿಗಳೂ ಸಂವಹನಗೊಂಡು ಸಕ್ರೀಯವಾಗಿರುತ್ತಿದ್ದವು. ಅದೇ ರೀತಿಯಾಗಿ ಬರಿಗಾಲಿನ ನಡಿಗೆಯ ಮೂಲಕ ಭೂಮಿಯನ್ನು ಸ್ಪರ್ಷಿಸುವುದರಿಂದ ಬಿಳಿ ರಕ್ತ ಕಣಗಳಲ್ಲಿ ಕಡಿತ ಮತ್ತು ಕೆಂಪು ರಕ್ತ ಕಣಗಳ ಹೆಚ್ಚಳ ಆಗುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಿತ್ತು. ಅದೇ ರೀತಿ ಬರಿಗಾಲಿನ ನಡಿಗೆಯು ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ನಿದ್ರೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ವೈಜ್ಞಾನಿಕವಾಗಿ ಧೃಢಪಟ್ಟಿದೆ. ದುರಾದೃಷವಷಾತ್ ಇಂದು ಮನೆಯ ಹೊರಗೆ ಬಿಡಿ, ಮನೆಯಲ್ಲೂ ಸಹಾ ಚಪ್ಪಲಿಗಳನ್ನು ಧರಿಸಿಕೊಂಡು ಓಡಾಡುವುದು ಐಶಾರಾಮ್ಯ ಎಂದು ಭಾವಿಸಿರುವುದದಿಂದಲೂ ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಿ ಅಲ್ಪಾಯುಷ್ಯಕ್ಕೆ ಕಾರಣವಾಗುತ್ತಿದೆ.
ಇನ್ನು ಕುಡಿಯಲು ಶುದ್ಧವಾಗಿದ್ದ ಹಳ್ಳ ಕೊಳ್ಳ ಮತ್ತು ನದಿಗಳಿಗೆ ಕೈಗಾರಿಕೆಗಳ ತ್ಯಾಜ್ಯ ಮತ್ತು ನಗರದ ಕೊಳಚೇ ನೀರನ್ನು ಹರಿಸುವುದರ ಮೂಲಕ ಕುಡಿಯುವ ನೀರನ್ನು ಸಹಾ ಹಾಳು ಮಾಡಿರುವುದು ಮತ್ತೊಂದು ಆಘಾತಕಾರಿ ಸಂಗತಿಯಾಗಿದೆ. ಅದೇ ರೀತಿ ಮಣ್ಣು, ತಾಮ್ರ, ಹಿತ್ತಾಳೆ, ಪಂಚಲೋಹ ಮತ್ತು ಬೆಳ್ಳಿಯಿಂದ ಮಾಡಿದ ಲೋಹಗಳಿಂದ ಮಾಡಿದ್ದ ಪಾತ್ರೆಗಳ ಜಾಗದಲ್ಲಿ ಬಳಸು ಮತ್ತು ಬಿಸಾಡು ಎಂಬ ರೂಪದಲ್ಲಿ ಪ್ಲಾಸ್ಟಿಕ್ ಪಾತ್ರೆಗಳ ಬಳಕೆ, ಓವನ್ ಬಳಕೆ, ಪ್ಲಾಸ್ಟಿಕ್ ಮಿಶ್ರಿತ ಪೇಪರ್ ಕಪ್ ಪ್ಲಾಸ್ಟಿಕ್ ಚಮಚ ಮುಂತಾದವುಗಳನ್ನು ಬಳಸುವ ಮೂಲಕ ಅರೋಗ್ಯವನ್ನು ಮತ್ತಷ್ಟೂ ಹಾಳು ಮಾಡುತ್ತಿದ್ದೇವೆ.
ಹಾಗಾದರೇ ಇದಕ್ಕೆಲ್ಲಾ ಪರಿಹಾರವೇ ಇಲ್ಲವೇ? ಎಂದು ಕೇಳಿದರೆ ಖಂಡಿತವಾಗಿಯೂ ಪರಿಹಾರವಿದೆ. ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬಂತೆ ಪರಿಹಾರವನ್ನು ಕಂಡು ಕೊಳ್ಳಲು ಮನಸ್ಸು ಮಾಡಬೇಕಷ್ಟೇ. ಭಾರತ ಕೃಷಿ ಪ್ರಧಾನವಾದ ದೇಶವಾಗಿದ್ದು ರೈತನೇ ಈ ದೇಶದ ಬೆನ್ನಲುಬಾಗಿದ್ದಾನೆ. ಹಾಗಾಗಿ ಸ್ಥಳೀಯ ಚಿಂತನೆ, ಸ್ಥಳೀಯ ಮಾರುಕಟ್ಟೆ ಮತ್ತು ದೇಶದ ಸ್ಥಳೀಯ ಆರ್ಥಿಕ ಅಭಿವೃದ್ಧಿಯ ಎಂಬ ಸ್ವದೇಶಿ ಪರಿಕಲ್ಪನೆಯನ್ನು ಹೆಚ್ಚು ಪ್ರಚುರ ಪಡಿಸುವ ಮೂಲಕ ಸಾವಯವ ಕೃಷಿಗೆ ಒತ್ತು ಕೊಟ್ಟು ಕೃತಕ ರಾಸಾಯನಿಕ ಗೊಬ್ಬರಗಳಿಂದ ಬರಡಾಗಿರುವ ಭೂಮಿಯನ್ನು ಮತ್ತು ಫಲವತ್ತತೆ ಮಾಡುವ ಮೂಲಕ ಆರೋಗ್ಯಕರವಾದ ಆಹಾರವನ್ನು ಬೆಳೆಯಬಹುದಾಗಿದೆ.
ಸದ್ಯದ ಪಾಶ್ಚಾತ್ಯ ರೀತಿಯ ಜೀವನ ಶೈಲಿಯನ್ನು ಪಕ್ಕಕ್ಕಿಟ್ಟು ನಮ್ಮ ಪೂರ್ವಜರು ನಡೆಸಿಕೊಂಡು ಬರುತ್ತಿದ್ದ ಸ್ವದೇಶಿ ಜೀವನಶೈಲಿಯ ಉಡುಗೆ, ತೊಡುಗೆ ಆಹಾರ ಪದ್ದತಿಯನ್ನು ಆಳವಡಿಸಿಕೊಳ್ಳುವ ಮೂಲಕ ಆರೋಗ್ಯವಾಗಿ ಇರಬಹುದಾಗಿದೆ. ಸಣ್ಣ ಪುಟ್ಟ ಖಾಯಿಲೆಗಳಿಗೂ antibiotic ಮಾತ್ರೆಗಳನ್ನು ಸೇವಿಸಿ ನಂತರ ದೇಹದ ಮೇಲಾಗುವ ಅಡ್ಡ ಪರಿಣಾಮವನ್ನು ತಡೆಯುವ ಸಲುವಾಗಿ ಮನೆಯಲ್ಲೇ ಇರುವ ಸುಲಭವಾದ ಮನೆ ಮದ್ದು ಮತ್ತು ಆಯುರ್ವೇದ ಪದ್ದತಿಯನ್ನು ಅಳವಡಿಸಿಕೊಳ್ಳುವುದು ಉತ್ತಮ ಪರಿಹಾರವಾಗಿದೆ.
ದೇಹಕ್ಕೆ ಮಾರಕವಾದ ಮೈದಾ ಹಿಟ್ಟಿನಿಂದ ತಯಾರಿಸಿದ ಬೇಕರಿ ಪದಾರ್ಥಗಳು, ಹೊರಗಿನ ಸೋಡ ಹಾಕಿದ ಆಹಾರ, ಆಹಾರದ ರುಚಿಯನ್ನು ಹೆಚ್ಚಿಸಲು ಬಳಸುವ ಟೇಸ್ಟ್ ಮೇಕರ್ ಅಜಿನೋಮೋಟೋ ಮತ್ತು ಕೃತಕ ಬಣ್ಣ ಹಾಕಿದ ಚೈನೀಸ್ ಫಾಸ್ಟ್ ಫುಡ್, ಜಂಕ್ ಫುಡ್ ಮುಂತಾದವುಗಳನ್ನು ತಿನ್ನುವ ಮೂಲಕ ದೇಹದ ಕೊಬ್ಬು ಹೆಚ್ಚಾಗಿ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗಕ್ಕೆ ತುತ್ತಾಗುವ ಬದಲು, ಮನೆಯಲ್ಲೇ ಆಯಾಯಾ ಪ್ರಾಂತಕ್ಕೆ ಅನುಗುಣವಾದ ಸಾಂಪ್ರದಾಯಕ ಅಡುಗೆಯನ್ನು ಸೇವಿಸುವುದು ಉತ್ತಮವಾಗಿದೆ.
ಹಿಂದಿನ ಕಾಲದಲ್ಲಿ ಬಹುತೇಕರು ಸೂರ್ಯೋದಯಕ್ಕೆ ಸರಿಯಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರಿಂದ ಬೆಳಗಿನ ಸೂರ್ಯ ಕಿರಣದಲ್ಲಿರುವ ವಿಟಮಿನ್ ಡಿ ಹೇರಳವಾಗಿ ಲಭ್ಯವಾಗುತ್ತಿತ್ತು. ಆದರೆ ಇಂದು ಬಹುತೇಕರು ನಿಶಾಚರರ ರೀತಿಯಲ್ಲಿ ಜೀವನ ಶೈಲಿಯನ್ನು ಅಳವಡಿಸಿಕೊಂಡು ಹೊತ್ತಲ್ಲದ ಹೊತ್ತಿನಲ್ಲಿ ಮಲಗುವುದು ಮತ್ತು ಏಳುವುವ ಮೂಲಕ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸಾಧ್ಯವಾದಷ್ಟು ಹವಾನಿಯಂತ್ರಿತ ನಾಲ್ಕು ಗೋಡೆಗಳ ಮಧ್ಯೆ ಹೆಚ್ಚಿನ ಕಾಲ ಕಳೆಯುವ ಬದಲು ಬೆಳಗಿನ ಹೊತ್ತು ಸೂರ್ಯನ ಬೆಳಕಿನಲ್ಲಿದ್ದು ಸಧೃಢತೆ ಪಡೆಯಬಹುದಾಗಿದೆ. ಅದೇ ರೀತಿ ಜೀವ ಇದ್ದಲ್ಲಿ ಮಾತ್ರವೇ ಜೀವನ. ದೇಹ ಸಧೃಢವಾಗಿದ್ದಲ್ಲಿ ಮಾತ್ರವೇ ಸದೃಢ ದೇಶ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಾದ್ಯವಾದಷ್ಟೂ ದೇಹವನ್ನು ದಂಡಿಸುವ ಮೂಲಕ ಸಧೃಡವಾಗಿ ದೀರ್ಘಾಯುಷ್ಯವನ್ನು ಪಡೆಯ ಬಹುದಾಗಿದೆ.
ದೇಹ ದಂಡನೆ ಎಂದರೆ ಹಿಂದಿನ ಕಾಲದಂತೆ ಗರಡಿ ಮನೆಯಲ್ಲಿ ಕುಸ್ತಿ ಮಾಡಬೇಕು, ಭಾರ ಎತ್ತ ಬೇಕು ಇಲ್ಲವೇ ಇಂದಿನ ಕಾಲದಂತೆ ಸಾವಿರಾರು ರೂಪಾಯಿ ಖರ್ಚು ಮಾಡಿ ಮಲ್ಟಿ ಜಿಮ್ ಸೇರಿಕೊಳ್ಳಬೇಕು ಎಂದೇನಿಲ್ಲ. ಸರಳವಾಗಿ ಪ್ರತಿದಿನವೂ ಸುಮಾರು ಅರ್ಧ ಇಲ್ಲವೇ ಒಂದು ಗಂಟೆ ಬರಿಗಾಲಿನಲ್ಲಿ ನಡೆಯುವ ಅಭ್ಯಾಸವನ್ನು ಮಾಡಿದಲ್ಲಿ ದೇಹದಲ್ಲಿ ಇನ್ಸುಲಿನ್ ಹೆಚ್ಚಾಗಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದಾಗಿದೆ. ಸುಮಾರು ಒಂದು ಕಿಮೀ ದೂರ ನಡೆದರೆ ಸರಿ ಸುಮಾರು 60-70 ಕ್ಯಾಲೋರಿಗಳನ್ನು ಸುಡಬಹುದಾಗಿದೆ. ಈ ರೀತಿ ಒಂದು ಕಿಮೀ ದೂರ ನಡೆಯಲು ಸರಿ ಸುಮಾರು 10-15 ನಿಮಿಷಗಳಾಗುತ್ತದೆ. ಹಾಗೆ ಅಷ್ಟು ದೂರ ನಡೆಯಲು ಸಾಧ್ಯವಿಲ್ಲವಾದಲ್ಲಿ, ನಮ್ಮ ಪಾರಂಪರಿಕ ಯೋಗಭ್ಯಾಸ ಮಾಡುವುದು ಮತ್ತೊಂದು ಉತ್ತಮ ಪರಿಹಾರವಾಗಿದೆ. ಅದ್ದರಲ್ಲೂ ಯೋಗ ಬದ್ಧವಾಗಿ 12 ಅಂಕಗಳ ಒಂದು ಸಂಪೂರ್ಣ ಅಷ್ಟಾಂಗ ಸೂರ್ಯ ನಮಸ್ಕಾರವನ್ನು ಕೇವಲ 1- 2 ನಿಮಿಷಗಳಲ್ಲಿ ಮಾಡುವುದರಿಂದ 14 ಕ್ಯಾಲೋರಿಗಳನ್ನು ಸುಡಬಹುದಾಗಿದೆ. ಈ ರೀತಿಯಾಗಿ ಸೂರ್ಯ ನಮಸ್ಕಾರ ಮಾಡುವ ಮೂಲಕ ಅತೀ ಕಡಿಮೆ ಸಮಯದಲ್ಲಿ ಅತೀ ಹೆಚ್ಚಿನ ಕ್ಯಾಲೋರಿಗಳನ್ನು ಸುಡಬಹುದಾದ ಅತ್ಯುತ್ತಮವಾದ ವ್ಯಾಯಾಮವಾಗಿರುವುದರಿಂದ ಸಧೃಢವಾಗಿ ಆರೋಗ್ಯಕರವಾಗುವ ಮೂಲಕ ದೀರ್ಘಾಯುಷ್ಯವನ್ನು ಪಡೆಯಬಹುದಾಗಿದೆ.
ಇಂದಿನ ಕಾಲದಲ್ಲಿ ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ಅಸಾಧ್ಯದಲ್ಲಿರುವ “ಅ” ತೆಗೆದು ಹಾಕಿದಲ್ಲಿ “ಸಾಧ್ಯ” ಎಂದಾಗುತ್ತದೆ. ಹಾಗೆ ಅಸಾಧ್ಯದಿಂದ ಅ ತೆಗೆದು ಹಾಕುವ ಮನಸ್ಸು ಮಾಡಬೇಕಷ್ಟೇ.
ಏನಂತೀರೀ?
ನಿಮ್ಮವನೇ ಉಮಾಸುತ
ಇದೇ ಲೇಖನ 2023 ರ ಫೆಬ್ರವರಿ ತಿಂಗಳಿನ ಸಂಪದ ಸಾಲು ಪತ್ರಿಕೆಯಲ್ಲಿ ಪ್ರಕಟವಾಗಿದೆ