ಬೆಳ್ಳಂಬೆಳಿಗ್ಗೆ ಪತ್ರಿಕೆ ತೆಗೆಯುತ್ತಿದ್ದಂತೆಯೇ ಈ ಸುದ್ದಿ ಕೇಳಿ ಒಂದು ರೀತಿಯ ಅಚ್ಚರಿಯ ಜೊತೆಗೆ ಆ ರೀತಿಯ ದಿಟ್ಟತನವನ್ನು ತೋರಿಸಿದ ಆ ವ್ಯಕ್ತಿಯ ಬಗ್ಗೆ ಹೆಮ್ಮೆಯೂ ಮೂಡಿತು. ಕಳೆದ ನಾಲ್ಕು ದಶಕಗಳಿಂದಲೂ ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳದ್ದೇ ಪ್ರಾಭಲ್ಯ. ಒಂದು ರೀತಿಯ ಖೋ ಖೋ ಆಟದಂತೆ ಒಮ್ಮೆ ಡಿ.ಎಂ.ಕೆ ಅಭೂತಪೂರ್ವವಾಗಿ ಆಡಳಿತಕ್ಕೆ ಬಂದರೆ ಮತ್ತೊಮ್ಮೆ ಎಐಎಡಿಎಂಕೆ ಭಾರೀ ಬಹುಮತದೊಂದಿಗೆ ಆಳ್ವಿಕೆ ಬರುತ್ತದೆಯಾದರೂ ರಾಜ್ಯದ ಅಭಿವೃದ್ದಿಯ ವಿಷಯಕ್ಕೆ ಬಂದಲ್ಲಿ ಎರಡೂ ಪಕ್ಷಗಳ ಕೊಡುಗೆ ಅಷ್ಟಕಷ್ಟೇ ಆದರೂ ಆ ಎರಡೂ ಪಕ್ಷಗಳ ಹಿರಿಯ ನಾಯಕರುಗಳ ಆಸ್ತಿಯಂತೂ ಹತ್ತಾರು ತಲೆಮಾರಿಗೆ ಆಗುವಷ್ಟು ವೃದ್ಧಿಯಾಗಿರುವುದಂತೂ ಸುಳ್ಳಲ್ಲ.
ಈ ಎರಡೂ ದ್ರಾವಿಡ ಪಕ್ಷಗಳ ನಡುವೆ ಬಹುತೇಕ ಎಲ್ಲಾ ತಮಿಳು ಚಿತ್ರರಂಗದ ನಾಯಕರುಗಳೂ ತಮ್ಮ ತಮ್ಮ ರಾಜಕೀಯ ಪಕ್ಷಗಳನ್ನು ಕಟ್ಟಿಕೊಂಡು ಬೇಳೆ ಬೇಯಿಸಲು ಪ್ರಯತ್ನಿಸಿದರೂ, ವಿಜಯಕಾಂತ್ ಮೊದಲ ಚುನಾವಣೆಯಲ್ಲಿ ಎರಡಂಕಿಯ ಸ್ಥಾನಗಳನ್ನು ಗಳಿಸಿದರೂ ನಂತರ ಕಾಂಗ್ರೇಸ್ ಪಕ್ಷದಂತೆ ಆಟಕ್ಕುಂಟು ಲೆಕ್ಕಕ್ಕಿಲ್ಲಾ ಎಂದಾಗಿದ್ದಾರೆ. ಅದೇ ರೀತಿ ಸ್ವಘೋಷಿತ ಬುದ್ಧಿ ಜೀವಿ ಕಮಲಹಾಸನ್ ಸಹಾ ದೊಡ್ಡ ಮಟ್ಟದಲ್ಲಿ ಅಬ್ಬರಿಸಿದರೂ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವಾಗ, ತಮಿಳುನಾಡಿಗೆ ಈ ಎರಡೂ ದ್ರಾವಿಡ ರಾಜಕೀಯ ಪಕ್ಷಗಳ ಹೊರತಾಗಿ ಸಮರ್ಥವಾದ ಮೂರನೇ ರಾಜಕೀಯ ಪಕ್ಷದ ಅವಶ್ಯಕತೆಯ ಕೊರತೆಯನ್ನು ನೀಗಿಸಲೆಂದೇ ತಮಿಳುನಾಡಿನ ರಾಜಕಿಯದಲ್ಲಿ ಭಾರತೀಯ ಜನತಾ ಪಕ್ಷ ಧುಮುಕಿದರೂ ತಿರುಚ್ಚಿಯಿಂದ ಕುಮಾರ ಮಂಗಲಂ ಒಮ್ಮೆ ಸ್ವಂತ ಸಾಮರ್ಥ್ಯದಿಂದ ಗೆದ್ದಿದ್ದರೆ, ರಾಧಾಕೃಷ್ಣನ್ ಅವರು ಒಮ್ಮೆ ಕೊಯಂಬತ್ತೂರಿನಿಂದ ಸಾಂಸದರಾಗಿದ್ದರೆ, ಸಮರ್ಥ ನಾಯಕತ್ವವಿಲ್ಲದೇ, ಎಲೆಮರೆಕಾಯಿಯಂತಾಗಿತ್ತು.
2014ರಲ್ಲಿ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾಗಿ ಎಲ್ಲೆಡೆಯಲ್ಲೂ ಮೋದಿ ಹವಾ ಬೀಸತೊಡಗಿದಾಗ, ತಮಿಳು ನಾಡಿನ ಯುವಜನತೆಯೂ ಮೋದಿಯವರನ್ನು ಅನುಸರಿಸಲು ಮುಂದಾದರೂ, ಬಿಜೆಪಿಯನ್ನು ತಮಿಳುನಾಡಿನಲ್ಲಿ ಸಮರ್ಥವಾಗಿ ಮುನ್ನಡೆಸಬಲ್ಲ ನಾಯಕತ್ವ ಇಲ್ಲದೇ ನಾಯಕನ ಹುಡುಕಾಟದಲ್ಲಿ ಇದ್ದಾಗ ಮೋದಿಯವರಿಗೆ ಕಣ್ಣಿಗೆ ಬಿದ್ದದ್ದೇ. ಶ್ರೀ ಅಣ್ಣಾಮಲೈ ಕುಪ್ಪುಸಾಮಿ. ತಮ್ಮ ಇಂಜಿನಿಯರಿಂಗ್ ಪದವಿಯನ್ನು ಮುಗಿಸಿದ ನಂತರ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯನ್ನು ತಮ್ಮ ಸಾಮರ್ಥ್ಯದ ಆಧಾರದ ಮೇಲೆ ಪೂರ್ಣಗೊಳಿಸಿ ಭಾರತೀಯ ಪೊಲೀಸ್ ಸೇವೆಯ ಮೂಲಕ ದೇಶ ಸೇವೆ ಮಾಡಲು ಆಯ್ಕೆಯಾದರು.
2013ರಲ್ಲಿ ಮೊದಲು ಎಸಿಪಿಯಾಗಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಅವರು ಸೇವೆ ಆರಂಭಿಸಿದ ಬಳಿಕ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಅಣ್ಣಾಮಲೈ, ಎಲ್ಲೆಡೆಯಲ್ಲೂ ತಮ್ಮ ದಕ್ಷ, ಪ್ರಾಮಾಣಿಕ ನಡೆ ಮತ್ತು ದಿಟ್ಟತನದಂದಾಗಿ ಸಮಾಜಘಾತುಕರಿಗೆ ನಡುಕವನ್ನು ತರಿಸಿದಲ್ಲದೇ ಅವರು ಸೇವೆ ಮಾಡಿದ ಕಡೆಯಲ್ಲೆಲ್ಲಾ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿದ ಕಾರಣ, ಅಣ್ಣಾಮಲೈ ಅವರನ್ನು ಜನಾ ಪ್ರೀತಿಯಿಂದ ಕರ್ನಾಟಕದ ಸಿಂಗಂ ( ಹೆಸರಾಂತ ತಮಿಳು ಚಿತ್ರವೊಂದರ ಪ್ರಾಮಾಣಿಕ ಪೋಲೀಸ್ ಅಧಿಕಾರಿಯ ಹೆಸರು) ಎಂದೇ ಕರೆಯಲಾರಂಭಿಸಿದ್ದು ಅಣ್ಣಾಮಲೈ ಅವರ ಜನಪ್ರಿಯತೆ, ಕಾರ್ಯ ತತ್ಪರತೆ ಮತ್ತು ಧಕ್ಷತೆಯನ್ನು ತೋರುತ್ತದೆ.
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದ ಅಣ್ಣಾಮಲೈ ಅವರನ್ನು ಗುರುತಿಸಿದ ಬಿಜೆಪಿ ಪಕ್ಷ, ಅವರಲ್ಲಿ ಸಮರ್ಥ ನಾಯಕತ್ವವನ್ನು ಕಂಡು 2019ರಲ್ಲಿ ನಾಗರೀಕ ಸೇವೆಗೆ ರಾಜೀನಾಮೆ ನೀಡಿಸಿ ಕೆಲ ಕಾಲ ಕುಟುಂಬದೊಂದಿಗೆ ಸಮಯವನ್ನು ಕಳೆದು 2020ರ ಆಗಸ್ಟ್ 25ರಲ್ಲಿ ಅವರು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರಿಕೊಂಡು, ಅವರನ್ನು ತಮಿಳುನಾಡು ರಾಜ್ಯ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಲ್ಲದೇ ಪ್ರಸ್ತುತ ಅವರು ತಮಿಳು ನಾಡಿನ ಬಿಜೆಪಿ ಪಕ್ಷದ ಅಧ್ಯಕ್ಷರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಐಡಿಎಂಕೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು 4 ಶಾಸಕರನ್ನು ಆಯ್ಕೆ ಮಾಡಿಸಿಕೊಂಡು ಬರುವುದರಲ್ಲಿ ಸಫಲವಾಗಿರುವುದಲ್ಲದೇ ತಮ್ಮ ಪಕ್ಷದ ಮತಗಳಿಕೆಯಲ್ಲಿ ಗಣನೀಯವಾದ ಪ್ರಮಾಣದಲ್ಲಿ ಹೆಚ್ಚಾಗುವಂತೆ ಮಾಡುವುದರಲ್ಲಿ ಅಣ್ಣಾಮಲೈ ಅವರ ಕೊಡುಗೆ ಅಪಾರವಾಗಿದೆ, ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿನಲ್ಲಿ ಸಮರ್ಥ ವಿರೋಧ ಪಕ್ಷವಾಗಿ ಹೋರಾಟ ಮಾಡುವ ಮೂಲಕ ತಮಿಳು ನಾಡಿನ ಮೂಲೆ ಮೂಲೆಗೂ ಬಿಜೆಪಿ ತಲುಪುವಂತೆ ಮಾಡುವುದರಲ್ಲಿ ಅಣ್ಣಾಮಲೈ ಅವರ ಸಾಹಸವನ್ನು ಎಲ್ಲರೂ ಮೆಚ್ಚುವಂತೆ ಮಾಡಿದೆ. ಇವರ ಹೋರಾಟಗಳನ್ನು ಹತ್ತಿಕ್ಕುವುದಕ್ಕಾಗಿಯೇ ನೂರಾರು ಕೇಸ್ ಗಳನ್ನು ಆಡಳಿತ ಪಕ್ಷ ಡಿ.ಎಂ.ಕೆ ಹಾಕುತ್ತಿದ್ದರೂ, ತಮ್ಮ ಅನುಭವದಿಂದ ಆ ಎಲ್ಲಾ ಕಾನೂನಾತ್ಮಕ ಹೋರಾಟಗಳನ್ನೂ ದಿಟ್ಟವಾಗಿ ಎದುರಿಸುತ್ತಾ, ತಮಿಳುನಾಡಿನ ಜನತೆಗೆ ದ್ರಾವಿಡ ಪಕ್ಷಗಳ ನಾಯಕರುಗಳ ಹೊರತಾದ, ಸಮರ್ಥವಾಗಿ ಮುನ್ನಡೆಸಲ್ಪಡುವ ಆಶಾಕಿರಣವಾಗಿ ಹೊರಹೊಮ್ಮುತ್ತಿದ್ದಾರೆ.
ಇವಿಷ್ಟರ ಮಧ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಕೇಂದ್ರದ ಬಿಜೆಪಿ ನಾಯಕರುಗಳು ಮುಂದಾಗಿರುವುದು ಅಣ್ಣಾಮಲೈ ಅವರನ್ನು ತೀವ್ರವಾಗಿ ಕೆರಳಿಸಿದೆ. ಅದೇ ರೀತಿ ತಮ್ಮ ಮಿತ್ರಪಕ್ಷವಾಗಿಯೇ ಕೆಲವೇ ಕೆಲವು ದಿನಗಳ ಹಿಂದೆ ಬಿಜೆಪಿಯ ಹಿರಿಯ ನಾಯಕರುಗಳನ್ನು ಎಐಎಡಿಎಂಕೆ ತನ್ನ ಪಕ್ಷಕ್ಕೆ ಸೆಳೆದು ಕೊಳ್ಳುವ ಮೂಲಕ ಮಿತ್ರದ್ರೋಹವನ್ನು ಬಗೆದಿದೆ ಎಂದು ಕಿಡಿಕಾರಿದ್ದ ಅಣ್ಣಾಮಲೈ ಅವರಿಗೆ ಮತ್ತೆ ಅವರದ್ದೇ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಕ್ಕೆ ಬೇಸರ ವ್ಯಕ್ತಪಡಿಸಿ ಅಂತಹ ಬೆಳವಣಿಗೆಗಳು ಏನಾದರೂ ನಡೆದಲ್ಲಿ ತಾವು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷದಲ್ಲಿ ಮುನ್ನಡೆಯುವುದಾಗಿ ತಮಿಳುನಾಡು ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಚೆನ್ನೈನಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಮಾತನಾಡುತ್ತಾ, ನಾವು ದ್ರಾವಿಡ ಪಕ್ಷಗಳ ವಿರುದ್ಧ ಜನರಿಗೆ ಪ್ರಮುಖ ಆಯ್ಕೆಯಾಗಬೇಕಾದಲ್ಲಿ, ಅವರೊಂದಿಗೆ ಮೈತ್ರಿ ಮಾಡಿಕೊಳ್ಳದೇ, ಏಕಾಂಗಿಯಾಗಿ ಸ್ಪರ್ಧಿಸಿದಾಗ ಮಾತ್ರವೇ, ಉತ್ತಮ ಆಡಳಿತ, ಭ್ರಷ್ಟಾಚಾರ, ಕುಟುಂಬ ರಾಜಕೀಯದ ವಿರುದ್ಧ ಸ್ಪಷ್ಟನಿಲುವುಗಳನ್ನು ಜನರ ಮುಂದಿಡಬಹುದು. ನಾವು ತಮಿಳುನಾಡಿನಲ್ಲಿ ಸ್ವಂತವಾಗಿ ನೆಲೆ ಕಾಣಬೇಕಾದರೆ ಸ್ವತಂತ್ರವಾಗಿ ಚುನಾವಣೆ ಎದುರಿಸುವುದು ಅನಿವಾರ್ಯ. ನಾನು ಪೋಲೀಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದಿರುವುದು ರಾಜ್ಯದಲ್ಲಿ ಬದಲಾವಣೆ ತರುವ ಉದ್ದೇಶಕ್ಕಾಗಿಯೇ ಹೊರತೂ, ಮತ್ತೇ ಅದೇ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಎಐಎಡಿಎಂಕೆಯ ಹಿಂಬಾಲಕರಾಗಿ ಸದಾಕಾಲವೂ ಇರುವುದು ನನಗೆ ವಯಕ್ತಿಯವಾಗಿ ಇಷ್ಟವಿಲ್ಲ. ಹಾಗಾಗಿ ದ್ರಾವಿಡ ಪಕ್ಷಗಳ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದಾದರೆ, ತಾನು ರಾಜ್ಯಾಧ್ಕಕ್ಷಸ್ಥಾನದಲ್ಲಿ ಇರಲು ಬಯಸುವುದಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿರುತ್ತೇನೆ ಎಂದು ತಿಳಿಸಿದ್ದಾರೆ.
ಅಣ್ಣಾಮಲೈ ಅವರ ಈ ಅಭಿಪ್ರಾಯಕ್ಕೆ ಸಭೆಯಲ್ಲಿ ಪರ ಮತ್ತು ವಿರೋಧ ಎರಡೂ ಅಭಿಪ್ರಾಯ ವ್ಯಕ್ತವಾಗಿದ್ದಲ್ಲದೇ ಬಹುತೇಕರು, ಈಗಾಗಲೇ ತಿಳಿಸಿದಂತೆ ಬಿಜೆಪಿಯ ಐಟಿ ವಿಭಾಗದ ಹಲವು ಪದಾಧಿಕಾರಿಗಳನ್ನು ಎಐಎಡಿಎಂಕೆ ಸೇರಿಸಿಕೊಂಡಿದ್ದನ್ನು ಪ್ರಭಲವಾಗಿ ಖಂಡಿಸಿದ್ದಲ್ಲದೇ, ಅಣ್ಣಾಮಲೈ ಅವರ ನಿಲುವಿಗೆ ಹೆಚ್ಚಿನ ನಾಯಕರು ಒಲವು ತೋರಿಸುತ್ತಿರುವುದು ಉತ್ತಮವಾದ ರಾಜಕೀಯ ಬೆಳವಣಿಗೆಯಾಗಿದೆ. ಪಕ್ಷಕ್ಕಾಗಿ ತಳ ಮಟ್ಟದಿಂದಲೂ ದುಡಿಯುವ ಕಾರ್ಯಕರ್ತರಿಗೆ ಪಕ್ಷದ ನಾಯಕರುಗಳ ಅಧಿಕಾರದ ಆಸೆಗಾಗಿ, ಸೈಧ್ಧಾಂತಿಕ ವಿರೋಧಾಭಾಸವಿರುವ ಪಕ್ಷಗಳ ಜೊತೆ ಮತ್ತೆ ಮತ್ತೆ ಮೈತ್ರಿ ಮಾಡಿಕೊಳ್ಳುವುದು ಎಂದಿಗೂ ಹಿಡಿಸುವುದಿಲ್ಲ, ದುರಾದೃಷ್ಟವಷಾತ್ ಜನರಿಂದ ಜನರಿಗಾಗಿ ಜನರಿಗೋಸ್ಕರವಾಗೇ ಇರುವ ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುತ್ತಲೇ, ಚುನಾವಣೆಯಲ್ಲಿ ಪರಸ್ಪರ ಶರಂಪರ ಕಿತ್ತಾಡಿಕೊಂಡು ಚುನಾವಣೆ ಎದುರಿಸುವ ಪಕ್ಷಗಳ, ಚುನಾವಣಾ ಫಲಿತಾಂಶ ಬಂದ ಕೂಡಲೇ, ಅಧಿಕಾರದ ಆಸೆಗಾಗಿ ಹಿಂದೆ ಮಾಡಿದ್ದ ಹೋರಾಟಗಳನ್ನೆಲ್ಲಾ ಮರೆತು ವಿವಿಧ ಕುಂಟು ನೆಪಗಳು ಮತ್ತು ಸಬೂಬನ್ನು ಹೇಳಿ ಅಧಿಕಾರಕ್ಕೆ ಬರುವುದು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಮಾರಕವೇ ಸರಿ.
ಬಿಹಾರದಲ್ಲಿ ಜೆಡಿಯು ಜೊತೆ ಮತ್ತು ಮಹಾರಾಷ್ಟ್ರದಲ್ಲಿ ಶಿವಸೇನೆಯ ಜೊತೆ ಬಹಳ ವರ್ಷಗಳಿಂದಲೂ ಮೈತ್ರಿ ಮಾಡಿಕೊಳ್ಳುತ್ತಿದ್ದ ಕಾರಣದಿಂದಲೇ ಬಿಜೆಪಿ ಆ ರಾಜ್ಯಗಳಲ್ಲಿ ಜೆಡಿಯು ಮತ್ತು ಶಿವಸೇನೆಯ ನಂತರದ ಸ್ಥಾನದಲ್ಲೇ ಮುಂದುವರೆಯುತ್ತಿತ್ತು. ಯಾವಾಗ ಅಲ್ಲಿನ ಸ್ಥಳೀಯ ನಾಯಕರುಗಳು ಸೆಟೆದೆದ್ದು ಆ ಪಕ್ಷಗಳ ಜೊತೆಯ ಸಂಬಂಧವನ್ನು ಮುರಿದು ಕೊಂಡು ಸ್ವತಂತ್ರವಾಗಿ ಚುನಾವಣೆ ಎದುರಿಸಿತೋ, ಆಗ ಜನರೂ ಸಹಾ ಅಂತಹ ಬೆಳವಣಿಗೆಯನ್ನು ಸ್ವೀಕರಿಸಿದ್ದಲ್ಲದೇ, ಬಿಜೆಪಿಯನ್ನು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಿದ್ದನ್ನು ತಮಿಳುನಾಡಿನ ಬಿಜೆಪಿ ಪಕ್ಷ ಒಮ್ಮೆ ನೆನಪಿಸಿಕೊಳ್ಳಬೇಕು. ಸ್ವತಂತ್ರವಾಗಿ ಚುನಾವಣೆ ಎದುರಿಸಿದ ಮೊದಲ ಬಾರಿಗೆಪಕ್ಷ ಅಧಿಕಾರಕ್ಕೆ ಬಾರದೇ ಹೋದರೂ, ಉತ್ತಮ ಮಟ್ಟದಲ್ಲಿ ಮತಗಳನ್ನು ಹೆಚ್ಚಿಸಿಕೊಂಡು ಅಧಿಕ ಸ್ಥಾನಗಳನ್ನು ಗಳಿಸಿ, ಸಮರ್ಥ ವಿರೋಧಪಕ್ಷವಾಗಿ ನಿಭಾಯಿಸಿದಲ್ಲಿ ಮುಂದೊಂದು ದಿನ ಸ್ವತಂತ್ರವಾಗಿ ಅಧಿಕಾರಕ್ಕೇರಲೇ ಬಹುದು ಎಂಬುದು ಈಗಾಗಲೇ 30 ವರ್ಷಗಳ ಹಿಂದೆ ಕೇವಲ ಇಬ್ಬರು ಸಾಂಸದರು ಇದ್ದದ್ದು ಇಂದು 300+ ಸಾಂಸದರು ಲೋಕಸಭೆ ಚುನಾವಣೆಯಲ್ಲಿ ಆಯ್ಕೆ ಆಗಿರುವ ಉದಾಹರಣೆ ಕಣ್ಣ ಮುಂದಿದೆ.
ಪಕ್ಷವನ್ನು ಹೇಗೆ ಮನ್ನಡೆಸ ಬೇಕು ಎಂದು ಒಬ್ಬ ಪಕ್ಷದ ಅಧ್ಯಕ್ಷನಾಗಿ ಇಂತಹ ಪಕ್ಷ ನಿಷ್ಠೆ ಮತ್ತು ದೂರದರ್ಶಿತ್ವ ಇರುವುದಕ್ಕಾಗಿ ಅಣ್ಣಾಮಲೈ ಅವರು ಖಂಡಿತವಾಗಿಯೂ ಅಭಿನಂದನಾರ್ಹರೇ. ಹಾಗಿಲ್ಲದೇ ಹೋದಲ್ಲಿ ಕರ್ನಾಟಕದಲ್ಲಿ ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿ ಇರುವುದಾದರೂ ಅರ್ಧಕ್ಕೆ ಅರ್ಧದಷ್ಟು ಸಚಿವ ಸಂಪುಟ ಆಯಾರಾಂ ಗಯರಾಂನಂತಹವರಿಂದಲೇ ಕೂಡಿರುವ ಕಾರಣ, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವುದೆಲ್ಲವನ್ನೂ ಪೂರೈಸಲು ಸಾಧ್ಯವಾಗುತ್ತಿಲ್ಲಾ ಎನ್ನುವುದನ್ನೂ ಕೇಂದ್ರ ನಾಯಕರು ಮರೆಯಬಾರದಾಗಿದೆ.
ಜಯಲಲಿತಾರ ಮರಣದ ನಂತರ ಹರಿದು ಹಂಚಿಹೋಗಿರುವ ಎಐಡಿಎಂಕೆಯ ಜೊತೆ ಮೈತ್ರಿ ಮಾಡಿಕೊಳ್ಳುವುದು ಬಾಣಲೆಯಿಂದ ಬೆಂಕಿಗೆ ಹಾರಿದಂತೆ. ಹಾಗಾಗಿ ಅದರ ಬದಲು, ಹಂಗಿನ ಅರಮನೆಗಿಂತಲೂ ಗುಡಿಸಲೇ ವಾಸಿ ಎನ್ನುವಂತೆ, ಏಕಾಂಗಿಯಾಗಿಯೇ ಚುನಾವಣೆಯನ್ನು ಎದುರಿಸಿ ದ್ರಾವಿಡ ಪಕ್ಷಗಳ ಹಿಡಿತದಿಂದ ಹೊರಬರಲು ಪ್ರಯತ್ನಿಸುತ್ತಿರುವ ತಮಿಳರಿಗೆ ದೊಡ್ಡ ಆಶಾಕಿರಣವಾಗಿ ಇಂದಲ್ಲಾ ನಾಳೇ ಖಂಡಿತವಾಗಿಯೂ ಬಿಜೆಪಿ ಪಕ್ಷ ಅಣ್ಣಾಮಲೈ ಅವರ ಸಾರಥ್ಯದಲ್ಲಿ ಬರುವ ಸಾಧ್ಯತೆಯೇ ಹೆಚ್ಚಾಗಿದೆ.
ಸಂಸತ್ತಿನಲ್ಲಿ ಬೆಜೆಪಿಯ ಹಿರಿಯನಾಯಕರೂ ಮಾಜೀ ಪ್ರಧಾನಿಗಳೂ ಆಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದಂತೆ ಇಂದು ನಮ್ಮ ಶಾಸಕರು ಮತ್ತು ಸಾಂಸದರ ಸಂಖ್ಯೆ ಬೆರಳೆಣಿಕೆಯಷ್ಟು ಇರಬಹುದು ಆದರೆ, ಮುಂದೊಂದು ದಿನ ಇದೇ ಬಿಜೆಪಿ ದೇಶದಲ್ಲಿ ಅತಿದೊಡ್ಡ ಪಕ್ಷವಾಗಿ ನಿಶ್ಚಿತವಾಗಿಯೂ ಹೊರಹೊಮ್ಮುವುದನ್ನು ನೀವು ಖಂಡಿತವಾಗಿಯೂ ನೋಡುತ್ತೀರಿ ಎಂದು ಹೇಳಿದ್ದದ್ದು ಈಗ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಸಾರಥ್ಯದಲ್ಲಿ ನಿಜವಾಗಿದೆ. ಅದೇ ಅಣ್ಣಾಮಲೈ ಅವರಂತಹ ಸಮರ್ಥ ಮತ್ತು ದಕ್ಷ ನಾಯಕರುಗಳ ನೇತೃತ್ವದಲ್ಲಿ ಮುದೊಂದು ದಿನ ದಕ್ಷಿಣ ಭಾರತದಲ್ಲೂ ಪ್ರಾದೇಶಿಕ ಪಕ್ಷಗಳನ್ನು ಬದಿಗೊತ್ತಿ ಬಿಜೆಪಿ ಅಧಿಕಾರಕ್ಕೆ ಬರಬಹುದು.
ಅಣ್ಣಾಮಲೈ ಅವರು ಸೈದ್ಧಾಂತಿಕವಾಗಿ ಪಕ್ಷವನ್ನು ಒಪ್ಪಿಕೊಂಡು ಅಪ್ಪಿಕೊಂಡವರು. ಹಾಗಾಗಿ ಪಕ್ಷದಿಂದ ಇಂತಯ ಕ್ಷುಲ್ಲಕ ಕಾರಣಗಳಿಗಾಗಿ ಎಂದಿಗೂ ಹೊರ ಹೋಗಲಾರರು. ಹಾಗೆಂದ ಮಾತ್ರಕ್ಕೆ ಅವರಿಗೆ ಸ್ವತಂತ್ರವಾಗಿ ನಿರ್ಭಿಡೆಯಿಂದ ಕೆಲಸ ಮಾಡಲು ಅವಕಾಶ ಕೊಡದೇ, ಕೈ ಕಟ್ಟಿ ಹಾಕುವುದೂ ಸರಿಯಲ್ಲ.
ಯಾವುದೇ ವಿದ್ಯಾರ್ಹತೆ ಇಲ್ಲದೇ, ಹೇಗೋ ಅಕ್ರಮವಾಗಿ ಸಂಪಾದನೆ ಮಾಡಿದ ಹಣದಿಂದಲೋ ಇಲ್ಲವೇ ಕುಟುಂಬ ರಾಜಕಾರಣದಿಂದಲೋ ರಾಜಕೀಯಕ್ಕೆ ಬಂದು ಅಕ್ರಮವಾಗಿ ಅಸ್ತಿ ಸಂಪಾದನೆ ಮಾಡುವವರ ನಡುವೆ ವಿದ್ಯಾವಂತರಾಗಿ, ಐಪಿಎಸ್ ಅಧಿಕಾರಿಗಳಾಗಿದ್ದಂತಹವರು ಕೆಲಸಕ್ಕೆ ರಾಜೀನಾಮೆ ನೀಡಿ ಶುದ್ಧವಾದ ರಾಜಕೀಯ ಮಾಡಲು ಬಂದಿರುವಂತಹವರ ಕೈ ಬಲ ಪಡಿಸುವುದು ಪ್ರತಿಯೊಬ್ಬ ಜವಾಬ್ಧಾರೀ ನಾಗರೀಕರ ಆದ್ಯ ಕರ್ತವ್ಯವೇ ಆಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ